Monday, April 27, 2020

ಮೊದಲ ದಿನ ಮೌನ

ಮೊದಲ ದಿನ ಮೌನ
ಕವಿ: ಕೆ. ಎಸ್. ನರಸಿಂಹ ಸ್ವಾಮಿ



ಮೊದಲ ದಿನ ಮೌನ... ಮೈಸೂರ ಮಲ್ಲಿಗೆಯ ಈ ಹಾಡನ್ನು ಕೇಳಿದಾಗೆಲ್ಲ ಹೊಸದಾಗಿ ಮದುವೆಯಾಗಿ ಗಂಡನ ಮನೆಯನ್ನು ಪ್ರವೇಶಿಸಿದ ಹೆಣ್ಣುಮಗಳ ತಳಮಳ ಅರಿವಾಗುತ್ತದೆ.  ಆಗಿನ ಕಾಲದಲ್ಲಿ ತವರು ಮನೆ ತೊರೆದು ಮತ್ತು ಗಂಡನ ಮನೆಯನ್ನು ಸೇರಿ  ಅಲ್ಲಿ ಅವಿಭಕ್ತ ಕುಟುಂಬದಲ್ಲಿ ಹೊಸ ಜೀವನವನ್ನು ಸಾಗಿಸುವುದು ಪ್ರತಿ ಹೆಣ್ಣುಮಗಳ ಬದುಕಿನಲ್ಲಿ ಮಹತ್ವದ ಬದಲಾವಣೆಯೇ ಸರಿ.  ಈ ಹಾಡಿನ ಉದ್ದಕ್ಕೂ ಬರುವ ಅಲಂಕಾರಗಳು ಒಂದೊಂದು ಹಂತದಲ್ಲಿಯೂ ಹೊಸತನ್ನೇನೋ ಸಾರುತ್ತಿವೆ ಎನ್ನಿಸುತ್ತದೆ.  ಕನ್ನಡ ಸಾಹಿತ್ಯದಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಮಗಳ ಮನದ ತಲ್ಲಣವನ್ನು ಮೈಸೂರ ಮಲ್ಲಿಗೆಯ ಈ ಕವನ ಅತ್ಯಂತ ಸೂಕ್ಷ್ಮವಾಗಿ ಗಮನಿಸುವುದರ ಜೊತೆಗೆ, ಈ ಮೂರು ದಿನಗಳ ಪರಿವರ್ತನೆಯ ಸಮಯದಲ್ಲಿ ಸಾಂದರ್ಭಿಕವಾಗಿ ಆಕೆಯ ಒಳತೋಟಿಯನ್ನು ಇಣುಕಿ ನೋಡುತ್ತದೆ.  ಹಲವು ದಶಕಗಳ ಹಿಂದೆ ಎಲ್ಲರೂ ಸಹಜವಾಗಿ ಗಮನಿಸಬಹುದಾದ ಭಾವನೆಯೇನೋ ಎನ್ನುವಂತಿದ್ದ ಕಾಲದಲ್ಲಿ ಈ ಹಾಡು ಜನಮಾನಸದಲ್ಲಿ ಅದರ ಸ್ಥಾನವನ್ನು ಪಡೆದುಕೊಂಡಿದ್ದಿರಬಹುದು, ಆದರೆ ಈ ಹಾಡಿನ ಭಾವನೆಗಳ ಸಾಂದ್ರತೆಯ ವಸ್ತುನಿಷ್ಠತೆ ಇಂದಿನ ಆಧುನಿಕ ಯುಗದಲ್ಲೂ ಕೇಳುಗರನ್ನು ತನ್ನೊಳಗೆ ತಲ್ಲೀನಗೊಳಿಸಿಕೊಂಡು ಒಂದು ಕ್ಷಣ ಈ  ಹಾಡಿನಲ್ಲಿ ಅಡಗಿದ ಭಾವನೆಗಳ ಕೋಟಲೆಗಳೊಳಗೆ ಒಂದು ಮಾಡಿ ಬಿಡುತ್ತದೆ.

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ 
ಚಿಂತೆ ಬಿಡಿ ಹೂವ ಮುಡಿದಂತೆ 

ಗಂಡನ ಮನೆ ಸೇರಿದ ಮೊದಲ ದಿನ ಹೆಚ್ಚೂ ಕಡಿಮೆ ಮೌನದಲ್ಲೇ ಕಳೆದು ಹೋಗುತ್ತದೆ.  ಗುರುತು ಪರಿಚಯವಿಲ್ಲದ ಊರು,  ಮನೆಯಲ್ಲಿ ಮದುಮಗಳು ಅಲಂಕಾರಕ್ಕಿಟ್ಟ ಬೊಂಬೆಯೇನೋ ಎನ್ನುವಂತೆ ಎಲ್ಲರೂ ನೋಡುವವರೇ.  ಕುಳಿತರೂ ಕಷ್ಟ, ನಿಂತರೂ ಕಷ್ಟ.  ನಡುನಡುವೆ ತವರಿನ ಜ್ಞಾಪಕದಿಂದ ಕಣ್ಣು ಹನಿಗೂಡುತ್ತವೆ.  ಅಳು ತುಟಿಗೆ ಬರುತ್ತದೆ, ಆದರೆ ಗಟ್ಟಿಯಾಗಿ ಅಳಲಾಗದು.  ಚಿಂತೆ ಬಿಡಿ ಹೂವು ಮುಡಿದಂತೆ ಸಣ್ಣಗೆ ಇದ್ದರೂ ಇಲ್ಲದಂತೆ ತಲೆ ಏರಿ ಕುಳಿತಿರುತ್ತದೆ.

ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ 
ಜೀವದಲಿ ಜಾತ್ರೆ ಮುಗಿದಂತೆ|

ನೆರೆ ಹೊರೆಯವರು ಹಾಗೂ ಮನೆ ಮಂದಿ ಎಲ್ಲರೂ ಬಂದು ನೋಡುವವರೇ.  ನವ ವಧು ಹೇಗಿದ್ದಾಳೆ? ಏನು ಮಾಡುತ್ತಿದ್ದಾಳೆ ಎನ್ನುವ ಕುತೂಹಲ ಚಿಕ್ಕವರಿಂದ ದೊಡ್ಡವರ ವರೆಗೆ.  ಎಲ್ಲ ಕಡೆಯಿಂದ ಇಣುಕಿ ನೋಡುವ ಕಣ್ಣುಗಳು ಸಣ್ಣಗೆ ದೀಪ ಉರಿದಂತೆ ಕಂಡರೆ, ತಳಮಳದ ಜೀವದಲ್ಲಿ ಜಾತ್ರೆ ಮುಗಿದಂತೆನಿಸುತ್ತದೆ.  ಜಾತ್ರೆ ಮುಗಿದಾಗ ಏನೇನಾಗಬಹುದು... ಜಾತ್ರೆಗೆಂದು ತಲೆ ಎತ್ತಿದ್ದ ಅಂಗಡಿ ಮುಗ್ಗಟ್ಟುಗಳು ತಮ್ಮ ಟೆಂಟನ್ನು ಕಿತ್ತು ಗಂಟು ಮೂಟೆ ಕಟ್ಟುವುದು, ಅಲ್ಲಲ್ಲಿ ನಿಲ್ಲಿಸಿದ ಎತ್ತಿನ ಬಂಡಿ ಜಾನುವಾರುಗಳು ಪುನಃ ಮನೆ ಕಡೆಗೆ ದಾರಿ ಹಿಡಿವುದು, ಇಷ್ಟೊಂದು ಹೊತ್ತು ಗಿಜುಗಿಟ್ಟುತ್ತಿದ್ದ ಬೀದಿ-ವಠಾರಗಳು ನಿಧಾನವಾಗಿ ಖಾಲಿ ಆಗುವುದು.  ಊರಿನ ತೇರು ಆಗಲೇ ಗುಡಿ ಸೇರಿ ಜನರು ದೇವಸ್ಥಾನದಿಂದ ಪುನಃ ಮನೆಗೆ ಮರಳುವುದು.  ಜನಜಂಗುಳಿಯಿಂದ ಮೇಲೆದ್ದಿದ್ದ ಧೂಳು ನಿಧಾನವಾಗಿ ತಿಳಿಯಾಗುವುದು...ಹೀಗೆ ಒಂದು ಸಂಭ್ರಮದ ಕ್ಷಣ ಸಹಜವಾಗಿ ಮುಂದಿನ ಗತಿಯಲ್ಲಿ ಲೀನವಾಗುವುದರ ಚಿತ್ರಣದ ಮೂಲಕ ಈ ಸಾಲುಗಳು ಅನೇಕ ನೆನಪುಗಳನ್ನು ಹಲವು ರೂಪಕಗಳ ಮುಖೇನ ಕಣ್ಣಿಗೆ ಕಟ್ಟಿಕೊಡುತ್ತದೆ.

ಎರಡನೆಯ ಹಗಲು ಇಳಿಮುಖವಿಲ್ಲ ಇಷ್ಟು ನಗು 
ಮೂಗುತಿಯ ಮಿಂಚು ಒಳಹೊರಗೆ 
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು 
ಬೇಲಿಯಲಿ ಹಾವು ಹರಿದಂತೆ|

ಅಂತೂ ಕಷ್ಟದ ಮೊದಲ ದಿನ ಮುಗಿದು ಎರಡನೆಯ ದಿನ ಸ್ವಲ್ಪ ಚೇತರಿಕೆ ಶುರುವಾಗುತ್ತದೆ.  ಎರಡನೆಯ ಹಗಲು ಎಂದು ಶುರುವಾಗುವ ಸಾಲುಗಳು ಬಹಳ ನಿಧಾನವಾಗಿ ಸಾಗುವ ಉದ್ದದ ದಿನಗಳನ್ನು ತೋರಿಸುತ್ತವೆ.  ಸುತ್ತಲಿನ ಪರಿಸರ ನಿನ್ನೆಯಷ್ಟು ಹೊಸತೆನಿಸುವುದಿಲ್ಲ, ಆದ್ದರಿಂದ ಇಳಿ ಮುಖವಿರದೆ ಸ್ವಲ್ಪ ಕೊರಗು ಕಡಿಮೆಯಾದಂತೆನಿಸುತ್ತದೆ.  ಮನೆಯ ಒಳ ಹೊರಗೆ ಓಡಾಡಿದಂತೆಲ್ಲ ಹೊಸ ಮೂಗುತಿಯ ಮಿಂಚು ಅಲ್ಲಲ್ಲಿ ಕಾಣಸಿಗುತ್ತದೆ.  ಆದರೂ ಅವರಿವರ ಮಾತುಗಳಲ್ಲಿ ಅಷ್ಟೊಂದು ಸ್ಪಷ್ಟತೆ ಇಲ್ಲ, ಈ ಕಡೆ ಮಾತನಾಡಿದಂತೆಯೂ ಇರಬೇಕು, ಆಡದಂತೆಯೂ ಇರಬೇಕು.  ತೆಳುವಾದ ದುಃಖದ ಗುಂಗಿನಲ್ಲಿ ತೇಲುವ ಮನಸಿಗೆ ಆಡಿದ ಮಾತುಗಳು ಬರೀ ತುಟಿಯ ಚಲನೆಯಂತೆ ಕಂಡು ಬರಬಹುದು.  ಈ ಸಂದರ್ಭಗಳಲ್ಲಿ ಸಮಯ ಬಹಳ ನಿಧಾನವಾಗಿ ಚಲಿಸುತ್ತದೆ.  ಬೇಲಿಯಲ್ಲಿ ಹಾವು ಸರಿದಂತೆ ಎನ್ನುವ ರೂಪಕ ತವರು ಮತ್ತು ಗಂಡನ ಮನೆಯ ಎರಡು ಕಡೆಗಳಲ್ಲಿ ಹರಿದಾಡುವ ಮನಸ್ಸಿನ ಪ್ರತೀಕವಿರಬಹುದು.  ಜೊತೆಗೆ ಬೇಲಿಯಲ್ಲಿ ಹರಿದಾಡುವ ಹಾವು ಜೊತೆಗೆ ಅಲ್ಲಿ ಹರಡಿದ ಹೂವು-ಮುಳ್ಳುಗಳ ಜೊತೆಗೆ ಸಹ ಪರಿಸರದಲ್ಲಿ ಹೊಂದಿಕೊಂಡಿರುವುದನ್ನು ಕಣ್ಣಿಗೆ ಕಟ್ಟುತ್ತದೆ.

ಮೂರನೆಯ ಸಂಜೆ ಹೆರಳಿನ ತುಂಬಾ ದಂಡೆ ಹೂ 
ಹೂವಿಗೂ ಜೀವ ಬಂದಂತೆ 
ಸಂಜೆಯಲಿ ರಾತ್ರಿ ಇಳಿದಂತೆ ಬಿರು ಬಾನಿಗೂ 
ಹುಣ್ಣಿಮೆಯ ಹಾಲು ಹರಿದಂತೆ|

ಇನ್ನು ಮೂರನೆ ದಿನ ನಿಜವಾಗಿಯೂ ಚೇತರಿಕೆಯ ದಿನ.  ಮನೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ಕೈಗೂಡಿಸಿ ಮನೆಯವರೊಂದಿಗೆ ಸೇರಿಕೊಳ್ಳುವ ಪರಿ.  ಅತ್ತೆ, ಮಾವ, ಗಂಡ, ನಾದಿನಿ, ಮೈದುನರನ್ನೆಲ್ಲ ಸಂಬಾಳಿಸಿಕೊಂಡು ಹೋಗುವ ಪರಿ.  ಹೆರಳಿನ ತುಂಬಾ ಹೂ ಮುಡಿದಂತೆ ಆ ಹೂವಿಗೂ ಜೀವ ಬಂದಂತೆ ಎನ್ನುವ ಸಾಲುಗಳು ತಾಜಾ ಹೂಗಳು ಗುಂಪಾಗಿ ದಂಡೆಯ ರೂಪದಲ್ಲಿ ಸಂಭ್ರಮಿಸುವುದನ್ನು ನೋಡಬಹುದು, ಕೇವಲ ಮೂರೇ ದಿನಗಳಲ್ಲಿ ಇದು ಬಿಡಿ ಹೂವಿನ ಚಿಂತೆಯಿಂದ ಬಹಳ ದೂರ ಬಂದ ಮನಸ್ಸಿನ ಪರಿವರ್ತನೆಯನ್ನು ತೋರಿಸುತ್ತದೆ.  ಮೂರನೆಯ ಸಂಜೆ ಎಂದು ಆರಂಭವಾಗುವ ಪದಗಳು ಎರಡನೆಯ ಭಾರವಾದ ಹಗಲಿನಿಂದ ಬಹಳಷ್ಟು ಮುಂದೆ ಬಂದ ಸೂಚನೆಯನ್ನು ಕೊಡುತ್ತದೆ.  ಜೊತೆಗೆ ರಾತ್ರಿ ಇಳಿದಂತೆ ಕತ್ತಲಾದರೂ ಇಡೀ ಬಾನನ್ನು ಆವರಿಸುವ ಹುಣ್ಣಿಮೆಯ ಹಾಲು   ಬೆಳದಿಂಗಳ ಕೊರಗುವ ಕತ್ತಲಿನಿಂದ ಮನಸ್ಸು ದೂರಸರಿದಿರುವುದನ್ನು ಪ್ರತಿಬಿಂಬಿಸುತ್ತದೆ.

ಈ ಹಾಡನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು/ಕೇಳಬಹುದು.

No comments: