Saturday, October 21, 2006

ದೀಪಾವಳಿಯ ನೆನಪುಗಳು

ದೀಪಾವಳಿಯ ಶುಭಾಶಯಗಳು!

***
ಮೊದಲೆಲ್ಲ ಮನೆಯಲ್ಲಾದರೆ ಅಮ್ಮ ನರಕಚತುರ್ದಶಿ ದಿನ ಇನ್ನೂ ನಾಲ್ಕೂವರೆ ಆಗುತ್ತಿದ್ದಂತೆಯೇ ನಮಗೆಲ್ಲ ಅಭ್ಯಂಜನ ಮಾಡುವಂತೆ ತಾಕೀತು ಮಾಡುತ್ತಿದ್ದಳು. ಆಗೆಲ್ಲ ಇನ್ನೂ ಛಳಿಯಲ್ಲೇ ಎದ್ದು ಯಾವುದೋ ತಪ್ಪಿಗೆ ಶಿಕ್ಷೆಯೆಂಬಂತೆ ಎಣ್ಣೆ ಹಚ್ಚಿಕೊಂಡು ಸ್ನಾನಮಾಡಿ ದೇವರಿಗೆ ಕೈ ಮುಗಿಸಿ ಉಸಿರು ಬಿಡುವುದರೊಳಗೆ ನಿದ್ರೆ ಮತ್ತೆ ಆವರಿಸಿಕೊಳ್ಳುತ್ತಿದ್ದರೂ ಯಾವುದೋ ಅವ್ಯಕ್ತ ಹೆದರಿಕೆ ಆ ನಿದ್ರೆಯನ್ನು ದೂರ ಓಡಿಸುತ್ತಿತ್ತು.

ಚುಮುಚುಮು ಛಳಿಗೆ ಬೆಂಕಿ ಕಾಯಿಸಿಕೊಳ್ಳುವುದಂದರೇನು, ಹಿತ್ತಲಲ್ಲಿ ಬಿದ್ದ ತರಗೆಲೆಗಳನ್ನೆಲ್ಲ ಒಂದೊಂದಾಗಿ ಹೆಕ್ಕಿ, ಗುಡಿಸಿ ಜೋಡಿಸಿಟ್ಟು ಬೆಂಕಿಗೆ ನಿಧಾನವಾಗಿ ತಳ್ಳಿ ಒಣಗಿದ್ದ ಎಲೆಗಳು ಮುದುರಿ ಬೂದಿಯಾಗುವುದನ್ನು ನೋಡುತ್ತಾ ಮಜಾ ಮಾಡುವುದೆಂದರೇನು. ಗೋಪೂಜೆಗೆ ತಯಾರಿ ಮಾಡುವುದರಿಂದ ಹಿಡಿದು ಮರುದಿನದ ಲಕ್ಷ್ಮೀ ಪೂಜೆಗೂ ಅದಾಗಲೇ ಸಕಲ ಸಿದ್ಧತೆಗಳು ನಡೆಯುತ್ತಿದ್ದವು.

***

ಬೋಸ್ಟನ್‍ನಲ್ಲಿ ಯಾವುದೋ ಹೊಟೇಲ್ ಒಂದರಲ್ಲಿ ಈ ವರ್ಷ ದೀಪಾವಳಿಯನ್ನು ಕಳೆಯುತ್ತಿರುವುದು ನನ್ನ ಹಣೆಬರಹ. ನಮ್ಮ ಪ್ರಾಜೆಕ್ಟ್‌ನ ಎರಡನೇ ಫೇಸ್ ಇಂದು ಬಿಡುಗಡೆ ಆಯ್ತು, ಹಗಲೂ-ರಾತ್ರಿ ಸಮರೋಪಾದಿಯಲ್ಲಿ ಎಷ್ಟೋ ಜನ ಕೆಲಸ ಮಾಡ್ತಾ ಇರೋದನ್ನ ನೋಡಿದ್ರೆ ಒಂದು ಕಡೆ ಸಂತೋಷವಾಗುತ್ತೆ, ಮತ್ತೊಂದು ಕಡೆ ಅಷ್ಟೇ ದುಃಖವಾಗುತ್ತೆ. ಭಾರತದಲ್ಲಿರೋ ನಮ್ಮ ಕಂಪನಿಯಲ್ಲಿ ಸುಮಾರು ನಲವತ್ತು ಜನರನ್ನು ಅಗತ್ಯ ಬಿದ್ದರೆ ಕೆಲಸಕ್ಕೆ ಕರೆಯುತ್ತೇವೆ, ನೀವು ಊರು ಬಿಟ್ಟು ಎಲ್ಲೂ ಹೋಗಬೇಡಿ ಎಂದು ಬೇರೆ ಹೇಳಿದ್ದಾರಂತೆ. ಪಾಪ, ವರ್ಷಾವಧಿ ಹಬ್ಬದ ಹೊತ್ತಿನಲ್ಲಿ ಭಾರತದಲ್ಲಿ ಎಷ್ಟೋ ಜನ ತಮ್ಮ-ತಮ್ಮ ಊರುಗಳಿಗೆ ಹೋಗದೇ ಮದ್ರಾಸ್ ಹಾಗೂ ಹೈದರಾಬಾದ್‌ನಲ್ಲಿ ಸುಮ್ಮನೇ ಕಾದುಕೊಂಡಿದ್ದೇ ಬಂತು, ನಾವೆಣಿಸಿದಂತೆ ಎಲ್ಲ ಕಾರ್ಯಗಳೂ ಸುಸೂತ್ರವಾಗಿ ನಡೆದು ನಮಗೆ ಭಾರತದಲ್ಲಿನ ಕೆಲಸಗಾರರ ಅಗತ್ಯ ಇಂದು ಬೀಳಲಿಲ್ಲ.

ಸಾಲಿನಲ್ಲಿ ಮೊದಲ ವ್ಯಕ್ತಿಯಾಗಿ ನಿಂತು ಆಲೋಚಿಸುವುದನ್ನು ಕಲಿಯಬೇಕಾದ ಅಗತ್ಯ ನನಗೆ ಬಹಳಷ್ಟಿದೆ. ಯಾವುದೋ ಒಂದು ಮೀಟಿಂಗ್‌ನಲ್ಲಿ ಭಾರತದಲ್ಲಿ ದೀಪಾವಳಿ ಹಬ್ಬದ ವತಿಯಿಂದ ರಜೆ ಇರುವುದು ಗೊತ್ತಿದ್ದೋ ಇಲ್ಲದೆಯೋ ಯಾರೋ ಮೇಲಿನವರು ದಿಢೀರನೆ 'ನಾವು ಭಾರತದಲ್ಲಿನ ಕೆಲಸಗಾರರನ್ನು ನಿಮ್ಮ ಸಹಾಯಕ್ಕೆ ಅನುವಾಗಿಡುತ್ತೇವೆ' ಎಂದು ಒಪ್ಪಿಕೊಂಡಾಕ್ಷಣ, ಆ ಕ್ಷಣದಲ್ಲಿ ನನ್ನಂತಹವರಿಗೆ ಅಲ್ಲಿನವರ ಸಂಕಷ್ಟಗಳ ಪರಿಚಯವಿದ್ದೂ ಆ ಬಗ್ಗೆ ಒಂದು ಮಾತನ್ನು ಆಡಲು ಗಂಟಲು ಬಿದ್ದು ಹೋಗಿಬಿಡುತ್ತದೆ. ಇಲ್ಲಿ ಯಾರು ಯಾರು ಯಾವ ಲೆವೆಲ್‌ನಲ್ಲಿ ಇದ್ದಾರೆ ಎನ್ನುವುದು ಮುಖ್ಯವೋ? ಯಾರು ಯಾವ ಮಾತನ್ನು ಆಡಬೇಕೋ ಅಷ್ಟನ್ನೇ ಆಡಬೇಕು ಎನ್ನುವ ಪ್ರಾಕ್ಟಿಕಾಲಿಟಿ ಪ್ರಸ್ತುತವೋ? ಅಥವಾ 'ನಿಮಗೆ ಇಲ್ಲಿ ಕ್ರಿಸ್‌ಮಸ್ ಇರುವ ಹಾಗೆ ಭಾರತದಲ್ಲಿ ದೀಪಾವಳಿ' ಎಂದು ಸಾರಿ ಹೇಳುವ ಎಮೋಷನಲ್ ಒತ್ತಡವೋ? ಅಥವಾ ಈ ರೀತಿಯ ಆಲೋಚನೆಯೇ ಬರದೇ ಇರಬಹುದಾದ ಬರಡಾದ ಮನಸ್ಸೋ? ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಮುಂದಾಳುವಾಗಿ ತನ್ನನ್ನು ಗುರುತಿಸಿಕೊಳ್ಳುವಲ್ಲಿ ಹಲವಾರು ಮಜಲುಗಳಲ್ಲಿ ನಿಂತು ಆಲೋಚಿಸಬೇಕಾದ ಅಗತ್ಯವಿದೆ, ಈ ರೀತಿಯ ಅಗತ್ಯ ಎನ್ನೋದು ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಪ್ರತಿಭೆಯೋ ಅಥವಾ ತನ್ನನ್ನು ತಾನು ರೂಢಿಸಿಕೊಳ್ಳುವ ಕ್ರಮವೋ, ಯಾರು ಬಲ್ಲರು.

***

ಸುಮಾರು ಏಳೆಂಟು ವರ್ಷಗಳ ಹಿಂದಿನ ಮಾತು. ನಮ್ಮ ಸಹೋದ್ಯೋಗಿ ಅರುಣ್ ಹೊಸದಾಗಿ ಮದುವೆಯಾದ ವರ್ಷ. ಆತನಿಗೂ ಅದು ಮೊದಲ ದೀಪಾವಳಿ ಹೆಂಡತಿಯೊಂದಿಗೆ. ಮೊದಲೆಲ್ಲ ನಮ್ಮ ಜೊತೆ ನಮ್ಮ ಹಾಗೆ ಒಂದು ಊಟದ ಡಬ್ಬಿಯನ್ನು ಆಫೀಸಿಗೆ ತರುತ್ತಿದ್ದವನು ಮದುವೆಯಾದ ಮೇಲೆ ನಾಲ್ಕೈದು ಬಾಕ್ಸುಗಳನ್ನಾದರೂ ತಂದು ತನ್ನ ಮುಂದೆ ಟೇಬಲ್ಲಿನ ಮೇಲೆ ಹರವಿಕೊಳ್ಳುತ್ತಿದ್ದವನನ್ನು ನಾವು ಡ್ರಮ್ಮಿಷ್ಟ್ ಎಂದೇ ಕರೆಯತೊಡಗಿದ್ದೆವು. ಒಂದು ಬಾಕ್ಸಿನಿಂದ ನಾಲ್ಕು ಬಾಕ್ಸಿಗೆ ಬೆಳೆದ ಬಡ್ತಿ ಅಷ್ಟೇ ಬೇಗನೆ ತಿರುಗಿ ಮತ್ತೆ ಒಂದು ಬಾಕ್ಸಿಗೆ ಬಂತು, ಅದು ಬೇರೆ ವಿಚಾರ.

ಅರುಣನ ಮೊದಲ ನರಕಚತುರ್ದಶಿಯನ್ನು ನೆನಪಿಸಿ ಅವನಿಗೆ ಇವತ್ತಿಗೂ ನಾನು ತಮಾಷೆ ಮಾಡುತ್ತೇನೆ. ಅರುಣ ಯಾವುದನ್ನು ಬಿಟ್ಟರೂ ನಿದ್ರೆಯನ್ನು ಮಾತ್ರ ಬಿಡುವ ಜಾಯಮಾನದವನಲ್ಲ. ದಿನಕ್ಕೆ ಏನಿಲ್ಲವೆಂದರೂ ಕನಿಷ್ಟ ಹತ್ತು ಘಂಟೆಗಳಾದರೂ ಗಡದ್ದಾಗಿ ನಿದ್ರೆ ಆಗಲೇ ಬೇಕು. ಅಂತಹವನನ್ನು ಅವನ ಹೆಂಡತಿ ಪ್ರಿಯಾ ನರಕ ಚತುರ್ದಶಿಯ ದಿನ ಬೇಗನೆ ಏಳಿಸಿದ್ದೂ ಅಲ್ಲದೇ (ಚೆನ್ನಾಗಿ) ಅಭ್ಯಂಜನವನ್ನು ಮಾಡಿಸಿ ಆದಷ್ಟು ಬೇಗನೆ ಮನೆಗೆ ಬನ್ನಿ ಎಂದು ಹೇಳಿ ಬೇಗನೆ ಆಫೀಸಿಗೆ ಕಳಿಸಿಬಿಟ್ಟಿದ್ದಳು. ಈ ಮನುಷ್ಯ ಎಂದಿಗಿಂತಲೂ ಒಂದೆರಡು ಘಂಟೆ ಮೊದಲೇ ಆಫೀಸಿಗೆ ಹೊರಟವನು ಸೀದಾ ಆಫೀಸಿಗೆ ಬಂದಿದ್ದರೆ ಯಾವ ತೊಂದರೆಯೂ ಇರುತ್ತಿರಲಿಲ್ಲ, ಅಂತಹದುರಲ್ಲಿ ಅರುಣ ತನ್ನ ಕಾರನ್ನು ಪಾರ್ಕಿಂಗ್ ಲಾಟಿನಲ್ಲಿ ನಿಲ್ಲಿಸಿ ಅಲ್ಲೇ ಸುಮಾರು ಎರಡು ಘಂಟೆಯ ಮೇಲೆ ನಿದ್ರೆ ಮಾಡಿಬಿಡೋದೆ! ಈ ಕಡೆ ಪ್ರಿಯಾ ಆಗೆಲ್ಲ ಇನ್ನೂ ಸೆಲ್‌ಫೋನುಗಳು ಹೆಚ್ಚು ಇರಲಿಲ್ಲವಾದ್ದರಿಂದ ಅರುಣನ ಆಫೀಸಿಗೆ ಫೋನ್ ಕರೆಯ ಮೇಲೆ ಕರೆ ಮಾಡುವುದೂ ಅರುಣನ ಕಡೆಯಿಂದ ಯಾವುದೇ ಉತ್ತರ ಬಾರದಿರುವುದೂ ಸ್ವಲ್ಪ ಹೊತ್ತು ನಡೆಯಿತು. ಪಾಪ, ಪ್ರಿಯಾಳ ಮನಸ್ಸಿನಲ್ಲಿ ಏನೆನೆಲ್ಲ ಆಗುತ್ತಿರಬೇಡ, ಕೊನೆಗೂ ಪ್ರಿಯಾ ರಾಜೀವನ ನಂಬರನ್ನು ಹುಡುಕಿ ಡಯಲ್ ಮಾಡಿ ರಾಜಿವ ಎಲ್ಲರ ಜೊತೆ ಸೇರಿ ಅರುಣನನ್ನು ಹುಡುಕಿ ಏಳಿಸಿ ಆಫೀಸಿಗೆ ಕರೆದುಕೊಂಡು ಬರಬೇಕಾದರೆ ಸಾಕು ಬೇಕಾಯಿತೆನ್ನಿ!

No comments: