ನಾವು ಮಹಾ ಬುದ್ಧಿವಂತರು ಸಾರ್!
ಈ ಸೆಪ್ಟೆಂಬರ್ ಗಾಳಿ ತೇವ ಹಾಗೂ ತಂಪನ್ನು ಅದೆಲ್ಲಿಂದಲೋ ಹೊತ್ತು ತರುತ್ತಿದ್ದಂತೆ ಹೆಚ್ಚು ವಿಡಂಬನೆಗಳನ್ನು ’ಅಂತರಂಗ’ದಲ್ಲಿ ತುಂಬುವಂತೆ ಮಾಡುತ್ತಿದೆ. ಈ ವಿಡಂಬನೆಗಳ ವ್ಯಾಪ್ತಿ (ಕೊರಗು) ನಿಮಗೆ ಗೊತ್ತೇ ಇದೆ, ಈವರೆಗೆ ಬರೆದವುಗಳ ಬೆನ್ನಲ್ಲಿ ಇನ್ನೂ ಒಂದು.
***
ನಾವು ಕನ್ನಡಿಗರು ತುಂಬಾ ಬುದ್ಧಿವಂತರು ಅಂತ ಅನ್ಸಿದ್ದು ಇತ್ತೀಚೆಗಷ್ಟೇ ನೋಡಿ. ನಮ್ ಆಫೀಸಿನಲ್ಲಿ ನನ್ನ ಸಹೋದ್ಯೋಗಿ ಒಬ್ರು ತಮ್ಮ ಮಗಳ ಮಗು, ಅಂದ್ರೆ ಮೊಮ್ಮಗ ಜನಿಸಿದ ಸಂದರ್ಭದಲ್ಲಿ ’ನಾನೂ ಗ್ರ್ಯಾಂಡ್ಮದರ್ ಆಗಿಬಿಟ್ಟೆ!’ ಎಂದು ಸಂಭ್ರಮಿಸುತ್ತಿದ್ದರು. ನಾನೂ ಅವರ ಖುಷಿಯಲ್ಲಿ ಪಾಲ್ಗೊಳ್ಳುತ್ತಾ ಅವರು ಯಾವ ವಯಸ್ಸಿಗೆ ’ಅಜ್ಜಿ’ಯಾದರು ಎಂದು ವಿಚಾರಿಸಿದಾಗ ಅವರಿಗೆ ಕೇವಲ ಐವತ್ತೇ ವರ್ಷ ಎಂದು ತಿಳಿದು ಒಮ್ಮೆ ಶಾಕ್ ಆದಂತಾಯಿತು, ಮತ್ತೆ ಕೇಳಿ ತಿಳಿದಾಗ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಮಕ್ಕಳಾಗಿದ್ದವೆಂದು ಒಪ್ಪಿಕೊಂಡರು.
ನಿಮ್ ಕಡೆಯೆಲ್ಲ ಹೇಗೋ ಗೊತ್ತಿಲ್ಲ ನಮ್ ಕಡೆ ’ನಾನು ಅಜ್ಜ/ಅಜ್ಜಿ ಯಾದೆ’ ಎಂದು ಸಲೀಸಾಗಿ ಒಪ್ಪಿಕೊಳ್ಳೋದಿಲ್ಲ ಜನ. ಎಷ್ಟೋ ಅಜ್ಜಿಯಂದಿರು ತಮ್ಮ ಮೊಮ್ಮಕ್ಕಳಿಂದ ’ದೊಡ್ಡಮ್ಮ’ ’ಅಮ್ಮಮ್ಮ’ ಎಂದು ಕರೆಸಿಕೊಳ್ಳೋದು ಪ್ರತೀತಿ.
’ಅಲ್ರೀ, ಬುದ್ಧಿವಂತ ಕನ್ನಡಿಗರಿಗೂ ನಿಮ್ಮ ಆಫೀಸ್ನಲ್ಲಿ ಯಾರೋ (ಚಿಕ್ಕ ವಯಸ್ಸಿನಲ್ಲಿ) ಅಜ್ಜಿಯಾಗಿರೋದಕ್ಕೂ ಏನ್ರೀ ಸಂಬಂಧ?’ ಅಂತ ನೀವ್ ಕೇಳ್ತೀರಿ ಅಂತ ನನಗೂ ಗೊತ್ತು. ಸ್ವಲ್ಪ ತಡೀರಿ.
ಎರಡು ವಾರದ ಹಿಂದೆ ಕನ್ನಡ ಸಂಘದ ಸಮಾರಂಭವೊಂದರಲ್ಲಿ ಯಾರೋ ಪರಿಚಯಸ್ಥರು, ’ಏನ್ಸಾರ್, ನಮ್ಮ್ ಕನ್ನಡಿಗರ ಜಾಯಮಾನ - ಮದುವೆಯಾಗಿ ಮಕ್ಕಳು ಆಗೋ ಹೊತ್ತಿಗೆಲ್ಲಾ ಸುಮಾರು ಜನಕ್ಕೆ ನಲವತ್ತು ತುಂಬಿರುತ್ತೆ ನೋಡಿ!’ ಎಂದು ನಾವೆಲ್ಲ ಮನೆ-ಮಠ-ಮಕ್ಕಳು ಎಂದು ಮಾತನಾಡುತ್ತಿದ್ದಾಗ ಹೇಳಿಕೊಂಡರು. ಅದು ನಿಜವಾದ ಅಬ್ಸರ್ವೇಷನ್ ಅನ್ನಿಸುವಲ್ಲಿ ನನ್ನ ಹಿಂದಿನ ಸಹೋದ್ಯೋಗಿ ಹೇಳಿದ ಮಾತುಗಳು ನೆನಪಿಗೆ ಬಂದವು. ಅವನು ಆಂಧ್ರಪ್ರದೇಶದವನಾದರೂ ದಾವಣಗೆರೆಯಲ್ಲಿ ಓದಿದವನು, ಅವರ ಮೇಷ್ಟ್ರು ಒಬ್ಬರಿಗೆ ನಲವತ್ತರ ಸಮೀಪ ಮದುವೆಯಾದದ್ದನ್ನು ನೋಡಿ ಅವರೆಲ್ಲ ತಮಾಷೆ ಮಾಡಿಕೊಳ್ಳುತ್ತಿದ್ದರಂತೆ - ಅವನ ’ಯಾಕೆ, ಕನ್ನಡ ಜನ ತಡವಾಗಿ ಮದುವೆಯಾಗೋದು?’ ಅನ್ನೋ ಪ್ರಶ್ನೆಗೆ ಏನು ಉತ್ತರ ಕೊಟ್ಟಿದ್ದೆ ಅಂತ್ಲೇ ನನಗೆ ಇಂದು ನೆನಪಿಲ್ಲ! ನನಗಿನ್ನೂ ಮದುವೆಯಾಗೇ ಇರದಿದ್ದ ಹೊತ್ತಿಗೆ ಅವನಿಗೆ ನಾಲ್ಕಾರು ವರ್ಷದ ಎರಡು ಮಕ್ಕಳಿದ್ದುದೂ ನಿಜ.
ಈಗ ನಿಮಗೇ ಅನ್ಸಲ್ವೇ? ಮುವತ್ತರ ಹೊತ್ತಿಗೆ ಮದುವೆಯಾಗಿ ನಂತರ ಮಕ್ಕಳಾದ ಮೇಲೆ ಐವತ್ತು ವರ್ಷಕ್ಕೆಲ್ಲ ನಾವು ಅಜ್ಜ/ಅಜ್ಜಿಯರಾಗೋದು ಕಷ್ಟಸಾಧ್ಯವಲ್ಲವೇ? ಆದ್ದರಿಂದಲೇ ಹೇಳಿದ್ದು ಕನ್ನಡಿಗರು ಬುದ್ಧಿವಂತರೆಂದು.
***
ಕನ್ನಡಿಗರು ಮಹಾ ಬುದ್ಧಿವಂತರು ಅನ್ನೋದಕ್ಕೆ ಹೀಗೇ ಹುಡುಕ್ತಾ ಹೋದ್ರೆ ಬೇಕಾದಷ್ಟು ಸಮಜಾಯಿಷಿ ಸಿಗುತ್ತೆ:
- ಈ ಮನುಕುಲದಲ್ಲಿ ಇದ್ದ ಇರದಿದ್ದ ಜಾತಿಯ ವ್ಯಾಪ್ತಿಗೆ ಕನ್ನಡಿಗರ ಕಾಂಟ್ರಿಬ್ಯೂಷನ್ನೇ ಹೆಚ್ಚು ಅಂತ ನನ್ನ ಅಭಿಪ್ರಾಯ. ಗೌಡ್ರು, ಲಿಂಗಾಯ್ತ್ರು, ಕುರುಬ್ರು... ಮುಂತಾದ ಅನೇಕ ಅನೇಕ ಜಾತಿಗಳು ನಮ್ಮಲ್ಲೇ ಇದಾವೇ ಅಂತ ನನ್ನ ನಂಬಿಕೆ. ಅವೆಲ್ಲಿಂದ ಬಂದ್ವೋ ಹೇಗೋ ಅಂತ ಗೊತ್ತಿಲ್ದೇ ಹೋದ್ರೂ ನಮ್ಮಲ್ಲಿ ಉತ್ತರ ಭಾರತದ ಹಾಗೆ ಸರ್ನೇಮ್ ಬಳಸ್ದೇ ಹೋದ್ರೂ ನಮ್ ಜನಗಳಿಗೆ ಯಾರು ಯಾರು ಯಾವ ಜಾತಿ ಅಂತ ಅದೆಷ್ಟು ಬೇಗ ಗೊತ್ತಾಗುತ್ತೇ ಅಂದ್ರೆ? ನೀವು ಯಾವ್ದೇ ಆರ್ಟಿಕಲ್ಲ್ ಬರೀರಿ, ಬುಕ್ ಬರೀರಿ, ಕಾಮೆಂಟ್ ಹೇಳಿ, ನಿಮ್ ಅಭಿಪ್ರಾಯ ತಿಳಿಸಿ ಇವೆಲ್ಲವನ್ನೂ ಜಾತಿಯ ಮಸೂರದಲ್ಲಿ ನೋಡೋ ವ್ಯವಸ್ಥೆ ಇದೇ ಅಂತ ನಿಮಗ್ಗೊತ್ತಾ? ಹೀಗೆ ಇದ್ದ ಮನುಕುಲದ ಜಾತಿ-ಮತಗಳಿಗೆ ಮತ್ತಿನ್ನಷ್ಟು ಕಾಂಟ್ರಿಬ್ಯೂಷನ್ನ್ ಮಾಡಿಕೊಂಡು ಎರಡು ಸಾವಿರದ ಎಂಟು ಬಂದ್ರೂ ಇನ್ನೂ ಚಿಟುಕೆ ಹೊಡೆಯುವುದರಲ್ಲಿ ಚಮ್ಮಾರ-ಕಂಬಾರ-ಕುಂಬಾರ ರನ್ನು ಗುರುತಿಸುವ ಚಾಕಚಕ್ಯತೆ ಇರೋ ನಾವು ಮಹಾ ಬುದ್ಧಿವಂತರಲ್ವೇನು?
- ನಮಗೆ ನಮ್ದೇ ಊಟ-ತಿಂಡಿ ಅಂತ ಬೇರೆ ಇರುತ್ತೇನ್ರಿ? ಬಿಸಿ ಬೇಳೆ ಬಾತ್ ಅಂತೀವಿ, ಅದಕ್ಕೊಂದಿಷ್ಟು ಮರಾಠಿ ಟಚ್ ಕೊಡ್ತೀವಿ. ಚಪಾತಿ ಅಂತ ಮಾಡ್ತೀವಿ, ಇತ್ಲಾಗ್ ನಾರ್ತೂ ಅಲ್ಲ ಸೌತೂ ಅಲ್ಲ ಅನ್ನಂಗಿರುತ್ತೆ. ಪುಳಿಯೊಗರೆ ಅಂತ ಹಳೆಗನ್ನಡಕ್ಕೆ ಜೋತು ಬೀಳ್ತೀವೋ ಅಂತ ಕೊಂಚ ತಮಿಳನ್ನೂ ಸೇರುಸ್ತೀವೋ? ಕನ್ನಡಿಗರ ಸಮಾರಂಭ ಅಂತ ಯಾರೋ ಬೇಡೇಕರ್ ಉಪ್ಪಿನಕಾಯಿ ಇಟ್ಟಿದ್ರಂತೆ ಹಾಗಾಯ್ತು! ಹೋಳಿಗೆ-ಒಬ್ಬಟ್ಟು ಅವು ಪಕ್ಕಾ ನಮ್ದೇ. ಹೀಗೆ ನಮ್ ಕರ್ನಾಟಕ ಅನ್ನೋದು ಒಂದು ಪ್ರತ್ಯೇಕ ದೇಶವಾಗಿ ಬೆಳೆಯೋಷ್ಟು ದೊಡ್ಡದಲ್ಲದಿದ್ರೂ ಎಲ್ಲೋ ಒಂದು ಮೂಲೆನಲ್ಲಿ ಚೂರೂಪಾರೂ ಉಳಿಸ್ಕೊಂಡ್ ಬಂದಿದೆ. ಅದಕ್ಕೆ ತಕ್ಕಂತೆ ಇಲ್ಲಿನ ಸೌತ್ ಇಂಡಿಯನ್ ಕೆಫೆಗಳಲ್ಲಿ ಕೆಲಸ ಮಾಡೋ ಹಿಸ್ಪ್ಯಾನಿಕ್ ಅಥವಾ ಆಫ್ರಿಕನ್ ಅಮೇರಿಕನ್ ಕುಕ್ಗಳೂ ಬೆಳೆದು ಬಂದಿದಾರೆ ಬಿಡಿ. ಯಾವ ಸೌತ್ ಇಂಡಿಯನ್-ನಾರ್ತ್ ಇಂಡಿಯನ್ ಪ್ರೋಗ್ರಾಮಿಗೂ ಅವ್ರೇ ಕೆಲವೊಮ್ಮೆ ಅಡುಗೆ ಮಾಡೋದು. ಅಂತಾ ಇಂಟರ್ನ್ಯಾಷನಲ್ ಅಡುಗೆ ವಿಷಯಕ್ಕೆ ಸೌತೂ-ನಾರ್ತೂ ಅಂತ ಲಿಮಿಟ್ ಹಾಕಕ್ಕ್ ಆಗುತ್ಯೇ, ಛೇ! ಹೀಗೆ ದೇಶದಿಂದ ದೇಶಕ್ಕೆ ಬಂದ ಕ್ಯುಲಿನರಿ ಪರ್ಫೆಕ್ಷನ್ನ್ ಅನ್ನೋ ಸಂಭ್ರಮಕ್ಕೆ ಇಲ್ಲಿನ ಪಟೇಲ್ ಬ್ರದರ್ಸ್ ತರಕಾರಿ ಹಾಗೂ ಸಾಮಗ್ರಿಗಳನ್ನ ಬೆರೆಸಿ ಇಲ್ಲಿಯ ’ಉಡುಪಿ ಬ್ರಾಹ್ಮಣರ ಫಲಹಾರ ಮಂದಿರ’ಗಳಲ್ಲಿ ಅದೆಲ್ಲಿಂದ್ಲೋ ಬರೋ (ಒಂಥರಾ ಸ್ಮೆಲ್ಲಿರೋ) ಗ್ಯಾಸ್ ಒಲೆಯ ಮೇಲೆ ಬೇಯಿಸಿ ಅಲ್ಯುಮಿನಮ್ ಕಂಟೇನರುಗಳಲ್ಲಿ ಮುಚ್ಚಿ ಇನ್ನೂ ಬಿಸಿಬಿಸಿಯಾಗಿಯೇ ಇರೋದನ್ನ ತಂದು ಬಡಿಸಿದ್ದನ್ನ ಬಾಯಿ ಬಡಬಡಿಸದೇ ಹಪಾಹಪಿಗಳಾಗಿ ತಿಂದ್ರೆ ಅನ್ನಕ್ಕೇ ಅವಮಾನ ಅಲ್ವೇನು? ಅದ್ಕೇ ನಾವು ಊಟ-ತಿಂಡಿ ವಿಷಯದಲ್ಲಿ ಅಷ್ಟು ಶಿಸ್ತು ಹಾಗೂ ಕಟ್ಟು ನಿಟ್ಟು.
ವಾರಾಂತ್ಯದ ದಿನಗಳಲ್ಲಿ ಅದೇ ಮುರುಕುಲು ಬ್ರೆಡ್ಡಿನ ಚೂರುಗಳನ್ನು ತಳದಲ್ಲಿ ಯಾವಾಗ್ಲೂ ಸುಡ್ತಾ ಇರೋ ಬ್ರೆಡ್ಡು ಟೋಸ್ಟರಿಗೆ ಇನ್ನೊಂದು ಸ್ಲೈಸು ಬ್ರೆಡ್ಡ್ ಹಾಕಿಕೊಂಡು ಗರಮ್ ಮಾಡಿಕೊಂಡು ಅದಕ್ಕೆ ಮ್ಯಾಗೀ ಹಾಟ್ ಅಂಡ್ ಸ್ವೀಟ್ ಚಿಲ್ಲೀ ಸಾಸ್ (what's the difference!) ಹಾಕಿಕೊಂಡು ಮುಕ್ಕೋ ನಮಗೆ ಯಾರೋ ಒಂದಿಷ್ಟು ಉಸುಳಿ, ಉಪ್ಪಿಟ್ಟು, ಕೇಸರಿ ಬಾತ್, ಅವಲಕ್ಕಿ, ಇಡ್ಲಿ, ವಡೆಗಳ ರುಚಿ ತೋರಿಸಿದ್ರೆ ಸಾಕು ನಮ್ಮ ಜಾಯಮಾನವೇ ನಮ್ಮ ಮೂಗಿನ ತುದಿಗೆ ಬಂದು ಅದರಲ್ಲಿ ತಪ್ಪು ಹುಡುಕುತ್ತೆ!
ಹೀಗೆ ಅಮೇರಿಕದಿಂದ ಕರ್ನಾಟಕಕ್ಕೆ (and back) ಕೇವಲ ಒಂದು ನ್ಯಾನೋ ಸೆಕೆಂಡಿನಲ್ಲಿ ಹರಿದಾಡೋ ನಾವು ಮಹಾ ಬುದ್ಧಿವಂತರಲ್ವೇನು?
- Every other sentence ಇಂಗ್ಲೀಷ್ ಮಾತನಾಡೋ ನಾವು, ’ಹೌದು/ಅಲ್ಲ’ ಅಂತ ಬಾಯಲ್ಲಿ ಬರ್ಗರ್ ಇಟ್ಟುಕೊಂಡ ಹಾಗೆ ಪ್ರೊನೌನ್ಸ್ ಮಾಡೋ ನಮ್ಮ್ ಮಕ್ಳು ಇವುಗಳಿಗೆಲ್ಲ ನಾವು ನಮ್ಮ ಸಂಸ್ಕೃತಿ, ಪರಂಪರೆ ಅಂತ ದೊಡ್ಡ ದೊಡ್ಡದಾಗಿ ಇಂಗ್ಲೀಷ್ ನಲ್ಲಿ ಏನೇನೋ ತಿಳಿ ಹೇಳ್ತೀವಿ ನೋಡಿ. ಯಾವ್ದಾದ್ರೂ ಕನ್ನಡ ಸಂಘದ ಕಾರ್ಯಕ್ರಮ ಇದ್ದಾಗ ಮಾತ್ರ ಜರತಾರಿ ಉಡ್ರಿ ಅಂದ್ರೆ ನಮ್ ಮಕ್ಳು ಹೆಂಗಾದ್ರೂ ಕೇಳ್ತಾವ್ರೀ? ಅದೆಲ್ಲಾ ಏನೂ ಬೇಡ, ವರ್ಷಕ್ಕೊಂದೆರಡು ಕನ್ನಡ ಸಂಘದ ಕಾರ್ಯಕ್ರಮ ನೋಡ್ಕೊಂಡು ಕಂಡೋರಿಗೆಲ್ಲ ನಮಸ್ಕಾರ ಅಂದು ಹಲ್ಲು ಗಿಂಜಿಕೊಂಡು ಏನೋ ದೊಡ್ಡ ಕೆಲ್ಸ ಕಡ್ದಿದೀವಿ ಅಂದುಕೊಳ್ಳೋದು ಶ್ಯಾಣೇತನ ಅಲ್ದೇ ಇನ್ನೇನ್ರಿ? ಕನ್ನಡತನ ಉಳಿಸೋ ನಿಟ್ಟಿನಲ್ಲಿ ನಮ್ಮ ಮಕ್ಳು ಕನ್ನಡ ಮಾತನಾಡ್ತಿದ್ರೂ ಪರವಾಗಿಲ್ಲ ಭರತನಾಟ್ಯ ಕಲಿಯೋದನ್ನ ಬಿಡಬಾರ್ದು ಅನ್ನೋ ಲಿಮಿಟ್ಟಿಗೆ ಬಂದು ಬಿಟ್ಟಿದ್ದೇವೆ, ಅದು ಈ ಶತಮಾನದ ಮಹಾ ಅಚೀವ್ಮೆಂಟೇ ಸರಿ.
ಇಂಥವನ್ನೆಲ್ಲ ಹಾಗೂ ಇನ್ನೂ ಅನೇಕಾನೇಕ ಕನ್ವೆನ್ಷನ್ನುಗಳನ್ನು ಹುಟ್ಟಿ ಹಾಕಿಕೊಂಡಿರೋ ನಾವು ಕನ್ನಡಿಗರು ಹಾಗೂ ಮಹಾ ಬುದ್ಧಿವಂತರು!
5 comments:
ಹೆಹೆ! ಒಳ್ಳೇ ಚನಾಗಿದೆ!
here's a vidambane..
while kids are being made to wear jartari and yell "kannadam gelge" or something.. and while very american kids are being yanked out of this country of their birth.. so they dont get "corrupted" here...
very "indian" kids in bangalore talk nonstop about hollywood and listen to death metal:)
thats life..no one is wrong..
they are just fools.. who dont value what they have got..
-S
ನೀವು ಹೇಳ್ತಾ ಇರೋದು ಅನಿವಾಸಿ ಕನ್ನಡಿಗರ ಬುದ್ಧಿವಂತಿಕೆ ಬಗೆಗೆ!
ಇದು ಪಕ್ಕಾ ಅನಿವಾಸಿ ಕನ್ನಡಿಗರ ಕಥೆ! ಬ್ಲಾಗಲ್ಲಿ ಕಾಮೆಂಟು ಬರೆದಾಗ ಜಾತಿ ಮಸೂರದಲ್ಲಿ ನೋಡೋ ವಿಷಯ ಮಾತ್ರ ನನಗೆ ಈಗ್ಲೇ ತಿಳಿದಿದ್ದು!!!
ಶ್ರುಶ್ರುತ,
ಧನ್ಯವಾದಗಳು. ಬಹಳ ಅಪರೂಪವಾದಿರಲ್ಲ, ಏನ್ ಸಮಾಚಾರ?
S,
ನಿಮ್ಮ ವಿಡಂಬನೆ ಇನ್ನೂ ಚೆನ್ನಾಗಿದೆ, ಯಾರದ್ದೂ ತಪ್ಪಿಲ್ಲ ಅನ್ನೋದರಲ್ಲಿ ಅಮೇರಿಕನ್ ಛಾಯೆ ಇದೆ :-)
ಸುನಾಥ್,
’ಅನಿವಾಸಿ’ಗಳ ಬಗ್ಗೆ, ಅವರು ಎಲ್ಲೂ ಇರಬಹುದು, ನಿಮ್ಮೊಳಗೂ ಒಬ್ಬರಿದ್ದಾರೇನು?!
ವೀಣಾ ಶಿವಣ್ಣ,
ಪಕ್ಕಾ ಅನಿವಾಸಿ ಕನ್ನಡಿಗರು ಅಂದ್ರೆ ಯಾರು? :-)
ಲೇಖನದ ವಿಷಯದಲ್ಲಿ ಖಂಡಿತವಾಗಿ ಬರೆದವರು ಯಾರು, ಅವರು ಹೀಗೆ ಯಾಕೆ ಬರೆದಿದ್ದಾರೆ ಅನ್ನೋ ತರ್ಕ ಬರುತ್ತೆ.
Post a Comment