Saturday, October 03, 2026

ಅಗ್ನಿ ಹಂಸ

ಕೆಲವು ದಿನಗಳ ಹಿಂದೆ, ಕುವೆಂಪು ಅವರ ಈ ಪದ್ಯ/ಹಾಡಿಗೆ ಒಂದು ವ್ಯಾಖ್ಯಾನವನ್ನು (ವಿವರಣೆ) ಬರೆದುಕೊಡಿ ಎಂದು ನಮಗೆ ಬೇಕಾದವರೊಬ್ಬರು ಕೇಳಿದರೆಂದು, ಕುವೆಂಪು ಅವರ, "ಅಗ್ನಿಹಂಸ" ಕವನ ಸಂಕಲನವನ್ನೂ, ಅದರಲ್ಲಿನ ಋತಚಿನ್ಮಯೀ ಜಗನ್ಮಾತೆಗೆ, ಎನ್ನುವ ಕೊನೆಯ ಕವನದ ಜಾಡನ್ನು ಹಿಡಿದು ಹೋದಾಗ, ನನಗೆ ತಿಳಿದ ವಿಷಯವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇದೊಂದು ಕನ್ನಡದ ವಿದ್ಯಾರ್ಥಿಯ ಒಂದು ಪ್ರಾಮಾಣಿಕ ಪ್ರಯತ್ನ ಎಂದೋ, ಅಥವಾ "ಲಘು ಪ್ರಬಂಧ" ಎಂದೋ ಓದಿಕೊಂಡರೆ ನನ್ನ ಶ್ರಮ ಸಾರ್ಥಕ.

***

ಎಲ್ಲದಕ್ಕೂ ಮೂಲ, ಈ ಪದ್ಯ ನನ್ನ ಬಳಿ, ಒಂದು ಹಾಡಿನ ರೂಪದಲ್ಲಿ ಬಂದಿತ್ತು. ಈ ಹಾಡು:  ಬಹಳ ಜನಪ್ರಿಯವಾದದ್ದು ಕೂಡ. ಆದರೆ, ನಾನು ಈವರೆಗೆ, ಈ ಹಾಡು/ಪದ್ಯದ ಆಳ ಮತ್ತು ಅಂತಃಸತ್ವವನ್ನು ವಿಚಾರಿಸಿಕೊಂಡು ಹೋಗಿರಲಿಲ್ಲ. ನಾನು ಕುತೂಹಲದಿಂದ ಇಣುಕಿ ನೋಡಿದಂತೆಲ್ಲ, ನನ್ನೆದುರು ಒಂದು ಸುಂದರವಾದ ಅನುಭೂತಿ ಮತ್ತು ಈ ಲೇಖನವನ್ನು ಬರೆಯುವ ಸ್ಫುರಣೆಯನ್ನೂ ಈ ಹಾಡು/ಪದ್ಯ ಮೂಡಿಸಿದ್ದಂತೂ ನಿಜ.

ಇದು, ಮೈಸೂರು ಅನಂತಸ್ವಾಮಿಯವರ ಕಂಚಿನ ಕಂಠದಲ್ಲಿ, ಸುಶ್ರಾವ್ಯವಾಗಿ ಹಾಡಿಸಿಕೊಂಡು, ನಿಮಗೆ ನೀವರಿಯದಂತೆ ತಾಳ ಹಾಕಿಕೊಂಡು ಕೇಳುವಂತೆ ಮಾಡುವ ಸುಂದರವಾದ ಭಾವಗೀತೆ. ಅಸಂಖ್ಯ ಕವನಗಳ ಗುಂಪಿನಲ್ಲಿ ಸೇರಿಕೊಂಡು ಕಣ್ಮರೆ ಆಗಿ ಹೋಗಬಹುದಾದ ಒಂದು ಸುಂದರವಾದ ಅನುಭೂತಿಯನ್ನು ಸಾಮಾನ್ಯ ಜನರೂ ಕೇಳಿ, ಓದಿ, ಆ ಪದ್ಯದ ರಸಾಸ್ವಾದವನ್ನು ಹೊರಗೆಡಹುವ ಚಾಕಚಕ್ಯತೆ ಅನಂತಸ್ವಾಮಿಯವರದು. ಈ ಹಾಡಿನಲ್ಲಿ ಭಕ್ತಿ ರಸ ಪ್ರಧಾನವಾದುದು. ಮೇಲ್ಮಟ್ಟಕ್ಕೆ ಇದೊಂದು ಭಕ್ತಿಗೀತೆಯಂತೆ ಕಂಡರೂ, ಇದು ಕವಿಯು ಮಾನವ ಚೈತನ್ಯಕ್ಕೆ ದಿವ್ಯಚೈತನ್ಯ ಇಳಿದು ಬರುವಂತೆ ಮಾಡುವ ಒಂದು ರೀತಿಯ ಆಮಂತ್ರಣವನ್ನು ಈ ಕವನದಲ್ಲಿ ಕಾಣಬಹುದು. ಇದು ಅದ್ವೈತ–ದ್ವೈತ–ಶಾಕ್ತ ಪರಂಪರೆಯ ಸಂಯೋಜಿತ ತತ್ತ್ವದ ಕಾವ್ಯ. ಇಳಿದು ಬಾ, ತಾಯಿ ಇಳಿದು ಬಾ ಎನ್ನುವಾಗ ಇಳೆಗೆ, ಇಳಿದು ಬಾ ಎನ್ನುವ ತರ್ಕ ನಮ್ಮೆಲ್ಲರನ್ನೂ ಮೂಕವಿಸ್ಮಿತರನ್ನಾಗಿ ಮಾಡುತ್ತದೆ (ಒಂದು ರೀತಿ grounded ಅನ್ನುತ್ತಾರಲ್ಲ ಹಾಗೆ). ಏನೇನೆಲ್ಲಾ ಪ್ರೇರೇಪಣೆ, ತತ್ವ, ಜ್ಞಾನ, ಸಾಧನೆಗಳಿದ್ದರೇನು, ಅವೆಲ್ಲ ಇಳೆಗೆ ಇಳಿದು ಬಾರದಿದ್ದರೆ? ಎನ್ನುವ ಪ್ರಶ್ನೆ ನಿಮ್ಮ ಮನಃಪಟಲದಲ್ಲಿ ಮೂಡಬಹುದು.

***


ಒಟ್ಟು ನಲವತ್ತು ಸಾಲುಗಳಲ್ಲಿರುವ ಮೂಲ ಕವನದ ಒತ್ತಾಸೆಯನ್ನು ಈ ಕೆಳಗಿನ ೨೨ ಸಾಲುಗಳಲ್ಲಿ ಅನಂತಸ್ವಾಮಿಯವರು ಸೊಗಸಾಗಿ ಹಾಡಿದ್ದಾರೆ:

ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ

ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ

ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ

ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃತುವಿಯಲ್ಲಿ

ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡೆಸುತಿಹ ಶಕ್ತಿಯೆ

ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ ಯುಕ್ತಿಯೆ

ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೆ

ನಿನ್ನ ಅವತಾರವೆನ್ನ ಉದ್ಧಾರ ಬಾ ದಿವ್ಯ ಮುಕ್ತಿಯೆ

ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆ ಎಲ್ಲವಾದೆ

ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ

ಎನಿತು ಕರೆದರೂ ಓಕೊಳ್ಳದಿರು ಅಚಿನ್ನಿದ್ರೆಯಾದೆ

ಬೆಳಗಿ ನನ್ನಾತ್ಮಕಿಳಿದು ಬಾ ತಾಯೆ ನೀನೆ ಬ್ರಹ್ಮ ಬೋಧೆ

ಇಳಿದು ಬಾ ತಾಯೆ ಇಳಿದು ಬಾ|


ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ

ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ

ಶಿವನ ಶಕ್ತಿ ನೀ ವಿಷ್ಣು ಲಕ್ಷ್ಮೀ ನೀ ಚತುರ್ಮುಖನ ರಾಣಿ

ದಿವ್ಯ ವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು ವಾಣಿ

ಹೃದಯ ಪದ್ಮ ತಾನರಳೆ ಕರೆವೆ ಬಾರಮ್ಮ ಬಾ, ಇಳಿದು ಬಾ

ಮನೋದ್ವಾರ ತಾ ಬಿರಿಯೆ ಕರೆವೆ ಜಗದಂಬೆ ಬಾ, ಇಳಿದು ಬಾ

ಅಗ್ನಿ ಹಂಸ ಗರಿಗೆದರೆ ಕರೆವೆ ಬಾ ತಾಯೆ ಬಾ, ಇಳಿದು ಬಾ

ಚೈತ್ಯ ಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು ಬಾ, ಇಳಿದು ಬಾ

ಇಳಿದು ಬಾ ತಾಯಿ ಇಳಿದು ಬಾ|

***

“ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ…”

ಕವಿ ಇಲ್ಲಿ ಪರಬ್ರಹ್ಮವನ್ನು ಸತ್–ಚಿತ್–ಆನಂದ ಎಂಬ ತ್ರಿಮೂರ್ತಿಯ ಮುಖವಾಗಿ ಕಾಣುತ್ತಾರೆ.

ಇದು ಶುದ್ಧ ಅಸ್ತಿತ್ವ, ಶುದ್ಧ ಜ್ಞಾನ, ಶುದ್ಧ ಆನಂದದ ಪ್ರತೀಕ, ಇಲ್ಲಿ ಎಲ್ಲವೂ ಒಂದೇ ಮೂಲದಿಂದ ಹರಿದು ಬರುತ್ತವೆ.

“ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ”

ಅಭವ = ಅಸ್ತಿತ್ವದ ಮೂಲ, ಭವ = ಸೃಷ್ಟಿಯ ಬೀಜ, ಋತ = ಬ್ರಹ್ಮಾಂಡದ ನಿಯಮ, ಸತ್ಯ, ಧರ್ಮ, ಚಿತ್ತ = ಜ್ಞಾನಶಕ್ತಿ

ಅಂದರೆ, ನೀನೇ ಅಸ್ತಿತ್ವದ ಮೂಲ, ಸೃಷ್ಟಿಯ ಬೀಜ, ಸತ್ಯದ ನಿಯಮ, ಜ್ಞಾನಶಕ್ತಿ.

“ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ”

ಇದು ದಿವ್ಯಚೈತನ್ಯಕ್ಕೆ ಮಾಡಿದ ಆಮಂತ್ರಣ. ಇಳೆಗೆ = ಅಂತರಂಗಕ್ಕೆ, ಭೂಮಿಗೆ, ಅಥವಾ ನನ್ನ ಮಟ್ಟಕ್ಕೆ, ನಾನಿರುವ ಮಟ್ಟಕ್ಕೆ

ಬೆಳೆಗೆ = ಬುದ್ಧಿ, ಜ್ಞಾನಪ್ರಕಾಶ, ಜೀವ ಕೇಂದ್ರ = ಹೃದಯಪದ್ಮ, ಚೈತನ್ಯದ ಮೂಲ

ಅಂದರೆ: ನನ್ನ ಅಂತರಂಗಕ್ಕೆ ಇಳಿದು ಬಾ, ನನ್ನ ಬುದ್ಧಿಯನ್ನು ಬೆಳಗಿಸು, ನನ್ನ ಜೀವಕೇಂದ್ರವನ್ನು ದಿವ್ಯಚೈತನ್ಯದಿಂದ ತುಂಬಿಸು ಎನ್ನುವ ಆಶಯ.

“ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡೆಸುತಿಹ ಶಕ್ತಿಯೆ”

ಇಲ್ಲಿ ದೈವಶಕ್ತಿ ಸೃಷ್ಟಿ–ಸ್ಥಿತಿ–ಲಯದ ಮೂಲಶಕ್ತಿ. ವಿಶ್ವಗಳನ್ನು ಸೃಜಿಸುವ ಶಕ್ತಿ

ಅನ್ನ–ಪ್ರಾಣ–ಮನೋಲೋಕಗಳನ್ನು ನಡೆಸುವ ಯುಕ್ತಿ

ಬಂಧನಗಳ ಹೃದಯದಲ್ಲಿ ಇರುವ ಅವಿನಾಶಿ ಆಸಕ್ತಿ

ಈ ಮೂರು ಸಾಲುಗಳಲ್ಲಿ, ಕವಿ ದೈವಶಕ್ತಿಯನ್ನು ವಿಶ್ವನಿಯಂತ್ರಕ ತತ್ತ್ವವಾಗಿ ಕಾಣುತ್ತಾನೆ.

“ನಿನ್ನ ಅವತಾರವೆನ್ನ ಉದ್ಧಾರ ಬಾ ದಿವ್ಯ ಮುಕ್ತಿಯೆ”

ಇದು ಅತ್ಯಂತ ಸುಂದರವಾದ ಸಾಲುಗಳಲ್ಲೊಂದು, ಇಲ್ಲಿ ಕವಿ ಎಲ್ಲ ಭ್ರಮೆಗಳಿಂದ ಹೊರಬಂದಂತೆ:

"ನಿನ್ನ ಅವತಾರವೇ ನನ್ನ ಉದ್ಧಾರ". ಎಂದು ಉದ್ಗರಿಸುತ್ತ ಈ "ದಿವ್ಯ ಶಕ್ತಿ"ಗೆ ದಿವ್ಯಮುಕ್ತಿಯಾಗಿ ಅವತರಿಸುವಂತೆ ಆಹ್ವಾನ ಕೊಡುತ್ತಾರೆ.

ಅಂದರೆ, ಇದೊಂದು ಭಕ್ತಿ–ವೇದಾಂತದ ಸಂಯೋಜನೆ ಇದ್ದ ಹಾಗೆ, ಎಲ್ಲಿ ದೇವರು ಇಳಿಯುತ್ತಾನೋ (ಅವತರಿಸು) ಅಲ್ಲಿ ಮಾನವನು ಉದ್ಧಾರಗೊಳ್ಳುತ್ತಾನೆ.

“ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆ ಎಲ್ಲವಾದೆ…”

ಇದು ಕುವೆಂಪು ಅವರ, ವಿಶ್ವರೂಪದ ಘೋಷಣೆ. ನೀನೇ ಎಲ್ಲವನ್ನೂ ಮಾಡಿದೆ, ಎಲ್ಲರೊಳಗೂಡಿದೆ, ಎಲ್ಲವೂ ನೀನೇ ಆಗಿಹೆ

ಮುಂದೆ ಅದನ್ನು ವಿಸ್ತರಿಸುತ್ತ: ವಿಶ್ವವೇ ದೇವರ ದೇಹ, ಜೀವವೇ ದೇವರ ಚೈತನ್ಯ.

“ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ…”

ಇದು ಮಾನವ ಸ್ಥಿತಿಯ ವ್ಯಥೆ. ಎಲ್ಲ ದೀಪಗಳ ಬುಡದಲ್ಲಿ ಕತ್ತಲಿರುವ ನೈಜತೆಯನ್ನು ಕವಿ ಕಟ್ಟಿಕೊಡುತ್ತಾರೆ. ದೇವರಿಗೂ ಕೂಡ (ಆತ ಸೃಷ್ಟಿಸಿದ ಜ್ಯೋತಿಗೂ) ಕತ್ತಲಿನಿಂದ ಮುಕ್ತಿ ಇಲ್ಲ. ಕತ್ತಲಿರದಿದ್ದರೆ, ಬೆಳಕಿನ ಅರಿವಾದರೂ ಆಗುವುದು ಹೇಗೆ?

ದೇವರೇ ಜ್ಯೋತಿ, ಆದರೆ ತಮೋಲೀಲೆಯಲಿ ಜಡದಂತೆ ಕಾಣುತ್ತಾನೆ. ಹಾಗಿದ್ದಾಗ, ದೇವರೆ, ನಿನ್ನ ಅಚಿನ್ನಿದ್ರೆಯಲ್ಲಿ ಇದ್ದು, ಎಷ್ಟು ಕರೆದರೂ ಓಗೊಳ್ಳದಿರುವಂತೆ ತೋರುತ್ತಿದ್ದೀಯಲ್ಲ?!

ಅಚಿನ್ನಿದ್ರೆ: ಚಿನ್ = ಜ್ಞಾನ, ಚೈತನ್ಯ, ಅರಿವು; ಅಚಿನ್ = ಜ್ಞಾನವಿಲ್ಲದ, ಅರಿವಿಲ್ಲದ, ಚೈತನ್ಯವಿಲ್ಲದ, ಅಂದರೆ, ಅಜ್ಞಾನ, ಅಚೇತನ, ಅರಿವಿನ ನಿಷ್ಕ್ರಿಯತೆ. (ನಿದ್ರೆ = ಜಡತೆ, ನಿಷ್ಕ್ರಿಯತೆ).

ಅಥವಾ ದೇವರು ಎಲ್ಲ ಕಡೆ ಇದ್ದರೂ, ಅವನನ್ನು ಅನುಭವಿಸುವ ಸಾಮರ್ಥ್ಯ ನಮ್ಮಲ್ಲಿ ಇಲ್ಲವಾಗಿದೆಯೇ?

“ಬೆಳಗಿ ನನ್ನಾತ್ಮಕಿಳಿದು ಬಾ ತಾಯೆ ನೀನೆ ಬ್ರಹ್ಮ ಬೋಧೆ…”

ಇಲ್ಲಿ ದೇವಿಯನ್ನು ಬ್ರಹ್ಮಬೋಧೆ, ಜ್ಞಾನಪ್ರಕಾಶ, ಎಂದು ಕವಿ ಕರೆಯುತ್ತಾರೆ.

ನನ್ನ ಆತ್ಮವನ್ನು ಬೆಳಗಿಸು, ಜ್ಞಾನವನ್ನು ನೀಡು, ತಾಯಿಯಂತೆ ಇಳಿದು ಬಾ (ಮಗು ತಾಯಿಯನ್ನು ಕರೆಯುವ ಮೃದುವಾದ ಮತ್ತು ಭಾವನಾತ್ಮಕವಾದ ಆಹ್ವಾನ).

“ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ…”

ಇಲ್ಲಿ ಪಂಚಭೂತಗಳ ದೈವೀಕರಣ ಮತ್ತು ಅವುಗಳನ್ನು ಅವುಗಳ ಗುಣಗಳ ಮೂಲಕ್ಕೆ ಕನೆಕ್ಟ್ ಮಾಡುವ ಒಂದು ಸುಂದರವಾದ ಕಲ್ಪನೆ (ಗಾಳಿಗೆ ಉಸಿರು, ಬೆಂಕಿಗೆ ಉರಿ, ಉದಕದ ಜೀವ).

ಗಾಳಿಯಲ್ಲಿರುವ ಪ್ರಾಣಶಕ್ತಿ ನೀನೇ, ಬೆಂಕಿಯಲ್ಲಿರುವ ತೇಜಸ್ಸು ನೀನೇ, ನೀರಿನಲ್ಲಿರುವ ಜೀವಶಕ್ತಿ ನೀನೇ, ಈ ಮೂಲಕ ಕವಿ, ಸಾಮಾನ್ಯ ಪ್ರಕೃತಿಯಲ್ಲಿರುವ ದೈವಚೈತನ್ಯವನ್ನು ಗುರುತಿಸಿದ್ದಾರೆ.

“ಶಿವನ ಶಕ್ತಿ ನೀ ವಿಷ್ಣು ಲಕ್ಷ್ಮೀ ನೀ ಚತುರ್ಮುಖನ ರಾಣಿ…”

ಇಲ್ಲಿ ದೈವಶಕ್ತಿಯ ಸರ್ವದೇವತಾತ್ಮಕತೆ ಅಭಿವ್ಯಕ್ತಗೊಳ್ಳುತ್ತದೆ.

ಶಿವನ ಶಕ್ತಿ ನೀ, ವಿಷ್ಣುವಿನ ಲಕ್ಷ್ಮೀ ನೀ, ಬ್ರಹ್ಮನ ಸರಸ್ವತಿ ನೀ,

ಅಂದರೆ, ಎಲ್ಲ ದೇವತೆಗಳ ಮೂಲಶಕ್ತಿ ಒಂದೇ: ದಿವ್ಯಚೈತನ್ಯ.

“ಹೃದಯ ಪದ್ಮ ತಾನರಳೆ ಕರೆವೆ ಬಾರಮ್ಮ ಬಾ, ಇಳಿದು ಬಾ…”

ಇಲ್ಲಿ ಧ್ಯಾನಪರಂಪರೆಯ ಭಾಷೆ ಪ್ರಚುರಗೊಳ್ಳುತ್ತದೆ.

ಹೃದಯಪದ್ಮ ಅರಳುತ್ತದೆ, ಮನೋದ್ವಾರ ತೆರೆದುಕೊಳ್ಳುತ್ತದೆ, ಜಗದಂಬೆಯನ್ನು ಕರೆಯುತ್ತದೆ...

ಒಂದು ರೀತಿಯಲ್ಲಿ, ಇದು ಆಂತರಿಕ ಯಜ್ಞದ ಆರಂಭವನ್ನು ಸೂಚಿಸುತ್ತದೆ.

“ಅಗ್ನಿ ಹಂಸ ಗರಿಗೆದರೆ ಕರೆವೆ ಬಾ ತಾಯೆ ಬಾ, ಇಳಿದು ಬಾ…”

ಅಗ್ನಿಹಂಸ ಅಂದರೆ, ಜ್ಞಾನಾಗ್ನಿಯಲ್ಲಿ ಹಾರುವ ಹಂಸ, ಪರಮಾತ್ಮನ ಚೈತನ್ಯ.

ಕುವೆಂಪು ಅವರ ಕಾವ್ಯ ರೂಪಕಗಳಲ್ಲಿ 'ಅಗ್ನಿಹಂಸ' ಎಂಬುದು ಕೇವಲ ಒಂದು ಆಲಂಕಾರಿಕ ಪದವಲ್ಲ; ಅದು ಜಡ ಮತ್ತು ಚೇತನಗಳ ನಡುವಿನ ಅದ್ವೈತ ಸಂಬಂಧವನ್ನು ವಿವರಿಸುವ ಒಂದು ಉನ್ನತ ದಾರ್ಶನಿಕ ರೂಪಕ (Metaphor). ಇಲ್ಲಿ 'ಅಗ್ನಿ' ಎನ್ನುವುದು ವಿನಾಶ ಮತ್ತು ಸೃಷ್ಟಿ ಎರಡನ್ನೂ ಏಕಕಾಲದಲ್ಲಿ ಪ್ರತಿನಿಧಿಸುವ, ತಮಸ್ಸನ್ನು ಸುಟ್ಟು ಭಸ್ಮಮಾಡುವ ಜ್ಞಾನಾಗ್ನಿ ಹಾಗೂ ತಪಸ್ಸಿನ ತೇಜಸ್ಸು. ಇನ್ನು 'ಹಂಸ' ಎಂಬುದು ಭಾರತೀಯ ಪರಂಪರೆಯಲ್ಲಿ ಕ್ಷೀರ-ನೀರ ನ್ಯಾಯದ ಮೂಲಕ ಸಾರಾಸಾರ ವಿವೇಚನೆಯನ್ನು ತೋರುವ 'ಪರಮಹಂಸ' ಸ್ಥಿತಿಯ, ಅಂದರೆ ಮುಕ್ತ ಆತ್ಮದ ಸಂಕೇತವಾಗಿದೆ. ಭೌತಿಕ ಜಗತ್ತಿನ ಜಡತ್ವವನ್ನು, ಅಜ್ಞಾನವನ್ನು ತನ್ನ ತಪೋಶಕ್ತಿಯಿಂದ ದಹಿಸಿ (ಅಗ್ನಿ), ಲೌಕಿಕದ ಮಿತಿಗಳನ್ನು ಮೀರಿ ಅಧ್ಯಾತ್ಮದ ಮುಕ್ತ ಗಗನದಲ್ಲಿ ತೇಲುವ (ಹಂಸ) ಶುದ್ಧ ಚೈತನ್ಯವೇ ಅಗ್ನಿಹಂಸ. ಈ (ಪೂರ್ಣ) ಕವಿತೆಯಲ್ಲಿ ಬರುವ "ಜಡದ ನಡುವೆ ಜೀವವನು ಕಡೆದೆ ಚಿತ್ರಶಕ್ತಿಯೊಂದೆ" ಎಂಬ ಸಾಲು ವಿಶ್ಲೇಷಿಸುವಂತೆ,

ಇದು ಮೂಲ ಪ್ರಕೃತಿಯ ರೂಪಾಂತರ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಪ್ರಕೃತಿಯ ಪಂಚಭೂತಗಳಲ್ಲಿ ಹಾಗೂ ಮಾನವನ ಅಂತರಂಗದಲ್ಲಿ ಸುಪ್ತವಾಗಿರುವ ದಿವ್ಯ ಜ್ಞಾನವು ಜಾಗೃತಗೊಂಡು, ಅಂತಿಮವಾಗಿ ಆ ದೈವೀ ಚೇತನವು ವಿಶ್ವದ ಸಕಲ ಜೀವರಾಶಿಯನ್ನೂ ಸಲಹುವ 'ಜಗನ್ಮಾತೆ' ಅಥವಾ 'ಪರಬ್ರಹ್ಮತ್ವ'ದೊಂದಿಗೆ ತಾದಾತ್ಮ್ಯ ಹೊಂದುವುದೇ "ಅಗ್ನಿ ಹಂಸ" ಎನ್ನುವ ರೂಪಕದ ತಾತ್ವಿಕ ಹಿನ್ನೆಲೆಯಾಗಿದೆ.

“ಚೈತ್ಯ ಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು ಬಾ, ಇಳಿದು ಬಾ”

ಇದು ಪದ್ಯದ ತತ್ತ್ವಶಿರೋಮಣಿ.

ಚೈತ್ಯ ಪುರುಷ = ಅಂತರಂಗದ ಪರಮಾತ್ಮ, ಯಜ್ಞ = ಜೀವನ–ಜ್ಞಾನ–ಶುದ್ಧೀಕರಣ, ಅಧ್ವರ್ಯು = ಯಜ್ಞದ ನಾಯಕ, ಸಂಯೋಜಕ (conductor).

ಕವಿ ಆರ್ತನಾಗಿ ಕೇಳುತ್ತಾರೆ:

ನನ್ನ ಜೀವನಯಜ್ಞವನ್ನು ನಡೆಸಲು ನೀನೇ ಅಧ್ವರ್ಯುವಾಗಿ ಬಾ.

ನನ್ನ ಚೈತನ್ಯವನ್ನು ಶುದ್ಧಗೊಳಿಸುವ ಕಾರ್ಯಕ್ಕೆ ನೀನೇ ನಾಯಕನಾಗು.

ಇದು ಮಾನವ–ದೈವ ಸಂಯೋಗದ ಘೋಷಣೆ. "ಅಗ್ನಿಹಂಸ" ಕವನ ಸಂಕಲನದಲ್ಲಿ, ಇದು ಕೊನೆಯ ಪದ್ಯದ, ಕೊನೆಯ ಸಾಲು: ಇಲ್ಲಿ ಕುವೆಂಪು ಅವರ ತತ್ತ್ವದ ಪರಾಕಾಷ್ಠೆ ಎದ್ದು ಕಾಣುತ್ತದೆ.

ಕವಿ - ಮಾನವನೊಳಗಿನ ಚೈತನ್ಯವನ್ನು ಯಜ್ಞವೇದಿಕೆಯಾಗಿ, ದೈವಚೈತನ್ಯವನ್ನು ಅಧ್ವರ್ಯುಯಾಗಿ, ಜೀವನವನ್ನು ಯಜ್ಞವಾಗಿ ಸುಂದರವಾಗಿ ರೂಪಿಸಿದ್ದಾರೆ.

ಈ ಪದ್ಯದ ಮೂಲಭಾವನೆ:

ಮಾನವನು ದೈವದತ್ತ ಏರಬೇಕಾದರೆ, ದೈವವು ಮಾನವನೊಳಗೆ ಇಳಿಯಬೇಕು.

ಇದು ದ್ವೈತ–ಅದ್ವೈತ ಸಂಯೋಜನೆಯ ಅತ್ಯಂತ ಸುಂದರ ರೂಪ.

ಕವಿ “ಸಚ್ಚಿದಾನಂದ ತ್ರಿತ್ವಮುಖವಾದ ಪರಬ್ರಹ್ಮ” ಎಂದು ಹೇಳುವಾಗ,

ಅಸ್ತಿತ್ವ–ಜ್ಞಾನ–ಆನಂದ ಎಂಬ ತ್ರಿಮೂರ್ತಿಯನ್ನು ಒಂದೇ ಪರಮತತ್ತ್ವದಲ್ಲಿ ಏಕೀಕರಿಸುತ್ತಾರೆ.

ಈ ಪರಮತತ್ತ್ವವೇ “ಅಭವದೊತ್ತಾದೆ, ಭವದ ಬಿತ್ತಾದೆ, ಋತದ ಚಿತ್ತಾದೆ”...

ಅಂದರೆ, ಅಸ್ತಿತ್ವದ ಮೂಲ, ಸೃಷ್ಟಿಯ ಬೀಜ, ಮತ್ತು ವಿಶ್ವನಿಯಮದ ಜ್ಞಾನ.

ಪದ್ಯದ ಮಧ್ಯಭಾಗದಲ್ಲಿ ಕವಿ ದೈವಶಕ್ತಿಯನ್ನು

ಶಿವ–ವಿಷ್ಣು–ಲಕ್ಷ್ಮೀ–ಸರಸ್ವತಿ–ಇಂದ್ರ–ವರುಣ, ಅಗ್ನಿ–ಆದಿತ್ಯ

ಇವೆಲ್ಲದರ ಮೂಲಶಕ್ತಿಯಾಗಿ ಗುರುತಿಸುತ್ತಾರೆ.

ಇದು ಸರ್ವದೇವತಾತ್ಮಕತೆ, ಎಲ್ಲ ದೇವತೆಗಳ ಮೂಲ ಒಂದೇ ದಿವ್ಯಚೈತನ್ಯ ಎನ್ನುವ ಮಹಾಮಂತ್ರ ಕೂಡಾ.

ಪದ್ಯದ ಅಂತ್ಯದಲ್ಲಿ “ಚೈತ್ಯ ಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು ಬಾ” ಎಂಬ ಘೋಷಣೆ ಮಾನವ–ದೈವ ಸಂಯೋಗದ ತತ್ತ್ವವನ್ನು ಸ್ಥಾಪಿಸುತ್ತದೆ.

ಮಾನವನೊಳಗಿನ ಚೈತನ್ಯವೇ ಯಜ್ಞವೇದಿಕೆ; ದೈವಚೈತನ್ಯವೇ ಅಧ್ವರ್ಯು; ಜೀವನವೇ ಯಜ್ಞ.

ಇಷ್ಟೆಲ್ಲ ಆದ ಮೇಲೆ?

"ಓಂ ಶಾಂತಿಃ ಶಾಂತಿಃ ಶಾಂತಿಃ" ಎಂದು ಸಾಧಿಸುತ್ತಾ ಪೂರ್ಣ ಕವನ (ಮತ್ತು ಕವನ ಸಂಕಲನ) ಕೊನೆಯಾಗುತ್ತದೆ.

"ಅಗ್ನಿ ಹಂಸ" ಕವನ ಸಂಕಲನವನ್ನು ಇಲ್ಲಿ ನೋಡಬಹುದು: 

ಇದೊಂದೇ ಪದ್ಯದ ಮುಖೇನ, ಕುವೆಂಪು ಅವರು - ವೇದಾಂತ, ಭಕ್ತಿ, ಶಾಕ್ತ, ಯೋಗ, ಧ್ಯಾನ, ವಿಶ್ವರೂಪ, ಚೈತನ್ಯತತ್ತ್ವ - ಇವೆಲ್ಲವನ್ನು ಒಂದೇ ಕಾವ್ಯಪ್ರವಾಹದಲ್ಲಿ ಜೋಡಿಸುತ್ತದೆ.

ಇದು ಮಾನವನೊಳಗಿನ ದೈವಚೈತನ್ಯಕ್ಕೆ ಮಾಡಿದ ಆಮಂತ್ರಣ, ಅದು ಇಳಿದಾಗ, ಮಾನವನು ಜ್ಞಾನ, ಶುದ್ಧತೆ, ಮುಕ್ತಿ ಪಡೆಯುತ್ತಾನೆ ಎನ್ನುವ ಘೋಷಣೆ ಹಾಗೂ ಆಶಯದ ಪ್ರತೀಕ ಕೂಡ.

***

ಶಾಕ್ತ ಪರಂಪರೆ: “ಶಕ್ತಿ” = ಪರಮಚೈತನ್ಯ, ಸೃಷ್ಟಿಯ ಮೂಲಶಕ್ತಿ, ಜಗತ್ತನ್ನು ನಡೆಸುವ ತತ್ತ್ವ.

ಈ ಶಕ್ತಿಯನ್ನು ದೇವಿ, ಪರಾಶಕ್ತಿ, ಆದಿಶಕ್ತಿ, ಜಗದಂಬೆ, ಮಹಾಮಾಯೆ, ಕುಂಡಲಿನಿ ಎಂಬ ರೂಪಗಳಲ್ಲಿ ಕಾಣುವ ಪರಂಪರೆಯೇ ಶಾಕ್ತ ಪರಂಪರೆ.




Tuesday, May 05, 2026

ನಾಯಕರು ಬೇಕು

I wish we had this in Karnataka, at this moment, we don't!

ನಮ್ಮ ಕರ್ನಾಟಕದಲ್ಲಿ ಈ ರೀತಿಯ ಒಂದು ಬದಲಾವಣೆ, ಕ್ರಾಂತಿ, ಯಾವಾಗ ಬರುತ್ತೋ ಕಾಣೆ.

ಆದರೆ, ಹಾಗಾದಾಗ ಅದೊಂದು ಮಹತ್ವಾಕಾಂಕ್ಷಿ ಬದಲಾವಣೆ ಆಗಿರುತ್ತದೆ, ಅನ್ನೋದು ಬಹಳ ಮುಖ್ಯವಾದ ಅಂಶ.

***

ನೆರೆಯ ತಮಿಳುನಾಡಿನಲ್ಲಿ ಜೋಸೆಫ಼್ ವಿಜಯ್ ಚಂದ್ರಶೇಖರ್ ಎನ್ನುವ ಸಿನಿಮಾ ನಟ, ತನ್ನ ಎರಡೇ ಎರಡು ವರ್ಷಗಳ ಹಿಂದೆ ಹುಟ್ಟಿದ ಟಿವಿಕೆ ಎನ್ನುವ ಪಕ್ಷದ ನೆಲೆಗಟ್ಟಿನ ಮುಖಾಂತರ, ಆರು ದಶಕಗಳಿಂದ ಆಳಿಕೊಂಡು ಬಂದಿದ್ದ ಎರಡು ಮಹಾ ಪ್ರಾಂತೀಯ ಪಕ್ಷಗಳ ನಾಯಕರುಗಳಿಗೆ ನೀರು ಕುಡಿಸಿ ಬಿಟ್ಟ.

ಇನ್ನೊಂದು ಹದಿನಾಲ್ಕು ಸೀಟುಗಳೇನಾದರೂ ಬಂದಿದ್ದರೆ, ತನ್ನದೇ ಆದ ಪಕ್ಷದ ತಳಹದಿಯಿಂದ ಒಂದು ಪೂರ್ಣ ಸರ್ಕಾರವನ್ನೇ ರಚಿಸಿ ಬಿಡುತ್ತಿದ್ದನೋ ಏನೋ. ಇರುವ ೨೩೪ ಸೀಟುಗಳಲ್ಲಿ ನೂರಾಐದನ್ನು ಸಾರಾಸಗಟಾಗಿ ಗೆಲ್ಲುವುದೆಂದರೆ, ಅದರಲ್ಲೂ ಹಾಲಿ ಮುಖ್ಯಮಂತ್ರಿ ಎಂಕೆ. ಸ್ಟಾಲಿನ್ ಅಂಥವರೇ, ಸೋಲುವುದೆಂದರೆ?

ಹಲವು ದಶಕಗಳ ಹಿಂದೆ ಇದೇ ರೀತಿ ಒಂದು ಕ್ರಾಂತಿಯಾಗಿತ್ತು, ನೆರೆಯ ಆಂಧ್ರಪ್ರದೇಶದಲ್ಲಿ. ಇನ್ನೂ ಒಂದು ಪಕ್ಷವಾಗಿ ಅಸ್ಥಿತ್ತ್ವಕ್ಕೆ ಬಂದ ತೆಲುಗು ದೇಶಂ ಪಾರ್ಟಿ, ಕೇವಲ ಒಂಭತ್ತು ತಿಂಗಳುಗಳಲ್ಲಿ, ಅಲ್ಲಿಯ ವಿಧಾನಸಭೆಯ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸಿತ್ತು. ಅಂದಿನ ನಾಯಕ, ಎನ್.ಟಿ.ರಾಮರಾಯರು, ಇಡೀ ಪ್ರಾಂತ್ಯವು ಆರಾಧಿಸುವ ದೈವವಾಗಿ ಕಂಗೊಳಿಸಿದ್ದರು. ಸಿನಿಮಾ ಹಿನ್ನೆಲೆಯಲ್ಲೇ ಸಾಕಷ್ಟು ಹೆಸರು ಮತ್ತು ಹಣವನ್ನು ಗಳಿಸಿದ್ದ ಎನ್.ಟಿ.ಆರ್.ಗೆ ತನ್ನ ಪ್ರಾಂತ್ಯದ ಜನರ ಮುನ್ನಡೆಯನ್ನು ಬಿಟ್ಟರೆ ಬೇರೆ ಯಾವ ಸ್ವಾರ್ಥವೂ ಇದ್ದಂತಿರಲಿಲ್ಲ. ಹಾಗಿದ್ದಾಗ ಕೀರ್ತಿ, ಜನಪ್ರಿಯತೆಯ ಜೊತೆ ಜೊತೆಗೆ ಯಶಸ್ಸೂ ಕೂಡ ನಿಸ್ವಾರ್ಥ ಮನೋಭಾವನೆ ಇದ್ದವರಲ್ಲಿ ಬಂದೇ ಬರುತ್ತದೆ.

ಕೆಲವೊಮ್ಮೆ ನಮ್ಮ ನಮ್ಮ ನಾಯಕರುಗಳನ್ನು ನಮ್ಮ ತಾರ್ಕಿಕ ಮನೋಭಾವನೆಯಿಂದ ಹೊರಗಿಟ್ಟು ನೋಡಿದಾಗ, ಅಲ್ಲಿ ಒಂದು ಪೂಜನೀಯ ಭಾವನೆ ಬಂದೇ ಬರುತ್ತದೆ. ಇಲ್ಲವೆಂದರೆ, ಸುಮಾರು ೬ ಕೋಟಿ ಮತದಾರರಲ್ಲಿ ಸುಮಾರು ಒಂದೂ ಮುಕ್ಕಾಲು ಕೋಟಿ ಒಟ್ಟು ಮತಗಳನ್ನು ಯಾವುದೇ ಅನುಭವವಿರದ ಪಕ್ಷದ ಅಭ್ಯರ್ಥಿಗಳು ಗಳಿಸುತ್ತಾರೆಂದರೆ? ಹಾಗೆ ಮಾಡುತ್ತಾ, ಅರವತ್ತು ವರ್ಷಗಳಿಂದ ರಾಜಕೀಯ ಕಣ್ಣಾಮುಚ್ಚಾಲೆ ಆಡುತ್ತ ಬಂದಿದ್ದ ಎರಡೂ ಪ್ರಾಂತ್ರೀಯ ಪಕ್ಷಗಳನ್ನು ಬದಿಗೆ ತಳ್ಳುವುದೆಂದರೆ? ಅದೇನು ಸುಲಭದ ಮಾತೆ? ಇದರಲ್ಲಿ ಮುಂಬರುವ ಕ್ರಾಂತಿಯ ಸಂಪೂರ್ಣ ಮುನ್ನೋಟವಿದೆ.

ಟಿವಿಕೆಯ ನಾಯಕರ ಠೀವಿ ಅದೆಷ್ಟು ಹೆಚ್ಚು ಎಂದರೆ, ಕಡಿಮೆ ಹಣ ಮತ್ತು ಸಂಪನ್ಮೂಲಗಳನ್ನು ಬಳಸಿ, ಹೆಚ್ಚು ಹೆಚ್ಚು ಯುವ ಮತದಾರರನ್ನು ತಮ್ಮೆಡೆಗೆ ಸೆಳೆದುಕೊಂಡು, ಗಣನೀಯವಾದ ಸೀಟುಗಳನ್ನು ಗೆದ್ದುಕೊಂಡಿರುವುದು. ಈಗಾಗಲೇ ಹಾಲಿ ಆಡಳಿತದಲ್ಲಿದ್ದ ಪಕ್ಷ ಮತ್ತು ಪಕ್ಷದ ಮುಖಂಡರುಗಳಿಗೆ ನೀರು ಕುಡಿಸಿ, ತನ್ನ ಜನಹಿತ ಧೋರಣೆ ಮತ್ತು ಪ್ರಣಾಳಿಕೆಗಳನ್ನು ಮುಂದಿಟ್ಟುಕೊಂಡು ವಿಜಯ್ ಅವರ ಪಕ್ಷ ಗೆಲ್ಲುವುದು ಎಂದು ಯಾರೂ ಊಹಿಸಿರಲಿಲ್ಲ.

***

ನಮ್ಮ ಕರ್ನಾಟಕದಲ್ಲಿ ಇದೇ ರೀತಿ ಆಗಿದ್ದರೆ ಎಷ್ಟೊಂದು ಚೆನ್ನಾಗಿತ್ತು! ನಮ್ಮ ಕರ್ನಾಟಕದ ಜನಪರ ಮತ್ತು ಜನಪ್ರಿಯ ನಾಯಕರುಗಳನ್ನು ತೆಗೆದುಕೊಂಡರೆ ಯಾರು ಈ ರೀತಿಯ ಮುಂಚೂಣಿಯಲ್ಲಿ ನೆನಪಿಗೆ ಬಂದಾರು? ಹಾಗೆ ಅಭ್ಯದಯಕ್ಕೆ ಬಂದು, ಜನರಿಗೆ ಅದೇನೇನು ಅನುಕೂಲಗಳನ್ನು ಮಾಡಿಕೊಟ್ಟಾರು? ಸ್ವಾರ್ಥರಹಿತ ರಾಜಕಾರಣ ಅನ್ನೋದು ಇದೆಯೇ? ಹಾಗಿದ್ದರೆ, ಅದು ನಮ್ಮ ನಾಡಿನಲ್ಲಿ ಏಕೆ ಹೊರಹೊಮ್ಮೋದಿಲ್ಲ?

ಹೀಗೆ ಅನೇಕ ಪ್ರಶ್ನೆಗಳು ಏಳುತ್ತಲೇ ಇವೆ.

ನಮ್ಮ ನಾಯಕರುಗಳು ಏನಿದ್ದರೂ ಜಾತಿ-ಪಕ್ಷ-ಸ್ವಹಿತಗಳನ್ನು ಮುಂದಿಟ್ಟುಕೊಂಡು ಕಚ್ಚಾಡುವುದಕ್ಕೆ ಮಾತ್ರ ಹೆಸರುವಾಸಿಯಾದವರು. ಇವರನ್ನು ನೋಡಿದಾಗ - ಓಲೈಕೆ ರಾಜಕೀಯ, ವೃದ್ಧಾಪ್ಯದಲ್ಲೂ ಕುರ್ಚಿಗೆ ಅಂಟಿಕೊಂಡಿರುವ ಮನೋಭಾವನೆ, ಕೌಟುಂಬಿಕ ನಾಯಕತ್ವವನ್ನು ಬೆಳೆಸುವುದರಲ್ಲೋ ತಮ್ಮ ಶಕ್ತಿಯನ್ನು ವ್ಯಯಿಸುವವರೇ ವಿನಾ, ನಿಜವಾಗಿಯೂ ಜನಪರ ಹಿತಾಸಕ್ತಿಗಳನ್ನು ಕೇಂದ್ರದಲ್ಲಿಟ್ಟುಕೊಂಡು ಕೆಲಸ ಮಾಡಬಲ್ಲರೇ? ಎಂದು ಪ್ರಶ್ನೆಗಳು ಏಳುತ್ತವೆ.

ಕಾಲದಿಂದ ಕಾಲಕ್ಕೆ ಬದಲಾವಣೆಗಳು ಸಹಜ. ಒಂದು ರಾಜ್ಯ ಅಥವಾ ರಾಷ್ಟ್ರದ ಚುಕ್ಕಾಣಿಯನ್ನು ಹಿಡಿದು ಮುನ್ನಡೇಸುವ ಛಲದಿಂದ, ಯಾವುದೇ ಅನುಭವ ಅಥವಾ ಹಿನ್ನೆಲೆ ಇರದಿದ್ದರೂ, ಆಗಾಗ್ಗೆ ಅಲ್ಲಲ್ಲಿ ನಾಯಕರುಗಳು ಹುಟ್ಟುತ್ತಲೇ ಇರುತ್ತಾರೆ. ಆದರೆ, ಪ್ರಸ್ತುತ ನಮ್ಮ ನಾಡಿಗೆ ಆ ಭಾಗ್ಯ ಬಂದಿಲ್ಲವಷ್ಟೇ.

ಒಂದು ಕಾಲದಲ್ಲಿ, ಟಂಪ್ ಚುನಾವಣೆಗೆ ನಿಂತಾಗ - ಒಬ್ಬ ಬಫ಼ೂನಿನಂತೆ ಕಂಡುಬಂದಿದ್ದರು, ಅದೇ ವ್ಯಕ್ತಿ, ಅಮೇರಿಕದ ಅಧ್ಯಕ್ಷನಾಗಿ, ಇಂದು ಎರಡನೇ ಟರ್ಮ್ ಅನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಒಬ್ಬ ಮುಂದಾಳುವಿಗೆ, ಮಹತ್ವಾಕಾಂಕ್ಷಿ ಯೋಚನೆ, ಕನಸಿನ ಬಲ, ಮತ್ತು ಮಾಡಿಯೇ ತೀರುತ್ತೇನೆಂಬ ಛಲವೊಂದಿದ್ದರೆ ಸಾಕು - ಬೇರೆ ಯಾವುದೂ ಬೇಡ. ಅನುಭವ, ಹಿನ್ನೆಲೆ, ವಿದ್ಯಾಬ್ಯಾಸ, ಮೊದಲಾದವುಗಳೆಲ್ಲ ಗೌಣ. ಈ ರೀತಿಯ ನಾಯಕರು ಎಲ್ಲ ರಂಗದಲ್ಲೂ ಹುಟ್ಟುತ್ತಲೇ ಇರುತ್ತಾರೆ ಅವರನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಗುರುತಿಸಿ, ಅವರನ್ನು ಹಿಂಬಾಲಿಸಿದರೆ ಜಯ ಖಂಡಿತ!

Tuesday, March 24, 2026

ಕಾವ್ಯ ಎಂದರೇ ಹೀಗೆ...

ಕಾವ್ಯ ಎಂದರೇ ಹೀಗೆ...

ಮುಷ್ಟಿಯಲ್ಲಿ ಕಟ್ಟಿಕೊಂಡು ಕಷ್ಟದಲ್ಲಿ ದೂಡಿಕೊಂಡು

ಎದೆಯ ಅಂತರಾಳದೊಳಗೆ ಹುದುಗಿಕೊಂಡ ಭಾವನೆಗಳು

ಹೇಳಲಾಗದ ಹೇಳದಿರಲಾಗದ ಅನೇಕ ಅದಮ್ಯ ಚೇತನಗಳು.


ಕಾವ್ಯ ಎಂದರೇ ಹೀಗೆ...

ತನ್ನ ತಾನು ಬಣ್ಣಿಸಿ, ಇದಿರ ಎದುರು ಹಳಿಯದೆ

ಹಳೆಯದನ್ನು ಕೊಳೆಯ ಬಿಡದ

ಮೊಳಕೆ ಒಡೆಯುವುದನ್ನು ಕಾದ

ಒಮ್ಮೊಮ್ಮೆ ಹತಾಶ ಭಾವನೆಯಲ್ಲಿ ನೊಂದ

ಒಂದಿಷ್ಟು ಪದಪುಂಜಗಳ ಸಾಲು.


ಕಾವ್ಯ ಎಂದರೇ ಹೀಗೆ...

ತನ್ನ ನೋಟವೆಲ್ಲ ಸತ್ಯ, ಅನ್ಯ ನೋಟವೆಲ್ಲ ಮಿಥ್ಯ

ತಾನು ತನ್ನ ಜೊತೆಗೆ ಇದ್ದೂ, ಒಂಟಿ ಪಯಣವೆಂದುಕೊಂಡು

ಚಿಕ್ಕ ಪಯಣಕೆ ಬಲು ದೂರದ ಲೇಪನ ಮಾಡುವ

ವಸ್ತು ವಿಷಯಗಳ ವಿಸ್ಮಯ.


ಕಾವ್ಯ ಎಂದರೇ ಹೀಗೆ...

ಅನತಿ ದೂರದ ಆಕಾಶವನ್ನು ಕತ್ತೆತ್ತಿ ನೋಡಿಕೊಂಡು

ಕೆಳಗಿನ ಬಿರು ಭೂಮಿಯನ್ನು ಸವಕಳಿ ಅಂದುಕೊಂಡು

ತಾನು ತೊಟ್ಟ ಬಟ್ಟೆಯೇ ಬಣ್ಣ, ಉಳಿದವನು ತನ್ನ ಕಣ್ಣ

ಅಳತೆಯಲ್ಲಿ ನೋಡಿ ನಿಮೀಲನ ಮಾಡುವ ಒಂದು ಚಿತ್ರ ಸಂಚಯ.


ಕಾವ್ಯ ಎಂದರೇ ಹೀಗೆ...

ಅದೇನೇನೋ ಹೇಳಿಕೊಂಡರೂ ಹೊರಬರಲಾಗದ

ಅದೆಲ್ಲೋ ಅವಿತುಕೊಂಡೂ ಪ್ರಚುರಪಡಿಸಲಾಗದ

ಕಂಡು-ಕಾಣಿಸಿದರೂ ಇಂದ್ರಿಯಗಳಿಗೂ ಮಿಗಿಲಾದ

ಭಾವನೆಗಳ ಸರಮಾಲೆ.


ಕಾವ್ಯ ಎಂದರೇ ಹೀಗೆ...

ಕೇವಲ ಕೆಲವೇ ಕೆಲವು ಜನ ಮಾತ್ರ ರಸಾಸ್ವಾದ ಮಾಡಿ

ತಿಂದುಂಡು ರುಚಿ ನೋಡಿ

ತಮ್ಮ ತಮ್ಮ ಆಂತರ್ಯದಲೇ ಕರಗಿ ತೇಲಾಡಿ

ಕಂಡು-ಉಂಡು ಅರಗಿಸಿಕೊಳಬಹುದಾದ ಒಂದು ಸುಂದರ ಪ್ರಪಂಚ.


ಕಾವ್ಯ ಎಂದರೇ ಹೀಗೆ... ಅದು

ತಾಯಿ-ಮಗುವ ಬಾಂಧವ್ಯದಂತೆ ಸರಳವಾದುದು

ಪ್ರೇಮಿಕಾ-ಪ್ರಿಯಕರನ ಪ್ರಪಂಚದಂತೆ ವಿರಳವಾದುದು

ಹಗುರವಾಗಿ ಮೇಲೆ ಏರಿ, ಭಾರದ ಮಳೆ ಮೋಡದಂತೆ

ಸುರಿದು, ಹರಿದು, ಬೆಳೆದು, ತೊಳೆದು

ಸರಳ ವಿರಳವೆಲ್ಲ ಹರಳುಗಟ್ಟಿ ಮಿಳಿತವಾದುದು.


ಈ ಕಾವ್ಯ ವೆಂದರೇ ಹೀಗೆ...

ನಮ್ಮ ನಿಮ್ಮ ನಡುವೆ ಹೀಗೆ ಕೊಂಡಿಯಾಗಿ

ಮನದ ಮಂಡಿಗೆಯನೆಲ್ಲ ದಂಡಿಯಾಗಿ

ಮೆಂದುಕೊಂಡು ಮೆಲುಕು ಹಾಕುವ ಸುಂದರ ಸಂಜೆಯಾದುದು!


