Saturday, May 31, 2008

ಬ್ಲ್ಯಾಕ್‌ಬೆರೀನೂ ಬೇಡಾ ಹೆಚ್ಚಿನ ಸ್ಟ್ರೆಸ್ಸೂ ಬೇಡಾ

’ಅದೆಲ್ಲಾ ಏನೂ ಬೇಡಾ ಸಾರ್, ನಾನು ಅಲ್ಲಿಂದಿಲ್ಲಿಗೆ ಓಡಾಡ್ತಾ ಇರೋವಾಗ ಉಪಯೋಗಿಸೋದಕ್ಕೆ ಒಂದು ಫೋನ್ ಇದ್ರೆ ಸಾಕು’ ಅಂತ ನಮ್ಮ ಮೊಬೈಲ್ ಫೋನ್ ಕಂಪನಿಯವರ ಹತ್ರ ಹೇಳಿ ಒಂದು ಸಾಧಾರಣ ಮೊಬೈಲ್ ಫೋನ್ ಇಟ್ಕೊಂಡೇ ಇರೋದನ್ನ ನೋಡಿದ ವೈರ್‌ಲೆಸ್ ಕಂಪನಿ ಸೇಲ್ಸ್‌ಮ್ಯಾನ್ ನನ್ನನ್ನ ಯಾವ್ದೋ ಶಿಲಾಯುಗದ ಪಳಯುಳಕೆಯನ್ನು ನೋಡಿದ ಹಾಗೆ ನೋಡಿ ಒಂದು ಲುಕ್ ಕೊಟ್ಟ.

ಹತ್ತೊಂಬತ್‌ ನೂರಾ ತೊಂಭತ್ತೆಂಟರಲ್ಲಿ ನಾನು ನನ್ನ ಮೊಬೈಲ್ ಫೋನ್ ಸಮೇತನಾಗಿ ಇಂಡಿಯಾಕ್ಕೆ ಹೋಗಿದ್ದಾಗ ಅಲ್ಲಿ ಇನ್ನೂ ಅದೇ ತಾನೇ ಫೋನ್ ರೆವಲ್ಯೂಷನ್ ಆಗ್ತಾ ಇದ್ರೂ ಸಹ ನನ್ನಣ್ಣ ನನ್ನ ಫೋನ್ ನೋಡಿ ’ಇದೇನು ಕಾರ್ಡ್‌ಲೆಸ್ ಫೋನ್ ಥರಾ ಇದೆ!’ ಅಂತ ತಮಾಷೆ ಮಾಡಿದ್ದು ನನಗಿನ್ನೂ ನೆನಪಿನಿಂದ ಮಾಸಿ ಹೋಗಿಲ್ಲ. ಅಲ್ಲೇನು? ಸಿಂಗಪುರ, ಹಾಂಗ್‌ಕಾಂಗ್, ತೈವಾನ್‌ನಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳು ಆಕರ್ಷಕವಾಗಿ ಸಿಗುತ್ವೆ, ದಿನಕ್ಕೊಂದು ಮಾಡೆಲ್ ಸಸ್ತಾದಲ್ಲೂ ಸಿಗುತ್ತೆ, ನೋಡೋಕೂ ಚೆನ್ನಾಗಿರುತ್ತೆ. ಈ ಅಮೇರಿಕದವರು ಟೆಕ್ನಾಲಜಿಯಲ್ಲಾಗಲೀ, ಇಂಟರ್ನೆಟ್ ಬಳಕೆಯಲ್ಲಾಗಲೀ ಏಷಿಯಾ ದೇಶಗಳಿಗಿಂತ ಹಿಂದಿದ್ರೆ ಅದು ನನ್ನ ತಪ್ಪೇ?

ಇತ್ತೀಚೆಗೇನಪ್ಪ ಎಲ್ಲರೂ ಬ್ಲ್ಯಾಕ್‌ಬೆರಿ ಹಿಡಕೊಂಡು ಓಡಾಡೋ ಕಾಲ, ಅದಿಲ್ಲದೇ ಹೋದ್ರೆ ಐ-ಫೋನ್ ಆದ್ರೂ ಜನ ಇಟ್ಕೊಂಡಿರೋದು ನಾರ್ಮು. ನಮ್ಮಂಥೋರು ಅದೇ ಹಳೇ ಫೋನುಗಳಿಗೆ ಗಂಟು ಬಿದ್ದುಕೊಂಡಿರೋದಂತೂ ನೋಡೋಕೂ ಸಿಗೋಲ್ಲ ಅನ್ನೋ ಕಾಲ. ಇರೋ ಡಿವೈಸ್‌ನಲ್ಲೇ ನನಗೆ ಬೇಕಾದ ಕೆಲಸಗಳನ್ನೆಲ್ಲ ಮಾಡಿಕೊಂಡಿದ್ರೆ ಸಾಲ್ದೇ ಅನ್ನೋದು ನಾನು ಅವಾಗಾವಾಗ ನನಗೇ ಹೇಳಿಕೊಂಡಿರೋ ಕಾರಣ ಅಷ್ಟೇ.

***

ಇವೆಲ್ಲ ಯಾಕೆ ಹೇಳಬೇಕಾಗಿ ಬಂತೂ ಅಂತಂದ್ರೆ - ಇತ್ತೀಚೆಗೆ ಹೊಸದೊಂದು ಕಾನ್ಸೆಪ್ಟ್ ಶುರು ಮಾಡಿದೀನಿ, ಅದೇ ಬ್ಲ್ಯಾಕ್‌ಬೆರಿ ರೆಸಿಸ್ಟೆನ್ಸ್ ಅಂತ. ಅದೇನಪ್ಪ ಅಂದ್ರೆ ಸರಳವಾಗಿ - ನಾನು ಬ್ಲ್ಯಾಕ್‌ಬೆರಿ ಉಪಯೋಗಿಸೋಲ್ಲ ಅನ್ನೋ ವಾದ, ಇನ್ನೂ ಕ್ಲಿಯರ್ ಆಗಿ ಹೇಳಬೇಕು ಅಂತಂದ್ರೆ ನನಗೀಗ ಅದರ ಅಗತ್ಯ ಇಲ್ಲಾ ಅನ್ನೋ ನೆಪ.

ದಿನದ ಹತ್ತು ಘಂಟೆ ಆಫೀಸ್ ಸಮಯದಲ್ಲಿ ಕೊನೇಪಕ್ಷ ಐದು ಘಂಟೆ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳೋ ಕೆಲಸದವರಿದ್ದರೂ ಅಂತಹವರು ತಮ್ಮ ಇ-ಮೇಲ್‌ಗಳನ್ನೋ, ಇನ್ಸ್ಟಂಟ್ ಮೆಸ್ಸೇಜುಗಳನ್ನೋ ತಮ್ಮ ಮೊಬೈಲ್ ಡಿವೈಸ್‌ನಲ್ಲಿ ನೋಡ್ತಾ ಕೂರೋದನ್ನ ನೋಡಿದ್ರೆ ಒಮ್ಮೊಮ್ಮೆ ಅಂಥಾ ಘನಂದಾರಿ ಕೆಲ್ಸ ಏನಿರಬಹುದು ಅಂತ ಸೋಜಿಗವಾಗುತ್ತೆ. ಇರೋ ಇ-ಮೇಲ್‌ಗಳನ್ನ ಕಂಪ್ಯೂಟರಿನಲ್ಲಿ ನೋಡಿ ಮ್ಯಾನೇಜ್ ಮಾಡೋದಕ್ಕೆ ಕಷ್ಟಾ ಪಡ್ತಾ ಇರೋ ನಾನು, ಇನ್ನು ಅದನ್ನ ಬ್ಲ್ಯಾಕ್‌ಬೆರಿನಲ್ಲೂ ನೋಡ್ತಾ ಕೂರೋದು, ಯಾವ್ ಯಾವ್ದನ್ನ ಎಲ್ಲೆಲ್ಲಿ ಓದಿ ಎಲ್ಲೆಲ್ಲಿ ಉತ್ರ ಕೊಡೋದು, ಸ್ಕೆಡ್ಯೂಲ್ ಕ್ಯಾಲೆಂಡರು ಕಾಂಟ್ಯಾಕ್ಟ್‌ಗಳನ್ನೆಲ್ಲ ಹೇಗೆ ಮ್ಯಾನೇಜ್ ಮಾಡೋದು? ಎಲ್ಲೋ ಸುಖವಾಗಿ ಕುಳಿತು ಇನ್ನೇನನ್ನೋ ಮಾಡ್ತಾ ಇರೋವಾಗ ಈ ಮೊಬೈಲ್ ಡಿವೈಸ್‌ಗಳನ್ನ ನೋಡದಿರುವ ಶಿಸ್ತನ್ನ ಹೇಗೆ ಬೆಳೆಸಿಕೊಳ್ಳೋದು? ಮುಂತಾದ ಪ್ರಶ್ನೆಗಳಿಗೆ ಉತ್ರ ಕಂಡ್ ಹಿಡಿದುಕೊಳ್ಳದ ಹೊರತು ಬ್ಲ್ಯಾಕ್‌ಬೆರಿ ಮುಟ್ಟದೇ ಇದ್ರೆ ಒಳ್ಳೇದು, ಅಲ್ವೇ?

ಹಂಗ್ ನೋಡಿದ್ರೆ, ನಮ್ ಹತ್ರ ಇರೋ ಉಪಕರಣ (ಟೂಲ್ಸ್) ಗಳಲ್ಲಿ ನಾವು ಎಲ್ಲ ಫಂಕ್ಷನ್ಸ್ ಅನ್ನೂ ಬಳಸೋದಿಲ್ಲ. ಉದಾಹರಣೆಗೆ ನನ್ನ ಮೊಬೈಲ್ ಫೋನ್ ಅನ್ನು ಹೆಚ್ಚಾಗಿ ಫೋನ್ ಆಗೇ ಬಳಸ್ತಾ ಇರೋ ನಾನು ಮುಂದೆ ಬ್ಲ್ಯಾಕ್‌ಬೆರಿಯಲ್ಲಿನ ಎಲ್ಲಾ (ಹೆಚ್ಚಿನ) ಫಂಕ್ಷನ್ನುಗಳನ್ನು ಯಶಸ್ವಿಯಾಗಿ ಬಳಸಿ ಎಫಿಷಿಯಂಟ್ ಆಗ್ತೀನಿ ಅನ್ನೋದಕ್ಕೇನು ಗ್ಯಾರಂಟಿ? Use your current device to the best extent - ಅನ್ನೋದು ನನ್ನ ಇತ್ತೀಚಿನ ಸ್ಲೋಗನ್ನು. ಮುಂದೆ ನನ್ನ ಫೋನ್ ಅಪ್‌ಗ್ರೇಡ್ ಮಾಡುವ ಸಮಯ ಬಂದಾಗ್ಲೂ ನಾನಂತೂ ಶಿಪ್ಪಿಂಗೂ ಸೇರಿ ಫ್ರೀ ಆಗಿ ಸಿಗುವ ನನ್ನ ಅನುಕೂಲಕ್ಕೆ ತಕ್ಕನಾದ ಫೋನನ್ನೇ ಆರಿಸಿಕೊಳ್ಳೋದು. ಬ್ಲ್ಯಾಕ್‌ಬೆರಿನೋ ಮತ್ತೊಂದನ್ನೋ ಕೊಳ್ಳೋದಕ್ಕೆ ನೂರ್ ನೂರೈವತ್ತು ಡಾಲರ್ರನ್ನ ಯಾರ್ ಕೊಡ್ತಾರೆ ಹೇಳಿ?

ಈ ದಿನಕ್ಕೊಂದು ವಾರಕ್ಕೊಂದು, ವರ್ಷಕ್ಕೊಂದು ಅಂತ ಅನೇಕಾನೇಕ ಇಂಪ್ರೂವ್‌ಮೆಂಟ್ಸ್ ಮಾಡ್ತಾರಲ್ಲ ಅದೆಲ್ಲ ದೊಡ್ಡ ಕಾನ್ಸ್‌ಪಿರಸಿ ಸಾರ್. ನೀವು ಬೇಕಾದ್ರೆ ಇವತ್ತೇ ಹೋಗಿ ಇವತ್ತಿನ ಲೇಟೆಸ್ಟ್ ಅಂಡ್ ಗ್ರೇಟೆಸ್ಟ್ ಮಾಡೆಲ್ ಅಂತ ಯಾವ್ದೋ ಒಂದನ್ನ ತೆಗೊಳ್ಳಿ. ನಾಳೇನೇ ಅದಕ್ಕಿನ್ನೊಂದೋ, ಮತ್ತೊಂದನ್ನೋ ಸೇರಿಸಿ ಮಾರ್ತಾರೆ. ಹೀಗೆ ಜನರಿಗೆ ಘಳಿಗೆಗೊಂದು ಘಂಟೆಗೊಂದು ಹೊಸಹೊಸದನ್ನೆಲ್ಲ ಕೊಟ್ಟೂ ಕೊಟ್ಟೂ ಅಮೇರಿಕದ ಜನರಿಗೆ ಕೊನೆಗೆ ತಮ್ಮ ತಮ್ಮ ಹೆಂಡ್ತಿ-ಮಕ್ಳು ಹೀಗೇ ಹೊಸದಾಗಿ ಸಿಗ್ತಾ ಇದ್ರೆ ಅನ್ಸಿರೋದೋ ಏನೋ. ಒಂದ್ ಕಡೆ ತಮಗೆ ಅನ್ನಿಸಿದಂತೆ ನಡೆದುಕೊಳ್ಳೋ ಕನ್ಸ್ಯೂಮರ್ ಮೈಂಡ್‌ಸೆಟ್‌ಗೆ ಧೀರ್ಘಕಾಲದ ಬದುಕಿನ ವಂಡರ್ಸ್‌ಗಳನ್ನು ಹೇಗೆ ಅರ್ಥ ಮಾಡಿಸೋದು?

ಸದ್ಯ, ಈ ಅಮೇರಿಕದಲ್ಲಿ ಭಾರತದಲ್ಲಿದ್ದ ಹಾಗೆ ನೂರು ಕೋಟಿ ಜನರಿಲ್ಲಪ್ಪ ಅಂತ ನಿಮಗೂ ಅನ್ಸುತ್ತಾ? ಇಲ್ಲಿನ ಎಲ್ಲಾ ಕಾರ್ಪೋರೇಷನ್ನಿನವರೂ ತಮ್ಮ ತಮ್ಮ ಪದಾರ್ಥಗಳು ಹೆಚ್ಚು ಹೆಚ್ಚು ಜನ್ರಿಗೆ ತಲುಪ್ಲಿ ಅಂತ ಪ್ಲಾನು ಮಾಡೋದೇ ಮಾಡೋದು. ಒಂದು ಮಿಲಿಯನ್ ಕಷ್ಟಮರ್ಸ್ ಇದ್ದೋರು ಹತ್ತು ಮಿಲಿಯನ್ನ್ ಮಾಡೋ ಗುರಿ ಇಟ್ಕೋತಾರೆ, ಹತ್ತು ಮಿಲಿಯನ್ ಇದ್ದೋರು ನೂರು ಮಿಲಿಯನ್ನ್ ಅಂತಾರೆ. ಒಟ್ನಲ್ಲಿ ನೀವು ಇಲ್ಲಿನ ಕಂಪನಿಗಳಿಂದ ಹೆಚ್ಚು ಹೆಚ್ಚು ಕೊಳ್ತಾನೇ ಇರಬೇಕು ಅನ್ನೋದು ಅದರ ಮರ್ಮ ಅಷ್ಟೇ.

***

ನೀವು ಯಾವಾಗ್ಲೂ ಅಲ್ಲಿ-ಇಲ್ಲಿ ಓಡಾಡ್ಕೊಂಡೇ ಇರೋರಾದ್ರೆ ನಿಮಗೆ ನಿಜವಾಗ್ಲೂ ಒಂದು ಪವರ್‌ಫುಲ್ ಮೊಬೈಲ್ ಡಿವೈಸಿನ ಅಗತ್ಯವಿದೆ, ಅದು ನನಗೂ ಅರ್ಥವಾಗುತ್ತೆ. ಆದ್ರೆ ಬೆಳಗ್ಗಿಂದ ಸಂಜೇವರೆಗೂ ಖುರ್ಚೀ ಸ್ನೇಹಾ ಬೆಳಸ್ಕೊಂಡು ಕುಳಿತುಕೊಳ್ಳೋ ನನಗೆ ಅದ್ಯಾವ್ ಮೊಬೈಲೂ ಬೇಡಾ ಸಾರ್. ಎಲ್ಲಾದ್ರೂ ಅರ್ಜೆಂಟಿಗೆ ಅಂತ ಒಂದು ಫೋನ್ ಇದ್ರೆ ಸಾಕು. ಅದ್ಕೇನೇ, ಬ್ಲ್ಯಾಕ್‌ಬೆರೀನೂ ಬೇಡಾ ಹೆಚ್ಚಿನ ಸ್ಟ್ರೆಸ್ಸೂ ಬೇಡಾ ಅಂತ ಆದಷ್ಟು ದಿನ ಕಾಲಾ ತಳ್ತಾ ಇದ್ದೀನಿ ನೋಡೋಣ ಎಷ್ಟು ದಿನ ಬರುತ್ತೋ ಅಂತ.

Sunday, May 25, 2008

ಸೋಜಿಗಗಳು ನೂರು

ವರ್ಷದ ಮೇ ಒಂದು ವಿಶೇಷವಾದ ತಿಂಗಳೆಂದೇ ಹೇಳಬೇಕು. ೨೦೦೬ ರ ಮೇ ತಿಂಗಳಿನಲ್ಲಿ ದಿನಕ್ಕೊಂದರಂತೆ ೩೧ ಲೇಖನಗಳು ಬರೆದು ’ಅಂತರಂಗ’ದಲ್ಲಿ ಪ್ರಕಟಿಸಿದ ನನಗೆ ೨೦೦೭ ರ ಮೇ ತಿಂಗಳಿನಲ್ಲಿ ಕೇವಲ ೭ ಲೇಖನಗಳನ್ನಷ್ಟೇ ಪ್ರಕಟಿಸಲು ಸಾಧ್ಯವಾಯಿತು, ಹಾಗೇ ಈ ವರ್ಷದ ಮೇ ತಿಂಗಳಿನ ಈ ೨೫ ದಿನಗಳಲ್ಲಿ ಇದುವರೆಗೂ ಬರೆದು ಪ್ರಕಟಿಸಿದ್ದು ಕೇವಲ ಎರಡೇ ಎರಡು ಲೇಖನಗಳು. ಈ ಕಡೆ ಆಫೀಸಿನ ಕೆಲಸ ಓಡಾಟ ಹಾಗೂ ಅನೇಕಾನೇಕ ಕಾರಣಗಳಿಂದ ಕಂಪ್ಯೂಟರಿನ ಮುಂದೆ ಕುಳಿತು ಪರ್ಸನಲ್ ಟೈಮ್ ಎಂದು ಪುರುಸೊತ್ತು ಸಿಕ್ಕಿದ್ದೇ ಹೆಚ್ಚಾದರೆ ನನಗೆ ಆಶ್ಚರ್ಯವಾಗುವಂತೆ ಕನ್ನಡಪ್ರಭದ ಬ್ಲಾಗಾಯಣ ಹಾಗೂ ದಟ್ಸ್‌ಕನ್ನಡ ಪೋರ್ಟಲ್ಲುಗಳ ಮೂಲಕ ’ಅಂತರಂಗ’ಕ್ಕೆ ಭೇಟಿಕೊಡುತ್ತಿರುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು ಈಗಾಗಲೇ ಈ ತಿಂಗಳ ಮೇ ಭೇಟಿ ಹಾಗೂ ಪೇಜ್ ವ್ಯೂವ್ ಅಂಕಿ-ಅಂಶಗಳ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆ ಸೃಷ್ಟಿಸುತ್ತಿರುವ ವಿಶೇಷವೇ ಹೌದು. Thanks to the portals and thanks to all of you!


***

ಈ ತಿಂಗಳು, ಈ ದಿನ ಮತ್ತೊಂದು ರೀತಿಯಲ್ಲಿ ವಿಶೇಷವಾದದ್ದೇ ಅನ್ನಬೇಕು - ಯಾವೊಂದು ಪಕ್ಷಕ್ಕೆ ನಿಚ್ಚಳ ಬಹುಮತ ಬರದೇ ಮತ್ತೆ ತೇಲಾಡುವ ಒಪ್ಪಂದಗಳು ಸರ್ಕಾರಗಳು ಬರುತ್ತವೆಯೇನೋ ಎಂದು ಕೊರಗುತ್ತಿದ್ದವರಲ್ಲಿ ನಾನೂ ಒಬ್ಬ. ಕಾಂಗ್ರೇಸೋ ಬಿಜೇಪಿಯೋ ಯಾವುದೋ ಒಂದು ಪಕ್ಷಕ್ಕೆ ಬಹುಮತ ಬಂತಲ್ಲ, ಇನ್ನಾದರೂ ಇವರಿವರಲ್ಲೇ ಕಚ್ಚಾಡಿಕೊಳ್ಳದೇ ಒಂದು ಐದು ವರ್ಷ ನಿರಾಳವಾಗಿ ಸರ್ಕಾರವನ್ನು ನಡೆಸಿ ಜನರ ಸಮಸ್ಯೆಗಳಿಗೆ ಅವರ ಪ್ರತಿನಿಧಿಗಳು ಸ್ಪಂದಿಸುವ ವ್ಯವಸ್ಥೆಯಾದರೆ ಸಾಕು!

ಹ್ಞಾ, ಈಗಾಗಲೇ ಕಾಲಚಕ್ರದ ಬರಹಗಳು ಆರಂಭವಾಗಿವೆ, ಇನ್ನು ಕಾಲಚಕ್ರದ ಮೇಷ್ಟ್ರು-ನಂಜ, ತಿಮ್ಮಕ್ಕ ಇವರೆಲ್ಲ ಸೇರಿ ಹೆಚ್ಚು ಹೆಚ್ಚು ಕಟ್ಟೆ ಪಂಚಾಯಿತಿ ಹಚ್ಚಿಕೊಳ್ಳುತ್ತಾರೆ ನೋಡುತ್ತಿರಿ.

ಈ ವರ್ಷದ ಚುನಾವಣೆಯ ಫಲಿತಾಂಶ ಬಹಳ ಸ್ವಾರಸ್ಯಕರವಾಗಿದೆ:
224 ಸ್ಥಳಗಳಲ್ಲಿ ನಡೆದ ಚುನಾವಣೆಗಳಲ್ಲಿ 943 ಪಕ್ಷೇತರರನ್ನು ಬಿಟ್ಟು 31 ಪಕ್ಷಗಳ 1299 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆಂದರೆ ನಂಬಲು ಕಷ್ಟವಾಗುತ್ತದೆ. ನೂರಕ್ಕೆ 42 ರಷ್ಟು ಪಕ್ಷೇತರರು, ಕೆಲವೊಂದು ಕ್ಷೇತ್ರಗಳಲ್ಲಿ ಐದು-ಆರು ಜನರು ಸ್ಪರ್ಧಿಸಿದ್ದು ಹೊಸಬರಲ್ಲಿ ಹೆಚ್ಚು ಉತ್ಸಾಹವನ್ನು ಇನ್ನೂ ಉಳಿಸಿರುವುದು ನನಗಂತೂ ಆಶ್ಚರ್ಯ ತಂದಿತು. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಜನಸ್ಪಂದನಕ್ಕೆ ಕಿವಿಗೊಡುವ ತಾಳ್ಮೆ ಎಷ್ಟು ಜನರಿಗಿದ್ದೀತು? NDTV ಯ ವರದಿಯಂತೆ ಇಂದಿನ ರಾಜಕೀಯದ ಹಿರಿಯ ತಲೆಗಳೆಲ್ಲ ಭಯಂಕರ ಶ್ರೀಮಂತರಿರಬಹುದು, ಕೋಟ್ಯಾಧೀಶ್ವರರಿರಬಹುದು ಆದರೆ ಈ ರಾಜಕೀಯವನ್ನೇ ನಂಬಿಕೊಂಡು ಹೊಟ್ಟೆತುಂಬಿಸಿಕೊಳ್ಳುತ್ತೇವೆ, ಇದರಲ್ಲೇ ಇದ್ದು ನಾವೂ ಒಂದು ದಿನ ಕೋಟ್ಯಾಧಿಪತಿಗಳಾಗುತ್ತೇವೆ ಎನ್ನುವ ತತ್ವ ನಿನ್ನೆಯಷ್ಟಂತೂ ಇಂದು ಸರಳವಿಲ್ಲ.

ಆರು ಜನ ಪಕ್ಷೇತರ ಅಭ್ಯರ್ಥಿಗಳನ್ನು ಬಿಟ್ಟು ಖಾತೆ ತೆರೆದ ಪಕ್ಷಗಳೆಂದರೆ ಮೂರೇ ಮೂರು: ಬಿಜೆಪಿ, ಕಾಂಗ್ರೇಸ್ ಹಾಗೂ ಜೆಡಿಎಸ್. ಉಳಿದ 28 ಪಕ್ಷದ 634 ಜನ ಅಭ್ಯರ್ಥಿಗಳಲ್ಲಿ ಹೆಚ್ಚು ಜನರಿಗೆ ಠೇವಣಿ ಉಳಿಸಿಕೊಳ್ಳಲೂ ಸಾಧ್ಯವಾಗದಾಗಿದ್ದು ನನಗೆ ಜನಾದೇಶ ಕಡಿಮೆ ಪಕ್ಷಗಳ ಸರ್ಕಾರದತ್ತ ಒಲವು ತೋರಿಸುತ್ತಿರುವಂತೆ ಕಂಡುಬಂತು.

ನನ್ನ ಹುಟ್ಟೂರು ಆನವಟ್ಟಿ, ಸೊರಬಾ ತಾಲೂಕಿನಲ್ಲಿ 1967 ರಿಂದ ಗೆದ್ದು ಬರುತ್ತಿದ್ದ ಬಂಗಾರಪ್ಪನವರ ಕುಟುಂಬದ ಯಶೋಗಾಥೆಗೆ ಕಡಿವಾಣ ಬಿದ್ದಿದೆ, ನಾಲ್ಕು ದಶಕಗಳ ನಂತರ ಹೊಸನಗರದ ಹಾಲಪ್ಪನವರು ಬಿಜೆಪಿ ಟಿಕೇಟಿನಲ್ಲಿ ಸಾಕಷ್ಟು ಬಹುಮತದಲ್ಲೇ ಗೆದ್ದುಬಂದಿರುವುದು (43%) ನಿಜವಾಗಲೂ ವಿಶೇಷ ಹಾಗೂ ವಿಚಿತ್ರ. ನಮ್ಮೂರಿನ ರಸ್ತೆಗಳಲ್ಲಿ, ಅಂಗಡಿ ಗೂಡುಗಳಲ್ಲಿ, ಹಳ್ಳಿಪಾಡುಗಳಲ್ಲಿ ಯಾವ ಯಾವ ರೀತಿಯ ಮಾತುಕಥೆಗಳು ನಡೆದಿರಬಹುದು ಎಂದು ಊಹಿಸಿಕೊಳ್ಳುತ್ತಿದ್ದೇನೆ ಅಷ್ಟೇ. ಪಕ್ಕದ ಶಿಕಾರಿಪುರದಲ್ಲಿ ಬಂಗಾರಪ್ಪನವರು ಈ ಇಳಿ ವಯಸ್ಸಿನಲ್ಲಿ ಸ್ಪರ್ಧಿಸಿ ಏನು ಮಾಡುತ್ತಾರೋ ಎಂದುಕೊಂಡ ನನಗೆ ಗೆದ್ದ ಎಡಿಯೂರಪ್ಪನವರ ಮುಂದೆ (66%) ಬಂಗಾರಪ್ಪನವರು 30% ಮತಗಳಿಸಿದ್ದು ನಿಜವಾಗಲೂ ಸೋಜಿಗ ಮೂಡಿಸಿತು.

ಇನ್ನು ಬೆಂಗಳೂರು-ಜಯನಗರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಭಾಗವಹಿಸಿದ್ದ ರವಿರೆಡ್ಡಿಯವರನ್ನು ಕುರಿತು ಅವರ ಅನುಭವಗಳ ಬಗೆಗೆ ಒಂದಿಷ್ಟು ತಿಳಿದುಕೊಳ್ಳಬೇಕು, ನಮ್ಮೆಲ್ಲರ ನಡುವಿನ ಧ್ವನಿಯಾಗಿ ಅಲ್ಲಿನ ಚಟುವಟಿಕೆಗಳಲ್ಲಿ ಭಾಗವಹಿಸಿ ಅಲ್ಲಿನ ರಾಜಕೀಯ ಕರ್ಮಕಾಂಡದಲ್ಲಿ ಮೌಲ್ಯಾಧಾರಿತ ಧೋರಣೆಗಳನ್ನು ಮುಂದಿಟ್ಟುಕೊಂಡು ಅವರು ಪಡೆದ 244 ಮತಗಳಿಂದ ನಾವೆಲ್ಲ ಕಲಿಯುವುದು ಸಾಕಷ್ಟಿದೆ.

ನಾವಿರುವ ಅಮೇರಿಕದಲ್ಲಾಗಲೀ ಮುಂದುವರೆದ ಜನರಿರುವ ನಗರಗಳಲ್ಲಿ ಹೆಚ್ಚು ಜನರು ಓಟ್ ಹಾಕಲು ಹೋಗುತ್ತಾರೆ ಎನ್ನುವುದು ಒಂದು ದೊಡ್ಡ ಕಲ್ಪನೆಯೇ ಸರಿ, ಗ್ರಾಮೀಣ ಪ್ರದೇಶಗಳಲ್ಲಿ ಜನರು ಹೆಚ್ಚು ಹೆಚ್ಚು ಮತಗಟ್ಟೆಗೆ ಬಂದಿದ್ದು ಚುನಾವಣಾ ಅಂಕಿ-ಅಂಶಗಳನ್ನು ಗಮನಿಸಿದ ನಿಮಗೆ ಮನವರಿಕೆಯಾದೀತು.

***

ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಇಷ್ಟವಾಗುವಂತೆ ನಮ್ಮ ಸರ್ಕಾರಿ ಪೋರ್ಟಲುಗಳು ಚೆನ್ನಾಗಿ ಬೆಳೆದು ಬಂದಿವೆ, ಚುನಾವಣೆ ಸಂಬಂಧಿ ಅಂಕಿ-ಅಂಶಗಳಿಗಾಗಿ ನಾನು ಈ ಪೋರ್ಟಲುಗಳನ್ನು ನೋಡಿದಾಗಲೆಲ್ಲ ನನಗೆ ಎಂದೂ ನಿರಾಶೆಯಾದದ್ದಂತೂ ಇಲ್ಲ, ಬೇಕಾದರೆ ಚುನಾವಣಾ ಆಯೋಗದ ವಿವರಗಳನ್ನು ನೀವೇ ಖುದ್ದಾಗಿ ನೋಡಿ, ಇಲ್ಲಿ ನಿಮಗೆ ಬೇಕಾದ ಅಭ್ಯರ್ಥಿಯ ಚುನಾವಣೆ ಅರ್ಜಿ, ಅದಕ್ಕೆ ಲಗತ್ತಿಸಿದ ಕಾಗದ ಪತ್ರಗಳಿಂದ ಹಿಡಿದು ವಿವರವಾದ ಫಲಿತಾಂಶವನ್ನೂ ಇಲ್ಲಿ ನೋಡಬಹುದು.

Thursday, May 15, 2008

ಐದೇ ಐದ್ ನಿಮಿಷ...

ನಾನು ಕೆಲ್ಸಾ ಮಾಡೋ ಕಂಪ್ಯೂಟರ್ರುಗಳ ಸ್ಪೀಡೂ ಪ್ರಾಸೆಸ್ಸರ್ರುಗಳ ಪವರ್ರು ಜಾಸ್ತೀ ಆದ ಹಾಗೆ, ನಾನು ಉಪಯೋಗಿಸೋ ಸಾಫ್ಟ್‌ವೇರ್ ಅಥವಾ ಅಪ್ಲಿಕೇಷನ್ನುಗಳ ವರ್ಷನ್ನುಗಳು ಹೆಚ್ಚಾದ ಹಾಗೆ ನನ್ನ ಧಕ್ಷತೇನೂ ಹೆಚ್ಚಾಗುತ್ತೇ ಅನ್ನೋದು ಬರೀ ಕನಸೇ ಆಗಿ ಹೋಗಿದೆ ಅನ್ನೋದು ಇತ್ತೀಚಿನ ನನ್ನ ಕೊರೆತಗಳಲ್ಲೊಂದು! ಯಾವಾಗ್ ನೋಡಿದ್ರೂ ’ಟೈಮೇ ಇಲ್ಲಾ ಸಾರ್!’ ಎಂದು ರಾಗ ಎಳಿತಾ ಇರೋ ನನಗೆ ನನ್ನ ಇದ್ದ ಬದ್ದ ಟೈಮ್ ಎಲ್ಲಾ ಎಲ್ಲಿ ಕರಗಿ ಹೋಗುತ್ತೇ ಅನ್ನೋದು ಹೊಳೆಯದೇ ಬಹಳ ಸಂಕಷ್ಟಕ್ಕೆ ಬಂದಿರೋದರ ಜೊತೆಗೆ ಟೈಮೇ ಇಲ್ಲವಲ್ಲ ಅಂಥ ಯೋಚಿಸೋದಕ್ಕೂ ಟೈಮ್ ಇಲ್ಲದ ಹಾಗೆ ಆಗಿದೆ ಅನ್ನೋದು ನನ್ನ ಹೊಸ ಕೀರ್ತನೆ ಅಷ್ಟೇ.

ನೀವೇ ನೋಡಿ, ಯಾವತ್ತಾದ್ರೂ ಎಲ್ಲಿಗೋ ಹೊರಟಿರೋ ಹೊತ್ತಿನಲ್ಲಿ ಒಂದು ನಿಮಿಷ ಕಂಪ್ಯೂಟರಿನಲ್ಲಿ ಏನೋ ನೋಡೋಣ ಅಂತ ಕೂತಿರೋದಷ್ಟೇ ನೆನೆಪು, ಅದು ಹೇಗೆ ನಿಮಿಷಗಳು-ಘಂಟೆಗಳು ಉರುಳುತ್ತವೋ ಗೊತ್ತೇ ಆಗಲ್ಲ. ದಿನಾ ಆನ್ ಮಾಡಿ ಆಫ್ ಮಾಡೀರೋ ಕಂಪ್ಯೂಟರಿನಿಂದ ಹಿಡಿದು ಎರಡು ವಾರಕ್ಕೊಮ್ಮೆ ಸ್ಟ್ಯಾಂಡ್ ಬೈ ಮೋಡ್ ನಲ್ಲೇ ಇರೋ ನನ್ನ ಲ್ಯಾಪ್‌ಟಾಪಿನ ವರೆಗೆ ಅದರಲ್ಲಿರೋ ಅಪ್ಲಿಕೇಷನ್ನಿನ ಗೊಂಚಲುಗಳಲ್ಲಿ ಒಬ್ಬನಲ್ಲ ಒಬ್ಬನು ಏನನ್ನಾದರೊಂದನ್ನು ಇನ್ಸ್ಟಾಲ್ ಮಾಡಿಕೊಂಡೇ ಇರ್ತಾನೆ. ಆಂಟಿ ವೈರಸ್ಸು ಪ್ಯಾಚುಗಳಿಂದ ಹಿಡಿದು ಅಪ್ಲಿಕೇಶನ್ನ್ ಪ್ಯಾಚುಗಳವರೆಗೆ ಸದಾ ಕರಕರಕರ ಶಬ್ದ ಮಾಡ್ತಾ ಹಾರ್ಡ್ ಡ್ರೈವ್ ತಿರುಗೋ ಶಬ್ದವನ್ನು ಕೇಳ್ದೇ ಇದ್ರೆ ತಿಂದ ಅನ್ನಾನೇ ಅರಗಲ್ಲ. ಹೀಗೆ ಅವರು ಬಿಟ್ಟು ಇವರು ಬಿಟ್ಟು ಯಾರ್ಯಾರೋ ಏನನ್ನೋ ಇನ್ಸ್ಟಾಲ್ ಮಾಡಿ ಅನಂತರ ಕಂಪ್ಯೂಟರಿನ ಪ್ರಾಸೆಸ್ಸರು ಫ್ರೀ ಇರೋ ಹೊತ್ತಿಗೆ ದಿನವೇ ಮುಗಿದು ಹೋಗಿರುತ್ತೆ. ಮೊದಲೆಲ್ಲ ಸರಳವಾಗಿದ್ದ ಇ-ಮೇಲ್ ಇಂಟರ್‌ಫೇಸುಗಳು ಈಗ ಇನ್ನಷ್ಟು ಸಂಕೀರ್ಣಗೊಂಡಿವೆ, ಮೊದಲೆಲ್ಲ ಡಿಸ್ಟಿಂಕ್ಟ್ ಆಗಿ ಸಿಗುತ್ತಿದ್ದ ವ್ಯವಸ್ಥೆಯ ಪರಿಕರಗಳೆಲ್ಲ ಒಂದಕ್ಕೊಂದು ಇಂಟೆಗ್ರೇಟ್ ಆದ ಮೇಲೆ ಇಷ್ಟೆಲ್ಲ ತಲೆ ನೋವು ಬಂದಿದ್ದು ಅನ್ನೋದು ನನ್ನ ಅಂಬೋಣ.

ಕಳೆದ ನಾಲ್ಕು ವಾರಗಳಿಂದ ಅವರ ಕಾಲ್ ಹಿಡಿದು ಇವರ ಕೈ ಹಿಡಿದು ಆಫೀಸಿನಲ್ಲಿ ಪರ್‌ಚೇಸ್ ಆರ್ಡರ್ ಒಂದನ್ನು ಇನ್ನೇನು ಕೊನೆಯ ಹಂತದವರೆಗೆ ತಂದೆ, ಮೇಲಿನವರ ಅಪ್ರೂವಲ್ ಸಿಕ್ಕೇ ಬಿಟ್ಟಿತು ಎಂದು ಮೀಸೇ ಮೇಲೆ ಕೈ ಹಾಕಿ ನಗುವನ್ನು ತಂದುಕೊಂಡಿದ್ದೇ ಬಂತು, ಅಪ್ರೂವ್ ಮಾಡುವವರು ಅಪ್ರೂವ್ ಮಾಡುವ ಸಿಸ್ಟಮ್‌ಗೆ ಲಾಗ್ ಇನ್ ಮಾಡಲು ಹೋದರೆ ಅಲ್ಲಿ ಬ್ಯಾಕ್ ಎಂಡಿನಲ್ಲಿ ಮೈಕ್ರೋ ಸಾಫ್ಟ್‌ನವರ ಸರ್ವರ್ ಮುಷ್ಕರ ಹೂಡಿ ಕುಳಿತುಕೊಂಡಿದೆ. ಸಾಯಂಕಾಲ ಎಷ್ಟೊತ್ತು ಕಾದರೂ ಸರ್ವರ್ ಎದ್ದು ಬರುವಂತೆ ಕಾಣಲಿಲ್ಲ, ನಾಳೆ ಈ ಅಪ್ರೂವ್ ಮಾಡುವ ಮನುಷ್ಯ ಬೇರೆ ಆಫೀಸಿನಲ್ಲಿ ಇಲ್ಲ, ಅವನು ಇನ್ಯಾವನಿಗೆ ಹೀಗೆ ಮಾಡು ಹಾಗೆ ಮಾಡು ಎಂದು ಹೇಳಿ, ಹೇಳಿಸಿಕೊಂಡವನು ನನ್ನ ಅನುಕೂಲಕ್ಕೆ ಸ್ಪಂದಿಸಿ ’ಅಪ್ರೂವ್ ಆಯ್ತು’ ಎಂದು ಬಟನ್ ಒತ್ತುವಷ್ಟರಲ್ಲಿ ನನ್ನ ತಲೆ ಕೂದಲೆಲ್ಲ ಬೆಳ್ಳಗಾಗದಿದ್ದರೆ ಸಾಕು. ಒಂದೊಂದು ಸರ್ವರ್ರುಗಳು ಅಂದ್ರೆ ಅದೆಷ್ಟು ಪವರ್ ಇರುವ ಮೆಷಿನುಗಳು, ಅಂಥವು ದಿನಕ್ಕೊಂದಲ್ಲ ಒಂದು ಔಟ್ ಆಗುತ್ತಲೇ ಇರುತ್ತವೆ, ಅದನ್ನ ಅಡ್ಮಿನಿಶ್ಟ್ರೇಷನ್ನವರು ಬೌನ್ಸ್ ಮಾಡಿ ಮತ್ತೆ ಜೀವ ಕೊಡುತ್ತಲೇ ಇರುತ್ತಾರೆ. ಹೀಗೆ ನಮ್ಮ ದೈನಂದಿನ ಚಟುವಟಿಕೆಗಳೆಲ್ಲ ಕ್ಲೈಂಟು-ಸರ್ವರುಗಳ ಕೈಂಕರ್ಯಕ್ಕೆ ಅದೆಷ್ಟು ಹೊಂದಿಕೊಂಡಿವೆ ಅಂದರೆ ಇನ್ನೊಂದು ಕೆಲವು ವರ್ಷಗಳಲ್ಲಿ ಸಾಯೋರಿಗೂ ಪರ್ಮಿಷನ್ನ್ ಸಿಗುವ ಹಾಗೆ ಮಾಡುತ್ತವೆ ಈ ಸರ್ವರುಗಳು ನೋಡ್ತಾ ಇರಿ.

ಐದೇ ಐದು ನಿಮಿಷ ಅಂತ ಯಾರೂ ಹೇಳೋದಿಲ್ಲ ಬಿಡಿ...’ಒಂದು ನಿಮಿಷ ಬಂದೇ ಬಿಟ್ಟೇ!’ ಅಂತಾರೆ, ಆದರೆ ಘಂಟೆಗಟ್ಟಲೆ ಆದ್ರೂ ತಮ್ಮ ಪ್ರಪಂಚದಿಂದ ಹೊರಗೆ ಬರೋದಿಲ್ಲ. ಒಂದು ನಿಮಿಷ, ಒಂದು ಸೆಕೆಂಡು ಅನ್ನೋ ಮಾತುಗಳು ಔಪಚಾರಿಕ ಮಾತುಕಥೆಗಳಾಗಿವೆ ಅಷ್ಟೇ. ನಾವೆಲ್ಲ ’ಒಂದ್ ಸೆಕೆಂಡ್’ ಅನ್ನೋದನ್ನ ಯಾರಾದ್ರೂ ಬೇರೆ ಗ್ರಹದ ಪ್ರಾಣಿಪಕ್ಷಿಗಳು ಕೇಳಿಕೊಂಡವು ಅಂತಂದ್ರೆ ಅವರ ಹೃದಯ ನಿಂತು ಹೋಗೋದು ಗ್ಯಾರಂಟಿ - ಅದೇನು ಒಂದು ಸೆಕೆಂಡಿನಲ್ಲಿ ಅದೇನೇನೆಲ್ಲ ಮಾಡ್ತಾರಲ್ಲ ಅಂತ. ನಮ್ಮ ಒಂದೊಂದು ಸೆಕೆಂಡುಗಳು ’ಬ್ರಹ್ಮ ಶೌಚ’ದ ಯೂನಿಟ್‌ನಲ್ಲಿವೆ ಅನ್ನೋದು ಅವರಿಗೇನು ಗೊತ್ತು?

ಯಾವ್ದೇ ಮ್ಯಾಪ್ ಅಪ್‌ಲೋಡ್ ಮಾಡಿ, ಯಾವ್ದೇ ಇ-ಮೇಲ್ ಕ್ಲೈಂಟ್ ಹೊರಗೆ ತನ್ನಿ, ಯಾವ್ದೇ ವೆಬ್‌ ಪೇಜ್ ಮೇಲೆ ಕಣ್ಣಾಡಿಸಿ - ಅದು ನಿಧಾನವಾಗಿ ಲೋಡ್ ಆಗುತ್ತಿದ್ದರೆ ನಿಮ್ಮ ಇಂಟರ್ನೆಟ್ ಕನೆಕ್ಷನ್ನನ್ನೋ ಅಥವಾ ಹಳೆಯ-ಹೊಸ ಕಂಪ್ಯೂಟರನ್ನ ನೀವು ಬೈದುಕೊಳ್ಳೋ ಸನ್ನಿವೇಶ ಬಂದೇ ಬರುತ್ತೆ. ’ಕನ್ನಡಪ್ರಭ’, ’ಪ್ರಜಾವಾಣಿ’ ಅಂಥ ವೆಬ್‌ಸೈಟ್‌ಗಳು ASP ತಂತ್ರಜ್ಞಾನವನ್ನು ಮೊರೆಹೊಕ್ಕರು, ಅವರಿಗೆಲ್ಲ ಅದರಿಂದ ಏನೇನು ಅನುಕೂಲವಾಗಿದೆಯೋ ಬಿಟ್ಟಿದೆಯೋ User friendliness ಮಾತ್ರ ಮಾಯವಾಗಿ ಬಿಟ್ಟಿದೆ. ಹನ್ನೊಂದು ವರ್ಷದ ಹಿಂದೆ ನನ್ನ ಪೆಂಟಿಯಮ್ 166 MHz ಕಂಪ್ಯೂಟರಿನಲ್ಲಿ 56 Mbps ಡಯಲ್ ಅಪ್ ಕನೆಕ್ಷನ್ನ್ ನಲ್ಲಿ ನನಗೆ ವೆಬ್‌ಸೈಟ್ ಓದುವಾಗ ಸಿಗುತ್ತಿದ್ದ ಫ್ರೀಡಮ್ ಈಗ ಕಡಿಮೆ ಆಗಿದೆ. ಆಗೆಲ್ಲ HTML ಪುಟಗಳಲ್ಲಿ ಆಡ್ರಸ್ ಬಾರ್ ನಲ್ಲಿ ಯಾವ ಯಾವ ದಿನದ ಪತ್ರಿಕೆಗಳ ದಿನಾಂಕಗಳನ್ನೆಲ್ಲ ಹಾಕಿಕೊಂಡು ಎಲ್ಲಿಂದ ಎಲ್ಲಿಗೆ ಬೇಕಾದ್ರೂ ನೇವಿಗೇಟ್ ಮಾಡುತ್ತಿದ್ದ ನನಗೆ ಇಂದಿನ ASP ಯುಗದಲ್ಲಿ ದಿಕ್ಕೇ ತೋಚದ ಹಾಗಾಗುತ್ತೆ ಎಷ್ಟೋ ಸಲ. ಅದೂ ಅಲ್ದೇ ಯಾವ್ದಾದ್ರೂ ಫ್ಲಾಶ್ ಇರೋ ಪುಟಕ್ಕೆ ಹೋದ್ರಂತೂ ಆ ಪುಟದಲ್ಲಿ ಉಪಯೋಗಿಸಿರೋ ಫ್ಲ್ಯಾಶ್ ವರ್ಶನ್ ನನ್ನ ಹತ್ರ ಇರೋಲ್ಲ, ಅವರ ಪುಟಗಳನ್ನು ನೋಡೋಕೆ ಮತ್ತೊಂದೇನನ್ನ ಇನ್ಸ್ಟಾಲ್ ಮಾಡೂ ಅಂತಾನೆ, ಅವನು ಹೇಳಿದ್ದನ್ನ ಕೇಳಿದ್ರೆ ಇನ್ನೊಬ್ರ ಪುಟ ಮತ್ತೆನ್ನೆಲ್ಲೋ ಸರಿಯಾಗಿ ಲೋಡ್ ಆಗಲ್ಲ, ಬ್ಯಾಕ್‌ವರ್ಡ್ ಕಂಪ್ಯಾಟಿಬಿಲಿಟಿ ಇದ್ರೆ ಫಾರ್‌ವರ್ಡ್ ಇರಲ್ಲ, ಇವನನ್ನ ಓಲೈಸಿದ್ರೆ ಮತ್ತೊಬ್ಬನಿಗೆ ಸಿಟ್ಟು ಬರುತ್ತೆ ಅನ್ನೋ ಹಾಗೆ.

ಇವತ್ತೆಲ್ಲ 3-4 GB RAM ಇರೋ ಲ್ಯಾಪ್ ಟಾಪ್‌ಗಳೇ ಸಿಕ್ತಾವೆ, ಅವೇ ಹಲ್ಲು ಕಿರಿದು ನಿಲ್ಲೋ ಜನರ ಫೋಟೋ ಹೊಡೆಯೋಕೆ ಹದಿನೈದ್ ಪಿಕ್ಸೆಲ್ ವರೆಗಿನ ಕ್ಯಾಮರಾಗಳು ಬಂದಿರಬಹುದು. ಒಂದೊಂದು ಫೋಟೋ ಸೈಜೂ ಹತ್ತು MB ಆಗುತ್ತೋ ಏನೋ, ಅವನ್ನ ಸ್ಟೋರ್ ಮಾಡೋಕೆ, ಕಳಿಸೋಕೆ, ಬಳಸೋಕೆ ಹೆಚ್ಚು ಹೆಚ್ಚು ಜಾಗ ಬೇಕು, ಮೆಮರಿ ಬೇಕು - ಎಲ್ಲಿಂದ ತರಾಣಾ? ಹೊಸ ಕ್ಯಾಮರ ಕೊಂಡ್ರೆ ಹೊಸ ಕಂಪ್ಯೂಟರ್ ಬೇಕು ಅಂತ ಆಗುತ್ತೆ, ಹೊಸ ಕಂಪ್ಯೂಟರ್ ಕೊಂಡ್ರೆ ಹೊಸ ಸಾಫ್ಟ್‌ವೇರ್ ಬೇಕು ಅಂತ ಆಗುತ್ತೆ, ಹೊಸ ಸಾಫ್ಟ್‌ವೇರ್ ಸಿಕ್ರೆ ನಮಗೆ ಬೇಕಾದ್ದ್ ಎಲ್ಲ ಇರಲ್ಲ, ಇದೂ ಅದೆಲ್ಲೆಲ್ಲೋ ಹುದುಗಿಸಿ ಇಡ್ತಾರೆ - ಹೊಸದರ ಜೊತೆಗೆ ಹಳೆಯದು ಕೆಲ್ಸಾ ಮಾಡಲ್ಲ...ಹೀಗೆ ಇದರ ಪಟ್ಟಿ ಇಲ್ಲಿಗೆ ನಿಲ್ಲದೆ ಮುಂದೆ ಬೆಳಿಯುತ್ಲೇ ಇರುತ್ತೆ. ನಾನು ಇವತ್ತೇ ಹೋಗಿ ಸ್ಯಾಮ್ಸ್ ಕ್ಲಬ್ಬಿನಿಂದ ಏಳ್‌ನೂರ್ ಡಾಲರ್ ಕೊಟ್ಟು ಹೊಸ ಕಂಪ್ಯೂಟರ್ ತಂದು ಬಿಸಾಕೇನು, ಅದನ್ನ ಸಂಪೂರ್ಣವಾಗಿ ಕಷ್ಟಮೈಜ್ ಮಾಡಿ ನನಗೆ ಬೇಕಾದ್ದನ್ನೆಲ್ಲ ಇನ್ಸ್ಟಾಲ್ ಮಾಡಿ ರನ್ ಮಾಡೋ ಅಷ್ಟೊತ್ತಿಗೆ ನನ್ನ ಒಂದು ದಶಕದ ಆಯಸ್ಸೇ ಮುಗಿದು ಹೋಗುತ್ತೆ, ಅಷ್ಟೊತ್ತಿಗೆ ಆ ಕಂಪ್ಯೂಟರ್ರೇ ಹಳೆಯದಾಗಿರುತ್ತೆ. ಇವುಗಳ ಮುಂದೆ ಯಾವತ್ತೂ ಗೆಲ್ಲೋಕೇ ಆಗಲ್ಲ ಅನ್ಸಲ್ವಾ?

