ಪ್ರಯಾಣ ಮಾಡುವ ಅಗತ್ಯಗಳು ಆಗಾಗ್ಗೆ ಬರುತ್ತಿರಲಿ
ಸದಾ ಗಿಜಿಗುಡುತ್ತಿರೋ ರಸ್ತೇ ಮೇಲೆ ಒಂದಲ್ಲ ಒಂದು ವಾಹನ ಹೋಗ್ತಲೇ ಇರುತ್ತೆ, ಎಲ್ಲಿಂದ ಎಲ್ಲಿಗೋ ಪ್ರಯಾಣ ಮಾಡುವಾಗ ಕಾರಿನ ವಿಂಡ್ಶೀಲ್ಡ್ ಮೂಲಕ ಮುಂದೆ ಹೋಗೋ ವಾಹನವನ್ನ ಹಿಂಬಾಲಿಸಿಕೊಂಡು ಹೋಗೋದು ಸುಲಭ ಅನ್ಸುತ್ತೆ. ರಸ್ತೆಯ ಪಕ್ಕದಲ್ಲಿ ಎಷ್ಟೊಂದು ವಾಹನಗಳು ನಮ್ಮ ಜೊತೆ ಸಹ ಪ್ರಯಾಣದಲ್ಲಿ ತೊಡಗಿ ಒಂದು ಕಮ್ಮ್ಯೂನಿಟಿ ಅಥವಾ ಒಂದು ಸಮೂಹ ಇದು ಅನ್ನೋ ಭಾವನೆಗಳ ಹಿಂದೇನೇ ನಾವೆಲ್ಲಿ ಹೋಗ್ತೀವೋ ಅವರೆಲ್ಲೋ ಅನ್ನೋ ಭಿನ್ನತೆ ಕೂಡಾ ಮನದಲ್ಲಿ ಹುಟ್ಟಿ ಬರುತ್ತೆ. ಘಂಟೆಗಟ್ಟಲೆ ಪ್ರಯಾಣ ಮಾಡ್ತಿರುವಾಗ ಒಂದಲ್ಲ ಒಂದು ರೀತಿಯ ಆಲೋಚನೆಗಳು ಮನದಲ್ಲಿ ಹುಟ್ತಾನೇ ಇರುತ್ವೆ, ಆ ಆಲೋಚನೆಗಳು ನಮ್ಮನ್ನು ಅವುಗಳ ಲೋಕಕ್ಕೆ ಸಂಪೂರ್ಣವಾಗಿ ಕರೆದೊಯ್ಯದಂತೆ ವಾಸ್ತವ ಆಗಾಗ್ಗೆ ಹಿಡಿದು ಎಳೆಯುತ್ತಲೇ ಇರುತ್ತೆ.
ಹೀಗೆ ಪ್ರಯಾಣದ ಹಳೆಯ ಹೊಸ ಮುಖಗಳು ಮನಸ್ಸಿಗೆ ಬಂದದ್ದು ಈ ಒಂದು ವಾರದಲ್ಲಿ ಅದೆಷ್ಟೋ ದೂರವನ್ನು ಕ್ರಮಿಸಿ ರಸ್ತೆಯ ಮೇಲೆ ನಮ್ಮದೇ ಆದ ಒಂದು ಪ್ರಪಂಚವನ್ನು ತೆರೆದಿಟ್ಟುಕೊಂಡಾಗಲೇ. ನನ್ನ ಪ್ರಕಾರ ಪ್ರಯಾಣ ಅನ್ನೋದು ಒಂದು ರೀತಿ ಧ್ಯಾನ ಇದ್ದ ಹಾಗೆ, ರಸ್ತೆಯ ಮೇಲೆ ಡ್ರೈವ್ ಮಾಡ್ತಿರೋ ವ್ಯಕ್ತಿ ಭೌತಿಕವಾಗಿ ಅದೆಷ್ಟು ಕೆಲಸಗಳಲ್ಲಿ ತೊಡಗಿದ್ರೂ ಮನಸ್ಸು ಒಂದು ರೀತಿ ಹರಳು ಕಟ್ಟುತಾ ಇರುತ್ತೆ ಅನ್ನೋದು ನನ್ನ ಭಾವನೆ. ಆದ್ರಿಂದ್ಲೇ ಪ್ರಯಾಣ ಅನ್ನೋದು ನಮ್ಮೊಳಗಿರೋ ಆಲೋಚನೆಗಳಿಗೆ ಒಂದು ವೇದಿಕೆ ಕೊಟ್ಟು ಅವುಗಳ ಧ್ವನಿಯನ್ನು ಆಲಿಸೋದಕ್ಕೆ ನಾವು ಕಲ್ಪಿಸಿಕೊಡೋ ಒಂದು ಅವಕಾಶ ಅನ್ನೋದು ನನ್ನ ವಾದ. ನಾವು ಕ್ರಮಿಸೋ ದೂರ, ನಾವೇ ವಾಹನವನ್ನು ಚಲಾಯಿಸುತ್ತಿದ್ದೇವೋ ಇಲ್ಲವೋ ಎನ್ನೋದು, ನಮ್ಮ ಜೊತೆ ಯಾರು ಯಾರು ಇದ್ದಾರೆ ಇರೋಲ್ಲ ಮುಂತಾದವುಗಳು ನಮ್ಮನ್ನು ಒಂದು ಹೊಸ ವ್ಯಕ್ತಿಯನ್ನಾಗಿ ಮಾಡಿಬಿಡಬಲ್ಲವು ಅನ್ನೋದು ನನ್ನ ನಂಬಿಕೆ. ಬೇರೆ ಯಾರೋ ಗಾಡಿ ಚಲಾಯಿಸಿ ಅದರಲ್ಲಿ ಕೂತಿರೋ ನೀವು ಕಣ್ಣು ಮುಚ್ಚಿಕೊಂಡು ಹಾಗೇ ನಿದ್ರೆಯ ಮೋಡಿಗೆ ಜಾರಿ ಹೋಗಿ ಲೋಕವನ್ನು ಆ ಮಟ್ಟಿಗೆ ಸೊಗಸಿಲ್ಲಾ ಅಂತ ನಾನು ಹೇಳ್ತಾ ಇಲ್ಲ, ನಾವೇ ನಮ್ಮ ಗತಿಯನ್ನು ಬೇಕಾದ ಹಾಗೆ ಬದಲಾಯಿಸಿಕೊಂಡು ಎಲ್ಲೆಲ್ಲಿಗೆ ಎಷ್ಟೆಷ್ಟು ಹೊತ್ತಿಗೆ ಹೋಗಬೇಕು, ಹೋಗಬಾರದು ಎಂದು ನಿರ್ಧರಿಸಿಕೊಂಡು ಹೋಗೋದ್ರಲ್ಲಿ ಬೇಕಾದಷ್ಟು ಸವಾಲುಗಳಿವೆ ಆ ಸವಾಲುಗಳ ನಡುವೆಯೂ ನಮ್ಮತನವನ್ನು ಕುರಿತು ಯೋಚಿಸೋದಕ್ಕೆ ಬೇಕಾದಷ್ಟು ಆಸ್ಪದ ಸಿಕ್ಕು ಪ್ರತಿಯೊಂದು ಪ್ರಯಾಣದ ನಂತರ ನಾನಂತೂ ಒಂದು ಹೊಸದೊಂದು ಲೋಕದಲ್ಲಿ ಮುಳುಗೆದ್ದ ಹಾಗಿರ್ತೀನಿ ಅನ್ನೋದು ನಿಜ.
ಧ್ಯಾನದ ಹಲವಾರು ವಿಧಾನಗಳಲ್ಲಿ ನಿಮ್ಮ ಬಗ್ಗೆ ನೀವು ಹೆಚ್ಚು ತಿಳಿದುಕೊಳ್ಳೋದಕ್ಕೆ ಸಹಾಯ ಮಾಡುವ ಪ್ರಯಾಣವೂ ಒಂದು. ಸೆಲ್ಫ್ ಆಕ್ಚುವಲೈಜೇಷನ್ನಿಗೆ ಬೇಕಾದಷ್ಟು ಒತ್ತುಕೊಟ್ಟು ಎಷ್ಟೋ ಪುಸ್ತಕಗಳನ್ನು ಹೊರತಂದಿದ್ದಾರೆ. ಆದರೆ ಒಂದು ಪ್ರಯಾಣದ ನಡುವೆಯೂ ನಮಗೆ ನಮ್ಮ ಬಗ್ಗೆ ತಿಳಿದುಕೊಳ್ಳೋದಕ್ಕೆ ಸಹಾಯವಾಗುತ್ತಾ ಅನ್ನೋದು ಸುಲಭವಾಗಿ ಉತ್ತರಿಸಬಹುದಾದ ಪ್ರಶ್ನೆ. ಉದಾಹರಣೆಗೆ, ನಿಮ್ಮ ಎದಿರು ಮುಕ್ತವಾಗಿ ತೆರೆದ ರಸ್ತೆಯ ಲೇನ್ಗಳು ಅದೇನೇ ಇದ್ದರೂ ನೀವು ಯಾವುದೋ ಒಂದು ಗತಿಯಲ್ಲಿ ನಿಮ್ಮ ವಾಹನವನ್ನು ಚಲಾಯಿಸಿಕೊಂಡು ಮುಂದೆ ಹೋಗುತ್ತಿರುವ ವಾಹನದಿಂದ ಇಂತಿಷ್ಟೇ ದೂರದಲ್ಲಿದ್ದುಕೊಂಡು ಸುರಕ್ಷಿತವಾಗಿ ಗಾಡಿಯನ್ನು ಚಲಾಯಿಸಿಕೊಂಡಿರುತ್ತೀರಿ ನೋಡಿ ಆ ಸಂದರ್ಭದಲ್ಲಿ ಬೇಕಾದಷ್ಟು ನಿರ್ಣಯಗಳನ್ನು ಪುನರ್ವಿಮರ್ಶಿಸಿಕೊಳ್ಳುವ ನಿಮ್ಮ ಮನಸ್ಸು ಸುಲಭವಾದ ಮಾರ್ಗವನ್ನೇ ಹುಡುಕಿಕೊಂಡಿರುತ್ತದೆ. ನಿಮ್ಮ ಜೊತೆ ಸ್ಪರ್ಧೆಯಲ್ಲಿ ತೊಡಗುವ ಅಕ್ಕ ಪಕ್ಕದ ಡ್ರೈವರುಗಳು ನಿಮ್ಮ ತಾಳ್ಮೆಯನ್ನು ಕೆದಕಬಹುದು, ನಿಮ್ಮನ್ನೇ ಹಿಂಬಾಲಿಸಿಕೊಂಡೇ ಸಾಕಷ್ಟು ದೂರವನ್ನು ಕ್ರಮಿಸುವ ಇತರ ಡ್ರೈವರುಗಳು ನಿಮ್ಮಲ್ಲಿ ಸಂಶಯವನ್ನು ಹುಟ್ಟಿಸಬಹುದು. ನೀವು ಪದೇಪದೇ ಲೇನ್ ಬದಲಾಯಿಸಿಕೊಂಡು ವ್ಯಸ್ತರಾಗಿ ಹೋಗುತ್ತೀರೋ ಅಥವಾ ದೂರಕ್ಕೆ ಹೋಗೋದು ಇದ್ದೇ ಇದೆ ಎಂದು ಸಮಾಧಾನ ಚಿತ್ತರಾಗಿರುತ್ತೀರೋ ಎನ್ನುವುದೂ ನಿಮಗೇ ಬಿಟ್ಟಿದ್ದು. ಹೀಗೆ ಹಲವಾರು ತೆರೆದ ಆಪ್ಷನ್ನುಗಳ ನಡುವೆ ಅವರವರು ತಮ್ಮದೇ ಆದ ದಾರಿ ಗತಿ ರೀತಿಯನ್ನು ಆಧರಿಸಿ ಅದನ್ನು ಪಾಲಿಸುತ್ತಾರೆ ಅನ್ನೋದರಲ್ಲೇ ಬದುಕಿನ ಒಂದು ಮುಖವಿದೆ. ಆ ಮುಖದ ದರ್ಶನವನ್ನೇ ನಾನು ಸೆಲ್ಫ್ ಆಕ್ಚವಲೈಜೇಷನ್ನಿಗೆ ಹೋಲಿಸಿ ಹೇಳಿದ್ದು.
ಪ್ರಯಾಣ ಒಳ್ಳೆಯದು, ನಿಂತಲ್ಲೇ ನಿಂತ ಹಾಗಿರುವುದಕ್ಕಿಂತ ಯಾವಾಗಲೂ ಓಡುತ್ತಿರುವುದು ಆ ಮಟ್ಟಿಗೆ ಮನಸ್ಸಿಗೆ ಮುದ ನೀಡುತ್ತದೆ, ಬೇಕಾದಷ್ಟು ಹೊಸತನ್ನು ತೋರಿಸುತ್ತದೆ. ಅನೇಕ ಸವಾಲುಗಳನ್ನು ಎದುರಿಸಿಕೊಂಡು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವ ಹಾಗೆ ಮಾಡುತ್ತದೆ. ಪ್ರಯಾಣ ಗೋಳದ ಮೇಲಿನ ಸುತ್ತಿನಿಂದ ಹಿಡಿದು ನಾವು ದಿನ ನಿತ್ಯ ಅಲ್ಲಿಂದಿಲ್ಲಿಗೆ ಹೋಗಿ ಬರುವ ಸಣ್ಣ ಕಾಯಕವಿರಬಹುದು, ಆದರೆ ಅದರ ಆಳ ದೊಡ್ಡದು. ಅಲ್ಲಿಂದಿಲ್ಲಿಗೆ ಹೋಗಬೇಕು ಎನ್ನೋ ಉದ್ದೇಶಪೂರ್ವಕ ಪ್ರಯಾಣವಿದ್ದಿರಬಹುದು, ಸಮಯವಿದೆ ಹೀಗೇ ಸುತ್ತಿ ಬರೋಣ ಎನ್ನುವ ಅಭಿಯಾನವಿರಬಹುದು - ನಾವು ಬೆಳೆಸುವ ಹಾದಿ ಚಿಕ್ಕದೋ ದೊಡ್ಡದೋ ನಮ್ಮ ಪ್ರಯಾಣದಲ್ಲಿ ಯಾರು ಯಾರು ಸಿಗುತ್ತಾರೋ ಬಿಡುತ್ತಾರೋ, ಪ್ರತಿಯೊಬ್ಬರೂ ಪ್ರಯಾಣ ಮಾಡುವ ಅಗತ್ಯಗಳು ಆಗಾಗ್ಗೆ ಬರುತ್ತಿರಲಿ, ಎಲ್ಲರೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಲೇ ಇರಲಿ!
***
ಕಳೆದೆರಡು ವಾರಗಳಲ್ಲಿ ನಾರ್ಥ್ ಕ್ಯಾರೋಲೈನಾದಿಂದ ನ್ಯೂ ಜೆರ್ಸಿಗೆ ಡ್ರೈವ್ ಮಾಡಿಕೊಂಡು ಹೋಗಿ ಬಂದಾಗ ಪ್ರಯಾಣದ ಬಗ್ಗೆ ಆಲೋಚಿಸಿಕೊಂಡು ಬರೆದ ಲೇಖನ.
3 comments:
Hi Satish,
Well written. I gather that your trip to NC was a success. Will talk to you soon.
"ಆದ್ರಿಂದ್ಲೇ ಪ್ರಯಾಣ ಅನ್ನೋದು ನಮ್ಮೊಳಗಿರೋ ಆಲೋಚನೆಗಳಿಗೆ ಒಂದು ವೇದಿಕೆ ಕೊಟ್ಟು ಅವುಗಳ ಧ್ವನಿಯನ್ನು ಆಲಿಸೋದಕ್ಕೆ ನಾವು ಕಲ್ಪಿಸಿಕೊಡೋ ಒಂದು ಅವಕಾಶ ಅನ್ನೋದು ನನ್ನ ವಾದ. " --- ನನ್ನದೂ
ಶ್ರೀನಿವಾಸ್,
ನಮಸ್ಕಾರ, ಹೌದು ನಮ್ಮ ನಾರ್ಥ್ ಕ್ಯಾರೋಲೈನಾ ಪ್ರಯಾಣ ಚೆನ್ನಾಗಿ ಆಯಿತು.
ಹೀಗೇ ಅಂತರಂಗಕ್ಕೆ ಆಗಾಗ್ಗ ಭೇಟಿಕೊಡುತ್ತಿರಿ.
ಮನ,
ಪರವಾಗಿಲ್ಲ, ನನ್ನ ವಾದವನ್ನು ಕೊನೇಪಕ್ಷ ನೀವಾದರೂ ಪುರಸ್ಕರಿಸಿದಿರಿ! :-)
Post a Comment