Showing posts with label ತತ್ವ. Show all posts
Showing posts with label ತತ್ವ. Show all posts

Friday, September 05, 2025

ಸಮುದ್ರ ತೀರ

ಸಮುದ್ರ ತೀರ, ಅದನ್ನ ಒಂದು ದಂಡೆ ಅಂತ ಕರೆದರೆ ಸಾಲದು. ನದಿಗಳಿಗಾಗಲಿ, ಒರತೆಗಳಿಗಾಗಲಿ, ಒಂದು ಹರಿಯುವ ಗುಣ ಇರುವ ಇವಕ್ಕೆಲ್ಲ ಒಂದು ದಂಡೆ ಅಂತ ಇರಲೇ ಬೇಕು. ಹರಿಯುವುದಕ್ಕೆ ಮಾತ್ರ ದಂಡೆಗಳು, ಶರಧಿಯಂತೆ ಇರುವವಕ್ಕೆ ಏಕೆ?

ಈ ಸಮುದ್ರದ ತೀರದ ಸಹವಾಸವೇ ಹಾಗೆ, ಎಂತಹ ಗುಂಡು ಕಲ್ಲಿನ ಮನಸ್ಸಿನವರಲ್ಲಿಯೂ ಒಂದು ರೀತಿಯ ತುಮುಲಗಳನ್ನು ಏಳಿಸುವಂತಹದು. ಈ ತೀರದ ಮೇಲಿನ ಪ್ರೀತಿಯಿಂದ ಸಮುದ್ರ, ತನ್ನ ಆಂತರ್ಯದೊಳಗಿನ ಅಲೆಗಳನ್ನ, ಮೊಗೆ ಮೊಗೆದು ತೀರಕ್ಕೆ ತಲುಪಿಸಿದಂತೆಲ್ಲ, ಮತ್ತೆ ಮತ್ತೆ ಹುಟ್ಟುವಂತಹದು.  ಇದೇ ಕಾರಣಕ್ಕಾಗಿ ಇರಬೇಕು, ಅದನ್ನು ಸಮುದ್ರ ತೀರ ಎನ್ನುವುದು - ಅದು ಎಂದೂ ತೀರದು, ಅಂತಹ ವಿಶಿಷ್ಟ ಸ್ವಭಾವವನ್ನು ಒಳಗೊಂಡಿಹದು. ಈ ತೀರವನ್ನು ಕುರಿತು, ಅದನ್ನೇ ಗುರಿಯಾಗಿಸಿಕೊಂಡು, ಪದೇ ಪದೇ ಎದ್ದು ಬಿದ್ದು, ಓಲಾಡಿ, ಸಂತೈಸಿಕೊಳ್ಳುವ ಅಲೆಗಳಿಗೂ ತೀರದ ದಾಹವಿದೆ, ಅವುಗಳ ಆಂತರ್ಯದಲ್ಲಿ ಒಂದು ರೀತಿಯ ಕಕ್ಕುಲತೆಯಿದೆ, ಸದಾ ವ್ಯವಧಾನವಿಲ್ಲದವರ ಮನದಲ್ಲೂ ತಳಮಳಗಳ ನಿಗೂಢತೆಯಲ್ಲಿ ಒಂದು ರೀತಿಯ ಸಮಾಧಾನವಿರುತ್ತಲ್ಲ ಹಾಗೆ.

ಈ ತೀರವನ್ನಾಗಲೀ, ಅಲೆಯನ್ನಾಗಲೀ ನೋಡದೇ, ಅವುಗಳು ತೋರುವ ದಿಗ್ಮೂಢತೆಯ ಬಂಧನಲ್ಲಿ ಬೀಳದೇ ಇರುವುದಾದರೂ ಹೇಗೆ? ಅಲೆಗಳನ್ನು ನೋಡದೇ ಮಹಾಸಾಗರದ ಮಹಾನತೆಯನ್ನು ನೋಡಿ ಎಂದು ಹೇಳುವುದು ಮಾತ್ರ ಸುಲಭ ಸಾಧ್ಯ. ಈ ತೀರವನ್ನು, ದಂಡೆ, ಮಗ್ಗಲು, ತಟ, ದಡ ಎಂದು ಇನ್ನೇನಾದರೂ ಸೇರಿಸಿಕೊಂಡು ಹೇಳಿ, ತೀರ ತೀರವೇ. ತೀರವೆನ್ನದೆ ಬೇರೆ ಏನನ್ನೂ ಹೇಳಲು ಬಾರದ ಥರದಲ್ಲಿ ತನ್ನನ್ನು ತಾನು ಸಮುದ್ರ ಇದ್ದಲ್ಲೆಲ್ಲ ಸೃಷ್ಟಿಸಿಕೊಂಡು ಅದರ ಉದ್ದಕ್ಕೂ ಮೈ ಚಾಚಿಕೊಂಡು ಬಿದ್ದಿರುವ ತೀರಕ್ಕೆ ಯಾರೂ ಅಷ್ಟೊಂದು ಮಹತ್ವವನ್ನೇಕೆ ಕೊಟ್ಟಿಲ್ಲ ಎಂದು ಪ್ರಶ್ನೆ ಏಳುತ್ತದೆ.

