Saturday, February 20, 2010

ಎಲ್ಲೆಲ್ಲೂ ಸಂಗೀತವೇ...

...ಹಾಗಂತ ಅನ್ಸಿದ್ದು ಅದರಲ್ಲೂ ಈ ಸಂಗೀತದ ವಿಶೇಷಗಳು ಗಮನ ಸೆಳೆದಿದ್ದು ಇತ್ತೀಚಿನ ಭಾರತದ ಪ್ರವಾಸದ ಸಮಯದಲ್ಲಿ ಅಂತ ಸಾರ್‌ಕ್ಯಾಷ್ಟಿಕ್ ಆಗಿ ಹೇಳಿಕೋ ಬೇಕು ಅಷ್ಟೇ. ಎಲ್ಲಿ ನೋಡಿದರೂ ತುಂಬಿ ತುಳುಕೋ ಜನ ಸಾಗರ, ಅಂತಹ ದೊಡ್ಡ ಸಮುದಾಯಕ್ಕೆ ಕಮ್ಮ್ಯೂನಿಕೇಷನ್ನ್ ರೆವಲ್ಯೂಷನ್ನಿನ ಕೊಡುಗೆಯಾಗಿ ಕೈಗೊಂದು ಕಾಲಿಗೊಂದು ಮೊಬೈಲು ಫೋನುಗಳು, ಆ ಕ್ರಾಂತಿಯ ಬೆನ್ನುಲೆಬಾಗಿ ಸಂಗೀತ ಸರಸ್ವತಿ!

ಮ್ಯಾನುಫ್ಯಾಕ್ಚರರ್ ಕೊಟ್ಟಿರೋ ಫೋನುಗಳನ್ನು ಅವುಗಳು ಹೊರಡಿಸೋ ಸ್ವರಗಳನ್ನು ಮಿತಿಯಾಗಿ ಕಷ್ಟಮೈಜ್ ಮಾಡಿಕೊಂಡ ಪದ್ಧತಿಯವನು ನಾನು. ಇದ್ದೊಂದು ಪರ್ಸನಲ್ ಸೆಲ್‌ಫೋನ್ ಅನ್ನು ಆಫೀಸಿಗೆ ಮುಡಿಪಾಗಿಡಲಾಗಿ ಈಗ ಅದೂ ಬಿಸಿನೆಸ್ಸ್ ಫೋನಾಗಿ ಬಿಜಿಯಾಗಿದೆಯೇ ಹೊರತು ಅದು ಇಂದಿನ ಯುವ ಜನಾಂಗದ ನಡವಳಿಕೆಗಳನ್ನನುಸರಿಸಿ ಬೇರೆ ಯಾವುದ್ಯಾವುದೋ ಸ್ವರವನ್ನೇನು ಹೊರಡಿಸೋದಿಲ್ಲ. ನನ್ನ ಫೋನ್ ರಿಂಗ್ ಆಗುತ್ತಿದ್ದರೆ ೧೯೯೯ರ ಮ್ಯಾಟ್ರಿಕ್ಸ್ ಸಿನಿಮಾದಲ್ಲಿ ಕಿಯಾನೋ ರೀವ್ಸ್ (The Matrix, Keanu Reeves) ಈಗಲೋ ಆಗಲೋ ಬಂದೇ ಬಿಡುತ್ತಾನೆ ಎನ್ನುವಂತೆ ಅಕ್ಕ ಪಕ್ಕದವರು ನೋಡುವಂತೆ ಕಿರುಚಿಕೊಳ್ಳುತ್ತದೆ, ಆದರೆ ನನ್ನ ಫೋನ್ ಹುಟ್ಟಿದಾಗಿನಿಂದ ಇನ್ನು ಅದು ಸಾಯುವವರೆಗೆ ಮತ್ಯಾವ ಸ್ವರವನ್ನೂ (ರಿಂಗ್ ಟೋನ್) ಅನ್ನೂ ಅನುಸರಿಸೋದಿಲ್ಲ, ಅನುಕರಿಸೋದಿಲ್ಲ ಎಂದು ಪ್ರಮಾಣವನ್ನಂತೂ ಮಾಡಲಾರೆ...ಇನ್ನು ಮುಂದೆ ಹೇಗೋ ಏನೋ ಯಾರಿಗೆ ಗೊತ್ತು?

ನಮ್ಮಣ್ಣನ ಫೋನ್ ಕರೆ ಬಂದಾಗಲೆಲ್ಲ ಎಂ. ಡಿ. ಪಲ್ಲವಿಯವರ "ನೀನಿಲ್ಲದೇ ನನಗೇನಿದೇ..." ಹಾಡನ್ನು ಹೊರಡಿಸುತ್ತಿತ್ತು, ನಾನು ಮೊದಮೊದಲು ಈ ಹಾಡನ್ನು ಕೇಳಿದಾಗ ನನಗೆ ಮನಸ್ಸಿನ್ನಲ್ಲಿ ಉದ್ಭಸಿದ ಭಾವನೆಗಳು ಪದೇ ಪದೇ ರಿಂಗ್‌ಟೋನ್ ನೋಪಾದಿಯಲ್ಲಿ ಬಂದೂ ಬಂದೂ ಹೊಸ ಹೊಸ ಭಾವನೆಗಳು ಮೂಡಿಸತೊಡಗಿತು. ವಿಶೇಷವೆಂದರೆ ತಾವೆಷ್ಟೇ ಅಕ್ಕರೆಯಿಂದ ಕಾಸುಕೊಟ್ಟು ಕೊಂಡೋ ಅಥವಾ ಪುಕ್ಕಟೆಯಾಗಿ ರಿಂಗ್‌ಟೋನ್ ಅನ್ನು ಹಾಕಿಕೊಂಡಿದ್ದರೂ ಯಾರೂ ತಮ್ಮ ಫೋನ್ ಯಾರೋ ಕರೆ ಮಾಡಿದರೆಂದು ತಮಗೆ ಬೇಕಾದ ಹಾಡನ್ನು ನುಡಿಸಿದಾಗ ಒಂದೆರಡು ಸಾಲನ್ನಾದರೂ ಅದು ಹಾಡಲಿ ಎಂದು ಸುಮ್ಮನೆ ಬಿಡೋದಿಲ್ಲ. ಕರೆ ಬಂದು ಅದು ಹಾಡು ಶುರುಮಾಡುವಾಗಲೇ ಅದರ ಗಂಟಲನ್ನು ಹಿಚುಕಿ ತಮ್ಮ ಗಂಟಲನ್ನು ತೆರೆದುಕೊಳ್ಳುತ್ತಾರೆ. ಹೀಗಿದ್ದಾಗ್ಯೂ ನನ್ನಣ್ಣನ ಫೋನು ಒಂದೆರಡು ಬಾರಿ "ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ..."ಯಲ್ಲಿಯವರೆಗೆ ನುಡಿಸಿತ್ತು, ಒಮ್ಮೆ ಎಲ್ಲದಕ್ಕಿಂತ ಮುಂದೆ ಹೋಗಿ "ಎದೆಯಾಸೆ ಏನು ಎಂದು ನೀ ಕಾಣದಾದೆ...’ ವರೆಗೆ ಹೋಗಿದ್ದು ನಿಜ.

ಅದೇನು ಸಾವಿರಾರು ವರ್ಷದ ಪರಂಪರೆಯೋ ಅಥವಾ ನಮನಮಗೆ ಅಂಟಿದ ಸಂಗೀತದ ಮೋಡಿಯೋ...ಭಾರತದಲ್ಲಿ ಹುಡುಕಿದರೆ ಎಲ್ಲ ಕಡೆ ಸಂಗೀತವಿದೆ: ಬೇಡುವ ಬಿಕ್ಷುಕನಿಂದ ಹಿಡಿದು, ರಿವರ್ಸ್ ತೆಗೆಯೋ ವಾಹನಗಳವರೆಗೆ, ಹಾಲು-ತರಕಾರಿ ಮಾರುವವರ ಸ್ವರಗಳಿಂದ ಹಿಡಿದು ಮನೆಯ ಹಳೆ ಗಡಿಯಾರಗಳವರೆಗೆ, ಹೆಚ್ಚೂ ಕಡಿಮೆ ಎಲ್ಲ ಟಿವಿ-ರೆಡಿಯೋ ಅಡ್ವರ್‌ಟೈಸ್‌ಮೆಂಟ್‌ಗಳಿಂದ ಹಿಡಿದು ಮೇಲೆ ಹೇಳಿದ ಹಾಗೆ ಸೆಲ್‌ಫೋನ್ ಸಂಭಾಷಣೆಗಳವರೆಗೆ. ಕೆಲವೊಮ್ಮೆ ಈ ರಿವರ್ಸ್ ತೆಗೆಯೋ ವಾಹನಗಳ ವಾರ್ನಿಂಗ್ ಸಿಗ್ನಲ್ ಆಗಿ ಬಳಸೋ ಸಿಂಫನಿಯ ಧ್ವನಿಗೆ ಕಾಫಿರೈಟ್ ಅನ್ನು ಕೊಟ್ಟವರು ಯಾರು? ಅದರಲ್ಲೂ ಅಂತಹ ಮಹಾನ್ ಸಿಂಫನಿಗಳ ಬಳಕೆ ಈ ರೀತಿಯಲ್ಲಿ ಇಷ್ಟು ಕೆಟ್ಟದಾಗಿ ಏಕಾಗುತ್ತಿದೆ ಅನ್ನಿಸಿ ತಲೆ ಚಿಟ್ಟು ಹಿಡಿದದ್ದೂ ಹೌದು. ಅಷ್ಟೊಂದು ಜನರಿದ್ದಾರೆ, ಅವರೆಲ್ಲರಿಗೂ ಸಂಗೀತ ಬೇಕು, ಆ ಸಂಗೀತ ಹಲವಾರು ವಿಧ ರೀತಿಗಳಲ್ಲಿ ತಿರುಚಲ್ಪಟ್ಟದ್ದಾಗಿದೆ, ಕಾಪಿ ಹೊಡೆದದ್ದಾಗಿದೆ ಅನ್ನೋ ಪರಿಜ್ಞಾನವೇ ಇಲ್ಲದಷ್ಟರ ಮಟ್ಟಿಗೆ ಬೆಳೆದು ಹೋಗಿದೆ.

ನಾನು ಸ್ವರ-ಸಂಗೀತ-ಮಾಧುರ್ಯ ಅಂತ ಇಬ್ಬರು ಗುರುಗಳ ಹತ್ತಿರ ಎರಡು ಸಾರಿ ಉತ್ತರಾದಿ-ದಕ್ಷಿಣಾದಿ ಸಂಗೀತದ ವಾಸನೆಯನ್ನು ಎಳೆದುಕೊಂಡೇ ಅಂದಿನ ಕಳವಳಗಳಿಗೆ ಸಂಗೀತದ ಕಲಿಕೆಯನ್ನು ಬಲಿಕೊಟ್ಟವನು, ನಾನಾದರೂ ಸಂಗೀತದ ಬಗ್ಗೆ ಏನು ಬರೆಯಬಲ್ಲೆ ಎನ್ನುವ ಕೆಳ ಮನೋಭಾವನೆಯವನಾದರೂ ನಿಶ್ಶಬ್ದವನ್ನು ಸೀಳುವ ಕಂಪನಗಳನ್ನಾಗಿ ಸಂಗೀತವನ್ನು ನೋಡುವುದರ ಜೊತೆಗೆ ಕಂಪನದ ಜೊತೆ ಹದವಾಗಿ ಬೆರೆತ ಸದ್ದಿಲ್ಲದ ಪರಿಸರವೂ ಸಂಗೀತದ ನೆಲೆನಿಲ್ಲುವಿಕೆ ಅಷ್ಟೇ ಮುಖ್ಯ. ಆದರೆ ಭಾರತದಲ್ಲಿ ಒಂದರ ಸಂಗೀತದ ಅಲೆ ಮತ್ತೊಂದರ ಸಂಗೀತದ ಅಲೆಗಳನ್ನು ಸೀಳುತ್ತದೆ, ನಿಶ್ಶಬ್ದ ಅನ್ನೋದು ಕೇವಲ ಬ್ರಾಹ್ಮೀ ಮಹೂರ್ತದ ಒಂದೆರಡು ಘಳಿಗೆ ಮೊದಲು ಮಾತ್ರ ಅನ್ನುವಂತಾಗಿದೆ, ಎಲ್ಲೆಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ತುಂಬಿ ತುಳುಕುವ ಸಂಗೀತ ಕೊನೆಗೆ ಒಂದು ದೊಡ್ಡ ಗದ್ದಲದ ರೀತಿಯಲ್ಲಿ ಕೇಳಿ ಬರುತ್ತದೆ ಕಾಣಸಿಗುತ್ತದೆ.

ಸುಮ್ಮನೇ ಯಾರೋ ಹಾಕಿಕೊಂಡಿರೋ ರಿಂಗ್‌ಟೋನಿಗೆ ನಾನು ಬೇಡವಲ್ಲದ ಮಹತ್ವವನ್ನು ಕೊಡುತ್ತೇನೆ. ಸೆಲ್‌ಫೋನ್ ಉತ್ಪಾದಕರು ಕೊಟ್ಟ ಧ್ವನಿಗಳು ಸಾಲವು ಎಂದು ಮೂರು ಡಾಲರ್ ಕೊಟ್ಟು ಹೊಸ ಧ್ವನಿಯನ್ನು ಪಡೆದು ಹಾಕಿಕೊಳ್ಳುವವನ ಮನಸ್ಸಿನ ಹಿಂದೇನಿರಬಹುದು ಎನ್ನುವ ಪ್ರಶ್ನೆಗಳು ಕಾಡುತ್ತವೆ. ನನ್ನಣ್ಣ ’...ನೀನಿಲ್ಲದೇ ನನಗೇನಿದೆ...’ ಎನ್ನುವ ಹಾಡನ್ನೇ ಏಕೆ ಹಾಕಿದ? ರಿಂಗ್ ಆದಾಗ ಬರುವ ಹಾಡಿಗೂ ಮತ್ತೊಬ್ಬರು ನಾವು ಫೋನ್ ಎತ್ತಿ ಆನ್ಸರ್ ಮಾಡುವವರೆಗೆ ಕಾಯುವಾಗ ಬ್ಯಾಕ್‌ಗ್ರೌಂಡಿನಲ್ಲಿ ರಿಂಗ್ ಬದಲಿಗೆ ಕೇಳುವ ಹಾಡಿಗೆ ಏನನ್ನುತ್ತಾರೆ? ನನಗೆ ಕರೆ ಮಾಡಿದವರು ಮಾಡುವವರು ಯಾರೋ ಅವರು ಆ ಹಾಡನ್ನೇ ಕೇಳಲಿ ಎನ್ನುವ ಉಮೇದಿನ ಆದಿ-ಅಂತ್ಯಗಳೇನು? ನನ್ನ ಉಳಿದೆಲ್ಲ ಪರ್ಸನಾಲಿಟಿ ಪ್ರತಿಬಿಂಬಿಸುವ ಅಂಶಗಳ ಜೊತೆಗೆ ತಣ್ಣಗಿದ್ದಾಗ ಜೇಬಿನ ಒಳಗಿರುವ ಈ ಎಲೆಕ್ಟ್ರಾನಿಕ್ ಉಪಕರಣ ಚಾಲೂ ಇದ್ದಾಗ ನನ್ನ ವ್ಯಕ್ತಿತ್ವದ ಪ್ರತಿಬಿಂಬವಾಗುವುದು ನಿಜವೇ? ತನಲ್ಲಿ ಇದ್ದದ್ದು ಸಾಲದು, ಮಂದಿಯದು ಬೇಕು, ಅವರ ಕೈಯಲ್ಲಿರೋದು ಒಳ್ಳೆಯದು ಎನ್ನುವ ಮೆಟೀರಿಯಲಿಸ್ಟಿಕ್ ಬದುಕನ್ನು ಸೆಲ್‌ಫೋನುಗಳು ಹುಟ್ಟು ಹಾಕುತ್ತಿದ್ದಾವೆಯೇ? ಎಲ್ಲದಕ್ಕಿಂತ ಮುಖ್ಯವಾಗಿ ಸಂಗೀತ ಎಲ್ಲರಿಗೂ ಇಷ್ಟವಾಗಲೇ ಬೇಕು ಎಂದೇನಾದರೂ ನಿಯಮವಿದೇಯೇ?

ಗುಬ್ಬಚ್ಚಿಯ ಹಾಗೆ ಕೂಗುವ ಧ್ವನಿಗಳಿಂದ ಹಿಡಿದು, ವಯಸ್ಸಾದವರಿಗೆ ಕೇಳದ ಧ್ವನಿಯ ಫ್ರೀಕ್ವೆನ್ಸಿಯವರೆಗೆ, ಉತ್ತರಾದಿ ಸಂಗೀತದಿಂದ ಹಿಡಿದು ದಕ್ಷಿಣಾದಿಯವರೆಗೆ, ಪೂರ್ವದಿಂದ ಹಿಡಿದು ಪಶ್ಚಿಮದ ಸಂಗೀತದ ಅಲೆಗಳ ಬಗ್ಗೆ ಬೇಕಾದಷ್ಟು ರಿಂಗ್ ಟೋನ್‌ಗಳಿವೆ, ಆದರೆ ಇವು ಯಾವುವೂ ಜನರ ಹಸಿವನ್ನು ಹಿಂಗಿಸಿಲ್ಲ. ಆ ಸಾಲದು ಎನ್ನುವ ಮನೋಭಾವನೆ ಅನೇಕ ಬೇಕುಗಳ ತಾಯಿಯಾಗುತ್ತಿದೆ. ಹೀಗೆ ಹುಟ್ಟುವ ತಾಯಂದಿರ ದಯೆಯಿಂದ ಮತ್ತೆ ಅನೇಕಾನೇಕ ಮಕ್ಕಳು ಸಂಗೀತ ಪ್ರಾಪ್ತಿಯನ್ನು ಹೊಂದುತ್ತಾರೆ, ಒಟ್ಟಿನಲ್ಲಿ ಸಂಗೀತವನ್ನು ಜಗತ್ತು ಎತ್ತಿಕೊಳ್ಳುತ್ತದೆ - ಸಂಗೀತ ಜನರನ್ನು ಎಚ್ಚೆರಿಸುತ್ತದೆ. ಸದ್ಯ, ಈ ಸಂಗೀತದ ಟೋನುಗಳು ಮನೆಯ ಹೊರಗೇ ಉಳಿಯುತ್ತವೆ ಹೆಚ್ಚಿನ ಮಟ್ಟಿಗೆ, ಅದ್ಯಾವ ಪುಣ್ಯಾತ್ಮನೂ ಮನೆಯ ಫೋನಿನ ರಿಂಗ್‍ಟೋನ್ ಅನ್ನು ಈ ರೀತಿಯ ಜನರ ಮನೋಭಿರುಚಿಗೆ ತಕ್ಕಂತೆ ಬದಲಾಯಿಸಿಲ್ಲವಲ್ಲ, ಅಷ್ಟು ಸಾಕು.

Tuesday, February 09, 2010

ಬೀಳದೇ ಏಳೋದಾದರೂ ಹೇಗೆ?

ಹೀಗೇ ಒಂದು ಛಳಿಗಾಲದ ದಿನ, ಮಧ್ಯಾಹ್ನ ಆಗಿ ಸಂಜೆ ನಾಲ್ಕು ಘಂಟೆ ಹೊತ್ತಿಗೆಲ್ಲಾ ಅದನ್ನು ದಿನ ಎನ್ನಬೇಕೋ, ಕತ್ತಲು ಎನ್ನಬೇಕೋ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬಹುದಾದಂತಹ ಮಸುಕು ಮುಸುಕಿದ ಮುಸ್ಸಂಜೆ. ಈಗಲೋ ಆಗಲೋ ಉಸಿರು ಕಳೆದುಕೊಂಡು ಹೋಗೇ ಬಿಟ್ಟ ಎನ್ನುವ ಸೂರ್ಯನನ್ನು ಸಂತೈಸುವ ಹಾಗೆ ಅಲ್ಲಲ್ಲಿ ಬಿದ್ದುಕೊಂಡು ಛಳಿಗೆ ಗಟ್ಟಿಯಾಗಿ ಮುಖ ಸಿಂಡರಿಸಿಕೊಂಡ ಹಿಮದ ತುಕುಡಿಗಳು ತಮ್ಮ ಮೇಲೆ ಬಿದ್ದ ಬೆಳಕನ್ನು ಪ್ರತಿಫಲಿಸಿ ಬೆಳಕಿನ ಸೈನಿಕರ ಉತ್ಸಾಹ ಕತ್ತಲಿನ ಶತ್ರುಗಳ ಎದುರು ಸಂಪೂರ್ಣವಾಗಿ ಕಳೆದು ಹೋಗದ ಹಾಗೆ ಕಾಪಾಡಿಕೊಂಡಿದ್ದವು. ಯಾವತ್ತಿನಂತೆ ರಸ್ತೆಗಳು ಊರ್ಧ್ವಮುಖಿಗಳಾಗಿ ತಮ್ಮನ್ನು ತಾವು ಸೇವೆಗೆ ಒಪ್ಪಿಸಿಕೊಂಡಿದ್ದರೂ ಕಪ್ಪಗಿನ ರಸ್ತೆಗಳ ಮೇಲೆ ಬೂದಿ ಬಳಿದುಕೊಂಡ ಹಾಗಿನ ಛಾಯೆ ಯಾಕೋ ಮುಂಬರುವ ಕೆಟ್ಟದ್ದನ್ನು ತಾವು ಬಲ್ಲೆವು ಎಂಬಂತೆ ಅಜ್ಜ-ಮುತ್ತಾತರ ಭಂಗಿಯಲ್ಲಿ ಇದ್ದವು. ನಮ್ಮ ಮನೆಯ ಡ್ರೈವ್‌ ವೇ ತನ್ನ ಮೇಲಿನ ಅರ್ಧ ಇಂಚು ದಪ್ಪಗಿನ ಐಸ್ ಲೇಯರ್‌ನ್ ಅವಶೇಷಗಳಡಿಯಲ್ಲಿ ಸಮಾಧಿಯಾಗಿತ್ತು, ನಮ್ಮ ಮನೆಯ ಮೇಲ್ ಬಾಕ್ಸ್ Mohawk Indian ಹೇರ್ ಸ್ಟೈಲ್ ಮಾಡಿಕೊಂಡು ತನ್ನ ಮೇಲೆ ಒಂದು ರೀತಿಯ ಚೂಪನೆ ಐಸ್ ಪದರವನ್ನು ನಿರ್ಮಿಸಿಕೊಂಡಿತ್ತು, ಅದರ ಬುಡದಲ್ಲಿ ಲಾಲಿ ಪಾಪ್ ನೆಕ್ಕಿ ಬಣ್ಣದ ಜೊಲ್ಲು ಸುರಿಸುವ ಮುಗ್ಧ ಮಗುವಿನಂತೆ ಬಿಸಿಲಿಗೆ ಕರಗಿ ಐಸ್ ನೀರಾಗುತ್ತ ನೀರಾಗುತ್ತ ಹನಿಗಳು ಅಲ್ಲಲ್ಲಿ ಹೆಪ್ಪು ಕಟ್ಟಿಕೊಂಡು ಮೇಲ್ ಬಾಕ್ಸ್ ಸಂರಕ್ಷರ ಹಾಗಿನ ಚೂಪುಗಳನ್ನು ನಿರ್ಮಿಸಿಕೊಂಡಿದ್ದವು.

ಬ್ಲ್ಮೂಮ್‌ಬರ್ಗ್ ರೆಡಿಯೋದಲ್ಲಿ ಮಾರ್ಕೆಟ್ ಬಿದ್ದ ಬಗ್ಗೆ ಅರಚಿಕೊಳ್ಳುತ್ತಿದ್ದರು, ಈಗಾಗಲೇ ನೀರಲ್ಲಿ ಮುಳುಗಿದೋನಿಗೆ ಮಳೆಯೇನು ಛಳಿಯೇನು ಎನ್ನುವ ಧೋರಣೆಯನ್ನು ತಾಳಿಕೊಂಡ ಜನರಿಗೆ ಇವರೆಲ್ಲ ಮತ್ತಿನ್ನಷ್ಟು ಹೆದರಿಸಲು ವ್ಯರ್ಥವಾಗಿ ಪ್ರಯತ್ನಿಸುತ್ತಿದ್ದಾರಲ್ಲ ಎನ್ನಿಸಿತು. ಈ ಅರಚುವ ರೆಡಿಯೋ ಧ್ವನಿಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿ ’ಬಿಸಿಲೇ ಇರಲಿ, ಮಳೆಯೇ ಇರಲಿ, ಕಾಡಲ್ಲಿ ಮೇಡಲ್ಲಿ ಅಲೆವೆ…’ ಎನ್ನುವಂತೆ ಎದುರು ಮನೆ ಮಕ್ಕಳು ಕೊರೆಯುವ ಛಳಿಯನ್ನೂ ನಿರ್ಲಕ್ಷಿಸಿ ಸ್ಲೆಡ್ಡಿಂಗ್ ಆಡುತ್ತಿದ್ದರು, ಅವರ ನಗುವಿನಲ್ಲಿ ಯಾವುದೇ ಒತ್ತಡವಿದ್ದ ಹಾಗಿರಲಿಲ್ಲ. ನಮ್ಮ ಮನೆಯ ಮುಂದೆ ಹಾಗೂ ಹಿತ್ತಲಿನ ಮರಗಳು ಅಲುಗಾಡಲೂ ಸಂಕೋಚಗೊಂಡವರಂತೆ ಸ್ಥಿರವಾಗಿ ನಿಂತಿದ್ದವು, ನಿತ್ಯಹರಿದ್ವರ್ಣಿಗಳಂತೂ ಈ ಟ್ಯಾಕ್ಸ್ ಸೀಜನ್ನ್‌ನಲ್ಲಿ ಎಲ್ಲಿ ನಕ್ಕರೆ ಅದಕ್ಕೆ ಟ್ಯಾಕ್ಸ್ ಹಾಕಿ ಬಿಡುತ್ತಾರೋ ಎಂದು ಬಾಯನ್ನು ಹೊಲಿದುಕೊಂಡವರಂತಿದ್ದವು.

ಮನೆಯ ಟ್ರ್ಯಾಷ್ ಕ್ಯಾನುಗಳನ್ನು ಎತ್ತಿಡುತ್ತಾ ನಾನು ’ನಿಧಾನವಾಗಿ ನಡೆಯಬೇಕು, ಬಿದ್ದರೆ ಅಷ್ಟೇ ಗತಿ…’ ಎಂದು ಏನೇನೆಲ್ಲ ಮನಸ್ಸಿನ್ನಲ್ಲಿ ಅಂದುಕೊಂಡರೂ, ಅಂದುಕೊಂಡವುಗಳು ಪ್ರಯೋಜನಕ್ಕೆ ಬಾರವು ಏನಿದ್ದರೂ ಕ್ರಿಯಾಶೀಲತೆ ಮುಖ್ಯ ಎನ್ನುವ ವಿಧಿ ಕಣ್ಣು ತೆಗೆದು ಕಣ್ಣು ಬಿಡುವಷ್ಟರಲ್ಲಿ ನನ್ನ ಕಾಲುಗಳು ತಲೆಗಿಂತ ಮೊದಲು ಹೋಗತೊಡಗಿ ದೊಪ್ಪನೆ ಜಾರಿ ಬಿದ್ದದ್ದಾಯಿತು. ಕೈ ಊರಿ ಎದ್ದು, ಮೈ ಕೈ ಕೊಡವಿಕೊಂಡು ಸುಧಾರಿಸಿಕೊಳ್ಳೂತ್ತಾ ಸದ್ಯ ಯಾವುದೇ ಎಲುಬು ಮುರಿಯಲಿಲ್ಲ ಎಂದು ಸಮಾಧಾನ ಪಡುವಂತಾಯಿತು. ಕತ್ತಲಿನ ದಯೆಗೆ ನಾನು ನೆಲಕ್ಕೆ ಅಪ್ಪಳಿಸಿದ ದೃಷ್ಯ ಜನಜನಿತವಾಗಲಿಲ್ಲ. ನೆಲದಲ್ಲಿನ ಐಸ್ ಪದರ ನಮಗೇನೂ ಆಗಿಲ್ಲ ಎಂದು ಬೀಗಿದಂತೆ ಕಾಣಿಸಿತು. ನಾನು ಚೆಲ್ಲಾ ಪಿಲ್ಲಿಯಾದ ಟ್ರ್ಯಾಷ್ ಕ್ಯಾನ್‌ಗಳನ್ನು ಮತ್ತೆ ಎತ್ತಿಟ್ಟು ಕೆಲಸ ಮುಂದುವರೆಸಿದೆ.

ಈ ಏಳು-ಬೀಳುಗಳು ಸಹಜ, ಆದರೆ ವಯಸ್ಸಾಗುತ್ತಾ ಬಂದ ಹಾಗೆ ಬೀಳುಗಳ ಬಗ್ಗೆ ಗಮನಕೊಡಬೇಕಾಗುತ್ತದೆ, ಎಲ್ಲ ಬೀಳುಗಳೂ ಏಳುಗಳಲ್ಲಿ ಕೊನೆಯಾಗಬೇಕು ಎಂದೇನೂ ಇಲ್ಲ. ಬಹಳ ಸರಳವಾದ ಸಿದ್ಧಾಂತ, ರಿಸ್ಕ್ ತೆಗೆದುಕೊಳ್ಳಬೇಕು ಎನ್ನುವುದು ಸರಿ, ಆದರೆ ಹೆಚ್ಚಿನ ರಿಟರ್ನ್ ಬಯಸಿದಂತೆ ಅಲ್ಲಿ ರಿಸ್ಕ್ ಹೆಚ್ಚಾಗುತ್ತದೆ, ಎಲ್ಲರಿಗೂ ಎಲ್ಲ ರಿಸ್ಕ್ ಟೇಕಿಂಗ್ ಸ್ಟ್ರಾಟೆಜಿ ಅನ್ವಯಿಸುವುದಿಲ್ಲ, ಕೆಲವೊಮ್ಮೆ ಸೇಫ್ಟಿ ಫರ್ಸ್ಟ್ ಎಂದುಕೊಂಡು ಯಾವುದು ನಮ್ಮ ಹಿತರಕ್ಷಣೆಯನ್ನು ಮಾಡಬಹುದೋ ಅಂತಹ ಹೂಡಿಕೆಯನ್ನು ಮಾಡುವುದು ಒಳ್ಳೆಯದು. ಇವೆಲ್ಲ ಗುಡ್ ಎಕನಾಮಿಕ್ಸ್ ಇಂಡಿಕೇಟರುಗಳು, ಹೂಡಿಕೆಯ ಮೂಲಭೂತ ಅಂಶಗಳು – ಇವುಗಳ ಬಗ್ಗೆ ಅದೆಷ್ಟೇ ಪಬ್ಲಿಷ್ ಆಗಿದ್ದರೂ ಸಹ ಬೀಳುವವರು ಮಾತ್ರ ಕಡಿಮೆಯಾಗೋದಿಲ್ಲ. ಅದರಲ್ಲೂ ನನ್ನಂತಹವರು ಎಲ್ಲವನ್ನು ತಮ್ಮಷ್ಟಕ್ಕೇ ತಾವೇ ಅನುಭವಿಸಿ ನೋಡುತ್ತೇವೆ ಎಂದು ಕಂಕಣ ತೊಟ್ಟುಕೊಂಡಿರುವಾಗ…ಯಾವ ಉಪದೇಶ ಎಲ್ಲಿಯ ಲೆಕ್ಕ ಬಿಡಿ. ಬೀಳದೇ ಏಳೋದಾದರೂ ಹೇಗೆ? ಒಮ್ಮೆ ಬಿದ್ದ ಅನುಭವದ ಲೆಕ್ಕಕ್ಕೆ ಮತ್ತೆ-ಮತ್ತೆ ಮೇಲೆ ಹೋಗುವ ರಿಯಾಯತಿ ಸಿಗಬಹುದೇ? ಬಿದ್ದರೆ ಮಾತ್ರ ಏಳಲು ಬಿಡುತ್ತೇನೆ ಎನ್ನುವ ಆಟದ ನಿಯಮಗಳನ್ನು ಯಾರು ಬರೆದವರು? ಅದನ್ನೇಕೆ ನಾವು ಒಪ್ಪಿಕೊಳ್ಳಬೇಕು? ಈ ಒಪ್ಪಿಕೊಳ್ಳದ ನಿಯಮಕ್ಕೆ ಬೀಳುವ-ಏಳುವ ಅನುಪಾತಗಳನ್ನಾದರೂ ಸಮತೂಕ ಮಾಡಬೇಕು ಎನ್ನುವ ಹಂಬಲವೇಕಿಲ್ಲ? ಕೆಟ್ಟ ಮೇಲೆ ಬುದ್ದಿ ಬಂದದ್ದು ಎಲ್ಲಿ ಹೋಯಿತು, ಅದು ಮತ್ತೆ-ಮತ್ತೆ ನಮ್ಮನ್ನು ಬೀಳದಂತೆ ತಡೆಹಿಡಿಯೋದರಲ್ಲಿ ವಿಫಲವಾಗೋದೇಕೆ?

ಬಿದ್ದರೆ ಹಾಗಾಗುತ್ತದೆ ಹೀಗಾಗುತ್ತದೆ ಎನ್ನುವ ಮಧ್ಯಮ ವರ್ಗದ ಕೊರಗುಗಳು ಎದ್ದ ಮೇಲಾಗಬಹುದಾದ ಸಂಭ್ರಮದ ಸಂತೋಷವನ್ನು ಕಸಿದುಕೊಂಡು ಬಿಡುತ್ತವೆ. ನೆಲವನ್ನು ಬಿಟ್ಟು ಮೇಲೇರದ ಮಧ್ಯಮ ವರ್ಗದ ಬಂಧನಗಳು ಎದ್ದು ಹಾರಾಡಬಹುದಾದ ಮನದ ಸ್ವಾತಂತ್ರ್ಯವನ್ನು ಸೀಮಿತಗೊಳಿಸಿ ಗೂಟಕ್ಕೆ ಕಟ್ಟಿದ ತುಡುಗು ದನದ ಮೂಗುದಾರದಂತೆ ಸುತ್ತಿಕೊಂಡುಬಿಡುತ್ತವೆ. ಇವತ್ತಿಲ್ಲದಿದ್ದರೆ ನಾಳೆ, ಇಂದಲ್ಲದಿದ್ದರೆ ಮುಂದೆ ಎನ್ನುವ ಆಶಾವಾದ ತಿಪ್ಪೆ ಸಾರುವ ಸಗಣಿಯಾಗುತ್ತದೆ. ಮುಂದಿನ ಜನ್ಮದಲ್ಲಿ ಮಾಡಿದರೆ ಆಯಿತು ಎನ್ನುವುದು ನನಗದು ಬೇಕೇ ಬೇಕು ಎಂದು ಹಠ ಹಿಡಿದ ಮಗುವಿಗೆ ನಾಳೆ ಕೊಡುತ್ತೇನೆ ಎಂದು ಸಾಂತ್ವನ ಹೇಳುವ ಒಣ ತತ್ವವಾಗುತ್ತದೆ. ಏನೆಲ್ಲವನ್ನು ಮಾಡಬೇಕು ಎನ್ನುವ ಉನ್ಮಾದ ಏನೂ ಮಾಡಿಲ್ಲವಲ್ಲ ಎನ್ನುವ ಉದ್ವೇಗದ ರಭಸದಲ್ಲಿ ಕೊಚ್ಚಿಕೊಂಡು ಹೋಗುವ ಪ್ರವಾಹದ ನೀರಿನ ಒಂದು ಭಾಗವಾಗುತ್ತದೆ. ಅವರವರ ತೂಕಕ್ಕೆ ಅವರವರ ಸಾಮರ್ಥ್ಯಕ್ಕೆ ಬೀಳದೇ ಎದ್ದೋ ಅಥವಾ ಎದ್ದು ಬಿದ್ದೋ ನೆಲೆ ನಿಲ್ಲಿಸುವ ಗುರುತ್ವಾಕರ್ಷಣ ಶಕ್ತಿ ಈ ಹೊತ್ತಿನ ತತ್ವದ ಮಹಾ ಲೆವೆಲ್ಲರ್ ಆಗಿಬಿಡುತ್ತದೆ.