Thursday, September 21, 2006

ಕೆಲಸದ ಜೊತೆಗೆ ಬರಬಹುದಾದ ಸೋಶಿಯಲ್ ಲೈಫ್

'ನಿನಗೆ ಭಾರತದಲ್ಲಿ ಕೆಲಸಾ ಮಾಡೋದು ಅಂದ್ರೇ ಏನು ಅನ್ನೋದೇ ಮರೆತು ಹೋದ ಹಾಗಿದೆ!' ಅನ್ನೋದು ಇತ್ತೀಚೆಗೆ ನನ್ನನ್ನುದ್ದೇಶಿಸಿ ಒಂದಿಬ್ಬರು ಆಡಿದ ಮಾತುಗಳು. ಅದೇನೋ ನಿಜ, ಅಲ್ಲಿ ಕೆಲಸ ಮಾಡಿ ಅದೆಷ್ಟೋ ವರ್ಷಗಳು ಆದವು ಎಂದು ಯೋಚಿಸುತ್ತಿರುವಂತೆ, ಈ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕ್ರಾಂತಿ, ಸೆಲ್ ಫೋನ್-ಎಸ್ಸೆಮ್ಮೆಸ್ ಕ್ರಾಂತಿ, ಬಳಕೆದಾರರ ಬೆಳವಣಿಗೆ, ಕಾಲ್‌ಸೆಂಟರ್‌ಗಳು ತಲೆ ಎತ್ತಿ ನಿಂತದ್ದು ಇವೆಲ್ಲವೂ ನಡೆದವು ಎನ್ನಿಸಿ ಒಂದು ಕಾಲು ಶತಮಾನ ನಿದ್ದೆ ಮಾಡಿಬಿಟ್ಟೆನೇನೋ ಎನ್ನುವಂತಾಯಿತು. 'ರಸ್ತೆ ಪಕ್ಕ ಎಳನೀರು ಮಾರೋರ ಸೊಂಟದಲ್ಲೂ ಒಂದೊಂದು ಮೊಬೈಲು ಫೊನಿರುತ್ತೆ' ಎಂದು ಕೇಳಿದಾಗ ಒಂದು ರೀತಿ ಆಶ್ಚರ್ಯವಾಗುತ್ತೆ, ಮತ್ತೊಂದು ಕಡೆ ಐವತ್ತು ಜನರು ತುಂಬಿರುವ ಬಸ್ಸಿನಲ್ಲಿ ಮುಕ್ಕಾಲು ಪಾಲು ಜನ ಜೋರಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆ ಅಂತಹ ಪರಿಸ್ಥಿತಿಯ ಗಂಭೀರತೆಯನ್ನು ನೋಡಿ ಹೆದರಿಕೆಯೂ ಆಗುತ್ತೆ.

ನಾನು 'ಸಹೋದ್ಯೋಗಿಗಳು ಸ್ನೇಹಿತರಲ್ಲ' ಎಂದು ಬಲವಾಗಿ ನಂಬಿದವನು - ಈ ಮಾತು ಭಾರತದಲ್ಲಿ ಕೆಲಸ ಮಾಡುವಾಗ ಹೆಚ್ಚು ಅನ್ವಯವಾಗದಿದ್ದರೂ ಇಲ್ಲಂತೂ ಖಂಡಿತ ಎನ್ನಿಸಿಬಿಟ್ಟಿದೆ. ವಿಷಾದದ ವಿಷಯವೆಂದರೆ ಇಲ್ಲಿ ಸಹೋದ್ಯೋಗಿಗಳನ್ನು ಹೊರತು ಪಡಿಸಿದರೆ ನನ್ನಂತಹವರ ಸರ್ಕಲ್ ಬಹಳ ಚಿಕ್ಕದಾಗಿ ಹೋಗುತ್ತದೆ. ಅದಕ್ಕೆ ತಕ್ಕಂತೆ ವಾರದ ದಿನಗಳಲ್ಲಿ ಅರ್ಧಕ್ಕರ್ಧ ಸಮಯವನ್ನು ಆಫೀಸಿನಲ್ಲಿ ಕಳೆಯುವ ನಮಗೆ ಸಾಮಾಜಿಕ ಬದುಕು ಒಂದು ರೀತಿ ದೂರವೇನೋ ಎಂದು ಅನ್ನಿಸಿಬಿಡುತ್ತದೆ.

ಭಾರತದಲ್ಲಿ ಕೆಲಸ ಮಾಡುತ್ತಿದ್ದ ಮಿತ್ರನೊಬ್ಬನ ಜೊತೆ ಇನ್ಸ್ಟಂಟ್ ಮೆಸ್ಸೇಜುಗಳ ಮೂಲಕ ಮಾತುಕಥೆ ನಡೆಸಿದ್ದೆ - ಹೇಗೋ ಮಾತು ಎಲ್ಲಿಂದೆಲ್ಲಿಗೋ ಬಂದು ನಾನು ಅವನಿಗೆ ಆಫೀಸಿನ ಸಮಯದಲ್ಲಿ ನಿನ್ನ ಮಿತ್ರರೊಡನೆ ವ್ಯವಹರಿಸುವುದನ್ನು ಕಡಿಮೆ ಮಾಡಿ ಕೆಲಸ ಕಾರ್ಯಗಳ ಕಡೆ ಗಮನ ಕೊಡು ಎಂದುದಕ್ಕೆ ಅವನು ಪ್ರತಿಯಾಗಿ ಅದೇನೋ ಒಳ್ಳೆಯ ಸಲಹೆ, ಆದರೆ ನನ್ನ ಕೆಲಸದಂತೆ ನಾನು ನನ್ನ ಸಾಮಾಜಿಕ ಬದುಕನ್ನೂ ಗೌರವಿಸಬೇಕು, ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕು ಎಂದಿದ್ದನ್ನು ನಾನು ಒಂದು ನಿಮಿಷ ಗಹನವಾಗಿ ಯೋಚಿಸಿದೆ. ಅವನು ಹೇಳಿದ್ದು ಬಹಳ ಸತ್ಯವಾದ ವಿಷಯ - ನನಗೇನೋ ಇಲ್ಲಿ ಆಫೀಸಿನ ಸಮಯದಲ್ಲಿ ಅದೂ ಅಪರೂಪಕ್ಕೊಮ್ಮೆ ಎನ್ನುವಂತೆ ಯಾರಾದರೊಬ್ಬರು ಹೊರಗಿನವರು ಇನ್ಸ್ಟಂಟ್ ಮೆಸ್ಸೇಜ್ ಕಳಿಸಿದರೆ ಹೆಚ್ಚು, ಅದನ್ನೂ ಕಡಿಮೆ ಮಾಡಿಕೊಳ್ಳಲು ನಾನು ಒಂದೇ 'invisible' mode ನಲ್ಲಿ ಇರುವುದೋ ಅಥವಾ ಮೆಸ್ಸೆಂಜರ್‌ಗೆ ಲಾಗಿನ್ ಆಗದೇ ಇರುವ ಸಂದರ್ಭವೇ ಹೆಚ್ಚು. ಆದರೆ ಭಾರತದಲ್ಲಿನ ಇನ್ಸ್ಟಂಟ್ ಮೆಸ್ಸೇಜ್, ಸಂದೇಶಗಳ ಯುಗದಲ್ಲಿ, ಅದರಲ್ಲೂ ಪ್ರತಿಯೊಬ್ಬರ ಪರಿವಾರ, ಗೆಳೆಯರ ಬಳಗ ದೊಡ್ಡದಾಗಿರುವ ಸಹಜ ಸ್ಥಿತಿಯಲ್ಲಿ ಅದು ಹೇಗೆ ತಾನೆ ಹೊರಗಿನ ಸಂವೇದನೆಗಳಿಗೆ ಸಂಪೂರ್ಣವಾಗಿ ಕಿವಿಗೊಡದೇ ಕೆಲಸದ ಮೇಲೆ ಗಮನವಿರಿಸಲು ಸಾಧ್ಯ? ಇಲ್ಲಿ ಕೆಲಸ ಮಾಡುತ್ತಿರುವ ನನಗೆ ಹತ್ತು ಜನರು ಪರಿಚಯವಿದ್ದು ಒಬ್ಬರು ಮೆಸ್ಸೇಜ್ ಕಳಿಸಿದರೆ, ನಾನು ಅಲ್ಲೇನಾದರೂ ಕೆಲಸ ಮಾಡುತ್ತಲಿದ್ದರೆ ಕೊನೇಪಕ್ಷ ಒಂದು ನೂರು ಜನರಾದರೂ ಪರಿಚಯವಿದ್ದು ಅವರಲ್ಲಿ ಹತ್ತು ಜನರಾದರೂ ಮೆಸ್ಸೇಜ್ ಕಳಿಸುತ್ತಿರಲಿಲ್ಲವೇ? ಅವರನ್ನೆಲ್ಲ ಹೇಗೆ ನಿಭಾಯಿಸುತ್ತಿದ್ದೆ? ಅಥವಾ ಇಲ್ಲಿನ ಹಾಗೆ ವಾರದ ದಿನಗಳಲ್ಲಿ ವಾರಾಂತ್ಯ ಬಂದರೆ ನೋಡೋಣವೆಂದೋ, ವಾರಾಂತ್ಯದ ದಿನಗಳಲ್ಲಿ 'ನಾಳೆ' ನೋಡೋಣವೆಂದೋ ತಳ್ಳಿಹಾಕಲು ಸಾಧ್ಯವಾಗುತ್ತಿತ್ತೇ? ಇನ್ಸ್ಟಂಟ್ ಮಸ್ಸೇಜ್ ವಿಂಡೋವನ್ನೋ ಅಥವಾ ಇ-ಮೇಲ್ ಮೆಸ್ಸೇಜುಗಳನ್ನೋ ಕ್ಲೋಸ್ ಮಾಡಿ ಮುಗಿಸಿದಷ್ಟು ಸುಲಭವಾಗಿ ನಮ್ಮ ಸಾಮಾಜಿಕ ಜೀವನದ ಎಳೆಗಳನ್ನು ನಿಭಾಯಿಸಬಹುದೇ? ಎನ್ನುವ ತರಾವರಿ ಪ್ರಶ್ನೆಗಳು ಮನದಲ್ಲಿ ಉದ್ಭವವಾದವು.

ಧಾರ್ಮಿಕವಾಗಿ ನನ್ನ ಬದುಕು ಆಫೀಸಿನ ಬದುಕಿಗಿಂತ ಭಿನ್ನ, ನನ್ನ ಆಚರಣೆಗಳು, ಆಚಾರ-ವಿಚಾರಗಳನ್ನು ನನ್ನ ಸಹೋದ್ಯೋಗಿಗಳ ಜೊತೆ ಹಂಚಿಕೊಳ್ಳುವುದಿಲ್ಲ; ರಾಜಕೀಯವಾಗಿ ನಾನಿಲ್ಲಿ ಯಾವ ರೀತಿಯಲ್ಲೂ ಭಾಗವಹಿಸೋದಿಲ್ಲ; ಸಾಮಾಜಿಕವಾಗಿ ನನ್ನದೇ ಆದ ಒಂದು ಜೀವನ ಶೈಲಿ ಇದೆ, ಅದು ಇಲ್ಲಿಯವರ ಹ್ಯಾಪ್ಪಿ ಅವರ್‌ಗೆ ಹೊಂದಿಕೊಳ್ಳುವುದಿಲ್ಲ, ಕಮ್ಮ್ಯೂನಿಟಿ ಸರ್ವೀಸೂ ಅಷ್ಟಕಷ್ಟೇ; ಮನೆಯಲ್ಲೊಂದು ಪ್ರಪಂಚ, ಕಾರಿನಲ್ಲೊಂದು ಪ್ರಪಂಚ ಹಾಗೂ ಅಫೀಸಿನಲ್ಲೊಂದು ಬದುಕು ಎಂದು ಮೂರು ನಾಲ್ಕು ಭಾಗವಾಗಿ ವಿಂಗಡಣೆಗೊಳಪಟ್ಟಿದ್ದೇನೆ. ಹೀಗಿರುವಾಗ 'ಎಲ್ಲವನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕು, ಮ್ಯಾನೇಜ್ ಮಾಡಬೇಕು' ಎಂದು ಉಪದೇಶ ಸಾರಲು ನನಗ್ಯಾವ ಹಕ್ಕಿದೆ ಹಾಗೂ ಅರ್ಹತೆ ಇದೆ ಎಂದೂ ಯೋಚನೆಗಿಟ್ಟುಕೊಂಡಿತು. ಈ ದಿನ ಬೆಳಗ್ಗಿನ ಜಾವ ಮೂರೂವರೆ ಹೊತ್ತಿಗೆ ನನ್ನ ಎರಡನೇ ಅಣ್ಣ ಫೋನ್ ಮಾಡಿದ್ದ, ಅವನು ಎಷ್ಟು ಸಾರಿ ಹೇಳಿದರೂ ಹೀಗೆ ಅವೇಳೆಯಲ್ಲೇ ಫೋನ್ ಮಾಡೋದು ಎಂದು ಅವನ ಮೇಲೂ ರೇಗುತ್ತೇನೆ, just because ನಾನ್ಯಾವುದೋ ಬೇರೆಯೇ 'ಪ್ರಪಂಚ'ದಲ್ಲಿದ್ದೇನೆಂದು ಅವನೂ ಸಹ ತನ್ನ ಸಂವೇದನೆಗಳನ್ನು ನನಗೆ ಅನುಕೂಲಕರವಾದ ಘಳಿಗೆ ಬರುವಲ್ಲಿಯವರೆಗೆ ಕಟ್ಟಿ ಹಾಕಿಟ್ಟುಕೊಳ್ಳಬೇಕು. ಇದೇ ಅಣ್ಣ ನಾನು ಸಾಗರದಲ್ಲಿ ರೂಮು ಮಾಡಿಕೊಂಡು ಇದ್ದಾಗ ಒಂದು ದಿನ ಬೆಳಗ್ಗಿನ ಜಾವಾ ನಾಲ್ಕೂವರೆಗೆ ಊರಿನಿಂದ ನನ್ನ ತಂದೆಯವರು ತೀರಿಕೊಂಡ ಸುದ್ದಿಯನ್ನು ಹೊತ್ತು ತಂದಿದ್ದ, ನನ್ನನ್ನೂ ಜೊತೆಯಲ್ಲಿಯೇ ಕರೆದುಕೊಂಡು ಹೋದ, ಆಗಂತೂ ನನಗೆ ಅದು ಅವೇಳೆ ಎನ್ನಿಸಿರಲಿಲ್ಲ. ಆಗಿನ ಸ್ಪಂದನಗಳಿಗೆ ಆಗ್ಗೆಯೇ ಉತ್ತರ ಅಥವಾ ಪ್ರತಿಕ್ರಿಯೆ ಸಿಗುತ್ತಿದ್ದರೆ ಸಹಜವೆನಿಸುತ್ತೆ, ಇಲ್ಲವೆಂದರೆ ತಡವಾದ ಯಾವುದರಲ್ಲಿ ಏನು ತಾನೆ ವಿಶೇಷವಿದೆ ಎನ್ನೋದು ನನಗಿನ್ನೂ ತಿಳಿಯದ ವಿಷಯ. ಹೀಗೆ 'ಅವೇಳೆ'ಯಲ್ಲಿ ಭಾರತದಿಂದ ಬರಬಹುದಾದ ಫೋನ್ ಕಾಲ್‌ಗಳ ಮೇಲೆ ನನಗೆ ಬಹಳಷ್ಟು ಭಯವಿದೆ, ಅವು ಎಂತಹ ಭಯಂಕರ ಸುದ್ದಿಯನ್ನು ಹೊತ್ತು ತರುತ್ತವೆಯೋ, ಹಾಗೆ ಬಂದಪ್ಪಳಿಸುವ ಸುದ್ದಿಗಳಿಗೆ ನಾನು ಹೇಗೆ ಪ್ರತಿಕ್ರಿಯಿಸುತ್ತೇನೋ ಎಂದೂ ಗುಮಾನಿಯಿದೆ.

ಸಾಮಾಜಿಕ ಸಂಬಂಧದ ಎಳೆಗಳನ್ನು ಮ್ಯಾನೇಜ್ ಮಾಡುವುದು ಎಂದರೆ ಅವುಗಳನ್ನು ಒಂದು ಡಬ್ಬಿಯಲ್ಲಿಟ್ಟು ಮುಚ್ಚಳವನ್ನು ಭದ್ರವಾಗಿ ಹಾಕಿ ಸಮಯ ಬಂದಾಗ ತೆಗೆದು ನೋಡಿದರಾಯಿತು ಎಂದಲ್ಲ, ನಮ್ಮ-ನಮ್ಮ ಕೆಲಸ ಕಾರ್ಯಗಳ ನಡುವೆಯೂ ಬದುಕು ಬೇಡುವ ಸಂಬಂಧದ ಎಳೆಗಳ ಅಗತ್ಯಗಳಿಗೆ ಸ್ಪಂದಿಸಿ ಎಷ್ಟು ಸಾಧ್ಯವೋ ಅಷ್ಟು ಅವುಗಳನ್ನು ಜೀವಂತವಾಗಿಡುವುದು. ಒಡಹುಟ್ಟಿದವರ, ಸ್ನೇಹಿತರ, ಗುರುತು-ಪರಿಚಯದವರ ಸಂಬಂಧವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳದೇ ಅವುಗಳು ಸಹಜವಾಗಿ ನಿರೀಕ್ಷಿಸುವ ಗಮನಕೊಡುವುದು. ನಾವ್ಯಾವುದೋ ಕುಬೇರನ ಲೋಕದ ಕರೆನ್ಸಿಯನ್ನು ಬಲ್ಲವರೆಂದು ಕಂಡಕಂಡದ್ದನ್ನು ನಮ್ಮ 'ಮೌಲ್ಯ'ಗಳಲ್ಲಿ ಅಳೆಯದೆ, ವಸ್ತು-ವಿಷಯಗಳನ್ನು ಅವುಗಳು ಇರುವ ಎತ್ತರಕ್ಕೆ ಬಗ್ಗಿ ನೋಡುವುದು. ಕಂಡಕಂಡವರಲ್ಲಿ ನಮ್ಮ ಬಹುಪರಾಕನ್ನು ಕೊಚ್ಚದೇ ಇತರರ ನೋವು-ನಲಿವುಗಳನ್ನೂ ಕೇಳುವ ಸಂಯಮವನ್ನು ರೂಢಿಸಿಕೊಳ್ಳುವುದು.

ಒಬ್ಬ ರಸ್ತೆ ಬದಿಯ ಭಿಕ್ಷುಕನಿಂದ ಹಿಡಿದು ಮಹಾನ್ ಚಿಂತಕನವರೆಗೆ ನಮ್ಮ ಸಂಬಂಧಗಳು, ನಾವು ಅವುಗಳನ್ನು ಬೆಳೆಸಿ-ಉಳಿಸಿಕೊಳ್ಳುವ ರೀತಿ, ನಾವು ನಮ್ಮ ನೆಟ್‌ವರ್ಕ್ ಅನ್ನು ಹಿಗ್ಗಿಸಿಕೊಳ್ಳುವ ಸಾಮರ್ಥ್ಯ ಇವೆಲ್ಲವೂ ಬಹಳಷ್ಟನ್ನು ನಿರ್ಧರಿಸಬಲ್ಲವು. ಹೋದಲ್ಲಿ ಬಂದಲ್ಲಿ 'ನಮ್ಮವರನ್ನು' ನಾವು ಹುಟ್ಟು ಹಾಕಿಕೊಳ್ಳದೇ ನಾವೇ ಕಟ್ಟಿಕೊಂಡ ಗೂಡಿನಲ್ಲಿ ಎಷ್ಟು ದಿನವಾದರೂ ಇರುವುದಕ್ಕೆ ಸಾಧ್ಯವಿದೆ? ಈ ಎಲ್ಲ ದೃಷ್ಟಿಯಿಂದಲೇ ಮೊಟ್ಟ ಮೊದಲನೇ ಬಾರಿಗೆ ಆಫೀಸಿನ ಸಮಯದಲ್ಲಿ ತನ್ನ ಪ್ರೈವೇಟ್ ಕಾನ್‌ವರ್‌ಸೇಷನ್‌ನಲ್ಲಿ ತೊಡಗಿರೋ ಸಹೋದ್ಯೋಗಿಯೊಬ್ಬ ಅಪ್ಯಾಯಮಾನವಾಗುತ್ತಾನೆ. ತನ್ನ ಮಕ್ಕಳು ಹಾಗೂ ಗಂಡನ ಬಗ್ಗೆ ಯಾವಾಗಲು ಸಂಭ್ರಮದ ಕಣ್ಣುಗಳಲ್ಲಿ ವಿವರಿಸುವ ಸಹೋದ್ಯೋಗಿ ಕಾನಿ (Connie) ವಿಶೇಷವಾಗಿ ಕಾಣಿಸುತ್ತಾಳೆ. ಎಲ್ಲೋ ಅಪರೂಪಕ್ಕೊಮ್ಮೆ ಕಾಫೆಟೇರಿಯಾದಲ್ಲಿ ಸಿಗುವ, 'ಹಾಯ್' ಎನ್ನುವ, ಇನ್ನೂ ಹೆಸರೂ ತಿಳಿಯದ ಕೆಲಸದವನೊಬ್ಬ ಅತಿ ಹತ್ತಿರದ ಬಂಧುವಾಗಿ ಕಂಡುಬರುತ್ತಾನೆ. ನಾವುಗಳು ನಮ್ಮ-ನಮ್ಮ ಸಾಮಾಜಿಕ ಸಂಬಂಧಗಳನ್ನು 'ಮ್ಯಾನೇಜ್' ಮಾಡಿದ್ದರ ಪರಿಣಾಮ ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಬಾಧಿಸಿಯೇ ತೀರುತ್ತದೆ - ಎಲ್ಲವನ್ನೂ ಮ್ಯಾನೇಜ್ ಮಾಡುತ್ತೇವೆ/ಮಾಡಬಹುದು ಎನ್ನುವ ಮಾತುಗಳು ಮೊಟ್ಟ ಮೊದಲ ಬಾರಿಗೆ ದೊಡ್ಡ ಸುಳ್ಳಿನ ಕಂತೆಗಳಾಗಿ ಕಾಣತೊಡಗುತ್ತವೆ. ನಿಸರ್ಗ ನಿಯಮಗಳಾದ ಸಮಯವನ್ನಾಗಲೀ, ಸಂಬಂಧವನ್ನಾಗಲಿ, ಸಮಾಜವನ್ನಾಗಲೀ ಮ್ಯಾನೇಜ್ ಮಾಡಲು ಅವುಗಳೇನು ಬಚ್ಚಲು ಮನೆಯ ಕಲ್ಲೇ?

***

ನಾವು ಎಲ್ಲೆಲ್ಲಿ ಇರುತ್ತೇವೆಯೋ ಅಲ್ಲಿ ನಮ್ಮತನವನ್ನು ಗುರುತಿಸಿಕೊಂಡು ಸಹಜವಾಗಿ ಬದುಕನ್ನು ನಡೆಸೋದಕ್ಕೆ ಸಾಧ್ಯವಿದೆ, ಬರಿ ವೀಕೆಂಡಿನಲ್ಲಿ ಮಾತ್ರ ಭಾರತದಲ್ಲಿದ್ದವರೊಡನೆ ಸ್ನೇಹಿತರೊಡನೆ ಮಾತನಾಡುವುದು ಸಾಲದು ಎನ್ನುವುದು ಆ ನಿಟ್ಟಿನಲ್ಲಿ ನಾವೆಲ್ಲರೂ ಇಡಬೇಕಾದ ಮೊದಲ ಹೆಜ್ಜೆ.

No comments: