OTP ಎನ್ನುವ ಸಿಂಹಸ್ವಪ್ನ, ಎಡಬಿಡದೆ ಕಾಡುವ ಭಯ...
ವಿಂದ್ಯ ಪರ್ವತದ ದಕ್ಷಿಣ ಭಾಗದಲ್ಲಿರುವ ದಕ್ಷಿಣ ಪ್ರಸ್ಥಭೂಮಿಯ ಒಡಲೊಳಗಿಂದ ಈ ಬ್ಯಾಂಕಿಂಗ್ ವ್ಯವಸ್ಥೆ ಹೊರಬಂತು - ನಮ್ಮ ಕರ್ನಾಟಕದ ಮಂಗಳೂರು ಕಡೆಯವರ ಕೊಡುಗೆ ಮತ್ತು ಸರ್. ಎಂ. (ಮೋಕ್ಷಗುಂಡಂ) ವಿಶ್ವೇಶ್ವರಯ್ಯನವರ ದೂರದರ್ಶಿತ್ವವನ್ನು ನಾವು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇಂದಿಗೂ ಕಾಣಬಹುದು.
ಆದರೆ, ಇಂದು ನಮ್ಮ ಹಣಕಾಸು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಒಂದು OTP ಎನ್ನುವ ಪೆಡಂಭೂತ ನಿಧಾನವಾಗಿ ನುಂಗ್ತಾ ಇದೆ ಅಂದ್ರೆ ನಂಬ್ತೀರಾ?
ನನಗೆ ವೈಯಕ್ತಿಕವಾಗಿ ಒಂದು ಇವತ್ತಿಗೂ ಅರ್ಥವಾಗದಿರುವುದು ಏನು ಅಂದ್ರೆ, ಪ್ರಪಂಚದ ಉದ್ದಗಲಕ್ಕೂ Technology ಕ್ಷೇತ್ರದಲ್ಲಿ ಕೆಲಸ ಮಾಡೋ ನಮಗೆ, ನಮ್ಮ internal ಬ್ಯಾಂಕಿಂಗ್ ವ್ಯವಸ್ಥೆ ಏಕೆ ಇಷ್ಟು ಕೆಟ್ಟದಾಗಿದೆ ಅನ್ನೋದು.
ನೀವು ಯಾವತ್ತಾದ್ರೂ ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳ sites ನೋಡಿದ್ರೆ, ಅವರ technology choice, user interface, navigation, user experience, error handling ಇವನ್ನೆಲ್ಲ ನೋಡಿದ್ರೆ, ಬ್ಯಾಂಕಿಂಗ್ ಕಸ್ಟಮರ್ ಅನುಕೂಲಗಳೆಲ್ಲವೂ, ಇಲ್ಲಿ ಮಟಾಸ್ ಅನ್ಸುತ್ತೆ. ಪ್ರತಿ ಮೂರು ತಿಂಗಳಿಗೆ expire ಆಗೋ ಲಾಗಿನ್ ಪಾಸ್ವರ್ಡುಗಳು, ಕಾಂಪ್ಲಿಕೇಟೆಡ್ ಪ್ರೊಫ಼ೈಲ್ ಪಾಸ್ವರ್ಡ್ಗಳು ಇವುಗಳನ್ನ maintain ಮಾಡೋದಕ್ಕೆ ಒಂದು ದೊಡ್ಡ ಡೇಟಾಬೇಸೇ (database) ಬೇಕು!
ಒಂದು ಕಾಲದಲ್ಲಿ ನಾವು SBM ಒಂದು ಶಾಖೆಗೆ ಹೋದ್ರೆ, ವೈಯಕ್ತಿಕವಾಗಿ ಅಲ್ಲಿನ ಸ್ಟಾಫ಼್ ಎಲ್ಲರೂ ಪರಿಚಯ ಇರೋರು. ಅದು ಮುಂದೆ ಬದಲಾಗ್ತಾ ಬದಲಾಗ್ತಾ ನಮ್ಮ ಕನ್ನಡದವರೇ ಆದ ಸ್ಟಾಫ಼್ ಪ್ರತೀ ಮೂರು ವರ್ಷಕ್ಕೊಮ್ಮೆ transfer ಆಗ್ತಾ ಹೋದ್ರು. ಈಗ SBM ಇದ್ದಿದ್ದು SBI ಆದ ಮೇಲೆ, ಮೊದಲೇ ಹದಗೆಟ್ಟ ವ್ಯವಸ್ಥೆಯಲ್ಲಿ ಉತ್ತರ ಭಾರತದ ಗುಪ್ತಾಗಳು, ಮಿಶ್ರಾಗಳು ಸೇರಿಕೊಂಡು ಈಗೇನಾದ್ರೂ ನೀವು SBI ಒಳಗೆ ಕಾಲಿಟ್ರೆ, ಅಲ್ಲಿನ ಒಂದು ವ್ಯವಸ್ಥೆ ನೋಡಿ ದಂಗಾಗಿ ಬಿಡ್ತೀರ.
ಹೌದು, ಈ ಆನ್‌ಲೈನ್‌ನ ಬ್ರಹ್ಮಾಂಡ ವ್ಯವಸ್ಥೆಯಲ್ಲಿ ನೀವಾದ್ರೂ ಬ್ಯಾಂಕ್ ಬ್ರಾಂಚುಗಳಿಗೆ ಏಕೆ ಹೋಗಬೇಕು ಅಂತ ನೀವು ಕೇಳಬಹುದು.
ನಿಮಗೆ ಬೆಂಗಳೂರಿನ ಒಂದು ಬ್ಯಾಂಕ್ ಉದಾಹರಣೆ ಕೊಡ್ತೀನಿ. ನಿಮ್ಮ ಅಕೌಂಟಿನಲ್ಲಿ ಏನೇ ಬದಲಾವಣೆ ಮಾಡ್ತೋದಿದ್ರೂ, ನೀವು ನಮ್ಮ ಖಾತೆಯನ್ನ ಎಲ್ಲಿ ಓಪನ್ ಮಾಡಿದ್ವೋ ಅಲ್ಲಿಗೆ ಬನ್ನಿ ಅಂತ ಕರೀತಾರೆ. ಸಣ್ಣ ಪುಟ್ಟ ಊರುಗಳಾದರೆ ಸುಲಭವಾಗಿ ಹೋಗಬಹುದು, ಆದ್ರೆ, ಈ ಬೆಂಗಳೂರಿನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗೋದು ಅಂದ್ರೆ ಅದಕ್ಕೆ ಅರ್ಧ ದಿನ ಬೇಕಾಗುತ್ತೆ.
ಸರಿ, second Saturday ನೂ ಸೇರಿ, ಅವರ holiday ಗಳನ್ನೆಲ್ಲ ಮನಸ್ಸಲ್ಲಿ ಇಟ್ಟುಕೊಂಡು, appointment ತೊಗೊಂಡು ಹೋದ್ರೂ ಕೂಡ ನಿಮಗೇನು ಒಳ್ಳೆಯ ಸರ್ವೀಸು ಸಿಗುತ್ತೆ ಅನ್ನೋ ಗ್ಯಾರಂಟೀ ಅಂತೂ ಇಟ್ಕೋಬೇಡಿ.
ನೀವು NRI ಗಳು ಅಂತ ಗೊತ್ತಾದ ತಕ್ಷಣ, ಅವರಿಗೆ ನಿಮ್ಮ ಮೇಲೆ ಅವರ ನಾನಾ ರೀತಿಯ ಹೊಸ ಪ್ರಾಡಕ್ಟುಗಳನ್ನ experiment ಮಾಡ್ಬೇಕು ಅನ್ಸುತ್ತೆ. ಹೊಸ ಇನ್ಸೂರೆನ್ಸ್ ಸ್ಕೀಮುಗಳಿರಬಹುದು, ವಿವಿಧವಾದ ಸೇವಿಂಗ್ಸ್ ಸರ್ಟಿಫ಼ಿಕೇಟುಗಳಿರಬಹುದು... ಇತ್ಯಾದಿ ಇತ್ಯಾದಿ... ಇವೆಲ್ಲದರ ನಡುವೆ ನೀವು ಹೋದ ಕೆಲ್ಸ ಆದ್ರೆ ಪುಣ್ಯ, ಇಲ್ಲಾಂದ್ರೆ ಇನ್ನೊಂದ್ ದಿನ ಬನ್ನಿ ಅಂತ ಹೇಳುದ್ರೂ ಹೇಳ್‌ಬಹುದು. ನೀವು ಸಪ್ಪೆ ಮುಖ ಹಾಕ್ಕೊಂಡ್ ವಾಪಾಸ್ ಬರ್ತಾ ನಿಮಗೆ, ಅಲ್ಲಿನ ಬಾಗಿಲ ಹಿಂದೆ, "ಗ್ರಾಹಕರೇ ದೇವರು!" ಅನ್ನೋ ಜಾಣನುಡಿ ಕಂಡ್ರೂ ಕಾಣಬಹುದು.
ನಾವೆಲ್ಲ ನಮ್ ನಮ್ ಲಂಚ್ ಅನ್ನು ನಮ್ ನಮ್ ಡೆಸ್ಕ್‌ನಲ್ಲಿ ತಿಂತೀವಲ್ಲ, ಹಂಗೆಲ್ಲ ಏನೂ ಇಲ್ಲ... ಬೆಳಿಗ್ಗೆ ಹತ್ತು ಗಂಟೆಗೆ ಓಪನ್ ಆಗೋ ಬ್ಯಾಂಕ್‌ಗಳಿಗೆ ಮಧ್ಯಾಹ್ನ ಕರೆಕ್ಟ್ ಆಗಿ ಎರಡೂವರೆಗೆ ಲಂಚ್ ಬ್ರೇಕ್ ಬೀಳತ್ತೆ! ಅಷ್ಟರೊಳಗೆ ಜಾಣತನದಿಂದ ನಿಮ್ಮ ಕೆಲ್ಸ ಮಾಡಿಸ್‌ಕೋ ಬೇಕು!
ಅದೆಲ್ಲಾ ಇರ್ಲಿ ಬಿಡಿ, ಇವತ್ತಿನ ವಿಷ್ಯಕ್ಕೆ ಬರೋಣ.... OTP ಅನ್ನೋ ಪೆಡಂಭೂತ ಇಡೀ ಇಂಡಿಯಾನೇ ಅವರಿಸಿಕೊಂಡ್ ಬಿಟ್ಟಿದೆ... ಇಂಡಿಯಾದಲ್ಲಿರೋ ಕಂಪ್ಯೂಟರ್ ಸರ್ವರ್ ಗಳು ತಮ್ಮ 10% ಕ್ಯಾಪಸಿಟಿಯನ್ನ Random generation ಮಾಡೋಕೆ ಬಳಸ್ತಾವೇನೋ ಅನ್ಸುತ್ತೆ... ಕಾಫ಼ಿ ಆರ್ಡರ್ ಮಾಡೋಕು OTP, ಕಾಫ಼ಿ ಕುಡಿಯೋಕು OTP ಬೇಕೇ ಬೇಕು... ಕಂಡ್ ಕಂಡಲ್ಲೆಲ್ಲ OTP ಹಾವಳೀನೇ ಹಾವಳಿ!
ಈ OTP ಅಂದಾಕ್ಷಣ, ನಮ್ಮೂರಿನ ದೊಡ್ಡ ದೊಡ್ಡ ಸವಕಾರರ ನೆನಪು ಬಂತು! ಒಂದು ಕಾಲದಲ್ಲಿ ದುಡ್ಡ್ ಕೊಟ್ಟು ಕೆಲ್ಸಾ ಮಾಡಿಸ್ತಿದ್ದ ಪುಣ್ಯಾತ್ಮರಿಗೆ ಈ OTP ಒಂಥರ ಲೆವಲ್ಲರ ಥರ ಆಗಿ ಹೋಗಿದೆ! ನಿಮಗ್ಗೊತ್ತಾ? ನಮ್ಮ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ, ಈ OTP ಬಿಟ್ಟಿಲ್ಲ ಅಂತ?
ಈ OTP ನನ್ನ ದೃಷ್ಟೀಲೀ ಒಂದು ಲೆವಲ್ಲರ್ ಇದ್ದ ಹಾಗೆ... ಒಂದು ಕಾಲದಲ್ಲಿ Taxes, and Death were levellers ಅಂತಿದ್ವಲ್ಲ ಹಂಗೆ! ನೀವು 2 ವಾರ ಇಂಡಿಯಾ ರಜಾ ಮುಗುಸ್ಗೊಂಡ್ ಬಂದ್ ಇಲ್ಲಿ ಹಾಯಾಗಿ ನಿದ್ರೆ ಮಾಡ್ತಿದ್ರೆ, ದಿಢೀರ್ ಅಂತ ಎಚ್ರ ಆಗುತ್ತೆ... ನಿಮ್ ಫ಼ೋನ್ ಟನ್ ಅಂತ ಸೌಂಡ್ ಮಾಡ್ದಾಗ ನಿಮಗೆ ಹೆದರಿಕೆ ಆಗುತ್ತೆ! ಹಾಗಿದೆ ಈ OTP ಝಲಕ್ ಒಂಥರ ಅದರ ಟ್ರೋಮಾದಿಂದ ಹೊರಗೆ ಬರೋಕೆ ಆಗಲ್ಲ ಅನ್ನೋ ಹಾಗೆ!!
SatisHFaction: ಕನ್ನಡ ಪಾಡ್‌ಕ್ಯಾಸ್ಟ್