Sunday, September 24, 2006

ಸಿರಿತನ-ಬಡತನ

ಮಾನವ ಸಂಸ್ಕೃತಿಯಷ್ಟೇ ಹಳೆಯದಾದರೂ ಸಿರಿತನ-ಬಡತನವೆಂಬ ಮಾನಸಿಕ ಸ್ಥಿತಿ ಅಥವಾ ಸಾಮಾಜಿಕ ಸ್ಥಿತಿಯ ಬಗ್ಗೆ ನಾನು ಓದಿದ ಕಡೆಯೆಲ್ಲ ನನಗೆ ಈ ವಿಷಯಗಳನ್ನು ಕುರಿತು ಹಲವಾರು ನೆರಳುಗಳು ಕಂಡುಬರುತ್ತವೆ, ಅವು ಆಯಾ ಆಕೃತಿಯ ಮಾನಸಿಕ ಸ್ಥಿತಿಗತಿಯ ದ್ಯೋತಕವಾಗಿರಬಹುದು ಅಥವಾ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಭೌತಿಕ ವಿಷಯ ವಸ್ತುಗಳೇ ಇಲ್ಲದೇ ಬರೀ ನೆರಳೇ ನನಗೆ ಗೋಚರಿಸಿರಬಹುದು.

ಸಿರಿತನ-ಬಡತನಗಳನ್ನು ಬರೀ ಸಾಮಾಜಿಕ ನೆಲೆಗಟ್ಟಿನಲ್ಲಿ ಉಳ್ಳವರು, ದಿಕ್ಕುಗೆಟ್ಟವರು ಎಂದಷ್ಟೇ ನಾನು ಎಂದೂ ಪರಿಗಣಿಸಿದ್ದಿಲ್ಲ, ಉದಾಹರಣೆಗೆ ಹೃದಯವಂತಿಕೆಯ ಬಡತನ-ಸಿರಿತನಗಳನ್ನೂ ಸಹ ನಾನು ಗುರುತಿಸುತ್ತೇನೆ, ಒಬ್ಬ ವ್ಯಕ್ತಿಯ ಹೃದಯವಂತಿಕೆ ಆತನ/ಆಕೆಯ ಸಾಮಾಜಿಕ ಸ್ಥಿತಿಗತಿಯ ಮೇಲೆ ನೇರವಾಗಿ ಅವಲಂಭಿತವಾಗಿದೆಯೋ ಅಥವಾ ಅವೆರಡೂ ಬೇರೆ ಬೇರೆಯೋ ಎನ್ನುವುದನ್ನು ನಿಮ್ಮ ತರ್ಕಕ್ಕೆ ಬಿಡುತ್ತೇನೆ.

ಈ ಎರಡು ವಸ್ತುಗಳನ್ನು ಕುರಿತು ಈ ಸಮಯದಲ್ಲಿ ನನಗನ್ನಿಸಿದ ಟಿಪ್ಪಣಿಗಳನ್ನು ಹೀಗೆ ಪೋಣಿಸಿಕೊಂಡು ಹೋಗುತ್ತಿದ್ದೇನೆ.

***

ಸಿರಿತನ ಎನ್ನೋದು ಕೆಲವರಿಗೆ born with a sliver spoon ಅನ್ನೋ ತರಹ ಹುಟ್ಟಿದಂದಿನಿಂದ ಸಹಜವಾಗಿದ್ದಿರಬಹುದು, ಅಥವಾ ಜೀವಿತಾವಧಿಯ ಮಧ್ಯೆ ಲಭಿಸಿದ ಸ್ಥಿತಿಯಾಗಿರಬಹುದು, ಇವೆರಡನ್ನೂ ಗಮನದಲ್ಲಿಟ್ಟುಕೊಂಡು ಯೋಚಿಸಿದರೆ ಹುಟ್ಟಾ ಆಗರ್ಭ ಶ್ರೀಮಂತರಾಗಿದ್ದವರ ಆಲೋಚನೆಗಳಿಗೂ ಜೀವನ ಪರ್ಯಂತ ಹಣ ಕೂಡಿಟ್ಟು ಶ್ರೀಮಂತಿಕೆಯ ಮಟ್ಟವನ್ನು ಮುಟ್ಟಿದವರಿಗೂ ಬಹಳಷ್ಟು ವ್ಯತ್ಯಾಸಗಳನ್ನು ಗಮನಿಸಬಹುದು. ಅದರಲ್ಲೂ ತಾವೇ ಗಳಿಸಿ ಉಳಿಸಿ ಬೆಳೆಸಿದ ಹಣಕ್ಕೆ ಜನರು ಕೊಡುವ ಮರ್ಯಾದೆಗಿಂತಲೂ ದಿಢೀರನೆ ಲಾಟರಿ ತಾಗಿಯೋ ಮತ್ತಿನ್ಯಾವುದೋ ರೂಪದಲ್ಲೋ ಹಣಗಳಿಸಿದವರು ಕೊಡುವ ಮರ್ಯಾದೆ ಬೇರೆಯಾದುದು. ಹೀಗೆ ಹಲವಾರು ರೀತಿಯಲ್ಲಿ ಜನರಿಗೆ ಒಂದೊಂದು ರೂಪಾಯಿಯ ಮೌಲ್ಯ ಕಂಡು ಬರುತ್ತದೆ.

ನಮ್ಮಲ್ಲಿ ವಿವಾಹ ಮತ್ತೊಂದನ್ನು ಮಾಡುವಾಗ ಜಾತಿಯ ಜೊತೆಗೆ ಅಂತಸ್ತನ್ನೂ ಸಹ ವಿಶೇಷವಾಗಿ ಗಮನಿಸಲಾಗುತ್ತದೆ, ಮೊದಮೊದಲು ಜಾತಿ, ಗೋತ್ರ ಸರಿಯಾಗಿ ಕೂಡಿ ಬಂದರೆ ಆಯಿತು, ಅಂತಸ್ತಿನಲ್ಲೇನಿದೆ ವಿಶೇಷ ಎಂದು ಯೋಚಿಸುತ್ತಿದ್ದವನಿಗೆ ಇತ್ತೀಚೆಗೆ ನಮ್ಮ ನೆರೆಹೊರೆಯಲ್ಲಿ ಕೇಳಿದ ಒಂದು ಸಂಗತಿ ಇನ್ನಷ್ಟು ಯೋಚಿಸುವಂತೆ ಮಾಡಿತು. ಹುಡುಗಿಯ ಕಡೆಯವರು ಆಗರ್ಭ ಶ್ರೀಮಂತರು, ಊರನ್ನೇ ಕೊಳ್ಳುವಷ್ಟು ಹಣವಿದೆ ಅವರಲ್ಲಿ, ಜನಬಲವಿದೆ, ಹುಡುಗನ ಕಡೆಯವರು ಮಧ್ಯಮ ವರ್ಗದವರು, ಹುಡುಗ ದೆಹಲಿಯಲ್ಲಿ ಒಳ್ಳೆಯ ಕೆಲಸ ಮಾಡಿಕೊಂಡಿದ್ದಾನೆ, ಆದರೆ ಈ ಎರಡೂ ಕಡೆಯವರ ಒಟ್ಟು 'ಅಂತಸ್ತನ್ನು' ತಕ್ಕಡಿಯಲ್ಲಿಟ್ಟು ತೂಗಿ ನೋಡಿದರೆ ಬಹಳಷ್ಟು ವ್ಯತ್ಯಾಸ ಕಂಡುಬರುತ್ತದೆ.

