2008 ಅನ್ನೋದು ಈಗ ಇತಿಹಾಸ, ಇಷ್ಟೊತ್ತಿಗಾಗಲೇ ವಿಶ್ವದೆಲ್ಲಾಕಡೆ ಗಡಿಯಾರಗಳು ೨೦೦೯ ನ್ನು ತೋರಿಸ್ತಿರೋ ಹೊತ್ತಿನಲ್ಲಿ ಒಬ್ಬರೊನ್ನೊಬ್ಬರು ಕರೆ ಮಾಡಿ ’ಹೊಸ ವರ್ಷದ ಹಾರ್ಧಿಕ ಶುಭಾಶಯಗಳು’ ಎಂದು ವಿಶ್ ಮಾಡೋದು ನಿಂತು ಹೋಗಿರಬಹುದು. ಈ ಹಿಂದೆ ಹಲವಾರು ಸಾರಿ ಬರೆದ ಹಾಗೆ ನಾವು ನಮ್ಮನ್ನು ಇಂಗ್ಲೀಷ್ ಕ್ಯಾಲೆಂಡರಿಗೆ ಸಮರ್ಪಿಸಿಕೊಂಡಿದ್ದೇವೆ. ನಮ್ಮ ಮಾರ್ಚ್-ಏಪ್ರಿಲ್ ತಿಂಗಳ ನಡುವೆ ಎಲ್ಲೋ ಬರುವ ಚಂದ್ರಮಾನ ಯುಗಾದಿ, ಚೈತ್ರ ಮಾಸ ವಸಂತ ಋತು ಉತ್ತರಾಯಣ ಪುಣ್ಯಕಾಲಾರಂಭ ಇವೆಲ್ಲವೂ ನಿಧಾನವಾಗಿ ಮರೆಯಾಗುತ್ತಿವೆ. ಇದೇ ಹಾಡನ್ನು ಸ್ವಲ್ಪ ಜೋರಾಗಿ ಹಾಡಿದರೆ ’ಹಿಂದೂ ಮೂಲಭೂತವಾದಿ’ಯಾಗಿ ಬಿಡಬಹುದಾದ ಸಾಧ್ಯತೆಗಳೂ ಇವೆ, ಹಾಡನ್ನು ಹಾಡದೇ ಸುಮ್ಮನಿದ್ದರೆ ನಮ್ಮತನವನ್ನು ಕಳೆದುಕೊಂಡ ಅನುಭವಾಗುವುದೂ ನಿಜವೇ ಹೌದು.
ನಿನ್ನೆ ರಾತ್ರಿಯ ಇಪ್ಪತ್ತರ ಡಿಗ್ರಿ ಫ್ಯಾರನ್ಹೈಟ್ ಛಳಿಯಲ್ಲಾಗಲೀ ಇಂದು ಹೊಸ ವರ್ಷದ ದಿನದಲ್ಲಾಗಲೀ ಹೆಚ್ಚಿನ ಬದಲಾವಣೆಯೇನೂ ಇಲ್ಲ. ಬೇವುಗಳು ಇನ್ನೂ ಚಿಗುರಿಲ್ಲ, ಬೆಲ್ಲ ಮಾಡುವ ಸೀಜನ್ನೂ ಅಲ್ಲ. ಮರಗಳೆಲ್ಲ ಮರಗಟ್ಟಿ ಹೋಗೀ ನಿತ್ಯ ಹರಿದ್ವರ್ಣಿಗಳ ಮೇಲಿನ ಹಸಿರನ್ನು ಹೊರತುಪಡಿಸಿದರೆ ಮತ್ತೆಲ್ಲಾ ಛಳಿಯ ಬಣ್ಣವನ್ನು ಹೊದ್ದಿರುವ ಹೊರಗಿನ ವಾತಾವರಣ. ಅಲ್ಲಲ್ಲಿ ಬಿದ್ದ ಹಿಮ, ಮತ್ತೆ ಅದೇ ಅದರ ಛಳಿಗೆ ಹರಳುಗಟ್ಟಿ ಘನೀಭವಿಸಿ ಮತ್ತಿನ್ನಷ್ಟು ಶೀತಲತೆಯನ್ನು ಮುಖದ ಮೇಲೆ ತಂದುಕೊಂಡು ನೋಡೋಕೆ ಪುಡಿಯಂತೆ ಕಂಡುಬಂದರೂ ಒಳಗೆ ಗಟ್ಟಿಪದರವನ್ನು ಕಟ್ಟಿಕೊಂಡು ತನ್ನ ಮೈ ಶಾಖದಲ್ಲಿ ತಾನು ಯಾವುದೋ ಪ್ರಪಂಚವನ್ನು ಸೃಷ್ಟಿಸಿಕೊಂಡಿರುವ ಹೆಮ್ಮೆಯಿಂದ ಬೀಗುತ್ತಿರುವ ಹಾಗೆ ಕಂಡುಬಂತು. ಬೇಕಾದಷ್ಟು ಬೀಸುತ್ತಿರುವ ಗಾಳಿಗೆ ತಲೆ ತೂಗೀ ತೂಗೀ ಕಂಗಾಲಾದ ಮರಗಳು ಯಾವುದೋ ದಿಕ್ಕಿನಲ್ಲಿ ಅವಿತುಕೊಂಡ ವಾಯು-ವರುಣರಿಗೆ ಚಪ್ಪೆ ಮುಖವನ್ನು ತೋರಿಸುವಷ್ಟು ದೀನರಾಗಿ ಹೋಗಿದ್ದರೆ, ಕಪ್ಪಾದ ರಸ್ತೆಯ ಮೇಲ್ಮೈ ಸಹ ಇಂದು ಬೀಳದ ಬಿಸಿಲಿಗೆ ಶಪಿಸುತ್ತಾ ತಮ್ಮ ಕಳೆದುಕೊಂಡ ಕಾವಿಗೆ ಚಡಪಡಿಸಿ ತಮ್ಮ ಮೈ ಮೇಲೆ ತೆಳ್ಳಗೆ ಸವರಿದ ಬಿಳಿಯ ಮಂಜಿನ ಪುಡಿಗೆ ಹೆದರಿಕೊಂಡಿದ್ದವು. ನಿನ್ನೆ-ಇಂದಿಗೆ ಹೆಚ್ಚು ವ್ಯತ್ಯಾಸ ಕಂಡು ಬರದ ನನ್ನ ಹಾಗಿನ ಉಳಿದವೆಲ್ಲವೂ ಇದೊಂದು ದಿನ ಮತ್ತೊಂದು ದಿನ ಎಂದುಕೊಂಡು ಸುಮ್ಮನಿದ್ದವು.
ಹಳೆಯ ವರ್ಷ ಗೆದ್ದವರು ಬಿದ್ದವರೆದ್ದೆಲ್ಲವನ್ನು ಟಿವಿ ಪರದೆ ತಾನು ತೋರಿಸಿಯೇ ತೀರುತ್ತೇನೆ ಎಂದು ಸೆಡ್ಡು ಹೊಡೆದುಕೊಂಡು ನಿಂತಿತ್ತು. ಈ ವರ್ಷದ ಆರಂಭದ ಕ್ಷಣಗಣನೆ ಮುಗಿದು ಘಂಟೆಗಳೇ ಕಳೆದಿದ್ದರೂ ಹೊಸತಕ್ಕೆ ಈಗಾಗಲೇ ಹೋದವರಿಗಿಂತಲೂ ಹಳೆಯದ್ದಕ್ಕೆ ಅಂಟಿಕೊಂಡವರಿಗಿಂತಲೂ ಇನ್ನೂ ಹಳೆಯದು-ಹೊಸತರ ನಡುವೆ ಓಲಾಡುತ್ತಿರುವವರು ಓಲಾಡುತ್ತಲೇ ಇರುವವರ ಹಾಗೆ ಕೆಲವು ಚಿತ್ರಗಳಲ್ಲಿ ಕಂಡುಬಂತು. ಕ್ಯಾಲೆಂಡರಿನ ದಿನ ಬದಲಾದಂತೆ ತಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳು ತೊಲಗಿ ಹೋದವು ಎಂದುಕೊಂಡು ಬೀಗಿ ನಿಂತವರು ಈ ಮೊದಲು ಹೇಳಿದ ಯಾವುದೇ ಗುಂಪಿನಲ್ಲಿ ಸೇರದೇ ತಮ್ಮದೇ ಒಂದು ಪಂಥವನ್ನು ಕಟ್ಟಿಕೊಂಡವರಂತೆ ಕಂಡುಬಂದರು. ’ಹಾಗಾದರೆ ನಮ್ಮೆಲ್ಲ ಕಷ್ಟಗಳೆಲ್ಲ ತೊಲಗಿದವೇನು ಇಂದಿಗೆ?’ ಎಂದು ನಾನೆಸೆದ ಪ್ರಶ್ನೆಯೊಂದಕ್ಕೆ ನಮ್ಮ ಬ್ಯಾಂಕಿನ ಮ್ಯಾನೇಜರಿಣಿ ’ಇದು ಕೇವಲ ಐಸ್ಬರ್ಗಿನ ತುದಿ ಮಾತ್ರ!’ ಎಂದು ಈಗಾಗಲೇ ಕುಸಿದ ವ್ಯವಸ್ಥೆ ಮತ್ತಿನ್ನಷ್ಟು ಕುಸಿದು ಹೋಗುವ ಮುನ್ಸೂಚನೆಯನ್ನು ನೀಡಿದಳು. ಅದೇ ಐಸ್ಬರ್ಗ್ - ಅದೆಷ್ಟೋ ವರ್ಷಗಳಿಂದ ಹರಳುಕಟ್ಟಿದ ಹಿಮ, ನೀರಿನ ಒಳಗೇ ತನ್ನದೊಂದು ಪುಟ್ಟ ಪ್ರಪಂಚದ ವಾಸ್ತ್ಯವ್ಯವನ್ನು ಸ್ಥಾಪಿಸಿಕೊಂಡಿರುವ ಅದು ಅಷ್ಟು ಸುಲಭವಾಗಿ ಕರಗಲಾರದು, ಅದು ಪುಡಿಯಾಗಿ-ಕರಗುವ ಮೊದಲು ಅದೆನ್ನೆಷ್ಟು ಟೈಟಾನಿಕ್ ವ್ಯವಸ್ಥೆಗಳನ್ನು ಬಲಿತೆಗೆದುಕೊಳ್ಳಬೇಕೋ ಬಲ್ಲವರಾರು?
ನಿನ್ನೆಗೆ ಕೊರಗಬಾರದು, ನಾಳೆಗೆ ನರಳಬಾರದು, ಇಂದಿನದನ್ನು ಇಂದೇ ನೋಡಿ ಅನುಭವಿಸಿ ತೀರುವ ಪುಟ್ಟದೊಂದು ತಂತ್ರ. ಆ ತಂತ್ರದಲ್ಲಿನ ಸೂತ್ರದಾರನ ಬೆನ್ನಿಗೆ ಎಲ್ಲೆಲ್ಲಿಂದಲೋ ಹೊತ್ತು ತಂದ ಈವರೆಗೆ ಶೇಖರಿಸಿಕೊಂಡ ಒಂದಿಷ್ಟು ಬ್ಯಾಗುಗಳು. ನಾಗಾಲೋಟದ ಮನಸು, ಅದಕೆ ವ್ಯತಿರಿಕ್ತವಾಗಿ ಗಟ್ಟಿಯಾದ ಭೂಮಿಗೆ ಅಂಟಿಕೊಂಡು ಅದರಲ್ಲಿನ ಘರ್ಷಣೆ ಅದರ ಮೇಲ್ಮೈ ಎತ್ತಿ ಕೊಡುವ ವಿರುದ್ಧ ಬಲದ ಸಹಾಯದಿಂದ ನಿಧಾನವಾಗಿ ಚಲಿಸುವ ಕಾಲುಗಳು, ಹೊಟ್ಟೆಗಾಗಿ ಏನೇನೋ ಮಾಡೋ ಜೀವದ ಸಂತೃಪ್ತಿಗೆ ಮತ್ತೆ ಅದೇ ನೆಲದಲ್ಲಿ ಸಿಕ್ಕ ಅಂಶಗಳಿಂದ ಪೋಷಣೆ. ಮತ್ತೆ ಎಲ್ಲರಿಗೂ ಇದ್ದು ಯಾರಿಗೂ ಸಿಗದಿರುವ ಪಂಚಭೂತಗಳು. ಈ ತಂತ್ರಗಾರಿಕೆಯ ವ್ಯವಸ್ಥೆಯನ್ನು ಚಲಾಯಿಸೋದಕ್ಕೆ ಅವರವರ ದುಡ್ಡೂ-ಕಾಸು, ಅದಕ್ಕೆ ತಕ್ಕನಾದ ಮೋಜು-ಮಸ್ತಿ. ಮನೆಯಲ್ಲಿದ್ದರೆ ಕೆಲಸದ ಬಗ್ಗೆ, ಕೆಲಸದಲ್ಲಿದ್ದರೆ ಮನೆಯ ಬಗ್ಗೆ ಚಿಂತಿಸುವ ಕೊರಗು. ಅದ್ಯಾರೋ ದೊಡ್ಡ ಮನುಷ್ಯರು ಹೇಳಿದ ಹಾಗೆ ಇರೋದನ್ನೆಲ್ಲ ಬಿಟ್ಟು ಇರುದುದರೆಡೆಗೆ ತುಡಿವ ಮರುಗು.
ಈ ಆಸೆಯದ್ದೇ ವಿಶೇಷ - ನಾಳಿನದ್ದೆಲ್ಲ ಒಳ್ಳೆಯದೇ ಎನ್ನುವ ಹೋಪ್ ಬಹಳ ಪ್ರಭಲವಾದದ್ದು. ಮಾರುಕಟ್ಟೆಗೆ ಸಂಬಂಧ ಪಟ್ಟಂತೆ ಹಲವಾರು ವರ್ಷಗಳಲ್ಲಿ ಬಿದ್ದ ದಿನಗಳಿಗಿಂತಲೂ ಮೇಲೆ ಎದ್ದ ದಿನಗಳೇ ಹೆಚ್ಚಾದರೂ ಕಳೆದುಕೊಳ್ಳುವವರಿಗೆ ಕಳೆದುಕೊಂಡವರಿಗೇನೂ ಕಡಿಮೆ ಇಲ್ಲ. ಒಬ್ಬರು ಕಳೆದುಕೊಂಡರೆ ತಾನೇ ಮತ್ತೊಬ್ಬರು ಗಳಿಸೋದು - ಆದರೆ ಅದು ಯಾವ ನ್ಯಾಯ? ಹಾಗಾದರೆ ಈ ಪ್ರಪಂಚದಲ್ಲಿ ಕೂಡುವವರು ಇದ್ದಾರೆಂದರೆ ಕಳೆಯುವವರೂ ಇದ್ದಾರೆ ಎಂತಲೇ ಅರ್ಥವೇ? ಇದೆಲ್ಲದರ ಒಟ್ಟು ಮೊತ್ತ ಯಾವಾಗಲೂ ಶೂನ್ಯವೇ? ಹಾಗಿದ್ದ ಮೇಲೆ ಕೊಡು ಕೊಳ್ಳುವ ವ್ಯವಹಾರವಾದರೂ ಏಕೆ ಬೇಕು? ಕೂಡುವುದು ನಿಜವಾದ ಮೇಲೆ, ಅದರ ಜೊತೆಗೆ ಕಳೆದುಕೊಳ್ಳುವುದೂ ನಿಜವೆಂದ ಮೇಲೆ ಶ್ರೀ ಕೃಷ್ಣ ಉಪದೇಶ ಮಾಡಿದ ಸ್ಥಿತಪ್ರಜ್ಞ ಸ್ಥಿತಿಯನ್ನು ಜನರು ಅದೇಕೆ ತಲುಪೋದಿಲ್ಲ? ಸಾಕು ಎನ್ನುವುದು ಹೆಚ್ಚು ಕೇಳಿ ಬರದಿರುವಾಗ ಬೇಕು ಎನ್ನುವುದು ಪ್ರಭಲವಾಗಿ ಕಂಡರೆ ಅದೊಂದೇ ಅನನ್ಯವಾದರೆ, ಅದೇ ಸ್ಥಿತಿ ಎಲ್ಲರಲ್ಲೂ ಸೇರಿಕೊಂಡರೆ, ಬೇಕು ಎನ್ನುವುದೇ ಬದುಕಾದರೆ...ಬೇಕು ಎನ್ನುವ ಆಸೆಗೆ ಕೂಡುವುದು ಇದೇ ಜೊತೆಗೆ ಕಳೆಯುವುದೂ ಇದೆ ಎಂದ ಮೇಲೆ ನಾಳಿನದ್ದೆಲ್ಲ ಒಳ್ಳೆಯದೇ ಎನ್ನುವುದು ಎಷ್ಟರ ಮಟ್ಟಿಗೆ ಸರಿ; ಜೊತೆಗೆ ಒಬ್ಬರ ಒಳಿತು ಇನ್ನೊಬ್ಬರ ಒಳಿತಾಗಬೇಕೆಂದೇನೂ ಇಲ್ಲ ಎಂದು ಯೋಚಿಸಿಕೊಂಡಾಗ ಅದೇ ಶೂನ್ಯದ ಸಂಭ್ರಮ, ಎಲ್ಲವನ್ನೂ ತನ್ನ ಹೊಟ್ಟೆಯೊಳಗೆ ತುಂಬಿಕೊಂಡ ಶುಷ್ಕ ನಗೆ.