Monday, March 24, 2008

ಮೀನಿನ ತೊಟ್ಟಿ...

ಮೀನಿನ ತೊಟ್ಟಿಯ ಚಿತ್ರ ಒಂದು ವಾರದ ಹಿಂದೆ ನನ್ನ ಆಫೀಸಿನ ಹತ್ತಿರವೇ ಕುಳಿತುಕೊಳ್ಳೋ ಆಡಮ್ ಆಫೀಸಿನ ಗಾಜಿನ ಗೋಡೆಯ ಮೇಲೆ ಹುಟ್ಟಿಕೊಂಡಿದ್ದು ನಮಗೆಲ್ಲರಿಗೂ ಆಶ್ಚರ್ಯ ತರಿಸಿತ್ತು. ಆಡಮ್ ತನ್ನ ಆಫೀಸಿನ ಒಳಗಡೆಯಿಂದ ಗಾಜಿನ ಮೇಲೆ ಚಿತ್ರ ಬರೆದಿದ್ದ, ಉಳಿದವರಿಗೆ ಹೊರಗಡೆಯಿಂದ ತಮಗೆ ಬೇಕಾದ ಅವತರಣಿಕೆಗಳನ್ನು ಸೇರಿಸುವ ಮುಕ್ತ ಅವಕಾಶ ಇತ್ತು. ಗಾಜಿನ ಗೋಡೆಯ ಮೇಲೆ ಎರಡೂ ಕಡೆಯಿಂದಲೂ ಚಿತ್ರಗಳನ್ನು ಬರೆಯಬಹುದು ಎಂದು ನನಗನ್ನಿಸಿದ್ದು ಆಗಲೆ.

ಎರಡು ಮಕ್ಕಳಿರೋ ಆಡಮ್ ತನ್ನ ಚಿತ್ರದಲ್ಲಿ ನಾಲ್ಕು ಗೋಲ್ಡ್ ಫಿಶ್‌ಗಳು, ಅವುಗಳು ಉಸಿರಾಡೋದಕ್ಕೆ ಅನುಕೂಲವಾಗುವ ಹಾಗೆ ಏರ್ ಬಬಲ್ ಬರುವಂತೆ ಜೊತೆಗೆ ಒಂದು ಗಿಡವನ್ನೂ ಅದರ ಪಕ್ಕದಲ್ಲಿ ಬರೆದಿದ್ದ. ನೀರಿನ ಮಟ್ಟವನ್ನು ಸಾಕಷ್ಟು ಎತ್ತರಕ್ಕೆ ಏರಿಸಿ ’ಸ್ವಲ್ಪ ದಿನಗಳಲ್ಲಿ ನೀರು ಬತ್ತಿ ಹೋದರೂ ಅಡ್ಡಿ ಇಲ್ಲ’ ಎಂದಿದ್ದ. ನಾನು ಕೇಳಿದೆ, ’ನಮ್ಮ ಮನೆಯಲ್ಲಂತೂ ಮೇಂಟೆನೆನ್ಸ್‌ಗೆ ಸುಲಭವೆಂದು ಗೋಲ್ಡ್ ಫಿಶ್‌ ಇಟ್ಟಿದ್ದೇವೆ, ಚಿತ್ರದಲ್ಲಾದರೂ ಬೇರೆ ಮೀನುಗಳನ್ನು ಬರೆಯಬಹುದಿತ್ತಲ್ಲ?’ ಎಂದು. ಆಡಮ್ ’That's a good observation...' ಎಂದು ಚಿಕ್ಕದಾಗಿ ಹೇಳಿ ನಕ್ಕು ಬಿಟ್ಟಿದ್ದ. ಆತ ಬರೆದ ಚಿತ್ರ ಕೇವಲ ಒಂದೇ ಒಂದು ಅದರ ಮೂಲ ಸ್ವರೂಪದಲ್ಲಿ ಉಳಿದಿತ್ತು ಎಂದು ಹೇಳಬಹುದು. ಮರುದಿನ ಆತನೇ ಒಂದು ಗಿಡದ ಪಕ್ಕದಲ್ಲಿ ಮತ್ತೊಂದು ಚಿಕ್ಕ ಗಿಡವನ್ನು ಬರೆದ ಹಾಗೂ ಯಾರಿಗಾದರೂ ಸ್ಕೂಬಾ ಡೈವರ್‌ನ ಚಿತ್ರವನ್ನು ಬರೆಯಲು ಬರೆಯುತ್ತದೆಯೇ ಎಂದು ಕೇಳಿದ್ದೂ ಆಯಿತು. ಹೆಚ್ಚಿನ ನಮಗೆ ಬರೋದಿಲ್ಲ ಎಂದು ಹೆಗಲು ಕುಣಿಸಿದೆವು, ಪಕ್ಕದ ಆಫೀಸಿನ ಜೆಫ್ ಬಂದು ಕೇವಲ ಎರಡೇ ನಿಮಿಷಗಳಲ್ಲಿ ಸ್ಕೂಬಾ ಡೈವರ್ ಅನ್ನು ಸೇರಿಸಿಬಿಟ್ಟ. ಜೆಫ್ ಚಿತ್ರ ಬರೆಯೋದಕ್ಕೆ ಮೊದಲು ಸ್ಕೂಬಾ ಡೈವರ್ ಎಂದರೆ ಹೇಗೆ ಬರೆಯಬಹುದು ಎಂದೆಲ್ಲಾ ಯೋಚಿಸಿಕೊಂಡಿದ್ದ ನನಗೆ ಆತ ಚಿತ್ರ ಬರೆದ ಮೇಲೆ ’ಅಯ್ಯೋ ಇಷ್ಟು ಸುಲಭವೇ!’ ಎನ್ನಿಸಿದ್ದು ನಿಜ.

ಮರುದಿನ ಮುಂಜಾನೆ ನೋಡಿದಾಗ, ಅಕ್ವೇರಿಯಮ್ ತಳಕ್ಕೆ ಒಂದೆರಡು ಹಸಿರು ಸ್ಟಿಕ್ಕರುಗಳು ಅಂಟಿಕೊಂಡಿದ್ದವು. ಅದೇ ದಿನ ಮಧ್ಯಾಹ್ನ ಒಂದು ದೊಡ್ಡ ಮೀನಿನ ಮುಖವೂ ಬದಿಯಿಂದ ಎದ್ದು ಕಾಣತೊಡಗಿತ್ತು, ಇನ್ನೇನು ಸಣ್ಣ ಮೀನನ್ನು ನುಂಗಿ ಬಿಡುವ ಹಾಗೆ. ಇದಾದ ತರುವಾಯ ಆಡಮ್ ಹಸಿರು ಗಿಡಗಳ ಎಲೆಗಳ ಸಂಖ್ಯೆಯನ್ನು ಹೆಚ್ಚಿಸುತ್ತ ಹೋದ. ಮುಂದಿನ ದಿನಗಳಲ್ಲಿ ಗಾಜಿನ ತೊಟ್ಟಿಯ ಮೇಲೆ ಮೀನು ಹಿಡಿಯಲು ಗಾಳ ಹಾಕಿ ಕುಳಿತ ಚಿತ್ರವೂ ಹಾಗೂ ಗಾಜಿನ ತೊಟ್ಟಿಗೆ ಅಡಿಯಿಂದ ಬಿಸಿ ಮಾಡುವಂತೆ ಯಾರೋ ಒಬ್ಬರು ಮೊಂಬತ್ತಿ (ಕ್ಯಾಂಡಲ್ಲ್) ಯನ್ನೂ ಹಚ್ಚಿ ಬಿಟ್ಟಿದ್ದರು! ಈ ಚಿತ್ರಕ್ಕೆ ಕೊನೆಯ ಬದಲಾವಣೆ ಎಂಬಂತೆ ಸಣ್ಣ ಮೀನನ್ನು ನುಂಗಲು ಹವಣಿಸುವ ದೊಡ್ಡ ಮೀನಿನ ಬಾಯಿಯಿಂದ ರಕ್ತ ಜಿನುಗಿದ ಹಾಗೆ ಮತ್ತು ದೊಡ್ಡ ಮೀನಿನ ಕಣ್ಣಿರುವ ಜಾಗೆಯಲ್ಲಿ ಒಂದು ಸ್ಮೈಲಿ ಸ್ಟಕ್ಕರ್ರೂ ಪ್ರತ್ಯಕ್ಷವಾದವು.

ಹೀಗೆ ಒಂದು ವಾರದಲ್ಲಿ ಒಳಗಡೆಯಿಂದ ಆಡಮ್ ಚಿತ್ರವನ್ನು ಬೆಳೆಸುತ್ತಾ ಹೋದ ಹಾಗೆ ಹೊರಗಡೆಯಿಂದ ಅದೇ ಗಾಜಿನ ಮೇಲೆ ಅಕ್ಕ ಪಕ್ಕದ ಜನರು ತಮಗೆ ಬೇಕಾದ ’ಎಲಿಮೆಂಟು’ಗಳನ್ನು ಸೇರಿಸುತ್ತಾ ಹೋದರು. ಆಕ್ವೇರಿಯಮ್ ಎನ್ನುವುದು ನಿಜ ಜೀವನದಲ್ಲಿ ಒಂದು ಜೈವಿಕ ವ್ಯವಸ್ಥೆಯೆಂಬಂತೆ ಈ ಗಾಜಿನ ಮೇಲೆ ಬರೆದ ಚಿತ್ರವೂ ಚಿತ್ರದಲ್ಲಿ ಜೀವಂತವಾಗಿಯೇ ಇತ್ತು.

***

ಚಿತ್ರ ಬರೆಯುವವರ ಮನಸ್ಸಿನಲ್ಲಿದೆ ಎಲ್ಲ ಥರದ ಕಲ್ಪನೆಗಳು, ಅವು ದಿನಕ್ಕೆ, ಘಳಿಗೆಗೊಮ್ಮೆ ಬದಲಾಗುವುದು ಸಹಜ. ಜೊತೆಗೆ ನಿಜ ಜೀವನವೂ ಸಹ ನಾನಾ ರೀತಿಯ ಸವಾಲುಗಳನ್ನು ಒಡ್ಡುವುದು ಇದ್ದೇ ಇದೆ. ಒಂದು ಚಿತ್ರದ ವ್ಯವಸ್ಥೆಯಲ್ಲಿ ಹಲವಾರು ಸರಿ ಉತ್ತರಗಳಿವೆ, ಹೀಗೆ ಬರೆದರೆ ತಪ್ಪು ಎಂಬುವುದು ದೂರದ ಮಾತು. ನೀವು ವಾಷಿಂಗ್ಟನ್ ಡಿಸಿಯ ಕಲಾ ಮ್ಯೂಸಿಯಮ್‌ಗಳನ್ನು ನೋಡಿದ್ದರೆ ನಿಮಗೆ ಗೊತ್ತು, ಪುರಾತನ ಚಿತ್ರಕಲೆಯಿಂದ ಹಿಡಿದು ಆಧುನಿಕ (abstract) ಕಲೆಯವರೆಗೆ ಬೇಕಾದಷ್ಟು ವೇರಿಯೇಷನ್ನುಗಳಿಗೆ ಒಳಪಟ್ಟ ಮಾಧ್ಯಮವದು. ಆಕ್ವೇರಿಯಮ್ ಒಂದು ಜೈವಿಕ ವ್ಯವಸ್ಥೆ, ಅದರ ಹಲವಾರು ವಸ್ತುಗಳು ಅದರದ್ದೇ ಆದ ಒಂದು ವಿಶೇಷ ವಾತಾವರಣವನ್ನು (eco system) ಸೃಷ್ಟಿಸುತ್ತದೆ.

ನೀವು ಬರ್ಲಿನ್ ಗೋಡೆಯ ಮೇಲೆ ಉದ್ದಾನುದ್ದಕ್ಕೂ ಜನರು ಥರಾವರಿ ಚಿತ್ರಗಳನ್ನು ಗೋಡೆಯ ಎರಡೂ ಬದಿಗೆ ಜನರು ಬರೆದ ಡಾಕ್ಯುಮೆಂಟರಿಯನ್ನು ನೋಡಿರಬಹುದು, ಆ ಬಗ್ಗೆ ಕೇಳಿರಬಹುದು. ಅದು ಒಂದು ರೀತಿಯ ಓಪನ್ ಕ್ಯಾನ್‌ವಾಸ್ ಇದ್ದ ಹಾಗೆ. ನಮ್ಮ ಆಫೀಸಿನಲ್ಲೂ ಬೇಕಾದಷ್ಟು ಜನರ ಆಫೀಸಿನಲ್ಲೂ ಈ ರೀತಿಯ ದೊಡ್ಡ ಗಾಜಿನ ಗೋಡೆಗಳಿದ್ದರೂ ಕೇವಲ್ ಆಡಮ್ ಮಾತ್ರ ನಾನು ಕಂಡಂತೆ ಮೊದಲ ಬಾರಿಗೆ ತನ್ನ ಬದಿಗಿದ್ದ ಗಾಜಿನ ಮೇಲ್ಮೈ ಮೇಲೆ ಚಿತ್ರ ಬರೆದು ಉಳಿದವರು ಅದಕ್ಕೇನೇನೋ ರೂಪಗಳನ್ನು ಕೊಡುತ್ತಿದ್ದರೂ ಅದನ್ನು ಪುರಸ್ಕರಿಸುತ್ತಿದ್ದ. ಹೀಗೆ ಒಂದು ವಾರ ಕಳೆದ ನಂತರ ನಿನ್ನೆ ನನ್ನ ಕಣ್ಣೆದೆರಿಗೇ ಈ ಚಿತ್ರವನ್ನು ಅಳಿಸಿ ಹಾಕಿದ, ಏಕೆ ಎಂದು ಕೇಳಿದ್ದಕ್ಕೆ ’ಚಿತ್ರ ಬರೆದದ್ದಾಯಿತು, ಅದು ಬೆಳೆದದ್ದೂ ಆಯಿತು, ಈಗ ಅದು ತನ್ನ ಚಾರ್ಮ್ ಕಳೆದುಕೊಂಡಿದೆ’ ಎಂದ. ಅದು ನಿಜವೂ ಹೌದು ಮೊದಮೊದಲು ಈ ಚಿತ್ರದ ಹತ್ತಿರ ಸುಳಿದಾಡುವವರು ಒಂದಲ್ಲ ಒಂದು ರೀತಿಯ ಕಾಮೆಂಟುಗಳನ್ನು ಹಾಕಿ ಹೋಗುತ್ತಿದ್ದರು, ಅನಂತರ ಈ ಚಿತ್ರ ಗೌಣವಾಯಿತು.

***

ನನಗೆ ಆಶ್ಚರ್ಯವಾಗುವಷ್ಟರ ಮಟ್ಟಿಗೆ ಈ ಚಿತ್ರ ಆಫೀಸಿನ ಕ್ರಿಯೇಟಿವಿಟಿಗೆ ಒಂದು ಮಾದರಿಯಾಗಿತ್ತು. ಕೆಲವರು ಮಾರ್ಕರ್ ಪೆನ್ನುಗಳಿಂದ ಚಿತ್ರಕ್ಕೆ ತಮ್ಮದೊಂದು ಕೊಡುಗೆಯನ್ನು ನೀಡಿದ್ದರೆ, ಇನ್ನು ಕೆಲವರು ವರ್ಬಲ್ ಕಾಮೆಂಟುಗಳನ್ನು ಹಂಚಿಕೊಂಡರು. ಕೆಲವರು ಚಿತ್ರವನ್ನು ಬೆಳೆಸಿದರೆ (constructive), ಇನ್ನು ಕೆಲವರು ಅದನ್ನು ಧ್ವಂಸ ಮಾಡಲು ನೋಡಿದರು (destructive). ಜನರ ಸೃಜನಶೀಲತೆ, ಅವರ ಮನಸ್ಸಿಗೆ ಹಿಡಿದ ಕನ್ನಡಿ ಎನ್ನುವುದು ಇಲ್ಲಿ ನನಗಂತೂ ಸ್ಪಷ್ಟವಾಗಿತ್ತು.

Wednesday, March 19, 2008

ಮೀನಿನ ತೊಟ್ಟಿ, ಬದುಕು ಮತ್ತು ಸೃಜನಶೀಲತೆ


ಇದರ ಬಗ್ಗೆ ಲೇಖನ ಬರೀತೀನಿ, ಈ ಚಿತ್ರವನ್ನು ನೋಡಿ ನಿಮಗೇನನ್ನಿಸುತ್ತೋ ಅನ್ನೋದನ್ನ ತಿಳಿಸಿ.

Tuesday, March 11, 2008

ಈ ಮಹಾನುಭಾವರ ಬಗ್ಗೆ ಬರೆಯೋದೇ ತಪ್ಪೇ?

ನಾನು ದಿನನಿತ್ಯದ ವಿದ್ಯಮಾನಗಳ ಬಗ್ಗೆ ಓದಿ ಅವರಿವರು ಮಹಾನುಭಾವರ ಬಗ್ಗೆ ಚಿಂತಿಸಿ ಬರೆಯೋ ಪ್ರಕ್ರಿಯೆ ಹಾಗಿರಲಿ, ಪ್ರಪಂಚದಾದ್ಯಂತ ಯಾರು ಯಾರು ಏನೇನು ಮಾಡುತ್ತಿದ್ದಾರೆ ಎನ್ನೋದನ್ನ ತಿಳಿದುಕೊಳ್ಳೋ ಸವಾಲೇ ಇತ್ತೀಚೆಗೆ ದೊಡ್ಡದಾಗಿ ಕಾಣಿಸ್ತಾ ಇದೆ. ಅಂತಾದ್ದರಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ಯಾರ ಹೆಸರು ಹೆಚ್ಚು ಚರ್ಚೆಗೆ ಒಳಪಡುತ್ತೋ, ನಾವು ದಶಕಗಳಿಂದ ಯಾರನ್ನು ಓದಿ/ನೋಡಿ ಬಲ್ಲೆವೋ ಅವರ ಹೆಸರೇ ಮನಸ್ಸಿನಲ್ಲಿ ಉಳಿಯೋದು ಸಹಜ ಎನಿಸಿಬಿಟ್ಟಿದೆ.

ಹೀಗಿರುವಾಗ, ನನಗಾದ ಇತ್ತೀಚಿನ ಎರಡು ಮಹತ್ತರ ನಿರಾಶೆಗಳನ್ನು ಇಲ್ಲಿ ದಾಖಲು ಮಾಡಬೇಕಾಯಿತು: ಒಂದು ಅಜ್ಞಾತವಾಸದಿಂದ ಹಿಂತಿರುಗಿದ ಬೆನಝೀರ್ ಭುಟ್ಟೋರನ್ನು ವ್ಯವಸ್ಥೆ ಬಲಿ ತೆಗೆದುಕೊಂಡದ್ದು, ಮತ್ತೊಂದು ನಿನ್ನೆ ಹೊರಬಂದ ನ್ಯೂ ಯಾರ್ಕ್ ಗವರ್ನರ್ ಎಲಿಯಟ್ ಸ್ಪಿಟ್ಝರ್ (Eliot Spitzer) ಸುದ್ದಿಯ ಪ್ರಕಾರ ಆತ ವೇಷ್ಯಾವಾಟಿಕೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು. ಅಂದಿನ ನ್ಯೂ ಜೆರ್ಸಿಯ ಗವರ್ನರ್ ಜಿಮ್ ಮಕ್‌ಗ್ರೀವೀ (Jim McGreevey) ಆಗಷ್ಟ್ ೨೦೦೪ ರಲ್ಲಿ ತನ್ನ ಹೋಮೋ ಸೆಕ್ಸ್ಯವಲ್ ಜೀವನ ಶೈಲಿಯನ್ನು ಬಹಿರಂಗ ಪಡಿಸಿ ರಾಜೀನಾಮೆ ಕೊಟ್ಟಿದ್ದರೆ, ನಾಲ್ಕು ವರ್ಷಗಳ ಬಳಿಕ ಎಲಿಯಟ್ ಸ್ಪಿಟ್ಝರ್ ವೇಷ್ಯಾವಾಟಿಕೆಯ ಸುಳಿಗೆ ಸಿಕ್ಕು ರಾಜೀನಾಮೆ ಕೊಡುವ ಸಂದರ್ಭ ಬರುತ್ತದೆ ಎಂದು ನಾನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ.

ಡಲ್ಲಾಸ್ ನ್ಯೂಸ್ ನಲ್ಲಿ ಪ್ರಕಟವಾಗಿರುವ ಈ ಎರಡು ಚಿತ್ರಗಳನ್ನು ನೋಡಿದರೆ ಇದೇನು ಅವರಿಬ್ಬರ ಜೋಡಿಯೂ ಮಾತನಾಡಿಕೊಂಡು ಈ ರೀತಿಯ ಪ್ರೆಸ್ ಕಾನ್‌ಫರೆನ್ಸ್ ಕೊಡುತ್ತಿದ್ದಾರೇನೋ ಅನ್ನಿಸುವುದು ನಿಜ.***

ಭುಟ್ಟೋ ಬಗ್ಗೆ ಬರೆದೆ, ಆಕೆಯನ್ನು ಸಮಾಜ ಆಪೋಷನ ತೆಗೆದುಕೊಂಡಿತು, ಸ್ಪಿಟ್ಝರ್ ಬಗ್ಗೆ ಬರೆದು ಆತ ವಾಲ್ ಸ್ಟ್ರೀಟ್ ದೊರೆಗಳನ್ನು ಕಾಡಿಸಿದ್ದರ ಬಗ್ಗೆ ಬರೆದು ನಿಜವಾಗಿಯೂ ಉತ್ತಮ ಅಡ್ಮಿನಿಷ್ಟ್ರೇಟರ್ ಎಂದು ಹಾಡಿ ಹೊಗಳಿದರೆ ಆತನಿಗೆ ಈ ಸ್ಥಿತಿ ಬಂದಿತು.

ಸ್ಪಿಟ್ಝರ್ ವೇಷ್ಯಾವಾಟಿಕೆಯ ಸುದ್ದಿಗಳ ಹಿಂದೆ ಅದೇನು ಅಡಗಿದೆಯೋ ಆದರೆ ಆತ ಸಾರ್ವಜನಿಕ ಕ್ಷಮೆ ಕೋರಿದ್ದಂತೂ ನಿಜ. ಅಲ್ಲಿಗೆ ಕಥೆ ಮುಗಿದಂತೆಯೇ, ಯಾವೊಬ್ಬ ಪ್ರಸಿದ್ಧ ಹಾಗೂ ಪವರ್‌ಫುಲ್ ರಾಜಕಾರಣಿ ಹಾಗೂ ವ್ಯಕ್ತಿ ದೇಶದ ರಾಜಕಾರಣದಲ್ಲಿ ಮಿಂಚುತ್ತಾನೆ ಎಂದು ಸಮಾಜ ಕನಸು ಕಂಡಿತ್ತೋ ಅದೆಲ್ಲವೂ ನೀರಿನಲ್ಲಿ ತೊಳೆದ ಹೋಮವಾಗಿ ಹೋಯಿತು. ಈ ಸ್ಕ್ಯಾಂಡಲ್ಲನ್ನು ಗೆದ್ದು ಸ್ಪಿಟ್ಝರ್ ಹೊರಬರದೇ ಇರುತ್ತಾನೆಯೇ, ಅಥವಾ ಹಾಗೆ ಹೊರಬಂದರೂ ಸಮಾಜಕ್ಕೆ ಯಾವ ಮುಖವನ್ನು ತೋರಿಸಬಲ್ಲ ಎನ್ನುವುದು ನಿಜವಾಗಿ ಇನ್ನು ಕಾಲ ನಿರ್ಣಯಿಸಬೇಕಾದ ವಿಚಾರ.

***

ಪ್ರೆಸಿಡೆಂಟ್ ಆಗಿದ್ದಾಗ ಬಿಲ್ ಕ್ಲಿಂಟನ್ ಅದೇನೇನನ್ನೋ ಮಾಡಲಿಲ್ಲವೇ ಎಂದು ಪ್ರಶ್ನೆಗಳು ಏಳುವುದು ಸಹಜ - "What I think is what I say, what I say is what I do!" ಎಂದು ಕೆಲವು ತಿಂಗಳುಗಳ ಹಿಂದೆ ಎದೆ ತಟ್ಟಿಕೊಂಡು ನ್ಯೂ ಯಾರ್ಕ್ ಗವರ್ನರ್ ಪಟ್ಟ ಏರಿ ಮುಂದೆ ಮೇಲೆ ಬರಬೇಕಾಗಿದ್ದ ಸ್ಪಿಟ್ಝರ್ ಗೂ ಅಂದಿನ ಪ್ರೆಸಿಡೆಂಟ್ ಕ್ಲಿಂಟನ್ನ್ ಗೂ ಇರೋ ಸವಾಲುಗಳು ಬೇರೆಯವೇ ಅನ್ನೋದು ನನ್ನ ಅಭಿಮತ.

ಒಟ್ಟಿನಲ್ಲಿ ನ್ಯೂ ಯಾರ್ಕ್ ರಾಜ್ಯ, ಹಾಗೂ ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತೊಬ್ಬ ಮುಖಂಡ/ಮುಂದಾಳುವನ್ನು ಕಳೆದುಕೊಂಡಿದೆ. ದಶಕಗಳ ಛಲ, ಮುಂಬರುವ ಪ್ರವೃತ್ತಿ, ಆಶಾವಾದ ಹಾಗೂ ಹಾವರ್ಡ್ ಶಿಕ್ಷಣ ಇವೆಲ್ಲವೂ ಒಂದೇ ಒಂದು ಸುದ್ದಿಯಲ್ಲಿ ತೊಳೆದು ಹೋದ ಹಾಗಿದೆ. ದೇಶದ ರಾಜಕಾರಣ ಒಬ್ಬ ಪ್ರಬುದ್ಧ ಲೀಡರ್‌ನನ್ನು ಇಲ್ಲದಂತಾಗಿಸಿಕೊಂಡಿದೆ.

ಅಮೇರಿಕದಲ್ಲಿ ಜನ ಇತ್ತೀಚೆಗೆ ಸ್ಟಾಕ್ ಮಾರ್ಕೆಟ್ ಸ್ಕ್ಯಾಂಡಲ್ಲುಗಳಲ್ಲಿ (ಎನ್ರಾನ್, ಎಮ್‌ಸಿಐ, ಇತ್ಯಾದಿ) ಬಳಲಿ ತಮ್ಮ ಮುಖಂಡರಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ Integrity (Truthfulness, Honest and Trust worthiness) ಯನ್ನು ನಿರೀಕ್ಷಿಸುವುದು ಸಹಜವೇ. ಇರಾಕ್ ಯುದ್ಧದಲ್ಲಿ ಹಲವಾರು ಸುಳ್ಳನ್ನು ಹೇಳಿದ ಅಡ್ಮಿನಿಷ್ಟ್ರೇಷನ್ನ್ ಬಗ್ಗೆ ಹಲವಾರ ಅಸಮಧಾನವೂ ಇರಬಹುದು. ಇವೆಲ್ಲ ಹಿನ್ನೆಲೆಯಲ್ಲಿ ಸ್ಪಿಟ್ಝರ್ ಭವಿಷ್ಯವನ್ನು ಒರೆ ಹಾಕಿ ನೋಡಿದರೆ ನನಗಂತೂ ಮೂಸೆಯಲ್ಲಿ ಕರಗಿ ಹೊಳೆಯುವ ಬಂಗಾರದ ಬದಲು ಸುಟ್ಟು ಕರಕಲಾದ ಕಟ್ಟಿಗೆಯ ಅವಶೇಷವೇ ಕಾಣುತ್ತದೆ.

ಇನ್ನು ಸ್ಪಿಟ್ಝರ್ ಅನ್ನು ಆತನ ದೇವರೇ ಕಾಪಾಡಬೇಕು!

Friday, March 07, 2008

ವಿಭಕ್ತಿಯ ಬಗೆಗಿನ ಭಕ್ತಿ

ನಿಮಗೆ ಗೊತ್ತಿರಬೇಕಲ್ಲ?

ಪ್ರಥಮಾ - ಉ
ದ್ವಿತೀಯಾ - ಅನ್ನು
ತೃತೀಯ - ಇಂದ
ಚತುರ್ಥಿ - ಗೆ, ಇಗೆ, ಅಕ್ಕೆ
ಪಂಚಮಿ - ದೆಸೆಯಿಂದ
ಷಷ್ಠಿ - ಅ
ಸಂಬೋಧನೆ - ?


ಇತ್ಯಾದಿ...ಅವೇ ಸ್ವಾಮಿ, ವಿಭಕ್ತಿ-ಪ್ರತ್ಯಯಗಳು, ಥ್ಯಾಂಕ್ಸ್ ಟು ನಮ್ಮ ಕನ್ನಡಾ ಟೀಚರ್ಸ್...ಓಂ ಗುರುಭ್ಯೋ ನಮಃ...ಮೇಷ್ಟ್ರೇ ನಿಮಗೇ ಜೋಡಿಸ್ತೀನಿ...

ಯಾಕೆ ಇದರ ಬಗ್ಗೇ ಯೋಚಿಸ್ತಾ ಹೋದೆ ಅಂತಂದ್ರೆ, ಇತ್ತೀಚೆಗೆ ನಮ್ ಹತ್ತಿರದ ಸಂಬಂಧಿಕರ ಮಗಳೊಬ್ಬಳು, ಬೆಂಗ್ಳೂರು ಕನ್ನಡತಿ, ಅವಳ ಜೊತೆ ಮಾತನಾಡ್ತಾ ಇರಬೇಕಾದ್ರೆ ಥಟ್ಟನೆ ಅವಳು ನಮ್ಮ ಕನ್ನಡದ ವಿಭಕ್ತಿ ಪ್ರತ್ಯಯಗಳನ್ನೆಲ್ಲ ಹದಿಹರೆಯದ ಹುಡುಗ್ರು ಹೊಸ ಕಾರಿನಲ್ಲಿ ಸ್ಟಾಪ್ ಸೈನ್‌ಗಳನ್ನು ಎಗುರಿಸಿಕೊಂಡು ಹೋಗೋ ಹಾಗೆ ಹಾರಿಸುತ್ತಿದ್ದಳು. ಅವಳ ಬಳಕೆಯ ಪ್ರಕಾರ, ’ನಮ್ಮ ಅಪ್ಪ ಹತ್ರ ಅದು ಇದೆ, ಅಮ್ಮ ಕಾರು ಹಾಗಿತ್ತು, ತಮ್ಮ ಕೇಳಿ ಹೇಳ್ತೀನಿ’, ಇತ್ಯಾದಿ.

ನಾನು ಏನೂ ಹೇಳೋಕ್ ಹೋಗ್ಲಿಲ್ಲ, ಮತ್ತೇನಾದ್ರೂ ಅವಳು ಬೆಂಗ್ಳೂರು ಕನ್ನಡದಲ್ಲಿ ಬೈದ್ಲೂ ಅಂತಂದ್ರೆ? ಜೊತೆಗೆ ನಾನ್ ಕೇಳೋ ರ್ಯಾಪ್ ರೀತಿಯ ಇಂಗ್ಲೀಷೋ, ದೇವ್ರೇ ನನ್ನನ್ ಕಾಪಾಡ್‌ಬೇಕು. ನನ್ನ ಕಷ್ಟಾ ಏನೂ ಅಂತ ಹೇಳ್ಲೀ ಸ್ವಾಮೀ, ಇತ್ಲಾಗೆ ಈ ಕರಿಯರ (ಆಫ್ರಿಕನ್ ಅಮೇರಿಕನ್ನರ) ರ್ಯಾಪೂ ಅರ್ಥ ಆಗೋಲ್ಲ, ಆ ಕಡೆ ನಮ್ಮ್ ಕನ್ನಡಾ ಹಾಡ್‌ಗಳಲ್ಲಿ ಬರೋ ಇಂಗ್ಲೀಷ್ ಶಬ್ದ, ಸಾಲಿನ ಉಚ್ಛಾರಣೆಗಳೂ ಕೈಗೆ ಸಿಗೋಲ್ಲ!

ವಿಭಕ್ತಿ ವಿಷಯಕ್ಕೆ ಬರೋಣ - ನಮ್ಮ ಕನ್ನಡ ಬಹಳ ಸೊಗಸಾಗಿರೋದು ಇದ್ರಲ್ಲೇ ಅನ್ಸುತ್ತೆ. ನಾವು, ’ಅಪ್ಪನ, ಅಮ್ಮನ, ತಮ್ಮನ...’ ಅಂತೀವಿ, ಆದ್ರೆ ತಂಗಿ ವಿಷಯಕ್ಕೆ ಬಂದಾಗ ’ತಂಗಿಯ’ ಅಂತೀವಿ. (ಅಮ್ಮಂದಿರು, ಅಮ್ಮಗಳ ಬಗ್ಗೆ ಹಿಂದೊಮ್ಮೆ ಬರ್ದಿದ್ದೆ, ಅದು ಬೇರೆ ವಿಷಯ). ’ಅಪ್ಪನ ಹತ್ರ ಕೇಳಿ ನೋಡ್ತೀನಿ’ ಅನ್ನೋದು ಸರಿಯಾದ ಬಳಕೆ, ಅದನ್ನು ಬಿಟ್ಟು ಯಾರಾದ್ರೂ ’ಅಪ್ಪ ಹತ್ರ ಕೇಳ್ತೀನಿ’ ಅಂತಂದ್ರೆ ತಪರಾಕಿ ಹೊಡೀದೇ ಇರೋದಾದ್ರೂ ಹೇಗೆ? ’ತಂಗಿಯ’ ಅನ್ನೋ ಬದಲಿಗೆ ’ತಂಗೀ’ (ದೀರ್ಘ ಗಮನಿಸಿ) ಅನ್ನೋದು ಆಡು ಭಾಷೆಯಲ್ಲಿ ಬರುತ್ತೆ ಅನ್ನಬಹುದು. ಅದಕ್ಕೆ ತಕ್ಕಂತೆ, ’ಅಪ್ಪಾ’, ’ತಮ್ಮಾ’, ’ಅಮ್ಮಾ’ (ದೀರ್ಘ ಸ್ವರದ ಬಳಕೆಗಳು) ಅನ್ನೋದು ಎಷ್ಟರ ಮಟ್ಟಿಗೆ ಸರಿ?

ನಾವು ಇಂಗ್ಲೀಷೋ ಮತ್ತೊಂದು ಭಾಷೆಯನ್ನು ಕಲಿತಾದ ಮಾತ್ರಕ್ಕೆ ನಮ್ಮಲ್ಲಿರುವ ಕೆಲವೊಂದು ವಿಶೇಷವಾದ ಬಳಕೆಗಳನ್ನು ಬಿಡೋದಕ್ಕೆ ಹೇಗೆ ಸಾಧ್ಯ ನೀವೇ ಹೇಳಿ. ನಾವು ಆಫೀಸಿನಲ್ಲಿ ಸುಮ್ಮನೇ ಲೋಕಾಭಿರಾಮವಾಗಿ ಹರಟುತ್ತಿದ್ದಾಗ ನಾನು ’co-brother' ಅನ್ನೋ ಪದವನ್ನು ಬಳಸಿದೆ, ಎಲ್ಲರೂ ’what is that?' ಅನ್ನೋ ಹಾಗೆ ನನ್ನ ಮುಖವನ್ನು ನೋಡಿದ್ರು, ನಾನು ’ನನ್ನ ಹೆಂಡತಿಯ ತಂಗಿಯ ಗಂಡ’ ಎಂದು ಉತ್ತರ ಕೊಟ್ಟೆ (ಷಡ್ಡುಕ, ಷಡ್ಕ, ಸಡ್ಕ ಅನ್ನೋ ಅರ್ಥದಲ್ಲಿ). ಮತ್ತೆ ಹೋಗಿ ಆನ್‌ಲೈನ್ ಡಿಕ್ಷನರಿಗಳನ್ನು ನೋಡಲಾಗಿ ’ಅದು ಕೇವಲ ದಕ್ಷಿಣ ಭಾರತದಲ್ಲಿ ಮಾತ್ರ ಬಳಸೋ ಇಂಗ್ಲೀಷಿನ ಪದ’ವೆಂಬುದಾಗಿ ತಿಳಿಯಿತು. ಹೌದು, ಎಲ್ಲರಿಗೂ ’brother-in-law' ಎಂದು ಕರೆದೋ ’sister-in-law' ಎಂದು ಸಂಬೋಧಿಸಿಯೋ ನಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಳ್ಳಬಹುದು, ಆದರೆ ಷಡ್ಡುಕನೇ ಬೇರೆ, ಬಾವನೆಂಟನೇ ಬೇರೆ, ಸೋದರ ಮಾವನೇ ಬೇರೆ, ದೊಡ್ಡಪ್ಪ-ಚಿಕ್ಕಪ್ಪನೇ ಬೇರೆ, ಇವರೆನ್ನೆಲ್ಲ ಒಂದೋ ಎರಡೋ ಪದಗಳನ್ನು ಬಳಸಿ ತೂಗಲಾದೀತೆ? ಅದಕ್ಕೆ ಬೆಂಗ್ಳೂರಿನ ಕನ್ನಡಿಗರು ’my ಚಿಕ್ಕಪ್ಪಾ is doing this...' ಎಂದು ಕನ್ನಡವನ್ನು ಬಳಸಿದ್ರೆ ನನಗೆ ಖುಷಿ ಆಗುತ್ತೆ ಅಂತ್ಲೇ ನಾನು ಹೇಳೋದು! (ಕೊನೇಪಕ್ಷ ಅವರ ’uncle' ಯಾರು ಅಂತ ಗೊತ್ತಾಯ್ತಲ್ಲ, ಅದಕ್ಕೆ).

***

’ಏನ್ ಸಾರ್ ನಿಮ್ ರಾಮಾಯಣ? ನೀವೇನು ಕನ್ನಡ ಕೊಂಡ್‌ಕೊಂಡೋರ್ ಹಾಗ್ ಆಡ್ತೀರಲ್ಲ? ನಿಮ್ದೊಳ್ಳೇ ರಾಮ ಜನ್ಮ ಭೂಮೀ ಜನ ಹಿಂದೂ ಧರ್ಮವನ್ನು ಕೊಂಡು ಕೊಂಡೋರ ಹಾಗಿನ ಕಥೆ ಆಯ್ತು, ತೆಗೀರಿ ಮತ್ತೆ!’ ಅಂತ ನೀವು ನನಗೆ ತಮಾಷೆ ಮಾಡ್ತೀರಿ ಅಂತ ಗೊತ್ತು. ನಾನು ಯಾವ ವೇದಿಕೆಯನ್ನು ಸೇರ್ತಾ ಇಲ್ಲ, ಕಟ್ತಾ ಇಲ್ಲ, ಏನೋ ನನ್ ಕಣ್ಣಿಗೆ ಕಂಡಿದ್ದನ್ನ ಕಂಡ ಹಾಗೆ ಹೇಳ್ದೆ ಅಷ್ಟೇ.

ನೀವ್ ಬೆಂಗ್ಳೂರ್ ಕನ್ನಡಿಗರಾದ್ರೆ ಓದಿ ನಕ್ಕ್ ಬಿಡಿ, ಇಲ್ಲಾ ನನ್ನ ಹಾಗೆ ಕನ್ನಡ ಮಾಧ್ಯಮದಲ್ಲೇ ಓದಿ ಬೆಳೆದೋರಾದ್ರೆ ಬೇಸ್ರ ಮಾಡ್ಕೋಳ್ ಬೇಡಿ, ಅದೇ ಬದ್ಕು ಅಂದ್ಕೊಂಡು ಸುಮ್ನಾಗಿ ಅಷ್ಟೇ!

ಅಂದ ಹಾಗೆ ನಮ್ಮನೇಲೂ ಒಬ್ರು ಬೆಂಗ್ಳೂರ್ ಕನ್ನಡಿಗರಿದ್ದಾರೆ, ಅವ್ರ ಬಗ್ಗೆ ಇನ್ನೊಮ್ಮೆ ಬರೆದ್ರಾಯ್ತು!

Sunday, March 02, 2008

(ಇನ್ನೂ) ಜೀವಂತ (live) ಕ್ರಿಕೆಟ್

ಇಪ್ಪತ್ತು ವರ್ಷಗಳ ಬಳಿಕವೂ ಅದೇನೇನೆಲ್ಲ ತಂತ್ರಜ್ಞಾನದಲ್ಲಿ ನಾವು ಮುಂದೆ ಹೋಗಿದ್ದರೂ ನನ್ನ ಹಣೇ ಬರಹಕ್ಕೆ ’ಬಾಲ್ ಬೈ ಬಾಲ್’ ಕಾಮೆಂಟರಿಯೇ ಗತಿಯಾಯ್ತು! I can't believe I am (still) doing this - ಬೆಳಿಗ್ಗೆ ಮೂರು ಘಂಟೆಯಿಂದ cricinfo.com ಮುಂದೆ ಕೂತುಗೊಂಡು ಲೈವ್ ಸ್ಕೋರ್ ಕಾರ್ಡ್ ನೋಡ್ತಾ ಇದ್ದೇನೆ, ಮೊದಲ ಆಸ್ಟ್ರೇಲಿಯಾ-ಭಾರತ ಫೈನಲ್ ಮ್ಯಾಚು.

ಉತ್ತಪ್ಪ, ಗಂಭೀರ್ ಔಟಾಗಿ ಹೋದ್ರೂ ನಂತರ ಬಂದ ಯುವರಾಜ್ ತೋರಿಸಿದ ಚಾಕಚಕ್ಯತೆ ಜೊತೆಯಲ್ಲಿ ವೆಟಿರನ್ ತೆಂಡೂಲ್ಕರ್ 50 ರ ಗಡಿ ಮುಟ್ಟಿದ್ದು ಇವೆಲ್ಲ ಇನ್ನೂ ಮ್ಯಾಚ್ ಅನ್ನೂ ಕುತೂಹಲಕಾರಿಯಾಗಿಯೇ ಇಟ್ಟಿವೆ. ಯಾವಾಗಲೂ ಮ್ಯಾಚ್ ನೋಡೋವಾಗ ಅನ್ನಿಸೋ ಹಾಗೆ ಅವರು ಹೀಗೆ ಮಾಡಬೇಕಿತ್ತು, ಹಾಗೆ ಮಾಡಬೇಕಿತ್ತು ಅನ್ಸೋದೇನೋ ನಿಜ, ಜೊತೆಗೆ ಆಸ್ಟ್ರೇಲಿಯಾದವರ ನೆಕ್ಸ್ಟ್‌ ಜನರೇಷನ್ ಕ್ರಿಕೆಟ್ ಎದಿರು ನಮ್ಮವರ ಆಟ ಏನು ನಡೆಯುತ್ತೋ ಅನ್ನೋ ಹೆದರಿಕೆ ಬೇರೆ.

***

ನೀವು ನಿಮ್ಮ ಜೀವನದಲ್ಲಿ ಇದುವರೆಗೆ ರೆಡಿಯೋ ಅನ್ನು ಕಿವಿಗೆ ಆನಿಸಿಕೊಂಡು ಕ್ರಿಕೆಟ್ ಕಾಮೆಂಟರಿ ಕೇಳಿರದಿದ್ದರೆ, ಹಾಗೆ ಮಾಡಿದವರನ್ನು ನೋಡಿರದಿದ್ದರೆ ಈ ಲೇಖನವನ್ನು ನೀವು ಅಪ್ರಿಶಿಯೇಟ್ ಮಾಡ್ತೀರೋ ಇಲ್ಲವೋ ಗೊತ್ತಿಲ್ಲ, ಆದರೆ ನನ್ನ ಅಂತರಾಳದ ಪ್ರಶ್ನೆಯೊಂದಕ್ಕಂತೂ ಇಂದು ಉತ್ತರ ಸಿಕ್ಕಂತಾಗಿದೆ.

ಭಾರತೀಯರು ಬಹಳ imaginative ಅನ್ನೋದು ನಿಜವಲ್ಲದೇ ಇನ್ನೇನು?! ತನ್ನಷ್ಟಕ್ಕೆ ತಾನೇ ಒಂದಿಷ್ಟು ಸೆಕೆಂಡುಗಳಿಗೊಮ್ಮೆ ರಿಫ್ರೆಶ್ ಆಗೋ ಕಂಪ್ಯೂಟರ್ ಪರದೇ ಮೇಲೆ ಅದ್ಯಾರೋ ವೇಗದಲ್ಲಿ ಟೈಪ್ ಮಾಡುತ್ತಿರುವ ಪುಣ್ಯವೆಂಬಂತೆ ನನ್ನ ಮತ್ತು ಕಂಪ್ಯೂಟರ್ ಪರದೆಯ ನಡುವಿನ ಜಾಗದಲ್ಲಿ ವಿಶ್ವ ಕ್ರಿಕೆಟ್ ಪಂದ್ಯವೊಂದು ಅವತರಿಸಿಕೊಳ್ಳುತ್ತಿದೆ. ಈ ಬಾಲ್ ಬೈ ಬಾಲ್ ಕಾಮೆಂಟರಿ, ಅದೂ ಟೆಕ್ಸ್ಟ್ ಮಾಧ್ಯಮದಲ್ಲಿ, ಇದನ್ನ ಅಮೇರಿಕನ್ ಮಾಧ್ಯಮದವರು ಊಹಿಸಿಕೊಳ್ಳುತ್ತಾರೋ ಇಲ್ಲವೋ, ನಾವಂತೂ ನಮ್ಮ ಮನಸ್ಸಿನಲ್ಲಿ ಅದೇನೇನೆಲ್ಲ ನಿರೀಕ್ಷೆಗಳನ್ನು ಕಲ್ಪಿಸಿಕೊಂಡು ಇಡೀ ಮ್ಯಾಚ್ ಅನ್ನೇ ನಮ್ಮ ಮುಂದೆ ತಂದುಕೊಳ್ಳುತ್ತೇವೆ. ಅಗತ್ಯಕ್ಕೆ ತಕ್ಕಂತೆ (ಇಂದಿಗೂ) ನಮ್ಮ ಎದೆ ಬಡಿತ ಹೆಚ್ಚುವುದು ಅಥವಾ ಕಡಿಮೆ ಆಗುವುದು ಇವೆಲ್ಲ ಇಂದು ನಿನ್ನೆಯ ವಿಶೇಷವೇನೂ ಅಲ್ಲ, ಅಲ್ಲವೇ?

***

Dish Network ನವರಿಗೆ 150 ಡಾಲರ್ ಕೊಟ್ಟು ವರ್ಷದ Z-Sports ಚಾನೆಲ್ ಹಾಕಿಸಿಕೊಂಡು ಮನೆಯ ಟಿವಿಯಲ್ಲಿ ಮ್ಯಾಚ್‌ಗಳನ್ನು ನೋಡೋದರಲ್ಲಿ ಮಜವಿದ್ದಿರಬಹುದು, ಅದು ಇನ್ನೂ ನನ್ನ ಮನಸ್ಸನ್ನ ಗೆದ್ದಿಲ್ಲ. ಟ್ವೆಂಟಿ-ಟ್ವೆಂಟಿ ಅಂಥಹ ಮ್ಯಾಚ್‌ಗಳನ್ನಾಗಲೀ, ವರ್ಲ್ಡ್ ಕಪ್ ಪಂದ್ಯಗಳನ್ನಾಗಲೀ ಇಲ್ಲಿನ ಸಿನಿಮಾ ಪರದೆಯ ಮೇಲೆ ನೋಡುವಷ್ಟು ದೂರವಂತೂ ಈ ವರೆಗೂ ಹೋಗಿದ್ದಿಲ್ಲ. ಆದರೆ ಅಪರೂಪಕ್ಕೊಮ್ಮೆ ಹೀಗೆ ಶನಿವಾರವೋ ಭಾನುವಾರವೋ ಬೇಗನೆ ಎದ್ದು ಸ್ಕೋರ್ ಕಾರ್ಡ್ ಅನ್ನು ನೋಡಿಕೊಂಡೋ ಅಥವಾ ಮ್ಯಾಚ್ ಬಗ್ಗೆ ಬರುವ ವರದಿ-ಚಿತ್ರಗಳನ್ನು ನೋಡಿಕೊಂಡೊ ತೃಪ್ತಿಪಟ್ಟುಕೊಂಡಿದ್ದಿದೆ.

ವಿಶೇಷವೆಂದರೆ ಅಮೇರಿಕದಲ್ಲಿ ಇಷ್ಟೊಂದು ವರ್ಷಗಳಿದ್ದಿರೂ ನಾನು ಇಲ್ಲಿನ ಬೇಸ್‌ಬಾಲ್, ಫುಟ್‌ಬಾಲ್ ಮ್ಯಾಚ್‌ಗಳನ್ನು ಟಿವಿ ಮೇಲಾಗಲಿ, ಲೈವ್ ಆಗಲಿ ನೋಡಿದ್ದೇ ಅಪರೂಪವೆನ್ನಬಹುದು. ನಾನು ಈವರೆಗೆ ನೋಡಿರೋದು ಒಂದೇ ಒಂದು ಸೂಪರ್ ಬೋಲ್, ಅದೂ ಎಷ್ಟೋ ವರ್ಷಗಳ ಹಿಂದೆ. ಯಾಕೆ ಹೀಗೆ ಎಂದು ಕೇಳಿಕೊಂಡಾಗಲೆಲ್ಲ ಉತ್ತರ ಸಿಕ್ಕಿರೋದರ ಪ್ರಕಾರ ಇಲ್ಲಿನ ನಮ್ಮ ಆಟ ರಹಿತ ಬದುಕೋ, ನಮಗೆ ಗೊತ್ತಿರದ ರುಚಿಸದ ಪಂದ್ಯಗಳೋ, ಇವಕ್ಕೆಲ್ಲ ಇನ್ನೂ ಹೆಚ್ಚು ಎನ್ನುವಂತೆ ವರ್ಷದ ಆರು ತಿಂಗಳ ಛಳಿಯೋ ಮುಖ್ಯ ಕಾರಣಗಳಾಗಿ ಕಂಡುಬರುತ್ತವೆ. ಬೇಸಿಗೆಯಲ್ಲಿ ನಮ್ಮಲ್ಲಿ ಕ್ರಿಕೆಟ್ ಆಡುವ ಟೀಮುಗಳಿವೆ, ಅಲ್ಲಿಗೆ ಹೋಗಿ ಬಂದು ಮಾಡೋಣವೆಂದುಕೊಂಡರೆ ಲಾಜಿಸ್ಟಿಕ್ ಸಮಸ್ಯೆ - ಆಟಕ್ಕೋಸ್ಕರ ಒಂದು ಇಡೀ ದಿನವೇ ಹಾಳಾಗಿ ಹೋದೀತೇನೋ ಎನ್ನುವ ಹೆದರಿಕೆ.

***

ನಾವೂ ಅಮೇರಿಕನ್ ಆಗಿ ಬಿಡಬಹುದು - ಹೇಳಿದಷ್ಟಂತೂ ಸುಲಭವಿಲ್ಲ. ಬುದ್ಧಿವಂತರ ಮಾತಿನ ನಡುವೆ ಕ್ರಿಕೆಟ್ ಆಟವೆನ್ನುವುದು ಸೋಮಾರಿಗಳ ಆಟವೆಂದು ನಾನು ವಾದಿಸಿದ್ದೇ ಬಂತು. ಸಮಯ ಸಿಕ್ಕಾಗಲೆಲ್ಲ ಆನ್‌ಲೈನ್ ಪೋರ್ಟಲುಗಳಲ್ಲಿ ಅಲ್ಲಲ್ಲಿ ಕಣ್ಣು ವಿಷಯಗಳಿಗಾಗಿ ಹುಡುಕುತ್ತಲೇ ಇರುತ್ತದೆ. ಇತ್ತೀಚಿನ ಆಟಗಾರರ ಜೊತೆ ನಾನು ವೈಯಕ್ತಿಕವಾಗಿ ಯಾವ ರೀತಿಯಲ್ಲಿ ಹೋಲಿಸಿಕೊಳ್ಳದಿರಬಹುದು, ಅವರ ಹೆಸರು, ಚಿತ್ರಗಳು ಗುರುತಿಗೆ ಬರದಿರಬಹುದು, ಆದರೆ ಆ ಆಟದಲ್ಲಿ ಅದೇನೋ ಜೀವಂತಿಕೆ ಇದೆ ಅನ್ನಿಸಿದ್ದು ಸುಳ್ಳಲ್ಲ. ಐದು ದಿನಗಳ ಟೆಸ್ಟ್ ಪಂದ್ಯಗಳನ್ನು ನೋಡುವಷ್ಟರ ಮಟ್ಟಿಗೆ ನನ್ನಲ್ಲಿ ವ್ಯವಧಾನವಿಲ್ಲದಿದ್ದರೂ ಅದರ ಸಾರಾಂಶವನ್ನು ಅದು ನಿಮಿಷ ಓದುವಷ್ಟು ಆಸಕ್ತಿಯಿದೆ. ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಅದ್ಯಾರು ನೋಡುತ್ತಾರಪ್ಪಾ ಎನ್ನಿಸಿದ್ದರೂ ಈಗ ಅವುಗಳಲ್ಲಿ ಸಾಕಷ್ಟು ಒಲವಿದೆ, ಜೊತೆಗೆ ಇತ್ತೀಚಿನ ಟ್ವೆಂಟಿ-ಟ್ವೆಂಟಿ ಅಂತೂ ವೇಗವಾಗಿ ಆಡಬಹುದಾದ ಆಟ ಅನ್ನಿಸಿದೆ.

ನನ್ನ ಸಮ ವಯಸ್ಕ ತೆಂಡೂಲ್ಕರ್ ಇನ್ನೂ ಜೀವಂತವಾಗೇ ಇದ್ದಾನೆ, 65 ಬಾಲ್‌ಗಳಲ್ಲಿ 60 ರನ್‌ಗಳನ್ನು ಸಾಧಿಸಿಕೊಂಡು ಮಾಥ್ಯೂ ಹೇಡನ್‌ಗೆ ಸರಿ ಸಮಾನವಾಗಲಿದ್ದಾನೆ ಎನ್ನೋದು ಈಗ ನಡೀತಾ ಇರೋ ಪಂದ್ಯದಲ್ಲಿ ಒಂದಿಷ್ಟು ಕುತೂಹಲವನ್ನಂತೂ ಇಟ್ಟುಕೊಂಡಿದೆ. ಹೊಸಬರು ಯಾರು ಯಾರೋ ಬಂದು ಹೋದರೂ ನನಗೆ ನನ್ನ ಪರಿಚಯದ anchor ಸಿಕ್ಕೋದನ್ನು ನಾನು ಕಾಯ್ತಾ ಇರ್ತೀನಿ. ರಾಹುಲ್ ಡ್ರಾವಿಡ್, ಕುಂಬ್ಳೆ ಅವರನ್ನೆಲ್ಲ ಮತ್ತೊಮ್ಮೆ ನಾನು ಪರದೆಯಲ್ಲಿ ನೋಡ್ತೀನೋ ಬಿಡ್ತೀನೋ, ತೆಂಡೂಲ್ಕರ್ ’ಔಟ್’ ಆಗೋವರೆಗೆ ಇನ್ನೂ ಈ ಕ್ರಿಕೆಟ್ಟಿನಲ್ಲಿ ಜೀವವಿದೆ ಅನ್ನಿಸೋದು ಈ ಹೊತ್ತಿನ ತತ್ವಗಳಲ್ಲೊಂದು.

ಅದೇ ವಿಶೇಷ ನೋಡಿ - ಎಲ್ಲಿ ನಮ್ಮನ್ನು ನಾವು ಕಂಡುಕೊಳ್ಳುತ್ತೇವೋ ಅಲ್ಲಿ ಆಸಕ್ತಿ ತಂತಾನೇ ಬಂದೀತು, ನಾವೂ ಅಲ್ಲಿಯವರಾದೇವು.