Sunday, September 05, 2010

ಅಕ್ಕ ಸಮ್ಮೇಳನ ಮತ್ತು ಊಟ-ತಿಂಡಿಯ ವ್ಯವಸ್ಥೆ

ದೂರದಿಂದ ಬಂದ ನನ್ನ ಸ್ನೇಹಿತರು ಶುಕ್ರವಾರದಿಂದ ಶನಿವಾರದವರೆಗೆ ಹಲವಾರು ಸೂಚನೆಗಳನ್ನು ನನಗೆ ವೈಯಕ್ತಿಕವಾಗಿ ನೀಡುತ್ತಲೇ ಬಂದಿದ್ದಾರೆ, ಕೆಳಗಿನವುಗಳು ಮುಖ್ಯ ಅಂಶಗಳು ಮಾತ್ರ, ನನ್ನ ವೈಯಕ್ತಿಕ ಅಭಿಪ್ರಾಯದಂತೆ ಫುಡ್ ಕಮಿಟಿಯವರು ತಮ್ಮ ವ್ಯವಸ್ಥೆಯನ್ನು ನಿರಂತರವಾಗಿ ಸುಧಾರಿಸುತ್ತಲೇ ಬಂದು ಶನಿವಾರ ಮಧ್ಯಾಹ್ನದ ಊಟದ ಕ್ವಾಲಿಟಿ ಚೆನ್ನಾಗಿತ್ತು. ಜೊತೆಗೆ ಶನಿವಾರದ ಸಂಜೆಯ ಹೊತ್ತಿಗೆಲ್ಲಾ ಊಟದ ಲೈನು ಹೆಚ್ಚು ಉದ್ದವಾದಂತೆ ಎನ್ನಿಸಲೇ ಇಲ್ಲ; ಊಟವನ್ನು ಸಾವಿರಾರು ಜನರಿಗೆ ಹಂಚುವ ವ್ಯವಸ್ಥೆ, ಅದರಲ್ಲಿನ ಬಾಟಲ್‌ನೆಕ್ಕ್‌ಗಳನ್ನು ತೆಗೆದು ಎಲ್ಲವೂ ಸಸೂತ್ರವಾಗಿ ನಡೆದುಕೊಂಡು ಹೋಗುವಂತೆ ಮಾಡಿದ ಆಹಾರ ಸಮಿತಿಯವರಿಗೆ "ಅಂತರಂಗ"ದ ಅಭಿನಂದನೆಗಳು.

* ಎರಡು ವರ್ಷಕ್ಕೊಮ್ಮೆ ’ಅಕ್ಕ’ ಸಮ್ಮೇಳನ ನಡೆಯುವುದು ನಿಜವಾದರೆ ಸ್ಥಳ ಬದಲಾದರೂ ಈ ಹಿಂದಿನ ಅನುಭವಗಳಿಂದ ನಾವುಗಳು ಪಾಠವನ್ನೇಕೆ ಕಲಿಯೋದಿಲ್ಲ? ಕಾರ್ಯಕ್ರಮ ಹಾಗೂ ಸಮ್ಮೇಳನ ಸಮಿತಿಗಳು ಬದಲಾದರೂ ’ಅಕ್ಕ’ದ ಪದಾಧಿಕಾರಿಗಳು ಈ ಬಗ್ಗೆ ಒಂದು ’ಅನುಭವ ಬ್ಯಾಂಕ್’ ಏಕೆ ಸ್ಥಾಪಿಸಿ ಅವೇ ತಪ್ಪುಗಳು ಮತ್ತೆ ಮರುಕಳಿಸದಂತೆ ಏಕೆ ಮಾಡಬಾರದು?
* ಗುಜರಾತಿ ಸಂಸ್ಥೆಗಳಲ್ಲಿ ಹತ್ತು ಸಾವಿರದಷ್ಟು ಜನರಿಗೆ ಊಟ-ಉಪಹಾರವನ್ನು ಯಾವುದೇ ಲೋಪವಾಗದಂತೆ ಆಯೋಜಿಸುವುದು ನಿಜವಾದರೆ, ನಾಲ್ಕು ಸಾವಿರ ಕನ್ನಡಿಗರಿಗೆ ಉಣಬಡಿಸುವುದೇಕೆ ಕಷ್ಟ.
* ದಕ್ಷಿಣ ಭಾರತದ ತಿಂಡಿ-ತಿನಿಸುಗಳನ್ನು ದಯವಿಟ್ಟು ನಮ್ಮವರಿಂದಲೇ ಮಾಡಿಸಿ - "ಚಟ್ಣಿ ಸ್ವಲ್ಪವೂ ಚೆನ್ನಾಗಿರಲಿಲ್ಲ!"
* ಯಾರಾದರೂ ಒಂದು ವಡೆ ಅಥವಾ ಇತರ ತಿನಿಸನ್ನು ಹೆಚ್ಚು ಕೇಳಿದರೆ ದಯವಿಟ್ಟು ನಿರಾಕರಿಸದೇ ಕೊಡಿ.
* ಸಮ್ಮೇಳನಕ್ಕೆ ಬರುವವರಿಗೆ ಕಾರ್ಯಕ್ರಮಗಳು ಎಷ್ಟು ಮುಖ್ಯವೋ ಅದೇ ರೀತಿ ಊಟ-ಉಪಚಾರ ಹಾಗೂ ತಮ್ಮ ಬಂಧು-ಬಳಗ-ಸ್ನೇಹಿತರನ್ನು ಭೇಟಿ ಮಾಡುವುದು ಅಷ್ಟೇ ಮುಖ್ಯ, ಆದರೆ ಊಟ ಮಾಡಿದವರು ಅಲ್ಲೇ ಮೀಟಿಂಗ್ ಮಾಡಿ ಉಳಿದವರಿಗೆ ಟೇಬಲ್ ಸಿಗದ ಹಾಗೆ ಮಾಡದಂತೆ ಉಪಾಯವಾಗಿ ತಡೆ ಹಿಡಿಯಿರಿ.
* ನಮ್ಮವರು ಕಾಫಿ, ಊಟ-ತಿಂಡಿಗೆ ಸಮಯಕ್ಕಿಂತ ಮೊದಲು ಸರತಿ ಸಾಲಿನಲ್ಲಿ ನಿಲ್ಲದಂತೆ ತಡೆ ಹಿಡಿಯಿರಿ, ಒಮ್ಮೆ ಸಾಲಿನಲ್ಲಿ ನಿಂತವರನ್ನು ಐದು ನಿಮಿಷಗಳಿಗಿಂತ ಹೆಚ್ಚು ಕಾಯಿಸಬೇಡಿ.

*** ಇನ್ನೂ ಉಳಿದ ಅಬ್ಸರ್‌ವೇಷನ್ನುಗಳನ್ನು ಇಲ್ಲಿ ಮುಂದೆ ಸೇರಿಸಲಾಗುವುದು.

ಶನಿವಾರದ ಕಾರ್ಯಕ್ರಮಗಳು

೪ನೇ ತಾರೀಕು ಶನಿವಾರ ಮುಂಜಾನೆ ರಾರಿಟನ್ ಸೆಂಟರ್‌ ಕಡೆಗೆ ಬರುತ್ತಿದ್ದವರೆಲ್ಲರಿಗೆ ಒಂದು ರೀತಿಯ ಲಗುಬಗೆ, ಗಡಿಬಿಡಿ ಗೋಚರಕ್ಕೆ ಬರುತ್ತಿತ್ತು. ಒಂದು ಕಡೆ ಮೆರವಣಿಗೆಯನ್ನು ನೋಡಬೇಕು ಎನ್ನುವ ಕುತೂಹಲವಾದರೆ, ಮತ್ತೊಂದೆಡೆಗೆ ಇರುವ ಆರು ಸ್ಟೇಜುಗಳಲ್ಲಿ ಯಾವ ಕಾರ್ಯಕ್ರಮವನ್ನು ನೋಡುವುದು, ಯಾವ ಕಾರ್ಯಕ್ರಮವನ್ನು ಬಿಡುವುದು ಎಂಬ ಗೊಂದಲ.

ಬೆಳಿಗ್ಗೆ ಸುಮಾರು ಎಂಟು ಘಂಟೆಯ ಹೊತ್ತಿಗೆ ಆರಂಭವಾದ ಮೆರವಣಿಗೆಯಲ್ಲಿ ಸುಮಾರು ಇಪ್ಪತ್ತೈದು ತಂಡಗಳು ಭಾಗವಹಿಸಿದ್ದು ಸ್ಥಳೀಯ ಹಾಗೂ ದೂರದಿಂದ ಬಂದ ಕನ್ನಡಿಗರ ಸ್ಪೂರ್ತಿ ಹಾಗೂ ಬೆಂಬಲದ ಪ್ರತಿಬಿಂಬದಂತೆ ಎಲ್ಲರ ಮುಖದಲ್ಲೂ ಹರ್ಷ ತುಂಬಿ ತುಳುಕುತ್ತಿತ್ತು. ಇನ್ನೂ ಎರಡು ವಾರ ಬೇಸಿಗೆ ಇದ್ದರೂ ಬೆಳಿಗ್ಗಿನ ತಿಳಿಗಾಳಿಯ ವಾತಾವರಣದಲ್ಲಿ ಕಣ್ಣು ಕುಕ್ಕುವಂತೆ ಸೂರ್ಯರಶ್ಮಿಗಳು ಹಾಗೂ ನಿನ್ನೆ ಅಲ್ಪ ಸ್ವಲ್ಪ ಮಳೆ ಬಂದು ಎಲ್ಲವೂ ತಿಳಿಯಾದಂತೆ ಕಂಡು ಬರುತ್ತಿದ್ದುದು ಆಹ್ಲಾದಕರವಾಗಿತ್ತು. ಮುಖ್ಯ ಅತಿಥಿಗಳಾದ ಮನು ಬಳಿಗಾರ್, ಜಯರಾಮ್ ರಾಜೇ ಅರಸ್, ಮುಖ್ಯಮಂತ್ರಿ ಚಂದ್ರು, ಕೃಷ್ಣೇ ಗೌಡ ಮೊದಲಾದವರು ನೋಡನೋಡುತ್ತಿದ್ದಂತೆ ಒಂದಲ್ಲ ಎರಡಲ್ಲ ಸುಮಾರು ಮುವತ್ತೆರಡು ತಂಡಗಳು ಭಾಗವಹಿಸಿದ್ದ ದಸರಾ ಮೆರವಣಿಗೆಯ ದ್ಯೋತಕದಂತೆ ಅಕ್ಕ ಮೆರವಣಿಗೆ ನಡೆದುಬಂತು.

ಸಮ್ಮೇಳನದ ಮುಖ್ಯವೇದಿಕೆ, ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಸಾಕಷ್ಟು ಜನರು ನೆರಿದಿದ್ದಂತೆ, ಅಮೇರಿಕದಿಂದ ಹಾಗೂ ಬೆಂಗಳೂರಿನಿಂದ ಏಕಕಾಲಕ್ಕೆ ಏರ್ಪಟ್ಟ "ಯಾವ ಮೋಹನ ಮುರಳಿ ಕರೆಯಿತೋ" ಕಾರ್ಯಕ್ರಮ ಬಹಳ ಸೊಗಸಾಗಿ ಮೂಡಿಬಂತು. ಕರ್ನಾಟಕದಿಂದ ಮುಖ್ಯಮಂತ್ರಿ ಯಡಿಯೂರಪ್ಪ, ನಾಗತಿಹಳ್ಳಿ ಚಂದ್ರಶೇಖರ್, ಜಿ.ಎಸ್. ಶಿವರುದ್ರಪ್ಪ ಹಾಗೂ ಶಿವಮೊಗ್ಗ ಸುಬ್ಬಣ್ಣನವರು ನೆರೆದಿದ್ದ ಕಾರ್ಯಕ್ರಮ ಸ್ಥಳೀಯ ಕಲಾವಿದೆಯೊಬ್ಬರ ನಿರೂಪಣೆಯಲ್ಲಿ ಚೆನ್ನಾಗಿ ಮೂಡಿಬಂತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಂದ ಲೈವ್ ಸಂದೇಶದ ಜೊತೆಗೆ ಶಿವಮೊಗ್ಗ ಸುಬ್ಬಣ್ಣ, ಜಿ.ಎಸ್. ಶಿವರುದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ್ ಮೊದಲಾದ ಗಣ್ಯರು ಕೆಲವು ಮಾತುಗಳನ್ನಾಡಿದರು.

ನಂತರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಈ ಕೆಲವು ವರ್ಷಗಳಲ್ಲಿ ನಮ್ಮನಗಲಿದ ಕನ್ನಡಿಗರಲ್ಲಿ ಮುಖ್ಯರಾದವರನ್ನು ಸ್ಮರಿಸಲಾಯಿತು. ಇನ್ನೊಂದು ವಿಶೇಷ ಸಂದರ್ಭದಲ್ಲಿ ದಿವಂಗತ ಮೈಸೂರು ಅನಂತಸ್ವಾಮಿ ಮತ್ತು ಸಿ. ಅಶ್ವಥ್ ಅವರನ್ನು ನೆನೆದು ಸಭೆಯಲ್ಲಿ ಉಪಸ್ಥಿತರಿದ್ದ ಅವರ ಶ್ರೀಮತಿಯವರನ್ನು ಕರೆದು ಮುಖ್ಯವೇದಿಕೆಯಲ್ಲಿ ಗೌರವಿಸಲಾಯಿತು. ನಾವು ರಾಜು ಅನಂತಸ್ವಾಮಿ ಮತ್ತು ಅವರ ತಂದೆ ಹಾಗೂ ಸಿ. ಅಶ್ವಥ್ ಅವರನ್ನು ಕಳೆದುಕೊಂಡಿದ್ದರೂ ಅವರು ನಿರ್ಮಿಸಿದ ಸುಗಮ ಸಂಗೀತದ ಗುಂಗು ಕನ್ನಡಿಗರಿಗೆ ಎಂದೂ ಮಾಸದು ಎಂದು ಸಭೆಯಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡ ಸಂಚಾಲಕ ಪ್ರಸನ್ನಕುಮಾರ್ ಅವರ ಈ ಪ್ರಯತ್ನ ಸಮಯಸ್ಪರ್ಶಿಯಾಗಿತ್ತು.

ಮನು ಬಳಿಗಾರ್, ಜಯರಾಮ್ ರಾಜ್ ಅರಸ್, ಎಚ್. ಎಸ್. ವೆಂಕಟೇಶ ಮೂರ್ತಿ, ಬಿ. ಆರ್. ಲಕ್ಷ್ಮಣರಾವ್, ಜೋಗಿ, ವನಿತಾ ವಾಸು - ಇವರ ಸಮ್ಮುಖದಲ್ಲಿ ಸ್ಮರಣ ಸಂಚಿಕೆಗಳ ಬಿಡುಗಡೆ: ಸಿಂಚನ (ಮುಖ್ಯ ಸ್ಮರಣ ಸಂಚಿಕೆ), ರಂಜಿನಿ (ಕಾರ್ಯಕ್ರಮ ಸೂಚಿ), ಗುಬ್ಬಿಗೂಡು (ಮಕ್ಕಳ ಸಂಚಿಕೆ), ಕನ್ನಡ ಪ್ರಜ್ಞೆ (ಪ್ರಬಂಧ ಸಂಕಲನ) ಪುಸ್ತಕಗಳ ಬಿಡುಗಡೆ ಮಾಡಲಾಯಿತು. ಕನ್ನಡ ಪ್ರಜ್ಞೆ ಪ್ರಬಂಧ ಸಂಕಲನಕ್ಕೆ ಸಹಾಯ ಮಾಡಿದ ದಿವಂಗತ ಹರಿಹರೇಶ್ವರ ಮತ್ತು ನಾಗಲಕ್ಷ್ಮಿಯವರ ಸ್ಮರಣೆ.

***

ಮಧ್ಯಾಹ್ನ ರಾಯಚೂರ್ ಶೇಷಗಿರಿದಾಸ್ ಅವರಿಂದ ರಾಣಿ ಚೆನ್ನಮ್ಮ ಕಲಾಮಂದಿರದಲ್ಲಿ ಸುಶ್ರಾವ್ಯವಾದ ಭಕ್ತಿಗೀತೆಗಳು ಹೊರಬಂದವು. "ಪವಮಾನ"ದಿಂದ ಆರಂಭವಾದ ಶುಶ್ರಾವ್ಯವಾದ ಗಾಯನ ಸುಮಾರು ಮುವತ್ತು ನಿಮಿಷಗಳ ಕಾಲ ಪ್ರೇಕ್ಷಕರನ್ನು ಭಕ್ತಿಗಂಗೆಯಲ್ಲಿ ಓಲಾಡಿಸಿತು, ಸ್ವಲ್ಪ ಸಮಯದ ನಂತರ ವಿದ್ಯಾಭೂಷಣರ ಕರ್ನಾಟಕ ಭಕ್ತಿ ಸಂಗೀತ ಸಾಕಷ್ಟು ಜನರನ್ನು ಮಂತ್ರ ಮುಗ್ದರನ್ನಾಗಿಸಿತ್ತು.

***

ಹೊಯ್ಸಳ ಕನ್ನಡ ಸಂಘ, ಡೆಲವೇರ್‌ನವರಿಂದ ನೃತ್ಯ ರೂಪಕದ ಸಂಚಲನ
ಕನ್ನಡದ ಇತ್ತೀಚಿನ ಚಲನ ಚಿತ್ರಗಳನ್ನು ಆಯ್ದುಕೊಂಡು ಕಾರ್ಯಕ್ರಮ ಆಯೋಜಕರು ತಮ್ಮ ಕಾರ್ಯಕ್ರಮವನ್ನು ಕೇವಲ ಹದಿನೈದು ನಿಮಿಷಗಳಿಗೆ ಮೊಟಕುಗೊಳಿಸಿದರೂ ಬೇಸರಗೊಳ್ಳದೇ ಚಿಕ್ಕದಾಗಿ ಹಾಗಿ ಚೊಕ್ಕದಾಗಿ ನೃತ್ಯರೂಪಕವನ್ನು ನೇರವೇರಿಸಿ ಪ್ರೇಕ್ಷಕರಿಂದ ಪ್ರಶಂಸೆಗೊಳಪಟ್ಟ ಕೀರ್ತಿ ಹೊಯ್ಸಳ ಕನ್ನಡ ಸಂಘ - ಡೆಲವೇರ್‌ನ ಕಲಾವಿದರಿಗೆ ಸೇರುತ್ತದೆ

ರಾಣಿ ಚೆನ್ನಮ್ಮ ಕಲಾಮಂದಿರದಲ್ಲಿ ಮಧ್ಯಾಹ್ನ ಇದ್ದಕ್ಕಿದ್ದಂತೆ ಪ್ರಖ್ಯಾತ ಕನ್ನಡ ಚಲನಚಿತ್ರಗಳ ಟ್ಯೂನ್ ಕೇಳಿ ಬರಲು ಮೀಟ್ ಎಂಡ್ ಗ್ರೀಟ್ ಏರಿಯಾದಲ್ಲಿ ಇದ್ದವರೆಲ್ಲರೂ ಚೆನ್ನಮ್ಮ ಸ್ಟೇಜ್‌ನತ್ತ ದೌಡಾಯಿಸಿದಾಗ ಸ್ಟೇಜ್‌ ಮೇಲೆ ತಮ್ಮ ಕನ್ನಡ ಕೂಟದ ಮಕ್ಕಳು ಹಾಗೂ ದೊಡ್ಡವರಿಂದ ಒಂದು ಸುಂದರವಾದ ನೃತ್ಯ ರೂಪಕವನ್ನು ಚಂದ್ರಶೇಖರ ಆರಾಧ್ಯ ಹಾಗೂ ಅವರ ತಂಡದ ಕಲಾವಿದರಿಗೆ ಸಲ್ಲುತ್ತದೆ. ವಿಭಿನ್ನ ವರ್ಣರಂಜಿತ ಉಡುಗೆ ತೊಡುಗೆ ಹಾಗೂ ಹಲವು ನೃತ್ಯ ಮತ್ತು ಅಣಕುಗಳನ್ನೊಳಗೊಳಂಡ ಡ್ಯಾನ್ಸ್ ಕಾರ್ಯಕ್ರಮ ಚಿಕ್ಕದಾಗಿ ಹಾಗೂ ಮನಮೋಹಕವಾಗಿ ಮೂಡಿಬಂತು.

***
ರಮೇಶ್ ಕದ್ರಿ - ಸ್ಯಾಕ್ಸೋಫೋನ್
ರಮೇಶ್ ಕದ್ರಿ ಅವರು ತಮ್ಮ ಸಹ ಕಲಾವಿದರೊಂದಿಗೆ ಸೊಗಸಾದ ಸಂಗೀತ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಅವರ ಸ್ಯಾಕ್ಸೋಫೋನಿನ ಅಲೆಗಳು ಗುಬ್ಬಿ ವೀರಣ್ಣ ರಂಗಮಂದಿರದ ತುಂಬೆಲ್ಲಾ ಅನುರಣಿಸಿ ಹಲವಾರು ನೂರಾರು ಶೋತೃಗಳನ್ನು ತಲ್ಲೀನರಾಗಿಸಿತ್ತು.

ಕೃಷ್ಣ ವೈಜಯಂತಿ - ಪ್ರಭಾತ್ ಕಲಾವಿದರು
ಬ್ರಾಡ್‌ವೇ ಶೈಲಿಯಲ್ಲಿ ಕೃಷ್ಣನ ಜನ್ಮದಿಂದ ಹಿಡಿದು ಕುರುಕ್ಷೇತ್ರ ಯುದ್ಧದವರೆಗಿನ ಸುಂದರವಾದ ನೃತ್ಯ ರೂಪಕದ ಮೂಲಕ ಸುಮಾರು ಎಂಭತ್ತು ನಿಮಿಷಗಳ ಕಾಲ ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟು ಪ್ರೇಕ್ಷಕರಿಂದ ಪ್ರಶಂಸೆಗೆ ಪಾತ್ರರಾದ ಕೀರ್ತಿ ಪ್ರಭಾತ್ ಕಲಾವಿದರಿಗೆ ಸಲ್ಲಬೇಕು. ನಮಗೆಲ್ಲ ಗೊತ್ತಿರುವ ಹಾಗೆ ಅಕ್ಕ ಸಮ್ಮೇಳನದಲ್ಲಿ ಮೊಟ್ಟ ಮೊದಲನೇ ಭಾರಿಗೆ ಈ ರೀತಿಯ ಕಾರ್ಯಕ್ರಮವೊಂದನ್ನು ಪ್ರಭಾತ್ ಕಲಾವಿದರು ನೆರವೇರಿಸಿಕೊಟ್ಟಿದ್ದಾರೆ. ಬಾಲಕೃಷ್ಣನ ವೇಷದಲ್ಲಿ ಮೊಟ್ಟ ಮೊದಲು ಅಭಿನಯಿಸಿದ ಬಾಲ ಕಲಾವಿದೆಯಿಂದ ಹಿಡಿದು, ಕೃಷ್ಣ, ಅರ್ಜುನ, ಕಂಸ, ಯಶೋಧೆ, ಸಖಿಯರು ಮೊದಲಾದವರ ಪಾತ್ರಗಳಲ್ಲಿ ಅನೇಕ ನೃತ್ಯ-ಸಂಗೀತ ರೂಪಕಗಳ ಸಂಗಮವನ್ನು ಶ್ರೋತೃಗಳು ಚಪ್ಪಾಳೆಯ ಮೂಲಕ ಆಹ್ಲಾದಿಸಿದರು. ಹಿನ್ನೆಲೆ ಸಂಗೀತ, ವಸ್ತ್ರ ವಿನ್ಯಾಸ ಹಾಗೂ ಹಿನ್ನೆಲೆ ಸೀನರಿಗಳ ಚಿತ್ರಗಳು ಅದ್ಭುತವಾಗಿದ್ದವು.

ಕರುನಾಡ ಕೊಡುಗೆ: ಬೃಂದಾವನದ ಕಲಾವಿದರು ಆಹ್ವಾನಿತ ಕನ್ನಡ ಕೂಟಗಳ ಸಹ ಕಲಾವಿದರೊಂದಿಗೆ ಕೈ ಜೋಡಿಸಿ ಯಮುನಾ ಶ್ರೀನಿಧಿಯವರ ನಿರ್ದೇಶನದಲ್ಲಿ ಕನ್ನಡದ ರಂಜನೀಯ ಚಿತ್ರಗೀತೆಗಳು ಮತ್ತು ಚಿತ್ರಗಳ ಸಹಾಯದಿಂದ "ಕರುನಾಡ ಕೊಡುಗೆ" ಕಾರ್ಯಕ್ರಮವನ್ನು ಸುಂದರವಾಗಿ ನೆರವೇರಿಸಿ ಪ್ರೇಕ್ಷಕರ ಚಪ್ಪಾಳೆಗಳಿಗೆ ಪಾತ್ರರಾದರು. ಹಲವಾರು ಕನ್ನಡ ಕೂಟಗಳ ಕಲಾವಿದರನ್ನು ಒಳಗೊಂಡು ಆಯ್ದ ಚಿತ್ರ ಸಂಗೀತದ ಹಿನ್ನೆಲೆಯಲ್ಲಿ ನೃತ್ಯವನ್ನು ಸಂಯೋಜಿಸಿ ಪ್ರಸ್ತುತ ಪಡಿಸಿ ಪ್ರೇಕ್ಷಕರ ಮನಗೆದ್ದ ಕೀರ್ತಿ ಯಮುನಾರವರಿಗೆ ಹಾಗೂ ಭಾಗವಹಿಸಿದ ಕಲಾವಿದರೆಲ್ಲರಿಗೆ ಸೇರುತ್ತದೆ.

ಪುಸ್ತಕ ಬಿಡುಗಡೆ: ಸ್ಮರಣ ಸಂಚಿಕೆ, ಮನು ಬಳಿಗಾರ್ - ಕೆಲವು ಕಥೆಗಳು; ದೊಡ್ಡ ರಂಗೇಗೌಡರ ಸಂಕಲನವೊಂದನ್ನು ಬಿಡುಗಡೆ ಮಾಡಲಾಯಿತು.

ಕನ್ನಡವೇ ಶ್ರೇಷ್ಠ: ಶ್ರೀನಿವಾಸ ಕಪ್ಪಣ್ಣ ಮತ್ತು ಸುನಿತಾ ಅನಂತಸ್ವಾಮಿ ಅವರು ಕರ್ನಾಟಕದ ಶ್ರೇಷ್ಠ ಗಾಯಕ-ಗಾಯಕಿಯರನ್ನು ಒಳಗೊಂಡು ಹಲವಾರು ಜಾನಪದ ಗೀತೆ, ಚಿತ್ರಗೀತೆ ಮತ್ತು ಭಾವಗೀತೆಗಳನ್ನು ಪ್ರಸ್ತುತ ಪಡಿಸಿ ಪ್ರೇಕ್ಷಕರನ್ನು ಕುಣಿಸಿ ನಲಿಸುವಲ್ಲಿ ಸಫಲರಾದರು. ಮಧ್ಯರಾತ್ರಿಯ ನಂತರವೂ ಮುಂದುವರೆದ ಈ ಕಾರ್ಯಕ್ರಮವನ್ನು ನೋಡಲು ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು. ಸುಮಾರು ತೊಂಭತ್ತು ನಿಮಿಷಗಳ ಕಾಲ ನಡೆದ ಈ ಕಾರ್ಯಕ್ರಮ ರಂಜನೀಯವಾಗಿತ್ತು.


ಶನಿವಾರದ ಕಾರ್ಯಕ್ರಮದ ಚಿತ್ರಗಳನ್ನು ಇಲ್ಲಿ ನೋಡಿ:
http://picasaweb.google.com/hrskumar/Saturday?authkey=Gv1sRgCJvwgrn5lZvj1wE#

ಶುಕ್ರವಾರದ ಚಿತ್ರಗಳು

ಶುಕ್ರವಾರ, ಸೆಪ್ಟೆಂಬರ್ ೩ ರಂದು ಆನೆ ಅಂಬಾರಿ ದೇವಿಯ ಮೂರ್ತಿಯನ್ನು ಹೊತ್ತು ತರುವುದರೊಂದಿಗೆ ಆರಂಭವಾಗಿ, ಹಲವಾರು ಗಣ್ಯರ ಸಮ್ಮುಖದಲ್ಲಿ ಗಣೇಶ ಪೂಜೆಯೊಂದಿಗೆ ಸಮ್ಮೇಳನದ ಕಾರ್ಯಕ್ರಮಗಳು ಉದ್ಘಾಟನೆಗೊಂಡವು.

ಶುಕ್ರವಾರ ದಿನವಿಡೀ ಬಿಸಿನೆಸ್ಸ್ ಫೋರಮ್ಮ್, ಮಹಿಳೆಯ ಫೋರಮ್ಮ್, ಆರ್ಟ್ ಆಫ್ ಲಿವಿಂಗ್ ಮೊದಲಾದ ಕಾರ್ಯಕ್ರಮಗಳು ಪ್ಯಾರಲಲ್ಲ್ ವೇದಿಕೆಗಳಲ್ಲಿ ಆಯೋಜಿತಗೊಂಡು ಸಾಕಷ್ಟು ಜನರನ್ನು ತಮ್ಮೆಡೆ ಸೆಳೆದುಕೊಂಡಿದ್ದವು.

ವೇದ ಘೋಷದೊಂದಿಗೆ ಆರಂಭವಾದ ಸ್ವಾಗತ ಕಾರ್ಯಕ್ರಮಗಳು, ದಸರಾ ಮೆರವಣಿಗೆ, ದೀಪ ಬೆಳಗುವಿಕೆ, ರಾಷ್ಟ್ರಗೀತೆ, ಹಾಗೂ ಅನೇಕ ಗಣ್ಯರಿಂದ ಪ್ರಾಸ್ತಾವಿಕ ಸ್ವಾಗತ ಭಾಷಣಗಳನ್ನೊಳಗೊಂಡಿದ್ದವು.

ರಾತ್ರಿ ಒಂಭತ್ತುವರೆಗೆ ನಡೆದ ಶ್ರೀ ಬಾಲ ಮುರಳಿಕೃಷ್ಣ ಅವರ ಸಂಗೀತ ಕಾರ್ಯಕ್ರಮಕ್ಕೆ ಗುಬ್ಬಿ ವೀರಣ್ಣ ರಂಗಮಂಟಪ ಕಿಕ್ಕಿರಿದು ತುಂಬಿತ್ತು.

ಶುಕ್ರವಾರದ ಚಿತ್ರಗಳಿಗೆ ಇಲ್ಲಿ ನೋಡಿ.
http://picasaweb.google.com/hrskumar/Friday?authkey=Gv1sRgCJb8urGmoLmsHQ#

Friday, September 03, 2010

೬ನೇ ವಿಶ್ವ ಕನ್ನಡ ಸಮ್ಮೇಳನ - ಬಿಸಿನೆಸ್ಸ್ ಫಾರಮ್

ರಾಯಲ್ ಆಲ್ಬರ್ಟ್ಸ್ ಪ್ಯಾಲೇಸಿನಲ್ಲಿ ಬಿಸಿನೆಸ್ಸ್ ಫೋರಮ್ ಕಲರವ ಶುಕ್ರವಾರ, ಸೆಪ್ಟೆಂಬರ್ ೩ ರಂದು ಅದ್ದೂರಿಯಾಗಿ ಆರಂಭಗೊಂಡಿತು. ಸುಮಾರು ಇನ್ನೂರಕ್ಕೂ ಹೆಚ್ಚು ನೆರೆದ ಕರ್ನಾಟಕ ಹಾಗೂ ಸ್ಥಳೀಯ ಬಿಸಿನೆಸ್ಸ್ ದುರೀಣರನ್ನೆಲ್ಲ ಒಂದೇ ಸ್ಥಳದಲ್ಲಿ ಪೂರ್ಣ ದಿನದ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ.


ಹೇಮಾ ಕಾಂತರಾಜು ಅವರ ನಿರೂಪಣೆಯಲ್ಲಿ ಕಾರ್ಯಕ್ರಮಗಳ ಆರಂಭ: ೯:೩೦
ಮುಖ್ಯ ಅತಿಥಿಗಳು ಹಾಗೂ ಗಣ್ಯರ ಆಹ್ವಾನ: ೯:೩೫
ಶ್ರೀ ರಮೇಶ್ ಮಂಜೇಗೌಡ ಅವರ ಸ್ವಾಗತ ಭಾಷಣ: ೯:೩೮
ಜ್ಯೋತಿ ಬೆಳಗುವುದರೊಂದಿಗೆ ಫೋರಮ್ಮಿನ ಚಟುವಟಿಕೆಗಳ ಉದ್ಘಾಟನೆ ೯:೪೦

ಮುಖ್ಯ ಅತಿಥಿಗಳ ಭಾಷಣಗಳು ಈಗ ಮುಗಿದು, ಕೆಳಗಿನ ಐದು ಸೆಶ್ಶನ್ನುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ:

Session 1: Growth and Emerging Cross-border oppourtunities in the "New Nomal"
Moderator: Dr. A.M. Gundane

Session 2: Building a Business: Keys to Entrepreneurship in the New World
Moderator: Varchasvi Shankar

Session 3: Riding the Domestic Growth: India
Moderator: Raj Patil

Session 4: Investment & Retirement Strategies
Moderator: Ralph DSouzaSession 5: Success stories - "If I can do it, You can do it"
Jerry Rao and B.V. Jagadish