ಕಾವ್ಯ ಎಂದರೇ ಹೀಗೆ...
ಕಾವ್ಯ ಎಂದರೇ ಹೀಗೆ...
ಮುಷ್ಟಿಯಲ್ಲಿ ಕಟ್ಟಿಕೊಂಡು ಕಷ್ಟದಲ್ಲಿ ದೂಡಿಕೊಂಡು
ಎದೆಯ ಅಂತರಾಳದೊಳಗೆ ಹುದುಗಿಕೊಂಡ ಭಾವನೆಗಳು
ಹೇಳಲಾಗದ ಹೇಳದಿರಲಾಗದ ಅನೇಕ ಅದಮ್ಯ ಚೇತನಗಳು.
ಕಾವ್ಯ ಎಂದರೇ ಹೀಗೆ...
ತನ್ನ ತಾನು ಬಣ್ಣಿಸಿ, ಇದಿರ ಎದುರು ಹಳಿಯದೆ
ಹಳೆಯದನ್ನು ಕೊಳೆಯ ಬಿಡದ
ಮೊಳಕೆ ಒಡೆಯುವುದನ್ನು ಕಾದ
ಒಮ್ಮೊಮ್ಮೆ ಹತಾಶ ಭಾವನೆಯಲ್ಲಿ ನೊಂದ
ಒಂದಿಷ್ಟು ಪದಪುಂಜಗಳ ಸಾಲು.
ಕಾವ್ಯ ಎಂದರೇ ಹೀಗೆ...
ತನ್ನ ನೋಟವೆಲ್ಲ ಸತ್ಯ, ಅನ್ಯ ನೋಟವೆಲ್ಲ ಮಿಥ್ಯ
ತಾನು ತನ್ನ ಜೊತೆಗೆ ಇದ್ದೂ, ಒಂಟಿ ಪಯಣವೆಂದುಕೊಂಡು
ಚಿಕ್ಕ ಪಯಣಕೆ ಬಲು ದೂರದ ಲೇಪನ ಮಾಡುವ
ವಸ್ತು ವಿಷಯಗಳ ವಿಸ್ಮಯ.
ಕಾವ್ಯ ಎಂದರೇ ಹೀಗೆ...
ಅನತಿ ದೂರದ ಆಕಾಶವನ್ನು ಕತ್ತೆತ್ತಿ ನೋಡಿಕೊಂಡು
ಕೆಳಗಿನ ಬಿರು ಭೂಮಿಯನ್ನು ಸವಕಳಿ ಅಂದುಕೊಂಡು
ತಾನು ತೊಟ್ಟ ಬಟ್ಟೆಯೇ ಬಣ್ಣ, ಉಳಿದವನು ತನ್ನ ಕಣ್ಣ
ಅಳತೆಯಲ್ಲಿ ನೋಡಿ ನಿಮೀಲನ ಮಾಡುವ ಒಂದು ಚಿತ್ರ ಸಂಚಯ.
ಕಾವ್ಯ ಎಂದರೇ ಹೀಗೆ...
ಅದೇನೇನೋ ಹೇಳಿಕೊಂಡರೂ ಹೊರಬರಲಾಗದ
ಅದೆಲ್ಲೋ ಅವಿತುಕೊಂಡೂ ಪ್ರಚುರಪಡಿಸಲಾಗದ
ಕಂಡು-ಕಾಣಿಸಿದರೂ ಇಂದ್ರಿಯಗಳಿಗೂ ಮಿಗಿಲಾದ
ಭಾವನೆಗಳ ಸರಮಾಲೆ.
ಕಾವ್ಯ ಎಂದರೇ ಹೀಗೆ...
ಕೇವಲ ಕೆಲವೇ ಕೆಲವು ಜನ ಮಾತ್ರ ರಸಾಸ್ವಾದ ಮಾಡಿ
ತಿಂದುಂಡು ರುಚಿ ನೋಡಿ
ತಮ್ಮ ತಮ್ಮ ಆಂತರ್ಯದಲೇ ಕರಗಿ ತೇಲಾಡಿ
ಕಂಡು-ಉಂಡು ಅರಗಿಸಿಕೊಳಬಹುದಾದ ಒಂದು ಸುಂದರ ಪ್ರಪಂಚ.
ಕಾವ್ಯ ಎಂದರೇ ಹೀಗೆ... ಅದು
ತಾಯಿ-ಮಗುವ ಬಾಂಧವ್ಯದಂತೆ ಸರಳವಾದುದು
ಪ್ರೇಮಿಕಾ-ಪ್ರಿಯಕರನ ಪ್ರಪಂಚದಂತೆ ವಿರಳವಾದುದು
ಹಗುರವಾಗಿ ಮೇಲೆ ಏರಿ, ಭಾರದ ಮಳೆ ಮೋಡದಂತೆ
ಸುರಿದು, ಹರಿದು, ಬೆಳೆದು, ತೊಳೆದು
ಸರಳ ವಿರಳವೆಲ್ಲ ಹರಳುಗಟ್ಟಿ ಮಿಳಿತವಾದುದು.
ಈ ಕಾವ್ಯ ವೆಂದರೇ ಹೀಗೆ...
ನಮ್ಮ ನಿಮ್ಮ ನಡುವೆ ಹೀಗೆ ಕೊಂಡಿಯಾಗಿ
ಮನದ ಮಂಡಿಗೆಯನೆಲ್ಲ ದಂಡಿಯಾಗಿ
ಮೆಂದುಕೊಂಡು ಮೆಲುಕು ಹಾಕುವ ಸುಂದರ ಸಂಜೆಯಾದುದು!
ಮಾರ್ಚ್ ೧, ೨೦೨೬ ರಂದು ಆಶುಕವಿತೆಯಾಗಿ ಹುಟ್ಟಿ, ವಾಯ್ಸ್ ರೆಕಾರ್ಡರ್‌ನಲ್ಲಿ ಧ್ವನಿಯಾಗಿ ದಾಖಲಾಗಿ, ಮಾರ್ಚ್ ೨೩ರಂದು ಬೃಂದಾವನ ಕನ್ನಡ ಕೂಟದ, ವಸಂತೋತ್ಸವ ಕಾಯಕ್ರಮದಲ್ಲಿ ನಡೆದ ಕವಿಗೋಷ್ಠಿಯಲ್ಲಿ ವಾಚಿಸಿದ ಕವನ.
