Tuesday, November 14, 2006

ಸಂಬಂಧಗಳು

ಇವತ್ತು ಆಫೀಸಿನಿಂದ ಮನೆಗೆ ಬರ್ತಾ ಯಾವುದೋ ರೆಡಿಯೋ ಕಾರ್ಯಕ್ರಮದಲ್ಲಿ ಸಂಬಂಧಗಳ ಬಗ್ಗೆ ಏನೋ ಮಾತುಕಥೆಗಳನ್ನು ಕೇಳಿಕೊಂಡು ಬರ್ತಾ ಇದ್ದೆ, ಆ ಕಾರ್ಯಕ್ರಮದಲ್ಲಿ ಮಾತನಾಡಿದೋರೆಲ್ಲ, ಅಕ್ಕ, ತಂಗಿ, ಅಣ್ಣ, ತಮ್ಮ, ಗರ್ಲ್ ಫ್ರೆಂಡ್, ಬಾಯ್ ಪ್ರೆಂಡ್, ಗಂಡ-ಹೆಂಡತಿ, ಮದುವೆ, ವಿಚ್ಛೇದನ ಎಂದು ಏನೇನೋ ಹೇಳಿಕೊಂಡು ಬರುತ್ತಿದ್ದರು, ಇವನ್ನೆಲ್ಲ ಕೇಳಿಕೊಂಡ ನನ್ನ ಮನಸ್ಸಿನಲ್ಲಿ ಹಲವಾರು ಆಲೋಚನೆಗಳು ಟಿಸಿಲೊಡೆಯತೊಡಗಿದವು - ಈ ಅಲೋಚನೆಗಳ ಕೊನೆಗೋ ಮೊದಲಿಗೋ what bothers me most ಅನ್ನೋ ಒಂದು ಪ್ರಶ್ನೆ ಮನದಲ್ಲಿ ಉದ್ಭವವಾಗಿದ್ದೇ ತಡ ಮನಸ್ಸು ಒಂದು ರೀತಿ ಜ್ವರ ಬಂದವರ ಥರ ಆಗಿಹೋಯಿತು.

ನಾವೆಲ್ಲರೂ ಅವಕಾಶಗಳನ್ನು ಹುಡುಕಿಕೊಂಡು ಬದುಕನ್ನು ನಡೆಸಿಕೊಂಡು ಒಂದಲ್ಲ ಒಂದು ಕಡೆಗೆ ಹೋಗೋದೇನೋ ನಿಜ, ಆದರೆ ನಮ್ಮನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದ ಕೆಲವು ಋಣಾನುಬಂಧಗಳನ್ನು ನಾವು ಎಲ್ಲಿ ಮರೆಯುತ್ತೇವೋ ಅನ್ನೋದು ನನ್ನ ದುಗುಡದ ಮೂಲವಾಗಿತ್ತು, ಈ ರೀತಿಯ ಮೊರೆಯನ್ನು ಬೇರೆ ಬರಹಗಳಲ್ಲೂ ಓದಿದ್ದೇನೆ. ನನ್ನ ಮಟ್ಟಿಗೆ ಹೇಳೋದಾದರೆ ನನ್ನ ಪುಲ್‌ಟೈಮ್ ವಿದ್ಯಾಭ್ಯಾಸಕ್ಕೆ ಸಹಾಯಮಾಡಿ ನನ್ನನ್ನು ಈ ಸ್ಥಿತಿಗೆ ತಂದವರನ್ನು ನಾನು ನೆನೆಸಿಕೊಂಡು ಅವರ ಜೊತೆ ಮಾತನಾಡೋದೇ ವಾರಕ್ಕೊಂದು ದಿನ, ಅದರಲ್ಲೂ ಕೆಲವು ದಿನಗಳು ಮಾತ್ರ ಎನ್ನುವುದನ್ನು ನನ್ನ ನೆಲೆಯನ್ನು ಬಿಟ್ಟು ಬೇರೆ ನೆಲೆಯಲ್ಲಿ ನಿಂತು ನೋಡಿದರೆ ದುಃಖ ಉಮ್ಮಳಿಸಿ ಬರುತ್ತದೆ. ನನ್ನಂತಹ ಅನಿವಾಸಿಗಳಿಗೆ ಈ ಒಂದು ಭೌತಿಕ ದೂರವೂ ತೊಡಕಾಗಿ ನಿಲ್ಲುತ್ತದೆಯೇ ಹೊರತು ಸಹಾಯಕ್ಕೇನೂ ಬರೋದಿಲ್ಲ. ನಾವೆಲ್ಲ ಸಿಂಗಲ್ ಆಗಿದ್ದಾಗ, ಕೆಲಸಕ್ಕೆಂದು ಬಂದ ಮೊದಲ ದಿನಗಳಲ್ಲಿ ಈ ದೇಶದಲ್ಲೇ ಕ್ರಮೇಣ ಉಳಿದುಕೊಂಡು ಬಿಡುತ್ತೇವೆ ಅನ್ನೋದನ್ನ ನಾನಂತೂ ಯೋಚಿಸಿರಲಿಲ್ಲವೆಂದು ಕಾಣುತ್ತದೆ. ನನ್ನ ವಾರಿಗೆಯವರು ಮಾಹಿತಿ ತಂತ್ರಜ್ಞಾನವನ್ನು ಬೆನ್ನು ಹತ್ತಿ ಗುಳೆ ಹೊರಟುಹೋಗುವವರ ತರಹ ಬಂದವರೇ ವಿನಾ ಖಾಯಂ ವಲಸೆಗಾರರಾಗೇನೂ ಅಲ್ಲ. ಆದರೆ ವಾಸ್ತವದಲ್ಲಿ ಹೇಗಾಗುತ್ತದೆಯೆಂದರೆ ತಿಂಗಳುಗಳು, ವರ್ಷಗಳು ಉರುಳಿ ಕೊನೆಗೆ ಇದೇ ನಮ್ಮ ನೆಲೆಯಾಗಿಬಿಡುತ್ತದೆ, ಆ ಕ್ಷಣದಲ್ಲಿ ನಾವು ಏಕ್‌ದಂ ಎಲ್ಲರಿಂದ ದೂರ ಬಂದು ಬಿಟ್ಟೆವೆ ಎಂದು ಹೆದರಿಕೆಯಾಗತೊಡಗುತ್ತದೆ.

ನಮ್ಮ ಸಂಬಂಧಗಳು ದಿನನಿತ್ಯ ಮಾಮೂಲಿ ಗಮನವನ್ನು ಬೇಡುವಂತಹವು, ಅದರ ದಾಹವನ್ನು ವರ್ಷಕ್ಕೊಮ್ಮೆ ಹೋಗಿ ಮುಖ ತೋರಿಸುವುದರಿಂದ ತಣಿಸಲಾಗದು. ಪ್ರತಿನಿತ್ಯ ವ್ಯಾಯಾಮ ಮಾಡಿ ಸ್ನಾಯುಗಳು ಬಲವಂತವಾಗುವಂತೆ, ದಿನೇ-ದಿನೇ ಮಾಡುವ ಧ್ಯಾನದಿಂದ ಮನಸ್ಸು ಪರಿಪಕ್ವವಾಗುವಂತೆ ಸಂಬಂಧಗಳ ನಿರ್ವಹಣೆಯೂ ಪ್ರತಿನಿತ್ಯದ ಕಾಯಕವಾಗಬೇಕಲ್ಲವೇ? 'ಎಷ್ಟೋ ವರ್ಷದ ಮೇಲೆ ಮುಖ ತೋರಿಸೋಕೆ ಬಂದೋನು, ಕೇವಲ ಕೆಲವೇ ಘಂಟೆಗಳ ಮಟ್ಟಿಗೆ ಇರ್ತಾನಂತೆ!' ಎಂದು ನನ್ನನ್ನು ನನ್ನ ಅಕ್ಕ-ತಂಗಿಯರು ಧಾರಾಳವಾಗಿ ನನ್ನ ಎದುರೇ ಬೈದುಕೊಳ್ಳುತ್ತಾರೆ - ಕ್ಷಮಿಸಿ, ಅವರಿಗೆ ನಾನು ಮಾಡುತ್ತಿರುವ ಕೆಲಸದ ಗೋಜು-ಗೊಂದಲಗಳೊಂದೂ ತಿಳಿಯದು, ಅವರಿಗೆ ನನ್ನಿಂದ ಬೇಕಾಗಿರುವುದು ಏನೂ ಇಲ್ಲ, ಹಾಗಿದ್ದರೂ ನಾನು ಅವರೊಂದಿಗಿರಲಿ ಎಂದು ಅವರು ಆಶಿಸುವುದರಲ್ಲಿ ಸಹಜವಾದ ಸಹೋದರ ಪ್ರೇಮವಿದೆಯೇ ವಿನಾ ಮತ್ತೇನೂ ನನ್ನ ಕಣ್ಣಿಗೆ ಕಾಣಿಸದು. ಹಾಗಂತ ನಾನು ಹೋದಲ್ಲಿ ಬಂದಲ್ಲಿ ಎಲ್ಲರ ಮನೆಯಲ್ಲೂ ಉಳಿದುಕೊಳ್ಳಲೂ ನನಗೆ ಸಾಧ್ಯವಿಲ್ಲದಾಗಿ ಹೋಗಿದೆ, ನಾನು ಒಂದು ರೀತಿ ಬಿಳಿ ಆನೆಯ ಥರ, ನನ್ನನ್ನು ಪೋಷಿಸುವವರು ಹಲವಾರು ಜನರಿಲ್ಲದಿದ್ದರೆ ನನ್ನ ಕೈಕಾಲುಗಳೇ ಅಲ್ಲಾಡವು - ನಮ್ಮಮ್ಮ ಹೇಳೋ ಹಾಗೆ 'ಸಗಣಿ ತಿನ್ನೋರಿಗೆ ಮೀಸೆ ತಿಕ್ಕೋರು ಹದಿನಾರು ಜನ' ಎಂಬಂತೆ. ನನ್ನ ಅಣ್ಣ-ಅಕ್ಕನ ಮಕ್ಕಳಿಗೆ ನಾನು ಎಷ್ಟೋ ವರ್ಷಕ್ಕೊಮ್ಮೆ ಹೋಗಿ ಹೇಗೆ ಓದುತ್ತಾ ಇದ್ದಿ, ಹೋಮ್‌ವರ್ಕ್ ಮಾಡ್ತಾ ಇದ್ದೀಯಾ ಎಂದು ಕೇಳಿದಾಕ್ಷಣ ನನ್ನ ಜವಾಬ್ದಾರಿ ಮುಗಿಯಿತು ಎಂದು ನಾನೇಕೆ ನಿರುಮ್ಮಳವಾಗುತ್ತೇನೋ? ನನ್ನ ಸೋದರತ್ತೆ, ಚಿಕ್ಕಪ್ಪಂದಿರು ಹಾಗೆಯೇ ಮಾಡಿದ್ದರೆ ನಾನು ಇಷ್ಟೊತ್ತಿಗೆ ಎಲ್ಲಿರುತ್ತಿದ್ದೆನೋ ಯಾರಿಗೆ ಗೂತ್ತು? ನಾನೇನೋ ದೊಡ್ಡ ಮನುಷ್ಯ ಎಂದು ಅವರೆಲ್ಲರೂ ನನ್ನೆಡೆಗೆ ನೋಡುವಾಗ ನಾನು ವರ್ಷಗಳಿಗೊಮ್ಮೆ ಅವತರಿಸಿ ಬಂದರೆ ಸಾಕೇ?

ದೂರ ಇರೋದರ ಪ್ರತೀಕ ಅಗಲಿಕೆ - ನಮಗೆ ಬೇಕಾದವರಿಂದ ಎನ್ನುವುದಕ್ಕಿಂತಲೂ ನಮ್ಮ ಅಗತ್ಯವಿರುವವರಿಂದ ಎಂದರೆ ಸರಿ - ಅದನ್ನು ಯಾರು ಸರಿಪಡಿಸದಿದ್ದರೂ ಕಾಲವೇ ಸರಿ ಪಡಿಸಿಕೊಳ್ಳುತ್ತದೆ. ಮನೆಯ ಒಬ್ಬ ವ್ಯಕ್ತಿ ಮುಂದುವರಿದು ಹೋಗುತ್ತಾನೆ ಎನ್ನುವುದು ದೊಡ್ಡದೊಂದು void ಅನ್ನು ಸೃಷ್ಟಿಸದಿರಲಿ ಎನ್ನುವುದು ನನ್ನ ಇಂಗಿತ, ಹೀಗೆ ಈಗಾಗಲೇ ಹುಟ್ಟಿದ ಕಂದಕಗಳನ್ನು ಏನಾದರೂ ಮಾಡಿ ಪ್ರಯತ್ನ ಪಟ್ಟು ಮುಚ್ಚುವುದನ್ನು ಬಿಟ್ಟರೆ ಬೇರೆ ವಿಧಿಯೇ ಇಲ್ಲ. ಮುಪ್ಪಿನಾವಸ್ಥೆಯಲ್ಲಿ ಮತ್ತೆ ನಮಗೆ ಆಸರೆ ಸಿಗಲಿ ಎನ್ನುವುದಕ್ಕಿಂತಲೂ ಈಗ ನಾವು ಗಟ್ಟಿಯಾಗಿರುವಾಗ ಏನೇನು ಮಾಡಬೇಕೋ ಅದನ್ನೆಲ್ಲ ಮಾಡಬೇಕು ಎನ್ನುವುದಕ್ಕೆ ಒತ್ತುಕೊಡುತ್ತಿದ್ದೇನೆ. ಸಂಬಂಧಗಳು ಬೇಡುವ ಗಮನವನ್ನು ದುಡ್ಡಿನಿಂದಲೋ ಮತ್ತೊಂದರಿಂದಲೋ ತುಂಬಿಕೊಡುತ್ತೇನೆ ಎನ್ನುವ ಹುಂಬತನದಿಂದ ದೂರವಿದ್ದರೆ ಆಯಿತು.

***

'ಅಂತರಂಗ'ದಲ್ಲಿ ಸಂಬಂಧಗಳ ಬಗ್ಗೆ ಬಹಳ ಬರೆದಿದ್ದೇನೆ ಎನ್ನಿಸಿ ಹುಡುಕಿ ನೋಡಿದಾಗ ಸುಮಾರು ೧೬೫ ರೆಫೆರೆನ್ಸ್‌ಗಳು ಸಿಕ್ಕವು, ನನ್ನನ್ನು ಕೇಳಿದರೆ ಕನ್ನಡ ಪದಕೋಶದಲ್ಲಿ ನನಗೆ ಅತ್ಯಂತ ಇಷ್ಟವಾಗುವ ಪದ ಎಂದರೆ 'ಬದುಕು', ಅದನ್ನು ಬಿಟ್ಟರೆ 'ಸಂಬಂಧ' - ಆದರೆ ನನಗೇ ಆಶ್ಚರ್ಯವಾಗುವ ಹಾಗೆ 'ಬದುಕು' ಎನ್ನುವುದಕ್ಕೂ ೧೬೫ ರೆಫೆರೆನ್ಸ್‌ಗಳು ಸಿಕ್ಕವು! ಅದು ಗೂಗಲ್ ಅನ್ನು ಉಪಯೋಗಿಸಿ ಹುಡುಕುವುದರ ಮಿತಿ ಇದ್ದಿರಬಹುದು ಅಥವಾ ಕಾಕತಾಳೀಯವಾಗಿರಬಹುದು. ಏನೇ ಆಗಲಿ, ನನ್ನ ಬರಹಗಳಲ್ಲಿ 'ಬದುಕು' ಹಾಗೂ 'ಸಂಬಂಧ'ಗಳು ಧಾರಾಳವಾಗಿ ತೆರೆದುಕೊಂಡಿದ್ದರೆ ಅಷ್ಟೇ ಸಾಕು.

ಸಂಬಂಧಗಳು ವಿಧಿಯ ಮಸಲತ್ತಿರಬಹುದು, ಪೂರ್ವನಿಯೋಜಿತವಾಗಿರಬಹುದು; ಹಾಗಿದ್ದರೆ ಅದನ್ನು ನಿಭಾಯಿಸಿಕೊಂಡು ಹೋಗುವುದೂ ಅಷ್ಟೇ ಸಹಜವೆಂದೆನಿಸೋದಿಲ್ಲವೇಕೆ?

No comments: