Wednesday, May 06, 2020

ಗೌಡರು ಚಹಾ ಪುಡಿ ಕದ್ದ ಪ್ರಸಂಗವು...

ಇದು ಮೂರು ದಶಕಗಳ ಹಳೆಯ ಕಥೆಯಾದರೂ ಇವತ್ತಿಗೂ ನಮ್ಮನೆಯಲ್ಲಿ ನಗೆ ಉಕ್ಕಿಸುತ್ತದೆ.  ಮೊನ್ನೆ ಕೊರೋನಾ ವೈರಸ್ ಸ್ಪೆಷಲ್ ಎಂದು ನಮ್ಮ ಹಳವಂಡಗಳನ್ನೆಲ್ಲ ಹರಡಿಕೊಂಡು ಅಕ್ಕ-ತಮ್ಮ ಮಾತನಾಡುತ್ತಿದ್ದಾಗ, ಅಲ್ಲಿಯೂ ನುಸುಳಿತು, ಈ ಚಹಾ ಪುಡಿಯ ಕಥೆ... ಇದನ್ನು ನೆನಪಿಸಿಕೊಂಡಾಗಲೆಲ್ಲ ಇವತ್ತಿಗೂ ನಮ್ಮಲ್ಲಿ ನಗೆ ಉಕ್ಕಿಸುವುದು ಖಂಡಿತ.

***

ನನ್ನ ಅಕ್ಕ ಆನವಟ್ಟಿಯಿಂದ ಹನ್ನೆರೆಡು ಕಿಲೋ ಮೀಟರ್ ದೂರದ ಜಡೆ ಗ್ರಾಮದಲ್ಲಿ ಟೀಚರ್ ಆಗಿ ನೇಮಕಗೊಂಡಾಗ, ಪ್ರತಿನಿತ್ಯವೂ ಬಸ್ಸಿನಲ್ಲಿ ಹೋಗಿ ಬರುವ ಕಷ್ಟವೇಕೆ ಎಂದು ಅಲ್ಲಿಯೇ ಒಂದು ಬಾಡಿಗೆ ಮನೆ ಮಾಡಿಕೊಂಡು ಇದ್ದಳು.  ಆಗೆಲ್ಲಾ ಬಸ್ಸುಗಳ ಅನುಕೂಲ ಅಷ್ಟು ಇರಲಿಲ್ಲ.  ಬಸ್ಸುಗಳ ಅನುಕೂಲವಿದ್ದರೂ ಹನ್ನೆರಡು ಕಿಲೋಮೀಟರ್ ಅನ್ನು ಕಾಲುನಡಿಗೆಯಲ್ಲಿ ಎರಡೂ ಕಾಲು ಘಂಟೆಯೊಳಗೆ ಕ್ರಮಿಸಬಹುದಿತ್ತು, ಅದೇ ದೂರಕ್ಕೆ ಬಸ್ಸಿನಲ್ಲಿ ಮೂರು ಘಂಟೆಗಳ ಕಾಲ ತೆಗೆದುಕೊಳ್ಳುತ್ತಿತ್ತು.  ಅಲ್ಲದೇ ಎರಡು ಬಸ್ಸುಗಳನ್ನು ಬದಲಾಯಿಸಬೇಕಾಗಿತ್ತು: ಆನವಟ್ಟಿಯಿಂದ ತವನಂದಿಗೆ ಒಂದು, ತವನಂದಿಯಿಂದ ಜಡೆಗೆ ಹೋಗುವ ಬಸ್ಸು ಮತ್ತೊಂದು.

ಮನೆ ಅಂದ ಮೇಲೆ ಒಂದಿಷ್ಟು ಪಾತ್ರೆ-ಪಡಗ ಇವೆಲ್ಲ ಇರಬೇಕಾದ್ದೆ.  ಅಡುಗೆ ಮಾಡಿಕೊಳ್ಳುತ್ತೇವೆ ಎಂದ ಮೇಲೆ, ಎಲ್ಲ ಸೌಲಭ್ಯಗಳ ಜೊತೆಗೆ ಕಾಫಿ-ಟೀ ಮಾಡಿಕೊಳ್ಳುವುದಕ್ಕೂ ಅನುಕೂಲವಿಲ್ಲದಿದ್ದರೆ ಹೇಗೆ? ಈ ರೀತಿ, ನನ್ನ ಅಕ್ಕ ಒಂದು ಸಣ್ಣ ಕುಟುಂಬಕ್ಕೆ ಎಷ್ಟು ಬೇಕೋ ಅಷ್ಟು ಸಾಮಾನುಗಳ ಜೊತೆಗೆ ಒಂದು ಸಣ್ಣ ವ್ಯವಸ್ಥಿತ ಕುಟುಂಬಕ್ಕೆ ಏನೇನು ಬೇಕೋ ಅಷ್ಟನ್ನೂ ಹೊಂದಿಸಿಕೊಂಡು ನೆಮ್ಮದಿಯಿಂದ ಇದ್ದಳು.

ಹೀಗಿರುವಾಗ ಒಂದು ಸಣ್ಣ ತೊಂದರೆ ಕಾಣಿಸಿಕೊಳ್ಳತೊಡಗಿತು.  ಆಗಿನ ಕಾಲದಲ್ಲಿ ಕಾಫಿ ಪುಡಿ, ಟೀ-ಪುಡಿಯನ್ನು ಬಹಳಷ್ಟು ದಾಸ್ತಾನು ಮಾಡಿ ಯಾರೂ ಇಟ್ಟುಕೊಳ್ಳುತ್ತಿರಲಿಲ್ಲವೆನಿಸುತ್ತದೆ.  ಅಕ್ಕ ತಂದಿಟ್ಟುಕೊಂಡ ಚಾಪುಡಿ ಡಬ್ಬದಲ್ಲಿ ದಿನೇದಿನೇ ಪುಡಿಯ ಪ್ರಮಾಣ ಕಡಿಮೆ ಆಗುವುದನ್ನು ಇವಳು ಗಮನಿಸಿದಳು.  ಇವಳು ಬಿಟ್ಟರೆ ಮತ್ತೆ ಬೇರೆ ಯಾರೂ ಇರದ ಮನೆಯಲ್ಲಿ ಅದು ಖಾಲಿ ಆಗಲು ಹೇಗೆ ತಾನೆ ಸಾಧ್ಯ? ಅದರೂ ಇರಲಿ ಎಂದು ಡಬ್ಬದಲ್ಲಿ ಒಂದು ಗುರುತು ಮಾಡಿ ಮರುದಿನ ಶಾಲೆಗೆ ಹೋಗಿ ಬಂದು ನೋಡುತ್ತಾಳೆ ಮತ್ತೆ ಕಡಿಮೆ ಆಗಿದೆ.  ಇದು ಏನೇ ಕಿತಾಪತಿ ಇದ್ದರೂ ಪಕ್ಕದ ಮನೆ ಗೌಡರ ಕಿತಾಪತಿಯೇ ಸೈ ಎಂದು, ಇವರಿಗೆ ಬುದ್ಧಿ ಕಲಿಸಬೇಕೆಂದು ಯೋಚನೆ ಮಾಡಿದಳು.

ಒಂದು ಪೋರ್ಶನ್ ಮನೆಯಲ್ಲಿ ಎರಡು ಕುಟುಂಬಗಳು ವಾಸಿಸೋದು ಸಹಜ.  ಬಾಡಿಗೆ ಕೊಡುವ ಮುಖೇನ ಅರ್ಧ ಮನೆಯನ್ನು ಇನ್ನೊಬ್ಬರಿಗೆ ವಾಸಿಸಲಿಕ್ಕೆ ಕೊಟ್ಟು ಅದರಿಂದ ಒಂದು ನಿರ್ದಿಷ್ಟ ಆದಾಯ ಪಡೆಯುವುದು ಎಲ್ಲರೂ ಬಲ್ಲ ವಾಡಿಕೆ.  ಆದರೆ, ಈ ರೀತಿ ಬಾಡಿಗೆ ಮನೆ ಕೊಟ್ಟವರು, ಟೀ ಪುಡಿಯನ್ನು ಕದಿಯುತ್ತಾರೆ ಎಂದು ಯಾರು ತಾನೇ ಯೋಚಿಸಲಿಕ್ಕೆ ಸಾಧ್ಯ?

ನನ್ನ ಅಕ್ಕ ಅಂದಿನಿಂದ ಟೀ ಮಾಡಿ ಉಪಯೋಗಿಸಿದ್ದ ಪುಡಿಯನ್ನು ಸಂಗ್ರಹಿಸಿ ಇಡಲಾರಂಭಿಸಿದಳು.  ಅದು ಸುಮಾರು ಒಂದು ಡಬ್ಬ ತುಂಬುವ ಪ್ರಮಾಣ ಬರುತ್ತಲೇ, ಅದನ್ನು ಒಟ್ಟು ಗೂಡಿಸಿ, ಎರಡು ಮೂರು ಸಾರಿ ಚೆನ್ನಾಗಿ ಕುದಿಸಿ ಅದರಲ್ಲಿದ್ದ ಚಹಾದ ಗುಣವನ್ನೆಲ್ಲಾ ತೆಗೆದುಬಿಟ್ಟು, ನಂತರ ಬಿಸಿಲಿನಲ್ಲಿ ಚೆನ್ನಾಗಿ ಒಣಗಿ ಹಾಕಿದಳು.  ಅದು ಚೆನ್ನಾಗಿ ಒಣಗಿದ ನಂತರ, ಮೇಲ್ನೋಟಕ್ಕೆ ಕಪ್ಪು ಚಹಾಪುಡಿಯಂತೆ ಕಂಡು ಬಂದರೂ ಅದರಲ್ಲಿ ಚಹಾದ ಒಂದು ಲವಲೇಶ ಅಂಶವೂ ಇದ್ದಿರಲಿಲ್ಲ.  ನಂತರ ಆ ಪುಡಿಯನ್ನೆಲ್ಲ ತನ್ನ ಚಹಾಪುಡಿ ಡಬ್ಬದಲ್ಲಿ ಹಾಕಿಟ್ಟು ಕಳ್ಳ ಬಂದು ಕದಿಯುವುದನ್ನು ನಿರೀಕ್ಷಿಸಿದಳು.

ಒಂದೆರಡು ದಿನದಲ್ಲಿ ಕಳ್ಳ ಬಂದು ಟೀಪುಡಿಯನ್ನು ಕದ್ದಿದ್ದಾಯಿತು.  ಆದರೆ, ಪಕ್ಕದ ಮನೆಯಲ್ಲಿ ಟೀ ಕುದಿಸುತ್ತಿದ್ದವರು ಬೈಯುವುದು ಕೇಳಿ ಬಂದು ಇವಳಿಗೆ ನಗುತಡೆಯದಾಯಿತು.  ಇವಳ ಮನೆಯಿಂದ ಕದ್ದ ಟೀ ಪುಡಿಯಲ್ಲಿ ಟೀ ಅಂಶ ಇದ್ದರೆ ತಾನೆ ಅದು ತನ್ನ ಗುಣವನ್ನು ತೋರಿಸುವುದು.  ಅಂದಿನಿಂದ ಇವಳ ಮನೆಯಲ್ಲಿ ಟೀ ಪುಡಿ ಕಳ್ಳತನವಾಗುವುದು ನಿಂತು ಹೋಯಿತಂತೆ!

1 comment:

sunaath said...

ಉತ್ತಮ ಉಪಾಯ!