ಹಿಂದೆಲ್ಲಾ ಸಮುದ್ರದಲ್ಲಿ ನಾವೆಯ ಮೂಲಕ ಪ್ರಯಾಣ ಬೆಳೆಸುತ್ತಿದ್ದವರು, ಯಾವಾಗಲೂ ತಮ್ಮ ದೂರ ತೀರದ ಯಾನದ ಬಗ್ಗೆಯೇ ತಾನೆ ಮಾತನಾಡುತ್ತಿದ್ದುದು? ಈ ಭೂಮಿಯ ಬಹುಭಾಗ ಕಡಲಿನ ನೀರಿನಿಂದ ಆವರಿಸಿದ್ದರೇನಂತೆ? ಕಡಲಿನ ಮಕ್ಕಳೆಲ್ಲ ತಲುಪುತ್ತಿದ್ದುದು ತೀರವನ್ನೇ! ಕಡಲಿನಿಂದ ನೋಡಿದವರಿಗೆ ತೀರವು ಅಪ್ಯಾಯಮಾನವಾಗಿ ಕಂಡು ಬಂದಷ್ಟು ತೀರದಲ್ಲೇ ಇದ್ದವರಿಗೆ ಕಂಡು ಬಂದಿರಲಾರದು - ಒಂದು ರೀತಿಯಲ್ಲಿ ನೀರಿನಲ್ಲಿ ಮುಳುಗುವವನಿಗೆ ದಡದ ಮೇಲಿನ ಪ್ರೀತಿ ವಿಶ್ವಾಸಗಳು ಒಂದೇ ಸಮನೆ ಹೆಚ್ಚು ಬರುವಂತೆ. ಕಡಲಿಲ್ಲದೇ ತೀರವಿಲ್ಲ ಎಂದು ಹೇಳುವವರಿಗೆ, ತೀರದ ಮೇಲಿನ ಪ್ರೀತಿ ಮತ್ತು ತೀರದ ಪರವಾದ ತೀವ್ರ ವಾದಗಳ ಮುಖಾಂತರ ನಾನು, ತೀರವಿಲ್ಲದೇ ಕಡಲಿಲ್ಲ, ಎಂದು ಸಾಧಿಸಿಕೊಂಡರೆ ತಪ್ಪೇನು?

ಕಡಲು ಜಲಚರಿಗಳಿಗೆ ಮಾತ್ರ ತವರಾಗಬಹುದು. ಆದರೆ, ತೀರದ ಒಡಲಿನಲ್ಲಿ ಸರೀಸೃಪಗಳು, ಉಭಯವಾಸಿಗಳು, ಚಿಕ್ಕ ಇರುವೆಗಳಿಂದ ಹಿಡಿದು, ದೊಡ್ಡ ಕಶೇರುಕಗಳ ವರೆಗೆ ಅನೇಕ ಸಸ್ತನಿಗಳಿಗೆ ಅದು ಗೂಡು ಮಾಡಿಕೊಟ್ಟಿಲ್ಲವೇ? ತನ್ನಲ್ಲೇಳುವ ತಲ್ಲಣಗಳನ್ನು ಅಲೆ ಅಲೆಗಳ ಮೂಲಕ ಸದ್ದು ಮಾಡುತ್ತ ಕಡಲು ಎತ್ತಿ ಹಾಕಿದಷ್ಟೇ ಶಾಂತವಾಗಿ ತೀರ ತನ್ನನ್ನು ತಾನು ಸಂಬಾಳಿಸಿಕೊಳ್ಳುತ್ತಿಲ್ಲವೇನು? ಹುಣ್ಣಿಮೆ-ಅಮಾವಾಸ್ಯೆಗಳಂದು ಹೆಚ್ಚುವ ಉಬ್ಬರಗಳಾಗಲೀ, ಇಳಿತಗಳಾಗಲೀ ಈ ತೀರದ ಅಹವಾಲನ್ನು ಯಾವತ್ತೂ ಬದಲಾಯಿಸಲು ಸಾಧ್ಯವೇ ಇಲ್ಲ ಎನ್ನುವಂತೆ ಸಡ್ಡು ಹೊಡೆದು ನಿಂತ ಗರಡಿ ಮನೆಯಲ್ಲಿ ಪಳಗಿದ ಪೈಲ್ವಾನನಂತೆ ಈ ತೀರಗಳು ನನಗೆ ಕಂಡುಬರುತ್ತವೆ.

ಈ ತೀರದ ಮೇಲಿನ ಮೋಹಕ್ಕೆಂತಲೋ ಏನೋ, ತನ್ನ ಬಣ್ಣವಿಲ್ಲದ ಬಿನ್ನಾಣದ ನೀರಿಗೂ ಬಿಳಿಯ ನೊರೆಯ ಲೇಪನ ಮಾಡಿ, ಸಮುದ್ರ, ತೀರವನ್ನು ಕಾಡುತ್ತದೆಯೋ ಏನೋ! ನೀರಿರಲಿ, ನೊರೆ ಇರಲಿ, ಎಲ್ಲದಕ್ಕೂ ಒಂದೇ ಉತ್ತರ, ಈ ಸಮುದ್ರ ತೀರದ್ದು, ಒಂದು ರೀತಿಯಲ್ಲಿ ಯಾವುದೋ ಒಂದು ಅಗಾಧವಾದ ತಪಸ್ಸಿಗೆ ನಿಂತ ಮಹಾ ಋಷಿಯ ಹಾಗೆ.

ತೀರ ಮೊದಲೋ, ಸಮುದ್ರ ಮೊದಲೋ ಎಂದು ನೀವು ನನ್ನನ್ನು ಕೇಳಿದರೆ, ಎಂದೂ ತೀರದ ತೀರವೇ ಮೊದಲು ಎಂದು ನಿಮ್ಮ ಕೂಡ ವಾದ ಮಾಡಿಯೇನು. ಹಾಗೆಯೇ ಮುಂದುವರೆದು, ತೀರವಿಲ್ಲದ ನೀರು ತರವೇ ಎಂದು ಕಡಲನ್ನೇ ಹಾಸ್ಯ ಮಾಡಿಬಿಟ್ಟೇನು. ಸ್ಥಾವರಕ್ಕೆ ಅಳಿವುಂಟು ಎನ್ನುವ ಚಿಂತನೆ ಸದಾ ಚಿರಸ್ಥಾಯಿಯಾದ ತೀರದ ಒಡಲನ್ನು ಇನ್ನೂ ಕೊರೆದಿಲ್ಲ, ಹಾಗಂತ ಜಂಗಮಕ್ಕಳಿವಿಲ್ಲ ಎನ್ನುವ ಚಿಂತೆಯೇ ಸಮುದ್ರದ ನೀರನ್ನು ನಿಂತಲ್ಲಿ ನಿಲ್ಲಲು ಬಿಡುತ್ತಿಲ್ಲ ಎಂದು ಸಂಶೋಧಕರು ತೋರಿಸಿಕೊಡಬಹುದು. ನದಿಯ, ತೊರೆಗಳ ದಂಡೆಗಳಂತೆ ಈ ತೀರವು ತನ್ನನ್ನು ತಾನು ಮತ್ತೊಂದು ಕಡೆಯ ಭೂಮಿಗೆ ತುಲನಾತ್ಮಕವಾಗಿ ನೋಡಿಕೊಳ್ಳುವ ಮುಲಾಜಂತೂ ಈ ತೀರಕಿಲ್ಲ, ಇದು ಎಂದಿದ್ದರೂ ಹೇಗಿದ್ದರೂ, ಒಂದೇ ತೀರ. ಹಾಗೇ ಮುಂದೆ ಹೋಗಿ ನೋಡಿದರೆ, ಎಲ್ಲ ತೀರಗಳೂ ಇದರ ಮುಂದುವರೆದ ಭಾಗವಾಗಿ ಕಂಡು ಬಂದಾವು.

ಅಲೆ, ಆಕಾಶ, ಎಲರುಗಳಿಗೆ ಹೆದರದ, ಕಂಗೆಡದ, ಅಧೀರಗೊಳ್ಳುವ ಮನಸ್ಥಿತಿ ಈ ತೀರದ ಬೆನ್ನಿಗಿದೆ. ಸದಾ ಶುಷ್ಕವಾದ ಮೇಲ್ಮೈಯನ್ನು ಕಂಡು ಕಾಯ್ದುಕೊಂಡರೂ, ಅದನ್ನ ಸಪ್ಪೆ, ನೀರಸ, ಬರಡು ಎಂದು ಮಾತ್ರ ಹೇಳಲಾಗದು. ಮೇಲ್ನೋಟಕ್ಕೆ ನಿಷ್ಕಲ್ಮಶನಾಗಿ ಕಂಡೂ, ತನ್ನ ಆಂತರ್ಯದಲ್ಲಿ ಅನೇಕ ಕೋಮಲತೆಗಳನ್ನ ಸಂಪೋಷಣೆ ಮಾಡಿಕೊಂಡ ಮಾತ್ರಕ್ಕೆ, ತೀರವನ್ನ ನಿಸ್ಸಾರ ಎಂದು ಹೇಳುವ ಕಠಿಣ ಬುದ್ಧಿ ಯಾರಿಗೆ ತಾನೆ ಬರಲು ಸಾಧ್ಯ?

ನನ್ನ ಪೋಷಣೆ ಏನಿದ್ದರೂ, ಆಗಾಧವಾದ ಸಮುದ್ರಕ್ಕೆ ಒಂದು ಪರಿಕಲ್ಪನೆಯನ್ನು ಕೊಟ್ಟ ಈ ತೀರವನ್ನು ಕುರಿತೇ ಇರುತ್ತದೆ. ಆಳ ಅಂತಃಸತ್ವವನ್ನೆಲ್ಲ ಸಮುದ್ರಕ್ಕೆ ಬಿಡೋಣ. ಒಂದು ನಿಶ್ಚಿತ, ನಿಸ್ಸೀಮ ಕಲ್ಪನೆಯಲ್ಲಿ ತನ್ನನ್ನು ಪೋಷಿಸಿಕೊಂಡು, ತನ್ನೊಡಲ ಒಳಗೆ ಅನೇಕರಿಗೆ ಅವಾಸಸ್ಥಾನವನ್ನು ಕಲ್ಪಿಸಿಕೊಟ್ಟು, ದೂರದಿಂದ ನೋಡುವವರಿಗೆ ಎಂದೂ ಬೇಕಾಗಿ, ಅನೇಕ ದೇಶ-ಭಾಷೆ-ಭಾವನಗೆಳಿಗೆ ಬುನಾದಿಯಾಗಿ ನಿಯಮಕ್ಕೆ ಮೀರಿ ನಿಂತ ತೀರವನ್ನು ಅದು ಹೇಗೆ ತಾನೆ ಮರೆಯಲು ಸಾಧ್ಯ?

ಮುಂದಿನ ಸಾರಿ ಯಾರಾದರೂ ಸಮುದ್ರವನ್ನು ಕಂಡೀರಾ? ಎಂದು ಪ್ರಶ್ನೆ ಮಾಡಿದಾಗ ಸಮುದ್ರದ ತೀರವನ್ನು ಕಂಡೀರಾ? ಎಂದು ತಿದ್ದಬೇಕಾಗುತ್ತದೆ. ತೀರದಿಂದಲೇ ನಮ್ಮ ಬದುಕು, ಬವಣೆಗಳು ಆರಂಭ - ನಮ್ಮ ನಾಗರಿಕತೆ ಆರಂಭವಾಗಿದ್ದೇ ಇಂತಹ ಯಾವುದೋ ಒಂದು ತೀರದಿಂದ. ಈ ತೀರಕ್ಕೂ ಮುಂದಿನ ತೀರಕ್ಕೂ ಅದೇನೋ ಪದಗಳಿಗೆ ಮೀರಿದ ಅವಿನಾಭಾವ ಅನುಬಂಧ! ತೀರದಿಂದ ತೀರಕ್ಕೆ,  ನಮ್ಮ ಪ್ರಯಾಣ ಮುಂದುವರೆಯುತ್ತಲೇ ಇರಲಿ, ಯಾವುದೇ ತಿಮಿರಾಂಧತೆಯಾಗಲೀ, ಕರಾಳತೆಯಾಗಲೀ ನಮ್ಮನ್ನು ಬಾಧಿಸದಿರಲಿ.

ತೀರವು ನಿಂತಿದೆ ಅಚಲವಾಗಿ, ಶಾಶ್ವತವಾಗಿ. ಅದು ಸಮುದ್ರದ ಅಲೆಗಳಿಗೆ ಧೈರ್ಯದಿಂದ ಉತ್ತರಿಸುವ ತತ್ವಜ್ಞಾನಿಯಂತೆ, ನಿಶಬ್ದವಾಗಿ.

ಜೈ ಸಮುದ್ರ ತೀರ! ನಿನ್ನ ಗುಣಾ-ಪರಾಕಾಷ್ಠೆಗಳು ಅಪಾರ! 

Monday, April 15, 2024

ಒಂದು ಬಿಂದು

ಬಿಂದು ಎಂದರೆ, ಹನಿ... ಅದೇ ಸಣ್ಣದು, ಗಾತ್ರದಲ್ಲಿ ಚಿಕ್ಕದಾದದ್ದು, ಸೂಕ್ಷ್ಮವಾದದ್ದು.  ಆಕಾರದಲ್ಲಿ ಚಿಕ್ಕದಾಗಿದ್ದರೂ ದೊಡ್ಡ ಆಶೋತ್ತರಗಳನ್ನು ಹೊತ್ತಿಕೊಂಡಿರುವಂಥದು!

ಈ ಅರಿವು ಮೂಡಿದ್ದು ಇತ್ತೀಚೆಗೆ, ನಾನು ಸಮುದ್ರದ ತಟದಲ್ಲಿ ನಿರಂತರವಾಗಿ ಕಾಲಿಗೆ ಬಂದು ರಾಚುತ್ತಿದ್ದ ಅಲೆಗಳ ಮಡಿಲಿನಿಂದ, ಬೊಗಸೆಯಲ್ಲಿ ನೀರನ್ನು ಮೊಗೆದು, ಸೂರ್ಯನಿಗಭಿಮುಖವಾಗಿ ವಿಸರ್ಜಿಸುತ್ತಿರುವಾಗ, ಕೊನೆಯಲ್ಲಿ ಉಳಿದ ಹನಿಗಳು ತಮ್ಮೊಳಗಿನ ಹೊಸದೊಂದು ಪ್ರಪಂಚವನ್ನೇ ತೋಡಿಕೊಂಡವು.

ಅಬ್ಬಾ! ಈ ಒಂದೊಂದು ಹನಿಯೂ ತನ್ನೊಳಗೆ ಅಪಾರವಾದ ಸಾಗರವನ್ನೇ ಹೊತ್ತಿಕೊಂಡಿದೆಯಲ್ಲಾ! ಸಣ್ಣ ಗಾಳಿಗೆ ಅದುರಿ ಹೋಗುವಂತೆ ಇರುವ ಹನಿಯ ಅಂತರಾಳದಲ್ಲಿ ಯಾವ ದರ್ಪವೂ ಕಾಣಲಿಲ್ಲ. ಆದರೆ, ಹತ್ತಿರದಲ್ಲೇ ಮೊರೆಯುತ್ತಿದ್ದ ಮಾತೃ ಹೃದಯದಿಂದ ದೂರವಾಗಿದ್ದಕ್ಕೆ ಅದರಲ್ಲಿ ಅಳುಕು ಮೂಡಿದಂತೆ ಕಾಣಿಸಿತು. ತನ್ನ ಮೇಲೆ ಬಿದ್ದ ಸೂರ್ಯನ ಕಿರಣಗಳ ದೆಸೆಯಿಂದ ಈ ಹನಿಗಳಿಗೂ ಕಣ್ಣಿರುವಂತೆ ಗೋಚರಿಸಿತು.

ಹೀಗೆ, ಮಹಾ ನೀರಿನಿಂದ ಬೇರೆಯಾಗಿ ಮರಳನ್ನು ಸೇರಿಯೋ, ಅಥವಾ ಹವೆಯಲ್ಲಿಯೇ ಲೀನವಾಗಿ ಮತ್ತೊಮ್ಮೆ ಮೋಡವಾಗಿ-ಮಳೆಯಾಗಿ ಇಳೆಯನ್ನು ಸೇರುವ ತವಕ ನೀರಿನ ಪ್ರತಿ ಹನಿಹನಿಯಲ್ಲಿಯೂ ಇರುವುದು ಸಹಜವೇ ಹೌದು.  ಆದರೆ, ಈ ಮಹಾ ನೀರಿನಿಂದ ಪ್ರತ್ಯೇಕಗೊಂಡ, ಆ ಸಣ್ಣ ಹನಿ, ಕೊಂಚ ಮಟ್ಟಿಗೆ ಹೆದರಿಕೊಂಡಿದ್ದಾದರೂ ಏಕಿರಬಹುದು? ನೀರು ಎಂದರೆ ಒಂದು ರೀತಿಯ ಶಕ್ತಿ, ಈ ಅಗಾಧವಾದ ಶಕ್ತಿಯಿಂದ ಬೇರ್ಪಟ್ಟು, ಮತ್ತೆ ಅದನ್ನು ಸೇರುವ ಹೊತ್ತಿಗೆ ಅದೆಷ್ಟು ಜನ್ಮಗಳನ್ನು ತಳೆದು, ರೂಪಗಳಲ್ಲಿ ಲೀನವಾಗಿ, ಕಾಡು-ಮೇಡುಗಳನ್ನು ತಿರುಗಿ, ಅನುಭವಿಸಬಾರದ್ದೆನ್ನೆಲ್ಲ ಅನುಭವಿಸಿ ಮತ್ತೆ ಸಮುದ್ರವನ್ನು ಸೇರುವುದು ಎಂದೋ, ಏನೋ, ಹೇಗೆಯೋ... ಎಂಬ ಆತಂಕದಿಂದ ಇರಬಹುದೇ?

ಈ ಒಂದೊಂದು ನೀರಿನ ಬಿಂದುವೂ ಒಂದೊಂದು ಆತ್ಮದ ಹಾಗೆ. ಅದು ಪ್ರತಿ ಜನ್ಮಕ್ಕೊಮ್ಮೆ ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಬದಲಾಗಿ, ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ಸೇರಿಕೊಂಡು, ಎಲ್ಲಿಯೂ ಸಮಾಧಾನಿಯಾಗಿರದೇ, ಮತ್ತೆ ಅಗಾಧವಾದ ಕಡಲನ್ನು ಸೇರುವ ತವಕದಲ್ಲಿಯೇ ಬಿರುಗು ಕಣ್ಣನ್ನು ಬಿಟ್ಟಂತೆ ಇರುವ ಅತಂತ್ರ ಜೀವಿ! ಪ್ರತಿಯೊಂದು ಹನಿಯಲ್ಲಿಯೂ ಜೀವವಿದೆ, ಸಾಗರದ ಅಷ್ಟೂ ನೀರಿನ ಸತ್ವವನ್ನು ಒಂದೇ ಒಂದು ಬಿಂದುವಿನಲ್ಲಿ ಹಿಡಿದಿಟ್ಟುರುವ ಹಾಗೆ, ಇದರಲ್ಲಿ ಎಲ್ಲ ಗುಣಗಳೂ ಇವೆ.

ನೀರಿನಿಂದ ಬೇರ್ಪಟ್ಟ ಈ ಹನಿಗಳು, ತಮ್ಮ ಪಯಣದುದ್ದಕ್ಕೂ ಒಂದೇ ರೀತಿ ಇರುತ್ತವೆ ಎಂದೇನೂ ಹೇಳಲಾಗದು. ಕೆಲವು ಅಲ್ಲಿಯೇ ಬಿದ್ದು ಮತ್ತೆ ಸಾಗರವನ್ನು ಸೇರಿದರೆ, ಇನ್ನು ಕೆಲವು ಹಲವಾರು ಜನ್ಮಗಳನ್ನು ತಳೆದ ಮೇಲೂ, ಹಿಂತಿರುಗಲು ಒದ್ದಾಡುವ ಹಪಾಹಪಿಗಳಾಗೇ ಇನ್ನೂ ಕಂಡು ಬರುತ್ತವೆ.

***

ತಿಳಿಯಾದ ಕೊಳದಲ್ಲಿ ಕಲ್ಲೊಂದನ್ನು ಹಾಕಿದರೆ, ವೃತ್ತಾಕಾರಗಳಲ್ಲಿ ಸಣ್ಣ ಅಲೆಗಳು ಎದ್ದು, ಅದೆಷ್ಟು ಬೇಗ ದಡವನ್ನು ಸೇರಿಯೇವೋ ಎಂದು ದಾವಂತದಲ್ಲಿ ಹರಡುವುದನ್ನು ನೀವು ನೋಡಿರಬಹುದು. ಆದರೆ, ಸಮುದ್ರ, ಅಥವಾ ಮಹಾಸಾಗರದ ನೀರಿನಲ್ಲಿ ಕಲ್ಲೊಂದನ್ನು ಹಾಕಿ, ಅದು ಯಾವ ರೀತಿಯ ಕಂಪನ/ತಲ್ಲಣಗಳನ್ನು ಅಲೆಯಾಕಾರದಲ್ಲಿ ಮೂಡಿಸುತ್ತದೆ ಎಂದು ಯೋಚನೆ ಮಾಡಬೇಕಾಗುತ್ತದೆ. ಸಮುದ್ರದಲ್ಲಿ ಹಾಕಿದ ಕಲ್ಲು, ಅಗಾಧವಾದ ಸಾಗರದ ಆಂತರ್ಯದಲ್ಲಿ ಅಲ್ಲೋಲ ಕಲ್ಲೋಲಗಳನ್ನು ಉಂಟು ಮಾಡುವುದರಲ್ಲಿ ಸೋತು ಹೋಗುತ್ತದೆ.

Image Source: https://www.usgs.gov/media/images/all-earths-water-a-single-sphere

ಈ ಪೃಥ್ವಿಯ ಬಹುಭಾಗ (71%) ನೀರಿನಿಂದಲೇ ಮುಚ್ಚಿಕೊಂಡಿದೆಯಂತೆ. ಉಳಿದ ಗ್ರಹಗಳಿಗೆ ಹೋಲಿಸಿದಾಗ ಭೂಮಿಯ ಮೇಲಿನ ನೀರಿನಿಂದಲೇ ಅದಕ್ಕೊಂದು ಶಕ್ತಿ ಮತ್ತು ಚೈತನ್ಯ ಬಂದದ್ದಲ್ಲವೇ?

ನನ್ನ ಪ್ರಕಾರ, ಪಂಚಭೂತಗಳಲ್ಲಿ ನೀರಿಗೆ ಹೆಚ್ಚಿನ ಮಹತ್ವ ಇರಬೇಕು. ಇನ್ನುಳಿದ ಗಾಳಿ, ಅಗ್ನಿ, ಆಕಾಶ, ಮತ್ತು ಭೂಮಿಯ ಸಣ್ಣ ಸಣ್ಣ ತುಂಡುಗಳಲ್ಲಿನ ಮಹತ್ವ ಈ ಒಂದು ನೀರಿನಷ್ಟು ಇರಲಾರದು. ಗಾಳಿ ಎಲ್ಲ ಕಡೆಗೂ ಒಂದೇ ರೀತಿ ಇರಬೇಕೆಂದೇನೂ ಇಲ್ಲ. ಬೆಂಕಿ ಎಲ್ಲ ಕಡೆಗೂ ಒಂದೇ ರೀತಿ ಕಂಡರೂ, ಅದು ನೀರಿನ ಹನಿಯಂತೆ ಪಯಣಿಸಲಾರದು. ಇನ್ನು ಆಕಾಶ ಅನಂತವೂ, ಅಪರಿಮಿತವೂ ಆಗಿರುವುದಾದರೂ, ಅದನ್ನು ಚಿಕ್ಕ ಹನಿಯ ಗಾತ್ರದಲ್ಲಿ ನಾವೆಂದೂ ಊಹಿಸಿಕೊಳ್ಳಲಾರೆವು. ನಿಜವಾಗಿಯೂ ನಿಮಗೆ ಸಮುದ್ರದ ಶಕ್ತಿ ಎಲ್ಲವೂ ಅಲ್ಲಿನ ಒಂದೊಂದು ಹನಿಯಲ್ಲಿಯೂ ಸಮನಾಗಿ ಹಂಚಿಕೊಂಡಿದೆ ಎಂದರೆ ನಂಬಲಿಕ್ಕೆ ಅಸಾಧ್ಯವಾದರೂ, ಅದು ನಿಜವೇ!

***

ಕೊಳದ ನೀರಿಗೂ, ಕೆರೆಯ ನೀರಿಗೂ, ಸರೋವರದ ನೀರಿಗೂ, ದೊಡ್ಡ ಜಲಾಶಯಗಳಲ್ಲಿ ಶೇಖರಣೆಗೊಂಡ ನೀರಿಗೂ, ಪುಷ್ಕರಣಿಯಲ್ಲಿ ಸಿಕ್ಕಿಕೊಂಡ ನೀರಿಗೂ, ತಮ್ಮ ತಮ್ಮದೇ ಆದ ಒಂದು ನಿಲುವು, ಅಥವಾ ಮನೋಭಾವ (attitude) ಇದೆ. ಹಾಗೆಯೇ, ಸಮುದ್ರ, ಸಾಗರ, ಮಹಾಸಾಗರದ ನೀರುಗಳಿಗೂ ಕೂಡ ತಕ್ಕನಾದ ಮನೋವೃತ್ತಿ ಇರಲೇ ಬೇಕು. ಈ ನೀರುಗಳ ಸಾರವೇ ಸಂಪೂರ್ಣವಾಗಿ ಒಂದು ನೀರಿನ ಬಿಂದುವಿಗೂ ಅಳವಡಿಸಲ್ಪಡುತ್ತದೆ. ಎಂತಲೇ, ಕೆರೆಯ ನೀರಿಗೂ, ಸಮುದ್ರದ ನೀರಿಗೂ ಅಜಗಜಾಂತರ ವ್ಯತ್ಯಾಸವಿರುವುದು. ಈ ಎಲ್ಲ ನೀರಿನ "ಹಳ್ಳ" (waterhole) ಗಳೂ ಒಂದೇ ಕಡೆ ಸಂಗ್ರಹಿತವಾಗಿದ್ದರೆ, ನದಿ-ಉಪನದಿಗಳೆಲ್ಲಾ ಸದಾ ಹರಿಯುವವೇ. ಈ ಎಲ್ಲದರ ಮೂಲ, ಮಳೆ... ಅಥವಾ ಆವಿ.  ನಿಮಗೆ ಎಲ್ಲೇ ಒಂದು ನೀರಿನ ಬಿಂದು ಕಂಡು ಬಂದರೆ, ಅದರ ಮೂಲಧರ್ಮ ಮಹಾಸಾಗರವನ್ನು ಸೇರುವುದು, ಅದನ್ನೆಂದೂ ಅದು ಮರೆಯುವುದಿಲ್ಲ, ತನ್ನತನವನ್ನು ಎಂದೂ ತೊರೆಯುವುದೂ ಇಲ್ಲ!

ಹೇಗೋ, ಒಂದು ಹನಿ ನೀರಿನಿಂದ, ಈ ಎಲ್ಲ ಆಲೋಚನೆಗಳೂ ಪುಂಖಾನುಪುಂಕವಾಗಿ ಹೊರಹೊಮ್ಮಿ ಬಂದವು. ಈ ಬಿಂದುವಿನ ಆತ್ಮಾವಲೋಕನದಿಂದ ನಮ್ಮ ಆತ್ಮಗಳ ಅವಲೋಕನವೂ ಆದಂತಾಯಿತು. ಅದಕ್ಕೆಂದೇ ಇರಬೇಕು, ಎಲ್ಲರಲ್ಲೂ ಸದಾ, ಸದಾ ಸಪ್ತ ಸಾಗರದಾಚೆಯ ಲೋಕದ ತುಡಿತ ಎಂದಿಗೂ ಜಾಗೃತವಾಗೇ ಇರುತ್ತದೆ!