ಬದಲಾದ Hy factorಗಳ ವ್ಯಾಪ್ತಿ ಅರ್ಥಾಥ್ ಏನಾಗಿದೆ ನನಗೆ
ನೀವು ನನ್ನ ಹಾಗೆ ಎಪ್ಪತ್ತರ ದಶಕದ ಆರಂಭದ ವರ್ಷಗಳಲ್ಲಿ ಹುಟ್ಟಿದ್ದರೆ ಇನ್ನೇನು ಇಂಗ್ಲೀಷರು ಭಾರತವನ್ನು ಬಿಟ್ಟು ಹೋದರು ನಾವೆಲ್ಲ ನಮ್ಮ ನಮ್ಮ ಮೂಲ ಸಂಸ್ಕೃತಿಯಲ್ಲಿ ಬೆಳೆಯುತ್ತೇವೆ ಬದುಕುತ್ತೇವೆ ಎಂದು ಒಳಗೊಳಗೆ ಅಂದುಕೊಳ್ಳುತ್ತಲೇ ಮಾತಿನ ಮಧ್ಯೆ ಧಾರಾಳವಾಗಿ ಇಂಗ್ಲೀಷ್ ಪದಗಳನ್ನು ಬಳಸುವ ಪೋಷಕರೋ ಸಂಬಂಧಿಕರ ನಡುವೆ ಬೆಳೆದು ಬಂದಿರುತ್ತೀರಿ. ’ಇಸವಿಯ ನೋಡು ಎಪ್ಪತ್ತಾರು ವೇಷವ ನೋಡು ಇಪ್ಪತ್ತಾರು!’ ಎನ್ನುವ ಹಾಡಿನ ಗುಂಗಿನಲ್ಲಿ ಬೆಲ್ ಬಾಟಮ್ ಪ್ಯಾಂಟುಗಳನ್ನು ಧರಿಸಿಕೊಂಡಿರುತ್ತೀರಿ. ಆಗಷ್ಟೇ ನಾಯಿಕೊಡೆಗಳಂತೆ ಎಲ್ಲೆಲ್ಲೆ ಬೇಕು ಅಲ್ಲಲ್ಲಿ ತಲೆ ಎತ್ತಿ ನಿಂತು ತಮ್ಮನ್ನು ತಾವು ಸೃಷ್ಟಿಯಲ್ಲಿ ಲೀನವಾಗಿಸಿಕೊಳ್ಳಲು ಸಾಹಸ ಮಾಡುವ ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್ ಕಾಲೇಜುಗಳಲ್ಲಿ ವ್ಯಾಸಾಂಗ ನಡೆಸುವವರನ್ನು ನೋಡಿ ಬೆರಗಾಗಿರುತ್ತೀರಿ. ಆಗಷ್ಟೇ ಕಣ್ತೆರೆಯುತ್ತಿದ್ದ ಕಾಮನ್ ಎಂಟ್ರನ್ಸ್ ಟೆಸ್ಟ್ (CET) ಎನ್ನುವ ವರ್ತುಲದಲ್ಲಿ ನೀವೂ ತೊಡಗಿಕೊಂಡಿದ್ದು, ಸಾಗರ-ಸೊರಬದಂತಹ ಹಳ್ಳಿಯೂರುಗಳಲ್ಲೂ ವಿದ್ಯಾರ್ಥಿಗಳ ನಿದ್ದೆಗೆಡಿಸುವ ಆಬ್ಜೆಕ್ಟಿವ್ ಪರೀಕ್ಷೆಗಳ ಪ್ರಭಾವಕ್ಕೊಳಗಾಗಿರುತ್ತೀರಿ.
