Showing posts with label ಕನ್ನಡಿಗರು. Show all posts
Showing posts with label ಕನ್ನಡಿಗರು. Show all posts

Tuesday, February 11, 2025

I hate ಕನ್ನಡಿಗರು (with use these 3 things)...

ನನಗೆ ಕನ್ನಡಿಗರನ್ನ ಕಂಡ್ರೆ ಪ್ರೀತೀನೆ... ಅದು ನಿಮಗೆಲ್ಲ ಗೊತ್ತೇ ಇರೋ ವಿಷ್ಯಾ... ಆದ್ರೆ, ಈ ಮೂರು ವಿಷಯಗಳಲ್ಲಿ, ಕನ್ನಡಿಗರನ್ನ ಕಂಡ್ರೆ, ಒಂಥರ, ಸಿಟ್ಟು, ಬೇಜಾರು - ತಮ್ಮ ಒರಿಜಿನಾಲಿಟಿನೇ ಇಲ್ದೇ ಇರೋ ಮೂದೇವಿಗಳು ಅಂತ ಜರೀ ಬೇಕು ಅನ್ಸುತ್ತೆ ಇವರ್ನೆಲ್ಲಾ ನೋಡ್ದಾಗ!

ನೇರವಾಗಿ ವಿಷ್ಯಕ್ಕೆ ಬರೋಣ.

ಮೊದಲ್ನೆಯದು: ಸರ್... ಅಲ್ಲಾ ನಮ್ ಕನ್ನಡಿಗರು, ಎಲ್ಲರನ್ನೂ "ಸರ್" ಅನ್ನೋದ್ಯಾಕೆ?

ಉತ್ತರ ಭಾರತದವರು ಮೋದಿಯವರನ್ನ, ಮೋದಿ ಜಿ ಅಂತ ಕರೀತಾರೆ... ನಾವು ಎಲ್ರನ್ನೂ "ಸರ್" ಅಂತೀವಿ.

ಪುನೀತ್ ರಾಜ್‌ಕುಮಾರ್ ಸರ್, ಶಂಕರ್‌ನಾಗ್ ಸರ್, ಅಂಬರೀಷ್ ಸರ್, ಇತ್ಯಾದಿ, ಇತ್ಯಾದಿ... ಜೀವನದ ಪಯಣವನ್ನ ಮುಗಿಸಿದೋರಿಗಷ್ಟೇ ಅಲ್ಲ, ಬದುಕಿರೋರನ್ನ ರೆಫ಼ೆರನ್ಸ್ ಮಾಡ್ದಾಗಲೂ "ಸರ್" ಅಂತಾನೇ ಅಂತಿರ್ತಾರೆ.

ಇವರಿಗೆಲ್ಲ, "ರಾಜ್‌ಕುಮಾರ್ ಅವರು", "ವಿಷ್ಣುವರ್ಧನ್ ಅವರು..." ಅಂದ್ರೆ ಮರ್ಯಾದೆ ಕಮ್ಮಿ ಅಂತ ಯಾರ್ ಅಂದೋರು?

ದಯವಿಟ್ಟು, ನಿಮ್ಮಲ್ಲಿ ಒಂದು ಔನ್ಸ್ ಆತ್ಮಾಭಿಮಾನ, ಸ್ವಾಭಿಮಾನ ಅಂತೇನಾದ್ರೂ ಇದ್ರೆ, ಎಲ್ರನ್ನೂ ಮರ್ಯಾದೆಯಿಂದ "...ಅವರು" ಅಂತ ಕರೀರಿ, ಅದರಿಂದ ನಿಮ್ಮ ಮರ್ಯಾದೆಗೇನೂ ಕುಂದ್ ಬರಲ್ಲ.

ಅದರ ಬದಲಿಗೆ ನೀವು, "ಸರ್" ಅಂತ ರಾಗ ಎಳೆದ್ರೆ, ಬಕೆಟ್ ಹಿಡದಂಗ್ ಆಗುತ್ತೆ.  ಇನ್ನಾದ್ರೂ ಬಕೇಟ್ ಹಿಡಿಯೋದು ಬಿಟ್ಟು, ಮರ್ಯಾದೆ (ಕೊಟ್ಟ್) ಮಾತಾಡಿ! ನಮ್ಮ ಟಿವಿ anchor ಗಳು ಶುರುಮಾಡಿದ ರೋಗವೇನೋ ಇದು ಅಂತ ಒಮ್ಮೊಮ್ಮೆ ಅನುಮಾನವೂ ಆಗುತ್ತೆ.

ನಾವು "ಸರ್" ಅಂತ ಕರೆಯೋದು - ಕೇವಲ ಎರಡು ರೀತಿ ಜನಗಳಿಗೆ ಮಾತ್ರ. ಒಂದು ಬ್ರಿಟೀಷ್ ಸರ್ಕಾರದಿಂದ ಪುರಸ್ಕರಿಸ್ಕೊಂಡು ಸರ್ ಪದವಿ ಪಡೆದವರಿಗೆ... ಉದಾಹರಣೆಗೆ ಸರ್ ಎಮ್. ವಿಶ್ವೇಶ್ವರಯ್ಯ... ಅಂತೀವಿ. ಮತ್ತೊಂದು,  ನಮ್ಮ ಶಾಲೆಯ ಮೇಷ್ಟ್ರುಗಳಿಗೆ, ನಿಜವಾಗಲೂ ಗೌರವದ ರೂಪದಲ್ಲಿ "ಸರ್ ಅಥಾವಾ ಸಾರ್" ಅಂತೀವಿ... ಅದಿಷ್ಟು ಬಿಟ್ರೆ, ಬೇರೆ ಕಡೆ ಬಳಸೋ ಸಾರ್ ಗೆ ಅರ್ಥ ಇರೋಲ್ಲ.

***

ಎರಡನೆಯದು: ಈ ಕನ್ನಡ ಸಿನಿಮಾಗಳ ವಿಚಾರಕ್ಕೆ ಬಂದಾಗ ಬೆಂಗಳೂರು ಗಾಂಧಿನಗರನ "ಸ್ಯಾಂಡಲ್ ವುಡ್" ಅಂತ ಕರೆಯೋದು.

ನಾನು ತಿಳಿದುಕೊಂಡ ಹಾಗೆ, ಇದು ಬಾಲಿವುಡ್, ಟ್ಯಾಲಿವುಡ್, ಕ್ಯಾಲಿವುಡ್ ಗಳ ರಾಗ ಮತ್ತು ರೋಗ... ಸುಮ್ನೆ ಅಂಧಾನುಕರಣೆ... ಅಮೇರಿಕದ ಹಾಲಿವುಡ್‌ನಲ್ಲಿ ಮೂವಿಗಳು ತಯಾರಾಗ್ತಾವೆ... ಹಾಗಾಗಿ ಎಲ್ಲೆಲ್ಲಿ ಮೂವಿಗಳು ತಯಾರಾಗ್ತಾವೋ ಅಲ್ಲಿನ ಪ್ರದೇಶದ ಹೆಸರುಗಳನ್ನೆಲ್ಲ "ವುಡ್" ಅನ್ನೋ ಪದದಿಂದ ಕೊನೆಗೊಳಿಸಿದರೆ ಹೇಗೆ ಅನ್ನೋ ಐಡಿಯಾ ಯಾವನೋ ಒಬ್ಬ ಹುಂಬನಿಗೆ ಬಂತು. ನಂತರ ಆ ರೋಗ ದೇಶವ್ಯಾಪಿ ಹರಡ್ತು.

ಬರೀ 2024 ಒಂದು ವರ್ಷದಲ್ಲೇ ಭಾರತದಲ್ಲಿ ತಯಾರಾದ ಚಿತ್ರಗಳ ಸಂಖ್ಯೆ ಸುಮಾರು 580 ಇವೆ. ಅದರಲ್ಲಿ ಹಿಂದಿ, ತೆಲುಗು ಚಿತ್ರಗಳದ್ದು ಸಿಂಹಪಾಲು. ನಮ್ಮ ಕನ್ನಡ ಭಾಷೆಯಲ್ಲೇ ಸುಮಾರು 50 ಸಿನಿಮಾಗಳು ಬಿಡುಗಡೆಯಾಗಿವೆ. ಅಂತದ್ದರಲ್ಲಿ, ಹಾಲಿವುಡ್ ಹೆಸರಿನ ಅನುಕರಣೆ ಮಾಡೋದಾದ್ರೂ ಏಕೆ?

ಈ ಕೆಟ್ಟ ರೋಗ ನಿಲ್ಲಬೇಕು... ನಮ್ಮತನ ಅಂತ ಸ್ವಲ್ಪಾನಾದ್ರೂ ಮರ್ಯಾದೆ ಇದ್ರೆ, ಇನ್ನಾದ್ರೂ ಈ "ವುಡ್"ಗಳ ಬಳಕೆ ಎಲ್ಲ ಕಡೆ ನಿಲ್ಲಿಸಬೇಕು, ಭಾರತದಾದ್ಯಂತ.

