Thursday, May 25, 2006

ಆ ಧ್ವನಿ - ಈ ಧ್ವನಿ: ಭಾಗ ೨

ಆ ಧ್ವನಿ: ಏನು ಕೊರತಿ ಆತು ಈಗಾಂತ ಹಿಂಗ ತಲಿ ಮ್ಯಾಗ ಕೈ ಹೊತಗೊಂಡ್ ಕುಂತೀ? ಏಳ್ ಏಳ್, ಯಾವಳೋ ಒಬ್ಳು ಅಂದಿದ್ಲಂತೆ ಇತ್ಲಾಗ್ ಅಕ್ಕಾನೂ ಉಳೀಲಿ, ಅಕ್ಕೀನಿ ಉಳೀಲಿ ಅಂತ, ಹಂಗಾತ್ ನೋಡ್ ನಿನ್ನ ಕಥಿ.

ಈ ಧ್ವನಿ: ಅಲ್ವೋ, ನನಗೆ ಒಂದ್ ಕಡೆ ಈ ಕೆಲ್ಸಾನೂ ಬೇಕು, ಮತ್ತೊಂದು ಕಡೆ ನಮ್ಮೂರಿಗೆ ರಜಕ್ಕ್ ಹೋಗ್ಲೂ ಬೇಕೂ, ಏನ್ ಮಾಡಕಾಗತ್ತೆ, ಏನಾದ್ರೂ ಒಂದ್ ಉಪಾಯ ಇರ್‍ಲೇ ಬೇಕಲ್ಲ?

ಆ ಧ್ವನಿ: ಏನಿಲ್ಲ, ನಾನ್ ಹೇಳ್ದೆ ಅಂತ ನನ್ ಮಾತ್ ನೀನ್ ಯಾವಾಗಾರಾ ಕೇಳೀಯೇನು? ಇದ್ದ ವಿಷ್ಯಾ ಇರಂಗಾ ಹೇಳೋವ್ ನೋಡ್ ನಾನು, ನಿನಗ್ ಬ್ಯಾಸ್ರಾ ಆದ್ರ ಅದಕ್ಕ ನನ್ನ ಹೊಣೀ ಮಾಡಬ್ಯಾಡಾ.

ಈ ಧ್ವನಿ: ಪರವಾಗಿಲ್ಲ ಹೇಳು, ನನಗೆ ನಿನ್ನ ಬಿಟ್ರೆ ಮತ್ತ್ಯಾರೂ ಇಲ್ಲ ಅಂತ್ಲೇ ಹೇಳ್‌ಬೇಕು, ಇಂಥ ವಿಷಯಕ್ಕೆಲ್ಲ ಹೀಗೆ ಯಾರ ಹತ್ರಾನಾದ್ರೂ ಹೇಳಿಕೊಂಡ್ರೆ ಒಂದಿಷ್ಟು ಸಮಾಧಾನಾನಾದ್ರೂ ಆಗುತ್ತೆ.

ಆ ಧ್ವನಿ: ಈಗ ಊರಿಗ್ ಹೋಗಿ ಬರೋಬ್ಬರಿ ಮೂರು ವರ್ಸದ ಮೇಲಾತೂ ಅಂತಿ, ಅತ್ಲಾಗಾ ಈ ಕೆಲ್ಸಾ ಬಿಟ್ಟು ಒಂದೆರಡು ತಿಂಗಳೂ ಅಂತ ಊರ್ ಕಡಿ ಬಂದ್ ಹೋಗು, ಆಮೇಲೆ ಹಿಂದಕ್ಕ್ ಬಂದು ನಿನಗ್ಯಾವ ಕೆಲ್ಸಾ ಬೇಕೋ ಅದನ್ನ ಹಿಡೀವಂತೆ, ಇದಕ್ಕಿಂತ ಅಗದಿ ಚಂದ ಇರೋ ಉಪಾಯ ನನ್ನಂತೋರ್ ತಲೀಗ್ ಎಲ್ಲಿ ಹೊಳೀಬೇಕು ಹೇಳು?

ಈ ಧ್ವನಿ: ಇರೋ ಕೆಲ್ಸಾನ ಬಿಟ್ಟು ಅದ್ಯಾವ ರಜೆ ಕಳೆಯೋಕಾಗುತ್ತೋ? ಈ ಕಂಪನೀಲಿ ಏನೋ ಸ್ಥಾನಾ-ಮಾನ ಅಂತ ಒಂದಿಷ್ಟಾದ್ರೂ ಇದೆ, ಅಕಸ್ಮಾತ್ ಈ ಕೆಲ್ಸಾ ಬಿಟ್ಟು ನಿನ್ನ ಮಾತು ಕೇಳಿ ಊರಿಗೇನಾದ್ರೂ ತಿಂಗಳುಗಟ್ಟಲೇ ಬಂದೆ ಅಂತಿಟ್ಕೋ, ಆಮೇಲೆ ಹಿಂದೆ ಬಂದ ಮೇಲೆ ಕೆಲ್ಸಾ ಸಿಗೋದು ತಡಾ ಆಯ್ತು ಅಂದ್ರೆ, ಸಿಕ್ರೂ ಒಳ್ಳೇ ಕೆಲ್ಸಾ ಸಿಗದೇ ಹೋದ್ರೆ... ಅದೂ ಅಲ್ದೇ ಕೆಲ್ಸಾ ಇಲ್ಲೇ ಏನೂ ಸಿಗಬೇಕು ಅಂತಿಲ್ವಲ್ಲಾ, ಎಲ್ಲಿ ಬೇಕಾದ್ರೂ ಸಿಗಬಹುದು, ಈ ಮನೆ-ಮಠಾ-ಮೂವು ಇವೆಲ್ಲವನ್ನು ನೆನಸಿಕೊಂಡ್ರೆ ವೆಕೇಷನ್ನೇ ಬೇಡ ಅನ್ನಿಸಿಬಿಡುತ್ತೇ ನೋಡು.

ಆ ಧ್ವನಿ: ಸರಿ ಹೋಯ್ತು, ನಿನ್ನ ಬಿಟ್ರೆ ಬೇರೆ ಯಾರೂ ಕೆಲ್ಸಾ ಮಾಡ್ದಂಗೇ ಕಾಣ್ಸಲ್ಲ! ನನ್ನ ಕೇಳ್ದ್ರೆ ಹೋಗಿ ನಿನ್ನ ಹೊಸ ಬಾಸನ್ನೇ ಯಾಕ್ ಕೇಳ್‌ಬಾರ್ದೂ ಅಂತೀನಿ? ಹೋದ್ರೆ ಒಂದ್ ಕಲ್ಲು ಬಂದ್ರೆ ಒಂದ್ ಮಾವಿನ್‌ಕಾಯಿ ಏನಂತಿ?

ಈ ಧ್ವನಿ: ಅವನು ಇನ್ನೂ ಹೊಸಬಾ, ಅವನಿಗೂ ನನಗೂ ಇನ್ನೂ ಚೆನ್ನಾಗ್ ಪರಿಚಯನೇ ಇಲ್ಲ, ನಾನು ಮಾತೆತ್ತಿದ ಹೊಡೆತಕ್ಕೇ ದಿಢೀರಂತ ರಜಾ ಕೇಳಿದ್ರೆ ಅವನು ನನ್ನ ಮೇಲೆ ಏನು ಇಂಪ್ರೆಷ್ಷನ್ ಇಟ್ಕೋತಾನೆ? ಅವನಿಗೂ ಆ ಕೆಲ್ಸಾ ಮಾಡಿಸ್‌ಬೇಕ್, ಈ ಕೆಲ್ಸಾ ಮಾಡಿಸ್‌ಬೇಕ್ ಅಂತಾ ಇರೋದಿಲ್ವೇನು?

ಆ ಧ್ವನಿ: ಇದೊಳ್ಳೇ ಉಗುಳಕೂ ಬರ್‍ದೇ, ಇತ್ಲಾಗ್ ನುಂಗಕೂ ಬರ್‍ದೇ ಇರೋ ಗಂಟ್ಲಲ್ಲಿರೋ ಬಿಸೀ ತುಪ್ಪಾ ಆತಲ್ಲಪ್ಪಾ, ಹಿಂಗ್ ಮಾಡಿದ್ರೆ ಹೆಂಗೆ? ನೀನೊಂದು ಮೂರು ತಿಂಗಳು ಮರ್ವಾದಿಯಿಂದ ಮೈ ಬಗಸಿ ಕೆಲ್ಸಾ ಮಾಡಿ, ಎಲ್ರೂ ಮೆಚ್ಚೋ ಹಾಗಾದ್ ಮೇಲೆ ಅವರ ಹತ್ರ ನಿನಗ್ ಎಲ್ಲಿ ಯಾವ್ ಯಾವ ರಜಾ ಬೇಕೋ ಅದನ್ನೆಲ್ಲ ತಗೋ...

ಈ ಧ್ವನಿ: ಅದ್ನೂ ಯೋಚ್ನೇ ಮಾಡೀದೀನೋ, ಹಿಂಗೆ ಆರು ತಿಂಗ್ಳೂ, ಮೂರು ತಿಂಗ್ಳೂ ಅಂತ ಮುಂದ್ ಹಾಕ್ ಹಾಕೇ ಈಗ ಹತ್ ಹತ್ರಾ ನಾಲ್ಕು ವರ್ಷಾ ಆಗ್ತಾ ಬಂತು. ಈ ಮೇ-ಜೂನ್ ನಲ್ಲಿ ಪ್ರಾಜೆಕ್ಟೂ ಅಂತಾರೆ, ಆರು ತಿಂಗಳು ದುಡ್ದ ಮೇಲೆ, ಥ್ಯಾಂಕ್ಸ್ ಗೀವಿಂಗೂ, ಕ್ರಿಸ್‌ಮಸ್ಸೂ, ರೇಟಿಂಗೂ-ರ್‍ಯಾಂಕಿಂಗೂ, ಬೋನಸ್ಸೂ ಮಣ್ಣೂ-ಮಸಿ ಅಂತ ತಲೆ ತಿಂತಾರೆ, ಈಗ ಹೋಗ್ದೇ ಇದ್ರೇ ಇನ್ನೊಂದ್ ವರ್ಷ ಹೋಗೋಕೆ ಆಗೋದಿಲ್ವೇನೋ ಅಂತ ಅನ್ನಿಸಿಬಿಟ್ಟಿದೆ!

ಆ ಧ್ವನಿ: ಅಯ್ಯೋ ಇವ್ನಾ, ಮುಂದ್ ಯಾವಾಗೋ ಬರೋ ರೊಕ್ಕದ್ ಆಸೀಗೆ ಇವತ್ತೇ ತಲಿ ಕೆಡಿಸ್ಕ್ಯಣಕಾಗ್ತತಾ?

ಈ ಧ್ವನಿ: ಬರೀ ದುಡ್ಡಿನ ವಿಚಾರ ಅಷ್ಟೇ ಅಲ್ಲ, ನನ್ನ ಮುಂದಿನ ಪ್ರಮೋಷನ್ನು ನಾನು ಈ ವರ್ಷ ಏನೇನ್ ಮಾಡ್ದೇ ಅನ್ನೋದ್ರ ಮೇಲೇನೆ ನಿರ್ಧಾರ ಆಗುತ್ತೆ, ಅಂತಾದ್ದರಲ್ಲಿ...

ಆ ಧ್ವನಿ: ಸುಮ್ಕಿರೋ ಸಾಕು, ಈ ಬಂಡ್‌ಬಾಳ್ವೆ ಯಾವನಿಗ್ ಬೇಕು, ಯಾವಾಗ್ ನೋಡಿದ್ರು ಸೋನೀಮಳಿ ಥರಾ ಕುಯ್ ಅಂತ ಅಂತಾನೇ ಇರ್ತಿ, ಹಿಂಗಾದ್ರೆ ಹಂಗೆ, ಹಂಗಾದ್ರೆ ಹಿಂಗೆ! ಇಂಥಾವ್ನೆಲ್ಲಾ ಯೋಚ್ನೇ ಮಾಡ್ ಮಾಡೇ ನಿಮ್ ತಲೀ ದೊಡ್ಡದಾಗೋದು, ನಮ್ಮಂಗ ಅವತ್ತಿನ್ ಕೆಲ್ಸಾ ಅವತ್ತ್ ಮಾಡಿಕ್ಯಂಡ್ ಇದ್ದಿದ್ರ ನೋಡ್ ತಮ್ಮಾ ಅದ್ರ ಮಜಾನೇ ಬ್ಯಾರೆ.

ಈ ಧ್ವನಿ: ...

ಆ ಧ್ವನಿ: ಅಷ್ಟೂ ಮಾಡಿ, ನಿನಗೇನ್ ಅಂಥಾ ದಾವಂತ ಊರಿಗ್ ಹೋಗ್‌ಬೇಕು ಅನ್ನಿಸಿರೋದು? ಇಲ್ಲೇನೂ ಅಂತಾದ್ ಹಾರಿ ಏನೂ ಹೋಗ್ತಾ ಇಲ್ವಲ್ಲಾ?

ಈ ಧ್ವನಿ: ಹಾರೇನೂ ಹೋಗ್ತಾ ಇಲ್ಲ, ನಾನು ಪ್ರತೀ ಸರ್ತಿ ಬಂದು ಮತ್ತೆ ವಾಪಾಸ್ಸು ಹೋಗೋದ್ರೊಳಗೆ ಎಷ್ಟೋ ಜನ ಸತ್ತಿರ್ತಾರೆ, ಎಷ್ಟೋ ಜನ ಹುಟ್ಟಿರ್ತಾರೆ, ಈ ಬದಲಾವಣೆಗಳಲ್ಲೆಲ್ಲ ನಾನೂ ಅಂತ ಇಲ್ಲದೇ ಹೋದ್ರೆ ಇದ್ರೆಷ್ಟು ಬಿಟ್ರೆಷ್ಟು ಅನ್ನಿಸಿಬಿಡುತ್ತೆ ನೋಡು...

ಆ ಧ್ವನಿ: ಅಯ್ಯೋ ಹುಚ್ಚಾ, ತೆಗೀ-ತೆಗೀ, ನಿನ್ನ ಕಷ್ಟಾ ಸುಖ ನೋಡೋಕೆ ಅವ್ರಿವ್ರು ಬರೋ ಕಾಲಾ ಯಾವಾಗೋ ಹೋಯ್ತು, ಇತ್ಲಾಗೆಲ್ಲ ನಮ್ಮ್ ಹಳ್ಳೀಗೂ ಪಟ್ನದ್ ಗಾಳಿ ಸುಳ್ದ್ ಬಿಟ್ಟೈತೆ, ಯಾವನೂ ಯಾರೀಗೂ ಕ್ಯಾರೇ ಅನ್ನಂಗಿಲ್ಲ, ಅವರವರ್ದು ಅವರಿಗೆ.

ಈ ಧ್ವನಿ: ಹಂಗೇನಿಲ್ಲಾ, ಎಷ್ಟೇ ಅಂದ್ರೂ ನಮ್ಮೂರು ನಮ್ಮೂರೇ. ಬದಲಾವಣೆ ಅನ್ನೋದ್ ಯಾರನ್ನ್ ಬಿಟ್ಟಿದೆ? ಏನೇ ಆದ್ರೂ ನಮ್ಮೂರಿಗೆ ಹೋಗಿ ಇದ್ರೆ ಅದರ ಸುಖಾನೇ ಬೇರೆ ಬಿಡು.

ಆ ಧ್ವನಿ: ನಿನಗೇನಪಾ, ಯಾವಾಗೋಮ್ಮಿ ಬರ್ತೀ, ಹೋಗ್ತೀ, ಎಲ್ಲವೂ ಚೆಂದ್ ಕಾಣ್ತದ, ನಮಿಗಂತೂ ಏನೂ ಗೊತ್ತಾಗಂಗಿಲ್ಲ. ನಿಮ್ಮಂತೋರು ಹೇಳಿದ್ದನ್ನ ಖರೆ ಅಂತ ನಂಬ್ದೇ ವಿಧೀ ಇಲ್ಲ.

ಈಗ ನೀನ್ ಊರಿಗೆ ಬರೋ ವಿಷ್ಯಕ್ಕೆ ಬರೋಣ, ಸಮಸ್ಯಾ ಎಂಥಾದಾರಾ ಇರ್‍ಲಿ, ಅದನ್ನ ನೇರ್‌ವಾಗೇ ಧೈರ್ಯದಿಂದ ಎದುರುಸ್‌ಬೇಕು ಅಂತ ಕರಡಯ್ಯ ಮೇಷ್ಟ್ರು ಹೇಳ್‌ತಿರಲಿಲ್ಲಾ? ಅವನೌನ್ ಆಗಿದ್ ಆಗ್ಲೀ ಹೋಗಿದ್ ಹೋಗ್ಲಿ ಅಂತ ನಿನ್ನ ಹೊಸ ಬಾಸಿಗೆ ನೀನು ಮೂರು ವಾರಕ್ಕ್ ಊರಿಗ್ ಹೋಗೋ ವಿಷ್ಯಾ ತಿಳಿಸ್‌ಬಿಡು, ಅವ ಹೂಂ ಅಂದ್ರೆ ಇತ್ಲಾಗ್ ಬಾ ಇಲ್ಲಾಂದ್ರ ಅಲ್ಲೇ ಕೊಳೀ. ನನ್ ತಲೀ ಮಾತ್ರ ತಿನ್ನಬ್ಯಾಡ.

ಈ ಧ್ವನಿ: ಇಲ್ಲೆಲ್ಲಾ ವೆಕೇಷನ್ನೂ ಅಂತ ರಜಾ ತಗೊಂಡ್ರೆ ಒಂದ್ ವಾರ ಹೆಚ್ಚಂದ್ರೆ ಎರಡು ವಾರ ತಗೋತಾರೋ, ನಾನೂ ಹಂಗೇ ಮಾಡ್ಲಾ ಅಂತಾ ಯೋಚ್ನೆ ಬಂತು.

ಆ ಧ್ವನಿ: ಥೂ ನಿನ್ನ, ಹಂಗೇನಾರಾ ಮಾಡಿ ಮತ್ತ, ಅದ್ಯಾವ್ದೋ ಭಾಗ್ಯಕ್ಕೆ ದೇಸಾ ಬಿಟ್ಟ್, ಬಾಸೇ ಬಿಟ್ ಹೋಗೋದೂ ಅಲ್ದೇ, ಬದುಕೋ ರೀತೀನೂ ಅವರ್ ಥರಾನೇ ಬದಲಾಯಿಸ್‌ಕೊಳ್ಳೋ ಅದೆಂಥಾ ಭಂಡ್‌ತನಾ ಅಂತೀನಿ? ಎಲ್ಲಿ ಕೆಲ್ಸಾ ಮಾಡಿದ್ರೂ ನಮ್-ನಮ್ ಥರಾನೇ ಇರಾಕ್ಕಾಗಲ್ಲೇನು? ಇಂಥಾದ್ರಗೆಲ್ಲ ಈ ಸಾಬ್ರೇ ಮೇಲ್ ನೋಡು - ಎಲ್ಲಿ ಹೋದ್ರೂ ತಮ್ ತನಾ ಅನ್ನೋದು ಬಾಳ ದೊಡ್ದು ಅವ್ರಿಗೆ.

ಈ ಧ್ವನಿ: ಒಂದ್ಸರ್ತಿ ನೋಡಿದ್ರೆ ಹೋದಲ್ಲಿ ಬಂದಲ್ಲಿ ಹೊಂದ್‌ಕೋ ಅಂತಿ, ಈಗ ನೋಡಿದ್ರೆ ನಿನಗ್ ಬಂದಂಗ್ ಬದುಕೂ ಅಂತೀ, ನಿನ್ನ ಹತ್ರಾ ಯಾವನ್ ಮಾತಾಡ್‌ತಾನೋ?

ಆ ಧ್ವನಿ: ಮತ್ತಿನ್ನೇನು, ಅಲ್ಲಿ ಕೆಲ್ಸಾ ಮಾಡೋರ್ ರಜಾ ತಗೊಂಡು ನಿನ್ನ ಥರಾ ಏಳ್ ಸಮುದ್ರಾ ಹಾರಿ ಬರಂಗಿಲ್ಲ, ಅಲ್ಲೇ ನೆಂಟ್ರೂ ಮನೀಗೋ ಮತ್ತೇಲ್ಲೋ ಹೋಗ್ತಾರೆ, ನೀನು ಇಷ್ಟೊಂದು ದುಡ್ ಖರ್ಚ್ ಮಾಡಿ, ಮೂರು ವರ್ಷಕ್ಕೊಮ್ಮಿ ನಾನ್ ಬದುಕೇನಿ ಅಂತ ಮುಖಾ ತೋರ್‌ಸೋಕ್ ಬರೋ ಮನ್ಷಾ, ಬರೀ ನಾಕೇ ದಿನ ಇದ್ದ್ ಹೋದ್ರೇ ಅದರಾಗೇನೂ ಮಜಾ ಇರಂಗಿಲ್ಲ. ಕೊನೀಪಕ್ಷ ಇಲ್ಲಿಗೆ ಬಂದಷ್ಟು ದಿನಾನಾದ್ರೂ ಅಲ್ಲೀದ್ ಮರ್‍ತು ಹಾಯಾಗಿ ಇದ್ರಂದ್ರ ನಿನಗೂ ಒಳ್ಳೇದು ಮಂದಿಗೂ ಒಳ್ಳೇದು.

ಈ ಧ್ವನಿ: ಇರ್ಲಿ ಬಿಡು ಏನೋ ಒಂದು ಆಗುತ್ತೆ ನೋಡೋಣ. ಈ ವರ್ಷ ಮೈಲಾರಲಿಂಗನ ಜಾತ್ರಿಗೇನಾದ್ರೂ ಹೋಗಿದ್ಯಾ? ಯಾರ್ ಯಾರು ಹೋಗಿದ್ರೀ?

ಆ ಧ್ವನಿ: ನನೀಗೆ ಸುತ್ತೀ ಬಳ್ಸೀ ಹೇಳಕ್ ಬರಂಗಿಲ್ಲ, ನೀನು ಮನಸಿನ್ಯಾಗೆ ಮಂಡಗೀ ತಿನ್ನೋದ್ ಕಡಿಮಿ ಮಾಡಿ ಜವಾಬ್ದಾರೀಂದ ಸ್ವಲ್ಪ ಒಂದು ಬದೀಗೆ ಬರೋಕ್ ನೋಡು, ಎತ್ಲಾಗ್ ಬಂದ್ರೂ ಒಂದಿಲ್ಲೊಂದು ಕಳಕೊಳ್ಳೋದ್ ಇದ್ದೇ ಇರ್ತತಿ, ಕಳಕೊಂಡಿದ್ದಕ್ ಚಿಂತೀ ಮಾಡೋದ್ ಬಿಟ್ಟು, ಪಡಕೊಂಡಿದ್ದರ ಬಗ್ಗೆ ಯೋಚ್ಸೋದು ನನ್ನ್ ಪ್ರಕಾರ ಜಾಣ್‌ತನಾನಪ್ಪಾ.
ಮೈಲಾರ್ ಲಿಂಗನ್ ಜಾತ್ರೀ ಬಗ್ಗೀ ಕೇಳ್ದಿ, ಅದು ಎಲ್ಲಿ ಯಾವತ್ತ್ ನಡೀತತಿ ಅಂತಾನಾರೂ ನೆನಪೈತಾ ನಿನಗಾ? ಈ ಸಾರಿ ನಾನೂ-ಮಂಜಣ್ಣನೂ ಹೋಗಿದ್ವು, ಭಾಳ್ ಚಂದಿತ್ತು. ನಿನ್ ಸುದ್ದೀನೂ ಬಂತು, ಮಂಜಣ್ಣ ನಿನ್ ಹೆಸ್ರು ಕೇಳಿದ್ದೇ ಜೋರಾಗಿ ನಕ್ಕ, ನಿನ್ ಹೆಸ್ರ್‌ನ್ಯಾಗೆ ಅಂತ ಸ್ವಲ್ಪ ದುಡ್ಡೂ ಹಾಕಿದ್ವಿ ಅನ್ನೂ.


ಈ ಧ್ವನಿ: ಸರಿ ಬಿಡು, ಮತ್ತೇನಾದ್ರೂ ವಿಷ್ಯಾ ಇಲ್ಲಾಂದ್ರೆ ಮತ್ತ ಮಾತಾಡೋಣಂತೆ, ನಾನು ಯಾವ್ದುಕ್ಕೂ ಈ ವರ್ಷಾ ಬರ್ತೀನೋ ಇಲ್ವೋ ಅಂತ ಗ್ಯಾರಂಟೀ ಹೇಳ್ತೀನಿ ಇನ್ನೊಂದೆರಡು ವಾರದೊಳಗೆ.

ಆ ಧ್ವನಿ: ಸರಿನಪ್ಪಾ, ಏನರಾ ಮಾಡು, ನನ್ನ ಮಾತ್ರ ಮರೀಬ್ಯಾಡ.

ಈ ಧ್ವನಿ: ಸರಿ, ಎಲ್ಲರನ್ನೂ ಕೇಳ್ದೇ ಅಂತ್ ಹೇಳು.

No comments: