Sunday, August 31, 2008

ಲೈಫ್ ಅಂದ್ರೆ ಗೊಂದಲ ಅಲ್ದೇ ಮತ್ತಿನ್ನೇನು?

Even tea bags have instructions to follow! ಅಂತ ಅನ್ನಿಸಿದ್ದು ಇತ್ತೀಚೆಗೆ. ಲೈಫ್ ಅಂದ್ರೆ ಗೊಂದಲ ಅಲ್ದೇ ಮತ್ತಿನ್ನೇನು? ಬೆಳಕಿನ ಬಗ್ಗೆ ತಿಳಕೊಳ್ಳೋಣ ಅಂತ ಶಾಲೆ-ಕಾಲೇಜಿಗೆ ಹೋದ್ರೆ ಬೆಳಕು ಅಂದ್ರೆ ಪಾರ್ಟಿಕಲ್ಲೋ ವೇವೋ ಅಂತ ನಮ್ಮನ್ನೇ ಕನ್‌ಫ್ಯೂಸ್ ಮಾಡ್ತಾರೆ, ಕ್ಲಾಸಿಕಲ್ ಥಿಯರೀನೂ ಬೇಡಾ ಮಾಡರ್ನ್ ಸೈನ್ಸೂ ಬೇಡಾ ಅಂತಂದ್ರೆ ಯಾವಾಗ್ಲೂ ಕ್ವಾಂಟಮ್ ಮೆಕ್ಯಾನಿಕ್ಸ್ ಇದ್ದೇ ಇದೆ, ಆದ್ರೆ ನಮ್ಮ ಕಾಲೇಜು ಮೇಷ್ಟ್ರುಗಳು ಮಾಡೋ ಪಾಠವನ್ನು ಅರ್ಥ ಮಾಡ್ಕೋ ಬೇಕಾದ್ರೆ ವಿದ್ಯಾರ್ಥಿಗಳು ಬೆಳಕಿನ್ ವೇಗಕ್ಕಿಂತ್ಲೂ ಹೆಚ್ಚು ಚುರುಕಾಗಿರಬೇಕು. ಇನ್ನೇನು Heisenberg's Uncertainity Principle ತಲೆ ಒಳಗೆ ಹೊಕ್ಕಿರುತ್ತೋ ಇಲ್ವೋ ಅಷ್ಟೊತ್ತಿಗೆ ಎಕ್ಸಾಮ್ ಅಂತ ತಲೆ ತಿಂದು ಕಲಿ ಬೇಕಾದ್ದು ಕಲಿಯೋ ಹೊತ್ತಿಗೆ ಎಕ್ಸಾಮ್ ಪ್ರಿಪರೇಷನ್ನ್ ಎಕ್ಸಾಮ್ ಪ್ರಿಪರೇಷನ್ನ್ ಮಾಡೋ ಹೊತ್ತಿಗೆ ಕಲಿ ಬೇಕಾದ್ದು ಕಲಿಯೋ ಸಂದರ್ಭ ಬಂದಿದ್ದು ನನಗಂತೂ ಮೊದಲ್ನೇ ಸರ್ತಿ ಅಲ್ಲಾ ತಾನೆ?

ಇಂತಲ್ಲೇ ರಸ್ತೆ ದಾಟೀ ಅಂತ ಬಿಳಿ-ಗೆರೆಗಳನ್ನು ಎಳೆದಿರ್ತಾರೆ, ಅದನ್ನ ದಾಟೋದಕ್ಕಿಂತ ಮೊದ್ಲೇ zeebra crossing ಅಂತ ಹೇಳಿ ಕನ್‌ಫ್ಯೂಸ್ ಮಾಡ್ತಾರೆ. ಪೈಥಾಗೊರೋಸ್ ಥಿಯರಮ್ ಅಂತಾ ತಲೆ ತಿಂತಾರೆ, ಅದನ್ನು ಕಲಿತು ಮುಗೀತಿದ್ದ ಹಾಗೆ it is also known as Donkey's formula ಅಂತಾರೆ. ಝೀಬ್ರಾ ಕತ್ತೆ ಕುದುರೆಗಳಿಗೆ ಗೊತ್ತಿರೋ ಲಾಜಿಕ್ಕನ್ನ ತಿಳಕೊಳ್ಳೋದಕ್ಕೆ ನಾವ್ಯಾಕೆ ಶಾಲೆಗೆ ಹೋಗ್ಬೇಕು?

ನಮ್ ಕನ್ನಡಿಗರದ್ದು ಯಾವಾಗ್ಲೂ ಸಪ್ಪೆ ಸ್ವಭಾವ, ಯಾಕೆ ಅಂತೀರಾ? ಮತ್ತಿನ್ನೇನು, ನಾವೆಲ್ಲ ದೊಡ್ಡದಾಗಿ ’ನಮಸ್ಕಾರ, ಹೇಗಿದ್ದೀರಾ?’ ಅಂತ ಕೇಳ್ತೀವಲ್ಲ, ಈ ’ನಮಸ್ಕಾರ’ ಅನ್ನೋದರಲ್ಲಿ ಕಿಕ್ ಇಲ್ಲ, ಅದರಲ್ಲಿ ನಮಸ್ಕಾರಮ್, ವಣಕ್ಕುಮ್, ಸಲಾಮ್, Hey, Hi ಅನ್ನೋದರಲ್ಲಿರೋ ಗ್ಲಾಮರ್ ಇಲ್ಲ. ’ನಮಸ್ಕಾರ, ನಮಸ್ಕಾರ, ನಮಸ್ಕಾರ’ ಅಂತ ಹೇಳ್ಕೊಂಡು ಆ ಗಣೇಶನೇನೋ ಮುಂದೆ ಬಂದ, ಅದೇ ರೀತಿ ನೀವೇನಾದ್ರೂ ದಾರೀಲಿ ಹೋಗೋರ್ ಬರೋರಿಗೆ ’ನಮಸ್ಕಾರ ನಮಸ್ಕಾರ’ ಅಂದ್ರೆ ತಲೆ ಸರಿ ಇಲ್ಲ ಅಂದ್‌ಕೋತಾರೆ ಅಷ್ಟೇ. ಅದಕ್ಕೋಸ್ಕರನೇ ನಮ್ ಬಯಲ್ ಸೀಮೆಯಲ್ಲಿ ’ಅರಾಮಾ?’ ಅನ್ನೋದು ಅದು How're you doing? ಅನ್ನೋದರ ಯಥಾ ನಕಲೇ, ಆದ್ರೆ ಬಹಳ ಸಿಂಪಲ್ಲಾಗಿರೋದು. ಒಂದು ರೀತಿ ಅರ್ಧ ಪೇಜ್ ಬರೆದಿರೋ ಸ್ಪ್ಯಾನಿಷ್ ಡೈಲಾಗನ್ನು ಮೂರೇ ಮೂರು ಸಾಲು ಇಂಗ್ಲೀಷಿನಲ್ಲಿ ಹೇಳಿದ ಹಾಗೆ.