ನಮ್ ಜೀವ್ನಾ ಎಲ್ಲಾ ಐದೇ ಐದ್ ನಿಮಿಷ ಅಂದು ಒಂದೊಂದು ಘಂಟೆ ಸವೆಸೋದ್ರಲ್ಲೇ ಆಗ್ ಹೋಯ್ತು, ಇನ್ನು ಮುಂದಿನ ಜನರೇಷಿನ್ನಿನ ಕಥೆ ದೇವ್ರೇ ಕಾಪಾಡ್ ಬೇಕು.

ನಾವು ಸಾಮಾನ್ಯರು, ನಮಗೆ ಹೆಚ್ಗೆ ಪವರ್ ಬೇಡಾ, ಇವತ್ತು ಸಾವಿರ ಡಾಲರ್ ಕೊಟ್ಟು ತಂದ ಕಾರು ಇನೈದು ವರ್ಷ ಬಿಟ್ರೂ ಇವತ್ತಿನ ಹಾಗೇ ಓಡಾಡೋಲ್ವೇ ಅದೇ ಥರ ಈ ಕಂಪ್ಯೂಟರಿಗೊಂದು ಹೊಸ ಇಕ್ವೇಷನ್ನ್ ತಂದು, ’ಇಲ್ಲಿಗೆ ಸಾಕು, ಶಿವಾ’ ಅನ್ನೋ ಒಂದು ಕಾನ್‌ಫಿಗರೇಷನ್ನಿಗೆ ನಿಲ್ಲಿಸಿಬಿಡಿ, ಅಷ್ಟೇ ಸಾಕು. ಜಗತ್ತಿನ ಒಂದೊಂದು ಇಂಚನ್ನೂ IP ಅಡ್ರಸ್ಸುಗಳಿಂದ ಅಳೀತೀವಿ ಅನ್ನೋ ಜನರಿಗೆ ಯಾವನೋ ಎಲ್ಲೋ ಬರೆದ ಕಂಪ್ಯೂಟರ್ ವೈರಸ್ಸುಗಳನ್ನು ಕಂಡು ಹಿಡಿಯೋದ್ ಕಷ್ಟಾನೇ? ಹಾಗೆ ವೈರಸ್ಸುಗಳನ್ನು ಬರೆದು ಜನರನ್ನು ಹಿಂಸಿಸೋರನ್ನ ಪಬ್ಲಿಕ್‌ನಲ್ಲಿ ಕಲ್ ತಗೊಂಡ್ ಹೊಡೀರಿ ಅವಾಗ್ಲಾದ್ರೂ ಜನರಿಗ್ ಬುದ್ಧಿ ಬರುತ್ತೋ ಏನೋ. ನಮ್ಮ್ ನಮ್ಮ್ ಇ-ಮೇಲ್ ನೋಡ್ಕೊಂಡು ಜೀವ್ನಾ ಸಾಗ್ಸದೇ ಕಷ್ಟಾ ಅನ್ಸಿರುವಾಗ ಅದ್ಯಾವನಿಗೆ ಅದೆಲ್ಲಿಂದ ವೈರಸ್ ಬರೆಯೋಕ್ ಟೈಮ್ ಸಿಗುತ್ತೋ ಯಾರಿಗ್ ಗೊತ್ತು?

Thursday, May 01, 2008

ಮೊದಲು ಅಪ್ಪ-ಅಮ್ಮನಿಗೆ ಬುದ್ಧಿ ಹೇಳಿ!

ಬ್ರೂ ಕಾಫಿ ಸ್ವಾದ-ತಾಜಾತನದ ಬಗ್ಗೆ ಒಂದು ಕಮರ್ಷಿಯಲ್ ಅಡ್ವರ್‌ಟೈಸ್‌ಮೆಂಟು ಉದಯ ಟಿವಿಯಲ್ಲಿ ಬರುತ್ತೆ, ಅದರಲ್ಲಿ ನವದಂಪತಿಗಳನ್ನು ಅವರ ಮನೆಯಲ್ಲಿ ಸಂದರ್ಶಿಸಲೆಂದು ಹತ್ತಿರದ ಸಂಬಂಧಿಕರು ಬಂದಿರುತ್ತಾರೆ, ಆಧುನಿಕ ಉಡುಪಿನಲ್ಲಿರುವ ಯುವತಿ ಮನೆಯನ್ನು ಕಿಟಕಿಯಿಂದಲೇ ಪ್ರವೇಶ ಮಾಡಿ ಮನೆಗೆ ಬಂದವರ ಸಮಾಧಾನಕ್ಕೆ ಹಾಗೂ ಅವರಿಗೆ ಆಶ್ಚರ್ಯವಾಗುವಂತೆ ಕೂಡಲೇ ಟ್ರೆಡಿಷನಲ್ ಡ್ರೆಸ್‌ಗೆ ತನ್ನನ್ನು ತಾನು ಬದಲಾಯಿಸಿಕೊಳ್ಳುವುದನ್ನು ತೋರಿಸುತ್ತಾರೆ. ಕೈ ಯಲ್ಲಿ ಕಾಫಿ ಕಪ್ ಹಿಡಿದುಕೊಂಡು ಬರುವುದು ಅದರ ಜೊತೆಗೆ ಸೇರಿರುತ್ತೆ. ಆ ವಿಡಿಯೋ ತುಣುಕಿನ ಸಂದೇಶವೇನೇ ಇರಲಿ, ದೂರದ ನನಗೆ ನಮ್ಮ ದೇಶದಲ್ಲಿನ ಗೊಂದಲ ಒಡನೆಯೇ ನೆನೆಪಿಗೆ ಬಂತು. ಅದೇ ನಮ್ಮಲ್ಲಿನ ಜನರೇಶನ್ ಗ್ಯಾಪ್.

ಇಂದಿನ ಕಾಲದಲ್ಲಿ ಹೈ ಸ್ಕೂಲು ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಶಾಲಾ ಸಮವಸ್ತ್ರವನ್ನು ಶಾಲೆಯ ಆವರಣದಲ್ಲಿ ಮಾತ್ರ ಹಾಕಿಕೊಳ್ಳುವುದು ಸಾಮಾನ್ಯ ನೋಟ. ಶಾಲೆ-ಕಾಲೇಜಿನವರೆಗೆ ತಮ್ಮ ದಿನನಿತ್ಯದ ಡ್ರೆಸ್‌ಗಳಲ್ಲಿ ಬಂದು, ಶಾಲೆಯು ಹತ್ತಿರ ಬಂದಾಗ ಸಮವಸ್ತ್ರವನ್ನು ಧರಿಸಿಕೊಳ್ಳುವುದು ಬೆಳಗ್ಗಿನಿಂದ ಸಂಜೆವರೆಗೆ ಹೈ ಸ್ಕೂಲು ಸಮವಸ್ತ್ರವನ್ನೇ ಧರಿಸಿ ತಿರುಗಾಡುತ್ತಿದ್ದ ನಮಗೆ ವಿಶೇಷವಾಗಿ ಕಾಣಿಸುವುದರಲ್ಲಿ ತಪ್ಪೇನು ಇಲ್ಲ.

***

ಹಿಂದಿನ ಸಂಬಂಧ-ಸೂಕ್ಷ್ಮತೆ ಲೇಖನ ಬರೆದ ಮೇಲೆ ಆ ಕುರಿತು ಮತ್ತಿನ್ನಷ್ಟು ಆಲೋಚಿಸಲಾಗಿ ಈ ನಡುವೆ ಕುಟುಂಬಗಳಲ್ಲಿ ಅಸಮಧಾನ ಏಕೆ ಹೊಗೆ ಆಡುತ್ತದೆ ಎನ್ನುವುದಕ್ಕೆ ಕೆಲವೊಂದು ಕುರುಹುಗಳು ಸಿಕ್ಕ ಹಾಗಿದೆ. ಅದರಲ್ಲಿ ಪ್ರತಿಯೊಬ್ಬರೂ ಅವರವರ ತಂದೆ-ತಾಯಿ ಬಂಧು ಬಳಗದವರನ್ನು ಅದೆಷ್ಟರ ಮಟ್ಟಿಗೆ ತಿಳುವಳಿಕೆ ಹೇಳಿಕೊಡುತ್ತಾರೆ ಅದರ ಮೇಲೂ ಬಹಳಷ್ಟು ನಿರ್ಧರಿತವಾಗುತ್ತದೆ. ಈ ಕೆಳಗಿನ ನಿದರ್ಶನಗಳನ್ನು ಪರಿಶೀಲಿಸಿ ನೋಡಿ:

೧) ಇತ್ತೀಚಿನ ಚಿಕ್ಕ (nuclear) ಕುಟುಂಬಗಳಲ್ಲಿ ಗಂಡ-ಹೆಂಡತಿಯರು ತಮ್ಮ ತಮ್ಮಲ್ಲಿ ಏಕವಚನದಲ್ಲೇ ಸಂಭಾಷಣೆ ನಡೆಸುತ್ತಾರೆ.
೨) ಡಬಲ್ ಇನ್‌ಕಮ್ ಇರುವ ಕುಟುಂಬಗಳಲ್ಲಿ ಗಂಡ-ಹೆಂಡತಿಯ ಸಂಬಳದಲ್ಲಿ ಹೆಚ್ಚು ವ್ಯತ್ಯಾಸವಿರಬೇಕಿಲ್ಲ, ಹೆಂಡತಿಗೆ ಗಂಡನಿಗಿಂತ ಹೆಚ್ಚು ಸಂಬಳಬರುವ ಸಾಧ್ಯತೆಗಳೂ ಇವೆ.
೩) ಗಂಡ-ಹೆಂಡತಿಯರ ವಯಸ್ಸಿನಲ್ಲಿ ಹೆಚ್ಚಿನ ಅಂತರವಿರಬೇಕೆಂದೇನಿಲ್ಲ ಜೊತೆಗೆ ಅವರ ವಿದ್ಯಾರ್ಹತೆಯೂ ಒಂದೇ ಮಟ್ಟದಲ್ಲಿರಬಹುದು.

