Sunday, March 02, 2008

(ಇನ್ನೂ) ಜೀವಂತ (live) ಕ್ರಿಕೆಟ್

ಇಪ್ಪತ್ತು ವರ್ಷಗಳ ಬಳಿಕವೂ ಅದೇನೇನೆಲ್ಲ ತಂತ್ರಜ್ಞಾನದಲ್ಲಿ ನಾವು ಮುಂದೆ ಹೋಗಿದ್ದರೂ ನನ್ನ ಹಣೇ ಬರಹಕ್ಕೆ ’ಬಾಲ್ ಬೈ ಬಾಲ್’ ಕಾಮೆಂಟರಿಯೇ ಗತಿಯಾಯ್ತು! I can't believe I am (still) doing this - ಬೆಳಿಗ್ಗೆ ಮೂರು ಘಂಟೆಯಿಂದ cricinfo.com ಮುಂದೆ ಕೂತುಗೊಂಡು ಲೈವ್ ಸ್ಕೋರ್ ಕಾರ್ಡ್ ನೋಡ್ತಾ ಇದ್ದೇನೆ, ಮೊದಲ ಆಸ್ಟ್ರೇಲಿಯಾ-ಭಾರತ ಫೈನಲ್ ಮ್ಯಾಚು.

ಉತ್ತಪ್ಪ, ಗಂಭೀರ್ ಔಟಾಗಿ ಹೋದ್ರೂ ನಂತರ ಬಂದ ಯುವರಾಜ್ ತೋರಿಸಿದ ಚಾಕಚಕ್ಯತೆ ಜೊತೆಯಲ್ಲಿ ವೆಟಿರನ್ ತೆಂಡೂಲ್ಕರ್ 50 ರ ಗಡಿ ಮುಟ್ಟಿದ್ದು ಇವೆಲ್ಲ ಇನ್ನೂ ಮ್ಯಾಚ್ ಅನ್ನೂ ಕುತೂಹಲಕಾರಿಯಾಗಿಯೇ ಇಟ್ಟಿವೆ. ಯಾವಾಗಲೂ ಮ್ಯಾಚ್ ನೋಡೋವಾಗ ಅನ್ನಿಸೋ ಹಾಗೆ ಅವರು ಹೀಗೆ ಮಾಡಬೇಕಿತ್ತು, ಹಾಗೆ ಮಾಡಬೇಕಿತ್ತು ಅನ್ಸೋದೇನೋ ನಿಜ, ಜೊತೆಗೆ ಆಸ್ಟ್ರೇಲಿಯಾದವರ ನೆಕ್ಸ್ಟ್‌ ಜನರೇಷನ್ ಕ್ರಿಕೆಟ್ ಎದಿರು ನಮ್ಮವರ ಆಟ ಏನು ನಡೆಯುತ್ತೋ ಅನ್ನೋ ಹೆದರಿಕೆ ಬೇರೆ.

***

ನೀವು ನಿಮ್ಮ ಜೀವನದಲ್ಲಿ ಇದುವರೆಗೆ ರೆಡಿಯೋ ಅನ್ನು ಕಿವಿಗೆ ಆನಿಸಿಕೊಂಡು ಕ್ರಿಕೆಟ್ ಕಾಮೆಂಟರಿ ಕೇಳಿರದಿದ್ದರೆ, ಹಾಗೆ ಮಾಡಿದವರನ್ನು ನೋಡಿರದಿದ್ದರೆ ಈ ಲೇಖನವನ್ನು ನೀವು ಅಪ್ರಿಶಿಯೇಟ್ ಮಾಡ್ತೀರೋ ಇಲ್ಲವೋ ಗೊತ್ತಿಲ್ಲ, ಆದರೆ ನನ್ನ ಅಂತರಾಳದ ಪ್ರಶ್ನೆಯೊಂದಕ್ಕಂತೂ ಇಂದು ಉತ್ತರ ಸಿಕ್ಕಂತಾಗಿದೆ.

ಭಾರತೀಯರು ಬಹಳ imaginative ಅನ್ನೋದು ನಿಜವಲ್ಲದೇ ಇನ್ನೇನು?! ತನ್ನಷ್ಟಕ್ಕೆ ತಾನೇ ಒಂದಿಷ್ಟು ಸೆಕೆಂಡುಗಳಿಗೊಮ್ಮೆ ರಿಫ್ರೆಶ್ ಆಗೋ ಕಂಪ್ಯೂಟರ್ ಪರದೇ ಮೇಲೆ ಅದ್ಯಾರೋ ವೇಗದಲ್ಲಿ ಟೈಪ್ ಮಾಡುತ್ತಿರುವ ಪುಣ್ಯವೆಂಬಂತೆ ನನ್ನ ಮತ್ತು ಕಂಪ್ಯೂಟರ್ ಪರದೆಯ ನಡುವಿನ ಜಾಗದಲ್ಲಿ ವಿಶ್ವ ಕ್ರಿಕೆಟ್ ಪಂದ್ಯವೊಂದು ಅವತರಿಸಿಕೊಳ್ಳುತ್ತಿದೆ. ಈ ಬಾಲ್ ಬೈ ಬಾಲ್ ಕಾಮೆಂಟರಿ, ಅದೂ ಟೆಕ್ಸ್ಟ್ ಮಾಧ್ಯಮದಲ್ಲಿ, ಇದನ್ನ ಅಮೇರಿಕನ್ ಮಾಧ್ಯಮದವರು ಊಹಿಸಿಕೊಳ್ಳುತ್ತಾರೋ ಇಲ್ಲವೋ, ನಾವಂತೂ ನಮ್ಮ ಮನಸ್ಸಿನಲ್ಲಿ ಅದೇನೇನೆಲ್ಲ ನಿರೀಕ್ಷೆಗಳನ್ನು ಕಲ್ಪಿಸಿಕೊಂಡು ಇಡೀ ಮ್ಯಾಚ್ ಅನ್ನೇ ನಮ್ಮ ಮುಂದೆ ತಂದುಕೊಳ್ಳುತ್ತೇವೆ. ಅಗತ್ಯಕ್ಕೆ ತಕ್ಕಂತೆ (ಇಂದಿಗೂ) ನಮ್ಮ ಎದೆ ಬಡಿತ ಹೆಚ್ಚುವುದು ಅಥವಾ ಕಡಿಮೆ ಆಗುವುದು ಇವೆಲ್ಲ ಇಂದು ನಿನ್ನೆಯ ವಿಶೇಷವೇನೂ ಅಲ್ಲ, ಅಲ್ಲವೇ?

***

Dish Network ನವರಿಗೆ 150 ಡಾಲರ್ ಕೊಟ್ಟು ವರ್ಷದ Z-Sports ಚಾನೆಲ್ ಹಾಕಿಸಿಕೊಂಡು ಮನೆಯ ಟಿವಿಯಲ್ಲಿ ಮ್ಯಾಚ್‌ಗಳನ್ನು ನೋಡೋದರಲ್ಲಿ ಮಜವಿದ್ದಿರಬಹುದು, ಅದು ಇನ್ನೂ ನನ್ನ ಮನಸ್ಸನ್ನ ಗೆದ್ದಿಲ್ಲ. ಟ್ವೆಂಟಿ-ಟ್ವೆಂಟಿ ಅಂಥಹ ಮ್ಯಾಚ್‌ಗಳನ್ನಾಗಲೀ, ವರ್ಲ್ಡ್ ಕಪ್ ಪಂದ್ಯಗಳನ್ನಾಗಲೀ ಇಲ್ಲಿನ ಸಿನಿಮಾ ಪರದೆಯ ಮೇಲೆ ನೋಡುವಷ್ಟು ದೂರವಂತೂ ಈ ವರೆಗೂ ಹೋಗಿದ್ದಿಲ್ಲ. ಆದರೆ ಅಪರೂಪಕ್ಕೊಮ್ಮೆ ಹೀಗೆ ಶನಿವಾರವೋ ಭಾನುವಾರವೋ ಬೇಗನೆ ಎದ್ದು ಸ್ಕೋರ್ ಕಾರ್ಡ್ ಅನ್ನು ನೋಡಿಕೊಂಡೋ ಅಥವಾ ಮ್ಯಾಚ್ ಬಗ್ಗೆ ಬರುವ ವರದಿ-ಚಿತ್ರಗಳನ್ನು ನೋಡಿಕೊಂಡೊ ತೃಪ್ತಿಪಟ್ಟುಕೊಂಡಿದ್ದಿದೆ.

ವಿಶೇಷವೆಂದರೆ ಅಮೇರಿಕದಲ್ಲಿ ಇಷ್ಟೊಂದು ವರ್ಷಗಳಿದ್ದಿರೂ ನಾನು ಇಲ್ಲಿನ ಬೇಸ್‌ಬಾಲ್, ಫುಟ್‌ಬಾಲ್ ಮ್ಯಾಚ್‌ಗಳನ್ನು ಟಿವಿ ಮೇಲಾಗಲಿ, ಲೈವ್ ಆಗಲಿ ನೋಡಿದ್ದೇ ಅಪರೂಪವೆನ್ನಬಹುದು. ನಾನು ಈವರೆಗೆ ನೋಡಿರೋದು ಒಂದೇ ಒಂದು ಸೂಪರ್ ಬೋಲ್, ಅದೂ ಎಷ್ಟೋ ವರ್ಷಗಳ ಹಿಂದೆ. ಯಾಕೆ ಹೀಗೆ ಎಂದು ಕೇಳಿಕೊಂಡಾಗಲೆಲ್ಲ ಉತ್ತರ ಸಿಕ್ಕಿರೋದರ ಪ್ರಕಾರ ಇಲ್ಲಿನ ನಮ್ಮ ಆಟ ರಹಿತ ಬದುಕೋ, ನಮಗೆ ಗೊತ್ತಿರದ ರುಚಿಸದ ಪಂದ್ಯಗಳೋ, ಇವಕ್ಕೆಲ್ಲ ಇನ್ನೂ ಹೆಚ್ಚು ಎನ್ನುವಂತೆ ವರ್ಷದ ಆರು ತಿಂಗಳ ಛಳಿಯೋ ಮುಖ್ಯ ಕಾರಣಗಳಾಗಿ ಕಂಡುಬರುತ್ತವೆ. ಬೇಸಿಗೆಯಲ್ಲಿ ನಮ್ಮಲ್ಲಿ ಕ್ರಿಕೆಟ್ ಆಡುವ ಟೀಮುಗಳಿವೆ, ಅಲ್ಲಿಗೆ ಹೋಗಿ ಬಂದು ಮಾಡೋಣವೆಂದುಕೊಂಡರೆ ಲಾಜಿಸ್ಟಿಕ್ ಸಮಸ್ಯೆ - ಆಟಕ್ಕೋಸ್ಕರ ಒಂದು ಇಡೀ ದಿನವೇ ಹಾಳಾಗಿ ಹೋದೀತೇನೋ ಎನ್ನುವ ಹೆದರಿಕೆ.

***

ನಾವೂ ಅಮೇರಿಕನ್ ಆಗಿ ಬಿಡಬಹುದು - ಹೇಳಿದಷ್ಟಂತೂ ಸುಲಭವಿಲ್ಲ. ಬುದ್ಧಿವಂತರ ಮಾತಿನ ನಡುವೆ ಕ್ರಿಕೆಟ್ ಆಟವೆನ್ನುವುದು ಸೋಮಾರಿಗಳ ಆಟವೆಂದು ನಾನು ವಾದಿಸಿದ್ದೇ ಬಂತು. ಸಮಯ ಸಿಕ್ಕಾಗಲೆಲ್ಲ ಆನ್‌ಲೈನ್ ಪೋರ್ಟಲುಗಳಲ್ಲಿ ಅಲ್ಲಲ್ಲಿ ಕಣ್ಣು ವಿಷಯಗಳಿಗಾಗಿ ಹುಡುಕುತ್ತಲೇ ಇರುತ್ತದೆ. ಇತ್ತೀಚಿನ ಆಟಗಾರರ ಜೊತೆ ನಾನು ವೈಯಕ್ತಿಕವಾಗಿ ಯಾವ ರೀತಿಯಲ್ಲಿ ಹೋಲಿಸಿಕೊಳ್ಳದಿರಬಹುದು, ಅವರ ಹೆಸರು, ಚಿತ್ರಗಳು ಗುರುತಿಗೆ ಬರದಿರಬಹುದು, ಆದರೆ ಆ ಆಟದಲ್ಲಿ ಅದೇನೋ ಜೀವಂತಿಕೆ ಇದೆ ಅನ್ನಿಸಿದ್ದು ಸುಳ್ಳಲ್ಲ. ಐದು ದಿನಗಳ ಟೆಸ್ಟ್ ಪಂದ್ಯಗಳನ್ನು ನೋಡುವಷ್ಟರ ಮಟ್ಟಿಗೆ ನನ್ನಲ್ಲಿ ವ್ಯವಧಾನವಿಲ್ಲದಿದ್ದರೂ ಅದರ ಸಾರಾಂಶವನ್ನು ಅದು ನಿಮಿಷ ಓದುವಷ್ಟು ಆಸಕ್ತಿಯಿದೆ. ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಅದ್ಯಾರು ನೋಡುತ್ತಾರಪ್ಪಾ ಎನ್ನಿಸಿದ್ದರೂ ಈಗ ಅವುಗಳಲ್ಲಿ ಸಾಕಷ್ಟು ಒಲವಿದೆ, ಜೊತೆಗೆ ಇತ್ತೀಚಿನ ಟ್ವೆಂಟಿ-ಟ್ವೆಂಟಿ ಅಂತೂ ವೇಗವಾಗಿ ಆಡಬಹುದಾದ ಆಟ ಅನ್ನಿಸಿದೆ.

ನನ್ನ ಸಮ ವಯಸ್ಕ ತೆಂಡೂಲ್ಕರ್ ಇನ್ನೂ ಜೀವಂತವಾಗೇ ಇದ್ದಾನೆ, 65 ಬಾಲ್‌ಗಳಲ್ಲಿ 60 ರನ್‌ಗಳನ್ನು ಸಾಧಿಸಿಕೊಂಡು ಮಾಥ್ಯೂ ಹೇಡನ್‌ಗೆ ಸರಿ ಸಮಾನವಾಗಲಿದ್ದಾನೆ ಎನ್ನೋದು ಈಗ ನಡೀತಾ ಇರೋ ಪಂದ್ಯದಲ್ಲಿ ಒಂದಿಷ್ಟು ಕುತೂಹಲವನ್ನಂತೂ ಇಟ್ಟುಕೊಂಡಿದೆ. ಹೊಸಬರು ಯಾರು ಯಾರೋ ಬಂದು ಹೋದರೂ ನನಗೆ ನನ್ನ ಪರಿಚಯದ anchor ಸಿಕ್ಕೋದನ್ನು ನಾನು ಕಾಯ್ತಾ ಇರ್ತೀನಿ. ರಾಹುಲ್ ಡ್ರಾವಿಡ್, ಕುಂಬ್ಳೆ ಅವರನ್ನೆಲ್ಲ ಮತ್ತೊಮ್ಮೆ ನಾನು ಪರದೆಯಲ್ಲಿ ನೋಡ್ತೀನೋ ಬಿಡ್ತೀನೋ, ತೆಂಡೂಲ್ಕರ್ ’ಔಟ್’ ಆಗೋವರೆಗೆ ಇನ್ನೂ ಈ ಕ್ರಿಕೆಟ್ಟಿನಲ್ಲಿ ಜೀವವಿದೆ ಅನ್ನಿಸೋದು ಈ ಹೊತ್ತಿನ ತತ್ವಗಳಲ್ಲೊಂದು.

ಅದೇ ವಿಶೇಷ ನೋಡಿ - ಎಲ್ಲಿ ನಮ್ಮನ್ನು ನಾವು ಕಂಡುಕೊಳ್ಳುತ್ತೇವೋ ಅಲ್ಲಿ ಆಸಕ್ತಿ ತಂತಾನೇ ಬಂದೀತು, ನಾವೂ ಅಲ್ಲಿಯವರಾದೇವು.

5 comments:

ಸುಧೇಶ್ ಶೆಟ್ಟಿ said...

Chennagide.

Anonymous said...

Nice blog, especially refreshing to see content that appeals to the Kannada audience. I would like to introduce you to a quick and easy method of typing Kannada on the Web.
You can try it live on our website, in Kannada!

http://www.lipikaar.com

Download Lipikaar FREE for using it with your Blog.

No learning required. Start typing complicated words a just a few seconds.

> No keyboard stickers, no pop-up windows.
> No clumsy key strokes, no struggling with English spellings.

Supports 14 other languages!

ಚಿತ್ರಾ ಸಂತೋಷ್ said...

ಚೆನ್ನಾಗಿ ಬರದಿದ್ದೀರಿ..ಸತೀಶ್

Anonymous said...

ಬ್ಲಾಗ್ ಚೆನ್ನಾಗಿದೆ.ನಿಮ್ ಬ್ಲಾಗೆ ನಾನು ಹೊಸ ಮುಖ ಹಾಗೇ ಬ್ಲಾಗ್ ಲೋಕಕ್ಕೂ
ಬೆಳದಿಂಗಳು

Satish said...

ಸುದೇಶ್,
ಧನ್ಯವಾದ, ಹೀಗೇ ಆಗಾಗ್ಗೆ ಭೇಟಿ ಕೊಡ್ತಾ ಇರಿ.

ಲಿಪಿಕಾರ್,
ಆಯ್ತು ಸಾರ್, ನೋಡೋಣ.

ಚಿತ್ರಾ,
ಧನ್ಯವಾದ, ಮತ್ತೇ ಎಲ್ಲಿ ಇತ್ತೀಚೆಗೆ ನೀವು ಕಾಣ್ತಾನೇ ಇಲ್ಲವಲ್ಲ! :-)

ಬೆಳದಿಂಗಳು,
ನಿಮ್ಮ ಹೆಸರಿನಲ್ಲಿ ನನ್ನದೊಂದು ಸಮಸ್ಯೆ ಇದೆ, ಸಾಮಾನ್ಯವಾಗಿ ಬೆಳದಿಂಗಳು ಅನ್ನೋದು ತಿಂಗಳಿಗೊಂದರ ಪ್ರಾಸೆಸ್ಸು, ಅದೂ ಹುಣ್ಣಿಮೆ ದಿನ ಹೆಚ್ಚಂತೆ ಅನ್ನೋ ಲೆಕ್ಕದಲ್ಲಿ. ಅಲ್ಲಾ, ನೀವು ಬೆಳದಿಂಗಳಾಗಿ ಬರೆಯೋರಿಗೆ ಸ್ಪೂರ್ತಿ ಆಗ್ತೀರೋ, ಅಥವಾ ಸೂರ್ಯನ ಕಿರಣಗಳು ಕಾಣದ್ದನ್ನ ಹುಡುಕೋ ಸಾಹಸ ಮಾಡ್ತೀರೋ ಅನ್ನೋದು ಸ್ಪಷ್ಟಾ ಆಗ್ಲಿಲ್ಲ! ನಿಮ್ಮ ಹೊಸ ಮುಖ ಹೀಗೇ ಹೊಳೀತಾ ಇರಲಿ, ದಯಮಾಡಿ ಆಗಾಗೆ ’ಅಂತರಂಗ’ವನ್ನು ಭೇಟಿಕೊಡ್ತಾ ಇರಿ.