Thursday, January 25, 2007

ಈ ಸೂರ್ಯಾಸ್ತಾ ಎಲ್ಲೀದೂ ಅಂತ ಹೇಳೀ ನೋಡೋಣ?




ಬೆಂಗ್ಳೂರಿನಲ್ಲಿ ಸೂರ್ಯೋದಯ ಸೂರ್ಯಾಸ್ತಾ ಕಾಣಿಸೋದೇ ಇಲ್ಲವೇನೋ ಅಂದುಕೊಂಡ ನನಗೆ ರಾಜರಾಜೇಶ್ವರಿ ನಗರದ ನನ್ನ ಸ್ನೇಹಿತರ ಮನೆಯ ಉಪ್ಪರಿಗೆಯಿಂದ ಸಿಕ್ಕ ಚಿತ್ರಗಳು ಇವು.

Wednesday, January 24, 2007

೩೫ ರಿಂದ ೩೫ ಕ್ಕೆ

ಉತ್ತರ ಅಮೇರಿಕದ ಜನ ಏನ್ ಪಾಪ ಮಾಡಿದ್ರೋ ಅಂಥ ಎಷ್ಟೋ ಸರ್ತಿ ಅನ್ಸದೇ ಇರೋದಿಲ್ಲ, ಇನ್ನೇನ್ ಮತ್ತೆ ಇಲ್ಲಿಯ ಥರ್ಮಾಮೀಟರ್ರಿನಲ್ಲಿನ ಪಾದರಸ ವರ್ಷದ ಆರು ತಿಂಗಳು ಬುಷ್ಷನ ಆಡಳಿತಕ್ಕೆ ಹೆದರಿಕೊಂಡ ರಿಪಬ್ಲಿಕನ್ನರ ಹಾಗೆ ಸೊನ್ನೆಯನ್ನು ಬಿಟ್ಟು ಮೇಲಕ್ಕೆ ಏಳೋದೇ ಇಲ್ಲ ಅಂತ ಕುಳಿತುಬಿಟ್ಟಿರುತ್ತೆ! ಮನೆಯಲ್ಲೇನೋ ಬೇಜಾನ್ ಹೀಟ್ ಇದೆ ಹಾಕ್ಕೋತೀವೀ ಅಂತೀರೋ ಡ್ರೈನೆಸ್‌ನಿಂದ ಚರ್ಮದಲ್ಲಿ ಯಮತುರಿಕೆ ಶುರುವಾಗುತ್ತೇ ನೋಡಿ ಅದನ್ನ ತಡೆಯೋದಕ್ಕೆ ಯಾವ ಯಮನಿಂದಲೂ ಸಾಧ್ಯವಿಲ್ಲ, ಹಾಗಿರುತ್ತೆ.

ಇದೇನ್ ೩೫ ರಿಂದ ೩೫ ಕ್ಕೆ ಅಂಥ ಯೋಚನೇ ಮಾಡ್ತಾ ಇದೀರೋ, ಹೆಚ್ಗೆ ಕಷ್ಟಾ ಕೊಡೋದಿಲ್ಲ ನಿಮಗೆ, ಏಕೆಂದ್ರೆ ಈಗಾಗ್ಲೇ ಇಂಟರ್‌ನೆಟ್‌ನಲ್ಲಿ ಅದನ್ನ ಇದನ್ನ ಓದಿ ಮಿದುಳು ಬಹಳ ದುಡಿದು ದಣಿದಿರಬೋದು ಆದ್ರಿಂದ let us make it very simple (and not stupid, of course!). ನಮ್ ದಕ್ಷಿಣ ಭಾರತದ ಹವೆ ಅಂದ್ರೆ ಹವೆ ಒಂದ್ ರೀತಿ ಕೃಷ್ಣ ಭಟ್ರು ಹೋಟ್ಲೂ ಇಡ್ಲೀ ಥರಾ, ಅದರ ಮುಂದೆ ಬೇರೆ ಯಾವ್ದೂ ಇಲ್ವೇ ಇಲ್ಲ -- ನಾನೇನು ಮಹಾಬಲಿಪುರಂ ಬಗ್ಗೇನೋ, ಇಲ್ಲಾ ಕೊಟ್ಟಾಯಂ ಬಗ್ಗೇನೋ ಕೊರೀತಾ ಇಲ್ಲ, ಅದೇ ನಮ್ ಶಿವಮೊಗ್ಗದ ಹವಾಮಾನದ ಬಗ್ಗೆ - ಟೆಂಪ್ರೇಚರ್ರು ಏನಂದ್ರೂ ಎಪ್ಪತ್ತರ (ಫ್ಯಾರನ್‌ಹೈಟ್) ಸುತ್ತಮುತ್ತಲೂನೇ ಇರೋದು, ಅಂದ್ರೆ ಹೆಚ್ಚು ಅಂದ್ರೆ ೩೨-೩೫ ಕ್ಕೆ ಹೋಗಬಹುದು ನೋಡಿ ಡಿಸೆಂಬರ್‌ನಲ್ಲಿ (ಬಿರು ಬೇಸಿಗೆಯಲ್ಲಿ ಉಳಿದವರು ಬೇಕಾದ್ರೆ ಬೆಂದ್ ಹೋಗ್ಲಿ, ನಾನಲ್ಲಿರಲ್ವಲ್ಲಾ ಅಲ್ಲಿ!). ಅದೇ ಈ ಸರ್ತಿ ಅಲ್ಲಿ ರಜಕ್ಕೆ ಹೋದಾಗ ಇಲ್ಲಿ ಅರ್ಧ ಡಿಸೆಂಬರ್‌ವರೆಗೆ ಒಂದ್ ರೀತಿ ಥಂಡಿ ಹವೆಯಲ್ಲಿ ನಡುಗಿ ಹೋದ ನನಗೆ ಬೇರೇನು ಇಲ್ದೇ ಹೋದ್ರೂ ನಮ್ಮೂರಿನ ವಾತಾವರಣದಲ್ಲಿನ ತಂಪು, ಆರ್ದ್ರತೆ, ಸ್ವಚ್ಛಂದವಾಗಿರೋ ಗಾಳಿ ಇವೆಲ್ಲ ಮರುಳು ಮಾಡಿದ್ವು ಅಂದ್ರೆ ಅದರಲ್ಲೇನೂ ಅಚ್ಚರಿ ಇಲ್ಲ, ಅಂಥಾ ಹವೇಲಿ ಇರೋದು, ಬದುಕು ನಡೆಸೋದು ಅಂದ್ರೆ ಒಂದು ರೀತಿ ಪುಣ್ಯ ಇದ್ದ ಹಾಗೆ - ಇಲ್ಲಿ ಯಾವನಿಗ್ ಬೇಕು ಆರ್ ತಿಂಗ್ಳು ಮುದುರಿಕೊಂಡಿರೋ ಕರ್ಮಾ! (ಅಲ್ಲಿರೋರಿಗೆ ಅದರ ಬೆಲೆ ಗೊತ್ತಿಲ್ಲ ಅದರ ವಿಷ್ಯಾ ಬೇರೆ).

