Friday, November 13, 2009

ಗೆಲುವಾಗೆಲೆ ಅನಿವಾಸಿ ಮನ…

ಅನಿವಾಸಿ(ಗಳ) ಮನದಲ್ಲೇನಿರುತ್ತೆ, ಅದರ ಆಳ-ವಿಸ್ತಾರವೇನು? ಅದರ ಮಿತಿಗಳೇನು ಎಂದು ಯೋಚಿಸುತ್ತಾ ಹೋದರೆ ಅದೊಂದು ಅಪರಿಮಿತ ಆವರಣವನ್ನೇ ಹೊರಹಾಕಿ ಬಿಡುತ್ತೆ.   ಅನಿವಾಸಿತನ ಅನ್ನೋದು ಲೋಕಲ್ ಆಗಿದ್ದವರಿಗೆ ಗ್ಲೋಬಲ್ ಪರಿಜ್ಞಾನ ಮೂಡಿಸುತ್ತೆ, ಜಾಗತೀಕರಣ, ಉದಾರೀಕರಣ ಅದೂ-ಇದೂ ಅನ್ನೋ ಹೊಸ ಕಾಯಕಲ್ಪಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಮಾಡುತ್ತೆ, ಜೊತೆಗೆ ಬೇಡವಾದ ಹಲವನ್ನು ತಂದು ತಲೆಯೊಳಗೆ ತುಂಬುತ್ತೆ.

 

ಅನಿವಾಸಿತನದ ಇತಿ-ಮಿತಿಗಳು ವ್ಯಕ್ತಿಗತವಾದವುಗಳು, ನನ್ನ ಮಟ್ಟಿಗೆ ಹಳೆಯ ಜೀಪ್ ಒಂದಕ್ಕೆ ಎತ್ತರದ ಹೊಸ ಚಕ್ರಗಳನ್ನು ಕೂರಿಸಿ ಕುದುರೆ ಸವಾ ಮಾಡಿಸಿದಂತೆ ಒಮ್ಮೊಮ್ಮೆ ನನ್ನ ಚಿಕ್ಕತನವನ್ನು ದೊಡ್ಡ ಪ್ರಮಾಣದಲ್ಲಿ ಅಳತೆ ಮಾಡಲಾಗಿದೆ.  ಇಷ್ಟು ವರ್ಷ ಇದ್ದು ಅದ್ಯಾವ ಸಂಗೀತ/ಹಾಡುಗಳನ್ನು ಅದೆಷ್ಟೇ ಬಾರಿ ಕೇಳಿ ನೋಡಿದರೂ ನಮ್ಮ ನೆಚ್ಚಿನ ಭಾವಗೀತೆಗಳು ನಮ್ಮನ್ನು ಜೀವನ ಪರ್ಯಂತ  ಕೂಡಿಕೊಳ್ಳುವ ಹಾಗೆ, ನಮ್ಮ ನೆಚ್ಚಿನ ಜಾನಪದಗೀತೆಗಳು ಹಳೆಯ ಸ್ನೇಹಿತರಾದ ಹಾಗೆ, ಎಷ್ಟೇ ಹೊಸ ಚಿತ್ರಗಳು ಬಂದರೂ ಹಳೆಯ ಗೀತೆಗಳು ನೆನಪಿನಲ್ಲಿ ಉಳಿಯುವ ಹಾಗೆ ಈ ಇಂಗ್ಲೀಷ್ ಸಾಹಿತ್ಯವಾಗಲೀ, ಸಂಗೀತವಾಗಲೀ ಉಳಿಯೋದೇ ಇಲ್ಲ.  ಮೊದಲ ಜನರೇಷನ್ನಿನ ನನಗೆ ಮಾತ್ರ ಹೀಗಾಗಬಹುದು, ಇಲ್ಲಿಯೇ ಹುಟ್ಟಿ ಬೆಳೆದ ನಂತರದ ಜನರೇಷನ್ನಿನ ಅಭಿರುಚಿಗಳು ಬೇರೆ ಇರಬಹುದು.

 

ಆಫೀಸಿನಲ್ಲಿನ ಸಹೋದ್ಯೋಗಿಗಳ ಸಂಖ್ಯೆ ನಮ್ಮ ಸ್ನೇಹಿತರ ಗುಂಪನ್ನು ಸೇರಲಾರದು, ಕೆಲಸದ ವಿಚಾರವನ್ನು ಹೊರತು ಪಡಿಸಿ ಆಟೋಟದ ವಿಚಾರದಲ್ಲಾಗಲೀ, ಹೊರಗಡೆಯ ಇನ್ಯಾವುದೇ ವಿಷಯದಲ್ಲಾಗಲೀ ನಮ್ಮನ್ನು ನಾವು ಕನೆಕ್ಟ್ ಮಾಡಿಕೊಳ್ಳಲಾರದಾಗುತ್ತೇವೆ.  ನಾವೂ ನೋಡಿದ, ನೋಡುವ ಟಿವಿ ಕಾರ್ಯಕ್ರಮಗಳು ಯಾವಾಗಲೂ ಕ್ಯಾಚ್ ಅಪ್ ಮೋಡ್‌ನಲ್ಲೇ ಇರುತ್ತವೆ.  ಯಾರು ಯಾವ ಆಟದಲ್ಲಿ ಗೆದ್ದರೇನು, ಬಿಟ್ಟರೇನು ಇಲ್ಲಿನ ಸ್ಥಳೀಯ ಸುದ್ದಿಯ ಮುಂದೆ ಪ್ರಜಾವಾಣಿಯ ಮುಖಪುಟದಲ್ಲಿ ಕರ್ನಾಟಕದವರು ಉತ್ತರ ಪ್ರದೇಶದ ಮೇಲೆ ರಣಜಿ ಕಪ್‌ನಲ್ಲಿ ಗೆದ್ದರು ಎಂಬುದು ಇವತ್ತಿಗೂ ಅಪ್ಯಾಯಮಾನವಾಗುತ್ತದೆ.  ಇತ್ತೀಚಿನ ಟ್ವೆಂಟಿ-ಟ್ವೆಂಟಿ ಪ್ರಂದ್ಯಗಳನ್ನು ನಾನು ಫಾಲ್ಲೋ ಮಾಡುತ್ತಿಲ್ಲವಾದರೂ ಅದರ ಸುತ್ತಲಿನ ಸುದ್ದಿಗಳಲ್ಲಿ ಭಾರತ ತಂಡದ ಹೆಸರನ್ನು ಕಣ್ಣುಗಳು ಗೊತ್ತೋ ಗೊತ್ತಿರದೆಯೋ ಹುಡುಕುತ್ತಿರುತ್ತವೆ.

 

ನಾನು ಈವರೆಗೆ ಕಾಲಿಡದ ಎಷ್ಟೋ ಅಂಗಡಿಗಳು ಇಲ್ಲಿವೆ, ಇಲ್ಲಿನವರ ದಿನಬಳಕೆಯ ಅದೆಷ್ಟೋ ಪದಾರ್ಥಗಳು ನನಗೆ ಪರಿಚಯವೇ ಇಲ್ಲವಾಗಿದೆ.  ಹಾಡು, ಸಿನಿಮಾ, ಸಂಸ್ಕೃತಿ, ಸಂಭ್ರಮಗಳನ್ನು ಒಂದಕ್ಕೊಂದು ಕನೆಕ್ಟ್ ಮಾಡಿಕೊಳ್ಳದೇ ಪರದಾಡಿದ್ದಿದೆ.  ನನ್ನಂಥ ಅನಿವಾಸಿಗಳಿಗೆ ಯಾರಾದರೂ “ನೀವು ಕೆಲಸಕ್ಕ ಹೋಗಬೇಡಿ, ಮನೆಯಲ್ಲೇ ಇರಿ ನಿಮಗೆ ಅಷ್ಟೇ ಸಂಬಳವನ್ನು ಕೊಡುತ್ತೇವೆ”, ಎಂದರೆ ಇನ್ನೇನನ್ನೂ ಮಾಡಲಿಕ್ಕಾಗೇ ಹುಚ್ಚೇ ಹಿಡಿಯುವ ಪ್ರಸಂಗ ಬಂದರೂ ಬರಬಹುದು.

 

****

 

ಮನೆ ಬಿಟ್ಟು, ದೇಶ ಬಿಟ್ಟು, ಭಾಷೆ ಬಿಟ್ಟು, ರೂಢಿ ಬಿಟ್ಟು ಮತ್ತೊಂದು ಕಡೆಗೆ ಹೋಗೋದೆಲ್ಲ ಕೆಟ್ಟದೇನಲ್ಲ.  ಅಲ್ಲಿ-ಇಲ್ಲಿ ಒಂದಿಷ್ಟು ಹೋಗಿ ನೋಡಿದರೆ ತಾನೆ ಗೊತ್ತಾಗೋದು?  ಈ ಬಂದು ಹೋಗುವ ಬದುಕಿಗೆ ಯಾವುದು ತಾತ್ಕಾಲಿಕ, ಯಾವುದು ಶಾಶ್ವತ? ಜಗತ್ತಿನ ಏನೇನೆಲ್ಲ ಸಂಸ್ಕೃತಿಗಳನ್ನೆಲ್ಲ ವಿಸ್ತರಿಸಿ ಕೊನೆಗೆ ಯಾವುದಕ್ಕೆ  ಬೇಕಾದರೂ ತಗುಲಿಕೊಳ್ಳಬಹುದು ತಾನೆ?  ನಮಗೆ ಗೊತ್ತಿರುವ ಒಂದೇ ನೆಲೆಗಟ್ಟಿಗೆ ಅಂಟಿಕೊಂಡೇ ತೊಳಲಾಡುವುದರಲ್ಲಿ ಯಾವ ದೊಡ್ಡಸ್ತಿಕೆ ಇದೆ ಹೇಳಿ?  ನಾವು ನಮ್ಮದನ್ನು ಬಿಟ್ಟು ಹೋಗದಿರುವ ಮನಸ್ಥಿತಿಗೂ ಕಾಂಪ್ಲಸೆನ್ಸಿಗೂ ಏನು ವ್ಯತ್ಯಾಸ್

 

ಏನು ಬೇಕಾದರೂ ಇರಲಿ ಇಲ್ಲದಿರಲಿ, ನಮ್ಮ ಕೆಲಸಗಳನ್ನೆಲ್ಲ ನಾವೇ ಮಾಡಿಕೊಳ್ಳುವ ಪರಿಪಾಟಲೆಗೆ ರೂಢಿ ಮಾಡಿಕೊಂಡಿರೋದು ಹಾಗೂ ನಮ್ಮ ನಮ್ಮ ಸಣ್ಣ ಪ್ರಪಂಚಗಳಲ್ಲೇ ಯಾರ ಉಸಾಬರಿಯೂ ಬೇಡವೆಂದು ನಿರ್ವಂಚನೆಯಿಂದ ಬದುಕೋದು ಅನಿವಾಸಿ ಜೀವನದ ಅವಿಭಾಜ್ಯ ಅಂಗ.  ಎಕ್ಸ್ಟೆಂಡೆಡ್ ಫ್ಯಾಮಿಲಿ ಇರುವವರದ್ದು ಒಂದು ರೀತಿಯ ಬದುಕಾದರೆ ನಮ್ಮ ನ್ಯೂಕ್ಲಿಯರ್ ಕುಟುಂಬಗಳದ್ದು ಮತ್ತೊಂದು ರೀತಿಯ ಬದುಕು.  ಭಾರತದಲ್ಲಿ ಬೆಳೆದು ಬಂದ ಪರಿಣಾಮವಾಗಿ ನಾವು ಹೋಗಿ ಬಂದಲ್ಲೆಲ್ಲ ನಾವು ಕೆಲಸ ಮಾಡುವಲ್ಲೆಲ್ಲ ಅವಕಾಶವಾದಿಗಳಾಗಿ ಕಂಡು ಬರುತ್ತೇವೆ.  ಸ್ಥಳೀಯ ಡಿ.ಎಮ್.ವಿ. ಲೈನ್‌ಗಳು ಇರುಲಿ, ಇಂಡಿಯನ್ ಎಂಬಸಿ ನೂಕು ನುಗ್ಗಲಾಗಲೀ ನಮಗ್ಯಾರೀಗೂ ಹೊಸತು ಎನ್ನಿಸುವುದಿಲ್ಲ.  ಟ್ರಾಫಿಕ್ ಜಾಮ್ ಆದಾಗಲೆಲ್ಲ ಮನಸ್ಸು ಅಡ್ಡ ದಾರಿ ಹುಡುಕುತ್ತಲೇ ಇರುತ್ತದೆ.  ಇದ್ದುದರಲ್ಲೇ ಅಡ್ಜಸ್ಟ್ ಮಾಡಿಕೊಂಡು ಬೆಳೆದು ಬಂದ ಪರಿಣಾಮ ಎಷ್ಟೇ ಇದ್ದರೂ ಕಡಿಮೆಯಲ್ಲೇ ಬದುಕುವುದು ಅಭ್ಯಾಸವಾಗಿ ಬಿಡುತ್ತದೆ.  ಹಾಸಿಗೆ ಇದ್ದಷ್ಟೇ ಕಾಲು ಚಾಚು ಅಂದವರಿಗೆ ನಾವು ಏಕೆ ಎಂದು ಕೇಳಲೇ ಇಲ್ಲ, ನನಗೆ ಇಷ್ಟ ಬಂದಲ್ಲಿ ಮಲಗುತ್ತೇನೆ ಎನ್ನುವುದು ಯಾವತ್ತೂ ಒಂದು ಆಪ್ಷನ್ನ್ ಆಗಿರಲೇ ಇಲ್ಲ.

 

ನಮ್ಮ ಮನೆಯ ಕಸವನ್ನು ಸಂಸ್ಕರಿಸಬಹುದು, ನಮ್ಮ ಕಸ ಮತ್ತೊಬ್ಬರಿಗೆ ಮಾರಕ ಎನ್ನುವುದು ನಮ್ಮ ಕಲ್ಪನೆಯಲ್ಲೇ ಇಲ್ಲ, ಇವತ್ತಿಗೂ ಸಹ ಸ್ಥಳೀ ಟೌನ್‌ಶಿಪ್‌ನವರ್ ಮ್ಯಾಂಡೇಟರಿ ಗಾರ್‌ಬೇಜ್ ಕಲೆಕ್ಷನ್ ಮಾಡದೇ ಹೋದರೆ, ಅದಕ್ಕೆ ತಕ್ಕ ದುಡ್ಡನ್ನು ತೆಗೆದುಕೊಳ್ಳುವುದು ಆಫ್ಷನಲ್ ಆದರೆ ನಾವೆಲ್ಲ ನಮ್ಮ ಗಾರ್‌ಬೇಜ್ ಅನ್ನು ಏನು ಮಾಡುತ್ತಿದ್ದೆವೋ ಎಂದು ಹೆದರಿಕೆಯಾಗುತ್ತದೆ.  ಎಲ್ಲರೂ ಕಸವನ್ನು ತೆಗೆದು ಕನ್ಸರ್‌ವೆನ್ಸಿಗೆ ಸುರಿದು ಕೈ ಕೊಡಗಿ ಕೊಂಡರೆ ಕನ್ಸರ್‌ವೆನ್ಸಿ ಕ್ಲೀನ್ ಮಾಡುವವರಾರು? ಸಾವಿರಾರು ವರ್ಷಗಳಿಂದ ಲಂಚಕೋರತನ ಇದ್ದರೂ, ಲಂಚ ನಿರ್ಮೂಲನ ಎನ್ನುವುದು ಯಾವ ಪೊಲಿಟಿಕಲ್ ಅಜೆಂಡಾದಲ್ಲಿ ಇದೆ ಎಂದು ಮಸೂರವನ್ನು ಇಟ್ಟು ನೋಡಬೇಕಾಗಿದೆ.  ಅದು ಎಂತಹ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿ ಸಿಕ್ಕುಬಿದ್ದು ಕೋರ್ಟಿನಲ್ಲಿ ಸಾಭೀತಾದರೂ ಅಂಥವರು ಮತ್ತೆ ಗೆದ್ದು ಬರುವ ಪದ್ಧತಿ ಹಾಗೂ ರೂಢಿ ಇದೆ.  ಇವುಗಳನ್ನು ಭಿನ್ನ ನೆಲೆಯಲ್ಲಿ ನೋಡುವ ದೃಷ್ಟಿಕೋನ ಪರಕೀಯವಾಗುತ್ತದೆ.

 

ಹೀಗೆ ಸರಿ-ತಪ್ಪು, ಅಲ್ಲಿ-ಇಲ್ಲಿ, ಹಾಗೆ-ಹೀಗೆ, ಚಿಕ್ಕದು-ದೊಡ್ಡದು ಎನ್ನುವ ಅನೇಕಾನೇಕ ವಿರೋಧಾಭಾಸಗಳ ಜೊತೆ ಏಗುವುದನ್ನು ಪ್ರವೃತ್ತಿಯನ್ನಾಗಿಸಿಕೊಂಡು ಬದುಕಿನ ಕರ್ಮ ಜೀವನವನ್ನು ನೂಕುವ ಅನಿವಾಸಿ ಮನಕ್ಕೆ ಗೆಲುವಾಗಲಿ!

Monday, November 09, 2009

ನಮ್ಮ ನೆಲೆಗಟ್ಟು ಹಾಗೂ ಆಯಾಮಗಳು

ಅಬ್ಬಾ, ಕೊನೆಗೂ ಈ ರಾಜ್ಯ ರಾಜಕಾರಣದ ಬಿಕ್ಕಟ್ಟಿನ ಸುದ್ದಿಗಳು ವೃತ್ತಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಸೆಕೆಂಡರಿಯಾಗತೊಡಗಿದವು!  ಇತ್ತೀಚೆಗೆ ಕೆಲವು ವಾರಗಳಿಂದ ಅವರಿವರು ಹಿಡಿದ ಬಿಗಿಪಟ್ಟಿಗೆ ಕೊನೆಗೂ ತೆರೆ ಬಿತ್ತು.  ಮತ್ತೆ ಮಳೆ ಅಲ್ಲಲ್ಲಿ ಹೆಚ್ಚು ಅಬ್ಬರ ತೋರಿದಂತೆ ನಮ್ಮ ಧುರೀಣರಿಗೆ ಇತ್ತೀಚಿನ ಪ್ರವಾಹದ ಪ್ರಕೋಪ ನೆನಪಿಗೆ ಬಂದು ತಮ್ಮ ತಾಲ್ಲೂಕು, ಜಿಲ್ಲೆಗಳ ಜನರಿಗೆ ಸಂತೈಸಲು ಈಗ ಸಮಯ ಸಿಕ್ಕಿರಬಹುದು ಎಂದು ನನ್ನಂತಹವರಿಗೆ ಒಂದು ರೀತಿಯ ಸಮಾಧಾನ.  ಅದೂ ಕರ್ನಾಟಕ ರಾಜ್ಯೋತ್ಸವ ಮಾಹೆಯಲ್ಲಿ ನಮ್ಮ ಸರ್ಕಾರ ಕುಸಿದು ನಮ್ಮ ವ್ಯವಸ್ಥೆ ನಗೆಪಾಟಲಿಗೆ ಗುರಿಯಾಗುವುದೆಂದರೆ?

 

ದೂರದ ಅಮೇರಿಕದಲ್ಲಿ ಕುಳಿತು ಮಾಧ್ಯಮಗಳನ್ನು ಹೇಳಿದ್ದನ್ನು ನೋಡಿ ನಂಬುವ ನಮ್ಮಂತಹವರಿಗೆ ವಸ್ತು-ವಿಷಯದ ಪೂರ್ಣ ಪರಿಚಯವಾಗುವುದೇ ಇಲ್ಲ.  ಅಧಿಕಾರಿಗಳ ನಡುವೆ ನಡೆಯುವ ಮಾತುಕಥೆ, ಅವರ ತಂತ್ರಗಳ ಸುತ್ತಲೂ ಹೆಣೆದುಕೊಳ್ಳುವ ಅಸಮಧಾನ ಇವು ಹೊಸತಲ್ಲ ಹಾಗೂ ಶಾಸಕಾಂಗದ ಪ್ರಭಾವ ಕಾರ್ಯಾಂಗದ ಮೇಲೆ ಯಾವಾಗಲೂ ಇರುವಂತೆ ರಾಜಕಾರಣಿಗಳು ಹೋಗಿ-ಬರುತ್ತಿದ್ದರೂ ಅಧಿಕಾರಿಗಳು ತಮ್ಮ ವರ್ತುಲಗಳಲ್ಲಿ ಮುಂದುವರೆಯುತ್ತಲೇ ಇರುತ್ತಾರೆ.  ಹೀಗಿದ್ದ ಅಧಿಕಾರಿಗಳ ವಲಯದಲ್ಲಿ ದಿಢೀರ್ ’ಕಾರ್ಯಾಚರಣೆ’ ನಡೆದು ಅವರಿವರನ್ನು ಜನ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡು ಅಲ್ಲಿಲ್ಲಿ ವರ್ಗಾವಣೆ ಮಾಡಲಾಗಿದೆ ಎನ್ನುವುದೊಂದು ಆರೋಪ.  ಅದಕ್ಕೆ ಪ್ರತಿಯಾಗಿ ಭಿನ್ನಮತ.  ಇವುಗಳಿಗೆಲ್ಲ ದೆಹಲಿಯ ವರಿಷ್ಠರ ಸೂತ್ರದಾರಿಕೆ ಹಾಗೂ ಮಾತುಕಥೆ.  ಇವುಗಳನ್ನೆಲ್ಲ ಹತ್ತಿರದಿಂದ ವೀಕ್ಷಿಸಿಕೊಂಡು ಸಿಕ್ಕಿದ್ದರಲ್ಲಿ ಅವಕಾಶ ಸಾಧನೆ ಮಾಡಿಕೊಳ್ಳುವುದು ಮತ್ತೊಂದು ಬಣ.

 

ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಕಡೆಗಣಿಸಿ ಶಾಸಕರನ್ನು ಹೈದರಾಬಾದಿನಲ್ಲಿ ನಿಯೋಜಿಸಿ ’ಮಾರಾಟ’ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಹೆಸರಿನಲ್ಲಿ ಕೋಟ್ಯಾಂಟರ ರೂಪಾಯಿಗಳಿಗೆ ಒಬ್ಬೊಬ್ಬ ಶಾಸಕರನ್ನು ಮಾರಿಕೊಳ್ಳುವ ಧರಣಿಯನ್ನು ಹಮ್ಮಿಕೊಂಡಿದ್ದರು.  ಅದು ಜನ ಸಾಮಾನ್ಯರ ಪ್ರತಿಭಟನೆಯೋ, ರಾಜಕೀಯ ಪ್ರೇರಿತವೋ ಎಂಬುದು ಸರಿಯಾಗಿ ತಿಳಿದು ಬಂದಿಲ್ಲವಾದರೂ ಶಾಸಕರ “ಕುದುರೆ ವ್ಯಾಪಾರ” ಇವತ್ತು ನಿನ್ನೆಯದಲ್ಲ ಬಿಡಿ.

 

ನಮ್ಮವರನ್ನು ಪ್ರೇರಿಪಿಸುವುದು ಇಷ್ಟೇ: ಹಣ, ಜಾತಿ ಹಾಗೂ ಬಣ.  ಇವು ಎಲ್ಲಿ ಹೋದರೂ ಸತ್ಯವಲ್ಲವೇ? ಎಂದು ಯಾರಾದರೂ ಪ್ರಶ್ನಿಸಬಹುದು, ಆದರೆ ನಮ್ಮ ಕರ್ನಾಟಕದಲ್ಲಿ ಒಂದು ವಿಶೇಷತೆ ಇದೆ – ಅವೇ ಬ್ರಾಹ್ಮಣ, ಗೌಡ, ಲಿಂಗಾಯಿತ, ಕುರುಬ ಮೊದಲಾದ ಜಾತಿಗಳು, ಅವರಲ್ಲೇ ಗಣಿ ಒಡೆತನದವರು, ಪಕ್ಷ ಕಟ್ಟಿದವರು, ಬೇರೆ ಪಕ್ಷದಿಂದ ಹಾರಿ ಸಧ್ಯಕ್ಕೆ ತಾತ್ಕಾಲಿಕ ನೆಲೆಯನ್ನು ಕಂಡುಕೊಂಡವರು, ಒಂದೂವರೆ ವರ್ಷದ ಹಿಂದೆ ಸ್ವತಂತ್ರ ಅಭರ್ಥಿಗಳಾಗಿ ಗೆದ್ದು ಇಂದು ಮತ್ತೊಂದು ಪಕ್ಷ ಸೇರಿಕೊಂಡವರು – ಮೊದಲಾದವರೆಲ್ಲ ನಮ್ಮ ರಾಜ್ಯ ರಾಜಕಾರಣವನ್ನು ವಿಶೇಷಗೊಳಿಸುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು.

 

“ನಾನು ಸತ್ತರೂ ಪರವಾಗಿಲ್ಲ, ಅವನ ಮನೆಯಲ್ಲಿ ಅಥವಾ ಅವನಿಂದ ಒಂದು ಹನಿ ನೀರೂ ನನಗೆ ಬೇಡ!” ಎನ್ನುವುದು ನಮ್ಮ ಧ್ಯೇಯವಾಕ್ಯ.  ಇದೊಂದು ವಾಕ್ಯವೇ ಸಾಕು ಪ್ರಪಂಚದ ಪ್ರಯೋಗಶೀಲತೆಯನ್ನೆಲ್ಲ ಬದಿಗೊತ್ತಲು, ಇದೊಂದೇ ವಾಕ್ಯ ಸಾಕು ನಮ್ಮ ಹಿತ್ತಲಿನ ಆಲದ ಮರವೋ ಹುಣಿಸೇ ಮರವೋ ನಮಗೆ ದೊಡ್ಡದಾಗಿ ಕಾಣಲು.  ಈ ಮನೋಭಾವನೆ ಇರುವವರೆಗೆ ನಮ್ಮಲ್ಲಿನ ರಾಜಕಾರಣ ವಿಶ್ವ ರಾಜಕೀಯದ ಮಾದರಿಯ ಪ್ರಜಾಪ್ರಭುತ್ವವನ್ನು ಅನುಸರಿಸಿಯೂ ಭಿನ್ನವಾಗಿರುತ್ತದೆ, ಹೀಗೆ ಭಿನ್ನವಾಗಿರುವ ನೆಲೆಗಟ್ಟಿಗೆ ಹಣ, ಜಾತಿ ಹಾಗೂ ಬಣಗಳೆಂಬುವವು ಹೊಸ ಹೊಸ ಆಯಾಮಗಳನ್ನು ಕೊಡುತ್ತಲೇ ಹೋಗುತ್ತವೆ.

