Wednesday, April 15, 2020

ಬದಲಾದವರು ಯಾರು?

ಹಾಳಾದ ವೈರಸ್ಸು ನಮ್ಮನ್ನೆಲ್ಲ ಹಗಲೂ-ರಾತ್ರಿ ತನ್ನ ಧ್ಯಾನದಲ್ಲೇ ತೊಡಗಿಸಿರುವಂತೆ ಮಾಡಿರುವುದೂ ಅಲ್ಲದೇ, ವಿಶ್ವದಾದ್ಯಂತ ಅನೇಕ ಹಸಿದ ಹೊಟ್ಟೆಗಳನ್ನೂ, ಸಾವು-ನೋವಿನ ಕಣ್ಣೀರ ಕೋಡಿಯನ್ನೂ ಹರಿಸಿರುವುದು ನಿಜ.  ಈ ವೈರಸ್ಸಿನ ಭೀತಿ ಒಂದು ರೀತಿಯ ಕಾಡ್ಗಿಚ್ಚಿನಂತೆ ಎಲ್ಲ ಕಡೆಗೆ ಹರಡಿದ್ದು, ಇದು ತನ್ನ ದಾರಿಯಲ್ಲಿ ಬರುವ ಎಲ್ಲವನ್ನೂ ಭಸ್ಮವನ್ನಾಗಿಸಿ, ಆ ಜಾಗದಲ್ಲಿ ಮತ್ತೆ ಹೊಸ ಹುಟ್ಟುಗಳನ್ನು ಕಾಣಬಹುದು.  ಕೆಲವರು ಈ ವೈರಸ್ಸಿನಿಂದ ಬದುಕಿಗೆ ಆಗಿ ಮಿಗುವಷ್ಟು ಪಾಠ ಕಲಿಯುತ್ತಾರೆ, ಇನ್ನು ಕೆಲವರು ತಮಗೇನೂ ಆಗೇ ಇಲ್ಲ, ಈ ಸೃಷ್ಟಿಯ ಸೌಲಭ್ಯಗಳು ಇರುವುದೇ ನಮ್ಮ ಪೋಷಣೆಗಾಗಿ ಎಂದುಕೊಳ್ಳುವವರೂ ಇದ್ದಾರೆ.  ದೂರದ ಸ್ನೇಹಿತರು, ನೆಂಟರು-ಇಷ್ಟರನ್ನು ಮಾತನಾಡಿಸಲು ಇದು ಸಕಾಲ.  ಸಂಜೆಯ ವೇಳೆ (ಆಫೀಸಿನ ಅವಧಿ ಮುಗಿದ ಮೇಲೆ), ವಾರಾಂತ್ಯದಲ್ಲಿ ಎಲ್ಲರೂ ಕೂಡ ಗೊಂದಲವಿಲ್ಲದೇ ಹೆಚ್ಚು ಕಾಲ ಫೋನ್ ಅಥವಾ ವಿಡಿಯೋ ಸಂಭಾಷಣೆಯಲ್ಲಿ ಸಿಗುವುದು ಇತ್ತೀಚಿನ ಒಂದು ಬದಲಾವಣೆ ಎನ್ನಬಹುದು.  ನಮ್ಮ ಪರಿವಾರದವರಿಗೆ ನಾವು ಕಷ್ಟಕಾಲದಲ್ಲಿ ಆಗಿ ಬರಲಿಲ್ಲ ಎನ್ನುವ ವ್ಯಥೆ ಒಮ್ಮೊಮ್ಮೆ ಬಾಧಿಸುತ್ತಾದರೂ, ಮರುದಿನ ಫೋನ್‌ನಲ್ಲಿ ಮಾತನಾಡಿದಾಗ ಮನಸ್ಸು ಹಗುರವಾಗುತ್ತದೆ.  ಕಾಲ ಎಲ್ಲರನ್ನೂ ಬದಲಾಗಿಸುತ್ತದೆ... ಅದರಲ್ಲೂ ದೇಶ-ಭಾಷೆ-ಬಂಧುಗಳನ್ನು ಬಿಟ್ಟು ದೂರ ಬಂದ ನಾವುಗಳು ಹೆಚ್ಚು ಬದಲಾಗಿದ್ದೇವೆ ಎಂದು ಅನಿಸುತ್ತದೆ.

***

ಕಳೆದ ವರ್ಷ ಭಾರತಕ್ಕೆ ಹೋಗಿದ್ದಾಗ ನಮ್ಮ ಹಳೆಯ ಸಂಬಂಧಿಕರೆನ್ನೆಲ್ಲ ನೋಡಿ ಮಾತನಾಡಿಸುವ ಅವಕಾಶವೊಂದು ಬಂದಿತ್ತು. ಭಾರತದ ಬೇರುಗಳನ್ನು ಬಿಟ್ಟು ಬಂದವರಿಗೆ ಈ ರೀತಿಯ ಸುಯೋಗಗಳು ಸಿಗುವುದು ಅಪರೂಪವಷ್ಟೇ. ನಾವು ಎಷ್ಟೇ ದೂರದಿಂದ ಫೋನಿನಲ್ಲಿ ಮಾತನಾಡಿದರೂ ಹತ್ತಿರ ಕುಳಿತು, ಪರಸ್ಪರ ಭೇಟಿಯಾಗಿ ಮಾತನಾಡುವ ಅನುಕೂಲ ಸುಖಕ್ಕೆ ಯಾವ ರೀತಿಯಲ್ಲೂ ತಾಳೆ ನೋಡಲಾಗದು. ಇತ್ತೀಚಿನ ತಂತ್ರಜ್ಞಾನದ ಉನ್ನತಿಯ ದೆಸೆಯಿಂದ ಅಪರೂಪಕ್ಕೊಮ್ಮೆ ವೀಡಿಯೋ ಕಾಲ್ ಮಾಡಿದರೂ ಸಹ ಅದೂ ಕೂಡ ಪರಸ್ಪರ ಭೇಟಿಯ ಅನುಭವವನ್ನು ಕೊಡಲು, 8000 ಮೈಲಿಯ ದೂರದ ಅಂತರದಲ್ಲಿ ಸೋಲುತ್ತದೆ ಎಂದೇ ಹೇಳಬೇಕು. ನಮ್ಮ ಸಹಪಾಠಿಗಳು, ಸ್ನೇಹಿತರು ನೆಂಟರು, ಇಷ್ಟರು, ಬಂಧು-ಬಳಗದವರು ಇವರನ್ನೆಲ್ಲ ಲೆಕ್ಕ ಹಾಕಿದರೆ ಸುಮಾರು ಎರಡು ಸಾವಿರ ಜನರಷ್ಟಾಗಬಹುದು. ನಮ್ಮ ಮದುವೆಗಳಲ್ಲಿ ಏನಿಲ್ಲವೆಂದರೂ ಒಂದು ಸಾವಿರ ಜನರಾದರೂ ಬಂದಿರುತ್ತಾರಲ್ಲ?

ಹೀಗೇ ಒಂದು ಭೇಟಿಯಲ್ಲಿ, ನಮ್ಮ ಹಿರಿಯ ತಲೆಗಳನ್ನು ನೋಡಿ ಮಾತನಾಡಿಸುವ ಸುಯೋಗ ಬಂದಿತ್ತು. ನಾನು ಅವರುಗಳ ಮನೆಗೆ ಹೋದಾಗ ಅವರು ನನ್ನನ್ನು ’ಅತಿಥಿ’ಯಾಗಿ ನೋಡಿಕೊಳ್ಳುವ ರೀತಿಯಲ್ಲಿ ಅನೇಕ ಹೊಸತುಗಳಿದ್ದವು. ದೂರದಿಂದ ಬಂದಿದ್ದಾನೆ ಎಂದು ಒಂದಿಷ್ಟು ಉಪಚಾರಗಳು, ಅವುಗಳ ನಡುವೆ ನೆಲದ ಮೇಲೆ ಕೂರಿಸಿ ಊಟಕ್ಕೆ ಹಾಕಬೇಕೋ, ಅಥವಾ ಡೈನಿಂಗ್ ಟೇಬಲ್‌ನಲ್ಲಿ ಕೂರಿಸಬೇಕೋ ಎನ್ನುವ ಕಸಿವಿಸಿ. ಎಲೆಯಿಟ್ಟು ಊಟ ಮಾಡುತ್ತಾರೋ ಅಥವಾ ಸ್ಟೀಲ್ ತಟ್ಟೆಯಲ್ಲಿ ಬಡಿಸಬೇಕೋ ಎನ್ನುವ ಮುಜುಗರ. ಊಟಕ್ಕೆ ಏನು ಬಡಿಸಬೇಕು ಅಥವಾ ಬೇಡ ಎನ್ನುವ ಅಳುಕು. ಹೀಗೇ ನನ್ನ ಭೇಟಿಯುದ್ದಕ್ಕೂ ಸ್ಥಳೀಯ ಭಾಷೆಯನ್ನು ಬಿಟ್ಟು ಯಾರದ್ದೋ ಜೊತೆಗೆ ನಡೆಸಬಹುದಾದ ಗ್ರಾಂಥಿಕ ಭಾಷೆಯನ್ನು ಬಳಸಿ ನಡೆಸುವ ಸಂವಾದದ ಸಂಕಟ... ಈ ಎಲ್ಲದರ ಹಿನ್ನೆಲೆಯಲ್ಲಿ ನಾನು ಯಾರ ಮನೆಗೆ ಬಂದಿದ್ದೇನೆ, ಇವರಿಗೆಲ್ಲ ಏನಾಗಿದೆ? ಒಂದು ಕಾಲದಲ್ಲಿ ಎಷ್ಟೊಂದು ಸಹಜವಾಗಿ ವರ್ತಿಸುತ್ತಿದ್ದ ನಮ್ಮ ಜನರಿಗೆ ಈ ರೀತಿ ಇರುಸುಮುರುಸೇಕಾಗುತ್ತಿದೆ ಎಂದು ಯೋಚಿಸಲು ತೊಡಗಿದೆ. ನಾನು ಊರಿಗೆ ಹೋದೊಡನೆ ಅಲ್ಲಿನ ಸ್ಥಳೀಯ ಉಡುಪುಗಳನ್ನು ತೊಡುವುದರ ಮೂಲಕ ’ಎಲ್ಲರೊಳಗೊಂದಾಗ’ ಬಯಸುವ ನನ್ನ ಪ್ರಯತ್ನಕ್ಕೆ ಅನಾಯಾಸ ಸೋಲು! ನಾನು ದಂಗಾಗಿ ಹೋಗಿದ್ದೆ.

ಒಂದು ಕಾಲದಲ್ಲಿ ಎಷ್ಟೊಂದು ವಿಷಯಗಳಿಗೆ ಬಡಿದಾಡುತ್ತಿದ್ದೆವು, ತಾಳಮದ್ದಳೆಯ ಪ್ರತೀಕವಾಗಿ ಅನೇಕ ವಾದ-ವಿವಾದಗಳನ್ನು ಹೂಡುತ್ತಿದ್ದೆವು, ಆಯಾ ಸಮಯದ ಮಟ್ಟಿಗೆ ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಷಯಗಳನ್ನು ಚರ್ಚಿಸುತ್ತಿದ್ದೆವು. ನಮ್ಮ ಸಂಘರ್ಷಗಳಲ್ಲಿ ಘರ್ಷಣೆಗಳಿದ್ದವು, ಘೋಷಣೆಗಳಿದ್ದವು. ಮದುವೆ-ಮುಂಜಿಯ ಮಾತುಗಳು ಬರುತ್ತಿದ್ದವು. ಜಾತಿ-ಆಸ್ತಿ-ಅಂತಸ್ತಿನ ವಿಚಾರಗಳು ಹಿಣುಕಿ ಹಾಕುತ್ತಿದ್ದವು... ಆದರೆ, ಈ ಅಸಹಜ ವರ್ತಮಾನದ ಒಡನಾಟದಲ್ಲಿ ಈ ಮೇಲಿನೆಲ್ಲವೂ ಮಾಯವಾಗಿ, ಯಾರೋ (ದಾರಿ ತಪ್ಪಿ ಬಂದ) ಅತಿಥಿಗಳ ಸತ್ಕಾರದಂತೆ ನಮ್ಮ ಭೇಟಿ ನಡೆಯತೊಡಗಿದ್ದನ್ನು ನೋಡಿ ಮನ ಹಿಂಡಿಹೋಗಿತ್ತು.

ಇದನ್ನು ಹೀಗೇ ಬಿಟ್ಟರೆ, ನನ್ನವರೆನ್ನುವವರನ್ನೆಲ್ಲ ಎಲ್ಲಿ ದೀರ್ಘಕಾಲೀನವಾಗಿ ಕಳೆದುಕೊಳ್ಳಬೇಕಾಗುತ್ತೋ ಎಂದು ನಾನು ಅನೇಕ ಸೂಕ್ಷ್ಮ ವಿಷಯಗಳನ್ನು ಎತ್ತಿ ನಿಧಾನವಾಗಿ ವಾದಗಳನ್ನು ಮಂಡಿಸತೊಡಗಿದೆ. ಹೀಗಾದಲಾಗರೂ ಅವರುಗಳು ತೆರೆದುಕೊಳ್ಳಲಿ ಎಂದು... ಊಹ್ಞೂ, ನಾನು ಏನೇ ಮಾಡಿದರೂ ಅವರು ತಿಪ್ಪೆ ಸಾರಿಸಿದ ಹಾಗೆ ಉತ್ತರಗಳನ್ನೇ ಕೊಡುತ್ತಾ ಬಂದರು. ಹೀಗೇ ಬಿಟ್ಟರೆ, ಇವರುಗಳು ನನ್ನಿಂದ ದೂರವೇ ಇರುತ್ತಾರೆ ಎಂಬ ಯೋಚನೆ ಬಂದಿದ್ದೇ ತಡ, ನಾನು ಅಲ್ಲಿಂದ ಕಾಲ್ಕಿತ್ತು... ಮರುದಿನ ಒಂದು ಹೊಸ ಆಲೋಚನೆಯೊಡನೆ ಅವರನ್ನೆಲ್ಲ ಭೇಟಿ ಮಾಡಲು ಹೋದೆ.

***
ಹಳ್ಳಿಗಳಲ್ಲಿ ಸಹಜವಾಗಿ ಸೂರ್ಯ ಹುಟ್ಟುತ್ತಲೇ ಜೀವನ ಆರಂಭವಾಗುವ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ. ಆನೇಕ ಮನೆಗಳಲ್ಲಿ ಬೆಳಗಾಗುವುದರ ಒಳಗೆ ಜಾನುವಾರುಗಳಿಗೆ ಬಾಯಾರು (ಗಂಜಿ-ನೀರು) ಕೊಡುವುದರಿಂದ ಹಿಡಿದು, ಅಂಗಳವನ್ನು ಗುಡಿಸಿ ಸಾರಿಸಿ, ಹೊಸ್ತಿಲಿಗೆ ಅರಿಶಿಣ-ಕುಂಕುಮವಿಡುವುದರಿಂದ ಹಿಡಿದು, ಮನೆ ಮಂದಿಯೆಲ್ಲ ಮಿಂದು ತಮ್ಮ ತಮ್ಮ ಕೆಲಸ ನೋಡಿಕೊಳ್ಳುವ ವಾಡಿಕೆಯಿದೆ. ಮಲೆನಾಡಿನ ಅನೇಕ ಮನೆಗಳಲ್ಲಿ ತಿಂಡಿಗೆ ಖಾಯಂ ಅವಲಕ್ಕಿ ಅಥವಾ ದೋಸೆಯ ಪರಿಪಾಠ ಇನ್ನೂ ಜಾರಿ ಇದೆ. ನಾನು ನನ್ನ ಪರಿವಾರವನ್ನು ಬಿಟ್ಟು, ಒಂದು ಲುಂಗಿಯನ್ನು ಸುತ್ತಿಕೊಂಡು, ಬೆಳ್ಳಂಬೆಳಗ್ಗೆ ಇವರುಗಳ ಮನೆಯ ಅಡುಗೆ ಮನೆ ತಡಕಾಡಿದರೆ  ಒಂದಿಷ್ಟು ದೋಸೆಗೇನೂ ಕಡಿಮೆ ಇಲ್ಲ ಎನ್ನುವ ನಂಬಿಕೆಯಿಂದ ನಮ್ಮ ನೆಂಟರೊಬ್ಬರ ಮನೆಗೆ ಹಿಂಬದಿ ಬಾಗಿಲಿನಿಂದ ಹೋಗಿ... ಎಂದಿನಂತೆ ಮಾತಿಗೆ ತೊಡಗುತ್ತಾ, ಅಲ್ಲೇ ಹತ್ತಿರದಲ್ಲಿದ್ದ ಮಣೆಯನ್ನೊಂದು ಎಳೆದುಕೊಂಡು ಕುಳಿತುಕೊಂಡೆ. ಆಗ ನೋಡಿ ನಿಜವಾಗಿ ನಮ್ಮ-ಅವರ ಮಾತುಕಥೆ ಶುರುವಾಗಿದ್ದು.... ಉಭಯ ಕುಶಲೋಪರಿಗೆ ಕತ್ತರಿ ಹಾಕಿ, ಕಳೆದ ನಾಲ್ಕು ವರ್ಷಗಳ ಆಗು-ಹೋಗುಗಳ ಒಟ್ಟು ಲೆಕ್ಕಾಚಾರವನ್ನು ನಾಲ್ಕು ಘಂಟೆಗಳಲ್ಲಿ ಮುಗಿಸುವ ಹುನ್ನಾರದಲ್ಲಿದ್ದವನಿಗೆ ಸಮಯ ಹೋದುದೇ ತಿಳಿಯಲಿಲ್ಲ. (ಜೊತೆಗೆ ಅಕ್ಕ-ಪಕ್ಕದ ಮನೆಗಳಿಂದಲೂ ಪರಿಚಯದವರು ಬಂದು ಸೇರತೊಡಗಿದರು. ನಮ್ಮ ಮಾತುಕಥೆಗಳಲ್ಲಿ ’ಬನ್ನಿ-ಹೋಗಿ’ಗಳು ಇರಲಿಲ್ಲ!) ತಿಂಡಿ-ಕಾಫಿಯ ಸಮಯವೆಲ್ಲವೂ ಮುಗಿದು, ಮಧ್ಯಾಹ್ನದ ಊಟದ ಸಮಯವೂ ಆಗಿ ಹೋಯಿತು. ನೀವು ಮಾಡಿದ್ದನ್ನೇ ಬಡಿಸಿ ಎಂದು ತೋಚಿಕೊಳ್ಳುವ ನನಗೆ, ಏನಾದರೂ ವಿಶೇಷವಾದ ಅಡಿಗೆಯನ್ನ ಮಾಡಲೇ ಬೇಕು ಎಂದು ಅವರು, ಒಬ್ಬರಿಗೊಬ್ಬರು ಮತ್ತೆ ’ಹೋರಾಟ’ ನಡೆಸಿದೆವು. ಕೊನೆಗೆ ನಾನೇ ಸೋತು, ಅಲ್ಲೇ ಇದ್ದ ಒಂದೆಲಗದ ತಂಬಳಿಯನ್ನು ಮಾಡಿರೆಂದು ಕೇಳಿಕೊಂಡೆ. ಊಟವಾದ ಮೇಲೂ ಮಣೆ ಬಿಡದ ನನ್ನ ಜಿಗಣೆಯ ಜಿದ್ದಿಗೆ ಅವರು ಸೋತಿದ್ದರು. ಕೊನೆಗೆ ಅಲ್ಲಿಯೇ ಇದ್ದ ಎಲೆ-ಅಡಿಕೆ ಬಟ್ಟಲನ್ನು ಎಳೆದುಕೊಂಡು ಕವಳ ಹಾಕಿದ ಮೇಲೆ ಅವರಲ್ಲಿ ಒಬ್ಬನಾಗಿ ಹೋಗಿದ್ದೆ.
"ಹೀಂಗೆ ಬರ್ತಾ ಇರು ಮಾರಾಯ, ನೀ ಬಂದ್ರೆ ಒಂಥರ ಚೆಂದ ನೋಡು!" ಎನ್ನುವ ಮನದಾಳದ (ಬರೆಯಲಾರದ) ಷರಾ ವನ್ನು ಹೇಳಿಸಿಕೊಂಡು ಹಿಂತಿರುಗಿ ಹೊರಟೆ.

***
ಈ ಒಂದು ಘಟನೆಯ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದಾಗ, ನನ್ನ ಮನದಲ್ಲಿ ಬದಲಾದವರು ಯಾರು? ಎಂಬ ಪ್ರಶ್ನೆ ಬಲವಾಗಿ ಏಳತೊಡಗಿತು. ಕಾಲ ