Monday, April 13, 2020

ನೋಡುವ ಕಣ್ಣಿರಲು...

ನಿನ್ನೆ ಶುಭ್ರವಾದ ಮುಂಜಾನೆ ಹೊರಗೆ ತಿರುಗಾಡಿಕೊಂಡು ಬರುವಾಗ ಇನ್ನೇನು ಅದಾಗ್ಗೆ ನಿದ್ದೆಯಿಂದ ಕಣ್ಣೊರೆಸಿಕೊಂಡು ಎದ್ದೇಳುತ್ತಿದ್ದ ಸೂರ್ಯ.  ಸೂರ್ಯನ ಸ್ನೇಹಿತರಾದ ಪಕ್ಷಿ ಸಂಕುಲದ ಸದಸ್ಯರುಗಳು ಬಹಳ ಗಡಿಬಿಡಿಯಲ್ಲಿ ತಮ್ಮ ದಿನಗಳನ್ನು ಆರಂಭಿಸುತ್ತಿದ್ದಂತೆ ಕಂಡುಬಂತು.  ಅವುಗಳ ಚಿಲಿಪಿಲಿ ಧ್ವನಿಯೊಂದಿಗೆ ಪೈಪೋಟಿ ನೀಡುತ್ತೇವೆ ಎಂದು ನಂಬಿಕೊಂಡು ಆಗೊಮ್ಮೆ ಈಗೊಮ್ಮೆ ಬೊಗಳುವ ನಾಯಿಗಳ ಸದ್ದು ದೂರದಲ್ಲಿ ಕೇಳುತ್ತಿತ್ತು.  ಹಿಂದಿನ ದಿನದ ವಿಪರೀತ ಗಾಳಿ, ಸ್ವಲ್ಪ ಮಳೆ/ಆಲಿಕಲ್ಲುಗಳ ಆಘಾತದಲ್ಲಿಸ್ವಲ್ಪ ನೊಂದಂತೆ ಕಂಡ ಗಿಡಮರಗಳೂ ಸಹ ಮುಂಬರುವ ಬಿಸಿಲನ್ನು ಆಹ್ಲಾದಿಸಲು ಸ್ವಲ್ಪವೂ ಅಲುಗಾಡದೇ ಕಾಯುತ್ತಿದ್ದವು.  ವಿಶ್ವದಾದ್ಯಂತ ಕೊರೋನಾ ವೈರಸ್ ಸುದ್ದಿಗೆ ಗ್ರಾಸವಾಗಿ ಹೆದರಿದ್ದ ಚಂದ್ರ ದೂರದಲ್ಲಿ ಅವತರಿಸಿದ್ದರೂ, ಇಂದು ಮತ್ತೇನು ಗ್ರಹಚಾರ ಕಾದಿದೆಯೋ, ತನಗೆಲ್ಲಿ ಸೋಂಕು ತಗುಲೀತು ಎನ್ನುವ ಹುನ್ನಾರದಿಂದ ಮೋಡಗಳ ನಡುವೆಯೇ ಮುಖವನ್ನು ಹುದುಗಿಸಿಕೊಂಡು ಆಗಾಗ್ಗೆ ಚಲಿಸುವ ಮೋಡಗಳ ಕೃಪೆಯಲ್ಲಿ ತೂಗುಯ್ಯಾಲೆಯಲ್ಲಿ ಆಟವಾಡುತ್ತಿದ್ದ.




