Sunday, June 11, 2006

ಒಂದು ನೊಣದ ಕಥೆ

ನನ್ನ ಸ್ನೇಹಿತರೊಬ್ಬರು ಎರಡು ತಿಂಗಳ ಹಿಂದೆ ಮಾತನಾಡುತ್ತಿದ್ದಾಗ ಸಾಕ್ಷ್ಯಚಿತ್ರ, ಕಿರುಚಿತ್ರಗಳನ್ನು ಮಾಡುವುದನ್ನು ಕುರಿತು ಹೇಳುವಾಗ 'ಒಂದು ಚಿಕ್ಕ ಘಟನೆಯನ್ನೂ ಒಂದೈದು ನಿಮಿಷಗಳ ಕಿರುಚಿತ್ರವನ್ನಾಗಿ ರೂಪಿಸಬಹುದು, ಈಗ ಉದಾಹರಣೆಗೆ ಇಲ್ಲಿ ಯಾರದ್ದೋ ಮನೆಯಲ್ಲಿ ಜೇಡವೊಂದು ಬಂದಿದೆಯೆಂದುಕೊಳ್ಳಿ, ಅದಕ್ಕೆ ಯಾವುದೇ ತೊಂದರೆ ಕೊಡದೇ ಜೀವಂತವಾಗಿ ಮನೆಯ ಮಾಲೀಕ ಅದನ್ನು ಹೊರಹಾಕುವುದಕ್ಕೆ ಪ್ರಯತ್ನ ಪಡುವುದನ್ನೂ, ಜೇಡ ಮತ್ತು ಮಾಲೀಕ ಇಬ್ಬರಲ್ಲೂ ಇರುವ ಪರಸ್ಪರ ಹೆದರಿಕೆಗಳನ್ನೂ, ಈ ಘಟನೆಯ ಅಂತ್ಯವನ್ನು ನಾನಾ ರೀತಿಯಲ್ಲಿ ಸೆರೆಹಿಡಿದು ಅಂತ್ಯಗೊಳಿಸೋದರಿಂದ ಹಿಡಿದು ನೆಳಲು-ಬೆಳಕು, ಮಾಲೀಕನ ಮುಖದ ಮೇಲೆ ತೋರಿಸಲಾಗುವ ಆಂತರಿಕ ಸಂವಾದ, ಜೇಡಕ್ಕೆ ಹಾನಿಯಾಗಬಾರದೆಂಬ ಆತನ ಕಳಕಳಿ ಮುಂತಾದವುಗಳನ್ನೆಲ್ಲ ಸೇರಿಸಿ ಸೊಗಸಾಗಿ ಒಂದು ಚಿತ್ರವನ್ನು ಮಾಡಬಹುದು...' ಎಂದು ವಿವರಿಸಿದರು. ಹೀಗೇ ಮುಂದೆ ಡಿಸ್ಕವರಿಯಲ್ಲಿ ಬರುವ ಕಿರುಚಿತ್ರಗಳು, ಕಿರುಚಿತ್ರಗಳನ್ನು ಮಾಡುವಾಗ ಬೇಕಾಗುವ ಕುರಿತು ಸ್ವಲ್ಪ ಚರ್ಚೆಯನ್ನು ಮುಂದುವರೆಸಿದ್ದೆವು.

ಕಳೆದ ವಾರ ಹೊಸದಾಗಿ ಬಣ್ಣ ಹಚ್ಚಿದ್ದ ಕೋಣೆಯಲ್ಲಿ ತಾಜಾ ಹವೆ ಬರಲೆಂದು ಸ್ವಲ್ಪ ಕಾಲ ಕಿಟಕಿ-ಬಾಗಿಲುಗಳನ್ನು ತೆರೆದಿಟ್ಟಿದ್ದೆ. ಆಗ ಅದೆಲ್ಲಿಂದ ಬಂದು ಸೇರಿಕೊಂಡಿತೋ ಎನ್ನುವಂತೆ ಒಂದು ನೊಣ - ಮೀಡಿಯಮ್ ಸೈಜಿನದು - ಬಂದು ನಮ್ಮ ಮನೆಯನ್ನು ಸೇರಿಕೊಂಡಿಬಿಟ್ಟಿತು. ಅಡಿಗೆಮನೆ, ಬಚ್ಚಲುಮನೆ ಎಲ್ಲೆಂದರಲ್ಲಿ ಸರ್ವವ್ಯಾಪಿಯಾಗಿ ಕಂಡುಬಂದ ಈ ನೊಣವನ್ನು ನಾನು ಪೂರ್ಣ ಫ್ಯಾಮಿಲಿ ಸಮೇತವೇನಾದರೂ ಬಂದಿದೆಯೇನೋ ಎಂದು ಒಮ್ಮೆ ಸಂಶಯಪಟ್ಟೆನಾದರೂ ಸ್ವಲ್ಪ ಹತ್ತಿರದಲ್ಲಿ ಫಾಲೋ ಮಾಡಿ ನೋಡಿದಾಗ ಅದು ಒಂದೇ ನೊಣವೆಂದು ಗೊತ್ತಾಯಿತು. ಕಳೆದ ಶನಿವಾರ-ಭಾನುವಾರ ಈ ನೊಣ ಬಂದು ಹೊಕ್ಕ ಮೇಲೆ ಅದನ್ನು (ಜೀವಂತವಾಗಿ) ತೊಲಗಿಸಲು ನಾನಾ ಪ್ರಯತ್ನಗಳನ್ನು ಮಾಡಿದೆ - ಮನೆಯನ್ನು ಕತ್ತಲು ಮಾಡಿ ನೆರಳು ಬೆಳಕಿನ ಆಟ ತೋರಿಸಿದೆ, ಒಂದು ನ್ಯೂಸ್ ಪೇಪರನ್ನು ತೆಗೆದುಕೊಂಡು ಗಾಳಿ ಹಾಕಿ ಅದರ ಫ್ಲೈಟ್ ಪಾತನ್ನು ಬದಲಾಯಿಸಿ ತಲೆತಿರುಗಿಸಲು ನೋಡಿದೆ, ಊಹೂ ಯಾವುದಕ್ಕೂ ಜಗ್ಗಲಿಲ್ಲ. ಕಪ್ಪು ಬಣ್ಣದ ಈ ನೊಣ ಎಲ್ಲಿ ಬೇಕಂದರಲ್ಲಿ ಹಾರಾಡುತ್ತಾ ಕೆಲವೊಮ್ಮೆ ಗೋಡೆಯ ಬಣ್ಣದ ಹಿನ್ನೆಲೆಯಲ್ಲಿ, ಫರ್ನೀಚರ್‌ನ ಹಿಂದೆ ಮುಂದೆ ತನ್ನನ್ನು ಮರೆಸಿಕೊಂಡು ನನಗೆ ಮೋಡಿ ಹಾಕಿತ್ತು. ಅದನ್ನು ಕೊಂದು ಬಿಸಾಕುವುದಾದರೆ ಹೆಚ್ಚು ಹೊತ್ತು ಬೇಕಾಗುತ್ತಿರಲಿಲ್ಲ, ಆದರೂ ಅದರ ಜೀವ ತೆಗೆಯುವ ಉಸಾಬರಿ ನನಗೇಕೆ ಎಂದು ಸುಮ್ಮನೇ ಬಿಟ್ಟೆ. 'ಅಹಿಂಸೆ ಆಚರಣೆ, ಓತಿಕ್ಯಾತಕ್ಕೆ ಕಲ್ಲು ಸಂತರ್ಪಣೆ' ಅನ್ನೋ ಹಾಗೆ ನನ್ನ ರಕ್ತ ಹೀರುವ ಸೊಳ್ಳೆಗಳಿಗೆ ಮಾತ್ರ ನಾನು ಒಂದೇ ಏಟಿಗೆ ಮೋಕ್ಷ ಕಾಣಿಸುವುದು, ಅದಿಲ್ಲವಾದರೆ ನನ್ನಂಥ ಅಹಿಂಸಾ ಪ್ರೇಮಿ ಮತ್ತೊಬ್ಬನಿಲ್ಲ!

ಈ ನೊಣ ಅಥವಾ ಸೊಳ್ಳೆಗಳು ಹಾರಾಡುವಾಗ ಅವುಗಳ ರೆಕ್ಕೆಗಳ ಬಡಿತದಿಂದಾಗಿ 'ಗುಯ್' ಶಬ್ದ ಸೃಷ್ಟಿಯಾಗುತ್ತೆ, ಆದರೆ ನನ್ನಂಥ ಟ್ಯೂಬ್‌ಲೈಟಿಗೆ ಈ ಶಬ್ದ ಅವುಗಳು ಬರೀ ನನ್ನ ಕಿವಿಯ ಹತ್ತಿರ ಬಂದಾಗ ಮಾತ್ರ ಮಾಡುತ್ತವೇನೋ ಎಂದು ಅನ್ನಿಸಿಬಿಟ್ಟಿತ್ತು. ಈ ಸೊಳ್ಳೆ-ನೊಣಗಳ ಸಹವಾಸ ನನಗೆ ಮೊದಲಿನಿಂದಲೂ ಇದ್ದದ್ದೇ, ಅಡಿಕೆ ತೋಟಗಳಿಗೆ ಹೋದವರಿಗೆ ಗೊತ್ತು, ತೋಟದೊಳಗೆ ಕಾಲಿಡುತ್ತಿದ್ದಂತೇ ನೂರಾರು ಸಾವಿರಾರು ಸೊಳ್ಳೆಗಳ ಕಾಟ ಶುರುವಾಗೋದು, ಒಮ್ಮೊಮ್ಮೆ ಕಾಲಿನ ಮೇಲೆ ಅಪ್ಪಳಿಸಿದ ಹೊಡೆತಕ್ಕೆ ಒಂದೇ ಬಾರಿಗೆ ಹತ್ತಾರು ಸೊಳ್ಳೆಗಳನ್ನು ಉರುಳಿಸಿಹಾಕಿದ್ದೂ ಇದೆ. ನಾನು ಅಹಿಂಸಾಪ್ರಿಯನಾದರೂ ನನ್ನ ರಕ್ತವನ್ನು ಇನ್ಯಾರಾದರೂ ಹೀರುತ್ತಾರೆಂಬ ವಿಷಯಕ್ಕೆ ಬಂದಾಗ ನನ್ನ ತತ್ವಗಳು ನನಗೆ ಅನ್ವಯಿಸುತ್ತಲೇ ಇರುತ್ತಿರಲಿಲ್ಲ! ಮಾನಸಗಂಗೋತ್ರಿಯಲ್ಲಿ ನಮ್ಮ ಹೊಸ ಪಿ.ಜಿ. ಹಾಸ್ಟೆಲ್ ಮತ್ತು ಜೆಸಿಇ ಕಾಲೇಜಿನ ಮಧ್ಯೆ ಇದ್ದ 'ಡೌನ್ಸ್'ಗೆ ಕಾಫಿ ಕುಡಿಯುವುದಕ್ಕೆಂದು ಹೋಗುವಾಗ ಮಧ್ಯೆ ಒಂದು ತೆಂಗಿನ ತೋಪು ಬರುತ್ತಿತ್ತು, ಅದರಲ್ಲಿ ಒಂದು ಸೀಜನ್‌ನಲ್ಲಿ ಕಪ್ಪು-ಕೆಂದು ಬಣ್ಣದ ಹುಳುಗಳು ನೆಲದಲ್ಲಿ ಹರಿದಾಡುತ್ತಿದ್ದವು. ಕಿರುಬೆರಳು ಅಥವಾ ತೋರುಬೆರಳಿನ ಗಾತ್ರದಲ್ಲಿ ಇರುತ್ತಿದ್ದ ಈ ಹುಳಗಳು ನಿಧಾನವಾಗಿ ನೆಲದ ಮೇಲೆ ಹರಿದಾಡುತ್ತಿದ್ದವು. ಕಾಫಿಗೆಂದು ಅಲೆದಾಡುತ್ತಿದ್ದ ನಮ್ಮ ಚಪ್ಪಲಿಗೆ ಎಷ್ಟೋ ಬಾರಿ ಸಿಕ್ಕಿ ಚಪ್ಪಟೆಯಾಗುತ್ತಿದ್ದವು, ಆದರೆ ನಾನು ಉಮೇಶ ಹಾಗೂ ಸುಂದರೇಶರಿಗೆ ಒಂದೇ ಒಂದು ಹುಳವನ್ನೂ ತುಳಿಯದೇ ಬರುವಂತೆ ತಾಕೀತು ಮಾಡುತ್ತಿದ್ದೆ. ನಮ್ಮ ಗುಂಪಿಗೆ ಹೊಸದಾಗಿ ಯಾರಾದರೂ ಸೇರಿಕೊಂಡರೆ ಉಮೇಶ ಅವರಿಗೆಲ್ಲರಿಗೂ ಎಚ್ಚರಿಕೆ ಕೊಡುತ್ತಿದ್ದ 'ಈ ಹುಳುಗಳನ್ನ ಮಾತ್ರ ತುಳುದು ಇವನ ಮೂಡನ್ನ ಅಪ್‌ಸೆಟ್ ಮಾತ್ರ ಮಾಡ್‌ಬೇಡ್ರ್‍ಓ...' ಎನ್ನುತ್ತಿದ್ದ. ನನ್ನ ವಾದ 'ಈ ಪ್ರಪಂಚದಲ್ಲಿ ನಮಗೆಷ್ಟು ಬದುಕುವ ಹಕ್ಕು ಇದೆಯೋ ಅವುಗಳಿಗೂ ಅಷ್ಟೇ ಇದೆ...' ಎನ್ನುವ ಸಾಲಿನಿಂದ ಶುರುವಾಗುತ್ತಿತ್ತು, ಏನೇ ಆದರೂ ತೆಂಗಿನ ತೋಪಿನಲ್ಲಿ ಆ ಹುಳುಗಳನ್ನು ತುಳಿದು ಕೊಲ್ಲಬಾರದು ಎನ್ನುವ ಅಗೋಚರ ಒಡಂಬಡಿಕೆಗೆ ನನ್ನ ಮೈಮನಗಳು ಸಹಿ ಹಾಕಿಬಿಟ್ಟಿದ್ದವು. ಈ ಅಹಿಂಸಾ ವಾದದ ಮೂಲ ಎಲ್ಲಿ ಎಂದು ಹುಡುಕುತ್ತಾ ಹೋದಂತೆಲ್ಲ ನಾನು ನನ್ನ ಬಾಲ್ಯದಲ್ಲಾದ - ಅವರಿವರು ಹೇಳಿ ಇನ್ನೂ ನೆನಪಿನಲ್ಲುಳಿದ - ಅನುಭವ ಮೂಲದಲ್ಲಿ ಕಂಡುಬರುತ್ತದೆ. ಆನವಟ್ಟಿಯಲ್ಲಿ ಶನಿವಾರ ಸಂತೆಯ ದಿನ ಒಂದೇ ನನ್ನ ಅಕ್ಕಂದಿರ ಜೊತೆಗೋ ಅಥವಾ ನನ್ನ ಅಣ್ಣನ ಜೊತೆಗೋ ನಾನೂ ಸಂತೆಗೆ ಹೋಗುವ ರೂಢಿಯನ್ನಿಟ್ಟುಕೊಂಡಿದ್ದೆ. ಆಗೆಲ್ಲ ನಾನು ಒಂದನೇ ಕ್ಲಾಸು ಮುಟ್ಟುವಷ್ಟು ದೊಡ್ಡ ಹುಡುಗನಾದರೂ ನನ್ನನ್ನು ಕಂಡಕಂಡವರೆಲ್ಲ ಎತ್ತಿಕೊಂಡು ಹೋಗುತ್ತಿದ್ದರಂತೆ. ಶನಿವಾರ ಸಂತೆಯದಿನ ಹೋದವನಿಗೆ ಅಲ್ಲಿದ್ದ ಟೈಲರ್ ಒಬ್ಬರಲ್ಲಿ ಪುಟ್ಟಯ್ಯ ಎಂಬುವವನು ನನ್ನನ್ನು ಒಂದು ದಿನ ಮಾಂಸದ ಅಂಗಡಿಗೆ ಕರೆದುಕೊಂಡು ಹೋಗಿದ್ದನಂತೆ. ಆಗ ಆನವಟ್ಟಿಯ ಸಂತೆಯ ದಿನ ಮಾಂಸ ಮಾರುವ ಅಂಗಡಿಯಲ್ಲಿ ಮೂರು ಚಿಕ್ಕ-ಚಿಕ್ಕ ಅಂಗಡಿಗಳಿದ್ದವು, ಅದರ ಮಾಲೀಕರಾಗಿ ಒಂದರಲ್ಲಿ ನಾಗೇಂದ್ರಪ್ಪ, ಮತ್ತೊಂದರಲ್ಲಿ ಜಲೀಲ ಹಾಗೂ ಕೊನೆಯದರಲ್ಲಿ ಹಸೇನಿ ಇದ್ದರು. ನಾನು ಮೊಟ್ಟ ಮೊದಲು ಕುರಿ ಮಾಂಸವನ್ನು ಅಲ್ಲಿ ಕಬ್ಬಿಣದ ಕೊಕ್ಕೆಗೆ ನೇತುಹಾಕಿ ಈ ಅಂಗಡಿಯಲ್ಲಿ ಕೆಲಸ ಮಾಡುವವರು ತಮ್ಮ ಹರಿತವಾದ ಕತ್ತಿಗಳಿಂದ (ಸತ್ತ) ಕುರಿಯ ಮಾಂಸವನ್ನು ಕತ್ತರಿಸಿ ತೂಕ ಮಾಡುವುದನ್ನು ನೋಡಿ ಕಣ್ಣಿನಲ್ಲಿ ಒಂದೇ ಸಮನೆ ನೀರನ್ನು ತಂದುಕೊಂಡು 'ಕೊಯ್ ಬೇಡ್ರೀ ರೀ, ಕೊಯ್ ಬೇಡ್ರಿ...' ಎಂದು ಬೇಡಿಕೊಂಡಿದ್ದನ್ನು ನೋಡಿ ಎಲ್ಲರೂ ಜೋರಾಗಿ ನಕ್ಕಿದ್ದರಂತೆ. ಮೊದಲು ಹೀಗೆ ನನ್ನ ಆರ್ತನಾದದ ಅನುಭವಕ್ಕೆ ಬಂದ ಪುಟ್ಟಯ್ಯ ಕೊನೆಕೊನೆಗೆ ಮಜಾ ತೆಗೆದುಕೊಳ್ಳಲು ನನ್ನನ್ನು ಅಲ್ಲಿಗೆ ಎತ್ತಿಕೊಂಡುಹೋಗುತ್ತಿದ್ದನಂತೆ, ಪ್ರತೀ ಸಾರಿಯೂ ನಾನು 'ಕೊಯ್ ಬೇಡ್ರಿ...' ಎಂದುಕೊಂಡು ಅಳುತ್ತಿದ್ದೆನಂತೆ. ಅದೇ ಸಂತೇ ಮೈದಾನದ ಹೊರವಲಯದಲ್ಲಿ ಹಂದಿಗೊಲ್ಲರು ಜೀವಂತವಾಗಿ ಒಂದು ಹಂದಿಯನ್ನು ಹಿಡಿದು, ಕೊಂದು ಅದನ್ನು ಬೆಂಕಿಯಲ್ಲಿ ಸುಟ್ಟಿದ್ದನ್ನೂ ನನ್ನ ಕಣ್ಣುಗಳಿಂದಲೇ ನೋಡಿದ್ದೇನೆ - ಹೀಗೆ ಅಲ್ಲಲ್ಲಿ ಮಾರಿಹಬ್ಬ, ಹಿರೇರ ಹಬ್ಬ ಮುಂತಾದ ದಿನಗಳಲ್ಲಿ ನೋಡಿದ ಅನೇಕ 'ಪ್ರಾಣಿಬಲಿ' ಅನುಭವಗಳೇ ನನ್ನ ಅಹಿಂಸಾವಾದಕ್ಕೆ ಮೂಲವಾಗಿದ್ದರೂ, ನನ್ನ ರಕ್ತವನ್ನು ಹೀರುವ ಯಾವ ಸೊಳ್ಳೆ, ತಿಗಣೆ, ಜಿಗಣೆಗಳಿಗೆ ನಾನು ಯಾವ ರಿಯಾಯಿತಿಯನ್ನೂ ತೋರೋದಿಲ್ಲ!

***

ಈ ದಿನ ಏನೇ ಆದರೂ ನಮ್ಮ ಮನೆಯಲ್ಲಿ ಏಳುದಿನ ಏಳುರಾತ್ರಿಗಳನ್ನು ಅತಿಥಿಯಾಗಿ ಕಳೆದ ಈ ನೊಣವನ್ನು ಜೀವಂತವಾಗಿ ಪಣತೊಟ್ಟು ಅದು ಹೋದಲೆಲ್ಲ ಹೋಗಿ ಒಂದೆರಡು ಟವೆಲುಗಳಿಂದ ಅದರ ಫ್ಲೈಟ್ ಪಾತನ್ನು ಬದಲಾಯಿಸಿ, ಮಿಕ್ಕೆಲ್ಲ ಕಿಟಕಿಗಳನ್ನು ಮುಚ್ಚಿ ಒಂದೇ ಒಂದು ಕಿಟಕಿಯನ್ನು ತೆರೆದು ಆ ಕಿಟಕಿಯ ಕಡೆಗೆ ಈ ನೊಣ ಹಾರಲಿ ಎಂದು ಗುರಿಯನ್ನಿಟ್ಟುಕೊಂಡು ಅದರ ಬೆನ್ನುಹತ್ತಿದೆ. ಮೊದಮೊದಲು 'ಇಲ್ಲಿಂದ ಹೋಗುವುದಕ್ಕೆ ಮನಸ್ಸಿಲ್ಲ' ಎಂದು ಗುಯ್ ರಾಗ ಮಾಡಿಕೊಂಡು ಮತ್ತೆ-ಮತ್ತೆ ಒಳಗೆ ಬರುತ್ತಾ ನನ್ನ ಸಂಯಮವನ್ನು ಪರೀಕ್ಷೆ ಮಾಡುವಂತೆ ಕಂಡುಬಂದರೂ ಕೊನೆಗೆ ಬ್ರಹ್ಮ ಅದರ ಆಯಸ್ಸನ್ನು ಇನ್ನೂ ಹೆಚ್ಚು ಬರೆದಿದ್ದ ಒಂದೇ ಕಾರಣಕ್ಕೆ ತನಗಿಷ್ಟವಿಲ್ಲದಿದ್ದರೂ ತೆರೆದ ಕಿಟಕಿಯಿಂದ ಹೊರಗಿನ ಪ್ರಪಂಚಕ್ಕೆ ಅದು ಹಾರಿಹೋಯಿತು. 'ಅಬ್ಬಾ ಹೋಯಿತಲ್ಲ' ಎಂದು ಉಸಿರು ಬಿಟ್ಟು ಕಿಟಕಿಯನ್ನು ಮುಚ್ಚಿ ಪರದೆಯನ್ನು ಎಳೆಯುವಾಗ ಯಾವ ಜನ್ಮದ ಋಣಾನುಬಂಧವಿದ್ದಿರಬಹುದು ಈ ನೊಣಕ್ಕೂ ನನಗೂ ಎಂಬ ಪ್ರಶ್ನೆಯೂ ಏಳುತ್ತಾ ೧೯೯೯ರಲ್ಲಿ ನನ್ನ ಸಹೋದ್ಯೋಗಿಯಾದ ಪಕ್ಕಾ ಕ್ಯಾಥೋಲಿಕ್ ಮನುಷ್ಯ ಪಿಲಿಪಿನೋ ಅಲೆಕ್ಸ್ ಪಿಂಗಾಯ್ ಅನ್ನು ನೆನಪಿಗೆ ತಂದಿತು. ಧರ್ಮ, ಆತ್ಮಗಳ ಬಗ್ಗೆ ಅಲೆಕ್ಸ್‌ಗೂ ನನಗೂ ಘಂಟೆಗಟ್ಟಲೆ ವಿಚಾರ ವಿನಿಮಯ ನಡೆದಿದ್ದರೂ ದಿನದ ಕೊನೆಯಲ್ಲಿ ಆತ ತನ್ನ ಕ್ಯಾಥೋಲಿಸಿಟಿಗೆ ಭದ್ರವಾಗಿ ಅಂಟಿಕೊಂಡುಬಿಡುತ್ತಿದ್ದುದೂ, ಇವನಿಗೆ ಮನವರಿಕೆ ಮಾಡಿಕೊಡಲೆಂದೇ ಈ ಸಂದರ್ಭದಲ್ಲಿ ಹುಟ್ಟಿದ ನನ್ನ ಒಂದು ಥಿಯರಿಯೂ ನೆನಪಿಗೆ ಬಂತು.

ನನ್ನ ಮನಸ್ಸಿನಲ್ಲಿ ಈ ಸಿದ್ಧಾಂತ ಹೇಗೆ ಬಂದಿತೆಂದು ಇನ್ನೂ ಹುಡುಕುತ್ತಿದ್ದೇನೆ ಆದರೂ ಅದನ್ನು ಎಲ್ಲಾದರೂ ಒಂದು ಕಡೆ ಬರೆದಿಟ್ಟರೆ ಒಳ್ಳೆಯದು ಎಂದು ಬಹಳ ದಿನಗಳಿಂದ ಯೋಚಿಸುತ್ತಿದ್ದೆ - ಈ ನೊಣದ ಸಹವಾಸ ಅದಕ್ಕೆ ಸಹಾಯ ಮಾಡಿತು. ನನ್ನ ಪ್ರಕಾರ ಪ್ರಪಂಚದಲ್ಲಿ ಇರುವ ಆತ್ಮಗಳು ಕೆಲವೇ ಕೆಲವು (ಫೈನೈಟ್), ಅಂತೆಯೇ ಪ್ರಪಂಚದಲ್ಲಿರೋ ಮೂಲವಸ್ತುಗಳೂ (ಎಲಿಮೆಂಟ್ಸ್) ಫೈನೈಟ್. ಅಂದರೆ ಟ್ರಿಲಿಯನ್‌ಗಟ್ಟಲೆ ಇರೋ ಜೀವಸಂಕುಲದಲ್ಲಿ ಕೇವಲ ಆರು ಬಿಲಿಯನ್ ಮಾತ್ರ ಮನುಷ್ಯರಿರೋದು, ಇನ್ನುಳಿದವೆಲ್ಲ ಏಕಕೋಶ ಭಿತ್ತಿಗಳಿಂದ ಹಿಡಿದು ಥರಾವರಿ ಜೀವಜಂತುಗಳು. ಕಶೇರುಕ-ಅಕಶೇರುಕ, ಪ್ರಾಣಿ-ಸಸ್ಯ, ಬದುಕಿಯೂ ಸತ್ತ, ಸತ್ತೂ ಬದುಕಿದ ಜೀವಿಗಳನ್ನೆಲ್ಲ ಒಂದು ಪಟ್ಟಿ ಮಾಡಿದರೆ, ಪ್ರತಿಯೊಂದು ಜೀವವಿದ್ದಲ್ಲಿ ಒಂದೊಂದು ಆತ್ಮವಿದೆಯೆನ್ನುವುದಾದರೆ, ನನಗೊಂದು ಆತ್ಮವಿದ್ದ ಹಾಗೆ ಈ ನೊಣಕ್ಕೂ ಇರಬೇಕು ಹಾಗೇ ಪ್ರತಿಯೊಂದು ಪ್ರಾಣಿ, ಪಕ್ಷಿ, ಸಸ್ಯಗಳಿಗೂ ಇರಬೇಕು. ಒಂದು ಜೀವಿ ಸತ್ತನಂತರ ಆತ್ಮ ಲಿಬರೇಟ್ ಆಗಿ ಅದೇ ತಾನೇ ಮತ್ತೆಲ್ಲೋ ಹುಟ್ಟುವ ಮತ್ತೊಂದು ಜೀವವನ್ನು ಸೇರಿಕೊಂಡುಬಿಡುತ್ತದೆ. ಎಲ್ಲಾ ಜೀವಿಗಳಲ್ಲಿ ಆತ್ಮ ಅವುಗಳ ಜೀವಿತವನ್ನಾಧರಿಸಿ ಒಂದು ಸೆಕೆಂಡಿನಿಂದ ಸಾವಿರಾರು ವರ್ಷಗಳವರೆಗೂ ಇರಬಹುದು, ಈ ಆತ್ಮದ ಒಂದೊಂದು ಲೈಫ್‌ಸೈಕಲ್‌ನಲ್ಲಿ ಅದಕ್ಕೆ ಅದರದೇ ಆದ ಸಂಸ್ಕಾರಗಳಿಂದ ಆರಂಭವಾಗಿ ಆ ಸಂಸ್ಕಾರಗಳು ಪ್ರತಿಬದುಕಿನಲ್ಲಿ ಬದಲಾವಣೆಗೊಂಡು ಹೀಗೆ ಬದಲಾವಣೆಗೊಂಡ ಸಂಸ್ಕಾರಗಳನ್ನೊಳಗೊಂಡ ಆತ್ಮ ಮತ್ತೆಲ್ಲೋ ಹುಟ್ಟುವ ಜೀವಿಯೊಳಗೆ ಸೇರಿಕೊಂಡುಬಿಡುವುದು. ಆದರೆ ಈ ಒಟ್ಟು ಆತ್ಮಗಳ ಮೊತ್ತ ಹಾಗೂ ಈ ಆತ್ಮಗಳು ಯಾವತ್ತೂ ಬಂದು ಸೇರಿಕೊಳ್ಳುವ ಜೀವಿಗಳಲ್ಲಡಗಿದ ಜೀವಕೋಶಗಳ ಮೂಲವಸ್ತುಗಳ ಮೊತ್ತ ಯಾವಾಗಲೂ ಒಂದೇ. ಅಂದರೆ ಈ ಪ್ರಪಂಚ (ಅಥವಾ ವಿಶ್ವ)ದಲ್ಲಿ ೫೦೦ ಜೀವಿಗಳಿದ್ದರೆ, ಆ ಜೀವಿಗಳಿಗೆ ಐನೂರು ಆತ್ಮಗಳಿರಬೇಕು, ಹೀಗೆ ಆತ್ಮ ಸೇರಿಕೊಂಡ ಆ ಜೀವಿಯ ಭೌತಿಕ ಶರೀರದ ಮೂಲವಸ್ತು (ಕೆಮಿಕಲ್ಸ್ ರೂಪದಲ್ಲಿರುವ)ಗಳ ಒಟ್ಟು ಮೊತ್ತ ಒಂದೇ. ಮಾನವ ಜನ್ಮ ದೊಡ್ಡದು ಎಂದು ನನಗನ್ನಿಸುವುದಿಲ್ಲ, ಜೀವಿಗಳ ದೇಹಗಳ ನಡುವೆ ವಿನಿಮಯವಾಗುವ ಈ ಆತ್ಮಗಳ ವಿಲೇವಾರಿಯ ಹಿಂದಿನ ಆಲ್ಗೋರಿದಮ್ ನನಗೆ ಗೊತ್ತಿಲ್ಲ! ನನ್ನ ಪ್ರಕಾರ ಆತ್ಮಕ್ಕೆ 'ಅಪ್‌ವರ್ಡ್' ಮೊಬಿಲಿಟಿ ಎನ್ನುವುದೇನೂ ಇಲ್ಲ, ಅದು ಹಾರಿಝಾಂಟಲಿ ಎಲ್ಲಿಬೇಕಾದಲ್ಲಿ ಸ್ವೇಚ್ಛೆಯಿಂದ ತಿರುಗಾಡಬಲ್ಲದು. ಇದಕ್ಕೆ ಪುಷ್ಠಿಕೊಡುವ ಮತ್ತೂ ಒಂದು ಅಂಶವೆಂದರೆ ಮಾನವ ಇನ್ನೂ ಎಕ್ಸ್‌ಪ್ಲೋರ್ ಮಾಡಿರದ ಅವಕಾಶಗಳು (ಸ್ಪೇಸ್, ಸಾಗರದ ಆಳ ಅನಂತಗಳು ಇತ್ಯಾದಿ) - ಯಾರಿಗೆ ಗೊತ್ತು ಮಾನವನೇ ಮಿಗಿಲೆಂದು? ಒಂದು ಜೇನುಗೂಡಿನ ರಹಸ್ಯವನ್ನು ಅರಿತುಕೊಂಡರೆ ಅದರ ಮುಂದೆ ನಮ್ಮ ಶ್ರಮ ಏನೇನೂ ಅನ್ನಿಸುವುದಿಲ್ಲ - ಉದಾಹರಣೆಗೆ ಗೆದ್ದಲು ಹುಳುಗಳು ಸುವ್ಯವಸ್ಥಿತವಾಗಿ ಕಟ್ಟುವ ಹುತ್ತದಷ್ಟು ದೊಡ್ಡದಾದ ಕಟ್ಟಡವನ್ನು ನಾವೇನಾದರೂ ಕಟ್ಟಬೇಕೆಂದರೆ ಅದು ಎಂಪೈರ್ ಸ್ಟೇಟ್ ಕಟ್ಟಡಕ್ಕಿಂತ ಇಪತ್ತೈದು ಪಟ್ಟು ಎತ್ತರವಾಗಿರುತ್ತದೆಯಂತೆ! ಈ ನನ್ನ ಥಿಯರಿಯಲ್ಲಿ ದೇವರನ್ನು ಎಲ್ಲಿ ಬೇಕಾದರೂ ತರಬಹುದು, ಬಿಡಬಹುದು! ಆದರೆ ನನ್ನಷ್ಟೇ ಪ್ರಬುದ್ಧನಾದ ಅಲೆಕ್ಸ್ ಪಿಂಗಾಯ್‌ಗೆ ನನ್ನ ವಾದ ಅಷ್ಟೊಂದು ರುಚಿಸುತ್ತಿರಲಿಲ್ಲ, ಎದ್ದೂ-ಬಿದ್ದು ಕ್ರಿಶ್ಚಿಯಾನಿಟಿಗೆ ತಗಲಿಕೊಂಡ ಅವನ ದಪ್ಪ ಚರ್ಮವೂ ಕಾರಣವಿದ್ದಿರಬಹುದು.

ನಮ್ಮ ಮನೆಯನ್ನು ಸೇರಿ ಒಂದು ವಾರ ಯಾವುದೇ ಬಾಡಿಗೆಯನ್ನೂ ಕೊಡದೆ ಒಂದು ಹಾಯಾಗಿ ಓಡಾಡಿಕೊಂಡಿದ್ದ ಈ ನೊಣದ ಆತ್ಮಕ್ಕೂ ನನ್ನ ಆತ್ಮಕ್ಕೂ ಯಾವ ಜನ್ಮದ ನಂಟೋ ಯಾರಿಗೆ ಗೊತ್ತು? ಅದರ ಜೀವವನ್ನು ನೋಯಿಸಬಾರದೆನ್ನುವ ನನ್ನ 'ಜಾಣತನ'ದ ಪ್ರತಿಕ್ರಿಯೆ ಆ ನೊಣಕ್ಕೆ ತನ್ನ ಜೀವಸಂಚಕಾರಕ್ಕೆ ಬಂದಂತೆ ಕಂಡಿರಲೂಬಹುದು. ಈ ನೊಣದಿಂದ ನನಗೇನೂ ತೊಂದರೆಯಾಗದಿರುವಂತೆ ನಾನು ಜಾಗೃತನಾಗಿದ್ದಂತೆ ಅದೂ ನನ್ನಿಂದ ಬದುಕುಳಿಯಲು ಒದ್ಡಾಡಿಹೋಗಿರಬಹುದು, ಕೊನೆಗೆ ಬೇರೇನು ಇಲ್ಲವೆಂದರೂ ಈ ನೊಣ ಸುಖವಾಗಿ ನಮ್ಮ ಮನೆಯನ್ನು ತೊರೆದದ್ದು ನನಗೆ ಸಮಾಧಾನ ನೀಡಿತು, ಆದರೆ ಕರೆಯದೇ ಬಂದು ಒಂದು ವಾರ ಠಿಕಾಣಿ ಹೂಡಿದ ನೊಣದ ಮನಸ್ಸಿನಲ್ಲಿ, ಆತ್ಮದ ಹಿಂದೆ ಯಾವ ಹುನ್ನಾರವಿತ್ತೋ ಯಾರು ಬಲ್ಲರು?

1 comment:

Anveshi said...

ಅಂತರಂಗಿಗಳೆ,
ಅಬ್ಬಾ... ಪುಟ ನೊಣದ ಬಗ್ಗೆ ಸಾಕ್ಷ್ಯ ಚಿತ್ರಕ್ಕಿಂತಲೂ ಸೊಗಸಾದ ಮಾನಸಚಿತ್ರಣ ನೀಡಿದ್ದೀರಿ.

ನೊಣ, ಆತ್ಮ, ಸಂಬಂಧ, ಶ್ರಮ, ಜೀವಜಂತು, ಬದುಕುವ ಹಕ್ಕು.... ಏನೆಲ್ಲಾ ಪಾತ್ರಧಾರಿಗಳು...!