Sunday, May 03, 2020

ಸಿನಿಮಾ ವ್ಯಥೆ

ಈ ಕೋವಿಡ್ ವ್ಯಥೆಯಿಂದ ಎಷ್ಟೆಷ್ಟು ಹೊಸ ಕಥೆಗಳು ಹುಟ್ಟುತ್ತವೆಯೋ ಅಥವಾ ಕೋವಿಡ್‌ನಿಂದ ಒಂದು ಹೆಚ್ಚಿನ ಗುಣಮಟ್ಟದ ಸಿನಿಮಾ ಕಥೆಗಳು ಬರಬಹುದೋ ಎಂದು ನಿರೀಕ್ಷೆಯಲ್ಲಿದ್ದ ನನಗೆ, ನಮ್ಮ ಸಿನಿಮಾ ಉದ್ಯಮದ ಬಗ್ಗೆ ಹೆಚ್ಚು ಆಲೋಚಿಸಿದಂತೆಲ್ಲ, ನಲಿವಿಗಿಂತ ನೋವೇ ಹೆಚ್ಚಾಗಿ ಕಂಡಿತು.

ಮೊದಲೇ ಥಿಯೇಟರುಗಳಿಗೆ ಹೋಗದೇ ಹೊರಗುಳಿದಿದ್ದ ಪ್ರೇಕ್ಷಕರು ಈಗಂತೂ ಇನ್ನೂ ದೂರವೇ ಉಳಿಯುತ್ತಾರೆ.  ಎಲ್ಲ ಕಡೆಗೆ ವ್ಯವಸ್ಥಿತವಾಗಿ ಮತ್ತೆ ವ್ಯಾಪಾರ ವಹಿವಾಟುಗಳು ಓಪನ್ ಆಗುತ್ತಿದ್ದಂತೆ, ಸಿನಿಮಾ ಪ್ರಪಂಚ ಚೇತರಿಸಿಕೊಳ್ಳಲು ಇನ್ನೂ ಸಮಯ ಹಿಡಿಯುತ್ತದೆ.  ಈ ವರ್ಷವಂತೂ ನಾವೆಲ್ಲ, ಈಗಾಗಲೇ ಬಿಡುಗಡೆ ಹೊಂದಿರುವ ಸಿನಿಮಾಗಳನ್ನು ಆನ್‌ಲೈನ್ ಮಾಧ್ಯಮದಲ್ಲಿ ಮಾತ್ರ ನೋಡಿ ಖುಷಿ ಪಡಬೇಕು, ಅಷ್ಟೇ.

ಸಿನಿಮಾವನ್ನು ನಂಬಿಕೊಂಡು ಬದುಕಿದ ಕಲಾವಿದರಷ್ಟೇ ಅಲ್ಲ, ಅವರನ್ನು ಆದರಿಸಿದ ಅನೇಕ ಕುಟುಂಬ ವ್ಯವಸ್ಥೆ ಈಗ ಸಂಕಷ್ಟದಲ್ಲಿದೆ.  ಈ ವೇದನೆ ಕೇವಲ ರಾಜ್ಯ, ರಾಷ್ಟ್ರದ ಮಟ್ಟಿಗೆ ಸೀಮಿತವಾಗಿರದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದೆ.

ಒಳ್ಳೆಯ ಸಿನಿಮಾವನ್ನು ಮಾಡಲು ಮೊದಲೇ ಹಿಂಜರಿಯುತ್ತಿದ್ದ ನಿರ್ಮಾಪಕರುಗಳು ಬಂಡವಾಳವನ್ನು ತೊಡಗಿಸಲು ಹಿಂದೆ ಹೆಜ್ಜೆ ಇಡುತ್ತಾರೆ.  ಅವರನ್ನು ನಂಬಿಕೊಂಡು ಒಳ್ಳೆಯ ಕಥೆಯನ್ನು ಕೈಯಲ್ಲಿಟ್ಟುಕೊಂಡ ನಿರ್ದೇಶಕರ ತಂಡ ಮಂಕಾಗುತ್ತದೆ.  ಒಂದು ಉತ್ತಮ ಸಿನಿಮಾಕ್ಕೆ ಬೇಕಾದ ಬಂಡವಾಳವನ್ನೇ ಹುಟ್ಟಿಸುವುದು ಕಷ್ಟವಾದಾಗ, ಕೆಲಸಗಾರರ ವೇತನ ಮತ್ತು ಕಲಾವಿದರ ಸಂಭಾವನೆಗಳಿಗೆ ಕತ್ತರಿ ಬೀಳುತ್ತದೆ. ಇದರಿಂದ ಹೊರಬರುವ ಸಿನಿಮಾಗಳ ಸಂಖ್ಯೆ ಮಿತಿಯಾಗುತ್ತದೆ.  ಕೊನೆಗೆ ಹೆಚ್ಚಿನ ಕಾರ್ಮಿಕ ವರ್ಗ, ಈಗಾಗಲೇ ನಲುಗಿರುವ ಕಲಾವಿದರ ನೋವು ಮುಗಿಲು ಮುಟ್ಟುತ್ತದೆ.

ಇದು ಒಂದು ರೀತಿಯ ಕಾಡ್ಗಿಚ್ಚಿನ ಅನುಭವವನ್ನು ಸೃಷ್ಟಿಸುತ್ತದೆ.  ಅದು ತನ್ನ ಹಾದಿಯಲ್ಲಿರುವ ಎಲ್ಲವನ್ನೂ ಸುಟ್ಟು ಭಸ್ಮ ಮಾಡುತ್ತದೆ.  ಕಲಾವಿದರ/ನಟ-ನಟಿಯರ ಮಾರ್ಕೆಟ್ಟುಗಳು ಕುಸಿಯತೊಡಗಿ, ಅವರು ತಮ್ಮ ಹೈ ಮೇಂಟೆನೆನ್ಸ್ ಜೀವನವನ್ನು ನಡೆಸುವುದು ದುಸ್ತರವಾಗುತ್ತದೆ.  ಕಲೆಯಿಂದ ಬದುಕೋ ಅಥವಾ ಬದುಕಿಂದ ಕಲೆಯೋ ಎನ್ನುವ ಪ್ರಶ್ನೆ ಮತ್ತೆ ಮತ್ತೆ ಕಾಡತೊಡಗುತ್ತದೆ.

ಒಮ್ಮೆ ಕಾಡ್ಗಿಚ್ಚು ಬಂದಾದನಂತರ ಅಗ್ನಿ ಆವರಿಸಿದ ಜಾಗದಲ್ಲಿ ದೈತ್ಯ ವೃಕ್ಷಗಳು ದುತ್ತನೆ ರಾತ್ರೋ ರಾತ್ರಿ ಬಂದಿಳಿಯುವುದಿಲ್ಲ.  ಮತ್ತೆ ಜೀವನ ಸಣ್ಣಸಣ್ಣ ಗಿಡಗಳಿಂದ, ನೆಲದಲ್ಲಿ ಹುದುಗಿದ ಬೀಜಗಳು ಮುಂದಿನ ಮಳೆಗಾಲದಲ್ಲಿ ಮೊಳಕೆ ಒಡೆಯುವುದರಿಂದ ಆರಂಭವಾಗುತ್ತವೆ.  ಈ ಸಂದರ್ಭದಲ್ಲಿ ಹುಟ್ಟುವ ಗಿಡಗಳು ನಿಜವಾಗಿಯೂ ಪ್ರಕೃತಿಯ ವಿಕೋಪದಿಂದಷ್ಟೇ ಅಲ್ಲ, ಪ್ರಕೃತಿಯ ಪ್ರಯೋಗಾಲಯದಲ್ಲೂ ಸಹ ಜಯಿಸಿದಂತಹವು.  ರಾತ್ರೋ ರಾತ್ರಿ ನಾಯಿಕೊಡೆಗಳಂತೆ ನೂರಾರು ಏಳದೆ, ಎಷ್ಟೋ ಚದುರ ಹೆಕ್ಟೇರ್‌ಗಳಿಗೆ ಒಂದರಂತೆ ಬೃಹತ್ ವೃಕ್ಷಗಳು ಸಸಿಗಳಾಗಿ ಹುಟ್ಟಿ ಬೆಳೆದು ಮರವಾಗಲು ಮತ್ತೆ ನೂರು ವರ್ಷವಾದರೂ ಬೇಕಾಗುತ್ತದೆ.

ನಿಜ.  ಒಂದು ನೂರು ವರ್ಷಗಳಲ್ಲಿ ಏನು ಬೇಕಾದರೂ ಆಗಬಹುದು.  ಜೀವನಗತಿ ಬದಲಾದಂತೆ ಸಿನಿಮಾವೂ ಬದಲಾಗುತ್ತದೆ.  ಸಿನಿಮಾವನ್ನು ನಂಬಿ ಬದುಕುವ ಕುಟುಂಬಗಳು ಕಡಿಮೆಯಾಗುತ್ತವೆ.  ಸಮಾಜಕ್ಕೆ ಏನನ್ನಾದರೂ ಹೊಸತೊಂದನ್ನು ಕೊಡಬೇಕು ಎನ್ನುವ ಅತೀವ ತುಡಿತದ ನಿರ್ದೇಶಕ ಕಷ್ಟಸಾಧ್ಯವಾದರೂ ತನ್ನ ಗುರಿಯನ್ನು ಕಂಡುಕೊಳ್ಳುತ್ತಾನೆ.  ಆ ನಿಟ್ಟಿನಲ್ಲಿ ಮುಂದೆ ತೆರೆಕಾಣುವ ಚಿತ್ರಗಳು ಸಮಯದ ಸಮರದಲ್ಲಿ ಬೆಂದು, ಕಷ್ಟದಲ್ಲಿ ಪುಳಕಿತವಾಗಿ ಅರಳಿದ ಹೂಗಳಂತೆ ನಮಗೆಲ್ಲರಿಗೂ ಕಾಣಿಸಿಕೊಳ್ಳಬಹುದು.

ಬಿಲಿಯನ್ ಡಾಲರ್‌ ಬಂಡಾವಾಳದ ಬಿಸಿನೆಸ್ಸ್‌ನಿಂದ ಖ್ಯಾತರಾದ ಪ್ರಪಂಚದ ಕೆಲವೇ ಕೆಲವು ಕಂಪನಿಗಳು ಈ ಕಲಾವಿದರ, ತಂತ್ರಜ್ಞರ ರಕ್ತವನ್ನು ಕುಡಿಯದಿದ್ದರೆ ಸಾಕು!

No comments: