ಸ್ಪ್ರಿಂಗ್ ಬಂತು ಸ್ಪ್ರಿಂಗು
ಮೊನ್ನೆ ಇಲ್ಲೆಲ್ಲಾ ಸ್ಪ್ರಿಂಗ್ ಆರಂಭವಾದ ದಿನ. ಇವತ್ತಾದರೂ ಪರಿಸ್ಥಿತಿ ಹೇಗಿದೆ ನೋಡೋಣ ಎಂದು ಪ್ಯಾಟಿಯೋದಿಂದ ಹೊರಗೆ ನೋಡಿದರೆ ಅಂತಾ ಏನೂ ವಿಶೇಷ ಕಾಣಿಸ್ಲಿಲ್ಲ. ಮರ-ಗಿಡಗಳೆಲ್ಲ ಅವೇ ಗ್ರೇ ಸ್ಕೇಲ್ ಪೇಂಟಿಂಗ್‌ನಲ್ಲಿ ನಿಂತ ಹಾಗೆ ಒಂದಿನಿತೂ ಅಲುಗಾಡದೆ ನಿಂತಿದ್ದವು. ಡೆಕ್ ಮೇಲೆ ಅಮ್ಮ ಚಪಾತಿ ಮಣೆಯ ಮೇಲೆ ಹಿಟ್ಟು ಸವರಿಕೊಳ್ಳೋ ಹಾಗೆ ಒಂದು ಪದರು ಸ್ನೋ ಬಿದ್ದಿತ್ತು. ಹೊರಗಡೆ ಇರೋ ಥರ್ಮಾ ಮೀಟರ್‌ನ ಮುಳ್ಳು ಕೆಟ್ಟು ಹೋಗಿರುವ ಗಡಿಯಾರದಲ್ಲಿ ಮುಳ್ಳುಗಳು ನಿರ್ಜೀವವಾಗಿ ಬಿದ್ದ ಹಾಗೆ ಮುವತ್ತು ಡಿಗ್ರಿಯ (ಫ್ಯಾರನ್‌ಹೈಟ್) ಬಲಮಗ್ಗುಲಿಗೆ ಸತ್ತು ಬಿದ್ದ ಹಾಗಿತ್ತು.
ಈ ಸ್ಪ್ರಿಂಗ್ ನದೇ ವಿಶೇಷ, ಇಲ್ಲಿ ಅದೆಷ್ಟು ವರ್ಷ ಇದ್ದರೂ ನಮಗಿನ್ನೂ ಚರ್ಮದಿಂದ ಕೆಳಗೆ ಇಳಿಯೋದೇ ಇಲ್ಲ. ಸ್ಪ್ರಿಂಗ್‌ಗೆ ಕನ್ನಡದಲ್ಲಿ ಏನಂತಾರೆ ಎಂದು ಡಿಕ್ಷನರಿಯನ್ನು ನೋಡಿದರೆ ಅಲ್ಲೂ ನಿರಾಶೆ ಕಾದಿತ್ತು. ಇವರೋ ವರ್ಷವನ್ನು ಸಮನಾಗಿ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಅವುಗಳನ್ನು ಸ್ಪ್ರಿಂಗು, ಸಮ್ಮರ್ರು, ಫಾಲ್ ಹಾಗೂ ವಿಂಟರ್ ಎಂದು ಕರೆದರು. ಆದರೆ ನಮ್ಮ ಚೈತ್ರ, ವೈಶಾಖ ಮಾಸಗಳಾಗಲೀ ವಸಂತ ಋತುವಾಗಲಿ ವರ್ಷವನ್ನು ನೋಡುವ ರೀತಿಯೇ ಬೇರೆ. ಅಲ್ಲದೆ ನಮ್ಮ ಕಡೆಗೆಲ್ಲ ಬೇಸಿಗೆ ಕಾಲ, ಮಳೆಗಾಲ, ಛಳಿಗಾಲ ಎಂದು ಮಾತನಾಡಿಕೊಂಡಿದ್ದನ್ನು ಕೇಳಿದ್ದೆನೆಯೇ ವಿನಾ ಈ ಸ್ಪ್ರಿಂಗ್ ಬಗ್ಗೆ ಕೇಳಿಲ್ಲ. ಇದನ್ನು ಸುಗ್ಗಿ ಅನ್ನೋಣವೇ, ಸಂಕ್ರಮಣ ಅನ್ನೋಣವೇ, ಯುಗಾದಿ ಅನ್ನೋಣವೇ, ಅಥವಾ ಬಾಯ್ತುಂಬ ಸ್ಪ್ರಿಂಗ್ ಎಂದು ಸುಮ್ಮನಿದ್ದು ಬಿಡೋಣವೆ.
ಇಲ್ಲಿ ಮಂಜಿನ ಹನಿಗಳದೊಂದು ಮತ್ತೊಂದು ವಿಶೇಷ, ಹಗುರವಾಗಿ ನೆಲದ ಮೇಲೆಲ್ಲಾ ಹರಡಿ ಹೂ-ಎಲೆಗಳನ್ನು ಸ್ಪರ್ಶಿಸಿ ಅವುಗಳನ್ನು ತೇವವಾಗಿಡುವುದರ ಬದಲು ಇಳಿಯುವ ಉಷ್ಣತೆಯ ದೋಸ್ತಿಗೆ ಕಟ್ಟುಬಿದ್ದು ಅವೂ ಘನೀಭವಿಸತೊಡಗಿವೆ. ಡಿಸೆಂಬರ್ ಇಪ್ಪತ್ತೊಂದರಿಂದಲೇ ಮೆಜಾರಿಟಿಗೆ ಬಂದ ಸೂರ್ಯನ ಕಿರಣಗಳು ಈಗಾಗಲೇ ತಮ್ಮ ಮಧ್ಯ ವಯಸ್ಸನ್ನು ತಲುಪಿ ಮುದುಕರಂತೆ ಕಂಡು ಬರುತ್ತಿವೆ, ಇನ್ನೇನು ಜೂನ್ ಇಪ್ಪತ್ತೊಂದು ಬರುವಷ್ಟರೊಳಗೆ ಸತ್ತೇ ಹೋದಾವೇನೋ ಎನ್ನೋ ಹಾಗೆ.
ಛಳಿಯಲ್ಲಿ ಇದ್ದು ಬಂದವರಿಗೆ ಬೇಸಿಗೆಯ ಆಸೆ, ಬೇಸಿಗೆಯಲ್ಲಿ ಒಂದೇ ಒಂದಿಷ್ಟು ಬಿಸಿಲಲ್ಲಿ ಬಸವಳಿದು ಹೋದರೂ ತಂಪಾಗಿರಬಾರದೇ ಎನ್ನುವ ತವಕ. ಏನೇ ಅಂದರೂ ಶೇಕ್ಸ್‌ಪಿಯರ್ ಅಂಥವರು - shall I compare thee to a summers day! ಎಂದು ಏಕೆ ಬರೆದರು ಎಂದು ಅನುಭವಿಸಲು ಅಂತಹ ವಾತಾವರಣದಲ್ಲೇ ಇರಬೇಕು ಎನ್ನುವುದು ನನ್ನ ಅಭಿಮತ. ಮಳೆಯಲ್ಲಿ ನೆಂದವರ ಬವಣೆಯನ್ನು ಅರಿಯಲು ಓದುಗರು ಮಳೆಯಲ್ಲಿ ನೆನೆದು ನೋಡಬೇಕಾಗೇನೂ ಇಲ್ಲ, ಆದರೆ ವರ್ಷದ ಎಂಟು ತಿಂಗಳು ಶೀತ ವಾತಾವರಣವನ್ನು ಅನುಭವಿಸಿ ಇರುವ ಒಂದೋ ಎರಡೋ ತಿಂಗಳ ಬೇಸಿಗೆಯ ಸುಖದಲ್ಲಿ ಚಿಗುರುವ ಕವಿಯ ಕಲ್ಪನೆಗಳು ನಮ್ಮ ದಕ್ಷಿಣ ಭಾರತದ ಸುಡು ಬಿಸಿಲಿನಲ್ಲಿ ಹುಟ್ಟಿ ಬೆಳೆದು ಓದಿದವರಿಗೇನು ಗೊತ್ತು?
ನಮಗಿಲ್ಲಿ ಕ್ಯಾಲೆಂಡರಿನಲ್ಲಿ ಹೇಳಿ ಕೊಟ್ಟಂತೆ ಸ್ಪ್ರಿಂಗ್ ಬರುತ್ತದೆ. ಅವಾಗಾವಾಗ ಅಮ್ಮ ನೆನಪಿಸುತ್ತಲೇ ಇರುತ್ತಾಳೆ, ಈ ತಿಂಗಳು ಇಪ್ಪತ್ತೇಳಕ್ಕೆ ಯುಗಾದಿ ಹಬ್ಬ ಇದೆ, ನೀವೂ ಮಾಡಿ ಎಂದು. ನಮಗಿಲ್ಲಿ ಎಳ್ಳೂ-ಬೆಲ್ಲ ಬರಲಿಲ್ಲ, ಮುಂದೆ ಬೇವೂ-ಬೆಲ್ಲವೂ ಇರೋದಿಲ್ಲ. ಇಲ್ಲಿ ನಮಗೆ ಹೊಂಗೆ ಹೂವ ತೊಂಗಲು ಕಣ್ಣಿಗೆ ಕಾಣೋದಿಲ್ಲ, ಯಾವುದೋ ಭಾಷೆಯಲ್ಲಿ ಅದೇನೆಂದೋ ಕರೆಯುವ ಒಂದಿಷ್ಟು ಮರಗಿಡಗಳು ದಾರಿ ಉದ್ದಕ್ಕೂ ಕಾಣ ಸಿಗುತ್ತವೆ, ತಮ್ಮ ಸುತ್ತ ಮುತ್ತಲೂ ಬಣ್ಣದೋಕುಳಿಯನ್ನು ಹರಡಿಕೊಳ್ಳುತ್ತವೆ. ಮಾವಿನೆಲೆಗಳಾಗಲೀ, ಚಿಗುರುಗಳಾಗಲೀ ನೋಡದೇ ಎಷ್ಟೋ ವರ್ಷಗಳೇ ಕಳೆದವೇನೋ, ಅವುಗಳ ಬದಲಿಗೆ ನಮ್ಮ ಮನೆಯ ಬಾಗಿಲಿಗೆ ಯಾವತ್ತೂ ಹಸಿರನ್ನು ತರುವ ಪ್ಲಾಸ್ಟಿಕ್ ಎಲೆಗಳನ್ನು ಪೋಣಿಸಿದ ಸರವೊಂದನ್ನು ನೇತು ಹಾಕಿದ್ದಾಗಿದೆ. ಸಂವತ್ಸರಗಳು ಕೆಲವೇ ಕೆಲವು ನೆನಪಿವೆ. ಆರು ಋತುಗಳನ್ನು ನೆನಪಿಸಿಕೊಳ್ಳಲು ಕನಿಷ್ಠ ಆರು ನಿಮಿಷವಾದರೂ ಬೇಕು, ಚೈತ್ರ-ವೈಶಾಖರನ್ನು ಎಡಬಿಡದೆ ಕಲಿತದ್ದರಿಂದಾಗಿ ಇನ್ನೂ ಸ್ಮೃತಿಪಠಲದಲ್ಲೇ ಇವೆ. ಅಶ್ವಿನಿ-ಭರಣಿ-ಕೃತ್ತಿಕಾ-ರೋಹಿಣಿಯರು ಒಮ್ಮೊಮ್ಮೆ ಪೂರ್ಣ ನೆನಪಿಗೆ ಬರುತ್ತಾರೆ, ಮತ್ತೆ ಇಲ್ಲ. ಯಾವ ಮಳೆ ನಕ್ಷತ್ರ ಯಾವ ತಿಂಗಳಲ್ಲಿ ಎನ್ನುವುದು ನೆನಪಿಗೆ ಗುಡ್ ಬೈ ಹೇಳಿ ಬಹಳ ವರ್ಷಗಳೇ ಆಗಿವೆ. ಯಾವ ಹುಣ್ಣಿಮೆಗೆ ಏನೇನು ವಿಶೇಷ ಎನ್ನುವುದು ಈಗ ಇತಿಹಾಸವಷ್ಟೇ.
ನಮಗಲ್ಲಾದರೆ ಯುಗಾದಿ ಒಂದು ಸಮೂಹದಾಚರಣೆಯಾಗುತ್ತಿತ್ತು. ಒಂದೆರಡು ಬೇವು-ಮಾವಿನ ಮರಗಳನ್ನು ಹತ್ತಿಳಿದು ಎಲೆಗಳನ್ನು ಕಿತ್ತು ತರುತ್ತಿದ್ದೆವು. ಅದೇ ದಿನ ಸಂಜೆಯೋ ಮರುದಿನವೋ ಕಂಡೂ ಕಾಣದ ಚಂದ್ರನ ಗೆರೆಯನ್ನು ತವಕದಿಂದ ಹುಡುಕುತ್ತಿದ್ದೆವು. ನಾವು ತಿಂದು ಹಂಚುವ ಬೇವು-ಬೆಲ್ಲದ ಪ್ರತೀಕ ಬಹಳ ದೊಡ್ಡದಿತ್ತು. ಇಲ್ಲಿ ಸ್ಪ್ರಿಂಗ್ ಬಂದರೆ it's just another day, ಅದೇ ರೀತಿ ಉಳಿದ ದಿನಗಳೂ ಬಂದು ಹೋಗುತ್ತವೆ. ಹಾಗೆ ಬಂದು ಹೋಗುವ ಕಾಲ(ಮಾನ)ಕ್ಕೆ ನಾವು ಒಂದಿಷ್ಟು ಪ್ರತಿರೋಧ ಒಡ್ಡಿದಂತೆ ಮಾಡುತ್ತೇವಾದರೂ ಅಂತಹ ಪ್ರತಿರೋಧದ ಧ್ವನಿಯೂ ನಮ್ಮಲ್ಲೇ ಹುಟ್ಟಿ ಅಲ್ಲೇ ಮುದುರಿಕೊಳ್ಳುವುದು ಈ ಸ್ಪ್ರಿಂಗ್ ಬಂದು ಹೋದಷ್ಟೇ ಸಹಜವಾಗಿ ಹೋಗುತ್ತದೆ.