Tuesday, March 21, 2006

ವಲಸಿಗನ ಗೋಳು!

ಹಲವು ಸಮಾಜ ಶಾಸ್ತ್ರಜ್ಞರು ವಾದ ಮಾಡೋ ಹಾಗೆ ವಲಸೆ ಬಂದವರಿಗೆ ಸುಮಾರು ೨೫ ವರ್ಷಗಳು ಬೇಕಾಗುತ್ತಂತೆ ತಮ್ಮನ್ನ ತಾವು establish ಮಾಡಿಕೊಳ್ಳೋಕೆ!

ನಮ್ ಆಫೀಸ್‌ನಲ್ಲಿ ಕೆಲಸ ಮಾಡೋ ಭಾರತೀಯ ಸಂಜಾತೆಯೊಬ್ಬಳನ್ನು ಕೇಳಿದೆ - 'ನಿಮ್ಮ ಮಗ ಇಲ್ಲೇ ಶಾಲೆಗೆ ಹೋಗ್ತಾನಂತೆ, ಹೌದಾ?'
ಅವಳೆಂದಳು 'ಹೌದು, ಇಲ್ಲೇ ಸ್ಕೂಲಿಗೆ ಸೇರ್‍ಸಿದ್ವಿ, ಮುಂದೆ ಅವನು ದೊಡ್ಡವನಾದ ಮೇಲೆ, ನಾವು ಇಂಡಿಯಾಕ್ ಹೋಗಿ ರಿಟೈರ್ ಆಗ್ ಬೇಕು ಅಂತ ಇದೀವಿ'.

ನಿಮ್ಮ ವಿಷ್ಯ ನನಗ್ಗೊತ್ತಿಲ್ಲ, ನಾನು ಭಾರತದಲ್ಲಿ ಹುಟ್ಟಿ ಅಲ್ಲಿ ೨೫ ವರ್ಷ ಇದ್ದು ಬೆಳೆದೋನು, ಇನ್ನು ಸಮಾಜಶಾಸ್ರಜ್ಞರ ಮಾತು ನನ್ನ ಮಟ್ಟಿಗೆ ನಿಜವಾಗಿ ಇಲ್ಲಿ ನೆಲೆ ಊರೋದಕ್ಕೆ ನನಗೆ ೨೫ ವರ್ಷ ಬೇಕಾಯ್ತು ಅಂದುಕೊಳ್ಳಿ, ಅಲ್ಲಿಗೆ ನನಗೆ ೫೦ ವರ್ಷ ಆಗಿರುತ್ತೆ. ಈ ಹತ್ತು ವರ್ಷಗಳಲ್ಲೇ ನನಗೆ ಭಾರತೀಯರ ಬೆಳವಣಿಗೆಗೆ ಸ್ಪಂದಿಸಲು ಶಕ್ತಿ ಕುಂದುತ್ತಾ ಇದೆ, ಇನ್ನೂ ಹದಿನೈದು ವರ್ಷಗಳಲ್ಲಿ ಇನ್ನೇನು ಬೆಳವಣಿಗೆಯಾಗುತ್ತೋ, ನನ್ನಲ್ಲಿ ಯಾವುದೇ ಶಕ್ತಿ ಉಳಿದಿರುತ್ತೇ ಅನ್ನೋದಕ್ಕೆ ಏನು ಗ್ಯಾರಂಟಿ? ನನ್ನ ಸಹೋದ್ಯೋಗಿ ವಾಪಾಸ್ಸು ಭಾರತಕ್ಕೆ ಹೋಗ್ತಾಳೋ ಬಿಡ್ತಾಳೋ, ಇವೆಲ್ಲವನ್ನೂ ಯೋಚಿಸಿದರೆ ನಾವು ಹಿಂದಕ್ಕೆ ಹೋಗುವ ಮಾತು ದಿನೇ ದಿನೇ ದೂರವಾದಂತೆನಿಸೋಲ್ಲವೇ?

ಇಲ್ಲಿ ಮತ್ತೊಂದು ಸಮಸ್ಯೆ ಇದೆ - ನಾನು ವಲಸಿಗನಾಗಿ ಬಂದವನೇ? ನಾನು ಇಲ್ಲಿಗೆ H1B ಕೂಲಿಯಾಗಿ ಬಂದವನು, ಅಂದರೆ non-immigrant ವೀಸಾದಲ್ಲಿ, ಮುಂದೆ ವಲಸಿಗನಾದವನು - ಸದ್ಯಕ್ಕೆ ಹಸಿರು ಕಾರ್ಡಿನ ಫಲಾನುಭವಿ - ಹಸಿರಿನಿಂದ citizenship ಗೆ ಬದಲಾಯಿಸಬೇಕೋ ಬಿಡಬೇಕೋ ಅದು ಮತ್ತೊಂದು ಮಹಾ ಸಮಸ್ಯೆ, ಮುಂದೆ ನೋಡೋಣ - ನಮ್ಮೂರಲ್ಲಿ ಬಡವರಿಗೆ ಮಾತ್ರ ಹಸಿರು ಕಾರ್ಡನ್ನು ಕೊಡ್ತಾರೆ, ಅಂದ್ರೆ ನಾನು ಇಲ್ಲಿಗೆ ಬಂದು "ಬಡವ" (ಅಥವಾ ಬಢವ) ನಾದವನು ಅನ್ನಲ್ಲಿಕ್ಕೂ ಅಡ್ಡಿ ಇಲ್ಲ. ಈ ಸಮಾಜಶಾಸ್ತ್ರಜ್ಞರ ತತ್ವ ನನಗೆ ಒಪ್ಪುತ್ತೋ ಅನ್ನೋ ಜಿಜ್ಞಾಸೆ (ಅಲ್ಲ ಬರೀ ಆಸೆ) ಹುಟ್ಟುತ್ತೆ. ಏನೇ ಹೇಳೀ ಮೆಕ್ಸಿಕೋ ಬಾರ್ಡರನ್ನು ದಾಟಿ ಬಂದಂಥವರೋ, ಅಥವಾ ಈ ಹಿಂದೆ ಯೂರೋಪಿನಿಂದ ಸಾಮಾಜಿಕ, ನೈತಿಕ, ಧಾರ್ಮಿಕ ಹಾಗೂ ರಾಜಕೀಯ ದಾಹಗಳನ್ನು ಹೊತ್ತು ತಂದ ವಲಸಿಗರಿಗಿಂತಲೂ ನನ್ನಂತವರು ಭಿನ್ನ.

ಆನಂದ ಭಕ್ಷಿ ರಚಿಸಿದ, ನಾಮ್ ಚಿತ್ರದ 'ಚಿಟ್ಟೀ ಆಯಿ ಹೈ' ಹಾಡನ್ನು ಕೇಳಿದಾಗಲೆಲ್ಲ - 'ಪರದೇಶಕ್ಕೆ ಹೋಗುವವರೇ, ಹಿಂತಿರುಗಿ ಬಾರದವರೇ...' ಎನ್ನುವ ಪದ ಪಂಕ್ತಿಗಳು ನನಗೆ ಅನ್ವಯಿಸಲಾರವು ಅನ್ನುವ ಮಾತು ನಾನಿಲ್ಲಿ ಕಳೆದಷ್ಟು ದಿನಗಳೂ ಹಳೆಯದಾಗುತ್ತಾ ಹೋಗುತ್ತವೆ. ಬುದ್ಧಿವಂತರು ಬಳಸಿದ ಹಾದಿಯೆಂದರೆ ಇಲ್ಲಿ ಬಂದು ಹಾಯಾಗಿ ಇರುವುದು ಎಂತಲೋ ಅಥವಾ ಆದಷ್ಟು ಬೇಗ ಗಂಟೂ-ಮೂಟೆ ಕಟ್ಟುವುದು ಎಂತಲೋ? (ಅಲ್ಲದೇ ವಲಸಿಗರೆಲ್ಲ ಬುದ್ಧಿವಂತರೇನಲ್ಲ, ಅಲ್ವೇ?). ಸರಿ, ಇದಕ್ಕೆಲ್ಲ ಉತ್ತರ ಸಿಕ್ಕೀತೇನೋ ಎಂದು Robert Frost ನ ಮೊರೆ ಹೋದೆ, ಅವನೂ ಕೊನೆಗೆ ಕೈಯಲ್ಲಿ ಕವಲೊಂದನ್ನು ಕೊಟ್ಟು ಹೋದ:

"I shall be telling this with a sigh
Somewhere ages and ages hence:
Two roads diverged in a wood, and I—
I took the one less traveled by,
And that has made all the difference."

Robert Frost ನನ್ನು ಇಷ್ಟು ಕೆಟ್ಟದಾಗಿ ಬಳಸಿಕೊಂಡಿ(ದಿ)ದ್ದಕ್ಕೋ, ಅರ್ಥೈಸಿಕೊಂಡಿದ್ದಕ್ಕೋ ನನ್ನನ್ನು ಬೈಯುವ ಹಕ್ಕನ್ನು ಇಂಗ್ಲೀಷ್ ಮೇಸ್ಟ್ರಿಗೆ ಬಿಡುತ್ತೇನೆ. ಈ ಪದ್ಯದ ಹಲವಾರು ರೀತಿಯ ವಿಮರ್ಶೆಗಳೆಲ್ಲ ಒಂದು ಕಾಲದಲ್ಲಿ ನಾಲಿಗೆಯ ತುದಿಯಲ್ಲಿತ್ತು, ಇಂದು ಎದೆಯ ತಿದಿಯನ್ನೊತ್ತಿದರೂ ಪದ್ಯದ ಎರಡು ಸಾಲುಗಳೂ ಸರಿಯಾಗಿ ನೆನಪಿನಲ್ಲಿರದುದ್ದಕೆ ನಾನು ಯಾರನ್ನೂ ದೂಷಿಸೋದಿಲ್ಲ, ಅದು ಸಹಜವಾದದ್ದು ಎಂದು ನಿರ್ಲಿಪ್ತನಾಗುತ್ತೇನೆ!

ಇತ್ತೀಚಿನ ಭ್ರಮ ನಿರಸನಗಳಲ್ಲಿ ಅಮೇರಿಕೆಗೆ ಬಂದು ಕೈಯಲ್ಲಿ ಕಾಸು ನಿಲ್ಲದೇ ಹೋಗೋದೂ ಸಹ ಒಂದು. ಎಷ್ಟೇ ದುಡಿದ್ರೂ ಅದೂ ಹಂಗೂ-ಹಿಂಗೂ ಖರ್ಚಾಗೇ ಹೋಗುತ್ತೇ ವಿನಾ ವರ್ಷದ ಕೊನೇಲಿ ನನ್ನದು ಎಂದು ಉಳಿಯೋದು ಬಹಳ ಕಡಿಮೆ - ಈ ಪೇ ಚೆಕ್ ನಿಂದ ಪೇ ಚೆಕ್‌ಗೆ ಬದುಕೋರ್ ಹಣೇ ಬರಹ ಇನ್ನೇನಾಗುತ್ತೆ ಮತ್ತೆ? - ಅದೇ ನಮ್ಮ ಸತ್ಯಬಾಬು ಮಾಡಿದ್ದೇ ಸರಿ ಅನ್ಸುತ್ತೆ: ೧೯೯೬ರಲ್ಲಿ ನಾವೆಲ್ಲ ಅಮೇರಿಗೆ ಹೋಗೋದೂ ಅಂದ್ರೆ ಹಿಮಾಲಯದ ತಪ್ಪಲಿನಲ್ಲಿ ೨೫ ವರ್ಷ ತಪಸ್ಸು ಮಾಡಿದ ಋಷಿಗೆ ದೇವರು ಪ್ರತ್ಯಕ್ಷನಾಗಿ ಮೋಕ್ಷ ಕೊಟ್ಟಾಗ ಎಷ್ಟು ಸಂತೋಷವಾಗ್ತಿತ್ತೋ, ಅಷ್ಟು ಸಂತೋಷವಾಗಿತ್ತು. ನಾವೆಲ್ಲ ನಮ್-ನಮ್ ಬೇಳೆ ಕಾಳು ಬೆಯ್ಯೋ ಸ್ಥಿತಿಗೆ ಬಂದಕೂಡ್ಲೇ ದೇಶ ಬಿಟ್ಟು, ಕಂಬಿ ಕಿತ್ತೆವು. ಆದರೆ ಸತ್ಯಬಾಬು ಮಾತ್ರ ಬೆಂಗಳೂರಿನಲ್ಲೇ ತನ್ನ ಅಪ್ಪ-ಅಮ್ಮನನ್ನು ಬಿಟ್ಟು ಬರೋದು ಬೇಡ ಎಂದು ಅಲ್ಲೇ ವಿಪ್ರೋ ಸೇರಿಕೊಂಡು ಇರೋ ನಿರ್ಧಾರ ಮಾಡಿದ. ನಾವೆಲ್ಲ ಒಳಗೊಳಗೇ ಬೆರಗಾಗಿದ್ದೆವು. ಇಂದು ಅವನು ಎಲ್ಲಿದ್ದಾನೋ ಯಾರಿಗೆ ಗೊತ್ತು? ಅವನು ಬಿಸಿನೆಸ್ ಟ್ರಿಪ್ಪೂ ಅದೂ-ಇದೂ ಅಂತ ಕಂಡ ಕಂಡ ದೇಶಾನೆಲ್ಲ ಕಂಪನಿ ದುಡ್ಡಲ್ಲಿ ತಿರುಗಿದ್ದಾನೆ ಅಂತ ಕೇಳಿದೆ. ೧೯೯೬ರಿಂದ ಅವನು ಇಲ್ಲೀವರೆಗೆ ವಿಪ್ರೋನಲ್ಲೇ ಇದ್ರೆ, ಅವನ ಸ್ಟಾಕ್ ಆಪ್ಷನ್ನೂ, ಅವನ ಸಾಮಾಜಿಕ ಸ್ಥಿತಿಗತಿಯೂ, ಅವನ ವೃತ್ತಿಯೂ, ಅವನ ಸ್ಟೇಟಸ್ಸೂ ಇವೆಲ್ಲ ಹೇಗಿರಬಹುದು ಹತ್ತು ವರ್ಷಗಳ ನಂತರ? ಅದೇ ನನ್ ಸ್ಥಿತಿ ಬಗ್ಗೆ ನಿಮಗೆಲ್ಲ ಗೊತ್ತಿರೋದೇ, ಇಲ್ಲಾ ಅಂದ್ರೆ ಅಕ್ಕನ ಮಗಳ ಮದುವೆ ಒಂದು ಲಕ್ಷ ರೂಪಾಯಿ ಕೊಡೋಕೆ ಹಿಂದೆ-ಮುಂದೆ ನೋಡ್ತಿದ್ನೇ?

ನನ್ ಸ್ನೇಹಿತ ಶಂಕ್ರ ನನ್ನನ್ನ ಉದ್ದೇಶಿಸಿ ಯಾವತ್ತೋ ಒಂದು ಮಾತು ಹೇಳಿದ್ದ - ನೀನು ಬುದ್ಧಿವಂತರಲ್ಲಿ ದಡ್ಡ, ದಡ್ಡರಲ್ಲಿ ಬುದ್ಧಿವಂತ - ಎಂದು. ಈ ಮಾತು ಇವತ್ತಿಗೂ ಬಹಳ ಬದಲಾಯಿಸಿಲ್ಲ, ನನ್ನ ನಿಲುವಿನಲ್ಲಿ. ಅದಕ್ಕಿನ್ನೊಂದು ಕರೋಲ್ಲರಿ ಸೇರಿಸೋದಾದ್ರೆ, ನನ್ನ ವಲಸಿಗ ಬದುಕು (ಒಂಥರಾ ಬಂಡ್ ಬಾಳ್ವೆ) 'ಶ್ರೀಮಂತರೊಳಗೆ ಬಡವ, ಬಡವರೊಳಗೆ ಶ್ರೀಮಂತ'ವಾದದ್ದು. ನಾನು ದುಡಿದ ಹಣಕ್ಕೆ ಅಲ್ಪಾ-ಸೊಲ್ಪಾ ಶ್ರೀಮಂತಿಕೆ ಏನಾದ್ರೂ ಬರುತ್ತೇ ಅನ್ನೋದಾದ್ರೆ ನನ್ ಡಾಲರ್‌ನ್ನ ರುಪಾಯಿಗೆ ಬದಲಾಯಿಸಿದಾಗಲೇ!

ಅಂದ್ರೆ ಭಾರತದಿಂದ ನಾನು ದೂರ ಹೋದಷ್ಟೂ, ನನ್ನ ಶ್ರೀಮಂತಿಕೆ ನನ್ನೊಳಗಿನ ಮರೀಚಿಕೆಯಾಗುತ್ತೋ, ಅಥವಾ ನಾನು ಇಲ್ಲಿ ಸೆಟ್ಲ್ ಅಂತ ಆದಾಗ (ಈ ಸೋಸಿಯಲಿಸ್ಟ್‌ಗಳ ಮನೆ ಹಾಳಾಗ), ನನಗೆ ೫೦ ವರ್ಷ ಆಗಿರತ್ತೋ? ಅನಿಕೇತನವಾದ ಮನಸ್ಸಿದೆ, ನಿಕೇತನವಾಗುವುದಕ್ಕೆ ನೆರೆ-ಹೊರೆಯಿಲ್ಲ ಎನ್ನುವುದು ಇತ್ತೀಚಿಗಿನ ಕೊರಗಿನೊಳಗೊಂದು!

ವಯಸ್ಸಾದಂಗೆ ಕನ್ನಡ ಮಾಯವಾಗುತ್ತಾ?

ಹುಟ್ಟಿದಾಗಿಂದ ಸಾಯೋವರೆಗೆ ಕನ್ನಡ ನಾಡಲ್ಲೇ ಇರ್‍ತಾರ್ ನೋಡಿ ಅವರ ಹತ್ರ ನನ್ನದೊಂದು ಪ್ರಶ್ನೆ ಇದೆ - ಏನೂ ಅಂದ್ರೆ, ನಮಗೆ ವಯಸ್ಸಾದಂತೆಲ್ಲಾ ನಮ್ಮ ಮಾತೃ ಭಾಷೆಯಲ್ಲಿರೋ ಪದಗಳ ಸಂಖ್ಯೆ ಹೆಚ್ಚಾಗುತ್ತೋ, ಅಷ್ಟೇ ಇರುತ್ತೋ ಅಥವಾ ಕುಗ್ಗತ್ತೋ ಅಂತ. ಮನೆ ಬಿಟ್ಟು ಮಾರು ಬಿಟ್ಟು ವಿದ್ಯಾಭ್ಯಾಸಕ್ಕೋ, ನೌಕರಿಯ ಸಲುವಾಗೋ ನಾನಂತೂ ಊರು ಬಿಟ್ಟು, ದೇಶ ಬಿಟ್ಟು ಬಂದದ್ದಾಯ್ತು - ನಮ್ ದೇಶದ majorityಲ್ಲಿ ಒಬ್ಬನಾಗಿ ಬಿದ್ದಿದ್ರೂ ಕೀಳರಿಮೆ ಕೊರೀತಲೇ ಇತ್ತು, ಆದೇ ದೇಶ ಬಿಟ್ಟಮೇಲಂತೂ ಕೀಳರಿಮೆಯೇ ಬದುಕಾಗಿ ಹೋಗಿದೆ. ಆಫೀಸ್ ಬಿಟ್ರೆ ಮನೆ ಮುಟ್ಟೋವರೆಗೆ ಯಾವ್ದೂ ಪರಿಚಯದ ಮುಖವೂ ಸಿಗೋಲ್ಲ, ಮಾತೂ ಕೇಳೋಲ್ಲ. ನಾನಾಯ್ತು, ನನ್ನ ಪಾಡಾಯ್ತು ಅಂತ ಇದ್ದು ಎಷ್ಟು ಬೆಳೆಯೋಕಾಗುತ್ತೆ?

ಇವೆಲ್ಲ ಕಡಿಮೆ ಅನ್ನೋ ಹಾಗೆ ಇತ್ತೀಚೆಗೆ ಇನ್ನೊಂದು ರೋಗ ಶುರುವಾಗಿದೆ - ಕನ್ನಡ ಪದಗಳು ನಿಧಾನವಾಗಿ ಮರೆತು ಹೋಗ್ತಾ ಇರೋದು. ಮುಂಚೆಲ್ಲಾ ಆಗಿದ್ರೆ interaction ಅನ್ನೋ ಪದಕ್ಕೆ ತಟ್ಟಂತ ಕನ್ನಡ ಪದ ಹೊಳೀತಿತ್ತು, ಈಗ ತಿಣುಕಿದ್ರೂ ಸಿಗೋಲ್ಲ. ಕನ್ನಡ ಕಸ್ತೂರಿನೋ ಮತ್ತೊಂದೋ ಸೈಟ್‌ಗೆ ಹೋದ್ರೂ ಸಮಾಧಾನ ಆಗೋಲ್ಲ. ಈ internet ಅನ್ನೋದು ದೊಡ್ಡ ಸಾಗರವೇ ಇರಬಹುದು, ಆದ್ರೆ ಅದರಲ್ಲಿರೋ ಉಪ್ಪು ನೀರನ್ನ ಎಷ್ಟೂ ಅಂತ ಗಾಳಸ್ತೀರೋ ನೀವೇ ಹೇಳಿ?

ದೇಶ ಬಿಟ್ಟು ಭಾಷೆ ಬಿಟ್ಟು ಎಷ್ಟೋ ವರುಷಾ ಆದ್ರೂ ಪುಸ್ತಕ ಬರೆಯೋರಿದ್ದಾರೆ - ಕಾಂಜೀಪೀಂಜಿ ಬರಹಗಾರರ ಬಗ್ಗೆ ಹೇಳ್ತಾ ಇಲ್ಲಾ ನಾನು - ದೊಡ್ಡ ಮನುಷ್ಯರ ಬಗ್ಗೆ ಹೇಳ್ತಾ ಇರೋದು, ಅವರಿಗೆಲ್ಲಾ ಪದಗಳ ಸಮಸ್ಯೆ ಬರುತ್ತೋ ಇಲ್ವೋ ನನ್ನಂಥ ಸಾಮಾನ್ಯನ ಕಥೆ ಆರಕ್ಕೂ ಏರಲ್ಲ ಮೂರಕ್ಕೂ ಇಳಿಯಲ್ಲ ಅಂತಾರಲ್ಲ ಹಾಗೆ. ಈ mediocre ಆಗಿ ಬದುಕೋದು ಬಹಳ ಕಷ್ಟ ಸ್ವಾಮಿ, ಅದೂ ತಾನು mediocre ಅಂಥ ಗೊತ್ತಾದಮೇಲೂ ಇನ್ನೂ ಕಷ್ಟ!

ಹಂಗಂತ ನನ್ನ ಕನ್ನಡ ಪದಗಳಿಗೇನೂ ಕೊರತೆ ಇಲ್ಲ - ಆಫೀಸ್ ಅನ್ನೋ ಪದದ ಬದಲಿಗೆ ಕಛೇರಿ ಅನ್ನಬಹುದು, afternoon ಅನ್ನೋ ಬದಲಿಗೆ ಮಧ್ಯಾಹ್ನ ಎನ್ನಬಹುದು. ಹೀಗೆಲ್ಲ ಮಾತಾಡೋದ್ರಿಂದ ನನ್ನ ಕನ್ನಡ ನನ್ನನ್ನ ಹಳ್ಳಿಯವನನ್ನಾಗಿ ಎಲ್ಲಿ ಮಾಡಿಬಿಡುತ್ತೋ ಅನ್ನೋ ಹೆದರಿಕೆ ಬೇರೆ - ಒಂಥರಾ ಈ ಧಾರವಾಡದ್ ಮಂದಿ ಮಂಗಳೂರ್‌ನೋರ್ ಜೋಡಿ ತಮ್ಮ ಶೈಲಿನಲ್ಲಿ ಮಾತಾಡಕ್ ಹೆದರ್‌ತಾರ್ ನೋಡ್ರಿ ಹಂಗೆ. ಇಲ್ಲಾ ಅಂದ್ರೆ ನಾನು ಪ್ರತೀಸಾರಿ ironing table ಅನ್ನು ಇಸ್ತ್ರಿ ಮೇಜು ಅಂಥ ಕರೆದಾಗಲೂ, socks ಅನ್ನು ಕಾಲ್‌ಚೀಲ ಎಂದು ಹೇಳಿದಾಗಲೂ ನಮ್ ಮನೆಗೆ ಬಂದಿರೋ visitors ನನ್ನನ್ನ ದುರ್‌ಗುಟ್‌ಗೊಂಡು ಯಾಕೆ ನೋಡ್ತಿದ್ರು? ಈ ಬಗ್ಗೆ ನನ್ನ ಹೆಂಡತೀನೋ, ಮೊದಲಿಗೆ ನಕ್ಕೂ-ನಕ್ಕೂ ತಾನೇ ಈಗ ಕಾಲ್‌ಚೀಲ ಅನ್ನುವಂಗೆ ಆಗಿದ್ದಾಳೆ!

ನನ್ನ ಕನ್ನಡ ಪದಗಳು ನನ್ನಿಂದ ಈ ರೀತಿ evoparate ಆಗ್ದೇ ಹೋಗಿದ್ರೆ ಈ ಮೇಲಿನ ಪ್ರತೀ ಪ್ಯಾರಾದಲ್ಲೂ ಒಂದಲ್ಲ ಒಂದು ಇಂಗ್ಲೀಷ್ ಪದಗಳನ್ನ ಬಳಸ್ತಿದ್ನೇ? ಅಕಸ್ಮಾತ್ ಬಳಸದೇ ತಿಣುಕಿ-ಇಣುಕಿ ಬರೆದಿದ್ರೂ ಈ ಬರಹ ನಿಮ್ಮನ್ನ ಇಲ್ಲಿವರೆಗೂ ಓದಿಸ್‌ಕೊಂಡು ಹೋಗ್ತಿತ್ತೇ? ಆಫೀಸ್ ಎನ್ನುವಲ್ಲಿ ಕಛೇರಿ ಎಂದೋ, ಇಂಟರ್‌ನೆಟ್ ಎನ್ನುವಲ್ಲಿ ಅಂತರ್ಜಾಲ ಎಂದೋ, ಇವಾಪರೇಟ್ ಅನ್ನೋ ಬದಲಿಗೆ ಆವಿ ಎಂಥಲೋ ಬರೆದಿದ್ರೆ ಚೆನ್ನಾಗಿರೋದಾ? ಅಥವಾ ಆಗ ಕನ್ನಡದ ನಡುವೆ ಸಂಸ್ಕೃತ ಪದಗಳನ್ನ ಸೇರಿಸ್ತಿದ್ವಿ, ಅದರ ಬದಲಿಗೆ ಈಗ ಇಂಗ್ಲೀಷ್ ಸೇರುಸ್ತೀವಿ, ಅದರಲ್ಲೇನು ವ್ಯತ್ಯಾಸವಿಲ್ಲ ಅಂತೀರೋ?

ಏನೇ ಹೇಳಿ, ನನ್ನ ಕೇಳಿದ್ರೆ ನಾವು ಬೆಳೆದಂಗೆ (ಯಾವ ದಿಕ್ಕಿನಲ್ಲಿ, ಹೇಗೆ ಅನ್ನೋದು ಇನ್ನೊಂದು ದಿನದ ಮಾತಾಗಲಿ) ನಮ್ಮ-ನಮ್ಮ ಭಾಷೇನೂ ಬೆಳೀಬೇಕು. ಆದರೆ ನಮ್ಮ ಭಾಷೇ ಅಂದ್ರೆ ಯಾವ್ದು ಅನ್ನೋದು ಒಳ್ಳೇ ಪ್ರಶ್ನೆ! ನಮಗೆ ಗೊತ್ತಿರೋ ಎಲ್ಲ ಭಾಷೆಗಳನ್ನು ಕಲಸು-ಮೇಲೋಗರ ಮಾಡಿ ಏನೋ ಒಂದು ಮಾತಾಡ್‌ಬಹುದು ಬರೀ ಬಹುದು. ಆದ್ರೆ ಅದನ್ನ ಓದೋರೂ ಅದೇ ಮಟ್ಟದಲ್ಲಿ ಇರಬೇಕಾಗುತ್ತೋ ಏನೋ? ಸರಿ ನಾನು ಬೆಳೆಯೋದರ (ಅಥವಾ ಕುಗ್ಗೋದರ) ಜೊತೆಗೆ ನನ್ನ ಬರಹವನ್ನು ಓದುವವರನ್ನು ಏಕೆ ಸಂಕುಚಿತರನ್ನಾಗಿ ಮಾಡಬೇಕು? (ಸದ್ಯ, ಈ ಮೇಲಿನ ವಾಕ್ಯಗಳಲ್ಲಾದರೂ ಕನ್ನಡ ಪದಗಳೇ ಇವೆಯಲ್ಲ!)

ಒಂದು ವಿಷ್ಯಾ ಅಂತೂ ಗ್ಯಾರಂಟಿ, ಇಂಗ್ಲೀಷ್ ಮಾತಾಡೋ ದೇಶದಲ್ಲಿ ಕೆಲಸ ಮಾಡಿದಾಕ್ಷಣ ನಮ್ ಇಂಗ್ಲೀಷೂ improve ಆಗುತ್ತೆ ಅನ್ನೋದು ಬರೀ ಭ್ರಮೆ!

Monday, March 20, 2006

ಮಾವನ ಮಿತಿ

ಬೇರೆ ಎಲ್ಲರಿಗೂ ಈ ರೀತಿ ಸಮಸ್ಯೆ ಬಂದಿರುತ್ತೆ, ಅದರಿಂದಲಾದರೂ ಏನಾದ್ರೂ ಉಪಾಯ ಹೊಳೆದ್ರೂ ಹೊಳೀಬಹುದು. ಸಮಸ್ಯೆ ಇಷ್ಟೇ, ನನ್ನ ಅಕ್ಕನ ಮಗಳೊಬ್ಬಳ ಮದುವೆ ನಿಶ್ಚಯವಾಗಿದೆ, ಹುಡುಗ ಒಂದೂವರೆ ಲಕ್ಷ ರೂಪಾಯಿ ವರದಕ್ಷಣೆ ಕೇಳ್ತಾ ಇದ್ದಾನಂತೆ, ಮತ್ತೆ ಮದುವೆ ಮಾಡಿಕೊಡೋ ಖರ್ಚೂ ಇರುತ್ತಲ್ವಾ? ವರದಕ್ಷಣೆ ವಿಷ್ಯನಾ ಪೋಲೀಸರಿಗೆ ರಿಪೋರ್ಟ್ ಮಾಡಿ, ಒಂದಲ್ಲ ಒಂದು ರಾದ್ಧಾಂತ ಎಬ್ಬಿಸಿ ಈ ಮದುವೆ ನಿಲ್ಸೋದು ಸುಲಭ - ಹುಡುಗನ ಮಾವನೇ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಅಂತೆ - ಆ ವಿಷ್ಯಾನ ಅವನಿಗೇ ಬಿಡೋಣ! ಹುಡುಗಿಗೆ ತಂದೆ ಇಲ್ಲ, ಅಣ್ಣ ಒಬ್ಬ ಗುಮಾಸ್ತನಾಗಿದ್ದಾನೆ, ಇರೋ ಮನೆ ಮತ್ತೆ ಸುತ್ತಲಿನ ಮನೆಗಳಿಂದ ಬಾಡಿಗೆ ರೂಪದಲ್ಲಿ ಒಂದಿಷ್ಟು ಆದಾಯ ಬರುತ್ತೆ ಅನ್ನೋದು ಬಿಟ್ರೆ ಯಾವುದೇ ಆಸ್ತಿ ಇಲ್ಲ, ಇನ್ನು ತಾಯಿ ಅಂದ್ರೆ ನನ್ನ ಅಕ್ಕ - ಮನೆ ಕೆಲ್ಸಾ ಮಾಡಿಕೊಂಡಿರ್ತಾಳೆ.

ಹುಡುಗಿಗೆ ನಾವು ಮೂರು ಜನ ಮಾವಂದಿರು, ಒಬ್ಬ ನನಗೂ ಇದಕ್ಕೂ ಸಂಬಂಧ ಇಲ್ಲ ಅಂತ ಕೈ ತೊಳಕೊಂಡು ಕೂತಿದ್ದಾನಂತೆ - ಇನ್ನೆರಡು ವಾರದಲ್ಲಿ ಅವನ ಹೊಸ ಮನೆ ಒಕ್ಕಲು, ಅದರಲ್ಲೂ ಅವನ ಮಗನಿಗೆ ಆಗಾಗ್ಗೆ ಹುಷಾರು ಇರೋಲ್ಲ, ಅವನೂ ಹೇಳಿ-ಕೇಳಿ ಮಿಡ್ಲು ಸ್ಕೂಲು ಮೇಷ್ಟ್ರು, ಅವನನ್ನ ಅವನಷ್ಟಕ್ಕೇ ಬಿಟ್ರೆ ಒಳ್ಳೇದು, ಅಲ್ವೇ? ಇನ್ನೊಬ್ಬ, ನನ್ನ ಹಿರಿಯಣ್ಣ, ಒಂದು ಸಣ್ಣ ಅಂಗಡಿ ಇಟ್ಟುಕೊಂಡು, ಶಾಲೆ-ಕಾಲೇಜಿಗೆ ಹೋಗೋ ಮೂರು ಮಕ್ಕಳ್ಳಿದ್ದೂ ಈ ಮದುವೆ ತನ್ನ ಮಗಳದ್ದೇ ಅನ್ನುವಷ್ಟರ ಮಟ್ಟಿಗೆ ತಲೆಕೆಡಿಸಿಕೊಂಡು ಕೂತಿದ್ದಾನೆ. ಮೂರನೆಯವ ನಾನು, ಹೇಳಿ-ಕೇಳಿ ಪರದೇಸಿ!

ನಮ್ ದೊಡ್ಡ ಅಣ್ಣ - ಅದೇ ಅಂಗಡಿ ಇಟ್ಟುಕೊಂಡಿದ್ದಾನಲ್ಲ ಅವನು, ಈ ಎರಡು ವಾರದಲ್ಲಿ ಪದೇ-ಪದೇ ಫೋನ್ ಮಾಡ್ತಾನೇ ಇದ್ದ, ನನಗೆ ಏನಾದ್ರೂ ಮಾಡಿ ಹಣ ಹೊಂದಿಸಿಕೊಡು ಎನ್ನೋದು ಅದರದೆಲ್ಲದರ ಸಾರ. ನಾನು ಒಂದು ಲಕ್ಷ ರೂಪಾಯಿ ಕೊಟ್ರೂ ಅದರ ಡಾಲರ್ ಸಮ ಸುಮಾರು ಎರಡೂ ಕಾಲು ಸಾವಿರ ಆಗುತ್ತೆ. ನಮ್ಮ ಅಣ್ಣ ಹೇಳೋದೇನೂ ಅಂದ್ರೆ ಸಾಲದ ರೂಪದಲ್ಲಾದ್ರೂ ನಾನು ಈ ಮದುವೆಗೆ ದುಡ್ಡುಕೊಡಬೇಕಂತೆ. ಅದು ಆಗದೇ ಹೋದರೆ ಅವರ ಮನೆಯನ್ನು ನಾನೇ ಆಡವಿಟ್ಟುಕೊಳ್ಳಬೇಕಂತೆ, ಇತ್ಯಾದಿ, ಇತ್ಯಾದಿ.

ನನ್ನ ಮುಂದೆ ಇರೋ ಆಪ್ಷನ್‌ಗಳು ಇಷ್ಟು:
೧) ನೇರವಾಗಿ ಒಂದು ಲಕ್ಷಾನೋ, ಒಂದೂವರೆ ಲಕ್ಷಾನೋ ದಾನದ ರೂಪದಲ್ಲಿ ಬಿಸಾಕೋದು
ಇದು ಸಾಧ್ಯವಿಲ್ಲದ ಮಾತು, ಅಷ್ಟೊಂದು ದುಡ್ಡು ಕೊಡೋಕೆ ನನ್ನಲ್ಲಿ ಹಣವಿದ್ದರೂ ನನ್ನ ಹೆಂಡತಿ ಹೇಳಿದಂತೆ, ಅದನ್ನ ದುಡಿಯೋದಕ್ಕೆ, ಉಳಿಸೋದಕ್ಕೆ ನನಗೆ ಎಷ್ಟು ಸಮಯ ಬೇಕು ಅನ್ನೋದು ನನಗೆ ಗೊತ್ತಿರೋದೇ. ಈ ಮದುವೆಗೆ ಈ ಬಾರಿ ಹಣ ಕೊಟ್ಟರೆ ಅದು ಅಲ್ಲಿಗೇ ನಿಲ್ಲಲ್ಲ, ಇನ್ನುಳಿದ ಅಕ್ಕಂದಿರ, ಅಣ್ಣಂದಿರ ಮಕ್ಕಳಿಗೂ ಇದೇ ರೀತಿ ಹಣ ಕೊಡಬೇಕಾದ ಜವಾಬ್ದಾರಿ ನನ್ನ ಮೇಲೆ ಬಿದ್ದು ಬಿಡುತ್ತೆ.

೨) ಅಕ್ಕನ ಮನೆಯನ್ನು ಅಡವಿಟ್ಟುಕೊಂಡು ಸಾಲದ ರೂಪದಲ್ಲಿ ಹಣ ಕೊಡೋದು
ಸಾಲದ ರೂಪದಲ್ಲಿ ಹಣವನ್ನು ಕೊಡಬಹುದು, ಆದರೆ ಇವರೆಲ್ಲರ ಹಿಂದಿನ ಸಾಲ ತೀರಿಸುವ ಪರಂಪರೆಯನ್ನು, ಇವರ ನಡವಳಿಕೆಗಳನ್ನು ಕೂಲಕಂಷವಾಗಿ ಗಮಸಿದರೆ ಸಾಲ ಎಂದಿಗೂ ತೀರೋ ಸಾಧ್ಯತೆ ಇಲ್ಲವೇ ಇಲ್ಲ. ಹಾಗಾದಾಗ ನಾನು ಒಂದೇ ಅವರ ಮನೆಯನ್ನು ನನ್ನ ಲೆಕ್ಕಕ್ಕೆ ಚುಕ್ತಾ ಮಾಡಿಕೊಂಡೋ, ಅಥವಾ ಸಾಲವನ್ನು ಮರೆತು ಬಿಡುವ ಧರ್ಮ ಸಂಕಟಕ್ಕೆ ಬಿದ್ದು ಬಿಡುತ್ತೇನೆ.

೩) ಹಣವನ್ನು ಸಾಲದ ರೂಪದಲ್ಲಿ ಕೊಡುವಂತೆ ಬ್ಯಾಂಕಿಗೆ ತಾಕೀತು ಮಾಡುವುದು, ಸಾಧ್ಯವಾದರೆ ಜಾಮೀನು ಅಥವಾ ಗ್ಯಾರಂಟಿಕೊಡುವುದು
ಇದೂ ಕೂಡಾ ಆಗದ ಮಾತು, ಈ ಹಿಂದೆ ಹೀಗೆ ಮಾಡಿ ಕೈ ಸುಟ್ಟುಕೊಂಡಿದ್ದಿದೆ. ಸಾಲವೇನೋ ಸಿಗುತ್ತೆ, ಆದರೆ ಜಾಮೀನು ರೂಪದಲ್ಲಿ ನಾನು ಸಿಕ್ಕಿ ಹಾಕಿಕೊಂಡು ಕೊನೆಗೆ ಅಸಲಿನ ಜೊತೆಗೆ ಬ್ಯಾಂಕಿನ ಬಡ್ಡಿಯೂ ನನ್ನ ತಲೆಗೇ ಬಂದು ಬೀಳುತ್ತೆ. ಇದರೆ ಬದಲಿಗೆ ಆಪ್ಷನ್ ೧, ಅಥವಾ ೨ ಒಳ್ಳೆಯದು.

೪) ಈ ಮೇಲಿನವು ಆಗದೇ ಹೋದರೆ ನನ್ನ ಅಣ್ಣ ತನ್ನ ಅಂಗಡಿಯನ್ನು ಆಧಾರವಾಗಿಟ್ಟುಕೊಂಡು ಸಾಲ ತೆಗೆಯುತ್ತಾನಂತೆ - ಅದಕ್ಕೆ ಬ್ಯಾಂಕ್ ಮ್ಯಾನೇಜರ್‌ಗೆ ನಾನು ಶಿಫಾರಸ್ಸು ಮಾಡಬೇಕಂತೆ
ವೈಯುಕ್ತಿಕವಾಗಿ ನನ್ನ ಅಣ್ಣನ ಮೇಲೆ ಕರುಣೆ ಇದೆ, ಆತನಿಗೆ ಪ್ರತಿ ತಿಂಗಳೂ ನಿಗದಿಯಾದ ಯಾವುದೇ ಆದಾಯವಿಲ್ಲ, ಇವತ್ತು ದುಡೀಬೇಕು, ನಾಳೆ ತಿನ್ನಬೇಕು. ಅಂತಾದ್ದರಲ್ಲಿ, ಅವನ ಅಂಗಡಿಯನ್ನು ಇಟ್ಟು ಸಾಲ ತೆಗೆದನೆಂದರೆ, ಅದು ಅವನು ತೀರಿಸೋ ಸಾಧ್ಯತೆ ಕಡಿಮೆಯೇ. ಕೊನೆಗೆ ಅದು ನನ್ನ ತಲೆಗೇ ಬಂದು ಗಂಟು ಬೀಳುತ್ತೆ.

೫) ದುಡ್ಡು ಕೊಡೋಕೇ ಆಗಲ್ಲ ಅನ್ನೋ ನಿರ್ಲಿಪ್ತತೆಯನ್ನು ಪ್ರದರ್ಶಿಸಿ - ಸುಮ್ಮನಿರುವುದು
ಇದೂ ಕೂಡಾ ಆಗದ ಮಾತು. ನನ್ನ ಸಂವೇದನೆಗಳು ನನ್ನನ್ನು ಈ ಸ್ಥಿತಿಗೆ ಒಯ್ಯಲಾರವು.

೬) ಮನೆಯನ್ನು ಅಡವಿಟ್ಟುಕೊಂಡು ಬ್ಯಾಂಕಿನವರಿಗೆ ಸಾಲವನ್ನು ನನ್ನ ಅಕ್ಕನ ಹೆಸರಿಗೆ ಕೊಡುವಂತೆ ಹೇಳಿ, ನಾನು ಮತ್ತು ನನ್ನ ಅಣ್ಣ ಅದರಿಂದ ಹೊರಗಿರುವುದು
ಸದ್ಯಕ್ಕೆ ಇದು ಉಳಿದ ಉಪಾಯ. ಇದರಿಂದ ನಾನು ಮತ್ತು ನನ್ನ ಅಣ್ಣನೂ ಸಾಲದಿಂದ ಮುಕ್ತರಾದರೂ, ನನ್ನ ಅಕ್ಕನ ಮನೆ ಇವತ್ತಲ್ಲ ನಾಳೆ ಬ್ಯಾಂಕಿನವರಿಗೆ ಸೇರಿಯೇ ಸೇರುತ್ತೆ ಅನ್ನೋ ಸತ್ಯದ ದರ್ಶನವಾಗುತ್ತೆ. ಇವರಿಗೆ ಬರೋ ಚಿಲ್ಲರೇ ಆದಾಯದಿಂದ ಬ್ಯಾಂಕಿನವರ ಬಡ್ಡಿ-ಚಕ್ರಬಡ್ಡಿಯನ್ನು ತೀರಿಸಿ ಮನೆಯನ್ನು ಬಿಡಿಸಿಕೊಳ್ಳುವುದು ಕಷ್ಟ ಸಾಧ್ಯ. ಇನ್ನು ನನ್ನ ಸೋದರಳಿಯನೋ ಯಾವ ಜವಾಬ್ದಾರಿಯೂ ಇಲ್ಲದೇ ನಿಶ್ಚಿಂತನಾಗಿದ್ದಾನೆ. ನಾಳೆ ನನ್ನ ಅಕ್ಕ ಸತ್ತ ಮೇಲೆ, ಅವನು ಊರು ಬಿಟ್ಟು ಬೇರೆಲ್ಲಿಯೋ ಹೋಗುತ್ತಾನೆಯೇ ವಿನಾ ಸಾಲ ತೀರಿಸಿ ಮನೆಯನ್ನು ಬಿಡಿಸಿ, ಮನೆಗೆ ತಕ್ಕ ಮಗನಾಗಿ ಬದುಕುವ ಸಂಭವನೀಯತೆ ತುಂಬಾ ಕಡಿಮೆ. ಒಂದುವೇಳೆ, ನನ್ನ ಅಕ್ಕನ ಮಗ ಎಲ್ಲೂ ಯಾರನ್ನೂ ರಿಜಿಸ್ಟರ್ಡ್ ಮದುವೆ ಮಾಡಿಕೊಳ್ಲದೇ ಇದ್ದ ಪಕ್ಷದಲ್ಲಿ, ಅವನಿಗೆ ಒಂದು ಹುಡುಗಿ ನೋಡಿ ಮದುವೆ ಮಾಡಿ, ಇಷ್ಟೇ ಪ್ರಮಾಣದ ಹಣವನ್ನು ವರದಕ್ಷಿಣೆ ರೂಪದಲ್ಲಿ ಕೇಳು ಎಂದು ನಮ್ಮ ಅಣ್ಣನಿಗೆ ಹೇಳಿದ್ದೇನೆ. ಈಗ ನನ್ನ ಅಕ್ಕನ ಮಗಳನ್ನು ಮದುವೆ ಆಗ್ತಿರೋ ಹುಡುಗ ಡ್ರೈವರ್ ಅಂತೆ, ಅವನಿಗೆ ಒಂದೂವರೆ ಲಕ್ಷ ರೂಪಾಯಿ ವರದಕ್ಷಿಣೆಯಾದರೂ, ಗುಮಾಸ್ತರಿಗೂ ಅಷ್ಟೇ ಇರಬೇಕಲ್ಲವೇ? ವರದಕ್ಷಿಣೆಯನ್ನು ಕೆಟ್ಟದ್ದು ಎಂದವರ್ಯಾರು?

ಹೇಳಿ, ನೀವೆಂದಾದರೂ ಇಂಥ ಧರ್ಮ ಸಂಕಟದಲ್ಲಿ ಸಿಕ್ಕಿದ್ದೀರೇ? ನನ್ನ ಜಾಗದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ?

Friday, March 17, 2006

ಎತ್ತಣ ಮಾಮರ ಎತ್ತಣ ಕೋಗಿಲೆ?

ನಾನು ಹೀಗೆ ಮಾಹಿತಿ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತೇನೆಂದು ಯಾವ ಡೆಸ್ಟಿನಿ ಎಲ್ಲಿ ಬರೆದಿತ್ತೋ ಯಾರಿಗೆ ಗೊತ್ತು? ಇಂದು ಹಿಂತಿರುಗಿ ನೋಡಿದರೆ ನಾನು ಬೆಳೆದು ಬಂದ ಬಗೆಯಲ್ಲಿ ಒಂದಲ್ಲ ಒಂದು ರೀತಿಯ ಸುಳಿವು ಸಿಗುತ್ತೆ. ಇಲ್ಲವೆಂದಾದರೆ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಟೈಪಿಂಗ್ ಕ್ಲಾಸಿಗೆ ಸೇರಿಕೊಂಡು ಜ್ಯೂನಿಯರ್ ಪರೀಕ್ಷೆಗಳನ್ನು ಮುಗಿಸುತ್ತಿದ್ದೆನೇ? ಅಥವಾ ಆಪ್ಟೆಕ್‌ನಲ್ಲಿ ಆಗಿನ ಕಾಲದಲ್ಲಿ ನನ್ನ ಸಹೋದ್ಯೋಗಿಗಳೂ ಮೂಗಿನ ಮೇಲೆ ಬೆರಳಿಡುವಷ್ಟು ಹಣವನ್ನು ಪ್ರತಿ ತಿಂಗಳೂ ಕೊಟ್ಟು ಕೋರ್ಸುಗಳನ್ನು ಮುಗಿಸುತ್ತಿದ್ದೆನೇ?

ಇವೆಲ್ಲವೂ ಕಟ್ಟಿ ಹಾಕಿದ ಬಾಂದವ್ಯವೆಂಬಂತೆ ಬನಾರಸ್ಸಿನಲ್ಲಿ ಭಾರತೀಯ ಸರ್ಕಾರದ ಪ್ರಾಜೆಕ್ಟ್‌ನಲ್ಲಿ ಜ್ಯೂನಿಯರ್ ರಿಸರ್ಚ್ ಫೆಲ್ಲೋ ಆಗಿ ಸೇರಿಕೊಂಡಾಗ ನನಗಾದ ಸಂತೋಷ ಅಪರಿಮಿತ. ಬರೀ ಬೆಂಗಳೂರು, ಮೈಸೂರು, ಶಿವಮೊಗ್ಗಗಳಂತಹ ನಗರಗಳನ್ನು ನೋಡಿದ್ದ ನನಲ್ಲಿ ಕಾಶಿಯಂಥ ಮಹಾ ಪಟ್ಟಣ ಹಲವು ರೀತಿಯ ಸೋಜಿಗಳನ್ನು ಮೂಡಿಸಿತ್ತು. ಕಾಶಿಯಲ್ಲಿನ ನನ್ನ ಬದುಕಿನ ಬಗ್ಗೆ ಬರೆದರೆ ಅದೊಂದು ಮಹಾ ಪುರಾಣವೇ ಆದೀತೇನೋ, ಆದರೂ ಇವತ್ತಿಗೂ ನನ್ನ ಹುಟ್ಟೂರಾದ ಆನವಟ್ಟಿಯನ್ನು ಬಿಟ್ಟರೆ ಕಾಶಿ ಅಥವಾ ಬನಾರಸ್ ಎಂದಿಗೂ ನನಗೆ ಅಪ್ಯಾಯಮಾನ. ಅಲ್ಲಿನ ಬದುಕನ್ನು ನೆನೆದಾಗಲೆಲ್ಲ ಹಲವಾರು ರೀತಿಯ ಸಂತಸಗಳು ನನ್ನ ಮನಸಲ್ಲಿ ಹರಿದಾಡುತ್ತವೆ.

ಬನಾರಸ್ಸಿನಲ್ಲಿ ನನ್ನ ಸುಪರ್ದಿಯಲ್ಲಿ ಮೂರು ಕಂಪ್ಯೂಟರ್‌ಗಳಿದ್ದವು: ಒಂದು, ಇಂಟೆಲ್ ೨೮೬ ಪ್ರೋಸೆಸ್ಸರ್, ಹಾರ್ಡ್ ಡಿಸ್ಕ್ ರಹಿತ, ಐದೂ ಕಾಲು ಇಂಚು ಪ್ಲಾಪಿಯನ್ನು ಮಾತ್ರ ಓದುವಂಥದ್ದು, ಎರಡನೆಯದ್ದು, ಇಂಟೆಲ್ ೪೮೬ ಪ್ರೊಸೆಸ್ಸರ್, ೫೦ ಎಮ್.ಬಿ. ಹಾರ್ಡ್ ಡಿಸ್ಕ್ ಇದ್ದು, ಐದೂ ಕಾಲು ಇಂಚು ಪ್ಲಾಪಿಯನ್ನು ಓದಬಲ್ಲದ್ದು, ಮತ್ತು ಮೂರನೆಯದು HP Magnum Multi RISC Unix ಸಿಸ್ಟಮ್. ಇವೆಲ್ಲದರಲ್ಲಿ ನನಗೆ ೨೮೬ ಕಂಪ್ಯೂಟರ್ ತುಂಬಾ ಮೆಚ್ಚುಗೆಯಾದದ್ದು ಅದರಲ್ಲಿ (ಇದ್ದುದರಲ್ಲಿಯೇ) ಒಳ್ಳೆಯ ಸ್ಪೀಕರ್ ಸಿಸ್ಟಮ್ ಇತ್ತು, ನಮ್ಮ ಪ್ರೊಫ಼ೆಸರ್ ಇಲ್ಲದ ಹಲವಾರು ನಿಶಾಚರ ಘಳಿಗೆಗಳನ್ನು ನಾನು ಇದರ ಮುಂದೆ ಕಳೆದದ್ದು ಇದೆ - ಪ್ರಾಜೆಕ್ಟ್ ಕೆಲಸಕ್ಕು, ಹಾಗೂ ಪ್ಯಾಕ್‌ಮ್ಯಾನ್ ಆಟವಾಡುವುದಕ್ಕೂ, ಇದರಲ್ಲೇ ನಾನು ಅತಿ ಹೆಚ್ಚು ಸ್ಕೋರ್ ಮಾಡಿದ್ದು (ಸ್ಥಳೀಯ ದಾಖಲೆಗಳನ್ನು ಮೀರಿಸಿ!). ಈ ಕಂಪ್ಯೂಟರ್‌ನ ಒಂದು ವಿಶೇಷವೆಂದರೆ ಅದು ಭಯಂಕರ ನಿಧಾನ! ಅದು ನಿಧಾನವಾದರೇನಂತೆ, ಬನಾರಸ್ಸಿನ ಬದುಕಿಗೆ ಅದು ಸರಿಯಾಗೇ ಹೊಂದಿಕೊಂಡಿತ್ತು - ಉದಾಹರಣೆಗೆ ನಾವು ಯಾವುದಾದರೊಂದು ಗ್ರಾಫ್‌ನ್ನು ಪ್ರಿಂಟ್ ಮಾಡಬೇಕಾಗಿದ್ದರೆ, ಈ ಕಂಪ್ಯೂಟರ್‌ಗೆ ಡೇಟಾ ಕೊಟ್ಟು ಸುಮಾರು ೧೫-೧೬ ಸಾರಿ ಎಂಟರ್ ಬಟನ್ ಅನ್ನು ಒತ್ತಿ ಹೋಗಿ ಟೀ ಕುಡಿದು ಸಮೋಸಾ ತಿಂದು ಬರುವುದರೊಳಗೆ ಗ್ರಾಫ್ ರೆಡಿ!

ನಮ್ಮ ೪೮೬ ಕಂಪ್ಯೂಟರ್‌ನಲ್ಲಿ ಇರುವ ಕೈ (Chi) ರೈಟರ್ ಎನ್ನೋ ವರ್ಡ್ ಪ್ರಾಸೆಸ್ಸರ್ ಬಳಸಿ, ಬನಾರಸ್ಸಿನಲ್ಲಿ ದೊರೆವ ಸಂಪನ್ಮೂಲಗಳ ಸಹಾಯದಿಂದ ನಾವು ನಮ್ಮ ರಿಸರ್ಚ್ ಪೇಪರ್‌ಗಳನ್ನು ತಯಾರಿಸಿ ಅದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸುವುದೆಂದರೆ ಅದೊಂದು ಮಹತ್ಸಾಧನೆಯೇ ಸರಿ. ನಾನು ಓದಿದ್ದು ಭೌತಶಾಸ್ತ್ರ, ಮಾಡುತ್ತಿದ್ದ ಸಂಶೋಧನೆ ಪಾಲಿಮರ್ ಮೇಲೆ, ಬಳಸುತ್ತಿದ್ದ ತಂತ್ರಜ್ಞಾನ ಕಂಪ್ಯೂಟರ್ ಸಿಮಿಲೇಷನ್ - ಎತ್ತಣ ಮಾಮರ, ಎತ್ತಣ ಕೋಗಿಲೆ. ಮಾಂಟೇಕಾರ್‍ಲೋ ಸಿಮಿಲೇಷನ್ ಮೆಥಡ್‌ನಲ್ಲಿ ನಾನು ನ್ಯೂ ಯಾರ್ಕ್ ಯೂನಿವರ್ಸಿಟಿಯವರನ್ನು ಮೀರಿಸಿ ರ್‍ಯಾಂಡಮ್ ನಂಬರ್ ಜೆನರೇಟರ್‌ನ್ನು ಬರೆಯುತ್ತೇನೆಂದು ಅವಿರತ ಪ್ರಯತ್ನಿಸಿದ್ದು ವಿಫಲವಾಯಿತು - ಕೊನೆಯಲ್ಲಿ ನ್ಯೂ ಯಾರ್ಕ್‌ನವರ ಮೆಥಡ್ ನಮ್ಮ ಥಿಯರಿಗಿಂತ ತುಂಬಾ ಉನ್ನತ ಮಟ್ಟದಲ್ಲಿತ್ತು. ಆದರೆ ನಾವು ಪ್ರಯತ್ನ ಮಾಡಿದ್ದೆವು ಅನ್ನೋದು ಎಲ್ಲಕ್ಕಿಂತ ಸಂತೋಷದ ವಿಷಯ.

ಆದರೆ, ಇಂದು ನ್ಯೂ ಯಾರ್ಕ್ ಯೂನಿವರ್ಸಿಟಿಯಿಂದ ಕೆಲವೇ ಮೈಲುಗಳ ದೂರದಲ್ಲಿ ಕುಳಿತು, ಇದ್ದವುಗಳಲ್ಲಿ ಒಳ್ಳೆಯ ಕಂಪ್ಯೂಟರ್ ಸಿಸ್ಟಮ್ (Pentium 4, dual CPU 3.00 MHZ each, 1GB RAM, 80 GB Hard drive, XP Professional) ಇರುವ ನಾನು ೧೧ ವರ್ಷಗಳ ನಂತರ ಬನಾರಸ್ಸಿನ ೨೮೬ ಕಂಪ್ಯೂಟರಿಗಿಂತಲೂ ನಿಧಾನವಾಗಿದ್ದೇನೆಂದೆನಿಸುತ್ತೆ. ವಿಷಾದವೆಂದರೆ ಹೆಚ್ಚು-ಹೆಚ್ಚು ಬ್ಯಾಂಡ್‍ವಿಡ್ತ್ ಆಗಲಿ, ವೇಗವಾಗಲಿ ನನಲ್ಲಿ ಯಾವುದೇ ದಕ್ಷತೆಯನ್ನು ಹೆಚ್ಚಿಸಿಲ್ಲ. ಈ ಎಲ್ಲ ಬದಲಾವಣೆಗಳಿಗೆ ನನ್ನ ವೈಯುಕ್ತಿಕ ನಿಲುವುಗಳು, ಮುಖ್ಯವಾಗಿ ನನ್ನ ಬೆಳೆಯುತ್ತಿರುವ ಪ್ರಬುದ್ಧತೆ, ಬದಲಾದ ಗುರಿ-ಧೋರಣೆಗಳು ಮಹತ್ವವಾದ ಪರಿಣಾಮವನ್ನು ಬೀರಿವೆ.

ಆದ್ದರಿಂದಲೇ ಇತ್ತೀಚೆಗೆ ಏನಾದರೂ ಮಾಡಬೇಕಾದ ಮನಸ್ಸು, ಒಂದು ಚಿಕ್ಕ ಕೆಲಸವಾದರೂ ಅದನ್ನು ಶ್ರದ್ಧೆಯಿಂದ ಮಾಡಿ ಮುಗಿಸುವ ಶಿಸ್ತು ಎಲ್ಲವುಗಳಿಗಿಂತ ಹೆಚ್ಚಿನವಾಗಿ ಕಂಡು ಬರುತ್ತಿವೆ. ಎಲ್ಲರೂ ಪುಸ್ತಕ ಬರೆಯ ಬೇಕೆನ್ನುವವರೇ, ಆದರೆ ಕೆಲವೇ ಕೆಲವು ಜನ ಅದನ್ನು ಮೊದಲಿನಿಂದ ಕೊನೆಯವರೆಗೆ ನಿಭಾಯಿಸಿಕೊಂಡು ಹೋಗಬಲ್ಲರು. Moore ಅನ್ನೋ ಪುಣ್ಯಾತ್ಮನೇನೋ ಕಂಪ್ಯೂಟರ್, ಟೆಕ್ನಾಲಜಿ ಬಗ್ಗೆ ಏನೋ ಹೇಳಿಬಿಟ್ಟ, ಇವೆಲ್ಲದರ ಎದುರು ಸದಾ ಕುಗ್ಗುವ ಮನಸ್ಸಿನ ಸ್ಥಿತಿಯನ್ನು ವಿವರಿಸುವವರ್‍ಯಾರು? Moore's law ಗೆ ಯಾರಾದರೂ ಕರೋಲ್ಲರಿ ಬರೆಯುತ್ತಾರೇನೋ ನೋಡೋಣ!

Thursday, March 16, 2006

ನಮ್ಮ ಕನ್ನಡ

ಕನ್ನಡಿಗರ ಭಾಷಾ ವ್ಯಾಮೋಹ, ಅದರ ಪರಿಣಾಮಗಳನ್ನು ಕುರಿತು ಈಗಾಗಲೇ ಬಹಳಷ್ಟು ಪ್ರಕಟವಾಗಿದೆ. ದುರಭಿಮಾನವಂತೂ ನಮ್ಮಲ್ಲಿ ಮೂಡುವ ಮಾತೇ ಇಲ್ಲ, ಅದರೂ ಕೆಲವೊಮ್ಮೆ ಕನ್ನಡಿಗರಲ್ಲಿ ದುರಭಿಮಾನ ಮೂಡಿದ್ದರೆ ಎಂದು ಕುತೂಹಲ ಹುಟ್ಟುತ್ತದೆ. ನಮ್ಮ ಮಾತಿನ ಮಧ್ಯೆ ಸಾಕಷ್ಟು ಕನ್ನಡ ಬಳಸಬೇಕು - ಇದರಿಂದ ಏನಾಗುತ್ತೋ ಬಿಡುತ್ತೋ, ಕ್ರಮೇಣ ಒಂದು ಸಹಜ ವಾತಾವರಣ ಬೆಳೆಯುತ್ತೆ, ಸಹಜತೆ ಇದ್ದಲ್ಲಿ ಸೌಹಾರ್ಧತೆ ಇರುತ್ತೆ. ಕನ್ನಡವನ್ನು ಉಳಿಸಿ-ಬೆಳೆಸಿ ಅನ್ನೋ ಮಾತನ್ನು ನಿಮಗೆ ಹೇಳೋಕೆ ನಾನ್ಯಾರು? ಅದು ನಿಮ್ಮ-ನಿಮ್ಮ ಆಯ್ಕೆ, ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯ. ನಾನು ಇಂಗ್ಲೀಷಿನಲ್ಲಿ ಮಾತನಾಡ್ತಾ ಇರುವಾಗ ನಿಮಗೆ ಅರ್ಥವಾಗದ ಕಷ್ಟದ ಪದಗಳನ್ನು ಬಳಸಿದ ಮಾತ್ರಕ್ಕೆ ನಾನು ದಿಢೀರನೆ ದೊಡ್ಡ ಮನುಷ್ಯನಾಗುತ್ತೇನೆ, ಅದೇ ಕನ್ನಡದ ಕಷ್ಟದ ಪದಗಳನ್ನು ಬಳಸಿದ ಮಾತ್ರಕ್ಕೆ ಹಳ್ಳಿಯವನಾಗೋ, ಕೀಳಾಗೋ ಅದು ಹೇಗೆ ಪರಿವರ್ತನೆಗೊಳ್ಳುತ್ತೇನೋ ನನಗಂತೂ ತಿಳಿಯದು. ಇಲ್ಲವೆಂದಾದರೆ ನಾನು ಮದ್ರಾಸಿನಲ್ಲಿ ಕೆಲಸ ಮಾಡುವಾಗ ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ "ಕನ್ನಡಿಗ"ರಿಗೆ - ಅಂತಃಕರಣ, ಅಶ್ಲೀಲ, ಲೀಲಾಜಾಲ ಮುಂತಾದ ಕನ್ನಡ ಪದಗಳನ್ನು ಬಳಸುವ ನಾನು ಕಾಡು ಮನುಷ್ಯನಾಗಿ ಕಂಡಿರಲಿಕ್ಕೆ ಹೇಗೆ ಸಾಧ್ಯ?


ತಮ್ಮ ನಾಡು, ನುಡಿಯ ಬೆಲೆ ಅರಿಯದವರು, ಅದನ್ನು ಗೌರವಿಸಿದವರು ಎಲ್ಲೇ ಹೋದರೂ ಪ್ರಾಯೋಗಿಕವಾಗಿ ಬದುಕಿ ತಮ್ಮ-ತಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಳ್ಳುತ್ತಾರೆಯೇ ವಿನಾ ಬೇರೇನನ್ನು ತಾನೇ ಮಾಡಿಯಾರು?


ನನಗಂತೂ ಕನ್ನಡ ದಿನ ನಿತ್ಯದ ಅಗತ್ಯ, ನನಗೆ ಅದರ ಬಗ್ಗೆ ಅಭಿಮಾನವಿಲ್ಲ, ಏಕೆಂದರೆ ಅದು ನನ್ನಿಂದ ಬೇರ್ಪಡದಷ್ಟರ ಮಟ್ಟಿಗೆ ನನ್ನೊಳಗೊಂದಾಗಿದೆ, ಇಂಥವರು ನಮ್ಮ ತಾಯಿ ಎಂದು ಹೇಗೆ ಹೇಳುತ್ತೇವೆಯೋ ಹಾಗೆ.