ಕುಮರೇಸನ್-ಮೈಕ್ರೋವೇವ್ ಮೊಟ್ಟ ಮೊದಲ ಮುಖಾಮುಖಿ
ಬಾಂಬೆಯ ಡೇಟಾಮ್ಯಾಟಿಕ್ಸ್ ಕಂಪನಿಯಿಂದ ಒಂದು ವಿಮಾನದಲ್ಲಿ ಒಟ್ಟಿಗೆ ಬಂದವರೆಂದರೆ: ಮಹಾರಾಷ್ಟ್ರದಿಂದ ಶ್ರೀನಿವಾಸ, ತಮಿಳುನಾಡಿನಿಂದ ಕುಮರೇಸನ್ ಮತ್ತು ಕರ್ನಾಟಕದಿಂದ ನಾನು!
ಇದು ನಮ್ಮ ಮೊದಲ ವಿಮಾನ ಪ್ರಯಾಣವೂ, ಮೊದಲ ಅಂತಾರಾಷ್ಟ್ರೀಯ ಪ್ರಯಾಣವೂ ಆದ್ದರಿಂದ ನಮಗೆಲ್ಲ ನಮ್ಮದೇ "ತಲೆಬಿಸಿ"ಯಾಗಿತ್ತು. ನಮ್ಮ ಸೂಟ್‌ಕೇಸ್‌ಗಳಲ್ಲಿ ಅನೇಕಾನೇಕ ವಸ್ತುಗಳನ್ನು ತಂದಿದ್ದೆವು. ನಮ್ಮ ಕುಮರೇಸನ್ ಅಂಥವರು ಮೂರು ಕೆ.ಜಿ. ಅಕ್ಕಿ ತಂದಿದ್ದೂ ನನಗಿನ್ನೂ ಚೆನ್ನಾಗಿ ನೆನಪಿದೆ.
"ಅಂತಾರಾಷ್ಟ್ರೀಯ ಪ್ರಯಾಣ ಮಾಡಿ ಸುಸ್ತಾಗಿದೆ, ಎಲ್ಲರೂ ಚೆನ್ನಾಗಿ ರೆಸ್ಟ್ ತೆಗೆದುಕೊಳ್ಳಿ, ಸೋಮವಾರದಿಂದ ಕ್ಲೈಂಟ್ ಇಂಟರ್‌ವ್ಯೂಗಳು ಶುರುವಾಗುತ್ತೆ" ಅಂತ ಹೇಳಿ ನಮ್ಮಷ್ಟಕ್ಕೆ ನಮ್ಮನ್ನು ನಮ್ಮ ಮೊದಲ ವಾರಾಂತ್ಯದಲ್ಲಿ ಬಿಟ್ಟಿದ್ದರು. ನಮಗೆಲ್ಲ ಬಾತ್‌ರೂಮಿನಲ್ಲಿ ತಿರುಗಿಸಿದರೆ ಹೇಗೆ ಬಿಸಿನೀರು ಬರುತ್ತದೆ. ಆಟ್ಯಾಚ್ಡ್ ಅಡುಗೆ ಮನೆಯಲ್ಲಿರುವ ಮಿಷನ್ನುಗಳನ್ನು ಹೇಗೆ ಬಳಸೋದು? ಕಾಫಿ ಹೇಗೆ ಮಾಡುವುದು. ಪ್ರಿಜ್ ಇಷ್ಟು ದೊಡ್ದದು ಇರುತ್ತದೆಯೇ? ಹೀಗೆ ಅನೇಕ ಸೋಜಿಗಗಳು ಎದುರಾಗುತ್ತಿದ್ದವು. ನಾನೂ ಶ್ರೀನಿವಾಸನೂ ನಮಗೆ ಗೊತ್ತಿರದ ಮಿಷೀನುಗಳ ಉಸಾಬರಿ ಬೇಡ ಎಂದು ಹೊರಗಿನಿಂದ ತಂದ ಊಟವನ್ನು ತಿನ್ನುತ್ತಿದ್ದೆವು. ಹೆಚ್ಚೆಂದರೆ, ಕಾಫಿಮೇಕರ್‌ನಲ್ಲಿ ಕಾಫಿ ಮಾಡಿಕೊಳ್ಳುತ್ತಿದ್ದೆವು. ಆದರೆ, ಅದರಿಂದ ಹೊರಬಂದ ಕಪ್ಪು ಬಣ್ಣದ ಕಾಫಿ ನಮ್ಮ ಕಡೆಯ ಡಿಕಾಕ್ಷನ್‌ನಂತೆಯೂ ಬಳಸಲಾಗದೇ, ಈ ಕಡೆ ನೇರವಾಗಿ ಅದನ್ನೇ ಹಾಲು-ಸಕ್ಕರೆಯನ್ನು ಹಾಕಿ ಕುಡಿಯಲಾಗದೇ ಬಳಲಾಡಿದ್ದೆವು... ಹೊರಗಿನ ಸ್ಟಾರ್‌ಬಕ್ಸ್ ಅಂತಹ ಅಂಗಡಿಯಲ್ಲಿ ದೊರೆತ ಕಾಫಿಯೂ ನಮ್ಮ ಕಾಫಿಯ ದಾಹವನ್ನು ನೀಗಿಸಿರಲಿಲ್ಲ... ಇಲ್ಲಿಗೆ ಬಂದ ಎರಡೇ ದಿನಗಳಲ್ಲಿ ನಾಲಿಗೆ ರುಚಿಯನ್ನು ಗುರುತಿಸಲಾರದಷ್ಟು ಕೆಟ್ಟು ಹೋಗಿತ್ತು.
ನಾವು ಮೂರು ಜನರಿಗೆ ಮೂರು ರೂಮುಗಳನ್ನು ಕೊಟ್ಟಿದ್ದರೂ, ನಾವೆಲ್ಲರೂ ದಿನದ ಹೆಚ್ಚು ಪಾಲು ಯಾವುದಾದರೊಂದು ರೂಮಿನಲ್ಲಿ ಇರುತ್ತಿದ್ದುದೇ ಹೆಚ್ಚು. ಇಂತಹ ಸಂದರ್ಭದಲ್ಲಿ ಕುಮರೇಸನ್ ಸ್ಥಳೀಯ ಸೂಪರ್ ಮಾರ್ಕೆಟ್‌ಗೆ ಹೋಗಿ ತರಾವರಿ ಸಾಮಾನುಗಳನ್ನು ತಂದು ಎಕ್ಸ್‌ಪೆರಿಮೆಂಟ್ ಮಾಡುವ ಹುನ್ನಾರದಲ್ಲಿದ್ದನು. ನಾನು ಮತ್ತು ಶ್ರೀನಿವಾಸನು ಬೇಡವೆಂದರೂ ಅವನದ್ದು ಒಂದೇ ಹಠ. ಎಷ್ಟೇ ಅಂದರೂ ಇಂಜಿನಿಯರ್ ಅಲ್ಲವೇ? ಟಿವಿ ಚಾನೆಲ್ಲುಗಳನ್ನು ಒಂದು ಕಡೆಯಿಂದ ಹಾಕಿಕೊಂಡು ಬರುವುದು. ಸ್ಟೋವ್‌ನಲ್ಲಿ ಎಲ್ಲ ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ? ಇಲ್ಲಿ ಕುಕಿಂಗ್ ಗ್ಯಾಸ್ ಹೇಗೆ ಪೈಪುಗಳಲ್ಲಿ ಎಲ್ಲಿಂದ ಬರುತ್ತದೆ? ಕಾಫಿ ಪುಡಿ ಪ್ಯಾಕೆಟ್ ಒಡೆದು ನೋಡಿದರೆ ಹೇಗಿರುತ್ತದೆ? ಇವರ ಪುಡಿಯನ್ನು ಬಳಸಿ ನಾವು ಡಿಕಾಕ್ಷನ್ ಯಾಕೆ ಮಾಡಬಾರದು? ಮೈಕ್ರೋವೇವ್ ಹೇಗೆ ಕೆಲಸ ಮಾಡುತ್ತದೆ? ಇತ್ಯಾದಿ ಇತ್ಯಾದಿ.
ಹೀಗಿದ್ದವನು, ಒಂದಿಷ್ಟು ಸಾಮಾನುಗಳನ್ನು ತೆಗೆದುಕೊಂಡು ಬಂದು ಫ್ರಿಜ್ ತುಂಬ ತುಂಬಿಸಿಕೊಂಡ... ನಾವು ಅವನ ಜೊತೆ ಕೈ ಜೋಡಿಸಿ ಒಂದಿಷ್ಟು ಪ್ರಯೋಗಳಿಗೆ ಸಾತ್ ಕೊಡತೊಡಗಿದೆವು.
ಹೀಗಿರುವಾಗ... ಕುಮರೇಸನ್ ಒಂದು ದಿನ ಅಭೂತಪೂರ್ವ ಐಡಿಯಾವೊಂದನ್ನು ಕಂಡು ಹಿಡಿದವನಂತೆ ನನ್ನ ರೂಮಿಗೆ ಓಡಿಬಂದ... "ನಿನಗ್ಗೊತ್ತಾ ಮೈಕ್ರೋವೇವ್‌ನಲ್ಲಿ ಮೊಟ್ಟೆ ಬಿಸಿಮಾಡಬಹುದು!" ನಾನೂ-ಶ್ರೀನಿವಾಸನೂ ಅಂಗಾಲಾಚಿದೆವು... ನಮಗಿಬ್ಬರಿಗೂ ಸಹ ಮೊಟ್ಟೆಯ ಮೇಲಾಗಲೀ ಕೋಳಿಗಳ ಮೇಲಾಗಲಿ ವಿಶೇಷವಾದ ಅಸ್ತೆ ಏನೂ ಇಲ್ಲವಾದ್ದರಿಂದ ನಾವು ಗಲಿಬಿಲಿಗೊಂಡು ಎಂದಿನಂತೆ ನಮ್ಮ risk averse ಭಾಷೆಯಲ್ಲಿ "ಬೇಡ, ಗುರೂ!" ಎಂದು ಹೇಳಿದರೂ ಅವನು ಸುಮ್ಮನಾಗಲಿಲ್ಲ... ಮರಾಠಿಗರಿಗೆ, ಕನ್ನಡಿಗರಿಗೆ ಇಲ್ಲದ ಮೊಂಡು ಧೈರ್ಯ ತಮಿಳಿಗರಿಗೆ ಎಂದು ಅವತ್ತೇ ಗೊತ್ತಾಗಿದ್ದು!
ಅವನು ಮೈಕ್ರೋವೇವ್‌ನ ಒಳಗೆ ಒಂದು ಪಿಂಗಾಣಿ ಪಾತ್ರೆಯಲ್ಲಿ ಮೊಟ್ಟೆಯನ್ನು ಇಟ್ಟನೋ, ಅಥವಾ ಸುಮ್ಮನೇ ಒಳಗೇ ತಿರುಗುವ ಗ್ಲಾಸ್ ಮೇಲೆ ಇಟ್ಟನೋ ಗೊತ್ತಿಲ್ಲ... ಆದರೆ, ಅದರ ಸ್ವಿಚ್ ಅನ್ನು ತಿರುಗಿಸಿ ಡುರ್‌ರ್ ಎಂದು ಸೌಂಡು ದೊಡ್ಡದಾಗಿ ಬರುವಂತೆ ಏನೇನೋ ಬಟನ್ನುಗಳನ್ನು ಒತ್ತುತ್ತಿದ್ದ. ಜೊತೆಗೆ ತನ್ನ ತಲೆಯನ್ನು ಅತ್ತಿಂದಿತ್ತ ಅಲ್ಲಾಡಿಸುತ್ತಾ ಒಳಗೇನಾಗುತ್ತಿದೆ ಎಂದು ನೋಡ ತೊಡಗಿದ್ದ... ನಮಗೆ ಆಗಲೇ ಗೊತ್ತಾಗಿದ್ದು... ಈ ಮೈಕ್ರೋವೇವ್-ಅವನ್ ಒಳಗೆ ನೇರವಾಗಿ ನೋಡಿದರೆ ಅದರ ಬಾಗಿಲಿನ ಮುಖೇನ ಸರಿಯಾಗಿ ಕಾಣದಿದ್ದುದು ಆ ಕಡೆ-ಈ ಕಡೆ ತಲೆಯನ್ನು ಅಲ್ಲಾಡಿಸುತ್ತಾ ನೋಡಿದರೆ ಸರಿಯಾಗಿ ಕಾಣುತ್ತದೆ ಎಂದು.
ಇವನದ್ದು ಯಾವಾಗಲೂ ಒಂದು ಕಥೆ ಇದ್ದೇ ಇರುತ್ತೆ... ಎಂದು ನಾನೂ-ಶ್ರೀನಿವಾಸನೂ HBO ಚಾನೆಲ್ ನಲ್ಲಿ ಯಾವುದೋ ಸಿನಿಮಾವನ್ನು ನೋಡುವುದರಲ್ಲಿ ಮಗ್ನರಾದೆವು. ಒಂದೈದು ನಿಮಿಷವಾಗುವುದರ ಒಳಗೆ ಕುಮರೇಸನ್ ಹೌಹಾರಿ ಬೀಳುವಂತೆ ಮೈಕ್ರೋವೇವ್ ಡಬ್ ಎಂದು ಜೋರಾಗಿ ಸದ್ದು ಮಾಡಿ ಅದರ ಬಾಗಿಲು ಒಳಗಿನ ಪ್ರೆಶರ್‌ನಿಂದ ಜೋರಾಗಿ ತೆಗೆದುಕೊಂಡು ಕುಮರೇಸನ್ ಹಣೆಗೆ ಬಂದು ಬಡಿಯಿತು... ಒಳಗಡೆ ಕುದಿಯುತ್ತಿದ್ದ ಮೊಟ್ಟೆ ಪೀಸುಪೀಸಾಗಿ ಎಲ್ಲ ಕಡೆಗೆ ಹಾರಿ ಹರಡಿಕೊಂಡಿತು... ಇಡೀ ರೂಮೆಲ್ಲ ಒಂದು ರೀತಿಯ ಹೈಡ್ರೋಜನ್ ಸಲ್ಫೈಡ್ ವಾಸನೆ ಹರಡುತ್ತಾ ಕೆಮಿಸ್ಠ್ರಿ ಲ್ಯಾಬ್ ಅನ್ನು ನೆನಪಿಗೆ ಬಂದಿತು.
ಇಲ್ಲೇ ನೋಡಿ ನನಗೆ ಮಾನವತೆಯ ಮೂಲ ಮಂತ್ರವಾದ ಸಹಾಯ ಮನೋಭಾವನೆಯ ಬಗ್ಗೆ ಮರುಕಬಂದಿದ್ದು! ಕುಮರೇಸನ್ ಹಣೆಗೆ ಬಾಗಿಲು ಅಪ್ಪಳಿಸಿ ಅಲ್ಲಿ ಅರ್ಧ ಮೊಟ್ಟೆಯ ಗಾತ್ರದ ಉಬ್ಬು ಬಂದಿತ್ತು... ನಾನೂ-ಶ್ರೀನಿವಾಸನೂ ಸೋಫಾದಿಂದ ಒಮ್ಮೆ ಹಾರಿ ಕುಳಿತು ಇವನ ಅವಾಂತರವನ್ನು ನೋಡಿ ಜೋರಾಗಿ ನಗತೊಡಗಿದೆವು... ಮನುಷ್ಯನ ಆಳವಾದ ಮನಸ್ಸಿನಲ್ಲಿ ಅದೇನು ತಳಮಳಗಳಿರುತ್ತವೆಯೋ ಯಾರು ಬಲ್ಲರು? ಇಲ್ಲವಾದರೆ ಒಬ್ಬರ ಸಂಕಷ್ಟ ಮತ್ತೊಬ್ಬರಿಗೆ ಅದು ಹೇಗೆ ನಗು ತರಿಸಲು ಸಾಧ್ಯ?
ಕುಮರೇಸನ್ ಪರಿಸ್ಥಿತಿ ಗಂಭೀರವಾಗಿತ್ತು - ಗಂಡ ಸತ್ತ ದುಃಖ ಒಂದು ಕಡೆ, ಬಡ್ ಕೂಪಿನ ಉರಿ ಮತ್ತೊಂದು ಕಡೆ ಎಂದು ಹೇಳುತ್ತಾರಲ್ಲ, ಹಾಗೆ. ಈ ಕಡೆ ಮೊಟ್ಟೆ ಬೇಯಲಿಲ್ಲ, ಹಣೆ ಮೇಲೆ ಉಬ್ಬು ಬಂದು ಕುಳಿತಿದೆ... ರೂಮೆಲ್ಲಾ ಮೆಸ್ ಆಗಿದೆ, ಎಲ್ಲಾ ಕಡೆ ಸೀದು ಹೋದ ವಾಸನೆ ಬೇರೆ ಬರುತ್ತಿದೆ... ಇದನ್ನೆಲ್ಲ ಕ್ಲೀನು ಮಾಡುವುದು ಹೇಗೆ, ಯಾವಾಗ? ಇನ್ಯಾವತ್ತೂ ಈ ಮೈಕ್ರೋವೇವಿನ ಸಹವಾಸ ಬೇಡಪ್ಪಾ ಎನ್ನುವ ದಯನೀಯ ಸ್ಥಿತಿ ಅವನದಾಗಿತ್ತು... ಮೂರೂ ಜನ ಸೇರಿ ರೂಮನ್ನು ಕ್ಲೀನು ಮಾಡಿದರೂ, ಮಾರನೇ ದಿನ ಕ್ಲೀನಿಂಗ್ ಕ್ರೂ ಬಂದು ಕ್ಲೀನ್ ಮಾಡಿದರೂ ಒಂದು ವಾರದ ಮಟ್ಟಿಗಾದರೂ ಆ ವಾಸನೆ ಇತ್ತು... ವಾಸನೆಯ ನೆನಪು ಹಾಗಿರಲಿ, ಈ ಪ್ರಕರಣವನ್ನು ನೆನೆಸಿಕೊಂಡರೆ ಇಪ್ಪತ್ತು ವರ್ಷಗಳ ನಂತರವೂ ನಗು ಉಕ್ಕಿ ಬರುತ್ತದೆ!