ಹೀಗೆ ಕಣ್ಣು ಮಿಟುಕಿಸಿ ಬಿಡುವಷ್ಟರಲ್ಲಿ ನಾವು Y2K ಗೆ ತಯಾರಿ ಮಾಡಲೆಂದು ಸಿಸ್ಟಮ್ ಪ್ಲಾನಿಂಗ್ ಮೀಟಿಂಗ್ ಸೇರಿ ಇಂದಿಗೆ ಹತ್ತು ವರುಷಗಳು ಕಳೆದು ಹೋದವು! ಹೀಗೆ ಕಳೆದ ಮೂರು ದಶಕಗಳಲ್ಲಿ ಉಪೇಂದ್ರನ ’ಡೇಂಜರ್’ ಹಾಡಿನ ಎಫೆಕ್ಟ್ ಏನೂ ಅಷ್ಟೊಂದು ಗೊತ್ತಾಗದಿದ್ದರೂ ನನ್ನಲ್ಲಿ ನನ್ನ ಸುತ್ತಲಿನಲ್ಲಿ ಆದ ಬೇಕಾದಷ್ಟು ಬದಲಾವಣೆಗಳು ಇಂದು ಅದೇನನ್ನೋ ಯೋಚಿಸಿಕೊಂಡು ಹಳೆಯ ಫೈಲ್ ಒಂದನ್ನು ಹುಡುಕಿಕೊಂಡು ಹೋದವನಿಗೆ ಕಣ್ಣ ಮುಂದೆ ಸುಳಿದು ಹೋದವು.
ಈ ಕಂಪ್ಯೂಟರುಗಳು ಒಂದಲ್ಲ ಒಂದು ನಮ್ಮ ಮನೆಯ ಫೋನ್ ಆದ ಹಾಗೆ ಆಗುತ್ತವೆ ಎಂದು ಯಾರೋ ಹೇಳಿದ್ದು ನಿಜವಾಗಿದೆ ಅನ್ನಿಸುತ್ತೆ. ಹತ್ತು ವರ್ಷದ ಹಿಂದೆ ದಿನಕ್ಕೆ ಪರ್ಸನಲ್ ಕೆಲಸಗಳಿಗೆಂದು ನಾಲ್ಕೈದು ಘಂಟೆಗಳನ್ನು ಕಳೆಯುತ್ತಿದ್ದವನಿಗೆ (ಅದರಲ್ಲೂ ವೀಕೆಂಡಿನಲ್ಲಿ ಇನ್ನೂ ಹೆಚ್ಚು), ಇಂದೆಲ್ಲ ಪರ್ಸನಲ್ ಬಳಕೆಗೆಂದು ಕಂಪ್ಯೂಟರ್ ಉಪಯೋಗ ಅತ್ಯಂತ ಮಿತವಾಗಿದೆ ಎಂದೇ ಹೇಳಬೇಕು: ಎಲ್ಲೋ ಒಂದಿಷ್ಟು ಇ-ಮೇಲ್‌ಗಳನ್ನು ನೋಡಬೇಕು, ಕೆಲವಕ್ಕೆ ಉತ್ತರಿಸಬೇಕು, ಇನ್ನು ದಿನದ ಸುದ್ದಿ ವಿಶೇಷಗಳನ್ನೂ ಓದಿ/ಕೇಳುವುದಕ್ಕೆ ಮೊದಲಿನ ತರಾತುರಿಯಿಲ್ಲದಿರುವುದು ವಿಶೇಷವೇ ಸರಿ, ಜೊತೆಗೆ ಕಂಪ್ಯೂಟರ್ ಮುಂದೆ ಕುಳಿತು ವಿಡಿಯೋ ನೋಡುವುದಾಗಲೀ ಆಡಿಯೋ ಕೇಳುವುದಾಗಲೀ ಬಹಳ ಅಪರೂಪವೆಂದೇ ಹೇಳಬೇಕು. ಮೊದಲೆಲ್ಲ ಇದ್ದ Hy factors ಗಳಿಗೂ ಇಂದಿನ ಅವೇ ಫ್ಯಾಕ್ಟರುಗಳಿಗೂ ಸಾಕಷ್ಟು ವ್ಯತ್ಯಾಸವಿದೆ. Hy factors ಎಂದರೆ ಏನು ಎಂದಿರಾ? ಅವೇ - Happy, Hobby, Hungry ಮೊದಲಾದವುಗಳು. ಅವರವರ ಹಸಿವು, ದಾಹ, ಸಂತೋಷ-ದುಃಖ, ಹವ್ಯಾಸ ಮೊದಲಾದವುಗಳ ಮೇಲೆ ಅವುಗಳನ್ನು ಅವಲಂಭಿಸಿದ ಅಗತ್ಯಗಳ ಮೇಲೆ ತಾನೆ ಅವರವರ ಚಟುವಟಿಕೆಗಳು ಸುತ್ತುವರೆದಿರೋದು? (ನಿಮಗೇನಾದರೂ ಬೇರೆ Hy factor ಗಳು ಗೊತ್ತಿದ್ದರೆ ತಿಳಿಸಿ).
ಅಂದಿಗಿಂತ ಇಂದು ಇನ್‌ಫರ್ಮೇಷನ್ ಲೋಕ ಬದಲಾಗಿದೆ, ಅಂದು ಸಿಗುತ್ತಿದ್ದ ಒಂದೊಂದು ವೆಬ್ ಸೈಟ್‌ಗಳಿಗೂ ಇಂದು ಅದರ ಹತ್ತು-ನೂರರ ಪಟ್ಟು ಹೆಚ್ಚು ವೆಬ್ ಸೈಟ್‌ಗಳು ಸಿಗತೊಡಗಿವೆ. ಆದರೆ ಇವೆಲ್ಲದರಲ್ಲೂ ಯಾವುದೇ ಆಸಕ್ತಿ ಎನ್ನುವುದು ಇಲ್ಲದಿರುವುದು ನನಗೊಬ್ಬನಿಗೆ ಮಾತ್ರ ಆಗಿಲ್ಲವಷ್ಟೇ? ರಾಷ್ಟ್ರೀಯ-ಅಂತಾರಾಷ್ಟ್ರೀಯ ಸುದ್ದಿಗಳನ್ನು ನಾನು ಬೆನ್ನೆತ್ತಿ ಹೋಗುತ್ತಿದ್ದ ಕಾಲವೊಂದಿತ್ತು, ಏಷ್ಯಾದಿಂದ ಹಿಡಿದು ಅಂಟಾರ್ಟಿಕಾವರೆಗಿನ ವಿದ್ಯಮಾನವನ್ನು ಪ್ರಪಂಚದ ಬೇರೆ ಬೇರೆ ಮಾಧ್ಯಮದವರು ಹೇಗೆ ಬಿಂಬಿಸಿದ್ದಾರೆ ಎಂದು ತೂಗಿ ನೋಡುವುದಿತ್ತು, ಪಾಕಿಸ್ತಾನದ Dawn ನಿಂದ ಹಿಡಿದು, BBC ಮೊದಲಾದವರ ವೆಬ್ ಸೈಟ್‌ಗಳನ್ನು ತಡಕಿ ನೋಡುವುದಿತ್ತು. ಇಂದೆಲ್ಲ ಈ ಪ್ರಪಂಚದಲ್ಲಿ ಕಚ್ಚಾಡಿಕೊಂಡಿರುವವರು ಯಾವಾಗಲೂ ಇದ್ದೇ ಇರುತ್ತಾರೆ ಎನ್ನುವುದು ಗ್ಯಾರಂಟಿಯಾದಂದಿನಿಂದ - ಅವರಲ್ಲಿ ಕಚ್ಚಾಡಿಕೊಂಡು ಹೊಡೆದಾಡಿ ಸತ್ತರೆ ನಾನೇಕೆ ಇಲ್ಲಿ ತಲೆಕೆಡಿಸಿಕೊಳ್ಳಲಿ? - ಎನ್ನುವ ಉದಾಸೀನ ಮೈತುಂಬಿಕೊಂಡಿದೆ. ಕರ್ನಾಟಕದ ರಾಜ್ಯಕಾರಣವೆಂದರೆ ಇನ್ನಾದರೂ ಸ್ವಲ್ಪ ಆಸಕ್ತಿ ಇರೋ ವಿಷಯ, ಅದೇ ಆಸಕ್ತಿ ನನಗೆ ಭಾರತದ ಮಟ್ಟದಲ್ಲಾಗಲೀ ಅಮೇರಿಕದ ವಿಷಯಕ್ಕಾಗಲೀ ಹೋಲಿಸಿಕೊಂಡರೆ 2004 ರಲ್ಲಿ ಬುಷ್-ಕೆರ್ರಿ ಅವರ ಪ್ರತಿಯೊಂದು ಡಿಬೇಟುಗಳನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಿದವನಿಗೆ ಈ ವರ್ಷ ಆ ಆಸಕ್ತಿಯೂ ಇಲ್ಲವೆಂದೇ ಹೇಳಬೇಕು. ಈ ಯಡಿಯೂರಪ್ಪನ ಸರ್ಕಾರವೇನಾದರೂ ಇನ್ನೊಂದು ವರ್ಷದಲ್ಲಿ ಬಿದ್ದು ಮತ್ತೆ ಅತಂತ್ರ ವ್ಯವಸ್ಥೆ ಉದ್ಭವವಾದರೆ ಕರ್ನಾಟಕದ ರಾಜಕೀಯ ಸ್ಥಿತಿಗತಿಯೂ ನನ್ನ ಆಸಕ್ತಿಯಿಂದ ಮರೆಯಾಗುವುದರಲ್ಲಿ ಸಂಶಯವಂತೂ ಇಲ್ಲ.
ಏನಾಗಿದೆ ನನಗೆ? ನನ್ನ Hy factor ಗಳ ವ್ಯಾಪ್ತಿ ಹೇಗೆ ಹೇಗೆ ಬದಲಾಗುತ್ತಾ ಬಂದಿದೆ? ನನ್ನ ಬದಲಾವಣೆಗಳಿಗೆ ಕನ್ನಡಿ ಅನ್ನೋ ಹಾಗೆ ನನ್ನ ಇಂಟರ್ನೆಟ್ ಬ್ರೌಸಿಂಗ್ ಹ್ಯಾಬಿಟ್ಟನ್ನೇ ತೆಗೆದುಕೊಂಡರೆ ಅಗತ್ಯವಿದ್ದಷ್ಟು ಆನ್‌ಲೈನ್ ಮ್ಯಾಪ್, ಮಿತವಾದ ಪರ್ಸನಲ್ ಇ-ಮೇಲ್‍ಗಳು (unsolicited ಇ-ಮೇಲ್‌ಗಳು ತಮ್ಮಷ್ಟಕ್ಕೆ ತಾವೇ ಕಸದ ಬುಟ್ಟಿಗೆ ಹೋದ ಬಳಿಕ), ಬ್ಯಾಂಕ್ ಅಕೌಂಟುಗಳು (ಬಿಲ್ ಪೇಮೇಂಟ್‌ಗೆಂದು), ಫೈನಾನ್ಸಿಯಲ್ ಹೆಡ್‌ಲೈನ್ಸುಗಳು (ಸ್ಟಾಕ್ ಮಾರ್ಕೆಟ್ಟಿನ ಮೇಲೆ ಕಣ್ಣಿಟ್ಟುಕೊಂಡೇ ಇರಬೇಕಲ್ಲ ಅದಕ್ಕೆ), ಇವೆಲ್ಲದರ ಜೊತೆಗೆ ನಮ್ಮನೆ ಕಂಪ್ಯೂಟರಿನ ಹೋಮ್ ಪೇಜ್ ಆದ ಪ್ರಜಾವಾಣಿಯ ಹೆಡ್‌ಲೈನ್‌ಗಳನ್ನು ಇಪ್ಪತ್ತು ಸೆಕೆಂಡು ಜಾಲಾಡಿ ನೋಡುವುದನ್ನು ಬಿಟ್ಟರೆ ಮತ್ತೆ ಹೆಚ್ಚು ಹೊತು ಕಂಪ್ಯೂಟರಿನ ಮುಂದೆ ಕುಳಿತುಕೊಳ್ಳುವುದು ಕಷ್ಟವೆಂದೇ ಹೇಳಬೇಕು. ಮೊದಲೆಲ್ಲ ಉಳಿದವರ ಬ್ಲಾಗ್‌ಗೆ ಹೋಗಿ ಓದಿ, ಅಪರೂಪಕ್ಕೆ ಕಾಮೆಂಟುಗಳನ್ನು ಬಿಡುತ್ತಿದ್ದವನು ಇಂದು ಅದನ್ನು ಮಿತಿಗೊಳಿಸಿದ್ದೇನೆಂದು ಹೇಳಿಕೊಳ್ಳುವುದಕ್ಕೇ ಕಷ್ಟವೆನಿಸುತ್ತದೆ. ಆಗೆಲ್ಲ ಒಂದೇ ದಿನ ಐದು-ಆರು-ಎಂಟು ಘಂಟೆಗಳಷ್ಟು ಹಲವಾರು ವ್ಯಕ್ತಿಗಳೊಡನೆ ಧೀರ್ಘವಾದ ಚಾಟ್ ಮಾಡುತ್ತಿದ್ದವನು ಇತ್ತೀಚೆಗೆ ವಾರಕ್ಕೊಮ್ಮೆಯೂ ಒಬ್ಬರಿಗೂ ’ಹಾಯ್’ ಹೇಳದ ಮಟ್ಟಕ್ಕೆ ಬಂದಿಳಿದಿದ್ದೇನೆ! ಆಫೀಸಿನಲ್ಲೂ ಅಷ್ಟೇ ಇನ್ಸ್ಟಂಟ್ ಮೆಸ್ಸೇಜ್ ಸಂಭಾಷಣೆಗಳು ನೀರಸವೆನ್ನಿಸತೊಡಗಿ ಪಕ್ಕದಲ್ಲಿನ ಫೋನ್ ಎತ್ತಿಕೊಂಡು ಎಲ್ಲಿಂದ ಎಲ್ಲಿಗೆ ಬೇಕಾದರೂ ಮಾತನಾಡಿ ಆಗಬೇಕಾದ ಕೆಲಸವನ್ನು ಮುಗಿಸಿಕೊಳ್ಳುತ್ತೇನೆ.
ಈ ಇಂಟರ್ನೆಟ್ ಎಂದರೆ ಒಂದು ದೊಡ್ಡ ಲೈಬ್ರರಿ ಇದ್ದ ಹಾಗೆ - ನೆನಪಿದೆಯಾ ನಿಮಗೆ ನಿಮ್ಮ ಸುತ್ತಮುತ್ತಲೂ ಅಗಾಧವಾದ ಪುಸ್ತಕಗಳ ರಾಶಿಯೇ ಇದ್ದರೂ ನೀವು ನಿಮಗೆ ಬೇಕಾದ ಯಾವುದೋ ಒಂದು ಪುಸ್ತಕಕ್ಕಂಟಿಕೊಂಡು ದಿನಪೂರ್ತಿ ಅದೇ ಲೈಬ್ರರಿಯಲ್ಲಿ ಕಳೆಯುತ್ತಿದ್ದುದು? ಒಂದು ಕಾಲದಲ್ಲಿ ಮಾನಸಗಂಗೋತ್ರಿಯ ಕನ್ನಡ ವಿಭಾಗದಲ್ಲಿನ ನನಗೆ ಬೇಕಾದ ಲೇಖಕರ ಎಲ್ಲ ಪುಸ್ತಕಗಳನ್ನು ಓದಿ ಮುಗಿಸುವ ದಾಹವಿದ್ದವನಿಗೆ ಇಂದು ಅದೇ ವಾತಾವರಣದಲ್ಲಿ ಬಿಟ್ಟರೆ ಯಾವೊಂದು ಪುಸ್ತಕವನ್ನು ತೆಗೆದು ಓದುತ್ತೇನೆ ಎನ್ನುವ ಕಲ್ಪನೆಯನ್ನೂ ಮಾಡಿಕೊಳ್ಳಲಾಗದು. ನಮ್ಮ ಮನೆಗೆ ನ್ಯೂ ಯಾರ್ಕ್ ಟೈಮ್ ನ್ಯೂಸ್ ಪೇಪರನ್ನು ತರಿಸೋಣವೆಂದುಕೊಂಡರೆ ಅದನ್ನು ಓದೋರು ಯಾರು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲವೆಂಬ ಉತ್ತರ ಬಂತು. ಎಲ್ಲಾದರೂ ಬಿಸಿನೆಸ್ ಟ್ರಿಪ್‌ನಲ್ಲಿ ನಾನುಳಿದುಕೊಳ್ಳುವ ಹೋಟೇಲಿನಲ್ಲಿ ಪುಕ್ಕಟೆ ನ್ಯೂಸ್ ಪೇಪರನ್ನು ಕೊಟ್ಟರೂ ಓದದೇ ಇರುವ ಪರಿಗೆ ಬಂದು ತಲುಪಿದ್ದೇನೆ ಎಂದು ಹೇಳಿಕೊಳ್ಳಲು ಹೆದರಿಕೆಯಾಗುತ್ತದೆ. ನಿನ್ನೆಯವರೆಗೆ ನಡೆದ ವಿಶ್ವದೆಲ್ಲ ಸುದ್ದಿಗಳನ್ನು ಇಂತಿಷ್ಟೇ ಪುಟಗಳಲ್ಲಿ ಹೀಗೇ ಕಟ್ಟಿ ಹಿಡಿಯುತ್ತೇವೆ ಎನ್ನುವ ಹಠವಾದಿಗಳ ಅಗತ್ಯ ಈಗಿನ ಇಂಟರ್ನೆಟ್ ಯುಗದಲ್ಲಿ ಯಾರಿಗೆ ಬೇಕು ಹೇಳಿ, ಹಾಗೆ ಮುಕ್ತವಾಗಿ ಸಿಗುವ ವಿಷಯಗಳನ್ನೆ ನಮ್ಮ ನಮ್ಮ ಕಂಪ್ಯೂಟರ್ ಪರದೆಯ ಮೇಲೆ ಓದದಿರುವ ನಾವು ಇನ್ನು ಭೌತಿಕ ಪುಟಗಳನ್ನು ತಿರುಗಿಸಿ ಓದುವುದು ನಿಜವೇ?
ಇವತ್ತಿಗೆ ನನ್ನ ಸ್ವ ಇಚ್ಛೆಯಿಂದ ರೇಡಿಯೋವನ್ನು ಕೇಳದೆ ಆರು ತಿಂಗಳು ಸಂದವು. ಹಿಂತಿರುಗಿ ನೋಡಿದರೆ ನಾನು ಕಳೆದುಕೊಂಡದ್ದೇನು ಇಲ್ಲ ಅನ್ನುವ ವಾದಕ್ಕೆ ಪೂರಕವಾದ ಅಂಶಗಳೇ ಹೆಚ್ಚು ಎನ್ನಿಸುತ್ತಿರುವುದು ಈ ಹೊತ್ತಿನ ತತ್ವಗಳಲ್ಲೊಂದು. ಇತ್ತೀಚೆಗೆ ಟಿವಿಯಲ್ಲಿ ಬೇಕಾದಷ್ಟು ಸಿಗುತ್ತಿರುವ ಸ್ಟ್ಯಾಂಡ್ ಅಪ್ ಕಾಮಿಡಿಯೂ ಅಷ್ಟೊಂದು ಇಷ್ಟವಾಗುತ್ತಿಲ್ಲ ಎಂದು ಹೇಳುವ ಹೊತ್ತಿಗೆ ನನ್ನ ಫೇವರೈಟ್ ಕಮಿಡಿಯನ್ George Carlin ಸತ್ತು ಹೋದ ವಿಷಯ ನಿನ್ನೆ ಆಫೀಸಿನಲ್ಲಿ ಯಾರದ್ದೋ ಇನ್ಸ್ಟಂಟ್ ಮೆಸ್ಸೇಜಿನ ಸೇಟಸ್ಸ್ ಮೆಸ್ಸೇಜಿನ ಮೂಲಕ ಗೊತ್ತಾಯಿತು - One good thing about being dead is you automatically qualify for putting your picture on stamps and notes! ಅಡಿಗರು 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂದು ಅದೆಷ್ಟೋ ವರ್ಷಗಳ ಹಿಂದೆ ಬರೆದದ್ದೂ, ಗುಂಡಪ್ಪನವರು ತಮ್ಮ ಕಗ್ಗದಲ್ಲಿ ಸಂಸಾರ ಸೋಜಿಗವನ್ನು ಸರಳ ವಿಷಯ-ವಸ್ತುಗಳಲ್ಲಿ ಹಿಡಿದದ್ದೂ ನನ್ನನ್ನಂತೂ ಅಗಾಧವಾಗಿ ಕಾಡಿಸುತ್ತಲೇ ಎನ್ನಬಹುದು. ನಾವಂತೂ ಇತ್ತೀಚೆಗೆ ಧೀರ್ಘವಾಗಿ ಗಾಢವಾಗಿ ಅದೇನನ್ನು ಓದಿಲ್ಲವಾದರೂ ಅಲ್ಲಲ್ಲಿ ಸಿಗುವ ಈ ಹಳೆಯ ಗ್ರಂಥಗಳ ಪುಟಗಳು ನನ್ನನ್ನು ಯಾವತ್ತೂ ಒಂದು ಕ್ಷಣ ನಿಲ್ಲಿಸಿಯೇ ನಿಲ್ಲಿಸುತ್ತವೆ - ಅದು ಮಾತ್ರ ಬದಲಾಗಿಲ್ಲ ಎನ್ನುವುದೇ ಸಂತೋಷದ ವಿಷಯ.
ಈ information overload ಕಾಲದಲ್ಲಿ ಈಗಷ್ಟೇ ಇನ್ನೂ ಮೂರೂವರೆ ದಶಕಗಳನ್ನು ಪೂರೈಸಿಕೊಂಡು ದಿನದಿನಕ್ಕೂ ಪ್ರಬುದ್ಧಗೊಳ್ಳುತ್ತಿರುವ (ಅಥವಾ ಹಾಗೆಂದುಕೊಂಡು) ಮೈಮನಗಳಿಂದ ಜಗತ್ತನ್ನು ನೋಡುವ ನನ್ನ ಪರಿ ಇನ್ನು ಇಷ್ಟೇ ವರ್ಷಗಳಲ್ಲಿ ಅದೇನೇನೂ ಬದಲಾವಣೆಗಳನ್ನು ತಾಳುವುದಿದೆಯೋ? 2000 ದ ಹ್ಯೂಸ್ಟನ್ ವಿಶ್ವ ಕನ್ನಡ ಸಮ್ಮೇಳನಕ್ಕೆ ಎಲ್ಲರಿಗಿಂತ ಮೊದಲು ನೋಂದಾವಣೆ ಮಾಡಿಸಿಕೊಂಡು ಹೋಗಿ ಖುಷಿಯಾಗಿ ವಾಪಾಸು ಬಂದಿದ್ದ ನನಗೆ ಇಂದು 2008 ರ ಶಿಕಾಗೋ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋಗಲು ಅಷ್ಟೊಂದು ಮನಸ್ಸು ಬಾರದಿರುವುದು ಏಕೆ ಎಂದು ಕೇಳಿಕೊಳ್ಳುತ್ತಲೇ ಇರುವಂತಾಗಿರುವುದು ವಿಶೇಷ. ನಮ್ಮದೇ ಆದದ್ದನ್ನು ಬರೆಯುವ ವ್ಯವಧಾನ ಆಸಕ್ತಿ ಹಗುರವಾಗುತ್ತಾ ಬಂದ ಹಾಗೆ ಇನ್ನೊಬ್ಬರದನ್ನು ಓದುವ ಕಾಳಜಿ ಕಳಕಳಿ ದೂರವಾಗದಿದ್ದರೆ ಸಾಕು. ಸುತ್ತಮುತ್ತಲಿನಿಂದ ದೂರವಿದ್ದುಕೊಂಡು ಸ್ವಯಂ ಅನ್ನೇ ಸರ್ವಸ್ವ ಎಂದುಕೊಂಡು ಈ ದೊಡ್ಡ ಜಗದ ಚಿಕ್ಕ ಗೂಡಿನೊಳಗೆ ಮನಸ್ಸು ಹೂತು ಹೋಗದಿದ್ದರೆ ಸಾಕು. ಬೆಟ್ಟದಷ್ಟು ಬಿದ್ದುಕೊಂಡಿರುವ ಕಸದಲ್ಲಿ ರಸವನ್ನು ಹುಡುಕಿ ತೆಗೆದು ಅದನ್ನು ಅರಗಿಸಿಕೊಳ್ಳುವುದಕ್ಕೆ ಮೊದಲಿಗಿಂತಲೂ ಇಂದು ಹೆಚ್ಚಿನ ಶ್ರಮ ಬೇಕು ಅನ್ನುವುದಕ್ಕೆ ನನ್ನನ್ನು ಕೇಳಿ - ಮೊದಲೆಲ್ಲ ಸ್ನೇಹಿತರು ಈ ಪುಸ್ತಕವನ್ನು ಓದಿ/ಓದಿದೆ - ಎನ್ನುತಲಿದ್ದರು, ಈಗ ಅಂಥವರ ಸಂಖ್ಯೆ ಕಡಿಮೆ ಆಗಿದೆ ಎಂದೇ ಹೇಳಬೇಕು.
ನಿಮ್ಮ ನಿಮ್ಮ (ಬದಲಾಗುತ್ತಿರುವ) Hy factor ಗಳ ಅವಸ್ಥೆ/ವ್ಯವಸ್ಥೆಗಳ ಹಿನ್ನೆಲೆಯಲ್ಲಿ ನೀವು ಬದಲಾಗಿದ್ದೀರಿ ಎಂದುಕೊಂಡಿದ್ದೀರೇನು?