ಮಾರ್ಚ್ ೧, ೨೦೨೬ ರಂದು ಆಶುಕವಿತೆಯಾಗಿ ಹುಟ್ಟಿ, ವಾಯ್ಸ್ ರೆಕಾರ್ಡರ್‌ನಲ್ಲಿ ಧ್ವನಿಯಾಗಿ ದಾಖಲಾಗಿ, ಮಾರ್ಚ್ ೨೩ರಂದು ಬೃಂದಾವನ ಕನ್ನಡ ಕೂಟದ, ವಸಂತೋತ್ಸವ ಕಾಯಕ್ರಮದಲ್ಲಿ ನಡೆದ ಕವಿಗೋಷ್ಠಿಯಲ್ಲಿ ವಾಚಿಸಿದ ಕವನ.

Monday, March 09, 2026

ಕಾಡುವ ಹಾಡು: ಜಯಾ ಶಂಕರ

ಕಾಡುವ ಹಾಡು: ಜಯಾ ಶಂಕರ

ಹಲವು ವರ್ಷಗಳ ಹಿಂದೆ, ಒಂದು ಸುಂದರವಾದ ಶಿವರಾತ್ರಿ ಮುನ್ನಾ ದಿನದ ಮುಂಜಾವಿನ ಏಳೂವರೆ ಘಂಟೆಯ ಸಮಯ ಇರಬಹುದು.

ನಾನು ಸಹ್ಯಾದ್ರಿ ಕಾಲೇಜಿನ ಭೌತಶಾಸ್ತ್ರದ ಲ್ಯಾಬ್‌ನಲ್ಲಿ ಎಂಟು ಘಂಟೆಗೆ ಆರಂಭವಾಗುವ ತರಗತಿಯ ನಿರೀಕ್ಷೆಯಲ್ಲಿದ್ದೆ. ಆಗೆಲ್ಲ, ಒಂದು ಅರ್ಧ ಘಂಟೆ ಮುಂಚಿತವಾಗಿ ಲ್ಯಾಬ್‌ಗೆ ಹೋಗಿ, ವಿದ್ಯಾರ್ಥಿಗಳು ಬರುವುದಕ್ಕಿಂತ ಮೊದಲು ಎಲ್ಲಾ ಪರಿಕರಗಳ ತಯಾರಿ ಮಾಡಿಕೊಳ್ಳಬೇಕಾದ ಅಗತ್ಯ ಇತ್ತು.

ನನ್ನ ಕೆಲಸದಲ್ಲಿ ತಲ್ಲೀನನಾದ ನಾನು, ಮನಸಿಗೆ ಬಂದ ಈ ಹಾಡನ್ನು ನಿಧಾನವಾಗಿ ಗೊಣಗಿಕೊಂಡಿದ್ದೆ. ಆಗ, ನನ್ನ ಹಿಂದೆ ಈ ಹಾಡನ್ನು ಕೇಳಿಕೊಂಡು ಒಬ್ಬ ಲ್ಯಾಬ್ ಅಟೆಂಡರ್, ನಾನು ಹಾಡನ್ನು ಹೇಳಿ ಮುಗಿಸಿದ ತರುವಾಯ, "ಎಷ್ಟು ಒಳ್ಳೆಯ ಹಾಡು ಸರ್, ಬೆಳಬೆಳಗ್ಗೆ ಈ ಥರಾ ಹಾಡನ್ನು ಕೇಳಿದ್ರೆ, ನಮ್ಮ ದಿನವೆಲ್ಲ ಸುಲಭವಾಗಿ ನಡೆಯುತ್ತೆ!" ಎಂದು ಹೇಳಿದ ನೆನಪು.

ಅದರ ನಂತರ ಈ ಹಾಡಿನ ಗೋಜು, ಅಥವಾ ನೆನಪು ಬಂದಿದ್ದು, ಸುಮಾರು ಮೂವತ್ತು ವರ್ಷಗಳ ಮೇಲೆ ಎನ್ನಬೇಕು!

ಅದೇನೋ ಕಳೆದ ತಿಂಗಳಿನಿಂದ ಈ ಹಾಡು ನಾನು ಎಲ್ಲಿ ಹೋದರಲ್ಲಿ ಕಾಡುತ್ತಲೇ ಇದೆ, ನನ್ನಿಂದ ಅದನ್ನ ಹಾಡಿಸಿಕೊಳ್ಳುತ್ತಲೇ ಇದೆ. ನನಗೆ ಇದು ಸತಾಯಿಸಿದ ವಿಷಯವನ್ನು ನನ್ನ ತಂಗಿಗೆ ನಾನು ಮನನ ಮಾಡಿದ ದೆಸೆಯಿಂದ, ಪಾಪ, ಅವಳೂ ಕೂಡ ಈ ಹಾಡನ್ನು ಹಾಡುವಂತಾದಳು!

ಅಂತರ್ಜಾಲವನ್ನು ಪೂರ್ತಿ ಹುಡುಕಾಡಿದ ಮೇಲೆ, ಎಲ್ಲೂ ಸರಿಯಾದ ಹಾಡಿನ ಸಾಲುಗಳು ಸಿಗದಾದಾಗ, ಈ ಲೇಖನವನ್ನು ಬರೆದು, ನನ್ನ ಅರಿವಿಗೆ ಬಂದಂತೆ, ಈ ಹಾಡನ್ನು ಇಲ್ಲಿ ದಾಖಲು ಮಾಡಿದ ಮೇಲೆ ಈ ಹಾಡಿಗೆ ಒಂದು ಕಾಯಕಲ್ಪ ಸಿಗಬಹುದೇನೋ ನೋಡೋಣ.

***

ಹಾಡು: ಜಯಾ ಶಂಕರ ಭಾವ ಗೋಚರ

ಚಿತ್ರ: ಪಾರ್ವತಿ ಕಲ್ಯಾಣ, ೧೯೬೭

ಗೀತ ರಚನೆ: ಚಿ. ಸದಾಶಿವಯ್ಯ

ಹಿನ್ನೆಲೆ ಗಾಯನ: ಬಿ.ಕೆ ಸುಮಿತ್ರ

ಸಂಗೀತ: ಜಿ.ಕೆ. ವೆಂಕಟೇಶ್

ನಟಿ: ವಿಜಯಲತ (?)

ನಿರ್ದೇಶನ: ಬಿ.ಎಸ್. ರಂಗ



ಜಯಾ ಶಂಕರ ಭಾವ ಗೋಚರ

ಶಿವ ಚಿದಂಬರ ಓಂಕಾರ

ಪುಣ್ಯ ವಿಹಾರ ಪಾಪ ವಿದೂರ

ಜಗದೋದ್ಧಾರ ಫಣಿಹಾರ |ಪ|


ಸದಾ ನಿನ್ನಯ ಪದಾಂಬೋಜದ

ಜ್ಞಾನವೇ ಭವ ತಾಪಹಾರಿ

ಪೂಜೆಯೇ ಸರ್ವ ಪಾಪಹಾರಿ

ಸಕಲ ಶುಭಕಾರಿ|


ಪದಾಂಭೋಜ = ಪದಾಂಬೋಜ - ಪದ + ಅಂಬುಜ, ಪಾದವೆಂಬ ಕಮಲ


ದೇವ ನಿನ್ನಯ ದಿವ್ಯ ನಾಮ

ಶಾಂತಿ ಸೌಖ್ಯದ ಭೌವ್ಯಧಾಮ

ಶರಣ ಜನಕ ರಾಮವೂ

ಸ್ಮರಣೆಯೇ ಆನಂದವೂ|


ನಿನ್ನ ಸಿರಿಮುಡಿ ನೀಲಿ ಗಗನದಿ

ತಿರುವಡಿ ಪಾತಾಳ ತಳದಿ

ಜಟೆಗಳೇ ತರು ಮೋಡ ಮಾಲೆ

ತಾರೆ ಮಣಿಮಾಲೆ


ಚಂದ್ರ-ಸೂರ್ಯರು ನಿನ್ನ ನಯನ

ಲೋಕದಾನವು ನಿನ್ನ ವದನ

ಪಾವನ ಜಪ ಪಾವನ

ಪರಮ ಪದವಿಗೆ ಸಾಧನ||


ಜಯಾ ಶಂಕರ ಭಾವ ಗೋಚರ

ಶಿವ ಚಿದಂಬರ ಓಂಕಾರ|


ಈ ಹಾಡನ್ನು ಇಲ್ಲಿ ಕೇಳಬಹುದು.

Wednesday, January 28, 2026

ಅರಸುವ ಬದುಕು

ಮಾನವನ ಬದುಕೇ ಹೀಗೆ, ತನ್ನ ಸುತ್ತಳತೆಯಲ್ಲಿರುವುದನ್ನೆಲ್ಲ ಬಿಟ್ಟು, ದೂರದಲ್ಲಿದ್ದನ್ನು ಅರಸುತ್ತಾ ಹೋಗುವುದು. ಹೀಗನ್ನಿಸಿದ್ದು, ಇತ್ತೀಚೆಗೆ ನಾನು ಓದಿದ ಬಿ.ಜಿ.ಎಲ್. ಸ್ವಾಮಿಯವರ, "ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ" ಪುಸ್ತಕವನ್ನು ಓದಿದಾಗ. ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ತಮ್ಮ ನಿರಂತರ ಪಯಣವನ್ನು ಮುಂದುವರೆಸಿದ್ದಲ್ಲದೇ, ತಮ್ಮ ಜೊತೆಗೆ ಗಿಡ, ಮರ, ಹಣ್ಣು-ಹಂಪಲು, ತರಕಾರಿ, ಪ್ರಾಣಿಗಳನ್ನೂ ತಮ್ಮ ಸಂಸ್ಕೃತಿಯ ಪ್ರತೀಕವಾಗಿ, ತೆಗೆದುಕೊಂಡು ಹೋದರು. ಉಳಿಸಿದರು ಮತ್ತು ಬೆಳೆಸಿದರು. ಈ ನಿಟ್ಟಿನಲ್ಲಿ 15ನೇ ಶತಮಾನ ಮನುಕುಲ ಸಂಸ್ಕೃತಿಯ ಹಂಚಿಕೆಯ ಪ್ರತೀಕವಾಗಿ ಬಹಳ ಮಹತ್ವದ ಶತಮಾನವಾಗಿ ಕಂಡುಬರುತ್ತದೆ. ಕೇವಲ, ಐನೂರು ವರ್ಷಗಳ ಹಿಂದೆಯಷ್ಟೇ ಬಳುವಳಿಯಾಗಿ ಬಂದ ತರಕಾರಿ, ಹಣ್ಣು, ಮತ್ತಿತರ ಗಿಡಮೂಲಿಕೆಗಳು, ಇಂದು ಸಂಪೂರ್ಣವಾಗಿ ನಮ್ಮವೇ ಆಗಿಬಿಟ್ಟಿವೆ!

ಟೊಮೇಟೊ, ಮೆಣಸಿನಕಾಯಿ, ತಿಂಗಳ ಹುರುಳಿಕಾಯಿ (ಬೀನ್ಸ್), ಸೀಮೆ ಬದನೆಕಾಯಿ, ಪಪಾಯ, ಸೀಬೆ, ಸೀತಾಫಲ, ಅವಕಾಡೋ ಮೊದಲಾದವುಗಳು ನಮ್ಮೊಳಗೊಂದಾಗಿ ಹೋಗಿವೆ.

ಸುಮಾರು 15 ಸಾವಿರ ವರ್ಷಗಳ ಹಿಂದೆ, ಪೂರ್ವ ಆಫ಼್ರಿಕಾ ಖಂಡದ ನಾಗರೀಕತೆಯ ತೊಟ್ಟಿಲಿನಿಂದ ವಲಸೆ ಹೋದವರ ಅಗತ್ಯಗಳು ಹಲವಿದ್ದವು. ಒಂದು ಕಾಲದಲ್ಲಿ, ಆಹಾರ, ನೀರು ಮತ್ತು ಬದುಕುಳಿಯುವುದಕ್ಕೊಂದು ತಾವನ್ನು ಅರಸಿಕೊಂಡು ಹೋದ ಮನುಕುಲ ತನ್ನದೇ ಆದ ರೀತಿಯಲ್ಲಿ ಮನುಕುಲದ ವಲಸೆ ಮತ್ತು ಬೆಳವಣಿಗೆಗೆ ಕಾರಣವಾಯಿತು. ಸರಳವಾದ ಆಯುಧ, ಮತ್ತು ಉಪಕರಣಗಳನ್ನು ಬಳಸಿ ಅವರು ಅಂದು ಮಾಡಿದ ಮಹಾನ್ ಸಾಧನೆಯ ದೆಸೆಯಿಂದ ಇಂದು, ಮನುಷ್ಯ ಹೆಜ್ಜೆ ಇಡದ ಸ್ಥಳವೇ ಇಲ್ಲ ಎನ್ನುವಂತಾಗಿದೆ. ಈ ನಿಧಾನವಾದ ವಲಸೆ ಪ್ರಕ್ರಿಯೆ ಒಂದು ರೀತಿಯಲ್ಲಿ, ತೆರೆದ ಪ್ರಪಂಚದ ಅಳತೆಗೋಲಿನಂತಿತ್ತು.

ಆದರೆ, ಮುಂದೆ 15ನೇ ಶತಮಾನದಲ್ಲಿ ವಲಸೆ ಹೋದವರ ಅಗತ್ಯಗಳು ತದ್ವಿರುದ್ಧವ್ವಾಗಿದ್ದವು. ಆರ್ಥಿಕ, ರಾಜಕೀಯ, ಧಾರ್ಮಿಕ ಕಾರಣಗಳು ಈ ನಿಟ್ಟಿನಲ್ಲಿ ಮುಖ್ಯವಾಗಿ ಕಾಣಿಸುತ್ತವೆ. ಇಲ್ಲಿ, ವ್ಯಾಪಾರ-ವಹಿವಾಟು ಎನ್ನುವುದು ಒಂದು ಸಣ್ಣ ನೆಪವಾಗಿ ಕಂಡುಬಂದು, ಮದ್ದುಗುಂಡುಗಳ ಸಹಾಯದಿಂದ ಅನೇಕ ಸಂಸ್ಕೃತಿಗಳ ನಾಶಕ್ಕೂ ಈ ಪ್ರಕ್ರಿಯೆ ಕಾರಣವಾಯಿತು ಎಂದರೆ ತಪ್ಪಲ್ಲ. ಕಗ್ಗತ್ತಲ ಖಂಡದಿಂದ ಆರಂಭವಾದ ಈ ಮನುಕುಲದ ವಲಸೆ, 15 ಸಾವಿರ ವರ್ಷಗಳಲ್ಲಿ, ಯಾವ ಹಂತವನ್ನು ತಲುಪಿತೆಂದರೆ, ಟ್ರೇಡ್, ರಿಲಿಜನ್ ಮತ್ತು ಪವರ್ ಎನ್ನುವ ಹೆಸರಿನಲ್ಲಿ ಬೂಮರ‍್ಯಾಂಗ್‌ನಂತೆ ಮತ್ತೆ ಹಿಂತಿರುಗಿ ಆಫ಼್ರಿಕಾವನ್ನು ಹುಡುಕಿಕೊಂಡು ಬಂದಾಗ, ಆ ವಲಸೆ ಮನೋಭಾವನೆಯಲ್ಲಿ ಅನೇಕ ಸ್ವಾರ್ಥಗಳು ಅಡಕವಾಗಿದ್ದು ಗೊತ್ತಾಗುತ್ತದೆ. ಕೇವಲ ಎರಡು ಸಾವಿರ ವರ್ಷಗಳ ಹಿಂದೆ ಹುಟ್ಟಿ ಬೆಳೆಯುತ್ತಿರುವ ಕೆಲವು ಮತಗಳು, ತಮ್ಮ ಹಿರಿಮೆ-ಗರಿಮೆಯ ಹೆಸರಿನಲ್ಲಿ ಈಗ ಇಡೀ ವಿಶ್ವವನ್ನೇ ಕಬಳಿಸಿಕೊಳ್ಳುತ್ತಿವೆ ಎಂದರೆ ಆಶ್ಚರ್ಯವಾಗುತ್ತದೆ.

ಈ ಎರಡು ಸಾವಿರ ವರ್ಷಗಳಲ್ಲಿ, ಮನುಕುಲ ಅದೆಷ್ಟು ಆಟಾಟೋಪಗಳನ್ನು ಕಂಡಿರಬೇಡ? ಒಂದಾನೊಂದು ಕಾಲದಲ್ಲಿ ವಲಸೆ ಬಂದ ನಮ್ಮ ಪೂರ್ವಿಕರ ಪೂರ್ವಿಕರಿಗೆ ತಮ್ಮ ದೈನಂದಿನ ಅಗತ್ಯಗಳೇ ಪೂರಕ ಕಾರಣಗಳು. ಅವರಿಗೆ ತಮ್ಮತನವನ್ನು ಉಳಿಸಿಕೊಳ್ಳುವುದು ಮುಖ್ಯವಾಗಿತ್ತು. ಆಹಾರ-ಅಗತ್ಯಗಳ ಹೆಸರಿನಲ್ಲಿ, ಅವರು ಪ್ರಕೃತಿಯನ್ನು ಗೋಳು ಹೊಯ್ದುಕೊಳ್ಳಲಿಲ್ಲ. ಪ್ರಕೃತಿಯ ಜೊತೆಗೆ ಎಂದಿಗೂ ಒಂದು ಸಮತೋಲನ ಹಾಗೂ ಸಮಾನಾಂತರವನ್ನು ಬೆಳೆಸಿಕೊಂಡಿದ್ದರು. ಸುತ್ತಲನ್ನು ಹಿಂಡಿ ಹಿಪ್ಪೆ ಮಾಡಿ ತಾವು ಬೆಳೆಯುವುದು ಅವರಿಗೆ ಮುಖ್ಯವಾಗಿರಲಿಲ್ಲ. ಹಾಗೆಯೇ, ಧಾರ್ಮಿಕ ಕಾರಣಗಳೂ, ವ್ಯಾವಹಾರಿಕ ಕಾರಣಗಳೆಲ್ಲ ಇರಲಿಲ್ಲವೆಂದೇ ಹೇಳಬೇಕು. ನಿಧಾನವಾಗಿ ರಾಜಕೀಯ ಪ್ರಜ್ಞೆ ಬೆಳೆಯತೊಡಗಿದಂತೆ, ತಮ್ಮ ಹೆಚ್ಚು-ಕಡಿಮೆಗಳು, ತಮ್ಮಲ್ಲಿನ ಮೇಲು-ಕೀಳುಗಳು ಅವರಿಗವರಿಗೇ ಅರಿವಾಗಿ ಒಂದಿಷ್ಟು ಜನ ತಮ್ಮದರಿಂದ ಮೇಲ್ಮಟ್ಟಕ್ಕೆ ಸರಿದರೆ, ಇನ್ನೊಂದಿಷ್ಟು ಜನ ತಮ್ಮದೇ ಮೇಲು ಎಂದು ಸಾಧಿಸತೊಡಗಿದರು. ತಮ್ಮ ತಮ್ಮ ಇರುವಿಕೆಯನ್ನು ತೂಕ ಮಾಡಿ ನೋಡಿಕೊಳ್ಳುವ ತನಕ, ಮನುಕುಲದಲ್ಲಿ ವ್ಯಾಪಾರಿ ಮನೋಭಾವ ಬೆಳೆದೇ ಇರಲಿಲ್ಲವೇನೋ! ಹಾಗೇ, ಎಲ್ಲಿಯವರೆಗೆ, ತಮ್ಮತನದ ಅರಿವಾಗಿ ಅದೇ ಹೆಚ್ಚು ಎಂದು ಸಾಧಿಸುವ ಮನೋಭಾವನೆ ಹುಟ್ಟಿರಲಿಲ್ಲವೋ, ಅಲ್ಲಿಯವರೆಗೆ ಎಲ್ಲವೂ ಸಾಧುವಾಗಿತ್ತು ಎಂದು ಹೇಳಬಹುದು.

ಈ ಸರಿ-ಸಮಗಳ ಅನುಪಾತ ಬೆಳೆಯುವುದಕ್ಕೆ ಮೊದಲು, ಅಂದರೆ, ಸುಮಾರು ೨ ಸಾವಿರ ವರ್ಷಗಳ ಹಿಂದೆ ಹೋಗಿ ನೋಡಿದರೆ, ಇಂಡಸ್ಟ್ರಿಯಲ್ ರೆವಲ್ಯೂಶನ್ ಆಗುವವರೆಗೆ, ಸುಮಾರು 2 ಬಿಲಿಯನ್ ಅಷ್ಟು ಇದ್ದ ಜನಸಂಖ್ಯೆ, ಅಲ್ಲಿಂದ ಕೆಲವೇ ಕೆಲವು ವರ್ಷಗಳ ತರುವಾಯ (ಅಂದರೆ, 1950ರ ನಂತರ), ಕೇವಲ 75 ವರ್ಷಗಳಲ್ಲಿ, ಐದು ಬಿಲಿಯನ್‌ಗೂ ಹೆಚ್ಚು ಬೆಳೆದುಬಿಟ್ಟಿತು. ಅಂದರೆ, ಎರಡೂವರೆ ಬಿಲಿಯನ್‌ನಿಂದ ಏಳೂವರೆ ಬಿಲಿಯನ್‌ಗೂ ಹೆಚ್ಚು. ಈ ಜನಸಂಖ್ಯಾ ಸ್ಪೋಟ, ಅತ್ಯಂತ ಮಹತ್ವದ ಬೆಳವಣಿಗೆಗಳಲ್ಲೊಂದು. ಇದರ ಹಿನ್ನೆಲೆಯಲ್ಲಿ, ಮನುಕುಲದ ಅನೇಕ ಸಾಧನೆಗಳನ್ನು ನಾವು ಹೆಸರಿಸಬಹುದು. ಒಂದು ಕಡೆ ಕೈಗಾರಿಕಾ ಕ್ರಾಂತಿ, ಮತ್ತೊಂದು ಕಡೆಗೆ ಮನುಷ್ಯನ ರೋಗ ನಿಯಂತ್ರಣ, ಸೋಂಕು, ಮೊದಲಾದ ಪಸರಿಸಬಹುದಾದ ರೋಗಾಣುಗಳ ಮೇಲೆ ಸಾಧಿಸಿದ ಗೆಲುವು ಎದ್ದು ಕಾಣುತ್ತದೆ.

ಇನ್ನು ಕೇವಲ 50 ರಿಂದ 75 ವರ್ಷಗಳಲ್ಲಿ, UNನ ಅಧ್ಯಯನದ ಪ್ರಕಾರ ನಮ್ಮ ಜನಸಂಖ್ಯೆ 10 ಬಿಲಿಯನ್ ದಾಟಿ ಇನ್ನೂ ಮುಂದೆ ಹೋಗುತ್ತದೆ. ನಂತರ, ನಿಧಾನವಾಗುತ್ತದೆ. ಒಂದು ವೇಳೆ, ಮಾನವ ಜನಸಂಖ್ಯೆ ಹೀಗೇ (ಮಿತಿಮೀರಿ) ಬೆಳೆಯುತ್ತಲೇ ಹೋಗಿ, 25 ಬಿಲಿಯನ್ ತಲುಪಿತೆಂದರೆ? ಆಗ ಪ್ರಪಂಚ ಹೇಗಿರಬಹುದು, ಒಮ್ಮೆ ಊಹಿಸಿಕೊಳ್ಳಿ!

ಆದರೆ, ಒಂದು ಕಾಲದಲ್ಲಿ ಪ್ರಪಂಚ ಪರ್ಯಟನೆಗೆ ಹೊರಟು ನಿಂತು ನಿಧಾನವಾಗಿ ಬೆಳೆಯುತ್ತಿದ್ದ ಜನಸಂಖ್ಯೆ, ಕೈಗಾರಿಕಾ ಕ್ರಾಂತಿ ಮತ್ತು ವೈದ್ಯಕೀಯ ಸಂಪನ್ಮೂಲಗಳ ಬೆಳವಣಿಗೆಯ ನಂತರ ಅತಿವೇಗವಾಗಿ ಬೆಳೆದು ಮುಂದೆ, ಕ್ರಮೇಣ ಕಡಿಮೆ ಬೆಳೆಯುವುದು ಎಂದರೆ ನಂಬಲು ಸಾಧ್ಯವೇ? ಕುಂಠಿತಗೊಂಡ ಫ಼ರ್ಟಿಲಿಟಿ, ಆರ್ಥಿಕ ಅಭದ್ರತೆ ಮತ್ತು ಅನಿಶ್ಚಿತತೆ, ಜೊತೆಗೆ ನಮ್ಮ ನಮ್ಮ ಸ್ವಾವಲಂಬನೆಯ ಬೆಳವಣಿಗೆಯೇ ನಮ್ಮ ಸಂತತಿಯ ಬೆಳವಣಿಗೆಯ ವೇಗವನ್ನು ಕಡಿಮೆ ಮಾಡುತ್ತದೆ. ಇವುಗಳಲ್ಲೆದರ ಜೊತೆಗೆ, ಪ್ರತಿ ನೂರು ವರ್ಷಕ್ಕೊಮ್ಮೆ ಅವತರಿಸುವ ಮಹಾಮಾರಿಗಳು, ಸಾಂಕ್ರಾಮಿಕ ರೋಗಗಳೂ ಕೂಡ ನಮ್ಮ ಸಂತತಿಯ ಬೆಳವಣಿಗೆಗೆ ಕಡಿವಾಣ ಹಾಕಬಹುದು. ಎಲ್ಲದಕ್ಕಿಂತ ಮುಖ್ಯ ಮಹಾಯುದ್ಧಗಳು, ಅಣ್ವಸ್ತ್ರಗಳ ಬಳಕೆ ಮೊದಲಾದವುಗಳು ಕೂಡಾ ನಮ್ಮ ನಾಶಕ್ಕೆ ಕಾರಣವಾಗಹುದು.

Population (B)

22 |                              *

20 |                         *    

18 |                    *         

16 |               *              

14 |          *                   

12 |     *                        

10 |  *                           

 8 |*                             

    2025    2100    2200    2300   2400   2500

***

ಅಕಸ್ಮಾತ್, ಮಾನವ ತನ್ನ ಮೂಲಸ್ಥಾನವನ್ನೇ ಬಿಟ್ಟು  ಕದಲದೇ ಇದ್ದಿದ್ದರೆ ಹೇಗಿರುತ್ತಿತ್ತು? ಮನುಕುಲದ ಅಸ್ತಿತ್ವ ಬರೀ ಕಗ್ಗತ್ತಲೆಯ ಖಂಡದಲ್ಲೇ ಹುಟ್ಟಿ, ಅಲ್ಲೇ ಬೆಳೆದು ಅವಸಾನ ಹೊಂದುತ್ತಿತ್ತೇ? ಅಥವಾ ಯಾವುದೋ ರೋಗಾಣುವಿನ ಕಬಂದ ಬಾಹುಗಳಲ್ಲಿ ಸಿಕ್ಕಿ ನಲುಗುತ್ತಿತ್ತೇ? ಅಥವಾ ಇದ್ದಲ್ಲೇ ಬೆಳೆದು, ಕೊಬ್ಬಿ, ನಂತರ ಒಬ್ಬರನ್ನೊಬ್ಬರು ಕಿತ್ತು ತಿನ್ನುವ ಹಂತವನ್ನು ಮುಟ್ಟುತ್ತಿತ್ತೇ? ಈ ಮಾನವನ ಬೆಳವಣಿಗೆಗೆ ಧಾರ್ಮಿಕ ಲೇಪನವಿಲ್ಲದಿದ್ದರೆ ಏನಾಗುತ್ತಿತ್ತು? ವಲಸೆ ಬಂದ ಪ್ರತಿಯೊಂದು ಜೀವಿಯೂ ಅದಕ್ಕೆ ಬೇಕಾದ ಮತವನ್ನು ಸೃಷ್ಟಿಸಿಕೊಳ್ಳಲಿಲ್ಲವಲ್ಲ? ಮತ-ಧಾರ್ಮಿಕ ವಿಧಿವಿಧಾನಗಳ ಸೃಷ್ಟಿ ಮುಂದುವರೆದು, "ತನ್ನದೇ ಹೆಚ್ಚು" ಎನ್ನುವ ಮನೋಸಂಕಲ್ಪದಿಂದ ಅದೆಷ್ಟು ಅನಾಹುತಗಳಾದವು.

ಒಂದಂತೂ ನಿಜ, ಮಾನವ ಮತ್ತು ಆತನ ಸಂಸ್ಕೃತಿಗಳು ನಿಂತ ನೀರಂತೂ ಅಲ್ಲ. ಅದು, ಯಾವಾಗಲೂ ಹರಿಯುವ ಸುಪ್ತವಾದ ನದಿಯಂತೆ.  ಈ ಅರಸುವ ಬದುಕು, ನದಿಯ ಒರತೆಯಂತೆ ನಿಲ್ಲದೇ ಸದಾ ಹರಿಯುತ್ತಾ ಒಂದು ಸಾಗರದಿಂದ ಮತ್ತೊಂದು ಮಹಾ ಸಾಗರದೆಡೆಗೆ ಹರಿಯುತ್ತಲೇ ಇರುವುದು. ಅಕಸ್ಮಾತ್, ಭೂಮಿಯಲ್ಲಿ ಸ್ಥಳವಿರದಿದ್ದರೇನಂತೆ, ಅಂತರಿಕ್ಷದಲ್ಲಿ ಜಾಗ ಹುಡುಕುವ ಪ್ರವೃತ್ತಿಯದು. 

ಒಂದು ದೃಷ್ಟಿಕೋನದಲ್ಲಿ, ನಾವು ನಾವೇ, ಈ ಅಗಾಧವಾದ ಭೂಮಿಯನ್ನು ಪಸರಿಸಿಕೊಂಡು, ನಮ್ಮ ಸಂಖ್ಯೆಯನ್ನು ಇಮ್ಮಡಿ, ಮುಮ್ಮಡಿ ಮಾಡಿಕೊಂಡು ಉಳಿದದ್ದನ್ನೆಲ್ಲ ನಮ್ಮ ಬಳಕೆಗೆ ಇರುವ ಸಂಪನ್ಮೂಲಗಳೆಂದು ಪರಿಗಣಿಸಿಕೊಂಡು ಬೆಳೆಯುತ್ತಲೇ ಇರುವುದು. ಮತ್ತೊಂದು ದೃಷ್ಟಿಕೋನದಲ್ಲಿ, ಬಿಲಿಯನ್ ಗಟ್ಟಲೆ ವರ್ಷದಿಂದಲೂ ಅಸ್ತಿತ್ವದಲ್ಲಿರುವ ಈ ಆಗಾಧವಾದ ಭೂಮ್ಯಾಕಾಶಗಳಲ್ಲಿ, ನಾವೊಂದು ಧೂಳಿನ ಕಣದ ಸಮಾನ. ನಮ್ಮ ನಿಲುವು-ನೆಲೆಗಳೇನೇ ಇದ್ದರೂ ಅವು, ಈ ಅಗಾಧತೆಯಲ್ಲಿ ಒಂದಾಗಿ, ಎಲ್ಲವೂ ಒಂದು ದಿನ ಸಮತೋಲನಕ್ಕೆ ಬಂದೇ ಬರುತ್ತದೆ ಎನ್ನುವುದು.

ಈ ಎರಡು ದೃಷ್ಟಿಕೋನಗಳ ನಡುವೆ, ನಮ್ಮ ನಮ್ಮ ಅರಸುವ ಬದುಕು ಹಾಗೂ ಅರಸುವ ಮನಸ್ಥಿತಿ ನಿಂತಲ್ಲಿ ನಿಲ್ಲದೆ ಸುತ್ತುತ್ತಲೇ ಇರುತ್ತದೆ ಎನ್ನುವುದು.