ಭೈರಪ್ಪನವರ ಸ್ಮರಣೆ
ಜೀವನದಲ್ಲಿ ಅನೇಕ ಕಷ್ಟ-ಕಾರ್ಪಣ್ಯಗಳನ್ನೆದುರಿಸಿ, ಅವುಗಳ ಕುಲುಮೆಯಲ್ಲಿ ನೊಂದು, ಬೆಂದು, ಎಲ್ಲ ಆಗುಹೋಗುಗಳ ನಡುವೆಯೇ ಪುಟವಿಕ್ಕಿದ ಚಿನ್ನವಾಗಿ ಹೊರಹೊಮ್ಮಿದವರು.
ಭೈರಪ್ಪನವರ ಕೃತಿಗಳನ್ನು ಓದಿ, ಅವುಗಳ ಅಂತರಾಳವನ್ನು ಕುರಿತು ಯೋಚಿಸುವ ಅಸಂಖ್ಯಾತ ಓದುಗರಲ್ಲಿ ನಾನೂ ಒಬ್ಬ. ಈ ಲೇಖನದ ಮೂಲಕ ಭೈರಪ್ಪ ಎನ್ನುವ ಮಹಾನ್ ಚೇತನದ ಸ್ಮರಣೆಯನ್ನು ಮಾಡುವ ಪ್ರಯತ್ನ ಈ ಲೇಖನದ ಆಶಯ.
***
ನಾನು ಮೊಟ್ಟ ಮೊದಲು ಭೈರಪ್ಪನವರ ಕಾದಂಬರಿಗಳನ್ನು ಓದಲು ಶುರುಮಾಡಿದ್ದು, ನನ್ನ ಶಾಲಾ ದಿನಗಳಲ್ಲಿ. ಆಗೆಲ್ಲಾ ನಮ್ಮ ಮನೆ-ಮನಸ್ಸಿಗೆ ಇನ್ನೂ ಟಿವಿ ನೋಡುವ ಖಾಯಿಲೆ ಅಷ್ಟೊಂದು ಹಿಡಿದಿರಲಿಲ್ಲವಾದ್ದರಿಂದ, ಹೆಚ್ಚಿನ ಮಟ್ಟಿಗೆ ನಮ್ಮ ಮನರಂಜನೆ ಓದುವುದರಿಂದ ಬರುತ್ತಿತ್ತು.
"ದೂರ ಸರಿದರು" ಎನ್ನುವ ಕಾದಂಬರಿಯಲ್ಲೇನಿದೆ ವಿಶೇಷ ಎಂದುಕೊಂಡೇ ಶುರು ಮಾಡಿದ್ದ ನನಗೆ, ಆ ಕಾದಂಬರಿ ಕೊನೆಯವರೆಗೂ ರೋಚಕತೆಯಿಂದ ಓದಿಸಿಕೊಂಡು ಹೋಗಿದ್ದು ವಿಶೇಷ. ಸಚ್ಚಿದಾನಂದ, ವಿನೀತ, ಕುಮಾರ್ ಮತ್ತು ವಸಂತ ಎನ್ನುವ ಮುಖ್ಯ ಪಾತ್ರಗಳ ನಡುವಿನ ಸಂಬಂಧವನ್ನು ತತ್ವಶಾಸ್ತ್ರದ ತಳುಕಿನೊಂದಿಗೆ ಆಪ್ತ ಮತ್ತು ಆಳವಾಗಿ ಬೆಳೆಸುವ ಕತೆ! ಕತೆಯ ಅಂತ್ಯವನ್ನು ತನ್ನ ಟೈಟಲ್‌ನಲ್ಲೇ ಪ್ರಚುರಗೊಳಿಸಿ, ಕತೆಯ ಉದ್ದಕ್ಕೂ ಏಕೆ ಹೀಗೆ? ಮುಂದೇನು? ಎನ್ನುವ ಪ್ರಶ್ನೆಗಳ ಸಹಾಯದಿಂದ ತನ್ನ ಸ್ವಾರಸ್ಯವನ್ನು ಉಳಿಸಿಕೊಳ್ಳುವ ಈ ಕೃತಿ ಎಂಥವರೂ ಓದಲೇ ಬೇಕಾದದ್ದು. ಪ್ರೇಮಕತೆಗಳಿಗೂ ಒಂದು ಪ್ರಬುದ್ಧತೆಯ ಆವರಣದಲ್ಲಿ, ಜಾತಿ-ಧರ್ಮ-ಮನಸ್ಸಿನ ತುಮುಲಗಳ ಸಂಕೀರ್ಣತೆಯಲ್ಲಿ, ಒಂದು ಸುಂದರವಾದ ಚೌಕಟ್ಟನ್ನು ರೂಪಿಸಿದ ಯಶಸ್ವಿ ಪ್ರಯತ್ನ ಈ ಕತೆ.ಈ ಕಾದಂಬರಿಯ ಕೆಲವು ಸಾಲುಗಳು ಹೀಗಿವೆ:
"ಯಾವುದನ್ನು ನಮ್ಮ ಒಳಿತಿಗೆಂದು ಹುಟ್ಟುಹಾಕಿ ಪೋಷಿಸ್ತೀವೋ ಅದೇ ನಮಗೆ ಮುಳ್ಳಾಗುತ್ತೆ. ವಿಚಿತ್ರವೆಂದರೆ, ಅದು ಮುಳ್ಳು ಅಂತ ತಿಳಿದಮೇಲೂ ಅದನ್ನು ಬಿಡಲಾಗದಂತೆ ಮೋಹದ ಸಂಸ್ಕಾರ ಬಲವಾಗುತ್ತೆ"
"ಯಾವ ತತ್ತ್ವವೂ ಇಲ್ಲದೆ ಇರುವ ಸಾಹಿತ್ಯವಾದರೂ ಯಾವುದು? ತತ್ತ್ವಶಾಸ್ತ್ರದ ಆಳವಾದ ಪರಿಚಯ, ದೃಷ್ಟಿಕೋನ ಇಲ್ಲದ ಯಾವ ಬರಹವೂ ನಿಜವಾದ ಸಾಹಿತ್ಯವಾಗಲಾರದು. ಪ್ರಪಂಚದ ದೊಡ್ಡ ದೊಡ್ಡ ಬರಹಗಾರರೆಲ್ಲರೂ ದೊಡ್ಡವರೆನಿಸಿಕೊಂಡಿರುವುದು ಅವರ ಲೇಖನದಲ್ಲಿ - ಕತೆ, ಕವನ, ನಾಟಕ ಯಾವುದೇ ಇರಲಿ, ಕಾಣುವ ಜೀವನದರ್ಶನದಿಂದ. ಜೀವನದರ್ಶನದಿಂದ ಕನ್ನಡಿಯಷ್ಟು ತಿಳಿಯಾಗಿ, ತರ್ಕಬದ್ಧವಾಗಿ ಹೇಳುವುದು ತಾನೇ ತತ್ತ್ವಶಾಸ್ತ್ರವೆಂದರೆ?"
ಹೀಗೆ, ಮನಸ್ಸಿಗೆ ನೇರವಾಗಿ ತಾಕುವ ಇಂತಹ ನುಡಿಗಳಿಂದ ಭೈರಪ್ಪನವರು ಆಪ್ತರಾಗುತ್ತಾರೆ ಮಾತ್ರವಲ್ಲ. ತಮ್ಮ ಜೀವನದರ್ಶನವನ್ನು ತರ್ಕಬದ್ಧವಾಗಿ ಮತ್ತು ಪಾತ್ರಗಳಲ್ಲಿ ಉನ್ಮತ್ತರಾಗಿ ತೊಡಗಿಸಿಕೊಳ್ಳುವ ಬರಹಗಾರನಂತೆ, ಆಯಾ ಪಾತ್ರಗಳನ್ನು ನಮ್ಮಲ್ಲಿ ನಿರಂತರವಾಗಿ ನಿಲ್ಲಿಸಿಬಿಡಬಲ್ಲ ನೈಪುಣ್ಯತೆ ಅವರಲ್ಲಿ ಸಿದ್ಧಿಸಿತ್ತು.
ಈ ಕೃತಿಯನ್ನು ನೀವು ಈಗಾಗಲೇ ಓದಿರದಿದ್ದರೆ, ಅದನ್ನು ಓದಿ ಮುಗಿಸುವಷ್ಟರಲ್ಲಿ, ನೀವು ಭೈರಪ್ಪನವರ ಭಕ್ತರಾಗಿ ಬಿಡುತ್ತೀರಿ.
ಭೈರಪ್ಪನವರ ಎಲ್ಲ ಕಾದಂಬರಿಗಳೂ ಬ್ಲಾಕ್‌ಬಸ್ಟರ್ ಕೃತಿಗಳೇ. ಅವುಗಳಲ್ಲಿ ಈ ಲೇಖನದ ಚೌಕಟ್ಟಿಗೆ ಒಂದಿಷ್ಟು ಆಯ್ಕೆ ಮಾಡಿಕೊಳ್ಳುವುದಾದರೆ, ನನ್ನನ್ನು ಅತಿಯಾಗಿ ಕಾಡಿ, ಹಲವು ಬಾರಿ ಓದುವಂತೆ ಮಾಡಿದ ಈ ಕೃತಿಗಳ ಬಗ್ಗೆ ಹೇಳಲೇಬೇಕು: ದಾಟು, ತಂತು, ಮತ್ತು ಸಾರ್ಥ.
***
ದಾಟು
"ದಾಟು"ವಿನಲ್ಲಿ ಜಾತಿ-ಜಾತಿಗಳ ನಡುವಿನ ಸಂಘರ್ಷಗಳನ್ನು ಸೂಕ್ಷ್ಮವಾಗಿ ಹೊರ ಹಾಕುತ್ತಲೇ ಬದುಕಿನ ಸಂಕೀರ್ಣತೆಯನ್ನ ಕಟ್ಟಿಕೊಡುವ ಹಾಗೂ ಕಾದಂಬರಿಯ ಎಲ್ಲ ಪಾತ್ರಗಳ ನಿಲುವುಗಳಲ್ಲಿ ಓದುಗರನ್ನು ತೊಡಗಿಸಿಕೊಂಡು ಅಷ್ಟೇ ಸಮರ್ಪಕವಾಗಿ ಓದಿಸಿಕೊಂಡು ಹೋಗುವ ಒಂದು ಮಹಾನ್ ಬರಹಗಾರರನನ್ನು ನಾವು ಕಾಣಬಹುದು.
ಕಥಾನಾಯಕಿ ಸತ್ಯಾಳ ಪಾತ್ರ, ಆಕೆಯ ವೈಚಾರಿಕತೆ, ಅವಳ ಪ್ರಬುದ್ಧತೆ ನಿಮ್ಮನ್ನು ಸಾಕಷ್ಟು ಯೋಚಿಸುವಂತೆ ಮಾಡುತ್ತದೆ. ಹಾಗೂ ನಿಮಗೆ ಹಲವು ವರ್ಷಗಳ ಕಾಲ ಆ ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ. ಸತ್ಯಾಳ ಪಾತ್ರವನ್ನು ಕೇಂದ್ರದಲ್ಲಿಟ್ಟುಕೊಂಡು ಶ್ರೀನಿವಾಸ, ವೆಂಕಟರಮಣಯ್ಯ, ವೆಂಕಟೇಶ, ಮೀರಾ, ಬೆಟ್ಟಯ್ಯ ಮೊದಲಾದ ಪಾತ್ರಗಳ ಮೂಲಕ ಜಾತಿ, ರಾಜಕೀಯ, ಅಧಿಕಾರ ಪ್ರವೃತ್ತಿ, ಕ್ರಾಂತಿ, ಕಾಮ ಹೀಗೆ ಮೊದಲಾದ ಮೂಲ ಅಂಶಗಳ ಮುಖೇನ ಓದುಗರ ಮನಸ್ಸಿನ ತಳಪಾಯವನ್ನು ಅಲ್ಲಾಡಿಸಿ ಬಿಡುತ್ತಾರೆ. ಜಾತಿಗಳ ಸಂಕೋಲೆಗಳಲ್ಲಿ ಜನಜೀವನ, ಮಾನವೀಯತೆ, ಅಂತಃಕರಣ, ಸಾಮಾಜಿಕ ಕಳಕಳಿ ಜೊತೆಗೆ ವೆಂಕಟರಮಣಯ್ಯ ಹೇಳುವ "ಪ್ರಳಯ"ದ ಹೆದರಿಕೆಯಿಂದ ನಿಮ್ಮನ್ನು ನಿಮ್ಮ ಮೂಲಕ್ಕೆ ಕರೆದೊಯ್ಯುತ್ತಾರೆ.
ನನ್ನನ್ನು ಅತಿಯಾಗಿ ಕಾಡಿದ ವೆಂಕಟರಮಣಯ್ಯನವರ ಒಂದು ಮಾತು ಹೀಗಿದೆ: "ಪ್ರವಾಹದ ನೀರಿನಲ್ಲಿ ಬಿಂಬವೂ ಇಲ್ಲ, ಬಿಂಬಿಯೂ ಇಲ್ಲ!"
ಈ ಮಾತನ್ನು ಕುರಿತು ಒಂದು ನಿಮಿಷ ಯೋಚಿಸಿ, ಅದೆಷ್ಟು ಆಲೋಚನಾ ಲಹರಿಗಳು ನಿಮ್ಮ ಮನಸ್ಸನ್ನು ತುಂಬಿಕೊಳ್ಳುತ್ತವೆ ಎಂದು ನೀವೇ ಊಹಿಸಿ.
***
ತಂತು
ಕಾದಂಬರಿಯಲ್ಲಿ ವ್ಯವಸ್ಥಿತವಾಗಿ ಪೋಷಿಸಿಕೊಂಡ ಪಾತ್ರಗಳ ಕಾರಣದಿಂದ, ನನ್ನನ್ನು ಬಹುವಾಗಿ ಕಾಡಿದ ಮತ್ತೊಂದು ಕೃತಿ: "ತಂತು". ಇಷ್ಟು ದೊಡ್ಡ ಕಾದಂಬರಿಯೇ ಎಂದು ಸುಮಾರು ೯೦೦ ಪುಟಗಳಿರುವ ಕಾದಂಬರಿಯನ್ನು ಕೈಗೆತ್ತಿಕೊಂಡರೆ, ಕೆಳಗಿಡಲು ಮನಸ್ಸೇ ಬಾರದು. ಅಷ್ಟೇ ಅಲ್ಲ, ಈ ಕಾದಂಬರಿಯ ಕಥಾನಾಯಕ ಹೇಮಂತ್, ನಿಮ್ಮ ಜೀವನದುದ್ದಕ್ಕೂ ಒಬ್ಬ ಸ್ನೇಹಿತನಾಗುತ್ತಾನೆ, ಜೊತೆಗೆ ನಿಮ್ಮ ಸೂಕ್ಷ್ಮ ಮನಸ್ಸಿನ ತಳಮಳಗಳಿಗೆ ಸಾತ್ ಕೊಡುತ್ತಾನೆ, ಖಂಡಿತ. ರವೀಂದ್ರ, ಕಾಂತಿ, ಹೇಮಂತ್, ಅನೂಪ್, ಶೀತಲ್, ರಾಮಭಟ್ಟರು ನಿಮ್ಮನ್ನು ಖಂಡಿತವಾಗಿ ಯೋಚಿಸುವಂತೆ ಮಾಡುತ್ತಾರೆ.
ಇದರಲ್ಲೂ ಸಹ ರಾಜಕೀಯವಿದೆ, ಆದರೆ ಇಲ್ಲಿ ಮುಖ್ಯವಾಗಿ ಹೇಳಲು ಹೊರಟಿರುವುದು ವೈಚಾರಿಕ ಸಂಕೋಲೆಯ ಬಗ್ಗೆ, ಯಾವುದು ಸರಿ, ಯಾವುದು ತಪ್ಪು ಎನ್ನುವುದರ ಬಗ್ಗೆ. ಈ ಪುಸ್ತಕವನ್ನು ಅನಿವಾಸಿ ಭಾರತೀಯರು ಓದಿದರೆ ಹೊಸದೊಂದು ಅರ್ಥವೇ ಬಂದೀತು. ಆಗಿನ ಭಾರತದ ರಾಜಕೀಯ,ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಸಮಗ್ರ ಚಿತ್ರಣವಷ್ಟೇ ಅಲ್ಲ, ಡಾಲರು-ರೂಪಾಯಿಯ ಪರಸ್ಪರ ಸಂಬಂಧಗಳು ಬಗ್ಗೆ ಕೂಡ ಗೊತ್ತಾಗುತ್ತದೆ.
ಪುಸ್ತಕದ ಹೆಸರೇ ಹೇಳುವಂತೆ, ಜೀವನವೊಂದು ತಂತು’, ಅದರಲ್ಲಿನ ಗೊಂದಲ, ಗೋಜಲುಗಳನ್ನು ಮತ್ತು ಸವಾಲುಗಳನ್ನು ನಾವು ನಾವೇ ಸ್ವೀಕರಿಸಬೇಕು, ನಿರ್ವಹಿಸಬೇಕು ಕೂಡ. ಯಶಸ್ಸಿನ ಹಿಂದೆ ಓಡುವ ನಮ್ಮ ಮನಸ್ಸು ಸದಾ ಸರಿ-ತಪ್ಪುಗಳ ಗೊಂದಲದಲ್ಲಿ ಸಿಲುಕುವುದು ಸಹಜ. ಪ್ರತಿಯೊಂದು ಪಾತ್ರದ ನಿರ್ಣಯದ ಹಿಂದೆಯೂ ಅದರದ್ದೇ ಆದ ಒಂದು ಚಿಂತನೆ, ತಪ್ಪು-ಸರಿಗಳ ವಿಚಾರವಿರುತ್ತದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಒಂದು ಸಮಜಾಯಿಷಿ ಇರೋದು ಸಹಜ. ನಮ್ಮ ಚಿಂತನೆಗಳು, ವಿಚಾರಗಳು, ಹಾಗೂ ನಿರ್ಣಯಗಳಿಗೆ ನಾವು ಬಾಧ್ಯರು. ಈ ಎಲ್ಲದರ ಸಾರ ಮತ್ತು ಅವುಗಳು ನಮ್ಮ ಮನಸ್ಸಿನಲ್ಲಿ ತಂದೊಡ್ಡುವ ಸಂಘರ್ಷಣೆಗಳ ಒಟ್ಟು ಮೊತ್ತವೇ ತಂತು.
ಸಂಬಂಧಗಳನ್ನು ಕುರಿತು ಹೀಗೊಂದು ಮಾತು ಬರುತ್ತದೆ: "...ಹಾಗೇ ನೇರವಾದ ಕಾಲುವೆಯ ಮಾರ್ಗವಿಡಿದು ಸಂಯಮದಿಂದ ನೀರಿಗೆ ಆಸೆಯಿದ್ದರೂ, ಮಹಾನದಿಯಲ್ಲಿ ಬೆರೆತು ಯಾವುದೋ ಹುಚ್ಚು ಸೆಳೆತಕ್ಕೊಳಗಾಗಿ ಬೇರೆಯದೇ ಆದ ನಿಯಂತ್ರಣಾತೀತವಾದ ದಾರಿಯಲ್ಲಿ ಹೊತ್ತೊಯ್ಯಲ್ಪಟ್ಟು ಎಲ್ಲಿಯೋ ನಿರ್ದಯವಾಗಿ ಹರಿದು ಎಲ್ಲಿಯೂ ನಿಲ್ಲಲಾಗದೇ ಸಮುದ್ರದ ತೆಕ್ಕೆಗೂ ಸಿಗುವ ಮೊದಲೇ ಇಲ್ಲವಾಗುತ್ತದೆ"
ನಮ್ಮ ಖಾಸಗೀ ವ್ಯಸ್ತ ಜೀವನದ ಬಗ್ಗೆ: "ಖಾಸಗಿ ಉದ್ಯಮಗಳಲ್ಲಿ ಜವಾಬ್ದಾರಿಯ ಕೆಲಸಗಳಿರುತ್ತವಲ್ಲ, ದೊಡ್ಡ ಸಂಬಳ, ಕಾರು, ಬಂಗಲೆ, ಆಳುಗಳನ್ನು ಕೊಡೊ ನೌಕರಿ, ನಮ್ಮ ಆಯುಷ್ಯದ ಸಮಸ್ತವನ್ನೂ, ದೇವರ ಪೂಜೆಯ ಸಮಯವನ್ನು, ರಾತ್ರಿ ಕನಸು ಕಾಣುವ ಚಿತ್ತಶಕ್ತಿಯನ್ನು ಖರೀದಿಸಿ ಬಿಟ್ಟಿರ್ತವೆ."
ಜನಮಾನಸ, ಜನಜಾಗೃತಿಯ ಬಗ್ಗೆ ಪ್ರತಿಯೊಬ್ಬ ಮುಖಂಡನೂ ಚಿಂತಿಸಬೇಕಾದ ಮಾತು: "ಜನಗಳಲ್ಲಿ ದೊಡ್ಡಭಾವನೆ ಬಿತ್ತಿ ಬೆಳೆಸೋದು ಕಷ್ಟ. ಹೀನಭಾವನೆ ಪ್ರಚೋದಿಸೋದು ಸುಲಭ."
ನಮ್ಮ ವೃತ್ತಿಪರ ಬದುಕಿನ ಬಗ್ಗೆ: "ಹೆಚ್ಚು ಲಂಚ ಸಿಕ್ಕುವ, ಹೆಚ್ಚು ಕೊಕ್ಕೆ ಹಾಕುವ ಅವಕಾಶವಿರುವ ಇಲಾಖೆಯಲ್ಲಿದ್ದವನಿಗೆ ಹೆಚ್ಚು ಘನತೆ ಗೌರವ ಅಂತ ಅಧಿಕಾರ ವರ್ಗದಲ್ಲಿ ಮಾತ್ರವಲ್ಲ, ಜನಸಾಮಾನ್ಯರಲ್ಲೂ ಭಾವನೆಯಿದೆ. ಕೊಕ್ಕೆ ಹಾಕಿದಷ್ಟು ಜನ ಬಂದು ಕೈಮುಗಿಯುತ್ತಾರೆ. ಈ ಕೈ ಮುಗಿಸಿಕೊಳ್ಳುವ ಬಯಕೆ, ಲಂಚದ ಆಶೆ ಇವೆರಡೂ ಇಲ್ಲದಿದ್ದರೆ ಕಾರ್ಯದರ್ಶಿ, ಜಾಡಮಾಲಿ ಎರಡೂ ಒಂದೇ ಕೆಲಸ. ಸಂಬಳದ ವ್ಯತ್ಯಾಸ, ಬುದ್ಧಿಶಕ್ತಿಯ ಅನ್ವಯಗಳನ್ನು ಬಿಟ್ಟರೆ."
ಜೀವನವನ್ನ ಒಂದೇ ಒಂದು ಸಾಲಿನಲ್ಲಿ ಸರಳವಾಗಿ ವಿವರಿಸುವ ಮಾರ್ಮಿಕವಾದ ಸಾಲು:
"ಎಷ್ಟೇ ಸಂಪಾದನೆ ಮಾಡಿರಲಿ, ಎರಡು ಚಪಾತಿ, ಎರಡು ಹಿಡಿ ಅನ್ನಕ್ಕಿಂತ ಒಂದು ಸಲಕ್ಕೆ ಹೆಚ್ಚು ತಿನ್ನಕ್ಕೆ ಆಗಲ್ಲ, ಒಟ್ಟಿಗೆ ಎರಡು ಶರಟು ಹಾಕುಕ್ಕೆ ಆಗಲ್ಲ, ಒಂದೇ ಸಲ ಎರಡು ಕಾರಿನಲ್ಲಿ ಕೂಡಕ್ಕೆ ಆಗಲ್ಲ, ಅಂತ ಅರ್ಥಮಾಡಿಕೊಂಡರೆ ದುರಾಸೆ ತನಗೆ ತಾನೇ ಇಳಿದು ಹೋಗುತ್ತೆ"
"ಆದರ್ಶವಿಲ್ಲದ ಬದುಕು, ದಿಕ್ಕಿಲ್ಲದ ಸಾಗಣೆ."
"ಸಂಸ್ಕೃತಿಯ ನಾಶವು ಶತ್ರುಗಳಿಂದ ಆಗುವುದಿಲ್ಲ; ಅದು ಒಳಗಿನ ನಿರ್ಲಕ್ಷ್ಯದಿಂದ ಆಗುತ್ತದೆ."
"ಬಾಹ್ಯ ಶಿಷ್ಟಾಚಾರವಿದೆ, ಆದರೆ ಒಳಗಿನ ನೈತಿಕತೆ ಇಲ್ಲ."
"ಅರ್ಧ ಸತ್ಯವೂ ಪೂರ್ತಿ ಸುಳ್ಳಿಗಿಂತ ಹೀನವಾದದ್ದು"
"ಮೌಲ್ಯಗಳು ಕುಸಿದಾಗ, ಶಿಕ್ಷಣವೂ ರಾಜಕೀಯವೂ ಕೇವಲ ವಾಣಿಜ್ಯವಾಗುತ್ತವೆ."
***
ಸಾರ್ಥ
ಇನ್ನು ಸಾರ್ಥ"ದ ವಿಚಾರಕ್ಕೆ ಬಂದರೆ, ತಂತುವಿನಂತಹ ದಪ್ಪ ಪುಸ್ತಕವನ್ನು ಓದಿ, ಅಯ್ಯೋ ಸಾರ್ಥವೇನು ಚಿಕ್ಕ ಪುಸ್ತಕ ಬೇಗ ಓದಿ ಮುಗಿಸಿಬಿಡಬಹುದು ಎಂದು ಯೋಚಿಸಿ ಬಿಟ್ಟೀರ, ಹಾಗೆ ಖಂಡಿತ ಆಗದು.
ಈ ಕೃತಿಯ ಮೂಲಕ ಭೈರಪ್ಪನವರು ನಮ್ಮನ್ನು ೮ನೇ ಶತಮಾನಕ್ಕೆ ಕರೆದೊಯ್ಯುತ್ತಾರೆ. ಆಗ ಜನರು ಹೇಗಿದ್ದರು, ಹೇಗೆ ವ್ಯವಹರಿಸುತ್ತಿದ್ದರು. ಮೇನೆ, ಸಾರ್ಥಗಳ ಮೂಲಕ ಹೇಗೆ ಪ್ರಯಾಣಿಸುತ್ತಿದ್ದರು ಎನ್ನುವುದನ್ನು ಒಂದು ಐತಿಹಾಸಿಕ ಕಥನವಾಗಿ ಓದುಗರಿಗೆ ಮನಮುಟ್ಟುವಂತೆ ಕಟ್ಟಿಕೊಟ್ಟಿರುವುದು ಒಂದು ಕಡೆ. ಮತ್ತೊಂದು ಕಡೆ ನಾಗಭಟ್ಟ, ಮಂಡನ ಮಿಶ್ರರು, ಕುಮಾರಿಲ ಭಟ್ಟರು, ಭಾರತೀ ದೇವಿ, ಶಿಲ್ಪಿ (ಹೆಸರು) ಇವರೆಲ್ಲರ ಮೂಲಕ ಬದುಕಿನ ಮತ್ತೊಂದು ಮುಖವನ್ನು ಹೊರಹಾಕುತ್ತಾರೆ. ನಾಗಭಟ್ಟನ ಮನಸ್ಸಿನಲ್ಲಿ ಸಮಯದಿಂದ ಸಮಯಕ್ಕೆ ಏಳಬಹುದಾದ ಪ್ರಶ್ನೆಗಳಿಗೆಲ್ಲವೂ ಇಲ್ಲಿ ಉತ್ತರವಿದೆ. ಒಂದು ಚಟ, ಹವ್ಯಾಸ, ಮನದಾಸೆಯನ್ನು ಪೋಷಿಸಿಕೊಂಡು ಹೋಗುವ ಕ್ಲುಪ್ತ ಮನಸ್ಸಿಗೂ ಇಲ್ಲಿ ಒಂದು ಆಸರೆ ಇದೆ. ಧ್ಯಾನದ ಬಗ್ಗೆ, ಬೌದ್ಧ ಧರ್ಮದ ಬಗ್ಗೆ, ನಮ್ಮ ಪುರಾತನ ವಿಶ್ವವಿದ್ಯಾನಿಲಯಗಳ ಬಗ್ಗೆ, ಆಗಿನ ಭರತ ಖಂಡದಲ್ಲಿ ನಡೆಯುತ್ತಿದ್ದ ಧರ್ಮ-ಕಾಮದ ಚರ್ಚೆಗೆಳ ಬಗ್ಗೆ ಸಾಕಷ್ಟು ವಿಷಯಗಳನ್ನು ಸಾರ್ಥ ಒಂದರಲ್ಲಿ ಕಲೆಹಾಕಬಹುದು.
ನಾವು ಸಾರ್ಥದ ಮೂಲಕ ನಮ್ಮ ಹಿಂದಿನ ತಲೆಮಾರಿನ ಜೀವನಶೈಲಿಯ ಬಗ್ಗೆ ತಿಳಿದುಕೊಳ್ಳುವುದಷ್ಟೇ ಅಲ್ಲ, ಅದರ ಜೊತೆಗೆ ನಮ್ಮ ಇಂದಿನ ತಳಮಳ-ತುಮುಲಗಳನ್ನು ಅಂದಿನ ವ್ಯವಸ್ಥೆಯ ಜೊತೆಗೆ ಹೋಲಿಸಿಕೊಳ್ಳಲೂ ಬಹುದು.
ಭೈರಪ್ಪನವರು ಈ ಕೃತಿಯಲ್ಲಿ ಮನಸ್ಸಿನ ಹಿಂದೆ ನಡೆಯುವ ಗೊಂದಲಗಳನ್ನು ವಿಶೇಷವಾಗಿ ಚಿತ್ರಿಸಿದ್ದಾರೆ. ನಾಗಭಟ್ಟನ ಮನದಲ್ಲಿ ನಡೆಯುವ ಆಲೋಚನಾ ವ್ಯಾಪಾರಗಳು ಅನೇಕರನ್ನು ತಮ್ಮ ವಿಚಾರ-ವಿಮರ್ಶೆಯ ಜೊತೆಗೆ ತಳುಕು ಹಾಕಿಕೊಳ್ಳುವಂತೆ ಮಾಡುವುದು ಈ ಕೃತಿಯ ವಿಶೇಷ ಎನ್ನಬಹುದು.
"ಧರ್ಮದ ತಾತ್ವಿಕತೆಯು ತರ್ಕದಿಂದ ಬೆಳೆಯುತ್ತದೆ; ಭಕ್ತಿಯಿಂದ ಮಾತ್ರವಲ್ಲ."
"ಸಾರ್ಥವೆಂದರೆ ಹೊರಗಿನ ಪ್ರಯಾಣವಷ್ಟೆ ಅಲ್ಲ; ಅದು ಆತ್ಮದೊಳಗಿನ ಯಾತ್ರೆಯೂ ಹೌದು."
"ಜ್ಞಾನವು ಬೆಳೆಯಬೇಕಾದರೆ ಅಹಂಕಾರ ಕುಗ್ಗಬೇಕು."
"ಶಿಲ್ಪಿಯ ಕೈಯಲ್ಲಿ ಕಲ್ಲು ಜೀವ ಪಡೆಯುತ್ತದೆ. ಪ್ರತಿ ಹೊಡೆತವು ಕೇವಲ ತಾಂತ್ರಿಕವಲ್ಲ; ಅದು ಶಿಲ್ಪಿಯ ಆತ್ಮದ ಸ್ಪಂದನೆ. ಕಲ್ಲಿನೊಳಗಿನ ರೂಪವನ್ನು ಹೊರತೆಗೆಯುವುದು ಕಲೆಯಲ್ಲ, ತಪಸ್ಸು."
***
ಭೈರಪ್ಪನವರ ಕೃತಿಗಳೇ ಹಾಗೆ; ಭಿತ್ತಿಯನ್ನೂ ಸೇರಿ ಅವರು ಬರೆದಿರುವ ಕಾದಂಬರಿಗಳು 24, ಅವುಗಳಲ್ಲಿ ಹತ್ತು ಕೃತಿಗಳ ಟೈಟಲ್ ಕೇವಲ ಎರಡೇ ಅಕ್ಷರಗಳು. ಕೃತಿಗಳ ಕಾನ್ಸೆಪ್ಟ್ ಸರಳ, ಆದರೆ ಅವುಗಳನ್ನು ಸಂಶೋಧಿಸಿ, ಆಯಾ ಕಥನಗಳ ಬಗ್ಗೆ ಯಾವೊಂದು ಯೂನಿವರ್ಸಿಟಿಯಲ್ಲೂ ಸಿಗದಷ್ಟು ವಿಷಯ-ವಸ್ತುಗಳನ್ನು ಸಂಗ್ರಹಿಸಿ, ಅವುಗಳ ಸಹಾಯದಿಂದ ಇತಿಹಾಸ-ಕತೆ-ಚಿಂತನೆಗಳ ಪೋಷಣೆಯನ್ನು ಒದಗಿಸಿಕೊಡಬಲ್ಲವರು ಭೈರಪ್ಪನವರು ಮಾತ್ರ.
ಭೈರಪ್ಪನವರು ಕನ್ನಡದ ಕಾದಂಬರಿಕಾರರು ಮಾತ್ರವಲ್ಲ. ಅವರ ಕೃತಿಗಳು ಭಾರತೀಯ ಭಾಷೆಗಳಲ್ಲಿ ತರ್ಜುಮೆಗೊಂಡಿವೆ (ಎಷ್ಟು ಕೃತಿಗಳು ಇಂಗ್ಲೀಷನ್ನೂ ಸೇರಿ, ಎಲ್ಲಾ ಭಾರತೀಯ ಭಾಷೆಗೆ ಅನುವಾದಗೊಂಡಿವೆ?) ಓದುಗರು ತಮ್ಮ ಮನ-ಮನೆಗಳಲ್ಲಿ, ಭೈರಪ್ಪನವರಿಗೆ ಕೊಟ್ಟಿರುವ ಸ್ಥಾನ-ಮಾನವನ್ನು ಊಹಿಸಿಕೊಂಡರೆ, ಈ ರೀತಿಯ "ಯಶಸ್ಸು" ಕನ್ನಡದ ಮತ್ಯಾವುದೇ ಕಾದಂಬರಿಕಾರರಿಗೆ ದೊರೆತಂತಿಲ್ಲ.
ಭೈರಪ್ಪನವರು ಭೌತಿಕವಾಗಿ ಇಲ್ಲವಾಗಿರಬಹುದು. ಆದರೆ, ತಮ್ಮ ಕೃತಿಗಳಿಂದ ಅವರು ಜನಮಾನಸದಲ್ಲಿ ಇನ್ನೂ ಹತ್ತು-ಹಲವು ತಲೆಮಾರುಗಳ ಮಟ್ಟಿಗೆ ಖಂಡಿತವಾಗಿ ಜೀವಿತರಾಗಿರುತ್ತಾರೆ.
ಈ ಮಹಾನ್ ಲೇಖಕನ ಬಗ್ಗೆ ಯೋಚಿಸಿಕೊಂಡರೇ ಅವರ ಕೃತಿಗಳು, ಪಾತ್ರಗಳು, ವ್ಯವಸ್ಥೆಯ ವಸ್ತು ಚಿತ್ರ ಮತ್ತು ಪ್ರತಿಯೊಂದು ಹಂತದ ವಿವರಗಳೂ ಕಣ್ಣ ಮುಂದೆ ಬರುತ್ತವೆ. ಇದಕ್ಕಾಗಿ ಒಂದು ಚಿಕ್ಕ ಉದಾಹರಣೆಯನ್ನು ಕೊಡುವುದಾದರೆ, "ಅನ್ವೇಷಣ" ಕಾದಂಬರಿಯಲ್ಲಿ ದರ್ಜಿ, ತನ್ನ ಬಟ್ಟೆ ಹೊಲೆಯುವ ಮಿಷನ್ ನಿಂದ ಹೊರಡುವ ಸೌಂಡ್ ಅನ್ನು "ಕ್ಳಕ್ ಕ್ಳಕ್" ಎಂದು ಭೈರಪ್ಪನವರು ವಿವರಿಸುವ ಬಗೆ. ಹೀಗೆ ಅವರ ಪುಸ್ತಕಗಳ ಉದ್ದಕ್ಕೂ ಅನೇಕ ಪ್ರತಿಮೆಗಳು ನಮಗೆ ದೊರೆಯುತ್ತವೆ. ಸಾರ್ಥದ ಸ್ಥಪತಿಯಾಗಿ, ಪರ್ವದ ಭಾಗಗಳಾಗಿ, ಉತ್ತರಖಾಂಡದ ಸೀತೆಯಾಗಿ ನಮ್ಮನ್ನು ಅನೇಕಾನೇಕ ವಿಚಾರಗಳಿಂದ ಕಾಡುತ್ತಲೇ ಇರುತ್ತಾರೆ. ಹಾಗಾಗಿ, ಭೈರಪ್ಪನವರ ಸ್ಮರಣೆ ಎಂದಿಗೂ ನಮ್ಮ ಮನಸ್ಸಿನಲ್ಲಿ, ನಮ್ಮ ಗುಂಪು ಚರ್ಚೆಗಳಲ್ಲಿ ವಿಶೇಷವಾಗಿರುತ್ತದೆ. ಅದು ಚಿರಂತನವಾಗಿರುತ್ತದೆ, ಕೂಡ.