ಹೀಗಿರುವಾಗ ಹುಡುಗಿಯ ಮನೆಯವರು ಹುಡುಗಿಗೆ ಮದುವೆಗೆ ಮೊದಲು ಒಂದು ಕ್ರ್ಯಾಷ್‌ಕೋರ್ಸ್‌ನಲ್ಲಿ ಅಡುಗೆ ಮಾಡುವುದನ್ನು ಹೇಳಿಕೊಟ್ಟಿದ್ದರೇ ವಿನಾ ಒಂದು ಚಹಾ ಮಾಡುವುದನ್ನು ಕಲಿಯುವ ಅಗತ್ಯವೂ ಆ ಹುಡುಗಿಗೆ ಆ ವರೆಗೆ ಇರಲಿಲ್ಲ. ಆದರೆ ಹುಡುಗನ ಮನೆಯವರು ಆ ಹುಡುಗನನ್ನು ಬೆಳೆಸಿದ ಬಗೆ ನಾಳೆಯ ಬಗ್ಗೆ ಚಿಂತಿಸುವ ಸ್ವಭಾವವನ್ನೂ, ಒಂದೊಂದು ರೂಪಾಯಿಯ ಬಗ್ಗೆ ಆತ ಯೋಚಿಸುವ ಸ್ವಭಾವವನ್ನೂ ಗಳಿಸಿಕೊಟ್ಟಿತ್ತು. ಸಂಸಾರವೆಂದರೆ ಸಂಘರ್ಷಗಳಿಗೆ ಕೊನೆಮೊದಲೆನ್ನುವುದಿದೆಯೇ, ಹೀಗಿರುವಾಗ ಈ ಸಂಬಂಧದಲ್ಲೂ ವ್ಯತ್ಯಾಸಗಳು ಬರತೊಡಗಿದವು - ಹುಡುಗನ ಮಾವನವರು, ಅಂದರೆ ಹುಡುಗಿಯ ತಂದೆ ದೆಹಲಿಯಲ್ಲಿ ಹೊಸದಾಗಿ ಮದುವೆಯಾದವರ ಹೆಸರಿನಲ್ಲಿ ಒಂದು ಒಳ್ಳೆಯ ಫ್ಲ್ಯಾಟ್ ಒಂದನ್ನು ಖರೀದಿಸಿಕೊಟ್ಟರು - ಹುಡುಗನಿಗೆ ಅದನ್ನು ವರದಕ್ಷಿಣೆಯ ರೂಪದಲ್ಲಿ ತೆಗೆದುಕೊಳ್ಳುತ್ತಿದ್ದೇನಲ್ಲ ಎನ್ನುವ ಸ್ವಯಂ ಆಲೋಚನೆಯ ಇರುಸುಮುರುಸಿನ ಜೊತೆಗೆ ತನ್ನ ಕೈಯಲ್ಲಿ ಇನ್ನು ಹತ್ತು ವರ್ಷಗಳಲ್ಲೂ ಆ ರೀತಿ ಹಣ ಸುರಿದು ಒಂದು ಫ್ಲ್ಯಾಟ್ ಕೊಳ್ಳುವುದಕ್ಕೆ ಆಗುವುದಿಲ್ಲ ಎನ್ನುವ ನೈಜ ಸ್ಥಿತಿಯ ಅರಿವು ಹುಟ್ಟಿಸುವ ಕೈಕೈ ಹಿಸುಕಿಕೊಳ್ಳುವ ಸಂದರ್ಭ. ಹುಡುಗಿಯ ಹೆಸರಿನಲ್ಲಿ ಬಳುವಳಿ ಸಾಮಾನುಗಳ ಜೊತೆಗೆ ಕೆಲಸಗಾರರೂ ಈ ಮದುಮಕ್ಕಳ ಬೆನ್ನು ಹತ್ತಿ ದೆಹಲಿ ಮುಟ್ಟಿದರೂ ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲೇ ದೆಹಲಿಯ ಹವೆ ಆ ಕೆಲಸಗಾರರನ್ನು ಮತ್ತೆಲ್ಲೋ ಹೋಗುವಂತೆ ಮಾಡಿ, ಕೊನೆಗೆ ಸ್ವಲ್ಪ ದಿನಗಳ ಕಾಲ ಮನೆಯಲ್ಲಿ ಇವರಿಬ್ಬರೇ ಅಡುಗೆ ಮಾಡಿ ಊಟ ಮಾಡುವ ಸ್ಥಿತಿ ತಲುಪಿತು. ಈ ಮಧ್ಯೆ ಹೊರಗಿನಿಂದ ತರಿಸಿದ ಊಟವೂ, ಹಣ್ಣುಹಂಪಲುಗಳನ್ನು ತಿನ್ನುವುದೂ ನಡೆಯಿತು. ಇವರಿಬ್ಬರಿಗೆ ಸಹಾಯ ಮಾಡಲೆಂದು ದೆಹಲಿ ಸೇರಿದ ಹುಡುಗನ ತಾಯಿಯಿಂದ ಸಂಬಂಧಗಳು ಹದಗೆಟ್ಟವೇ ವಿನಾ ಅದರಿಂದ ಸಹಾಯವೇನೂ ಆದಂತೆ ತೋರಲಿಲ್ಲ. ಮನೆಯಲ್ಲಿ ಒಳ್ಳೆಯ ಊಟ ಸಿಗುತ್ತದೆ ಎನ್ನುವುದೊಂದನ್ನು ಬಿಟ್ಟರೆ ಒಂದು ಕಡೆ ಆಫೀಸಿನ ಕೆಲಸದೊತ್ತಡಗಳು, ಮನೆಗೆ ಬಂದರೆ ಅಮ್ಮ-ಹೆಂಡತಿಯರಿಬ್ಬರ ನಡುವೆ ಒಬ್ಬರ ಪರ ವಹಿಸಲೇ ಬೇಕಾದ ಅನಿವಾರ್ಯತೆಯ ನಡುವೆ ಹುಡುಗ ಬಳಲಿ ಹೋದ. ಬೆಳಿಗ್ಗೆ ಘಂಟೆ ಎಂಟಾದರೂ ಎದ್ದು ಮುಖಕ್ಕೆ ನೀರು ಕಾಣಿಸದ ಸೊಸೆಯನ್ನು ಕಂಡರೆ ಅತ್ತೆಗೆ ಆಗದು, ನನ್ನ ಸ್ವಾತಂತ್ರ್ಯಕ್ಕೆ ಇವರೇಕೆ ಧಕ್ಕೆ ತರುತ್ತಿದ್ದಾರೆ ಎನ್ನುವುದು ಸೊಸೆಯ ಬಗೆ ಹರಿಯಲಾರದ ಸಮಸ್ಯೆ - ಕೊನೆಗೆ ನಾನಿರುವುದು ನಮ್ಮ ಅಪ್ಪ ಕೊಟ್ಟ ಮನೆಯಲ್ಲಿ ಎನ್ನುವ ಗರ್ವ ಬೇರೆ. ಗಂಡನಿಗೆ ಒಂದು ಲೋಟಾ ಕಾಫಿಯನ್ನು ಮಾಡಿಕೊಡದ ಹೆಂಡತಿ ಎಂದು ಅತ್ತೆ ಅಂದುಕೊಂಡರೆ, ನಾನೇನು ಈ ಮನೆಯ ಕೆಲಸದವಳಲ್ಲ ಎನ್ನುವುದು ಸೊಸೆಯ ಜವಾಬು.

ಹೀಗೇ ಹಲವು ತಿಂಗಳುಗಳು ನಡೆದು ಒಂದು ದಿನ ಹುಡುಗಿಯ ತಂದೆಯ ಕಿವಿಗೆ ತಮ್ಮ ಮಗಳು ಫೋನಿನಲ್ಲಿ ಅತ್ತು ಸುದ್ದಿಯನ್ನು ಆಕೆಯ ಚೌಕಟ್ಟಿನಲ್ಲಿ ವರದಿಯನ್ನು ಒಪ್ಪಸಿದ್ದೇ ತಡ ಅವರು ಕೆಂಡಾಮಂಡಲವಾದರು - ಗಿಳಿಯನ್ನು ಸಾಕಿ ಗಿಡುಗನ ಕೈಗೆ ಕೊಟ್ಟೆ ಎಂದುಕೊಂಡರು, ನಮ್ಮ ಮಗಳು ಒಂದು ದಿನವೂ ಅತ್ತಿದ್ದಿಲ್ಲ, ನೀರು ಕುಡಿದ ಲೋಟವನ್ನು ಎತ್ತಿ ಇಟ್ಟವಳಲ್ಲ ಅಂತಹವಳನ್ನು ನೀವು ಅಡುಗೆ ಮಾಡು, ಬಾಗಿಲು ಸಾರಿಸು, ಮನೆ ಕಸ ಹೊಡಿ ಎನ್ನಲು ನಿಮಗೇನು ಹಕ್ಕಿದೆ ಎಂದವರು ಬೊಬ್ಬೆ ಹಾಕಿದರೆ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗು, ಆಕೆ ನಮ್ಮ ಮನೆಯ ಸೊಸೆ, ನಮ್ಮ ಮನೆಯಲ್ಲಿ ಈ ರೀತಿ ಸಂಪ್ರದಾಯ ಎಂದಿನಿಂದಲೂ ನಡೆದು ಬಂದಿದೆ ಅದಕ್ಕೆ ಆಕೆಯೇನೂ ಇಂದು ಹೊರತಲ್ಲ ಎಂದು ಹುಡುಗನ ತಂದೆಯವರು ಸಮಾಧಾನವಾಗಿಯೇ ಉತ್ತರಕೊಟ್ಟರು...ಎರಡೂ ಕಡೆಯವರ ಸಮಾಧಾನ-ಅಬ್ಬರ ಇವುಗಳ ನಡುವೆ ಹುಡುಗ-ಹುಡುಗಿಯ ಸಂಬಂಧವೂ ಬಾಡುತ್ತಾ ಹೋಗಿ ಕೊನೆಗೆ ಮದುವೆಯಾಗಿ ಒಂದು ವರುಷದ ಒಳಗೇ ಸಂಬಂಧ ಕಡಿದು ಹೋಗುವ ಸ್ಥಿತಿಗೆ ಬಂದಿದೆಯೆಂದು ತಿಳಿಯಿತು.

ಹಾಗಾದರೆ, ಈ ರೀತಿ ಅಂತಸ್ತಿನಲ್ಲಿ ವ್ಯತ್ಯಾಸವಿರುವ ಸಂಬಂಧಗಳು ಹೇಗೆ ನೆಲೆ ನಿಲ್ಲುತ್ತವೆ? ಒಂದು ವೇಳೆ ಇಬ್ಬರ ಅಂತಸ್ತು ಒಂದೇ ಆಗಿದ್ದರೂ ಅವರವರ ಸಂಪ್ರದಾಯ, ಆಚಾರ-ವಿಚಾರಗಳಲ್ಲಿ ಬದಲಾವಣೆ ಇರುವಾಗ ಯಾರು ಯಾರಿಗೆ ತಗ್ಗಿಬಗ್ಗಿ ನಡೆಯಬೇಕು, ಹೊಂದಿಕೊಂಡು ಹೋಗಬೇಕು? ಅಕಸ್ಮಾತ್ ಹುಡುಗನ ಮನೆಯವರು ಹುಡುಗನ ಜೊತೆಯಲ್ಲೇ ಇದ್ದರೆ, ಸೊಸೆ ಹುಡುಗನ ತಂದೆತಾಯಿಗಳ ಸೇವೆ ಮಾಡುವುದನ್ನು ಸಂಸಾರದ ಕಾನೂನು ಎನ್ನಲಾದೀತೇ? ಮುಂಜಾನೆದ್ದು ಮುಂಬಾಗಿಲ ಹೊಸ್ತಿಲಿಗೆ ನೀರು ಹಾಕಿ ರಂಗೋಲಿ ಹಾಕುವ ಶುದ್ಧ ಹಳೆಯ ಸಂಪ್ರದಾಯದಿಂದ ಹಿಡಿದು ಇಂದಿನ ಬೆಡ್‌ಕಾಫಿ ವ್ಯವಸ್ಥೆಯಲ್ಲಿ ಎಲ್ಲಿ ನಡುವೆ ಗೆರೆಯನ್ನು ಯಾರು ಎಳೆಯಬೇಕು? ಈಗಿನ ಕಾಲದಲ್ಲಿ ಒಂದು ಮನೆಯನ್ನು ಹೊಕ್ಕ ಸೊಸೆಯ ಜವಾಬ್ದಾರಿ ಹೆಚ್ಚೋ ಅಥವಾ ಮನೆಗೆ ಬಂದವಳಿಗೆ ಸಾಧ್ಯವಾದಷ್ಟು ಆದರವನ್ನು ತೋರಿ ಎಲ್ಲರೊಳಗೊಂದಾಗಿಸಿಕೊಳ್ಳಬೇಕೆನ್ನುವ ಮಾತು ಹೆಚ್ಚೋ?

ಅಂತಸ್ತು ಹುಟ್ಟಿಸುವ ಸಂಘರ್ಷ ಈ ಬಗೆಯದಾದರೆ ಕಷ್ಟ ಪಟ್ಟು ಸಂಪಾದಿಸಿದ ಹಣದ ಹೊರೆ ಇನ್ನೊಂದು ಥರ - ಎಷ್ಟು ಗಳಿಸಿದರೂ ಸಾಲದು ಎನ್ನುವ ಸಾಮಾನ್ಯ ರೋಗದ ಜೊತೆಗೆ ಗಳಿಸಿದ್ದನ್ನು ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡುವ ಮನಸ್ಸೂ ಬಹಳಷ್ಟು ಜನರಿಗೆ ಸಿದ್ಧಿಸೋದಿಲ್ಲ. ಸುಮಾರು ಐವತ್ತು ವರ್ಷಗಳವರೆಗೆ ಸಾಕಷ್ಟು ಹಣವನ್ನು ಕೂಡಿಸಿ ತಾವು ಕೂಡಿಟ್ಟ ಮೊತ್ತವನ್ನು ತಮ್ಮ ಜೀವನದ ಉಳಿದ ಅವಧಿಯಲ್ಲಿ ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಅನುಭವಿಸಿ ಹೋಗುವವರು ಬಹಳ ವಿರಳ. ಜೊತೆಗೆ ತಾವೇ ಕೂಡಿ ಹಾಕಿಟ್ಟ ಸಂಪತ್ತನ್ನು ತಮ್ಮ ಮಕ್ಕಳು ಉಡಾಫೆಯಿಂದ ಹಾರಿಸಿ ತೆಗೆಯುತ್ತಿದ್ದರೆ ಇನ್ನೂ ಸಂಕಟ; ತಾವು ದುಡಿಯದ ಹಣದ ಬೆಲೆಯಿರದ ಮಕ್ಕಳು, ತಮ್ಮ ದುಡ್ಡಿನ ಅರಿವಿನ ಹೊರೆ ಹೊತ್ತ ಪೋಷಕರು ಹೀಗೆ ಮಕ್ಕಳು-ತಂದೆತಾಯಿಯರ ನಡುವೆ ಮತ್ತೊಂದು ರೀತಿಯ ಸಂಘರ್ಷವೇರ್ಪಟ್ಟಿದ್ದನ್ನು ನಾವು ನೋಡಬಹುದು.

ಒಂದು ಕಡೆ ತಮ್ಮ ಲೈಟ್‌ಬಿಲ್, ಹಾಲಿನ ಬಿಲ್‌, ತರಕಾರಿ ಬಿಲ್‌ನಲ್ಲಿ ಪ್ರತಿ ತಿಂಗಳು ಒಂದು ರೂಪಾಯಿಯೂ ಹಿಂದೆ-ಮುಂದೆ ಹೋಗದಂತೆ ಜಾಗರೂಕತೆಯಿಂದ ನೋಡಿಕೊಂಡು ಬರುವ ತಂದೆ, ಮತ್ತೊಂದು ಕಡೆ ದಿನಕ್ಕೆರಡು ಬಾರಿ ಹತ್ತತ್ತು ರೂಪಾಯಿ ಕೊಟ್ಟು ಕೋಕ್ ಅಥವಾ ಮತ್ತಿನ್ನೇನನ್ನೋ ಕುಡಿಯುವ, ಐಸ್ ಕ್ರೀಮ್ ತಿಂದು ಮಜಾ ಉಡಾಯಿಸುವ ಮಕ್ಕಳು. ಒಂದು ಕಡೆ ಒಂದು ಅಗಳು ಅನ್ನವನ್ನಾಗಲೀ, ಒಂದು ಕಾಳು ಅಕ್ಕಿಯನ್ನಾಗಲೀ ಚೆಲ್ಲಬಾರದೆಂದು ಅಚ್ಚುಕಟ್ಟಾಗಿ ಯೋಚಿಸುವ ಪೋಷಕರು, ಮತ್ತೊಂದು ಕಡೆ ತಾವು ಉರಿಸುವ ಪೆಟ್ರೋಲ್ ಮೇಲೆಯೇ ನಿಗಾ ಇರಿಸದ ಮಕ್ಕಳು. ಒಂದು ಕಡೆ ಹಳೆಯ ಮೈಂಡ್ ಸೆಟ್‌ನಲ್ಲೇ ಜೀವನ ನಡೆಸುವ ಪೋಷಕರು, ಮತ್ತೊಂದು ಕಡೆ ಹೊಸ ತಂತ್ರಜ್ಞಾನದ ಪರಿಚಯವಿರುವ ಮಕ್ಕಳು - ಹೀಗೆ ಹಲವಾರು ಏರುಪೇರುಗಳ ನಡುವೆಯೂ ಒಂದು ರೀತಿಯ ಸಮತೆ (equilibrium) ನಮಗೆ ಕಂಡುಬರುತ್ತದೆ. ಹಳೆ ಬೇರು ಹೊಸ ಚಿಗುರುಗಳ ನಡುವಿನ ಭಿನ್ನ ನಿಲುವನ್ನ ಸ್ವಲ್ಪ ಮಟ್ಟಿಗಾದರೂ ಸಾಧಿಸಿಕೊಳ್ಳಬಹುದು, ಆದರೆ ಇದ್ದೂ ಇಲ್ಲದಂತಿರುವವರ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಸಾಧ್ಯ.

***

ಹಣಕಾಸಿನ ವಿಚಾರವಷ್ಟೇ ಅಲ್ಲ ಮತ್ತೆಲ್ಲಾ ರೀತಿಯಲ್ಲಿ ಸಿರಿತನ-ಬಡತನಗಳ ಆಯಾಮಗಳನ್ನು ಕಲ್ಪಿಸಿಕೊಂಡಾಗ ಈ ರೀತಿ ವಯಸ್ಸಿನ, ಇದ್ದು-ಇಲ್ಲದವರ, ಇಲ್ಲದೆ-ಇದ್ದವರ ಸಮೀಕರಣಗಳಲ್ಲಿ ಬಹಳಷ್ಟು ಪ್ಯಾರಾಮೀಟರುಗಳನ್ನು ನೋಡಬಹುದು. ಹಣ ಎನ್ನುವುದು ನಮಗಿರುವ ಹಲವಾರು ಸಾಧನಗಳಲ್ಲಿ ಒಂದು ಎಂಬುದನ್ನು ಹೆಚ್ಚು ಜನರು ಅರಿತಿರಲಾರರು, ಅಲ್ಲಿಯವರೆಗೆ ಹಣವೇ ಅಂತಹವರನ್ನು ಆಳತೊಡಗುತ್ತದೆ, ಎಲ್ಲವೂ 'ಇದ್ದವರ' ಸುತ್ತಮುತ್ತಲು ಗಿರಕಿ ಹೊಡೆಯತೊಡಗುತ್ತದೆ.

No comments: