Wednesday, June 21, 2006

ವ್ಯಕ್ತಿ ಹಾಗೂ ವ್ಯವಸ್ಥೆ

ಒಬ್ಬ ವ್ಯಕ್ತಿ ಒಂದು ಸಂಸ್ಥೆಯ ರೀತಿ ಕೆಲಸ ಮಾಡೋದು, ಒಬ್ಬ ವ್ಯಕ್ತಿ ತನ್ನ ವೈಯುಕ್ತಿಕ ಧೋರಣೆಗಳನ್ನು ಬದಿಗಿಟ್ಟು ಉನ್ನತವಾದ ಗುರಿಯನ್ನಿಟ್ಟು ಶ್ರಮಿಸೋದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ, ಉದಾಹರಣೆಗೆ ಒಂದು ದೇಶದ ಪ್ರಧಾನ ಮಂತ್ರಿ ಅಥವಾ ಅಧ್ಯಕ್ಷ ಸ್ಥಾನದಲ್ಲಿರೋ ಯಾರಿಗೇ ಆದರೂ ಅವರನ್ನು ಪೋಷಿಸೋ ಒಂದು ಸಮೂಹ ಇರುತ್ತೆ, ಅವರಿಗೆ ಹೀಗಲ್ಲ ಹಾಗೆ ಅನ್ನೋ ಒಂದು ವ್ಯವಸ್ಥೆ ಇರುತ್ತೆ - ಯಾವಾಗ ಈ ವ್ಯವಸ್ಥೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತೋ ಆಗ ಆ ವ್ಯಕ್ತಿ ವೈಯುಕ್ತಿಕವಾಗಿ ಅದಕ್ಕಿಂತ ಹೆಚ್ಚಿನ ರೀತಿಯಲ್ಲಿ ದೇಶ ಅಥವಾ ಸಂಸ್ಥೆಯ ಮಟ್ಟದಲ್ಲಿ ಯಶಸ್ಸನ್ನುಗಳಿಸಲು ಸಾಧ್ಯವಾಗುತ್ತೆ. ದೊಡ್ಡ ಕಂಪನಿಗಳ ಅಧಿಕಾರಿಗಳು, ಎಲ್ಲಾ ದೇಶದ ಹಿರಿಯ ನಾಯಕರುಗಳು ಮುಂತಾದವರಿಗೆ ಅನ್ವಯಿಸೋ ಈ ಸಾಂಸ್ಥಿಕ ವ್ಯವಸ್ಥೆಯ ಬಗ್ಗೆ ಯೋಚಿಸಿದಾಗ, ಅದೇ ಸಮಯಕ್ಕೆ ಕರ್ನಾಟಕದ ಲೋಕಾಯುಕ್ತರ ಬಗ್ಗೆ ಓದಿದ್ದರಿಂದಲೋ ಏನೋ, ಲಂಚದ ಹಗರಣದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದವರಿಗೂ ಒಂದು ಸುವ್ಯವಸ್ಥಿತ ಜಾಲವಿರುತ್ತೆ ಅನ್ನೋದು ಗಮನಕ್ಕೆ ಬಂತು.

ಲೋಕಾಯುಕ್ತರು ಅದೆಷ್ಟೋ ಜನರನ್ನು ಹಿಡಿದು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡರು ಎಂದು ಆಗಾಗ್ಗೆ ಓದುತ್ತಲೇ ಇರುತ್ತೇನೆ. ಹೀಗೆ ದುತ್ತನೆ 'ಪೋಲೀಸ್ ಕಾನ್‌ಸ್ಟೇಬಲ್ ಒಬ್ಬನ ಬಳಿ ಕೋಟ್ಯಾಂತರ ರೂಪಾಯಿ ಇದ್ದ' ಸುದ್ದಿಗಳು ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾಗಿ ಎಲ್ಲರ ಗಮನ ಸೆಳೆಯುತ್ತದೆ. ಹಲವಾರು ವರ್ಷಗಳಿಂದ ಲಂಚದ ಪ್ರಕ್ರಿಯೆಯಲ್ಲಿ ಕೊಬ್ಬಿರೋ ಲೋಕಾಯುಕ್ತರ ಬಲಿಗಳು 'ಅಬ್ಬಾ, ಇಷ್ಟೊಂದು ಆಸ್ತಿ ಮಾಡಿದ್ದಾರೆಯೇ!' ಎಂದು ಒಮ್ಮೆ ಆಶ್ಚರ್ಯ ಮೂಡಿಸಿ ಜನರ ಮನಸ್ಸಿನಿಂದ ನಿರ್ಗಮಿಸಿಬಿಡುತ್ತವೆ. ಹೀಗೆ ಲೋಕಾಯುಕ್ತರ ಬಲೆಗೆ ಬಿದ್ದವರಿಗೆ ಮುಂದೇನು ಆಯಿತು, ಎಷ್ಟು ಜನರಿಗೆ ಯಾವ ರೀತಿ ಶಿಕ್ಷೆ ಸಿಕ್ಕಿತು ಎನ್ನುವುದನ್ನು ನಾನು ಫಾಲೋ ಮಾಡುವುದಿಲ್ಲವೋ ಅಥವಾ ಅದರ ಬಗ್ಗೆ ಯಾರೂ ಬರೆಯುವುದಿಲ್ಲವೋ ಅಥವಾ ಅವರಿಗೆ ಏನೂ ಆಗುವುದಿಲ್ಲವೋ ನನಗೆ ಗೊತ್ತಿಲ್ಲ. 'ಲೋಕಾಯುಕ್ತರು ಹೀಗೆ ಹಿಡಿಯೋದರಿಂದ ಏನಾಯ್ತು?' ಎನ್ನುವ ಪ್ರಶ್ನೆಯನ್ನು ಕೇಳುವುದು ನನ್ನ ಇಂಗಿತವಲ್ಲ, ಅದರ ಬದಲಿಗೆ ಲಂಚದ ಬಲೆಯಲ್ಲಿ ಸಿಕ್ಕಿ ಬಿದ್ದ ಪ್ರತಿಯೊಬ್ಬ ಅಧಿಕಾರಿಗೂ ಒಂದು ಜಾಲ (ನೆಟ್‌ವರ್ಕ್) ಇದ್ದಿರುತ್ತಲ್ಲ, ಅದರ ಮೂಲವನ್ನು ಯಾರೂ ಏಕೆ ಶೋಧಿಸೋದಿಲ್ಲ? ಬೆಂಗಳೂರಿನಲ್ಲಾಗಲೀ ಮತ್ತೆಲ್ಲಾದರೂ ಆಗಲಿ ಲಂಚದ ಬಲೆಯಲ್ಲಿ ಸಿಕ್ಕಿಹಾಕಿಕೊಂಡ ಪ್ರತಿಯೊಬ್ಬರೂ ಒಪ್ಪಿಕೊಳ್ಳೋದು ಎರಡು ವಿಷಯಗಳನ್ನು ೧) ಅವರು ಪಡೆದ ಲಂಚ 'ಉಳಿದ ಕಡೆ' ವಿಲೇವಾರಿಯಾಗುತ್ತಿದ್ದು ಅವರು ತಮ್ಮ ಪಾಲಿನ ಹಣವನ್ನು ಮಾತ್ರ ತಾವಿಟ್ಟುಕೊಳ್ಳುತ್ತಿದ್ದರು, ೨) ಬೆಂಗಳೂರಿನಲ್ಲಿ ಒಬ್ಬ ಸಬ್-ರಿಜಿಸ್ಟ್ರ್‍ಆರ್‍ ಆಗಲೋ ಅಥವಾ ಆರ್‍‌ಟಿಓ ಆಗಲೋ ಅದಕ್ಕೆ 'ಬೇಕಾದ' ಹಣವನ್ನು ಯಾರಿಗೋ ಕೊಟ್ಟಿದ್ದರಿಂದಲೇ ಆ ಕೆಲಸ ಅವರಿಗೆ ಸಿಕ್ಕೋದು - ಹೀಗೆ ಇಂತಹ ಕೆಲಸ ಸಿಗಬೇಕಾದರೆ ಕೊಟ್ಟ ಲಂಚ ಅವರ ಉದ್ದಿಮೆಯ ಬಂಡವಾಳವಾಗುತ್ತದೆ, ಹೀಗೆ ತೊಡಗಿಸಿದ ಬಂಡವಾಳಕ್ಕೆ ಪ್ರತಿಯಾಗಿ ಬಂದ ಲಂಚವನ್ನು 'ಮಾಮೂಲಿ'ಯಾಗಿ ಸ್ವೀಕರಿಸುತ್ತಿದ್ದರು.

ಕೆಲವು ವರ್ಷಗಳ ಹಿಂದೆ ಡಾ.ಸುದರ್ಶನ್ (ಲೋಕಾಯುಕ್ತರ ಜೊತೆಯಲ್ಲಿ ಕೆಲಸ ಮಾಡುವವರು) ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದಲ್ಲಿ ಮಾತನಾಡುತ್ತಿದ್ದಾಗ ಒಬ್ಬ ಎಮ್‌ಎಲ್‌ಎ ಉದಾಹರಣೆಯನ್ನು ಕೊಟ್ಟಿದ್ದರು - ಆತ ಸಾರ್ವಜನಿಕವಾಗಿಯೇ ಲೋಕಾಯುಕ್ತರನ್ನು ಪ್ರಶ್ನಿಸಿದ್ದರಂತೆ - ಒಂದು ಪ್ರದೇಶದಿಂದ ಜನರ ಪ್ರತಿನಿಧಿಯಾಗಿ ಆಯ್ಕೆಯಾಗಿ ಬರಲು ಚುನಾವಣೆ ಮತ್ತಿತರ ಖರ್ಚುಗಳಾಗಿ ಹದಿನೈದು ಲಕ್ಷದವರೆಗೆ ಹಣವನ್ನು ಖರ್ಚುಮಾಡುತ್ತೇವೆ, ಹೀಗೆ ಆಯ್ಕೆಯಾಗಿ ಬಂದನಂತರ ಸರ್ಕಾರ ಕೊಡೋ ಜುಜುಬಿ ಹಣದಲ್ಲಿ ಬದುಕಲು ಅಸಾಧ್ಯ, ಅಲ್ಲದೇ ನಾವು ತೊಡಗಿಸಿದ ಬಂಡವಾಳಕ್ಕೆ ಪ್ರತಿಯಾಗಿ ಲಂಚವನ್ನು ಪಡೆದರೆ ತಪ್ಪೇನು? ಎಂಬುದಾಗಿ. ನನ್ನ ಸ್ನೇಹಿತ ರಾಧಾಕೃಷ್ಣ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗಿನ ಕಾಲದಲ್ಲಿ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಸಂದರ್ಶನಕ್ಕೆ ಹೋದಾಗ ಅಲ್ಲಿನ ಅಧಿಕಾರಿಗಳು ಎಲ್ಲರ ಎದುರೇ ಲಕ್ಷಗಟ್ಟಲೇ ಹಣವನ್ನು ಲಂಚದ ರೂಪದಲ್ಲಿ ಕೇಳುತ್ತಿದ್ದರಂತೆ - ಸಾಗರದಲ್ಲಿ ರೈತಕುಟುಂಬದಲ್ಲಿ ಬಂದ ರಾಧಾಕೃಷ್ಣ ಹತ್ತು ಲಕ್ಷವನ್ನು ಹೊಂದಿಸಿಕೊಡಬೇಕೆಂದರೆ ಸಾಕಷ್ಟು ಕಷ್ಟವಿದೆ, ಒಂದು ವೇಳೆ ಹಾಗೆ ಹೊಂದಿಸಿಕೊಟ್ಟರೂ ಮುಂದೆ ಲಂಚವನ್ನು ಪಡೆಯದೇ ಬರುವ ಸಂಬಳದಲ್ಲಿ ಅವನ 'ಬಂಡವಾಳ' ಗೀಟುವುದಾದರೂ ಹೇಗೆ ಎನ್ನಿಸಿತ್ತು. ರಾಧಾಕೃಷ್ಣನಿಗೆ ಆ ಲಂಚವನ್ನು ಕೊಡಲಾಗದಿದ್ದುದರಿಂದ ಕೆಲಸವೇ ಸಿಗಲಿಲ್ಲ, ಆದರೆ ಆತನೇ ಹೇಳಿದ ಹಾಗೆ ಶಾಸಕರು, ಮಂತ್ರಿಗಳು ಎಲ್ಲರೂ ಈ ಹಣದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಶಾಮೀಲಾದವರೇ. ಹೀಗೆ ಒಂದು ಲಂಚದ ಪ್ರಕರಣದ ಹಿಂದೆ ಒಂದು ದೊಡ್ಡ ವ್ಯವಸ್ಥೆಯೇ ಇದೆ, ಒಬ್ಬ ವ್ಯಕ್ತಿ ಪಡೆದ ಲಂಚ ಮೇಲಿನವರಲ್ಲಿ ಅವರವರ 'ಯೋಗ್ಯತೆ'ಗನುಸಾರವಾಗಿ ಸಮನಾಗಿ ಹಂಚಿಕೊಳ್ಳುವ ವ್ಯವಸ್ಥೆ ಇದೆ - ಹೀಗೇ ಇರಬೇಕೆಂದು ಎಲ್ಲಿಯೂ ಬರೆದಿಡದಿದ್ದರೂ ದಶಕಗಳಿಂದ ಹಣ ಹಂಚಿಹೋಗುವ ಪ್ರಕ್ರಿಯೆಗಳನ್ನೊಳಗೊಂಡ ಸಾಂಸ್ಥಿಕ ನೆಲೆಗಟ್ಟನ್ನು ಅಲುಗಾಡಿಸಿದಾಗಲೇ ಲಂಚದ ಪ್ರಕರಣಗಳಿಗೆ ಒಂದು ರೂಪಬರಬಹುದೇನೋ, ಅದು ಬಿಟ್ಟರೆ ಒಬ್ಬೊಬ್ಬನನ್ನು ಹಿಡಿದು ದಂಡಿಸಿದರೆ ಕೋಟ್ಯಾಂತರ ಜನರ ಮಧ್ಯೆ ಅದರ ಪರಿಣಾಮ ಎಷ್ಟು ಎನ್ನುವುದರ ಬಗ್ಗೆ ಯೋಚಿಸಬೇಕಾಗುತ್ತದೆ.

ಆದರೆ... ಲಂಚದ ಹಗರಣಗಳ ಹಿಂದೆ ಕೂಲಂಕಷವಾಗಿ ಶೋಧನೆಮಾಡಿದಾಗ ಸರ್ಕಾರಗಳು ಉರುಳಬಹುದು, ಆಳುವ ಪಕ್ಷದವರನ್ನು ವಿರೋಧಪಕ್ಷದವರು ಆಡಿಸಬಹುದು, ಆದರೆ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಶಾಮೀಲಾಗಿರೋದರಿಂದ ಎರಡು ಪ್ರಶ್ನೆಗಳೇಳುತ್ತವೆ: ೧) ಹೀಗೆ ಸಂಸ್ಥೆಯಾಗಿ ಕೆಲಸ ಮಾಡುತ್ತಿರುವವರನ್ನು ಹಿಡಿದು ದಂಡಿಸಿಲು ನಮ್ಮಲ್ಲಿ ಸರಿಯಾದ ವ್ಯವಸ್ಥೆ ಇದೆಯೇ? ೨) ಹೀಗೆ ಪ್ರತಿ ಲಂಚದ ಬುಡಕ್ಕೆ ಕೈ ಹಾಕಿ ನೋಡಿದರೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ (ಹೆಚ್ಚೂ-ಕಡಿಮೆ) ಎಲ್ಲರೂ ಇದ್ದಂತಹ ಸಾರ್ವತ್ರಿಕ ರೋಗಕ್ಕೆ ರೋಗಿಗಳಿಗೆ ಕಟಕಟೆ ಹತ್ತಿಸುವವರು ಯಾರು?

***

ಹಿಂದೊಮ್ಮೆ ಪ್ರೀತಿಶ್ ನಂದಿ ತಮ್ಮ ಅಂಕಣದಲ್ಲಿ ಬರೆದಿದ್ದರು - ಈ ಲಂಚದ ಪ್ರಕ್ರಿಯೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಭಾಗಿಗಳೇ, ನಿಮ್ಮ ಬಚ್ಚಲು ಮನೆಯಲ್ಲಿ ನೀವು ಒಂದು ಸಣ್ಣ ಬಕೇಟ್‌ನಲ್ಲಿ ಸೊಳ್ಳೆಗಳನ್ನು ಬೆಳೆಸುತ್ತಿರಬಹುದು ಅಥವಾ ನಿಮ್ಮ ಮನೆಯ ಹತ್ತಿರವಿರುವ ಕೆರೆಯಲ್ಲಿ ಸೊಳ್ಳೆಗಳ ಕೃಷಿ ಮಾಡುತ್ತಿರಬಹುದು, ಇವೆಲ್ಲದರ ಪರಿಣಾಮ ಒಂದೇ.

ನನ್ನ ಪ್ರಕಾರ ಎಲ್ಲಿಯವರೆಗೆ ಲೋಕಾಯುಕ್ತರು ತಮ್ಮ ಬಲೆಗೆ ಬಿದ್ದ ಪ್ರತಿಯೊಂದು ವ್ಯಕ್ತಿಯ ಹಿಂದಿರುವ ಸಾಂಸ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವುದಿಲ್ಲವೋ, ಪ್ರತಿಯೊಂದು ಕೇಸಿನ ರೂಟ್‌ಕಾಸನ್ನು ಕಂಡುಹಿಡಿಯುವುದಿಲ್ಲವೋ ಅಲ್ಲಿಯವರೆಗೆ ಕೋಟ್ಯಾಂತರ ಜನರು ಕೋಟ್ಯಾಂತರ ರೂಪಾಯಿಯನ್ನು ತಿಂದು ತೇಗುತ್ತಿರುವಾಗ ಲೋಕಾಯುಕ್ತರು ಒಬ್ಬೊಬ್ಬರನ್ನು ಜೈಲಿಗೆ ಕಳಿಸುವ ಪ್ರಕ್ರಿಯೆ ಕೆರೆಯ ನೀರಿನ ಒಂದು ಹನಿಯಾಗುತ್ತದೆ. ಇಲ್ಲಿ ಹನಿಹನಿಗೂಡಿ ಹಳ್ಳವಾಗುವುದು ಯಾರೊಬ್ಬರ ಜೀವಿತಾವಧಿಯಲ್ಲೂ ಸಾಧ್ಯವಾಗದು.

No comments: