ನಮ್ಮ ಹಳ್ಳಿಕಡೆಯಲ್ಲಿ ಒಂದು ಮಾತು ಬರುತ್ತಿತ್ತು, "ಸಾಲಾ-ಸೂಲಾ ಮಾಡಿಯಾದ್ರೂ...". ಇದನ್ನ ಹೆಗ್ಗಳಿಕೆಯ ವಿಷಯವಾಗಿ ಬಳಸಬಹುದಿತ್ತು, ಅಥವಾ ತೆಗಳಿಕೆಯ ಮಾತಾಗಿಯೂ ಬಳಸಬಹುದಾಗಿತ್ತು. "ಸಾಲಾ-ಸೂಲಾ ಮಾಡಿ ಓದ್ಸಿದ್ರೂ ನನ್ನ ಮಗ ಕೈಗೆ ಹತ್ತದವನಾದ!" ಎಂದು ತಲೆ ಮೇಲೆ ಕೈ ಇಟ್ಟುಕೊಂಡವರನ್ನು ನೋಡಿದ್ದೇನೆ. ಅಂತೆಯೇ, "ಸಾಲಾ-ಸೂಲಾ ಮಾಡಿ, ದೊಡ್ಡ ಮನೆ ಕಟ್ಟಿಸಿದವರು..", ಅಂತಹವರನ್ನೂ ಸಹ ನೋಡಿದ್ದೇನೆ. ಒಟ್ಟಿನಲ್ಲಿ ಆಗಿನ ನಮ್ಮ ಸಾಮಾಜಿಕ ವ್ಯಾಪ್ತಿಯಲ್ಲಿ ಸಾಲವೆಂಬುದು ಯಾವತ್ತಿಗೂ ಶೂಲವೇ ಆಗಿತ್ತು ಎನ್ನುವುದರಲ್ಲಿ ಎರಡು ಮಾತಿರಲಿಲ್ಲ.
ಸಾಲವನ್ನು ಕೈಗಡ ಎಂದು ತೆಗೆದುಕೊಳ್ಳಬಹುದಿತ್ತು. ಉದ್ರಿ ಎಂದು ಅಂಗಡಿಗಳಲ್ಲಿ ಬರೆಸಬಹುದಿತ್ತು. ಎರವಲು ಪಡೆಯಬಹುದಿತ್ತು. ಕಡ ತೆಗೆದುಕೊಳ್ಳಬಹುದಿತ್ತು. ಕಯ್ಬದಲು ಮಾಡಿಕೊಂಡು "ಋಣ" ಹೆಚ್ಚಿಸಿಕೊಳ್ಳಬಹುದಿತ್ತು. ಹೀಗೆ ತೆಗೆದುಕೊಂಡ ಸಾಲ ಎಲ್ಲವೂ "ಋಣ"ಮಯ ವಾಗಿತ್ತು ಎಂದರೆ ತಪ್ಪಾಗಲಾರದು. ಆದ್ದರಿಂದ, ಸಹಜವಾಗೇ ಸಾಲಕ್ಕೆ ನೆಗೆಟಿವ್ ಕನ್ನೋಟೇಷನ್ ಇದ್ದೇ ಇದೆ.
***
ನಮ್ಮ ವಂಶಜರಲ್ಲಿ ಕಳೆದ ಎರಡು ತಲೆಮಾರುಗಳಲ್ಲಿ ಸಾಲ ಮಿತಿ ಮೀರಿದೆ. ಎರಡು ತಲೆಮಾರುಗಳ ಹಿಂದೆ, ಕೈಗಡ ತೆಗೆದುಕೊಳ್ಳುವುದು ಎಂದರೆ ಅದೊಂದು ಅಕ್ಷಮ್ಯ ಅಪರಾಧವಾಗಿತ್ತು. ಮೂಲತಃ ಸರ್ಕಾರಿ ಕೆಲಸದ ಸಂಬಳದಲ್ಲಿ (ನನಗೆ ಗೊತ್ತಿರುವ ಹಾಗೆ) ನಾಲ್ಕು ತಲೆಮಾರುಗಳಿಂದ ಬದುಕಿದ್ದ ನನ್ನ ಹಿರಿಯರು, ಯಾವಾಗಲೂ "ಹಾಸಿಗೆ ಇದ್ದಷ್ಟೇ ಕಾಲು ಚಾಚು!" ಎನ್ನುವುದನ್ನು ಅಕ್ಷರಶಃ ಪರಿಪಾಲಿಸುತ್ತಿದ್ದರು. ನನ್ನ ತಾತನವರು ತಮ್ಮ ಟ್ರಂಕಿನಲ್ಲಿರುವ ಒಂದು ಪುಸ್ತಕದಲ್ಲಿ ತಮ್ಮ ಸಂಬಳ ಬಂದ ದಿನ ಎಲ್ಲ ರೂಪಾಯಿಗಳನ್ನು ಅಚ್ಚುಕಟ್ಟಾಗಿ ತೆಗೆದಿಟ್ಟು, ತಿಂಗಳು ಕಳೆದಂತೆ ಒಂದೊಂದೇ ನೋಟನ್ನು ಮನೆಯ ಒಂದೊಂದು ಖರ್ಚುಗಳಿಗೋಸ್ಕರ ಬಳಸುತ್ತಾ ಬರುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ. ಕೊನೆಯಲ್ಲಿ ನನ್ನ ತಾತನವರು ತೀರಿಕೊಂಡಾಗ ಆ ಪುಸ್ತಕದಲ್ಲಿದ್ದ ಗರಿಗರಿಯಾದ ಹತ್ತು ರುಪಾಯಿ ನೋಟುಗಳು ನಮ್ಮ ಮನೆಯಲ್ಲಿ ಇವತ್ತಿಗೂ ಹಾಗೆಯೇ ಇದೆ. ಆಗೆಲ್ಲ ಹತ್ತು ರುಪಾಯಿಗಳು ಬಹಳ ದೊಡ್ಡ ಮೊತ್ತವಾಗಿರುತ್ತಿತ್ತು. ಬೇಸಿಗೆಗೆಂದು ಅಜ್ಜನ ಮನೆಗೆ ಹೋದಾಗ ಎರಡು ರುಪಾಯಿಗೆ ಒಂದು ಕೆಜಿ ಅಕ್ಕಿ ತಂದದ್ದು ನನಗೆ ನೆನಪಿದೆ.
ನನ್ನ ತಾತನವರು, ಇನ್ನೊಂದು ಮಾತನ್ನು ಯಾವಾಗಲೂ ಹೇಳುತ್ತಿದ್ದುದು, ಈಗ ಪ್ರಸ್ತುತವೆನಿಸುತ್ತಿದೆ, "ಆಳಾಗಿ ದುಡಿ, ಅರಸಾಗಿ ಉಣ್ಣು". ತಮ್ಮ ಜೀವಿತಾವಧಿಯಲ್ಲಿ ಎಷ್ಟೊಂದು ಕಷ್ಟ ಕಾರ್ಪಣ್ಯಗಳಿದ್ದರೂ, ಕೆಲವೊಮ್ಮೆ ಗಂಜಿ-ಅಂಬಲಿಯನ್ನು ಕುಡಿದು ಬದುಕಿದ್ದರೂ ಅದು ಪರಮಾನ್ನ, ಪರಮಾತ್ಮನ ಪ್ರಸಾದವೆಂದೇ ನಂಬಿಕೊಂಡು ಇದ್ದುದರಲ್ಲಿ ಹಂಚಿಕೊಂಡು ಉಂಡು ಬದುಕಿ ಬಂದ ಕುಟುಂಬದವರು ಅವರೆಲ್ಲರು. ಮಾನ-ಮರ್ಯಾದೆಗಳು ಎಲ್ಲಕ್ಕಿಂತ ಹೆಚ್ಚು. ದಿನನಿತ್ಯ ತಪ್ಪದ ಶುಚಿಕರ್ಮಗಳು, ದೇವರ ಪೂಜೆ, ಶುಭ್ರವಾದ ಬಟ್ಟೆ, ಪ್ರತಿನಿತ್ಯವೂ ಗುಡಿಸಿ ಒರೆಸಿ ಸ್ವಚ್ಛ ಮಾಡಿಕೊಂಡು ಬರುತ್ತಿದ್ದ ಮನೆಯ ಒಳಗೆ-ಹೊರಗೆ, ಓದುವುದಕ್ಕೆ ಸಾಕಷ್ಟು ಪುಸ್ತಕಗಳು. ಆಗಾಗ್ಗೆ ಬಂದು ಹೋಗುತ್ತಿದ್ದ ನೆಂಟರು-ಇಷ್ಟರು... ಬೇಡವೆಂದರೂ ಒಂದರಲ್ಲೊಂದು ತೊಡಗಿಕೊಳ್ಳ ಬೇಕಾದಂಥ ಪೂಜಾ ಕರ್ಮಗಳು, ಹಬ್ಬ ವಿಧಿ-ವಿಧಾನಗಳು -- ಹೀಗೇ ಅನೇಕ ಮಜಲುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸುಖವಾದ ಜೀವನ, ತುಂಬು ಕಣ್ಣಿನ ನಿದ್ರೆ, ದೈವದತ್ತ ಆರೋಗ್ಯ - ಇವೆಲ್ಲದರ ಜೊತೆ ಸಾಲರಹಿತ ಜೀವನ! ಅವರೆಲ್ಲರೂ ಪರಿಪೂರ್ಣರು ಎಂದು ನಾನು ಬಲವಾಗಿ ನಂಬಿಕೊಂಡಿದ್ದೇನೆ.
ಲಂಚ ಅಥವಾ ಗಿಂಬಳವಿಲ್ಲದ ಸರ್ಕಾರಿ ನೌಕರಿಯಲ್ಲಿ ಸಾಲವಿಲ್ಲದೇ ಅನೇಕ ಹೊಟ್ಟೆಗಳನ್ನು ಹೊರೆಯುತ್ತಾ ದೊಡ್ಡ ಕುಟುಂಬವನ್ನು ಸಾಕುವುದು ಸುಲಭದ ಮಾತಲ್ಲ. ಆಗೆಲ್ಲಾ ಅವಿಭಾಜ್ಯವಾಗಿ ಬದುಕುತ್ತಿದ್ದ ತುಂಬಿದ ಕುಟುಂಬಗಳಲ್ಲಿ ಬರೀ ತಮ್ಮ ತಮ್ಮ ಪರಿವಾರವನ್ನು ಹೊಟ್ಟೆ ಹೊರೆಯುವುದು ಯಾವ ದೊಡ್ಡ ವಿಚಾರವೂ ಅಲ್ಲವೇ ಅಲ್ಲ... ಅವರವರ ಕುಟುಂಬಗಳ ಜೊತೆ, ಅಜ್ಜ-ಅಜ್ಜಿ, ತಂದೆ-ತಾಯಿ, ಚಿಕ್ಕಮ್ಮ-ಚಿಕ್ಕಪ್ಪ, ಮಾವ-ಅತ್ತೆ, ಹೀಗೆ... ಅನೇಕರು ಬೇಕು-ಬೇಡವೆಂದರೂ ಆಯಾ ಕುಟುಂಬಗಳಲ್ಲಿ ಸೇರಿ ಹೋಗಿರುತ್ತಿದ್ದರು. ಆದುದರಿಂದಲೇ ಮನೆಯಲ್ಲಿ ಒಂದಿಷ್ಟು ಜನರಿಗೆ ಯಾವಾಗಲೂ ಅಡುಗೆ ಮನೆಯನ್ನು ಬಿಟ್ಟು ಹೊರಬರಲು ಸಾಧ್ಯವಾಗದಿದ್ದುದು. ಏಕಾದಶಿ ಅಥವಾ ಸೂತಕದ ಸಮಯದಲ್ಲೂ ಸಹ ಮನೆಯಲ್ಲಿ ಮಾಡಲು ಬೇಕಾದಷ್ಟು ಕೆಲಸಗಳು ಇರುತ್ತಿದ್ದವು. ಮನೆಯವರಿಗೆಲ್ಲಾ ಸ್ನಾನಕ್ಕೆ ನೀರು ಕಾಸಿಕೊಟ್ಟು, ತಿಂಡಿ ಮಾಡಿ, ಕಾಫಿ ಕುಡಿಸುವುದರಲ್ಲಿ ಸಾಕಾಗಿ ಹೋಗುತ್ತಿತ್ತೇನೋ? ಅವುಗಳ ಜೊತೆಯಲ್ಲಿ ಜಾನುವಾರುಗಳಿಗೆ ಬಾಯಾರು ಕೊಡುವುದು, ನಾಯಿ-ಬೆಕ್ಕುಗಳಿಗೆ ಊಟವಿಕ್ಕುವುದು. ಹೀಗೆ ಪ್ರತಿನಿತ್ಯ ಅನೇಕ ಬಾಯಿ ಮತ್ತು ಕೈಗಳಿಗೆ ಉಸಿರಾಗಬೇಕಿತ್ತು, ಉತ್ತರ ಕೊಡಬೇಕಿತ್ತು. ಯಾರೂ ಯಾವತ್ತೂ ಉದಾಸೀನತೆ, ಆಲಸ್ಯಗಳಿಂದಾಗಿ ನಟ್ಟ ನಡುವಿನ ದಿನ ಮಲಗಿದ್ದನ್ನು ನಾನು ನೋಡಿಲ್ಲ!
ಸರಳ ಜೀವನವೇನೋ ಹೌದು, ಆದರೆ ಮುಂಜಾನೆಯಿಂದ ರಾತ್ರಿಯವರೆಗೆ ಒಂದು ಕ್ಷಣವೂ ಬಿಡುವಿರದೇ ದುಡಿದು ದಣಿಯುವ ದಿನಗಳು ಅವರದಾಗಿದ್ದವು. ವಾರದ ದಿನಗಳು, ವಾರಾಂತ್ಯದ ದಿನಗಳಲ್ಲಿ ಕಛೇರಿಗೆ ಹೋಗಿ ಬರುವುದರ ಹೊರತಾಗಿ ಮತ್ತೇನೂ ವ್ಯತ್ಯಾಸವಿರಲಿಲ್ಲ.
***
ಇಂತಹ ಸೋಶಿಯಲಿಸ್ಟಿಕ್ ವ್ಯವಸ್ಥೆಯಲ್ಲಿ ಬೆಳೆದು ಬಂದ ನನಗೆ, ಅಮೇರಿಕಕ್ಕೆ ಬಂದ ಹೊಸತರಲ್ಲಿ ಮೊಟ್ಟ ಮೊದಲನೇ ಬಾರಿಗೆ ಕ್ರೆಡಿಟ್ ಕಾರ್ಡ್ ಬಂದಾಗ ಅದೇಕೆ ಅಷ್ಟೊಂದು ಸಂಭ್ರಮವಾಗಿತ್ತೋ ಗೊತ್ತಿಲ್ಲ. ಆಗ ನಮ್ಮ ಕ್ರೆಡಿಟ್ ಹಿಸ್ಟರಿ ಎಲ್ಲೂ ಇರದ ಸಮಯದಲ್ಲಿ ನಾವೇ ಅಡ್ವಾನ್ಸ್ ಆಗಿ ದುಡ್ಡು ಕೊಟ್ಟು, ನಮ್ಮ ಕ್ರೆಡಿಟ್ ಹಾಗಾದರೂ ಬೆಳೆಯಲಿ ಎಂದು, ಒಂದು ಬಂಗಾರದ ಬಣ್ಣದ ಕ್ರೆಡಿಟ್ ಕಾರ್ಡ್ ಅನ್ನು "ಕೊಂಡಿದ್ದೆವು"! ನಮ್ಮ ರೂಮ್‌ಮೇಟ್‌ಗಳಲ್ಲಿ ನನಗೇ ಮೊದಲು ಅಂತಹ ಕಾರ್ಡ್ ಬಂದಿದ್ದರ ಸಂತೋಷವನ್ನು ಆಚರಿಸಲು, ನಾವೆಲ್ಲರೂ ಒಟ್ಟಿಗೇ ಊಟಕ್ಕೆ ಹೋಗಿ, ಅಲ್ಲಿನ ಬಿಲ್ ಅನ್ನು ನನ್ನ ಹೊಸ ಕಾರ್ಡ್‌ನಲ್ಲಿ ಪಾವತಿಸಿದ್ದು ನನಗೆ ಇನ್ನೂ ಚೆನ್ನಾಗಿ ನೆನಪಿದೆ.
ಡೆಬಿಟ್ ಕಾರ್ಡ್ ಆದ್ದರಿಂದ, ಅದು ಒಂದು ರೀತಿಯ ಸಾಲವಲ್ಲ ಎನ್ನುವ ನಂಬಿಕೆಯಲ್ಲಿ ನಮ್ಮ ಸೋಶಿಯಲಿಸ್ಟಿಕ್ ನೆಲೆಗಟ್ಟಿನ ಮೌಲ್ಯಗಳಿಗೆ ನಾನು ಇನ್ನೂ ಗಟ್ಟಿಯಾಗಿ ಅಂಟಿಕೊಂಡಿದ್ದ ಕಾಲವದು.
ಒಂದು ದಿನ ನಾನು ನನ್ನ ಸಹಪಾಠಿ, ಪಾಕಿಸ್ತಾನದ ಆಲಿ ನಾಕ್ವಿಯ ಜೊತೆಗೆ ಸ್ಟೀವನ್ಸ್ ಇನ್ಸ್‌ಟಿಟ್ಯೂಟ್‌ಗೆ ಕಾರಿನಲ್ಲಿ ಹೋಗುತ್ತಿದ್ದಾಗ ನಾನು ಅವನಿಗೆ ಹೇಳಿದ್ದು ಚೆನ್ನಾಗಿ ನೆನಪಿದೆ. "ಹೀಗೆ ಬಂದು ಸ್ವಲ್ಪ ಕಾಲದಲ್ಲೇ ಮತ್ತೆ ವಾಪಾಸ್ ಹೋಗುವ ನನಗೆ ಯಾವ ಸಾಲದ ಹೊರೆಯೂ ಬೇಕಾಗಿಲ್ಲ. ಕೊನೆಯವರೆಗೂ ಹೀಗೇ ಬಾಡಿಗೆಯ ಮನೆಯಲ್ಲಿ ಇರುತ್ತೇನೆ!" ಎಂಬುದಾಗಿ.
ಅದೇ ದಿನ, ನನ್ನ ಅದೃಷ್ಟವೋ ಕಾಕತಾಳೀಯವೋ ಎಂಬಂತೆ, ಪ್ರೊಫೆಸರ್ ಸ್ಟಾಕರ್ಟ್ ಅವರು, ಫೈನಾನ್ಸಿಯಲ್ ಅನಾಲಿಸಿಸ್ ಮಾಡುತ್ತಾ, ನಾವೆಲ್ಲರೂ ಏಕೆ/ಹೇಗೆ 401Kಯಲ್ಲಿ ಹಣವನ್ನು ತೊಡಗಿಸಬೇಕು, ಎಲ್ಲರೂ ಕಡಿಮೆ ಇಂಟರೆಸ್ಟ್‌ನಲ್ಲಿ ಮಾರ್ಟ್‌ಗೇಜ್ ತೆಗೆದುಕೊಂಡು, ಅದರಿಂದ ಮನೆಯನ್ನು ಕೊಳ್ಳಬೇಕು, ಹಾಗೆ ಮಾಡುವುದರಿಂದ ಟ್ಯಾಕ್ಸ್ ಕೊಡುವುದರಲ್ಲಿ ಹೇಗೆ ಅನುಕೂಲವಾಗುತ್ತದೆ, ಇತ್ಯಾದಿ, ಇತ್ಯಾದಿ... ಹಾಗೆ, ಹಣಕಾಸಿನ ವಿಚಾರಗಳನ್ನು ಕೇಳುತ್ತಲೇ ಅದೇ ದಿನ ಮುಂಜಾನೆ ಮಾಡಿದ ನನ್ನ "ಭೀಷ್ಮ ಪ್ರತಿಜ್ಞೆ" ಗಾಳಿಗೆ ತೂರಿ ಹೋಗಿ, ಅಂದಿನಿಂದ ಕೇವಲ ಮೂರೇ ತಿಂಗಳುಗಳಲ್ಲಿ ನನ್ನ ಮೊದಲ "ಮನೆ"ಯನ್ನು ಖರೀದಿ ಮಾಡಿಯಾಗಿತ್ತು!
ಕೇವಲ 250 ಡಾಲರ್ ಕೊಟ್ಟರೆ ತಿಂಗಳ ಬಾಡಿಗೆ ಮುಗಿದು ಹೋಗುತ್ತದೆ, ಇವತ್ತು ಕೆಲಸವಿದ್ದರೆ ನಾಳೆ ಇಲ್ಲ, ಹೇಳೀ ಕೇಳಿ H1B ವೀಸಾದಲ್ಲಿರುವವರು ನಾವು, ಈ ಮಾರ್ಟ್‌ಗೇಜ್ ಸಹವಾಸ ನಿನಗೇಕೆ? ಎಂದು ನನ್ನ ರೂಮ್‌ಮೇಟ್‌ಗಳು ಹೇಳಿದ್ದನ್ನು ಕೇಳಲಿಲ್ಲ! (ಆಗಿನ ಕಾಲದಲ್ಲಿ ಕಾರ್ ಅನ್ನು ಕ್ಯಾಶ್ ಕೊಟ್ಟು ಕೊಂಡಿದ್ದರೂ, ನನ್ನ ತಿಂಗಳ ಫೋನ್ ಬಿಲ್, ಮನೆಯ ಬಾಡಿಗೆಗಿಂತ ಹೆಚ್ಚು ಇರುತ್ತಿತ್ತು!). ಅಂತೂ-ಇಂತೂ ನಾನೂ ಸಾಲದ ಕೂಪದಲ್ಲಿ ಬಿದ್ದು, ಒಂದಲ್ಲ ಎರಡಲ್ಲ ನೂರು ಸಾವಿರ ಡಾಲರ್ ಸಾಲ ಮಾಡಿ, ಮನೆಯನ್ನು ಕೊಂಡುಕೊಂಡೆ! ಆಗ ಒಂದು ಡಾಲರ್‌ಗೆ 34 ರುಪಾಯಿಯ ಸಮವಿತ್ತು. ಅಂದರೆ, ಏಕ್‌ದಮ್, ಬರೋಬ್ಬರಿ 34 ಲಕ್ಷ ರುಪಾಯಿಯ ಸಾಲ!
ಸುಮಾರು 21 ವರ್ಷಗಳ ಹಿಂದೆ ಆರಂಭವಾದ ಈ ಸಾಲದ ಬಾಬತ್ತು ಯಾವತ್ತಿಗೂ ನೂರು ಸಾವಿರ ಡಾಲರಿಗಿಂತ ಕಡಿಮೆಯಾಗಲೇ ಇಲ್ಲ! ಚಿಕ್ಕ ಮನೆಗಳು ದೊಡ್ಡವಾದಂತೆ, ಚಿಕ್ಕ ಕುಟುಂಬ ದೊಡ್ಡದಾಯಿತು. ಚಿಕ್ಕ ಕಾರುಗಳ ಬದಲು ದೊಡ್ಡ ಕಾರು ಬಂದಿತು... ಅಂತೆಯೇ ನನ್ನ ತಲೆಯ ಮೇಲಿನ ಸಾಲವೂ ದೊಡ್ಡದಾಗುತ್ತಲೇ ಹೋಯಿತು... ವರ್ಷಗಳು ಕಳೆದಂತೆ ಒಂದರ ಮುಂದೆ ಅನೇಕ ಸೊನ್ನೆಗಳು ಸೇರುತ್ತಲೇ ಹೋದವು. ಇವತ್ತಿಗೇನಾದರೂ ನನ್ನ ಒಟ್ಟು ಸಾಲದ ಮೊತ್ತವನ್ನೇನಾದರೂ ನನ್ನ ಹಿರಿಯರು ಬಂದು ನೋಡಿದರೆ, ಅವರೆಂದೂ ನನ್ನನ್ನು ಕ್ಷಮಿಸುವುದಿಲ್ಲ!
ಒಟ್ಟಿನಲ್ಲಿ ನನ್ನ ಪರಿವಾರದಲ್ಲಿ ಯಾರೂ ಮಾಡಿರದ ಸಾಲವನ್ನು ನಾನು ಮಾಡಿದ್ದೇನೆ... ಇನ್ನು ಮುಂದಿನ ತಲೆಮಾರುಗಳು ಹೇಗೋ ಏನೋ... ಸಾಲರಹಿತ ತಲೆಮಾರಿನಿಂದ ಸಾಲದ ತಲೆಮಾರಿಗೆ ದೊಡ್ಡ ಲಂಘನವನ್ನು ಮಾಡಿರುವಲ್ಲಿ ನನ್ನ ಪಾತ್ರ ದೊಡ್ಡದು!
