Sunday, August 30, 2009

ನಾವೂ ನಮ್ಮ ವೆಕೇಷನ್ನೂ...

ನಮ್ಮ ಆಫೀಸಿನಲ್ಲಿ ಸಮ್ಮರ್ ಬಂತೆಂದರೆ ವೆಕೇಷನ್ನುಗಳ ಅಧಿಕೃತ ಆರಂಭವೆಂದೇ ಅರ್ಥ. ಮಾರ್ಚ್‌ಗೆ ಆರಂಭವಾಗುವ ಸ್ಪ್ರಿಂಗ್ ತನ್ನ ಆಗಮನದ ಜೊತೆಗೆ ಒಂದಿಷ್ಟು ಚಿಗುರುಗಳಲ್ಲಿ ಹುರುಪನ್ನು ಮೂಡಿಸುತ್ತದೆಯೇ ವಿನಾ ವಾತಾವರಣದ ಉಷ್ಣತೆ ಎಪ್ಪತ್ತು ಡಿಗ್ರಿ (ಫ್ಯಾರನ್‌ಹೈಟ್) ಮೇಲೆ ಏರಿ ಸುಯ್ ಎಂದು ತೀಡುವ ಮೃದುವಾದ ಗಾಳಿಯಿಂದ ರೋಮಾಂಚನವಾಗುವುದರಿಂದ ಹಿಡಿದು ಸಾಕಪ್ಪಾ ಸಾಕು ಈ ಬಿಸಿಲು ಎನ್ನುವಷ್ಟರಲ್ಲಿ ಸಮ್ಮರ್ ಹೋಗೇ ಬಿಟ್ಟಿರುತ್ತದೆ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಶಾಲೆಗಳಿಗೆ ರಜೆ, ಪೋಷಕರು ತಮ್ಮ ಮಕ್ಕಳನ್ನು ವರ್ಷಾವಧಿ ವೆಕೇಷನ್ನುಗಳಿಗೆ ಕೊಂಡೊಯ್ಯುವುದು ಕುಟುಂಬ ರೂಢಿ.

ನಾನು ನ್ಯೂ ಜೆರ್ಸಿಯಲ್ಲಿ ನೋಡಿರೋ ಹಾಗೆ ಅನಫಿಷಿಯಲ್ ಸಮ್ಮರ್ ಎಂದರೆ ಮೇ ತಿಂಗಳ ಕೊನೆಯಲ್ಲಿ ಬರುವ ಮೆಮೋರಿಯಲ್ ಡೇ ವೀಕ್ ಎಂಡ್ ನಿಂದ ಆರಂಭವಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಬರುವ ಲೇಬರ್ ಡೇ ವರೆಗೆ. ಜೂನ್-ಜುಲೈ-ಆಗಷ್ಟ್ ಇವೇ ಮೂರು ತಿಂಗಳು, ಅದೇನು ಕಡಿದು ಹಾಕುತ್ತೀರೋ ಬಿಡುತ್ತೀರೋ, ಇವೇ ವರ್ಷದ ಉಳಿದ ಒಂಭತ್ತು ತಿಂಗಳನ್ನು ಸಹಿಸಿಕೊಳ್ಳುವಂತೆ, ಪ್ರತಿ ಸಮ್ಮರ್‌ನಲ್ಲಿ ಹೊಸದೇನನ್ನೋ ಸೃಷ್ಟಿಸುವಂತೆ ನಮ್ಮನ್ನೆಲ್ಲ ಕಟ್ಟಿ ಹಾಕಿರೋದು.

ಸಾಗರದ ಎಲ್.ಬಿ. ಕಾಲೇಜಿನಲ್ಲಿ ಓದಿಕೊಂಡಿರುವಾಗ ಇದ್ದಿಲು ಒಲೆಗೆ ಬೆಂಕಿ ತಗಲಿಸಿ ಹೊಟ್ಟೆ ತುಂಬಿಕೊಂಡ ಕರ್ಮ ಇನ್ನೂ ಮುಗಿದಿಲ್ಲವೇನೋ ಅನ್ನೋ ಹಾಗೆ ನಮ್ಮನೆ ಡೆಕ್ ನಲ್ಲಿ ಇರುವ ಕಲ್ಲಿದ್ದಲು ಗ್ರಿಲ್‌ ಏಪ್ರಿಲ್ ಅಂಚಿನಲ್ಲಿ ಬೇಸ್‌ಮೆಂಟ್ ನಿಂದ ಡೆಕ್‌ ಮೇಲೆ ಬಂದು ಇದ್ದಿಲಿಗೂ ನನಗೂ ಇರುವ ಋಣವನ್ನು ನೆನಪಿಸಿಕೊಡುತ್ತದೆ. ’ವೆಜಿಟೇರಿಯುನ್ನ್ ಜನ ನೀವೇನು ಗ್ರಿಲ್ ಮಾಡ್ತೀರಿ?’ ಎನ್ನೋರು ವಿಸ್ಮಿತರಾಗುವ ಹಾಗೆ ನನ್ನ ವೆಜಿಟೇರಿಯನ್ನ್ ಗ್ರಿಲ್ಲಿಂಗ್ ಪುರಾಣವನ್ನೆಲ್ಲ ಹೊರಗೆ ತೆಗೆದಿಡುತ್ತೇನೆ. ಈ ಕಲ್ಲಿದ್ದಲು ಶಾಖ ಎಷ್ಟು ಜೋರು ಅಂದ್ರೆ ಸರಿಯಾಗಿ ಮ್ಯಾನೇಜ್ ಮಾಡಿದ್ರೆ ಒಂದು ದಿನದ ಊಟ-ವ್ಯವಸ್ಥೆಯನ್ನು ಈ ಗ್ರಿಲ್ ಒಲೆಯಲ್ಲೇ ಮಾಡಿಬಿಡಬಹುದು. ಅಮೇರಿಕನ್ ಊಟದ ಪದ್ಧತಿಯ ಹಾಗೆ ನಾವು ಒಂದಿಷ್ಟು ವೆಜಿಟೇರಿಯನ್ ಪ್ಯಾಟ್ಟಿಗಳು, ಉಪ್ಪು-ಹುಳಿ-ಖಾರ ಸವರಿದ ಗೊಂಜೋಳ, ಸ್ಕಿವರ್‌ಗೆ ಪೋಣಿಸಿದ ಥರಥರ ತರಕಾರಿಗಳು, ಚಿಪ್ಸ್ ಮುಳುಗಿಸಿ ತಿನ್ನಲಿಕ್ಕೆ ಮಾವಿನ ಹಣ್ಣಿನ ಚಟ್ನಿ (ಸಾಲ್ಸಾ), ಸವತೆಕಾಯಿ ತುಂಡುಗಳು, ಮಾವಿನ ಹಣ್ಣು, ಮನೆಯಲ್ಲೇ ಮಾಡಿದ ಲಿಂಬೆ ಪಾನಕ (ಲೆಮನೇಡ್), ಹಲವು ಥರದ ಬ್ರೆಡ್ಡು, ಕೆಚಪ್, ಸುಟ್ಟ ಈರುಳ್ಳಿ, ರೆಡ್ ವೈನ್ ಮೊದಲಾದವುಗಳನ್ನು ನಮ್ಮ ಬ್ಯಾಕ್ ಯಾರ್ಡ್‌ನಲ್ಲಿ ಹರಡಿಕೊಂಡು ವರ್ಷದ ಒಂದಿಷ್ಟು ದಿನಗಳು ಮನೆಯಲ್ಲೇ "ಪಿಕ್‌ನಿಕ್" ಮಾಡೋದು ರೂಢಿ. ಇವುಗಳ ಜೊತೆಗೆ ಮೆಣಸಿನ ಕಾಯಿ ಬೋಂಡಾ, ಆಲೂಗಡ್ಡೆ ಬಜ್ಜಿ ಹಾಗೂ ಪನ್ಕೋಡಾ ಸೇರಿಕೊಂಡು ನಮ್ಮ ಸಮ್ಮರ್ ಪಾರ್ಟಿಗಳನ್ನು ಯಶಸ್ವಿಯಾಗಿ ಮಾಡಿಬಿಡುತ್ತವೆ. ಸ್ವಿಚ್ ಒತ್ತಿ ಗ್ಯಾಸ್ ಗ್ರಿಲ್ ಮೇಲೆ ಒಂದೇ ಕ್ಷಣದಲ್ಲಿ ಬರ್ಗರ್‌ಗಳನ್ನು ಮಾಡುವುದಕ್ಕಿಂತ ಕಲ್ಲಿದ್ದಲ ಗ್ರಿಲ್ ಹೊತ್ತಿಸಿ ಅದಕ್ಕೆ ಗಾಳಿ ಬೀಸಿ ನಿಧಾನವಾಗಿ ಹೊತ್ತಿ ಉರಿಯುವ ಬೆಂಕಿಯಲ್ಲಿ ದಿನದ ಒಂದೆರಡು ಘಂಟೆ ಹೊರಗಿರುವುದು ಸುಖ ತರುತ್ತದೆ. ನಮ್ಮ ಅತಿಥಿಗಳ ಜೊತೆಗೆ ಹೆಚ್ಚು ಸಮಯವನ್ನು ಕಳೆಯುವ ಅವಕಾಶ ಹುಟ್ಟುತ್ತದೆ.

ಆದರೆ ಇವು ಯಾವುದೂ ನಮ್ಮ ವೇಕೇಷನ್ನ್ ಅಲ್ಲವೇ ಅಲ್ಲ. ಬಾರ್ ಬೇ ಕ್ಯೂ ಏನಿದ್ದರೂ ವಾರಾಂತ್ಯದಲ್ಲಿ ನಾವು ಮನೆಯಿಂದ ಹೊರಗಿರುವ ಪ್ರಯತ್ನವಷ್ಟೇ. ಇನ್ನು ಎಲ್ಲರಂತೆ ಪಡೆದುಕೊಳ್ಳುವ ನಮ್ಮ ವೆಕೇಶನ್ನ್ ದಿನಗಳು ಎಲ್ಲಿಗೆ ಹೋಗುತ್ತವೆ, ಹೋಗಿಬಿಟ್ಟವು. ವರ್ಷಕ್ಕೆ ಒಂದೋ ಎರಡೋ ಬಾರಿ ಸಮುದ್ರ ಇನ್ನೂ ಇದೆಯೋ ಇಲ್ಲವೋ ಎಂದು ನೋಡಿಕೊಂಡು ಬರುವ ಹಾಗೆ ಬೀಚ್‌ಗೆ ಹೋಗುವುದು ವೇಕೇಷನ್ನ್ ಅಲ್ಲ. ಮುಂದಿನ ವರ್ಷ ನೋಡೋಣ ಎನ್ನುತ್ತಲೇ ಮುಂದೆ ತಳ್ಳುತ್ತ ಬಂದ ಡಿಸ್ನಿ ವರ್ಲ್ಡ್ ಮತ್ತು ಇತರ ಸ್ಥಳೀಯ ಆಕರ್ಷಣೆಗಳು ಇನ್ನೂ ಪುಸ್ತಕದ ಗಂಟಾಗೇ ಉಳಿದಿವೆ. ನಮ್ಮ ಮನೆಯಿಂದ ಕೇವಲ ಐವತ್ತೇ ಮೈಲು ದೂರದ ನ್ಯೂ ಯಾರ್ಕ್ ನಗರವನ್ನು ನೋಡೋದು ಯಾವಾಗಲೋ ಒಂದು ಬಾರಿ, ’ಯಾರು ಹೋಗುತ್ತಾರೆ ಅಲ್ಲಿಗೆ, ಹಳ್ಳ-ಕೊಳ್ಳವನ್ನು ದಾಟಿ’ ಎನ್ನುವ ಉದಾಸೀನ ಗೆದ್ದು ಬಿಡುತ್ತದೆ. ಅಮೇರಿಕದ ನಮ್ಮ ಬದುಕಿನಲ್ಲಿ ಆಫೀಸಿನ ಕೆಲಸ, ಕಾರ್ಯ ಹಾಗೂ ಅದರ ಸಂಬಂಧಿ ಯೋಚನೆಗಳನ್ನು ತೆಗೆದು ಹಾಕಿ ಬಿಟ್ಟರೆ ನಮ್ಮದು ಎಂದು ಉಳಿಯುವ ಭಾಗ ಬಹಳ ಕಡಿಮೆಯೇ ಎನ್ನಿಸಿ ಒಮ್ಮೆ ಭಯವಾಗುತ್ತದೆ.

ಹಿಂದೆ ಮದ್ರಾಸಿನಲ್ಲಿ ಕೆಲಸ ಮಾಡುವಾಗ ವಾರಕ್ಕೆರಡು ಮತ್ತು ತಿಂಗಳಿಗೆರಡು ಸಿಗುವ ರಜೆಗಳನ್ನು ಒಟ್ಟು ಪೋಣಿಸಿಕೊಂಡು ವಾರಗಟ್ಟಲೆ ಕರ್ನಾಟಕದಲ್ಲಿ ತಿರುಗಾಡಿದರೂ ಇನ್ನೂ ಮುಗಿಯದ ಕೆಲಸಗಳು ಹವ್ಯಾಸಗಳು ಅದೆಷ್ಟೋ ಇದ್ದವು. ಇನ್ನೂ ತಂತ್ರಜ್ಞಾನ ಇಷ್ಟು ಮುಂದುವರಿಯದೆ ನಮ್ಮ ನಮ್ಮ ನಡುವೆ ಅಗಾಧ ದೂರಗಳಿದ್ದರೂ ಭೇಟಿಯಾಗಿ, ಮಾತನಾಡಿ, ಮುಟ್ಟಿ, ಹರಟಿ, ಹಾಡಿ, ಜಗಳವಾಡಿ ಮತ್ತೆ ಒಂದು ಗೂಡಿ, ಕುಣಿದು ಕುಪ್ಪಳಿಸುವ ಅನೇಕ ಚಟುವಟಿಕೆಗಳ ತುಡಿತವಿತ್ತು. ಬೇಕಾದಷ್ಟು ನೆಪಗಳಿದ್ದವು, ನೆನಪುಗಳಿದ್ದವು. ಸಾಕಷ್ಟು ಸಂಖ್ಯೆಯ ಗುರುತು-ಪರಿಚಯದವರಿದ್ದರು, ಸಂಬಂಧಿಗಳಿದ್ದರು. ತಿರುಗಲು ದೇವಸ್ಥಾನಗಳಿದ್ದವು, ಮರುಗುವ ಮನಸ್ಸಿತ್ತು. ಎಷ್ಟಿದ್ದರೂ ಸಾಲದು ಇನ್ನೂ ಬೇಕು ಎನ್ನುವ ತುಡಿತವಿತ್ತು. ಸಾಹಿತ್ಯವಿತ್ತು, ಸಂಗೀತವಿತ್ತು, ಸಿನಿಮಾಗಳಿದ್ದವು, ಪುಸ್ತಕಗಳಿದ್ದವು, ನಿಯತಕಾಲಿಕಗಳಿದ್ದವು. ಒಂದೂರಿನಿಂದ ಮತ್ತೊಂದು ಊರಿಗೆ ಹೋಗುವ ಮಾರ್ಗದಲ್ಲಿ ಓದಿ ಮುಗಿಸಿದ ಅದೆಷ್ಟೋ ಲಂಕೇಶ್, ಸುಧಾ, ತರಂಗ, ಮಯೂರ, ಉತ್ಥಾನ, ಮಲ್ಲಿಗೆ, ಪ್ರಜಾಮತದ ವಾಹಿನಿಗಳಿದ್ದವು. ಊರಿಗೊಂದಿರುವ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಬೇಂದ್ರೆ, ಭೈರಪ್ಪ, ತರಾಸು, ಕಾರಂತ, ಮಾಸ್ತಿ, ಕುವೆಂಪು ಮೊದಲಾದ ಸ್ನೇಹಿತರ ಅನುಭವಗಳು ಅನಂತವಾಗಿ ಹಾಗೂ ಪುಕ್ಕಟೆಯಾಗಿ ಸಿಗುತ್ತಿದ್ದವು. ಇಂತಹ ಅಪರಿಮಿತ ಅನುಭವಗಳನ್ನು ಪಠಿಸಿ-ಪ್ರವಚಿಸಿದ ಘಟಾನುಗಟಿಗಳ ಸಾರ ಸುಲಭವಾಗಿ ಸಿಗುತ್ತಿತ್ತು. ಹಲವಾರು ತತ್ವಗಳು ಸಿಗುತ್ತಿದ್ದವು - ಒಂದು ರೀತಿ ಬಯಲಿನಲ್ಲಿ ಮೇಯುವ ದನಕ್ಕೆ ಸಿಗುವ ಅವಕಾಶದ ಹಾಗೆ, ಅಂತಹ ಅಗಾಧವಾದ ಅನೇಕಾನೇಕ ಬಯಲುಗಳು ಮೇಯಲಿದ್ದವು.

ಇವೆಲ್ಲದರ ಬಗ್ಗೆ ಈಗ ಬರೀತಾ ಹೋದರೆ ಅದು ಸವಿ ನೆನಪಾಗುತ್ತದೆ, ಅದರ ಮರುಘಳಿಗೆ ಅದು ನಾಸ್ಟಾಲ್ಜಿಯಾವಾಗಿ ಕಾಣುತ್ತದೆ. ಆದರೆ ಈವರೆಗೆ ಒಂದು ವಿಷಯವಂತೂ ಸತ್ಯ - ನಾವು, ನಮ್ಮ ವೇಕೇಷನ್ನುಗಳು, ನಮ್ಮ ದುಡಿಮೆ-ಇಡುಗಂಟು ಇವೆಲ್ಲದರ ಸಾಕ್ಷಾತ್ಕಾರ ಈ ಮೇಲಿನ ನಾಸ್ಟಾಲ್ಜಿಯಾದೊಂದಿಗೆ ಮಾತ್ರವೇ. ಅದನ್ನು ಹೊರತು ಪಡಿಸಿ, ಅಮೇರಿಕದಲ್ಲಿ ನಮ್ಮ ವೇಕೇಷನ್ನುಗಳಿಗೆ ಪೂರ್ಣ ಅರ್ಥ ಬಂದಿದ್ದಿಲ್ಲ, ನಮ್ಮ ಅರ್ಥ ಪರಿಸ್ಥಿತಿ ಪರಿಪೂರ್ಣವಾದದ್ದಿಲ್ಲ. ನಿಜವಾಗಿಯೂ ನಮ್ಮತನವನ್ನು ಕಲಕಿ ನೋಡುವ ವೆಕೇಷನ್ನುಗಳು ಕೆಲವು ಪುಣ್ಯಾತ್ಮರಿಗೆ ವರ್ಷಕ್ಕೊಮ್ಮೆ ಬರುತ್ತವೆ, ಇನ್ನು ಕೆಲವು ನಮ್ಮಂಥವರಿಗೆ ಮೂರು-ನಾಲ್ಕು ವರ್ಷಕ್ಕೊಮ್ಮೆ ಕೂಡಿ ಬರುತ್ತದೆ. ಬರೀ ವಿದೇಶ ಪ್ರಯಾಣದ ಯೋಗವೊಂದಿದ್ದರೆ ಸಾಲದು, ಮತ್ತೆ ಮರಳಿ ಸ್ವದೇಶವನ್ನು ಆಗಾಗ್ಗೆ ನೋಡುವ ಯೋಗವೂ ಇರಬೇಕು ಎನ್ನುವ ಆಲೋಚನೆ ಬಂದಿದ್ದು ಇತ್ತೀಚೆಗೆ ಮಾತ್ರ.

ಹಿಂದೆ ಎರಡು ಭುಜಗಳಿದ್ದ ಮನಕ್ಕೆ ಇಂದು ಎಂಟು ರೆಕ್ಕೆಗಳಿವೆ, ಎಲ್ಲಿಗಾದರೂ ಹೋಗಬೇಕು ಬರಬೇಕು ಎಂದರೆ ಅದರ ಮುಂದಿನ ತಯಾರಿ ಮತ್ತು ಅದರ ನಂತರದ ಚಿಂತೆಗಳು ಅನಿವಾರ್ಯವಾಗುತ್ತವೆ. ಹಣ ಹೆದರಿಕೆ ಎರಡೂ ಒಂದೇ ನಾಣ್ಯದ ಮುಖಗಳ ಹಾಗೆ ಒಂದನ್ನೊಂದು ಅನುಸರಿಸಿಕೊಂಡು ಬಂದಿವೆ - ಹಿಂದೆ ಹೆಗ್ಗೋಡಿನಿಂದ ಸಾಗರಕ್ಕೆ ನಿನಾಸಂ ನಾಟಕ ಮುಗಿಸಿ ನಡೆದುಕೊಂಡು ಬಂದಾಗ ಕತ್ತಲಿನ ದಾರಿಯಲ್ಲಿ ಹಾವಿದ್ದರೆ ಎನ್ನುವ ಹೆದರಿಕೆ ಇರಲಿಲ್ಲ, ಇಂದು ಕಾರಿನಲ್ಲಿ ಬೆಚ್ಚಗೆ ಕುಳಿತು ರಾತ್ರಿ ಡ್ರೈವ್ ಮಾಡುತ್ತಿದ್ದರೆ ರಸ್ತೆಯ ನಡುವೆ ಜಿಂಕೆಗಳು ಬಂದರೆ ಎಂದು ಕಂಪನ ಶುರುವಾಗುತ್ತದೆ.

ವರ್ಷವಿಡೀ ದುಡಿದು ಇರುವ ಮೂರು ನಾಲ್ಕು ವಾರಗಳನ್ನು ಒಟ್ಟುಗೂಡಿಸಿ ಕೆಲವು ವರ್ಷಗಳಿಗೊಮ್ಮೆ ಮಾಡುವ ಸ್ವದೇಶ ಪ್ರಯಾಣ ತರುವ ಸುಖಕ್ಕಿಂತ ಹೆಚ್ಚು ಕೆಲಸವಾಗುತ್ತದೆ, ವೆಕೇಷನ್ನಿನ್ನಲ್ಲಿ ಎಲ್ಲರೂ ಎಣಿಸಿ ಖರ್ಚು ಮಾಡುವುದಕ್ಕಿಂತ ಹೆಚ್ಚೇ ಕಾಸು ಕಳಚಿ ಹೋಗುತ್ತದೆ. ನಮ್ಮನ್ನು ಭೇಟಿಯಾಗುವವರ ಅನೇಕಾನೇಕ ಮುಖಗಳು ಅವುಗಳ ಹಿಂದಿನ ಕಥನವನ್ನು ಮನಸ್ಸಿನಲ್ಲಿ ತೆರೆದುಕೊಳ್ಳುತ್ತವೆ. ನಮ್ಮ ನೆನಪಿನಲ್ಲಿರುವ ಹಾಗಿನ ಎಷ್ಟೋ ವ್ಯಕ್ತಿಗಳು ಇನ್ನೂ ಹರೆಯದವರಾಗಿರದೆ ಮುದುಕುರಾಗಿರುವುದನ್ನು ಅಪ್‌ಡೇಟ್ ಮಾಡಿಕೊಳ್ಳಲು ವಿದುಳು ಹೆಣಗುತ್ತದೆ. ಇತ್ತೀಚೆಗೆ ಕೇಳಿರದ ಅನೇಕ ಪದ-ವಾಕ್ಯಗಳ ಬಳಕೆ ಬೆಚ್ಚಿ ಬೀಳಿಸುತ್ತದೆ. ಅಲ್ಲಲ್ಲಿ ಕೇಳಿಬರುವ ಸಿನಿಮಾ ಹಾಡುಗಳು ಹೊಸದಾಗೇ ಉಳಿಯುತ್ತವೆ. ಹುಟ್ಟಿದ ಹೊಸಬರು, ಸತ್ತ ಹಳೆಯವರನ್ನು ಕುಟುಂಬಗಳ ಹಿನ್ನೆಲೆಯಲ್ಲಿ ತಾಳೆ ಹಾಕಿಕೊಳ್ಳುವುದು ಮುಗಿಯದ ಲೆಕ್ಕವಾಗುತ್ತದೆ.

’ನಾಲ್ಕು ವಾರ ವೆಕೆಷೆನ್ನಾ...’ ಎಂದು ಕೇಳಿ ಬರುವ ಉದ್ಗಾರಗಳಿಗೆ ಉತ್ತರವಾಗಿ ’ನಮ್ಮ ವೆಕೇಷನ್ನುಗಳ ಹಣೆಬರಹ ಇವರಿಗೇನು ಗೊತ್ತು!’ ಎನ್ನುವ ಹೇಳಿಕೆ ಮನದಲ್ಲೇ ಉಳಿದುಬಿಡುತದೆ. ವೆಕೇಷನ್ನಿಗೆ ಹೋಗುವುದಕ್ಕಿಂತ ಮೊದಲು ಹಾಗೂ ವೆಕೇಷನ್ನಿಂದ ಬಂದ ನಂತರ ಕೆಲಸಗಳು ಮಾತ್ರ ಅತಿಯಾಗಿ ಹೋಗುತ್ತವೆ. ಪ್ರತಿವರ್ಷ ಹೀಗೆ ಹೋಗಬೇಕು ಎನ್ನುವ ಆಸೆ, ಆಸೆಯಾಗಿಯೇ ಉಳಿದು ಕಣ್ಣು ಮುಚ್ಚಿ ತೆರೆಯುವುದರೊಳಗೆ ಮೂರು-ನಾಲ್ಕು ವರ್ಷಗಳಿಗೊಮ್ಮೆಯಾಗಿ ಬಿಡುತ್ತದೆ.

Sunday, August 16, 2009

ಕೇವಲ 62 ವರ್ಷದ ಸ್ವಾತ್ಯಂತ್ರ್ಯ

ನಿನ್ನೆ ಸ್ವಾತಂತ್ರ್ಯೋತ್ಸವಗಳನ್ನು ಟಿವಿಯಲ್ಲಿ ನೋಡ್ತಾ ಇದ್ದಾಗ, ವರದಿಗಳನ್ನು ಓದ್ತಾ ಇದ್ದಾಗ ನಮ್ಮದು ಕೇವಲ 62 ವರ್ಷದ ಸ್ವಾತ್ಯಂತ್ರ್ಯ ಅಷ್ಟೇ ಅಂತ ಅನ್ಸಿದ್ದು ವಿಶೇಷ. ಈ ಹಿಂದೆ ನನಗೆ ನೆನಪಿರೋ ಹಾಗೆ ನಮ್ಮ ಹೈ ಸ್ಕೂಲು ದಿನಗಳಿಂದ ಹಿಡಿದು ನಲವತ್ತು, ಐವತ್ತು, ಅರವತ್ತು ವರ್ಷಗಳ ಆಚರಣೆಗಳನ್ನು ಮಾಡಿ-ನೋಡಿದ್ದರೂ ಈಗ ಅನ್ನಿಸ್ತಿರೋ ಹಾಗೆ ನಮ್ಮ ದೇಶ ಬ್ರಿಟೀಷರಿಂದ ಸ್ವಾತ್ರಂತ್ರ್ಯ ಪಡೆದದ್ದು ರಿಲೇಟಿ‌ವ್ ಆಗಿ ಇತ್ತೀಚೆಗೆ ಅನ್ನೋ ಭಾವನೆ ಬಲವಾಗ್ತಿದೆ.

ಈ ಆರು ದಶಕಗಳ ಸ್ವಾತಂತ್ರ್ಯದಲ್ಲಿ ನನಗೆ ಗೊತ್ತಿರೋ ಹಾಗೆ ಎರಡು-ಮೂರು ದಶಕಗಳನ್ನು ಚೆನ್ನಾಗಿ ಗಮನಿಸಿದರೆ, ಅದರಲ್ಲೂ ನಮ್ಮ ವಯಸ್ಸಿನವರಿಗೆ ಅನ್ವಯವಾಗುವ ಎಂಭತ್ತು ಹಾಗೂ ತೊಂಭತ್ತರ ದಶಕಗಳಲ್ಲಿ ಭಾರತ ಬಹಳಷ್ಟು ಬೆಳೆದಿದೆ. ತದನಂತರ ಎರಡು ಸಾವಿರದ ದಶಕದಲ್ಲಂತೂ ಎಲ್ಲಾ ಬೆಳವಣಿಗೆಗಳು ಮುಗಿಲು ಮುಟ್ಟಿದವು ಎಂದೇ ಹೇಳಬೇಕು. ನಾವು ಪಾಕಿಸ್ತಾನದವರ ಹಾಗೆ ಸ್ವಾತಂತ್ರ್ಯ ಸಿಕ್ಕ ಮೊದಲನೇ ದಿನದಿಂದ ವಿದೇಶಿಯರಿಗೆ ನಮ್ಮ ಮಾರ್ಕೆಟ್ಟುಗಳನ್ನು ತೆರೆದುಕೊಳ್ಳಲಿಲ್ಲ, ಎಂಭತ್ತು ಹಾಗು ತೊಂಭತ್ತರ ದಶಕದ ಅಂತ್ಯದವರೆಗೂ ಎಲ್ಲವೂ ಸರ್ಕಾರೀ ಸ್ವಾಧೀನದಲ್ಲೇ ಇತ್ತು. ಇಂದಿಗೂ ಸಹ ಬೇಕಾದಷ್ಟು ರಂಗಗಳಲ್ಲಿ ಸರ್ಕಾರಿ ಹಿಡಿತವಿದೆ. ನಮ್ಮ ದೇಶಕ್ಕೆ ವಿದೇಶಿ ಸರಕುಗಳು ನಿಧಾನವಾಗಿ ಬಂದವು. ರಕ್ಷಣಾ ತಂತ್ರಜ್ಞಾನವೇನೋ ಮೊದಲೇ ತೆರೆದುಕೊಂಡಿತು, ಆದರೆ ಮಿಕ್ಕವು ತಡವಾಗಿದ್ದಂತೂ ನಿಜ.

ಈ ಜಾಗತೀಕರಣ ಅನ್ನೋ ನಾಣ್ಯಕ್ಕೆ ಎರಡು ಮುಖಗಳಿದ್ದರೆ, ಅದರಲ್ಲಿ ಮೊದಲನೆಯದು ಒಂದು ದೇಶದ ಒಳಗಿನಿಂದ ಹೊರಹೋಗುವುದನ್ನು ಪ್ರತಿಬಿಂಬಿಸಿದರೆ ಮತ್ತೊಂದು ಹೊರದೇಶಗಳಿಂದ ಒಳಬರುವುದನ್ನು ಪ್ರತಿನಿಧಿಸುತ್ತದೆ. ಈ ಒಳ-ಹೊರ ಹೋಗುವುದನ್ನು ಯಾವುದೇ ವಿಚಾರಕ್ಕೂ ಅಳವಡಿಸಬಹುದು - ಆಮದು/ರಫ್ತು, ಸಂಸ್ಕೃತಿ, ಭಾಷೆ, ತಂತ್ರಜ್ಞಾನ, ವಿನ್ಯಾಸ, ವಿದ್ಯೆ, ಆಚಾರ-ವಿಚಾರ, ಇತ್ಯಾದಿ. ಸರಿ, ನಮಗೇನೋ ಇಂಗ್ಲೀಷರಿಂದ ಸ್ವಾತ್ರಂತ್ರ್ಯ ಸಿಕ್ಕಿತು, ಆದರೆ ಇವತ್ತಿನವರೆಗೂ ಉಳಿದ ದೇಶಗಳಲ್ಲಿ ಇಂಗ್ಲೀಷರ ಸಂತಂತಿ ಅಳಿದುಳಿದ ಹಾಗೆ ಭಾರತದಲ್ಲಿ ಏಕೆ ಮುಂದುವರೆಯಲಿಲ್ಲ ಎನ್ನುವ ಪ್ರಶ್ನೆ ಬರುತ್ತದೆ. ಯಾವಾಗಲೂ ಛಳಿಯೆಂದು ಒದ್ದಾಡುವ ಯುರೋಪಿಯನ್ನರಿಗೆ ಭಾರತದಂತಹ ದೇಶದಲ್ಲಿ ಬೇಕಾದಷ್ಟು ಹವಾಮಾನದ ವೇರಿಯೇಷನ್ನುಗಳಿರುವಂಥ ಪ್ರದೇಶಗಳಿರುವಾಗ ನಮ್ಮಲ್ಲಿ ಎರಡನೇ ಮೂರನೇ ಜನರೇಷನ್ನ್ ಭಾರತೇತರ ಮೂಲದ ಜನರು ಏಕೆ ನೆಲಸದಿದ್ದಿರಬಹುದು? ಅದೇ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದ ಉಳಿದ ದೇಶಗಳಲ್ಲಿ ಹೆಚ್ಚು ಹೆಚ್ಚು ಯುರೋಪ್ ಪ್ರಭಾವವನ್ನು ಇವತ್ತಿನವರೆಗೂ ನಾವು ಕಾಣಬಹುದು. ಏಕೆ ಹೀಗೆ?

ಭಾರತದ ನೆಲವನ್ನು ಶತಮಾನಗಳ ಕಾಲ ಆಳಿದ ಯುರೋಪಿಯನ್ನರ ಪ್ರಭಾವ ನಮ್ಮಲ್ಲಿ ಇವತ್ತಿಗೂ ಬಹಳ ದೊಡ್ಡದು. ಒಳ್ಳೆಯದು ಕೆಟ್ಟದ್ದು ಎಂದು ಆಲೋಚಿಸುವುದನ್ನು ಆಬ್ಜೆಕ್ಟಿವ್ ಆಗಿ ಮಾಡಬೇಕಾಗುತ್ತದೆ. ನಮ್ಮಲ್ಲಿ ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳನ್ನು, ಸ್ಥಳೀಯ ರಾಜ ಪರಂಪರೆಗಳನ್ನು ಒಡೆದು-ಒಂದುಗೂಡಿಸಿ ಆಳಿ ಒಂದು ಭಾರತ ದೇಶವಾಯಿತು. ಜೊತೆಗೆ ರೇಲ್ ರೋಡ್, ಅಂಚೆ ವ್ಯವಸ್ಥೆ, ಆಂಗ್ಲ ವಿದ್ಯಾಭ್ಯಾಸ, ವಸ್ತ್ರ ವಿನ್ಯಾಸಗಳು, ಕೇಶ ಶೈಲಿ, ಮತ ಪಂಗಡಗಳು, ಆಹಾರ-ವಿಚಾರಗಳು, ಪಾನೀಯಗಳು, ಹೂವುಗಳು, ತರಕಾರಿಗಳು, ವಿಷಯ-ವಸ್ತುವನ್ನೊಂದನ್ನು ಬೇರೆ-ಬೇರೆ ರೀತಿಯಲ್ಲಿ ನೋಡುವ ದೃಷ್ಟಿಕೋನ... ಹೀಗೆ ಪಟ್ಟಿ ಮುಂದುವರೆಯುತ್ತದೆ. ಇವೆಲ್ಲ ನಮ್ಮನ್ನು ಆಳಿದವರು ನಮಗೆ ನೀಡಿದ ಬಳುವಳಿ. ಇಂತಹ ಬಳುವಳಿಗಳು ಸ್ವಾತಂತ್ರ್ಯೋತ್ತರ ಸಮಾಜದಲ್ಲಿ ತಲೆಮಾರುಗಳು ಮುಂದುವರೆದ ಹಾಗೆ ಅವುಗಳು ಒಂದೊಂದೇ ವಿಶೇಷ ರೂಪಗಳನ್ನು ಪಡೆದುಕೊಳ್ಳತೊಡಗಿದವು. ಯಾವುದು ಸಾವಿರಾರು ವರ್ಷಗಳ ನಮ್ಮ ಇತಿಹಾಸದಲ್ಲಿ ಒಂದು ಭಾಷೆಯಾಗಿ ಯಾವುದು ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮಗಳಲ್ಲಿ ನಮ್ಮನ್ನು ಒಂದುಗೂಡಿಸಿರಲಿಲ್ಲವೋ ಆ ಕೆಲಸವನ್ನು ಇಂಗ್ಲೀಷ್ ಮಾಡಿತು. ತಲೆ ತಲೆಮಾರುಗಳ ತರುವಾಯ ಯಾವ ವ್ಯವಹಾರ-ವಾಣಿಜ್ಯ ನಮ್ಮಲ್ಲಿ ಉಳಿದು-ಬೆಳೆದುಕೊಂಡು ಬಂದಿತ್ತೋ ಅದರ ಸ್ಥಳದಲ್ಲಿ ಇಂಗ್ಲೀಷ್ ಮೂಲದ ಬಿಸಿನೆಸ್ಸ್ ಪ್ರಾಸೆಸ್ಸುಗಳು ಬಂದವು. ಈ ಜಗತ್ತಿನಲ್ಲಿ ಯಾರು-ಏನು-ಎಲ್ಲೆಲ್ಲಿ-ಹೇಗೆ ಎನ್ನುವ ನಿರ್ಧಾರಗಳು ನಿಲುವುಗಳು ಬದಲುಗೊಂಡವು. ಜಗತ್ತು ಚಿಕ್ಕದಾಯಿತು, ಮನುಷ್ಯ ಪರಂಪರೆಗಳು ಮೊದಲಿಗಿಂತ ಹತ್ತಿರ ಬಂದವು.

ನಮ್ಮ ಸಾವಿರಾರು ವರ್ಷಗಳ ಪರಂಪರೆಯ ಮುಂದೆ ಈ ಸ್ವಾತಂತ್ರ್ಯೋತ್ತರ ಆರು ದಶಕಗಳು ಸಂಖ್ಯೆಯಲ್ಲಿ ಬಹಳ ದೊಡ್ಡವೇನು ಅಲ್ಲ, ಆದರೆ ಈ ಆರು ದಶಕಗಳಲ್ಲಿ ಆದ ದೇಶದ ಬೆಳವಣಿಗೆ ಹಾಗೂ ಪ್ರಗತಿ ಗಣನೀಯ. ನಮಗೆ ನಮ್ಮ ಮೂಲಭೂತ ಸಮಸ್ಯೆಗಳು ಎಂದಿಗೂ ಇರುವಂಥವೇ ಎನ್ನಿಸುವಂತಾಗಿದೆ, ನಮ್ಮ ದೇಶದಲ್ಲಿ ನೂರಕ್ಕೆ ಐವತ್ತು ಮಂದಿಗೆ ತಮ್ಮ ಹೆಸರನ್ನು ಬರೆಯಲು ಬಾರದು ಎನ್ನುವುದರಲ್ಲಿ ಬದಲಾವಣೆಯನ್ನು ಕಾಣಲು ಇನ್ನೂ ಬಹಳ ವರ್ಷಗಳೇ ಬೇಕಾಗುತ್ತವೆ, ನಮ್ಮವರಿಗೆಲ್ಲ ಸ್ವಚ್ಛ ಕುಡಿಯುವ ನೀರಿನ ಅಗತ್ಯ ಯಾವತ್ತಿನಿಂದ ಇದ್ದರೂ ಅದನ್ನು ಪೂರೈಸುವುದು ಇನ್ನೂ ಪ್ರಯತ್ನವಾಗಿಯೇ ಉಳಿಯುತ್ತದೆ, ಕೋಟ್ಯಾಂತರ ಜನರು ಕೆಲಸ ಮಾಡಬಲ್ಲವರಾದರೂ, ಕೆಲಸವಿಲ್ಲದವರಾಗುತ್ತಾರೆ. ಜನರಿಂದ ಜನರಿಗಾಗಿ ಬೇಕಾಗುವ ಕೆಲಸ ಹುಟ್ಟಿ ಇಂಡಸ್ಟ್ರಿಗಳು ಬೆಳೆಯದೇ ಹೋಗಿ, ಅಗತ್ಯದ ಕೆಲಸ ಕಾರ್ಯಗಳಲ್ಲಿ ಚಿಕ್ಕ ಮಕ್ಕಳ ಬಳಕೆಯಾಗುತ್ತದೆ. ವೃತ್ತಿ ಶಿಕ್ಷಣ ಸಂಬಂಧಿ ನಿಲುವು ಹೆಚ್ಚಾಗದೇ ಒಂದು ವಿದ್ಯೆ, ಬಿಸಿನೆಸ್ಸನ್ನು ತಮ್ಮದೆನ್ನಿಸಿಕೊಳ್ಳದೇ ಎಲ್ಲರಿಗೂ ಎಲ್ಲವೂ ಗೊತ್ತು ಆದರೆ ಯಾರೂ ಪರಿಣಿತರಿಲ್ಲವೆನ್ನುವಂತಾಗುತ್ತದೆ.

ನನ್ನಂಥವರಿಗೆ ಆರು ದಶಕಗಳ ಸ್ವಾತಂತ್ರ್ಯದ ಸವಿಯುಂಡ ಒಂದು ದೇಶದ ಹಿನ್ನೆಲೆಯಿದೆ, ಜೊತೆಗೆ ೨೩ ದಶಕಗಳ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವ ಮತ್ತೊಂದು ದೇಶದ ಸದರಿ ಆಗು-ಹೋಗುಗಳ ಅರಿವಿದೆ. ತಂತ್ರಜ್ಞಾನ-ಸಂವಹನ ರಂಗದಲ್ಲಿ ಇತ್ತೀಚೆಗೆ ಕ್ರಾಂತಿಯಾದದ್ದನ್ನು ನಾವು ಕಣ್ಣಾರೆ ಕಂಡು ಅನುಭವಿಸಿದ್ದೇವೆ. ಇನ್ನೂ ಎರಡು ದಶಕಗಳ ಬಳಕೆಯಲ್ಲಿ ಬೆಳೆಯುತ್ತಿರುವ ಸಾಮಾನ್ಯ ಜನರ ಅಂತರ್ಜಾಲದ ಸೂಪರ್ ಹೈವೇ ಹಾಗೂ ನೂರಾರು ವರ್ಷಗಳ ಹಿಂದೆ ಯಾರೋ ತೆರೆದಿಟ್ಟ ದಾರಿಗಳಿರುವಾಗ ಮುಂದೆ ಇವೆಲ್ಲ ಮುಂದೆ ಹೇಗೆ ಎನ್ನುವ ಕುತೂಹಲ ಎಂದಿಗಿಂತಲೂ ಇನ್ನೂ ಬಲವಾಗಬಹುದು.

ನಮ್ಮಲ್ಲಿ ಸಮಸ್ಯೆಗಳು ಹೆಚ್ಚು ಎಂದು ಕೈ ಚೆಲ್ಲಿ ಕೂರುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲಿನ ಹೆಚ್ಚು ಜನಸಂಖ್ಯೆಯೇ ಎಲ್ಲದಕ್ಕೂ ಕಾರಣ ಎಂದು ದೂರಿ ಫಲವಿಲ್ಲ. ಇವೆಲ್ಲ ನಮ್ಮತನದಲ್ಲಿ ಅವಿಭಾಜ್ಯವಾಗಿ ಸೇರಿಹೋಗಿವೆ. ನಮ್ಮ ದೇಶವನ್ನು ಅಮೇರಿಕದಷ್ಟು ಉದ್ದ-ಅಗಲವಾಗಿ ಹಿಗ್ಗಿಸಲಾಗದು. ನಮ್ಮಲ್ಲಿ ಅಮೇರಿಕದ ಸವಲತ್ತು-ಸಂಪನ್ಮೂಲಗಳನ್ನು ಒಂದೇ ದಿನದಲ್ಲಿ ಸೃಷ್ಟಿಸಲಾಗದು. ನಮ್ಮ ಮೂಲಭೂತ ಸಮಸ್ಯೆಗಳನ್ನು ಒಂದೇ ಕ್ಷಣದಲ್ಲಿ ನಿರ್ಮೂಲನ ಮಾಡಲಾಗದು. ಇವುಗಳಿಗೆಲ್ಲ ಉತ್ತರ ಬಹಳ ದೂರದ ಪ್ರಯಾಣ ಹಾಗೂ ಅಂತಹ ಅಪರಿಮಿತ ಪ್ರಯಾಣದಲ್ಲಿ ದೊರಕುವ ಯಶಸ್ಸಿನ ಮೈಲುಗಳು ಈ ಸಮಸ್ಯೆಗಳಿಗೆ ಉತ್ತರಗಳು. ಇನ್ನೂ ನೂರು-ಇನ್ನೂರು ವರ್ಷಗಳಲ್ಲಾದರೂ ನಾವು ಪ್ರಭಲರಾಗುತ್ತೇವೆ. ನಮ್ಮ ಸಂಖ್ಯೆ ನಮ್ಮ ಶಕ್ತಿಯಾಗುತ್ತದೆ. ನಾವು ಎಲ್ಲರಿಗಿಂತ ಮುಂದಿರುತ್ತೇವೆ.

ಇವು ಬರೀ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮಾಡೋ ವಿಷ್ ಆಗಲೀ ವಿಷ್‌ಫುಲ್ ಆಲೋಚನೆಗಳಾಗಲೀ ಆಗದೇ ಆದಷ್ಟು ಬೇಗ ನಿಜವಾಗುವುದನ್ನು ನಮ್ಮ ತಲೆಮಾರು ನೋಡಿದ್ದರೆ ಎಷ್ಟೊಂದು ಚೆನ್ನಿತ್ತು ಅನ್ನಿಸೋದಿಲ್ಲವೇ?

Friday, August 14, 2009

ಕಷ್ಟಗಳು, ಉಳಿತಾಯ ಹಾಗೂ ಮೋಕ್ಷ

’ಬಹಳ ಕಷ್ಟಾ ಸ್ವಾಮಿ, ಇತ್ತೀಚೆಗೆ’. ಅನ್ನೋ ಮಾತು ಆಗಾಗ್ಗೆ ಕೇಳಿ ಬರ್ತಾನೇ ಇರುತ್ತೆ. ಕೆಲಸ ಕಳೆದುಕೊಂಡವರ ಬಗ್ಗೆ, ಮನೆಗಳ ಬೆಲೆ ಕುಸಿದು ಮಾರಲೂ ಆಗದೇ ಅವುಗಳ ಸಾಲವನ್ನು ಕಟ್ಟಲೂ ಆಗದೇ ಕೊರಗುವವರ ಬಗ್ಗೆ, ಒಂದೇ ಮನೆಯಲ್ಲಿ ಇತ್ತೀಚೆಗಷ್ಟೇ ಕಾಲೇಜು ಮುಗಿಸಿದ ಕೆಲಸ ಹುಡುಕುತ್ತಿರುವ ಮಕ್ಕಳ ಜೊತೆಗೆ ಪೋಷಕರೂ ಕೆಲಸ ಹುಡುಕುತ್ತಿರುವುದರ ಬಗ್ಗೆ, ಇನ್ನೇನು ನಿವೃತ್ತರಾಗಬೇಕು ಎನ್ನುಕೊಳ್ಳುವವರು ಮತ್ತಿನ್ನೊಂದಿಷ್ಟು ವರ್ಷಗಳ ಕಾಲ ಕೆಲಸ ಮಾಡಲೇ ಬೇಕು ಎನ್ನುವುದರ ಬಗ್ಗೆ ಹೀಗೆ ಹಲವಾರು ವರದಿಗಳು ಅಲ್ಲಲ್ಲಿ ಕಾಣಸಿಗುತ್ತವೆ.

ಬಡತನದಲ್ಲಿ ಹುಟ್ಟಿ ಬೆಳೆದವರಿಗೆ ಮುಂದೆ ಅವರು ಯಾವುದೇ ಸ್ಟೇಟಸ್‌ನಲ್ಲಿದ್ದರೂ ಅವರ ಸರ್ವೈವಲ್ ತಂತ್ರಗಳು ಯಾವಾಗಲೂ ಜೀವಂತವಾಗಿಯೇ ಇರುತ್ತವೆ ಎಂದು ಹೇಳಬೇಕು. ಒಮ್ಮೆ ಬಡತನದಲ್ಲಿ ಸಿಕ್ಕಿಕೊಂಡರೆ ಅದರ ಪರಿಣಾಮಗಳು ಒಂಥರಾ ರಕ್ತದಲ್ಲಿರುವ ಯಾವುದೇ ಖಾಯಿಲೆಯ ವೈರಾಣುಗಳ ಹಾಗೆ ಯಾವತ್ತೂ ಜೀವಂತವಾಗೇ ಉಳಿದು ಕಷ್ಟದ ಪರಿಸ್ಥಿತಿಯಲ್ಲಿ ಹಳೆಯ ಇನ್‌ಸ್ಟಿಂಕ್ಸ್ ಎಲ್ಲ ಕೆಲಸ ಮಾಡಲು ಆರಂಭಿಸುತ್ತವೆ. ಅದೇ ಹುಟ್ಟಿದಂದಿನಿಂದ ಬಡತನವನ್ನು ಕಾಣದೇ ಇದ್ದವರ ಮೊದಲ ಬಡತನದ ಬವಣೆ ಬಲುಕಷ್ಟ.

ನಮ್ಮ ಪಕ್ಕದ ಮನೆಯವರು ಈ ಹತ್ತು ವರ್ಷಗಳಿಂದಲೂ ಪ್ರತಿನಿತ್ಯ ತಮ್ಮ ಮನೆಯ ಸುತ್ತಲೂ ಕನಿಷ್ಠ ಇಪ್ಪತ್ತು ವಿದ್ಯುತ್ ದೀಪಗಳನ್ನು ಉರಿಸುತ್ತಿದ್ದರು - ಗರಾಜ್ ಲೈಟ್‌ಗಳು, ಎದುರು ಲಾನ್‌ನಲ್ಲಿರುವ ಮರಗಳಿಗೆ ಫೋಕಸ್ ಲೈಟ್‌ಗಳು, ಮನೆಯ ಮುಂದಿನ ಬಾಗಿಲಿಗೆ, ಡ್ರೈವ್‍ ವೇ ಅಕ್ಕಪಕ್ಕದಲ್ಲಿ ಇತ್ಯಾದಿ. ಈ ಲೈಟುಗಳೆಲ್ಲ ಅಟೋಮ್ಯಾಟಿಕ್ ಆಗಿ ರಾತ್ರಿ ಪೂರ್ತಿ ಉರಿದು ಬೆಳಿಗ್ಗೆ ಆರಿಹೋಗುತ್ತಿದ್ದವು, ಅದೇ ನಮ್ಮ ಮನೆಯಲ್ಲಿ ದಿನಕ್ಕೆ ಕೆಲವು ಘಂಟೆಗಳು ಮಾತ್ರ ಮುಂದಿನ ಬಾಗಿಲಿನ ಎರಡು ಎನರ್ಜಿ ಎಫಿಷಿಯಂಟ್ ಬಲ್ಬ್‌ಗಳು ಉರಿಯುತ್ತಿದ್ದವು. ಹೋದ ವರ್ಷದ ಕೊನೆಯಲ್ಲಿ ಇದ್ದಕ್ಕಿದ್ದ ಹಾಗೆ ನಮ್ಮ ಇಲೆಕ್ಟ್ರಿಕ್ ಬಿಲ್ ಡಬಲ್ ಆಯಿತು, ನಾನೂ ಗಾಬರಿಗೊಂಡು ಒಂದಿಬ್ಬರನ್ನು ಕೇಳಿ ತಿಳಿದಾಗ ಅವರದ್ದೂ ಅದೇ ಪರಿಸ್ಥಿತಿ. ಹಾಗಾದ ಮರುದಿನವೇ ಪಕ್ಕದ ಮನೆಯ ಲೈಟುಗಳು ಎಲ್ಲವೂ ನಿಂತು ಹೋದವು, ಅವರು ಮನೆಯಲ್ಲಿದ್ದ ದಿನಗಳು ಮಾತ್ರ ಮುಂದಿನ ಬಾಗಿಲಿಗೆ ಒಂದು ಎನರ್ಜಿ ಎಫಿಷಿಯಂಟ್ ಲೈಟ್ ಬಲ್ಬ್ ಉರಿಯತೊಡಗಿತು. ಕೇವಲ ಎಲೆಕ್ಟ್ರಿಕ್ ಬಿಲ್ ವಿಚಾರವೊಂದೇ ಅಲ್ಲ, ಅವರ ಖರ್ಚು-ವೆಚ್ಚ ಜೀವನ ಶೈಲಿಯಲ್ಲೂ ಬದಲಾವಣೆಗಳು ಗೋಚರಿಸತೊಡಗಿದವು: ನ್ಯೂಸ್ ಪೇಪರ್ ಸಬ್‌ಸ್ಕ್ರಿಫ್ಷನ್ ನಿಂತು ಹೋಗುವುದು, ವರ್ಷದ ವೆಕೇಷನ್ನ್ ಕ್ಯಾನ್ಸಲ್ ಆಗುವುದು, ಮುಂತಾಗಿ.

ಒಂದು ವಸ್ತು ನಮ್ಮದೋ ಅಲ್ಲವೋ ಎಲ್ಲ ಕಡೆ ಕನ್ಸರ್‌ವೇಟಿವ್ ಆಗಿರುವುದು ಒಂದು ಬಗೆ - ಉದಾಹರಣೆಗೆ ನಮ್ಮ ಆಫೀಸಿನಲ್ಲಿ ನಾವು ಪ್ರಿಂಟ್ ಮಾಡುವ ಪ್ರತಿಯೊಂದು ಡಾಕ್ಯುಮೆಂಟ್ ಜೊತೆಗೆ ನಮ್ಮ ಹೆಸರಿನ ಕವರ್ ಪೇಜ್ ಅನ್ನು ನಾನು ಸಾಧ್ಯವಾದಷ್ಟು ಬಳಸುತ್ತೇನೆ, ಅದರ ಖಾಲಿ ಇರುವ ಮತ್ತೊಂದು ಪುಟದಲ್ಲಿ ಏನಾದರೂ ನೋಟ್ಸ್ ಮಾಡುವುದಕ್ಕೋ ಅಥವಾ ಚಿಕ್ಕದಾಗಿ ಕತ್ತರಿಸಿಕೊಂಡು ’ಪೋಸ್ಟ್ ಇಟ್’ ನೋಟ್ಸ್ ಥರವೋ, ಅಥವಾ ಇನ್ನೊಂದು ರೀತಿ. ಇನ್ನುಳಿದವರು ಆ ಕವರ್ ಪುಟವನ್ನು ಟ್ಯ್ರಾಷ್ ಮಾಡಬಹುದು, ಅಥವಾ ರಿಸೈಕಲ್ ಮಾಡಬಹುದು, ಹೀಗೆ ಅವರವರ ಬುದ್ಧಿಗೆ ತಕ್ಕಂತೆ ಆ ಕವರ್ ಪೇಜ್ ಬಳಕೆಗೊಳ್ಳುತ್ತೆ. ಇಲ್ಲಿ ಒಂದೇ ಸರಿಯುತ್ತರವೆಂಬುದೇನೂ ಇಲ್ಲ, ಆ ಪುಟವನ್ನು ಹೇಗೆ ಬಳಸಬೇಕು ಎನ್ನುವುದಕ್ಕೆ ಹಲವಾರು ಸರಿ ಉತ್ತರಗಳಿವೆ. ನನ್ನ ನಿಲುವಿನಲ್ಲಿ ಅಥವಾ ನಾನು ಹೇಗೆ ಆ ಕವರ್ ಪುಟವನ್ನು ಬಳಸುತ್ತೇನೆ ಎಂಬುದರಲ್ಲಿ ಯಾವುದೇ ಬದಲಾವಣೆಗಳೂ ಆಗಲಾರವು, ಅದು ಎಕಾನಮಿಯನ್ನೂ ಆದರಿಸಿಲ್ಲ, ಅದಕ್ಕೆ ನೇರವಾಗಿ ನಾನು ಹಣಕೊಡುವುದೂ ಇಲ್ಲ. ಇದು ಹೇಗೆ ನನ್ನ ನಿಲುವೋ ಉಳಿದವರದೂ ಹಾಗೆ, ಅಷ್ಟೇ.

ಇನ್ನು ಕಷ್ಟದ ಮಾತಿಗೆ ಬರೋಣ, ಅವರವರ ಕಷ್ಟ ಅವರಿಗೆ ಆನೆಯ ಭಾರ ಆನೆಗೆ ಇರುವೆಯ ಭಾರ ಇರುವೆಗೆ. ಆದರೆ ಕಷ್ಟಗಳು, ಸಾಂಸಾರಿಕ ಜಂಜಾಟಗಳು, ನಮಗೊದಗುವ ಅನೇಕ ತೊಂದರೆಗಳನ್ನು ಹಲವಾರು ರೀತಿಯಲ್ಲಿ ನೋಡಬಹುದು. ಅವುಗಳ ತುಲನಾತ್ಮಕ ಅರಿವು ನಮ್ಮನ್ನು ಎಷ್ಟೋ ಸಾರಿ ’ಸದ್ಯ, ನಮಗೆ ಹಾಗಾಗದಿದ್ದರೆ ಸಾಕು!’ ಎನ್ನುವ ಮನೋಭಾವನೆಯಿಂದ ಆ ಮಟ್ಟಿಗೆ ಸಮಾಧಾನ ಹುಟ್ಟಬಹುದು. ದೈಹಿಕ ಕೆಲಸಗಳಿಂದ ಸ್ನಾಯುಗಳು ಬಲಗೊಳ್ಳುವ ಹಾಗೆ ಈ ಸಂಕಷ್ಟಗಳ ಪರಂಪರೆ ಮನಸ್ಸನ್ನು ಗಟ್ಟಿಗೊಳಿಸಬಹುದು. ಎಲ್ಲದಕ್ಕಿಂತ ಮುಖ್ಯವಾಗಿ ಈ ಜಂಜಾಟಗಳಲ್ಲಿ ಬಳಲಿ, ತೊಳಲಿ, ಬಗ್ಗಿ, ಬಾಗಿ, ನೊಂದು, ನಲಿದು ಮುಂದೆ ಇವೆಲ್ಲದರ ದೆಸೆಯಿಂದ ಲಕ್ಷಾಂತರ ಜನ್ಮಗಳಲ್ಲಿ ಮೋಕ್ಷ ಸಿಗಬಹುದು.

ನಮಗೆಲ್ಲ ಕಷ್ಟದ ಬಗ್ಗೆ ಏನು ಗೊತ್ತಿದೆ? ಮನೆಯಲ್ಲಿ ಮೂರೋ ನಾಲ್ಕು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಬೇಕು ಎನ್ನುವ ಪೋಷಕರ ನಡುವೆ, ಹುಟ್ಟಿದಂದಿನಿಂದ ವಿಕಲಾಂಗರಾಗಿ ಬೆಳೆಯುವ ಮಕ್ಕಳನ್ನು ಪೋಷಿಸುವ ತಂದೆ-ತಾಯಿಗಳ ನಡುವೆ, ಇಂದಿದ್ದರೆ ನಾಳೆ ಬೆಳಿಗ್ಗೆ ತಿನ್ನುವುದಕ್ಕಿಲ್ಲ ಎನ್ನುವವರ ನಡುವೆ, ಯಾವಾಗಲೂ ಒಂದಲ್ಲ ಒಂದು ಖಾಯಿಲೆಯಿಂದ ನರಳುತ್ತಿರುವ ಕುಟುಂಬದ ಸದಸ್ಯರ ಜೊತೆ ತಮ್ಮ ದಿನಚರಿಯನ್ನು ಕಂಡುಕೊಳ್ಳುವವರ ನಡುವೆ, ಇದ್ದ ಮಕ್ಕಳಲ್ಲಿ ಕೆಲವರನ್ನು ದುರಂತಗಳಲ್ಲಿ ಕಳೆದುಕೊಂಡು ಜೀವನ ಪರ್ಯಂತ ನರಳುವವರ ನಡುವೆ, ಆಫೀಸಿನ ಕೆಲಸ ಮನೆಯಲ್ಲಿನ ಕೆಲಸಗಳ ಜೊತೆಗೆ ತಮ್ಮ ಕುಟುಂಬದ ಹಿರಿಯರನ್ನು ಪೋಷಿಸಿಕೊಂಡು ಹೋಗುವವರ ನಡುವೆ, ತಮ್ಮ ಪ್ರೈಮರಿ ರೆಸಿಡೆನ್ಸ್ ಅಥವಾ ತಮ್ಮ ಜೀವನದ ಇಡುಗಂಟನ್ನು ಕಳೆದುಕೊಂಡವರ ನಡುವೆ...ಹೀಗೆ ಈ ಪಟ್ಟಿ ಮುಂದುವರೆಯುತ್ತದೆ. ಪ್ರತಿಯೊಬ್ಬರ ಕಷ್ಟದ ಅರಿವು ಹಾಗೂ ಅವರ ಅನುಭವ ಸಾಪೇಕ್ಷವಾದುದು. ನಮ್ಮ ಕಷ್ಟ ದೊಡ್ಡದು ಎಂದೆನಿಸಿದ ಮರು ಕ್ಷಣವೇ ಮತ್ತೊಬ್ಬರ ಇನ್ನೂ ಹೆಚ್ಚಿನ ಕಷ್ಟದ ಸ್ಥಿತಿಯನ್ನು ಕೇಳಿದಾಗ ಸಮಾಧಾನವಾಗುತ್ತದೆ. ಹೀಗೆ ಆದಾಗಲೆಲ್ಲ ’ಸದ್ಯ ನಮಗೆ ಆ ಪರಿಸ್ಥಿತಿ ಬರಲಿಲ್ಲವಲ್ಲ’ ಎನ್ನುವ ದನಿಯೂ ಹುಟ್ಟುತ್ತದೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಂತಹ ಕ್ಷಣದಲ್ಲಿ ’ದೇವರ ದಯೆ’ ಅಥವಾ ’ದೇವರು ದೊಡ್ಡವನು’ ಭಾವನೆಯೂ ಉದ್ಭವಿಸುತ್ತದೆ.