ಪ್ರತಿಯೊಂದು ಕುಟುಂಬದಲ್ಲಿಯೂ ಈ ಹೌಸ್‌ಹೋಲ್ಡ್ ಕಾಯಕಗಳು ಸಹಜವಾದವುಗಳು: ಅವೇ - ಮನೆ ಸ್ವಚ್ಛ ಮಾಡುವುದು, ಬಟ್ಟೆ ಒಗೆದು-ಒಣಗಿಸಿ-ಮಡಚಿಡುವುದು, ಮಕ್ಕಳಿದ್ದರೆ ಅವರ ಹೋಮ್‌ವರ್ಕ್ ಊಟ-ಉಪಚಾರದಲ್ಲಿ ತೊಡಗುವುದು, ಅಗತ್ಯ ವಸ್ತುಗಳನ್ನು ಶಾಪಿಂಗ್ ಮಾಡುವುದು, ಹಣಕಾಸಿಗೆ ಸಂಬಂಧಿಸಿದ ವಿಷಯಗಳನ್ನು ಮ್ಯಾನೇಜ್ ಮಾಡುವುದು, ದಿನಕ್ಕೆರಡು ಬಾರಿಯಾದರೂ ಅಡಿಗೆ ಮನೆಯಲ್ಲಿನ ಕೆಲಸಗಳಿಗೆ (ಕುಕು, ಕ್ಲೀನ್, ಆರ್ಗನೈಜ್, ಇತ್ಯಾದಿ) ಆದ್ಯತೆ ಕೊಡುವುದು ಇತ್ಯಾದಿ. ಈ ಕೆಲಸಗಳು ಒಂದು ದಿನಕ್ಕೆ ಮಾತ್ರ ಬಂದು ಹೋಗುವಂಥದ್ದಲ್ಲ, ಇವುಗಳನ್ನು ಪ್ರತಿದಿನ, ಪ್ರತಿರಾತ್ರಿ ನಿರ್ವಹಿಸುತ್ತಲೇ ಇರಬೇಕು ಎಂಥ ಕುಟುಂಬವಾದರೂ. ದುಡ್ಡಿದ್ದವರು ಕೆಲಸದವರನ್ನು ನೇಮಿಸಿಕೊಂಡಿರಬಹುದು, ಆದರೆ ಕೆಲಸ ಮಾಡುವವರನ್ನು ನಿಭಾಯಿಸುವುದು ತಪ್ಪುವುದಿಲ್ಲ. ಅಂದರೆ ಮನೆ ಎಂದರೆ ಇಂತಿಷ್ಟು ಕೆಲಸಗಳು ಇದ್ದೇ ಇರುತ್ತವಾದ್ದರಿಂದ ಈ ಆಧುನಿಕ ಕುಟುಂಬಗಳ ಹೆಚ್ಚಿನ ಸಮಸ್ಯೆಯೇ ಈ ಕೆಲಸಗಳ ಹೂಡಿಕೆ-ಹಂಚಿಕೆಗಳಿಂದ ಎಂದರೆ ತಪ್ಪಾಗಲಾರದು. ಇಂಥದರ ನಡುವೆ ಅಥವಾ ಇಷ್ಟೆಲ್ಲಾ ಇದ್ದೂ, ಅದರ ಮೇಲೆ ಬರುವುದೇ "in-law" factor, ಅಥವಾ ಸಂಬಂಧಿಕರ ಉಪದ್ರವ! ದೂರದ ಅಮೇರಿಕೆಯಲ್ಲಿರುವ ನಮಗೆ ಸಂಬಂಧಿಕರಿಲ್ಲ ಎಂದು ಕೊರಗುವವರು ಒಂದು ಕಡೆ, ದಿನಕ್ಕೊಮ್ಮೆ ಒಬ್ಬರಲ್ಲ ಒಬ್ಬರು ಬರುತ್ತಾರಲ್ಲ ಎಂದು ಹಲಬುವ ಬೆಂಗಳೂರಿನ ದಂಪತಿಗಳು ಮತ್ತೊಂದು ಕಡೆ.

ಅದೇ "in-law" factor ಎಂದರೆ ತಮ್ಮ ಸಣ್ಣ ಕುಟುಂಬಕ್ಕೆ ಅವರವರ ತಂದೆ-ತಾಯಿಯರಿಂದಲೇ ಕಷ್ಟಗಳು ಬರುತ್ತವೆ ಎನ್ನುವ ಮಾತು. ಉದಾಹರಣೆಗೆ, ಗಂಡ-ಹೆಂಡತಿ ಇಬ್ಬರೂ ಸಮವಯಸ್ಕ, ಸಮಾನ ಅಭಿರುಚಿ, ಸಮಾನ ವಿದ್ಯಾರ್ಹತೆ, ಸಮಾನ ಕೆಲಸದಲ್ಲಿದ್ದಾರೆಂದುಕೊಳ್ಳೋಣ. ಹುಡುಗನ ತಂದೆ ತಾಯಿಯರು ಈ ನವದಂಪತಿಗಳಿರುವ ಗೂಡಿಗೆ ದೂರದ ಊರಿನಿಂದ ಬಂದರೆಂದುಕೊಂಡರೆ ಅಲ್ಲಿ ತನ್ನ ಅತ್ತೆ-ಮಾವಂದಿರ ಉಪಚಾರವನ್ನು ಈ ಹುಡುಗಿಯೇ ಕೈಗೊಳ್ಳಬೇಕೆ, ಅದು ಎಷ್ಟರ ಮಟ್ಟಿನ ನಿರೀಕ್ಷೆಯಾಗಿರಬೇಕು ಎನ್ನುವುದು ಒಳ್ಳೆಯ ಪ್ರಶ್ನೆ. ಅದೇ ಮನೆಗೆ ಹುಡುಗಿಯ ತಂದೆ-ತಾಯಿಯರು ಬಂದರೆಂದುಕೊಂಡರೆ ಹುಡುಗನಿಂದ ಅವರು ಏನೇನನ್ನು ನಿರೀಕ್ಷಿಸಬಹುದು? ನಮ್ಮ ಸಮಾಜ ಇನ್ನೂ ಪುರುಷ-ಪ್ರಧಾನವಾದುದು ಎನ್ನುವ ಉತ್ತರ ನಾವಂದುಕೊಂಡಷ್ಟು ಪ್ರಬಲವಾಗಿ ಇಲ್ಲಿ ಸಹಾಯ ಮಾಡೋದಿಲ್ಲ. ಆ ಮನೆಯ ಹುಡುಗಿಗೂ ತಕ್ಕ ಕೆಲಸ, ಡೆಡ್‌ಲೈನುಗಳು, ಜವಾಬ್ದಾರಿ ಮುಂತಾದವುಗಳೆಲ್ಲ ಇದ್ದಾಗ ತನ್ನ ತಂದೆ-ತಾಯಿಯರಿಗೆ ತನ್ನ ಕೈಯಾರೇ ತಾನೇ ಮಗ ಒಂದು ಕಪ್ ಕಾಫಿ ಮಾಡಿಕೊಟ್ಟ ಎಂದೇ ಇಟ್ಟುಕೊಳ್ಳಿ ಆ ತಂದೆ-ತಾಯಿ ಅದನ್ನು ನೋಡುವ ರೀತಿಯೇ ಬೇರೆ. ಕೆಲಸಕ್ಕೆ-ಸಂಬಳಕ್ಕೆ-ಸ್ಟೇಟಸ್ಸಿಗೆ ಮಾತ್ರ ಹೆಂಡತಿ ಎಂದುಕೊಂಡರೆ ಆದೀತೆ? ಇಂತಹ ಸಮಯದಲ್ಲೇ ನಾನು ಆ ಹುಡುಗ ತನ್ನ ತಂದೆ-ತಾಯಿಯರ ನಿರೀಕ್ಷೆಗೆ ತಕ್ಕ ಉತ್ತರಗಳನ್ನು ತಯಾರಿಸಿಟ್ಟುಕೊಳ್ಳಬೇಕು ಎನ್ನುವುದು. ಡಬಲ್ ಇನ್‌ಕಮ್ ಕುಟುಂಬಗಳಲ್ಲಿನ ಜವಾಬ್ದಾರಿಗಳು ತಕ್ಕಮಟ್ಟಿಗೆ ಡಿವೈಡ್ ಆಗಿ ಒಬ್ಬರಿಗೊಬ್ಬರು ಪೂರಕವಾಗಿ ನಡೆದುಕೊಳ್ಳುವುದೇ ಉತ್ತರ ಹೊರತು ಹೊರಗಿನ ಸಮಾಜಕ್ಕೆ (ತಮ್ಮ ತಂದೆ-ತಾಯಿ ಕುಟುಂಬದವರನ್ನೂ ಸೇರಿ) ತಕ್ಕಂತೆ ನಡೆಯುತ್ತೇವೆ ಎಂದುಕೊಳ್ಳುವುದು ತಮಗೆ ತಾವೇ ಮಾಡಿಕೊಳ್ಳುವ ಮೋಸವಲ್ಲದೇ ಮತ್ತೇನು?

ನಮ್ಮಲ್ಲಿ ಸಣ್ಣ-ಸಣ್ಣ ವಿಷಯಗಳೂ ದೊಡ್ಡದಾಗಿ ಬೆಳೆದುಕೊಳ್ಳಲು ಬೇಕಾದ ರೀತಿಯ ವಾತಾವರಣ ಇರುತ್ತೆ. ಈ ಉದಾಹರಣೆಯನ್ನು ನೋಡಿ: ನನಗೆ ಗೊತ್ತಿರುವ ಯುವ ದಂಪತಿಗಳು ತಮ್ಮ ತಮ್ಮನ್ನು ಏಕವಚನದಲ್ಲೇ ಸಂಬೋಧಿಸಿಕೊಳ್ಳೋದು - ಅಂದರೆ ಹೋಗೋ-ಬಾರೋ ಎಂಬ ರೀತಿಯಲ್ಲಿ. ಒಬ್ಬೊರಿಗೊಬ್ಬರು ಅನ್ಯೋನ್ಯವಾಗಿರುವ ಅವರು ತಮ್ಮನ್ನು ಪ್ರೀತಿಯಿಂದ ಈ ಸಂಬೋಧನೆಗೆ ಹೊಂದಿಸಿಕೊಂಡಿದ್ದಾರೆ ಅಷ್ಟೇ. ಅದೇ ದಂಪತಿಗಳು ದೂರದ ಭಾರತಕ್ಕೆ ಪ್ರಯಾಣ ಬೆಳೆಸಿದಾಗಲೂ ತಮ್ಮ ಸಂಬಂಧಿಕರ ನಡುವೆಯೂ ತಮ್ಮನ್ನು ಹೀಗೇ ಕರೆದುಕೊಳ್ಳುತ್ತಾರಷ್ಟೇ. ಅಕಸ್ಮಾತ್ ಅವರು ತಮ್ಮತಮ್ಮ ತಂದೆತಾಯಿಯರ ನಡುವೆ "ಏನ್ರೀ-ಬನ್ರೀ" ಪ್ರಯೋಗಕ್ಕೆ ತೊಡಗಿಕೊಂಡರೆಂದರೆ ಹೇಗಿರಬಹುದು? ನೆರೆಹೊರೆಗೆ ಹೊಂದಿಕೊಂಡಿರುವುದೋ ಅಥವಾ ತಮಗೆ ಬೇಕಂತೆ ನಡೆದುಕೊಳ್ಳುವುದೋ ಎನ್ನುವ ಪ್ರಶ್ನೆ ಬರುತ್ತದೆ. ನನ್ನ ಅನಿಸಿಕೆ ಪ್ರಕಾರ, ಯುವ-ದಂಪತಿಗಳು ಈ ನಿಟ್ಟಿನಲ್ಲೂ ತಮ್ಮ ಹಿರಿಯರಿಗೆ ತಿಳಿಹೇಳುವ ಅಗತ್ಯವಿದೆ.

***

ಮೊನ್ನೆ ಯಾರೋ ಹೇಳೋದನ್ನು ಕೇಳಿದೆ - ’ನಮ್ಮ ಮಗ ಅಮೇರಿಕಕ್ಕೆ ಇದಷ್ಟೇ ಬಂದಿದ್ದಾನೆ, ಅವನಿಗೊಂದು ಭಾರತೀಯ ಮೂಲದ ಅಮೇರಿಕನ್ ಸಂಜಾತೆಯೊಡನೆ ಮದುವೆ ನಿಶ್ಚಯವಾಗಿದೆ, ಆದರೆ ನಮ್ಮದು ಒಂದೇ ಒಂದು ಕಂಡೀಷನ್ ಎಂದರೆ ಇನ್ನೈದು ವರ್ಷಗಳ ನಂತರ ಅವರಿಬ್ಬರೂ ಪರ್ಮನೆಂಟ್ ಆಗಿ ಭಾರತಕ್ಕೆ ಹಿಂದಿರುಗಿಬಿಡಬೇಕು!’. ನನ್ನ ಮನಸ್ಸಿನಲ್ಲಿ, ’ಏಕೆ?’ ಎನ್ನುವ ಪ್ರಶ್ನೆ ಬಂದು ಹಾಗೇ ಉಳಿದುಹೋಯಿತು.

ನಮಗೆಲ್ಲ ೨೪ ವರ್ಷವಾಗುವವರೆಗೆ ಫುಲ್‌ಟೈಮ್ ಓದಿಸುವವರೆಗೆ ನಮ್ಮ ನಮ್ಮ ಪೋಷಕರು ಸಹಾಯ ಮಾಡಿದ್ದಾರೆ ನಿಜ. ನಮಗೆಲ್ಲ ಜಾತಿ-ಜಾತಕಗಳ ಬಂಧನಕ್ಕೆಳೆದು ಅವರ ಮನಸ್ಸಿಗೆ ಸಮಾಧಾನವಾಗುವಂತೆ ವಿವಾಹ ಮಾಡಿದ್ದಾರೆ ನಿಜ. ಇದೇ ಪೋಷಣೆ ಸಾಯುವವರೆಗೂ ನಮ್ಮನ್ನು ಕಾಯಬೇಕೇಕೆ? ನಮ್ಮ ಪೋಷಕರು ನೋಡಿರದ ಅಮೇರಿಕಕ್ಕೆ ನಾವು ಬಂದಿರೋದು, ಇನೈದು ಹತ್ತು ಇಪ್ಪತ್ತು ವರ್ಷಗಳಲ್ಲಿ ಈ ಹುಡುಗ-ಹುಡುಗಿಯ ಪ್ರಬುದ್ಧತೆ ಬದಲಾಗುತ್ತೆ, ಅವರಿಗೂ ಒಂದು ಕುಟುಂಬವಿರುತ್ತೆ, ಮೇಲಾಗಿ ಜವಾಬ್ದಾರಿ ಇರುತ್ತೆ, ಅದರ ನಡುವೆ ಇನ್ನೈದು ವರ್ಷಗಳಲ್ಲಿ ’ಭಾರತಕ್ಕೆ ಹಿಂತಿರುಗಿ’ ಎಂದು ಆಜ್ಞೆ ಮಾಡಲು ಇವರ ಹಿನ್ನೆಲೆ ಏನಿರಬಹುದು? ಸರಿ, ಆ ಅಮೇರಿಕನ್ ಸಂಜಾತೆ ಹೆಣ್ಣಿಗೆ ಇವರ ಬಾಯಿ ನೀರೂರುವ ಇಡ್ಲಿ-ದೋಸೆಯನ್ನು ಮಾಡಲು ಬಾರದಿದ್ದರೆ ಅದು ಆಕೆಯ ತಪ್ಪೇ? ನಮ್ಮಲ್ಲಿ ಒಂದು ಗಾದೆ ಮಾತಿದೆ, ಅಕ್ಕನೂ ಉಳಿಯಲಿ ಅಕ್ಕಿಯೂ ಉಳಿಯಲಿ ಎಂದರಾಗದು. ಅತ್ತೆ-ಮಾವಂದಿರನ್ನು ಮೆಚ್ಚಿಸಿಕೊಂಡು ಗಂಡನ ಸಮಸಮಕ್ಕೆ ಕೆಲಸವನ್ನೂ ಮಾಡಿಕೊಂಡು ಮನೆಯಲ್ಲಿ ಮತ್ತೆ ಹೊರಗೆ "ತಗ್ಗಿ-ಬಗ್ಗಿ" ನಡೆಯುವ ನಿರೀಕ್ಷೆಯನ್ನು ಪ್ರತಿಯೊಬ್ಬರೂ ಇಟ್ಟುಕೊಂಡರಾದರೆ ಅದು ಅನಿರೀಕ್ಷಿತ ಪ್ರತಿಫಲವನ್ನು ತಂದುಕೊಡಬಹುದು.

ಇಷ್ಟೇ ಅಲ್ಲದೆ, ಹಣ ಕಾಸಿನ ದೃಷ್ಟಿಯಿಂದಲೂ ಬೇಕಾದಷ್ಟು ಸಂಕಷ್ಟಗಳು ಬಂದೊದಗುವುದು ಸಹಜ. ತಮ್ಮ ಮಗ ತಮ್ಮನ್ನು ಇಳಿವಯಸ್ಸಿನಲ್ಲಿ ಸಲಹಲಿ ಎಂದು ಆಶಿಸುವ ಅಪ್ಪ-ಅಮ್ಮ ಅದೇ ರೀತಿ ತಮ್ಮ ಮನೆಯ ಸೊಸೆಗೂ ಹಾಗೇ ಜವಾಬ್ದಾರಿ ಇರಬಹುದು ಎನ್ನುವುದನ್ನು ನೋಡಲಾರರೇಕೆ? ತನ್ನ ತಂದೆಯ ಆಸ್ತಿಯಲ್ಲಿ ತನ್ನ ಸಹೋದರರ ಸಮಸಮಕ್ಕೆ ಪಾಲು ಕೇಳುವಂತೆ ಕಾನೂನೇ ಇದ್ದಾಗ ಗಂಡು ಮಕ್ಕಳ ಸಮಕ್ಕೆ ಹೆಣ್ಣು ಮಕ್ಕಳೂ ಅವರರವರ ಹೆತ್ತವರನ್ನು ನೋಡಿಕೊಂಡರೆ "ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ" ಎನ್ನುವ ಗಾದೆ ಮಾತಿನ ಮೊರೆ ಏಕೆ ಹೋಗಬೇಕು?

ಹೀಗೆ...ಈ ವಿಷಯವನ್ನು ಕುರಿತು ಬೇಕಾದಷ್ಟು ಬರೆಯಬಹುದು, ಈ ಸಮಯದಲ್ಲಿ ಅವರವರ ತಂದೆ-ತಾಯಿಯರಿಗೆ ಮನ ಒಲಿಸುವ ತಿಳಿಸಿ ಹೇಳುವ ಅಗತ್ಯ ಇದೆ ಎಂದೆನಿಸಿದ್ದು ಈ ಹೊತ್ತಿನ ತತ್ವಗಳಲ್ಲೊಂದು!