***
ನಮ್ಮ ಸುತ್ತಲೂ ಈಗ ಯಂತ್ರಗಳಿವೆ: ಅಡುಗೆ ಮಾಡಲು, ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ಒಣಗಿಸಲು, ಇಸ್ತ್ರಿ ಮಾಡಲು, ಇತ್ಯಾದಿ. ಇಲ್ಲಿ ನಾವುಗಳು ಹೆಚ್ಚು ಕೈ-ಬಾಯಿಗಳಿಗೆ ಉತ್ತರ ಕೊಡಬೇಕಾಗಿಲ್ಲ... ಹೆಚ್ಚೂ-ಕಡಿಮೆ, ಅಡುಗೆ ಮಾಡುವುದಕ್ಕೆ ಎಷ್ಟು ಸಮಯಬೇಕೋ, ತಿನ್ನುವುದಕ್ಕೂ ಅಷ್ಟೇ ಸಮಯ ಹಿಡಿಯುತ್ತದೆ! ಸಾಲ ದೊಡ್ಡದಿದೆ. ಹೂಡಿಕೆಗಳು ಹಲವಿವೆ. ಆದರೂ, ಮಾರ್ಕೆಟ್‌ನ ತೂಗುಯ್ಯಾಲೆಯಲ್ಲಿ ನಮ್ಮ ನಮ್ಮ ಮನಸೂ ಕನಸೂ ತೂಗುತ್ತಿರುತ್ತವೆ... ಮೊದಮೊದಲ ಕೆಲವು ವಾರಗಳಲ್ಲಿ, ಈ ಕೊರೋನಾ ವೈರಸ್ ದೆಸೆಯಿಂದಾಗಿ, ಮನೆಯಲ್ಲೇ ಕುಳಿತು, ದಿನದ ಮೂರು ಹೊತ್ತು ಅಡುಗೆ ಮಾಡಿ, ಉಂಡು, ತೊಳೆದಿಡುವ ಕಾಯಕ ದೊಡ್ಡದೆನಿಸಿತ್ತಿತ್ತು, ಈಗ ಅದಕ್ಕೂ ಹೊಂದಿಕೊಂಡಿದ್ದಾಗಿದೆ... ಆದರೆ, "ಹಾಸಿಗೆ ಇದ್ದಕ್ಕಿಂತ ಹೆಚ್ಚು ಕಾಲು ಚಾಚುವುದು" ಬದುಕಾಗಿ ಹೋಗಿದೆ. "ಆಳಾಗಿ ದುಡಿಯುವುದು ಇದ್ದರೂ ಅರಸಾಗಿ ಉಣ್ಣುವ" ಸಮಾಧಾನ ಚಿತ್ತ ಇನ್ನೂ ಕಾಣಬಂದಿಲ್ಲ! ಅಂದು ಸಾಲರಹಿತ ಹಿರಿಯರು ಕಣ್ತುಂಬ ನಿದ್ರೆಯನ್ನು ಮಾಡುತ್ತಿದ್ದರೂ, ಮೈ ತುಂಬ ಸಾಲವಿರುವ ನಮಗೆ ಇಂದು ಅನೇಕ ಚಿಂತೆಗಳು ಕೊರಗುವಂತೆ ಮಾಡುತ್ತವೆ... ನಾಳೆ ಹೇಗೋ ಎನ್ನುವ ಬವಣೆ ನಮ್ಮ ನಾಳೆಯನ್ನು ಮರೀಚಿಕೆಯನ್ನಾಗಿ ದೂರದಲ್ಲೇ ಇಡುತ್ತಿದೆ!
ಇಲ್ಲಿ ನಾವಿರುವ ನೆಲ, ನೆಲೆ, ನೆರೆಹೊರೆ, ದೇಶ, ಭಾಷೆ, ಕಂಪನಿಗಳು ಮೊದಲಾದ ಎಲ್ಲವೂ ಕ್ಯಾಪಿಟಲಿಸಮ್ಮಿನಲ್ಲಿ ಮಿಂದು ಪುಳಕಗೊಂಡವುಗಳು... ಇಲ್ಲಿ ಸಾಲವೆಂಬುದು ಶೂಲ ಅಲ್ಲವೇ ಅಲ್ಲ... ಸಾಲದು ಎನ್ನುವುದು ಬೇಕು ಎಂಬುದಕ್ಕೆ ತಾಯಿಯಾದಂತೆ, ನಮಗೆಲ್ಲ ಸಾಲ ಎನ್ನುವುದು ಒಂದು ರೀತಿಯ ತೆವಲಾಗಿ (addiction) ಬಿಟ್ಟಿದೆ... ಇದನ್ನು ಬಿಟ್ಟಿರುವುದು ಸಾಧ್ಯವೇ?