Wednesday, September 27, 2006

ಕರ್ಮಯೋಗಿ ಎಂಬ ಇರುವೆ

ಇರುವೆಯೊಂದು ಬಳಲಿ ಬೆಂದು ದಿನವ ಸವೆಸಿ ಬರುತಿರೆ
ಇಂದಿನುಳಿವು ನಾಳಿನಳಿವ ಹಚ್ಚಿಕೊಂಡು ಕೊರಗಿರೆ ೧

ನಮ್ಮನುಳಿಸು ಇದರಿಂದ ಭೀಕರ ಬರಗಾಲ
ದೈವ ನೆನೆದು ನಭಕೆ ಮುಗಿದು ಚಾಚಿತು ಮುಂಗಾಲ ೨

ರೆಕ್ಕೆ ಇರುವ ಹಕ್ಕಿಗಳು ಹಾರಿ ದೂರ ಹೋದವು
ಬಾಯಿ ಬರದ ಬಡಪಾಯಿಗಳು ಕಕ್ಕಾಬಿಕ್ಕಿಯಾದವು ೩

ದೂರದಲ್ಲಿ ವಲಸೆ ಹಕ್ಕಿ ಕಂಡಿತಪ್ಪ ಕಣ್ಣಿಗೆ
ಅದರ ಜೊತೆ ಹಾರುವ ಆಲೋಚನೆ ಬಂತು ಇರುವೆಗೆ ೪

ಒಡನೆ ತಾನು ಗಡಿಬಿಡಿಯಲಿ ಓಡಲು ಶುರುಮಾಡಿತು
ವಲಸೆ ಹಕ್ಕಿ ರೆಕ್ಕೆ ಒಳಗೆ ಬೆಚ್ಚಗೆ ತಾ ಕೂತಿತು ೫

ಉರಿವ ಸೂರ್ಯ ಹೋದ ಕಡೆಗೆ ವಲಸೆ ಹಕ್ಕಿ ಹಾರಲು
ರೆಕ್ಕೆ ಒಳಗೆ ಅವಿತ ಮರಿಗೆ ಹುಟ್ಟಿತು ಎದೆ ಪುಕ್ಕಲು ೬

ಎಷ್ಟೋ ಹೊತ್ತು ಎಷ್ಟೋ ದೂರ ವಲಸೆ ಹಕ್ಕಿ ಹಾರಿತು
ಕೊನೆಗೂ ಒಂದು ಘಳಿಗೆಯಲ್ಲಿ ದೂರ ದೇಶ ಸೇರಿತು ೭

ರೆಕ್ಕೆಯಿಂದ ಜಿಗಿದ ಮರಿಗೆ ಬೆಚ್ಚನೆ ಆಹ್ವಾನ
ನೀಡಿದವು ಸುತ್ತಲಿನ ಹಸುರಾಗಿಹ ಹೂ ಬನ ೮

ತನ್ನ ಜಾಗೆ ಬಿಟ್ಟೆನೆಂದು ಒಮ್ಮೆ ದುಃಖವಾಯಿತು
ಬರದ ಬೇಗೆಯಿಂದ ಬದುಕಿ ಉಳಿದ ಖುಷಿಯೂ ಸೇರಿತು ೯

ದೂರ ದೇಶ ದೂರ ವಾಸ ಹಿಂದೆ ಹೋಗುವ ಯೋಚನೆ
ಸುತ್ತೆಲ್ಲವು ಹೊಸತರಲ್ಲಿ ತಾನು ಎಂಬ ಯಾಚನೆ ೧೦

ಕಣ್ಣು ಕಾಣುವಲ್ಲಿವರೆಗೆ ಹಲವು ಬಣ್ಣ ಗೋಚರ
ತನಗೆ ಬೇಡವಾಗಿ ಮನಸು ಇರುತ್ತಿತ್ತು ಎಚ್ಚರ ೧೧

ಹಾದಿ ಸವೆಸಿದಂತೆ ಹಲವು ಇರುವೆಗಳು ಕಂಡವು
ದಡ್ಡರೊಳಗೆ ಬುದ್ಧಿವಂತರೆಂಬ ಮರ್ಮ ನುಡಿದವು ೧೨

ಹೊಸತು ಹಳತು ಆಗುವಷ್ಟರಲ್ಲಿ ಮರಿಗೆ ತಿಳಿಯಿತು
ಒಂಟಿ ತಾನು ಎಂಬ ಭಾವ ಗಟ್ಟಿ-ಗಟ್ಟಿಯಾಯಿತು ೧೩

ಇಂದು ದುಡಿದು ಅಂದೇ ತಿನ್ನೋ ಸತ್ಯವೆಂಬ ಕನ್ನಡಿ
ಇನ್ನೂ ಬೇಕು ಎಂಬುದಕ್ಕೆ ಬರೆದಾಯಿತು ಮುನ್ನುಡಿ ೧೪

ಹಿಗ್ಗಿನಲ್ಲಿ ನಾಳೆಗಾಗಿ ಕೂಡಿ-ಕೂಡಿ ಹಾಕಲು
ಎಲ್ಲ ಕಡೆಯೂ ಸಮೃದ್ಧಿ ಹಿಡಿಯುವಷ್ಟು ಮುಗ್ಗಲು ೧೫

ಸುಖದ ಪದರಿನಲ್ಲಿ ಆಗ್ಗೆ ಒಂಟಿ ತಾನು ಎನಿಸುತಿತ್ತು
ಹಿತದ ತನ್ನ ಶಿಖರದಲ್ಲಿ ತನ್ನ ತಾನು ಮರೆಯುತಿತ್ತು ೧೬

ಹೊಸ ಜಾಗವು ಹಳೆಯದಾಗೆ ಹೊಸ ಹಾಡಿಗೆ ತೊನೆಯಿತು
ಗಾಳಿ ಇರುವಲಿ ಧೂಳೂ ಇರುವ ಸರಳ ಸತ್ಯ ಹೊಳೆಯಿತು ೧೭

ಹಿಡಿಯಬೇಕು ಕೂಡಬೇಕು ಭಲೇ ಬಂಡವಾಳ
ಅದರ ಮೇಲೇ ತಿರುಗಿ ಬೀಳಬೇಕು ಎಂಬ ಕಳವಳ ೧೮

ಮುಂದೆ ತನ್ನ ಪರಿವಾರ ದೊಡ್ಡದಾಗಿ ಬೆಳೆದೂ
ಎಲ್ಲೋ ಏನೋ ಕಳೆದುಕೊಂಡ ಭಾವ ಬಿಟ್ಟು ಹೋಗದು ೧೯

ಕರ್ಮಯೋಗಿ ಎಂಬ ಇರುವೆ ಹೊಸತನೊಪ್ಪಿಕೊಂಡಿತು
ಕೊನೆಗೆ ತಾನೇ ತಿಣುಕಿ ಗೇಯ್ದು ಪ್ರಾಣವನ್ನೆ ಬಿಟ್ಟಿತು ೨೦

***

ನವೆಂಬರ್ ೧೭, ೨೦೦೫ ರಂದು ಬರೆದ ಈ ಕವನ ೨೦೦೬ ರ ವಿಶ್ವಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿದೆ.

No comments: