ಮ್ಯಾನೆಜ್ಮೆಂಟ್ ಕೆಲ್ಸಾ, ಬೇಡಾ ಸ್ವಾಮಿ...
ಈ ಮ್ಯಾನೇಜ್ಮೆಂಟ್ ಕೆಲ್ಸಕ್ಕಿಂತ ಅಸ್ಸೋಸಿಯೇಟ್ ಕೆಲ್ಸಾನೇ ಎಷ್ಟೋ ಚೆನ್ನಾಗಿತ್ತು ಅಂತ ಅನ್ಸಿದ್ದು ಇತ್ತೀಚೆಗೆ. ನಮಗೆ ಸಿಗೋ ಸವಲತ್ತುಗಳಲ್ಲೊಂದಾಗಿ ಪ್ಲೆಕ್ಸ್ ಟೈಮ್ - ಬೆಳಿಗ್ಗೆ ಇಂಥಾ ಟೈಮಿಗೆ ನಿಗದಿಯಾಗಿ ಬರಬೇಕು ಅಂತೇನೂ ಇಲ್ಲ ಹಾಗೇ ಸಂಜೆ ಎಷ್ಟು ಹೊತ್ತಿನವರೆಗೆ ಬೇಕಾದ್ರೂ ಕೆಲ್ಸ ಇರುತ್ತೆ. ಜೊತೆಗೆ ನಮ್ಮ ಟೈಮ್ಶೀಟ್ಗಳು ಹಗಲು ಹೊತ್ತಿನಲ್ಲೇ ಸುಳ್ಳು ಹೇಳೋ ಹಾಗೆ ವಾರಕ್ಕೆ ಕೇವಲ ನಲವತ್ತು ಘಂಟೆಗಳ ಕೆಲಸವನ್ನು ದಾಖಲೆ ಮಾಡಿಕೊಂಡು ಒಟ್ಟು ಸಂಬಳವನ್ನು ತೆಗೆದುಕೊಂಡರೂ ಅದಕ್ಕಿಂತ ಹೆಚ್ಚು ಮಾಡಿದ ಕೆಲಸಕ್ಕೆ ಯಾವ ಸಂಭಾವನೆ ಸಿಗದೇ ಹೋದರೂ ಸರಿ ಅದು ರಿಜಿಸ್ಟರಿನಲ್ಲಿ ದಾಖಲೂ ಆಗದ ಪರಿಸ್ಥಿತಿ. ನಾವು ವಾರಕ್ಕೆ ಮಾಡುವ ಐವತ್ತೋ, ಐವತ್ತೈದೋ ಘಂಟೆಗಳಿಂದ ನಮ್ಮ ನಮ್ಮ ಸಂಬಳವನ್ನು ಭಾಗಿಸಿ ನೋಡಿದರೆ ನಮ್ಮ ಘಂಟೆಯ ’ಕೂಲಿ’ ಕಡಿಮೆ. ಇನ್ನು ವರ್ಷದ ಕೊನೆಯಲ್ಲಿ ಸಿಗೋ ಬೋನಸ್ಸು ಅದು ಯಾವ್ಯಾವುದೋ ಈಕ್ವೇಷನ್ನುಗಳಿಂದ ಹೊರಬರುವ ಮೊತ್ತದ ಪರಿಣಾಮ ನಮ್ಮ ಸಂಬಳದ ಒಂದು ಭಾಗವೇ ಅದು ಆದರೆ ಕೊಡುವ ರೀತಿ ಬೇರೆ ಎನ್ನುವ ತರ್ಕ.
ಎಂಬಿಎ, ಎಂ.ಎಸ್ ಮುಂತಾದ ಡಿಗ್ರಿಗಳಿಂದ ಅಲಂಕೃತಗೊಂಡ ನಮ್ಮ ರೆಸ್ಯೂಮೆಗಳಿಗೆ ಈ ಮಾರ್ಕೆಟ್ ಪ್ಲೇಸ್ನಲ್ಲಿ ಕಡಿಮೆ ಬೇಡಿಕೆ, ಅದೇ ಒಂದು ಸ್ಕಿಲ್ಲ್ನಲ್ಲಿ ಸ್ಪೆಷಲೈಜ್ಡ್ ಇರೋ ಅಂತ ಒಬ್ಬ ಅಸೋಸಿಯೇಟ್ ಕೆಲ್ಸಕ್ಕೆ ಹೆಚ್ಚಿನ ಡಿಮ್ಯಾಂಡ್. ಅವರ ಘಂಟೆಯ ಸಂಬಳ ಜೊತೆಗೆ ಹೆಚ್ಚು ಕೆಲಸ ಮಾಡಿದ್ದಕ್ಕೆ ಸಿಗೋ ಓವರ್ ಟೈಮ್ ಹಾಗೂ ಜಾಬ್ ಸೆಕ್ಯುರಿಟಿ ಇವನ್ನೆಲ್ಲ ಲೆಕ್ಕ ಹಾಕಿಕೊಂಡರೆ ಅವರದ್ದೇ ಕೆಲ್ಸ ನಾವೂ ಮಾಡಿಕೊಂಡಿರಬಾರದೇಕೆ, ಅನ್ನಿಸೋದಿಲ್ಲವೇ?
’ಲಂಚ್ ಬ್ರೇಕ್ ಆರೋಗ್ಯಕ್ಕೆ ಒಳ್ಳೆಯದು’ ಎಂದು ಬರೆದುಕೊಂಡಿರೋ ಎಷ್ಟೋ ಆರ್ಟಿಕಲ್ಲುಗಳನ್ನು ನನ್ನಂಥವರು ಓದಿಯೂ ಶೇಕಡಾ ತೊಂಭತ್ತು ಸಮಯ ನನ್ನ ಮಧ್ಯಾಹ್ನದ ಊಟವನ್ನು ಕಾಲ್ ಹಾಗೂ ಮೀಟಿಂಗ್ಗಳ ನಡುವೆ ಐದರಿಂದ ಹತ್ತು ನಿಮಿಷದಲ್ಲಿ ಲಗುಬಗೆಯಿಂದ ತುಂಬಿಸಿಕೊಂಡು ಊಟ ಮಾಡಿದ ಹಾಗೆ ಮಾಡೋದು ದಿನನಿತ್ಯದ ಕಾಯಕಗಳಲ್ಲೊಂದು. ಬೆಳಿಗ್ಗೆ ಸೂರ್ಯನಿಗೆ ಪೈಪೋಟಿಮಾಡೋ ಹಾಗೆ ರಸ್ತೆಯಲ್ಲಿ ಸಿಗೋ ಸ್ಲೋ ಡ್ರೈವರುಗಳನ್ನೆಲ್ಲ ಬೈದುಕೊಂಡು, ಅದರ ನಡುವೆ ತಿಂಡಿ ತಿಂದ ಹಾಗೆ ಮಾಡಿ ಕಾಫಿ ಕುಡಿದ ಹಾಗೆ ಮಾಡಿ ಆದಷ್ಟು ಬೇಗ ಆಫೀಸಿಗೆ ಬಂದರೂ ಅದ್ಯಾವುದೋ ಅವ್ಯಕ್ತ ಬಂಧನದ ಪ್ರಯುಕ್ತ ಎಲ್ಲರೂ ಹೋದ ಮೇಲೆ ಹೋಗುವ ಹಾಗೆ ಆಫೀಸಿನಲ್ಲೇ ಕೊಳೆಯುವ ಯಾತನೆ. ಸಮ್ಮರ್ರ್ ಬರುತ್ತಿದ್ದ ಹಾಗೆ ಎಲ್ಲರೂ ವೆಕೇಷನ್ನುಗಳನ್ನು ಅದಾಗಲೇ ಪ್ಲಾನ್ ಮಾಡಿಕೊಂಡು ಅಲ್ಲಲ್ಲಿ ವಾರ-ದಿನಗಳನ್ನು ಆಫ್ ಮಾಡಿಕೊಂಡು ಸಂತೋಷಪಡುತ್ತಿದ್ದರೆ ನಾವು ಆಫ್ ಇದ್ದ ದಿನಗಳಲ್ಲೂ ಅಲ್ಲಲ್ಲಿ ನಮಗೆ ಅಂಟಿಕೊಂಡ ರೋಗಗಳ ಹಾಗಿನ ಕಾಲ್ (ಕಾನ್ಪರೆನ್ಸ್ ಕಾಲ್) ಗಳು. ಒಬ್ಬ ಪೈನಾನ್ಸಿಯಲ್ ಆಡ್ವೈಸರ್ನಿಂದ ಹಿಡಿದು, ಡಾಕ್ಟರ್, ಡೆಂಟಿಸ್ಟ್ ಮೊದಲಾದವರನ್ನು ಕಂಡೋ ಮಾತನಾಡಿಸಲಾಗದ ಬಂಧನ. ಪೋಸ್ಟ್ ಆಫೀಸ್, ಡ್ರಾಮಾ, ರಿಕ್ರಿಯೇಷೇನ್ ಮೊದಲಾದವುಗಳಿಗೆ ಹೋಗದ ಹಾಗೆ ಕಟ್ಟು ಹಾಕುವ ಕೆಲಸದ ಸಂಬಂಧದ ಅವ್ಯಕ್ತ ಸಂಕೋಲೆ. ಮತ್ತೆ ಸಂಜೆಯ ಹೊತ್ತಿಗೆ ಮುಖ ಒಣಗಿಸಿಕೊಂಡು ಬಂದು ಮನೆಯಲ್ಲಿ ಊಟ ಮಾಡಿದ ಹಾಗೆ ಮಾಡಿ ದಿನದ ಒಂದೋ ಎರಡೋ ಬದುಕಿನ ಸ್ವರಗಳಿಗೆ ಒಂದಿಷ್ಟು ಗಾಳಿ ಊದಿ ನಿದ್ರೆಗೆ ಶರಣು ಹೋಗುವ ಕರ್ಮ ಜೀವನ.
ಈ ಸೆಲ್ಫ್ ಸೆಟ್ ಗೋಲ್ಗಳಿಗೆ ಒಂದಿಷ್ಟು ಕಡಿವಾಣ ಹಾಕಬೇಕು. ಮ್ಯಾನೇಜ್ಮೆಂಟ್ ಕೆಲ್ಸದಲ್ಲಿದ್ದರೂ ಅಸೋಸಿಯೇಟ್ ಬದುಕಿದ ಹಾಗೆ ಬದುಕಬೇಕು. ದಿನದ ಘಂಟೆಗಳನ್ನು ನಿಗದಿಯಂತೆ ಪ್ಲಾನ್ ಮಾಡಿಕೊಂಡು ನಾವು ಸೇರಿಕೊಳ್ಳಲಾಗದ ಮೀಟಿಂಗ್ಗಳಿಗೆ ’ಕ್ಷಮಿಸಿ’ ಎನ್ನಬೇಕು. ನಾವು ಪ್ರತೀವಾರಕ್ಕೆ ಹತ್ತು ಹತ್ತು ಘಂಟೆ ಕೆಲಸ ಮಾಡಿಯೂ ನಮಗಿಂತ ಕಡಿಮೆ ಕೆಲಸ ಮಾಡುವ ನಮ್ಮ ಓರಗೆಯವರ ಸಂಬಳ/ಆದಾಯಕ್ಕೆ ನಮ್ಮನ್ನು ಹೊಂದಿಸಿಕೊಂಡು ಆಫೀಸಿನಲ್ಲಿ ಎಂಟು-ಒಂಭತ್ತು ಘಂಟೆಗಳಿಗಿಂತ ಹೆಚ್ಚು ಕೆಲಸವನ್ನು ಮಾಡದೇ ಉಳಿದದ್ದನ್ನು ಪರ್ಸನಲ್ ವಿಷಯಗಳಿಗೆ ವಿನಿಯೋಗಿಸಬೇಕು. ಕಾಯಿದೆ/ಕಾನೂನು ಎಂದು ಮಾತನಾಡುವ ನಮ್ಮ ಮೇಲಾಧಿಕಾರಿಗಳಿಗೆ ಅವರ ರೀತಿಯಲ್ಲೇ ಮಾತನಾಡುತ್ತಾ ಅವರ ಕಾನೂನು ಕಟ್ಟಳೆಗಳಲ್ಲೇ ಅವರನ್ನು ನಿಯಂತ್ರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಲಂಚ್ ಟೈಮ್ಗೆ ಡೆಸ್ಕ್ ಬಿಟ್ಟು ಎದ್ದು ಎಲ್ಲಾದರೂ ದೂರ ಹೋಗಿಬಿಡಬೇಕು. ಇ-ಮೇಲ್, ವಾಯ್ಸ್ ಮೇಲ್ ಹಾಗೂ ಇನ್ಸ್ಟಂಟ್ ಮೆಸ್ಸೇಜುಗಳನ್ನು ಸಂಬಾಳಿಸಬೇಕು. ಇನ್ ಬಾಕ್ಸ್ ನಲ್ಲಿರುವ ಮೆಸ್ಸೇಜುಗಳನ್ನೆಲ್ಲ ಓದಿಯೇ ತೀರುತ್ತೇನೆ, ಫೋನ್ ನಲ್ಲಿ ಬ್ಲಿಂಕ್ ಆಗುವ ಲೈಟ್ ಬೆನ್ನನ್ನು ಹತ್ತಿ ಎಲ್ಲ ವಾಯ್ಸ್ ಮೇಲ್ ಗಳಿಗೂ ಉತ್ತರವನ್ನು ತತ್ ತಕ್ಷಣ ಕೊಡುತ್ತೇನೆ ಎನ್ನುವ ರೂಢಿಯನ್ನು ಬಿಟ್ಟು ಬಿಡಬೇಕು. ಪ್ರಪಂಚದ ಎಲ್ಲ ಸಮಸ್ಯೆಗಳನ್ನು ನಾವು ನಾವೇ ಪರಿಹರಿಸಿಕೊಂಡು ನಮ್ಮ ಬಾಸ್ಗಳ ಕೆಲಸವನ್ನು ಸುಲಭ ಮಾಡುವ ಬದಲು ಅವಾಗಾವಾಗ ಒಂದಿಷ್ಟು ಸಮಸ್ಯೆಗಳನ್ನು ಅವರ ಅವಗಾಹನೆಗೆ ಬಿಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಂಜೆ ಇಷ್ಟು ಹೊತ್ತಿಗೆ ಹೊರಟು ತೀರುತ್ತೇನೆ ಎನ್ನುವ ಸಂಕಲ್ಪವನ್ನು ಮಾಡಿಕೊಂಡು ಆಗ ಮನೆಗೆ ಬಂದು ಆಫೀಸನ್ನು ಆಫೀಸಿನಲ್ಲೇ ಬಿಟ್ಟು ’ಮನುಷ್ಯ’ನಾಗಬೇಕು. ಎಲ್ಲವೂ ಇಂದಿನ ಕೆಲಸವೇ ಎನ್ನುವ ಧಾರಾಳತನವನ್ನು ಮೈವೆತ್ತಬೇಕು.
ನನ್ನ ಸಹೋದ್ಯೋಗಿಯೊಬ್ಬಳು ಹಲವು ವರ್ಷಗಳ ಹಿಂದೆ ನಿವೃತ್ತಳಾಗುವಾಗ ಒಂದು ಮಾತನ್ನು ಹೇಳಿದ್ದಳು, ’ಈ ಕಂಪನಿ ನೀನು ಹುಟ್ಟುವುದಕ್ಕಿಂದ ಮೊದಲೂ ಇತ್ತು, ನೀನು ಸತ್ತ ಮೇಲೆಯೂ ಇರುತ್ತೆ. ನಿನ್ನ ಸಮಯದ ಹೆಚ್ಚು ಪಾಲನ್ನು ನಿನ್ನ ಕುಟುಂಬದವರ ಜೊತೆ ಕಳೆಯೋದಕ್ಕೆ ಪ್ರಯತ್ನಿಸು’. ನಾವು ಮುಂದೂಡುವ ನಮ್ಮ ವೆಕೇಷನ್ನುಗಳಾಗಲೀ, ನಾವು ದಿನನಿತ್ಯ ತಿನ್ನುವ ಹಾಗೆ ಮಾಡಿ ತಿಂದ ತಿಂಡಿ-ಊಟಗಳಾಗಲಿ, ನಾವು ಕಳೆದುಕೊಳ್ಳುವ ಅನೇಕ ಸಾಮಾಜಿಕ ಚಟುವಟಿಕೆಗಳಾಗಲೀ, ಅದೆಲ್ಲೋ ಬಿದ್ದು ತುಕ್ಕು ಹಿಡಿಯುತ್ತಿರುವ ನಮ್ಮ ಹವ್ಯಾಸಗಳಾಗಲೀ ಯಾವುದೂ ಲಾಂಗ್ ಟರ್ಮ್ನಲ್ಲಿ ಖಂಡಿತ ಒಳ್ಳೆಯದನ್ನು ಮಾಡಲಾರವು. ನಮ್ಮ ಸರ್ವತೋಮುಖ ಬೆಳವಣಿಗೆಯಲ್ಲಿ ನಾವು ದಿನ ನಿತ್ಯ ಮಾಡುವ ಆಫೀಸಿನ ಕೆಲಸದಷ್ಟೇ ಉಳಿದವುಗಳಿಗೂ ಪ್ರಾಮುಖ್ಯತೆಯನ್ನು ಕೊಡಬೇಕು ಎಂದುಕೊಂಡು ಎಲ್ಲವನ್ನು ಮೊದಲೇ ಯೋಚಿಸಿ ಒಂದು ’ಪ್ಲಾನ್’ ಅನ್ನು ತಯಾರಿಸಿದ್ದೇ ಆದರೆ ಅದರಿಂದ ಬಹಳಷ್ಟು ಅನುಕೂಲಗಳಿವೆ. ನಮ್ಮ ಬಾಸ್ನ ಸೀಕ್ರೆಟ್ ಒಂದಿದೆ, ವರ್ಷದ ಹೆಚ್ಚಿನ ವೇಕೇಷನ್ನುಗಳನ್ನು ಎಲ್ಲರಿಗಿಂತ ಮೊದಲೇ ಅಲ್ಲಲ್ಲಿ ನಿಗದಿ ಪಡಿಸಿ ಆಯಾ ದಿನಗಳನ್ನು ನಿಯೋಜಿತವಾಗಿ ಆಫ್ ತೆಗೆದುಕೊಳ್ಳುವುದು - ಹೀಗೆ ಮಾಡುವುದರಿಂದ ಅನೇಕ ಅನುಕೂಲಗಳನ್ನು ನಾನು ಅವರ ಮೂಲಕ ಈಗಾಗಲೇ ಕಂಡುಕೊಂಡಿದ್ದೇನೆ.
ಸರಿ, ಇಷ್ಟೆಲ್ಲ ಗೊತ್ತಿದ್ದೂ ಗೊತ್ತಿದ್ದೂ ಇನ್ನೂ ಏಕೆ ನಾನು ಈ ಪ್ಲಾನ್ ಅನ್ನು ಕಾರ್ಯಗತಗೊಳಿಸಿಕೊಂಡಿಲ್ಲ ಅನ್ನೋ ಪ್ರಶ್ನೆ ಸಹಜ. ನಮ್ಮ ಬದುಕೇ ಬೇರೆ ಅಲ್ಲವೇ, ಈ ವರ್ಷದ ಕೊನೆಯಲ್ಲಿ ಬರೋ ಇಂಡಿಯಾ ಟ್ರಿಪ್ಪಿಗೆ ನಮ್ಮ ವೆಕೇಷನ್ನ್ ದಿನಗಳನ್ನು ಕೂಡಿ ಹಾಕಿ ಒಟ್ಟಿಗೆ ಮೂರು ಅಥವಾ ನಾಲ್ಕು ವಾರಗಳನ್ನು ತೆಗೆದುಕೊಳ್ಳೋ ಅಗತ್ಯವಿರೋದರಿಂದ ವರ್ಷವಿಡೀ ವೆಕೇಷನ್ನುಗಳು ಸಂಭವಿಸೋದೇ ಇಲ್ಲ! ಇನ್ನು ಎಷ್ಟೋ ಕಷ್ಟ ಪಟ್ಟು, ಎದ್ದೂ-ಬಿದ್ದು ಹೋಗಿ ಬರೋ ಇಂಡಿಯಾ ಟ್ರಿಪ್ಪ್ ಅನ್ನು ವೆಕೇಷನ್ನು ಎಂದು ಕರೆಯಬೇಕೇ ಬೇಡವೇ ಅನ್ನೋದು ಒಳ್ಳೆಯ ಪ್ರಶ್ನೆಯಾಗೇ ಉಳಿಯುತ್ತದೆ. ಈ ದ್ವಂದ್ವಗಳಿಗೆಲ್ಲ ಒಂದೇ ಉತ್ತರ, ಒಂದೇ ದಾರಿ - ಮ್ಯಾನೇಜ್ಮೆಂಟ್ ಕೆಲಸದಲ್ಲಿ ಅಸೋಸಿಯೇಟ್ ತನವನ್ನು ಗುರುತಿಸಿಕೊಂಡು ನಮ್ಮಷ್ಟಕ್ಕೆ ನಮ್ಮದೊಂದು ಟೈಮ್ಟೇಬಲ್, ಅಜೆಂಡಾವನ್ನು ಪ್ರಸ್ತುತಪಡಿಸಿಕೊಂಡು ನಿಯಮಿತವಾಗಿ ಹೀಗೇ ಹೀಗೇ ಎಂದು ಬದುಕುವ ಗುರಿ.