Showing posts with label ರಾಜಕೀಯ. Show all posts
Showing posts with label ರಾಜಕೀಯ. Show all posts

Sunday, July 28, 2019

ರಾಜಕೀಯ ಪ್ರಹಸನ

ವರ್ಷದ ಮೇ ತಿಂಗಳ ಲೋಕಸಭಾ ಚುನಾವಣೆಯಲ್ಲಿ ಎರಡು ಮಹತ್ವದ ಅಂಶಗಳು ಗಮನ ಸೆಳೆದವು: ಒಂದು, ದೇಶದಾದ್ಯಂತ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ಜನರು ನಂಬಿಕೆ ಇಟ್ಟು ಇನ್ನೈದು ವರ್ಷಗಳ ಸ್ಥಿರ ಆಡಳಿತಕ್ಕೆ ಬುನಾದಿ ಹಾಕಿರುವ ವಿಷಯ, ಅದರ ಜೊತೆಗೆ ಉಳಿದ ಪಕ್ಷಗಳ ಪ್ರಣಾಳಿಕೆಗಳ ಸಾರಾಸಗಟು ತಿರಸ್ಕಾರ.  ಮೇಲ್ನೋಟಕ್ಕೆ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಂತೆ ಕಂಡು ಬಂದರೂ, ಈ ಚುನಾವಣೆಯಲ್ಲಿ ಹಿರಿಯ ಮುತ್ಸದ್ದಿ ಇಲ್ಲದ ಉಳಿದ ರಾಷ್ಟ್ರೀಯ ಪಕ್ಷಗಳಿಗೆ ಬೆಲೆ ಸಿಕ್ಕಿಲ್ಲದಿರುವುದು ಎದ್ದು ಕಾಣುತ್ತದೆ.  ಹೀಗಾಗಿ ಒಂದು ಪಕ್ಷ ಅಥವಾ ಬಣಕ್ಕೆ ಅವುಗಳ ಧ್ಯೇಯೋದ್ದೇಶಗಳು ಎಷ್ಟು ಮುಖ್ಯವೋ ಅಷ್ಟೇ ಅವುಗಳನ್ನು ಪ್ರತಿಬಿಂಬಿಸಿ ಜನಮನಗಳಿಗೆ ತಲುಪಿಸುವ ಒಂದು ಹಿರಿಯ ಧ್ವನಿಯೂ ಕೂಡ ಅಷ್ಟೇ ಮುಖ್ಯವಾಗಿ ಕಂಡುಬರುತ್ತದೆ.  ಇದು ಯಾವತ್ತಿಗೂ ಸತ್ಯ.  ಹಿಂದಿನ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಮ್ಮ ವರ್ಚಸ್ವಿ ಜನನಾಯಕರುಗಳ ಕರೆಗೆ ಓಗೊಟ್ಟು ಲಕ್ಷಾಂತರ ಜನ ತಮ್ಮ ಮನೆಮಠಗಳನ್ನು ತೊರೆದು ಚಳವಳಿಯಲ್ಲಿ ಧುಮುಕಲಿಲ್ಲವೇ? ಹಾಗೇ, ಇಂದಿನ ಪ್ರಜಾಸತ್ತೆಯಲ್ಲಿಯೂ ಸಹ ಹಿರಿಯ ನಾಯಕರ ಕರೆಗೆ ಬೆಲೆ ಇದೆ, ಆದರೆ ಅಂತಹ ವರ್ಚಸ್ಸಿನ ಹಿರಿಯ ನಾಯಕರುಗಳ ಕೊರತೆ ಬಹಳ ಎದ್ದು ಕಾಣುತ್ತದೆ.  ದೇಶದ ಉದ್ದಗಲಕ್ಕೆ ಎಣಿಸಿದರೆ ನೂರಾರು ಪಕ್ಷಗಳು ತಲೆ ಎತ್ತಿರುವ ನಮ್ಮ ದೇಶದಲ್ಲಿ ಅಷ್ಟೇ ಪ್ರಭಾವಿಗಳಾಗಿ ಜನಾಕರ್ಷಣೆಯನ್ನು ಹೊಂದಿರುವ ಮೂರು ಜನ ಮುಖಂಡರುಗಳಿಲ್ಲ ಎಂದು ಹೇಳಲು ಖೇದವಾಗುತ್ತದೆ.  ಪ್ರಾದೇಶಿಕ ಮಟ್ಟದಲ್ಲಿ ಅನೇಕ ಜನಸ್ಪಂದನದ ವ್ಯಕ್ತಿತ್ವಗಳು ಗೋಚರಿಸಬಹುದು, ಆದರೆ ಅಂತಹ ಮುಂದಾಳುಗಳ ಧ್ವನಿಗಳು ತಮ್ಮ ತಮ್ಮ ಸ್ಥಳೀಯ ಜಂಜಾಟಗಳಲ್ಲಿ ಕಳೆದುಕೊಳ್ಳುತ್ತವೆಯೇ ವಿನಾ ದೇಶವನ್ನು ಬೆಳೆಸುವ ಮಟ್ಟಿಗೆ ಬೆಳೆಯುವುದು ಅಪರೂಪ.  ಈ ನಿಟ್ಟಿನಲ್ಲಿ, ಗುಜರಾತ್ ಮೂಲದಲ್ಲಿ ಉದ್ಭವಿಸಿ ರಾಷ್ಟ್ರವ್ಯಾಪಿ ಬೆಳೆದು ನಿಂತಿರುವ ಹೆಮ್ಮರ ಮೋದಿ ಎನ್ನಬಹುದು.

***
ನಮ್ಮ ಜನ ಸಾಮಾನ್ಯರಲ್ಲಿ ಒಂದು ಸಹಜವಾದ ಪ್ರಶ್ನೆ ಆಗಾಗ್ಗೆ ಏಳುತ್ತಿರುತ್ತದೆ: ಈ ರಾಜಕಾರಣಿಗಳಿಗೆ ಎಷ್ಟು ದುಡ್ಡು ಮಾಡಿದರೂ (ತಿಂದರೂ) ತೃಪ್ತಿಯಾಗುವುದಿಲ್ಲವಲ್ಲ, ಏಕೆ?  ಈ ಪ್ರಶ್ನೆಯ ಆಳಕ್ಕೆ ಹೋದಂತೆಲ್ಲ, ಹುಲಿ ಸವಾರಿ ಮಾಡಿಕೊಂಡು ಅಟ್ಟಹಾಸ ಮಾಡುತ್ತಿರುವ ಅನೇಕ ಜನನಾಯಕರ ಮುಖ ಗೋಚರಿಸಬಹುದು. ಇವರೆಲ್ಲ ದಾಹದ ಕೂಪವೆನ್ನುವ ಆಳವಾದ ಕೊರಕಲಿನಲ್ಲಿ ಭ್ರಷ್ಟಾಚಾರವೆನ್ನುವ ಹುಲಿ ಸವಾರಿಯನ್ನು ಮಾಡಿಕೊಂಡು ಗುಟುರು ಹಾಕಿಕೊಂಡಿರುತ್ತಾರೆ.  ಆದರೆ, ಪಾಪ, ಇವರ ಜೀವಮಾನದಲ್ಲೆಲ್ಲೂ ಇವರು ಹುಲಿಯ ಬೆನ್ನಿನಿಂದ ಕೆಳಗಿಳಿಯಲು ಸಾಧ್ಯವೇ ಇಲ್ಲದೇ, ಈ ಹುಲಿ ಸವಾರಿ ಮಾಡುತ್ತಲೇ ನಿವೃತ್ತಿ, ಮೋಕ್ಷ ಮತ್ತಿನ್ನೆಲ್ಲವನ್ನೂ ಕಂಡುಕೊಳ್ಳುತ್ತಾರೆ.  ನಮ್ಮ ರಾಜಕಾರಣಿಗಳು ಯಾವ ಸ್ಥರದಲ್ಲೇ ಇರಲಿ, ಮನೆಗೆ ಬಂದು ಮೂಟೆಗಟ್ಟಲೆ, ಸೂಟ್‌ಕೇಸುಗಟ್ಟಲೆ ಕೋಟ್ಯಾಂತರ ರೂಪಾಯಿ "ಅನುದಾನ"ವನ್ನು ತಂದು ಕೊಡುವವರಿರುವಾಗ ಹುಲಿ ಸವಾರರು ಒಲ್ಲೆ ಎಂದು ಹೇಳಲು ಸಾಧ್ಯವಿದೆಯೇ? ಉದಾಹರಣೆಗೆ, ಪ್ರತಿವರ್ಷ ಪ್ರತಿ ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರದಿಂದ ಐವತ್ತು ಕೋಟಿ ಅನುದಾನ ಬರುತ್ತದೆ ಎಂದುಕೊಂಡರೆ, ಅದರ ಹತ್ತು ಪರ್ಸೆಂಟ್, ಅಂದರೆ ಐದು ಕೋಟಿ ನಮ್ಮ ಎಂ.ಪಿ.ಗಳ ಮನೆಗೆ ಬಂದು ಸೇರಿತೆಂದುಕೊಳ್ಳಿ.  ಅದನ್ನು ಬೇಡವೆಂದರೆ, ಇವರ ಹುಲಿ ಸವಾರಿಯ ವ್ಯವಸ್ಥೆಯೇ ಅಸ್ತವ್ಯಸ್ತವಾಗಿ ಕೊನೆಗೆ ಆ ಹುಲಿಯೇ ಇವರನ್ನು ಬಲಿತೆಗೆದುಕೊಳ್ಳುತ್ತದೆ.  ಅದನ್ನು ಇಟ್ಟುಕೊಂಡರೆ, ಅದು ಕಪ್ಪು ಹಣದ ಲೆಕ್ಕಕ್ಕೆ ಸೇರಿಕೊಂಡು ಮುಂದಿನ ಚುನಾವಣೆಯವರೆಗೆ ಎಲ್ಲೋ ಮೂಲೆಯಲ್ಲಿ ಕೊಳೆಯುತ್ತದೆ!  ಈ ಹುಲಿ ಸವಾರಿ ಒಂದು ಉದಾಹರಣೆ ಅಷ್ಟೇ.  ತಮ್ಮ ತಮ್ಮ ತಾಕತ್ತಿಗೆ ತಕ್ಕಂತೆ, ತಮ್ಮ ತಮ್ಮ ಪರಿಸರಕ್ಕೆ ತಕ್ಕಂತೆ, ಬೇರೆಬೇರೆ ಪ್ರಾಣಿಗಳ ಸವಾರಿ ಮಾಡಿ ತಮ್ಮ ರಾಜಕೀಯ ಬದುಕನ್ನು ಕಟ್ಟಿಕೊಳ್ಳುವವರು ಇದ್ದಾರೆ.

***
ಹುಲಿ ಸವಾರಿಯ ಬಯಕೆಯ ಮೂಲವೇನು? ಅದೆಲ್ಲಿಂದ ಉತ್ಪನ್ನವಾಯಿತು ಎಂದು ಶೋಧಿಸಿ ನೋಡಿದಾಗ ನಮ್ಮ ಚುನಾವಣಾ ಪ್ರಕ್ರಿಯೆ ಕಣ್ಣಿಗೆ ಬಿತ್ತು.  ನೀವು ಹಣಕಾಸು ವಿಲೇವಾರಿಯ ಯಾವುದೇ ಶಾಸನವನ್ನು ಬರೆಯಿಸಿ.  ಪ್ರಪಂಚದ ಪೋಲೀಸರನ್ನೆಲ್ಲ ತಂದು ನಮ್ಮ ನಮ್ಮ ಜಿಲ್ಲೆಯಲ್ಲಿ ಎಲೆಕ್ಷನ್ ಉಸ್ತುವಾರಿಕೆಗೆ ಬಿಡಿ, ತಪ್ಪಿತಸ್ತರಿಗೆ ಎಂತಹ ಕಠಿಣ ಶಿಕ್ಷೆಯನ್ನಾದರೂ ಕೊಡಿಸಿ... ನೀವು ಅದೇನೇ ತಿಪ್ಪರಲಾಗ ಹಾಕಿದರೂ, ಹಣ-ಹೆಂಡ ಮತ್ತಿತರ ವಸ್ತುಗಳನ್ನು ಹಂಚಿ ಚುನಾವಣೆ ಗೆಲ್ಲುವ ಶಕ್ತಿಗಳಿಗೆ ಕಡಿವಾಣ ಹಾಕಲಾರಿರಿ.  ಇತ್ತೀಚೆಗೆ ನಾನು ಕೇಳಿದ ಒಂದೆರಡು "ಕೊಟ್ಟು-ತೆಗೆದುಕೊಳ್ಳುವ" ಉದಾಹರಣೆಗಳಲ್ಲಿ, ಒಬ್ಬ ಮಲ್ಟಿ ಅಪಾರ್ಟ್‌ಮೆಂಟ್ ಮಾಲಿಕ ತನ್ನ ಒಂದು ವರ್ಷದ ಎಲೆಕ್ಟ್ರಿಸಿಟಿ ಬಿಲ್ ಅನ್ನು ಕೊಡದೇ ಉಳಿಸಿಕೊಂಡಿರುತ್ತಾನೆ.  ತನ್ನ ಹತ್ತಿರ ಓಟು ಕೇಳಲು ಹೋದವರಿಗೆ, ’ಈ ಬಿಲ್ ಅನ್ನು ಕಟ್ಟಿ ಬಾ...’ ಎಂದು ಬಿಲ್ ಕೊಟ್ಟು ಕಳುಹಿಸುತ್ತಾನೆ.  ಒಂದು ಪಕ್ಷದವರಿಗೆ ಕರೆಂಟ್ ಬಿಲ್, ಮತ್ತೊಂದು ಪಕ್ಷದವರಿಗೆ ನೀರಿನ ಬಿಲ್ ಕೊಟ್ಟರೆ, ಈ ರೀತಿಯ ಲೇವಾದೇವಿಯನ್ನು ಯಾರು ಹೇಗೆ ಕಂಡು ಹಿಡಿಯಲು ಸಾಧ್ಯ?  ನಮ್ಮ ಜನಗಳ ದುಡ್ಡೇ ಈ ರೀತಿ ತಿರುತಿರುಗಿ ಬೇನಾಮಿ ಖರ್ಚಾದಂತೆ ಕಂಡು ಬರುತ್ತಿದೆ ಎಂದು ಯಾರಿಗೆ ಹೇಳೋದು, ಯಾರಿಗೆ ಕೇಳೋದು?  ಒಂದು ಲೋಕಸಭಾ ಚುನಾವಣೆಯಲ್ಲಿ ಎಷ್ಟು ದುಡ್ಡು ಹೇಗೆ ಖರ್ಚು ಆಗುತ್ತದೆ ಎಂದು ನಿಮಗೆ ನಿಜವಾಗಿಯೂ ಕುತೂಹಲವಿದ್ದರೆ, ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ವರ್ಷದ ಅವಧಿಯಲ್ಲಿ ಎರಡು ಬಾರಿ ಸೋತ ಮಧು ಬಂಗಾರಪ್ಪ ಅವರನ್ನು ಕೇಳಿ ನೋಡಿ!

ಒಂದು ಸಮೀಕ್ಷೆಯ ಪ್ರಕಾರ ಒಂದು ಜಿಲ್ಲೆಯ ಚುನಾವಣೆಯ ಖರ್ಚು ಕಡಿಮೆ ಎಂದರೆ ನೂರು ಕೋಟಿ ರುಪಾಯಿಗಳು!  ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿ ನೀರಿನಂತೆ ಹಣ ಹರಿದು ಇನ್ನೂ ಹೆಚ್ಚು ಖರ್ಚಾಗಿರುವ ಉದಾಹರಣೆಗಳು ಕೂಡಾ ಇವೆ.  ಈ ನೂರು ಕೋಟಿಯನ್ನು ಒಬ್ಬ ಅಭ್ಯರ್ಥಿ ಅನೇಕ ಮೂಲಗಳಲ್ಲಿ "ಸಂಪಾದಿಸ"ಬಹುದು.  ಪಾರ್ಟಿ ಫಂಡಿನಿಂದ ದುಡ್ಡು ಹರಿಯಬಹುದು, ಉಳ್ಳವರ ಕಿಸೆಯಿಂದ ಹರಿದು ಬಂದಿರಬಹುದು, ತಾವೇ (ವಾಮಮಾರ್ಗದಲ್ಲಿ) ಕೂಡಿ ಹಾಕಿದ ಫಂಡ್ ಇರಬಹುದು, ಅಥವಾ ಇತರರ "ದೇಣಿಗೆ" ಇರಬಹುದು... ಇಷ್ಟೆಲ್ಲಾ ಖರ್ಚು ಮಾಡಿ, ಗೆಲ್ಲುವ, ಗೆದ್ದು ಮುನ್ನುಗ್ಗುವ ಛಲದ ಮೂಲ - ಈ (ಬಂಡವಾಳ) ದುಡ್ಡಿನ ನೂರು ಪಟ್ಟು ದುಡ್ಡು ಮಾಡುವುದು.  ಹೀಗೆ ದುಡ್ಡು ಮಾಡುತ್ತಾ ಮಾಡುತ್ತಾ, ಇವರುಗಳು ಬಿದ್ದ ಕೂಪದ ಆಳ ಹೆಚ್ಚಾದಂತೆಲ್ಲ, ಇವರುಗಳು ಏರುವ ಹುಲಿಯ ಕೊಬ್ಬು ಏರುತ್ತಲೇ ಹೋಗುತ್ತದೆ.

ಇನ್ನೈದು ವರ್ಷ ಕೇಂದ್ರದಲ್ಲಿ ಸ್ಥಿರ ಸರ್ಕಾರ, ಕರ್ನಾಟಕದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಧೂಳೀಪಟ - ಇವೆರಡರ ಮೊತ್ತ, ಕರ್ನಾಟಕದ ಅಸ್ಥಿರ ರಾಜಕಾರಣ, ಅಥವಾ "ಪ್ರಬಲ"ವಾದ ಪಕ್ಷದ ಆಡಳಿತ.  ಒಮ್ಮೆ ಪ್ರಬಲ ಸರ್ಕಾರದ ಆಡಳಿತವೆಂದರೆ ಅದು ಮೂರು, ಐದು, ಹತ್ತುವರ್ಷಗಳ ವರೆಗೆ ನಿರಂತರವಾಗಿ ಮುಂದೆ ಹೋಗುತ್ತಲೇ ಇರಬಹುದು.  ಈ ಹಂತದಲ್ಲಿಯೇ ತಮ್ಮ ತಮ್ಮ ಪಕ್ಷದ ನಿಷ್ಠತೆಯನ್ನು ಒರೆಗಲ್ಲಿಗೆ ಹಚ್ಚಿ ನೋಡುವ ಕೆಲವರು, ಅವಕಾಶ ಸಿಕ್ಕಿದ್ದೇ ತಡ ಜಿಗಿದರು.  ಇನ್ನು ಕೆಲವರು, ನೀತಿ, ನಿಯಮ, ಸತ್ಯಸಂಧತೆಯ ಹಿನ್ನೆಲೆಯಲ್ಲಿ ರಾಜೀನಾಮೆ ಬಿಸಾಡಿದರು.  ಇನ್ನು ಕೆಲವರು ಗೆದ್ದೆತ್ತಿನ ಬಾಲ ಹಿಡಿದರು.

***
ಗೆದ್ದು ಶಾಸಕ, ಸಂಸದನಾಗಿ ಆರಿಸಿ ಬಂದ ವ್ಯಕ್ತಿಗೆ ಮುಖ್ಯ ಎರಡು ಗುರಿಗಳಿವೆ: ತಮ್ಮ ಮೂಲ ಬಂಡವಾಳವನ್ನು ದ್ವಿಗುಣ-ತ್ರಿಗುಣ (ಉಲ್ಬಣ) ಗೊಳಿಸುವುದು, ತಮ್ಮ ಕಾರ್ಯಕರ್ತ-ಹಿತೈಷಿ-ಸಂತಾಪಕರ ನಡುವೆ ತಮ್ಮ ಪಾರಮ್ಯವನ್ನು ಮೆರೆಯುವುದು.  ಇವೆರಡೂ ಒಂದಕ್ಕೊಂದು ಪೂರಕವಾಗಲು ಸಾಧ್ಯವಾಗುವ ಸುಲಭ ವಿಧಾನವೇ - ಮಂತ್ರಿಯಾಗುವುದು!  ಈ ಸುಲಭ ಫಾರ್ಮುಲಾವನ್ನು ಮನದಟ್ಟು ಮಾಡಿಕೊಂಡ ರಾಜಕಾರಣಿಗಳೆಲ್ಲ ರಾತ್ರೋರಾತ್ರಿ ಮುತ್ಸದ್ದಿಗಳಾಗಿ, ಹಿರಿಯ ಹೋರಾಟಗಾರರಾಗಿ ವಿಜೃಂಭಿಸುವುದು.  ಮೊದಲೆಲ್ಲ ಐದು ಬಾರಿ ಗೆದ್ದು ಶಾಸಕರಾದರೂ ಮಂತ್ರಿ ಪದವಿಯನ್ನು ಕೇಳದೇ ತಮ್ಮ ಪಾಲಿಗೆ ಬಂದದ್ದನ್ನು ಪಾಲಿಸುವ ಪಕ್ಷನಿಷ್ಠರಿದ್ದರು. ಆದರೆ ಇಂದು, ಕೇವಲ ಎರಡು ಸಾರಿ ಶಾಸಕರಾಗಿ ಒಂದು ಕ್ಷೇತ್ರದಿಂದ ಆರಿಸಿ ಬಂದವರೆಲ್ಲ ಮಂತ್ರಿಗಳಾಗುವ ಕನಸು ಕಾಣುವವರಾಗಿದ್ದಾರೆ.  ಇರುವ ಇನ್ನೂರು ಚಿಲ್ಲರೆ ಶಾಸಕರೆಲ್ಲರಿಗೂ ಒಂದೊಂದು ಪದವಿ ಬೇಕು - ಅವರು ಪರ-ವಿರೋಧ ಯಾವುದೇ ಪಕ್ಷದಲ್ಲಿರಲಿ!

***
ಈ ಎಲ್ಲ ಗೊಂದಲಗಳ ನಡುವೆ ತಮ್ಮ ತಮ್ಮ ಕ್ಷೇತ್ರಗಳ ಬೆಳವಣಿಗೆಯನ್ನು ನೋಡುವವರು ಯಾರು? ತಮ್ಮ ತಮ್ಮ ಊರು, ಜಿಲ್ಲೆ, ರಾಜ್ಯಗಳನ್ನು ಬೆಳೆಸುವವರಾರು? ಎಲ್ಲರೂ ದುಡ್ಡು ಮಾಡಿಕೊಂಡಿದ್ದರೆ, ಅದಕ್ಕೆ ಮಿತಿಯೆಂಬುದೇ ಇಲ್ಲವೇ? ಇವರೆಲ್ಲ ಈ ರೀತಿ ದುಡ್ಡು ಮಾಡಿ ಕೊನೆಗೆ ಏನನ್ನು ಸಾಧಿಸುತ್ತಾರೆ? ಈ ರೀತಿ ಯಶಸ್ಸನ್ನು ಕಲ್ಪಿಸಿಕೊಳ್ಳುವ ನಮ್ಮ ನಡುವೆ, ದಶಕಗಳ ನಿರಂತರ ಶೋಧನೆ-ಸಂಶೋಧನೆ ಮಾಡಿ, ಮನುಕುಲದ ನಾಶಕ್ಕೆ ಟೊಂಕಕಟ್ಟಿ ನಿಂತ ಕಣ್ಣಿಗೆ ಕಾಣದ ವೈರಸ್ಸಿಗೆ ವಿರುದ್ಧವಾಗಿ ಹೋರಾಡಿ ಔಷಧಿ ಕಂಡು ಹಿಡಿಯಲು ತಮ್ಮ ಜೀವನವನ್ನೇ ಮುಡಿಪಾಗಿಡುವ ವಿಜ್ಞಾನಿಗಳು ಈ ಸಮಾಜದಲ್ಲಿ ಹುಟ್ಟುವುದು ಹೇಗೆ ಸಾಧ್ಯ?

ಇವರುಗಳು ಹೊಕ್ಕಿನಿಂತ ಆಳವಾದ ಬಾವಿಯ ದಾಹ ಇನ್ನೂ ಆಳಕ್ಕಿಳಿಸುತ್ತದೆ, ಅದು ಬತ್ತುವುದೂ ಇಲ್ಲ ಹಾಗೂ ತುಂಬುವುದೂ ಇಲ್ಲ ಎನ್ನುವ ಜಾಯಮಾನದ್ದು.  ಈ ವ್ಯವಸ್ಥೆಯೇ ನಮ್ಮ ನಡುವೆ ಭ್ರಷ್ಟಾಚಾರಕ್ಕೆ ಇಂಬುಕೊಡುವುದು.  ಒಬ್ಬ ಹಸಿದ ನಿರಕ್ಷರ ಬಡವನಿಗೆ ಸಾವಿರ ರೂಪಾಯಿ ತೋರಿಸಿ ಚುನಾವಣೆಯಲ್ಲಿ ಮತಹಾಕುವಂತೆ ಅಂಗಲಾಚಿ ಗೆಲ್ಲುವುದರಲ್ಲಿ ಏನು ದೊಡ್ಡತನವಡಗಿದೆ ಎಂದು ನಾವೆಲ್ಲ ಸಹಿಸಿಕೊಂಡು ಬಂದಿದ್ದೇವೋ ಎಂದು ಬೇಸರವಾಗುತ್ತದೆ.  ಇಂತವರೆಲ್ಲ ನಮ್ಮನ್ನು (ಏನೂ ಕೆಲಸ ಮಾಡದೆ) ಆಳುವವರು, ಇಂತವರನ್ನು ಸಹಿಸಿಕೊಳ್ಳುವ ನಾವು (ಕೈಲಾಗದ) ಪ್ರಜೆಗಳು!

ಇದು ಇಂದು ನಿನ್ನೆಯದಲ್ಲ - ಹಿಂದೆ ಆಗಿದೆ, ಇಂದು ಆಗುತ್ತಿದೆ, ಮುಂದೆ ಎಂದೆಂದೂ ಆಗುತ್ತದೆ, ಆಗುತ್ತಲೇ ಇರುತ್ತದೆ!

Sunday, February 28, 2016

ಆಜಾದಿಯಿಂದ ಬರಬಾದಿಯವರೆಗೆ...

ಈ ತಿಂಗಳ ೯ನೇ ತಾರೀಖಿನಿಂದ ಜೆಎನ್‌ಯು ನಲ್ಲಿ ಕೆಲವು ವಿದ್ಯಾರ್ಥಿಗಳು ಕವನಗಳನ್ನು ಓದುತ್ತೇವೆ ಎಂದು ಪರ್ಮಿಷನ್ ತೆಗೆದುಕೊಂಡು ಅಫಝಲ್ ಗುರುವನ್ನು ಗಲ್ಲಿಗೇರಿಸಿದ ಮೂರನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಅನೇಕ ರಾಷ್ಟ್ರ ವಿರೋಧಿ ಹೇಳಿಕೆಗಳನ್ನು ಕೂಗಲಾಯ್ತು (ಈ ಹೇಳಿಕೆಗಳನ್ನು ಯಾರು ಕೂಗಿದರು ಎನ್ನುವುದು ಇನ್ನೂ ನಿಗೂಢವಾಗಿಯೇ ಇದ್ದು, ಈ ಸಂಬಂಧ ಇನ್ನೂ ಪೋಲೀಸ್ ಇನ್ವೆಸ್ಟಿಗೇಷನ್ ನಡೆಯುತ್ತಿದೆ).  ಈ ಸಂಬಂಧ ಐವರು ವಿದ್ಯಾರ್ಥಿಗಳನ್ನು ಜೊತೆಗೆ ವಿದ್ಯಾರ್ಥಿ ನಾಯಕನನ್ನು ಬಂಧಿಸಲಾಯ್ತು.  ನಂತರ ಕೋರ್ಟಿನ ಆವರಣದಲ್ಲೇ ವಿದ್ಯಾರ್ಥಿ ನಾಯಕನನ್ನು ಥಳಿಸಲಾಯ್ತು.  ಈಗ ಐವರು ವಿದ್ಯಾರ್ಥಿಗಳು ತಿಹಾರ್ ಜೈಲಿನಲ್ಲಿ ದಿನಗಳನ್ನು ಎಣಿಸುತ್ತಿದ್ದರೆ, ದೇಶದಾದ್ಯಂತ ಅವರನ್ನು ಮುಕ್ತಗೊಳಿಸಲು ಅನೇಕ ಚಳುವಳಿ/ಆಂದೋಲನಗಳು ನಡೆದಿವೆ.  ಇದು ರಾಜಕೀಯವಾಗಿಯೂ ತೀವ್ರವಾಗಿ ಬೆಳೆದಿದ್ದು ಸಂಸತ್ತಿನಲ್ಲಿ ಪಕ್ಷ-ಪ್ರತಿಪಕ್ಷಗಳ ನಾಯಕರುಗಳು ಅನೇಕ ಬಿಸಿ ಬಿಸಿ ಚರ್ಚೆಯಲ್ಲಿ ತೊಡಗಿದ್ದು, ದೇಶದಾದ್ಯಂತ ಇದು ಅನೇಕ ವಿಚಾರಧಾರೆಗಳನ್ನು ಹರಿಸಿದೆ.  ಇದಕ್ಕೆಲ್ಲ ಒಂದು ರೀತಿಯ ಟ್ರಿಗ್ಗರ್ ಆಗಿ ಕಳೆದ ತಿಂಗಳು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲ ಹಾಗೂ ಅದನ್ನು ಸರ್ಕಾರ ನಿಭಾಯಿಸಿದ ವಿಧಾನ ಎಂಬ ಮಾತುಗಳೂ ಜಾರಿಯಲ್ಲಿವೆ.  ಇಷ್ಟಕ್ಕೂ ಅಫಝಲ್ ಗುರು, ರೋಹಿತ್ ವೇಮುಲ, ಕನ್ಹೈಯಾ ಕುಮಾರ್, ಉಮರ್ ಖಾಲೀದ್, ಅನಿರ್ಬಾನ್ ಭಟ್ಟಾಚಾರ್ಯ, ಯಾಕೂಬ್ ಮೆಮನ್ ಇವರಿಗೆಲ್ಲ ಏನು ಸಂಬಂಧ?  ಇವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಒಂದು ಮಿತಿ ಇರಬೇಕೇ? ಅದರಲ್ಲೂ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಯಾರಾದರೂ ಕೂಗಬಹುದೇ?  ಅಕಸ್ಮಾತ್ ಇದು ಒಂದು ರಾಷ್ಟ್ರ ವಿರೋಧೀ ಕಾರ್ಯಾಚರಣೆಯೇ ಆಗಿದ್ದಲ್ಲಿ, ಇದರ ಮೂಲ ಎಲ್ಲಿದೆ? ಇದಕ್ಕೆಲ್ಲ ಹಣಕಾಸು ಒದಗಿಸುವವರು ಯಾರು? ಈ ಘರ್ಷಣೆ ಕೇವಲ ಕಳೆದೆರಡು-ಮೂರು ವರ್ಷಗಳಲ್ಲಿ ಹುಟ್ಟಿದ್ದೇ? ಅಥವಾ ಇದರ ಹಿಂದೆ ಹಲವಾರು ವರ್ಷಗಳಿಂದ ಅನೇಕ ಕಾರಣಗಳು ಇವೆಯೋ?

ಈ ನಿಟ್ಟಿನಲ್ಲಿ ಮೊದಲು ಮುಖ್ಯ ವಿದ್ಯಾರ್ಥಿಗಳ ಬಗ್ಗೆ ತಿಳಿಯೋಣ:
ಕನ್ಹೈಯಾ ಕುಮಾರ್ ಮೂಲತಃ ಬಿಹಾರ್‌ನವನು. ವಿದ್ಯಾರ್ಥಿ ದಿನಗಳಿಂದಲೂ ಕಮ್ಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತನಾಗಿ ದುಡಿದವನು.

ಕೆಲವು ವರ್ಷಗಳಿಂದ ಜೆಎನ್‌ಯು ನಲ್ಲಿ ಆಫ್ರಿಕನ್ ಸ್ಟಡೀಸ್‌ನಲ್ಲಿ ಪಿಎಚ್.ಡಿ. ಮಾಡುತ್ತಿದ್ದಾನೆ.  ೨೦೧೫ ರಲ್ಲಿ ಸ್ಟೂಡೆಂಟ್ ಯೂನಿಯನ್ ಪ್ರೆಸಿಡೆಂಟ್ ಆಗಿ ಚುನಾಯಿತನಾದವನು.  ತನ್ನ ಪ್ರಚೋದನಾಕಾರಿ ಭಾಷಣಳಿಂದ ಮುಂದೆ ಬಂದವನು.
ಉಮರ್ ಖಾಲೀದ್ ಮೂಲತಃ ಮಹಾರಾಷ್ಟ್ರದವನು.  ವಿದ್ಯಾರ್ಥಿ ದಿನಗಳಿಂದಲೂ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಯೂನಿಯನ್ ಕಾರ್ಯಕರ್ತನಾಗಿ ದುಡಿದವನು.  ಜೆಎನ್‌ಯುನಲ್ಲಿ ಕೆಲವು ವರ್ಷಗಳಿಂದ ಎಮ್‌ಎ, ಎಮ್‌ಫಿಲ್ ಮಾಡಿ ಮುಗಿಸಿದ್ದು, ಈಗ ಸೋಶಿಯಲ್ ಸೈನ್ಸ್‌ನಲ್ಲಿ ಪಿಎಚ್.ಡಿ. ಮಾಡುತ್ತಿದ್ದಾನೆ.  ಅಫ್‌ಝಲ್ ಗುರು ಕಾರ್ಯಕ್ರಮ ನಡೆಸುವ ಬಗ್ಗೆ ಮೊದಲು ಈತನೇ ಜೆಎನ್‌ಯು ಪರ್ಮಿಷನ್ ಕೇಳಿದ್ದು,  ವಿಶ್ವ ವಿದ್ಯಾನಿಲಯದ ಅಡ್ಮಿನಿಸ್ಟ್ರೇಷನ್ ನಿರಾಕರಿಸಿದ ಮೇಲೆ, ಈತ ಪಾಂಪ್ಲೆಟ್ಟುಗಳನ್ನು ಮುದ್ರಿಸಿ, ಸೋಶಿಯಲ್ ಮೀಡಿಯಾ ಮಾಧ್ಯಮಗಳ ಮೂಲಕ ಅನೇಕ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಿದ ಎಂದು ಇವನ ಮೇಲೆ ಆರೋಪವಿದೆ.

***

ಭಾರತ ಒಂದು ಪ್ರಬಲವಾದ ರಾಷ್ಟ್ರ, ಪ್ರಜಾಪ್ರಭುತ್ವವನ್ನು ಎಲ್ಲ ಕೋನಗಳಿಂದಲೂ ಅಳೆದರೆ ನಿಜವಾದ ಸ್ವಾತ್ರಂತ್ರ್ಯ ಎಲ್ಲರಿಗೂ ಇದೆ. ಅದು ಅಭಿವ್ಯಕ್ತಿ ಸ್ವಾತ್ರಂತ್ರ್ಯವಾಗಿರಬಹುದು, ಅಥವಾ ಸಂಘಟನಾ ಸ್ವಾತಂತ್ರ್ಯವಾಗಿರಬಹುದು.  ಈ ಮೂಲಭೂತ ಸ್ವಾತಂತ್ರ್ಯವೇ ಒಂದು ಕಾಲದಲ್ಲಿ ನಮ್ಮ ಸ್ವತಂತ್ರ ಹೋರಾಟಗಾರರ ಹಕ್ಕು ಆಗಿತ್ತು.  ಅದರ ಮುಖಾಂತರವೇ ದೇಶವನ್ನು ಆಳುತ್ತಿದ್ದ ಬ್ರಿಟೀಷ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವುದು, ಸತ್ಯಾಗ್ರಹಗಳನ್ನು ಸಂಘಟಿಸಿ, ಜನರನ್ನು ಒಗ್ಗೂಡಿಸಿ ಹೋರಾಟ ಮಾಡಿದ್ದರಿಂದಲೇ ನಾವು ಬ್ರಿಟೀಷ್ ರಾಜ್ಯದಿಂದ ಮುಕ್ತಿ ಪಡೆದದ್ದು.  ಈ ಸ್ವಾತಂತ್ರ್ಯ ಹೋರಾಟ ಒಂದೆರಡು ವರ್ಷದ್ದಲ್ಲ, ಬದಲಿಗೆ ಹಲವು ದಶಕಗಳ ಕಾಲ ದೇಶದ ಉದ್ದಗಲಕ್ಕೂ ಹರಡಿ ಅನೇಕರ ತ್ಯಾಗ ಬಲಿದಾನಗಳಿಂದ ಈಗಿರುವ ಮುಕ್ತ ದೇಶ ಹುಟ್ಟಲು ಸಾಧ್ಯವಾಯ್ತು.  ಆದರೆ ಅಲ್ಲಿ, ಪರ-ವಿರೋಧಗಳ ಬಗ್ಗೆ ಒಮ್ಮತವಿತ್ತು, ಯಾರು ನಮ್ಮವರು ಯಾರು ಪರಕೀಯರು ಎನ್ನುವುದು ಗೊತ್ತಿತ್ತು.  ಜೊತೆಗೆ ನಮ್ಮ ನಾಯಕರೂ ಸಹ ಮಂದವಾದ ಮತ್ತು ತೀವ್ರವಾದದ ಭಿನ್ನತೆಯನ್ನು ಹೊರತು ಪಡಿಸಿದರೆ ದೇಶದ ಸಮಸ್ಯೆಗಳ ಆಳವನ್ನು ತಿಳಿದವರಾಗಿದ್ದರು.  ನಿಜವಾದ ದೇಶಭಕ್ತರಾಗಿದ್ದರು.  ನಮಗೆ ಸ್ವಾತ್ರಂತ್ರ್ಯ ಸಿಗುವುದಕ್ಕೆ ನೂರು ವರ್ಷಗಳ ಮೊದಲೇ ಈ ಮನೋಭಾವ ದೇಶದ ಉದ್ದಗಲಕ್ಕೂ ಹರಡಿತ್ತು.  ವೈಚಾರಿಕ ಪಂಥ, ಭಕ್ತಿ ಪಂಥ, ಉಗ್ರ ಪಂಥ, ಶಾಂತಿ ಪಂಥ - ಈ ಎಲ್ಲರ ಗುರಿ ಬ್ರಿಟೀಷರಿಂದ ನಮ್ಮನ್ನು ಮುಕ್ತಗೊಳಿಸುವುದೊಂದೇ ಆಗಿತ್ತು.  ಅದು ನಿಜವಾದ ದೇಶ ಪ್ರೇಮ, ನಿಜವಾದ ದೇಶಭಕ್ತಿ.  ಲಕ್ಷಾಂತರ ಕುಟುಂಬಗಳು ಸಾವಿಗೀಡಾದವು.  ಯಾವೊಂದು ನೇರ ಲಾಭ ಅಥವಾ ದುರ್ಬಳಕೆ ಇಲ್ಲದ ಶುದ್ಧ ಮನೋಭಾವದ ಅನೇಕ ಯೋಧರು ಹಿಂದೆ ಮುಂದೆ ನೋಡದೆ ಜೀವ ತೆತ್ತರು.

ನಾವು ಇಂದಿನ ರಾಷ್ಟೀಯವಾದಿ ಚಳುವಳಿಗಳನ್ನು ಈ ಒಂದು ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ.  ಈ ಮೇಲೆ ಹೇಳಿದ ವಿದ್ಯಾರ್ಥಿಗಳಿಗೆ ನಿಜವಾಗಿಯೂ ಬೇಕಾಗಿರುವುದು ಏನು?  ಭಾರತ ಸರ್ಕಾರ ಮತ್ತು ಭಾರತದ ಟ್ಯಾಕ್ಸ್ ಪೇಯರ್ಸ್ ಹಣ ಕೊಟ್ಟು ಓದಿಸುತ್ತಿರುವ ಇವರಿಗೆಲ್ಲ ಅಫಝಲ್ ಗುರು, ಯಾಕೂಬ್ ಮೆಮನ್ ಆಪ್ತರೇಕಾಗುತ್ತಾರೆ?  ಈ ತೀವ್ರತರ ಆಲೋಚನೆಗಳು ಕೇವಲ ಒಂದೆರಡು ವರ್ಷಗಳಲ್ಲಿ ಹುಟ್ಟದೇ ಅನೇಕ ಮೈತ್ರಿ ಪಕ್ಷಗಳು ಹಲವು ವರ್ಷಗಳಿಂದ ರಾಜಕೀಯ ವಾತಾವರಣವನ್ನು ದೇಶದಾದ್ಯಂತ ಹುಟ್ಟು ಹಾಕಿರುವುದು ನಿದರ್ಶನಕ್ಕೆ ಬರುತ್ತದೆ.  ವಿಶ್ವ ವಿದ್ಯಾನಿಲಯಗಳಲ್ಲಿ ರಾಜಕೀಯ ಪ್ರೇರಣೆ ಇರಬೇಕೆ ಬೇಡವೇ?  ವಿಶ್ವವಿದ್ಯಾನಿಲಯ ಮುಕ್ತ ಆಲೋಚನೆಗಳನ್ನು ಬೆಳೆಸಬೇಕೆ ಅಥವಾ ಕೇವಲ ಶೈಕ್ಷಣಿಕ ಸಂಬಂಧಿ ಆಲೋಚನೆಗಳನ್ನು ಮಾತ್ರ ಬೆಳೆಸಬೇಕೆ?  ಈ ಪ್ರಶ್ನೆಗಳು ನಮ್ಮ ನಂಬಿಕೆಯ ಬುಡವನ್ನು ಅಲುಗಾಡಿಸುತ್ತವೆ.
ಈ ಹೈದರಾಬಾದ್ ಮತ್ತು ಜೆಎನ್‌ಯು ವಿದ್ಯಮಾನಗಳನ್ನು ಕೂಲಂಕಶವಾಗಿ ನೋಡಿದಾಗ ಅನೇಕ ಮೂಲ ಕಾರಣಗಳು ಗೊತ್ತಾಗುತ್ತವೆ:

ಭಾರತ ಸರ್ಕಾರದ ಎಚ್.ಆರ್.ಡಿ. ಮಿನಿಸ್ಟ್ರಿ ಅನೇಕ ದಲಿತ ಸಂಘಟನೆಗಳನ್ನು ಮಟ್ಟ ಹಾಕಲು ಪ್ರಯತ್ನಿಸಿತು ಎನ್ನುವ ಆರೋಪವಿದೆ.  ತಮಗೆ ಬೇಕಾದವರನ್ನು ಮಾತ್ರ ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡುತ್ತಾರೆ ಎಂಬ ಆರೋಪವಿದೆ.  ರೋಹಿತ್ ವೇಮುಲನ ಸಾವನ್ನು ರಾಜಕೀಯ ದಾಳವಾಗಿ ಬಳಸಲಾಯ್ತು ಎನ್ನುವ ಆಲೋಚನೆಗಳಿವೆ.  ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾಪ್ರಭುತ್ವದ ಮೂಲ ಸ್ಥಂಭಗಳಾದ ಮುಕ್ತ ಆಲೋಚನೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಎಂಬುದು.  ಇದಕ್ಕೂ ಒಂದು ಹೆಜ್ಜೆ ಹಿಂದೆ ಹೋಗಿ ನೋಡಿದರೆ ದೇಶದ ಉದ್ದಗಲಕ್ಕೂ ಮಕ್ಕಳಿಗೆ ಯಾವ ರೀತಿಯಲ್ಲಿ ಇತಿಹಾಸವನ್ನು ಬೋಧಿಸಲಾಗಿದೆ ಎನ್ನುವುದನ್ನೂ ಗಮನಿಸಬೇಕಾಗುತ್ತದೆ.  ಈ ವಿದ್ಯಾರ್ಥಿಗಳು ತಮ್ಮ ಜೀವನವನ್ನೇ ಬಲಿ ಕೊಟ್ಟು ದೇಶದ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ         ಗಲ್ಲಿಗೊಳಗಾದ ಅಫಝಲ್ ಗುರು ಮತ್ತು ಯಾಕೂಬ್ ಮೆಮನ್ ಪರ ಏಕೆ ನಿಲ್ಲುತ್ತಾರೆ ಎಂಬುದನ್ನು ಯೋಚಿಸಬೇಕಾಗುತ್ತದೆ.  ನಾವೊಂದು ಸಮಸ್ಯೆಯ ವಿರುದ್ಧ ಹೋರಾಟ ಮಾಡಿದಾಗ, ನಾವು ಎಲ್ಲಿ ಗೆರೆಯನ್ನು ದಾಟುತ್ತಿದ್ದೇವೆ ಎನ್ನುವ ತಿಳುವಳಿಕೆ ಈ ವಿದ್ಯಾರ್ಥಿಗಳಿಗೆ ಇಲ್ಲದಿರುವುದು ಗೊತ್ತಾಗುತ್ತದೆ, ಜೊತೆಗೆ ರಾಜಕೀಯ ದಾಳಗಳಿಗೆ ಬಲಿಪಶುಗಳಾದ ಮೌಢ್ಯವೂ ಎದ್ದು ಕಾಣುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ವಿದ್ಯಾರ್ಥಿಗಳು ನಡೆಸುವ ಧರಣಿ ಕಾರ್ಯಕ್ರಮಗಳಿಗೆ ಹಣಕೊಡುವವರಾರು? ಅಫಝಲ್ ಗುರುವಿನ ಸಾವಿರಾರು ಫೋಟೋಗಳನ್ನು ಪ್ರಿಂಟ್ ಮಾಡಲು ಯಾರು ಹಣಕೊಟ್ಟರು?  ಅಫಝಲ್ ಗುರುವಿಗೆ ಅನ್ಯಾಯವಾಗಿದೆ ಎಂದುಕೊಂಡರೆ ಅದನ್ನು ಅವನು ಬದುಕಿದ್ದಾಗ ಸುಪ್ರೀಮ್ ಕೋರ್ಟ್‌ನಲ್ಲಿ ಕಂಟೆಸ್ಟ್ ಏಕೆ ಮಾಡಲಿಲ್ಲ?  ಇದರ ಹಿಂದೆ ನಮ್ಮ ದೇಶದ ವಿವಿಧ ರಾಜಕೀಯ ಶಕ್ತಿಗಳು ಮಾತ್ರ ಇವೆಯೇ? ಅಥವಾ ಹೊರ ದೇಶಗಳ ಹುನ್ನಾರವಿದೆಯೇ? ಇಷ್ಟು ದಿನ ಕೇವಲ ಮೂಲಭೂತವಾದದ ಬಗ್ಗೆ ಓದುತ್ತಿದ್ದ ನಮಗೆ ಈಗ ಹಿಂದೂ ವಿದ್ಯಾರ್ಥಿಗಳು ಒಂದು ದೇಶದ ಉಚ್ಛ ನ್ಯಾಯಾಲಯ ದೇಶದ್ರೋಹಿಯೆಂದು ಪರಿಗಣಿಸಿದ ಕೆಲವು ಮುಸ್ಲಿಂ ಪ್ರತಿವಾದಿಗಳನ್ನು ದೈವತಾ ಸ್ವರೂಪಿಗಳೆಂದು ಕರೆಯುವಷ್ಟರ ಮಟ್ಟಿಗೆ ದೇಶದ ವಿದ್ಯಾರ್ಥಿಗಳ ನೈತಿಕ ತಿಳುವಳಿಕೆಯ ಬಗ್ಗೆ ಚಿಂತೆ ಪಡುವಂತೆ ಮಾಡಿದೆ.

***
ಘೋಷಣೆಗಳನ್ನು ಯಾರೇ ಕೂಗಿರಲಿ, ಅವುಗಳನ್ನು ಕೂಗಿದ್ದಂತೂ ನಿಜ.  ಒಬ್ಬನ ವಾಕ್ ಸ್ವಾತಂತ್ರ್ಯದಲ್ಲಿ ಏನೇನೆಲ್ಲ ಮಾಡಲು ಸಾಧ್ಯವಿದೆ?  ದೇಶ ವಿರೋಧಿ ಘೋಷಣೆಗಳನ್ನು ಕೂಗಿದವರಿಗೆ ಜಗತ್ತಿನಾದ್ಯಂತ ಉಳಿದ ದೇಶಗಳು ಯಾವ ರೀತಿಯ ಟ್ರೀಟ್‌ಮೆಂಟ್ ಅನ್ನು ಕೊಡುತ್ತವೆ ಎನ್ನುವುದನ್ನು ಯೋಚಿಸಬೇಕಾಗುತ್ತದೆ.  ನಮ್ಮ ಸುತ್ತ ಮುತ್ತ ಕಮ್ಯೂನಿಷ್ಟ್ ದೇಶಗಳಿವೆ, ಅವುಗಳಲ್ಲಿ ನಡೆಯುವ ಸುದ್ದಿಯೂ ಹೊರಬರದಂತೆ ನರಮೇಧ ನಡೆದಾಗಲೆಲ್ಲ ಇದೇ ವಿದ್ಯಾರ್ಥಿಗಳು ಚಳುವಳಿ ನಡೆಸುತ್ತಾರೆಯೇ? ಅವರ ಪ್ರತೀಕಾರದ ಪರಿಮಿತಿ ಎಷ್ಟು?  ನಮ್ಮ ಪಕ್ಕದ ದೇಶಗಳಲ್ಲಿ ನೂರಾರು ಜನ ಅಮಾಯಕರು ಸತ್ತಾಗ ಇದೇ ವಿದ್ಯಾರ್ಥಿಗಳ ತಿಳುವಳಿಕೆಗೆ ಅದು ನಿಲುಕದ ವಿಷಯವಾಗಿರುವುದೇಕೆ?  ಕಮ್ಯೂನಿಸಮ್‌ನ ತತ್ವಗಳೇನು? ಹಾಗೂ ಪ್ರಜಾಪ್ರಭುತ್ವದಲ್ಲಿ ಅದರ ಪಾತ್ರವೇನು ಎಂಬುದನ್ನು ಯೋಚಿಸಲಾರದಷ್ಟು ಈ ವಿದ್ಯಾರ್ಥಿಗಳು ಶೂನ್ಯರಾದರೇಕೆ?
ಈ ವಿದ್ಯಾರ್ಥಿಗಳು ಅನವಶ್ಯಕವಾಗಿ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿರುವಾಗ ನನಗೆ ಬೇಸರವಾಗುವ ಒಂದು ಸಂಗತಿ ಎಂದರೆ ನಮ್ಮ ದೇಶದಲ್ಲೇ ಅನೇಕ ಮೂಲಭೂತ ಸಮಸ್ಯೆಗಳು ಇನ್ನೂ ಸಮಸ್ಯೆಗಳಾಗಿರುವಾಗ ಅವುಗಳನ್ನು ನಿರ್ಮೂಲನ ಮಾಡಲು ಈ ವಿದ್ಯಾರ್ಥಿಗಳು ಯಾಕೆ ಯೋಚಿಸಬಾರದು?  ವಿಜ್ಞಾನ, ತಂತ್ರಜ್ಞಾನ ಮುಂದುವರೆದು ಜಗತ್ತಿನ ಉಳಿದ ಯುವಜನತೆ ಅನೇಕ ಉನ್ನತ ಚಿಂತನೆ, ಧೋರಣೆಗಳಲ್ಲಿ ತೊಡಗಿದ್ದರೆ ನಮ್ಮ ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅಫಝಲ್ ಗುರುವಿನ ಹಿಂದೆ ಏಕೆ ಬಿದ್ದಿದ್ದಾರೆ?  ಇವರೇ ನಮ್ಮ ಮುಂದಿನ ನಾಗರೀಕರೆ? ಇವರೇ ನಮ್ಮ ಮುಂದಿನ   ಲೀಡರುಗಳೇ?

ಒಂದು ದೇಶದ ಸತ್ಯಾನಾಶ ಎಂದರೆ ಏನು? ಭಾರತವನ್ನು ಸಂಪೂರ್ಣ ಬುಡಮೇಲು ಮಾಡುವುದೇ? ಅಥವಾ ಅದನ್ನು ತುಂಡು ತುಂಡು ಮಾಡಿ ವಿಭಜನೆ ಮಾಡುವುದೇ?  ನಾವೆಲ್ಲ ಇಂದೂ ಸಹ ಬೇರೆ ಬೇರೆ ಪ್ರಾಂತ್ಯದವರೇ? ಅನೇಕ ಭಾಷೆ ಸಂಸ್ಕೃತಿ ವೈವಿಧ್ಯತೆಗಳ ಪ್ರತೀಕ ಭಾರತ, ಇಂಥ ಭೂಮಿಯಲ್ಲಿ ಅನೇಕ ವೈರುಧ್ಯಗಳೂ ಇರುವುದು ಸಹಜ.  ಆ ವೈರುಧ್ಯಗಳನ್ನು ನಾವು ವಿಚಾರವಾದಿಗಳಾಗಿ ಬಗೆಹರಿಸಿಕೊಳ್ಳುತ್ತೇವೆಯೋ ಅಥವಾ ಕಾನೂನು ಅಧಿಕಾರಗಳಿಂದ ಸಂಭ್ರಮಿಸಿಕೊಳ್ಳುತ್ತೇವೆಯೋ ಅನ್ನುವುದು ಮುಖ್ಯವಾಗುತ್ತದೆ.  ಇಂದಿನ ಮಾಧ್ಯಮಗಳು ದೂರದ ದೇಶಗಳಿಗೆ ಹರಡುತ್ತಿರುವ ಬಿಸಿಬಿಸಿ ಸುದ್ದಿ ಈ ವರೆಗೆ ನಮ್ಮ ದೇಶದ ವಿದ್ಯಾರ್ಥಿಗಳ ಬಗ್ಗೆ ಒಳ್ಳೆಯ ಮನೋಭಾವನೆಯನ್ನು ಮೂಡಿಸಲು ಸೋತಿವೆ ಎಂದು ಹೇಳಲು ಖೇದವಾಗುತ್ತದೆ.

ಒಟ್ಟಿನಲ್ಲಿ ಕಳೆದ ಇನ್ನೂರು ವರ್ಷಗಳ ಸತತ ಹೋರಾಟದ ಬಳಿಕ ದೊರೆತ ನಮ್ಮ ಆಜಾದಿ, ಸ್ವಾತಂತ್ರ್ಯಾ ನಂತರ ಕೇವಲ ಆರು ದಶಕಗಳಲ್ಲಿ ನಮ್ಮ ವಿದ್ಯಾರ್ಥಿಗಳನ್ನು ದೇಶದ ಬರಬಾದಿಯ ಕಡೆಗೆ ಯೋಚಿಸುವಂತೆ ಮಾಡಿದ್ದು ನಿಜವಾಗಿಯೂ ನಮ್ಮ ದುರ್ದೆಶೆ.

***
ಈ ಲೇಖನ ಈ ತಿಂಗಳ ದರ್ಪಣದಲ್ಲಿ ಪ್ರಕಟವಾಗಿದೆ.
 

Saturday, May 11, 2013

ಅನಿವಾಸಿಗಳಿಗೆ ಸಂದ ಜಯ

ನಾನು ಓದಿದ ಬ್ಲಾಗು / ನ್ಯೂಸ್ ಪೋರ್ಟಲುಗಳೆಲ್ಲ ದಳ, ಬಿಜೆಪಿ, ಕಾಂಗ್ರೆಸ್‌ಗೆ ಸಂಬಂಧಿಸಿದ ಕಥೆಗಳನ್ನು ಬರೆಯುತ್ತಿರುವಾಗ, ನಮಗೆ ಬೇಕಾದ ಒಂದಿಬ್ಬರು ಅನಿವಾಸಿ ಕನ್ನಡಿಗ ಸ್ಪರ್ಧಿಗಳನ್ನು ಕುರಿತು ಬರೆಯದೇ ಹೋದರೆ
ವಾರ ಮುಕ್ತಾಯಗೊಂಡ ಅಸೆಂಬ್ಲಿ ಚುನಾವಣೆಗೆ ಸಂಬಂಧಿಸಿದ ಚರ್ಚೆಗಳು ಅಸಂಪೂರ್ಣವಾಗುತ್ತವೆ.  ವಿಶ್ವದಾದ್ಯಂತ ಕನ್ನಡಿಗರು ನಿರೀಕ್ಷಿಸಿದ್ದ ಈ ಚುನಾವಣೆಯ ಫಲಿತಾಂಶದಲ್ಲಿ ವೈಯಕ್ತಿಕವಾಗಿ ನನಗೆ ಪರಿಚಯಯಸ್ತರಾದ ರವಿ ರೆಡ್ಡಿ ಮತ್ತು ಶಾಂತಲಾ ದಾಮ್ಲೆ ಇವರಿಬ್ಬರ ಬೆಳವಣಿಗೆಗಳನ್ನು ನೋಡಿ ನಿಜಕ್ಕೂ ವಿಸ್ಮಯವಾಯಿತು. ಮುಖ್ಯವಾಗಿ, ನಾವೆಲ್ಲರೂ ಹೆಮ್ಮೆ ಪಡಬೇಕಾದ ಕೆಲಸವನ್ನೇ ಇವರಿಬ್ಬರೂ ಮಾಡಿದ್ದಾರೆ. ಸೋಲು ಗೆಲುವಿನ ಸೋಪಾನ, ನನ್ನ ದೃಷ್ಟಿಯಲ್ಲಿ ಇವರಿಬ್ಬರೂ ಸೋತು ಗೆದ್ದವರು.

***

ನಾವು ನಂಬಿಕೊಂಡ ಪ್ರಕಾರ ಬೆಂಕಿಯನ್ನು ನಂದಿಸೋದಕ್ಕೆ ನೀರನ್ನು ಸಹಜವಾಗಿ ಬಳಸುವುದಿದೆ. ಕೆಲವೊಂದು ಪ್ರಕರಣಗಳಲ್ಲಿ ಬೆಂಕಿಯನ್ನು ನಂದಿಸಲು ಬೆಂಕಿಯನ್ನೇ ಬಳಸಬೇಕಾಗುತ್ತದೆ. ಕಾಡ್ಗಿಚ್ಚಿನ ಪ್ರಕರಣಗಳಲ್ಲಿ ಬೆಂಕಿಯನ್ನು ನಂದಿಸೋದಕ್ಕೆ ಹಾಗೂ ಬೆಂಕಿ ಹರಡದಿರದಂತೆ ಅನೇಕ ತಂತ್ರಗಳನ್ನು ಬಳಸಲಾಗುತ್ತದೆ. ನಿಸರ್ಗದತ್ತವಾದ ನೀರನ್ನು ಹೆಲಿಕಾಪ್ಟರುಗಳಲ್ಲಿ ಸಿಂಪಡಿಸುವುದನ್ನು ನಾವು ನೋಡಿದ್ದೇವೆ ಹಾಗೇ ಕೆಲವು ಕಡೆ ರಸಾಯನಿಕಗಳನ್ನು ಬಳಸುವುದನ್ನೂ ಸಹ. ಭಾರತದಾದ್ಯಂತ ಹಬ್ಬಿಕೊಂಡಿರುವ ಚುನಾವಣಾ ಸಂಬಂಧಿ ಕೊಡು-ಕೊಳ್ಳುವ ವ್ಯವಸ್ಥೆ ನಮಗೆಲ್ಲ ಪಾರಂಪರಿಕವಾದುದು. ಸ್ವಾತಂತ್ರ್ಯ ಸಿಕ್ಕ ಮೊದಲ ಕೆಲವು ಚುನಾವಣೆಗಳು ಹೇಗಿದ್ದವೋ ಆದರೆ ನಾನು ಗಮನಿಸಿದಂತೆ ಕಳೆದ ಮೂರು ನಾಲ್ಕು ದಶಕಗಳ ಚುನಾವಣೆಯ ವ್ಯವಸ್ಥೆಯಲ್ಲಿ ಸಹಸ್ರಾರು ಕೋಟಿ ರೂಪಾಯಿಗಳು ಒಬ್ಬರಿಂದ ಮತ್ತೊಬ್ಬರಿಗೆ ಹಂಚಿ ಹೋಗುವುದನ್ನು ನೋಡಿದ್ದೇವೆ. ಹಣ ಹಂಚುವುದರ ಜೊತೆಗೆ ಸರಾಯಿ, ಸೀರೆ, ಸಣ್ಣ ಪುಟ್ಟ ಆಭರಣಗಳು ಮೊದಲಾದವುಗಳ ಬಗ್ಗೆಯೂ ನಮಗೆ ಗೊತ್ತು.  ಚುನಾವಣಾ ಸಮಯದಲ್ಲಿ ಹೊರಬರುವ ಹಾಗೂ ಹಂಚಲ್ಪಡುವ ಹಣ ನನ್ನ ದೃಷ್ಟಿಯಲ್ಲಿ ಕಾಡ್ಗಿಚ್ಚಿನ ಬೆಂಕಿಯಿದ್ದಂತೆ, ಅದನ್ನು ಎದುರಿಸುವುದು ಹಾಗೂ ಸಂಬಾಳಿಸುವುದು ಬಹಳ ಕಷ್ಟದ ಕೆಲಸ.

ಮೇಲ್ನೋಟಕ್ಕೆ ಚುನಾವಣ ತಂತ್ರ ಬಹಳ ಸುಲಭವಾದಂತೆ ಕಾಣುತ್ತದೆ. ಆದರೆ, ಅದರ ಒಳ ಹೂಟಿ ಕೆಲವರಿಗೆ ಮಾತ್ರ ಗೊತ್ತು. ಇಲ್ಲಿನ ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್‌ಗೆ ವಿಸಿಟ್ ಮಾಡಲು ಬಂದ ಡಾ. ಸುದರ್ಶನ್ ಒಮ್ಮೆ ಹೇಳಿದ್ದರು. ಸುದರ್ಶನ್ ಲೋಕಾಯುಕ್ತ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಲೋಕಾಯುಕ್ತರ ಬಲೆಗೆ ಸಿಕ್ಕ ಒಬ್ಬ ಎಮ್.ಎಲ್.ಎ. ಅನ್ನು ಅವರು ಸಂದರ್ಶನ ಮಾಡಿದ್ದರಂತೆ. ಆ ಶಾಸಕರ ಪ್ರಕಾರ, ಪ್ರತಿಯೊಬ್ಬ ಅಭ್ಯರ್ಥಿಯೂ ಲಕ್ಷಾಂತರ ರೂಪಾಯಿಗಳನ್ನು ಸುರಿದು ಗೆಲ್ಲುತ್ತಾನೆ, ಗೆದ್ದನಂತರ ಸಾರ್ವಜನಿಕ ಕೆಲಸದ ನೆಪದಲ್ಲಿ ಅದರ ಹತ್ತು ಅಥವಾ ನೂರರಷ್ಟು ಗಳಿಸುತ್ತಾನೆ. ಅದರಲ್ಲೇನು ತಪ್ಪು? ಎಂಬುದು ಆ ಶಾಸಕರ ಅಂಬೋಣ.

ನಮ್ಮ ರಾಜಕಾರಣಿಗಳು ಗೆದ್ದು-ಗಳಿಸಿ-ಬದುಕುವ ಬಗೆ ನಾನಿಲ್ಲಿ ಬರೆದಂತೇನೂ ಸುಲಭವಲ್ಲ. ಅವರಲ್ಲೂ ಪುಡಾರಿಯಿಂದ ಹಿಡಿದು ಮಂತ್ರಿಗಿರಿಯವರೆಗೆ ಬೆಳವಣಿಗೆಯಿದೆ, ಜಾತಿ ಆಧಾರಿತ ವ್ಯವಸ್ಥೆಯಲ್ಲಿ ಯಾವುದೇ ನಿರಂತರ ಗಳಿಕೆ, ಮೌಲ್ಯವಿಲ್ಲದೆ ದಶಕಗಳ ಕಾಲ ಕಾಯುವುದಿದೆ. ಪಕ್ಷಗಳ ಹೆಸರಿನಲ್ಲಿ ಅವರಿವರ ಬೂಟು ನೆಕ್ಕುವುದಿದೆ. ಪುಡಾರಿ-ಪುಂಡಾಟಿಕೆಯಿಂದ ಆಗಾಗ್ಗೆ ಪೋಲೀಸರ ಬೂಟಿನ ಒದೆ ತಿನ್ನುವುದಿದೆ. ಪ್ರಬಲ ರಾಜಕಾರಣ, ಪಕ್ಷದ ಪ್ರಣಾಳಿಕೆಗಳು, ಸ್ಥಳೀಯ ರಾಜಕಾರಣಿಗಳ ಒಡನಾಟ, ಜಾತಿ-ಬಾಂಧವರ ಬೆಂಬಲ, ತಮ್ಮ-ತಮ್ಮ ಬಡಾವಣೆ-ಕಾನ್ಸ್ಟಿಟ್ಯುಯೆನ್ಸಿಯ ನಿರಂತರ ಸಮಸ್ಯೆಗಳು - ಇವೆಲ್ಲ ಸುಮಾರು ದಶಕಗಳ ಕಾಲ ಸತಾಯಿಸುತ್ತಲೇ ಇರುತ್ತವೆ.

ರಾಜಕಾರಣಿಗಳು ಯಾವುದೇ ಉದ್ಯಮವನ್ನು ಬೆಳೆಸದೇ ಇರುವ ಉದ್ಯಮಿಗಳು, ಪೇ ಚೆಕ್ಕು ಬಾರದಿರುವ ಎಂಪ್ಲಾಯಿಗಳು, ಅವರವರ ಪಕ್ಷದ ನಾಗರೀಕರು. ರಾಜಕಾರಣಿ ಎನ್ನುವ ಪದಕ್ಕೆ ಮುಂದಾಳು, ದುರೀಣ, ನಾಯಕ, ಪುಡಾರಿ ಎಂಬ ಪರ್ಯಾಯ ಪದಗಳಿವೆ. ಸೂಕ್ಷ್ಮವಾಗಿ ಗಮನಿಸಿದರೆ ಕಮ್ಯೂನಿಕೇಷನ್ನ್, ಲೀಡರ್‌ಶಿಪ್ ಹಾಗೂ ನಿಲುವು ಇವರ ಬಂಡವಾಳ. ಇವರು ಮೌಲ್ಯಾಧಾರಿತ ರಾಜಕಾರಣಿಗಳು, ಹಾಗೂ ಇವರಿಗೆಲ್ಲ ಪ್ರಣಾಳಿಕೆಗಳಿವೆ. ರಾಜಕಾರಣಿಗಳು ಆಶ್ವಾಸನೆ ಕೊಡುತ್ತಾರೆ, ಆದರೆ ಕಾರ್ಯರೂಪಕ್ಕೆ ಬಂದು ಜನರ ಮನದಲ್ಲಿ ನಿಲ್ಲುವುದು ಕೆಲವು ಮಾತ್ರ.

***


ಶಾಂತಾಲಾ ಮತ್ತು ರವಿ ಇವರಿಬ್ಬರೂ ಸಹ, ಅನೇಕ ವರ್ಷಗಳಿಂದ ಭಾರತದ ರಾಜಕಾರಣವನ್ನು ಬಲ್ಲವರಾಗಿ ತಮ್ಮ ಪೋಸ್ಟ್-ಅಮೇರಿಕನ್ ಬದುಕಿನಲ್ಲಿ ಪ್ರಂಟ್‌ಲೈನ್‌ನಲ್ಲಿ ನಿಂತು ರಾಜಕೀಯವನ್ನು ಗಮನಿಸಿದವರು. ಕೆಲವು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಈ ವಾರ ಮುಗಿದ ಚುನಾವಣೆಯಲ್ಲಿ ಇವರಿಬ್ಬರೂ ಸಹ ನಾಲ್ಕನೇ ಸ್ಥಾನದಲ್ಲಿ ಬಂದಿರುವುದು ಬಹಳ ದೊಡ್ಡ ವಿಷಯ. ಮುಖ್ಯವಾಗಿ ಒಟ್ಟು ಚಲಾವಣೆಯಾದ ಗುಣಮಟ್ಟದ ಮತಗಳಲ್ಲಿ ಶಾಂತಲ 8.75% ಹಾಗೂ ರವಿ 5.97% ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯವೇ ಹೌದು. ಇವರಿಬ್ಬರು ಭಾಗವಹಿಸಿದ ಬಸವನಗುಡಿ ಹಾಗೂ ಬಿಟಿಎಮ್ ಲೇ ಔಟುಗಳಲ್ಲಿ ಕ್ರಮವಾಗಿ ಲೋಕಸತ್ತಾ ಪಕ್ಷವನ್ನು ಬುಡದಿಂದ ಎತ್ತಿ ನಾಲ್ಕನೇ ಸ್ಥಾನಕ್ಕೆ ತಂದಿರುವುದು ಗಮನಾರ್ಹವಾದುದು.

ಕಾಂಗ್ರೆಸ್, ಜನತಾದಳ, ಬಿಜೆಪಿಯವರು ಮಾಡಿದ್ದು ಮಾಡುತ್ತಿರುವುದು ಕ್ಲಾಸ್ಸಿಕ್ ರಾಜಕಾರಣ. ನಮಗೆ ಗೊತ್ತಿರುವ ಹಾಗೆ ಶಾಂತಲಾ ಹಾಗೂ ರವಿ ಮಾಡಿದ್ದು ಮೌಲ್ಯಾಧಾರಿತ ರಾಜಕಾರಣ. ತಾವು ಓಟು ಕೇಳುವ ಪ್ರಕ್ರಿಯೆಗಳಲ್ಲಿ ಹಣ-ಹೆಂಡವನ್ನು ಹಂಚದೆ ಬದಲಿಗೆ ಜನರಿಂದಲೇ ಹಣವನ್ನು ಸಂಗ್ರಹಿಸಿ ಜನರ ಹಕ್ಕು ಬಾಧ್ಯತೆಗಳನ್ನು ಗೊತ್ತು ಪಡಿಸಿ ತಮ್ಮ ಸುತ್ತಲಿನ ದಿಗ್ಗಜ-ಧುರೀಣರ ನಡುವೆ ನೊಂದು ಬೆಂದು ಅವರಿಂದಲೇ ಏಳರಿಂದ ಹತ್ತು ಸಾವಿರ ಮತಗಳನ್ನು ಪಡೆಯುವುದಿದೆಯಲ್ಲಾ, ಅದು ನಿಜಕ್ಕೂ ದೊಡ್ಡ ಕೆಲಸವೇ.

ಶಾಂತಾಲಾ ಮತ್ತು ರವಿ ತಮ್ಮ ಸುತ್ತಲಿನ ಬೆಂಕಿಯನ್ನು ಆರಿಸಲು ಆಯ್ದುಕೊಂಡ ಮಾಧ್ಯಮ ನೀರು. ತಮ್ಮ ಸುತ್ತಲೂ ಕಾಡ್ಗಿಚ್ಚಿನೋಪಾದಿಯಲ್ಲಿ ಪ್ರಂಚಡ ಕಾಂಗ್ರೆಸ್, ದಳ ಹಾಗೂ ಬಿಜೆಪಿ, ಕೆಜಿಪಿಯವರು ತಮ್ಮ ಎಂದಿನ ತಂತ್ರವನ್ನು ಬಳಸಿ ಕಂಡ ಕಂಡಲ್ಲಿ "ಬೆಂಕಿ" ಇಟ್ಟು ಚಿಂದಿ ಮಾಡುತ್ತಿರುವಾಗ ಇವರಿಬ್ಬರು ತಾವು ಅಲ್ಲಿಯೇ ಗಳಿಸಿ ಉಳಿಸಿದ ನೀರಿನ ಟ್ಯಾಂಕುಗಳಲ್ಲಿ ಬೆಂಕಿಯನ್ನು ಆರಿಸಲು ಪ್ರಯತ್ನಿಸಿದವರು.  ಕೆಲವೇ  ವರ್ಷಗಳ ಹಿಂದೆ ರಾಜಕೀಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡ  ಇವರು, ಇಂದು ಮುಖ್ಯವಾಹಿನಿ ರಾಜಕೀಯದಲ್ಲಿ ಮುಕ್ತವಾಗಿ ಸ್ಪರ್ಧಿಸಿ, ಯಾವುದೇ ಕುತಂತ್ರಗಳಿಲ್ಲದೆ, ಆಮಿಷಗಳನ್ನೊಡ್ಡದೇ, ಸ್ವಚ್ಛ ರಾಜಕಾರಣದ ಹೆಸರಿನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿರುವುದು ಇವರು ಕಂಡ ಸೋಲಲ್ಲ, ಬದಲಿಗೆ ಇದು ಇವರಿಬ್ಬರ ಗೆಲುವೆಂಬುದೇ ನನ್ನ ಅಭಿಪ್ರಾಯ.

ಇವರಿಬ್ಬರಿಗೆ ಬೇಕಾಗಿರುವುದು ಸ್ವಲ್ಪ ಕಾಲ ಮಾತ್ರ. ಈ ಎರಡೂ ಕಾನ್ಸ್ಟಿಟ್ಯುಯೆನ್ಸಿಗಳಲ್ಲಿ ಇನ್ನು ಐದು ವರ್ಷಗಳ ಕಾಲ ಜನಾಂದೋಳನ ಕಾರ್ಯಕ್ರಮಗಳನ್ನು ಮುಂದೆ ನಿಂತು ನಡೆಸಿದಲ್ಲಿ, ಸ್ಥಳೀಯ ಕರೆಗಳಿಗೆ ಓಗೊಟ್ಟು ಬೆಂಬಲ ನೀಡಿದಲ್ಲಿ, ತಮ್ಮ ಸುತ್ತಲಿನ ಜನರ ನಿರಂತರ ಸಂಪರ್ಕದಲ್ಲಿದ್ದು ಸದರಿ ಬೆಂಬಲವನ್ನು ಬೆಳೆಸಿಕೊಂಡಲ್ಲಿ - ಮುಂದಿನ ಚುನಾವಣೆಯಲ್ಲಿ ಇವರಿಬ್ಬರಿಗೂ ಜಯ ಖಂಡಿತ. ಅಲ್ಲದೇ, ಸ್ವದೇಶೀ ಹಾಗೂ ವಿದೇಶಿ ಅನುಭವ ಮತ್ತು ವಿದ್ಯಾಭ್ಯಾಸವನ್ನು ಗಳಿಸಿ ಜನ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟಿರುವ ಇವರಿಬ್ಬರ ಸೇವೆಯನ್ನು ಕಳೆದುಕೊಂಡ ಬಸವನಗುಡಿ, ಬಿಟಿಎಮ್ ಲೇ ಔಟ್ ಜನರು ಇನ್ನು ಮುಂದಾದರೂ ಎಚ್ಚರಗೊಳ್ಳಲಿ.

Thursday, February 10, 2011

ಎಂ.ಪಿ. ಪ್ರಕಾಶ್... ಶ್ರದ್ಧಾಂಜಲಿ




ನಿನ್ನೆ (ಬುಧವಾರ, ಪೆಬ್ರುವರಿ ೯) ನಿಧನರಾದ ಬಹುಮುಖ ಪ್ರತಿಭೆಯ ರಾಜಕಾರಣಿ ಪ್ರಕಾಶ್ ಅವರನ್ನು ಕಳೆದುಕೊಂಡು ನಾವು ಬಡವರಾಗಿದ್ದೇವೆ. ನಾವು ಶಾಲಾ ಮಕ್ಕಳಾಗಿದ್ದಾಗ ಸಾಮಾಜಿಕ ಚಳುವಳಿಗಳ ಹೆಸರಿನೊಂದಿಗೆ ಪ್ರಕಾಶ್ ಹೆಸರನ್ನು ಕೇಳುತ್ತಿದ್ದ ನಮಗೆ ಅವರು ಒಬ್ಬ ಹೋರಾಟಗಾರ, ರಾಜಕಾರಣಿ ಹಾಗೂ ಒಬ್ಬ ಬರಹಗಾರರಾಗಿಯೂ ಗೊತ್ತು. ಮಾರ್ಕ್ಸ್, ಲೋಹಿಯಾ, ಜೆಪಿ ಮೊದಲಾದ ಸಾಮಾಜಿಕ ಧ್ವನಿಗಳಿಗೆ ತಮ್ಮನ್ನು ತೆರೆದುಕೊಂಡಿದ್ದ ಪ್ರಕಾಶ್, ರಾಮಕೃಷ್ಣ ಹೆಗಡೆ, ಜೀವರಾಜ್ ಆಳ್ವ, ಆರ್.ವಿ. ದೇಶಪಾಂಡೆ, ಪಿ.ಜಿ.ಆರ್. ಸಿಂಧಿಯಾ, ಎಸ್. ಬಂಗಾರಪ್ಪ ಮೊದಲಾದವರೊಂದಿಗೆ ಕರ್ನಾಟಕದ ರಾಜಕಾರಣಿಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಂತವರಾಗಿದ್ದರು.

ಶಾಲಾ ದಿನಗಳಲ್ಲಿ ಅವರ ನಾಟಕಗಳನ್ನು ಓದಿ ನನಗೆ ಒಬ್ಬ ಬರಹಗಾರರಾಗಿಯೂ ಪರಿಚಯವಿದ್ದ ಪ್ರಕಾಶ್ ಅವರು, ೨೦೦೬ ರಲ್ಲಿ ಬಾಲ್ಟಿಮೋರ್ ನಲ್ಲಿ ನಡೆದ ನಾಲ್ಕನೇ "ಅಕ್ಕ" ವಿಶ್ವ ಕನ್ನಡ ಸಮ್ಮೇಳನಕ್ಕೆ ಬಂದ ಅತಿಥಿಗಳಲ್ಲೊಬ್ಬರಾಗಿದ್ದಾಗ ಮಾತನಾಡಲು ಸಿಕ್ಕಿದ್ದರು. ಸಮ್ಮೇಳನದ ಸಮಯದಲ್ಲಿ ಬಹಳ ಚಿಂತನಶೀಲ ರಾಜಕಾರಣಿಯಾಗಿ ಅನೇಕ ಚಟುವಟಿಕೆಗಳಲ್ಲಿ ತೊಡಗಿದ್ದ ಪ್ರಕಾಶ್ ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನನ್ನ "ಕೋಮಲ ಗಾಂಧಾರ"ವನ್ನು ಅವರ ಅಮೃತಹಸ್ತದಿಂದ ಬಿಡುಗಡೆಗೊಳಿಸಿದ್ದು ನನ್ನ ಪುಣ್ಯ. ಒಬ್ಬ ನಾಟಕಕಾರರಾಗಿ ದೂರದ ಅಮೇರಿಕದಲ್ಲಿ ಈ ಕನ್ನಡ ನಾಟಕ ಪುಸ್ತಕವನ್ನು ಬಿಡುಗಡೆ ಮಾಡುವಂತಾಗಿದ್ದು ಕಾಕತಾಳೀಯವಾಗಿದ್ದರೂ ಅದು ನನ್ನ ಅದೃಷ್ಟಗಳಲ್ಲೊಂದು.

ಆಗಿನ ಕಾಲದಲ್ಲೇ ಬಾಂಬೆಯಿಂದ ಲಾ ಡಿಗ್ರಿ ಪಡೆದು ಮೈನ್‌ಸ್ಟ್ರೀಮ್ ರಾಜಕಾರಣಕ್ಕೆ ತಮ್ಮನ್ನು ತೊಡಗಿಸಿಕೊಂಡ ಎಂ.ಪಿ. ಪ್ರಕಾಶ್ ಒಬ್ಬ ಉತ್ತಮ ವಾಗ್ಮಿ, ಚಿಂತನಶೀಲ ಬರಹಗಾರ ಹಾಗೂ ಸಂವೇದನಾಶೀಲ ವ್ಯಕ್ತಿ. ಮೊದಲಿನಿಂದಲೂ ತಮ್ಮನ್ನು ತಾವು ಜನತಾಪಕ್ಷ (ಅಥವಾ ಕಾಂಗ್ರೆಸ್ಸಿಗೆ ವಿರುದ್ಧವಾದ ಬಣಗಳಲ್ಲಿ) ಅಥವಾ ಇತರ ಜನತಾ ಚಳುವಳಿಗಳಲ್ಲಿ ತೊಡಗಿಸಿಕೊಂಡ ಕಾರಣವೋ ಏನೋ ಕರ್ನಾಟಕದ ಜನತೆ ಅವರ ಸೇವೆಯನ್ನು ಇನ್ನಷ್ಟು ಪಡೆಯಲಾಗದಿದ್ದುದು. ಪ್ರಕಾಶ್ ಅಂತಹ ರಾಜಕಾರಣಿಗಳು ವಿರಳ, ಅವರ ಕಾಲಾನಂತರವೂ ಸದಾ ಜೀವಂತವಿರುವ ಅವರ ಸಾಮಾಜಿಕ ಅಭ್ಯುದಯದ ಕಳಕಳಿಗಳು ನಾಡನ್ನು ಎಂದಿಗೂ ಪ್ರಗತಿಪಥದತ್ತಲೇ ಕೊಂಡೊಯ್ಯುತ್ತವೆ ಎಂಬುದು ನಿಜ.

Monday, November 09, 2009

ನಮ್ಮ ನೆಲೆಗಟ್ಟು ಹಾಗೂ ಆಯಾಮಗಳು

ಅಬ್ಬಾ, ಕೊನೆಗೂ ಈ ರಾಜ್ಯ ರಾಜಕಾರಣದ ಬಿಕ್ಕಟ್ಟಿನ ಸುದ್ದಿಗಳು ವೃತ್ತಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಸೆಕೆಂಡರಿಯಾಗತೊಡಗಿದವು!  ಇತ್ತೀಚೆಗೆ ಕೆಲವು ವಾರಗಳಿಂದ ಅವರಿವರು ಹಿಡಿದ ಬಿಗಿಪಟ್ಟಿಗೆ ಕೊನೆಗೂ ತೆರೆ ಬಿತ್ತು.  ಮತ್ತೆ ಮಳೆ ಅಲ್ಲಲ್ಲಿ ಹೆಚ್ಚು ಅಬ್ಬರ ತೋರಿದಂತೆ ನಮ್ಮ ಧುರೀಣರಿಗೆ ಇತ್ತೀಚಿನ ಪ್ರವಾಹದ ಪ್ರಕೋಪ ನೆನಪಿಗೆ ಬಂದು ತಮ್ಮ ತಾಲ್ಲೂಕು, ಜಿಲ್ಲೆಗಳ ಜನರಿಗೆ ಸಂತೈಸಲು ಈಗ ಸಮಯ ಸಿಕ್ಕಿರಬಹುದು ಎಂದು ನನ್ನಂತಹವರಿಗೆ ಒಂದು ರೀತಿಯ ಸಮಾಧಾನ.  ಅದೂ ಕರ್ನಾಟಕ ರಾಜ್ಯೋತ್ಸವ ಮಾಹೆಯಲ್ಲಿ ನಮ್ಮ ಸರ್ಕಾರ ಕುಸಿದು ನಮ್ಮ ವ್ಯವಸ್ಥೆ ನಗೆಪಾಟಲಿಗೆ ಗುರಿಯಾಗುವುದೆಂದರೆ?

 

ದೂರದ ಅಮೇರಿಕದಲ್ಲಿ ಕುಳಿತು ಮಾಧ್ಯಮಗಳನ್ನು ಹೇಳಿದ್ದನ್ನು ನೋಡಿ ನಂಬುವ ನಮ್ಮಂತಹವರಿಗೆ ವಸ್ತು-ವಿಷಯದ ಪೂರ್ಣ ಪರಿಚಯವಾಗುವುದೇ ಇಲ್ಲ.  ಅಧಿಕಾರಿಗಳ ನಡುವೆ ನಡೆಯುವ ಮಾತುಕಥೆ, ಅವರ ತಂತ್ರಗಳ ಸುತ್ತಲೂ ಹೆಣೆದುಕೊಳ್ಳುವ ಅಸಮಧಾನ ಇವು ಹೊಸತಲ್ಲ ಹಾಗೂ ಶಾಸಕಾಂಗದ ಪ್ರಭಾವ ಕಾರ್ಯಾಂಗದ ಮೇಲೆ ಯಾವಾಗಲೂ ಇರುವಂತೆ ರಾಜಕಾರಣಿಗಳು ಹೋಗಿ-ಬರುತ್ತಿದ್ದರೂ ಅಧಿಕಾರಿಗಳು ತಮ್ಮ ವರ್ತುಲಗಳಲ್ಲಿ ಮುಂದುವರೆಯುತ್ತಲೇ ಇರುತ್ತಾರೆ.  ಹೀಗಿದ್ದ ಅಧಿಕಾರಿಗಳ ವಲಯದಲ್ಲಿ ದಿಢೀರ್ ’ಕಾರ್ಯಾಚರಣೆ’ ನಡೆದು ಅವರಿವರನ್ನು ಜನ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡು ಅಲ್ಲಿಲ್ಲಿ ವರ್ಗಾವಣೆ ಮಾಡಲಾಗಿದೆ ಎನ್ನುವುದೊಂದು ಆರೋಪ.  ಅದಕ್ಕೆ ಪ್ರತಿಯಾಗಿ ಭಿನ್ನಮತ.  ಇವುಗಳಿಗೆಲ್ಲ ದೆಹಲಿಯ ವರಿಷ್ಠರ ಸೂತ್ರದಾರಿಕೆ ಹಾಗೂ ಮಾತುಕಥೆ.  ಇವುಗಳನ್ನೆಲ್ಲ ಹತ್ತಿರದಿಂದ ವೀಕ್ಷಿಸಿಕೊಂಡು ಸಿಕ್ಕಿದ್ದರಲ್ಲಿ ಅವಕಾಶ ಸಾಧನೆ ಮಾಡಿಕೊಳ್ಳುವುದು ಮತ್ತೊಂದು ಬಣ.

 

ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಕಡೆಗಣಿಸಿ ಶಾಸಕರನ್ನು ಹೈದರಾಬಾದಿನಲ್ಲಿ ನಿಯೋಜಿಸಿ ’ಮಾರಾಟ’ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಹೆಸರಿನಲ್ಲಿ ಕೋಟ್ಯಾಂಟರ ರೂಪಾಯಿಗಳಿಗೆ ಒಬ್ಬೊಬ್ಬ ಶಾಸಕರನ್ನು ಮಾರಿಕೊಳ್ಳುವ ಧರಣಿಯನ್ನು ಹಮ್ಮಿಕೊಂಡಿದ್ದರು.  ಅದು ಜನ ಸಾಮಾನ್ಯರ ಪ್ರತಿಭಟನೆಯೋ, ರಾಜಕೀಯ ಪ್ರೇರಿತವೋ ಎಂಬುದು ಸರಿಯಾಗಿ ತಿಳಿದು ಬಂದಿಲ್ಲವಾದರೂ ಶಾಸಕರ “ಕುದುರೆ ವ್ಯಾಪಾರ” ಇವತ್ತು ನಿನ್ನೆಯದಲ್ಲ ಬಿಡಿ.

 

ನಮ್ಮವರನ್ನು ಪ್ರೇರಿಪಿಸುವುದು ಇಷ್ಟೇ: ಹಣ, ಜಾತಿ ಹಾಗೂ ಬಣ.  ಇವು ಎಲ್ಲಿ ಹೋದರೂ ಸತ್ಯವಲ್ಲವೇ? ಎಂದು ಯಾರಾದರೂ ಪ್ರಶ್ನಿಸಬಹುದು, ಆದರೆ ನಮ್ಮ ಕರ್ನಾಟಕದಲ್ಲಿ ಒಂದು ವಿಶೇಷತೆ ಇದೆ – ಅವೇ ಬ್ರಾಹ್ಮಣ, ಗೌಡ, ಲಿಂಗಾಯಿತ, ಕುರುಬ ಮೊದಲಾದ ಜಾತಿಗಳು, ಅವರಲ್ಲೇ ಗಣಿ ಒಡೆತನದವರು, ಪಕ್ಷ ಕಟ್ಟಿದವರು, ಬೇರೆ ಪಕ್ಷದಿಂದ ಹಾರಿ ಸಧ್ಯಕ್ಕೆ ತಾತ್ಕಾಲಿಕ ನೆಲೆಯನ್ನು ಕಂಡುಕೊಂಡವರು, ಒಂದೂವರೆ ವರ್ಷದ ಹಿಂದೆ ಸ್ವತಂತ್ರ ಅಭರ್ಥಿಗಳಾಗಿ ಗೆದ್ದು ಇಂದು ಮತ್ತೊಂದು ಪಕ್ಷ ಸೇರಿಕೊಂಡವರು – ಮೊದಲಾದವರೆಲ್ಲ ನಮ್ಮ ರಾಜ್ಯ ರಾಜಕಾರಣವನ್ನು ವಿಶೇಷಗೊಳಿಸುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು.

 

“ನಾನು ಸತ್ತರೂ ಪರವಾಗಿಲ್ಲ, ಅವನ ಮನೆಯಲ್ಲಿ ಅಥವಾ ಅವನಿಂದ ಒಂದು ಹನಿ ನೀರೂ ನನಗೆ ಬೇಡ!” ಎನ್ನುವುದು ನಮ್ಮ ಧ್ಯೇಯವಾಕ್ಯ.  ಇದೊಂದು ವಾಕ್ಯವೇ ಸಾಕು ಪ್ರಪಂಚದ ಪ್ರಯೋಗಶೀಲತೆಯನ್ನೆಲ್ಲ ಬದಿಗೊತ್ತಲು, ಇದೊಂದೇ ವಾಕ್ಯ ಸಾಕು ನಮ್ಮ ಹಿತ್ತಲಿನ ಆಲದ ಮರವೋ ಹುಣಿಸೇ ಮರವೋ ನಮಗೆ ದೊಡ್ಡದಾಗಿ ಕಾಣಲು.  ಈ ಮನೋಭಾವನೆ ಇರುವವರೆಗೆ ನಮ್ಮಲ್ಲಿನ ರಾಜಕಾರಣ ವಿಶ್ವ ರಾಜಕೀಯದ ಮಾದರಿಯ ಪ್ರಜಾಪ್ರಭುತ್ವವನ್ನು ಅನುಸರಿಸಿಯೂ ಭಿನ್ನವಾಗಿರುತ್ತದೆ, ಹೀಗೆ ಭಿನ್ನವಾಗಿರುವ ನೆಲೆಗಟ್ಟಿಗೆ ಹಣ, ಜಾತಿ ಹಾಗೂ ಬಣಗಳೆಂಬುವವು ಹೊಸ ಹೊಸ ಆಯಾಮಗಳನ್ನು ಕೊಡುತ್ತಲೇ ಹೋಗುತ್ತವೆ.

Friday, October 26, 2007

ಸಾರೆಕೊಪ್ಪ ಬಂಗಾರಪ್ಪನವರಿಗೆ ಎಪ್ಪತ್ತೈದರ ಸಂಭ್ರಮ

ಹ್ಞೂ, ಬಹಳ ಸ್ವಾರಸ್ಯಕರವಾಗಿದೆ, ಇವತ್ತು ಬಂಗಾರಪ್ಪನವರ ಬಗ್ಗೆ ’ಅಂತರಂಗ’ದಲ್ಲಿ ಏನೇನು ಬರೆದಿದ್ದೇನೆ ಅಂತ ಹುಡುಕಿದರೆ ಒಂದೇ ಒಂದು ಲೇಖನ ಸಿಗಲಿಲ್ಲ! ನಮ್ಮೂರು ಆನವಟ್ಟಿಯ ವಾತಾವರಣದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಬಂಗಾರಪ್ಪನವರ ಪ್ರಭಾವದ ಬಗ್ಗೆ ಬರೆಯದೇ ಹೋದರೆ ಹೇಗೆ ಎಂದು ಒಮ್ಮೆಯೇ ನನಗನ್ನಿಸಿದ್ದು ಇವತ್ತು ಪ್ರಜಾವಾಣಿಯಲ್ಲಿ ಅವರ ೭೫ ನೇ ಹುಟ್ಟು ಹಬ್ಬದ ಸಂದರ್ಶನವನ್ನು ಓದಿದ ಮೇಲೆ. ಆದರೂ ಈ ಮನುಷ್ಯ ಬಹಳ ಗಟ್ಟಿಗ, ಇವತ್ತಿಗೂ ಶಟಲ್ ಬ್ಯಾಡ್‌ಮಿಂಟನ್ ಆಡೋದಿರಲಿ, ಹಿಂದೂಸ್ತಾನಿಯನ್ನು ಹಾಡೋದಿರಲಿ ನಿಲ್ಲಿಸಿದಂತೆ ಕಾಣೋದಿಲ್ಲ.

ಎಂಭತ್ತರ ದಶಕದಲ್ಲಿ ಬಂಗಾರಪ್ಪ ರಾಜ್ಯ ಮಂತ್ರಿಗಳಾಗಿದ್ದಾಗ ಯಾವತ್ತಾದರೊಂದು ದಿನ ಆನವಟ್ಟಿಯ ಬಳಿಯ ಲಕ್ಕವಳ್ಳಿಗೆ ಬಂದರೆ ಅಲ್ಲಿ ಸ್ಥಳೀಯ ಯುವಕರೊಡನೆ ಶಟಲ್ ಬ್ಯಾಡ್‌ಮಿಂಟನ್ ಆಡುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ, ಆ ಆಟಗಳಿಗೆ ನಮ್ಮಣ್ಣನೂ ಹೋಗುತ್ತಿದ್ದ. ಯಾರೂ ಎಷ್ಟೇ ದಣಿದರೂ ಬಂಗಾರಪ್ಪನವರಿಗೆ ಸುಸ್ತೆಂಬುದೇ ಇಲ್ಲ. ಅದೇ ರೀತಿ ಬಂಗಾರಪ್ಪನವರನ್ನು ಕೇವಲ ರಾಜಕಾರಣಿಯಾಗಿ ಬಲ್ಲವರು ಅವರು ಸಂಗೀತವನ್ನೂ ಕಲಿತಿದ್ದಾರೆ ಎಂದು ಹೇಳಿದರೆ ನಂಬಲಾರರು. ಕೋಳೀಕೆರಂಗ ಹಾಡನ್ನು ಬಂಗಾರಪ್ಪ ತಮ್ಮ ಅಭಿಮಾನಿಗಳ ಎದಿರು ಹೇಳಿ ಬೇಕಾದಷ್ಟು ಚಪ್ಪಾಳೆಯನ್ನು ಗಿಟ್ಟಿಸಿರೋದು ಸೊರಬಾ ತಾಲ್ಲೂಕಿನ ಜನರು ಮರೆಯಲಾರರು. ಡೊಳ್ಳು ಕುಣಿಯುವವರೊಡಗೂಡಿ ತಾವೇ ಡೊಳ್ಳು ಕಟ್ಟಿಕೊಂಡು ಕುಣಿದರೆ ತಮ್ಮ ಸಹಾಯಕ್ಕೆಂದು ಬಂದವರ ಕಷ್ಟವನ್ನು ಕೇಳಿ ಮರುಕಪಟ್ಟಿದ್ದೂ ಇದೆ. ಬಂಗಾರಪ್ಪನವರ ಕ್ರಿಯಾತ್ಮಕ ವೈಯಕ್ತಿಕ ಜೀವನಕ್ಕೂ ರಾಜಕೀಯ ಜೀವನಕ್ಕೂ ಬಹಳಷ್ಟು ಸಾಮ್ಯತೆ ಇದೆ. ಜನತಾಪಕ್ಷ, ಕಾಂಗ್ರೆಸ್ ಮುಂತಾದವುಗಳನ್ನು ಧಿಕ್ಕರಿಸಿ ಹಿಂದೆ ಕ್ರಾಂತಿರಂಗವೆಂಬ ಪಕ್ಷವನ್ನು ಕಟ್ಟಿದ ನೇತಾರ ಇಂದು ಮುಲಾಯಮ್ ಒಡಗೂಡಿ ಉತ್ತರ ಭಾರತದ ಸಮಾಜವಾದದ ಅಲೆಯನ್ನು ದಕ್ಷಿಣಕ್ಕೆ ತರಲು ಪ್ರಯತ್ನಿಸಿದ್ದಾರೆ.

ಬಂಗಾರಪ್ಪನವರಿಗೆ ಎಪ್ಪತ್ತೈದು ವರ್ಷಗಳು ಎಂದರೆ ನಂಬಲು ಕಷ್ಟವಾದೀತು. ಶಾಸಕರಾಗಿ ಸಂಸದರಾಗಿ ಇಂದಿಗೂ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಇವರನ್ನು ಶಿವಮೊಗ್ಗದ ಜನತೆ, ವಿಶೇಷವಾಗಿ ಸಾಗರ, ಸೊರಬದ ಜನತೆ ಖಂಡಿತವಾಗಿ ಸ್ಮರಿಸಿಕೊಳ್ಳುತ್ತದೆ. ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಬಂಗಾರಪ್ಪನವರ ಪ್ರಾಬಲ್ಯ ಬಹಳಷ್ಟಿತ್ತು, ಇತ್ತೀಚೆಗಷ್ಟೇ ಅವರು ಅಲ್ಪಸಂಖ್ಯಾತ ಸಮಾಜವಾದವನ್ನು ಆಲಂಗಿಸಿಕೊಂಡ ಮೇಲೆ ಅವರ ಮಾತಿನ ಹರಿತ ಕಡಿಮೆಯಾದಂತೆ ಕಂಡುಬರುತ್ತದೆ. ಹಿಂದೆ ಬಂಗಾರಪ್ಪ ಮುಖ್ಯಮಂತ್ರಿಯಾದಾಗಈ ಸೊಟ್ಟಮೂತಿಯವನು ಏನು ಮಾಡಿಯಾನು ಎಂದು ಪ್ರಶ್ನೆ ಕೇಳುತ್ತಿದ್ದ ಜನ ಅವರ ಯೋಜನೆಗಳಲ್ಲಿ ಮುಖ್ಯವಾದ ಆಶ್ರಯ, ವಿಶ್ವ ಮುಂತಾದವುಗಳನ್ನು ಇಂದಿಗೂ ಕೊಂಡಾಡುತ್ತಾರೆ. ಬೇಕಾದಷ್ಟು ಆಸ್ತಿ-ಅಂತಸ್ತು ಮಾಡಿಟ್ಟಿದ್ದಾರೆ ರಾಜಕೀಯ ಸೇರಿಕೊಂಡು ಎಂದು ರಾಗ ಹೊರಡಿಸುವವರಿಗೆ ಸೆಡ್ಡು ಹೊಡೆಯುವಂತೆ ಬಂಗಾರಪ್ಪನವರ ಆಸ್ತಿ-ಅಂತಸ್ತು ಬೇಕಾದಷ್ಟಿದೆ. ಮಗ ಕುಮಾರ್ ಸಹ ರಾಜಕೀಯದಲ್ಲಿ ತೊಡಗಿಕೊಂಡು ಮುಂದಿನ ನಾಯಕನಾಗಿ ಕನಸನ್ನು ಕಾಣುವಂತೆ ವೇದಿಕೆಯನ್ನು ಸೃಷ್ಟಿಸಿದ್ದಾರೆ.

ಬಂಗಾರಪ್ಪನವರು ಒಂದು ಕಾಲದಲ್ಲಿ ಲೋಹಿಯಾ, ಜಯಪ್ರಕಾಶ್ ನಾರಾಯಣ್, ಗೋಪಾಲಗೌಡರ ಸಮಾಜವಾದವನ್ನು ಒಪ್ಪಿ ಅದೇ ಹಾದಿಯನ್ನು ತುಳಿದು ರಾಜಕೀಯದಲ್ಲಿ ನಲವತ್ತು ವರ್ಷಗಳನ್ನು ಕಳೆದ ಪ್ರಬುದ್ಧತೆಗೆ ಸಂದ ಗೌರವ, ಕೀರ್ತಿ ಹಾಗೂ ಉತ್ಪತ್ತಿ ಬೇಕಾದಷ್ಟಿದೆ. ಅರವತ್ತು ಎಪ್ಪತ್ತರ ದಶಕಗಳಲ್ಲಿ ಅದೇ ತಾನೇ ರಾಜಕೀಯ ಚಿಗುರೊಡೆಯುತ್ತಿದ್ದ ಕಾಲದಲ್ಲಿ ಸಮಾಜಕ್ಕೆ ನ್ಯಾಯ ಒದಗಿಸುವ, ಬೇಧ-ಭಾವವನ್ನು ಕಡಿಮೆ ಮಾಡುವ ಸಾಮಾಜಿಕ ನೆಲೆಗಟ್ಟನ್ನು ಕನಸಾಗಿ ಕಂಡವರು ಹೆಚ್ಚು ಜನ ಇನ್ನೂ ಉಳಿದಿರಲಾರರು. ಆದರೆ ಆಗ ರಾಜಕೀಯಕ್ಕೆ ಧುಮುಕಿದವರೆಲ್ಲರೂ ಇಂದು ಬೇಕಾದಷ್ಟು ಸಂಪನ್ಮೂಲಗಳನ್ನು ತಮ್ಮದಾಗಿಸಿಕೊಂಡಿದ್ದಾರೆ, ತಲೆ-ತಲೆಮಾರಿಗೆ ಸಾಕಾಗುವಷ್ಟನ್ನು ಮಾಡಿಕೊಂಡಿದ್ದಾರೆ. ಅದು ತಪ್ಪೋ ಸರಿಯೋ ಬಂಗಾರಪ್ಪನವರೂ ಎಲ್ಲರೊಳಗೊಂದಾಗಿ ಹೋದರು. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ನಲವತ್ತು ವರ್ಷಗಳ ಕಾಲ ಒಂದು ತಾಲ್ಲೂಕು, ಜಿಲ್ಲೆಯನ್ನು ಆಳಿಕೊಂಡಿದ್ದ ಯಾವೊಬ್ಬ ರಾಜಕಾರಣಿಯಾಗಲೀ, ಅವರ ತಲೆಮಾರಾಗಲೀ ಅಲ್ಲಿ ಸಾಕಷ್ಟನ್ನು ಮಾಡಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸೊರಬಾ ತಾಲ್ಲೂಕಿಗೆ ಇವತ್ತಿಗೂ ಸಹ ಸರಿಯಾದ ರಸ್ತೆಗಳು ಎಂಬುವುದೇನಿಲ್ಲ. ಸೊರಬಾ ತಾಲ್ಲೂಕಿನಲ್ಲಿ ಸಾಕಷ್ಟು ಹೆಸರು ಮಾಡಿರುವ ಗುಡವಿ ಪಕ್ಷಿಧಾಮಕ್ಕೆ ಹೋಗುವ ರಸ್ತೆಯನ್ನು ನೋಡಿದರೆ ತಾಲ್ಲೂಕಿನ ಹಣೆಬರಹವನ್ನೇ ಹೇಳಿಬಿಡಬಹುದು. ಅಲ್ಲಲ್ಲಿ ಹೂಳು ತುಂಬಿ ಬೇಸಿಗೆಯಲ್ಲಿ ನೀರು ನಿಲ್ಲದ ಕೆರೆಕಟ್ಟೆಗಳನ್ನು ನೋಡಿ ಮರುಗಬಹುದು. ಮುಖ್ಯ ರಸ್ತೆಗಳಲ್ಲಿ ಕಾಣಸಿಗುವ ಶಿತಿಲಗೊಂಡ ಸೇತುವೆಗಳು, ಕಳಪೆ ಕಾಮಗಾರಿಗೆ ಸಾಕ್ಷಿ ಒದಗಿಸುವ ಸರ್ಕಾರಿ ಕಟ್ಟಡ, ವಸತಿಗೃಹ, ಕಛೇರಿಗಳನ್ನು ನೋಡಿದಾಗಲೆಲ್ಲ ನಲವತ್ತು ವರ್ಷದ ಕೌಟುಂಬಿಕ ರಾಜಕಾರಣವೇ ಸೊರಬಾ ತಾಲ್ಲೂಕಿನ ಶಾಪವೇ ಎಂದು ಅನ್ನಿಸದೇ ಇರದು. ಸೊರಬಾ ಆನವಟ್ಟಿಯ ಸುತ್ತಮುತ್ತಲು ಹಾಡುಹಗಲೂ ಕದ್ದು ಸಾಗಿಸುವ ಅರಣ್ಯ ಸಂಪತ್ತನ್ನು ತಡೆದಿದ್ದರೆ ಇಂದಿಗೂ ಸ್ವಾಭಾವಿಕವಾಗಿ ಬೆಳೆಯುವ ಗಂಧದ ಮರಗಳನ್ನು ನಾವೆಲ್ಲ ನೋಡಬಹುದಿತ್ತು. ಮಂಡಲ ಪಂಚಾಯತಿ ಮತ್ತೊಂದೇನೇ ವ್ಯವಸ್ಥೆ ಬಂದರೂ ವಾರಕ್ಕೊಮ್ಮೆ ಸಾವಿರಾರು ಜನ ಸೇರುವ ಆನವಟ್ಟಿಯ ಸಂತೇಪೇಟೆಗೆ ಒಂದು ಸದ್ಗತಿಯನ್ನು ಒದಗಿಸಿಕೊಡಬಹುದಿತ್ತು. ಮೊದಲು ಮಲೆನಾಡಿದ್ದುದು, ನಂತರ ಅರೆಮಲೆನಾಡಾಗಿ ಈಗ ಎಲ್ಲಿ ನೋಡಿದರೂ ಬಯಲು ಸೀಮೆಯ ಅವಶೇಷಗಳಾದಂತಹ ತಾಲ್ಲೂಕಿನ ನಾನಾ ಭಾಗಗಳನ್ನು ಊರ್ಜಿತಗೊಳಿಸುವುದಿರಲಿ, ಅಲ್ಲಿಂದ ಜನರು ಕಾಫೀ ಸೀಮೆಗೆ ಗುಳೆ ಹೋಗುವುದನ್ನು ತಪ್ಪಿಸಬಹುದಿತ್ತು. ಯಾವುದೂ ಬೇಡ, ಮಹಾನ್ ವಿಶ್ವೇಶ್ವರಯ್ಯನವರು ಮಾಡಿದಂತೆ ಶಿವಮೊಗ್ಗದ ಸುತ್ತಮುತ್ತಲು ಒಂದಿಷ್ಟು ಕಾರ್ಖಾನೆಗಳನ್ನು ಬಂಗಾರಪ್ಪನವರು ಮುಖ್ಯಮಂತ್ರಿಯಾದಾಗ ಕಟ್ಟಿದ್ದರೆ ಜಿಲ್ಲೆಯ ಜನ ಇವತ್ತಿಗೂ ಅವರ ಹೆಸರನ್ನು ಹೇಳಿ ನೀರು ಕುಡಿಯಬಹುದಿತ್ತು.

ಬಂಗಾರಪ್ಪನವರು ’ನಾನು ಕೋಳೀಕೆರಂಗ’ ಹಾಡಿನ ಚರಣಗಳಂತೆ ತಮ್ಮ ಹುಟ್ಟೂರನ್ನು ನೆನೆಸಿಕೊಳ್ಳುತ್ತಾರೋ ಇಲ್ಲವೋ ಅಲ್ಲಿನ ಜನರಂತೂ ಅವರನ್ನು ಖಂಡಿತ ಹಚ್ಚಿಕೊಂಡಿದ್ದಾರೆ. ಆ ನೆಲ ಹೊರಹೊಮ್ಮಿಸಿದ ಗಟ್ಟಿ ನಾಯಕ ಬಂಗಾರಪ್ಪನವರಿಗೆ ಎಪ್ಪತ್ತೈದರ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು.

Sunday, October 07, 2007

ಕನಸುಗಾರರು ಬೇಕಾಗಿದ್ದಾರೆ...

ರಾಜಕೀಯದ ಬಗ್ಗೆ ಬರೆಯೋದ್ ಏನಿದೆ, ಬರೆಯೋಕ್ ಏನಿದೆ ಅಂತ ಯೋಚಿಸ್ತಾ ಇರಬೇಕಾದ್ರೆ ಏನು ಬರೆದ್ರೂ ಯಾರಿಗಾದ್ರೂ ಒಬ್ರಿಗ್ ಬೈಯಲೇ ಬೇಕು, ಹಾಗೆ ಬೈಯದೆ ಇದ್ರೆ ನನಗಂತೂ ಸಮಾಧಾನವೇ ಇರೋದಿಲ್ಲ. ನಮ್ ದೇಶದ ರಾಜಕಾರಣವಾಗ್ಲೀ, ನಮ್ ರಾಜ್ಯದ ರಾಜಕಾರಣವಾಗ್ಲೀ ಹೊಲಸೆದ್ದು ಹೋಗಿದೆ ಅಂತ್ಲೇ ನಾನು ನಂಬಿರೋನು. ಇನ್ನೇನು ಹೇಳೋದು, ಈ ತಿಂಗಳುಗಳನ್ನು ನಂಬಿದ ಸರ್ಕಾರಗಳನ್ನು ಕುರಿತು ಓದ್ತಾ ಇರಬೇಕಾದ್ರೆ? ಜನತಾ ನ್ಯಾಯಾಲಯಕ್ಕಾದ್ರೂ ಯಾವ ಆಪ್ಷನ್‌ಗಳು ಉಳಿದಿವೆ ಈ ಮಂಕುದಿಣ್ಣೆಗಳನ್ನೇ ಮತ್ತೆ ಮತ್ತೆ ಆರಿಸಿ ತರೋದನ್ನು ಬಿಟ್ರೆ?

ನನ್ನ ಒಡಲಿನಲ್ಲಿ ಬೇಕಾದಷ್ಟು ಬೈಗಳುಗಳನ್ನು ತುಂಬಿಕೊಂಡಿದ್ರೂ ದಳ, ಬಿಜೆಪಿ, ಕಾಂಗ್ರೆಸ್ಸಿನವರನ್ನು ನೋಡಿ ಬೈಯದೇ ಇರುವಷ್ಟು ಸುಮ್ಮನಾಗಿ ಹೋಗಿರೋದನ್ನು ನೋಡಿ ನನಗೇ ಆಶ್ಚರ್ಯ ಆಗ್ತಾ ಇದೆ. ಈ ಸಮ್ಮಿಶ್ರ ಸರಕಾರ ಮೊಟ್ಟ ಮೊದಲ್ನೆ ಬಾರಿಗೆ ಅಧಿಕಾರ ಬರೋಕ್ಕಿಂತ ಮೊದಲೇ ಚುನಾವಣೆ ಫಲಿತಾಂಶ ನೋಡಿ ಯಾರಿಗೂ ನಿಚ್ಚಳ ಬಹುಮತ ಬಾರದಿದ್ದುದನ್ನು ಕಂಡಾಗಲೇ ಈ ಹೊಂದಾಣಿಕೆ ಹತ್‌ಹತ್ರ ನಲವತ್ತು ತಿಂಗಳು ಬಂದಿದ್ದೇ ಹೆಚ್ಚು ಅನ್ಸಿದ್ದು ನಿಜ. ಕಳೆದ ಚುನಾವಣೆಯಲ್ಲಿ ಹೆಚ್ಚು ಶಾಸಕರನ್ನು ಪಡೆದವರಿಗೆ ಅಧಿಕಾರ ಸಿಗದಿದ್ದುದೂ, ಕಡಿಮೆ ಶಾಸಕರನ್ನು ಪಡೆದವರು ಮುಖ್ಯಮಂತ್ರಿಗಳಾಗಿ ಮೆರೆದದ್ದೂ ವಿಶೇಷ. ಇಪ್ಪತ್ತು ತಿಂಗಳ ಹಿಂದೆ ಅಪ್ಪ-ಮಗನ ವಿರಸ ಪ್ರಕಟವಾಗಿತ್ತು, ಈಗ ಎಲ್ಲರೂ ಒಂದಾದ ಹಾಗಿದೆ. ಅಧಿಕಾರದ ಆಸೆಗೋಸ್ಕರ ಕೈ ಜೋಡಿಸಿ ಒಪ್ಪಂದ ಮಾಡಿಕೊಳ್ಳುವಾಗ ಬುದ್ಧಿ ಇರಲಿಲ್ಲವೇ ಎಂದೂ ಅನೇಕಾನೇಕ ಪ್ರಶ್ನೆಗಳು ಇನ್ನೂ ಹುಟ್ಟುತ್ತಲೇ ಇವೆ.

ಜನಾದೇಶ, ಚುನಾವಣೆ, ಜನತಾ ನ್ಯಾಯಾಲಯ ಎಂದೇನೇ ಕರೆದರೂ ರಾಜ್ಯವನ್ನು ಸರಿಯಾಗಿ ನಡೆಸಿಕೊಂಡು ಹೋಗುವ ನಾಯಕರ ಕೊರತೆ ಬಹಳ ದೊಡ್ಡದು. ನಾನು ಕಂಡ ಹಾಗೆ ಯಾವ ಪಕ್ಷದಲ್ಲಿಯೂ ಸರಿಯಾದ ನಾಯಕರು, ಮುಂದಾಳುಗಳು ನನ್ನ ಕಣ್ಣಿಗಂತೂ ಬೀಳುತ್ತಿಲ್ಲ. ಹಾಳೂರಿಗೆ ಉಳಿದವನೇ ಗೌಡ ಎಂದು ಯಾರನ್ನು ಬೇಕಾದರೂ ಆರಿಸುವುದಾದರೆ ಜನತೆಯ ಮತಕ್ಕಾದರೂ ಎಲ್ಲಿಯ ಬೆಲೆ ಬಂದೀತು? ಹಾಗಾದರೆ ಕರ್ನಾಟಕದ ರಾಜಕಾರಣದಲ್ಲಿ ಯಾವ ಮುತ್ಸದ್ದಿಗಳೂ ಇಲ್ಲವೇ? ಮುವತ್ತು ನಲವತ್ತು ವರ್ಷಗಳ ರಾಜಕಾರಣ ಮಾಡಿದವರೆಲ್ಲರೂ ’ಕಾದು ನೋಡುತ್ತೇವೆ, ಹೈ ಕಮಾಂಡಿನ ಆದೇಶದಂತೆ ನಡೆಯುತ್ತೇವೆ’ ಎನ್ನುವುದು ಯಾವ ನ್ಯಾಯ? ಪಕ್ಷದ ಅಧ್ಯಕ್ಷರಿಗೆ ಬೆಲೆ ಇರಬೇಕೋ ಬೇಡವೋ, ಪಕ್ಷ ಹೆಚ್ಚೋ ವ್ಯಕ್ತಿ ಹೆಚ್ಚೋ ಮುಂತಾದ ಪ್ರಶ್ನೆಗಳು ನಾಳೆ ನಡೆಯುವ ಚರ್ಚಾಸ್ಪರ್ಧೆಗೆ ತಯಾರು ನಡೆಸುತ್ತಿರುವ ಹೈ ಸ್ಕೂಲು ಹುಡುಗನ ಮನದಲ್ಲಿ ಸುಳಿಯುವ ಹಾಗೆ ಸುಳಿದು ಹೋದವು.

***

ನೀವು ಸ್ವಲ್ಪ ಯೋಚಿಸಿ ನೋಡಿ - ಇದರಿಂದ ಒಂದಂತೂ ಒಳ್ಳೆಯದಾಗಿದೆ. ಕುಮಾರಸ್ವಾಮಿ ತಮ್ಮ ಅತ್ಯಂತ ಕಡಿಮೆ ಅನುಭವವಿದ್ದಾಗ್ಯೂ ಚಿಕ್ಕ ವಯಸ್ಸಿನಲ್ಲಿ ಮುಖ್ಯಮಂತ್ರಿಯಾಗಿದ್ದು ನೋಡಿದರೆ, ಮುಂದೆ ಅವರ ಪಕ್ಷ ಮೆಜಾರಿಟಿಗೆ ಬಂದರೆ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೇ ಹೊರತು ಬೇರೆ ಯಾವ ಮಂತ್ರಿ ಪದವಿಯೂ ಅವರಿಗೆ ತಕ್ಕುದಾದಂತೆ ಕಾಣುವುದಿಲ್ಲ, ವಿರೋಧಪಕ್ಷದಲ್ಲಿ ಕುಳಿತು ಚಿಂತಿಸುವುದನ್ನು ಬಿಟ್ಟರೆ. ದೇವೇಗೌಡರಂತೂ ಈಗಾಗಲೇ ತಮ್ಮ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಹುದ್ದೆಗಳ ಕೋಟಾವನ್ನು ಪೂರೈಸಿದಂತೆ ಕಾಣುವುದರಿಂದ ಹಿನ್ನೆಲೆಯಲ್ಲಿ ಕುಳಿತು ಏನೇ ಮಾಡಿದರೂ ಮತ್ತೆ ಅವರು ಆಡಳಿತ ಗದ್ದುಗೆ ಹತ್ತುವಂತೆ ತೋರದು. ಬಿಜೆಪಿಯ ಯಡಿಯೂರಪ್ಪನವರದೂ ಅದೇ ಕಥೆ - ಉಪಮುಖ್ಯಮಂತ್ರಿ ಆದವರು ಮುಖ್ಯಮಂತ್ರಿಗಳಾಗ ಬೇಕಷ್ಟೇ? ನಿಚ್ಚಳ ಬಹುಮತ ಬಾರದ ಹೊರತು ಅವರು ಕಾಂಗ್ರೆಸ್ ಒಂದಿಗಾಗಲೀ, ಜನತಾದಳದೊಂದಿಗಾಗಲೀ ಸಂಧಿ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ. ಕಾಂಗ್ರೇಸಿನವರು ಯಾಕೋ ಸಪ್ಪಗಾಗಿ ಹೋಗಿದ್ದಾರೆ. ಧರಮ್ ಸಿಂಗ್ ಮುಂದಾಳತ್ವದಲ್ಲಿ ಅದೇಕೋ ಅಷ್ಟೊಂದು ಚುರುಕು ಕಾಣಿಸುತ್ತಲೇ ಇಲ್ಲ.

ಆದ್ದರಿಂದಲೇ, ಚುನಾವಣೆ ನಡೆದು ಯಾವ ರೀತಿಯ ಫಲಿತಾಂಶ ಬಂದರೂ ಹಳೆ ತಲೆಗಳು ಮತ್ತೆ ಗದ್ದುಗೆ ಹತ್ತುವುದು ಕಷ್ಟಸಾಧ್ಯ ಎಂದು ನನ್ನ ಅನಿಸಿಕೆ. ಹಾಗಾದರೆ, ಹೊಸ ನಾಯಕರಿಲ್ಲ, ಹಳೆಯವರ ಕಾಲ ಮುಗಿದಿದೆ - ಹೀಗಿರುವಾಗ ಚುನಾವಣೆಯ ಫಲಿತಾಂಶ ಯಾವ ದಿಕ್ಕಿಗೆ ಸಾಗಬಹುದು? ಕಳೆದ ಸಾರಿ ಬಿಜೆಪಿ ಹೆಚ್ಚು ಶಾಸಕರನ್ನು ಗಳಿಸಿತ್ತು, ಎರಡನೆಯ ಸ್ಥಾನದಲ್ಲಿ ಕಾಂಗ್ರೆಸ್, ಮೂರನೆಯ ಸ್ಥಾನದಲ್ಲಿ ದಳ ಬಂದಿದ್ದವು. ಈಗ ಮುಂದಿನ ಚುನಾವಣೆಯಲ್ಲಿ (ನಡೆದರೆ), ಈ ಪಕ್ಷಗಳು ಅಷ್ಟಷ್ಟೇ ಮತಗಳನ್ನು/ಶಾಸಕರನ್ನು ಗಳಿಸಿ ಮುಂದೆ ಇದೇ ರೀತಿ ಹಂಗ್ ಅಸೆಂಬ್ಲಿ ಬಂದರೆ ಏನು ಮಾಡುತ್ತಾರಂತೆ? ಜಾತಿಯ ಅಲೆ, ಸಂವೇದನೆಯ ಅಲೆ, ಸುಮ್ಮನೇ ಕುಳಿತು ಏನೂ ಮಾಡದಿರುವ ಸೋಮಾರಿಗಳ ಅಲೆಗಳಾಗಲೀ ಯಾವ ರೀತಿಯಲ್ಲಿ ಯಾರು ಯಾರಿಗೆ ಸಹಾಯ ಮಾಡುತ್ತವೆ ಎನ್ನೋದು ಬಹಳ ಕುತೂಹಲಕಾರಿ ವಿಷಯ.

***

ನಮ್ಮ ಸ್ನೇಹಿತರೊಬ್ಬರು, ಕನ್ನಡಿಗರೇ - ಅನಿವಾಸಿಯಾಗಿ ಸುಮಾರು ಎಂಟು ವರ್ಷಗಳಿಂದ ಅಮೇರಿಕದಲ್ಲಿ ಇರುವವರೊಬ್ಬರು ಕರ್ನಾಟಕ/ಭಾರತದ ರಾಜಕಾರಣದಲ್ಲಿ ಧುಮುಕ ಬೇಕು ಎನ್ನುವ ಆಸೆಯನ್ನು ಒಮ್ಮೆ ವ್ಯಕ್ತಪಡಿಸಿದ್ದರು. ಅವರೊಬ್ಬ ವಿದ್ಯಾವಂತ ಮಹಿಳೆ, ಇಲ್ಲಿ ಒಳ್ಳೆಯ ಕೆಲಸದಲ್ಲಿರುವವರು, ಅಂತಹವರಿಗೆ ರಾಜಕೀಯ ಕಾಳಜಿ ಆ ಮೂಲಕ ಜನರ ಸೇವೆ ಮಾಡುವ ಗುರಿ ಅಥವಾ ಕನಸು ಇರುವುದು ಬಹಳ ದೊಡ್ಡ ವಿಷಯ. ಅದೂ ಇತ್ತೀಚಿನ ವಿದ್ಯಾವಂತ ಜನತೆ ಹಾಳು ರಾಜಕೀಯದಿಂದ ದೂರವೇ ಇರೋಣ ಎನ್ನುವಂತಹ ಸಂದರ್ಭದಲ್ಲಿ ಅಮೇರಿಕದ ಉನ್ನತ ಎಮ್‌ಬಿಎ ಪದವಿ ಪಡೆದಿರುವ ಹಾಗೂ ಇಲ್ಲಿನ ಕಾರ್ಪೋರೇಷನ್ನುಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ಆಡಳಿತವರ್ಗದ ಆಗುಹೋಗುಗಳನ್ನು ಬಲ್ಲವರಿಗೆ ಕರ್ನಾಟಕದ ರಾಜಕೀಯದಲ್ಲಿ ಸಕ್ರಿಯ ಪಾತ್ರವನ್ನು ವಹಿಸುವುದು ಕಷ್ಟವೇ? ಎನ್ನುವ ಪ್ರಶ್ನೆಯನ್ನು ನಾನೂ ಕೇಳಿಕೊಂಡಿದ್ದೆ.

ಕಳೆದ ವರ್ಷ ಭಾರತಕ್ಕೆ ಹೋದಾಗ ನನ್ನ ಸಹಪಾಠಿ ಹಾಗೂ ಬಾಲ್ಯ ಸ್ನೇಹಿತ ಶ್ರೀಕಾಂತನ ಬಳಿ ಈ ಬಗ್ಗೆ ವಿಚಾರಿಸಿದಾಗ ಅವನು ನಾನೇ ಎಲ್ಲಿ ಎಮ್‌ಎಲ್‌ಎ ಸೀಟಿಗೆ ಸ್ಪರ್ಧಿಸಿಬಿಡುತ್ತೇನೋ ಎಂದು ತಿಳಿದುಕೊಂಡು ನನ್ನ ಪ್ರಶ್ನೆಗೆ ಗಹಗಹಿಸಿ ನಗತೊಡಗಿದ. ಅವನ ಮುಗ್ಧ ಉತ್ತರದ ಪ್ರಕಾರ ನನ್ನಂತಹ ಹುಂಬ ಮತ್ತೊಬ್ಬನಿಲ್ಲವೆಂದೂ, ತಲೆ ಸರಿ ಇರುವವನು ಯಾರೂ ರಾಜಕೀಯದ ಸಹವಾಸಕ್ಕೆ ಹೋಗುವುದಿಲ್ಲವೆಂತಲೂ, ಒಂದು ವೇಳೆ ಹೋದರೂ ಒಂದು ಎಮ್‌ಎಲ್‍ಎ ಸೀಟಿಗೆ ಟಿಕೆಟ್ ತೆಗೆದುಕೊಳ್ಳಲು ಮಾಡಬೇಕಾದ ಕಸರತ್ತುಗಳನ್ನೆಲ್ಲ ನಿಧಾನವಾಗಿ ವಿವರಿಸಿದ. ನಮ್ಮ ಸೊರಬಾ ತಾಲ್ಲೂಕಿನ ಕುಮಾರ್ ಬಂಗಾರಪ್ಪ, ಬಂಗಾರಪ್ಪನವರ ಉದಾಹರಣೆಯಿಂದ ಹಿಡಿದು ನೆರೆಯ ತಾಲ್ಲೂಕಿನ ಶಿಕಾರಿಪುರದ ಯಡಿಯೂರಪ್ಪ ಹಾಗೂ ರಾಜ್ಯ ಮಟ್ಟದಲ್ಲಿ ಅಂದು ಜೆ‍ಎಚ್ ಪಟೇಲ್, ದೇವೇಗೌಡರ ಇವರ ಬಗ್ಗೆ ತಿಳಿಸಿದ. ಒಂದು ಎಮ್‌ಎಲ್‌ಎ ಸೀಟಿಗೆ ಐವತ್ತು ಲಕ್ಷದಿಂದ ಹಿಡಿದು ಸರಿಸುಮಾರು ಕೋಟಿಯವರೆಗೆ ಸುರಿಯುವ ಬಗ್ಗೆ ಕೇಳಿ ನನಗಂತೂ ಆಶ್ಚರ್ಯವಾಯಿತು. ಇತ್ತೀಚೆಗೆ ಚುನಾವಣಾ ಅಭ್ಯರ್ಥಿಗಳು ತಮ್ಮ ಆಸ್ತಿ ಅಂತಸ್ತುಗಳ ಬಗ್ಗೆ ಸಾರ್ವಜನಿಕವಾಗಿ ಲೆಕ್ಕಪತ್ರಗಳನ್ನು ಕೊಡಬೇಕೆಂಬ ಕಾನೂನಿದ್ದರೂ ಅದೆಲ್ಲಿಂದ ಈ ಶಾಸಕ ಸ್ಪರ್ಧಿಗಳು ಅಷ್ಟೊಂದು ದುಡ್ಡನ್ನು ತರುತ್ತಾರೋ ಎಂದು ಜಿಲ್ಲಾ ಪರಿಷತ್ ಡೇಟಾಬೇಸನ್ನು ಹುಡುಕಿಕೊಂಡು ಹೋಗಿ ನನಗೆ ಬೇಕಾದ ಪ್ರತಿಯೊಬ್ಬ ಮುತ್ಸದ್ದಿ, ದುರೀಣ, ನಾಯಕ, ಪುಡಾರಿಗಳ ಆಸ್ತಿ ವಿವರಗಳನ್ನು ನಾನೇ ಓದಿ ನೋಡಿದೆ. ಆದರೆ ಎಲ್ಲೂ ಉತ್ತರ ಸಿಕ್ಕ ಹಾಗೆ ಕಾಣಿಸಲಿಲ್ಲ. ಶ್ರೀಕಾಂತನ ಜೊತೆಯ ಮಾತುಕಥೆಯಿಂದ ಒಂದಂತೂ ಸ್ಪಷ್ಟವಾಯಿತು - ಸಕ್ರಿಯವಾಗಿ ರಾಜಕಾರಣದಲ್ಲಿ (ದೇಶದ ಮಟ್ಟದಲ್ಲಿ ಅಥವಾ ರಾಜ್ಯ ಮಟ್ಟದಲ್ಲಿ) ಪಾಲುಗೊಳ್ಳಲು ಬೇಕಾದುದು ruthlessness - ವಿದ್ಯಾವಂತರ, ಮುಂದುವರಿದವರ ವೀಕ್‌ನೆಸ್ ಅದೇ ಆಗಬಲ್ಲದು, ಜೊತೆಯಲ್ಲಿ ಜಾತಿ, ದುಡ್ಡು, ಶಿಫಾರಸ್ಸು ಮುಂತಾದವುಗಳ ಬಲ ಇಲ್ಲದಿದ್ದರೆ ಏನೂ ಪ್ರಯೋಜನವಾಗದು ಎಂದೂ ತಿಳಿಯಿತು.

ಭಾರತ/ಕರ್ನಾಟಕದ ಚುನಾವಣೆಯಲ್ಲಿ ಆಸಕ್ತಿ ಇರುವ ನನ್ನ ಸ್ನೇಹಿತರಿಗೆ ನಾನು ಅವರ ಗುರಿಯನ್ನು ನೋಡಿ ಪ್ರಸಂಶಿಸಲೂ ಇಲ್ಲ, ಅವರ ಉತ್ಸಾಹಕ್ಕೆ ತಣ್ಣೀರೆರಚಲೂ ಇಲ್ಲ. ಆದರೆ, ಅವರ ಕನಸಿನ ಪ್ರಕಾರ ನಡೆದಿದ್ದೇ ಆದಲ್ಲಿ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಬೇಕು ಎನ್ನುವುದಂತೂ ಖಚಿತ. ಅವರು ಮುಂದೆ ಏನಾಗುತ್ತಾರೋ ಬಿಡುತ್ತಾರೋ ನಮ್ಮ ಹಾರೈಕೆ ಸದಾ ಅವರ ಜೊತೆ ಇರಲಿ.

***

ಹೌದು, ಕನಸುಗಾರರು ಬೇಕಾಗಿದ್ದಾರೆ! ನಮ್ಮ ಈಗಿನ ಪೀಳಿಗೆ ಹಾಗೂ ಮುಂಬರುವ ಪೀಳಿಗೆಗಳನ್ನು ದಾಸ್ಯದಿಂದ ಬಿಡುಗಡೆ ಮಾಡಲು. ಜಾತಿ ರಾಜಕೀಯದಿಂದ ದೂರವಿದ್ದು ಕರ್ನಾಟಕದ ಸುವರ್ಣ ಪುಟಗಳನ್ನು ಮತ್ತೆ ತೆರೆಯಲು. ಯಾವುದೇ ಅರ್ಹತೆ ಇಲ್ಲದೇ ಕುರ್ಚಿ ಏರುವ ಖದೀಮರನ್ನು ಬದಿಗೊತ್ತಿ ನಮ್ಮೆಲ್ಲರ ಮುಖಂಡರಾಗಿ ಮೆರೆದು ದೇಶದಲ್ಲಿ ಕರ್ನಾಟಕ ತಲೆ ಎತ್ತುವಂತೆ ಮಾಡಲು. ನಮ್ಮ ನಡುವಿನ ಕಚ್ಚಾಟಗಳನ್ನು ದುರುಪಯೋಗಪಡಿಸಿಕೊಂಡು ತಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಳ್ಳುವ ನೆರೆ ಹೊರೆಯವರಿಗೂ ಹಾಗೂ ದೂರದವರಿಗೂ ಬುದ್ಧಿ ಕಲಿಸಲು. ಐವತ್ತು ಮಿಲಿಯನ್‍ಗೂ ಮಿಕ್ಕಿರುವ ಕನ್ನಡಿಗರಿಗೆ ಒಂದು ನೆಲೆ ಕಾಣಿಸಲು. ಹಸಿವು-ಹಾಹಾಕಾರ ಇನ್ನಿಲ್ಲದಂತೆ ಮಾಡಲು. ಲಂಚ ಭ್ರಷ್ಟಾಚಾರ ತಾಂಡವವಾಡದಂತೆ ಮಾಡಲು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಹಳೆಯ ಕಾನೂನನ್ನು ಬದಿಗೊತ್ತಿ ಅದರ ಬದಲಿಗೆ ಹೊಸತೊಂದನ್ನು ಸ್ಥಾಪಿಸುವ ಹರಿಕಾರರು ಬೇಕಾಗಿದ್ದಾರೆ.

ನೂರಾರು ವರ್ಷಗಳಿಂದ ಕನ್ನಡ ನಾಡನ್ನು ಆಳಿಕೊಂಡು ಬಂದ ರಕ್ತಕ್ಕೆ ಇಂದು ನಿರ್ವೀರ್ಯತೆ ಅನಿವಾರ್ಯವೇ? ಅಥವಾ ನಮ್ಮಲ್ಲೂ ಹೊಸ ಹುರುಪಿನ ನಾಯಕರ ಅವಿಷ್ಕಾರವಾಗಲಿದೆಯೇ?

ಕಾದು ನೋಡೋಣ...ಇವತ್ತಲ್ಲ ನಾಳೆ ಕನಸುಗಾರರು ಬರುತ್ತಾರೆ ತಮ್ಮ ನನಸಾದ ಕನಸುಗಳ ಸವಾರಿ ಮಾಡಿಕೊಂಡು.