ನಮ್ಮೂರಲ್ಲಿ ೩೫ ಡಿಗ್ರಿ ಸೆಂಟಿಗ್ರೇಡ್ ಇತ್ತೂ ಅಂತಂದ್ರೆ ಏನೇನೆಲ್ಲ ಮಾಡಬಹುದು, ಅದೇ ಇಲ್ಲಿಗೆ ಬಂದ್ವಪ್ಪಾ, ಅದೆಲ್ಲಿಂದ ಬಂದ್ ಹಿಡಕಂಡ್ಯೋ ಅನ್ನೋ ಹಾಗೆ ೩೫ ಡಿಗ್ರಿ ಫ್ಯಾರನ್‌ಹೈಟ್‌ಗೆ ಟೆಂಪ್ರೇಚರ್ ಇಳಿದುಬಿಡೋದೆ? ನಾನೂ ಬೇಕಾದಷ್ಟ್ ಸಾರಿ ತಲೆ ಕೆಡಿಸಿಕೊಂಡಿದ್ದೀನಿ, ಇಲ್ಲಿನವರ ಹಾಗೆ ನಮ್ಮೂರಲ್ಲೂ ಫ್ಯಾರನ್‌ಹೈಟ್ ಸ್ಕೇಲ್ ಅಳವಡಿಸಿಕೊಂಡಿದ್ರೆ ಹೇಗಿತ್ತು ಅಂತ, ಅದೇನ್ ಇದ್ರೂ ಡಾಕ್ಟ್ರು ಜೇಬಲ್ಲಿರೋ ಥರ್ಮಾಮೀಟರ್ ಬಿಟ್ಟು ಹಾಗೂ ಜ್ವರ ಬಂದಿರೋ ಜನಗಳನ್ನ ಬಿಟ್ಟು ಅತ್ತಿತ್ತ ಇನ್ನೂ ಕದಲ್ಲಿಲ್ಲ ನೋಡಿ. ಒಂದ್ ಲೆಕ್ಕಾ, ಒಂದರಿಂದ ನೂರರವರೆಗಿನ ಫ್ಯಾರನ್‌ಹೈಟ್ ಅಳತೆ ಇದ್ರೇನೇ ಚೆನ್ನಾಗಿತ್ತು, ಅದರ ಬದಲಿಗೆ ೧೨ ರಿಂದ ನಲವತ್ತರವರೆಗಿನ ಸೆಂಟಿಗ್ರೇಡನ್ನ ಇನ್ನೂ ಯಾಕ್ ಇಟ್‌ಗೊಂಡಿದ್ದಾರೋ ಯಾರಿಗ್ ಗೊತ್ತು?

ಹಂಗಂಥ ಇಲ್ಲಿನ ಪೌಂಡು, ಔನ್ಸು, ಪೈಂಟ್, ಕ್ವಾರ್ಟುಗಳ ಅಳತೆ ಇರಲಿ ಅನ್ಸಲ್ಲ...ನಮ್ಮದೇನಿದ್ರೂ ಲೀಟರುಗಳ ಲೆಕ್ಕ, ಮಿಲಿ ಲೀಟರು ಅಂದ್ರೇನೇ ತೃಪ್ತಿ, ಒಂದು ರೀತಿ ಉಂಡು ನೀರು ಕುಡಿದಷ್ಟು ನಿರಾಳ, ಈ ಗ್ಯಾಲನ್ನು ಲೆಕ್ಕಾ ತೆಗೊಂಡ್ರೆ ಮುದ್ದೆ ಉಂಡು ನೀರ್ ಕುಡೀಬ್ಯಾಡಾ ಅಂದ್ ಹಾಗಿರುತ್ತೆ, ಯಾವನಿಗ್ ಗೊತ್ತಿರುತ್ತೆ, ಒಂದ್ ಗ್ಯಾಲನ್ ಅಂದ್ರೆ ಇಂತಿಷ್ಟೇ ಲೀಟರ್ರೂ ಅಂಥಾ? ಇವರು ಇಂಚು-ಪಿಂಚುಗಳಲ್ಲಿ ಏನೇನನ್ನೆಲ್ಲ ಅಳೆದ್‌ಕೊಂಡ್ರೂ ಕೊನೇ ಪಕ್ಷಾ ಕ್ಯಾಮೆರಾ ಲೆನ್ಸಿನ ವಿಚಾರಕ್ಕೆ ಬಂದಾಗ ಮಿಲಿ ಮೀಟ್ರು ಬಳಸ್ತಾರಲ್ಲ, ಅದೇ ಪುಣ್ಯಾ, ಅದನ್ನೇನಾದ್ರೂ ಇಂಚಿಗೆ ಕನ್ವರ್ಟ್ ಮಾಡಿದ್ರೂ ಅನ್ನಿ ನಾನು ಅದನ್ನ ಲೆಕ್ಕ ಹಾಕ್ತಾ ಹಾಕ್ತಾ ಇನ್ನಿಪ್ಪತ್ತು ವರ್ಷ ಹೆಚ್ಚು ಆಯಸ್ಸು ಆದವರ ಹಾಗೆ ಆಡ್ತಿದ್ನೋ ಏನೋ?

ಈ ದೇಶ್‌ದಲ್ಲಿ ಯಾಕ್ ಇಷ್ಟು ಕೋಲ್ಡೂ ಅಂತಾನೂ ಬೇಕಾದಷ್ಟ್ ಸರ್ತಿ ಯೋಚ್ನೆ ಮಾಡೀ-ಮಾಡೀ ನನಗೆ ಸಾಕಷ್ಟು ತಲೆ ಬಿಸಿ ಆಗಿದೆ, ಮೋಸ್ಟ್‌ಲೀ ಇಲ್ಲಿನ ಜನಗಳಿಗೆ ತಲೆಬಿಸಿ ಹೆಚ್ಚು ಅಂತ ಭಗವಂತ ಇಲ್ಲಿ ಆರು ತಿಂಗಳು ಕೊರೆಯೋ ಛಳಿಯನ್ನ ಕೊಟ್ನೋ ಏನೋ? ನಾವೇನ್ ಇಲ್ಲಿಯವರ ಥರಾ ಸ್ಕೀಯಿಂಗೂ ಮಣ್ಣೂ-ಮಸಿ ಅಂಥ ಎಲ್ಲೂ ಹೋಗಲ್ಲ, ಶಕ್ತಿ ಇದ್ದು ದುಡಿಯೋ ಹೊತ್ನಲ್ಲಿ ದುಡಿಯೋದು ಕಡಿಯೋದನ್ನೆಲ್ಲ ಮಾಡಿ ಸಂಜೆ ಮನೇಗೆ ಹೋಗಿ ಉಂಡು, ಟಿವಿ ನೋಡಿ ಮಲಕ್ಕಂತೀವಿ, ಅಮೇಲೆ ಸ್ವಲ್ಪ ಕೃಶವಾದೆವೋ ಇಲ್ಲಿನ ಛಳಿಯ ಜೊತೆಯಲ್ಲಿ ಬರೋ ಕತ್ತಲ ಜೊತೆ ಮಸಲತ್ತು ಮಾಡ್ತಾ ಹಳೇದನ್ನೆಲ್ಲ ನೆನೆಸಿಕೊಂಡು ಡಿಪ್ರೆಸ್ಸ್ ಆಗ್ತೀವಿ. ಕಾಸು ಕಾಸು ಅಂಥ ಇಷ್ಟು ದೂರ ಬಂದ್ ಮೇಲೆ ಒಂದಿಷ್ಟ್ ತಲೆಬಿಸಿ ಆಗೋದ್ ಬ್ಯಾಡಾ ಅಂದ್ರೆ ಹೆಂಗೆ? ತಲೆಬಿಸಿ ಆದ್ರೆ ಅದನ್ನ ಕಾಂಪೆನ್‌ಸೇಟ್ ಮಾಡೋದಕ್ಕೆ ಇನ್ನೇನೋ ಆಗಿಹೋಗುತ್ತೆ, ಕೆಲವು ನಮ್ ಕೈಯಲ್ಲಿ, ಇನ್ ಕೆಲವು ಮಂದಿ ಕೈಯಲ್ಲಿ!

ಬ್ಯಾಡಾ ಬಿಡಿ, ಟೆಂಪ್ರೇಚರ್ರ್ ವಿಷ್ಯಾ ಮಾತಾಡ್ತಾ ಮಾತಾಡ್ತಾ ಎಲ್ಲಿಂದ ಎಲ್ಲಿಗೋ ಹೋಯ್ತು ಒಂದ್ ರೀತಿ ನಮ್ಮಲ್ಲಿನ ಈಶಾನ್ಯ ಮಾರುತದ ಹಾಗೆ. ಇದನ್ನೆಲ್ಲ ಬರೆದು ಅಲ್ಲಲ್ಲ ಬಡಕಂಡು ನಿಮ್ ಮಂಡೆ ಬಿಸಿ ಮಾಡೋದು ನನ್ ಗುರೀ ಏನಲ್ಲ, ಹಂಗೇನಾದ್ರೂ ಆಯ್ತೂ ಅಂದ್ರೂ ಅದಕ್ಕೆ ನಾನ್ ಜವಾಬ್ದಾರ್ನಲ್ಲ ಸ್ವಾಮಿ...ಈಗ್ ನಮಿಗಿರೋ ತಲ್‌ನೋವೇ ಸಾಕು, ಇನ್ನ್ ನಿಮದೆಲ್ಲಿಂದ ಕಟ್‌ಗೊಂಡ್ ತಿರುಗ್ಲಿ ಮತ್ತೆ!

ಇನ್ನೂ ಏರ್‌ಪೋರ್ಟ್‌ನಿಂದ ಹೊರಕ್ಕೆ ಬಂದ್ ತಲೆ ಹಾಕಿಲ್ಲ, ಅಷ್ಟೋತ್ತಿಗಾಗ್ಲೇ ಯಾವ್ದೋ ದೂರದ ಹಳೇ ಸಂಬಂಧಿ ಬೆನ್ನು ಹತ್ತಿದ ಹಾಗೆ ಈ ಛಳಿ ಮೈ ಹತ್ತ್‌ಕೊಂಡ್‌ಬಿಟ್ಟಿದೆ, ಇದು ಇನ್ನು ಬಿಟ್ಟ್ ಹೋಗ್‌ಬೇಕು ಅಂದ್ರೆ ಸ್ಪ್ರಿಂಗ್ ಬರಬೇಕು (ಸ್ಪ್ರಿಂಗ್ ತ್ರಾಸ್ ಅಲ್ಲ, ಅದೇ ನಮ್ಮ ವಸಂತ ಋತು, ಚೈತ್ರಮಾಸ), ಅಲ್ಲೀಗಂಟ ಕಾಯೋದ್ ನಮ್ ಹಣೇಬರಾ, ನಮ್ಮಂತೋರ್ನ ನೋಡಿ ನಗೋದು ಒಂದ್ ರೀತಿ ನಿಮಗಾದ್ರೂ ಒಂದಿಷ್ಟು ಖುಷಿ ಅಂತ ಕೊಟ್ಟಿದ್ರೆ ಎಷ್ಟೋ ಸುಖಾ ಇರ್ತಿತ್ತು.

ನಿಮ್ಮೂರಲ್ಲಿ ಹೆಂಗಿದೆ ಟೆಂಪ್ರೇಚರ್ರೂ, ನಿಮ್ ಸುಖಾ ದುಕ್ಕಾ ವಿವರಿಸಿ ಮರೀದೇ ಪತ್ರ ಬರೀತೀರಾ ತಾನೇ?!

Sunday, January 21, 2007

ಮುಂದಾಳುಗಳ ಕೊರತೆನೇ, ಛೇ!

ಸರಿಯಾದ "ನಾಯಕರ" ಕೊರತೆ ಎಂದೇನೋ ನನ್ನ ಅನುಭವವನ್ನು ಹಂಚಿಕೊಂಡಿದ್ದಾಯಿತು, ಆದರೆ ಬೆಂಗಳೂರಿನಲ್ಲಿ ನಮ್ಮ ಕಾರು ಟ್ರಾಫಿಕ್ ಲೈಟ್‌ಗಳಲ್ಲಿ ನಿಂತಲ್ಲೆಲ್ಲ ಮುಂದಾಳುಗಳ ಕೊರತೆ ಇದೆ ಎಂದು ಅನ್ನಿಸಲೇ ಇಲ್ಲ! ಒಬ್ಬರಿಗಿಂತ ಮತ್ತೊಬ್ಬರು ಎಲ್ಲರಿಗಿಂತ ಮುಂದೆ ಬಂದು ಯಾವುದೋ ಕಾಲದಲ್ಲಿ ಹಳದಿ ಬಣ್ಣದಲ್ಲಿದ್ದು ಇಂದು ಮಾಸಿದ ಬಿಳಿ ಬಣ್ಣದ ಪಟ್ಟೆಯ ಆಜುಬಾಜಿನಲ್ಲಿ ನಿಂತು ಮುಂದೆ ಕಡಿಮೆಯಾಗುತ್ತಿರುವ ಡಿಜಿಟಲ್ ಸಂಖ್ಯೆಗಳನ್ನ ಮನದಲ್ಲೇ ಎಣಿಸುತ್ತಾ ಇನ್ನೆನು ಹತ್ತು, ಒಂಭತ್ತು, ಎಂಟು...ಬರುತ್ತಿದ್ದಂತೆಯೇ ತಮ್ಮ ತಮ್ಮ ವಾಹನಗಳನ್ನ ಆರಂಭಿಸಿ, ಗೇರ್ ಬದಲಾಯಿಸಿ, ಚೂರು-ಚೂರೇ ತಮ್ಮ ವಾಹನವನ್ನು ಮುಂದೆ ಓಡಿಸಿ, ಇನ್ನೇನು ಐದು, ನಾಲ್ಕು, ಮೂರು ಬರುತ್ತಿದ್ದಂತೆಯೇ ಕಣ್ಣಿನಿಂದ ದೂರ ಹೋಗುವ ಬೇಕಾದಷ್ಟು ಮುಂದಾಳುಗಳಿಗೇನೂ ಕಡಿಮೆಯಿರಲಿಲ್ಲ.

ನಮ್ಮ ಡ್ರೈವರ್‌ ಅನ್ನು ಕೇಳಿದೆ 'ಇವರೆಲ್ಲ ಇಷ್ಟೊಂದು ಆತುರವಾಗಿ ಎಲ್ಲಿಗ್ ಹೋಗ್ತಾರೆ?', ಅವನ ಉತ್ತರ, 'ಅದೇನ್ ಮಾಡ್ತಾರೋ ಗೊತ್ತಿಲ್ಲ, ಯಾವಾಗ್ ನೋಡಿದ್ರೂ ಹೀಗೇನೇ, ಇನ್ನು ರಾತ್ರಿ ಆಗ್‌ತಿದ್ದ ಹಾಗೆ ಇವರ ಆಟ ಇನ್ನೂ ಜೋರು' ಎಂದು ಸುಮ್ಮನಾದ.

ಏರ್‌ಪೋರ್ಟ್‌ನಿಂದ ಮನೆಗೆ ಮೊಟ್ಟ ಮೊದಲನೇ ಬಾರಿಗೆ ಹೋಗುತ್ತಿದ್ದಾಗಲಂತೂ ಒಂದೆರಡು ಬಾರಿ ಹೃದಯವೇ ಬಾಯಿಗೆ ಬರೋ ಘಟನೆಗಳು ನಡೆದು ಹೋದವು, ತಮ್ಮ-ತಮ್ಮ ಎದುರಿನ ಟ್ರಾಫಿಕ್ ಲೈಟ್ ಕೆಂಪಿದ್ದರೂ ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲರೂ ಮುನ್ನುಗ್ಗುವವರೇ, ಇನ್ನೇನು ಸ್ವಲ್ಪದರಲ್ಲೇ ಆಗುವ ಅಪಘಾತಗಳನ್ನು ತಪ್ಪಿಸಿಕೊಂಡಿದ್ದಾಯಿತು ಎಂದು ನಮ್ಮ ಡ್ರೈವರ್ ಶಾಪ ಹಾಕುತ್ತಿದ್ದಂತೆ, ಕೆಂಪು ದೀಪವಿರುವಾಗ ಹೋದರೆ ಪಕ್ಕದಿಂದ ವೇಗವಾಗಿ ಬರುವ ಗಾಡಿಗಳಿಗೆ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು, ಹಾಗೆ ಮಾಡದೇ ಹೋದರೆ ಹಿಂದುಗಡೆಯಿಂದ ಬಂದು ಗುದ್ದುವವರೋ ಅಥವಾ ಹಾರ್ನ್ ಹಾಕುವವರಿಂದಲೋ ತಪ್ಪಿಸಿಕೊಳ್ಳಬೇಕು ಎಂದು ಕಸಿವಿಸಿಗೊಂಡಿದ್ದವನನ್ನು 'ಇನ್ನು ಒಂದು ವಾರ ಇಲ್ಲೇ ಇದ್ದು ಬೆಂಗಳೂರಿನಲ್ಲಿ ಡ್ರೈವ್ ಮಾಡೋದನ್ನ ಕಲಿತುಕೋ' ಎಂದುದ್ದಕ್ಕೆ 'ನಮ್ಮೂರಿನಲ್ಲಿ ರಸ್ತೆಗಳು ಹೇಗಿದ್ದರೂ ಅದೇ ನಮಗೆ ಸ್ವರ್ಗ' ಎನ್ನುವುದೇ?

ಕಾರಿನ ಕಿಟಕಿ ತೆರೆದಿದ್ದರಿಂದ ಹೊರಗಿನಿಂದ 'ನಮ್ಮ ದೇಶದಲ್ಲಿ ಬೇಕಾದಷ್ಟು ನಾಯಕರಿದ್ದಾರ್ರೀ, ಆದರೆ ಅವರೆಲ್ಲ ಒಂದೇ ಸಾಲಿನಲ್ಲಿ ನಡೀತಾರೆಯೇ ವಿನಾ ಒಬ್ಬೊರನೊಬ್ಬರು ಜಪ್ಪಯ್ಯಾ ಅಂದ್ರೂ ಫಾಲೋ ಮಾಡೋದಿಲ್ಲ...' ಎಂದು ಹೊರಗಿನಿಂದ ಧ್ವನಿಯೊಂದು ಒಳಗೆ ಬಂತು, 'ಅದೇಕೆ ಹಾಗೆ?' ಎಂದು ನನ್ನ ಮನದಲ್ಲೇ ಪ್ರಶ್ನೆ ಹಾಕಿಕೊಂಡಿದ್ದನ್ನು ಅರ್ಥ ಮಾಡಿಕೊಂಡೋರ ಹಾಗೆ ಅದರ ಹಿಂದೆ ಉತ್ತರವೊಂದನ್ನು ಎಸೆಯೋದೇ! 'ಯಾರೂ ಯಾರನ್ನೂ ಫಾಲೋ ಮಾಡಬಾರದು ಅನ್ನೋ ಆಜ್ಞೆ ಏನೂ ಆಗಿಲ್ಲ, ಆದರೆ ಅಂಥ ಮುಂದಾಳುಗಳ ಕೊರತೇ ಇರೋದ್ರಿಂದ ಒಬ್ಬೊರಿಗೊಬ್ಬರು ಅಡ್ಜಷ್ಟ್ ಮಾಡಿಕೊಂಡು ಎಲ್ರೂ ಒಂದೇ ನೇರದಲ್ಲಿ ನಡೀತಾರೆ ಸಾರ್' ಎಂದು ಹೇಳಿದ ಧ್ವನಿ ಅದೃಶ್ಯವಾಯಿತು...ಯಾರದು, ಯಾರದು ಎಂದು ಎಷ್ಟೇ ಬಗ್ಗಿ ನೋಡಿದರೂ ಕಪ್ಪು ಮುಚ್ಚಿದ ಕಿಟಕಿ ಗಾಜುಗಳು ತಮ್ಮಿಂದ ಹೊರಗೆ ನೋಡಬಿಡಲಿಲ್ಲ, ಈ ಕಪ್ಪು ಮುಚ್ಚಿದ ಕಿಟಕಿಗಳು ಒಂದು ರೀತಿ ಕಾರಿಗೆ ಬುರುಕಾ ತೊಡಿಸಿ ಹೊರಗಿನಿಂದ ಒಳಗೆ ಹಾಗೂ ಒಳಗಿನಿಂದ ಹೊರಬರುವ ಹೋಗುವ ಅಲೋಚನೆಗಳಿಗೂ ಕಡಿವಾಣ ಹಾಕಿದ್ದಂತೆ ತೋರಿತು.

'ಏನ್ ಸಾರ್ ಅಮೇರಿಕದ ಬಗ್ಗೆ ಯೋಚಿಸ್ತಾ ಇದ್ದೀರಾ' ಎಂದು ನಮ್ಮ ಡ್ರೈವರ್ ಕೇಳಿದ್ದಕ್ಕೆ, 'ಇಲ್ಲಾ ಮಾರಾಯಾ, ಅಮೇರಿಕದ ಬಗ್ಗೆ ಯೋಚಿಸೋದಕ್ಕೆ ನನ್ನ ಬಳಿ ಸದ್ಯಕ್ಕೆ ಏನೂ ಇಲ್ಲ' ಎಂದಿದ್ದನ್ನು ಅವನು ಜೀರ್ಣಿಸಿಕೊಳ್ಳಲು ಸ್ವಲ್ಪ ಹೊತ್ತು ಬೇಕಾಯಿತು.

ನಾನು ಹಳೆಯ ಪ್ರಶ್ನೆಯ ಜಾಡೊಂದನ್ನು ಹಿಡಿದು ನಮ್ಮ ಡ್ರೈವರ್ ತಲೆ ತಿನ್ನ ತೊಡಗಿದೆ, 'ಹೌದು, ಇಷ್ಟೊಂದು ಅರ್ಜೆಂಟಾಗಿ ಹೋಗ್ತಾ ಇದ್ದಾರಲ್ಲ, ಅದೂ ಎಲ್ಲ ರೂಲ್ಸು ರೆಗ್ಯುಲೇಷನ್ನುಗಳನ್ನೂ ಗಾಳಿಗೆ ತೂರಿ, ಅವರೆಲ್ಲ ಎಲ್ಲಿಗೆ ಹೋಗ್ತಾರೆ, ಏನೇನ್ ಮಾಡ್ತಾರೆ?', ಕಾರಿನ ಒಳಗಾಗಲಿ ಹೊರಗಾಗಲೀ ಈ ಬಾರಿ ಯಾವುದೇ ಧ್ವನಿ ಬಾರದಿದ್ದುದರಿಂದ ನಾನೇ ಮುಂದುವರೆಸಿದೆ, 'ಇವರೆಲ್ಲ ಟೈಮನ್ನ ಉಳಿಸೋರೋ, ಬೆಳೆಸೋರೋ?' ಈ ಮಾತನ್ನ ಕೇಳಿ ನಮ್ಮ ಡ್ರೈವರ್ರಿಗೆ ಸ್ವಲ್ಪ ಸಿಟ್ಟು ಬಂದಿತೆಂದು ಕಾಣುತ್ತದೆ, ಟೈಮು ಉಳಿಸೋದಲ್ಲ, ಬೆಳೆಸೋದೂ ಅಲ್ಲ, ಅವರ ಕೈಯಲ್ಲಿ ಇರೋ ವಾಹನವನ್ನು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡಿಸೋದು, ವೇಗದಲ್ಲಿದೆ ಮಜಾ, ದಿನಾ ನಿಧಾನವಾಗಿ ಹೋಗಿ ಬಂದ್ರೆ ಅದರಲ್ಲೇನಿದೆ ಗಮ್ಮತ್ತು?'

ಪ್ರಶ್ನೆಗೆ ಮತ್ತೊಂದು ಪ್ರಶ್ನೆ ಉತ್ತರವಾಗಿ ಬಂದಿದ್ದು ಅಷ್ಟೊಂದು ಸಮಂಜಸವೆಂದು ಅನಿಸದಿದ್ದರೂ 'ನಾಯಕರೇನೋ ಮುಂದೆ ವೇಗವಾಗಿ ಹೋಗ್ತಾರೆ, ಅವರ ಹಿಂಬಾಲಕರಿಗೂ ಅದೇ ವೇಗ ಇರಬೇಕಲ್ಲ? ನಾಯಕರೇನೋ ಹೋಗಿ ಮರೆಯಾಗಿಬಿಟ್ಟರೆ ಹಿಂಬಾಲಿಸುವವರಿಗೆ ಅವರ ಜಾಡು ಸುಳಿಯೋದೆಂತು!'

'ಅವರು ಎಷ್ಟೇ ವೇಗವಾಗಿ ಹೋದ್ರೂ ಎಲ್ಲಿಗೂ ಹೋಗೋದಿಲ್ಲ, ನಾವು ಮುಂದಿನ ಟ್ರಾಫಿಕ್ ಲೈಟ್ ಹತ್ರ ಹೋದ್ರೆ ಅಲ್ಲೇ ಎಣಿಸ್ಕೊಂಡು ಬಿದ್ದಿರ್ತಾರೆ ನೋಡಿ ಬೇಕಾದ್ರೆ' ಎಂದು ಓಪನ್ ಆಹ್ವಾನ ಕೊಟ್ಟ...ಅಷ್ಟರಲ್ಲಿ ಹೊರಗಿನಿಂದ ಇನ್ನೊಮ್ಮೆ ಅದೇ ಧ್ವನಿ ಮತ್ತೆ ಬಂತು '...ನಾನು ಆಗ್ಲೇ ಹೇಳ್ಲಿಲ್ವಾ, ನಮ್ಮ ನಾಯಕರೆಲ್ಲ ಒಂದೇ ಸಾಲಿನಲ್ಲಿ ನಡೆಯೋರು, ಗುಂಡಿಗೆ ಬಿದ್ರೂನೂ ಒಂದೇ ಸರ್ತಿ ಬಿದ್ದು ಹೋಗ್ತಾರೆ, ವೇಗಾ-ಗೀಗ ಏನೂ ಇಲ್ಲ, ಎಲ್ಲಾ ಆಮೇ ವೇಗವೆ!'

'ಎಲಾ ಇವನ, ನಮ್ ದೇಶ್ದಲ್ಲೂ ಸರಳ ರೇಖೆಯಲ್ಲಿ ಸಾಗೋ ನಾಯಕರಿದ್ದಾರೆಯೇ? ವೇಗದ ಕಥೆ ಹಾಗಿರಲಿ, ನಾಯಕರಿದ್ದಾರಲ್ಲ ಅಷ್ಟೇ ಸಾಕು...' ಎನ್ನುಕೊಳ್ಳುತ್ತಿರುವಾಗ...

'ಯಾವ ನಾಯಕರು?...ನಿಮಗಿನ್ನೂ ನಿದ್ದೇ ಸರಿಯಾಗಿ ಆದ ಹಾಗಿಲ್ಲ, ಸುಮ್ನೇ ಬಡಬಡಿಸ್ತಾ ಇದ್ದೀರಾ' ಎಂದೆನ್ನಬೇಕೆ ನಮ್ಮ ಡ್ರೈವರ್, ನಾನು 'ಸರಿ, ಮುಂದೆ ನಡಿ' ಎನ್ನುವಲ್ಲಿಯವರೆಗೆ ಹಸಿರು ಸಿಗ್ನಲ್ಲಿನಲ್ಲಿಯೂ ಗಾಡಿಯನ್ನು ನಿಲ್ಲಿಸಿ ಬಿಟ್ಟಿದ್ದ, ಸದ್ಯ ಹಿಂದಿನಿಂದ ಬಂದು ಯಾರೂ ಗುದ್ದಲಿಲ್ಲ ಅಷ್ಟೇ!

Wednesday, January 17, 2007

It is good to be back...

'ಅಂತರಂಗ'ದಲ್ಲಿ ಏನನ್ನೂ ಬರೆದಿಲ್ಲ ಸುಮಾರು ನಾಲ್ಕು ವಾರಗಳಿಂದ ಎಂದುಕೊಂಡಾಗಲೆಲ್ಲ ಏನೋ ಒಂದು ರೀತಿಯ ಕಳವಳವಾಗುತ್ತಿದ್ದುದಂತೂ ನಿಜ, ಆದರೆ ಹಾಗೆ ಮಾಡಿದ್ದರಿಂದ ಬಹಳಷ್ಟು ಉಪಕಾರವಂತೂ ಆಗಿದೆ, ನನ್ನ ಆಲೋಚನಾ ಸರಣಿಗಳಲ್ಲಿ ಹಲವಾರು ಒರತೆಗಳು ಜೀವ ಪಡೆದುಕೊಂಡಿವೆ ಹೀಗೆ ಎಷ್ಟೋ ಧನಾತ್ಮಕ ಬದಲಾವಣೆಗಳಿಗೆ ಕಾರಣವಾದ ನನ್ನ ಭಾರತದ ಪ್ರವಾಸವನ್ನು ಎಷ್ಟು ಸ್ಮರಿಸಿದರೂ ಕಡಿಮೆಯೇ!

ಹಲವಾರು ನೆಲೆಗಳಲ್ಲಿ ನನ್ನನ್ನು ನಾನು ಪ್ರಶ್ನಿಸಿಕೊಳ್ಳುವಂತೆ ಹಾಗೂ ಹಲವಾರು ಮುಖಗಳನ್ನು ಎದುರುಗೊಂಡಂತೆಲ್ಲ ಹೊಸ ಹೊಸ ದೃಷ್ಟಿ ಕೋನಗಳನ್ನು ನನ್ನಲ್ಲಿ ಹುಟ್ಟುವಂತೆ ಮಾಡುವಷ್ಟು ಪರಿಣಾಮಕಾರಿಯಾಗುವಂತದ್ದು ಭಾರತದ ಪ್ರವಾಸ. ವರ್ಷಗಳು ಉರುಳಿದಂತೆ ಬದಲಾಗುವ ನನ್ನ ವಿಚಾರ ಸರಣಿಗಳು, ಜೊತೆಯಲ್ಲಿ ಸಾಕಷ್ಟು ಕ್ರಾಂತಿಯಲ್ಲಿ ಮಿಂದು ಪುಳಕಿತಗೊಳ್ಳುತ್ತಿರುವಂತೆ ಕಂಡುಬಂದ ಜನರು ಇವನ್ನೆಲ್ಲ ಕುರಿತು ಯೋಚಿಸುತ್ತಾ ಹೋದರೆ ಎಷ್ಟು ಬರೆದರೂ ಕಡಿಮೆಯೆ. ಹೀಗೇ ಮುಂಬರುವ ದಿನಗಳಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಬರೆಯಲು ಪ್ರಯತ್ನಿಸುತ್ತೇನೆ.

ಒಟ್ಟಿನಲ್ಲಿ, ನನ್ನ ಪ್ರಕಾರ ಭಾರತದಲ್ಲಿನ ಇತ್ತೀಚಿನ ಬೆಳವಣಿಗೆಗಳು ಆರೋಗ್ಯಕರವಾದವು, ಅಲ್ಲಿನ ಪ್ರಚಂಡ ಬೆಳವಣಿಗೆ ಒಂದಲ್ಲ ಒಂದು ದಿನ ಭಾರತವನ್ನು ವಿಶ್ವದ ಅಗ್ರಮಾನ್ಯ ದೇಶವನ್ನಾಗಿ ಮಾಡುವುದರಲ್ಲಿ ಸಂಶಯವೇನಿಲ್ಲ, ಆದರೂ ಈ ಕೆಳಗಿನ ಅಂಶಗಳು ನನ್ನನ್ನು ಬಹಳವಾಗಿ ಯೋಚಿಸುವಂತೆ ಮಾಡಿವೆ:
- ಜನರಲ್ಲಿ ಅತಿಯಾದ ಮೊಬೈಲ್/ಸೆಲ್ ಫೋನ್ ಬಳಕೆ
- ಎಲ್ಲ ಕ್ರಾಂತಿಗೂ ಮುಖ್ಯವಾದ ಜನರ ಮನಸ್ಥಿತಿಯಲ್ಲಿನ ನಿಧಾನವಾದ ಬದಲಾವಣೆಗಳು
- ದಿನದಿನಕ್ಕೂ ಮೋಸ ಹೋಗುವವರಲ್ಲಿ, ಮೋಸ ಮಾಡುವವರಲ್ಲಿ ಕಾಣಿಸಿದ ಹೆಚ್ಚಳ
- ಸರಿಯಾದ ನಾಯಕರ, ಮುತ್ಸದ್ದಿಗಳ, ದಾರ್ಶನಿಕರ ಹಾಗೂ ವಿಚಾರವಂತರ ಕೊರತೆ
- ಸರ್ವವ್ಯಾಪಿಯಾಗಿ ಕಂಡುಬರುವ ಅನಗತ್ಯ ಪೈಪೋಟಿ
- ಪ್ರಾದೇಶಿಕ ಭಾಷೆಗಳ ಅಭಾವ ಹಾಗೂ ಅಳಿವು-ಉಳಿವು
- ಉಳ್ಳವರ ನಡುವಿನ ಅಂತರ

ಬೆಂಗಳೂರಿನಲ್ಲಿನ ಐದಾರು ಕನ್ನಡ ಎಫ್, ಎಮ್. ರೇಡಿಯೋ ಸ್ಟೇಷನ್‌ಗಳಿಂದ ಹಿಡಿದು ನಾನು ಬಂದಿಳಿದ ಏರ್‌ಪೋರ್ಟುಗಳವರೆಗೆ ಬರೆಯಲು ಬಹಳಷ್ಟಿವೆ...ಕಾದು ನೋಡಿ.