Monday, November 06, 2006

ಓಹ್ ಭಾರತದ ನೆನಪೇ...

ನಮ್ ಮನೇಲಿ ನನ್ನನ್ನಂತೂ ಬಹಳ ಹೆದರಿಸಿಬಿಟ್ಟಿದ್ದಾರೆ, ಭಾರತಕ್ಕೆ ಹೋಗೋಕೆ ಟಿಕೇಟ್ ಬ್ಲಾಕ್ ಮಾಡಿಟ್ರೂ, ಮನಸ್ಸಿನೊಳಗೆ ಒಂದ್ ರೀತಿ ಚಡಪಡಿಕೆಯಿಂದ್ಲೇ ತಯಾರಿ ಮಾಡಿಕೊಂಡ್ ಕೂತಿದ್ರೂ ದಿನೇದಿನೇ ಬದಲಾಗೋ ಪ್ರಾಜೆಕ್ಟ್ ಸ್ಕೋಪ್ ಮತ್ತು ಸ್ಕೆಡ್ಯೂಲ್ ಎರಡೂ ನನ್ನನ್ನು ವಾಸ್ತವದಿಂದ ದೂರಾನೇ ಇರೋ ಹಾಗೆ ಮಾಡಿಬಿಟ್ಟಿವೆ, ಎಷ್ಟೋತ್ತಿಗೆ ಬೇಕಾದ್ರೂ ನಮ್ ಕಂಪ್ನಿಯವರು ನಿನ್ನ ವೆಕೇಷನ್ನ್ ಅನ್ನು ಮುಂದಕ್ಕೆ ಹಾಕು ಅಂತ ಹೇಳಿ ನನ್ನ್ ಬೆಲೂನಿನೊಳಗಿರೋ ಗಾಳಿಯನ್ನು ಚುಚ್ಚದೇ ಹೊರತೆಗೆಯಬಲ್ಲರು, ಆದ್ದರಿಂದ್ಲೇ keep the fingers crossed ಅಂತಾರಲ್ಲ ಹಾಗೆ ಸುಮ್ಮನಿದ್ದೇನೆ - jinx, superstition, evil eye ಅಂತಾ ಏನೂ ಇಲ್ಲ, ಬರೀ ವಾಸ್ತವ ಅಷ್ಟೇ, ನನ್ನ ವೆಕೇಷನ್ನು ಯಾವತ್ತು ನಿಜ ಆಗುತ್ತೋ ಆಗ್ಲೇ ಅಗುತ್ತೆ ಅಂತ ಸುಮ್ಮನೇ ಇದ್ದೇನೆ.

ಸರಿ, ಮೂರು ನಾಲ್ಕು ವರ್ಷಗಳ ನಂತರ ಮೂರು ನಾಲ್ಕು ವಾರಕ್ಕೆ ಅಂತ ಹೋದ ಮೇಲೆ ಏನ್ ಏನ್ ಮಾಡೋದು, ಎಲ್ಲಿಲ್ಲಿಗ್ ಹೋಗೋದು, ಯಾರನ್ನ ನೋಡೋದು, ಯಾರನ್ನ ಬಿಡೋದು ಅನ್ನೋ ಆಲೋಚನೆಗಳು ಒಂದ್ ರೀತಿಯಲ್ಲಿ ಮುದ ಕೊಡೋ ಹಾಗೆ ಮತ್ತೊಂದು ರೀತಿಯಲ್ಲಿ ಆಲಸ್ಯವನ್ನೂ ಹುಟ್ಟಿಸುತ್ತವೆ. ಮೊದ್ಲೆಲ್ಲ ಪತ್ರಗಳು ಬಂದು ಸಂಬಂಧಗಳನ್ನ ಜೀವಂತ ಇಡೋವು, ನಂತರ ಅವುಗಳ ಸ್ಥಾನವನ್ನ ಫೋನ್ ಕರೆ ತುಂಬಿಕೊಡುತ್ತೇ ಅನ್ನೋದು ಒಂದು ಹುಸಿ ನಂಬಿಕೆಯೇ ವಿನಾ ನಾನು ಪತ್ರಗಳನ್ನು ಬರೆಯುತ್ತಿದ್ದ ಕಾಲದಲ್ಲಿ ನನ್ನ ಸ್ನೇಹಿತರನ್ನು ನೆನೆಸಿಕೊಂಡಷ್ಟು ಗಾಢವಾಗಿ ಫೋನ್ ಕರೆ ಮಾಡುವಾಗ ಎಲ್ಲೂ ಆ ಬಗ್ಗೆ ಅಷ್ಟೊಂದು ಯೋಚಿಸಲೇ ಇಲ್ಲ. ಫೋನ್ ಕರೆಗಳು ಕಡಿಮೆಯಾಗಿ ಕೊನೆಗೆ ಭಾರತದಲ್ಲಿ ಸ್ನೇಹಿತರು ಅನ್ನೋರು ಇಲ್ಲವೇ ಇಲ್ಲ ಅನ್ನೋ ಸ್ಥಿತಿ ಬಂದಿದೆ - ಸ್ನೇಹಿತರು ಅಂದ್ರೆ ನಿಮ್ಮ ಒಳಹೊರಗನ್ನು ಬಲ್ಲ, ನಿಮ್ಮ ಆಲೋಚನೆಗಳಿಗೆ ಇಂಬುಕೊಡಬಲ್ಲ, ನಿಮ್ಮನ್ನು ಎಂತಹ ಸ್ಥಿತಿ ಸಂದರ್ಭಗಳಲ್ಲೂ ಸಪೋರ್ಟ್ ಮಾಡಬಲ್ಲ ಹಾಗೂ ಹಲವಾರು ವರ್ಷಗಳಿಂದ ನಿಮ್ಮನ್ನು ಬೇರೆಬೇರೆ ಸ್ಥರಗಳಲ್ಲಿ ನೋಡಿದ ಮತ್ತು ನಿಮಗಿಂತ ಬೇರೆಯೇ ವೈಚಾರಿಕ ನೆಲೆಯಲ್ಲಿರುವ ಮಾನವ ಮೂರ್ತಿಗಳು! ಸದು, ವಾಸು, ರಾಘು, ಅಮಿತಾ, ಶ್ರೀಕಾಂತ, ಸುರೇಶ, ಶಂಕ್ರ, ಪ್ರೇಮಾ, ಉಮೇಶ, ಸುಂದರೇಶ, ಮೋಹನೇಶ, ಮುಂತಾದವರು ಈಗ ಎಲ್ಲೆಲ್ಲಿದ್ದಾರೋ ಅವರನ್ನೆಲ್ಲ ನೋಡಿ ಮಾತನಾಡಿಸುವಂತಿದ್ದರೆ...

If all goes well...ಸಾಕಷ್ಟು ತಿರುಗಾಡಬೇಕು, ಒಂದಿಷ್ಟು ಹೊಸ ಪುಸ್ತಕಗಳನ್ನ ಖರೀದಿ ಮಾಡಬೇಕು, ಥಿಯೇಟರುಗಳಲ್ಲಿ ನಾಟಕ ಸಿನಿಮಾಗಳನ್ನು ಯಥೇಚ್ಛವಾಗಿ ನೋಡಬೇಕು, ಇಷ್ಟು ದಿವಸ ಕಳೆದುಕೊಂಡಿರೋ ಭಾರತೀಯ ಟಿವಿ ಕಾರ್ಯಕ್ರಮಗಳನ್ನ ಹುಡುಕಿಕೊಳ್ಳಬೇಕು. ಅವರನ್ನ ಭೇಟಿ ಮಾಡಬೇಕು, ಇವರನ್ನ ನೋಡಬೇಕು ಅಂತಾ ಯೋಚನೆಗಳನ್ನ ಆರಂಭಿಸಿದೆನೋ ಅವುಗಳು ಒಂದೋ ಸಮನೆ ನಾಗಾಲೋಟದಲ್ಲಿ ಹುಚ್ಚೆದ್ದು ಓಡತೊಡಗುತ್ತಾ ಹೋದಂತೆ ಇವಲ್ಲವನ್ನೂ ಮಾಡೋಕೆ ಸಾಧ್ಯವಾ? ಎಂದು ಕೊನೆಯಲ್ಲಿ ಬಂದ ಪ್ರಶ್ನೆ ಎಂಬ ಬಂಡೆಕಲ್ಲಿಗೆ ಅಪ್ಪಳಿಸಿ ನಿಂತುಬಿಟ್ಟವು. ಈ ವೆಕೇಷನ್ನಿಗೆ ಯಾಕಾದರೂ ನಾನಾ ಅರ್ಥಗಳನ್ನು ನಿರೀಕ್ಷೆಗಳನ್ನು ಹುಟ್ಟಿಸಿಕೊಳ್ಳಬೇಕು? ಸುಮ್ಮನೇ ಹೋಗೋದು, ಪರಿಸ್ಥಿತಿಗೆ ನನ್ನನ್ನು ನಾನು ಒಪ್ಪಿಸಿಕೊಂಡು ಬಿಡೋದು, ಸಹಜವಾಗಿ ಹಾಗೂ ನಿರಾತಂಕವಾಗಿ ಏನೇನು ಸಾಧ್ಯವೋ ಅವುಗಳನ್ನು ಮಾಡೋದು ಇಲ್ಲವೆಂದರೆ ಇನ್ನೊಮ್ಮೆ ಪ್ರಯತ್ನಿಸಿದರಾಯಿತು ಎಂದು ಹಿಂತಿರುಗಿ ಬರೋದು - ಇಲ್ಲಿ ಪ್ರಾಜೆಕ್ಟ್‌ಗಳಿಗೆ ಸ್ಕೆಡ್ಯೂಲುಗಳನ್ನು ಕಿಸಿದು ದೊಡ್ಡದಾಗಿ ಮೆರೆದದ್ದು ಬಹಳಷ್ಟು ಆಗಿದೆ, ಸುಮ್ನೆ ಮುಚ್ಕೊಂಡು ನಿನ್ನಷ್ಟಕ್ಕೆ ನೀನಿರೋದನ್ನು ನೋಡು - ಎಂದು ನನ್ನ ಮತ್ತು ಕನ್ನಡಿಯ ಮಧ್ಯೆ ಬರುವ ಅವಕಾಶದಲ್ಲಿ ಇತ್ತೀಚೆಗಷ್ಟೇ ಧ್ವನಿಯೊಂದು ಕೇಳಿಬಂದಂತೆನಿಸಿದ್ದು ನನ್ನನ್ನು ಇನ್ನಷ್ಟು ಹೈರಾಣಾಗಿಸಿದೆ!

ದೊಡ್ಡ ಗಂಡಾಂತರವೆಂದರೆ ನಮ್ಮ ಊರಿಗೆ ನಾನು ಹೆದರಿಕೊಂಡು ಹೋಗಬೇಕಾಗಿ ಬಂದಿರೋದು...ಕೆಲವು ತಿಂಗಳ ಹಿಂದೆ ಇಡೀ ಆನವಟ್ಟಿಯಲ್ಲಿ ಚಿಕುನ್‌ಗುನ್ಯಾ ಖಾಯಿಲೆಯಿಂದ ಜನ ತತ್ತರಿಸಿಹೋಗಿದ್ದು ನಿಜ, ನಮ್ಮೂರಲ್ಲಿ ಎಲ್ಲ ಥರದ ಸೊಳ್ಳೆಗಳೂ ತಮ್ಮ ಅಸ್ತಿತ್ವವನ್ನು ಎಂದಿನಿಂದಲೂ ಇಟ್ಟುಕೊಂಡಿವೆಯಾದ್ದರಿಂದ ನಾನು ಹೋದಷ್ಟು ದಿನದ ಮಟ್ಟಿಗೆ ಅವುಗಳ ಜೊತೆಯಲ್ಲಿ ವಾಸಮಾಡಬೇಕಾಗಿ ಬರೋದು ಅನಿವಾರ್ಯ. ಮೈತುಂಬಾ ಗಂಧವನ್ನು ಅಥವಾ ರಿಪೆಲ್ಲಂಟ್ ಕ್ರೀಮನ್ನು ಲೇಪಿಸಿಕೊಂಡು ವಿದೇಶಿಯರ ಹಾಗೆ ನಾನು ಹುಟ್ಟಿಬೆಳದ ಊರಿನಲ್ಲಿ ಬದುಕೋದಕ್ಕೆ ನನಗೆ ಖಂಡಿತವಾಗಿ ಸಾಧ್ಯವಿಲ್ಲ, ಆದ್ದರಿಂದಲೇ ಹೆದರಿಕೆ ಹೆಚ್ಚಾಗಿದೆ! ನನ್ನ ಬಾಸು ಹೇಳಿದ 'ನೀನು ಸಂಪೂರ್ಣವಾಗಿ ರೆಸ್ಟ್ ತೆಗೆದುಕೊಂಡು ರಿಪ್ರೆಷ್ ಆಗಿ ಬಾ, ನಾನು ನೀನು ಬಂದ ನಂತರ ವೆಕೇಷನ್ ತೆಗೆದುಕೊಳ್ಳುತ್ತೇನೆ...' ಎನ್ನುವ ವಾಕ್ಯಗಳು ಇನ್ನಷ್ಟು ಹೆದರಿಸತೊಡಗುತ್ತವೆ. ಈ ಖಾಯಿಲೆಗಳೆಲ್ಲ ಆಫ್ರಿಕದ ಕಗ್ಗತ್ತಲಿನಲ್ಲೇ ಏಕೆ ಹುಟ್ಟುತ್ತವೆಯೋ, ದಿನೇದಿನೇ ಮ್ಯುಟೇಷನ್ನಿಗೊಳಗಾಗೋ ಈ ವೈರಾಣುಗಳು ಮಾನವ ಕುಲವನ್ನೇ ನಾಶಮಾಡುತ್ತೇವೆ ಎಂದು ಯಾರ ಮೇಲೆ ಪಣತೊಟ್ಟಿವೆಯೋ ಯಾರು ಬಲ್ಲರು? ಹುಟ್ಟೂರಿಗೂ ಹೆದರಿಕೊಂಡು ಹೋಗಬೇಕಾದ ಅನಿವಾರ್ಯತೆ ಬಹಳ ಸಂಕಷ್ಟಕ್ಕೀಡುಮಾಡುತ್ತದೆ ಅನ್ನೋದಂತೂ ನಿಜ -- ಖಾಯಿಲೆ ಬಂದರೆ ಬರಲಿ, ನೋಡಿಕೊಂಡರಾಯಿತು ಎನ್ನುವ ನಮ್ಮುರಿನ ನನ್ನ ಮೊಂಡ ಮನಸ್ಸಿಗೆ ನನ್ನ ಅಮೇರಿಕನ್ ಮನಸ್ಸು ತಿಳಿಸಿಹೇಳಹೋಗಿ ಸೋಲತೊಡಗುತ್ತದೆ. ಹೋದಲ್ಲಿ ಬಂದಲ್ಲಿ ಹಾಗಾದೀತು, ಹೀಗಾದೀತು ಎಂದು ಹೆದರಿಕೆಯಿಂದ ಹೋಗುವ ಬದಲು ಹೋಗದಿದ್ದರೇ ಲೇಸಲ್ಲವೇ? ಅಥವಾ ನನ್ನ ಪೂರ್ವಸಿದ್ಧತೆಗಳನ್ನು ನಾನು ಯಾವಾಗಲೂ ಮಾಡಿಕೊಂಡಿರುವುದೇ ಸರಿಯಾದ್ದೇ.

It is slowly hitting...ಏನು ಅಂದ್ರೆ ರಿಯಾಲಿಟಿ! ನನ್ನ ಭಾರತದ ಇಮೇಜ್ ಸುಮಾರು ಒಂದು ದಶಕಗಳಷ್ಟು ಹಳೆಯದು. ಒಂದು ಶ್ಯಾಂಪೂ ಬಾಟಲಿಗೆ ನಾನು ಇವತ್ತಿಗೂ ಹೆಚ್ಚೂ ಅಂದ್ರೆ ಇಪ್ಪತ್ತು ಇಪ್ಪತ್ತೈದು ರುಪಾಯಿಗಳನ್ನೇ ಕೊಡುವ ಹಾಗೆ ಯೋಚಿಸೋದು. Inflation adjusted ಅಥವಾ ಹಣದುಬ್ಬರಕ್ಕೆ ಹೊಂದಿಕೊಂಡಿರದ ಪರಿಸ್ಥಿತಿಯನ್ನಲ್ಲ ನಾನು ಹೇಳ್ತಾ ಇರೋದು - ಹಳೆಯ ಮನಸ್ಥಿತಿ ಬಗ್ಗೆ. ಎಲ್ಲಾದರೂ ಐವತ್ತು ರುಪಾಯಿಗೆ ಒಂದು ಕಾಫಿಕೊಡುತ್ತಾರೆ ಎಂದು ಓದಿದರೆ ಕುಡಿಯದೇ ಇದ್ದರೆ ಹೇಗೆ ಎಂದು ಯೋಚಿಸುವ ಸ್ವಭಾವದ ಬಗ್ಗೆ. ಇದಕ್ಕೆಲ್ಲ ಒಂದು ಉತ್ತರವಿದೆ, ನಾನು ಕೊಡೋದು-ಕೊಳ್ಳೋದು ಏನಿದ್ದರೂ ನನ್ನ ಅಣ್ಣನ ಮುಖಾಂತರವಾದ್ದರಿಂದ ಅವನಿಗೆ ಹಣಕಾಸಿನ ವಿಷಯಗಳ ಬಗ್ಗೆ ಯೋಚಿಸಲು ಬಿಟ್ಟುಬಿಡುತ್ತೇನೆ, ಅದರಿಂದ ಏನಿಲ್ಲವೆಂದರೂ ನನ್ನ ಮನದೊಳಗಿರುವ ಭಾರತದ ಇಮೇಜ್ ಹಾಗೆಯೇ ಉಳಿಯುತ್ತದೆ - ಏಕೆ, ಇಂತಹ ಇಮೇಜನ್ನು ಸಮಯದಿಂದ ಸಮಯಕ್ಕೆ ಅಪ್‌ಡೇಟ್ ಮಾಡಲು ಹೆದರಿಕೆಯೇ? ಅಥವಾ ಹಳೆಯ ಆಲೋಚನೆಗಳ ಮೇಲೆ ಮನಸ್ಸನ್ನು ನಿಲ್ಲಿಸಿ ಅದನ್ನೇ ಆಸ್ವಾದಿಸುವುದು ಸುಖವೇ? ಅಥವಾ who cares about money ಎನ್ನುವ ಹುಂಬತನವೇ? ಅಥವಾ ನಿಧಾನವಾಗಿ ಓಲ್ಡ್ ಸ್ಕೂಲ್ ಆಗುವ ಬಗೆಗಿರೋ ಸಮಾಧಾನವೇ? ಅಥವಾ ಚಿಂತಿಸಲು ಬೇಕಾದಷ್ಟಿವೆ ಎನ್ನುವ ಹುಂಬ ಧಾರಾಳತನವೇ? ಅಥವಾ ಬಲ್ಲವರು ಆ ಬಗ್ಗೆ ಚಿಂತಿಸಲಿ ಎಂದು ನಿರುಮ್ಮಳವಾಗಿರಬಹುದಾದ ಕನಸೇ?

ಅಬ್ಬಾ, ನಮ್ಮೂರಿನ ಆಲೋಚನೆಗಳು ನನ್ನನ್ನು ಎಂತಹ ನಿದ್ರೆಯಿಂದಲೂ ಏಳಿಸಿಬಿಡಬಲ್ಲವು, ಏಕೆಂದರೆ ಅಲ್ಲಿನ ಘಟನೆಗಳಿಗೆ ಸ್ಪಂದಿಸಬಯಸುವ ನಾನು ಇಲ್ಲಿ ಹಾಯಾಗಿ ನಿದ್ರೆ ಮಾಡುವುದಾದರೂ ಹೇಗೆ?

2 comments:

Anonymous said...

ಓಹೋ!ಯಾವಾಗ ಹೋಗುತ್ತಿದ್ದೀರಿ ಭಾರತಕ್ಕೆ? ಶುಭ ಪ್ರಯಾಣ ನಿಮಗೆ!

ಈ ಬಾರಿ, ಕೊಡೋದು-ಕೊಳ್ಳೋದು ಏನಿದ್ದರೂ ಅಣ್ಣನ ಬದಲು ನೀವೇ ಮಾಡಿ, ನಿಮಗೆ ಅಂದಿನ-ಇಂದಿನ ಸ್ಪಷ್ಟ ವ್ಯತ್ಯಾಸಗಳು ಗೋಚರಿಸುತ್ತವೆ. ಭಾರತ ಬದಲಾಗಿದೆ. ನೀವೂ ಬದಲಾಗಿ. :-)

Satish said...

sritri ಅವರೇ,
ಎಲ್ಲಾ ಸರಿ ಹೋದರೆ ಡಿಸೆಂಬರ್ ೧೬ ರಂದು ಹೊರಡಬೇಕು ಅಂತ ಇದ್ದೇವೆ.

ಒಳ್ಳೇ ಸಲಹೆ, ಪ್ರಯತ್ನಿಸ್‌ತೇನೆ, ಧನ್ಯವಾದ.