ಸುತ್ತಲಿನಲ್ಲಿ ಹಸಿರು ತುಂಬಿಕೊಂಡಿದ್ದರೂ ನಾವು ನಡೆಯುವ ರಸ್ತೆಯಲ್ಲಿ ಮಾಗಿದ ಎಲೆಗಳು ಹಿಂದಿನ ದಿನದ ಗಾಳಿ-ಮಳೆಯ ರಭಸದ ಭರಾಟೆಯನ್ನು ನೆನಪಿಸುವಂತೆ ತಮ್ಮನ್ನು ತಾವು ರಸ್ತೆಯ ಮುಖದ ಮೇಲೆ ಚಾಚಿಕೊಂಡಿದ್ದವು.  ಅಲ್ಲಿಲ್ಲಿ ಮುರಿದು ಬಿದ್ದ ಒಣಗಿದ ಎಲೆರಹಿತ ಮರದ ಟೊಂಗೆಗಳು ಅದ್ಯಾವುದೋ ಗಣಿತದ ಸಮೀಕರಣವನ್ನು ಧ್ಯಾನಿಸಿಕೊಳ್ಳುವಂತೆ ತಮ್ಮನ್ನು ತಾವು ಚದುರಿಸಿಕೊಂಡಿದ್ದು, ಹಲವಾರು ಕೋನಗಳಿಂದ ಅನೇಕ ಬಹುಭುಜಾಕೃತಿಗಳ ಸಾಧ್ಯತೆಯನ್ನು ಎತ್ತಿ ತೋರಿಸುತ್ತಿದ್ದವು.  ಈಗಾಗಲೇ ಹಲವಾರು ಬಾರಿ ಮಳೆಯಲ್ಲಿ ಮಿಂದು ತೋಯ್ದು ಹೋದ ನೆಲ ಯಾವುದೇ ಕಂಪನ್ನು ಬೀರುತ್ತಿರಲಿಲ್ಲ, ಅದರ ಬದಲಿಗೆ ಹಿಂದಿನ ದಿನ ಕತ್ತರಿಸಿದ ಹುಲ್ಲಿನ ಗರಿಕೆಗಳು ಬೀಸುವ ಗಾಳಿಗೆ ತಮ್ಮ ಹಲುಬನ್ನು ನಿಲ್ಲಿಸಿ, ಒಂದು ರೀತಿಯ ಗಾಢವಾದ ಪರಿಮಳವನ್ನು ಎಲ್ಲಕಡೆಗೆ ಹರಡಿದ್ದವು.  ರಸ್ತೆಯ ಬದಿಯಲ್ಲಿ ಗುಂಪು ಕಟ್ಟಿಕೊಂಡು, ಪುಡಿಪುಡಿ ಮಣ್ಣಿನಲ್ಲಿ ಮನೆಕಟ್ಟುವ ಇರುವೆಗಳ ಚಡಪಟಿಕೆ ಜೋರಾಗಿ ನಡೆದಿತ್ತು.  ತಮ್ಮ ಭವಿಷ್ಯದ ಸೌಧದ ಮೇಲೆ ತಣ್ಣೀರೆರೆಚಿದ ಮಳೆರಾಯನಿಗೆ ಆಗಾಗ್ಗೆ ಎದ್ದು ಎರಡು ಕಾಲಿನಲ್ಲಿ ನಿಂತು ಶಾಪಹಾಕುತ್ತಿರುವವರಂತೆ ಕಂಡುಬಂದವು.  ಏನೇ ಆದರೂ ಛಲವನ್ನು ಬಿಡಬಾರದು ಎಂದು ತಮ್ಮ ಸೈನಿಕರುಗಳಿಗೆ ಮಳೆಯಿಲ್ಲದ ಶುಭ್ರ ಮುಗಿಲಿನಡಿಯಲ್ಲಿ ಕವಾಯತು ಮಾಡಿಸಲು ಹಿರಿಯ ಇರುವೆಗಳು ತಾಕೀತು ಮಾಡುತ್ತಿರುವಂತೆನಿಸಿತು.

"ನೋಡೋದಕ್ಕೆ ಎಷ್ಟೆಲ್ಲಾ ಇದೆ!" ಎಂಬ ಉದ್ಗಾರ ಹೊರಬರಲು ಯಾವ ಸದ್ದಿನ ಸಹಕಾರವೂ ಬೇಕಾಗಿರಲ್ಲ.  ಇದೇ ಸೃಷ್ಟಿಯಲ್ಲಿ ಎಲ್ಲವೂ ಇವೆ...ನೋಡುವ ಕಣ್ಣಿರಲು...ಬ್ರಹ್ಮಾಂಡವೇ ಒಂದು ಚಿತ್ರಪಟವಾಗುತ್ತದೆ.  ಆದರೆ ಚಿತ್ರಕಾರನೊಬ್ಬನನ್ನು ಬಿಟ್ಟು ಮತ್ತೆಲ್ಲವನ್ನೂ ಇಲ್ಲಿ ಕಾಣಲು ಸಾಧ್ಯ? ಅಥವಾ ಚಿತ್ರಕಾರನೇ ಚಿತ್ರದ ಒಂದು ಅಂಗವಾಗಿಬಿಡುತ್ತಾನೆಯೋ? ಇಲ್ಲಿನ ವಿಸ್ಮಯದ ಲೋಕ ಮೇಲ್ನೋಟಕ್ಕೆ ಸರಳ, ಗೊಂದಲ ರಹಿತವಾಗಿ ಕಂಡುಬಂದರೂ ಒಳಗೊಳಗೆ ಎಂತೆಂಥ ಸತ್ಯಗಳನ್ನು ಬಚ್ಚಿಟ್ಟುಕೊಂಡ ಪ್ರಸಂಗಗಳಿವೆ.  ಚಿಂತೆ-ಚಿಂತನೆಗಳಲ್ಲಿ ತೊಡಗಿಕೊಂಡ ಮನಗಳಿಗೆ ಮೇಲ್ನೋಟಕ್ಕೆ ಬಿಡುಬೀಸಾಗಿ ಎಲ್ಲವೂ ತೆರೆದುಕೊಂಡಂತೆ ಕಂಡರೂ, ಸುತ್ತಲಿನ ಜೀವ-ನಿರ್ಜೀವ ವಸ್ತುಗಳಲ್ಲಿ ವಿಷಯಗಳು ಅಡಗಿಕೊಂಡಿವೆ.  ಅದಕ್ಕಾಗಿಯೇ ಇಂಥವುಗಳನ್ನು "ವಸ್ತು-ವಿಷಯ" ಎನ್ನೋದಿರಬೇಕು!  ವಸ್ತುನಿಷ್ಠತೆ, ವಾಸ್ತವವನ್ನು ಆಧರಿಸಿರುವಂತೆ ಅದೇ ನಿಜ ಹಾಗೂ ಅದೇ ನಿಜವಾದ ನೆರೆಹೊರೆಯಾಗಬಲ್ಲದು.

ಈ ನೆರೆಹೊರೆಯ ಮೋಡಿಯಲ್ಲಿ ಮಿಂದ ಮನಸ್ಸು ಒಂದು ಕ್ಷಣ ಯಾವುದು ನಿಜ, ಯಾವುದು ಅದ್ಭುತ, ಯಾವುದು ಗೋಪ್ಯ, ಯಾವುದು ನಿಗೂಢವಾದದ್ದು ಎನ್ನುವುದನ್ನೆಲ್ಲ ಲೆಕ್ಕ ಹಾಕತೊಡಗಿತು.  ಇವೆಲ್ಲಕ್ಕಿಂತ ಮೇಲಾಗಿ ಇಂಥ ನಿಗೂಢತೆಯನ್ನು ತನ್ನ ಮಡಿಲಿನಲ್ಲಿ ಹುದುಗಿಕೊಂಡು ಅದ್ಯಾವ ಗಣಿತದ ಸಮೀಕರಣಗಳನ್ನು ಹೆಣೆದು ಈ ವ್ಯವಸ್ಥೆಯನ್ನು ಅದ್ಯಾರು ಹದ್ದುಬಸ್ತಿನಲ್ಲಿ ಇಟ್ಟುಕೊಂಡಿದ್ದಾರೋ ಎಂದು ಸೋಜಿಗವಾಯಿತು!

1 comment:

sunaath said...

ನಿಸರ್ಗದಲ್ಲಿರುವ ಗಣಿತದ ಸಮೀಕರಣಗಳನ್ನು ಗಮನಿಸಲು, ನಿಮ್ಮಂತಹ ಕವಿಮನಸ್ಸೇ ಬೇಕಲ್ಲವೆ!