Monday, October 09, 2006

ಕಿರುಗತೆ - ಜೊತೆಗಾತಿ

'ಸರ್, ನನ್ನನ್ನು ದಯವಿಟ್ಟು ಕ್ಷಮಿಸಿ, ನಿಮ್ಮಾಕೆಯ ಪ್ರಾಣಪಕ್ಷಿ ಈಗಾಗಲೇ ಹಾರಿಹೋಗಿದೆ, ಆಕೆ ಯಾವಾಗಲೋ ಕಾಲವಾಗಿದ್ದಾರೆ!' ನಿಧಾನವಾಗಿಯಾದರೂ ತುಸು ಗಂಭೀರವಾಗೇ ಈ ವಿಷಯವನ್ನು ಈ ಮನುಷ್ಯನಿಗೆ ಹೇಳುವಲ್ಲಿ ನನ್ನ ಜೀವ ಬಾಯಿಗೆ ಬಂದಿತ್ತು. ಸುಮಾರು ಎಪ್ಪತ್ತೆರಡು ವರ್ಷ ವಯಸ್ಸಿನ ಈ ಮನುಷ್ಯ ತನ್ನ ಹೆಂಡತಿಯನ್ನು ಕಂಡರೆ ಅಪಾರವಾದ ಗೌರವ ಹಾಗೂ ಪ್ರೀತಿಯುಳ್ಳವನು ಎಂಬುದು ನಮ್ಮ ಆಸ್ಪತ್ರೆಯವರಿಗೆಲ್ಲ ಯಾವಾಗಲೋ ಗೊತ್ತಾಗಿದೆ. ಕಳೆದ ಒಂದು ವಾರ ತನ್ನ ಹೆಂಡತಿಯ ಜೊತೆ ಕಳೆದವನು ಏನೇನನ್ನೆಲ್ಲ ಮಾಡಿಲ್ಲ, ಆಕೆಯ ಕೂದಲನ್ನು ಬಾಚುವುದರಿಂದ ಹಿಡಿದು, ಗಲ್ಲವನ್ನು ತೀಡಿ ನಮ್ಮೆಲ್ಲರ ಎದುರೇ ಮಕ್ಕಳನ್ನು ಮುದ್ದಿಸುವಂತೆ ಹಣೆಯ ಮೇಲೆ ಚುಂಬಿಸುವುದೇನು, ಆಕೆ ಊಟ ಮಾಡದೇ ಈತ ಎಂದು ಬಾಯಿಗೆ ಒಂದು ತೊಟ್ಟು ನೀರನ್ನು ಸೇರಿಸಿದ್ದನ್ನೂ ನಾವ್ಯಾರೂ ಕಾಣೆವು. ಹಗಲು-ರಾತ್ರಿ ಪಾಳಿಯನ್ನು ನಾವು ಮುಗಿಸಿ ಮನೆಗೆ ಹೋಗಿ ಬರುತ್ತಿದ್ದರೇನಂತೆ, ಈ ಮುದುಕ ಅಲ್ಲ ಜಂಟಲ್‌ಮ್ಯಾನ್ ತನ್ನಾಕೆಯನ್ನು ಬಿಟ್ಟು ಒಂದು ಕ್ಷಣವೂ ಇದ್ದವನಲ್ಲ.

ಆಕೆಯದ್ದು ಟರ್ಮಿನಲ್ ಕ್ಯಾನ್ಸರ್ ಎಂದು ಈಗಾಗಲೇ ಆತನಿಗೆ ತಿಳಿದು ಹೋಗಿದ್ದು ನಮ್ಮ ಆಸ್ಪತ್ರೆಗೆ ಇನ್ನೇನು ಕೊನೆಗಾಲದ ಚಿಕಿತ್ಸೆ ಅಥವಾ ವಿಶ್ರಾಂತಿ ಎನ್ನುವ ಹಂತದಲ್ಲಿರುವಾಗ ಕರೆದುಕೊಂಡು ಬಂದಿದ್ದರು. ಎಲುಬಿನ ಹಂದರದಂತಿದ್ದ ಆಕೆ ಈಗ ತಲೆ ಕೂದಲನ್ನು ಸುಮಾರಾಗಿ ಕಳೆದುಕೊಂಡು ಅಲ್ಲಲ್ಲಿ ಬೋಳುತಲೆ ಕಂಡು ಬಂದು ಕುರೂಪವಾಗಿ ಕಂಡುಬಂದರೂ ಒಂದು ಕಾಲದಲ್ಲಿ ಆಕೆ ಸುರಸುಂದರಿಯೇ ಇದ್ದಿರಬೇಕು. ಆಕೆಯ ತಲೆಯ ಬುಡದಲ್ಲಿ ಹಾಸಿಗೆಯ ಪಕ್ಕ ಇಟ್ಟ ಎರಡು ಫೋಟೋಗಳು ಅವರ ಜೀವನ ಪರ್ಯಂತ ಆತ್ಮೀಯತೆಗೆ ಸಾಕ್ಷಿಯೆನ್ನುವಂತೆ ಜೀವಂತವಾಗಿದ್ದವು. ಸುಮಾರು ನಲವತ್ತು ವರ್ಷಗಳಿಗೂ ಅಧಿಕವಾದ ತುಂಬು ದಾಂಪತ್ಯವಂತೆ, ನಮ್ಮ ಆಸ್ಪತ್ರೆಯಲ್ಲಿ ಬೇಕಾದಷ್ಟು ಜನ ಈ ರೀತಿ ಖಾಯಿಲೆಯವರನ್ನು ನಾವು ಈ ಹಿಂದೆ ನೋಡಿದ್ದರೂ ಎಂಥವರ ಮನದಲ್ಲೂ ಮಾನವೀಯ ಸಂಬಂಧವೆಂಬ ಬಳ್ಳಿಯನ್ನು ಹಬ್ಬಿಸಿ ಬಿಡಬಲ್ಲ ಚೈತನ್ಯವನ್ನು ಈ ದಂಪತಿಗಳು ಕೊನೆಯವರೆಗೂ ಉಳಿಸಿಕೊಂಡು ಬಂದಿದ್ದು ಎಲ್ಲರಲ್ಲೂ ಅವರ ಮೇಲೆ ಗೌರವಾದರಗಳನ್ನು ಮೊದಲ ದಿನದಿಂದಲೇ ಹುಟ್ಟಿಸಿತ್ತು.

ಆಶ್ಚರ್ಯವೆಂದರೆ ಈ ವ್ಯಕ್ತಿ ತನ್ನಷ್ಟಕ್ಕೆ ತಾನು ವಾಸ್ತವವನ್ನು ಒಪ್ಪಿಕೊಂಡಿರುವ ಬಗೆ - ಒಂದು ರೀತಿಯಲ್ಲಿ ಹೇಳೋದಾದರೆ ಆತನಿಗೆ ನಮಗೆ ಗೊತ್ತಿರದ ಸತ್ಯದ ಮತ್ತೊಂದು ಮಗ್ಗುಲು ಗೊತ್ತಿದೆ ಎನ್ನಬೇಕು, ಸತ್ಯಕ್ಕೆ ಅದೆಷ್ಟು ಮಗ್ಗುಲುಗಳಿವೆಯೋ ನಮಗೆ ಕಾಣೋದೇ ಸತ್ಯವೆಂದು ನಾವು ನಂಬಿಕೊಂಡಿದ್ದರೆ ಈ ಭೂಮಿ ದುಂಡಗಾದರೂ ಹೇಗಿರುತ್ತಿತ್ತು? ಇಲ್ಲ, ಈ ಭೂಮಿ ದುಂಡಗಿದ್ದರೆ ಮಾತ್ರ ಸಾಲದು ಅದು ತಿರುಗಲು ಈ ರೀತಿಯ ಪ್ರೀತಿಯ ಧ್ಯೋತಕವೆನ್ನುವುದೊಂದಿದ್ದರಲೇ ಬೇಕು, ಒಂದು ರೀತಿ ಬಂಡಿಯ ಗಾಲಿಗಳಿಗೆ ಕೀಲೆಣ್ಣೆಯನ್ನು ಸವರಿದ ಹಾಗೆ ಆಗಾಗ್ಗೆ ಸಂಸಾರದಲ್ಲಿ ಹುಟ್ಟಿ ಹರಡುವ ತುಮುಲವೆಂಬ ಕುಯ್ ಕುಯ್ ಸದ್ದನ್ನು ಮರೆಸಿ ನಿರ್ಮಲವಾದ ಪ್ರೀತಿಯೆಂಬ ಶಾಂತಿಯನ್ನು ಹರಡಲು. ಇಲ್ಲ, ಆಕೆಗೆ ಹತ್ತು ವರುಷದಿಂದ ಕ್ಯಾನ್ಸರ್ ಎಂಬುದು ಗೊತ್ತಾದ ಮೇಲೆ ಈ ವ್ಯಕ್ತಿ ಎದೆಗುಂದದೇ ನಿಂತು ಎಲ್ಲವನ್ನೂ ನಿಭಾಯಿಸಿಕೊಳ್ಳುವ ಸಾಮಾನ್ಯ ನಿಲುವಿನವನು. ನನ್ನ ಪೇಷಂಟಿನ ಪೋಷಕನಾದ ಆತನಲ್ಲಿ ನನ್ನದೇನು ಮಾತು - ಆದರೂ ಆತನ ಸಂಯಮ ಸದಾ ಒಳಿತನ್ನು ಆಶಿಸುವ ಕಂಗಳು, ಸತ್ಯದ ಮತ್ತೊಂದು ಮಗ್ಗುಲನ್ನು ಅರಿತ ಶಾಂತ ಮುಖ ಇವುಗಳು ನನ್ನನ್ನು ಆ ವ್ಯಕ್ತಿಯೊಡನೆ ಮಾತನಾಡುವಂತೆ ಪ್ರಚೋದಿಸಿದವು.

'ಸರ್, ಮಾನವೀಯ ಸಂಬಂಧಗಳು ಎಷ್ಟೊಂದು ಮಧುರವೆಂದು ನಮಗೆ ಹಲವಾರು ಬಾರಿ ಅನ್ನಿಸಿದರೂ ಅಷ್ಟೇ ಸಹಜವಾಗಿ ಅವುಗಳು ತಮ್ಮ ನೆಲೆಗಳನ್ನು ಕಳೆದುಕೊಳ್ಳುವುದೇಕೆ?'

ನನ್ನ ಪ್ರಶ್ನೆಗೆ ಗಂಭೀರತೆಯ ಮುಖವಾಡ ಸ್ವಲ್ಪ ತರಿಸಿ, ತುಟಿಯ ಮೇಲೆ ತಿಳಿನಗೆಯನ್ನು ತೋರಿಸಿಕೊಂಡು 'ನೋಡಿ, ನಮ್ಮ ನಮ್ಮ ನಡುವಿನ ಸಂಬಂಧಗಳು ವ್ಯಾಪಾರ ಧ್ಯೋತಕವಾಗಿ ನಿರ್ಮಿತವಾದವಲ್ಲ, ಅವು ಸಹಜವಾದವು - ನೀವು ಸಹಜವಾಗಿ ತಮ್ಮ ನೆಲೆಗಳನ್ನು ಕಳೆದುಕೊಳ್ಳುವುದು ಎಂದಿರಿ - ನನಗೆ ಆ ಬಗ್ಗೆ ಗೊತ್ತಿಲ್ಲ, ಆದರೆ ನನ್ನ ಮತ್ತು ಆಕೆಯ ಸಂಬಂಧಗಳ ಬಗ್ಗೆ ಬೇಕಾದರೆ ಹೇಳಬಲ್ಲೆ' ಎಂದು ಹಾಸಿಗೆಯಲ್ಲಿ ಅಂಗಾತವಾಗಿ ಔಷಧಗಳ ನೆರವಿನಿಂದ ಕಣ್ಣು ಮುಚ್ಚಿ ವೆಂಟಿಲೇಟರ್ ಸಹಾಯದಿಂದ ಎದೆಯ ತಿದಿ ಉಬ್ಬಿ ಇಳಿಯುತ್ತಿದ್ದ ಹೆಂಡತಿಯ ಕಡೆಗೆ ತೋರಿಸಿ ಹೇಳಿದರು.

ಸುಮ್ಮನೇ ಯಾವುದೋ ಪುಸ್ತಕವನ್ನು ಓದುತ್ತಾ ಕುಳಿತ ವ್ಯಕ್ತಿ ತೊಂದರೆ ಕೊಟ್ಟೆನೇನೋ ಎನ್ನಿಸದಿರಲಿಲ್ಲ, ಕ್ಲಿಷ್ಟವಾದ ಪ್ರಶ್ನೆಗೆ ಉತ್ತರಿಸಲು ಪೂರ್ವಭಾವಿ ಸಿದ್ಧತೆ ನಡೆಸುವ ಯಾವುದೇ ತರಾತುರಿ ಅಥವಾ ಗೊಂದಲವೂ ಈ ವ್ಯಕ್ತಿಯಲ್ಲಿ ಕಂಡುಬರಲಿಲ್ಲ. ಅವರ ಸಮಾಧಾನದ ನಿಲುವೇ ನನ್ನನ್ನು ಕೆಲಸಗಳ ಮಧ್ಯೆ ಒಂದಿಷ್ಟು ನಿಲ್ಲುವ ವ್ಯವಧಾನವನ್ನು ಕಲ್ಪಿಸಿಕೊಟ್ಟಿತ್ತು.

'ಹೇಳಿ' ಎಂದೆ...'ನಿಧಾನವಾಗಿ ಯೋಚಿಸಿ, ನಿಮ್ಮ ತಂದೆ, ತಾಯಿ, ಬಂಧು, ಬಳಗ, ಸಹೋದರ-ಸಹೋದರಿಯರ ನಡುವೆ, ಮಕ್ಕಳ ನಡುವೆ ಎಲ್ಲಕ್ಕಿಂತ ಹೆಚ್ಚು ನಿಮ್ಮ ಒಡನಾಟ, ಅದರಲ್ಲೂ ಧೀರ್ಘಕಾಲೀನವಾಗಿರುವ ಸಂಬಂಧ ಎಂದರೆ ಗಂಡ-ಹೆಂಡತಿಯದು ಮಾತ್ರ. ಉದಾಹರಣೆಗೆ ನನ್ನ ಬದುಕಿನಲ್ಲಿ ಒಂದೇ ಮನೆಯಲ್ಲಿ ನಲವತ್ತು ವರ್ಷಗಳಿಗಿಂತ ಹೆಚ್ಚು ಕಾಲ ನನ್ನ ಜೊತೆ ಈಕೆ ಬದುಕಿ ಬಂದಿದ್ದಾಳೆ, ನಾವಿಬ್ಬರೂ ಒಬ್ಬರಿಗೊಬ್ಬರಾಗಿದ್ದೇವೆ, ಇಂತಹ ಧೀರ್ಘಕಾಲೀನವಾದ ಪವಿತ್ರ ಸಂಬಂಧ ಹಾಗೋ ಮೈತ್ರಿಯನ್ನು ನೆನೆದುಕೊಂಡರೆ ಯಾವ ನೆಲೆಗಳನ್ನು ಎಲ್ಲಿ ಹೇಗೆ ಕಳೆದುಕೊಳ್ಳುತ್ತೇವೆ, ಕಳೆದುಕೊಳ್ಳಬಹುದು ಎನ್ನುವ ಪ್ರಶ್ನೆಯೇ ಬರೋದಿಲ್ಲ. ಈ ಪ್ರಯಾಣದಲ್ಲಿ ನಾವಿಬ್ಬರೂ ಒಂದೇ ಬಂಡಿಯಲ್ಲಿ ಪಯಣಿಸುತ್ತಿರುವಾಗ ದಾರಿಯಲ್ಲಿ ಬರುವ ಅಡೆತಡೆಗಳು ಒಂದಿಷ್ಟು ಅಲ್ಲಲ್ಲಿ ಘರ್ಷಣೆಯನ್ನೊಡ್ಡಬಹುದೇ ವಿನಾ ಅವುಗಳನ್ನು ದೊಡ್ಡದನ್ನಾಗಿ ಮಾಡಿ ಬಂಡಿಯ ಗಾಲಿಗಳನ್ನು ಕೀಳುವುದು ಜಾಣತನವಲ್ಲ. ಬಂಡಿ ನಿರಂತರವಾಗಿ ಮುಂದೆ ನಡೆದು ಅದು ಸೇರಬೇಕಾದ ಗುರಿಯನ್ನು ಸೇರಲಿ, ಆಗ ಎಲ್ಲವೂ ಸುಸುತ್ರವಾಗಿ ನಡೆಯುತ್ತದೆ - ಅದು ಸಹಜವಾದದ್ದು, ಸಹಜವಾದದ್ದೆಂದೂ ತಮ್ಮ ನೆಲೆಗಳನ್ನು ಕಳೆದುಕೊಳ್ಳೋದಿಲ್ಲ.' ಎಂದು ಕಣ್ಣು ಮುಚ್ಚಿ ಒಮ್ಮೆ ಉಸಿರನ್ನು ಜೋರಾಗಿ ಎಳೆದುಕೊಂಡು ಮತ್ತೆ ಕಣ್ಣು ಬಿಟ್ಟು ನನ್ನೆಡೆಗೆ ನೋಡಿದರೇ ವಿನಾ ಮುಂದೇನೂ ಹೇಳಲಿಲ್ಲ. ನಾನು ಅಲ್ಲಿದ್ದು ಸ್ವಲ್ಪ ಯೋಚಿಸಿ, ಅಕೆಯ ಚಾರ್ಟಿನ ಕಡೆಗೊಮ್ಮೆ ಕಣ್ಣು ಹಾಯಿಸಿ ನನ್ನ ಕೆಲಸವನ್ನು ನೋಡಿಕೊಂಡು ಹೋದೆ, ಇಂದಿಗೂ ನನ್ನ ಮನದಲ್ಲಿ ಅವರು ಹೇಳಿದ ಮಾತುಗಳು ಅನುರಣಿಸುತ್ತಲೇ ಇವೆ.

***

'ಸ್ವಲ್ಪ ಸರಿಯಾಗಿ ನೋಡಿ!' ಎಂದು ಬೇಡುವ ಆರ್ತ ಧ್ವನಿಯೊಂದು ಬಂದಾಗಲೇ ನನಗೆ ಈ ಪ್ರಪಂಚಕ್ಕೆ ಬರುವಂತಾಗಿದ್ದು. ಆಕೆಗೆ ತಗುಲಿಕೊಂಡ ವೆಂಟಿಲೇಟರ್ ಅನ್ನು ನರ್ಸ್ ಇನ್ನೂ ನಿಲ್ಲಿಸಿರಲಿಲ್ಲವಾದ್ದರಿಂದ ಅದು ತನ್ನ ಕೆಲಸವನ್ನು ಮುಂದುವರೆಸಿತ್ತು, ಆಕೆಯ ಪ್ರಾಣಪಕ್ಷಿ ಹಾರಿ ಹೋಗಿದ್ದು ನನಗೆ ಖಚಿತವಾದರೂ ವೆಂಟಿಲೇಟರ್ ಅನ್ನು ನಿಲ್ಲಿಸುವ ಮೊದಲು ಜೇಬಿನಿಂದ ಸಣ್ಣ ಫ್ಲ್ಯಾಷ್‌ಲೈಟ್ ತೆಗೆದು ಕಣ್ಣುಗಳ ಮೇಲೆ ಬೆಳಗಿಸಿ, ಒಂದು ಇಕೆಜಿಯನ್ನು ತೆಗೆದು, ಉಸಿರನ್ನು ನೋಡಿ, ನಾಡಿ ಹಿಡಿದು ನೋಡಿ 'ದಯವಿಟ್ಟು ಕ್ಷಮಿಸಿ ಸರ್' ಎಂದೆ...ಆವರಿಗೆ ಗೊತ್ತಾಗಿ ಹೋಯಿತು, ಆವರಿಗೆ ತಿಳಿದ ಸತ್ಯದ ಮಗ್ಗುಲು ಬೆಳಕಿಗೆ ಬಂದಿತ್ತು, ಅವರ ಕಣ್ಣುಗಳು ನಿಧಾನವಾಗಿ ಹನಿಗೂಡತೊಡಗಿದವು. ನಾನು ಪಶುವಿನಂತೆ ಅಥವಾ ಯಂತ್ರದಂತೆ ಚಾರ್ಟುಗಳನ್ನು ಬರೆದು ಮುಗಿಸಿ, ಡೆತ್ ಸರ್ಟಿಫಿಕೇಟ್ ಬರೆಯಲು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದೆ. ನಾಲ್ಕು ದಶಕಗಳ ಸಂಬಂಧ ಈ ರೀತಿ ನನ್ನ ಕಣ್ಣೆದುರು ಕೊನೆಗೊಂಡುದಕ್ಕೆ ನನಗೆ ಅತೀವ ಬೇಸರವೆನಿಸಿತು. ಇದ್ದಕ್ಕಿದ್ದ ಹಾಗೆ ಎಪ್ಪತ್ತೆರಡು ವರ್ಷದ ಈ ವ್ಯಕ್ತಿ ಎಂಭತ್ತೆರಡು ವರ್ಷವಾದಂತೆ ತೋರತೊಡಗಿದರು, ನಾನು ನಿಧಾನವಾಗಿ ಮುಂದಿನ ಕೋಣೆಗೆ ಹೊರಟೆ.

No comments: