Thursday, April 26, 2018

ಚಿತ್ರಗಳ ನೆನಪು

ನಮ್ಮ ಹಳೆ ಕ್ಯಾಮೆರಾಗಳನ್ನು ಈಗ ಯಾರೂ ಕೇಳೋದೂ ಇಲ್ಲ, ನೋಡೋದೂ ಇಲ್ಲ.  ನಮ್ಮೆಲ್ಲರ ಮನೆಗಳಲ್ಲಿ ಕ್ಯಾಮೆರಾಗಳದ್ದೇ ಒಂದು ಸೆಕ್ಷನ್ ಅಂತ ಹುಟ್ಟುಹಾಕಿದರೆ ಅದೇ ಒಂದು ಮ್ಯೂಸಿಯಮ್ ಆಗಿ ಬಿಡಬಹುದೇನೋ ಎಂದು ಒಮ್ಮೊಮ್ಮೆ ಹೆದರಿಕೆ ಆಗುತ್ತೆ.  ಏಕೇ ಅಂದ್ರೆ, ಹತ್ತು ವರ್ಷಗಳ ಹಿಂದಿನ ಟೆಕ್ನಾಲಜಿ, ಅಂದಿನ ಕ್ಯಾಮೆರಾಗಳು ಹತ್ತು ವರ್ಷಗಳ ನಂತರ ಯಾವ ಪ್ರಯೋಜನಕ್ಕೂ ಬಾರದೇ ಹೋಗುವಂತಾಗಿ ಹೋಗೋದು.  ಹತ್ತು ವರ್ಷ ಬಹಳ ಹೆಚ್ಚೇ ಆಯಿತು, ಈ ಮೊಬೈಲು ಫೋನುಗಳಲ್ಲಿ ಕ್ಯಾಮೆರಾಗಳು ಬಂದ ಮೇಲಂತೂ ಪ್ರತೀ ಎರಡೆರಡು ವರ್ಷಗಳಿಗೊಮ್ಮೆ ಕ್ಯಾಮೆರಾಗಳಲ್ಲಿ ಹೊಸತೇನಾದರೊಂದು ಬಂದೇ ಬಂದಿರುತ್ತದೆ.  ಒಮ್ಮೆ ಈ ಹೊಸ ಕ್ಯಾಮೆರಾಗಳಿರೋ ಮೊಬೈಲು ಫೋನುಗಳನ್ನು ಬಳಸಿದರೆಂದರೆ ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಇಲ್ಲ!

ಕ್ಯಾಮೆರಾಗಳು ಎಂದಾಕ್ಷಣ, ಅವು ಉತ್ಪಾದಿಸುವ ಫೋಟೋಗಳು ಮತ್ತು ವಿಡಿಯೋಗಳು ನೆನಪಿಗೆ ಬರುತ್ತವೆ.  ಆದರೆ ನಾವು ತೆಗೆಯುವ ಹೆಚ್ಚಿನ ಮಟ್ಟಿನ ಫೋಟೋಗಳು ಮತ್ತು ವಿಡಿಯೋಗಳನ್ನು ಮತ್ತೊಮ್ಮೆ ಪರೀಕ್ಷಿಸಿ ನೋಡುತ್ತೇವೆಯೋ, ಅವುಗಳನ್ನು ಪರಿಶೀಲಿಸುತ್ತೇವೆಯೇ, ಅವುಗಳನ್ನು ಹಂಚಿಕೊಳ್ಳುತ್ತೇವೆಯೇ ಎಂದು ಕೇಳಿಕೊಂಡಾಗ ನಮ್ಮೆಲ್ಲರ ಅಸಲಿ ಫೋಟೋ/ವಿಡಿಯೋಗಳ ಮೋಹ ಗೊತ್ತಾಗುತ್ತದೆ.  ನಮ್ಮ ಸುತ್ತ ಮುತ್ತಲಿನಲ್ಲಿ ಎಲ್ಲ ಥರದ ಜನರೂ ಕಾಣಸಿಗುತ್ತಾರೆ - ವಿರಳವಾಗಿ ಫೋಟೋ ತೆಗೆಯುವವರಿಂದ ಹಿಡಿದು, ಕಂಡದ್ದನ್ನೆಲ್ಲ ಫೋನಿನ ಕ್ಯಾಮೆರಾದಲ್ಲಿ ಗೋಚಿಕೊಳ್ಳುವವರವರೆಗೆ.   ಆದರೂ, ಕಾಯದೇ ಕೆನೆಕಟ್ಟಲಿ ಎನ್ನುವ ಇಂದಿನ ವೇಗದ ತಲೆಮಾರಿಗೆ ತಕ್ಕಂತೆ ಇಂದಿನ ಕ್ಯಾಮೆರಾಗಳು ಕೂಡ ಒಗ್ಗಿಕೊಂಡಿವೆ.  ಹಾಗಂತ ಇಂದಿನ ಫೋನಿನ ಕ್ಯಾಮೆರಾಗಳನ್ನು ತೆಗಳುವಂತಿಲ್ಲ, ಎಂತಹ ಅತಿರಥ ಮಹಾರಥರು ಬಳಸುವಂತ ಘನಂದಾರಿ ಕ್ಯಾಮೆರಾಗಳಿಗಿಂತ ಈ ಚಿಕ್ಕ ಹಾಗೂ ಚೊಕ್ಕ ಕ್ಯಾಮರಾಗಳು ಮಾಡುವ ಕೆಲಸದಲ್ಲಿ ಒಂದು ರೀತಿಯ ತಲ್ಲೀನತೆ ಇದೆ, ಕಂಡಿದ್ದನ್ನು ಕಂಡ ಹಾಗೆ ಹೇಳುವ ಜಾಣ್ಮೆ ಇದೆ.

ಮೊನ್ನೆ ಒಂದಿಷ್ಟು ಹೊತ್ತು ಹಳೇ ಫೋಟೋಗಳನ್ನು ಹರವಿಹಾಕಿ ಕುಳಿತುಕೊಂಡು ಹಿಂದಿನ ಚಿತ್ರಗಳನ್ನು ಅವಲೋಕಿಸುತ್ತಾ ಇದ್ದ ಹಾಗೆ ಅದರ ಜೊತೆಗೆ ಒಂದು ನನ್ನ ಮನಪಟಲದಲ್ಲಿ ಹೊಸದೊಂದು ಪ್ರಪಂಚವೇ ತೆರೆದುಕೊಂಡಿತು.  ಪರಾಪರ ಕಾರ್ಯಗಳಲ್ಲಿ ತೆಗೆದ ಅನೇಕ ಚಿತ್ರಗಳು ಯಾವೊಂದು ಭಾವನೆಗಳ ಉನ್ಮಾದತೆಯನ್ನೂ ಹೊರತರಲಿಲ್ಲ, ಬದಲಿಗೆ ಎಲ್ಲ ಚಿತ್ರಣಗಳ ಮೂಕ ರಾಯಭಾರಿಗಳಾಗಿ ತಮ್ಮನ್ನು ತಾವು ತೆರೆದುಕೊಂಡವು.  ಅವುಗಳು, ಹಳೆಯದ್ದೆಲ್ಲ ಒಳಿತು ಎಂದು ಹೇಳುವ ಮರ್ಮವನ್ನೂ ಸೂಚಿಸಲಿಲ್ಲ, ಬದಲಿಗೆ ಹಳೆಯದು ಹೀಗಿತ್ತು ಎಂಬ ವಸ್ತುನಿಷ್ಠ ಪ್ರತಿಕ್ರಿಯೆಯನ್ನು ಮೂಡಿಸಿದವು.  ಹೀಗೆ ಹಳೆಯ ಫೋಟೋಗಳನ್ನು ನೋಡುತ್ತಾ ಹೋದ ಹಾಗೆ, ನಾವೆಲ್ಲ ವಾರಗಳು, ವರ್ಷಗಳು, ದಶಗಳನ್ನು ಕಳೆದು ನಮ್ಮ ಮನಸ್ಸಿನ ಹೊರಗೆ ಭೌತಿಕವಾಗಿ ಅನೇಕ ಚಿತ್ರಗಳನ್ನು ಗುಡ್ಡೆಹಾಕಿಕೊಳ್ಳುವ ಪ್ರಕ್ರಿಯೆ ಒಂದು ನಮ್ಮನ್ನೇ ಮೀರಿ ಬೆಳೆದು ನಿಂತರೆ ಎಂದು ಸೋಜಿಗವೂ ಆಯಿತು!

