Saturday, April 28, 2007

ಅಂತರಂಗ - ಇನ್ನೂರು!
ಕಳೆದ ವರ್ಷ ಜುಲೈ ೨೧ ರಂದು ನೂರನೇ ಬರಹ ಬರೆದ ಮೇಲೆ ಇದು ಹೀಗೇ ಮುಂದುವರೆಯುತ್ತೆ, ಇನ್ನೂರನ್ನು ಮುಟ್ಟುತ್ತೆ ಎನ್ನುವ ವಿಶ್ವಾಸ ಸ್ವಲ್ಪ ಮಟ್ಟಿಗೆ ಇದ್ದಿತಾದರೂ ಬಲವಾಗೇನೂ ಇರಲಿಲ್ಲ, ಇನ್ನೊಂದು ನೂರು ಬರಹಗಳಿಗೆ ವಿಷಯಗಳನ್ನ ಎಲ್ಲಿಂದ ತರೋದು? ಯಾವ ವಿಷಯವನ್ನು ಕೊಲ್ಲೋದು? ಯಾರನ್ನು ಮಟ್ಟಾ ಹಾಕೋದು? ಎಂದೆಲ್ಲಾ ಪ್ರಶ್ನೆಗಳು ತಾವೇತಾವಾಗಿ ಬಂದು ಹೋಗಿದ್ದಂತೂ ನಿಜ.

ರಾಜಕೀಯ ವಿದ್ಯಮಾನಗಳನ್ನು 'ಕಾಲಚಕ್ರ'ದಲ್ಲಿ ಬದಿಗಿಟ್ಟು, ಪ್ರಸ್ತುತ ವಿದ್ಯಮಾನಗಳಿಗೆ ಅಲ್ಲಲ್ಲಿ ಪ್ರತಿಕ್ರಿಯೆ ತೋರಿಸಿದ್ದನ್ನು ಬಿಟ್ಟರೆ ಇತ್ತೀಚಿನ ಲೇಖನಗಳಿಗೆ ಸ್ಪೂರ್ತಿ ದೊರೆತದ್ದು ಡಿಸೆಂಬರ್‌ನ ಭಾರತದ ಪ್ರಯಾಣದಿಂದಲೇ ಎಂದೇ ಹೇಳಬೇಕು. ಮೂರೂ ಮುಕ್ಕಾಲು ವರ್ಷಗಳ ನಂತರ ಭಾರತವನ್ನು ಹಲವಾರು ದೃಷ್ಟಿಕೋನಗಳಿಂದ ನೋಡಿ ಬೇಕಾಗಿಯೋ ಬೇಡವಾಗಿಯೋ ಹುಟ್ಟಿಬರುವ ಅದಮ್ಯ ಅನಿಸಿಕೆಗಳನ್ನು ಹಂಚಿಕೊಂಡಿದ್ದು ನಿಜವಾಗಿಯೂ ಹಲವಾರು ರೀತಿಯಲ್ಲಿ ನನ್ನನ್ನು ಬೆಳೆಸಿದೆ, ಚಿಂತಿಸುವಂತೆ ಮಾಡಿದೆ.

"ನೂರು ಬರಹ ದೊಡ್ಡ ವಿಷಯವೇನಲ್ಲ, ಆದರೂ ನನ್ನ ಮಟ್ಟಿಗೆ ಹೇಳೋದಾದರೆ ಒಂದು ಕಡೆ ಕನ್ನಡ ಟೈಪ್ ಮಾಡುವ ಅಥವಾ ಬರೆಯುವ ವ್ಯವಧಾನವಿರದೇ ಇರುವುದೂ ಮತ್ತೊಂದು ಕಡೆ ನನ್ನ ಪ್ರಚಂಡ ಮೈಗಳ್ಳತನವೂ ಇವುಗಳ ನಡುವೆ ನಾನು ಏನನ್ನಾದರೂ ಬರೆದಿದ್ದೇನೆಂದು ಹೇಳಿಕೊಳ್ಳೋದೇ ಒಂದು ಸಂಭ್ರಮ", ಅಂದು ಬರೆದ ವಿಷಯ ಇಂದಿಗೂ ಪ್ರಸ್ತುತ, ಹಾಗೂ ನನ್ನ ಮಟ್ಟಿಗೆ ಸಂತೋಷದ ವಿಷಯವೂ ಹೌದು.

ಜೊತೆಗೆ ಅಂದು ಬರೆದ ಸಾಲು - "ಇದುವರೆಗೆ ಬರೆದದ್ದನ್ನೆಲ್ಲ ನಾನು ಬರಿ ವಾರ್ಮ್‌ಅಪ್ ಎಂದುಕೊಳ್ಳೋದರಿಂದ ನಿಜವಾದ ಪಯಣ ಇದೀಗ ಆರಂಭವಾಗಿದೆ...ನೋಡೋಣ ಇದು ಎಲ್ಲಿಯವರೆಗೆ ಬರುತ್ತೋ ಎಂದು!" ಇಂದಿಗೂ ಪ್ರಸ್ತುತ - ಬರೆಯುವ ಹವ್ಯಾಸ ನನ್ನಲ್ಲಿ ಈಗಾಗಲೇ ಮೂಡಿಬಿಟ್ಟಿದೆ, ಇನ್ನು ಅದನ್ನು ಹೆಚ್ಚು ಎತ್ತರಕ್ಕೆ ಕೊಂಡೊಯ್ಯಬೇಕು, ಬರೆಯುವ ಪ್ರಕ್ರಿಯೆ ಓದುವುದನ್ನು ಬಿಟ್ಟು ಬಹಳ ದೂರವಿರಲಾರದಾದ್ದರಿಂದ ನನ್ನ ಓದುವಿಕೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು ಎಂಬುದು ಮಹದಾಸೆ.

'ಅಂತರಂಗ'ವನ್ನು ಓದಿ ಹಲವಾರು ವಿಷಯಗಳಲ್ಲಿ ಸಹಾಯ ಮಾಡಿದ, ಸಹಕರಿಸಿದ, ಅಲ್ಲಲ್ಲಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ ಪ್ರತಿಯೊಬ್ಬರಿಗೂ, 'ಅಂತರಂಗ'ವನ್ನು ತಮ್ಮ ಬ್ಲಾಗ್‌ಗಳಲ್ಲಿ ಲಿಂಕ್ ಕೊಟ್ಟುಕೊಂಡು ಉಳಿದವರಿಗೆ ಪರಿಚಯಿಸಿದ ಹಾಗೂ ದಿನಕ್ಕೊಮ್ಮೆ, ವಾರಕ್ಕೊಮ್ಮೆ ಬಂದು ಓದಿದವರಿಗೆಲ್ಲರಿಗೂ ನನ್ನ ನಮನಗಳು.

'ಅಂತರಂಗ' ಇನ್ನೂರನೇ ಲೇಖನವನ್ನು ಮುಟ್ಟುವ ಹೊತ್ತಿಗೆ ಮತ್ತೊಂದು ಮುಖ್ಯವಾದ ಸಂಗತಿಯನ್ನು ಅಲಕ್ಷ್ಯ ಮಾಡುವಂತಿಲ್ಲ - ಈ ಬ್ಲಾಗಿಗೆ ಹತ್ತು ಸಾವಿರ ವೀಕ್ಷಕರು (ನನ್ನದೇ ಹಿಟ್‌ಗಳನ್ನು ಹೊರತುಪಡಿಸಿ) ಬಂದು ಹೋದದ್ದೂ ನನ್ನ ಮಟ್ಟಿಗೆ ಸಂತೋಷದ ವಿಷಯವೇ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಸರಾಸರಿ ದಿನಕ್ಕೆ ಇಪ್ಪತ್ತು ವಿಸಿಟರ್‌ಗಳು ಬಂದು ತಲೆಗೆ ಎರಡೂವರೆ ನಿಮಿಷಗಳಂತೆ ಬ್ಲಾಗ್‌ ಅನ್ನು ನೋಡಿ, ಕಾಮೆಂಟ್ ಬಿಡುವುದರ ಮೂಲಕ, ಇಮೇಲ್ ಬರೆಯುವುದರ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು ಈ ರೀತಿಯ ಕನ್ನಡ ಬ್ಲಾಗಿಗೆ ದೊಡ್ಡ ವಿಷಯವೇ. 'ಅಂತರಂಗ'ದಲ್ಲಿ ಬರಹಗಳು ಉದ್ದವಾದವುಗಳು, ಒಂದು ಸ್ಕ್ರೀನ್‌ನಿಂದ ಮತ್ತೊಂದು ಸ್ಕ್ರೀನಿಗೆ ಸ್ಕ್ರೋಲ್ ಮಾಡಿಕೊಂಡು ಓದಬೇಕಾದವುಗಳು, ಹೆಚ್ಚಿನವು ಅಳುಮುಂಜಿ ಛಾಯೆಯವು, ಇನ್ನು ಕೆಲವು ವಿಚಿತ್ರ ಸಂವಾದ-ವಿಷಯಗಳನ್ನು ಹೊತ್ತುಕೊಂಡವುಗಳು. ಯಾವುದೇ ಲಾಜಿಕ್ಕಿಗೆ ನಿಲುಕದೇ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಟರ್ನ್‌ಪೈಕ್‌ನಲ್ಲಿ ಲೇನ್ ಬದಲಾಯಿಸಿದ ಹಾಗೆ ವೀವ್ ಮಾಡಿಕೊಂಡು ಹೋಗುವಂತಹ ಬರಹಗಳು. ಕೆಲವೊಂದು ಬರಹಗಳು ಲೈಟ್ ಆಗಿದ್ದರೂ ಇನ್ನು ಕೆಲವು ಗಂಭೀರವಾದವುಗಳೆಂದು ಎಷ್ಟೋ ಜನ ಫೋನ್‌ನಲ್ಲಿ ಹೇಳಿದರೂ ಸುಲಭವಾಗಿ ಕಾಮೆಂಟ್ ಬಿಡಲಾರದವುಗಳು.

Thanks to Google - 'ಕಾಲಚಕ್ರ'ವನ್ನು 'ಅಂತರಂಗ'ದ ಒಂದು ಭಾಗವನ್ನಾಗಿ ಮಾಡಿದ್ದಕ್ಕೆ! ಇನ್ನು 'ದಾರಿ-ದೀಪ' ನಾನೆಣಿಸಿದ ವೇಗದಲ್ಲಿ ಬೆಳೆಯದೇ ಇರೋದಕ್ಕೆ - ನನ್ನ ಸೋಮಾರಿತನಕ್ಕೆ ಧನ್ಯವಾದಗಳನ್ನು ಹೇಳಬೇಕು. ಉಳಿದವರೆಲ್ಲರ ಹಾಗೆ ನನ್ನ ಅನಿಸಿಕೆಗಳನ್ನು ಬರೀ ಬ್ಲಾಗ್ ಪ್ರಪಂಚಕ್ಕೆ ಮಾತ್ರ ಸೀಮಿತವಾಗಿರಿಸದೇ ಮುಂದೆ ಆನ್‌ಲೈನ್ ಹಾಗೂ ಪ್ರಿಂಟ್ ಮಾಧ್ಯಮಗಳಲ್ಲೂ ಬರೆಯಬೇಕು ಎನ್ನುವುದು ಮುಂದಿನ ದಿನಗಳ ಸವಾಲು. ನನ್ನ ಬರಹಗಳು ಹೀಗೇ ಮುಂದುವರೆಯುವುದು ಖಂಡಿತವಾದರೂ ಮನದಲ್ಲಿ ವಿಹರಿಸುವ ಎಲ್ಲ ವಿಷಯಗಳನ್ನು ದಾಖಲಿಸಿ ಹೀಗೇ ಮುಂದುವರೆಸಿಕೊಂಡು ಹೋಗುವ ಛಲ, ಹಂಬಲ ಹೀಗೇ ಉಳಿಯಲಿ ಹಾಗೂ ಮುಂದುವರೆಯಲಿ ಎಂಬುದಷ್ಟೇ ನನ್ನ ಬೇಡಿಕೆ.

ನಿಮ್ಮೆಲ್ಲರ ಹಾರೈಕೆ, ಆಶಿರ್ವಾದ, ಕುಟುಕು, ಚಿಂತನೆ, ಅನುಭವಗಳು ನನ್ನೊಡನೆ ಸದಾ ಹೀಗೇ ಇರಲಿ, ಇನ್ನಷ್ಟು ಕನ್ನಡವನ್ನು ಓದಿ ಬರೆಯುವ ಚೈತನ್ಯ, ಹುರುಪು ನನ್ನಲ್ಲಿ ಹುಟ್ಟಲಿ!

Thursday, April 26, 2007

ತತ್ವಗಳು (ಥೂ ಹಾಳಾದೋವು...!)

ಡಿಸೆಂಬರ್ ತಿಂಗಳ ಒಂದು ದಿನ...ನಾನಿರೋದು ಆನವಟ್ಟಿಯಲ್ಲಾದ್ದರಿಂದ ವಿಂಟರ್ ಕೋಟಿನ ಅಗತ್ಯವಿಲ್ಲದೆ ಒಂದು ಸೊಗಸಾದ ಮುಂಜಾನೆಯ ವಾಕ್‌ನಲ್ಲಿ ಸಮಯವನ್ನು ಯಾವುದೇ ಸಂಕೋಲೆಗಳಿಲ್ಲದೇ ನನ್ನಷ್ಟಕ್ಕೆ ನಾನೇ ಕಳೆಯುವ ಒಂದು ಸಂಚು ಮನದಲ್ಲಿ ಮೂಡಿದ್ದೇ ತಡ ತಕ್ಷಣ ಡಾಕರ್ ಜೀನ್ಸು ಹಾಗೂ ಒಂದು ಟಿ ಶರ್ಟ್ ಏರಿಸಿ, ಸ್ಕೀಕರ್ ತೊಟ್ಟು ಮನೆಯಿಂದ ಹೊರಟೆ - ದಿನನಿತ್ಯದ ರೂಢಿಯಂತೆ ಶರ್ಟ್ ಅನ್ನು ಟಕ್ ಇನ್ ಮಾಡಬೇಕೋ ಬೇಡವೋ ಎನ್ನುವ ಹಂತದಲ್ಲಿ ಒಂದು ಕ್ಷಣದ ವಿಳಂಬವನ್ನು ಹೊರತು ಪಡಿಸಿದರೆ ಮತ್ತೆಲ್ಲ ಸಹಜವಾಗಿತ್ತು ಎನ್ನಬಹುದು, ಹತ್ತು-ಇಪ್ಪತ್ತು ವರ್ಷಗಳ ಹಿನ್ನೆಲೆಯಲ್ಲಿ ನೋಡಿದಾಗ ಬಹಳಷ್ಟು ಬದಲಾಗಿರಬಹುದು, ಆದರೆ ಮುಂಜಾನೆಯ ತಾಳದ ಮಟ್ಟು ಮಾತ್ರ ಇವತ್ತಿಗೂ ಬೇರೆಯೇನಾಗಿರಲಿಲ್ಲ.

ಅವೇ ಧೂಳು ತುಂಬಿದ ರಸ್ತೆಗಳು, ಊರಿನ ಉದಾಸೀನತೆಯ ಪ್ರತೀಕವೆಂಬಂತೆ ಹೊರಗೆ ಬರಲೋ ಬೇಡವೋ ಎಂದು ಮೋಡಗಳ ಮರೆಯಲ್ಲಿ ಆಗಾಗ್ಗೆ ಇಣುಕಿ ನೋಡುತ್ತಿದ್ದ ಸೂರ್ಯ...ಅಮೇರಿಕೆಯಲ್ಲಿ ದಿನಬೆಳಗಾದರೆ ಪ್ರಖರವಾಗಿ ಹಾಗೂ ವೇಗವಾಗಿ ಕೆಲಸಕ್ಕೆ ಬಂದು ಹಾಜರಾಗುವ ಸೂರ್ಯನಿಗೆ ಆನವಟ್ಟಿಯಲ್ಲಿ ಎದ್ದೇಳುವಾಗ ಮೈಗಳ್ಳತನವೇಕೆ ಎಂದು ಒಮ್ಮೆ ಅನ್ನಿಸಿದ್ದು ನಿಜ.

ಸರಿ, ಹೊರಡೋದೆಲ್ಲಿಗೆ? ಎನ್ನುವ ಪ್ರಶ್ನೆ ಎಷ್ಟು ಮುಂದೆ ಹಾಕುತ್ತಾ ಹೋದೆನೋ ಅಷ್ಟು ಮನದಲ್ಲಿ ದಟ್ಟವಾಗುತ್ತಾ ಬೆಳೆಯುತ್ತಾ ಹೋಗಿ ಉತ್ತರಿಸದೇ ಇದ್ದರೆ ತಲೆ ನೂರು ಹೋಳಾದೀತು ಎನ್ನುವ ಬೇತಾಳನ ರೂಪ ತಾಳಿಕೊಂಡಿತು, ಅದಕ್ಕುತ್ತರವೆನ್ನುವಂತೆ ಕಾಲುಗಳು ನಾನೋದಿದ ಹೈ ಸ್ಕೂಲಿನ ಕಡೆಗೆ ಚಲಿಸತೊಡಗಿದವು.

ಅದೇ ಊರು, ಕೆಲವರ ಮನೆ ಮುಂದೆ ಹೆಂಗಳೆಯರು ಬೇಗನೆದ್ದು ಬಾಗಿಲು ಸಾರಿಸಿ ರಂಗೋಲಿ ಇಡುವ ಪದ್ಧತಿಯನ್ನು ಇನ್ನೂ ಉಳಿಸಿಕೊಂಡಿದೆ, ಕೆಲವರ ಮನೆಯಲ್ಲಿ ಚೂರು-ಪಾರು ಸದ್ದುಗದ್ದಲ, ಇನ್ನು ಕೆಲವರ ಮನೆಯಲ್ಲಿ ನಿದ್ರಾ ದೇವತೆಯ ಮಡಿಲಿನಲ್ಲಿ ಸಿಹಿಕನಸಿನಲ್ಲಿ ತೇಲುತ್ತಿರುವವರು ಒಂದಿಷ್ಟು ಜನರಿದ್ದಿರಬಹುದು, ಆದರೆ ಮುಂಜಾನೆಯ ಔಟ್‌ಲುಕ್‌ನಲ್ಲಿ ನಮ್ಮೂರಂತೂ ಬದಲಾವಣೆಯಾಗಿಲ್ಲ ಎಂದುಕೊಳ್ಳುತ್ತಿರುವಾಗ ದೂರದಲ್ಲಿ ಯಾರದೋ ಒಬ್ಬರ ಮೊಬೈಲ್‌ಫೋನ್ ಧ್ವನಿ ನನ್ನ ಇಂದ್ರಿಯಗಳನ್ನು ಒಡನೆ ಜಾಗರೂಕಗೊಳಿಸುವಂತಾಯಿತು. ನಮ್ಮೂರಿನಲ್ಲಿಯೂ ಮೊಬೈಲ್ ಫೋನ್, ಎಟಿಎಮ್‌ಗಳು ಕೆಲಸ ಮಾಡುತ್ತವೆಯೇ ಎನ್ನುವ ಪ್ರಶ್ನೆಗೆ very good! ಎನ್ನುವ ಉತ್ತರ ಒಂದು ರೀತಿಯ ಖುಷಿಯನ್ನು ಬೆನ್ನುಹುರಿಯಿಂದ ಮೇಲೆ ಕಳಿಸತೊಡಗಿತು, ಅಥವಾ ಆ ಕಂಪನ ಆಗಷ್ಟೇ ಬೀಸಿದ ತಂಗಾಳಿಯ ಕೊಡುಗೆಯಾಗಿದ್ದಿರಲೂಬಹುದು.

ರಸ್ತೆಯ ಬದಿಯಲ್ಲಿ ನೋಡಿದೆ, ನಾನು ಶಾಲೆಗೆ ಹೋಗುತ್ತಿದ್ದಾಗ ಇದ್ದ ಮನೆಗಳು ಇನ್ನೂ ಹಾಗೇ ಇವೆ, ಕೆಲವೊಂದಿಷ್ಟಕ್ಕೆ ಸುಣ್ಣಬಣ್ಣ ತಾಗಿದ್ದಿರಬಹುದು, ಅವರವರ ಮನೆಯಲ್ಲಿ ನಡೆದ ಮದುವೆಯೋ ಮುಂಜಿಯ ಪ್ರತೀಕವಾಗಿ ಎನ್ನುವುದನ್ನು ಬಿಟ್ಟರೆ ಮಿಕ್ಕೆಲ್ಲವೂ ಬೆಳಗ್ಗೆ ಎದ್ದು ಮುಖ ತೊಳೆಯದೇ ಇಡೀ ದಿನ ಜೊಲ್ಲಡರಿದ ಮುಸುಡಿಯಲ್ಲಿ ಇದ್ದ ರೋಗಿಷ್ಟರಂತೆ ಬಿದ್ದುಕೊಂಡಿದ್ದವು - absolutely no maintenance - ಛೇ ಎಂದು ನನ್ನಷ್ಟಕ್ಕೆ ನಾನು ಗಟ್ಟಿಯಾಗಿ ಹೇಳಿಕೊಂಡೆ.

ಸುಲಭ, ಬಹಳ ಸುಲಭ - ಇಲ್ಲೆಲ್ಲಾದರೂ ಒಂದಿಷ್ಟು ಜಮೀನು-ತೋಟವನ್ನು ತೆಗೆದುಕೊಳ್ಳೋದು, ಅದರ ಸಾಗುವಳಿ, ಕೃಷಿಯಲ್ಲಿ ಬದುಕನ್ನು ಸವೆಸೋದು, ಬಂದ ಲಾಭಾಂಶದಲ್ಲಿ ಹಾಗೂ ಇದ್ದಿರೋ ಇಡುಗಂಟಿನಲ್ಲಿ ಜೀವನವನ್ನು ತಳ್ಳೋದು ಎಂದು ಸರಳವಾಗಿ ಒಂದೇ ಸಾಲಿನಲ್ಲಿ ಬದುಕಿನ ಕಥೆಯನ್ನು ಬರೆಯಬಲ್ಲ ನನಗೆ ಆ ಸುಂದರವಾದ ಮುಂಜಾನೆಯ ನಡಿಗೆ, ನಮ್ಮೂರಿನ ನಿರ್ಜೀವ ರಸ್ತೆಗಳ ಪಕ್ಕದಲ್ಲಿ ತೊಪ್ಪೆಗಳಂತೆ ಬಿದ್ದುಕೊಂಡಿರುವ ಮನೆಗಳು, ಅವುಗಳಲ್ಲಿ ಜೀವಂತವಾಗಿಯೋ ಅಥವಾ ನಿದ್ರೆಯಲ್ಲಿಯೋ (what difference does it make?) ತಮ್ಮದೇ ಲೋಕದಲ್ಲಿ ಪವಡಿಸಿದ ಜನರು, ಒಂದು ಕಾಲದಲ್ಲಿ ಕಾಡು, ಜೀವನಾಡಿ, ಸಹಜವಾಗಿ ಬೆಳೆದ ಶ್ರೀ ಗಂಧದ ಮರಗಳನ್ನು ರಾತ್ರೋ ರಾತ್ರಿ ಸಾಗಿಸಿ ಕಾಸುಮಾಡಿಕೊಂಡ ತಾಯ್ ಗಂಡರು, ಅನಾವಶ್ಯಕವಾಗಿ ಹಾರ್ನ್ ಬಾರಿಸಿಕೊಂಡು ಹೊಂಡ ತುಂಬಿದ ರಸ್ತೆಗಳಲ್ಲಿ ವೇಗವಾಗಿ (ಅದೂ ಘಂಟೆಗೆ ನಲವತ್ತು ಐವತ್ತು ಕಿಲೋ ಮೀಟರ್) ಧೂಳೆಬ್ಬಿಸಿ ಕುಲುಕುತ್ತಾ ಸಾಗುವ ತಗಡು ಬಸ್ಸುಗಳು, ಇನ್ನೂ ಏನೇನೋ ಇಲ್ಲಿ ಬರೆಯಲಾಗದವೆಲ್ಲ ನೆನಪಿಗೆ ಬಂದಿದ್ದೇ ತಡ ಕ್ಯಾಕ್ ಥೂ ಎಂದು ಕ್ಯಾಕರಿಸಿ ನಾನು ರಸ್ತೆಯ ಬದಿಗೆ ಉಗಿಯುವಂತಾಯಿತು.

Of course, ನಾನು ವೇಗವಾಗೇ ನಡೆಯೋದು ಎಲ್ಲಿ ಹೊರಟರೂ, ಆದರೆ ಇವತ್ತೇಕೆ ಆ ವೇಗ ಎಂದು ಪ್ರಶ್ನೆ ಹುಟ್ಟಿದ್ದೇ ತಡ ಕಾಲುಗಳು ನಿಧಾನವಾಗಿ ಹೋದವು, ತಲೆ ಇನ್ನೂ ಅದರ ವೇಗದಲ್ಲೇ ಬಂದ ಆಹಾರವನ್ನೆಲ್ಲ ಜೀರ್ಣಿಸಿಕೊಳ್ಳತೊಡಗಿತ್ತು.

ನಾನು ಹುಟ್ಟಿದ ಊರು ಯಾರಿಗೂ ಬೇಡ - ನನ್ನ ಹೆತ್ತವರು ಇನ್ನಷ್ಟು ದಿನ ಅಲ್ಲಿ ಇರೋದಿಲ್ಲ, ನನ್ನ ಒಡಹುಟ್ಟಿದವರು ಈಗಾಗಲೇ ಎಲ್ಲೆಲ್ಲೋ ತಮ್ಮನ್ನು ಕಳೆದುಕೊಂಡಿದ್ದಿರಬಹುದು, ನನಗೆ ಬೇಕಾದವರಿಗೆ ನಮ್ಮೂರಿನಲ್ಲಿ ನೆಲೆಸಬಹುದಾದ ಯಾವ ಅಸ್ಥೆಯೂ ಇಲ್ಲ, ಬರೀ ನನಗೊಬ್ಬನಿಗೇ ಆ ಮೋಹ, ಅದೆಲ್ಲಿಂದ ಹುಟ್ಟಿಕೊಳ್ಳುತ್ತೋ ಆ ರಾಗ ಯಾರಿಗೆ ಗೊತ್ತು?

ದೂರದಲ್ಲೆಲ್ಲೋ ಒಂದು ಕರಿನಾಯಿ ಬೊಗಳಿಕೊಂಡು ಓಡಿ ಬರತೊಡಗುತ್ತೆ, ಅದು ನನ್ನನ್ನು ಸಮೀಪಿಸುತ್ತಿರುವಂತೆ ಕಾಣಿಸುತ್ತೆ, ಬೀದಿನಾಯಿಯ ರಂಪಕ್ಕೆ ಹೆದರಿ ಓಡಿಹೋದರೆ ಏನಾಗಬಹುದೆಂಬ ಕಲ್ಪನೆ ನನಗಿರೋದರಿಂದ ನನ್ನ ಮನದ ಉಲ್ಬಣಗಳನ್ನು ಇದ್ದರೂ ಇರದಿದ್ದ ಹಾಗೆ ಮುಚ್ಚಿ ನನ್ನ ನಡಿಗೆಯನ್ನು ಹಾಗೆ ಮುಂದುವರಿಸುತ್ತೇನೆ, ನಾನು ಅರೆಕ್ಷಣದಲ್ಲಿ ಒಂದೇ ಕಾಲಿಗೆ ಬುದ್ಧಿಹೇಳಬಹುದು ಅಥವಾ ನಾಯಿಯನ್ನು ಝಾಡಿಸಿ ಒದೆಯಬಹುದು ಎನ್ನುವ ತತ್ವವನ್ನು ದೂರದಲ್ಲಿ ಹೊಂಚಿಹಾಕುತ್ತೇನೆ. 'ಇವನೂ ನಮ್ಮವರೊಳಗಿನವ...' ಎಂದು ನಾಯಿ ಹತ್ತಿರ ಬಂದಂತೆ ಮಾಡಿ ಹಾಗೇ ದೂರ ಹೋಗತೊಡಗುತ್ತದೆ, ನಾನು ಅದ್ಯಾವುದೋ ಕಾರಣಕ್ಕೆ ಎದೆಯ ಮೇಲೆ ಕೈ ಇಟ್ಟರೆ ಒಳಗಿಂದ ಕುಟ್, ಕುಟ್ ಶಬ್ದ ಕೇಳಿ ಆಶ್ಚರ್ಯವಾಗುತ್ತದೆ, ಅದರ ಹಿಂದೆ ತುಟಿಗಳನ್ನು ಬೇರ್ಪಡಿಸಲಾಗದ ಒಂದು ನಗೆ ಹುಟ್ಟಿ ಹಾಗೇ ಮಾಯವಾಗುತ್ತದೆ.

ಒಂದೆರಡು ಕಿಲೋಮೀಟರುಗಳನ್ನು ನಡೆದು ಹಿಂದಕ್ಕೆ ಬರುವಾಗ ಒಂದು ಮಾತ್ರ ಪಕ್ಕವಾಗುತ್ತದೆ - ಇಲ್ಲಿ ಮನೆಯನ್ನು ಕಟ್ಟಲಾರೆ, ನಾನಿರಲಾರೆ - ನಮ್ಮವರಿಲ್ಲದಿದ್ದ ಮೇಲೆ ನಾನೊಬ್ಬನೇಕೆ ಇಲ್ಲಿರಲಿ? ಯಾವ ರಾಗದ ಮೋಡಿಗೋ ಸಿಲುಕಿ ಪಡುವಾರಳ್ಳಿ ಪಾಂಡವರು ಸಿನಿಮಾದ 'ಜನ್ಮ ನೀಡಿದ ಈ ಮಣ್ಣನು ನಾ ಹೇಗೆ ತಾನೆ ತೊರೆಯಲಿ' ಹಾಡು ಕೇವಲ ಶಿಳ್ಳೆಯ (whistle) ರೂಪದಲ್ಲಿ ಮಾತ್ರ ಹೊರಗೆ ಬಂದು ಸ್ವಲ್ಪ ಹಿಂದಷ್ಟೇ ಬೇರ್ಪಡದೇ ನಕ್ಕ ತುಟಿಗಳ ಮಧ್ಯದ ಸಣ್ಣ ರಂಧ್ರದಿಂದ ಬಿಸಿಯ ಹವೆಯಾಗಿ ಹೊರಗೆ ಸೇರಿಹೋಗುತ್ತದೆ, ಅದರ ಹಿಂದಿನ ಧ್ವನಿ ನನ್ನೊಳಗೇ ಉಳಿದುಹೋಗುತ್ತದೆ.

ಮನೆ ಬಾಗಿಲನ್ನು ಹೊಕ್ಕುತ್ತಿದ್ದಂತೆ 'ಏನೋ ಎಲ್ಲಿ ಹೋಗಿದ್ಯೋ?' ಎನ್ನುವ ನಮ್ಮ ಮನೆಯವರಿಗೆ ಯಾವುದೇ ಉತ್ತರ ಕೊಡಲು ಅಸಹಾಯಕನಾಗಿ ಹೋಗುತ್ತೇನೆ, ಹೌದು, ಈ ಬಾರಿ ಇಲ್ಲಿಯವರೆಗೆ ನಾನು ಎಲ್ಲಿ ಹೋಗಿದ್ದೆ ಎನ್ನುವುದನ್ನು ಹೇಗೆ ಹೇಳಲಿ? (ಅಮೇರಿಕೆಯಲ್ಲಿನ ಟ್ರೆಡ್‌ಮಿಲ್ಲೇ ಎಷ್ಟೋ ವಾಸಿ, ಎಷ್ಟು ಮೈಲಿ ನಡೆದರೂ ನಾನೆಲ್ಲಿಗೂ ಹೋಗೋದಿಲ್ಲ, ಹಾಗೆ ಯಾರು ಪ್ರಶ್ನೆಯನ್ನೂ ಕೇಳೋದಿಲ್ಲ!)

***
'ಈ ಹಾಳಾದ್ ಬೆಂಗಳೂರಿನಲ್ಲಿ ಬದುಕೋಕ್ ಆಗೋದಿಲ್ಲಪಾ, ಎಷ್ಟು ದುಡ್ಡಿದ್ದರೂ ಸಾಕಾಗೋದಿಲ್ಲ ಈ ಊರ್ನಲ್ಲಿ' ಎಂದು ನಾನೊಬ್ಬನೇ ಅಲ್ಲ, ಬೇಕಾದಷ್ಟು ಜನ ಹೇಳ್ತಾರೆ ಅನ್ನೋದು ನನಗೆ ಚೆನ್ನಾಗಿ ಗೊತ್ತು. ನನ್ನ ಇಮಿಗ್ರೇಷನ್ ಲಾಯರ್ರು, ಪೈನಾನ್ಷಿಯಲ್ ಅಡ್ವೈಸರ್ರು ಇಬ್ರೂ 'ಇನ್ನೇನು ೨೦೦೭ ಬಂತಲ್ಲಾ, ಅಮೇರಿಕದ ಸಿಟಿಜನ್ ಆಗಿಬಿಡು!' ಅಂತ ಸಲೀಸಾಗಿ ಹೇಳ್ತಾ ಇರ್ತಾರೆ...ಈಗಾಗ್ಲೇ ಅಮೇರಿಕದಲ್ಲಿ ಪರಕೀಯನಾಗಿದ್ದೀನಿ, ಇನ್ನು ನನ್ನ ಪೂರ್ಣ ಐಡೆಂಟಿಟಿಯನ್ನು ಕಳೆದುಕೊಂಡು "ನಮ್ಮ" ದೇಶದಲ್ಲಿ ಪರದೇಶಿಯಾಗಿ ಹೋಗಲೇ? ಎಂದು ಮನಸ್ಸು ಮಮ್ಮಲಮರುಗತೊಡಗುತ್ತೆ. ಎಷ್ಟೋ ಜನ ಇಲ್ಲಿ ಬಂದು ದಶಕಗಟ್ಟಲೆ ಇದ್ದೋರು ಖುಷಿಯಾಗಿ ವಾಪ್ಸು ಹೋಗಿ ನೆಲೆಸ್ತಾ ಇಲ್ಲವೇ? ಅನ್ನೋ ಪ್ರಶ್ನೆ ಬೆನ್ನ ಹಿಂದೆ ಬರುತ್ತೆ, ಅವರೆಲ್ಲ ಎಲ್ಲಿಂದ ಎಲ್ಲಿಗ್ ಹೋಗ್ತಾರೋ? ಆದ್ರೆ ನಾನೆಲ್ಲಿಗೆ ಹೋಗ್ಲಿ?

***

ಎಲ್ಲೂ ನೆಲೆ ನಿಲ್ಲಬಾರ್ದು ಅಂತ ಅಂದ್‌ಕೊಂಡು ಬದುಕೋಕ್ ಆಗೋದಿಲ್ಲ, ಹಾಗೇ ದಿನ ಬಿಟ್ಟು ದಿನ ಬರೋ ಕಮಿಟ್‌ಮೆಂಟ್‌ಗಳೆಲ್ಲ ಒಂದು ರೀತಿ ಕಂಪದ ಭೂಮಿಯಲ್ಲಿ ನಾವ್ ಮಾಡೋ ಒದ್ದಾಟವಷ್ಟೇ, ಏನ್ ಹಾರಾಡಿದ್ರೂ ಹುದುಗಿಕೊಳ್ಳೋ ಆಳ ಕಡಿಮೆ ಏನ್ ಆಗೋದಿಲ್ಲ. ನಾಳಿನ ನಾಳೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿ ಎಂದು ಇಂದಿನ ಇಂದನ್ನು ಕಡೆಗಣಿಸಿಯೋ ಅಥವಾ ಹೆಚ್ಚು ಬೆಲೆಕೊಡದೆಯೋ ಬದುಕೋದೊಂದು ತತ್ವ, ಇಂದಿನ ಇಂದೇ ದೊಡ್ದು, ನಾಳಿನ ನಾಳೆಗಳನ್ನು ನೋಡ್‌ಕೊಳ್ಳೋಣ ಎನ್ನೋದು ಇನ್ನೊಂದು ತತ್ವಾ. ದಿನದ ಎಂಟು-ಹತ್ತು ಘಂಟೆ ಮ್ಯಾನೇಜ್‌ಮೆಂಟಿನ ಪ್ರಾಸೆಸ್ಸುಗಳು, ಮಾಡೋ ಪ್ರಾಜೆಕ್ಟುಗಳು, ದಿನಚರಿ-ಸ್ಕೆಡ್ಯೂಲರ್‌ಗಳು ಒಂದು ರೀತಿ ಜೀವಾ ತಿಂತಾವೆ; ಮನೆಗೆ ಬಂದು ಕನ್ನಡದ ತಿಳಿಸಾರು-ಅನ್ನ-ಹುಳಿ-ಮೊಸರು-ಉಪ್ಪಿನಕಾಯಿ-ಹಪ್ಪಳದ ಬದುಕು (ಜೊತೆಯಲ್ಲಿ ಬ್ರೆಡ್ಡೂ, ಕಾರ್ನ್‌ಪ್ಲೇಕ್ಸೂ ಸೇರಿ) ಮತ್ತೊಂದು ರೀತಿ ಜೀವ(ನ)ವನ್ನ ಪೋಷಿಸ್ತಾವೆ. 'ಎಲ್ಲೂ ನಿಲ್ ಬೇಡ, ಮನೆ ಕಟ್ ಬೇಡ, ಅನಿಕೇತನವಾಗಿರೂ...' ಅನ್ನೋದ್ ಒಂದು ತತ್ವ; ಸೊಗಸಾಗ್ ಬದುಕ್‌ಬೇಕು, ಎಲ್ಲ ಐಶಾರಾಮ ಇರಬೇಕು (ಕಂಡಿದ್ದೆಲ್ಲ ಬೇಕು ಕುಂಡೇ ಭಟ್ಟನಿಗೆ ಅಂತಾರಲ್ಲ ಹಾಗೆ), ಚೆನ್ನಾಗ್ ದುಡ್ ಮಾಡ್‌ಬೇಕು ಅನ್ನೋದ್ ಮತ್ತೊಂದ್ ತತ್ವಾ. ಆನವಟ್ಟಿಯ ಮುಂಜಾನೆಯಲ್ಲಿ ದಿಢೀರನೆ ಬಂದು ಎದೆಬಡಿತವನ್ನು ಹೆಚ್ಚಿಸೋ ಕಪ್ಪು ನಾಯಿಗಳು ಎಲ್ಲಿ ಹೋದರಲ್ಲಿ ಒಂದಲ್ಲ ಒಂದ್ ಅವತಾರವನ್ನು ತಾಳಿಕೊಂಡು ಬಂದೇ ಬರ್ತಾವೆ, ಅಂತೋವ್ ಬಂದ್ರೂ ಧೃತಿಗೆಡದೆ ಏನೂ ಆಗದೇ ಇರೋಹಂಗೆ ಸಹಜತೆಗೆ ಸನ್ನಿಹಿತವಾಗಿ ಬದುಕು ಸಾಗ್ಸೋದೇ ಒಂದು ದೊಡ್ಡ ಸವಾಲು.

ಅಮೇರಿಕ ಬೇಡ, ಆನ್ವಟ್ಟಿ ಬೇಡ, ಯಾವೂರೂ ಬೇಡಾ ಅನ್ನೋ ಸ್ಥಿತಿಗೆ ನಾನ್ ಬರಬೇಕು ಅಂದ್ರೆ ಇನ್ನೊಂದು ಮಿಲಿಯನ್ (ಹತ್ತು ಲಕ್ಷ) ಜನ್ಮ ಎತ್ತಿ ಬರಬೇಕು ಅಂತ ಈಗಾಗ್ಲೇ ಖಾತ್ರಿ ಆಗಿ ಹೋಗಿರೋದ್ರಿಂದ್ಲೇ ಧ್ಯಾನಾ-ಪಾನಕ್ಕೆಲ್ಲ ಗುಡ್‌ಬೈ ಹೇಳಿ ಬಾಳಾ ವರ್ಷಗಳಾಗಿ ಹೋಯ್ತು! (ಕಣ್ ಮುಚ್‌ಗಂಡ್ ಕೂತ್ರೂ ಒಂದರ ಮೇಲೊಂದಾಗಿ ಬರೋ ಯೋಚ್ನೆಗಳನ್ನ ಓಡ್ಸೋದಕ್ಕೆ ಏನೂ ಮಾಡ್ದೇ ಸುಮ್ನೇ ಕೂತಿರೋದು ಅಂದ್ರೆ?!)

***

I think, life has to move on, whether or not, one knows where it is heading, or what difference does it make?

Saturday, April 21, 2007

...May be onboard!

ಹೀಗೇ ಶುಕ್ರವಾರ ಸಂಜೆ ಬೇಗ ಕೆಲಸ ಮುಗಿಯಿತೆಂದು ಏನೋ ಕಡಿದು ಹಾಕುವುದು ಬಿದ್ದಿದೆಯೆಂದುಕೊಂಡು ಬಂದರೆ ಮನೆಯಲ್ಲಿ ಸುಬ್ಬ ಬೋರಲಾಗಿ ಬಿದ್ದುಕೊಂಡಿದ್ದ, ಗೊರಕೆ ಹೊಡೆಯುತ್ತಿದ್ದಾನೇನೋ ಎನ್ನುವ ಸಂಶಯ ಬಂದಿತಾದರೂ ನಾನು ಬಾಗಿಲು ತೆಗೆದ ಸದ್ದಿನಿಂದ ಅವನು ಏದ್ದೇಳುವ ಗಡಿಬಿಡಿಯನ್ನು ತೋರಿದ್ದರಿಂದಾಗಿ ಅವನ ಅವಸ್ಥೆಯನ್ನು ನೋಡಿ ನಗು ಹುಟ್ಟಿತು, ನಿದ್ರೆಯಿಂದ ಎದ್ದೇಳುವಾಗಲೂ ಅದೆಂಥ ಗಡಿಬಿಡಿ ಎಂದು ಸೋಜಿಗವಾಯಿತು. ಅವನ ಪ್ರಶ್ನಾರ್ಥಕ ಮುಖವನ್ನು ನೋಡಿ ನಾನೇ ಮಾತಿಗೆ ತೊಡಗಿದೆ...

'ಗುಡ್ ಇವನಿಂಗ್. ಏನೋ ಸಕತ್ತಾಗಿ ಮಲಗಿದ ಹಾಗಿತ್ತು!'

'ಏನಿಲ್ಲಪ್ಪಾ, ಸುಮ್ನೇ ಹೀಗೇ ಮಲಗಿದೆ ನೋಡು, ಅದೆಲ್ಲಿಂದ ನಿದ್ದೆ ಬಂತೋ ಯಾರಿಗೆ ಗೊತ್ತು?' ಎಂದು ಆಕಳಿಸಿಕೊಂಡು ನನಗೆ ಒಂದೂ ತಿಳಿಯದ ಹಾಗೆ ಮತ್ತಿನ್ನೇನೋ ಅಂದ.

'ಬೇಗ ಮುಖ ತೊಳಿಯೋ, ಹೀಗೇ ಎಲ್ಲಾದ್ರೂ ಹೋಗಿ ಬರೋಣ' ಎಂದು ಬಲವಂತ ಮಾಡಿದ್ದಕ್ಕೆ ಹಾಸಿಗೆಯಿಂದೆದ್ದು ಬೆಡ್‌ಶೀಟ್ ಮಡಚುವ ಲಕ್ಷಣವನ್ನು ತೋರತೊಡಗಿದ...ನಾನೂ ಬಟ್ಟೆ ಬದಲಾಯಿಸಿ ಮುಖ ತೊಳೆಯಲು ನಡೆದೆ.

ಒಂದಿಷ್ಟು ಕಾಫಿ ಕುಡಿಸಿ ಹೊರೆಡಿಸಿದ್ದನಾದರೂ ಸುಬ್ಬ ಇನ್ನೂ ನಿದ್ರೆಯ ಗುಂಗಿನಲ್ಲೇ ಇದ್ದ ಹಾಗಿತ್ತು, ತಾನೇ ತಾನಾಗಿ ಯಾವುದೇ ಮಾತನ್ನು ಆಡಬಾರದು ಎಮ್ಬ ಪ್ರತಿಜ್ಞೆಯನ್ನು ಮಾಡಿದ ಹಾಗಿತ್ತು, ನಾನೂ ಸ್ವಲ್ಪ ಹೊತ್ತು ಸುಮ್ಮನೆ ಇದ್ದೆನಾದರೂ ಅಲ್ಲಲ್ಲಿ ಮಾತನಾಡಿಸಿದ್ದಕ್ಕೆ ಒಂದೆರಡು ಪದಗಳಲ್ಲೇ ಉತ್ತರ ಕೊಡಲು ಶುರುಮಾಡಿದ್ದನ್ನು ನೋಡಿ ಸದ್ಯ ಎಂದು ಕೊಂಡೆ. ಸಂಜೆ ಕತ್ತಲು ಚುಮುಚುಮ ಬೀಳುತ್ತಿತ್ತು. ಏಪ್ರಿಲ್ ತಿಂಗಳಾದರೂ ಹವೆ ಅಷ್ಟೊಂದು ಬೆಚ್ಚಗೇನೂ ಇರಲಿಲ್ಲ, ಗಾಳಿ ಬೀಸಿದಾಗ ಸ್ವಲ್ಪ ಚಳಿ ಆಗುತ್ತಿತ್ತು ಎನ್ನುವುದನ್ನು ಬಿಟ್ಟರೆ ಒಂದು ಸ್ವೆಟರ್ ಹಾಕಿಕೊಂಡು ಓಡಾಡಬಹುದಾದ ವಾತವಾರಣವಿತ್ತು.

ನಾನು ಯಾವುದೋ ಗುಂಗಿನಲ್ಲಿ ಕಾರನ್ನು ಓಡಿಸುತ್ತಿದ್ದೆ, ಸುಬ್ಬ ಎದುರಿನ ಕಾರನ್ನು ತೋರಿಸಿ 'ಕೆಲವು ಕಾರುಗಳ ಹಿಂದಿನ ಗಾಜಿಗೆ Baby On Board ಅಂತ ಬೋರ್ಡ್ ಹಾಕಿಕೊಂಡಿರುತ್ತಾರಲ್ಲ, ಏನದರ ಮರ್ಮ!?' ಎಂದು ಈಗಷ್ಟೇ ತಪ್ಪಸ್ಸನ್ನು ಮುಗಿಸಿ ಮೇಲೆದ್ದ ಋಷಿಯ ಧ್ವನಿಯಲ್ಲಿ ಪ್ರಶ್ನೆ ಕೇಳಿದ, ನನ್ನ ಉತ್ತರಕ್ಕೆ ಕಾಯದೇ ಹಾಗೇ ಮುಂದುವರೆಸಿ, 'ಅಂದ್ರೆ ಅದನ್ನ ಓದಿ ಹಿಂದಿನ ಡ್ರೈವರುಗಳು are they expected do anything different?' ಎಂದ.

'ಹಾಗೇನಿಲ್ಲ, ಅವರು ಸುಮ್ನೆ ನಮ್ಮ ಕಾರಿನಲ್ಲಿ ಮಗುವಿದೆ ಎಂದು ಸೈನ್ ಹಾಕಿಕೊಂಡು ಹಿಂದೆ ಯಾರಾದ್ರೂ ರ್ಯಾಷ್ ಆಗಿ ಡ್ರೈವ್ ಮಾಡೋರು ಇದ್ರೆ ಅವರಿಗೆ ಒಂದ್ ರೀತಿ ಮುನ್ಸೂಚನೆ ಕೊಡೋ ಹಾಗೆ...' ಎನ್ನುವಾಗ ಮಧ್ಯೆ ತಡೆದು 'ಸದ್ಯ, ಆ ರೀತಿ ಬೋರ್ಡ್ ಹಾಕ್ಕೊಂಡ್ರೆ ಅವರಿಗೇನು ಸ್ಪೆಷಲ್ ಪ್ರಿವಿಲೇಜ್ ಬರಲ್ವಲ್ಲಾ ಅಷ್ಟು ಸಾಕು, ಅದಿರ್ಲಿ ಕಾರಿನಲ್ಲಿ ಮಗುವಿದ್ರೆ ನಿಧಾನವಾಗಿ ಹೋಗಬೇಕು ಅಂತಾ ರೂಲ್ಸ್ ಏನಾದ್ರೂ ಇದೆಯಾ?'

'ಇಲ್ಲಪ್ಪಾ ಮಗು ಇಟ್‌ಕೊಂಡೂ ಸರಿಯಾದ ಸ್ಪೀಡ್‌ನಲ್ಲೇ ಹೋಗ್‌ಬಹುದು'.

'ಈ ವಮ್ಮಾ ಡ್ರೈವ್ ಮಾಡೋದ್ ನೋಡಿದ್ರೆ Baby On Board ಅನ್ನೋದರ ಬದಲಿಗೆ May Be On Board ಅಂತ ಬೋರ್ಡ್ ಹಾಕ್ಕೊಂಡ್ರೆ ಎಷ್ಟೋ ಚೆನ್ನಾಗಿರುತ್ತೆ ನೋಡು, ಅದ್ ಸರಿ, ನೀನ್ಯಾಕೆ ಇಂಥಾ ವಾಹನಗಳ ಹಿಂಬದಿಯನ್ನ ಮೂಸಿಕೊಂಡು ಹೋಗೋದು ಅಂತ ಗೊತ್ತಾಗ್ಲಿಲ್ಲ' ಎಂದು ನಕ್ಕ ಮುಸುಡಿ ಮಾಡಿಕೊಂಡ.

'ಏನೋ ನೀನು ಪ್ರಶ್ನೆ ಕೇಳ್ತಿದ್ದಿ ಅಂತ ಆ ವಾಹನದ ಹಿಂದೆ ಹೊರಟೆನಪ್ಪಾ...ಅಮೇರಿಕದ ನೀರು ಕುಡಿದು ಇನ್ನೂ ತಿಂಗಳೂ ಆಗ್ಲಿಲ್ಲ, ಆಗ್ಲೇ ರೆಸ್ಟ್‌ಲೆಸ್ ಆಗ್ತಿದಿಯಲ್ಲಾ, ಬೆಂಗ್ಳೂರ್ ಪಂಗ್ಳೂರ್‌ನ್ಯಾಗೆ ಮುಚ್‌ಕೊಂಡು ರಸ್ತೆ ಮೇಲೆ ಘಂಟೆಗೆ ಐದು ಮೈಲಿ ವೇಗದಲ್ಲಿ ಓಡುಸ್ತೀಯಲ್ಲಾ ಅದಕ್ಕೇನ್ ಹೇಳ್ಬೇಕು?' ಎಂದು ಲೇನ್ ಬದಲಾಯಿಸಿದೆ.

'ನಮ್ಮೂರ್‌ಗಳಲ್ಲೆಲ್ಲೂ ಇಷ್ಟಿಷ್ಟೇ ಸ್ಪೀಡ್ ಹೊಡೀರಿ ಅಂತ ಕಾನೂನ್ ಏನೂ ಇರಲ್ಲಾ, ನಾವು ಕಂಡೀಷನ್ನ್ ಹೆಂಗಿರುತ್ತೋ ಅದಕ್ಕೆ ತಕ್ಕಂತೆ ಸ್ವಾಭಾವಿಕವಾಗಿ ಸ್ಪೀಡ್ ಹೊಡೀತೀವಿ...ಇಷ್ಟು ಸ್ಫೀಡ್‌ನಲ್ಲಿ ಹೊಡೆಯೋ ಅಂತ ನಮಿಗ್ಯಾವನೂ ಹೇಳೋದಿಲ್ಲ, ಇಲ್ಲಿ ಥರಾ. ನಮ್ ರಸ್ತೆ ನಮ್ಮೂರು ಹೆಂಗ್ ಬೇಕಾದಂಗೆ ಹೊಡಕಂತೀವಿ!'

'ಅಲ್ಲೆಲ್ಲಿ ಸ್ಪೀಡ್ ಹೊಡಿತಿ ಬಿಡು, ಆ ಕಾರುಗಳು, ಆ ರಸ್ತೆಗಳು, ಅಲ್ಲಿ ಜನಾ ಎಲ್ಲಾ ಒಂದೇ ಥರಾ ಇರ್ತಾರ್ ನೋಡು, ಅವರಿಗೆ ಅಲ್ಲಿಂದಲ್ಲಿಗೆ ಸಕತ್ತಾಗಿ ಮ್ಯಾಚ್ ಆಗುತ್ತೆ, ಅವರೊಳಗೆ ನೀನೂ ಒಬ್ಬ!' ಸ್ವಲ್ಪ ಸಿಟ್ಟು ಬರಲಿ ಎಂದು ಬೇಕಂತೆಯೇ ಕಿಚಾಯಿಸಿದೆ.

'ಗುರುವೇ, ಅಮೇರಿಕನ್ ನೀರು ಕುಡಿದಾಕ್ಷಣ ನೀನು ಬದಲಾಗಿ ಹೋದೆ ಎಂದು ನಿನಗೆ ಸರ್ಟಿಫಿಕೇಟ್ ಕೊಟ್ಟೋರ್ ಯಾರು?' ಎಂದು ನಾಟಕೀಯ ಶೈಲಿಯಲ್ಲಿ ಜಗ್ಗೇಶ್ ಪೋಸ್ ಕೊಟ್ಟು ಕೇಳಿದ, ನಾನು ಸುಮ್ಮನೇ ಇದ್ದು, ಟ್ರಾಫಿಕ್ ಮೇಲೆ ಗಮನ ಕೊಡೋನ ಹಾಗೆ ಮುಖ ಮಾಡಿಕೊಂಡಿದ್ದರೂ ಮುಂದುವರೆಸಿ 'ಜರ್ಸೀ ಸಿಟಿಯ ಇಂಡಿಯಾ ಬಜಾರ್‌ಗೆ ಕರಕೊಂಡ್ ಹೋಗು ತೋರುಸ್ತೀನಿ ಅಮೇರಿಕನ್ ನೀರು ಕುಡಿದ ಪ್ರಜ್ಞಾವಂತರು ಮಾಡೋ ಕೆಲ್ಸಾನಾ!' ಎಂದು ಓಪನ್ ಸವಾಲನ್ನು ಎಸೆದುಬಿಡೋದೆ...ನನಗಂತೂ ಸುಮ್ಮನಿದ್ದರೆ ಒಪ್ಪಿಕೊಂಡಂತೆ ಆರ್ಗ್ಯೂ ಮಾಡಿದ್ರೆ ಬೆಂಕಿಗೆ ತುಪ್ಪಾ ಸುರಿದಂತೆ ಎನ್ನಿಸಿ ಏನು ಮಾಡುವುದಕ್ಕೂ ತೋಚಲಿಲ್ಲ, ಒಂದು ಕ್ಷಣ.

ಸ್ವಲ್ಪ ತಡವರಿಸಿ ಹೇಳಿದೆ, 'May be onboard..., ಅನ್ನೋ ಕಾಮೆಂಟ್ ಹೊಡೆದೋನು ನೀನು, ಡ್ರೈವಿಂಗ್ ಅನ್ನೋದು ಪ್ರಿವಿಲೇಜೇ ಹೊರತೂ ಅದು ನಿನ್ನ ಹಕ್ಕಲ್ಲ. ನಿನಗ್ಯಾವ ಎಮರ್ಜೆನ್ಸಿ, ಅರ್ಜೆಂಟ್ ಕೆಲ್ಸಾ ಇಲ್ಲದ ಮೇಲೂ ಇನ್ನುಳಿದ ಡ್ರೈವರ್‌ಗಳು ಸ್ಪೀಡ್ ಆಗಿ ಹೋಗ್ಬೇಕು ಅಂತ ಡಿಮ್ಯಾಂಡ್ ಮಾಡೋ ನೀನು, ಇಷ್ಟೊಂದು ಸ್ಪೀಡ್ ಆಗಿ ಎಲ್ಲೆಲ್ಲೋ ಹೋಗಿ ಮಾಡಿ ಸಾಧಿಸಿದ್ದೇನು ಅಂತ ಸ್ವಲ್ಪ ತಿಳಿಸಿ ಹೇಳ್ತೀಯೇನು?' ಎಂದು ದೊಡ್ಡ ಸವಾಲನ್ನೇ ಎಸೆದೆ.

ಒಂದೆರಡು ಕ್ಷಣ ವಿಳಂಬದಲ್ಲಿ ಅವನಿಂದ ಉತ್ತರ ಬಂದಿದ್ದರ ಭಾವವನ್ನು ಊಹಿಸಿ, ದೊಡ್ಡ ವಾದದ ರಾದ್ಧಾಂತವೇನೋ ಆಗೋದಿಲ್ಲ ಎಂಬ ಸಮಾಧಾನ ನನ್ನದಾಯಿತು, 'ಪದೇ-ಪದೇ ನನ್ನ ಸ್ಪೀಡಿಗೂ ಇಲ್ಲೀ ಸ್ಪೀಡಿಗೂ ಕಂಪೇರ್ ಮಾಡಬೇಡ...ಈ ದೇಶ ಹುಟ್ಟಿ-ಬೆಳೆಯೋದೇ ಎಲ್ಲ ವೇಗಮಯವಾಗಿ, ಅಂಥಾದ್ದರಲ್ಲಿ ಒಂದಿಷ್ಟ್ ಜನ ತೆವಳಿಕೊಂಡೇ ರಸ್ತೆ ಸವೆಸ್ತಾರೆ ಎಂದ್ರೆ, ಅದು ಒಂದ್ ರೀತಿ ದೊಡ್ಡ ಡೇಂಜರ್ರೇ - ಈಗ ಮಕ್ಳು ಇಟ್‌ಗೊಂಡೋರು ನಿಧಾನವಾಗಿ ಡ್ರೈವ್ ಮಾಡಿದಾಕ್ಷಣ ಉಳಿದೋರೂ ಅದನ್ನೇ ಅನುಸರಿಸಬೇಕು ಅನ್ನೋದು ಎಲ್ಲೀ ನಿಯಮಾನಪ್ಪಾ?'

'ಸುಬ್ಬೂ, ನಿನಗೊತ್ತಾಗಲ್ಲ ಸುಮ್ನಿರು - ಇನ್ನೂ ಒಂದಿಷ್ಟು ವರ್ಷ ಅಮೇರಿಕವನ್ನ ಕಣ್ ತುಂಬಾ ನೋಡು, ಒಂದಿನ ಇದೇ ಟಾಪಿಕ್ಕನ್ನಿಟ್ಟುಕೊಂಡು ವಾದ ಮಾಡೋಣಂತೆ...' ಎಂದು ನನ್ನ ಗಾಡಿಯ ವೇಗವನ್ನು ಹೆಚ್ಚಿಸಿದೆ, ಸುಬ್ಬುಗೆ ನಾನು ಹೇಳಿದ್ದು ಇಷ್ಟವಾಗಲಿಲ್ಲವೆಂದು ಕಾಣಿಸಿತು, ಆತ ರೆಡಿಯೋ ಡಯಲ್ ಕಡೆಗೆ ಕೈ ಹಚ್ಚಿದ.

Thursday, April 19, 2007

ಹೂಡಿಕೆ-ಕೂಡಿಕೆ

ನೀವು ಶರವೇಗದ ಸರದಾರರಾಗಿದ್ದರೆ ನನ್ನ ಆಮೆಯ ವೇಗವನ್ನು ದಯವಿಟ್ಟು ಕ್ಷಮಿಸಿ, ನನ್ನ ಅನಿಸಿಕೆಗಳಿಗೆ ನಾನು ಹೇಗೆ ಬಾಧ್ಯಸ್ಥನೋ ಹಾಗೇ ಅನ್ನ ಅನುಭವಗಳಿಗೂ ಕೂಡಾ. ಈ ನಿಟ್ಟಿನಲ್ಲಿ ಹೂಡಿಕೆ ಕುರಿತ ನನ್ನ ಅನುಭವಗಳ ಬಗ್ಗೆ ಬಹಳ ದಿನಗಳಿಂದ ಬರೆಯಬೇಕು ಎನ್ನಿಸಿದ್ದರೂ ಹೀಗೆ ಈ ಹಿಂದೆ ಬರೆಯಲಾಗಿರಲಿಲ್ಲ.

ನಾವೆಲ್ಲ ಭಾರತದಲ್ಲಿ ಮೊಟ್ಟ ಮೊದಲನೇ ಭಾರಿಗೆ ಯಾವುದೋ ಮಾಧ್ಯಮದ ಮುಖಾಂತರ ಸೌದಿ ಅರೇಬಿಯಾದಲ್ಲಿನ "ಒಳ್ಳೆ"ಯ ಮುಸ್ಲಿಮರು ಬ್ಯಾಂಕಿನಲ್ಲಿ ತಾವು ಇರಿಸಿದ ಅಥವಾ ತೊಡಗಿಸಿದ ಹಣಕ್ಕೆ ಬಡ್ಡಿಯನ್ನೂ ತೆಗೆದುಕೊಳ್ಳುವುದಿಲ್ಲವಂತೆ ಎಂದು ಓದಿದಾಗ, 'ಅವರೇನ್ ಬಿಡು, ಒಳ್ಳೇ ಕರಡಿ ಇದ್ದ ಹಾಗೆ...' ಎಂದು ತಮಾಷೆ ಮಾಡಿಕೊಂಡಿದ್ದೆವು (ಬಹಳ ಶ್ರೀಮಂತರನ್ನು ನಮ್ಮೂರಿನಲ್ಲಿ 'ಅವರೇನ್ ಬಿಡಪಾ ಕರಡಿ ಇದ್ದಂಗೆ, ..ಕ್ಕೂ ಕೂದ್ಲಿಗೂ ವ್ಯತ್ಯಾಸ ಗೊತ್ತಾಗಲ್ಲ!' ಎಂದು ಹೇಳುವುದು ನಾಣ್ಣುಡಿ). ನಮಗೆಲ್ಲಾ ಅಲ್ಲಿ ದುಡಿದ ಹಣದಲ್ಲಿ ಮಿಕ್ಕುವುದಿರಲಿ ಸಾಲ ಮಾಡದಿದ್ದರೆ ಆ ತಿಂಗಳೇ ದೊಡ್ಡದು ಎನ್ನುವ ಪರಿಸ್ಥಿತಿ ಇದ್ದಾಗ, ನನ್ನ ಕೈಯಲ್ಲಿ ಹಣವೆನ್ನುವುದೇನಾದರೂ ಉಳಿದಿದ್ದರೆ/ಓಡಾಡಿದ್ದರೆ ಅದು ಇಲ್ಲಿಗೆ ಬಂದ ಮೇಲೇ ಎಂದು ಹೇಳಬೇಕು. ಆದರೆ ಇಲ್ಲಿನ ಇಂಟರೆಷ್ಟ್ ರೇಟ್ ನೋಡಿ ನಾನು ತಲೆ ತಿರುಗಿ ಬೀಳದಿದ್ದುದೇ ಹೆಚ್ಚು, ನಾನು ಬಂದ ಹೊಸತರಲ್ಲಿ "ಚೆಕ್ಕಿಂಗ್" ಅಕೌಂಟ್ ಎನ್ನುವುದು ಹೊಸದಾದರೂ, ಬ್ಯಾಂಕಿನಲ್ಲಿ ಹೇಗೇ ಹಣ ತೊಡಗಿಸಲಿ, ಅಲ್ಲಿ ಎರಡು-ಹೆಚ್ಚೆಂದರೆ-ಮೂರು ಪರ್ಸೆಂಟ್ ಬಡ್ಡಿ ತೆಗೆದುಕೊಂಡರೆ ಅದು ಬಹಳವಾಗುತ್ತಿತ್ತು. ಆಗೆಲ್ಲ ಭಾರತದಲ್ಲಿ ಹನ್ನೊಂದು-ಹನ್ನೆರಡರವರೆಗೆ ಇಂಟರೆಷ್ಟು ರೇಟು ಇದ್ದಿದ್ದು ನಮಗೆಲ್ಲಾ ಇನ್ನೂ ಭಾರತದಲ್ಲೇ ಹಣವನ್ನು ತೊಡಗಿಸುವ ಹುಚ್ಚನ್ನೂ ಹೆಚ್ಚಿಸಿತ್ತು. ಆದರೆ ಭಾರತಕ್ಕೆ ಇಲ್ಲಿಂದ ಒಮ್ಮೆ ಕಳಿಸಿದ ಹಣ ಈವರೆಗೆ ಯಾವ ರೂಪದಲ್ಲಿ ಹಿಂದಕ್ಕೆ ಬಂದಿದ್ದು ನನಗೆ ನೆನಪಿಲ್ಲ!

ಇಲ್ಲಿ ಕೊಡುವ ಒಂದೆರಡು ಪರ್ಸೆಂಟ್ ಬಡ್ಡಿಯನ್ನೂ ಬೇಡವೆನ್ನಲು ನಾವೇನು ಆಗರ್ಭ ಶ್ರೀಮಂತರೇ, ಸೌದಿ ದೊರೆಗಳೇ...ಎಷ್ಟು ಸಿಕ್ಕರೆ ಅಷ್ಟು ಎಂದು ಸುಮ್ಮನೆ ತೆಗೆದುಕೊಳ್ಳುತ್ತಿದ್ದೆವು. ಒಂದು ಕಡೆ ಆಲನ್ ಗ್ರೀನ್‌ಸ್ಪ್ಯಾನ್ ಇನ್‌ಫ್ಲೇಶನ್ ಅನ್ನು ಕಟ್ಟಿ ಹಾಕಿದಂತೆ ತೋರಿದರೂ ಸುಮಾರು ಮೂರು-ಮೂರುವರೆ ಪರ್ಸೆಂಟಿನಷ್ಟು ಇದ್ದ ಇನ್‌ಫ್ಲೇಷನ್ ರೇಟನ್ನು ಬೀಟ್ ಮಾಡಲು ಬ್ಯಾಂಕಿನ ಚೆಕ್ಕಿಂಗ್, ಸೇವಿಂಗ್ಸ್, ಮನಿ ಮಾರ್ಕೆಟ್‌ನಂತಹ ಹೆಚ್ಚು ಕನ್ಸರ್‌ವೆಟಿವ್ ಮಾಧ್ಯಮಗಳನ್ನು ಬಿಟ್ಟು ಸೆಕ್ಯೂರಿಟೀಸ್, ಮ್ಯೂಚುವಲ್ ಫಂಡ್, ಮುಂತಾದ ಹೆಚ್ಚು ರಿಸ್ಕ್ ಇದ್ದಿರಬಹುದಾದ ಸ್ಟಾಕ್ ಮಾರ್ಕೆಟ್‌ನಲ್ಲಿ ಹಣವನ್ನು ತೊಡಗಿಸದೆ ಬೇರೆ ವಿಧಿ ಇದ್ದ ಹಾಗೆ ಕಾಣಿಸಿರಲಿಲ್ಲ. (ಆಗಿನ ದಿನಗಳಲ್ಲಿ ರಿಯಲ್ ಎಸ್ಟೇಟ್‌ಗೆ ಕೈ ಹಾಕಬೇಕು ಎನ್ನುವ ಬುದ್ಧಿಯಾಗಲೀ, ತಿಳುವಳಿಕೆಯಾಗಲಿ ಹತ್ತಿರವೂ ಸುಳಿದಿದ್ದಿಲ್ಲ, ಆ ಮಾತು ಬೇರೆ).

ಒಂದು ಕಡೆ ಒಂದಿಷ್ಟು ಹಣವನ್ನು ಕೂಡಿಸಿಕೊಳ್ಳೋಣ, ಭಾರತಕ್ಕೆ ಕಳುಹಿಸಿ, ಕಾರು-ಪಾರು ಮುಂತಾದವುಗಳನ್ನು ತೆಗೆದುಕೊಂಡು, ಕೊಡುವವರಿಗೆಲ್ಲ ಕೊಟ್ಟು ಉಳಿದಿದ್ದನ್ನು ಇನ್‌ವೆಷ್ಟ್ ಮಾಡೋಣವೆನ್ನುವಷ್ಟರಲ್ಲಿ ತೊಂಭತ್ತೇಳನೇ ಇಸವಿಯಿಂದ ಮೇಲೆ ಹತ್ತಿದ ಮಾರುಕಟ್ಟೆ ಎರಡು ಸಾವಿರದ ಒಂದನ್ನು ದಾಟಲು ಮೊದಲು ಮಾಡಿತ್ತು. ಊರು ಕೊಳ್ಳೇ ಹೋದ ಮೇಲೆ ದೊಡ್ಡೀ ಬಾಗಿಲು ಹಾಕಿದರು ಎನ್ನುವಂತೆ ಎಲ್ಲರೂ ಸಾಕಷ್ಟು ಕಾಸು ಮಾಡಿಕೊಂಡೋ ಕೆಲವರು ಕಳೆದುಕೊಂಡೋ ಒದ್ದಾಡುತ್ತಿರುವ ಹೊತ್ತಿನಲ್ಲಿ ನಾನು ಸ್ಟಾಕ್ ಮಾರ್ಕೆಟ್‌ಗೆ ಏನೂ ಗೊತ್ತಿಲ್ಲದೇ ಪ್ರವೇಶ ಪಡೆದಿದ್ದೆ.

ಐಟಿ ಕಾರ್ಯಕ್ಷೇತ್ರದಲ್ಲಿ ಇದ್ದ ಪರಿಣಾಮವೋ, ಅಥವಾ ತಿಳುವಳಿಕೆಯ ಮಿತಿಯೋ ಎಲ್ಲವೂ ಸೇರಿ ನಾನು ಕಷ್ಟಪಟ್ಟು ದುಡಿದ ಹಣವನ್ನು ತೊಡಗಿಸಿದ ಮೊದಲ ಕಂಪನಿಗಳೆಂದರೆ ಅವೇ ಆರಕಲ್, ಮೈಕ್ರೋಸಾಫ್ಟ್, ಎಕ್ಸೋಡಸ್, ಬ್ರೋಕೇಡ್, ಸತ್ಯಂ, ಇನ್‌ಫೋಸಿಸ್, ಇಂಟೆಲ್, ಇತ್ಯಾದಿಗಳು... ಹೆಚ್ಚೂ ಕಡಿಮೆ ನೂರಕ್ಕೆ ತೊಂಭತ್ತು ಭಾಗ ಟೆಕ್ನಾಲಜಿ ಕಂಪನಿಗಳೇ. ಬಿವಿ ಜಗದೀಶರ ಮುಖ ನೋಡಿ ಎಕ್ಸೋಡಸ್ ಕೊಂಡುಕೊಂಡೆ, ಕುಮಾರ ಮಳವಳ್ಳಿಯವರ ಬಗ್ಗೆ ತಿಳಿದು ಬ್ರೋಕೇಡ್ ವಶವಾದೆ, ಇನ್‌ಫೋಸಿಸ್ ಆಗಿನ ಗೂಗಲ್ ಬೆಳವಣಿಗೆಯನ್ನು ಪಡೆದಿತ್ತು. ಯಾಹೂ ಹೆಚ್ಚಿನ ಬೆಲೆ ಎಂದರೆ - 275 ಪರ್ ಶೇರ್ ಆಗಿತ್ತು, ಸಿಫಿ ಒಂದೇ ದಿನದಲ್ಲಿ 45 ಡಾಲರ್ ಮೇಲೇರಿತ್ತು. ಇಂತಹ ಉತ್ತುಂಗದ ಸ್ಥಿತಿಯಲ್ಲಿ ನಾನು ನನ್ನ ಮೊದಲ ಹತ್ತು ಸಾವಿರವನ್ನು ತೊಡಗಿಸಿದ್ದೆ. ನಾನು ಸ್ಟಾಕ್ ಮಾರ್ಕೆಟ್ ಹೊಕ್ಕಿದ್ದೇ ತಡ ಒಂದೆರೆಡು ವಾರ ದಿನಕ್ಕೆ ನೂರು-ನೂರೈವತ್ತು ಡಾಲರ್ ಅಂತೆ ಲಾಭ (ಪುಸ್ತಕದಲ್ಲಿ) ಏರುತ್ತಿದ್ದ ಹಾಗೆ ನೆನಪು - ಒಂದು ತಿಂಗಳಾದ ಮೇಲೆ ನಾನು ಎಕ್ಸ್‌ಪರ್ಟ್‌ನಂತೆ ಆಗಿ ಹೋಗಿದ್ದೆ, ದಿನವೂ ಏರುವ ಮಾರುಕಟ್ಟೆ ಯಾವತ್ತು ಬೀಳುತ್ತದೆ ಎಂದು ಹೇಳುವವರಾರು?

ಹೀಗಿರುವ ಮಾರುಕಟ್ಟೆ ನಿಧಾನವಾಗಿ ಕುಸಿಯಲಾರಂಭಿಸಿತು, ನನ್ನ ಕಣ್ಣುಗಳ ಮುಂದೆಯೇ ಎಲ್ಲವೂ ತರಗೆಲೆಗಳಂತೆ ಉದುರಿದವು, ಕೆಲವು ನೆಲಕಚ್ಚಿದವು, ಹೆಚ್ಚಿನವು (ಡಾಟ್ ಕಾಮ್‌ಗಳು) ದಿವಾಳಿ ಎದ್ದವು, ನಾನು ಕಣ್ಣು ಬಿಡುವಷ್ಟರಲ್ಲಿ ನನಗಾದ ನಷ್ಟ ಸುಮಾರು ಎಂಟು ಸಾವಿರ ಡಾಲರ್‌ಗಳು, ಅಂದರೆ ಎಂಭತ್ತು ಪರ್ಸೆಂಟ್ ಹಣ ನಷ್ಟ! ಆದರೆ ನಮ್ಮ ಅಫೀಸ್‌ನಲ್ಲಿ ನನ್ನದೇ ಬೆಷ್ಟ್ ಸ್ಟೋರಿ, ಹಾಗೂ ಸ್ಟೆಟಿಸ್ಟಿಕ್ಸ್. ನನ್ನ ಟೀಮಿನಲ್ಲಿ ಇದ್ದ ಬೇಕಾದಷ್ಟು ಜನ ತೆಲುಗ-ತಮಿಳರು ಡಬ್ಬಲ್ಲ್, ಟ್ರಿಪಲ್ ಡಿಜಿಟ್ (ಹಣವನ್ನು ಕಳೆದುಕೊಂಡಿದ್ದರು - ಒಬ್ಬ ಸುಮಾರು ೧೨೦,೦೦೦ ಕಳೆದುಕೊಂಡಿದ್ದು ಇನ್ನೂ ಚೆನ್ನಾಗಿ ನೆನಪಿದೆ), ನನ್ನ ಹಾಗೆ ಬಡವಾ ನೀನ್ ಮಡಗಿದ ಹಾಗಿರು ಎಂದು ಕೆಲಸ ಮಾಡಿಕೊಂಡಿದ್ದ ಐಟಿ ನಿಪುಣರು ಸ್ಟಾಕ್ ಮಾರ್‌ಕೆಟ್ ನಲ್ಲಿ, ಮಾರ್ಜಿನ್ ಅಕೌಂಟುಗಳಲ್ಲಿ ಬಹಳಷ್ಟನ್ನು ಕಳೆದುಕೊಂಡು ಅನುಭವಿಸುತ್ತಿದ್ದುದು ಈಗ ಹೊಸದಾಗಿ ಕಾಣುತ್ತದೆ, ಆಗ ಹಾಗಿರಲಿಲ್ಲ.

***

ಇಲ್ಲಿನ ಎಮ್.ಎಸ್., ಎಮ್.ಬಿ.ಎ.,ಗಳಲ್ಲಿ ಫೈನಾನ್ಸಿಯಲ್ ಮ್ಯಾನೇಜ್‌ಮೆಂಟ್ ಕೋರ್ಸನ್ನು ತೆಗೆದುಕೊಂಡಾಕ್ಷಣ ನಾನೂ ದೊಡ್ಡ ಸ್ಟಾಕ್ ಮಾರ್ಕೆಟ್ ಪಂಡಿತನಾಗುತ್ತೇನೆ ಎಂದು ಅಂದುಕೊಂಡಿದ್ದು ನನ್ನ ಮೊದಲ ಹುಂಬತನ. ಜೊತೆಯಲ್ಲಿ ನನಗೆ ಗೊತ್ತಿರುವ ಕಂಪನಿಗಳು - ಜನಪ್ರಿಯವಾದವು, ಐಟಿಗೆ ಸಂಬಂಧಿಸಿದವು, ಮುಂತಾದವುಗಳಲ್ಲಿ ತೊಡಗಿಸಬೇಕು, Unknown is unknown - ಎಂದು ಬಿಟ್ಟಿದ್ದು ಮತ್ತೊಂದು ಪೆದ್ದು ಬುದ್ಧಿಗೆ ಸಾಕ್ಷಿ.

ಶಿಸ್ತಿನ ಹೂಡಿಕೆಗಳಲ್ಲಿ ಕೆಲವರು, ಕೆಲವು ಪಂಗಡದವರು ಸಮಾಜ ಉನ್ನತಿಯನ್ನು, ಏಳಿಗೆಯನ್ನು ಬಯಸುವ ಕಂಪನಿಗಳಲ್ಲಿ ಮಾತ್ರ ಹಣವನ್ನು ತೊಡಗಿಸುತ್ತಾರೆ...(ಉದಾಹರಣೆಗೆ "ಸಜ್ಜನರು" ಸಿಗರೇಟ್, ಮಧ್ಯ ತಯಾರಿಸುವ ಕಂಪನಿಗಳಲ್ಲಿ ಹಣ ಹೂಡರು, ಅಥವಾ ಯಹೂದಿಗಳು, ಮುಸಲ್ಮಾನರು ಹಂದಿ ಮಾಂಸವನ್ನು ಸಂಸ್ಕರಿಸುವ ಕಂಪನಿಗಳ ಮೇಲೆ ಹಣತೊಡಗಿಸದಿರಬಹುದು, ಇತ್ಯಾದಿ)...ಕೆಲವರು ನಾಗರಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮ್ಯೂನೀ (municipalilty fund ಗಳಿಗೆ ಶಾರ್ಟ್ ಎಂಡ್ ಸ್ವೀಟ್ ಆಗಿ muni) ಗಳಲ್ಲಿ ತೊಡಗಿಸಬಹುದು. ಹೀಗೆ ಅವರವರ ಪಟ್ಟಿ ಅವರಿಗಿರುವಂತೆ ನನ್ನ ಪಟ್ಟಿ ನನಗಿತ್ತು. ನನ್ನ ಹಣವನ್ನು ನಾನೇ ಮ್ಯಾನೆಜ್ ಮಾಡುತ್ತೇನೆ, ಫೈನಾನ್ಸಿಯಲ್ ಅಡ್ವೈಸರುಗಳಿಗೆಕೆ ಕಮಿಷನ್ ಕೊಡಬೇಕು? ಎನ್ನುವುದು ಕೆಲವರ ತರ್ಕ...ಆದರೆ ನಾನು ಇವತ್ತಿಗೂ ಸ್ಟಾಕ್ ಮಾರ್ಕೆಟ್‌ನಲ್ಲಿ ಹಣವನ್ನೇನಾದರೂ ಮಾಡಿದ್ದಿದ್ದರೆ ಅದು ನನ್ನ ಫೈನಾನ್ಸಿಯಲ್ ಅಡ್ವೈಸರ್ ಮುಖಾಂತರವೇ ವಿನಾ ನಾನು ಕಳೆದುಕೊಂಡಿದ್ದೇ ಹೆಚ್ಚು.

ಸುಮಾರು ೨೦೦೨-೨೦೦೩ ರ ಹೊತ್ತಿನಲ್ಲಿ ಒಬ್ಬ ಫೈನಾನ್ಸಿಯಲ್ ಅಡ್ವೈಸರ್ ಅನ್ನು ಕಂಡು ನನ್ನ ಖಾತೆಯನ್ನು ತೆರೆದೆ, ಅವನು ನನ್ನ ಟೆಕ್ನಾಲಜಿ ಕಂಪನಿಗಳ ಸ್ಟಾಕ್ ಅನ್ನೆಲ್ಲ ಒಂದೇ ಏಟಿಗೆ ಮಾರಿ ನನ್ನ ನಷ್ಟದ ಕಂದಕವನ್ನು ಇನ್ನಷ್ಟು ಹೆಚ್ಚಿಸಿದ! ಜೊತೆಗೆ ನನಗೆ ಆಶ್ಚರ್ಯವಾಗುವಂತೆ ಆತ ಮೊಟ್ಟ ಮೊದಲು ಕೊಂಡ ಸ್ಟಾಕ್ ಒಂದು ದೊಡ್ಡ ಸಿಗರೇಟ್ ತಯಾರಿಸುವ ಕಂಪನಿಯದು!! ಒಂದೆರಡು ತಿಂಗಳುಗಳಲ್ಲಿ ಸಿಗರೇಟ್, ಪೆಟ್ರೋಲಿಯಮ್, ಕ್ಯಾಸಿನೋ ಕಂಪನಿಗಳ ಸ್ಟಾಕ್ ತೆಗೆದುಕೊಂಡಿದ್ದರಿಂದ ಎಲ್ಲೂ ನಷ್ಟವಾಗಲಿಲ್ಲ, ಜೊತೆಯಲ್ಲಿ ಸಾಕಷ್ಟು ಲಾಭವೂ ಬರತೊಡಗಿತು. ಜೊತೆಗೆ buy-low; observe; sell-high and keep the profit ಎನ್ನುವ ಮಹಾಮಂತ್ರವನ್ನೂ ಆತ ಕಲಿಸಿಕೊಟ್ಟ!

ಅದೇ ಕೊನೆ, ಕಳೆದ ನಾಲ್ಕೈದು ವರ್ಷಗಳಲ್ಲಿ (ಅಲ್ಲೊಂದು ಇಲ್ಲೊಂದು ಅಪವಾದವನ್ನು ಬಿಟ್ಟು) ಟೆಕ್ನಾಲಜಿ ಕಂಪನಿಗಳ ಮುಖ ನೋಡಿಲ್ಲ. ಸಿಗರೇಟ್, ಆಯಿಲ್, ಕ್ಯಾಸಿನೋ, ಬ್ಯಾಂಕ್‌ಗಳ ಸ್ಟಾಕ್‌ಗಳು ನನ್ನನ್ನೆಂದೂ ಕೈ ಬಿಟ್ಟಿಲ್ಲ!

ಈ ಪ್ರಶ್ನೆಗಳು ನನ್ನ ಮನದಲ್ಲಿ ಬಹಳ ಭಾರಿ ಮೂಡಿ ಬಂದಿವೆ ಆದರೆ ಉತ್ತರ ಇನ್ನೂ ಸಿಕ್ಕಿಲ್ಲ - ಸಿಗರೇಟ್ ಕಂಪನಿಗಳ ಸ್ಟಾಕ್ ಅನ್ನು ನಾನು ತೆಗೆದುಕೊಂಡರೆ ಅವರ ಪ್ರಾಡಕ್ಟ್‌ಗಳನ್ನು ನಾನು ಎಂಡಾರ್ಸ್ ಮಾಡಿದ ಹಾಗಾಗುತ್ತದೆಯೇ? ನಾಗರಿಕ ಅನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ನನ್ನ ಹಣವನ್ನು ಜನೋಪಯೋಗಿ ಕಂಪನಿಗಳಲ್ಲಿ ತೊಡಗಿಸಿ ಸಮಾಜದ ಏಳಿಗೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ದುಡಿಯುವುದು, ಸಹಕರಿಸುವುದು ನಿಯಮವೇ? ಬರೀ ಒಂದಿಷ್ಟು ಸರ್ವರ್ರುಗಳನ್ನು ಒಂದು ವೇರ್‌ಹೌಸಿನಲ್ಲಿ ಕೂಡಿಕಾಕಿಕೊಂಡ ಇಂಟರ್ನೆಟ್ ಬೇಸ್ಡ್ ಕಂಪನಿ ಹೆಚ್ಚೋ, ಜನರಿಗೆ ಬೇಕಾಗುವ ಅತಿ ಅಗತ್ಯಗಳನ್ನು ಪೂರೈಸುವ "ಒಳ್ಳೆಯ" ಕಂಪನಿಗಳು ಹೆಚ್ಚೋ?

Tuesday, April 17, 2007

ನಮಗೊಬ್ಬ ಆಲ್ ಶಾರ್ಪ್ಟನ್ ಬೇಕೇ?

ನ್ಯೂ ಯಾರ್ಕ್ ನಗರದ ಸುತ್ತಮುತ್ತಲಿನಲ್ಲಿ ಆಲ್ ಶಾರ್ಪ್ಟನ್‌ನ ಕಾರ್ಯಭಾರ ಯಾವತ್ತೂ ಇದ್ದೇ ಇರುತ್ತೆ. ಶಾನ್ ಬೆಲ್‌ನನ್ನು ಪೋಲೀಸರು ಗುಂಡಿಟ್ಟು ಕೊಂದ ಕಥೆಯಾಗಿರಲಿ, ಆಬ್ನರ್ ಲೂಯೀಮಾನನ್ನು ಪೋಲೀಸರು ಹಿಂಸೆಗೊಳಪಡಿಸಿದ್ದಿರಲಿ, ಡಾನ್ ಐಮಸ್ ರೇಷಿಯಲ್ ಪದಗಳನ್ನು ಬಳಸಿದನೆಂದೋ, ಡ್ಯೂಕ್ ಯೂನಿವರ್ಸಿಟಿಯ ಆಟಗಾರರು ಡ್ಯಾನ್ಸರ್ ಒಬ್ಬಳ ಮೇಲೆ ಅತ್ಯಾಚಾರಮಾಡಿದರೆಂದೋ ಇನ್ನೂ ಹಲವಾರು ಕಾರಣಗಳಿಂದಾಗಿ ಈತನ ಪಡೆ ಸಂಬಂಧಿಸಿದವರನ್ನು ತತಕ್ಷಣ ಸುತ್ತುವರೆದು ಒಂದು ರೀತಿಯ "ಸತ್ಯಾಗ್ರಹ" ನಡೆಸುತ್ತದೆ. ಈ ಕಾರ್ಯಾಚರಣೆಗಳಲ್ಲಿ ಸಾಮಾನ್ಯವಾದ ಒಂದು ಅಂಶವೆಂದರೆ ಫಲಾನುಭವಿ ಆಫ್ರಿಕನ್ ಅಮೇರಿಕನ್ ಆಗಿರುತ್ತಾನೆ/ಳೆ, ಮತ್ತೊಂದು ತುದಿಯಲ್ಲಿ ವ್ಯವಸ್ಥೆ, ವ್ಯಕ್ತಿ ಅಥವಾ ಆಡಳಿತದ ತಡೆಗೋಡೆ, ಅಥವಾ ಇನ್ನು ಜೀವ/ನಿರ್ಜೀವ ವಸ್ತು/ವ್ಯಕ್ತಿ ಏನು ಬೇಕಾದರೂ ಇರಬಹುದು.

***

ಶಾರ್ಪ್ಟನ್ ನಡೆಸೋ ಕಾರ್ಯಾಚರಣೆಗಳಲ್ಲಿ ಜಯವೇ ಹೆಚ್ಚು - ಈತನ ಹೆಸರು ಕೇಳಿದರೆ ಎಷ್ಟೋ ಜನ ನಡುಗುವ ಸ್ಥಿತಿ ಇದೆ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂದೋ, ಇನ್ನ್ಯಾವುದೇ ರೀತಿಯಲ್ಲಿ ಯಾರು ಎಷ್ಟೇ ಹೊಡೆದುಕೊಂಡರೂ ಈತನ ತಂತ್ರ ಧೃತಿಗೆಡುವುದಿಲ್ಲ. ಕಳೆದ ಹತ್ತು ವರ್ಷಗಳಿಂದಲೂ ನಾನು ನೋಡಿದಂತೆಯೇ ಈತ ಒಂದಲ್ಲಾ ಒಂದು ರೀತಿಯಲ್ಲಿ ಮಾಧ್ಯಮದಲ್ಲಿರುತ್ತಾನೆ, ಜೊತೆಗೆ ಎಷ್ಟೋ ಜನರ ಆರಾಧ್ಯದೈವ ಎಂದು ಹೆಸರು ಮಾಡಿರುವುದೂ ಅಲ್ಲದೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಪ್ರಸಿಡೆಂಟಿಯಲ್ ಕ್ಯಾಂಡಿಡೇಟ್ ಆಗಿ ನಂತರ ಹೆಚ್ಚಿನ ಪಕ್ಷ ಡೆಮಾಕ್ರಟಿಕ್ ಮುಖಂಡರಿಗೆ ತನ್ನ ಎಂಡಾರ್ಸ್‌ಮೆಂಟ್ ಮಾಡಿದ್ದಿದೆ.

ಕಾಂಡೋಲೀಸಾ ರೈಸ್, ಕಾಲಿನ್ ಪವೆಲ್ ಇವರೆಲ್ಲರಿಗಿಂತ ಡೊಮೆಸ್ಟಿಕ್ ವಿಚಾರಗಳಲ್ಲಿ ಶಾರ್ಪ್ಟನ್ ಯಾವಾಗಲೂ ಮುಂದು. ಜೆಸ್ಸಿ ಜಾಕ್ಸನ್ ಮತ್ತು ಆಲ್ ಶಾರ್ಪ್ಟನ್ ಇವರಿಬ್ಬರು ಸೇರಿಕೊಂಡರೆಂದರೆ ಅಲ್ಲಿ ಒಂದು ಷಡ್‌ಯಂತ್ರ ರಚನೆಯಾಗಿರಲೇ ಬೇಕು, ಇಂಥ ಸಂದರ್ಭಗಳಲ್ಲಿ ಗೆಲ್ಲಬೇಕೆಂದರೆ ನಿಜವಾಗಿಯೂ ದೊಡ್ಡ ಗುಂಡಿಗೆಯೇ ಬೇಕು.

***

ನಿಧಾನವಾಗಿ ಮೈನ್‌ಸ್ಟ್ರೀಮ್ ಅಮೇರಿಕನ್ ಪರಿಸರವನ್ನು ನಿಧಾನವಾಗಿ ಆಕ್ರಮಿಸಿಕೊಳ್ಳುತ್ತಿರುವ ಆಫ್ರಿಕನ್ ಅಮೇರಿಕನ್ (ಕಪ್ಪು) ಸಂಸ್ಕೃತಿಯನ್ನು ಗಮನಿಸುತ್ತಿದ್ದೇನೆ. ಅಮೇರಿಕನ್ ಜನಸಂಖ್ಯೆಯಲ್ಲಿ ಸುಮಾರು ನೂರಕ್ಕೆ ಹನ್ನೆರೆಡರಷ್ಟು ಇರುವ ಕಪ್ಪು ಜನ, ಹೆಚ್ಚೂ ಕಡಿಮೆ ಅಷ್ಟೇ ಇರಬಹುದಾದ ಹಿಸ್ಪ್ಯಾನಿಕ್ ಜನರು ಮುಖ್ಯವಾಹಿನಿಯಲ್ಲಿರುವ (ಸುಮಾರು ನೂರಕ್ಕೆ ಎಪ್ಪತ್ತು) ಬಿಳಿಯರನ್ನು ಹೆದರಿಸುತ್ತಾರೇನೋ ಅನ್ನಿಸದೇ ಇರದು. ಹಿಸ್ಪ್ಯಾನಿಕ್ ಜನರು ಭಾಷೆಯ (ಸ್ಪ್ಯಾನಿಶ್) ಮುಖಾಂತರ ತಮ್ಮ ಐಡೆಂಟಿಟಿಯನ್ನು ಸ್ಥಾಪಿಸಿಕೊಳ್ಳುತ್ತಲಿದ್ದರೆ, ಕಪ್ಪು ಜನ ತಮ್ಮದೇ ಆದ ಸಂಗೀತ, ಆಟೋಟಗಳಿಂದ ಸಮಾಜದಲ್ಲಿ ಎದ್ದು ನಿಂತಿರುವುದು ವಿಶೇಷವಾದದ್ದು. ದೇಶದಾದ್ಯಂತ ಹನ್ನೆರಡು ಪರ್ಸೆಂಟಿನಷ್ಟಿರುವ ಕಪ್ಪು-ಹಿಸ್ಪ್ಯಾನಿಕ್ ಜನರ ಡೆನ್ಸಿಟಿ ಪೂರ್ವ-ಪಶ್ಚಿಮ ತೀರಗಳ ಪ್ರದೇಶಗಳಲ್ಲಿ ಬಹಳ ಹೆಚ್ಚು (ಸುಮಾರು ೩೦%), ಹಾಗಾಗಿಯೇ ನ್ಯೂ ಯಾರ್ಕ್, ಜರ್ಸಿ ಸಿಟಿಯಂತಹ ಪ್ರದೇಶಗಳಲ್ಲಿ ದಾರಿಯಲ್ಲಿ ಎಡವಿ ಬಿದ್ದರೂ ಹಿಸ್ಪ್ಯಾನಿಕ್-ಕಪ್ಪು ಜನರ ಮೇಲೆ ನೀವು ಬೀಳೋದು!

***

ಕಳೆದ ಐದು-ಹತ್ತು ವರ್ಷಗಳಿಂದ ಭಾರತಕ್ಕೆ ಬೇಕಾದಷ್ಟು ಅಮೇರಿಕನ್ ಕೆಲಸಗಳು ಔಟ್‌ಸೋರ್ಸ್ ಆದದ್ದರಿಂದಲೋ, ಇನ್ನೂ ಹಲವಾರು ಕಾರಣಗಳಿಂದಲೋ ಭಾರತ, ಭಾರತಿಯರನ್ನು ಎಲ್ಲರೂ ಗುರುತಿಸುವ ಪರಿಸ್ಥಿತಿ ಬಂದಿದೆ. ಹತ್ತು ವರ್ಷದ ಹಿಂದೆ ಡೆನ್ವರ್ ಪೇಟೆಯಲ್ಲಿ ಭಾರತವೆಂದರೆ ಎಲ್ಲಿದೆ? ಎಂದು ರಸ್ತೆ ವ್ಯಾಪಾರಿಯೊಬ್ಬ ಕೇಳಿ ನಮ್ಮೆಲ್ಲರನ್ನು ದಂಗುಬಡಿಸಿದ್ದ, ಬಹುಷಃ ಈಗ ಆ ಪರಿಸ್ಥಿತಿ ಇರಲಾರದು.

ನಮ್ಮ ಪೂರ್ವ ಪ್ರದೇಶಗಳ ಗ್ಯಾಸ್ ಸ್ಟೇಷನ್, ಸೆವೆನ್-ಇಲೆವೆನ್ ಮುಂತಾದ ಸ್ಥಳಗಳಲ್ಲಿ ಭಾರತೀಯರು ಕೆಲಸ ಮಾಡುವುದು ಸರ್ವೇ ಸಾಮಾನ್ಯ. ಇಂತಹವುಗಳ ಜೊತೆಗೆ ತೊಂಭತ್ತರ ದಶಕದಿಂದ ಟೆಕ್ನಾಲಜಿ ಕೆಲಸಗಾರರೂ, ಹಾಗೂ ಅದಕ್ಕೂ ಹಿಂದೆ ವಲಸೆ ಬಂದ ವಿಜ್ಞಾನಿ/ವೈದ್ಯರೂ ಬೇಕಾದಷ್ಟು ಜನ. ಇಲ್ಲಿನ ಕೆಲಸಗಳು ಹೊರದೇಶಕ್ಕೆ ಎಲ್ಲಿಯೇ ಹೋಗಿರಲಿ, ಅವು ಭಾರತಕ್ಕೆ ಹೋಗಿವೆ ಎನ್ನುವಷ್ಟರ ಮಟ್ಟಿಗೆ ಜನರಲ್ಲಿ ಒಂದು ರೀತಿಯ ನಂಬಿಕೆ ಹಾಗೂ ಭಯ ಎರಡೂ ಉಂಟಾಗಿವೆ, ಇವೆಲ್ಲವೂ ಭಾರತಿಯರನ್ನು ಜನಮನದಲ್ಲಿ ಸರ್ವಕಾಲಿಕವನ್ನಾಗಿ ಮಾಡಿವೆ. ಇವುಗಳ ಒಂದು ಪರಿಣಾಮವೋ ಎನ್ನುವಂತೆ ಸ್ಥಳೀಯ ರೆಡಿಯೋ-ಟಿವಿ ಕಾರ್ಯಕ್ರಮಗಳಲ್ಲಿ ಭಾರತೀಯರನ್ನು ಬೇಕಾದಷ್ಟು ಆಡಿಕೊಂಡು, ನಮ್ಮ ಆಕ್ಸೆಂಟುಗಳನ್ನು ಅಣುಗಿಸಿಕೊಂಡು, ನಮ್ಮ ನಡವಳಿಕೆಗಳನ್ನು ಹೀಯಾಳಿಸಿ ಬೇಕಾದಷ್ಟು ಕಾರ್ಯಕ್ರಮಗಳು ಬೇಕಾದಷ್ಟು ಪ್ರಸಾರವಾಗುತ್ತವೆ. ಹೋಟೆಲು, ಟ್ಯಾಕ್ಸಿಕ್ಯಾಬುಗಳು, ಗ್ಯಾಸ್‌ಸ್ಟೇಷನ್-ಕನ್ವೀನಿಯನ್ಸ್ ಸ್ಟೋರುಗಳಲ್ಲಿ ಕೆಲಸ ಮಾಡುವ ಕೆಲಸಗಾರರು ಬೇಕಾದಷ್ಟು ಅಮಾಯಕ ಭಾರತೀಯರು ಇಲ್ಲಿನ ಬಂದೂಕಿನ ಅಟ್ಟಹಾಸಕ್ಕೆ ಗುರಿಯಾಗುತ್ತಾರೆ - ಹೆಚ್ಚಿನ ಪಕ್ಷ ಅವು ಕಪ್ಪು ಜನರ ಹಿಂಸಾಪ್ರವೃತ್ತಿಗೆ ಬಲಿಯಾಗಿರುವ ಉದಾಹರಣೆಯೇ ಹೆಚ್ಚು.

ಹೀಗಿರುವಲ್ಲಿ ನಮ್ಮ ನಡುವೆ ಯಾರೊಬ್ಬರೂ ಚಕಾರವನ್ನೆತ್ತುವುದಿರಲಿ, ಒಂದು "ಸತ್ಯಾಗ್ರಹ"-ಧರಣಿಯನ್ನಾದರೂ ಏಕೆ ಮಾಡೋದಿಲ್ಲ ಎಂದು ನಾನು ಬೇಕಾದಷ್ಟು ಸಾರಿ ನನ್ನನ್ನು ನಾನೇ ಕೇಳಿಕೊಂಡಿದ್ದೇನೆ. ಗುಂಡಿಗೆ ಬಲಿಯಾದ ವ್ಯಕ್ತಿ ಕಪ್ಪು ಆಗಿದ್ದರೆ ಮರುದಿನವೇ ಆಲ್ ಶಾರ್ಪ್ಟನ್ ಅಲ್ಲಿ ಹಾಜರ್, ಬೇರೆ ಏನಿಲ್ಲವೆಂದರೂ ಅವನ ಅಜೆಂಡಾ ಅಲ್ಲಿ ಹಾಜರಿರುತ್ತದೆ, ಅದೇ ಅಮಾಯಕ ಭಾರತೀಯ ಸತ್ತರೆ ವಿದ್ಯುದಾಲಿಂಗನಕೆ ಸಿಕ್ಕಿ ಸತ್ತ ಕಾಗೆಯ ಪರಿಸ್ಥಿತಿ, ಏಕೆ?

***

ಶಾರ್ಪ್ಟನ್ ಮಾಡೋದೆಲ್ಲ ಸರಿಯೇ? ಆತನ ಅಜೆಂಡಾ ಏನು, ಗುರಿ, ಉದ್ದೇಶಗಳೇನು? ಇವೆಲ್ಲದರ ಬಗ್ಗೆ ಬೇಕಾದಷ್ಟು ಕೇಳಿ/ಓದಿ/ನೋಡಿದ್ದೇನೆ - ಇದೆಲ್ಲದರ ಬಳಿಕ ನಮಗೊಬ್ಬ ಶಾರ್ಪ್ಟನ್ ಇದ್ದಿದ್ದರೆ ನಮ್ಮನ್ನು ಉಳಿದವರು ನಡೆಸಿಕೊಳ್ಳುವ ಪ್ರಕ್ರಿಯೆಯಲ್ಲಿ ಬೇಕಾದಷ್ಟು ಬದಲಾವಣೆಗಳಾಗುತ್ತಿದ್ದವೇನೋ ಅಥವಾ ಅದರಿಂದ ಶಾರ್ಟ್‌ಟರ್ಮ್‌ನಲ್ಲಿ ಒಳ್ಳೆಯದಾಗುತ್ತಿತ್ತೇನೋ ಎನ್ನುವ ಆಸೆ ನನ್ನದು; ಜೊತೆಯಲ್ಲಿ ಇಷ್ಟು ವರ್ಷಗಳಿಲ್ಲಿದ್ದರೂ ಇನ್ನೂ ಇಲ್ಲಿನ ಜನರ ಮನದಾಳವನ್ನು ತಿಳಿದುಕೊಳ್ಳಲ್ಲು, ಇಲ್ಲಿನ ಕಾರ್ಯತಂತ್ರವನ್ನು ಅರಿತುಕೊಳ್ಳುವ ಹೆಣಗಾಟವೂ ಇಲ್ಲದೇನಿಲ್ಲ.

ಈಗ ಹೇಳಿ ಅಮೇರಿಕದಲ್ಲಿ ನಮಗೊಬ್ಬ ಶಾರ್ಪ್ಟನ್ ಬೇಕೇ?

Wednesday, April 11, 2007

ದಗಲ್ ಬಾಜಿಗಳು...

ಇದು ಅಪರೂಪಕ್ಕೊಮ್ಮೆ ಆಗೋ ಘಟನೆ ಅಲ್ಲ, ಅಥವಾ ಬೆಂಗಳೂರಿಗೆ ಬರೀ ಸೀಮಿತವಾದ ವಸ್ತುವೂ ಅಲ್ಲ...ಇದೇ ರೀತಿಯ ಘಟನೆಗಳನ್ನು ನಾನು ಬಾಂಬೆ, ಮದ್ರಾಸುಗಳಲ್ಲಿಯೂ ನನ್ನ ಕಣ್ಣಾರೆಯೇ ನೋಡಿದ್ದೇನೆ. ನಮ್ಮ ಅಭಿವೃದ್ಧಿ, ಬೆಳವಣಿಗೆ ನಮ್ಮನ್ನು ಈ ರೀತಿಯ ಕುತಂತ್ರಗಳಿಗೆ ಈಡು ಮಾಡಿಬಿಟ್ಟಿವೆಯೇನೋ ಅನ್ನುವಷ್ಟರ ಮಟ್ಟಿಗೆ ಆಲೋಚಿಸುವಂತಾಗಿದೆ.

ನಿಲ್ದಾಣದ್ಲಲಿ ದಗಲ್ ಬಾಜಿಗಳು...
ಮೆಜೆಸ್ಟಿಕ್ ಸುತ್ತಮುತ್ತ ಸಾಕಷ್ಟು ಬೀದಿ ವ್ಯಾಪಾರಿಗಳನ್ನು ನೀವೂ ನೋಡಿರುತ್ತೀರಿ. ಆದರೆ, ಕೆಲವು ವ್ಯಾಪಾರಿಗಳ್ದಿದಾರೆ. `ರೇಟೆಸ್ಟು?' ಅಂತ ಕೇಳಿದರೆ ಸಾಕು: ರೇಟೂ ಹೇಳುತ್ತಾರೆ; ಕೊಳ್ಳದ್ದಿದರೆ ಏಟೂ ಕೊಡುತ್ತಾರೆ. ಇವರೊಂದಿಗೆ ಪೊಲೀಸರೂ ಸೇರಿಸುತ್ತಾರೆ ಎಂದರೆ ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ, `ರೇಟು ಕೇಳಿ ಏಟು ತಿಂದ' ಪ್ರಕರಣ ...

ನಾವಿರೋ ಜರ್ಸಿ ಸಿಟಿಯಲ್ಲಿ ಸರ್ವೇ ಸಾಮಾನ್ಯವಾಗಿ ನೋಡಲು ಸಿಗುವಂತಹ ಘಟನೆಯೊಂದು ನೆನಪಾಯಿತು - ಸಾಮಾನ್ಯವಾಗಿ ಹಿಸ್ಪ್ಯಾನಿಕ್ ಅಥವಾ ಕಪ್ಪು ಹುಡುಗ/ಹುಡುಗಿಯರು, ರಸ್ತೆ ಮೇಲೆ ಬೇರೆಯವರು ತಮಗೆ ಅಥವಾ ತಮ್ಮ ಕಾರಿಗೆ ಜಾಗ ಬಿಡಲಿಲ್ಲ ಎನ್ನೋ ಕಾರಣಕ್ಕೆ ಮೈಮೇಲೆ ಬಿದ್ದು ಜಗಳ ಮಾಡುವ ಅಥವಾ ಯದ್ವಾತದ್ವಾ ಬೈದು ತಮ್ಮ ಕ್ರೋಧವನ್ನು ಕಾರುವ ಪರಿಸ್ಥಿತಿ ನಮ್ಮಲ್ಲಿ ಯಾವಾಗಲು ಸರ್ವೇ ಸಾಮಾನ್ಯ. ಇಂತಹ ಘಟನೆಗಳಿಗೆ ಯಾರೂ ಗಮನ ಕೊಡೋ ಹಾಗೆ ಕಾಣೋದಿಲ್ಲ, ಸಾಮಾನ್ಯ ನ್ಯಾಯ ಅನ್ನೋದು ಇಲ್ಲಿ ಪ್ರಶ್ನೆಗೂ ನಿಲುಕದಷ್ಟು ದೂರದಲ್ಲಿರುತ್ತೆ, ಇನ್ನು ಉತ್ತರದ ಕಥೆ ಹಾಗಿರಲಿ. ಎಲ್ಲರೂ ಜಾಣಕುರುಡು-ಕಿವುಡುಗಳನ್ನು ಪ್ರದರ್ಶಿಸುವ ಸೋಗಿಗೆ ಮೊರೆ ಹೋಗುತ್ತಾರೆ.

ಈ ಮೇಲಿನ ಘಟನೆ ಬೆಂಗಳೂರಿನಲ್ಲಿ ನನ್ನ ಮುಂದೆ ನಡೆದಿದ್ದರೆ ನಾನೇನು ಮಾಡುತ್ತಿದ್ದೆ, ಪ್ರತಿಭಟನೆಯ ಹಂತ ಎಲ್ಲಿಯವರೆಗೆ ಹೋಗುತ್ತಿತ್ತು? ಇಂತಹದ್ದನ್ನು ನೋಡಿಯೂ ನೋಡದಿರುವಂತಹ ನಗರದ ಮನಸ್ಥಿತಿ ಸರಿಯೋ, ಇದರಲ್ಲಿ ಸಾಮಾಜಿಕ ನ್ಯಾಯವನ್ನು ಆಗ್ರಹಿಸುವ ಮನೋಸ್ಥಿತಿ ದುರ್ಬಲವಾದದ್ದೇ? ದಿನೇ-ದಿನೇ ಮೋಸಮಾಡುವ ಮಾರ್ಗಗಳನ್ನು ಅವಿಷ್ಕರಿಸುವ ವ್ಯಾಪಾರಿಗಳನ್ನು, ಕಾನೂನು ರಕ್ಷಕರನ್ನು ಹದ್ದುಬಸ್ತಿನಲ್ಲಿಡುವವರಾರು? ಇತ್ಯಾದಿ ಪ್ರಶ್ನೆಗಳು ಎಷ್ಟು ಬೇಗ ಮನದಲ್ಲಿ ಮೂಡುತ್ತವೆಯೋ ಅಷ್ಟೇ ಬೇಗ ಮರೆಯಾಗುತ್ತವೆ.

ಇವೆಲ್ಲ ಕಲಿಯುಗದ ಕೊಡುಗೆ - ಎಂದುಕೊಂಡು ಮತ್ತೊಂದು ಯುಗ ಬರುವವರೆಗೆ ಕಾಯುವುದು ಒಂದು ಆಲ್ಟರ್‌ನೇಟಿವ್!

ಒಂದು ನಾಗರಿಕ ಪಡೆಯನ್ನು ಕಟ್ಟಿ ಕಾನೂನನ್ನು ಕೈಗೆತ್ತಿಕೊಳ್ಳದೇ ಇಂತಹ ಕುತಂತ್ರಗಳಿಗೆ ಉತ್ತರವನ್ನು ಹೇಳುವ ಅವಕಾಶವೊಂದಿದ್ದರೆ...ಎಷ್ಟೋ ಸಾರಿ ಹಲುಬಿ ಸುಮ್ಮನಾಗಿರುವುದನ್ನು ಬಿಟ್ಟರೆ, ಅಥವಾ ಈ ರೀತಿ ಬರೆಯೋದನ್ನು ಬಿಟ್ಟರೆ ನನ್ನ ಕೈಯಲ್ಲಿ ಬೇರೇನನ್ನು ಮಾಡಲು ಸಾಧ್ಯವಿಲ್ಲದ ಅಸಹಾಯಕತೆ ಅಷ್ಟೆ.

Sunday, April 08, 2007

ಆ ಹಿರಣ್ಯಕಶ್ಯಪೂ ಅಂತ ಮುಟ್ಠಾಳ್ ನನ್‌ಮಗ ಮತ್ತೊಬ್ಬ್‌ನಿಲ್ಲ!

ನಾನೂ ಸುಬ್ಬನೂ ಕಾಫಿ ಕುಡಿಯುತ್ತಾ ಸಂಜೆ ಆರು ಘಂಟೆ ಚಾನೆಲ್ ಸೆವೆನ್ ನ್ಯೂಸ್ ನೋಡಿಕೊಂಡು ಅದೆಲ್ಲೋ ಬೆಂಕಿ ಹೊತ್ತಿಕೊಂಡು ಉರೀತಾ ಇರೋ ದೃಶ್ಯಗಳನ್ನು ನೋಡ್ತಾ ನೊಣ ಹೋಗೋ ಹಾಗೆ ಬಿಟ್ಟ ಬಾಯನ್ನು ಹಾಗೇ ಬಿಟ್ಟು, ಜೊತೆಯಲ್ಲಿ ಕಣ್ಣು ಮಿಟುಕಿಸದೆ ನೋಡ್ತಾ ಕೂತಿದ್ವಿ. ಆ ನ್ಯೂಸ್ ಸ್ಟೋರಿ ಇನ್ನೂ ಮುಗಿದಿರ್ಲಿಲ್ಲ ಅಷ್ಟ್ರೊಳಗೆ ಫೋನ್ ಘಂಟೆ ಬಜಾಯಿಸಿದ್ದನ್ನು ನೋಡಿ ಕಿರಿಕಿರಿಯಾದ ಮುಖ ಮಾಡಿಕೊಂಡು ಹೋಗಿ ಫೋನ್ ಎತ್ತಿ ನೋಡಿದ್ರೆ ವಾಷಿಂಗ್ಟನ್ ಡಿಸಿಯಿಂದ ಶ್ರೀಕಾಂತ್ ಫೋನ್ ಮಾಡಿದ್ದ.

'ಓ ಏನಯ್ಯಾ ಸಮಾಚಾರ...' ಎಂದು ನಾನು ಮುಖ್ಯಮಂತ್ರಿ ಚಂದ್ರೂ ಥರ ರಾಗ ಹಾಕಿಕೇಳಿದ್ದಕ್ಕೆ, ಆ ಕಡೆಯಿಂದ 'ನನ್ನ ಮಗನ ಬರ್ಥಡೇ ಕಣಯ್ಯಾ...' ಎಂದ, ನಾನು ಒಂದು ಕ್ಷಣವೂ ತಡ ಮಾಡದೇ 'ಹ್ಯಾಪ್ಪೀ ಬರ್ಥಡೇ!' ಎನ್ನೋದೇ ತಡ,

'ನಾಟ್ ಸೋ ಫ್ಯಾಸ್ಟ್...ಸ್ವಲ್ಪ ತಡುಕೋ... ಮುಂದಿನ ತಿಂಗಳು ಐದನೇ ತಾರೀಖು ಅವನ ಮೊದಲ ಹುಟ್ಟಿದ ಹಬ್ಬ, ನೀನು ತಪ್ಪಿಸ್ದೇ ಬರಲೇ ಬೇಕು ನೋಡು, ಅದಕ್ಕೆ ಒಂದು ತಿಂಗಳು ಮೊದಲೇ ಹೇಳ್ತಾ ಇದ್ದೀನಿ, ಆಮೇಲೆ ಎತ್ತ್ ಕರ ಹಾಕ್ತು, ಕೊಟಗ್ಯಾಗೆ ಕಟ್ದೆ ಅನ್ನಬೇಡ ಮತ್ತೆ!' ಎಂದು ಆದೇಶ ಕೊಟ್ಟುಬಿಡಬೇಕೆ.

ಸರಿ ಇನ್ನೇನು ಅವನು ಫೋನು ಇಟ್ಟೇ ಬಿಡ್ತಾನೆ ಅಂತ ಅಂದುಕೊಂಡಿದ್ದು ನನ್ನ ತಪ್ಪಾಗಿತ್ತು, ಅವನು ಬರ್ತೀಯೋ ಇಲ್ಲವೋ ಅಂತ ಹಟಹಿಡಿದು ಕೂತುಬಿಟ್ಟ, ನಾನು ಬೇರೆ ಯಾವ್ದೂ ದಿಕ್ಕು ಕಾಣದೇ, 'ಯಾವ್ದೂ ಎಮರ್ಜನ್ಸಿ ಇಲ್ದೇ ಇದ್ರೇ ಬರ್ತೀನಿ ನೋಡಪ್ಪಾ!' ಎಂದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡು ಸ್ವಲ್ಪ ತಣ್ಣಗಾದೆ, 'ಸರಿ ಇಡ್ತೀನಿ ಮತ್ತೆ...' ಎಂದವನನ್ನು 'ಅಲ್ವೋ ನೀನು ಏಪ್ರಿಲ್ ನಲ್ಲಿ ಮದುವೆಯಾದದ್ದಲ್ವಾ, ಮತ್ತೇ ಮೇ ಗೆ ನಿನ್ನ ಮಗನಿಗೆ ಅದೆಂಗೆ ಒಂದು ವರ್ಷ ಆಯ್ತು... ಎಲ್ಲೋ ಅಮೇರಿಕನ್ ಲೆಕ್ಕಾ ಹಚ್ಚೀದಿ ಏನು?' ಎಂದು ನಕ್ಕೆ. ಅವನು 'ಗುರುವೇ, ಅದು ಎರಡು ವರ್ಷದ ಹಿಂದಿನ ಏಪ್ರಿಲ್ಲು, ನಿನ್ನೆ ಮೊನ್ನೆ ಆದಂಗಿದೆ ಮದುವೆ!' ಎಂದು ಗಹಗಹಿಸಿದ...'ಸರಿ ಮತ್ತೆ...' ಎಂದವನನ್ನು ಕಳಿಸಿಕೊಟ್ಟೆ.

ಇನ್ನೂ ಟಿವಿ ಮುಖ ನೋಡ್ತಾ ಇದ್ದ ಸುಬ್ಬ ಆಗಲೇ ಕಾಫಿ ಹೀರಿ ಲೋಟಾ ಬದಿಗಿಟ್ಟಾಗಿತ್ತು, ನನ್ನ ಕಾಫಿ ಲೋಟ ಅದರ ಬಿಸಿಹಬೆಯನ್ನು ಕಳೆದುಕೊಂಡು ಮಾರ್ಕೆಟ್‌ನಲ್ಲಿ ಒಂದೇ ದಿನದಲ್ಲಿ ಅರ್ಧದಷ್ಟು ಸ್ಟಾಕ್ ಬೆಲೆಯನ್ನು ಕಳೆದುಕೊಂಡ ಸನ್‌ಮೈಕ್ರೋಸಿಸ್ಟಂ ಸ್ಟಾಕ್‌ನಂತಾಗಿಹೋಗಿತ್ತು.

'ಕೊನೆಗೆ...ಬೆಂಕಿ ಕಥೆ ಏನಾಯ್ತು? ಎಷ್ಟು ಜನ ಸತ್ರೋ?' ಎಂದೆ...ಸುಬ್ಬನ ಕಡೆಯಿಂದ ಉತ್ತರ ಬರೋದು ಒಂದು ನ್ಯಾನೋ ಸೆಕೆಂಡು ತಡವಾದಂತೆನಿಸಿತು.

'ಆ ಹಿರಣ್ಯಕಶ್ಯಪೂನಂತ ಮುಟ್ಠಾಳ್ ನನ್‌ಮಗ ಇನ್ನೊಬ್ಬನಿಲ್ಲ!' ಎಂದು ಅದೆಲ್ಲಿಂದ್ಲೋ ಒಂದು ನಾಟಕದ ಡೈಲಾಗೇನೋ ಅನ್ನುವಷ್ಟು ಮಟ್ಟಿಗೆ ಕಾಮ್ ಆಗಿ ಹೇಳಿಬಿಟ್ಟ. ನಾನು ಬೆಂಕಿಗೂ-ಹಿರಣ್ಯಕಶ್ಯಪೂಗೂ ಏನು ಸಂಬಂಧ ಅನ್ನೋ ರೀತಿ ಅವನ ಕಡೆ ನೋಡಿದ್ದಕ್ಕೆ...ನನ್ನ ಕನ್‌ಫ್ಯೂಷನ್ನಿಗೆ ಒಂದು ದಮಡಿ ಬೆಲೇನೂ ಕೊಡದೇ ಅವನು ಮತ್ತೆ ಮುಂದುವರೆಸಿದ...

'ಅದಕ್ಕೇ ತಲೆ ಇಲ್ದಿದ್ದ್ ನನ್‌ಮಕ್ಳು ಅನ್ನೋದ್ ನೋಡು, ಅಷ್ಟೊಂದು ವರ್ಷ ಕಷ್ಟಾಪಟ್ಟು ತಪಸ್ಸು ಮಾಡಿ, ದೇವ್ರು ಎದ್ರಿಗೆ ಬಂದ್ರೆ, ನನಿಗೆ ಹಂಗ್ ಸಾವ್ ಬರಬಾರ್ದು, ಹಿಂಗ್ ಸಾವ್ ಬರಬಾರ್ದು ಅಂತ ಕೇಳಿದ್ನೇ ವಿನಾ, ನಾನೊಂದು ನೂರೋ, ಸಾವ್ರಾನೋ ವರ್ಷಾ ನೆಟ್ಟಗೆ ಬದುಕಿರೋ ಹಂಗ್ ಮಾಡು ಶಿವನೇ ಅಂದಿದ್ರೆ ಅವರಪ್ಪನ್ ಮನೆ ಗಂಟ್ ಹೋಗ್ತಿತ್ತಾ?'

ಇದರಲ್ಲಿ ಯಾವುದೋ ಒಂದು ಪುಡುಗೋಸಿ ಲಾಜಿಕ್ಕಿದೆ, ಆದ್ರೂ ಚಾನೆಲ್ ಸೆವೆನ್ ನ್ಯೂಸಿಗೂ, ಬೆಂಕಿ ಅವತಾರಕ್ಕೂ, ಹಿರಣ್ಯಕಶ್ಯಪೂಗೂ ಎಲ್ಲೆಲ್ಲಿಂದ ಸಂಬಂಧ ಬಂತೋ ಎಂದು ತಲೆಕೆಡಿಸಿಕೊಂಡ ನನ್ನ ಪಜೀತಿ ಸಮಾಜಶಾಸ್ತ್ರದ ಹುಡುಗ ಅಬ್‌ಸ್ಟ್ರ್ಯಾಕ್ಟ್ ಕ್ವಾಂಟಮ್ ಮೆಕ್ಯಾನಿಕ್ಸ್ ತರಗತಿಯನ್ನು ಹೊಕ್ಕಿ ಮೊದಲ ಬೆಂಚಿನಲ್ಲಿ ಕೂತಹಾಗಿತ್ತು.

ಸದ್ಯ, ಸುಬ್ಬನೇ ಸ್ವಲ್ಪ ವಿವರಿಸಿದ, ನಾನು ಇಮಿಗ್ರೇಷನ್ ಆಫೀಸರ್‌ನಿಂದ ತಪ್ಪಿಸಿಕೊಂಡಂತೆ ನಿರುಮ್ಮಳವಾದೆ...'ಅದೇ ನಿಮ್ ಶ್ರೀಕಾಂತ್ ಫೋನ್ ಮಾಡಿದ್ನಲ್ಲಾ, ಅದರ ಸಲವಾಗಿ ಯೋಚ್ನೇ ಮಾಡೋ ಹಂಗಾತ್ ನೋಡು...ಹಿರಣ್ಯಕಶ್ಯಪೂ ರಾತ್ರಿ ಅಲ್ಲ, ಹಗಲ್ ಅಲ್ಲ, ಒಳಗಲ್ಲ, ಹೊರಗಲ್ಲ, ಮೃಗಗಳಿಂದಲ್ಲ, ನರರಿಂದಲ್ಲ...ಮುಂತಾಗಿ ಎಕ್ಸ್‌ಕ್ಯೂಷನ್ ಹಾಕ್ಕೊಂಡ್ ಹೋಗೋ ಬದಲಿಗೆ ದೇವ್ರೇ ನನ್ ಮಗನ ನೂರಾ ಒಂದನೇ ಹುಟ್ಟು ಹಬ್ಬವನ್ನು ನಾನೂ ಇದೇ ದೇಹದಲ್ಲಿದ್ದುಕೊಂಡು ಸೆಲೆಬ್ರೇಟ್ ಮಾಡೋ ಹಾಗೆ ಮಾಡಪ್ಪಾ...' ಎಂದು ಬೇಡಿಕೊಂಡಿದ್ರೆ...ವಿಷ್ಣೂಗೆ ಮತ್ತೊಂದ್ ಅವತಾರ ಎತ್ತೋ ಪಜೀತೀನೂ ತಪ್ತಿತ್ತು, ಮಾಸ್ಟರ್ ಲೋಹಿತ್‌ನ ಪೀಚಲು ಮಾತಿಗೆ ಸಿಟ್ಟಾಗಿ ರಾಜ್‌ಕುಮಾರ್ ಕಂಭಕ್ಕೆ ಹೊಡೆದಿದ್ದಕ್ಕೆ ಬಿದ್ದಿರೋ ನಮ್ ಬೆಂಗ್ಳೂರಿನ ಗಂಗಾರಾಮ್ ಕಟ್ಟಡಾನೂ ಉಳಿಯೋದು, ಏನಂತಿ?!'

'ಗುರುವೇ, ಇದು ಕಲಿಗಾಲ...ಆಗಿನ್ ಕಾಲದ್ದು ಕಥೇನೇ ಬೇರೆ ಇತ್ತು, ದೇವ್ರು ವರ ಕೇಳೋ ಮುಂಚೆ ಈ ರಾಕ್ಷಸರ ಬುದ್ದೀನೆಲ್ಲ ಕಡ್ಡೀ ಹಾಕಿ ಕೆದಡಿ ಬಿಡ್ತಿದ್ದರಂತೆ, ಅಂತಾದ್ದರಲ್ಲಿ ಹಿರಣ್ಯಕಶ್ಯಪೂ ಅಷ್ಟೊಂದ್ ಎಕ್ಸ್‌ಕ್ಲೂಷನ್ ಕಂಡೀಷನ್ನಾದ್ರೂ ಹೇಳ್ದಾ, ಅವನ ಜಾಗ್ದಲ್ಲಿ ನೀನೇನಾದ್ರೂ ಇದ್ರೆ, ಒಂದು ಮಸಾಲೆ..., ಎರಡು ಕಾಲೀ... ಎಂದು ಕೃಷ್ಣಭಟ್ಟರ ಹೋಟ್ಲಿನ ಮಾಣಿಯ ಹಾಗೆ ಆರ್ಡರ್ ಕೊಡ್ತಿದ್ದೆ ನೋಡು' ಎಂದು ನಕ್ಕೆ.

'ಸುಮ್ನೇ ಮಾತಿಗ್ ಅಂದೆ, ಈ ನರಸಿಂಹಾವತಾರದ ಪಾಸಿಬಿಲಿಟಿಯನ್ನು ಯಾವನಾದ್ರೂ ಬಯೋಟೆಕ್ನಾಲಜಿ ಸೈಂಟಿಸ್ಟಿಗೆ ಬಿಡೋಣ...ಅದಿರ್ಲಿ ಮುಂದಿನ್ ತಿಂಗ್ಳು ಶ್ರೀಕಾಂತನ ಮನೆಗ್ ಹೋಗ್ತೀಯೇನು?' ಎಂದ.

'ನೋಡೋಣ, ಇನ್ನೂ ಒಂದ್ ತಿಂಗಳಿದೆಯಲ್ಲಾ...' ಎಂದು ಅದೇನೋ ನೆನಪಾದವನ ಹಾಗೆ ನಟಿಸಿ 'ಹಿರಣ್ಯಕಶ್ಯಪೂ ತಪಸ್ಸು ಮಾಡಿ ವರಕೇಳೋ ಹೊತ್ತಿಗೆ ಅವನಿಗೆ ಮಕ್ಳಿದ್ದವೇನು?' ಎಂದು ಕಣ್ಣು ಮಿಟುಕಿಸಿದೆ.

'ಗೊತ್ತಿಲ್ಲಪ್ಪಾ, ಆಗಿನ್ ಕಾಲದ ತಪಸ್ಸುಗಳೆಲ್ಲ ಹತ್ತು-ನೂರು ವರ್ಷಗಳ ತನಕಾನು ಇರ್ತಿದ್ದವಂತೆ, ಇನ್ನು ಮಕ್ಳು ಮಾಡೋಕೆ ಪುರುಸೊತ್ತೆಲಿರುತ್ತೆ? ಅಕಸ್ಮಾತ್, ಪ್ರಹ್ಲಾದ ಇರಲಿಲ್ಲ ಅಂದುಕೋ, ನಾನ್ ಹೇಳ್‌ಕೊಟ್ಟಂಗೆ ವರವನ್ನು ಕೇಳಿದ್ರೆ ಒಂದಿಷ್ಟು ವರ್ಷ ಆಯಸ್ಸು ಗಟ್ಟಿ ಇರೋದ್ರ ಜೊತೆಗೆ ಒಂದು ಗಂಡ್ ಮಗೂನು ಹುಟ್ಟಿರೋದಾ...' ಎಂದು ಬರೋಬ್ಬರಿ ವ್ಯಾಪಾರವಾದ ಹೊಟೇಲಿನ ಕೃಷ್ಣಭಟ್ಟರ ನಗೆ ನಕ್ಕ.

'ನನಗೇನೋ ಅನುಮಾನ, ನೀನೂ ಅದ್ ಯಾವ್ದೋ ಜನ್ಮದಲ್ಲಿ ಹಿರಣ್ಯಕಶ್ಯಪೂ ಆಗಿದ್ದಿಯೋ ಏನೋ...' ಎಂದು ತಿವಿದೆ, ವಾತಾವರಣ ತಿಳಿಯಾಯಿತು!

Thursday, April 05, 2007

ಮರೆಯಾದ ಮಲೆನಾಡಿನ ಐಸಿರಿ


ತನ್ನ ಪರಿಸರದ ಮೇಲೆ ಅಪಾರವಾದ ಕಾಳಜಿ, ಸುತ್ತಲನ್ನು ಸೂಕ್ಷ್ಮವಾಗಿ ನೋಡೋ ಮನಸ್ಥಿತಿ, ಘಂಟೆಗಟ್ಟಲೆ ಒಂದು ವಸ್ತುವನ್ನು ಅಧ್ಯಯನ ಮಾಡುತ್ತಿದ್ದ ಪಕ್ಷಿ ಬ್ರಹ್ಮ, ಕರ್ವಾಲೋವಿನ ಸೃಷ್ಟಿಕರ್ತ, ಅವರ ಪೀಳಿಗೆಯ ಬರಹಗಾರರಿಗೆ, ಚಿಂತಕರಿಗೆ ಸವಾಲಾಗುವಂತೆ ಆಧುನಿಕ ತಂತ್ರಜ್ಞಾನವನ್ನು ಮನಗಂಡಿದ್ದ ಶೋಧಕ - ಹೀಗೆ ಹಲವಾರು ವಿಶೇಷಣಗಳಿಂದ ತೇಜಸ್ವಿಯವರನ್ನು ಗುರುತಿಸಬಹುದು.

'ಅವರು ಮುಸುಡಿಗೆ ಮಸಿ ಬಳೀದೆ ಫೇರ್ ಅಂಡ್ ಲವ್ಲಿ ಹಚ್ಚೋಕಾಗುತ್ಯೇ?' ಎಂದು ಒಂದೇ ಸಾಲಿನಲ್ಲಿ ಕಿರಣ್ ಮೋರೆ ಪ್ರಸಂಗಕ್ಕೆ ಉತ್ತರಕೊಟ್ಟು ಬುದ್ಧಿಜೀವಿಗಳ ಸೋಗಿನ ಉತ್ತರಕ್ಕೆ ಜೋತು ಬೀಳದೇ ತಮ್ಮ ಮನಸ್ಸಲ್ಲಿದ್ದುದನ್ನು ನೇರವಾಗಿ ಹಂಚಿಕೊಂಡವರು.

ಸೆಲೆಬ್ರಿಟಿಯ ಮಕ್ಕಳಾಗಿ ಹುಟ್ಟಿ ಬೆಳೆದವರಿಗೆ ಅವರದ್ದೇ ಆದ ಒಂದು ಸವಾಲಿರುತ್ತದೆ - ತಮ್ಮ ಪೋಷಕರಿಗಿಂತ ತಾವು ಎಷ್ಟು, ಹೇಗೆ, ಎಲ್ಲಿ ಭಿನ್ನರು ಅಥವಾ ಪೋಷಕರ ನಡೆನುಡಿಗಳಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳಬಹುದು ಅಥವಾ ತಮ್ಮದೇ ಆದ ಒಂದು ಐಡೆಂಟಿಟಿಯನ್ನು ಹೇಗೆ ಸೃಷ್ಟಿಸಿಕೊಳ್ಳಬಹುದು - ತಾವು ಏನು ಮಾಡಿದರೆ ತಮ್ಮ ತಂದೆ-ತಾಯಿಯರ ಸಾರ್ವಜನಿಕ ಬದುಕಿಗೆ ಯಾವ ರೀತಿಯ ಪರಿಣಾಮ ಬೀರುತ್ತದೆ ಮುಂತಾಗಿ ಹಲವಾರು ಆಲೋಚನೆಗಳು ನಿರಂತರವಾಗಿ ಅವರನ್ನು ಸುತ್ತುತ್ತಲೇ ಇರುತ್ತವೆ. ಒಬ್ಬ ರಾಷ್ಟ್ರಕವಿಯ ಮಗನಾಗಿ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳ ಮಗನಾಗಿ, ಒಬ್ಬ ಪ್ರಸಿದ್ಧ ಕವಿ ಕಾದಂಬರಿಕಾರನ ಮಗನಾಗಿ ತಮ್ಮನ್ನು ತಾವು ಗುರುತಿಸಿಕೊಂಡಾಗೆಲ್ಲ ಹೊಸತೇನಿದೆ ಎಂದು ಹಲವಾರು ಬಾರಿ ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಹೀಗಿದ್ದಾಗ್ಯೂ ತಮ್ಮದೇ ವಿಶೇಷತೆಗಳಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಬೇಕಾದವರಾಗಿದ್ದ ತೇಜಸ್ವಿಯವರನ್ನು ಕಳೆದುಕೊಂಡ ಕನ್ನಡ ಸಾರಸ್ವತ ಲೋಕ ಬಡವಾಗಿದೆ ಎಂದೇ ಹೇಳಬೇಕು.

***

ಈ ಎಲ್ಲ ನಿಟ್ಟಿನಲ್ಲಿ ತೇಜಸ್ವಿ (ಪೂಚಂತೇ) ನಮ್ಮ ನಡುವಿನ ಒಬ್ಬ ಮಹಾನ್ ಚೇತನವಾಗಿದ್ದರು. ಕ್ರಾಂತಿರಂಗ-ಸಮಾಜವಾದ ಮುಂತಾಗಿ ಸಾಮಾಜಿಕ-ರಾಜಕೀಯ ಚಳವಳಿಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ೭೦-೮೦ ರ ದಶಕದಲ್ಲಿ ಸ್ವಲ್ಪ ತಿಣುಕಿದಂತೆ ತೋರಿದ್ದರೂ, ಒಬ್ಬ ಬರಹಗಾರನಾಗಿ, ಕೃಷಿಕ-ಆರಂಭಕಾರನಾಗಿ, ಹಾಗೂ ಕನ್ನಡದಲ್ಲಿ ಪಕ್ಷಿಗಳ ಬಗ್ಗೆ ಬರೆದ ಅವರ ಅನೇಕ ಲೇಖನಗಳು, ಅವರು ಸೃಷ್ಟಿಸಿದ ಹಲವಾರು ಪಾತ್ರ-ಚಿತ್ರಣಗಳು ಅವರದ್ದೇ ಆದ ವಿಶೇಷವಾದ ಸ್ಥಾನವನ್ನು ಯಾವತ್ತು ನಮ್ಮ ಮನದಲ್ಲಿ ನಿಲ್ಲಿಸಿದೆ.


ಡಿಸ್ಕವರಿ ಚಾನೆಲ್‌ನಲ್ಲಿ ಹಾರೋ ಓತಿಕ್ಯಾತಗಳನ್ನು ನೋಡಿದಾಗಲೆಲ್ಲ ತೇಜಸ್ವಿಯರ ನೆನಪು ಬರೋದು ಖಂಡಿತ. ಅವರ ಕನ್ನಡದ ಕರ್ವಾಲೋ, ಅದರಲ್ಲಿನ ಚಿಂತನೆಗಳು ಯಾವ ಅಂತಾರಾಷ್ಟ್ರೀಯ ಡಾಕ್ಯುಮೆಂಟರಿಗಿಂತ ಕಡಿಮೆಯೇನಿರಲಿಲ್ಲ. ಮೂಡಿಗೆರೆಯಂತಹ ಊರಿನಲ್ಲಿದ್ದುಕೊಂಡು ಬಹುಮುಖಿ ಚಿಂತನಗಳನ್ನು ನಡೆಸುತ್ತಿದ್ದ ಚೇತನಕ್ಕೆ 'ಅಂತರಂಗ'ದ ನಮನ!

Wednesday, April 04, 2007

Abort, Retry, Ignore?

ನೆನೆಪಿದೆಯೇ, good old DOS days? ಲೇಟ್ ೮೦ರ ದಶಕದಲ್ಲಿ ಕಂಪ್ಯೂಟರ್ ಅಪರೇಟಿಂಗ್ ಸಿಸ್ಟಮ್‌ ಅನ್ನು ಕಲಿತವರಿಗೆ ಡಾಸ್ (ಡಿಸ್ಕ್ ಆಪರೇಟಿಂಗ್ ಸಿಸ್ಟಮ್) ಒಂದು ವರದಾನವಾಗಿದ್ದಿರಬೇಕು, ಏಕೆಂದರೆ ಒಂದು ಸಂಪೂರ್ಣ ಆಪರೇಟಿಂಗ್ ಸಿಸ್ಟಮ್ ಅನ್ನು ಐದೂ ಕಾಲು ಇಂಚು ಪ್ಲಾಪ್ಪಿ ಡಿಸ್ಕ್ ನಲ್ಲಿ ಜನಜನಿತ ಮಾಡುವ ಕಾರ್ಯತಂತ್ರ ಮೈಕ್ರೋಸಾಪ್ಟ್ ನವರಿಗಲ್ಲದೇ ಇನ್ಯಾರಿಗೆ ಸಿದ್ಧಿಸಬೇಕು?

ಡಾಸ್ ದಿನಗಳಲ್ಲಿ ಪ್ರತಿಯೊಂದು ಕಮ್ಯಾಂಡುಗಳ ವಿವರಗಳನ್ನು ಬೆರಳತುದಿಯಲ್ಲಿಟ್ಟುಕೊಂಡು ಅದರ ಕಮ್ಯಾಂಡುಗಳನ್ನು ಕಷ್ಟಮೈಜ್ ಮಾಡಿಕೊಂಡು ನಮ್ಮದೇ ಆದ ಮೆಸ್ಸೇಜುಗಳನ್ನು ಸೃಷ್ಟಿಸಿಕೊಂಡು ಒಬ್ಬೊರಿಗೊಬ್ಬರು ತೋರಿಸಿ ನಗುತ್ತಿದ್ದ ದಿನಗಳವು...ಈಗ ಹಿಂತಿರುಗಿ ನೋಡಿದರೆ ಹತ್ತಿರ ಹತ್ತಿರ ಇಪ್ಪತ್ತು ವರ್ಷಗಳಾಗಿ ಹೋಯಿತೇ ಎನ್ನಿಸಿಬಿಡುತ್ತದೆ, ಆದರೆ ಅವೆಲ್ಲವೂ ನಿನ್ನೆ ಮೊನ್ನೆಯ ಘಟನೆಗಳ ಹಾಗೆ ತೋರಿಬರುವುದು ಆ ದಿನಗಳ ಜೀವಂತಿಕೆಯನ್ನು ತೋರಿಸಿಕೊಡುತ್ತದೆ! (ಬಿಲ್ ಗೇಟ್ಸ್‌ಗೆ ಇನ್ನೂ ಡಾಸ್ ನ ಸೋರ್ಸ್ ಕೋಡ್ ನೆನಪಿದೆಯಂತೆ, ಅದೆ ಬೇರೆ ವಿಷಯ.

ಆಗ ಪ್ಲಾಪ್ಪಿ ಡಿಸ್ಕ್‌ಗಳನ್ನು ಹೆಚ್ಚುಹೆಚ್ಚು ಬಳಸುತ್ತಿದ್ದ ದಿನಗಳಲ್ಲಿ ಯಾವುದಾದರೂ ಡಿಸ್ಕ್ ಅನ್ನು ಹಾಕಿದಾಗ ಅದು ಕರಪ್ಟ್ ಆಗಿಯೋ ಅಥವಾ ಇನ್ಯಾವುದೇ ಕಾರಣಗಳಿಂದಲೋ 'Abort, Retry, Ignore?' (ARI) ಎನ್ನುವ ಮೆಸ್ಸೇಜು ಬರುತ್ತಿದ್ದುದು ಸಾಮಾನ್ಯಾವಾಗಿತ್ತು. ಈ ಮೆಸ್ಸೇಜಿನ ಮೇಲೆ ನನ್ನದೊಂದು ಫಿಲಸಾಫಿಕಲ್ ಹರಟೆಯಷ್ಟೇ:
'Abort, Retry, Ignore?' ಮೆಸ್ಸೇಜುಗಳನ್ನು ನಮ್ಮ ನಡುವಿನ ಸಂಬಂಧಗಳಿಗೂ ಅಪ್ಲೈ ಮಾಡಿದರೆ ಹೇಗೆ? ಹಲವು ವರ್ಷಗಳ ಅಲ್ಲಿ-ಇಲ್ಲಿನ ತಿರುಗಾಟದಲ್ಲಿ, ಕೆಲಸಕ್ಕೆ ಸಂಬಂಧಿಸಿದಂತೆ, ಪ್ರವೃತ್ತಿಗೆ ಸಂಬಂಧಿಸಿದಂತೆ ದೊರೆಯುವ ಅವಕಾಶಗಳಲ್ಲಿ ಎಷ್ಟೋ ಜನ ಬರುತ್ತಾರೆ ಎಷ್ಟೋ ಜನ ಹೋಗುತ್ತಾರೆ, ಇಂಥವರಲ್ಲಿ ನಮ್ಮ ಫೋನ್‌ಗಳಲ್ಲಿರುವ ಕಾಂಟ್ಯಾಕ್ಟ್ ನಂಬರುಗಳಿಂದ ಹಿಡಿದು ಆಡ್ರಸ್ ಬುಕ್ಕುಗಳವರೆಗೆ ಬೇಕಾದಷ್ಟು ಜನ ಬಂದು ಸೇರಿಕೊಂಡರೂ ಅವರನ್ನೆಲ್ಲ ನಾವು ನಮ್ಮ ಅನುಕೂಲಕ್ಕೆ, ಅಗತ್ಯಕ್ಕೆ ತಕ್ಕಂತೆ, ಅಥವಾ ನಮ್ಮ ನಡುವಿನ ಸಂಬಂಧಗಳ ಆಧಾರದ ಮೇಲೆ ಆಗಾಗ್ಗೆ ping ಮಾಡುತ್ತೇವಲ್ಲ...ಅಂತಹ ಇನಿಷಿಯೇಟಿವ್‌ಗಳಿಗೂ ಹಳೇ ಡಾಸ್ ಕಮ್ಯಾಂಡಿನ ಮೆಸ್ಸೇಜನ್ನು ಅಪ್ಲೈ ಮಾಡಿದರೆ ಹೇಗೆ?

Abort - ಕೆಲವು ಸಂಬಂಧಗಳನ್ನು ಸುಲಭವಾಗಿ ಅಬಾರ್ಟ್ ಮಾಡಬಹುದು; ಯಾರಿಗಿದೆ ಅವುಗಳ ಅಗತ್ಯ? ತೊಲಗಿ ಹೋಗಿ ಸಂಬಂಧಗಳೇ ನಿಮ್ಮ ಅಗತ್ಯ ಒಮ್ಮೆ ಇದ್ದಿರಬಹುದು, ಆದರೆ ಈಗ ಇಲ್ಲ - ಏನೋ ಬದುಕಿದ್ದೀರೋ ಇಲ್ಲವೋ ನೋಡಲು ಹೋದರೆ ಎರರ್ ಮೆಸೇಜ್‌ಅನ್ನು ಕಳಿಸುತ್ತೀರೋ? ನಿಮ್ಮನ್ನು ತೆಗೆದುಹಾಕಿ ಬಿಡುತ್ತೇನೆ...ತೊಲಗಿ!

Retry - ಕೆಲವು ಸಂಬಂಧಗಳನ್ನು ರಿ ಟ್ರೈ ಮಾಡಲೇ ಬೇಕಾಗುತ್ತದೆ, ಈಗ ಅವುಗಳ ಅಗತ್ಯವಿದೆಯೋ ಇಲ್ಲವೋ ಮುಂದೆ ಎಂದಾದರೊಮ್ಮೆ ಬೇಕಾಗುತ್ತದೆ ಎಂತಲೋ ಅಥವಾ ಈ ರೀತಿಯ ಸಂಬಂಧಗಳು ಸೂಕ್ಷ್ಮ ಎಂತಲೋ, ಅವುಗಳಿಗೆ ನೋವು ಮಾಡುವ ಕಷ್ಟ ಯಾರಿಗೆ ಬೇಕು ಅಥವಾ ಮತ್ತೊಮ್ಮೆ ಪ್ರಯತ್ನ ಮಾಡಬಾರದೇಕೆ...ಕೊನೆಗೂ ಸಿಗದಿದ್ದರೆ ಅಭಾವ ವೈರಾಗ್ಯದಲ್ಲಿ ಮತ್ತೊಂದನ್ನೇನೋ ಮಾಡಿದರಾಯಿತು!

Ignore - ಇಂತಹ ಸಂಬಂಧಗಳು ಇದ್ದರೂ ಇಲ್ಲದ ಹಾಗೆ ಜಾಣ ಕುರುಡು/ಕಿವುಡುಗಳ ಸಹಾಯದಲ್ಲಿ ಸುಮ್ಮನಿದ್ದರಾಯಿತು, ಅವುಗಳು ಮಾಡುವ ping ಗಳನ್ನು ಪುರಸ್ಕರಿಸಬೇಕು ಎಂದೇನೂ ಇಲ್ಲ. 'ಸದ್ಯಕ್ಕೆ ನಿಮ್ಮ ಅಗತ್ಯ ನಮಗಿಲ್ಲ' ಎನ್ನುವುದೇ ಜಾಣತನವಾಗಿಹೋಗಿ, ಕಡೆಗಣಿಸುವುದೇ ಖಂಡಿತವಾಗಿ ಹೋಗುತ್ತದೆ - ಓಹ್, ನೀವು ಇದ್ದೀರೋ ನನಗೆ ಗೊತ್ತಾಗಲೇ ಇಲ್ಲ!

***

ಒಂದಿಷ್ಟು ಜನ ಈ ಮೇಲಿನ ಮೇಸ್ಸೇಜುಗಳ ಜೊತೆಗೆ Fail ಎನ್ನುವುದನ್ನು ಸೇರಿಸಿಕೊಳ್ಳುತ್ತಾರೆ, ಆದರೆ ನಾನು ಕೇವಲ ARI (ಅರಿ)ಗಳಿಗೆ ಶರಣಾಗುತ್ತೇನೆ. ಫೈಲ್ ಅನ್ನೋದು ನೆಗೆಟಿವ್ ಪದ, ಅದು ನನಗೇಕೆ ಅನ್ವಯವಾಗಬೇಕು, ನಾನು ಸ್ವತಂತ್ರ, ನನ್ನ ಸಂಬಂಧ-ನಡವಳಿಕೆಗಳು ನನ್ನ ಸುತ್ತ-ಮುತ್ತ ಕೇಂದ್ರೀಕರಿಸಿಕೊಂಡಿರುವವು, ಪೈಲ್ಯೂರ್ ಎನ್ನುವುದೇನಾದರೂ ಇದ್ದರೆ ಅದು ನನಗಲ್ಲ, ನಾನು ಊರ್ಧ್ವ ಮುಖಿ, ಆಶಾಜೀವಿ, ನನಗಾನಿಕೊಂಡ ಬದುಕು, ಅದರ ಪರಿಧಿಯಲ್ಲಿ ಸುತ್ತುವ ಸಂಬಂಧಗಳ Fail ಆಗಲಾರವು...ಅರಿಗಳಿಗೆ ಶರಣು...

ಇದೇ ಮಾತನ್ನು ಶಾಂತಿನಾಥ ದೇಸಾಯರ ಥರ ಹೇಳೋದಾರೆ " 'ಅರಿ'ಗಳಿಗೆ ಶರಣು ಹೋಗೋಣ!".

Monday, April 02, 2007

ಹಿರಿಯರು-ಕಿರಿಯರು

ಕ್ರಿಕೇಟ್ ಬಗ್ಗೆ ಬರೆಯೋದಕ್ಕೆ ನಾನ್ಯಾರು, ಬ್ಯಾಟ್ ಮುಟ್ಟದೇ ಎಷ್ಟೊ ವರ್ಷಗಳಾಗಿ ಹೋಗಿರೋವಾಗ...

`ಹಿರಿಯ ಆಟಗಾರರಿಗೆ ಕಿರಿಯರನ್ನು ಕಂಡರೆ ಅಷ್ಟಕ್ಕಷ್ಟೆ. ಅವರಿಗೆ ಸಾಕಷ್ಟು ಅವಕಾಶ ಸಿಕ್ಕಿದರೆ ಎಲ್ಲಿ ತಮ್ಮ ಸ್ಥಾನಕ್ಕೆ ಚ್ಯುತಿ ಬರುತ್ತದೋ ಎಂಬ ಕಾರಣಕ್ಕೆ ಕಿರಿಯರ ಬೆನ್ನುತಟ್ಟುವ ದೊಡ್ಡ ಮನಸ್ಸನ್ನು ಹಿರಿಯರು ಮಾಡಲ್ಲಿಲ. ಅದರಿಂದ ನಾಯಕ ದ್ರಾವಿಡ್ ಮೇಲೆ ಒತ್ತಡವಿತ್ತು' ಎಂಬುದು ಚಾಪೆಲ್ ಅಭಿಪ್ರಾಯ ಎಂದು ಚಾನೆಲ್ ತಿಳಿಸಿದೆ... ಎಂದು ಪ್ರಜಾವಾಣಿ ವರದಿಯಲ್ಲಿ ಓದಿದ ಮಾತ್ರಕ್ಕೆ ನಮ್ಮಲ್ಲಿ ಹಿರಿಯ ಮುಂದಾಳುಗಳು ಕಿರಿಯರನ್ನು ಬೆಂಬಲಿಸೋದೇ ಇಲ್ಲ ಎನ್ನೋ ಮಾತನ್ನು ನಾನು ಒಪ್ಪಲಾರೆ, ಎಲ್ಲ್ರರೂ ಅವರವರ ಅನಿಸಿಕೆಗಳಿಗೆ ಬಾಧ್ಯಸ್ಥರು ಅನ್ನೋ ಹಾಗೆ ಚಾಪೆಲ್ ಅಭಿಪ್ರಾಯದ ಜೊತೆಗೆ ನನ್ನದೂ ಒಂದೆರೆಡು ಇರಬಾರದೇಕೆ?

ನಾವಿಸ್ ಆಟಗಾರನಾಗಿ ಆರಂಭಿಸಿ ವೆಟಿರನ್ ಆಗಿ ರಿಟೈರ್ ಆಗುವವರೆಗೆ ಅಥವಾ ತಂಡದಿಂದ ಹಿಡಿದು ಹೊರಗೆಳೆಯುವವರೆಗೆ ಆಟಗಾರರು ತಮ್ಮ ಹಿಂದೆ Wills ಸಿಗರೆಟ್ಟೋ ಅಥವಾ ಕೋಕಾಕೋಲ ಲೈಯಬಿಲಿಟಿಯ ಟ್ರೈಲ್ ಅನ್ನು ಬಿಟ್ಟು ಕಾಸುಮಾಡಿಕೊಂಡು ಜೀವನ ಪರ್ಯಂತ 'ದೊಡ್ಡ ಮನುಷ್ಯ'ರಾಗಿ ಮೆರೆಯುವರೆಗೆ, ಅಥವಾ 'ದೇಶದ್ರೋಹ'ದ ಪಟ್ಟವನ್ನು ಅನ್‌ಅಫಿಷಿಯಲ್ ಆಗಿ ತಲೆಮೇಲೆ ಹೊತ್ತು ಮುಖ್ಯವಾಹಿನಿಯಿಂದ ದೂರವಾಗುವವರೆಗೆ, ಅಥವಾ ವೈಯುಕ್ತಿಕ ದಾಖಲೆಗಳನ್ನು ಹುಟ್ಟಿಸುವುದೇ ಆಟ - ತಂಡ ಏನು ಬೇಕಾದರೂ ಮಾಡಿಕೊಳ್ಳಲಿ ಎನ್ನುವ ಹಪಾಹಪಿತನದ ದಾಹವನ್ನು ಒಡಲಲ್ಲಿಟ್ಟುಕೊಂಡೋ ಅಥವಾ ಕಾಮೆಂಟರಿ ಬಾಕ್ಸನ್ನು ಒಂದಲ್ಲಾ ಒಂದು ದಿನ ಸೇರುವುದೇ ಜೀವನದ ಪರಮೋದ್ದೇಶವಾಗುವುದಾದರೆ ಹಾಗೇ ಇರಲಿ ಬಿಡಿ, ಯಾರು ಬೇಡಾ ಅಂದೋರು...

ನಿಮಗೆಲ್ಲ ನೆನಪಿದೆಯೇ ಇಲ್ಲವೋ ಇಮ್ರಾನ್ ಖಾನ್ ಪಾಕಿಸ್ತಾನ ತಂಡದಿಂದ ನಿವೃತ್ತಿ ಆಗೋ ಹೊತ್ತಿಗೆಲ್ಲಾ ಒಂದು ಕಿರಿಯ ಪೀಳಿಗೆಯನ್ನು ಬೆಳೆಸಿ ಹೊಸ ತಂಡವನ್ನು ಮುನ್ನಡೆಸೋ ಎಲ್ಲಾ ಕಾರ್ಯತಂತ್ರವನ್ನು ರೂಪಿಸಿ ಆಗಿತ್ತು ಎಂದು ನನ್ನ ನಂಬಿಕೆ. ಬಾಲ್ ಟ್ಯಾಂಪೆರಿಂಗ್‌ನಿಂದ ಹಿಡಿದು ಡ್ರಗ್ ಅಬ್ಯೂಸ್ ಇನ್ಸಿಡೆನ್ಸುಗಳನ್ನೊಳಗೊಂಡು, ಬೆಟ್ಟಿಂಗ್ ಹಗರಣದಲ್ಲಿ ಸಿಕ್ಕಿ ಹಲವಾರು ಸುದ್ದಿಗಳಿಗೆ ಆಹಾರವಾದರೂ ತಂಡದಲ್ಲಿ ಯುವ ಪ್ರತಿಭೆಗಳಿಗೆ ಇಂಬುಕೊಟ್ಟು ಮುನ್ನಡೆಸುವ ಕಾಯಕವನ್ನು ಪಾಕಿಸ್ತಾನದ ಕ್ಯಾಪ್ಟನ್ನುಗಳು ಭಾರತ ತಂಡದವರಿಗಿಂತ ಚೆನ್ನಾಗಿ ಮಾಡಿದ್ದಾರೇನೋ ಎಂದು ನಿಮ್ಮನ್ನೇ ಕೇಳಬೇಕು...ಆದರೆ ನಮ್ಮ ನಾಯಕರು, ಅದರಲ್ಲಿ ನಮ್ಮ ಈಗಿನ ತಂಡದಲ್ಲಿ ಹಿಂದೆ ನಾಯಕರಾಗಿ ಇರುವಂತಹವರು ಇವರೆದ್ದೆಲ್ಲಾ ಏನು ಲೆಗಸಿ ಎಂದು ಬಹಳಷ್ಟು ಯೋಚನೆ ಮಾಡಿದರೆ ಅವರವರ ಪರ್ಸನಲ್ ರೆಕಾರ್ಡುಗಳನ್ನು ಬಿಟ್ಟರೆ ನನ್ನ ಕಣ್ಣಿಗೆ ಬೇರೇನೂ ಕಾಣಲಿಲ್ಲ - ಅದು ನನ್ನ ಕುರುಡುತನವಾದರೆ ಎಷ್ಟೋ ಒಳ್ಳೆಯದು!

ಚಾಪೆಲ್ ಹೇಳಿಕೆಯನ್ನು ಒಬ್ಬ ಕೋಚ್ ಹೇಳಿಕೆ ಎನ್ನುವುದಕ್ಕಿಂತ ಒಬ್ಬ ಹೊರಗಿನವನ ಮಾತಿನಂತೆ ಕೇಳಿ ತಿಳಿದುಕೊಂಡರೆ ಅದರಲ್ಲಿ ಯಾವುದೇ ರಹಸ್ಯವೇನೂ ಇಲ್ಲ - ಪ್ರತಿಯೊಬ್ಬ ಆಟಗಾರ ತಂಡದಲ್ಲಿ ಆರಂಭಿಸಿ ಬೆಳೆದು, ನಿವೃತ್ತಿ ಹೊಂದುವ ಹೊತ್ತಿಗೆ ತನ್ನದೇ ಆದ ಒಂದು ಐತಿಹಾಸಿಕ ದಾಖಲೆಯನ್ನು ಬಿಡುವುದರ ಜೊತೆಗೆ ಕ್ರಿಕೆಟ್ಟನ್ನು ಐದು-ಹತ್ತು ವರ್ಷಗಳ ಭವಿಷ್ಯದ ಕಾಲಚಕ್ರದಲ್ಲಿ ನೋಡುತ್ತಾರೋ ಇಲ್ಲವೋ ಎನ್ನುವುದನ್ನು ಸತ್ಯಾನ್ವೇಷಿಗಳಿಗೇ ಬಿಡೋಣ, ಏಕೆಂದರೆ ನಮ್ಮಂತಹ ಸಾಧಾರಣದವರು ಹುಡುಕಿದರೆ ಸಿಗುವಂತಹ ಸರಳ ಸತ್ಯವದೇನೂ ಅಲ್ಲ!

ಟೀಮ್ ಸ್ಪಿರಿಟ್ ಸರಿ, ಎಲ್ಲ ಜೊತೆಗೂಡಿ ಆಡಿ ಟೀಮಿನ ಗುರಿಯನ್ನು ಮುಟ್ಟುವುದು ಸರಿ, ಮುಂದೆ ಟೀಮಿನಿಂದ ವ್ಯವಸ್ಥಿತವಾಗಿ ಹೊರಸರಿಯುವ ಮುನ್ನ, ಸರಿದ ಮೇಲೆ ಹಿರಿಯ ಮುಂದಾಳುಗಳು, ಅನುಭವಿಗಳು ತಮ್ಮ ಸಾರವನ್ನು, ಹಿತವಚನವನ್ನು ಕಿರಿಯರ ಸೋಲಿನ-ಗೆಲುವಿನಲ್ಲಿ ಕಂಡುಕೊಂಡಿದ್ದರೆ...ಎನ್ನುವುದೊಂದು ಆಶಾವಾದವಷ್ಟೇ!

Sunday, April 01, 2007

Heavy Metal


ನಾವೆಲ್ಲ ಯಾವ್ದೋ ಆಫೀಸ್ ಸಂಬಂಧಿ ಕೆಲಸದಲ್ಲಿ ಒಂದು ಹತ್ತು ಜನ ದೊಡ್ಡದೊಂದ್ ಕಾನ್‌ಫರೆನ್ಸ್ ರೂಮು ಹಿಡಿದು ವಾರಗಟ್ಟಲೆ ಕೆಲಸ ಮಾಡೋ ಪ್ರಸಂಗವೊಂದು ಇತ್ತೀಚೆಗೆ ಬಂದಿತ್ತು - ರಿಲೀಸ್ ಸಂಬಂಧಿ ಕೆಲಸಗಳಿಗೆ 'ವಾರ್ ರೂಮ್' ಅಂತ ಕರೆದುಕೊಂಡು ಅಲ್ಲಿ ತಲೆಕೆಡಿಸುವ, ಕೆಡಿಸಿಕೊಳ್ಳಬಹುದಾದ ವಿಷಯಗಳನ್ನೆಲ್ಲ ಒತ್ತೊಟ್ಟಿಗೆ ಹಾಕಿಕೊಂಡು 'ಕುಕ್' ಮಾಡುವ, ಅವುಗಳನ್ನು ಸಂಶೋಧಿಸಿ, ಝಾಡಿಸಿ ನೋಡಿ ಸೊಲ್ಯೂಷನ್ ಕಂಡುಹಿಡಿಯಲ್ ಒಬ್ಬೊಬ್ಬರ ಒಂದೊಂದು ಬ್ರೈನ್ ಸಾಕಾಗೋದಿಲ್ಲ, ಅದರ ಬದಲಿಗೆ ಹಲವರ ಹತ್ತು ಬ್ರೈನ್‌ಗಳನ್ನು ಕಂಬೈನ್ ಮಾಡಿ ಆ ಸಿನರ್ಜಿಯಿಂದ ಪ್ರಪಂಚ ಉದ್ಧಾರವಾದೀತೇನೋ ಎಂಬುದು ನಮ್ಮ ದೊಡ್ಡವರ ದೂರದೃಷ್ಟಿ, ಆದರೆ 'ವಾರ್ ರೂಮ್' ಗಳು ಹರಟೆ ಕೋಣೆಗಳಾಗುವುದಕ್ಕೆ ಹೆಚ್ಚು ಹೊತ್ತೇನೂ ಬೇಕಾಗೋದಿಲ್ಲ, ಒಂದೆರಡು ದಿನಗಳಲ್ಲೇ ಎಲ್ಲರ ಒಳ-ಹೊರಗಿನ ವಿಷಯಗಳು ಹೊರ-ಒಳ ಬಂದು ಅದು ಚರ್ಚಾಸ್ಪದವಾಗುವುದು ನಮ್ಮಲ್ಲಿ ಸಾಮಾನ್ಯವಾಗಿತ್ತು.

ಯಾವನೋ ಒಬ್ಬ ಸಮಯ ಸಿಕ್ಕಾಗ ಇಂಟರ್ನೆಟ್ ರೆಡಿಯೋದಲ್ಲಿ ಅದೇನನ್ನೋ ಹೊರಡಿಸಿ ರೂಮನ್ನು ಆ ಸಂಗೀತ/ಹಾಡುಗಳಿಂದ ಕಲಕುವ ಪ್ರಯತ್ನ ಮಾಡುತ್ತಿದ್ದ ಸುಸಮಯದಲ್ಲಿ ನಾನು ನನ್ನ ಕೆಲಸವನ್ನು ಮಾಡಿಕೊಂಡು ಸುಮ್ಮನಿದ್ದಾಗ ನನ್ನ ಬಾಸ್ 'what is your favourite music?' ಎಂದು ನನ್ನನ್ನುದ್ದೇಶಿಸಿ ಪ್ರಶ್ನೆಯನ್ನು ಎಸೆದುಬಿಡೋದೆ? ಗದ್ದಲವೆದ್ದ ವಾರ್ ರೂಮ್ ನಿಶ್ಯಬ್ದದ ಸ್ನೇಹಿತನಾಗಿ ಕ್ಷಣ ಕಾಲದಲ್ಲಿ ಬದಲಾಗಿ ಹೋಯಿತು. ಎಲ್ಲರೂ ಉತ್ತರಕ್ಕೆಂದು ನನ್ನ ಮುಸುಡಿಯನ್ನು ನೋಡುತ್ತಿದ್ದಾರೇನೋ ಎಂದೆನ್ನಿಸಿ ನನಗೆ ಸುಮಾರಾಗಿ ಹೋಯಿತು - rhetorical ಪ್ರಶ್ನೆಯನ್ನೂ ಸೀರಿಯಸ್ಸಾಗಿ ತೆಗೆದುಕೊಳ್ಳೋ ನನ್ನಂತಹವನಿಗೆ ಇನ್ನು ಬಾಸ್ ನೇರವಾಗಿ ಪ್ರಶ್ನೆ ಕೇಳಿಬಿಟ್ಟರೆ...

ಸುಮ್ನೇ 'hip-hop' ಅಥವಾ 'rap' ಎಂದು ಮುಗುಳ್ನಕ್ಕು ಸುಮ್ಮನಿರಬಹುದಿತ್ತು, ಆದರೆ ಅದರ ನಂತರ ಬರುವ 'who's your favourite?' ಎನ್ನುವ ಪ್ರಶ್ನೆಗೆ ಏನು ಉತ್ತರ ಹೇಳೋದು....'Notorious BIG...' ಎಂದು 'Biggie Biggie Biggie can't you see, sometimes your word just hyptnotize me...' ಎಂದು ಹಾಡಿ ತೋರಿಸಬಹುದಿತ್ತೋ ಏನೋ, ಆದರೆ ಅದು ನನ್ನ ನಿಜವಾದ ಉತ್ತರವಲ್ಲ...,ಒಂದು ರೀತಿ Lier Lier ಸಿನಿಮಾದ ಜಿಮ್ ಕ್ಯಾರಿಯ ಪರಿಸ್ಥಿತಿ.

'classical' ಎಂದು ಬೆಥೋವನ್ನೋ, ಮೋಝಾರ್ಟೋ, ಎಂದು ಸುಮ್ಮನಿದ್ದಿರಬಹುದಿತ್ತು...ಆದರೆ 'really?' ಎಂದು ಅದರ ಹಿಂದೆ ನನ್ನನ್ನೇ ಪ್ರಶ್ನಿಸುವ ಮನದೊಳಗಿನ ಸರದಾರರನ್ನು ಹೇಗೆ ಸುಮ್ಮನಿರಿಸೋದು?

Snoop Dawg, 50 cents, Usher, Rickie Martin, Reeba McEntire, LeAnn Womack, Jennifer Lopez, Eddier Vedder, ಮುಂತಾದವರ ಮುಖಗಳು ಹಳೇ ಕನ್ನಡ ಸಿನೆಮಾದ ಪ್ಲ್ಯಾಷ್‌ಬ್ಯಾಕಿನಂತೆ ಮನಃಪಟಲದಲ್ಲಿ ಒಂದು ನ್ಯಾನೋಸೆಕೆಂಡಿನಲ್ಲಿ ಮೂಡಿ ಮರೆಯಾದವು.

What ever happens...ಎಂದುಕೊಂಡು ನನ್ನ ನಿಜವಾದ ಉತ್ತರವನ್ನು ಹೇಳಿದೆ ...'h e a v y m e t a l'
'really!?' ಎಂದು ಹಲವಾರು ಬಿಳಿ/ಕಪ್ಪು ಗಂಟಲೊಳಗಿನ ಸ್ವರಗಳು ಅಂಬಿನಿಂದ ಹೊರಟ ಬಾಣದಂತೆ ನನ್ನ ಕಿವಿ ಪರದೆಯನ್ನು ತಲುಪಿದವು...ಅವರು ನನ್ನಿಂದ ಈ ಉತ್ತರವನ್ನು ಏಕೆ ನಿರೀಕ್ಷಿಸಲಾರರು ಎಂದು ನನಗೆ ಚೆನ್ನಾಗಿ ಗೊತ್ತು, ಆದರೂ ನಿಜವಾಗಿ ಹೇಳೋದಾದರೆ ಅವರು ಅರ್ಥ ಮಾಡಿಕೊಂಡ/ಮಾಡಿಕೊಳ್ಳಬಲ್ಲ ಸಂಗೀತದ ಸೀಮಿತೆಯಲ್ಲಿ ಹೆವಿ ಮೆಟಲ್ಲನ್ನು ನಾನು ಹೆಚ್ಚೂ ಕಡಿಮೆ ಆರಾಧಿಸೋದು ಎಂದರೆ ತಪ್ಪಾಗಲಾರದು... ಸರಿ, '...like what bands?' ಎಂದು ನನ್ನ ತಲೆಯನ್ನು ಕೊರೆಯುವ ಪ್ರಶ್ನೆಗಳಿಗೆ ನಿಧಾನವಾಗಿ 'Led Zeppelin..., Def Leppard...' ಎಂದೆ, ಕೆಲವರು '80s...' ಎಂದರು, ಇನ್ನು ಕೆಲವರು ಪ್ರಶ್ನಾರ್ಥಕವಾಗಿ ನೋಡುತ್ತಾರೆ ಎನ್ನುವುದನ್ನು ಬಿಟ್ಟರೆ ಮತ್ತೇನನ್ನೂ ಹೇಳಲಿಲ್ಲ.

ನನಗೆ ಉತ್ತರಾದಿ ಸಂಗೀತದ ಅಬ್‌ಸ್ಟ್ರ್ಯಾಕ್ಟ್ ರಾಗಗಳಲ್ಲಿ ಅಸ್ಥೆ ಹೆಚ್ಚು, ದಕ್ಷಿಣಾದಿ ಅಷ್ಟಕಷ್ಟೇ, ಹೆಚ್ಚು ಹಿಡಿಸೋದಿಲ್ಲ ಎನ್ನೋದಕ್ಕಿಂತ ರಾಗ ನುಡಿಸುವ ಕೊರಳು, ಬೆರಳುಗಳಿಗೆ ಚಿನ್ನದ ಉಂಗುರ, ಝರಿಯ ಪೀತಾಂಬರದ ಸೋಗನ್ನು ಲೇಪಿಸಿ ಕೃಷ್ಣನೇ ಸರ್ವಸ್ವ ಎಂದು ಹಾಡುವ ಹಾಡುಗಳಲ್ಲಿ ಪದಲಾಲಿತ್ಯ ನನಗೆ ಇಷ್ಟವಾದಂತೆ ಆ ರಾಗದ ಮಾಧುರ್ಯತೆ, ಕೃಷ್ಣನ ಮೂರ್ತಿಯನ್ನು ಮನದಲ್ಲಿ ಅಷ್ಟೊಂದು ವಿಜೃಂಬಣೆಯಿಂದ ತಂದೇನೂ ನಿಲ್ಲಿಸೋದಿಲ್ಲ. ಅದರ ಬದಲಿಗೆ ಸಂಗೀತ ಸಾಗರದಲ್ಲಿ ಕಷ್ಟಪಟ್ಟು ಈಜಿ, ಕೊಳೆಯಾದ ಬನೀನಿನಲ್ಲೇ ಕಚೇರಿ ಕೊಡುವ ನಮ್ಮ ಗುರುಗಳು ನನಗೆ ಬಹಳ ಅಚ್ಚುಮೆಚ್ಚು. ಉತ್ತರಾದಿ ಸಂಗೀತಕ್ಕೆ ಕೃಷ್ಣನ ವರ್ಣಿಸಿ ಹಾಡಬೇಕಾದ ಮಿತಿಯಿಲ್ಲ, ಜರಿ ಪೀತಾಂಬರ ಸೋಗಿಲ್ಲ, ಕೈಯ ಬೆರಳುಗಳಲ್ಲಿ ಶೋಭಿಸುವ ಉಂಗುರಗಳಿರಲಿ, ಉಗುರು ಕತ್ತರಿಸುವ ಅಭೀಪ್ಸೆಯೂ ಇಲ್ಲ. ಉತ್ತರಾದೀ ಸಂಗೀತಕ್ಕೆ ಬ್ರಾಹ್ಮಣನೇ ಆಗಬೇಕು ಎಂದೇನೂ ಇಲ್ಲ, ಮುಸಲ್ಮಾನರೂ ಹಾಡಿ ಸೊಬಗನ್ನು ಹೆಚ್ಚಿಸಿ ಅಫಘಾನಿಸ್ತಾನದಿಂದ ಹಿಡಿದು ಹಿಂದೂಸ್ಥಾನದ ವರೆಗೆ ಯಾವ ಮಾರುತಕ್ಕೂ ಸಿಕ್ಕದೇ ಇವತ್ತಿಗೆ ಜನನಾಡಿಯಾಗಿರೋದೆ ಅದಕ್ಕೆ ಸಾಕ್ಷಿ - ಬೇಕಾದರೆ ಅಫಘಾನಿಸ್ತಾನದ ಬಗೆಗಿನ ಡಾಕ್ಯುಮೆಂಟರಿಯಲ್ಲಿನ ವೋಕಲ್ ಅನ್ನು ಕಣ್ಣು ಮುಚ್ಚಿ ಆಸ್ವಾದಿಸಿ ಅದರ ಆಂತರಿಕ ಸೌಂದರ್ಯವನ್ನು ನೀವೇ ನೋಡಿ!

ಈ ದೇಶಕ್ಕೆ ಬಂದ ಹೊಸತರಲ್ಲಿ ಒಂದಿಷ್ಟು ರೆಡೀಯೋ ಸ್ಟೇಷನ್ನುಗಳನ್ನು ಟ್ಯೂನ್ ಮಾಡಿ ನೋಡಿ/ಕೇಳುತ್ತಿದ್ದ ಸಂದರ್ಭಗಳಲ್ಲಿ ಬೇರೆಲ್ಲ ಸಂಗೀತಗಳು ಅವುಗಳ ಮಾಧುರ್ಯವನ್ನು ಆ ಕ್ಷಣಕ್ಕೆ ನಿರ್ಮಿಸಿ ಮುಂದೆ ಹೋಗುತ್ತಿದ್ದವೇ ವಿನಾ ನನಗೆ ಅವುಗಳ ಪದಗಳು ಹೆಚ್ಚು ಗೊತ್ತಾಗುತ್ತಿರಲಿಲ್ಲ. ಆ ಮೊದಲಿನ ದಿನಗಳಲ್ಲೇ ನಾನು ಹೆವಿ ಮೆಟಲ್, ರಾಕ್ ಮ್ಯೂಸಿಕ್‌ಗಳಿಗೆ ಒಂದು ರೀತಿಯ ದಾಸನಾಗಿದ್ದು. ಇಲ್ಲಿ ಪದಗಳು ತಿಳಿಯದಿದ್ದರೇನಂತೆ, ಆ ಬ್ಯಾಸ್ ಗಿಟಾರಿನ ಕಂಪನದ ಮೇಲೆ ಮನಸ್ಸನ್ನು ನಿಲ್ಲಿಸಿದ್ದೇ ಆದರೆ ಸ್ವರ್ಗಕ್ಕೆ ಒಂದೆರೆಡು ಇಂಚಾದರೂ ಹತ್ತಿರವಾದಂತೆಯೇ ಸರಿ!

ಹೀಗೆ 'heavy metal' ಅನ್ನು ಉತ್ತರವಾಗಿ ಕೊಟ್ಟು, ನನಗೆ ತಿಳಿದ ಒಂದೆರಡು ಕಲಾವಿದರ ಬಗ್ಗೆ ವಿವರಿಸಿದ ಮೇಲೆ 'ಓಹ್' ಎನ್ನುವ ಉದ್ಗಾರ ಸುತ್ತಲಿನಿಂದ ಬಂದಿತಲ್ಲದೇ ವಾರ್ ರೂಮಿನ ಜನರು ಅಂದಿನಿಂದ ನನ್ನನ್ನು ಬೇರೆ ರೀತಿಯಲ್ಲಿ ನೋಡತೊಡಗಿದ್ದು ಕಾಕತಾಳೀಯವೇನಲ್ಲ!


***

ನಾನು ಈ ದೇಶದಲ್ಲೇ ಹುಟ್ಟಿ ಬೆಳೆದವನಾಗಿದ್ದರೆ ಉದ್ದಕ್ಕೆ ಕೂದಲನ್ನು ಬಿಟ್ಟು, ಗಡ್ಡಧಾರಿಯಾಗಿ ಇಂತಹ ಯಾವುದಾದರೊಂದು ಹೆವಿ ಮೆಟಲ್ ಬ್ಯಾಂಡನ್ನೊಂದು ಹಿಡಿದುಕೊಂಡು ಅವರ ಜೊತೆಯಲ್ಲೇ ಸುತ್ತುತ್ತಿದ್ದೆ ಎನ್ನೋದು, ನಾನು ನಮ್ಮವರ ನಡುವೆ ಹಂಚಿಕೊಳ್ಳುವ ಜೋಕ್ ಅಥವಾ ಸತ್ಯಸಂಗತಿ!