Wednesday, May 03, 2006

ಅತಿ ಸೂಕ್ಷ್ಮ'ವಾದ'ವನ ಹೀಗೊಂದು ಅಳಲು

ನೀವು ದೊಡ್ಡ ಮನುಷ್ಯರು ಮಾತನಾಡಿದಾಗಲೆಲ್ಲ 'sensitivity', 'sensible' ಅನ್ನೋ ಪದವನ್ನು ಕೇಳಿರಬೇಕಲ್ಲವೇ? ಒಂದು ಪದ್ಯ ಅಥವಾ ಕಥೆಯನ್ನ ಬರೆಯಲಿಕ್ಕೆ ಅಥವಾ ಒಂದು ಸನ್ನಿವೇಶವನ್ನ ಹಲವು ಮಗ್ಗುಲಲ್ಲಿ ಗಮನಿಸಿ, ಪರಿಗಣಿಸಿ ಆಯಾ ಪಾತ್ರಗಳ ಮುಖಾಂತರ ಯಥಾವತ್ತಾಗಿ ನಿರೂಪಿಸಬೇಕಾದಲ್ಲೆಲ್ಲ, ನಿಮ್ಮ ಮಿದುಳಿನ (ಅದ್ಯಾವುದೋ ಭಾಗದಲ್ಲಿರುವ) ಈ ಅತಿ ಸೂಕ್ಶ್ಮತೆ ಕೆಲಸ ಮಾಡಲೇ ಬೇಕಾಗುತ್ತದೆ. ನನ್ನ ಪ್ರಕಾರ, ಈ ಸೂಕ್ಷ್ಮ ಮತಿಯ ಹಲವು ಮುಖಗಳಾಗಿ ಸಂವೇದನೆ, ಆತ್ಮ ನಿವೇದನೆ, ಕೀಳರಿಮೆ, ಹೆಚ್ಚುಗಾರಿಕೆ, ವ್ಯಕ್ತಿ ಅಥವಾ ಮಾತುಗಳ ಹಿಂದಿನ ಮೌಲ್ಯವನ್ನು ಗ್ರಹಿಸುವ ಜಾಣತನ ಅಥವಾ ಅಂಥ 'ಕ್ಷುಲ್ಲಕ' ವಿಷಯಗಳಿಗೆ ಗಮನಕೊಡಬೇಕಾದ ಮೊಂಡುತನ ಇತ್ಯಾದಿಗಳು ಪ್ರಸ್ತುತವೆನಿಸುತ್ತವೆ. ಮನೋವಾದಿಗಳು ಈ ಸೂಕ್ಷ್ಮತೆಯನ್ನು ಒಂದು ರೀತಿಯ 'ಖಾಯಿಲೆ' ಎನ್ನಬಹುದು, ನನ್ನ ಕೆಲವು ಸ್ನೇಹಿತರು 'ಕೊರಗು' ಎನ್ನಬಹುದು, ನನ್ನಂಥವರನ್ನು ದೂರದಿಂದ ಬಲ್ಲವರು 'ಚಿಂತನೆ' ಎನ್ನಬಹುದು, ನನ್ನ ಹಿತೈಷಿಗಳು 'ಚಿಂತೆ' ಎನ್ನಬಹುದು, ನಿಮ್ಮಂಥ ಓದುಗರು 'ದೊಡ್ಡ ಕೊರೆತ' ಎನ್ನಬಹುದು, ಅಥವಾ ಇಲ್ಲಿ ಬರೆಯಲಾಗದ ಇನ್ಯಾವುದೋ 'ಪದ'ವೆಂದು ಹಣೆಪಟ್ಟಿ ನೀಡಬಹುದು! ಆದರೆ ನನ್ನಂಥವರು ಹಲವಾರು ಮಂದಿ ಇದ್ದಾರೆ, ಅಷ್ಟೂ ಇಲ್ಲದೇ ಹೋದರೆ ನಿಮ್ಮಲ್ಲಿ ಕೆಲವರು ಇಲ್ಲಿಯವರೆಗೆ ಇದನ್ನೂ ಓದುತ್ತಲೇ ಇರಲಿಲ್ಲ! (ಮಂದಗತಿಯ ಹೆಬ್ಬಾವಿನ ಪ್ರಸ್ತಾಪ ಹಿಂದೆ ಮಾಡಿದ್ದೆ, ಸದ್ಯಕ್ಕೆ ಇದನ್ನು ಕಪಿಮುಷ್ಟಿ ಎನ್ನೋಣ - ದಯವಿಟ್ಟು 'ಕಪಿಮುಷ್ಟಿ'ಯನ್ನು ಒಂದೇ ಪದವಾಗಿ ಬರೆದಿರೋದನ್ನ ಗಮನಿಸಿ).

***

ಬರೀ (ಕೇವಲ) ೨0 ವರ್ಷಗಳ ಹಿಂದೆ ನಾನು ಹೈ ಸ್ಕೂಲಿನಲ್ಲಿ ಚಿಗುರಿಕೊಂಡು ನನ್ನ ಅಸ್ತಿತ್ವವನ್ನು ಸಾಬೀತುಪಡಿಸಿಕೊಂಡು 'ಬಹಳ ಒಳ್ಳೆಯವ' ಎಂದು ಹಣೆಪಟ್ಟಿ, ಹಾಗೂ ಅತ್ತಿತ್ತ ನೋಡದಿರುವಂತೆ ಕಣ್ಪಟ್ಟಿಯನ್ನು ಕಟ್ಟಿಕೊಂಡು, ಜಟಕಾ ಕುದುರೆಯಂತೆ ಜೀಕುತ್ತಿರುವ ಸಂದರ್ಭದಲ್ಲಿ ಅದೇ ಮೊದಲ ಹಾಗೂ ಕೊನೆಯ ಬಾರಿಗೆ ಸಾರ್ವಜನಿಕವಾಗಿ ನಿಂದನೆಗೊಳಗಾದ ವಿಷಯ ನನ್ನನ್ನು ಇವತ್ತಿಗೂ ಕಾಡುತ್ತದೆಯೆಂದರೆ 'ನಾನೆಂಥವ'ನಿರಬೇಕೆಂದು ನಿಮಗೂ ಹೆದರಿಕೆಯಾಗಲಿಕ್ಕೆ ಸಾಕು! ನಾವೆಲ್ಲ ಮುಂಜಾನೆ ಪ್ರಾರ್ಥನೆಗೆ ನಿಂತಿದ್ದೆವು, ಎಂಟು, ಒಂಭತ್ತು ಹಾಗೂ ಹತ್ತನೇ ತರಗತಿಯವರು ಮೂರು ಸಾಲಿನಲ್ಲಿ ನಿಂತು ಪ್ರಾರ್ಥನೆಯನ್ನು ಹಾಡುವ ದಿನನಿತ್ಯದ ಕಾಯಕಗಳಲ್ಲಿ ಎಂದಿನಂತೆ ಮಗ್ನರಾಗಿದ್ದೆವು. ಆಗಿನ್ನು ನಾಡಗೀತೆಯ ಗೊಂದಲವಿನ್ನೂ ಇರಲಿಲ್ಲ. ಬರೀ ರಾಷ್ಟ್ರಗೀತೆಯನ್ನು ಹಾಡುತ್ತಿದ್ದೆವು, ಅದರ ನಂತರ ಪ್ರಿನ್ಸಿಪಾಲರು ಹುಡುಗರನ್ನು ಉದ್ದೇಶಿಸಿ ಏನಾದರೂ ಹೇಳುವುದಿದ್ದರೆ ಹೇಳುತ್ತಿದ್ದರು, ಇಲ್ಲವೆಂದಾದರೆ ನಾವು ಶಿಸ್ತಿನಲ್ಲಿ ನಮ್ಮ-ನಮ್ಮ ತರಗತಿಗಳಿಗೆ ಹೋಗುವುದು ನಿತ್ಯರೂಢಿಯಾಗಿತ್ತು.

ಹೀಗೇ ಒಂದು ದಿನ ಒಳ್ಳೆ ಚುರುಕಿನ ಬಿಸಿಲು ಇದ್ದ ಸಂದರ್ಭದಲ್ಲಿ, ನಮ್ಮ ದೈಹಿಕ ಶಿಕ್ಷಕರು 'ಸಾವಧಾನ್', 'ವಿಶ್ರ್‍ಆಮ್'ಗಳ ಆದೇಶವನ್ನು ಎಂದಿನ ಹುರುಪಿನಿಂದಲೇ ಕೊಡುತ್ತಿದ್ದರು. ಸುಮಾರು ಐದು ಅಡಿ ಎತ್ತರವಿದ್ದಿರಬಹುದಾದ (ಆಗ ಅವರು ನಮಗಿಂತ ಎತ್ತರವಿದ್ದರು) ಅವರು ಸದಾ ಶುಭ್ರವಾದ ಬಿಳಿ ಅಂಗಿ ಪ್ಯಾಂಟು ಧರಿಸಿದ ಶಿಸ್ತಿನ ಸಿಪಾಯಿ. ಪ್ರತೀ ಶನಿವಾರ ಒಂದೆರಡು ಘಂಟೆ ಬಿಸಿಲಿನಲ್ಲಿ ನಿಲ್ಲಿಸಿ 'ಏಕ್, ದೋ, ತೀನ್, ಚಾರ್' ಎಂದು ಹನ್ನೆರಡರವರೆಗೆ ಹೇಳಿ , ಮತ್ತೆ ಅದನ್ನು ಉಲ್ಟಾ ಹೇಳಿಕೊಂಡು ಬಂದು ಹೊಟ್ಟೆ ಹಸಿದು ಬೆನ್ನನ್ನು ತಿನ್ನಬೇಕೆಂದು ಹೊರಟಂಥ ಸಂದರ್ಭದಲ್ಲಿ ಅನಗತ್ಯವಾಗಿ ಗೋಳುಹೊಯ್ದುಕೊಳ್ಳುತ್ತಾರಲ್ಲ ಅನ್ನೋ ಸಂಕಟದಲ್ಲಿ ಇದ್ದವರಲ್ಲಿ ನಾನೂ ಒಬ್ಬ. ಆಗಿನ್ನೂ ನಾವು 'ಗುರು (ದೊಡ್ಡ) ದೇವೋಭವ' ಎನ್ನುವ ಮಾತನ್ನು ಅಕ್ಷರ ಸಹಿತವಾಗಿ ಪಾಲಿಸುತ್ತಿದ್ದುದರಿಂದ, 'ರೆಬೆಲ್' ಅನ್ನೋ ಪದ ನಮ್ಮ ಪದಕೋಶದಲ್ಲಿ ಇನ್ನೂ ಬಂದಿರಲಿಲ್ಲ, ಅದರಲ್ಲೂ ನಾನು ರೆಬೆಲ್ ಆಗುವುದೆಂದರೇನು? ಆ ರೀತಿ ಮುಖ್ಯವಾಹಿನಿಯಿಂದ ದೂರವಿರುವ ಯೋಚನೆ ಹಾಗೂ ಸನ್ನಡತೆಯಲ್ಲ ಎಂದು ಅನಿಸಿಕೊಳ್ಳುವ ವಿಚಾರ ಇವೆರಡೂ ನನ್ನನ್ನು ಚಿಂತೆಗೆ ಈಡು ಮಾಡುತ್ತಿದ್ದವು. ಆದ್ದರಿಂದ ನಾನು 'ಎಲ್ಲಾ ಸಮಯದಲ್ಲೂ ಉತ್ತಮ ಅಥವಾ ಆದರ್ಶ ವಿದ್ಯಾರ್ಥಿಯಾಗಿ' ಇರುವ ವಿಚಾರವೇ ನನ್ನ ತಲೆಯಲ್ಲಿತ್ತು, ನನ್ನ ಆ ಇಮೇಜ್ ಅನ್ನೋದು ಬಹಳ ದೊಡ್ಡ ವಿಷಯವಾಗಿತ್ತು.

ನಮ್ಮ ಪ್ರಾರ್ಥನೆ ಮುಗಿದು, ಪ್ರಾಂಶುಪಾಲರು ಹೇಳುವುದನ್ನೆಲ್ಲ ಹೇಳಿದ ಮೇಲೆ, ದೈಹಿಕ ಶಿಕ್ಷಕರು 'ಬಿಡ್ಲಾ ಸಾರ್' ಎಂದು ಪ್ರಾಂಶುಪಾಲರ ಆದೇಶವನ್ನು ಕೇಳಿಯೇ ನಮ್ಮನ್ನು ತರಗತಿಗಳಿಗೆ ಹೋಗಲು ಬಿಡುತ್ತಿದ್ದುದು.

ಆ ದಿನ ಹೀಗೆ ನಿತ್ತಾಗ, ಕೆ. ವೀರಪ್ಪನವರು (ದೈಹಿಕ ಶಿಕ್ಷಕ) 'ಬಿಡ್ಲಾ ಸಾರ್' ಎಂದರು.
ನಾನು ನನಗೆ ಆದೇನು ಅನ್ನಿಸಿತೋ, ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ 'ಕಣೀ ಕೇಳಿ!' ಎಂದು ಬಿಟ್ಟೆ, 'ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು' ಅನ್ನೋ ಹಾಗೆ ವೀರಪ್ಪನವರ ಪ್ರಕಾರ ದೊಡ್ಡ ಪ್ರಮಾದವೇ ಆಗಿ ಹೋಯ್ತು.
ಎಲ್ಲರ ಮುಂದೆ ಹೀಗೆ ಹೇಳಿದೆನಲ್ಲಾ ಅನ್ನೋ ಸಾರ್ವಜನಿಕ ಅವಹೇಳನಕ್ಕೆ ವೀರಪ್ಪನವರು ಉರಿದುಬಿದ್ದರು, ಅದರಲ್ಲೂ ನಾನು ನನ್ನ ಕಿರಿಯ ವಿದ್ಯಾರ್ಥಿಗಳ ಮುಂದೆ ಹೀಗೆ ಸಾರ್ವಜನಿಕವಾಗಿ ಅವಹೇಳನವನ್ನು ಮಾಡಿದ್ದರಿಂದ ಅವರಿಗೆ ತಮ್ಮ 'ಇಮೇಜ್' ಸಮಸ್ಯೆ ಬಾಧಿಸತೊಡಗಿತ್ತು ಎಂದು ಕಾಣುತ್ತೆ.

ವೀರಪ್ಪನವರು ಸಾಧ್ಯವಾದಷ್ಟು ದೊಡ್ಡ ಸ್ವರದಲ್ಲಿ 'ಏನಯ್ಯಾ, .... (ನನ್ನ ಹೆಸರು), ಹತ್ತನೇ ತರಗತಿ, 'ಬಿ' ವಿಭಾಗ, ಬಹಳ ಚಿಗುರಿಕೊಂಡಿರೋ ಹಾಗೆ ಕಾಣ್ಸುತ್ತೆ!', ಪ್ರಾಂಶುಪಾಲರನ್ನು ಉದ್ದೇಶಿಸಿ 'ನೋಡಿ ಸಾರ್! ಇವನ ಆಟ ನಾ, ಇವರಿಗೆಲ್ಲ ಸಮ್ಮ ಎರಡು ಬಾರ್ಸಿದ್ರೇನೆ ಬುದ್ಧಿ ಬರೋದು ಏನಂತೀರಿ?' ಎಂದು ಕಣ್ಣುಗಳಲ್ಲಿ ಕೆಂಡಕಾರತೊಡಗಿದರು, ಅವರ ದೇಹ, ಧ್ವನಿ ನಡುಗುತ್ತಿತ್ತು, ಅದೂ 'ನನ್ನಂಥಾ' ವಿದ್ಯಾರ್ಥಿಯಿಂದ ಆ ಮಾತನ್ನು ಕೇಳಬೇಕಾಗಿ ಬಂದಿದ್ದರಿಂದ ಆ ನೋವು ದ್ವಿಗುಣವಾಗಿತ್ತು ಎಂದರೂ ತಪ್ಪಾಗಲಾರದು.

ಆಶ್ಚರ್ಯವೆಂಬಂತೆ ಪ್ರ್‍ಆಂಶುಪಾಲರಾದ ಕೆದಲಾಯರು, ನಗುತ್ತಾ, ಎಂದಿನ ಮಂಗಳೂರಿನ ಶೈಲಿಯ ಅವರ ಮಾತುಗಳಲ್ಲಿ ನನ್ನ ರಕ್ಷಣೆಗೆ ಬಂದಿದ್ದರು - 'ವೀರಪ್ಪನವರೇ, ನೀವು ಹೀಗೆ ತುಂಬಾ ಹೊತ್ತು ಬಿಸಿಲಿನಲ್ಲಿ ನಿಲ್ಲಿಸಿದರೆ ತಲೆ ತಿರುಗಿ ಬೀಳುವುದಿಲ್ಲವೇ, ಹೋಗಲಿ ಬಿಡಿ!'

ಅದಾದ ಮೇಲೆ ವೀರಪ್ಪನವರು ನನ್ನನ್ನು ನೋಡುವಾಗಲೆಲ್ಲ ತಮ್ಮ ಕಣ್ಣಂಚಿನಲ್ಲಿ ದೃಷ್ಟಿಯನ್ನು ತೀವ್ರವಾಗಿ ಮಾಡುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ.

೯೮ರಲ್ಲಿ ಭಾರತಕ್ಕೆ ಹೋದಾಗ ದಾರಿಯಲ್ಲಿ ಸಿಕ್ಕ ಅವರನ್ನು 'ನಮಸ್ಕಾರ ಸಾರ್, ಚೆನ್ನಾಗಿದೀರಾ' ಎಂದು ನಕ್ಕು ಕೇಳಿದರೆ, 'ಓ, ... (ನನ್ನ ಹೆಸರು) ಅಲ್ವಾ, ಅಮೇರಿಕದಲ್ಲಿದ್ದೀಯಂತೆ, ಒಳ್ಳೇ ಕೆಲಸ ಮಾಡ್ದೇ ನೋಡ್, ಎಲ್ಲಾ ಆರ್‍ಆಮಾ' ಎಂದು ನಕ್ಕು ಮಾತನಾಡಿಸಿದ್ದರು. ಅವರ ಕಣ್ಣಿನಲ್ಲಿ ಯಾವ ನೋಟವೂ ಇರಲಿಲ್ಲ, ಆದರೆ ನನ್ನ ಮನದಲ್ಲಿ ಎಲ್ಲವೂ ಅಚ್ಚಳಿಯದೇ ನಿಂತಿತ್ತು, ಅವರು ಇನ್ನೂ ಅದೇ ಹೈ ಸ್ಕೂಲಿನಲ್ಲಿ ಅದೇ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರಾದ್ದರಿಂದ ಇನ್ನೂ ಬಿಳಿ ಅಂಗಿ, ಪ್ಯಾಂಟನ್ನೇ ಧರಿಸಿದ್ದರು, ಆದರೆ ಅವರ ಪ್ಯಾಂಟಿನ ಗೆರೆಗಳಲ್ಲಿ ಮೊದಲಿದ್ದ ಕಡಕ್‌ತನವಿರಲಿಲ್ಲ!

ನಾನು ಈ ಘಟನೆಯನ್ನು ಮನಸ್ಸಲ್ಲಿ ಇಟ್ಟುಕೊಂಡು ಕೊರಗೋದಿಲ್ಲ, ಆದರೆ 'ಬಹಳ ಒಳ್ಳೆಯ ಹುಡುಗನ ಒಂದು ಸಾರ್ವಜನಿಕ ಕೆಟ್ಟ ಕ್ಷಣ'ದ ಬಗ್ಗೆ ಗಾಢವಾಗಿ ಯೋಚಿಸಿದ್ದೇನೆ. 'ಕಣೀ ಕೇಳಿ' ಅನ್ನೋ ಮಾತು sponteneous ಆಗಿ ಬಂದಿದ್ದು ಹೇಗೆ ಎಂದು ಯೋಚಿಸಿದ್ದೇನೆ, ಅದಕ್ಕೆ ಉತ್ತರ ಸಿಕ್ಕೂ ಇದೆ: ನಾವು ರಜಾ ದಿನಗಳಲ್ಲಿ ಅಜ್ಜನ ಮನೆಗೆ ಹೋಗುತ್ತಿದ್ದೆವು, ಆನವಟ್ಟಿಯ ಅರೆ ಮಲೆನಾಡಿನ ವಾತಾವರಣದಲ್ಲಿ ಬೆಳೆದ ನಾವು ಮಲೆನಾಡಿನ ಒಂದು ಊರಿಗೆ ಹೋಗುತ್ತಿದ್ದೆವು (ಊರಿನ ಹೆಸರು ಹೇಳಿದರೆ ಎಲ್ಲಿ ನನ್ನ ಹೆಸರು ಬಹಿರಂಗವಾಗುವುದೋ ಎಂಬ ಕಾರಣದಿಂದ ಹೇಳಿಲ್ಲ), ಅಲ್ಲಿ ನಾನು ಪ್ರತೀ ಸೀಜನ್‌ಗೆ ಒಂದೋ ಎರಡೋ ಹೊಸ ಹೊಸ ಪದಗಳನ್ನು ಕಲಿತುಕೊಂಡು ಬರುತ್ತಿದ್ದೆ. 'ನೀನಿನ್ನು ಸಣ್ಣವ, ನಿನಗೆ ಗೊತ್ತಾಗಲ್ಲ ಬಿಡು' ಅನ್ನೋ ಮಾತುಗಳು ನನ್ನನ್ನು ಆದಷ್ಟು ಬೇಗನೆ ಬೆಳೆಯುವಂತೆ ಪ್ರಚೋದಿಸುತ್ತಿದ್ದವಾದ್ದರಿಂದ, ನನ್ನ ಅಣ್ಣ ಹಾಗೂ ಅವನ ಅಪಾರ ಸ್ನೇಹಿತರ ಬಳಗವನ್ನು ಅನುಕರಿಸಿದರೆ, ಅವರ ಮಾತು, ಹಾವಭಾವಗಳನ್ನು ನಾನೂ ಅನುಸರಿಸಿದರೆ 'ದೊಡ್ಡವ'ನಾಗುತ್ತೇನೆಂದು ಮೈಮನಗಳಲ್ಲಿ ಬರೆದುಕೊಂಡಿದ್ದರಿಂದ 'ಕಣೀ ಕೇಳು' ಎಂಬ ವಾಕ್ಯ, ಯಾರಾದರೂ ಏನೋ ಅಗತ್ಯವಾದ ಕೆಲಸವನ್ನೊಂದು ಮಾಡಲೇ ಎಂದು ಯಾರೋ ಕೇಳಿದಾಗ ದೊಡ್ಡವರು 'ಕಣೀ ಕೇಳು' ಎನ್ನುವ ಮಾತಿನ ಮೂಲಕ, by default, 'ಆ ಕೆಲಸವನ್ನು ಮಾಡು' ಎಂದು ಆದೇಶ ನೀಡುತ್ತಿದ್ದುದನ್ನು ನನ್ನ ಪುಟ್ಟ ಮಿದುಳು ಚೆನ್ನಾಗಿ ಗ್ರಹಿಸಿಕೊಂಡಿತ್ತೆಂದು ಕಾಣ್ಸುತ್ತೆ, ಅದು ನಾವೆಲ್ಲ ಹೈ ಸ್ಕೂಲಿನಲ್ಲಿ ಪ್ರಾರ್ಥನೆಗೆ ನಿತ್ತಾಗ ವೀರಪ್ಪನವರನ್ನು ಗೇಲಿ ಮಾಡುವ ನೆಪದಲ್ಲಿ ಹಾಗೂ ಯಾವಾಗಲೂ 'ನೀನು ಸಣ್ಣವ' ಎಂದು ನನ್ನ ಅಸ್ತಿತ್ವವನ್ನು ಹತ್ತಿಕ್ಕಿರುವುದನ್ನು ವಿರೋಧಿಸುವುದಕ್ಕೆಂದು ನನಗೆ ಅರಿವಿಲ್ಲದಂತೆಯೇ ಹೊರಗೆ ಬಂದಿರಬಹುದು ಎಂದು ನನ್ನ ಊಹೆ, ಅನುಮಾನ - ನಿಮಗೆ 'ಇವನೊಬ್ಬ ದೊಡ್ಡ ಹುಚ್ಚ' ಎಂದಲ್ಲದೇ ಮತ್ತೆ ಬೇರೆ ಏನಾದರೂ ಗೊತ್ತಾದರೆ/ಗೊತ್ತಿದ್ದರೆ ಖಂಡಿತ ತಿಳಿಸಿ.

ಇಂತಹ ಎಲ್ಲೂ ಹೇಳಿಕೊಳ್ಳದ, ಹೇಳಿಕೊಳ್ಳಲಾರದ 'ನೋವು'ಗಳು, ಹಲವಾರಿದೆ, ಅವುಗಳು ಒಂದೊಂದಾಗೇ ಸರತಿಯ ಮೇಲೆ ಬಂದು ತಿಂಗಳಿಗೋ, ವರ್ಷಕ್ಕೋ ಯಾವತ್ತೋ ಒಂದು ದಿನ ಹೀಗೆ ಮುಂಜಾವಿನ ಪ್ರಶಾಂತತೆಯಲ್ಲಿ ಕನ್ನಡಿ ನೋಡಿ ಶೇವ್ ಮಾಡುತ್ತಿರುವಾಗ ನನ್ನ ಹಾಗೂ ಕನ್ನಡಿಯಲ್ಲಿನ ಪ್ರತಿಬಿಂಬದ ನಡುವಿನ (ದ್ವಿಗುಣಗೊಂಡ ದೂರದಲ್ಲಿ) real ಮತ್ತು imaginary ಅವಕಾಶದಲ್ಲಿ (space ಎಂಬರ್ಥದಲ್ಲಿ) ತಾಲೀಮು ನಡೆಸತೊಡಗುತ್ತವೆ, ನನ್ನ ಯಾವ ಸುಡುಗಾಡು ಸಂಸ್ಕಾರದ ಕಾರಣವೋ ಏನೋ ಈ ರೀತಿ ಕುಣಿದು ಕುಪ್ಪಳಿಸುವ, ಹೈ ಸ್ಕೂಲು ಮಕ್ಕಳಂತೆ ಇನ್ನೂ ಬೆಳೆಯುತ್ತಿರುವ, ಈ ಆಲೋಚನೆಗಳಿಗೆ ವೀರಪ್ಪನವರ ಶೈಲಿಯಲ್ಲಿ ಗದರಿಸುವಂತೆ ನನ್ನ ಬಾಯಿಂದ 'ಶಿಟ್!' ಎನ್ನುವ ಪದ ತಂತಾನೆ ಹೊರಬೀಳುತ್ತದೆ, ಆ ಮೂಲಕ ನನಗೂ, ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬಕ್ಕೂ, ಮಧ್ಯೆ ಇರುವ ರಂಗಶಾಲೆಯಲ್ಲಿ ತಾಲೀಮು ಮಾಡುವ ಆಲೋಚನೆಗಳಿಗೂ ತತ್ಕಾಲಕ್ಕೆ ಒಂದು ವಿರಾಮ ಸಿಗುತ್ತದೆ!

***

'ನಾನೇನೂ ತಪ್ಪನ್ನೂ ಮಾಡಿಲ್ಲ' ಎನ್ನುವ ಮಾತು ಬಹಳ ದೊಡ್ಡದು, ಆದರೆ ಸದಾ ತಪ್ಪನ್ನು ಮಾಡದೇ, ತಪ್ಪುಗಳಾಗದಂತೆ ಬದುಕುವ ಅನವರತ ಯಾತ್ರೆಯ ಧ್ಯೋತಕ ಇದೇ ನೋಡಿ ಅದೇ ತಪ್ಪು! ತಪ್ಪು ಮಾಡಿ ಅದನ್ನು ಜೀರ್ಣಿಸಿಕೊಳ್ಳುವವರಿಗಿಂತಲೂ ನಾನು ಏನು ಮಾಡಿದರೆ ತಪ್ಪಾಗುತ್ತೆ ಅನ್ನೋ ಬೃಹತ್ ಆಲದ ಮರದ ನೆರಳಿನಲ್ಲಿ ಮಲಗುವುದೋ ಅಥವಾ ಅದರ ಬಿಳಲುಗಳಿಗೆ ಜೋಕಾಲಿಯನ್ನು ಕಟ್ಟಿ ಆಡುವುದೋ ಇದೇ ನೋಡಿ, ಅದು dangerous!.

ಈ ಕಥೆಯನ್ನು ನಿಮ್ಮೊಡನೆ ಹಂಚಿಕೊಂಡಿದ್ದೇನಲ್ಲ ಅನ್ನೋ ಸಂತೋಷ, ನನ್ನ ಹಾಗೂ ಕನ್ನಡಿಯ ನಡುವಿನ ದ್ವಿಗುಣವಾದ ಅವಕಾಶದ ರಂಗಶಾಲೆಯಲ್ಲಿ ಸದಾ ಬರೀ ತಾಲೀಮನ್ನೇ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ತರಗತಿಯಿಂದ ಎತ್ತಿ ಹೊರಹಾಕಿದೆ, ಆದರೆ Million Dollar Baby ಚಿತ್ರದಲ್ಲಿ ಸದಾ ಬರೀ ತಾಲೀಮನ್ನೇ ಮಾಡಿ ಕನಸುಗಳನ್ನು ಕಾಣುವ ಅಥವಾ ಹಟಮಾರಿ ಹುಡುಗನ ಹಾಗೆ, 'ಕಣಿ ಕೇಳುವ' ಈ ವಿದ್ಯಾರ್ಥಿ ಕಷ್ಟ ಪಟ್ಟೇ ತರಗತಿಯಿಂದ ಅಳುತ್ತಾ ನಿರ್ಗಮಿಸುತ್ತಾನೆ - ಅವನು ಬೇರೆ ಯಾವುದಾದರೂ ಶಾಲೆಯನ್ನು ಸೇರಿಕೊಳ್ಳುತ್ತಾನೋ ಬಿಡುತ್ತಾನೋ, ಮುಂದೆ ಹವ್ಯಾಸಿಯಿಂದ ವೃತ್ತಿಪರನಾಗುತ್ತಾನೋ ಬಿಡುತ್ತಾನೋ, ನನ್ನ ರಂಗಶಾಲೆಯಿಂದ ಹರದಾರಿ ದೂರ ಉಳಿದರೆ ಸಾಕು, ಉಳಿಯುತ್ತಾನೆ ಅನ್ನೋ ನಂಬಿಕೆ ನನ್ನದು.

7 comments:

Anveshi said...

ಇಂಥದ್ದೊಂದು ವಿಷಯವನ್ನು ಬ್ಲಾಗಿನಲ್ಲಿ ತುರುಕಿಸಲು ನೀವೇಕೆ ಕಣಿ ಕೇಳಿದ್ರಿ?

ಆದ್ರೂ, ಇಲ್ಲಿ ನೀವು ಮೆಲುಕು ಹಾಕಿದ್ದು, ನಮ್ಮ ಬಾಲ್ಯದ ತಪ್ಪುಗಳು, ತುಂಟಾಟಗಳು ಕಣ್ಮುಂದೆ ಸುಳಿಯುವಂತೆ ಮಾಡಿತು.

Enigma said...

have added u to my frnds list. plz do add me as r friend so that you can view my entries

Anonymous said...

ಕೆಲವು ಸಲ ಸಹನೆ ಮಿತಿಮೀರಿದಾಗ,ನಮ್ಮ ಅರಿವಿಲ್ಲದಂತೆ ಮಾತು ತುಟಿಯಿಂದ ಹೊರಬಂದಿರುತ್ತದೆ. ನಿಮ್ಮ "ಕಣಿಕೇಳಿ" ಎಂಬ ಮಾತು ಹಾಗೆಯೇ ಹೊರಬಂದಿರಬಹುದು, ಅಥವಾ, ನೀವೇ ವಿಶ್ಲೇಷಿಸಿರುವ ಹಾಗೆ, ಹೊಸದಾಗಿ ಕಲಿತ ಪದವನ್ನು ಪ್ರಯೋಗಿಸುವ ಆತುರದಿಂದಲೂ ಇರಬಹುದು.

ನಿಮ್ಮದು ತುಂಬಾ ಸೂಕ್ಷ್ಮ ಸ್ವಭಾವ ಇರಬೇಕು ಅಲ್ಲವೇ? ಇಂದಾಡಿದ ಮಾತನ್ನು ಇಂದೇ ಕೊಡವಿಕೊಂಡು ಹೋಗುವ ಉಡಾಫೆ ಜನರ ನಡುವೆ, ಎಂದೋ ಆಡಿದ ಮಾತುಗಳಿಗಾಗಿ ಕೊರಗುತ್ತಿರುವ ನಿಮ್ಮಂತವರು ಬಲು ಅಪರೂಪ.

ಆದರೆ,"ನಿಂತಾಗ" ಪದವನ್ನು "ನಿತ್ತಾಗ" ಎಂದು ಬಳಸುವ ಬಹಳ ಜನರಲ್ಲಿ ನೀವೂ ಒಬ್ಬರು :)

Anonymous said...

sritri ಅವರ ಗಮನಕ್ಕೆ:

ನೆಗಡಿಯಾಗಿದ್ದಾಗ 'ನಿಂತಾಗ' ಅಂದರೆ 'ನಿತ್ತಾಗ' ಎಂದು ಕೇಳಿಸುತ್ತದೆ. ಬೇಕಂತಲೇ ಮೂಗನ್ನು ಗಟ್ಟಿಯಾಗಿ ಹಿಡಿದುಕೊಂಡು ಹೇಳಿದರೂ ಹಾಗೆ ಆಗುತ್ತದೆ. 'ಸೋಮವಾರ ಮಡಿಕೇರಿಯಲ್ಲಿ ಗೋಳಿಮರದಡಿಯಲ್ಲಿ ಸಂತೆ' ಎನ್ನುವುದನ್ನು ನೆಗಡಿಯಿದ್ದಾಗ ಅಥವಾ ಮೂಗುಹಿಡಿದು ಉಚ್ಚರಿಸಿದರೆ 'ಸೋಬವಾರ ಬಡಿಕೇರಿಯಲ್ಲಿ ಗೋಳಿಬರದಡಿಯಲ್ಲಿ ಸತ್ತೆ!' ಎಂದಾಗುತ್ತದೆ!

ಆದರೆ ಅದು ಉಚ್ಚರಣೆಯ ಮಾತಾಯ್ತು. ಬರೆಯುವಾಗ 'ನಿಂತಾಗ' ಇದ್ದದ್ದು 'ನಿತ್ತಾಗ' ಏಕಾಗುತ್ತದೋ ನನಗೆ ಗೊತ್ತಿಲ್ಲ

Satish said...

ಅನ್ವೇಷಿಗಳೇ,

ಹಳವಂಡದಲ್ಲಿ ಏನೇನಿದೆ ಎಂದು ಕೆದಕುತ್ತಿದ್ದಾಗ ಬಗ್ಗಡವೆದ್ದು ತಳ ಸರಿಯಾಗಿ ಕಾಣದಿರುವಂತಾಗುತ್ತದಾದ್ದರಿಂದ ಕೆಲವೊಮ್ಮೆ ಕಣಿ ಕೇಳಬೇಕಾಗಿ ಬರುತ್ತೆ! ಇದರಿಂದಾಗಿ ನಿಮ್ಮ ಬಾಲ್ಯದ 'ಅಸತ್ಯ'ಗಳು ಒಂದು ಕ್ಷಣ ನಿಮ್ಮ ಕಣ್ಮುಂದೆ ಸುಳಿದಂತಾದದ್ದು ಒಳ್ಳೆಯದೇ ಆಯಿತು ಬಿಡಿ.

ಇತಿ
ನಿಮ್ಮವ

Satish said...

sritri ಅವರೇ,

ಹೌದು, ಹಿಂದೆ ನಾವು ಹೊತ್ತುಕೊಂಡೊಯ್ಯುವ ಬ್ಯಾಗೇಜುಗಳ ಬಗ್ಗೆ ಬರೆದಿದ್ದೆ, ನನ್ನ ನೆನಪಿನ ಹಾರ್ಡ್‌ಡಿಸ್ಕ್ ತುಂಬೆಲ್ಲ ಇಂತವುಗಳು ಬೇಕಾದಷ್ಟಿವೆ.

'ನಿಂತಾಗ' ಅನ್ನೋದು ಸರಿಯಾದ ಬಳಕೆ, 'ನಿತ್ತಾಗ' ಅನ್ನೋದು ಅದರ ಅಪಭ್ರಂಶವಾಗಿರಬಹುದು ಅಥವಾ ಆಡುನುಡಿಯ ಮತ್ತೊಂದು ಪದವಾಗಿರಬಹುದು. ನಿಮಗೆ ಆಶ್ಚರ್ಯವಾಗುವಂತೆ ನಾನು ಇದೇ ಲೇಖನದಲ್ಲಿ 'ನಿಂತು', 'ನಿಂತಾಗ' ಎಂದೂ ಬಳಸಿದ್ದೇನೆ. ಆದರೂ ಕೆಲವೊಮ್ಮೆ ನನ್ನ ಮಾತಿನಲ್ಲೂ 'ನಿತ್ತಾಗ' ಎಂಬ ಪದ ಹೊರಬರುವುದು ನಿಜ, ಇನ್ನು ಮುಂದೆ 'ನಿತ್ತಾಗ' ಎನ್ನುವಾಗ ಒಮ್ಮೆ ಯೋಚಿಸುತ್ತೇನೆ!

ಇತಿ
ನಿಮ್ಮವ

Satish said...

ಜೋಶಿಯವರೇ,

ನನಗೆ ಖಂಡಿತ ನೆಗಡಿಯಂತೂ ಆಗಿಲ್ಲ!

ಆದರೆ 'ಸಂತೆ'ಯ ವಿಷಯದಲ್ಲಿ ನೀವು ಹೇಳಿರೋ ಮಾತು ನೂರಕ್ಕೆ ನೂರು ಸತ್ಯ.

ಇತಿ
ನಿಮ್ಮವ