Saturday, November 07, 2009

ನಮ್ಮ ದೇಶ ನಮ್ಮದು!

’ನೀವ್ ಇಂಡಿಯಾಕ್ ಹೋಗಿ ನೋಡಿ, ಅಲ್ಲಿ ಎಷ್ಟು ಬದಲಾವಣೆಯಾಗಿದೇ ಅಂತ!’ ಎಂದು ನನ್ನ ಬಳಿ ಹೇಳಿಕೊಂಡವರು ದೇಶದ ಉದ್ದಾರವನ್ನು ಕುರಿತು ಹೇಳಿರದೇ ಒಂದು ರೀತಿಯ ವ್ಯಂಗ್ಯದ ಇಂಟೋನೇಷನ್ನ್ ಅನ್ನು ತೋರಿಸಿಕೊಂಡಿದ್ದು ನೆನಪಿಗೆ ಬಂತು.  ಹಿಂದೆ ಅರವತ್ತೆರಡು ವರ್ಷಗಳ ಸ್ವಾತಂತ್ರ್ಯದ ಬಗ್ಗೆ ಬರೆದಂತೆ ನಮ್ಮ ದೇಶ ಎಷ್ಟೊಂದು ಬದಲಾವಣೆಗಳನ್ನು ಕಂಡಿದೆ ಹಾಗೂ ಕಾಣುವುದಕ್ಕಿದೆ ಅಂತದರಲ್ಲಿ ನಾವೆಲ್ಲ ಈವರೆಗೆ ಗಮನಿಸಿದ ಬದಲಾವಣೆಗಳು ಮಹಾನ್ ಅಲ್ಲವೇ ಅಲ್ಲ ಅನ್ನೋದು ನನ್ನ ಅನಿಸಿಕೆ.  ಅಲ್ಲದೆ ಬದಲಾವಣೆಗಳಿಗೆ ತಮ್ಮನ್ನು ತಾವು ಅಳವಡಿಸಿಕೊಂಡು ಮುಂದುವರೆಯದಿರುವುದು ದೇಶಗಳಿಗಾಗಲೀ, ಕಂಪನಿಗಳಿಗಾಗಲಿ ಅಥವಾ ವ್ಯಕ್ತಿ-ಕುಟುಂಬಗಳಿಗೆ ಸಾಧುವೂ ಅಲ್ಲ.

 

ಎಂಭತ್ತರ ದಶಕದಿಂದೀಚೆಗೆ ನಮ್ಮನ್ನು ನಾವು ಪ್ರಪಂಚದ ಇತರೆ ಬೆಳವಣಿಗೆಗಳಿಗೆ ತೊಡಗಿಸಿಕೊಂಡಿದ್ದು ನಿಮಗೆಲ್ಲ ನೆನಪಿರಬಹುದು.  ಮೊದಲೆಲ್ಲ ಕುಟುಂಬ ಯೋಜನೆ ಎಂದರೇನು ಎಂದು ಗೊತ್ತಿರದೇ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದ ಕುಟುಂಬಗಳು ಎಷ್ಟೋ.  ಒಂದೇ ಸೂರಿನೆಡೆ ಬಡತನದಲ್ಲಿ ಹಲವಾರು ಮಕ್ಕಳ ಹೊಟ್ಟೆ ತುಂಬುವುದು, ಅವುಗಳಿಗೆ ಸರಿಯಾದ ವಿದ್ಯೆಯನ್ನು ಕಲಿಸಿಕೊಡುವುದು ಎಲ್ಲವೂ ಸಾಧ್ಯವಿಲ್ಲದ ಮಾತಾಗಿತ್ತು.  ಈ ತಲೆಮಾರು ಇರುವ ಹಾಗೆಯೇ ಮುಂದಿನ ಒಂದೆರಡು ತಲೆಮಾರುಗಳು ಮುಂದುವರೆದ ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಮೊದಲಾದವುಗಳ ಪಲಾನುಭವಿಗಳಾಗಿ ಬೆಳೆಯುವ ಭಾಗ್ಯ ಕಂಡುಕೊಂಡವು.  ಹೀಗೆ ತಲೆಮಾರುಗಳು ತಮ್ಮನ್ನು ತಾವು ಬದಲಾವಣೆಗಳಿಗೆ ಒಳಪಡಿಸಿಕೊಂಡು ಬಂದಂತೆ ಜಗತ್ತು ಚಿಕ್ಕದಾಯಿತು.  ಎಲ್ಲೆಲ್ಲೋ ಇದ್ದವರಿಗೆ ಎಲ್ಲಿಯದೋ ಮಾಹಿತಿ ದೊರೆಯುವಂತಾಯಿತು.

 

ತಂತ್ರಜ್ಞಾನವೇ ಇರಲಿ, ಮಾಹಿತಿ-ಸಂವಹನಗಳಾಗಲಿ ಭಾರತ ಜಗತ್ತಿನ ಅತಿ ದೊಡ್ಡ ಲ್ಯಾಬೋರೇಟರಿ ಇದ್ದ ಹಾಗೆ.  ಹೊಸ ವಸ್ತು, ವಿಷಯಗಳಿಗೆ ಕೋಟ್ಯಾಂತರ ಭಾರತೀಯರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಲೇ ಬಂದರು.  ಬೇರೆ ಯಾವೊಂದು ದೇಶದಲ್ಲೂ ಸಿಗದಷ್ಟು ಬಳಕೆದಾರರು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ದೇಶ-ವಿದೇಶಗಳ ಗುರಿಯಾದರು.  ೧೯೫೦ ರ ದಶಕ ಅಮೇರಿಕನ್ನರಿಗೆ ನಾವು ಬೆಳೆದ ಬಗೆಯನ್ನು ತಿಳಿಸಿ ಹೇಳಿದಾಗ ಅಲ್ಲಿ ಬೇಕಾದಷ್ಟು ಸಾಮ್ಯತೆ ಸಿಗುತ್ತದೆ, ನಮ್ಮ ನಡೆ-ನುಡಿಯನ್ನು ಗಮನಿಸಿದಾಗ ಅದು ಸ್ಪಷ್ಟವಾಗುತ್ತದೆ. ಆದರೆ ನಮ್ಮ ಮುಂದಿನ ಜನರೇಶನ್ನುಗಳಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ನಿಂತು ನೋಡಿದರೂ ಎಲ್ಲ ಯುವ ಪೀಳಿಗೆಗಳೂ ಒಂದೇ ಪೋಷಣೆಗಳಿಗೆ ಒಳಗಾದಂತೆ ಕಂಡು ಬರುತ್ತದೆ.  ಉದಾಹರಣೆಗೆ, ಒಂದು ಕಾಲದಲ್ಲಿ ಭಾರತವನ್ನು ಪೀಡಿಸುತ್ತಿದ್ದ ಪೋಲಿಯೋ ಈಗ ಜಗತ್ತಿನುದ್ದಕ್ಕೂ ನಿರ್ಮೂಲನದ ಹಾದಿ ಹಿಡಿದಿದೆ.  ಪೋಲಿಯೋ ಪೀಡಿತರಾದವರು ಹಳೆಯ ಸಂತತಿಗಳ ಉದಾಹರಣೆಗಳಾದರು.  ವಿಶ್ವದ ಒಂದು ಮೂಲೆಯಲ್ಲಿ ನಡೆಯುವ ವಿಚಾರಗಳು ಇನ್ನೆಲ್ಲೋ ತಮ್ಮ ಅಲೆಗಳನ್ನು ಎಬ್ಬಿಸುವ ಸುನಾಮಿಗಳಾಗುವುದು ಇತ್ತೀಚೆಗೆ ಸಹಜ ಹಾಗೂ ನಿರೀಕ್ಷಿತ.

 

ನಮ್ಮ ಭಾರತದ ಹಳೆಯ ನೆನಪುಗಳು ’ನಾಷ್ಟಾಲ್ಜಿಯ’ವಲ್ಲದೇ ಮತ್ತೇನು?  ರಸ್ತೆಯ ತುಂಬ ಕಡಿಮೆ ಕಾರುಗಳು ಓಡಾಡುತ್ತಿದ್ದ ೭೦-೮೦ ರ ದಶಕದ ದಿನಗಳಲ್ಲಿ ಬೆಳೆದು ಬಂದ ನಾವು ಇಂದು ಮನೆಗೊಂದು ಕಾರಿನ ದಿಢೀರ್ ಬೆಳವಣಿಗೆಯನ್ನು ವಕ್ರ ದೃಷ್ಟಿಯಿಂದ ನೋಡುತ್ತೇವೇಕೆ? ಜಾತಿ-ಜಾತಕಗಳ ಮುಖಾಂತರ ಮದುವೆಯಾಗಿ ಬಂದ ನಮಗೆ ಅಂತರ್ಜಾತಿ-ಅಂತರ್ಮತ ವಿವಾಹಗಳು ಹೊಸದಾಗಿ ಕಂಡುಬಂದರೆ ಅದು ನಮ್ಮ ಮಿತಿಯೆಂದೇಕನಿಸುವುದಿಲ್ಲ?  ನಾವಿದ್ದಾಗಲೇ “ಎಷ್ಟೊಂದು ಜನ!” ಎಂದು ಉದ್ಗಾರವೆತ್ತುತ್ತಿದ್ದವರಿಗೆ ಈಗ ದೇಶ ಬೆಳೆದಿದೆ ಎಂಬುದನ್ನು ಸಕಾರಾತ್ಮಕವಾಗಿ ಸ್ವೀಕರಿಸಲೇಕಾಗುವುದಿಲ್ಲ?  ಕಡಿಮೆ ಜನ ಹೆಚ್ಚು ಸಂಪನ್ಮೂಲಗಳ ಅಮೇರಿಕದ ನೀರು ಕುಡಿದು ಬಡತನದ ನಮ್ಮ ನೆರೆಹೊರೆಗಳು ಕ್ಷುಲ್ಲಕವಾಗಿ ಕಾಣುವುದೇಕೆ?  ನಮಗೆಲ್ಲ ಭಾರತ ಅನ್ನೋದು ಗಂಡನ ಮನೆಯಲ್ಲಿ ಮುನಿಸು ಸಾಧಿಸಿಕೊಂಡು ಸಾಂತ್ವನಕ್ಕೆ ಓಡುವ ಹೆಣ್ಣಿನ ತವರು ಮನೆಯೇಕಾಗಬೇಕು?  ದೂರ ಹೋಗಿಯೂ ತವರು ನಾವು ಕಂಡುಕೊಂಡ ಹಾಗೇ ಇರಬೇಕು ಎನ್ನುವುದು ಈ ನಿರಂತರ ಬದಲಾವಣೆಯ ದಿನಗಳಲ್ಲಿ ನ್ಯಾಯವೇ?

 

ಬದಲಾವಣೆಗಳಿಗೆ ಓಗೊಟ್ಟ ಯಾರೊಬ್ಬರೂ ಭಾರತದ ಬೆಳವಣಿಗೆಯ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಲಾರರು.  ಒಂದು ಕಾಲದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಟ್ರಂಕ್ ಕಾಲ್ ಮಾಡಿ ಕಾದು ಒಂದು ದೂರವಾಣಿಯ ಸಂದೇಶವನ್ನು ಸಾಗಿಸುತ್ತಿದ್ದವರಿಗೆ ಇಂದಿನ ಮೊಬೈಲ್ ಯುಗ ವರದಾನವಾಗಿರುವಾಗ ಅದನ್ನು ನಾವು ಮಾಲಿನ್ಯ (ನಾಯ್ಸ್) ಎನ್ನುವುದು ಸ್ವಾರ್ಥವಾಗುತ್ತದೆ.  ಕಾರುಗಳು ಶ್ರೀಮಂತರಿಗಷ್ಟೇ ಇದ್ದು ಐಶಾರಾಮವಾಗಿದ್ದ ದಿನಗಳಿಗೆ ಹೋಲಿಸಿಕೊಂಡು ಇಂದಿನ ಟ್ರಾಫಿಕ್ ಜಾಮ್‌ ಅನ್ನು ದೂರುವುದು ನಮ್ಮ ಮಿತಿಯಾಗುತ್ತದೆ.  ಒಳ್ಳೆಯದೆಲ್ಲ ನಮಗೇ ಇರಲಿ ಎನ್ನುವುದು ಯಾವ ದೊಡ್ಡತನದ ಪ್ರತೀಕವಾದೀತು ನೀವೇ ಹೇಳಿ.

Tuesday, November 03, 2009

...there goes Jon Corzine!

ನ್ಯೂ ಜೆರ್ಸಿ ಅಂದರೆ ಡೆ‌ಮಾಕ್ರಟಿಕ್ ರಾಜ್ಯ - ಹತ್ತು ವರ್ಷಗಳಿಗಿಂತಲೂ ಹೆಚ್ಚು ಡೆಮಾಕ್ರಟಿಕ್ ಪಕ್ಷದವರು ಆಡಳಿತ ನಡೆಸಿಕೊಂಡು ಬಂದ ಸಂಭ್ರಮ ಇಂದು ಗವರ್ನರ್ ಜಾನ್ ಕಾರ್‌ಝೈನ್ ಎಲೆಕ್ಷನ್ನಿನ್ನಲ್ಲಿ ಸೋಲುವುದರೊಂದಿಗೆ ಕೊನೆಯಾಯಿತು ಅನ್ನಬಹುದು.

ನಮ್ಮಂಥವರು, ಅದೇ ಹಸಿರು ಕಾರ್ಡು ಫಲಾನುಭವಿಗಳು, ಇಲ್ಲಿ ಮತ ಚಲಾವಣೆ ನಡೆಸದಿದ್ದರೂ ರಾಜ್ಯದಾದ್ಯಂತ ನಡೆಯೋ ಚುನಾವಣೆಯ ವಿಚಾರಗಳನ್ನು ಬೇಡವೆಂದು ದೂರವಿರಿಸಿದರೂ ಅವುಗಳ ವಿಚಾರ ಒಂದಲ್ಲ ಒಂದು ರೀತಿಯಿಂದ ನಮ್ಮ ಮನ-ಮನೆಗಳಲ್ಲಿ ನುಸುಳುವುದು ಸಹಜ. ರಾಜ್ಯದ ಬಜೆಟ್, ನಿರುದ್ಯೋಗ, ಆದಾಯ ತೆರಿಗೆ, ಹೈವೇ ಸುಂಕ ಮೊದಲಾದವುಗಳು ಎಲ್ಲರಿಗೂ ಅನ್ವಯವಾಗುತ್ತವೆ.

ವಾಲ್‌ಸ್ಟ್ರೀಟ್ ಗುರು, ಗೋಲ್ಡ್‌ಮನ್ ಸ್ಯಾಕ್ಸ್‌ನ ಎಕ್ಸಿಕ್ಯೂಟಿವ್ ಎಂದೇ ಪ್ರಖ್ಯಾತಿಯಾಗಿದ್ದ ಜಾನ್ ಕಾರ್‌ಝೈನ್ ಕೇವಲ ವರ್ಷಕ್ಕೆ ಒಂದೇ ಒಂದು ಡಾಲರ್ ಸಂಬಳ ತೆಗೆದುಕೊಂಡು ಹೆಸರು ಮಾಡಿದ ಮನುಷ್ಯ. ಜಾನ್ ಪಕ್ಕದ ನ್ಯೂ ಯಾರ್ಕ್ ನಗರ ಮೇಯರ್ (ಮತ್ತೊಮ್ಮೆ ಮೂರನೇ ಟರ್ಮ್‌ಗೆ ಇಂದು ಆಯ್ಕೆಗೊಂಡ) ಮೈಕಲ್ ಬ್ಲೂಮ್‌ಬರ್ಗ್ ಥರ ಬಿಲಿಯುನರ್ ಅಲ್ಲದಿದ್ದರೂ ಮಲ್ಟಿ ಮಿಲಿಯನರ್ ಖಂಡಿತ ಹೌದು. ಅಂಥವರಿಗೆ ಈ ಗವರ್ನರ್‌ಗೆ ಕೊಡುವ ಸಂಬಳ ಯಾವ ಲೆಕ್ಕವೂ ಅಲ್ಲ. ಜಾನ್ ಕಾರ್‌ಝೈನ್‌ನ ಮಾತುಗಳನ್ನು ಕೇಳಿದರೆ, ಅದು ಯಾವುದೇ ಸಮಾರಂಭದಲ್ಲಿರಬಹುದು ಅಥವಾ ಎಲೆಕ್ಷನ್ನ್ ಕ್ಯಾಂಪೇನ್‌ನಲ್ಲಿರಬಹುದು, ಅವರು ಹಿಂದೆ ವಾಲ್‌ಸ್ಟ್ರೀಟ್‌ನಲ್ಲಿ ಒಬ್ಬ ಎಕ್ಸಿಕ್ಯೂಟಿವ್ ವರ್ಚಸ್ಸನ್ನು ಬಳಸಿಕೊಳ್ಳೋದಿಲ್ಲ ಅಥವ ತೋರಿಸಿಕೊಳ್ಳೋದಿಲ್ಲ ಎನ್ನೋದು ನನ್ನ ಅನಿಸಿಕೆ. ಜೊತೆಗೆ, ಒಬ್ಬ ಸೀಜನ್ಡ್ ರಾಜಕಾರಣಿಯ ಚಾಕಚಕ್ಯತೆ, ತಂತ್ರಗಳೂ ಅವರಿಗೆ ಈ ನಾಲ್ಕು ವರ್ಷಗಳಲ್ಲಿ ಸಿದ್ಧಿಸಿದ ಹಾಗೆ ಕಂಡುಬರಲಿಲ್ಲ.

ಐತಿಹಾಸಿಕವಾಗಿ ಹಾಲಿ ಗವರ್ನರ್ ಮರು ಎಲೆಕ್ಷನ್ನಿನ್ನಲ್ಲಿ ಸೋಲುವುದು ನ್ಯೂ ಜೆರ್ಸಿಯಲ್ಲಿ ಗಮನಾರ್ಹವಾದುದು. ಕೇಂದ್ರದಲ್ಲಿ ಡೆಮಾಕ್ರಟಿಕ್ ಸರ್ಕಾರ ಇದ್ದು - ಕಾಂಗ್ರೆಸ್, ಸೆನೆಟ್, ವೈಟ್‌ಹೌಸ್ ಎಲ್ಲಕಡೆಗೆ ಡೆಮಾಕ್ರಟ್ ಪಕ್ಷದವರು ತುಂಬಿರುವ ಸನ್ನಿವೇಶದಲ್ಲಿ ಹಾಗೂ ಒಬಾಮ ಖುದ್ದಾಗಿ ಬಂದು ಕ್ಯಾಂಪೇನ್‌ನಲ್ಲಿ ಭಾಗವಹಿಸಿದ್ದರೂ ಇದ್ದ ಸೀಟ್ ಅನ್ನು ಉಳಿಸಿಕೊಳ್ಳಲಿಲ್ಲ ಎನ್ನುವುದು ಬಹಳ ದೊಡ್ಡ ವಿಷಯವಾಗುತ್ತದೆ. ಇಲ್ಲಿ ರಿಪಬ್ಲಿಕನ್ ಪಕ್ಷದ್ದ ಕ್ರಿಸ್ ಕ್ರಿಸ್ಟೀಯ ಜಯ, ಸಫಲತೆ ಮುಖ್ಯವಾಗಿ ಕಾಣಿಸುತ್ತದೆ. ಹೀಗೇ ವರ್ಜೀನಿಯ ರಾಜ್ಯದಲ್ಲೂ ಅಲ್ಲಿನ ಡೆಮಾಕ್ರಟಿಕ್ ಪಕ್ಷದ ಗವರ್ನರ್ ಸೀಟು ಉಳಿಯದೆ ಅದೂ ರಿಪಬ್ಲಿಕನ್ ಪಕ್ಷದವರ ಪಾಲಾಗಿರುವುದು ಮತ್ತೊಂದು ಮುಖ್ಯ ಅಂಶ.

ಈ ಎರಡು ಅಂಶಗಳನ್ನು ಗಮನಿಸಿ ಇನ್ನು ಮೂರು ವರ್ಷಗಳ ನಂತರ ಬರುವ ಪ್ರೆಸಿಡೆಂಟ್ ಎಲೆಕ್ಷನ್ನ್ ಬಗ್ಗೆ ಈಗಲೇ ಏನನ್ನು ಹೇಳುವುದು ತಪ್ಪಾಗುತ್ತದೆ. ಆದರೆ, ಕಳೆದ ವರ್ಷ ಓಟಿನಲ್ಲಿ ಭಾಗವಹಿಸಿದಷ್ಟು ಜನ ಮುಖ್ಯವಾಗಿ ಮೊಟ್ಟ ಮೊದಲನೇ ಭಾರಿ ಮತ ಚಲಾಯಿಸಿದವರ ಸಂಖ್ಯೆ ಗಮನಾರ್ಹವಾಗಿ ಇಳಿಮುಖುವಾಗಿರುವುದು ಗೊತ್ತಾಗುತ್ತದೆ.

ನಾವು, ನ್ಯೂ ಜೆರ್ಸಿಯ ಜನ, ಈ ಹೊಸ ರಿಪಬ್ಲಿಕನ್ ರಾಜ್ಯ ಸರ್ಕಾರದ ಕಡೆಗೆ ನೋಡುತ್ತೆವೆ, ಹಾಗಾದರೂ ಒಂದಿಷ್ಟು ಟ್ಯಾಕ್ಸ್ ಕಡಿಮೆಯಾಗಲಿ ಎಂದು!

***

ದೂರದಲ್ಲಿ - ನಾವು, ನಮ್ಮ ಕರ್ನಾಟಕದ ಮುಖ್ಯಮಂತ್ರಿ ಎಡೆಯೂರಪ್ಪನವರ ಸರ್ಕಾರ, ಅವರ ಖುರ್ಚಿಗೆ ಏನು ಆತಂಕ ಕಾದಿದೆಯೋ ಎಂದು ಬಿಟ್ಟುಗಣ್ಣು ಬಿಟ್ಟು ನೋಡುತ್ತಲೇ ಇದ್ದೇವೆ. ಅಲ್ಲಿ ಐದು ವರ್ಷಗಳ ಒಬ್ಬ ಮುಖ್ಯ ಮಂತ್ರಿಯ ಆಳ್ವಿಕೆ ಮುಂದುವರೆಯಲಿ, ರಾಜ್ಯದ ಜನರಿಗೆ ನೆಮ್ಮದಿ ಸಿಗಲಿ ಎನ್ನುವುದು ಆಶಯ ಅಷ್ಟೇ. ಎರಡೆರಡು ವರ್ಷಕ್ಕೊಮ್ಮೆ ಎಲೆಕ್ಷನ್ನುಗಳನ್ನು ನಡೆಸಿಕೊಂಡು ಹಣ ಚೆಲ್ಲುವುದರ ಬದಲು ಇದ್ದ ಸರ್ಕಾರವನ್ನೇ ಮುಂದುವರೆಸಿಕೊಂಡು ಒಳಜಗಳಗಳು ಮುಖ್ಯವಾಗದೇ ರಾಜ್ಯದ ಅಭಿವೃದ್ಧಿ ಕಾರ್ಯಗಳತ್ತ ಮುಖ ತೋರುವುದು ಒಳಿತು.

Monday, November 02, 2009

ಬಿಸಿನೆಸ್ಸ್ ಮೈಂಡ್

’ವ್ಯವಹಾರ ಅನ್ನೋದು ನಮ್ಮ ರಕ್ತದಲ್ಲೇ ಬಂದಿಲ್ಲಾ ಕಣ್ರಿ!’ ಎಂದು ನನ್ನ ಸಹೋದ್ಯೋಗಿಯೊಬ್ಬರಿಗೆ ಹೇಳಿದ್ದಕ್ಕೆ ಅವರು ದೊಡ್ಡದಾಗಿ ನಕ್ಕು ’ಅದು ರಕ್ತದಲ್ಲಿ ಬರಬೇಕಾದ್ದಿಲ್ಲ, ಮನಸ್ಸಿನಲ್ಲಿದ್ದರಾಯಿತು, ರಿಸ್ಕ್ ತೆಗೆದುಕೊಂಡು ಮುಂದುಬರಬೇಕು ಎನ್ನುವುದು ವಂಶಪಾರಂಪರ್ಯವಾಗಿರಬೇಕು ಎಂದೇನು ಇಲ್ಲವಲ್ಲ’ ಎಂದರು.

ಇತ್ತೀಚೆಗೆ ನನ್ನ ಮತ್ತೊಬ್ಬ ಗುಜರಾತ್ ಮೂಲದ ಸಹೋದ್ಯೋಗಿಯೊಬ್ಬರು once for all, for good ಎಂದು ನಮ್ಮ ಕಂಪನಿಯಿಂದ ರಿಟೈರ್‌ಮೆಂಟ್ ಪ್ಯಾಕೇಜ್ ತೆಗೆದುಕೊಂಡು ತಮ್ಮ ತಂದೆಯ ಬಿಸಿನೆಸ್ಸ್ ನೋಡಿಕೊಳ್ಳುವುದಕ್ಕೋಸ್ಕರ ಭಾರತಕ್ಕೆ ಹೊರಡುವ ಸುದ್ದಿಯ ಹಿನ್ನೆಲೆಯಲ್ಲಿ ನಾವು ಮಾತನಾಡಿಕೊಳ್ಳುತ್ತಿದ್ದೆವು.

ನಾವು ಈ ಕಂಪನಿಯ ನೌಕರರಾಗಿ ಇಲ್ಲಿ ತೊಡಗಿಸುವ ಶ್ರಮವನ್ನೇ ನಮ್ಮ ನಮ್ಮ ಉದ್ಯಮದಲ್ಲಿ ತೊಡಗಿಸಿದ್ದೇ ಆದರೆ ಅದು ಖಂಡಿತವಾಗಿ ಮುಂದೆ ಬರುವುದುರಲ್ಲಿ ಸಂಶಯವಿಲ್ಲ, ಎಲ್ಲರೊಳಗೂ ಒಬ್ಬ ಆಂಟ್ರಪ್ರೀನರ್ (entrepreneur) ಇರುತ್ತಾನೆ, ಆ ಸುಪ್ತಾವಸ್ಥೆಯ ಮನಸ್ಥಿತಿಯನ್ನು ಜಾಗೃತಗೊಳಿಸಬೇಕಷ್ಟೇ ಎನ್ನುವುದು ನನ್ನ ಸಹೋದ್ಯೋಗಿಯ ವಾದ.

ಅದಕ್ಕೆ ಪ್ರತಿಯಾಗಿ, ಬಿಸಿನೆಸ್ಸ್ ಎಂದರೆ ಸುಮ್ಮನೇ ಆಗುತ್ತಾ, ಹತ್ತರಲ್ಲಿ ಒಂಭತ್ತು ಮುಳುಗುವ ಸಾಧ್ಯತೆಯೇ ಹೆಚ್ಚಿರುವಾಗ, ಎಲ್ಲೋ ಒಂದು nitch ಏರಿಯಾ ಹಿಡಿದುಕೊಂಡು ಅದನ್ನೇ ಹಗಲೂ-ರಾತ್ರಿ ಧ್ಯಾನಿಸಿ ಮೇಲೆ ತಂದು ಅದನ್ನು ಬೆಳೆಸುವುದು ಅಂದರೆ ಸುಮ್ಮನೆಯೇ? ಅದಕ್ಕೆ ಈಗ - ಈ ಪರಿಸ್ಥಿತಿ, ಕಾಲ, ಸಂದರ್ಭ - ಇವೆಲ್ಲ ತಕ್ಕುವೇನು? ಎನ್ನುವುದು ನನ್ನ ವಾದ.

ನಾವು ಮೊದಲಿನಿಂದಲೂ ಅಷ್ಟೇ, ದಕ್ಷಿಣ ಭಾರತೀಯರು. ಸರ್ಕಾರಿ ಕೆಲಸ ಸಿಗುವುದು ನಮ್ಮ ಮನೆತನಗಳಲ್ಲಿ ದೊಡ್ಡ ವಿಷಯ, ತಲ-ತಲಾಂತರದಿಂದ ಸರ್ಕಾರದ ಸೇವೆ ದೇವರ ಸೇವೆ ಎಂದು ಬೆಳೆದುಬಂದವರು ನಾವು. ಈ ಬಿಸಿನೆಸ್ಸ್ ಸ್ಯಾವಿ ಮನಸ್ಸು, ಅದರ ಒಳ-ಹೊರಗಿನ ಸೆನ್ಸಿಟಿವಿಟಿಗಳು ನಮಗೆ ತಿಳಿದವೇ? ನಮಗೆ ಒಂದು ಸಹಾಯ ಹಸ್ತವೂ ಇಲ್ಲದಿರುವಾಗ ಯಾವ ಪಾರ್ಟನರುಗಳನ್ನು ನೆಚ್ಚಿಕೊಂಡು ಏನನ್ನು ಸಾಧಿಸೋದು? ಬಿಸಿನೆಸ್ಸು ಎಂದರೆ ಯಾವ ರಂಗವನ್ನು ಆಯ್ದುಕೊಳ್ಳೋದು? ಅದರ ಮಾರ್ಕೆಟ್ ರಿಸರ್ಚ್ ಮಾಡುವವರು ಯಾರು? ಮಾಡುವುದು ಯಾವಾಗ? ಅದಕ್ಕೆ ತಕ್ಕ ಇನ್‌ವೆಸ್ಟ್‌ಮೆಂಟ್ ಎಲ್ಲಿಂದ ತರೋದು? ಕಷ್ಟಮರುಗಳು ಯಾರು? ಕಂಪನಿಯ ಧ್ಯೇಯ-ಧೋರಣೆಗಳೇನು? ಉತ್ಪಾದಿಸುವ ವಸ್ತು ಯಾವುದು? ಕೊಡುವ ಸೇವೆ ಏನು, ಇತ್ಯಾದಿ ಇತ್ಯಾದಿ...ಪುಂಖಾನುಪುಂಕ ಪ್ರಶ್ನೆಗಳು ಶುರುವಷ್ಟೇ ಇದು.

ಇದೇ ದಿನ ಮಧ್ಯಾಹ್ನ ಟೆಕ್ಸಾಸ್‌ ಮೂಲದ ಬಿಸಿನೆಸ್ಸ್ ಅನ್ನು ನಮ್ಮ ಕಂಪನಿಗೆ ಪರಿಚಯಿಸಲು ವಿಸಿಟರ್ರ್ ಒಬ್ಬರು ಬಂದಿದ್ದರು. ಅವರು ಭಾರತೀಯ ಮೂಲದವರು ಎಂದು ತಿಳಿದು ಆಶ್ಚರ್ಯದ ಜೊತೆ ಸಂತೋಷವೂ ಆಯಿತು. ಗಂಡ-ಹೆಂಡತಿ ಇಬ್ಬರು ಸೇರಿ ಅಮೇರಿಕದಲ್ಲಿ ಒಂದು ಕನ್ಸಲ್‌‍ಟಿಂಗ್ ಕಂಪನಿಯನ್ನು ತೆರೆದಿದ್ದಾರೆ, ಅದರ ಮಾರ್ಕೆಟಿಂಗ್‌ನಿಂದ ಹಿಡಿದು ಎಲ್ಲ ವಿಷಯವನ್ನೂ ಗಂಡ-ಹೆಂಡತಿಯೇ ನೋಡಿಕೊಳ್ಳುತ್ತಾರೆ ಎಂದು ತಿಳಿದು ಆಶ್ಚರ್ಯವಾಯಿತು. ೨೦೦೬ ರಲ್ಲಿ ಕೆಲಸ ಕಳೆದುಕೊಂಡ ಅವರು ಒಂದು ಹೊಸ ಕಂಪನಿಯನ್ನು ಹುಟ್ಟುಹಾಕಿ ಒಂದು ಮಟ್ಟಕ್ಕೆ ಬೆಳೆಸಿದ್ದು ಈ ಎಕಾನಮಿಯಲ್ಲಿ ಗಮನಾರ್ಹವೇ.

ಹೀಗೆ ಅಲ್ಲಲ್ಲಿ ಹಲವಾರು ಯಶಸ್ಸಿನ ಹಾಗೂ ಫೇಲಾದ ಉದ್ಯಮಗಳು ಕೇಳಿಬರುವುದು ಸಹಜ, ಆದರೆ ನನ್ನ ಮನಸ್ಸು ಮಾತ್ರ ಪೇ-ಚೆಕ್ ನಿಂದ ಪೇ-ಚೆಕ್‌ಗೆ ಅಂಟಿಕೊಂಡು ಬಿಟ್ಟಿದೆ. ರಿಸ್ಕ್ ತೆಗೆದುಕೊಳ್ಳುವುದಿರಲಿ, ಅದರ ಬಗ್ಗೆ ಯೋಚಿಸುವುದಕ್ಕೂ ಪುರುಸೊತ್ತು ಇಲ್ಲ ಎನ್ನುವಂತಾಗಿದೆ.

ನಿಮ್ಮ ನಿಮ್ಮ ಪರಿಸ್ಥಿತಿ ಏನು? ನೀವು ನಿಮ್ಮದೇ ಬಿಸಿನೆಸ್ಸ್ ಆರಂಭಿಸಿದ್ದೀರೋ ಅಥವಾ ಬೇರೆಯವರ ಬಿಸಿನೆಸ್ಸಿನಲ್ಲಿ ಒಂದಾಗಿ ಹೋಗಿದ್ದೀರೋ?

Sunday, November 01, 2009

ಅದುಮಿಕೊಂಡ ಆಸೆ-ಆತಂಕ

B&H ಪ್ರೊಫೆಷನಲ್ ಕ್ಯಾಟಲಾಗ್ ಇಟ್ಟುಕೊಂಡು ಒಂದೊಂದೇ ಕೆಟಗರಿಯನ್ನು ನೋಡುತ್ತಾ ಇದ್ದಂತೆಲ್ಲಾ ಏನೇನ್ನನ್ನೆಲ್ಲ ಮಾಡಬಹುದು ಮಾಡಬಹುದಿತ್ತು ಎನ್ನಿಸಿತು. ಪ್ರೊಫೆಷನ್ ಆಡಿಯೋ, ವಿಡಿಯೋ, ಆಪ್ಟಿಕಲ್, ಕಂಪ್ಯೂಟರ್, ಸ್ಟೋರೇಜ್, ಕ್ಯಾಮೆರಾ...ಹೀಗೆ ವಿಧ ವಿಧವಾದ ವಸ್ತುಗಳನ್ನೆಲ್ಲ ನೋಡುತ್ತಿದ್ದ ಹಾಗೆ, ಅಯ್ಯೋ ಅದನ್ನು ಮಾಡಬಹುದಿತ್ತು, ಇದನ್ನು ಮಾಡಬಹುದಿತ್ತು...ಎನ್ನಬಹುದಾದ ಆಸೆಗಳೆಲ್ಲವೂ ಅದೆಲ್ಲೋ ಅದುಮಿಟ್ಟು ಹೊರಗೆ ಬಿಟ್ಟ ಸ್ಪ್ರಿಂಗಿನಂತೆ ತಮ್ಮೊಳಗಿನ ಪ್ರಚನ್ನ ಶಕ್ತಿಯನ್ನು ತೋರ್ಪಡಿಸತೊಡಗಿದವು.

ಟರ್ಮಿನಲ್ ಕಾಯಿಲೆಗೊಳಗಾದ ಕ್ಯಾನ್ಸರ್ ರೋಗಿಯ ಮನದಾಳದ ಆಸೆಗಳಂತಲ್ಲದಿದ್ದರೂ ಪ್ರತಿಯೊಬ್ಬರಿಗೂ ಅವರವರೊಳಗೆ ಮೂಲೆಗುಂಪು ಮಾಡಿದ ಅದೆಷ್ಟೋ ಮನದಾಳದ ಆಮಿಷಗಳಿದ್ದಾವು: ಅದು ಫೋಟೋ ತೆಗೆಯುವ ಹವ್ಯಾಸವಾಗಿರಬಹುದು, ಚಿತ್ರಕಲೆಯಾಗಿರಬಹುದು, ಸಂಗೀತದ ಸಾಧನೆಯ ವಿಷಯವಾಗಿರಬಹುದು, ಪುಸ್ತಕ ಬರೆದು ಪ್ರಕಟಿಸುವ ಹುನ್ನಾರವಿರಬಹುದು, ನಾಟಕ-ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಇರಬಹುದು, ಮ್ಯಾರಥಾನ ಓಡುವ ಕನಸಿರಬಹುದು, ದೊಡ್ಡ ಉದ್ಯಮಿಯಾಗುವ ಬಯಕೆ ಇರಬಹುದು, ಅಥವಾ ಊರಿನ ಪಂಚಾಯತಿಯ ಮುಖಂಡನೋ ದೊಡ್ಡ ರಾಜಕೀಯ ವ್ಯಕ್ತಿಯೋ...ಇನ್ನೂ ಏನೇನೋ ಕನಸುಗಳಿರಬಹುದು.

ನಮಗೆಲ್ಲ ಹೀಗೆ ಒಂದೊಂದು ಸಾಫ್ಟ್ ಕಾರ್ನರ್ ಇದೆ, ನಮ್ಮ ದಿನನಿತ್ಯದ ಗೊಂದಲವನ್ನು ಬದಿಗಿಟ್ಟು ಯಾವುದಾದರೊಂದು ರಿಸಾರ್ಟ್‌ನ ಹಾಸುಗಲ್ಲಿನ ಮೇಲೆ (ಅಥವಾ ಬೆಂಚ್‌ನ ಮೇಲೆ) ಮಲಗಿ ಅಗಾಧವಾದ ಮುಗಿಲನ್ನು ನೋಡುತ್ತಾ ಆತ್ಮಾವಲೋಕನವನ್ನು ಮಾಡಿಕೊಳ್ಳುತ್ತಾ ಇದ್ದರೆ ಒಂದು ದಿನವೋ ಅಥವಾ ಒಂದು ವಾರದ ನಂತರವಾದರೂ ಹೀಗೆ ಮಾಡಬೇಕು ಅಥವಾ ಮಾಡಬಹುದಿತ್ತು ಎನ್ನುವ ಅನೇಕಾನೇಕ ಯೋಚನೆಗಳು ಖಂಡಿತ ಬಂದೇ ಬರುತ್ತವೆ. ಆಂತೊನಿ ಬೋರ್ಡೇನ್‌ನ ಟ್ರಾವೆಲ್ ಅನುಭವದ ಬಗ್ಗೆ ಬರೆಯುತ್ತಾ ಮರಳುಗಾಡು ನಮಗೆ ಹೇಗೆ ಅತಿ ಅಗತ್ಯವಾದ ಧ್ಯಾನಕ್ಕೆ ತಕ್ಕುನಾದ ನಿಶ್ಯಬ್ದವಾದ ಒಂದು ನೆಲೆಯನ್ನು ಒದಗಿಸುವ ಬಗ್ಗೆ ಬರೆದಿದ್ದೆ. ಒಂದಲ್ಲ ಒಂದು ದಿನ ನಮ್ಮ ನಮ್ಮ ಮನಸ್ಥಿತಿಯನ್ನು ಇಂತಹ ಒಂದು ಸೈಲೆನ್ಸ್‌ಗೆ ಗುರಿಮಾಡಿ ಅದರಿಂದ ಏನು ಹೊರಬಂದೀತು ಎಂದು ಕಾದು ನೋಡುವುದು ಒಳ್ಳೆಯ ಅನುಭವವಾದೀತು.

ನನ್ನ ಹತೋಟಿಯಲ್ಲಿದ್ದ ಒಂದು ಘಂಟೆಯ ಸಮಯದಲ್ಲಿ ಸುಮಾರು ಐನೂರು ಪುಟಗಳ ಕ್ಯಾಟಲಾಗ್ ಅನ್ನು ಸೆಕ್ಷನ್ನ್‌ ನಿಂದ ಸೆಕ್ಷನ್ನ್‌ಗೆ ತಿರುವಿ ಹಾಕಿದ್ದೇ ಬಂತು: ಅದರ ಪರಿಣಾಮವಾಗಿ ನನ್ನ ಕನಸಿನ ರೆಕಾರ್ಡಿಂಗ್ ಸ್ಟುಡಿಯೋಗೆ ಬೇಕಾದ ಪರಿಕರಗಳು ಕಂಡು ಬಂದವು, ಹೆಚ್ಚಿನ ಎಕ್ಸ್‌ಟರ್ನಲ್ ಕಂಪ್ಯೂಟರ್ ಸ್ಟೋರೇಜ್ ಕಾಣಿಸಿತು, ಹಗಲು-ರಾತ್ರಿ ನೋಡಬಹುದಾದ ಬೈನಾಕ್ಯುಲರ್ ಮನದಲ್ಲಿ ಒಂದು ಕ್ಷಣ ನಿಂತಿತು, ಎಲ್ಲಾ ಮ್ಯೂಸಿಕ್ ಚಾನೆಲ್ಲಿನ ಲವಲೇಶಗಳನ್ನೂ ಬಿಡಿಬಿಡಿಯಾಗಿ ಹೊರಗೆ ಹಾಕುವ ಸುಂದರ ಹೋಮ್ ಥಿಯೇಟರ್ ಸಿಸ್ಟಮ್ಮ್‌ಗಳು ಕಂಡು ಬಂದವು, ನೂರೈವತ್ತು-ಇನ್ನೂರು ವ್ಯಾಟ್ ಪವರ್ ಇರುವ ಸ್ಪೀಕರುಗಳು ಕಂಡುಬಂದವು...ಹೀಗೆ ಪಟ್ಟಿ ಬೆಳೆಯುತ್ತಲೇ ಹೋಯಿತು.

ಇನ್ನು ಈ ಎಕ್ಸ್‌ಪ್ಲೋರೇಷನ್ನಿನ್ನ ಮುಂದುವರಿದ ಭಾಗವಾಗಿ ಒಂದೆರಡು ಅಂಶಗಳ ಬಗ್ಗೆ ಇಂಟರ್ನೆಟ್ಟಿನಲ್ಲಿ ರಿಸರ್ಚ್ ಮಾಡಿದ್ದೂ ಆಯಿತು...ಒಂದು ಘಂಟೆಯ ನಂತರ ಪ್ರಚನ್ನ ಶಕ್ತಿಯ ಬಲದಿಂದಾಗಿ ಚಿಮ್ಮಿದ ಆಸೆ-ಆಕಾಂಕ್ಷೆಗಳು ಮತ್ತೆ ಗೂಡು ಸೇರಿಕೊಂಡವು. ಅದು ಮಾಡಬಹುದು-ಇದು ಮಾಡಬಹುದು ಎನ್ನುವ ಹೇಳಿಕೆಯ ಮೊದಲೇ ಅದು ಮಾಡಬೇಕು-ಇದು ಮಾಡಬೇಕು (ಭಾನುವಾರ ಮುಗಿಯುವುದರೊಳಗೆ) ಎನ್ನುವುದು ಬಲವಾಗತೊಡಗಿತು.

***
ಇಲ್ಲಿನ ಕಿರಾಣಿ ಅಂಗಡಿಯಲ್ಲಿ ನೋಡಿ-ಕೇಳಿದ್ದು: ಮಧ್ಯಮ ವಯಸ್ಸಿನ ಕಕೇಷಿಯನ್ ದಂಪತಿಗಳಿಬ್ಬರು ಅಂಗಡಿಯಲ್ಲಿ ಮಾರಟಕ್ಕೆ ಇಟ್ಟ ರಕ್ಕಸಕಳ್ಳಿಯನ್ನು (Aloe-vera) ನೋಡಿ:
"ಇದನ್ನು ಏತಕ್ಕೆ ಮತ್ತು ಹೇಗೆ ಬಳಸುತ್ತಾರೆಂದು ನಿನಗೆ ಗೊತ್ತೇನು?"
"ಇಲ್ಲ..."
"May be we will give it a shot in our next life..."

***
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು!