Sunday, October 01, 2006

ಸೆಪ್ಟೆಂಬರ್ ಹೊರಟು ಹೋಗುತ್ತಿದ್ದ ಹಾಗೇ...

ಓಹ್, ಹಾ ಹ್ಞೂ ಅನ್ನೋದರೊಳಗೆ ಸೆಪ್ಟೆಂಬರ್ರೇ ಮುಗಿದು ಹೋಯ್ತಲ್ಲಪ್ಪಾ ಈ ವರ್ಷಾ ಅಂದ್‌ಕೊಂಡೋರಲ್ಲಿ ನಾನೂ ಒಬ್ಬ. ಸೆಪ್ಟೆಂಬರ್ ಮುಗಿಯುತ್ತಲೂ ಇಲ್ಲಿ ನಾವಿರೋ ಸ್ಥಳದಲ್ಲಿ ಒಂದ್ ಕಡೆ ಸ್ವೆಟರ್, ಕೋಟುಗಳು ಹೊರಗಡೆ ಬಂದು ಇನ್ನೂ ಛಳಿ ಬಿದ್ದಿಲ್ಲಾ ಅಂತ ಹೇಳಿಕೊಂಡು ಹಾಗೇ ಅಂಗಿಯನ್ನು ತೊಟ್ಟು ತಿರುಗುವ ನನ್ನಂತಹವರಿಗೂ ಒಂದು ರೀತಿಯ ಛಳಿಯ ಹೆದರಿಕೆಯನ್ನು ಹುಟ್ಟಿಸಿದರೆ ಮತ್ತೊಂದು ಕಡೆ ಬೇಸಿಗೆ ಶುರುವಾಗಿ ಆಗಲೇ ಮುಗಿದುಹೋಯಿತೇ ಎನ್ನುವಂತಾಗಿತ್ತು. ಈ ವರ್ಷದ ಸೆಪ್ಟೆಂಬರ್ ಆರಂಭದಲ್ಲಿ ವಿಶ್ವ ಕನ್ನಡ ಸಮ್ಮೇಳನದ ಸಮಾರಂಭ ಸಡಗರದಲ್ಲಿ ಮೊದಲವಾರವನ್ನು ಆಪೋಶನವನ್ನು ತೆಗೆದುಕೊಂಡರೆ, ಕೊನೆಯಲ್ಲಿ ದಸರಾ, ವಿಜಯದಶಮಿಯನ್ನು ಹೊತ್ತು ತಂದು ಮುಂಬರುವ ದೀಪಾವಳಿಯನ್ನಾಗಲೇ ನೆನಪಿಸುವಂತಾಗಿರುವುದು ವಿಶೇಷ. ಸರಿಯಾಗಿ ಇನ್ನು ಹನ್ನೆರಡು ಹದಿಮೂರು ವಾರ ಮುಗಿದರೆ ಈ ವರ್ಷದ ಆಯಸ್ಸು ಮುಗಿದಂತೆ ಮತ್ತೊಂದು ಹೊಸವರ್ಷ ಆರಂಭವಾಗುತ್ತದೆ, ಮುಂಬರುವ ಐವತ್ತೆರಡು ಹೊಸವಾರಗಳು ತಮ್ಮ ಹೊಸಮುಖಗಳನ್ನು ಪರಿಚಯಿಸಿಕೊಳ್ಳಲು ಕಾದಿರುತ್ತವೆ.

ಹೀಗೆ ವರ್ಷಗಳನ್ನು ವಾರಗಳಲ್ಲಿ ಅಳೆಯೋದಕ್ಕೆ ಬೇರೇನು ಕಾರಣವಿಲ್ಲ - ಇಲ್ಲಿಗೆ ಬಂದ ಮೇಲೆ ಮೆಟ್ರಿಕ್ ಪದ್ಧತಿಯ ಎಲ್ಲಾ ಮೂಲಮಾನಗಳನ್ನು ಬದಿಗೊತ್ತಿ, ಆಡಿ-ಮೈಲು-ವಾರಗಳ ಅಳತೆಯ ಚಕ್ಕರದಲ್ಲಿ ಸಿಕ್ಕಿಹಾಕಿಕೊಂಡಿರುವವರು ಹಲವರು, ಅದರಲ್ಲಿ ನಾನೂ ಒಬ್ಬ. ಕ್ಯಾಮೆರಾ ಲೆನ್ಸ್ ಅಳತೆಯ ಲೆಕ್ಕಕ್ಕೆ ಮಾತ್ರ ಮಿಲಿ ಮೀಟರುಗಳನ್ನು ಬಳಸುತ್ತೇನೆಯೇ ವಿನಾ ಮತ್ತೆಲ್ಲದಕ್ಕೂ ಹೆಚ್ಚೂ ಕಡಿಮೆ ಇಂಚು, ಅಡಿ, ಮೈಲು, ಗ್ಯಾಲನ್ನುಗಳ ಲೆಕ್ಕವೇ. ಈ ಲೆಕ್ಕದ ಮಹಿಮೆಯನ್ನು ಕೊಂಡಾಡುತ್ತಾ ಹೋದಂತೆ ಎರಡು ವಿಷಯಗಳು ಗೋಚರಿಸಿದವು: ಮೊದಲನೆಯದಾಗಿ ವಿಶ್ವದಾದ್ಯಂತ ಜನರು ಉಷ್ಣತೆಯನ್ನು ಅಳೆಯಲು ಯಾವ ಸ್ಕೇಲ್ ಅನ್ನು ಬಳಸಿದರೂ (ಸೆಲ್ಶಿಯಸ್, ಫ್ಯಾರನ್‌ಹೈಟ್, ಕೆಲ್ವಿನ್) ಇಲ್ಲಿನ ಫ್ಯಾರನ್‌ಹೈಟ್ ಸ್ಕೇಲ್ ನನಗೆ ವಾತಾವರಣದ ಉಷ್ಣತೆಯನ್ನು ಅಳೆಯಲು ವಿಸ್ತೃತವಾದದ್ದು ಎನ್ನಿಸಿದ್ದು ಹಾಗೂ ಎರಡನೆಯದಾಗಿ ವಿಶ್ವದಾದ್ಯಂತ ಜನರ ಎತ್ತರವನ್ನು ಗುರುತಿಸಿ ಬಳಸುವಲ್ಲಿ ಅಡಿ-ಇಂಚುಗಳೇ ಹೆಚ್ಚು ಬಳಕೆಯಲ್ಲಿರುವುದು. ಸೆಂಟಿಗ್ರೇಡ್ ಸ್ಕೇಲಿನ ಬಳಕೆಯಲ್ಲಿ ತಪ್ಪು-ಸರಿ ಎನ್ನುವಂತದ್ದೇನೂ ಇಲ್ಲ, (ಭಾರತದಲ್ಲಿ) ನಮ್ಮೂರಿನ ಉಷ್ಣತೆ ಕಡಿಮೆ ಎಂದರೆ ಹದಿನೈದು ಡಿಗ್ರಿಯಿಂದ ಹಿಡಿದು ಹೆಚ್ಚೆಂದರೆ ನಲವತ್ತು ಮುಟ್ಟೀತು - ಅದನ್ನು ಇಲ್ಲಿಯವರ ತರಹ ಅರವತ್ತೈದರಿಂದ ನೂರಾ ಹದಿನೈದು ಎಂದು ಗುರುತಿಸಿದಾಗ ಉಷ್ಣತೆಯ ರೇಂಜ್ ಹೆಚ್ಚಾಗಿ ಇದ್ದ ಹವಾಗುಣದಲ್ಲೇ ಹೆಚ್ಚು ಆಪ್ಷನ್ನುಗಳು ಕಂಡಂತೆ ಅನ್ನಿಸೀತು. ಯಾವ ಸ್ಕೇಲನ್ನು ಎಲ್ಲಿಯಾದರೂ ಬಳಸಲಿ, ಇವತ್ತಿಗೂ ನಮ್ಮೂರುಗಳಲ್ಲಿ "ನೂರು ಡಿಗ್ರಿ ಜ್ವರ" ಎಂದರೆ ಎಲ್ಲರಿಗೂ ಜ್ವರದ ಕಾವು ಅರಿವಿಗೆ ಬರುತ್ತದೆ!

ಇನ್ನೆನು ಕೆಲವೇ ದಿನಗಳಲ್ಲಿ ಮರಗಿಡಗಳು ತಮ್ಮ ಎಲೆಗಳನ್ನು ಉದುರಿಸಲು ಆರಂಭಿಸುತ್ತವೆ, ಅದಕ್ಕೂ ಮೊದಲು ಒಂದು ರೀತಿ ಕೆಂಪು ಬಣ್ಣ ಎಲ್ಲ ಕಡೆ ತುಂಬಿಕೊಳ್ಳುತ್ತದೆ. ಅಕ್ಟೋಬರ್ ಎರಡನೇ ವಾರ ಹತ್ತಿರ ಬರುತ್ತಿದ್ದಂತೆ ನಿಧಾನವಾಗಿ ಗಾಳಿ ಬೀಸತೊಡಗುತ್ತದೆ, ನಸುಕಿನಲ್ಲಿ ಇಬ್ಬನಿ ಹೆಚ್ಚು ಕಡೆ ತೇವವನ್ನು ಹಿಡಿದಿಡುವ ಸಾಹಸ ಮಾಡುತ್ತಾ, ಒಂದೆರೆಡು ಘಂಟೆ ತಡವಾಗಿ ಉದಯಿಸುವ ಸೂರ್ಯನೇನು ಮಾಡುತ್ತಾನೆ ನೋಡುತ್ತೇನೆ ಎಂದು ಸಡ್ಡು ಹೊಡೆದಂತೆ ತೋರಿಸಿಕೊಳ್ಳುತ್ತದೆ. ಆಗಾಗ್ಗೆ ಸುರಿಯುವ ಮಳೆ ಅಥವಾ ಸುರಿಯದ ಬರೀ ನೀಲಾಕಾಶ ಮುಂಬರುವ ಥಂಡಿಕಾಲದ ಗಾಢತೆಯ ಮುನ್ಸೂಚನೆಯನ್ನು ಮಾಡಿಕೊಡುತ್ತವೆ. ಈ ದೇಶ-ಊರುಗಳಲ್ಲಿ ವೃತ್ತಪತ್ರಿಕೆಗಳನ್ನು ಓದಿದರೆ ಮಾತ್ರ ಎಲ್ಲಿ ಬರಬಿದ್ದಿದೆ, ಯಾವ ಬೆಳೆ ಏನಾಗಿದೆ ಎಂದು ತಿಳಿಯೋದು. ಅದನ್ನು ಬಿಟ್ಟರೆ ನಾವು ಓಡಾಡುವ ಊರು-ದಾರಿಗಳಲ್ಲಿ ಯಾವನೊಬ್ಬನೂ ಜಮೀನುದಾರನಂತೆ ಕಾಣಿಸೋದಿಲ್ಲ, ಎಲ್ಲೂ ಯಾರೂ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುವುದು ಕೇಳಿ ಬರೋದಿಲ್ಲ. ಟಿ.ವಿ., ರೆಡಿಯೋಗಳಲ್ಲಿ ಆ ರೀತಿಯ ಕಾರ್ಯಕ್ರಮಗಳು ದಿನಾಲು ಬರಬಹುದು, ಅವುಗಳನ್ನು ನೋಡಲು/ಕೇಳಲು ಯಾರಿಗೆ ತಾನೆ ವ್ಯವಧಾನವಿದೆ? ನಮ್ಮ ಪ್ರತಿಕ್ರಿಯೆ ಏನಿದ್ದರೂ ಮಾಧ್ಯಮಗಳು ಬಿಂಬಿಸುವ ಪ್ರೈಮ್ ಟೈಮ್ ಕಾರ್ಯಕ್ರಮಗಳ ಬಗ್ಗೆ ಮಾತ್ರ.

ಒಂದು ಅಭಿವೃದ್ಧಿ ಹೊಂದಿದ ದೇಶದ ಸ್ಪಂದನಗಳೇ ಬೇರೆ, ಅವುಗಳನ್ನು ನೋಡುವಾಗ ನಮಗಿರಬೇಕಾದ ದೃಷ್ಟಿಕೋನವೇ ಬೇರೆ. ನಮ್ಮೂರುಗಳಲ್ಲಿ ನಾಡಿ ನೋಡಿ ಮದ್ದು ನೀಡುವ ವೈದ್ಯರಂತೆ ಇಲ್ಲಿಯ ಪಲ್ಸ್ ನೋಡಲು ಬೇಕಾದ ಪರದೆಗಳೇ ಬೇರೆ. ಇಷ್ಟು ವರ್ಷವೇನು ಇನ್ನೆಷ್ಟು ದಿನಗಳ ಕಾಲ ಈ ದೇಶದಲ್ಲಿ ಇದ್ದರೂ ಒಂದು ಹಸುವಿನ ಮೈದಡವಿ ನೋಡಿಲ್ಲ, ಇವತ್ತಿಗೂ ಒಂದು ಕೆಜಿ ಅಕ್ಕಿ ಬೆಲೆ ಎಷ್ಟು ಎಂದು ಅಪರೂಪಕ್ಕೊಮ್ಮೆ ಕೇಳುವ ನನ್ನ ಅಮ್ಮನಿಗೆ ಕೊಡಬೇಕಾದ ಉತ್ತರ ನನ್ನ ಬಳಿ ತಯಾರಿರುವುದಿಲ್ಲ. ಬೇರೆಲ್ಲದ್ದಕ್ಕೂ ನನ್ನ ಮನಸ್ಸಿನಲ್ಲಿ ಬೇಕಾದಷ್ಟು ಕ್ಯಾಲುಕುಲೇಶನ್‌ಗಳು ನಡೆದರೂ ಎರಡು ಪೌಂಡು ಅನ್ನೋದು ಸರಿ ಸುಮಾರು ಒಂದು ಕೆಜಿ ಹತ್ತಿರ-ಹತ್ತಿರವಾದರೂ ಇಪ್ಪತ್ತು ಪೌಂಡು ಅಕ್ಕಿಗೆ ಇಂತಿಷ್ಟು ಡಾಲರ್ ಆದರೆ ಒಂದು ಕೆಜಿ ಅಕ್ಕಿಗೆ ಎಷ್ಟು ಎನ್ನೋದನ್ನು ಲೆಕ್ಕ ಹಾಕಲು ನಾನು ಒಂದಿಷ್ಟು ಸೆಕೆಂಡುಗಳನ್ನು ಹೆಚ್ಚಾಗೇ ತೆಗೆದುಕೊಳ್ಳುತ್ತೇನೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪ್ರತಿಯೊಬ್ಬರ ಆದಾಯದ ಸರಾಸರಿ ಎಂಟರಿಂದ ಹತ್ತರಷ್ಟನ್ನು ಮೂಲ ಆಹಾರ ಪದಾರ್ಥಗಳ ಮೇಲೆ ಬಳಸಿದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಈ ಶೇಕಡಾವಾರು ಸಂಖ್ಯೆ ಬಹಳ ಹೆಚ್ಚು. ಇಲ್ಲಿ ಆಹಾರ ಉತ್ಪನ್ನಗಳು ಒಂದು ರೀತಿಯ 'ಕಮಾಡಿಟಿ', ಅಲ್ಲಿ ಅವುಗಳು ಅತ್ಯಂತ ಹೆಚ್ಚು ಅಗತ್ಯದ ವಸ್ತುಗಳು - ಅಂದರೆ ಇಲ್ಲಿ ಆಹಾರದ ಅಗತ್ಯವಿಲ್ಲವೆಂದರ್ಥವಲ್ಲ, ಇಲ್ಲಿ it is a given, ಅಲ್ಲಿ ಅದು ದಿನವೂ derive ಮಾಡಬೇಕಾದ ಒಂದು ಸಮೀಕರಣ.

ಸೆಪ್ಟೆಂಬರ್ ಹೊರಟು ಹೋಗುತ್ತಿದ್ದ ಹಾಗೆ ಮೂರನೇ ಕ್ವಾರ್ಟರ್ ಮುಗಿಯಿತು ಎಂದು ವಾಲ್ ಸ್ಟ್ರೀಟ್‌ನಲ್ಲಿ ಎಂದಿಗಿಂತ ಹೆಚ್ಚು ಹುರುಪು ಕಂಡುಬರುತ್ತದೆ, ಈ ಮೂರನೇ ಕ್ವಾರ್ಟರ್ ಮುಗಿಯುವ ಹೊತ್ತಿಗೆ ಬರುವ ಅಂಕೆ-ಸಂಖ್ಯೆಗಳು ಮುಂಬರುವ ಹಾಲಿಡೇ ದಿನಗಳ ರೀಟೈಲ್ ವಾಪಾರ ವಹಿವಾಟುಗಳನ್ನು ಹೆಚ್ಚೂಕಡಿಮೆ ನಿರ್ಧರಿಸಿಬಿಡಬಲ್ಲವು, ಸೆಪ್ಟೆಂಬರ್‌ವರೆಗೆ ಮೇಲುರುತ್ತಿದ್ದ ಸೂಚ್ಯಾಂಕ ಅಕ್ಟೋಬರ್‌ನಲ್ಲಿ ಸ್ವಲ್ಪ ಕೆಳಕ್ಕಿಳಿಯಬಹುದು. ಈಗಾಗಲೇ ಸ್ವಲ್ಪ ಸೊರಗಿದ ಡಾಲರ್ ಅನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇನ್ನೂ ನೆಲಕಚ್ಚಿ ಹಿಡಿಯುವಂತೆ ಮಾಡುವ ಶಕ್ತಿಗಳು ಉದಯವಾಗಬಹುದು. ನವೆಂಬರ್ ತಿಂಗಳಿನಲ್ಲಿ ಬರುವ ಸ್ಥಳೀಯ ಚುನಾವಣೆಗಳು ಸೆನೆಟ್ ಹಾಗೂ ಕಾಂಗ್ರೆಸ್ ನಲ್ಲಿ ರಿಪಬ್ಲಿಕನ್-ಡೆಮಾಕ್ರ್ಯಾಟಿಕ್ ಪಕ್ಷಗಳ ಮೇಲುಕೈಯನ್ನು ನಿರ್ಧರಿಸಿ ಬಿಡುವ ಹಿನ್ನೆಲೆಯಲ್ಲಿ ಆಡಳಿತ, ಪಾಲಿಸಿ, ಮುಂಬರುವ ಬಿಲ್‌ಗಳು ಇವುಗಳ ಮೇಲೆಲ್ಲ ತಕ್ಕ ಮಟ್ಟಿಗೆ ಪರಿಣಾಮ ಬೀರುತ್ತವೆ. ಎಲ್ಲರೂ ನಿಚ್ಚಳ ಬಹುಮತವನ್ನು ಸಾಧಿಸಬೇಕು, ತಮ್ಮ ತಮ್ಮ ಪಕ್ಷ ಸೀಟುಗಳನ್ನು ಉಳಿಸಿಕೊಳ್ಳಬೇಕು ಎಂಬ ಆಸೆಯಲ್ಲಿ ಜನರನ್ನು ಇನ್ನೂ ಹೆದರಿಸುವಂತೆ ಭಯೋತ್ಪಾದಕರ ವಿಷಯಗಳ ಚರ್ಚೆ, ಅಭ್ಯರ್ಥಿಗಳ ನಿಲುವುಗಳನ್ನು ಮಾತ್ರ ಬಿಂಬಿಸಲಾಗುತ್ತದೆಯೇ ವಿನಾ ಅವುಗಳ ಹಿಂದಿನ ವಿಷಯಗಳನ್ನು ಸಗಣಿ ಸಾರಿಸಿಬಿಡುವಂತೆ ತೋರಿಸಲಾಗುತ್ತದೆ. ಭಯೋತ್ಪಾದಕತೆಯನ್ನು ನಿರ್ಮೂಲನಗೊಳಿಸಲು ಅಮೇರಿಕದವರಿಗೆ ಸಪೋರ್ಟು ನೀಡಿದ್ದಾರೆ ಅನ್ನೋ ಕಾರಣಕ್ಕೆ ಮುಷಾರಫ್‌ ಅನ್ನು ತುಂಬಿದ ಸಭೆಯಲ್ಲಿ ಗೌರವಿಸಲಾಗುತ್ತದೆ, ಆದರೆ ಈ ವ್ಯಕ್ತಿಯೂ ಒಬ್ಬ ಸರ್ವಾಧಿಕಾರಿ, ಆಳುವ ಸರ್ಕಾರದಿಂದ ಅಧಿಕಾರವನ್ನು ಮಿಲಿಟರಿ ಕಾರ್ಯಾಚರಣೆಯಲ್ಲಿ ತನ್ನ ಹತೋಟಿಗೆ ತಂದುಕೊಂಡವನು ಎನ್ನುವುದನ್ನು ಇಲ್ಲಿನ ಬುದ್ಧಿವಂತರ ಸಭೆ ಜಾಣತನದಿಂದ ಮರೆಯುತ್ತದೆ. ಮುಷಾರಫ್ ಇಲ್ಲಿ ತನಗೆ ಸಿಕ್ಕ ಆತಿಥ್ಯಕ್ಕೆ ಹಿಗ್ಗಿ ಹೋಗುತ್ತಾರೆ - ಅವರ ಮೂಗಿನ ನೇರದ ಕೆಳಗೆ ಪಾಕಿಸ್ತಾನದ ಗುಪ್ತಚಾರ ಪಡೆ ಏನೆಲ್ಲವನ್ನು ಮಾಡಿದೆ ಎನ್ನುವ ವರದಿಗಳು ಒಂದರ ಮೇಲೊಂದು ಹೊರಬೀಳುತ್ತಲೇ ಇರುತ್ತವೆ - ಇವಕ್ಕೆಲ್ಲ ಯಾರೂ ಗಮನಕೊಡುವಂತೆಯೇ ಕಾಣಿಸೋದಿಲ್ಲ.

ಈ ಬುದ್ಧಿವಂತರ ನಾಡಿನಲ್ಲಿರೋ ಮೇಧಾವಿಗಳಿಗೆ ಇರಾಕ್ ಸಮಸ್ಯೆಗೊಂದು ಗತಿ ಕಾಣಿಸೋಕಾಗೋದಿಲ್ವಾ ಅಂತ ಎಷ್ಟೋ ಸಾರಿ ಅನ್ನಿಸಿದೆ. ಅದೂ ಇತ್ತಿಚೆಗಂತೂ ಅಲ್ಲಿ ಬಹಳ ಜನ ಸಾಯ್ತಾ ಇರೋದೂ, ಸ್ಥಳೀಯ ಸರ್ಕಾರ ತನ್ನ ಕೈಯಲ್ಲಿ ಸಾಧ್ಯವಾದದ್ದೆನ್ನೆಲ್ಲ ಮಾಡಿಯೂ ಪರಿಸ್ಥಿತಿ ಹೀಗಿದೆ ಎಂದರೆ ಅದಕ್ಕೆ ಯಾರೂ ಏನನ್ನೂ ಮಾಡಲಾಗುವುದಿಲ್ಲವೇ? ಅಷ್ಟು ಚಿಕ್ಕ ದೇಶವನ್ನು ಹತೋಟಿಯಲ್ಲಿಡುವುದು ಇಷ್ಟೊಂದು ಕಷ್ಟಕರವಾದ ವಿಷಯವೆಂದು ನನಗೆ ಏಕೋ ಇನ್ನೂ ಅರಿವಿಗೆ ಬರುತ್ತಿಲ್ಲ. ಸಾಕಷ್ಟು ಸಂಕೀರ್ಣವಾದ ಸಮಸ್ಯೆ ಆದರೂ ಒಂದಲ್ಲ ಒಂದು ರೀತಿಯಿಂದ ಬಗೆ ಹರಿಸಬಹುದು ಎಂದು ನನ್ನ ಮನಸ್ಸು ಹೇಳುತ್ತೆ, ಆದರೆ ನನಗೆ ಪೂರ್ಣ ವಿಷಯದ ಅರಿವು ಇರದೆಯೂ ಇರಬಹುದು ಎನ್ನುವ ಸಮಜಾಯಿಷಿಯೂ ಹುಟ್ಟುತ್ತೆ.

ಇಷ್ಟು ಬರೆಯುವ ಹೊತ್ತಿನಲ್ಲಿ ಮುಂಬರುವ ಛಳಿಗಾಲಕ್ಕೆ ಮೈಮನಸ್ಸುಗಳು ಸಿದ್ಧವಾದಂತೆನಿಸುತ್ತೆ, ಎಲ್ಲರಂತೆ ನಾನೂ ಕೂಡಾ ಫಾಲ್ ಕೋಟ್ ತೆಗೆದು ನಾಳೆ ಆಫೀಸಿಗೆ ಹೋಗುವಾಗ ಸಿಗುವಂತೆ ತೆಗೆದಿರಿಸುತ್ತೇನೆ, ಛಳಿ ಬೀಳೋದು ನಿಸರ್ಗ ನಿಯಮ ಅದಕ್ಕೆ ತಯಾರಾರಿರಬೇಕಾದುದು ನನ್ನ ಕರ್ಮ ಎಂದುಕೊಂಡು ಸುಮ್ಮನಾಗುತ್ತೇನೆ.

No comments: