ನಮ್ಮೊಳಗಿನ ಶತ್ರು
ನಾಲ್ಕು ಟ್ರಿಲಿಯನ್ ಡಾಲರಿಗಿಂತಲೂ ಹೆಚ್ಚು ವಸ್ತುಗಳನ್ನು ಉತ್ಪಾದಿಸುತ್ತಿರುವ ಚೀನಾ, ಇಡೀ ಪ್ರಪಂಚದ ಎಲ್ಲ ದೇಶಗಳಿಗೂ ತನ್ನ ವಸ್ತುಗಳನ್ನು ರವಾನಿಸುವ ಸಾಮರ್ಥ್ಯವನ್ನು ಹೊಂದಿದ್ದು, ಎಲ್ಲ ರಾಷ್ಟ್ರಗಳಿಗಿಂತ ಅಗ್ರಗಣ್ಯ ಸ್ಥಾನದಲ್ಲಿದೆ. ಚೀನಾ ದೇಶವನ್ನು ವಿಶ್ವದ ಮ್ಯಾನುಫ್ಯಾಕ್ಚರಿಂಗ್ ದೇಶವೆಂದು ಸುಲಭವಾಗಿ ಕರೆಯಬಹುದು. USA ಮುಖ್ಯವಾಗಿ ಯುದ್ಧ ಸಾಮಗ್ರಿಗಳ ತಯಾರಿಕೆ ಮತ್ತು ತಂತ್ರಜ್ಞಾನದ ಕೇಂದ್ರವಾಗಿ 2.3 ಟ್ರಿಲಿಯನ್ ಡಾಲರ್ ಉತ್ಪನ್ನದಿಂದ ನಂತರದ ಸ್ಥಾನದಲ್ಲಿ ನಿಲ್ಲುತ್ತದೆ. ಒಂದು ಟ್ರಿಲಿಯನ್ ಉತ್ಪನ್ನದಿಂದ ಜಪಾನ್ ಮೂರನೇ ಸ್ಥಾನದಲ್ಲಿದ್ದರೆ ಕೇವಲ 412 ಬಿಲಿಯನ್ ಡಾಲರ್ ಉತ್ಪನ್ನದಿಂದ ಭಾರತ ದಕ್ಷಿಣ ಕೊರಿಯಾಕ್ಕಿಂತಲೂ ಕೆಳಗಿನ ಸ್ಥಾನದಲ್ಲಿ ತನ್ನನ್ನು ತಾನು ಕಂಡುಕೊಂಡಿದೆ.
ಭಾರತದಲ್ಲಿ FDI (Foreign Direct
Investment) ಅನ್ನೋ ಹೆಸರಿನಲ್ಲಿ ನಾವು ಹೊರ ದೇಶಗಳಿಗೆ ನಮ್ಮ ದೇಶದ
"ಆಗುಹೋಗು"ಗಳಲ್ಲಿ ಹೂಡಿಕೆ ಮಾಡಲು ಅನುಮೋದಿಸಿದೆವು. ಹೀಗೆ ಭಾರತಕ್ಕೆ ಹರಿದು ಬಂದ ಹಣವುಳ್ಳ ದೇಶಗಳ
ಮುಂಚೂಣಿಯಲ್ಲಿ ಅಮೇರಿಕ, ಚೀನಾ, ರಷ್ಯಾ, ಜಪಾನ್, ಸೌದಿ, ಮೊದಲಾದ ದೇಶಗಳಿವೆ. ಇದ್ದುದರಲ್ಲಿ, ಕನ್ಸೂಮರ್ ಎಲೆಕ್ಟ್ರಾನಿಕ್ಸ್‌ನಿಂದ
ಹಿಡಿದು-ರೈತಾಪಿ ಮಿಷೀನುಗಳವರೆಗೆ, ಆಟದ ಸಾಮಾನಿನಿಂದ ಹಿಡಿದು ಟೆಲಿಫೋನ್ ತಂತ್ರಜ್ಞಾನದ ವರೆಗೆ,
ಹೀಗೆ ಅನೇಕ ಕಡೆ ವಿದೇಶಿ ಬಂಡವಾಳ ಹೂಡಿಕೆಯಾಗಿದೆ.
ಅದರಲ್ಲಿ ಚೀನಾದ ಸಿಂಹ ಪಾಲು ಇದೆ.
ನಾವೆಲ್ಲ Hero ಸೈಕಲ್ಲುಗಳನ್ನು
ಓಡಿಸುತ್ತಿದ್ದಾಗ, ಜಪಾನ್ ನವರು ಬಂದು Hero ಕಂಪನಿಯ ಜೊತೆ ಸಂಬಂಧ ಕುದುರಿಸಿಕೊಂಡು Hero-Honda ಎಂಬ ಮೋಟಾರು ಬೈಕುಗಳನ್ನು ಹೊರ ತಂದರಲ್ಲ! ಹಾಗೆ ವಿದೇಶಿ ಹೂಡಿಕೆ
ನೀವು ಬೇಡವೆಂದರೂ ನಮ್ಮ ಪಂಚಭೂತಗಳಲ್ಲಿ ಈಗಾಗಲೇ ಸೇರಿ ಹೋಗಿದೆ.
ಹಾಗಾದರೆ, ಈ ವಿದೇಶಿ ಕಂಪನಿಗಳ ನಿಜವಾದ (ಮಾಲಿಕರು) ಓನರುಗಳು
ಯಾರು? ವಿದೇಶಿ ಹೂಡಿಕೆಯಿಂದ ಒಂದು ದೇಶದ
ಸ್ವಾಯುತ್ತತೆಗೆ ಭಂಗ ಬರುತ್ತದೆಯೇ? ವಿದೇಶಿ ಹೂಡಿಕೆ ಇಲ್ಲದೇ ಸ್ವಾವಲಂಬನೆಯನ್ನು ನಂಬಿಕೊಂಡೇ
ಒಂದು ದೇಶದ (ಮತ್ತು ಅದರ ನಿವಾಸಿಗಳು) ಬೆಳೆಯಲು ಸಾಧ್ಯವೇ? ಚೀನಾ ದೇಶದಲ್ಲಿ ತಯಾರು ಮಾಡಿದ
ಪ್ರಾಡಕ್ಟ್‌ಗಳನ್ನು ನಮ್ಮಲ್ಲಿ ನಿಜವಾಗಿಯೂ ಬ್ಯಾನ್ ಮಾಡಿ ಬದುಕಲು ಸಾಧ್ಯವೇ? ಒಂದು ವೇಳೆ, ನಮ್ಮ ನಡೆಗೆ ಪ್ರತಿಯಾಗಿ ವಿದೇಶಿಗಳು ತಮ್ಮ ಹಣದ
ಹೂಡಿಕೆಯಲ್ಲಿ ವ್ಯತ್ಯಯ ಉಂಟು ಮಾಡಿದರೆ, ಅಥವಾ ತಮ್ಮ "ಶೇರ್"ಗಳನ್ನು "ಸೆಲ್"
ಮಾಡಿದರೆ ಅದರಿಂದ ನಮ್ಮ ಎಕಾನಮಿ ಮೇಲೆ ಯಾವ ರೀತಿಯ ಪ್ರಭಾವವಾಗುತ್ತದೆ? ಹೆಚ್ಚುತ್ತಿರುವ ಗ್ಲೋಬಲೈಜೇಷನ್ ನಮ್ಮ "ವಸುಧೈವ
ಕುಟುಂಬಕಂ" ಅನ್ನುವ ತತ್ವವನ್ನು ಅನುಮೋದಿಸುತ್ತದೆಯೋ ಅಥವಾ ವಿರೋಧಿಸುತ್ತದೆಯೋ? ವಿಶ್ವವೇ ಒಂದು ಚಿಕ್ಕ ಹಳ್ಳಿಯಾಗಿ ಎಲ್ಲರಿಗೂ ಎಲ್ಲದರ access ಇರುವಾಗ ಒಂದು ದೇಶ ತನ್ನ ಬಾರ್ಡರ್ ವಿವಾದವನ್ನು
ಪ್ರತಿಪಾದಿಸುವುದಕ್ಕೋಸ್ಕರ "ದೇಶೀಯ ವಸ್ತುಗಳನ್ನು ಬಳಸಿ, ಚೈನೀಸ್ ವಸ್ತುಗಳನ್ನು
ತಿರಸ್ಕರಿಸಿ" ಎಂದು ಸ್ಲೋಗನ್ ಕೊಡಲು ಸಾಧ್ಯವೇ?
ಒಂದು ವೇಳೆ ಹಾಗೆ ಮಾಡಿದರೆ ಅದರ ಪರಿಣಾಮಗಳೇನಾಗಬಹುದು? ಇಂದು ಮಿತ್ರ
ದೇಶವಾಗಿರುವವರನ್ನು ಒಳಕರೆದು ಮಣೆ ಹಾಕಿ ಕೂರಿಸಿಕೊಂಡ ಮೇಲೆ, ಕಾಲಾನಂತರ ಅವರು ತಿರುಗಿ
ಬಿದ್ದರೆ, ಆಯಾ ಸಂಬಂಧಗಳನ್ನು ಮುರಿದುಕೊಳ್ಳುವುದು ಮತ್ತು ಕಳೆದುಕೊಂಡ ಸಂಪನ್ಮೂಲದ ಕೊಂಡಿಯನ್ನು
ಇನ್ನೊಂದು ದೇಶದ ಜೊತೆಗೆ ಬೆಳೆಸಿಕೊಳ್ಳುವುದು ಅಷ್ಟು ಸುಲಭದ ವಿಚಾರವೇ?
ನಾವು ಭಾವಜೀವಿಗಳು.
ಕ್ರೂರ ಪಾಕಿಸ್ತಾನದವರಿಗೆ ನಾವು ಭಾವನಾತ್ಮಕವಾಗಿ ಉತ್ತರಕೊಡುತ್ತೇವೆ. ಮುಳ್ಳನ್ನು ಮುಳ್ಳಿನಿಂದ ತೆಗಿ ಎನ್ನುವ ಗಾದೆಯನ್ನು
ಮರೆತು ನಮ್ಮ ಹೃದಯ ವಿಶಾಲತೆಯನ್ನು ಮೆರೆಯುತ್ತೇವೆ.
ಅದೇ ರೀತಿ ಉತ್ತರದ ಒಂದು ಆಯಕಟ್ಟಿನ ಜಾಗಕ್ಕೋಸ್ಕರ (strategic place) ಚೀನಾದವರು ಹೊಂಚು ಹಾಕಿ
ನಮ್ಮ ಸೈನಿಕರನ್ನು ಮುಳ್ಳು-ಮೊಳೆಕಟ್ಟಿದ ಕಬ್ಬಿಣದ ರಾಡುಗಳಿಂದ ಹೊಡೆದಾಕ್ಷಣ ನಮ್ಮ emotional response ಅನ್ನು
ಜಾಗರೂಕಗೊಳಿಸಿಕೊಂಡು ಅನೇಕ (ಸಾಮಾಜಿಕ) ಮಾಧ್ಯಮಗಳಲ್ಲಿ ದೊಡ್ಡ ಭಾಷಣವನ್ನು
ಬಿಗಿಯುತ್ತೇವೆ. ಆದರೆ, ಕಳೆದ 25 ವರ್ಷಗಳಿಂದ ಚೈನಾದವರು ನಿಧಾನವಾಗಿ ಅಮೇರಿಕ ಮತ್ತಿತರ ದೇಶಗಳಿಂದ
ಮ್ಯಾನುಫ್ಯಾಕ್ಚರಿಂಗ್ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಈಗ ಇಡೀ ವಿಶ್ವವೇ ತಲೆತಗ್ಗಿಸಿ
ನಿಲ್ಲುವಂತ ತಮ್ಮದೇ ಆದ ಒಂದು ವ್ಯವಸ್ಥೆಯನ್ನು ರೂಪಿಸಿಕೊಂಡರು. ಹಾಗೆಯೇ, ಉತ್ತರದ ಆಯಕಟ್ಟಿನ ಜಾಗದ ಹೋರಾಟದ ಹಿಂದೆಯೂ
ಅವರದ್ದೇ ಆಳವಾದ ಒಂದು ಚಿಂತನೆ ಇದೆ. ಈ
"ಸಿಲ್ಕ್ ರೋಡಿ"ನ ಮಾಲಿಕತ್ವ ಅವರಿಗೆ ಬೇಕಾಗಿದೆ. ಹಣದ ಆಮಿಶ ಒಡ್ಡಿ ಪಾಕಿಸ್ತಾನಕ್ಕೆ ನೆರವಾಗಿ ಭಾರತದ ಮೇಲೆ ಛೂ
ಬಿಟ್ಟು, ಭಾರತ ಭೂಮಿಯನ್ನು ಅಸ್ಥಿರವಾಗಿಟ್ಟರೆ ಅವರ ಬೇಳೆಕಾಳುಗಳು ಸಲೀಸಾಗಿ ಬೇಯುತ್ತವೆ. ದಿನೇದಿನೇ ಹೆಚ್ಚುವ ಜನಸಂಖ್ಯೆಯ ಹೊಟ್ಟೆ ತುಂಬುವುದು
ಭಾರತದ ಸಂಕಷ್ಟವಾಗಿರುವಾಗ ಭಾರತದಲ್ಲಿ ತಯಾರಾದ ಯಾವುದೇ ಉತ್ಪನ್ನಗಳ ಮುಖದ ಮೇಲೆ ಸೆಡ್ಡು
ಹೊಡೆಯುವ ಪ್ರಾಡಕ್ಟ್ ಅನ್ನು ಕಡಿಮೆ ಬೆಲೆಗೆ ತಯಾರಿಸಿ, ಬಿಡುಗಡೆ ಮಾಡಿ, ಮಾರುವ ದಕ್ಷತೆ
ಇದೆ. ಈಗಾಗಲೇ ನಮ್ಮ ಜನಜೀವನದಲ್ಲಿ ಸೇರಿಕೊಂಡ
ಚೀನಾದ ಉತ್ಪನ್ನಗಳನ್ನು ಅಷ್ಟು ಸುಲಭವಾಗಿ ತಳ್ಳಿ ಹಾಕಲಾಗದು. ಒಳ್ಳೆಯದೋ ಕೆಟ್ಟದ್ದೋ ಒಂದು ವಸ್ತುವನ್ನು displace ಮಾಡುವುದಾದರೆ, ಅದನ್ನು ಯಾವುದರಿಂದ ಮಾಡುತ್ತೇವೆ ಅನ್ನುವುದು
ಮುಖ್ಯವಾಗುತ್ತದೆ. ಹತ್ತು ರೂಪಾಯಿಗೆ ದೊರೆಯುವ
ಚೀನಾದ ವಸ್ತುವನ್ನು ನೂರು ರೂಪಾಯಿಗೆ ಸಿಗುವ ಭಾರತದಲ್ಲಿ ತಯಾರು ಮಾಡಿದ ವಸ್ತುವಿನಿಂದ displace ಮಾಡಲಾಗದು... ಯೋಚನೆ ಮಾಡಿ!








