Sunday, January 20, 2008

ಅಂತರಂಗ - ಮುನ್ನೂರು



’ಅಂತರಂಗ’ ಒಂದರಲ್ಲೇ ಮುನ್ನೂರು ಲೇಖನಗಳನ್ನು ಬರೆದು ಪ್ರಕಟಿಸಿದ್ದಾಯಿತು, ಇನ್ನಾದರೂ ನನ್ನ ಹುಚ್ಚು ಆಲೋಚನೆಗಳಿಗೆ ಒಂದಿಷ್ಟು ಕಡಿವಾಣ ಬೀಳುತ್ತದೆಯೇನೋ ಎಂಬ ಆಶಯದಲ್ಲಿ ಈ ಹಿಂದೆಯೇ ಯೋಚಿಸಿಟ್ಟಂತೆ ಹೊಸವರ್ಷ ಆರಂಭವಾದಂದಿನಿಂದ ಕಾರಿನಲ್ಲಿ ರೆಡಿಯೋವನ್ನು ನಿಲ್ಲಿಸಿದ್ದಾಯಿತು. ಆದರೂ ಬರೆಯೋಕೇನು ಬೇಕಾದಷ್ಟು ವಿಷಯಗಳು ಇದ್ದೇ ಇವೆ, ಅದರ ಜೊತೆಗೆ ಕಾಕತಾಳೀಯ ಎಂಬಂತೆ ಜನವರಿ ೧೩ ರಂದು ಭೂಮಿಕಾದ ವೇದಿಕೆಯಲ್ಲಿ ಕನ್ನಡ ಬ್ಲಾಗ್‌ಗಳ ಬಗ್ಗೆ ಮಾತನಾಡಿದಂದಿನಿಂದ ದಟ್ಸ್‌ಕನ್ನಡ ಕೃಪೆಯಿಂದ ಬ್ಲಾಗಿಗೆ ಎಲ್ಲೆಲ್ಲಿಂದಲೋ ಓದುಗರು ಬಂದು ಹೋಗುತ್ತಿರುವುದನ್ನು ನೋಡೀ ನೋಡೀ ಏನಾದರೂ ಬರೆಯುವ ಹಂಬಲದ ಹಿಂದೆ ಬರೆಯುವ ವಿಷಯಗಳ ಬಗ್ಗೆ ಒಮ್ಮೆ ಯೋಚಿಸಿಕೊಳ್ಳುವಂತಾಗಿರೋದೂ ನಿಜವೇ ಹೌದು.

ನನ್ನ ಸ್ನೇಹಿತ ಹರೀಶ್ ಹೇಳೋ ಹಾಗೆ ಕ್ರಿಯಾಶೀಲತೆ ಬಹಳ ಮುಖ್ಯ, ಪ್ರತಿಯೊಬ್ಬರೂ ಅವರ ಜೀವನದ ಉತ್ತುಂಗದಲ್ಲಿ ಏನೇನೆಲ್ಲವನ್ನು ಮಾಡಬೇಕು ಎಂದು ಆಲೋಚಿಸಿಕೊಂಡರೂ ಅಂದುಕೊಂಡಿದ್ದನ್ನು ಮಾಡಿ ತೋರಿಸುವುದು ಇದೆ ನೋಡಿ ಅದು ಕಷ್ಟದ ಕೆಲಸ. ಜೀವನದ ಒಂದು ಘಟ್ಟದಲ್ಲಿ ಎಲ್ಲರೂ ಪುಸ್ತಕವೊಂದನ್ನು ಬರೆಯಬೇಕು ಎಂದುಕೊಳ್ಳೋದು ಸಹಜವಿರಬಹುದು, ಆದರೆ ಒಂದು ಪುಸ್ತಕವನ್ನು ಬರೆಯುವುದಕ್ಕೆ ಹಂದರವನ್ನು ಆಲೋಚಿಸಿಕೊಂಡು ಅದನ್ನು ಒಂದು ರೂಪಕ್ಕೆ ತಂದು ತಿದ್ದಿ ತೀಡಿ ಪ್ರಕಟಿಸಿ ಜನರಿಗೆ ತಲುಪಿಸುವುದು ಒಂದು ದೊಡ್ಡ ಕಾಯಕವೇ ಸರಿ. ಅಂತಹ ತಪಸ್ಸಿಗೆ ಬಹಳಷ್ಟು ವ್ಯವಧಾನ ಬೇಕು, ಸಾಕಷ್ಟು ಬೇಸರವನ್ನು ಸಹಿಸಿಕೊಂಡು ಮೈ ಬಗ್ಗಿಸಿ ದುಡ್ಡಿಯುವ ಕೆಚ್ಚಿರಬೇಕು. ಆ ನಿಟ್ಟಿನಲ್ಲಿ ಹೇಳೋದಾದರೆ ಒಂದು ಕಾಲದಲ್ಲಿ ಯಾವುದಾದರೊಂದು ಸಣ್ಣ ಲೇಖನವನ್ನು ಬರೆಯಲು ಭೌತಿಕವಾಗಿ ಕೊಸರಾಡುತ್ತಿದ್ದ ನನಗೆ ಇಂದು ಇಷ್ಟೊಂದು ಬ್ಲಾಗ್‌ ಪರಿಧಿಯಲ್ಲಿ ಬರೆದು ಪ್ರಕಟಿಸಿದ ಮೇಲೆ ಕುಳಿತು ಬರೆಯುವುದು ಇನ್ನೂ ಸವಾಲಾಗೇನೂ ಉಳಿದಿಲ್ಲ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ.

ಆದರೆ, ಆ ಹೆಮ್ಮೆಯ ಹಿಂದೆ ಬೇಕಾದಷ್ಟು ಕ್ಷೋಭೆಗಳಿವೆ: ಮೊದಲೆಲ್ಲ ಗಹನವಾದದ್ದನ್ನೇನೋ ಬರೆಯುವಾಗ ಮೊದಲು ಪೇಪರಿನಲ್ಲಿ ಬರೆದುಕೊಂಡು ನಂತರ ಕಂಪ್ಯೂಟರಿನಲ್ಲಿ ಅಕ್ಷರ ಜೋಡಿಸಿಕೊಳ್ಳುತ್ತಿದ್ದವನಿಗೆ ಇಂದು ಏಕ್‌ದಂ ಕಂಪ್ಯೂಟರ್ ಮೇಲೇ ಬರೆಯುವುದಕ್ಕೆ ರೂಢಿಸಿಕೊಂಡಿರುವುದರ ಹಿಂದೆ ಕೀ ಬೋರ್ಡಿನ ವೇಗಕ್ಕೆ ಮನಸ್ಸು ಹೊಂದಿಕೊಂಡಿರುವುದನ್ನು ಗಮನಿಸಿ ಸಂಕಟವಾಗುತ್ತದೆ. ಬ್ಲಾಗ್ ಕೊಡುವ ಸ್ವಾತಂತ್ರ್ಯ ಡೆಸ್‌ಟಾಕ್ ಪಬಿಷಿಂಗ್ - ಅದೇ ಅದರ ಮಿತಿ ಕೂಡ, ಬರಹವನ್ನು ಯಾರಾದರೂ ತಿದ್ದಿ ಹೀಗಲ್ಲ ಹಾಗೆ ಎಂದು ಹೇಳುವುದನ್ನು ಮೀರಿ ಬೆಳೆದ ನನ್ನಂಥ ಬ್ಲಾಗ್ ಬರಹಗಾರರಿಗೆ ನಮ್ಮ ಮಿತಿಯನ್ನು ಕಂಡುಕೊಳ್ಳುವುದೂ ಅದನ್ನು ತಿದ್ದಿಕೊಂಡು ಬೆಳೆಯುವುದೂ ದೊಡ್ಡ ಸವಾಲು. ಜೊತೆಗೆ ಬ್ಲಾಗ್ ಒದಗಿಸುವ ಬ್ಲಾಗ್ ಪರಿಧಿಯಲ್ಲಿ ವಸ್ತು-ವಿಷಯಕ್ಕೆ ಆಧ್ಯತೆ ಕೊಡುವುದಕ್ಕಿಂತಲೂ ಅವರವರ ಅಭಿಪ್ರಾಯ ದೊಡ್ಡದಾಗುತ್ತದೆ, ನಮ್ಮ ಅನಿಸಿಕೆಗಳು ನಮ್ಮ ಇಂದಿನ ಪ್ರಬುದ್ಧತೆಯೇ ನಮ್ಮ ಮಿತಿಯಾಗದೆ ನಮ್ಮನ್ನು ಇದ್ದಲ್ಲೇ ನಿಲ್ಲಿಸದಿದ್ದರೆ ಸಾಕು.

ಪ್ರತಿಯೊಬ್ಬ ಬ್ಲಾಗಿಗನೂ ತಮ್ಮ ಬೆಳವಣಿಗೆಗೆ ತಾವು ಓದುವ ಇತರ ಬ್ಲಾಗುಗಳ ಜೊತೆಗೆ ಇತರ ಮಾಧ್ಯಮಗಳನ್ನು ಅನುಸರಿಸಿಕೊಂಡಿದ್ದರೆ ಪುಣ್ಯ. ಬ್ಲಾಗ್ ಒಂದು ಅಭಿವ್ಯಕ್ತಿ ಮಾಧ್ಯಮ, ಆದರೆ ಅದೇ ಕೊರತೆಯಾಗಬಾರದು. ಮುಂದಿನ ಬರಹಗಳಲ್ಲಾದರೂ ತಕ್ಕ ಮಟ್ಟಿನ ರೆಫೆರೆನ್ಸ್‌ಗಳನ್ನು ಒದಗಿಸಿಯೋ, ಅಂಕಿ-ಅಂಶಗಳನ್ನು ಬಳಸಿಯೋ, ಶಬ್ದ-ಚಿತ್ರ ಮುಂತಾದವುಗಳ ಮೂಲಕವೋ ಬೇರೆ ಬೇರೆ ನಿಲುವುಗಳನ್ನು ತೋರಿಸುವ ಪ್ರಯತ್ನವನ್ನು ಮಾಡಬಾರದೇಕೆ ಎಂದು ಅನ್ನಿಸಿದ್ದಿರ ಹಿನ್ನೆಲೆಯಲ್ಲಿ ಮನಸ್ಸಿನಲ್ಲಿ ಬರುವ ಚಿಂತನೆ/ಆಲೋಚನೆಯೊಂದಕ್ಕೆ ಭಿನ್ನವಾಗಿ ನೋಡುವ ದೃಷ್ಟಿಕೋನ ಬಂದರೆ ಒಳ್ಳೆಯದೇ. ಸರಿ-ತಪ್ಪು ಎನ್ನುವುದಕ್ಕಿಂತ ಒಂದು ವಿಷಯಕ್ಕಿರುವ ಹಲವಾರು ಮಜಲುಗಳನ್ನು ಶೋಧಿಸುವ ವ್ಯವಧಾನ ಸಿಕ್ಕರೆ ಅದು ನನ್ನ ದೊಡ್ಡಸ್ತಿಕೆಯಾಗಲಿ. ರಾಬರ್ಟ್ ಕಿಯೋಸಾಕಿ (Robert Kiyosaki) ರಿಚ್‌ಡ್ಯಾಡ್ ಪೂವರ್ ಡ್ಯಾಡ್‌ನಲ್ಲಿ ಹೇಳೋ ಹಾಗೆ ಬ್ಲಾಗ್ ಆಗಲಿ ಪುಸ್ತಕವಾಗಲೀ ಯಾವುದೇ ಮಾಧ್ಯಮಕ್ಕಾದರೂ ಬೆಸ್ಟ್ "ಸೆಲ್ಲರ್" ನಿಲುವು ಮುಖ್ಯವಾದುದು, ಬ್ಲಾಗ್ ಬರೆಯುವವನು ತಾನು ಎಷ್ಟು ಬೇಡವೆಂದರೂ ಬ್ಲಾಗ್ ಓದುವವರ ಬಗ್ಗೆ ಯೋಚಿಸಿಯೇ ಯೋಚಿಸುತ್ತಾನೆ, ಈ ಹಿನ್ನೆಲೆಯಲ್ಲಿ ಇನ್ನು ಮುಂದಾದರೂ ಬ್ಲಾಗ್ ಓದುಗರ ಆಶಯಕ್ಕೆ ಒತ್ತಾಸೆಯಾಗಬೇಕು. ಹೀಗೆ ಹೇಳೋದಕ್ಕೆ ಎರಡು ಕಾರಣಗಳಿವೆ: ಮೊದಲನೆಯದಾಗಿ ಇಂದು ಎಷ್ಟೋ ಜನ ಬ್ಲಾಗ್ ಓದುವುದಕ್ಕೆ ಮಾತ್ರ ಸೀಮಿತವಾದರೆ ಎನ್ನುವ ಹೆದರಿಕೆ, ಎರಡನೆಯದಾಗಿ ಮುಂದಿನ ವರ್ಷಗಳಲ್ಲಿ ಬ್ಲಾಗ್ ಒಂದು ಸಾಹಿತ್ಯ ಪ್ರಕಾರವಾಗಿ ನಿಲ್ಲುವ ಭಯ. ಆದ್ದರಿಂದಲೇ ’ಬಾಯಿಗೆ ಬಂದಂತೆ ಬರೆಯುವ’ ಬ್ಲಾಗಿಗರಿಗೂ ಸಾಮಾಜಿಕ ಜವಾಬ್ದಾರಿ ಇದೆ. ಇಂಗ್ಲೀಷ್ ಬ್ಲಾಗುಗಳೋ ಹಲವಾರು ರೀತಿಯಲ್ಲಿ ಇವಾಲ್ವ್ ಆದವುಗಳು, ಆದರೆ ಮಿತಿಯಲ್ಲಿರುವ ಕನ್ನಡದ ಬ್ಲಾಗ್‌ಗಳಿಗೆ ಸೂಕ್ಷ್ಮವಾದ ಜವಾಬ್ದಾರಿ ಇದೆ ಎನ್ನುವುದು ನನ್ನ ಆಶಯ.

ಮುಂದಿನ ಗುರಿ/ಒತ್ತಾಸೆಗಳು:
- ’ಅಂತರಂಗ’ವನ್ನು ಬ್ಲಾಗರ್‌ನಿಂದ ಮುಕ್ತವಾಗಿಸಿ ಸ್ವತಂತ್ರ ವೆಬ್‌ಸೈಟ್ ತರುವುದು
- ಬರಹಗಳು ನಿಧಾನವಾಗಿ ಪ್ರಕಟಗೊಂಡರೂ ಬರಹದ ಸಂಖ್ಯೆ ಇಳಿಮುಖವಾದರೂ ಉತ್ಕೃಷ್ಟತೆಗೆ ಹೆಚ್ಚಿನ ಆದ್ಯತೆ ನೀಡುವುದು
- ಅಲ್ಲಲ್ಲಿ ಆಯ್ದ ಬರಹಗಳನ್ನು ಉಳಿದ ಮಾಧ್ಯಮಗಳಲ್ಲೂ ಪ್ರಕಟಿಸುವುದು

***

ಕ್ಯಾಪಿಟಲಿಷ್ಟಿಕ್ ವ್ಯವಸ್ಥೆಯಲ್ಲಿ ದಿನವೂ ನೀರು ಕುಡಿಯುವ ನಮಗೆ ಬರುವ ಚಿಂತನಶೀಲ ವಿಷಯಗಳ ಹರಿವು ಒಂದೇ ಮಟ್ಟದ್ದೇ ಎಂದು ಹೇಳಬಹುದು. ನಾವು ಇಲ್ಲಿನ ಕಾರ್ಪೋರೇಟ್ ಏಣಿಯ ಮೆಟ್ಟಿಲುಗಳಲ್ಲಿ ನಿಂತು ಅಮೇರಿಕದ ಬದುಕನ್ನು ಹತ್ತಿರದಿಂದ ನೋಡುತ್ತಿದ್ದೇವೆ ಎಂದುಕೊಂಡರೆ ಅದು ನಮ್ಮ ಭ್ರಮೆ. ನಮ್ಮ ಮ್ಯಾನೇಜುಮೆಂಟ್ ಕೆಲಸಗಳಲ್ಲಿ ಜನಸಾಮಾನ್ಯರ ಪರಿಚಯ ಪ್ರಭಾವ ಕಡಿಮೆಯೇ, ನಮ್ಮ ಪ್ರಭಾವಳಿಯ ತ್ರಿಜ್ಯ ಯಾವತ್ತೂ ಒಂದೇ ಮಟ್ಟದ್ದೇ, ಅಪರೂಪಕ್ಕೊಮ್ಮೆ ದೊಡ್ಡ ಮನುಷ್ಯರ ಮಾತಿನಿಂದ ಪ್ರಭಾವಿತಗೊಂಡ ನಮ್ಮ ನಿಲುವಿನ ಚೇತನಶೀಲತೆಯನ್ನು ಒರೆಹಚ್ಚಲು ಸಿಗುವ ಸಾಣೇಕಲ್ಲುಗಳೂ ನುಣುಪಾದವುಗಳೇ. ತಾಯ್ನಾಡನ್ನು ಬಿಟ್ಟು ಬಂದ ನಮ್ಮ ನಂಬಿಕೆ, ವಿಶ್ವಾಸ, ನೆನಪುಗಳು ನಿಧಾನವಾಗಿ ನಾಷ್ಟಾಲ್ಜಿಯಾದ ವ್ಯಾಖ್ಯಾನವನ್ನು ಹೋಲುತ್ತವೆಯೇನೋ ಎನ್ನುವ ಭಯದ ಜೊತೆಗೆ ವೇಗದಲ್ಲಿ ಬೆಳೆಯುತ್ತಿರುವ ನಮ್ಮೂರು-ದೇಶದಿಂದ ಭಿನ್ನವಾಗಿ ಬೆಳೆಯುತ್ತಿರುವ ನಮ್ಮ ಬೆಳವಣಿಗೆ ಎಷ್ಟರ ಮಟ್ಟಿಗೆ ಸರಿ ಎಂದು ಬೇಕಾದಷ್ಟು ಸಾರಿ ಪ್ರಶ್ನಿಸಿಕೊಳ್ಳುವ ಅಖಾಡದಲ್ಲಿ ಸೆಣೆಸುವುದು ದಿನನಿತ್ಯದ ಮಾತುಕಥೆಗಳಲ್ಲೊಂದು. ಎಲ್ಲಕ್ಕಿಂತ ಮುಖ್ಯವಾಗಿ ’ಇಲ್ಲಿಯೇ ಇದ್ದು ಇಲ್ಲಿಯವರಾಗುವ ಪ್ರಯತ್ನವನ್ನು ಇನ್ನು ಮುಂದೂ ಮಾಡುತ್ತಲೇ ಇರುತ್ತೀರೋ?’ ಎನ್ನುವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವುದಿರಲಿ, ಇನ್ನೂ ಪ್ರಶ್ನೆಯ ವಿಸ್ತಾರವನ್ನೇ ಅರ್ಥ ಮಾಡಿಕೊಳ್ಳದಿರುವ ಅಸಹಾಯಕತೆ ನಮ್ಮದು.

ಓಹ್, ಬರೆಯೋಕೇನು ಬೇಕಾದಷ್ಟಿದೆ - ನಿಲ್ಲಿಸೋ ಮಾತೇ ಇಲ್ಲ!

***

'ಅಂತರಂಗ'ವನ್ನು ಓದಿ ಹಲವಾರು ವಿಷಯಗಳಲ್ಲಿ ಸಹಾಯ ಮಾಡಿದ, ಸಹಕರಿಸಿದ, ಅಲ್ಲಲ್ಲಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ ಪ್ರತಿಯೊಬ್ಬರಿಗೂ, 'ಅಂತರಂಗ'ವನ್ನು ತಮ್ಮ ಬ್ಲಾಗ್‌ಗಳಲ್ಲಿ ಲಿಂಕ್ ಕೊಟ್ಟುಕೊಂಡು ಉಳಿದವರಿಗೆ ಪರಿಚಯಿಸಿದ ಹಾಗೂ ದಿನಕ್ಕೊಮ್ಮೆ, ವಾರಕ್ಕೊಮ್ಮೆ ಬಂದು ಓದುತ್ತಿರುವವರೆಲ್ಲರಿಗೂ ನನ್ನ ನಮನಗಳು. ನಿಮ್ಮೆಲ್ಲರ ಹಾರೈಕೆ, ಆಶಿರ್ವಾದ, ಕುಟುಕು, ಚಿಂತನೆ, ಅನುಭವಗಳು ನನ್ನೊಡನೆ ಸದಾ ಹೀಗೇ ಇರಲಿ, ಇನ್ನಷ್ಟು ಕನ್ನಡವನ್ನು ಓದಿ ಬರೆಯುವ ಚೈತನ್ಯ, ಹುರುಪು ನನ್ನಲ್ಲಿ ಹುಟ್ಟಲಿ!

6 comments:

ಸುಪ್ತದೀಪ್ತಿ suptadeepti said...

ಮುನ್ನೂರು ಒಂದು ಸಂಖ್ಯೆ ಮಾತ್ರವಲ್ಲ, ಅದೊಂದು ಮೈಲಿಗಲ್ಲು ಅನ್ನುವ ರೀತಿಯಲ್ಲಿ ನಿಮ್ಮ ಈ ಲೇಖನ ಇದೆ. ನಿಜ, ನಮಗೆಲ್ಲ ಒಂದೊಂದು ರೀತಿಯ ಮೈಲಿಗಲ್ಲು ಬೇಕು. ಅಲ್ಲಿ ನಿಂತು ಬಂದ ದಾರಿಯತ್ತ ಗಮನ ಹರಿಸಿ, ಮುಂದಿನ ಹಾದಿಯತ್ತ ನೋಟ ಇಡಬೇಕಾಗಿದೆ. ಒಳ್ಳೆಯ ನಿಲುವು. ನಿಮಗೆ ಗೆಲುವಾಗಲಿ.

sritri said...

ಅಂತರಂಗದ ಲೇಖನ ಸಂಗ್ರಹ ಮುನ್ನೂರು ತಲುಪಿದ್ದಕ್ಕೆ ಅಭಿನಂದನೆಗಳು.

"ಓಹ್, ಬರೆಯೋಕೇನು ಬೇಕಾದಷ್ಟಿದೆ - ನಿಲ್ಲಿಸೋ ಮಾತೇ ಇಲ್ಲ" - ಅನ್ನುತ್ತಿರುವ ನಿಮ್ಮ ಉತ್ಸಾಹ ನೋಡಿದರೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ನಾನಂತೂ ನಿಮ್ಮ ಖಾಯಂ ಓದುಗಳು!


"ನಿಮ್ಮೆಲ್ಲರ ಹಾರೈಕೆ, ಆಶಿರ್ವಾದ, ಕುಟುಕು, ಚಿಂತನೆ, ಅನುಭವಗಳು ನನ್ನೊಡನೆ ಸದಾ ಹೀಗೇ ಇರಲಿ"

ಹಾರೈಕೆ-ಇದ್ದೇ ಇದೆ, ಆಶಿರ್ವಾದ-ಅದೇನೋ ಗೊತ್ತಿಲ್ಲಪ್ಪ, ಕುಟುಕು- ನೀವು ಹೇಳೋದೇ ಬೇಡ :),ಚಿಂತನೆ,ಅನುಭವಗಳು - ಇಷ್ಟು ದೊಡ್ಡ ಮಾತೆಲ್ಲ ಬೇಡಾ ಕಣ್ರಿ. ಸಕತ್ ಬೋರಾಗತ್ತೆ. :)

Santhu said...

300ರ ಗಡಿ ದಾಟಿದ್ದಕ್ಕೆ ಅಭಿನಂದನೆಗಳು ಸತೀಶ್.

-ಸಂತೋಷ್.

Satish said...

ಸುಪ್ತದೀಪ್ತಿ, ತ್ರಿವೇಣಿ, ಸಂತೋಷ್ ಹಾಗೂ ಇ-ಮೇಲ್, ಫೋನ್ ಕಾಲ್ ಮತ್ತು ಇನ್ಸ್ಟಂಟ್ ಮೆಸ್ಸೇಜುಗಳ ಮೂಲಕ ಅಭಿನಂದನೆಗಳನ್ನು ತಿಳಿಸಿದವರಿಗೆಲ್ಲ ಧನ್ಯವಾದಗಳು.
ನಿಮ್ಮ ಹಾರೈಕೆ ಹೀಗೇ ಇರಲಿ.

Anonymous said...

೩೦೦!! ಹೀಗೇ ಹೋಗ್ತಾ ಇರ್ಲಿ, ನಾನೂ ಓದ್ತಾ ಇರ್ತೀನಿ.

Satish said...

createam,

ಧನ್ಯವಾದಗಳು, ಹೀಗೆ ಆಗಾಗ್ಗೆ ಭೇಟಿಕೊಡುತ್ತಿರಿ ಹಾಗೂ ನಮ್ಮಂಥವರನ್ನು ಹುರಿದುಂಬಿಸುತ್ತಿರಿ!