ವರ್ಚುವಲ್ಲ್ ಪ್ರಪಂಚದ ಲೀಲೆ
ನನಗೆ ಅವಾಗಾವಾಗ ’ನೀವು ಆರ್ಕುಟ್‌ನಲ್ಲಿದ್ದೀರಾ?’, ’ಟ್ವಿಟ್ಟರ್ರ್ ನಲ್ಲಿದ್ದೀರಾ?’ ಮುಂತಾಗಿ ಪ್ರಶ್ನೆಗಳು ಬರ್ತಾನೇ ಇರ್ತವೆ. ನಾನು ಅಂತಹ ಪ್ರಶ್ನೆಗಳಿಗೆ ’ಟು ಡು ವಾಟ್?’ ಅನ್ನೋ ಮತ್ತೊಂದು ಪ್ರಶ್ನೆ ಎಸೆದು ಉತ್ರ ಕೊಡ್ತೀನಿ. ನನಗೆ ಸಿಗೋ ಎಲ್ಲ ಉತ್ತರ ಅಥವಾ ಸಮಜಾಯಿಷಿಗಳೂ ಇವೆಲ್ಲಾ ಸೋಷಿಯಲ್ಲ್ ನೆಟ್‌ವರ್ಕಿಂಗ್ ಸೈಟ್‌ಗಳು, ಅಲ್ಲಿಗೆ ಬಂದೂ ಹೋಗಿ ಮಾಡೋದ್ರಿಂದ ನಿಮ್ಮ ನಿಮ್ಮ ನೆಟ್‌ವರ್ಕ್ ಅಭಿವೃದ್ಧಿ ಆಗುತ್ತೆ ಅನ್ನೋ ರೀತಿ ಇರುತ್ವೆ. ನಾನಂತೀನಿ, ’ನಮ್ಮ ಸುತ್ ಮುತ್ಲು ಇರೋರ ಜೊತೆ ಬೆರೆತುಕೊಂಡಿರೋದೇ ದೊಡ್ಡ ಸವಾಲಾಗಿದೆ ಇನ್ನು ಈ ವರ್ಚುವಲ್ ಪ್ರಪಂಚದವರ ಜೊತೆ ಏಗೋದು ಯಾರೂ ಅಂತ?’
ನೀವೇ ಯೋಚ್ನೆ ಮಾಡಿ, ಎಷ್ಟೊಂದು ಸೋಷಿಯಲ್ ನೆಟ್‌ವರ್ಕಿಂಗ್ ಸೈಟ್‌ಗಳಿವೆ ಅಂತಾ - ಆರ್ಕುಟ್ಟು, ಫೇಸ್‌ಬುಕ್, ಮೈಸ್ಪೇಸ್, ಟ್ವಿಟ್ಟರ್ ಮುಂತಾಗಿ. ಇವುಗಳಿಗೆಲ್ಲ ಒಂದೊಂದು ಅಕೌಂಟ್ ಕ್ರಿಯೇಟ್ ಮಾಡಿಕೊಂಡಿರಬೇಕು, ಅವಕ್ಕೆಲ್ಲ ಒಂದೊಂದು ಯೂಸರ್ ಐಡಿ ಪಾಸ್‌ವರ್ಡ್. ಜೊತೆಗೆ ಅಲ್ಲಿ ಬಂದು ಹೋಗೋರ ಜೊತೆಯಲ್ಲ ಸಂಭಾಷಣೆ ಮಾಡುತ್ತಾ ಇರೋದಕ್ಕೆ ಟೈಮಾದ್ರೂ ಯಾರ ಹತ್ರ ಇದೆ ಅನ್ಸೋಲ್ವ? ನಾನು ತಮಾಷೆಯಾಗಿ ಹೇಳೋದೇನು ಅಂದ್ರೆ, ಒಂದಲ್ಲ ಒಂದು ದಿನ ಈ ಸೈಟುಗಳೆಲ್ಲ ಗೂಗಲ್ಲೋ, ಮೈಕ್ರೋಸಾಫ್ಟ್‌ನವರೋ ಮರ್ಜ್ ಮಾಡೋ ಕಾಲ ಬರುತ್ತೆ, ಆಗ ನಾನು ಒಂದೇ ಒಂದು ಅಕೌಂಟ್ ಓಪನ್ ಮಾಡಿಕೊಂಡಿರ್ತೀನಿ ಅಂತ.
ಇನ್ನೂ ಮುವತ್ತರ ಹರೆಯದಲ್ಲಿದ್ದುಕೊಂಡೇ ನಾನು ಇಷ್ಟೊಂದು ಔಟ್‌ಡೇಟೆಡ್ ಆಗಿ ಹೋದ್ತಾ ಅನ್ನೋ ಹೆದರಿಕೆ ಒಂದು ಕಡೆ. ಛೇ, ಪ್ರಪಂಚದ ಆರು ಬಿಲಿಯನ್ ಜನರಲ್ಲಿ ಕನಿಷ್ಠ ಮೂರು ಬಿಲಿಯನ್ನ್ ಜನರಾದ್ರೂ ಇನ್ನೂ ಫೋನಿನ ಡಯಲ್ ಟೋನ್ ಕೇಳದೇ ಇರೋ ಪರಿಸ್ಥಿತಿ ಇರೋವಂತ ಸಮಯದಲ್ಲಿ ನನ್ನಂಥವರು ಔಟ್‌ಡೇಟೆಡ್ ಅಗೋದಾದ್ರೂ ಹೇಗೆ ಅನ್ನೋ ಸಮಾಧಾನ ಜೊತೆಗೆ. ಇ-ಮೇಲ್, ಫೋನ್ ಹಾಗೂ ಮುಖತಃ ಭೇಟಿ ಮಾಡುವ ಸಂದರ್ಭಗಳಲ್ಲಿ ನಾವು ನಮ್ಮನ್ನು ಚೆನ್ನಾಗಿ ತೊಡಗಿಸಿಕೊಂಡ್ರೆ ಸಾಕು ಸಂಬಂಧಗಳು ಬೆಳೆಯೋದಕ್ಕೆ, ಇವಿಷ್ಟರ ಜೊತೆಗೆ ಅಲ್ಲಿ-ಇಲ್ಲಿ ವೆಬ್ ಸೈಟ್‌ಗಳಲ್ಲಿ ಹೋಗಿ ’ಇಂದು ನಾನು ಇಂಥಾ ತಿಂಡಿ ತಿಂದೆ’, ’ಅವನು ಅಲ್ಲಿ ಅಷ್ಟೊಂದು ರನ್ ಹೊಡೆದ’ ಅಂತೆಲ್ಲ ’ವಾಲ್’ ಮೇಲೆ ಬರೆದುಕೊಳ್ಳೋದ್ರಿಂದ ಏನ್ ಪ್ರಯೋಜನ ಅಂತ ನನಗಿನ್ನೂ ಕನ್ವಿನ್ಸ್ ಆಗಿಲ್ಲ ನೋಡಿ.
ನಾನು ಹಳೇ ಕಾಲದವನು ಆಗೋ ಕಾಲ ಹತ್ರ ಬರ್ತಾ ಇದೆ, ಅಂತ ನೀವೆಲ್ಲ ನಗಬಹುದು. ನನ್ನ ಪ್ರಕಾರ, ಕೈಯಲ್ಲಿರೋ ಐದು ಸಾವಿರ ಡಾಲರ್ ವಾಚಾಗ್ಲಿ ಅಥ್ವಾ ಬೆಂಗಳೂರಿನಲ್ಲಿ ಐವತ್ತು ರೂಪಾಯಿಗೆ ಸಿಗೋ ವಾಚಾಗ್ಲಿ ಮುಖ್ಯವಲ್ಲ್ - ಸಮಯವನ್ನ ಚೆನ್ನಾಗಿ ಬಳಸೋರು, ಅವರ ಕೈಯಲ್ಲಿ ಯಾವ ವಾಚ್ ಇದ್ರೂ ಇಲ್ದೇ ಇದ್ರೂ, ಸಮಯದ ಉಪಯೋಗವನ್ನು ಚೆನ್ನಾಗಿ ಮಾಡಿಕೊಳ್ತಾರೆ. ಅದೂ ಅಲ್ದೇ, ಈ ಸಂಬಂಧಗಳು ಅನ್ನೋದೆಲ್ಲ, ತೋಟದಲ್ಲಿ ಒಂದು ಗಿಡ ನೆಟ್ಟ ಹಾಗೆ, ಅವುಗಳನ್ನು ಚೆನ್ನಾಗಿ ಬೆಳೆಸಿ, ಪೋಷಿಸದೇ ಹೋದ್ರೇ ಸತ್ತೇ ಹೋಗ್ತಾವೆ. ಹಾಗಿರಬೇಕಾದ್ರೆ, ನನ್ನ ಸುತ್ತು ಮುತ್ಲೂ ಇರೋ ಸಂಬಂಧಗಳನ್ನು ನಾನು ಆತುಕೊಳ್ಳಲೋ ಅಥ್ವಾ ಜೊತೆಗೆ ಒಂದಿಷ್ಟು ವರ್ಚುವಲ್ಲ್ ಪ್ರಪಂಚದ ಲಿಂಕುಗಳನ್ನೂ ಪೋಣಿಸಿಕೊಳ್ಳಲೋ? ಅನ್ನೋ ಸಂಧಿಗ್ಧ ಬೇರೆ.
ಇಂಟರ್‌ನೆಟ್ ಈಗ ತಾನೆ ಕಣ್ಣು ತೆರೀತಾ ಇದೆ, ಕೇವಲ ಒಂದೂವರೆ ದಶಕದಷ್ಟು ಹಳೆಯದಾದ ಈ ತಂತ್ರಜ್ಞಾನಕ್ಕೆ ಇನ್ನೂ ದೊಡ್ಡ ಭವಿಷ್ಯವಿದೆ. ಈ ಇಂಟರ್‌ನೆಂಟ್ ಸೈಟ್‌ಗಳು ನಮ್ಮೂರಿನ ಪಬ್ಲಿಕ್ ಲೈಬ್ರರಿಗಳಾಗೋ ಮುನ್ನ ಬಹಳಷ್ಟು ಬೆಳವಣಿಗೆ ಖಂಡಿತ ಇದೆ. ನಾವೆಲ್ಲ ಮುದುಕರಾಗೋಷ್ಟೋತ್ತಿಗೆ ಇನ್ನೂ ಏನೇನು ಬದಲಾವಣೆಗಳು ಬಂದು ಹೋಗ್ತಾವೋ ಕಾಣೆ. ನಮ್ಮ ಸುತ್ತು ಮುತ್ಲೂ ಇರೋ ಖಾಲಿ ಜಾಗಗಳ್ಳಲ್ಲಿ - ಅಂದ್ರೆ ಅದು ರೆಫ್ರಿಜರೇಟರ್ರಿನ ಸೈಡ್ ಆಗಿರಬಹುದು, ಆಥವಾ ಅಟ್ಟದ ಮೇಲಿನಿಂದ ಇಳಿಯುವಾಗ ಸಿಗೋ ಗೋಡೆ ಮೇಲಿನ ಖಾಲಿ ಜಾಗವಾಗಬಹುದು, ಅಥವಾ ಕಾರಿನ ವಿಂಡ್‌ಶೀಲ್ಡ್ ಇನ್ನು ಮುಂತಾದ ಫ್ಲಾಟ್ ಜಾಗಗಳು ಫ್ಲಾಟ್‌ಸ್ಕ್ರೀನ್ ಆಗಿ ಮಾರ್ಪಾಡಾಗೋ ಕಾಲ ದೂರವಿಲ್ಲ. ವರ್ಚುವಲ್ಲ್ ಆಗಲಿ ರಿಯಲ್ ಆಗಲಿ ಈ ಪ್ರಪಂಚ ಇಷ್ಟೇ, ಯಾವಾಗ್ಲೂ ಬೆಳಿತಾನೇ ಇರುತ್ತೆ. ಇವುಗಳಿಗೆಲ್ಲ ಸ್ಪಂದಿಸೋದಕ್ಕೆ, ಇವುಗಳ ಜೊತೆ ಏಗೋದಕ್ಕೆ ಸಮಯ ಮಾತ್ರ ಸಿಗೋದಿಲ್ಲ ಅಷ್ಟೇ.