***

ಮೂರನೆಯದು: ಬ್ರದರ್ರು, ಸಿಸ್ಟರ್ರು...

ನಮ್ಮ ಅಚ್ಚ ಕನ್ನಡದಲ್ಲಿ, ಅಣ್ಣ, ತಮ್ಮ, ತಂಗಿ, ಅಕ್ಕ ಅಂತ ಪದಗಳಿರುವಾಗ... mother, father, brother, sister ಅಂತ ಯಾಕೆ ಪದ ಬಳಸ್ತಾರೋ, ಕನ್ನಡ ವಾಕ್ಯಗಳಲ್ಲಿ?

ಅತ್ತಿಗೆ, ನಾದಿನಿ, ಸೋದರ ಸೊಸೆ - ಇವರಿಗೆಲ್ಲ sister-in-law ಅನ್ನೋದು ಯಾವ ನ್ಯಾಯ ನೀವೇ ಹೇಳಿ.

ಅಣ್ಣನ ಮಗಳಿಗೂ, ತಂಗಿಯ ಮಗಳಿಗೂ ನಮ್ಮ ಸಂಬಂಧದಲ್ಲಿ ವ್ಯತ್ಯಾಸ ಇದೆ... ಅವರನ್ನ ನೀಸು, ಗೀಸು ಅಂತ ಹೇಳೋದು ಸರೀನಾ...

ಇಂಗ್ಲೀಷ್ ಮಾತೋಡೋರಿಗೆ ಸಂಬಂಧದ ಬೆಲೆ ಏನು ಗೊತ್ತು? ಹಂಗಿದ್ರೆ, ಎಲ್ರನ್ನೂ ಅಂಕಲ್ ಅಂತ ಕರೀತಿದ್ರು? ಎಲ್ಲ ಕಾನೂನು ಮಯವಾಗಿರುವ ಅವರ ಕಲ್ಚರ್‌ನಲ್ಲಿ "ಇನ್-ಲಾ" ಅಂತ ಯಾರನ್ನ ಬೇಕಾದ್ರೂ ಕರೀತಾರೆ... ಆದ್ರೆ, ಅಂತಃಕರಣ, ಕಕ್ಕುಲಿಕೆ, ಪ್ರೀತಿ, ವಿಶ್ವಾಸ, ಮಮತೆ, ಪ್ರೇಮ, ಸ್ನೇಹ, ವಾತ್ಸಲ್ಯಗಳನ್ನು ಆಧರಿಸಿ ನೆಲೆನಿಂತ ಸಂಬಂಧಗಳ ಮೇಲೆ ಅವುಗಳಿಗೆಲ್ಲ ಒಂದು appropriate ಪದವನ್ನಿಟ್ಟುಕೊಂಡಿದ್ದೀವಿ.

ಯಾರಿಗಾದ್ರೂ ಸಡನ್ ಆಗಿ ಒಂದು ಹೊಡ್ತಾ ಬಿದ್ರೆ, ಅವರೆಲ್ಲ, ಕನ್ನಡದಲ್ಲಿ ಅಮ್ಮ/ಅವ್ವ ಅಂತಾರೇ ಹೊರತು, ಮಮ್ಮಿ, ಮದರ್ರು ಅನ್ನಲ್ವಲ್ಲಾ?

ಈ ರೀತಿ, ಇಂಗ್ಲೀಷಿನಲ್ಲಿ ಸಂಬಂಧಗಳನ್ನು ಹೇಳೋ ರೋಗವನ್ನೂ ನಾವು ಗುಣಮಾಡಿಕೊಳ್ಳಲೇ ಬೇಕು? ನಮ್ಮ brother ಬಂದ್ರು ಅಂದ್ರೆ, ನಾನು ಅಣ್ಣ ಅಂದುಕೊಳ್ಳಲೋ, ತಮ್ಮ ಅಂದುಕೊಳ್ಳಲೋ?

ಇಲ್ಲಾಂದ್ರೆ ಪೂರ್ತೀ ಇಂಗ್ಲೀಷ್ನಲ್ಲೇ ಮಾತಾಡ್ರಪ, ಕನ್ನಡ ಯಾಕಾದ್ರೂ ಬೇಕೂ?

ಈ ದೊಡ್ಡ ರೋಗ ಮೊದಲು ನಿಲ್ಬೇಕು.  ಏನಂತೀರಿ?

***

I hate ಕನ್ನಡಿಗರು (with these 3 things)...