ಆದ್ಯಾವ ಕ್ಯಾಮೆರವೇ ತೆಗೆದ ಚಿತ್ರವಿರಲಿ, ಅಂತಹ ಸಹಸ್ರಾರು ಚಿತ್ರಗಳನ್ನು ನೀವು ಅದೆಷ್ಟೋ ದೊಡ್ಡ ಸ್ಟೋರೇಜಿನಲ್ಲಿ ಇಟ್ಟಿರಲಿ, ಆ ಚಿತ್ರವನ್ನು ಅಲ್ಲಿಂದ ಹೊರತೆಗೆದು ಅದರ ವಿವರಗಳನ್ನು ಪಟ್ಟಂತ ಹೇಳುವಲ್ಲಿ ನೀವು ಸೋತು ಹೋಗುತ್ತೀರಿ.  ಆದರೆ, ಅದೇ ನಮ್ಮ ನೆನಪಿನಲ್ಲಿ ಮೂಡಿ ಅಲ್ಲೇ ವಾಸ್ತವ್ಯ ಹೂಡಿದ ಚಿತ್ರಗಳಾಗಲೀ, ನೆನಪುಗಳಾಗಲೀ, ಕೆಲವೊಂದು ವಿಶೇಷ ವಾಸನೆಗಳಾಗಲೀ ಎಂದೆಂದೂ ನಾವು ಕರೆದಾಗ ಕ್ಷಣಾರ್ಧದಲ್ಲಿ ಬರುತ್ತವೆ!  ಇಷ್ಟು ಒಳ್ಳೆಯ ಎಫಿಷಿಯನ್ಸಿಯಲ್ಲಿ ಕೆಲಸ ಮಾಡುವ ನಮ್ಮ ಮಿದುಳು ಪ್ರಪಂಚದ ಎಲ್ಲ ಸೂಪರ್ ಕಂಪ್ಯೂಟರಿಗಿಂತಲೂ ಹೆಚ್ಚಿನದ್ದು ಎಂದು ಖುಷಿಯಾಯಿತು.  ಅಬ್ಬಾ, ಅದೇಷ್ಟು ಬಗೆಯ ವಿವರಗಳು, ಎಷ್ಟು ಬೇಗನೆ ಬಂದುಬಿಡುತ್ತವೆ.  ಉದಾಹರಣೆಗೆ: ಮಲ್ಲಿಗೆಯ ಸುವಾಸನೆ, ನಿಮಗೆ ಬೇಕಾದವರ ನೆನಪುಗಳು, ನೀವು ಹಿಂದೆ ವಾಸವಾಗಿದ್ದ ಮನೆ, ನಿಮ್ಮ ಅಚ್ಚು ಮೆಚ್ಚಿನ ಪುಸ್ತಕ, ಪೆನ್ನು, ಗೆಳೆಯ, ಗೆಳತಿ, ನಿಮ್ಮ ಊರಿನ ರಸ್ತೆಗಳು, ನಿಮ್ಮ ಊರಿನ ಅಕ್ಕ-ಪಕ್ಕದ ಊರುಗಳು, ದೇವಸ್ಥಾನ, ಜಾತ್ರೆ, ನಿಮ್ಮ ಸಹಪಾಠಿಗಳು....ಹೀಗೆ ಪಟ್ಟಿ ಮುಂದುವರೆಯುತ್ತಾ ಹೋದಂತೆ, ಎಲ್ಲವೂ ಏಕಕಾಲಕ್ಕೆ ನಿಮ್ಮ ಮನ ಪಟಲದಲ್ಲಿ ಮೂಡುವುದನ್ನು ನೀವು ಕಾಣಬಹುದು.  ಹಾಗೆಯೇ, ಈ ಮನಸ್ಸಿನ್ನ ಓಟಕ್ಕೆ ಯಾವ ಮಿತಿಗಳೂ ಇಲ್ಲ, ಒಂದು ಊರಿನಿಂದ ಮತ್ತೊಂದು ಊರಿಗೆ, ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ನೆಗೆಯುವುದರಲ್ಲಿ ಈ ಮನಸ್ಸು ನಿಸ್ಸೀಮ.

ನಮ್ಮ ಮನಸ್ಸು ಮತ್ತು ಮಿದುಳು ಅದು ಹೇಗೆ ಚಿತ್ರಗಳನ್ನು ಆರ್ಗನೈಜ್ ಮಾಡುತ್ತವೆಯೋ, ಆದರೆ ನಾವು ಈ ಮೊಬೈಲು ಫೋನುಗಳಲ್ಲಿ ತೆಗೆದ ಚಿತ್ರಗಳನ್ನು ಹಾಗೂ ಅವರಿವರು ನಮ್ಮ ಜೊತೆ ಹಂಚಿಕೊಂಡ ಚಿತ್ರಗಳನ್ನು ಆರ್ಗನೈಜ್ ಮಾಡಿಟ್ಟುಕೊಳ್ಳುವಲ್ಲಿ ಹೊಸದೊಂದು ವ್ಯವಸ್ಥೆಯೇ ಬೇಕಾಗುತ್ತದೆ.  ಅಕಸ್ಮಾತ್, ಈ ಚಿತ್ರಗಳೇನು ಮಹಾ ಎಂದು ಹಾಗೆಯೇ ಬಿಟ್ಟರೆ ’ಎಲ್ಲವೂ ಇದ್ದೂ, ಏನೂ ಇಲ್ಲದ ಪರಿಸ್ಥಿತಿ’ ಎದುರಾಗುತ್ತದೆ.  ಬೇಕಾದ ಮುಖ್ಯ ವಿಷಯ ಅಥವಾ ವಸ್ತು ಬೇಡವಾದಾಗ ಸಿಗುತ್ತದೆ.  ನಮ್ಮ ನಿಜವಾದ ಬುದ್ಧಿಮತ್ತೆಗೆ ಮಿಗಿಲಾದ ಈ ಚಿತ್ರಗಳ ಸಂಸ್ಕರಣೆ ಇನ್ನು ಕೃತಕವಾದ ಬುದ್ಧಿಮತ್ತೆ (artificial intelligence) ಇಂದಲೇನಾದರೂ ಬದಲಾಗುತ್ತದೆಯೇನೋ ಎಂದು ಕಾದು ನೋಡಬೇಕಾಗಿದೆ.  ’ನನಗೆ ಈ ರೀತಿಯ ಚಿತ್ರಬೇಕಾಗಿದೆ, ಹುಡುಕು’ ಎಂದು ಹೇಳಿದಾಕ್ಷಣ ಆ ಚಿತ್ರ ನಮ್ಮ ಫೋನು ಅಥವಾ ಕಂಪ್ಯೂಟರ್ ಪರದೆ ಮೇಲೆ ಬಂದು ನಿಲ್ಲುವ ಕಾಲವೇನೂ ದೂರವಿದ್ದಂತಿಲ್ಲ.

ಬೂಮರ್ಸ್ ಜನರೇಷನ್‌ನ ಹಿರಿಯರಿಂದ ಹಿಡಿದು ಇಂದಿನ ಜನರೇಷನ್-Z ವರೆಗೆಇನ ಮಕ್ಕಳು ಸಹಾ ಫೋಟೋಗಳನ್ನು ಕ್ಲಿಕ್ಕಿಸುತ್ತಲೇ ಇದ್ದಾರೆ, ದಿನೇ-ದಿನೇ ಅವುಗಳ ಸಂಖ್ಯೆ ಬೆಳೆಯುತ್ತಿದೆ.  ಹತ್ತಿರವಿದ್ದೂ ದೂರ ನಿಲ್ಲುವ ನಮ್ಮತನ ಒಂಟಿಯಾಗದಿರುವಂತೆ ನಾವು ನಾವು ಚಿತ್ರಗಳನ್ನು ನೆನಪಿಸಿಕೊಳ್ಳುತ್ತೇವೆ.  ಕೆಲವರು ನೆನಪಿಗೋಸ್ಕರ ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತಾರೆ, ಇನ್ನು ಕೆಲವರು ಚಿತ್ರಕ್ಕೋಸ್ಕರ ಚಿತ್ರವನ್ನು ಕಲ್ಪಿಸಿಕೊಳ್ಳುತ್ತಾರೆ.  ಒಟ್ಟಿನಲ್ಲಿ, ಈ ಮೊಬೈಲು ಫೋನುಗಳ ದೆಸೆಯಿಂದ ಅಂತಹ ಚಿತ್ರಗಳಿಗೇನೂ ಕಡಿಮೆ ಇಲ್ಲ, ಆದರೆ ಈ ಚಿತ್ರಗಳ ಓವರ್‌ಲೋಡಿನಿಂದ ನಿಜವಾದ ನೆನಪಿನ ಪ್ರಮಾಣ ಕುಗ್ಗುತ್ತಿದೆಯೇನೋ ಎಂದು ಭಾಸವಾಗುತ್ತದೆ!

Friday, January 27, 2017

ಕಂಪನಿ ಹೆಸರು ಅಂದ್ರೆ...

S&P 500 ಕಂಪನಿಗಳ ಹೆಸರನ್ನು ಕುರಿತು ಸ್ವಲ್ಪ ಯೋಚಿಸತೊಡಗಿದರೆ ತಲೆ ಚಿಟ್ಟು ಹಿಡಿಯುತ್ತದೆ, ಅವುಗಳ ಹೆಸರಿನ ಮೂಲವೇನು, ಅವುಗಳನ್ನು ಎಲ್ಲೆಲ್ಲಿಂದ ಆಯ್ದು ತಂದಿರಬಹುದು ಎನ್ನುವುದು ಎಂಥವರನ್ನಾದರೂ ಆಳವಾಗಿ ಯೋಚಿಸುವಂತೆ ಮಾಡಬಹುದು.  ಉದಾಹರಣೆಗೆ Proctor & Gamble (P&G) ಕುರಿತು ಯೋಚಿಸಿದರೆ, Proctor ಎಂದರೆ ಎಕ್ಸಾಮಿನೇಷನ್ ಸೂಪರ್‌ವೈಸರ್, Gamble ಅಂದ್ರೆ ಜೂಜಾಡುವುದು ಅಂತ ಅರ್ಥ!  Johnson & Johnson (J&J) ಕುರಿತು ಯೋಚಿಸಿದರೆ, ಒಂದೇ ಹೆಸರನ್ನು ಎರಡು ಸರ್ತಿ ಏಕಾದ್ರೂ ತೋರಿಸ್ತಾರಪ್ಪಾ? ಸುಮ್ನೇ ಜಾಗ ವೇಸ್ಟ್ ಅನ್ನಿಸೋಲ್ಲ?  ಹೀಗೇ ಅನೇಕಾನೇಕ ಉದಾಹರಣೆಗಳು ನಿಮಗೆ ಸಿಗುತ್ತವೆ.

ಇನ್ನುGeneral ಎಂಬ ಸೀರೀಸ್‌ನಲ್ಲಿ ಶುರುವಾಗುವ ಕಂಪನಿಗಳ ಹೆಸರುಗಳೋ ಸಾಕಷ್ಟು ಸಿಗುತ್ತವೆ.  ಈ ಎಲ್ಲ ಕಂಪನಿಗಳು ತಯಾರಿಸುವುದು ಕೇವಲ "ಜೆನೆರಲ್" ಪ್ರಾಡಕ್ಟ್‌ಗಳನ್ನೋ ಅಥವಾ ಯಾವುದಾದರೂ ಸ್ಪೆಸಿಫಿಕ್ ಇವೆಯೋ ಎಂದು ಬೇಕಾದಷ್ಟು ಜನ ಸೈಂಟಿಸ್ಟುಗಳು ಈಗಾಗಲೇ ಸ್ಟಡಿ ಮಾಡಿರಬಹುದು.  ನಾವು ಯಾವುದೇ ಮೀಸಲಾತಿಗೆ ಸೇರಿರದ ಜನ, ಬರೀ ಜನರಲ್ ಕಂಪನಿಗಳ ಪ್ರಾಡಕ್ಟುಗಳನ್ನು ಮಾತ್ರ ಬಳಸುತ್ತೇವೆ ಎಂದು ಮುಂದಿನ ಸಾರಿ ಭಾರತಕ್ಕೆ ಹೋದಾಗ ನೀವು ನಿಮ್ಮ ಸೆಕ್ಯುಲರಿಸಂ ಅನ್ನು ಮೆರೆದು ನಿಮ್ಮ "ಜನರಲ್" ತನವನ್ನು ಸಾಬೀತು ಪಡಿಸಬಹುದು.  ನಮ್ಮ ಮನೆಯ ಲೈಟು ಬಲ್ಬುಗಳನ್ನು ತಯಾರಿಸಿದ್ದು ಜೆನರಲ್ ಎಲೆಕ್ಟ್ರಿಕಲ್ ಕಂಪನಿ, ನಾವು ಮುಂಜಾನೆ ಜೆನರಲ್ ಮಿಲ್ಸ್ ಸೀರಿಯಲ್ ತಿಂತೀವಿ.  ಜನರಲ್ ಫುಡ್ಸ್ ಪ್ರಾಡಕ್ಟುಗಳನ್ನೇ ಊಟಕ್ಕೆ ಬಳಸುತ್ತೇವೆ. ಹಾಗೂ ನಮ್ಮ ರಕ್ಷಣೆಗೆ ಜನರಲ್ ಡೈನಮಿಕ್ಸ್ ಪ್ರಾಡಕ್ಟುಗಳನ್ನೇ ಬಳಸ್ತೀವಿ.  ಹೇಗಿದೆ ಎಲ್ಲ ಜನರಲ್ ಮಯ?

ಮಣ್ಣಿನ ಮಡಕೆಯನ್ನು ಮಾಡಿ ಮಾರುವವ ಕುಂಬಾರ, ಹೂವನ್ನು ಮಾರುವವ ಹೂಗಾರನಾದರೆ, ಆಪಲ್‌ನ್ನ ಮಾರುವವ ಏನಾಗಬಹುದು? ಸೇಬುಗಾರ?!  ಕ್ಷಮಿಸಿ, ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನ್‌ಗಳಿಗೂ ಸೇಬು ಹಣ್ಣಿಗೂ ಎತ್ತಣಿಂದೆತ್ತ ಸಂಬಂಧ ನಮಗೆ ತಿಳಿಯದು...ಒಂದು ರೀತಿಯಲ್ಲಿ ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಇರುವ ಸಂಬಂಧದ ಹಾಗೆ ಏನಾದರೂ ನಿಗೂಢವಾದ ಸಂಬಂಧವಿದ್ದರೂ ಇರಬಹುದು... ನಮ್ಮ ಮನೆಯಲ್ಲೆಲ್ಲಾ ಆಪಲ್ ಮಯ... ದಿನಕ್ಕೊಂದು ಸೇಬು ಹಣ್ಣನ್ನು ತಿಂದು ದೂರವಿರುವ ಉಸಾಬರಿಯ ಸಹವಾಸವಲ್ಲವಿದು, ಜಾಗ್ರತೆ!  ಒಮ್ಮೆ ಮುಟ್ಟಿದರೆ ಮುಗಿಯಿತು, ಇನ್ನು ಸಾಯುವವರೆಗೂ ಮುಟ್ಟತ್ತಲೇ ಇರಬೇಕು... (ಅದು ಡಿವೈಸ್ ಆಗಿರಬಹುದು, ಅಥವಾ ವ್ಯಕ್ತಿಯಾಗಿರಬಹುದು, ಎರಡರಲ್ಲಿ ಒಂದು ಕೊನೆಯಾಗುವವರೆಗಿನ ಸಂಬಂಧವಿದು!)... ಎಂಥಾ ಗಾಢವಾದ ಸಂಬಂಧವಿರಬಹುದಿದು?  Only death can part this relationship!

ಇನ್ನು ಸೇಬುಹಣ್ಣಿನ (Apple) ಸಂಬಂಧ ಚಾಲ್ತಿಯಲ್ಲಿರುವಾಗಲೇ ನಮಗೆ ಹಳೆಯ Microsoftನ ಸಂಬಂಧ ನೆನಪಿಗೆ ಬರುತ್ತದೆ.  ನಮ್ಮ ಮನೆಯ ಕಿಟಕಿಗಳನ್ನು ಮಾಡಿದ್ದು ಈ ಮೈಕ್ರೋ ಸಾಫ್ಟ್ ಕಂಪನಿಯವರಲ್ಲದಿದ್ದರೂ ನಮ್ಮ ಕಂಪ್ಯೂಟರುಗಳಲ್ಲಿ ಹಲವಾರು ಕಿಟಕಿಗಳು ಸದಾ ತೆರೆದೇ ಇರುತ್ತವೆ.  ಇವು ಗಾಳಿ-ಬೆಳಕು ಬರುವ ಕಿಟಕಿಗಳಲ್ಲ...ಕಂಪ್ಯೂಟರ್ ಪ್ರಪಂಚಕ್ಕೆ ಸೂಕ್ಷ್ಮವಾಗಿ ಸಂಬಂಧ ಬೆರೆಸುವ ಕಿಂಡಿಗಳು.  ಆ ಕನಕದಾಸರ ಕಾಲದಲ್ಲಿ ’ಕನಕನ ಕಿಂಡಿ" ತೆರೆದ ಹಾಗೆ, ನಮ್ಮ ಕಾಲದಲ್ಲಿ ಮೈಕ್ರೋಸಾಫ್ಟ್ ಕಿಟಕಿಗಳು ಸದಾ ತೆರೆದೇ ಇರುತ್ತವೆ!

ಇನ್ನು ದಕ್ಷಿಣ ಅಮೇರಿಕಾದ ಮಹಾ ಕಾಡನ್ನು ನೆನಪಿಸುವ ಅಮೇಜಾನು. ತನ್ನ ಮಧ್ಯೆ ಅಸಂಖ್ಯಾತ ಸೊನ್ನೆಗಳನ್ನು ತನ್ನಷ್ಟಕ್ಕೆ ತಾನೇ ಸೃಷ್ಟಿಸಿಕೊಂಡು ಪ್ರತಿ ಶೋಧದ ಪುಟದ ಬುಡದಲ್ಲಿಯೂ ಉದ್ದಕ್ಕೆ ತನ್ನನ್ನು ತಾನು ಆವರಿಸಿಕೊಳ್ಳುವ ಗೂಗಲ್ಲು.  ಎಲ್ಲರ ಹಣೆಬರಹವನ್ನು ಅವರಿಂದಲೇ ಹೊರಸೂಸುವಂತೆ ಮಾಡಿ ಜನರು ಸೋಷಿಯಲ್ ಮೀಡಿಯಾ ಎಂಬ ನಾಮಪದದ ನೆಪದಲ್ಲಿ ಶುದ್ಧ ಸೋಂಬೇರಿಗಳಾಗುವಂತೆ ಮಾಡುವ ಫೇಸ್‌ಬುಕ್ಕು.  ತನ್ನ ಒಡಲಿನಲ್ಲಿ ಜಗತ್ತಿನ ದೊಡ್ಡ ಸೂಪರ್ ಕಂಫ್ಯೂಟರ್ರನ್ನು ಇರಿಸಿಕೊಂಡು ಸಂಭ್ರಮಿಸುವ ಐಬಿಎಮ್ಮು...  ಹೀಗೇ ಅನೇಕಾನೇಕ ಹೆಸರುಗಳು ನೆನಪಿಗೆ ಬರುತ್ತಲೇ ಹೋಗುತ್ತವೆ.  ನಿಮಗೆ ಬೇಕಾದ ಸೆಕ್ಟರುಗಳಲ್ಲಿ ಒಂದಲ್ಲ ಒಂದು ಕಂಪನಿಗಳು ಚಿರಪರಿಚಿತವೇ....ಬ್ಯಾಂಕು, ಇನ್ವೆಸ್ಟ್‌ಮೆಂಟು, ಟೆಲಿಕಾಮ್, ಹೆಲ್ತ್‌ಕೇರು, ಟ್ರಾನ್ಸ್‌ಪೋರ್ಟೇಷನ್ನು,    ಟೆಕ್ನಾಲಜಿ, ಎನರ್ಜಿ, ಇತ್ಯಾದಿ, ಇತ್ಯಾದಿ.  ಆದರೆ ಈ ಎಲ್ಲ ಹೆಸರುಗಳ ವಿಶೇಷವೇನು ಗೊತ್ತೇ?  ಒಂದರ ಹೆಸರಿನ ಹಾಗೆ ಮತ್ತೊಂದಿಲ್ಲ ಎಲ್ಲವೂ ಬೇರೆ ಬೇರೆಯವೇ... ಒಂದು ರೀತಿಯಲ್ಲಿ ನಮ್ಮ ಮಹಾಭಾರತ ಹಾಗೂ ರಾಮಾಯಣದ ಕಥೆಗಳಲ್ಲಿ ಬರುವ ಪಾತ್ರಗಳ ಹಾಗೆ!  ನಿಮಗೆ ಎಂದಾದರೂ ಅನ್ನಿಸಿತ್ತೇ... ನಮ್ಮ ಪೂರ್ವಜರು ಅದ್ಯಾವ ಹೆಸರಿನ ಡೇಟಾಬೇಸನ್ನು ಉಪಯೋಗಿಸುತ್ತಿದ್ದರು ಅಂತ?  ಒಂದು ಮಹಾಕಾವ್ಯ, ಮಹಾಕಥೆಯಿಂದ ಮತ್ತೊಂದು ಮಹಾಕಥೆಗೆ ಯುಗಗಳ ಅಂತ್ಯವಿದ್ದರೂ ಎಲ್ಲ ಪಾತ್ರಗಳ ಹೆಸರೂ ಬೇರೆ ಬೇರೆಯವು, ಒಂದು ಕೂಡ ಕಾಮನ್ ಆಗಿಲ್ಲ!

ಇನ್ನು ಅಮೇರಿಕದಲ್ಲಿ ಚಾಲ್ತಿ ಇರೋ ಬ್ರ್ಯಾಂಡ್ ಹೆಸರುಗಳನ್ನು ಭಾರತದಲ್ಲಿ ಇಟ್ಟರೆ ಖಂಡಿತಾ ಕಷ್ಟವಾಗುತ್ತೆ ಅನ್ನೋದಕ್ಕೆ ಈ ಉದಾಹರಣೆ ನೋಡಿ.  ಅಮೇರಿಕದಲ್ಲಿ ಜನರಲ್ ಮೋಟಾರ್ಸ್‌ನವರು ಉತ್ಪಾದಿಸೋ ಸ್ಯಾಟರ್ನ್ (ಶನಿ) ಕಾರು ಬಹಳ ವರ್ಷಗಳಿಂದ ಪ್ರಚಲಿತವಾದುದು.  ಇದೇ ಕಾರನ್ನ ಭಾರತದ ಮಾರುಕಟ್ಟೆಯಲ್ಲಿ - ಶನಿ ಯಾಗಿ - ಉತ್ಪಾದಿಸಿದರೆ, ಯಾರು ತಾನೆ ಖರೀದಿಸುತ್ತಾರೆ ನೀವೇ ಹೇಳಿ?!  ಶನಿಗ್ರಹ ಎಲ್ಲರಿಗೂ ಬೇಕು ಹಾಗೂ ಯಾರಿಗೂ ಬೇಡವಾಗಿರುವ ಗ್ರಹ... ಬುಧ (Mercury) ಆದರೆ ಪರವಾಗಿಲ್ಲ, ಗುರು (Jupitor) ಆದರೆ ಓಕೆ, ಆದರೆ Olds Mobile ಮಾತ್ರ ಬೇಡಾ ಸ್ವಾಮಿ... ಈ ಹೆಸರನ್ನು ಇಟ್ಟವರಿಗೆ ನೊಬೆಲ್ ಪಾರಿತೋಷಕವೇನಾದರೂ ಸಿಕ್ಕಿದೆಯೇ? ಈ ಹೆಸರನ್ನು ಸೂಚಿಸಿದವರ ಕೈಗೆ ಕಡಗ ತೊಡಿಸಬೇಕು!  ಈ ಮಿಲೆನಿಯಲ್ಲ್ ಯುಗದಲ್ಲಿ ಓಲ್ಡ್ಸ್ ಮೊಬೈಲ್ ಅನ್ನುವ ಹೆಸರಿನ ಕಾರನ್ನು ಮೂವತ್ತು ವರ್ಷಗಳಿಗಿಂತ ಕೆಳವಯಸ್ಸಿನವರು ಹೇಗೆ ತಾನೇ ಖರೀದಿಸಬೇಕು?  ಪ್ರಪಂಚದಲ್ಲಿ ಜನರು ತಮ್ಮ ಕಳೆದು ಹೋದ ಯೌವನವನ್ನು ಮತ್ತೆ ಹುಟ್ಟು ಹಾಕಲು ಬಿಲಿಯನ್‌ಗಟ್ಟಲೆ ಹಣವನ್ನು ಸುರಿಯುತ್ತಿರುವಾಗ ನಮ್ಮ ಕಾರಿನ ಹೆಸರು ಓಲ್ಡ್ಸ್ ಮೊಬೈಲು ಹೇಗಾದೀತು?

ನಮ್ಮ ಭಾರತದಲ್ಲಾದರೂ ಗೋದ್ರೇಜ್, ಟಾಟಾ, ಬಿರ್ಲಾ, ವಿಪ್ರೋ, ಬಜಾಜ್, ಇನ್ಫೋಸಿಸ್ ಮುಂತಾದ ಕಂಪನಿಗಳು ತಲೆ ಎತ್ತಿದ್ದರೂ ಇದುವರೆಗೂ "ಪಟೇಲ್" ಎಂಬ ಬ್ರ್ಯಾಂಡ್ ಏಕೆ ತಲೆ ಎತ್ತಿಲ್ಲ ಎಂದು ಸೋಜಿಗವಾಗುತ್ತದೆ.  ಮಿಲಿಯನ್‌ಗಟ್ಟಲೆ ಪಟೇಲ್ ಜನರ ಪರಂಪರೆ ತಮ್ಮ ವಂಶಪಾರಂಪರ್ಯದವರವನ್ನು ವಿದೇಶಗಳಿಗೆ ರವಾನಿಸೋದರಲ್ಲೇ ಅವರ ಇನ್ನೋವೇಶನ್ ಸೀಮಿತವಾಗಿ ಹೋಯಿತೋ ಎಂದು ಸಂಶಯವಾಗುವುದಿಲ್ಲವೇ?

ಈ ಹೆಸರುಗಳೇ ಬ್ರ್ಯಾಂಡ್‌ಗಳಾಗುತ್ತವೆ... ಒಂದು ರೀತಿಯಲ್ಲಿ "ಹಮಾರಾ ಬಜಾಜ್" ಆದ ಹಾಗೆ!  ಅಫಘಾನಿಸ್ತಾನದಲ್ಲೂ ಪ್ರಚಲಿತವಾದ ಬ್ರ್ಯಾಂಡ್ ಎಂದರೆ ಕೋಕಾಕೋಲಾ ಹಾಗೂ ಮರ್ಸಿಡಿಸ್ ಬೆಂಜ್ ಮಾತ್ರ ಎಂಬುದು ಮತ್ತೊಂದು ಸಮೀಕ್ಷೆಯ ವರದಿ!  ಹೀಗೇ ನಿಮ್ಮ ಬ್ರ್ಯಾಂಡ್ ನಿಮ್ಮನ್ನು ನೀವೂ ಡಿಫೈನ್ ಮಾಡಿ, ಮಾರ್ಕೇಟ್ ಮಾಡಿ, ಅದನ್ನೂ ಎತ್ತರದಿಂದೆತ್ತರಕ್ಕೆ ಕೊಂಡೊಯ್ಯಬಹುದು...ಪ್ರಯತ್ನ ಮಾಡಿನೋಡಿ.