Sunday, September 07, 2008

ಮನೆ ಮನಗಳಲ್ಲಿ ಬರಲಿವೆ ಕರೆಂಟ್ ಹೋಗದ ದಿನಗಳು

ಆಫೀಸಿನಲ್ಲಿ ತಲೆ ಎತ್ತಿ ನೋಡಿದೆ: ಸುಮಾರು 25X50 ಚದುರ ಅಡಿ ಆವರಣದಲ್ಲಿ ನೂರಕ್ಕಿಂತಲೂ ಹೆಚ್ಚು ಟ್ಯೂಬ್‌ಲೈಟುಗಳು ಕಣ್ಣು ಕುಕ್ಕುತ್ತಿವೆ. ನಮ್ಮ ವಾಕ್‌ವೇ (ಕಾರಿಡಾರ್) ಗಳಲ್ಲಂತೂ ಎರಡೆರಡು ಅಡಿಗಳಿಗೊಂದು ಮರ್ಕ್ಯುರಿ ಲೈಟ್ ಸೀಲಿಂಗ್‌ನ ಹೊಟ್ಟೆಯಲ್ಲಿನ ಹೊಕ್ಕಳಿನ ಹಾಗೆ ಕೋರೈಸುತ್ತದೆ. ಎಲಿವೇಟರುಗಳಲ್ಲಿ ಐದಡಿ ಚದರವಿರುವ ಸ್ಥಳದಲ್ಲಿ ಒಂಭತ್ತು ಲೈಟುಗಳು. ಆಫೀಸಿನ ವಾತಾವರಣದಲ್ಲಿ ಕಿಟಕಿಯಿಂದ ಹೊರಗೆ ಕಣ್ಣು ಹಾಯಿಸದೇ ಹೋದರೆ ಹಗಲೋ ರಾತ್ರಿಯೋ ಗೊತ್ತಾಗುವ ಹಾಗೇ ಇಲ್ಲ.

ಸುಮಾರು ಮುನ್ನೂರು ಮಿಲಿಯನ್ ಇರುವ ಅಮೇರಿಕನ್ ಜನಸಂಖ್ಯೆ ಬಳಸುವ ಇಂಧನ, ಶಕ್ತಿ ಸೌಲಭ್ಯಗಳು ಸುಮಾರು ಪ್ರಪಂಚದ ಕಾಲು ಭಾಗದಷ್ಟಿರಬಹುದು ಎಂದು ಎಲ್ಲೋ ಓದಿದ ನೆನಪು. ಆಫೀಸಿನ ಅಥವಾ ಮನೆಯ ವಾತಾವರಣದಲ್ಲಿ ಪವರ್ ಕಟ್ ಆಗುತ್ತದೆ ಎಂದು ಯಾವುದೇ ಮುನ್ನೆಚ್ಚರಿಕೆಯನ್ನು ನಾವು ಭಾರತದಲ್ಲಿದ್ದ ಹಾಗೆ ತೆಗೆದುಕೊಳ್ಳುತ್ತಿದ್ದಂತೆ ಇಲ್ಲಿ ತೆಗೆದುಕೊಳ್ಳುವುದಿಲ್ಲವಾದರೂ ಅಪರೂಪಕ್ಕೊಮ್ಮೆ ಚಂಡಮಾರುತವೋ, ಸುಂಟರಗಾಳಿಯೋ ಬೀಸಿ ಅಥವಾ ಜೋರಾಗಿ ಮಳೆ ಬಂದು ಕರೆಂಟು ಹೋಗೋದು ಇದೆ. ಅಕಸ್ಕಾತ್ ಹಾಗೇನೇ ಆದರೂ ಜನರೇಟರುಗಳು, ಯುಪಿಎಸ್‌ಗಳು ಮೊದಲಾದವುಗಳು ಅಪರೂಪಕ್ಕೊಮ್ಮೆ ದುಡಿಯಲು ಸಿಗುವ ತಮ್ಮ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತವೆ.

ಈ ಮೇಲಿನ ಮಾತುಗಳನ್ನು NSG ಕಳೆದ 34 ವರ್ಷಗಳಿಂದ ಭಾರತದ ಮೇಲೆ ಹೇರಿದ್ದ ನಿರ್ಬಂಧವನ್ನು ತೆಗೆದುಹಾಕಿದ ಹಿನ್ನೆಲೆಯಲ್ಲಿ ಹೇಳಬೇಕಾಗಿ ಬಂತು. ಭಾರತದಂತಹ ಅಭಿವೃದ್ಧಿಪರ ದೇಶಗಳಿಗೆ "ಪವರ್" ಅಗತ್ಯ ಬಹಳ ಹೆಚ್ಚಿದೆ. ದಿನೇ ದಿನೇ ಹೆಚ್ಚುವ ಜನಸಂಖ್ಯೆ, ತಂತ್ರಜ್ಞಾನ ಮತ್ತೊಂದೇನೇ ಇದ್ದರೂ ಕತ್ತಲ ದಿನ ಮತ್ತು ರಾತ್ರಿಗಳು ಸಮಾಜದ ಉತ್ಪಾದನೆಯನ್ನೇ ಕುಂಠಿತಗೊಳಿಸಿವೆ. ಕೇವಲ ಇಲೆಕ್ಟ್ರಿಸಿಟಿ ಒಂದೇ ಅಲ್ಲ ಅದನ್ನು ಆಧರಿಸಿದ ಅನೇಕ ಬೆಳವಣಿಗೆಗಳಲ್ಲಿ ಭಾರತ ಹಿಂದಿದೆ. ಯಾವುದೇ ಸಾಮಾನ್ಯ ಮನೆವಾರಿಕೆಯಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳಿಗೆ ಎಲೆಕ್ಟ್ರಿಸಿಟಿ ಕಡಿತ ಹಿಡಿಶಾಪವೆಂದೇ ಹೇಳಬೇಕು.

***

ನಮಗೆ ಎಲೆಕ್ಟ್ರಿಸಿಟಿ ಸಿಗಬೇಕಾದರೆ ಒಂದಲ್ಲ ಒಂದು ರೀತಿಯಿಂದ ಶಕ್ತಿಯ ಪರಿವರ್ತನೆ ನಡೆಯಲೇ ಬೇಕು. ಗಾಳಿ, ಸೋಲಾರ್, ನೀರು, ಉಷ್ಣತೆ (ಕಲ್ಲಿದ್ದಲು), ನ್ಯೂಕ್ಲಿಯರ್ ಮೊದಲಾದವುಗಳಿಂದ ಎಲೆಕ್ಟ್ರಿಕ್ ಎನರ್ಜಿ ಸಿಗಬಹುದಾದರೂ ಹೆಚ್ಚಿನ ದೇಶಗಳು ನ್ಯೂಕ್ಲಿಯರ್ ಮೂಲವೊಂದನ್ನು ಹೊರತುಪಡಿಸಿ ಮತ್ತಿನ್ನೆಲ್ಲವನ್ನೂ ಮೈಗೂಡಿಸಿಕೊಂಡಿವೆ. ಪರಿಸರವಾದಿಗಳು ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟುವುದನ್ನು ತಡೆಯಬಹುದು, ಇಂದಲ್ಲ ನಾಳೆ ಖಾಲಿಯಾಗುವ ಕಲ್ಲಿದ್ದಲು ಎಲ್ಲರನ್ನೂ ಹೆದರಿಸಬಹುದು, ಯಥೇಚ್ಚವಾಗಿ ಸಿಗಬಹುದಾದ ಗಾಳಿ-ಸೂರ್ಯನ ಬೆಳಕಿನಿಂದ ವಿದ್ಯುತ್‌ಚ್ಛಕ್ತಿಯನ್ನು ಪಡೆಯುವುದು ನಿಧಾನವಾಗಿ ಬೆಳೆಯುತ್ತಿರಬಹುದು. ಅದೇ ನ್ಯೂಕ್ಲಿಯರ್ ಮೂಲಗಳಿಗೆ ಬಂದಾಗ ಎಲ್ಲವೂ ಸರಿ ಹೋದರೆ, ಎಲ್ಲವನ್ನೂ ವ್ಯವಸ್ಥಿತವಾಗಿ ನಿಯಂತ್ರಿಸಿದರೆ ಅಗಾಧವಾದ ಶಕ್ತಿಯ ಭಂಡಾರವನ್ನೇ ಪಡೆದಂತಾಗುವುದು ನಿಜ. ಆದರೆ ಒಂದೇ ಒಂದು ಸಣ್ಣ ತಪ್ಪಾದರೂ ಆ ದುರಂತ ಮಾನವಕುಲ ಊಹಿಸುವುದಕ್ಕಿಂತಲೂ ದೊಡ್ಡದಾದುದರಿಂದಲೇ ನ್ಯೂಕ್ಲಿಯರ್ ಶಕ್ತಿಯನ್ನು ಅದರ ಬಳಕೆ/ದುರ್ಬಳಕೆಯನ್ನು ತಡೆಯಲು ವಿಶ್ವದಾದ್ಯಂತ ಹಲವು ರಾಷ್ಟ್ರಗಳ ಸಂಘಟನೆಗಳು ನ್ಯೂಕ್ಲಿಯರ್ ಬೆಳವಣಿಗೆಯನ್ನು ಹದ್ದು ಕಾದಂತೆ ಕಾಯುತ್ತಿರುವುದು.

ಭಾರತ ಅಣ್ವಸ್ತ್ರ ಪ್ರಸರಣ ನಿಷೇಧಕ್ಕೆ ಸಹಿ ಹಾಕದ, ಹಿಂದೆ ಅಣ್ವಸ್ತ್ರ ಪರೀಕ್ಷೆ ನಡೆಸಿ ತನ್ನಲ್ಲಿ ಅಣ್ವಸ್ತ್ರ ಇದೆ ಎಂದು ಸಾಭೀತುಗೊಳಿಸಿಕೊಂಡ ದೇಶ. ನಾನ್ ಪ್ರೊಲಿಫರೇಷನ್ ಟ್ರೀಟಿಗೆ ಸಹಿ ಹಾಕದೆಯೂ ನ್ಯೂಕ್ಲಿಯರ್ ಮೂಲವನ್ನು ನಾಗರಿಕರ ಒಳಿತಿಗೆ ಬಳಸುವ ಬಗ್ಗೆ ವಿಶ್ವವನ್ನು ಮನವೊಲಿಸುವುದು ಹೇಗೆ ಎಂಬುದು ಪಂಡಿತರ ತಲೆನೋವಾಗಿತ್ತು, ಈಗ ನಿನ್ನೆಯ (ಸೆಪ್ಟೆಂಬರ್ ಆರು) ವಿಯೆನ್ನಾ ಸಭೆಯಲ್ಲಿ ದೊರೆತ ಅನುಮೋದನೆಯಿಂದ ಭಾರತಕ್ಕೆ ಒಂದು ಮುನ್ನಡೆ ದೊರೆತಿದೆ ಎಂದೇ ಹೇಳಬೇಕು. ಭಾರತದ ಮನೆ ಮತ್ತು ಆಫೀಸುಗಳಲ್ಲಿ ಹಗಲು-ರಾತ್ರಿಗಳಿಗೆ ವ್ಯತ್ಯಾಸವಿರದ ಹಾಗೆ ಎಲೆಕ್ಟ್ರಿಸಿಟಿ ಬಳಕೆ ಆಗುವುದಕ್ಕೆ ಕೊನೇಪಕ್ಷ ಒಂದು ನೂರು ವರ್ಷವಾದರೂ ಬೇಕಿದೆ, ಆದರೆ ಆ ನಿಟ್ಟಿನಲ್ಲಿ ಭಾರತ ಮೊದಲ ಹೆಜ್ಜೆ ಇಟ್ಟಂತಾಗಿದೆ.

***

ಈ ಐತಿಹಾಸಿಕ ದಿನವನ್ನು ಎರಡೂ ನಿಟ್ಟಿನಲ್ಲಿ ನೋಡಬಹುದು: ಅಣುಶಕ್ತಿಯನ್ನು ಜನರ ಒಳಿತಿಗೆ ಬಳಸುವ ದೇಶದ ಗುಂಪಿನಲ್ಲಿ ಭಾರತಕ್ಕೆ ಸಿಕ್ಕ ಸ್ಥಾನ ಒಂದು ರೀತಿಯದಾದರೆ, ಅಂತಹ ತಂತ್ರಜ್ಞಾನವನ್ನು ಮಾರಲು ತುದಿಗಾಲಿನಲ್ಲಿ (ಅಥವಾ ಮುಂಚೂಣಿಯಲ್ಲಿ) ನಿಂತಿರುವ ಅಮೇರಿಕಾ, ರಷ್ಯಾ, ಪ್ರಾನ್ಸ್ ಮೊದಲಾದ ದೇಶಗಳಿಗೆ ದೊಡ್ಡ ಬಿಲಿಯನ್ ಡಾಲರ್ ಮೌಲ್ಯದ ಮಾರುಕಟ್ಟೆ ಕಾದು ನಿಂತಿದೆ. ವೇಗದಲ್ಲಿ ಬೆಳೆಯುವ ದೇಶದ ಅಗತ್ಯಗಳಿಗೆ ಶಕ್ತಿ ಪೂರೈಕೆಯನ್ನು ಮಾಡಲು ಅಣುಶಕ್ತಿಯನ್ನು ಹೊರತುಪಡಿಸಿ ಬೇರೆ ವಿಧಾನಗಳಿಂದ ಪ್ರಯತ್ನಿಸುತ್ತಾ ಸಾಗುವುದು ಒಂದು ವಿಧಾನವಾಗಿತ್ತು. ಈಗಾಗಲೇ ಇರುವ ಶಕ್ತಿ ಮೂಲಗಳ ಜೊತೆಗೆ ಅಣುಶಕ್ತಿಯನ್ನು ಬಳಸುವುದು ಮತ್ತೊಂದು ವಿಧಾನ. ಯಾವುದೇ ದೇಶ ಅದೆನೇ ತಂತ್ರಜ್ಞಾನವನ್ನು ಮಾರಿದರೂ ಚೆರ್ನೋಬೆಲ್ ದುರಂತದಂತಹ ದುರಂತವನ್ನು ದೂರವಿಡುವುದು ಭಾರತೀಯರ ಕೈಯಲ್ಲಿದೆ. ಆ ಜವಾಬ್ದಾರಿಯನ್ನು ಮುಂಬರುವ ನೂರಾರು ವರ್ಷಗಳವರೆಗೆ ಯಾವುದೇ ಕೊರತೆ ಇಲ್ಲದೇ ಒಂದೇ ಒಂದು ತಪ್ಪು ಇಲ್ಲದೇ ನಿಭಾಯಿಸುವುದು ಬಹಳ ದೊಡ್ಡ ಜವಾಬ್ದಾರಿಯೇ ಸರಿ. ಆದರೆ, ಈ ಅಣುಶಕ್ತಿಯನ್ನು ದೂರವಿಟ್ಟು ಕನ್ವೆನ್ಷನಲ್ ಶಕ್ತಿ ಮೂಲಗಳನ್ನು ಪರಿಸರವಾದಿಗಳ ಅನುಮತಿ ಪಡೆದು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ಇನ್ನೂ ದೂರದ ಪ್ರಶ್ನೆಯಾಗಿಯೇ ಉಳಿಯುವುದು. ಈ ಅಣುಶಕ್ತಿಯ ಬೆಳವಣಿಗೆಗೆ ಇನ್ನೇನೇನು ಅಡೆತಡೆಗಳು ಬರುತ್ತವೆಯೋ, ಒಬ್ಬ ಸಾಮಾನ್ಯ ವ್ಯಕ್ತಿಯ ದೃಷ್ಟಿಕೋನದಿಂದ ಹಿಡಿದು, ರಾಜಕಾರಣಿಗಳ, ಪಕ್ಷಗಳ, ಮುತ್ಸದ್ದಿಗಳ, ವಿಚಾರವಾದಿಗಳ, ಪರಿಸರ ಸಂರಕ್ಷರು ಮೊದಲಾದವರುಗಳಿಗೆ ಸಾಂತ್ವನ ಹೇಳಿಕೊಂಡು ಭಾರತದಲ್ಲಿ ಈ ಹೊಸ ಬೆಳವಣಿಗೆ ಯಾವ ದಿಕ್ಕನ್ನು ಹಿಡಿಯುತ್ತದೆಯೋ ಕಾದು ನೋಡಬೇಕು.

3 comments:

sunaath said...

ಭಾರತಕ್ಕೆ ಲಾಭ ಇದೆಯೊ ಅಥವಾ ಹಾನಿ ಆಗಲಿದೆಯೊ ಗೊತ್ತಿಲ್ಲ. ಆದರೆ NSGಗೆ ಮಾತ್ರ ಸಿಕ್ಕಾಪಟ್ಟೆ ಲಾಭ ಆಗಲಿದೆ.
ಕೆಲವು ವರ್ಷಗಳ ಹಿಂದೆ, ಭಾರತ rocket ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡ ಹೊಸದರಲ್ಲಿ, ತನಗೆ ಬೇಕಾದ cryogen fuelಅನ್ನು ರಶಿಯಾದಿಂದ ಕೊಂಡುಕೊಳ್ಳುತ್ತಿತ್ತು. ತಕ್ಷಣವೆ, ಅಮೆರಿಕಾ ಒಂದು Cryogen Fuel Suppliers Club ನಿರ್ಮಿಸಿ, ಅದರ ಬೆಲೆಯನ್ನು ಸಿಕ್ಕಾಪಟ್ಟೆ ಏರಿಸಿತು.
ಅಂಥದ್ದು ಈಗ ಪುನರಾವರ್ತಿಸುವದರಲ್ಲಿ ಸಂದೇಹವಿಲ್ಲ.

Satish said...

ಸುನಾಥ್,
ಅಮೇರಿಕಾಕ್ಕೆ ದೊಡ್ಡ ಲಾಭ ಇದೆ ಅಂತಲೇ ಚೀನಾದೋರು ಮತ್ತೆ ಉಳಿದೋರು ಕಣ್ಣು ಬಿಟ್ಟದ್ದು. ಪಾಪ ಲಾಭ ಮಾಡ್ಕೊಳ್ಳಿ ಬಿಡಿ, ನಾವು ಶಾಪ ವಿಮುಕ್ತರಾಗೋದಕ್ಕೆ ಸ್ವತಃ ಬುಷ್ ಸಾಹೇಬ್ರೇ ನಮ್ ಪರವಾಗಿ ಎದ್ದು ನಿಂತು ವಾದ ಮಾಡಿದ್ರಂತೆ! :-)

Shree said...

ಅಣು ಒಪ್ಪಂದ ಇಲ್ಲಿನ ಕಾರ್ಪರೇಟುಗಳಿಗೆ ಮಾತ್ರ ಸುಗ್ಗಿಯ ಹಾಗಾಗಿದೆ, ರಿಲಯನ್ಸ್, ಟಾಟಾ, ಜಿಎಂಆರ್ ಎಲ್ಲ ತುದಿಗಾಲಲ್ಲಿ ನಿಂತಿವೆ ಅಣು ಸ್ಥಾವರ ಕಟ್ಲಿಕ್ಕೆ... ಇದೆಲ್ಲಾ ಎಣಿಸಿದ್ರೆ ಏನೇನಾಗ್ಲಿಕ್ಕಿದೆಯೋ ಅಂತ ಭಯ ಆಗುತ್ತೆ ಗುರೂ...