Wednesday, November 22, 2006

ಕಣ್ಣಿನ ಭಾಷೆಗೆ ಪದಗಳು ಏಕೆ/ಬೇಕೆ?

ಒರಟರಲ್ಲಿ ಒರಟ ಊರು ಎಂದರೆ ನಮ್ಮೂರು, ಏಕೆಂದರೆ ಅಲ್ಲಿ 'ಥ್ಯಾಂಕ್ಯೂ' ಎನ್ನೋ ಪದಬಳಸದೇ ದಿನವನ್ನೇಕೆ ವರ್ಷಗಳನ್ನೇ ಕಳೆಯಬಹುದು. ಆದರೂ ತಮ್ಮ ಊರು ದೇಶಗಳಲ್ಲೇ ಪರದೇಶಿಗಳಾದ ನನ್ನಂತಹವರು ಕಲಿತ ಯಾವುದೋ ಒಂದಿಷ್ಟು ಪದಗಳನ್ನು ಹೊತ್ತು ತಂದು ಸಾಕಿಕೊಂಡಿದ್ದಿದೆ, ಆದರೂ ನಾನು 'ಥ್ಯಾಂಕ್ಯೂ' ಎಂದಾಗಲೆಲ್ಲ ಹೆಚ್ಚು ಎಂದರೆ 'ನೋ ಮೆನ್ಷನ್' ಬರುತ್ತದೆಯೇ ಹೊರತು, 'ಯು ಆರ್ ವೆಲ್‌ಕಂ' ಅನ್ನೋದು ಉತ್ತರವಾಗೋದಕ್ಕೆ ಸಾಧ್ಯವೇ ಇಲ್ಲ! ನನ್ನ 'ಥ್ಯಾಂಕ್ಯೂ'ಗಳನ್ನು ತಮಗೆ ಗೊತ್ತಿರುವ ಯಾವುದೇ ಪರಿಭಾಷೆಯಲ್ಲಿ ಅಳತೆ ಮಾಡಲಾಗದಿರುವ ಸರಳ ಹಾಗೂ ಮುಗ್ಧರ ಮುಂದೆ ಬಾಯಿಬಿಟ್ಟು ಆಡುವ ಮಾತುಗಳಿಗಿಂತ ಕಣ್ಣಿನ ಭಾಷೆಗೇ ಹೆಚ್ಚು ಪ್ರಾಧಾನ್ಯತೆ, ಇವತ್ತಿಗೂ ಅದು ನಮಗೆ ಚೆನ್ನಾಗಿ ಗೊತ್ತು.

'ತಾಯೀ, ಮೇಷ್ಟ್ರು ಮಗಾ ಬಂದಾರೆ, ಒಂದಿಷ್ಟು ಹಣ್ಣ್ ಕೊಟ್ಟ್ ಕಳುಸು...' ಎನ್ನೋ ಮಾತಿನಲ್ಲಿ ಒಬ್ಬ ಬಡ ರೈತನ ಔದಾರ್ಯತೆ ತುಂಬಿ ತುಳುಕುತ್ತದೆ, ಅಂಥೋರ ಮುಂದೆ ನಾನು ಹೇಗಾದರೂ ಹಲ್ಲು ಗಿಂಜಿ ಥ್ಯಾಂಕ್ಯೂ ಎನ್ನಲಿ? ಹಾಗೇ ಬುಟ್ಟಿಯಲ್ಲಿ ತುಂಬಿಕೊಟ್ಟ ಹಣ್ಣುಗಳಾಗಲೀ, 'ನಿಮಗೆ ಎಷ್ಟು ಬೇಕೋ ಅಷ್ಟು ಅನಾನಸ್ ತಗೊಳ್ರೀ' ಎನ್ನೋ ದೊಡ್ಡತನದ ಮುಂದೆ ನನಗೆ ಗೊತ್ತಿರುವ ನಾಗರಿಕ ಪ್ರಪಂಚದ ಮಾತುಗಳೆಲ್ಲವೂ ಕಟ್ಟಿಹೋಗುತ್ತವೆ. ನಾನು ಇವತ್ತೂ ನಿನ್ನೆ ವರ್ಷಗಳಿಗೊಮ್ಮೆ ಮುಖ ತೋರಿಸುವ ಪರದೇಶಿಯಾದದ್ದಕ್ಕೆ ಸಿಕ್ಕ ಬಳುವಳಿಯ ಬಗ್ಗೆ ಹೇಳುತ್ತಿಲ್ಲ, ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ನನ್ನ ಹೈ ಸ್ಕೂಲಿನ ದಿನಗಳಲ್ಲಿಯೂ ಇವೇ ಮಾತುಗಳು ಸತ್ಯವಾಗಿದ್ದವು. ನಮ್ಮೂರಿನ ಓದುಬಾರದ ರೈತರು ತಾವು ಬೆಳೆದ ಬೆಳೆ, ತಮ್ಮಲ್ಲಿ ದೊರೆಯುವ ಹಣ್ಣು ಹಂಪಲುಗಳು, ತಿಂಡಿ ತಿನಿಸುಗಳ ಬಗ್ಗೆ ಎಂದಿಗೂ ಚೌಕಾಸಿ ಮಾಡಿದ್ದನ್ನು ನಾನು ಕಾಣೆ.

ಹಾಗೇ ಊರೂರು ತಿರುಗುತ್ತಾ, ಅಲ್ಲಿಲ್ಲಿ ಹೊರಗಿನ ಪರಿಸರವನ್ನು ನೋಡಿ ಕಲಿಯುತ್ತಾ ನಿಧಾನವಾಗಿ 'ಥ್ಯಾಂಕ್ಯೂ-ವೆಲ್‌ಕಮ್' ನನ್ನ ಮನೆಯ ಮಾತಾಗತೊಡಗಿದವು. ಕಲಿತದ್ದು ತುಸು ಹೆಚ್ಚೇ ಎನ್ನುವಂತೆ ನನಗೆ ಮನೆಯಲ್ಲಿ ಊಟಬಡಿಸಿದವರಿಗೂ ದೇವಸ್ಥಾನದಲ್ಲಿ ತೀರ್ಥ ಕೊಟ್ಟವರಿಗೂ ನಾನು 'ಥ್ಯಾಂಕ್ಯೂ' ಎಂದು ಬಹಿರಂಗವಾಗಿ ಹೇಳಿ ನಾಲಿಗೆಯ ತುದಿ ಸುಟ್ಟವರಂತೆ ಮುಖ ಮಾಡಿಕೊಂಡು ಮನದಲ್ಲೇ ಹಳಿದುಕೊಂಡ ದಿನಗಳು ಬಹಳ ಹಳೆಯವೇನಲ್ಲ. ಇವತ್ತಿಗೂ ಈ ಕಡೆ ಅಮೇರಿಕನ್ ಶೈಲಿಯಲ್ಲಿ 'ಥ್ಯಾಂಕ್ಯೂ'ವನ್ನು ಬಳಸಲು ಬರದೇ, ಅತ್ತ ನಮ್ಮದೇ ಶೈಲಿಯಲ್ಲಿ ವ್ಯಕ್ತಪಡಿಸುವುದನ್ನೂ ಸರಿಯಾಗಿ ಅಭಿವ್ಯಕ್ತಗೊಳಿಸದೇ ಎಷ್ಟೋ ಸಾರಿ ತೊಳಲಾಡಿದ್ದೇನೆ. ನನ್ನ ಇಂಗ್ಲೀಷ್ ಎಷ್ಟು ಬೇಕಾದರೂ ಸುಧಾರಿಸಲಿ, ಸುಧಾರಿಸುತ್ತಲೇ ಇರಲಿ, ನಾನು ಬಳಸುವ 'ಥ್ಯಾಂಕ್ಯೂ-ವೆಲ್‌ಕಮ್-ನೋ ಥ್ಯಾಂಕ್ಸ್' ಮುಂತಾದ ಪದಗಳಿಗೆ ಜೀವ ಮೂಡಿಸುವ ಕಲೆ ನನ್ನಲ್ಲಿನ್ನೂ ಮೈಗೂಡಿಲ್ಲವೆಂದೇ ಹೇಳಬೇಕು.

ಮಾನವ ಸಹಜವಾದ ಪ್ರಕ್ರಿಯೆಗಳಲ್ಲಿ ನಾವು ಕೃತಜ್ಞತೆಯನ್ನು ತೋರಿಸುವುದೂ ನಮ್ಮ ಸಂವಹನದ ಒಂದು ಮುಖ್ಯವಾದ ಅಂಗ. ಅದನ್ನು ಬೇರೆಬೇರೆ ಪರಿಸರ, ಹಿನ್ನೆಲೆ ಹಾಗೂ ಸಂಸ್ಕೃತಿಗಳಲ್ಲಿ ರೂಢಿಯಲ್ಲಿ ಬೆಳೆಸಿಕೊಳ್ಳುತ್ತೇವೆ. ಹಾಗಿದ್ದಾಗ ಉತ್ತರದ ಆಚಾರ-ವಿಚಾರಗಳು ದಕ್ಷಿಣದವರಿಗಿಂತಲೂ, ಪೂರ್ವದ ವೈವಿಧ್ಯತೆಗಳು ಪಶ್ಚಿಮದವರಿಗಿಂತಲೂ ವ್ಯತ್ಯಾಸವಾಗಿರುತ್ತವೆ ಎಂದರೆ ಅದೊಂದು ಸಹಜವಾದ ಅಂಶ. ಸರಿ, ನನಗೆ ಇಲ್ಲಿ ಒಪ್ಪಿಗೆಯಾಗುವ ನಡವಳಿಕೆಗಳನ್ನು ನಾನು ಮತ್ತೊಂದು ಪರಿಸರದಲ್ಲಿ ಬಲವಂತವಾಗೇಕೆ ಹೇರಬೇಕು ಹಾಗೂ ಅಲ್ಲಿನವರಿಂದ ಇಲ್ಲಿ ದೊರಕಬಹುದಾದ ಪ್ರತಿಕ್ರಿಯೆಯನ್ನೇಕೆ ನಿರೀಕ್ಷಿಸಬೇಕು? ನಾನು ಹೋದಲ್ಲಿ ಬಂದಲ್ಲಿ ನನ್ನ ದೇಶೀಯ (native) ಪರಿಸರವನ್ನು ತೆಗೆದುಕೊಂಡು ಹೋಗೋದೇನೋ ನಿಜ, ಆದರೆ ನನ್ನ ಪರಿಧಿಯಿಂದಾಚೆಗಿರುವ ದೊಡ್ಡದಾದ ಸಮೂಹ ಅಳವಡಿಸಿಕೊಂಡಿರುವ ನಡವಳಿಕೆಗಳಲ್ಲಿ ನನ್ನನ್ನು ನಾನು ಕಂಡುಕೊಳ್ಳಬೇಕೇ ವಿನಾ ನನ್ನ ಹಾಗೆ ಅವರಿರಲಿ ಎನ್ನಲಾದೀತೇ?

ಭಾರತದಲ್ಲಿ, ಇನ್ನೂ ಸರಿಯಾಗಿ ಹೇಳಬೇಕೆಂದರೆ ನಮ್ಮೂರುಗಳಲ್ಲಿ ನಾವು ಯಾರೂ ನಿಶ್ಚಿತವಾಗಿ (explicit) 'ಧನ್ಯವಾದ'ಗಳನ್ನು ಅರ್ಪಿಸೋದಿಲ್ಲ. 'ಬಹಳ ಧನ್ಯವಾದಗಳು...' ಎನ್ನೋ ಮಾತು ನನಗೆ ಸಹಜವೆನಿಸೋದಿಲ್ಲ, ಅದರ ಬದಲಿಗೆ ಒಂದು ತುಂಬಿದ ನೋಟ ಹಲವಾರು ಪದಗಳನ್ನು ಅವ್ಯಕ್ತವಾಗಿ (implicit) ಹೊರಹಾಕಬಲ್ಲವು - ಅದು ಒಬ್ಬ ಓದು ಬಾರದ ರೈತನ ನೋಟವಿರಬಹುದು, ಶಾಲಾ ಬಾಲಕನದ್ದಿರಬಹುದು, ಅಥವಾ ಸರ್ಕಾರಿ ಅಧಿಕಾರಿಯದ್ದಿರಬಹುದು. ಪದಗಳ ದಾಕ್ಷಿಣ್ಯದಲ್ಲಿ ಬಿದ್ದು ಒದ್ದಾಡುವ ಭಾಷೆಯಲ್ಲಿ ನಾವು ಅಂದುಕೊಂಡಿದ್ದನ್ನೆಲ್ಲಾ ವ್ಯಕ್ತಗೊಳಿಸಲು ಸಾಧ್ಯವಿಲ್ಲವೆನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಿದೆ ಎಂದುಕೊಂಡರೆ, ಪದಗಳನ್ನು (ಪದಾತೀತ) ಮೀರಿದ ಸಂವಹನದಲ್ಲಿ ನಮಗೇಕೆ ಅಷ್ಟೊಂದು ನಂಬಿಕೆ ಇಲ್ಲವೋ, ಅಥವಾ ಅಂತಹ ಸಂವಹನಗಳು ಬೆಳೆಯುವುದು, ಉಳಿಯುವುದು ನಮಗ್ಯಾರಿಗೂ ಬೇಕಾಗಿಲ್ಲವೋ, ಅಥವಾ ಮಾತಿನಲ್ಲಿ ಹೇಳಿದ್ದೇ ದೊಡ್ಡದು ಎನ್ನುವ ಹುಂಬ ನಂಬಿಕೆಯೋ, ಇನ್ನೇನು ಕಾರಣವೋ? ಸರಿ, ಒಬ್ಬರನ್ನೊಬ್ಬರು ನೋಡಿಯೇನೋ ಕಣ್ಣ ಭಾಷೆಯಲ್ಲಿ ಪ್ರತಿಕ್ರಿಯೆ ತೋರಿಸಿಕೊಳ್ಳಬಹುದು, ದೂರದೂರಿನಲ್ಲಿದ್ದವರಿಗೆ ನಾವು ಕೃತಜ್ಞತೆಗಳನ್ನು ಹೇಗೆ ಹೇಳಬಲ್ಲೆವು? ನಮ್ಮೂರಿನಲ್ಲಿನ್ನೂ ಜನಗಳು ಪತ್ರ ಬರೆಯುತ್ತಾರೆ, ಪತ್ರಗಳ ಜೊತೆಗೆ ಉಡುಗೊರೆಗಳ ವಿನಿಮಯ ನಡೆಯುತ್ತದೆ - ಹೀಗೆ ಕೊಟ್ಟುತೆಗೆದುಕೊಳ್ಳುವ ಪ್ರಕ್ರಿಯೆ 'ಧನ್ಯವಾದ'ದ ಕುರುಹಾಗಿ ಬೆಳೆಯುತ್ತದೆಯೇ ವಿನಾ 'ಥ್ಯಾಂಕ್ಯೂ' ಎನ್ನುವ ಪದದ ಬಳಕೆ ಎಲ್ಲೂ ಆಗೋದಿಲ್ಲ. ಹೆಚ್ಚು ಎಂದರೆ, ಉಪಕಾರ ಸ್ಮರಣೆಯ ಅಂಗವಾಗಿ ಎದುರುಗಿದ್ದವರ ಎರಡೂ ಕೈಗಳನ್ನು ಹಿಡಿದು 'ನಿಮ್ಮ ಉಪಕಾರವನ್ನು ಹೇಗೆ ತೀರಿಸಬೇಕೋ ಗೊತ್ತಿಲ್ಲ', ಅಥವಾ 'ನಿಮಗೆ ನಾವೆಂದೂ ಅಬಾರಿ' ಎಂದರೆ ಆಗಿಹೋಯಿತು. ಈ ಉಪಕಾರವನ್ನು ಋಣ ಎಂದುಕೊಂಡರಂತೂ ಮುಗಿದೇ ಹೋಯಿತು, ಅದು ಜನ್ಮಜನ್ಮಕ್ಕೂ ಅಂಟಿಕೊಂಡು ಬರುವಂತಾಗುತ್ತದೆ, ಇಂಥ ಸಂದರ್ಭಗಳಲ್ಲೇ 'ಯಾವ ಜನ್ಮದಲ್ಲಿ ನಮಗೆ ನೀವೇನು ಆಗಿದ್ದಿರೋ, ಇಂದು ದೇವರ ಹಾಗೆ ಬಂದು ಸಹಾಯ ಮಾಡಿದಿರಿ, ನಿಮ್ಮ ಋಣವನ್ನು ನಾವು ಹೇಗೆ ತೀರಿಸಬೇಕೋ?' ಎನ್ನುವ ಮಾತುಗಳು ಹೊರಬರಬಲ್ಲವು.

'ಥ್ಯಾಂಕ್ಸ್ ಮಚ್', 'ಥ್ಯಾಂಕ್ಯೂ ಸೋ ಮಚ್', 'ಥ್ಯಾಂಕ್ಯೂ ವೆರಿಮಚ್' ಎನ್ನುವಲ್ಲಿ ನನ್ನ ಮೆಟ್ರಿಕ್ ಮೂಲಮಾನಗಳು ಸೋತುಹೋಗುತ್ತವೆ, ಯಾವುದರ ತೂಕ ಎಷ್ಟೆಷ್ಟು ಎಂದು ಅಳೆಯುವುದರಲ್ಲಿ ಇಂದಿಗೂ ವಿಫಲನಾಗಿದ್ದೇನೆ - ಅದು ನಿಜ - ಏಕೆಂದರೆ ಉಪಕಾರವನ್ನು ಸ್ಮರಿಸಬೇಕೇ ವಿನಾ ಅದನ್ನು ಅಳತೆ ಮಾಡಲಾದೀತೇ? ಹೀಗೆ ಉದ್ದಗಲಗಳಿಗೆ ನಿಲುಕದ, ಸೀಮಾತೀತ ಭಾವನೆಗಳನ್ನು ಪದಗಳಿಲ್ಲದೇ ಕಣ್ಣಿನಿಂದಲೇ ಸೂಚಿಸುವ ನಮ್ಮೂರಿನವರು ತತ್‍ಕ್ಷಣ ಬಹಳ ದೊಡ್ಡವರಾಗಿ ಕಂಡುಬರುತ್ತಾರೆ. ಹೇಳಬೇಕಾದುದರಲ್ಲಿ ನನ್ನಷ್ಟು ನಯನಾಜೂಕುಗಳು ಅವರಲ್ಲಿಲ್ಲದಿದ್ದರೇನಂತೆ ಅವರು ಭಾವನೆಗಳನ್ನು ಹೊರಹಾಕುವಲ್ಲಿ ಯಾರಿಗಿಂತಲೂ ಹಿಂದಿಲ್ಲ - ವಿಶ್ವದ ಒಂದು ಅವಿಭಾಜ್ಯ ಅಂಗವಾಗಿ ನಮ್ಮೂರಿನ ಕಣ್ಣಿನ ಭಾಷೆ ಎಲ್ಲ ಕಡೆಯೂ ಚಾಲ್ತಿಗೆ ಬರುತ್ತದೆ, ಆದರೆ ತೆರೆದು ಹೇಳುವ ಭಾಷೆಗೆ ಆ ಸೌಲಭ್ಯವೆಂದೂ ಸಿಗದು.

'ಥ್ಯಾಂಕ್ಯೂ' ಹೇಳದವರು ಒರಟರೇ? ನನ್ನನ್ನೂ ಆ ಪಟ್ಟಿಯಲ್ಲಿ ಸೇರಿಸಿಬಿಡಿ - ಏಕೆಂದರೆ ನಾನು ಬರೀ 'ಧನ್ಯವಾದ'ಗಳನ್ನು ಹೇಳಿ/ತಿಳಿಸಿ ಕೈ ತೊಳೆದುಕೊಳ್ಳುವವನಲ್ಲ, ಎಷ್ಟೋ ವರ್ಷಗಳ ಹಿಂದೆ ಯಾರೋ ಮಾಡಿದ ಉಪಕಾರವನ್ನೂ ಇವತ್ತಿಗೂ ಅಷ್ಟೇ ಮುಗ್ಧತೆಯಿಂದ ಸ್ಮರಿಸುತ್ತೇನೆ. ಜೊತೆಗೆ ನನ್ನ ಜನ್ಮದಿಂದ ಜನ್ಮಕ್ಕೆ ವರ್ಗಾವಣೆ (transfer) ಆಗುವ ಮಾರ್ಪಾಟುಹೊಂದಬಹುದಾದವುಗಳಲ್ಲಿ (variable) ಉಪಕಾರ ಸ್ಮರಣೆ, ಋಣ ಮುಂತಾದವೂ ಸೇರಿಹೋಗುತ್ತವೆ.

ಸುಲಭವಾಗಿ ಸಂವಹನವಾಗುವ ಭಾಷೆಯ ಪರಿಧಿಯಲ್ಲಿ ಹುಟ್ಟುವ ಪದಲಾಲಿತ್ಯಗಳಿಗಿಂತಲೂ ಪದವೇ ಇಲ್ಲದ ಭಾಷೆಯಲ್ಲಿ ಹುಟ್ಟ ಬಹುದಾದ ಭಾವನೆಗಳ ಅಲೆಗಳು ಬಹಳ ದೂರ ಹೋಗಬಹುದಾದುದನ್ನು ಕಲ್ಪಿಸಿಕೊಳ್ಳುತ್ತಾ 'ಥ್ಯಾಂಕ್ಸ್‌ಗಿವಿಂಗ್' ರಜೆ ದಿನಗಳಲ್ಲಿ ಏನೇನು ಮಾಡಬಹುದು ಎಂದು ಯೋಚಿಸುತ್ತಾ ಕೂರುತ್ತೇನೆ!

2 comments:

Anonymous said...

the way of expressing small things in such a way is great.some time we don't know how to thank them.this is the good & best way to thank them.


viju

Shiv said...

ಸತೀಶ್,

ಥ್ಯಾಂಕ್ಸ್..ಅನ್ನೋದು ಎಷ್ಟು casual ಪದವಾಗಿ ಬಿಟ್ಟಿದೆ ಅಂದ್ರೆ, ಅದನ್ನು ನಿಜವಾಗಿ ಹೃದಯದಿಂದ ಹೇಳಿದರೂ ಎನೂ ಅನಿಸೋದಿಲ್ಲ..ಮಾತಮಾತಿಗೆ ಥ್ಯಾಂಕ್ಸ್ ಉದುರಿಸುವ ಇಲ್ಲಿ ನಮ್ಮಲ್ಲಿ ಇದ್ದಾಗೆ ಕಣ್ಣಲ್ಲಿ ಕೃತಜ್ಞೆ ಹೇಳೋಕೆ ಬರೋದೇ ಇಲ್ವೇನೋ..