Saturday, May 11, 2013

ಅನಿವಾಸಿಗಳಿಗೆ ಸಂದ ಜಯ

ನಾನು ಓದಿದ ಬ್ಲಾಗು / ನ್ಯೂಸ್ ಪೋರ್ಟಲುಗಳೆಲ್ಲ ದಳ, ಬಿಜೆಪಿ, ಕಾಂಗ್ರೆಸ್‌ಗೆ ಸಂಬಂಧಿಸಿದ ಕಥೆಗಳನ್ನು ಬರೆಯುತ್ತಿರುವಾಗ, ನಮಗೆ ಬೇಕಾದ ಒಂದಿಬ್ಬರು ಅನಿವಾಸಿ ಕನ್ನಡಿಗ ಸ್ಪರ್ಧಿಗಳನ್ನು ಕುರಿತು ಬರೆಯದೇ ಹೋದರೆ
ವಾರ ಮುಕ್ತಾಯಗೊಂಡ ಅಸೆಂಬ್ಲಿ ಚುನಾವಣೆಗೆ ಸಂಬಂಧಿಸಿದ ಚರ್ಚೆಗಳು ಅಸಂಪೂರ್ಣವಾಗುತ್ತವೆ.  ವಿಶ್ವದಾದ್ಯಂತ ಕನ್ನಡಿಗರು ನಿರೀಕ್ಷಿಸಿದ್ದ ಈ ಚುನಾವಣೆಯ ಫಲಿತಾಂಶದಲ್ಲಿ ವೈಯಕ್ತಿಕವಾಗಿ ನನಗೆ ಪರಿಚಯಯಸ್ತರಾದ ರವಿ ರೆಡ್ಡಿ ಮತ್ತು ಶಾಂತಲಾ ದಾಮ್ಲೆ ಇವರಿಬ್ಬರ ಬೆಳವಣಿಗೆಗಳನ್ನು ನೋಡಿ ನಿಜಕ್ಕೂ ವಿಸ್ಮಯವಾಯಿತು. ಮುಖ್ಯವಾಗಿ, ನಾವೆಲ್ಲರೂ ಹೆಮ್ಮೆ ಪಡಬೇಕಾದ ಕೆಲಸವನ್ನೇ ಇವರಿಬ್ಬರೂ ಮಾಡಿದ್ದಾರೆ. ಸೋಲು ಗೆಲುವಿನ ಸೋಪಾನ, ನನ್ನ ದೃಷ್ಟಿಯಲ್ಲಿ ಇವರಿಬ್ಬರೂ ಸೋತು ಗೆದ್ದವರು.

***

ನಾವು ನಂಬಿಕೊಂಡ ಪ್ರಕಾರ ಬೆಂಕಿಯನ್ನು ನಂದಿಸೋದಕ್ಕೆ ನೀರನ್ನು ಸಹಜವಾಗಿ ಬಳಸುವುದಿದೆ. ಕೆಲವೊಂದು ಪ್ರಕರಣಗಳಲ್ಲಿ ಬೆಂಕಿಯನ್ನು ನಂದಿಸಲು ಬೆಂಕಿಯನ್ನೇ ಬಳಸಬೇಕಾಗುತ್ತದೆ. ಕಾಡ್ಗಿಚ್ಚಿನ ಪ್ರಕರಣಗಳಲ್ಲಿ ಬೆಂಕಿಯನ್ನು ನಂದಿಸೋದಕ್ಕೆ ಹಾಗೂ ಬೆಂಕಿ ಹರಡದಿರದಂತೆ ಅನೇಕ ತಂತ್ರಗಳನ್ನು ಬಳಸಲಾಗುತ್ತದೆ. ನಿಸರ್ಗದತ್ತವಾದ ನೀರನ್ನು ಹೆಲಿಕಾಪ್ಟರುಗಳಲ್ಲಿ ಸಿಂಪಡಿಸುವುದನ್ನು ನಾವು ನೋಡಿದ್ದೇವೆ ಹಾಗೇ ಕೆಲವು ಕಡೆ ರಸಾಯನಿಕಗಳನ್ನು ಬಳಸುವುದನ್ನೂ ಸಹ. ಭಾರತದಾದ್ಯಂತ ಹಬ್ಬಿಕೊಂಡಿರುವ ಚುನಾವಣಾ ಸಂಬಂಧಿ ಕೊಡು-ಕೊಳ್ಳುವ ವ್ಯವಸ್ಥೆ ನಮಗೆಲ್ಲ ಪಾರಂಪರಿಕವಾದುದು. ಸ್ವಾತಂತ್ರ್ಯ ಸಿಕ್ಕ ಮೊದಲ ಕೆಲವು ಚುನಾವಣೆಗಳು ಹೇಗಿದ್ದವೋ ಆದರೆ ನಾನು ಗಮನಿಸಿದಂತೆ ಕಳೆದ ಮೂರು ನಾಲ್ಕು ದಶಕಗಳ ಚುನಾವಣೆಯ ವ್ಯವಸ್ಥೆಯಲ್ಲಿ ಸಹಸ್ರಾರು ಕೋಟಿ ರೂಪಾಯಿಗಳು ಒಬ್ಬರಿಂದ ಮತ್ತೊಬ್ಬರಿಗೆ ಹಂಚಿ ಹೋಗುವುದನ್ನು ನೋಡಿದ್ದೇವೆ. ಹಣ ಹಂಚುವುದರ ಜೊತೆಗೆ ಸರಾಯಿ, ಸೀರೆ, ಸಣ್ಣ ಪುಟ್ಟ ಆಭರಣಗಳು ಮೊದಲಾದವುಗಳ ಬಗ್ಗೆಯೂ ನಮಗೆ ಗೊತ್ತು.  ಚುನಾವಣಾ ಸಮಯದಲ್ಲಿ ಹೊರಬರುವ ಹಾಗೂ ಹಂಚಲ್ಪಡುವ ಹಣ ನನ್ನ ದೃಷ್ಟಿಯಲ್ಲಿ ಕಾಡ್ಗಿಚ್ಚಿನ ಬೆಂಕಿಯಿದ್ದಂತೆ, ಅದನ್ನು ಎದುರಿಸುವುದು ಹಾಗೂ ಸಂಬಾಳಿಸುವುದು ಬಹಳ ಕಷ್ಟದ ಕೆಲಸ.

ಮೇಲ್ನೋಟಕ್ಕೆ ಚುನಾವಣ ತಂತ್ರ ಬಹಳ ಸುಲಭವಾದಂತೆ ಕಾಣುತ್ತದೆ. ಆದರೆ, ಅದರ ಒಳ ಹೂಟಿ ಕೆಲವರಿಗೆ ಮಾತ್ರ ಗೊತ್ತು. ಇಲ್ಲಿನ ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್‌ಗೆ ವಿಸಿಟ್ ಮಾಡಲು ಬಂದ ಡಾ. ಸುದರ್ಶನ್ ಒಮ್ಮೆ ಹೇಳಿದ್ದರು. ಸುದರ್ಶನ್ ಲೋಕಾಯುಕ್ತ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಲೋಕಾಯುಕ್ತರ ಬಲೆಗೆ ಸಿಕ್ಕ ಒಬ್ಬ ಎಮ್.ಎಲ್.ಎ. ಅನ್ನು ಅವರು ಸಂದರ್ಶನ ಮಾಡಿದ್ದರಂತೆ. ಆ ಶಾಸಕರ ಪ್ರಕಾರ, ಪ್ರತಿಯೊಬ್ಬ ಅಭ್ಯರ್ಥಿಯೂ ಲಕ್ಷಾಂತರ ರೂಪಾಯಿಗಳನ್ನು ಸುರಿದು ಗೆಲ್ಲುತ್ತಾನೆ, ಗೆದ್ದನಂತರ ಸಾರ್ವಜನಿಕ ಕೆಲಸದ ನೆಪದಲ್ಲಿ ಅದರ ಹತ್ತು ಅಥವಾ ನೂರರಷ್ಟು ಗಳಿಸುತ್ತಾನೆ. ಅದರಲ್ಲೇನು ತಪ್ಪು? ಎಂಬುದು ಆ ಶಾಸಕರ ಅಂಬೋಣ.

ನಮ್ಮ ರಾಜಕಾರಣಿಗಳು ಗೆದ್ದು-ಗಳಿಸಿ-ಬದುಕುವ ಬಗೆ ನಾನಿಲ್ಲಿ ಬರೆದಂತೇನೂ ಸುಲಭವಲ್ಲ. ಅವರಲ್ಲೂ ಪುಡಾರಿಯಿಂದ ಹಿಡಿದು ಮಂತ್ರಿಗಿರಿಯವರೆಗೆ ಬೆಳವಣಿಗೆಯಿದೆ, ಜಾತಿ ಆಧಾರಿತ ವ್ಯವಸ್ಥೆಯಲ್ಲಿ ಯಾವುದೇ ನಿರಂತರ ಗಳಿಕೆ, ಮೌಲ್ಯವಿಲ್ಲದೆ ದಶಕಗಳ ಕಾಲ ಕಾಯುವುದಿದೆ. ಪಕ್ಷಗಳ ಹೆಸರಿನಲ್ಲಿ ಅವರಿವರ ಬೂಟು ನೆಕ್ಕುವುದಿದೆ. ಪುಡಾರಿ-ಪುಂಡಾಟಿಕೆಯಿಂದ ಆಗಾಗ್ಗೆ ಪೋಲೀಸರ ಬೂಟಿನ ಒದೆ ತಿನ್ನುವುದಿದೆ. ಪ್ರಬಲ ರಾಜಕಾರಣ, ಪಕ್ಷದ ಪ್ರಣಾಳಿಕೆಗಳು, ಸ್ಥಳೀಯ ರಾಜಕಾರಣಿಗಳ ಒಡನಾಟ, ಜಾತಿ-ಬಾಂಧವರ ಬೆಂಬಲ, ತಮ್ಮ-ತಮ್ಮ ಬಡಾವಣೆ-ಕಾನ್ಸ್ಟಿಟ್ಯುಯೆನ್ಸಿಯ ನಿರಂತರ ಸಮಸ್ಯೆಗಳು - ಇವೆಲ್ಲ ಸುಮಾರು ದಶಕಗಳ ಕಾಲ ಸತಾಯಿಸುತ್ತಲೇ ಇರುತ್ತವೆ.

ರಾಜಕಾರಣಿಗಳು ಯಾವುದೇ ಉದ್ಯಮವನ್ನು ಬೆಳೆಸದೇ ಇರುವ ಉದ್ಯಮಿಗಳು, ಪೇ ಚೆಕ್ಕು ಬಾರದಿರುವ ಎಂಪ್ಲಾಯಿಗಳು, ಅವರವರ ಪಕ್ಷದ ನಾಗರೀಕರು. ರಾಜಕಾರಣಿ ಎನ್ನುವ ಪದಕ್ಕೆ ಮುಂದಾಳು, ದುರೀಣ, ನಾಯಕ, ಪುಡಾರಿ ಎಂಬ ಪರ್ಯಾಯ ಪದಗಳಿವೆ. ಸೂಕ್ಷ್ಮವಾಗಿ ಗಮನಿಸಿದರೆ ಕಮ್ಯೂನಿಕೇಷನ್ನ್, ಲೀಡರ್‌ಶಿಪ್ ಹಾಗೂ ನಿಲುವು ಇವರ ಬಂಡವಾಳ. ಇವರು ಮೌಲ್ಯಾಧಾರಿತ ರಾಜಕಾರಣಿಗಳು, ಹಾಗೂ ಇವರಿಗೆಲ್ಲ ಪ್ರಣಾಳಿಕೆಗಳಿವೆ. ರಾಜಕಾರಣಿಗಳು ಆಶ್ವಾಸನೆ ಕೊಡುತ್ತಾರೆ, ಆದರೆ ಕಾರ್ಯರೂಪಕ್ಕೆ ಬಂದು ಜನರ ಮನದಲ್ಲಿ ನಿಲ್ಲುವುದು ಕೆಲವು ಮಾತ್ರ.

***


ಶಾಂತಾಲಾ ಮತ್ತು ರವಿ ಇವರಿಬ್ಬರೂ ಸಹ, ಅನೇಕ ವರ್ಷಗಳಿಂದ ಭಾರತದ ರಾಜಕಾರಣವನ್ನು ಬಲ್ಲವರಾಗಿ ತಮ್ಮ ಪೋಸ್ಟ್-ಅಮೇರಿಕನ್ ಬದುಕಿನಲ್ಲಿ ಪ್ರಂಟ್‌ಲೈನ್‌ನಲ್ಲಿ ನಿಂತು ರಾಜಕೀಯವನ್ನು ಗಮನಿಸಿದವರು. ಕೆಲವು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಈ ವಾರ ಮುಗಿದ ಚುನಾವಣೆಯಲ್ಲಿ ಇವರಿಬ್ಬರೂ ಸಹ ನಾಲ್ಕನೇ ಸ್ಥಾನದಲ್ಲಿ ಬಂದಿರುವುದು ಬಹಳ ದೊಡ್ಡ ವಿಷಯ. ಮುಖ್ಯವಾಗಿ ಒಟ್ಟು ಚಲಾವಣೆಯಾದ ಗುಣಮಟ್ಟದ ಮತಗಳಲ್ಲಿ ಶಾಂತಲ 8.75% ಹಾಗೂ ರವಿ 5.97% ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯವೇ ಹೌದು. ಇವರಿಬ್ಬರು ಭಾಗವಹಿಸಿದ ಬಸವನಗುಡಿ ಹಾಗೂ ಬಿಟಿಎಮ್ ಲೇ ಔಟುಗಳಲ್ಲಿ ಕ್ರಮವಾಗಿ ಲೋಕಸತ್ತಾ ಪಕ್ಷವನ್ನು ಬುಡದಿಂದ ಎತ್ತಿ ನಾಲ್ಕನೇ ಸ್ಥಾನಕ್ಕೆ ತಂದಿರುವುದು ಗಮನಾರ್ಹವಾದುದು.

ಕಾಂಗ್ರೆಸ್, ಜನತಾದಳ, ಬಿಜೆಪಿಯವರು ಮಾಡಿದ್ದು ಮಾಡುತ್ತಿರುವುದು ಕ್ಲಾಸ್ಸಿಕ್ ರಾಜಕಾರಣ. ನಮಗೆ ಗೊತ್ತಿರುವ ಹಾಗೆ ಶಾಂತಲಾ ಹಾಗೂ ರವಿ ಮಾಡಿದ್ದು ಮೌಲ್ಯಾಧಾರಿತ ರಾಜಕಾರಣ. ತಾವು ಓಟು ಕೇಳುವ ಪ್ರಕ್ರಿಯೆಗಳಲ್ಲಿ ಹಣ-ಹೆಂಡವನ್ನು ಹಂಚದೆ ಬದಲಿಗೆ ಜನರಿಂದಲೇ ಹಣವನ್ನು ಸಂಗ್ರಹಿಸಿ ಜನರ ಹಕ್ಕು ಬಾಧ್ಯತೆಗಳನ್ನು ಗೊತ್ತು ಪಡಿಸಿ ತಮ್ಮ ಸುತ್ತಲಿನ ದಿಗ್ಗಜ-ಧುರೀಣರ ನಡುವೆ ನೊಂದು ಬೆಂದು ಅವರಿಂದಲೇ ಏಳರಿಂದ ಹತ್ತು ಸಾವಿರ ಮತಗಳನ್ನು ಪಡೆಯುವುದಿದೆಯಲ್ಲಾ, ಅದು ನಿಜಕ್ಕೂ ದೊಡ್ಡ ಕೆಲಸವೇ.

ಶಾಂತಾಲಾ ಮತ್ತು ರವಿ ತಮ್ಮ ಸುತ್ತಲಿನ ಬೆಂಕಿಯನ್ನು ಆರಿಸಲು ಆಯ್ದುಕೊಂಡ ಮಾಧ್ಯಮ ನೀರು. ತಮ್ಮ ಸುತ್ತಲೂ ಕಾಡ್ಗಿಚ್ಚಿನೋಪಾದಿಯಲ್ಲಿ ಪ್ರಂಚಡ ಕಾಂಗ್ರೆಸ್, ದಳ ಹಾಗೂ ಬಿಜೆಪಿ, ಕೆಜಿಪಿಯವರು ತಮ್ಮ ಎಂದಿನ ತಂತ್ರವನ್ನು ಬಳಸಿ ಕಂಡ ಕಂಡಲ್ಲಿ "ಬೆಂಕಿ" ಇಟ್ಟು ಚಿಂದಿ ಮಾಡುತ್ತಿರುವಾಗ ಇವರಿಬ್ಬರು ತಾವು ಅಲ್ಲಿಯೇ ಗಳಿಸಿ ಉಳಿಸಿದ ನೀರಿನ ಟ್ಯಾಂಕುಗಳಲ್ಲಿ ಬೆಂಕಿಯನ್ನು ಆರಿಸಲು ಪ್ರಯತ್ನಿಸಿದವರು.  ಕೆಲವೇ  ವರ್ಷಗಳ ಹಿಂದೆ ರಾಜಕೀಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡ  ಇವರು, ಇಂದು ಮುಖ್ಯವಾಹಿನಿ ರಾಜಕೀಯದಲ್ಲಿ ಮುಕ್ತವಾಗಿ ಸ್ಪರ್ಧಿಸಿ, ಯಾವುದೇ ಕುತಂತ್ರಗಳಿಲ್ಲದೆ, ಆಮಿಷಗಳನ್ನೊಡ್ಡದೇ, ಸ್ವಚ್ಛ ರಾಜಕಾರಣದ ಹೆಸರಿನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿರುವುದು ಇವರು ಕಂಡ ಸೋಲಲ್ಲ, ಬದಲಿಗೆ ಇದು ಇವರಿಬ್ಬರ ಗೆಲುವೆಂಬುದೇ ನನ್ನ ಅಭಿಪ್ರಾಯ.

ಇವರಿಬ್ಬರಿಗೆ ಬೇಕಾಗಿರುವುದು ಸ್ವಲ್ಪ ಕಾಲ ಮಾತ್ರ. ಈ ಎರಡೂ ಕಾನ್ಸ್ಟಿಟ್ಯುಯೆನ್ಸಿಗಳಲ್ಲಿ ಇನ್ನು ಐದು ವರ್ಷಗಳ ಕಾಲ ಜನಾಂದೋಳನ ಕಾರ್ಯಕ್ರಮಗಳನ್ನು ಮುಂದೆ ನಿಂತು ನಡೆಸಿದಲ್ಲಿ, ಸ್ಥಳೀಯ ಕರೆಗಳಿಗೆ ಓಗೊಟ್ಟು ಬೆಂಬಲ ನೀಡಿದಲ್ಲಿ, ತಮ್ಮ ಸುತ್ತಲಿನ ಜನರ ನಿರಂತರ ಸಂಪರ್ಕದಲ್ಲಿದ್ದು ಸದರಿ ಬೆಂಬಲವನ್ನು ಬೆಳೆಸಿಕೊಂಡಲ್ಲಿ - ಮುಂದಿನ ಚುನಾವಣೆಯಲ್ಲಿ ಇವರಿಬ್ಬರಿಗೂ ಜಯ ಖಂಡಿತ. ಅಲ್ಲದೇ, ಸ್ವದೇಶೀ ಹಾಗೂ ವಿದೇಶಿ ಅನುಭವ ಮತ್ತು ವಿದ್ಯಾಭ್ಯಾಸವನ್ನು ಗಳಿಸಿ ಜನ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟಿರುವ ಇವರಿಬ್ಬರ ಸೇವೆಯನ್ನು ಕಳೆದುಕೊಂಡ ಬಸವನಗುಡಿ, ಬಿಟಿಎಮ್ ಲೇ ಔಟ್ ಜನರು ಇನ್ನು ಮುಂದಾದರೂ ಎಚ್ಚರಗೊಳ್ಳಲಿ.