ಸಹ್ಯಾದ್ರಿ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಕ್ಲಾಸ್ ತಗೋತಿದ್ದೆ, ನಾನೋ ಟೈಮರನ್ನು ಒಡಲಾಳದಲ್ಲೇ ಇಟ್ಟುಕೊಂಡು ಹುಟ್ಟಿದ ಹಾಗೆ ಬಹಳ ಶಿಸ್ತಿನವನು. ಪಾಪ ಯಾವ್ದೋ ಹಳ್ಳಿ ವಿದ್ಯಾರ್ಥಿ ಒಂದೆರಡು ನಿಮಿಷ ಲೇಟ್ ಆಗಿ ಬಂದ, ’ಯಾಕೆ, ಕ್ಲಾಸ್ ಇರೋದ್ ಮರ್ತು ಹೋಯ್ತಾ?’ ಅಂದೆ (’ಊಟ ಮಾಡೋದ್ ಮರೆಯೋದಿಲ್ವಾ?’ ಅನ್ನೋದು ಫಾಲ್ಲೋ ಅಪ್ ಡೈಲಾಗು, ಪರಿಸ್ಥಿತಿ ಅಲ್ಲೀವರೆಗೆ ಹೋಗ್ಲಿಲ್ಲ), ಅವನು, ’ಇಲ್ಲಾ ಸಾರ್, ಈಗಷ್ಟೇ ಊರಿಂದ ಬಂದೆ?’ ಅಂದ. ನಾನು, ’ಹಾಗಾದ್ರೆ ನಾವೆಲ್ಲ ಕಾಡಿಂದ ಬರ್ತೀವೇನು?’ ಅಂದು ಸುಮ್ಮನಾದೆ, ಕ್ಲಾಸ್ ಎಲ್ಲ ನಗ್ತು, ಹುಡುಗನ ಮೋರೆ ಪೆಚ್ಚಗಾಗಿ ನನಗೆ ’ನೀನು ಅಮೇರಿಕದಲ್ಲಿ ಹೋಗಿ ಬೀಳು!’ ಅಂತ ಶಾಪಾ ಹಾಕ್ದಾ ಅನ್ಸತ್ತೆ, ಅದಕ್ಕೆ ಇಲ್ಲ್ ಬಂದ್ ಬಿದ್ದಿದ್ದೀನ್ ನೋಡಿ. ಇಲ್ಲೋ, ವಿದ್ಯಾರ್ಥಿಗಳು ಆನ್‌ಟೈಮ್ ಬರೋದಿರ್ಲಿ ಶಾಲೇಲಿ ಮೇಷ್ಟ್ರುಗಳ ಎದಿರು ವಿದ್ಯಾರ್ಥಿಗಳು ತಿಂಡಿ-ತೀರ್ಥ ತಿನ್ನಬಹುದು ಕುಡೀಬಹುದು. ನಾನು ಯಾವ್ದೋ ಡಾಕ್ಟ್ರು ಅಪಾಯಿಂಟ್‌ಮೆಂಟು ಅಂತ ಅವರು ಕೊಟ್ಟ ಟೈಮಿಗೆ ಹೋದ್ರೆ ಅವರು ಮೊದ್ಲು ದೊಡ್ಡ ರೂಮಿನಲ್ಲಿ ಕಾಯಿಸಿದ್ದು ಆಲ್ದೇ ಅದಕ್ಕಿಂತ ಸಣ್ಣ ರೂಮಿನಲ್ಲಿ ಮತ್ತೆ ಕಾಯಿಸ್ತಾರಲ್ಲ. ಇಲ್ಲಿಯವರಿಗೆ ಟೈಮ್ ಸೆನ್ಸೇ ಇಲ್ಲ, ನನ್ ಮೀಟಿಂಗ್‌ಗಳು ಆನ್‌ಟೈಮ್ ಶುರು ಆಗೋದಿರಲಿ, ಅವು ಸರಿಯಾದ ಟೈಮಿಗೆ ಮುಗಿಯೋದೂ ಇಲ್ಲ. ಯಾವ್ದೂ ಬೇಡಪ್ಪಾ ನ್ಯಾಸಾದ ಉಡಾವಣೆಗಳೇ ಸರಿಯಾದ ಸಮಯಕ್ಕೆ ಆಗೋದಿಲ್ಲ ಅಂದ್ರೆ, ಅಮೇರಿಕದಲ್ಲಿ ಟೈಮಿಗೆ ಎಲ್ಲಿ ಬೆಲೆ ಇದೆ ನೀವೇ ಹೇಳಿ? ನನ್ ತಂದೆ ತಾಯಿ ಮಾಡಿದ ಮೂವತ್ತೈದು ವರ್ಷ ಮೇಷ್ಟ್ರ ಸರ್ವೀಸ್‌ನಲ್ಲಿ ಪ್ರತಿದಿನ ಕೆಲ್ಸಕ್ಕೆ ಹೋಗೋವಾಗ್ಲೂ ಯಾವಾಗ್ಲೂ ಆನ್‌ಟೈಮ್ ಅವರು ಶುರು ಮಾಡುತ್ತಿದ್ದ ತರಗತಿಗಳು ಆನ್‌ಟೈಮ್, ಆದ್ರೆ ನಾನ್ ನೋಡಿ ನನ್ನ ಹದಿನೈದು ವರ್ಷದ ವೃತ್ತಿ ಜೀವನದಲ್ಲಿ ಒಂದ್ ದಿನಾನೂ ಮನೇನ ಆನ್‌ಟೈಮ್ ಬಿಟ್ಟಿದ್ದಿಲ್ಲ - ಎಲ್ಲಾ ಆ ಸಹ್ಯಾದ್ರಿ ಕಾಲೇಜ್ ಹುಡುಗನ್ದೇ ತಪ್ಪು!

ಇಷ್ಟು ಚಿಕ್ಕ ಮನುಷ್ಯ ನಾನು, ನನ್ನದೊಂದು ದೊಡ್ಡ ಮಾತಿದೆ - ಕನ್ನಡಿಗರಿಗೆ ಆತ್ಮಾಭಿಮಾನ ಕಮ್ಮಿ - ಅಂತ. ಬೇರೆ ಯಾವ್ ಭಾಷೇನೋರೂ ಆವರ ಮಾತುಕಥೆಯ ನಡುವೆ ಮತ್ತೊಬ್ಬ ಪರಭಾಷಿಯ ಆಗಮನವಾದ್ರೆ ತಮ್ ಮಾತೃಭಾಷೆಯಲ್ಲಿನ ಡೈಲಾಗನ್ನು ಬದಲಾಯಿಸೋದಿಲ್ಲ, ಕೇವಲ ಕನ್ನಡಿಗರು ಮಾತ್ರ ಒಂದೇ ಕಾಮನ್ ಲಾಂಗ್ವೇಜ್ ಇಂಗ್ಲೀಷಿಗೆ ಮೊರೆ ಹೋಕ್ತಾರೆ, ಇನ್ನೂ ವರ್ಸ್ಟ್ ಅಂದ್ರೆ ಆಗಮಿಸಿದ ಪರಭಾಷಿಯ ಭಾಷೆಯಲ್ಲಿ ತಮ್ಮ ಡೈಲಾಗನ್ನು ಕಂಟೀನ್ಯೂ ಮಾಡ್ತಾರೆ. ನನಗೆ ಹಾಗೆ ಆದಾಗ್ಲೆಲ್ಲ ಮೈ ಉರಿಯುತ್ತೆ ಅನ್ನೋದೇನೋ ನಿಜ, ಆದ್ರೆ ಏನ್ ಮಾಡ್ಲಿ ಹೇಳಿ? ಅದಕ್ಕೆ ಒಂದು ಹೊಸ ಫಾರ್ಮುಲಾ ಕಂಡ್ ಹಿಡಿದಿದ್ದೀನಿ. ನಿಮ್ಮ ಎದುರು ಯಾರಾದ್ರೂ ಕನ್ನಡಿಗರು ನನಗೆ ಆ ಭಾಷೆ ಬರುತ್ತೆ, ಈ ಭಾಷೆ ಬರುತ್ತೆ ಅಂತ ಕೊಚ್ಚಿಕೋತಾರೆ ನೋಡಿ, ಆಗ ಅವರಿಗೆ ಒಂದು ಸರಳ ಪ್ರಶ್ನೆ ಕೇಳಿ ಬಾಯಿ ಮುಚ್ಚಿಕೊಂಡು ಸುಮ್ಮನಿರ್ತಾರೆ. ನಮ್ಮ್ ಸೋದರಮಾವ ಹಾಗೆ ಭಾರತದಲ್ಲಿ ಅಲ್ಲಿ ಇಲ್ಲಿ ಇದ್ದು ಬಂದೋರು ಕನ್ನಡವೂ ಬರೋಲ್ಲ, ಉಳಿದ ಭಾಷೆಗಳೂ ಬರೋದಿಲ್ಲ ಅಂತಂದ್ರೇನೇ ಚೆನ್ನ. ಒಂದ್ ದಿನ ಅವರು ಕೊಚ್ಚಿ ಕೊಳ್ತಾ ಇದ್ರು, ನನಗೆ ತಮಿಳು ಬರುತ್ತೆ, ತೆಲುಗು ಬರುತ್ತೆ, ಮುಂತಾಗಿ ಒಟ್ಟು ಹನ್ನೊಂದೋ ಹನ್ನೆರಡೋ ಕೌಂಟು ಮಾಡುವಷ್ಟು. ನಾನೆಂದೆ ’ನಿಮಗೆ ತಮಿಳು ಬರುತ್ತಾ? ಹಾಗಾದ್ರೆ - ಆಧುನಿಕ ಭಾರತದಲ್ಲಿ ಜನಸಂಖ್ಯಾ ಸ್ಪೋಟದಿಂದ ಸಮಸ್ಯೆಗಳು ಉಲ್ಬಣಗೊಂಡಿವೆ - ಅನ್ನೋದನ್ನು ಆ ಭಾಷೆಯಲ್ಲಿ ಹೇಗೆ ಹೇಳ್ತೀರಿ?’ ನಮ್ಮ್ ಮಾವ ಬೆಬ್ಬೆಬ್ಬೆ ಆದ್ರು. ನಾನು ಹೇಳಿರೋ ಕನ್ನಡದ ವಾಕ್ಯದಲ್ಲಿ ಸಂಸ್ಕೃತ ಪದಗಳೇ ಇರಬಹುದು, ಆದ್ರೆ ನಾನು ಹೇಳಿದ್ದನ್ನ ಅವರು ಆಯಾ ಭಾಷೇನಲ್ಲಿ ಟ್ರಾನ್ಸ್‌ಲೇಟ್ ಮಾಡ್ದೇ ಹೋದ್ರೆ ಅವರಿಗೆ ಆ ಭಾಷೆ ಬರುತ್ತೇ ಅಂತ ಹೇಗ್ ಹೇಳ್ಲಿ, ಹೇಗೆ ಒಪ್ಪಿಕೊಳ್ಳಲಿ. ಸ್ವಲ್ಪ ವರ್ಷಗಳ ಮೇಲೆ ತಿಳೀತು, ನಾನು ಹೇಳಿದ ಕನ್ನಡದ ಸಾಲೇ ಅವರಿಗೆ ಅರ್ಥವಾಗಿರಲಿಲ್ಲ ಅಂತ!

ಗುರುದ್ವಾರ-ಗುದದ್ವಾರದ ಕಥೆ ಹೇಳಿ ನಿಮ್ಮನ್ನ ಬಿಟ್ಟು ಬಿಡ್ತೀನಿ, ನೈಜ ಘಟನೆ ಆದರೆ ಪಾತ್ರಗಳನ್ನು ಬದಲಾಯಿಸಿದ್ದೀನಿ ಅಷ್ಟೇ - ಆದ್ರೆ ಹೀಗೆ ಹೇಳ್ದೋನು ನಾನಂತೂ ಅಲ್ಲ!
ಒಂದು ದಿನ ನಮ್ಮ ಐಟಿ ಪ್ರಾಜೆಕ್ಟ್ ಟೀಮಿನ ಪ್ರೊಡಕ್ಷನ್ನ್ ಮೀಟಿಂಗ್ ನಡೀತಾ ಇತ್ತು, ವೀಕೆಂಡಿನಲ್ಲಿ ಯಾವ್ದೋ ಎಮರ್ಜನ್ಸಿ ಬಂದಿತ್ತಾದರಿಂದ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದ ಎಲ್ಲರನ್ನೂ ಪೇಜ್ ಮಾಡೀ ಮಾಡೀ ಕಾನ್‌ಫರನ್ಸ್ ಕಾಲ್‌ಗೆ ಸೇರಿಕೊಳ್ಳೋದಕ್ಕೆ ಹೇಳ್ತಾ ಇದ್ವಿ. ಐಟಿ ಟೀಮು ಅಂದ್ರೆ ಭಾರತೀಯರ ಸಮೂಹ - ಬರೀ ವರ್ಕರ್ ಬೀಸ್ ಮಾತ್ರ ಸಾರ್, ಮ್ಯಾನೇಜ್‌ಮೆಂಟ್ ಅಲ್ಲ - ಅದರಲ್ಲಿ ಸರ್ದಾರ್‌ಜಿಗಳು, ಸೌತ್ ಇಂಡಿಯನ್ಸೂ (ಕನ್ನಡಿಗರೂ ಸೇರಿ!) ಇರೋ ಅಂತದ್ದು. ನಾನು ರಾಮ್ ಸಿಂಗ್ ಇನ್ನೂ ಯಾಕೆ ಬಂದಿಲ್ಲ ಅಂತ ಯೋಚಿಸ್ತಾ ಇರೋವಾಗ ನನ್ನ ಕನ್ನಡ ಮಿತ್ರ ಅವನಿಗೆ ಪೇಜ್ ಮಾಡಿ, ಅವನ ಜೊತೆ ಫೋನ್‌ನಲ್ಲಿ ಮಾತನಾಡಿದ ನಂತರ ಬಂದು ಕಿವಿಯಲ್ಲಿ ಹೇಳಿದ - ’ರಾಮ್ ಸಿಂಗ್, ಗುದದ್ವಾರಕ್ಕೆ ಹೋಗಿದ್ದಾನೆ, ಇನ್ನೊಂದು ಅರ್ಧ ಘಂಟೆ ಬರೋಕೆ ತಡವಾಗುತ್ತಂತೆ!’ ಅಂತ. ನಾನು ಮುಖ ಕಿವುಚಿ, ’What?!’ ಅಂದ್ರೆ, ಮತ್ತೆ ’ಅವನು ಗುದದ್ವಾರದಲ್ಲಿದ್ದಾನೆ!’ ಅಂತ ಹೇಳ್ದ. ಅವನು ಇನ್ನೊಂದ್ ಸರ್ತಿ ಹಂಗೇ ಹೇಳಿದ್ರೆ ನಾನು ನಂಬ್‌ಕೊಂಡ್ ಬಿಡ್ತಿದ್ನೋ ಏನೋ, ನನಗಂತೂ ನಗು ತಡೆಯಲಾಗದೇ ಕಾನ್‌ಫರೆನ್ಸ್ ಕಾಲ್‌ನ ಮ್ಯೂಟ್ ಮಾಡಿ, ’Are you sure?' ಅಂದೆ, ಆದರೆ ನನ್ನ ಕನ್ನಡ ಮಿತ್ರನಿಗೆ ತಾನು ಏನು ಹೇಳಬೇಕಾಗಿತ್ತು ಏನು ಹೇಳ್ದೆ ಅನ್ನೋದೇ ಅರ್ಥ ಆಗ್ಲಿಲ್ಲ. ’ಗುರುದ್ವಾರ, ಗುದದ್ವಾರ ಎರಡೂ ಭಗವಂತನ ಸೃಷ್ಟಿಗಳೇ, ಸದ್ಯ ಅಲ್ಲಿಂದ ಬರ್ತಾನಲ್ಲ ಸಾಕು’ ಎಂದು ಸುಮ್ಮನಾದೆ. ಈ ವಿಷಯವನ್ನು ನೆನೆಸಿಕೊಂಡಾಗಲೆಲ್ಲ ಎಂತಹ ಕಷ್ಟದ ಸಮಯದಲ್ಲೂ ನನಗೆ ತಿಳಿ ನಗು ಬರುತ್ತೆ.

***
ಕೊಸರು: ಇಂಗ್ಲೀಷೇ ದೊಡ್ಡದು ಅಂತ ಹಾರಾಡಿ ಒದ್ದಾಡೋರಿಗೆಲ್ಲ ಒಂದು ಸವಾಲು, ಯಾವಾಗ್ಲೂ ’ಶಿಟ್-ಶಿಟ್’ ಅಂತ ಅನ್ನೋರು ದಯವಿಟ್ಟು ತಮ್ಮ ಮಾತಿನ ಮಧ್ಯೆ ಒಂದ್ ಸರ್ತೀನಾದ್ರೂ ಅದನ್ನ ಕನ್ನಡಕ್ಕೆ ತರ್ಜುಮೆ ಮಾಡಿ ಹೇಳಿ ನಿಮ್ಮ ಬಾಯಿ ಎಷ್ಟು ಕೊಳಕಾಗಿದೆ ಅಂತ ಎಲ್ಲರಿಗೆ ತೋರಿಸಬಾರದೇಕೆ?

6 comments:

Keshav.Kulkarni said...

ಸತೀಶ,
’ಆರಾಮಾ?’ ಅಂತ ಕೇಳೋದು ಖಂಡಿತ ಇಂಗ್ಲಿಷಿನಿಂದ ಎರವಲು ತಂದದ್ದಲ್ಲ.
ನಮ್ಮೂರ ಕಡೆ ಇಂಗ್ಲೀಶಿನ ಗಂಧ ಗಾಳಿಯೂ ಇರದ ಜನ ಹೇಳುವುದು, ’ಆರಾಮಾ?’.
-ಕೇಶವ

ಯಜ್ಞೇಶ್ (yajnesh) said...

Tumba chennagi bardidira satish...

olle hasyamayavagide lekhana. janara manassannu tattatthe.

-Yajnesh

Anonymous said...

ಮಸ್ತ್ ಐತ್ರಿ. ಕೆಲವೊಂದು ಶಬ್ದಗಳೇ ಹಾಗೆ. ಅವು ಹೇಗೆ ಇದ್ದರೂ ನಮ್ಮ ಮೆದುಳು ಆಭಾಸ ಆಗೋ ರೀತಿ ಓದಿಕೊಳ್ಳತ್ತೆ. SGPC - ಶಿರೋಮಣಿ ಗುರುದ್ವಾರ ಪ್ರಭಂದಕ್ ಕಮೀಟೀ ಅಂತ ಪೇಪರ್ ಬಂದಗಾ ನಾವೆಲ್ಲ ಓದೋದು ಹೇಗೆ ಅಂತ ಗೊತ್ತಾಗಿರಬಹುದು. ಆದ್ರೆ ರೀತಿ ಯಾಕೋ ಶಂಕರ ಭಗವತ್ಪಾದರು ಅನ್ನೋದು ಶಂಕರ ಭಯೋತ್ಪಾದರು ಅಂತ ಓದ್ಕೊಂಡು ಶಂಕರಚಾರ್ಯರನ್ನ ಟೆರರಿಸ್ಟ್ ಮಾಡಿ ಬಿಟ್ಟಿದ್ದೆವು.

-ಮಠ

sunaath said...

ಸತೀಶ,
ಆರಾಮಾ?
ನಿಮ್ಮ ಲೇಖನಕ್ಕೆ ವಿನೋದದ ಹೊದಿಕೆ ಇದ್ದರೂ ಸಹ, ಒಳಗಿನ ಕುದಿ ಘಾಟಾಗಿಯೇ ಇದೆ.ತುಂಬಾ ಮೆಚ್ಚಿಗೆಯಾಯ್ತ್ರೀ.
ಅಮೇರಿಕದ ಬಗೆಗೆ ಉತ್ತಮ ಒಳನೋಟದ ಮಾಹಿತಿ ಕೊಟ್ಟಿದ್ದೀರಿ.
ಪರಭಾಷಾಭಿಮಾನಿ ಕನ್ನಡಿಗರಿಗೆ 'ಶಿಟ್'ಹಚ್ಚಿ ತಿಕ್ಕಿದ್ದೀರಿ.
-ಸುನಾಥ

Satish said...

ಕೇಶವ್,
ನೀವು ಹೇಳ್ತಿರೋದು ಸರಿ, ’ಆರಾಮಾ’ ಅನ್ನೋದು ಇಂಗ್ಲೀಷಿನ ನಕಲಲ್ಲ, ಆ ಅರ್ಥಬರುವಂತೆ ಚಿಕ್ಕದಾಗಿ ಹೇಳುವ ಮಾತು ಎನ್ನುವುದು ನನ್ನ ಇಂಗಿತವಾಗಿತ್ತು.

ಯಜ್ಞೇಶ್,
ಧನ್ಯವಾದಗಳು, ಹಾಸ್ಯಮಯವಾಗಿರೋ ಲೇಖನಗಳು ಭಾಷಣಗಳು ಇತ್ತೀಚೆಗೆ ಹೆಚ್ಚು ಆಗ್ತಿರೋ ಸಂದರ್ಭದಲ್ಲಿ ಒರಿಜಿನಲ್ ಅಗಿರೋ ಹಲವು ಹಾಸ್ಯ ಪ್ರಸಂಗಗಳನ್ನು ಹೊರ ತರುವ ಪ್ರಯತ್ನ ಇದು ಅಷ್ಟೇ.

ಮಠ್,
ಸರ್ರ, ಎಲ್ಲೋ ಕಳಕಂಬಿಟ್ಟೀರಿ ಅನಕಂಡಿದ್ದೆ, ಇನ್ನೂ ಅದೀರಲ್ಲ.
ಏನ್ ಸಮಾಚಾರಾ? ಮಲಯಾಳೀ ಮೂಲದ ಶಂಕರಾಚಾರ್ಯರು ಒಂದ್ ರೀತಿ ಭಯೋತ್ಪಾದಕರೇ ಅನ್ನೋದು ನಮ್ಮ ಸುಬ್ಬನ ಅಂಬೋಣ!

ಸುನಾಥ್,
ಅಯ್ಯೋ ನಾನ್ಯಾಕೆ ಅಂತಹದ್ದನ್ನು ಹಚ್ಚಿ ತಿಕ್ಕಲಿ, ನೀವೊಂದು. ನಾನು ಹಾಸ್ಯದಲ್ಲಿ ಸುತ್ತಿ ಹೊಡೆದಿರಬಹುದು ಅಷ್ಟೇ. :-)

Harisha - ಹರೀಶ said...

ವಿಡಂಬನಾತ್ಮಕ ಬರವಣಿಗೆ ಚೆನ್ನಾಗಿದೆ.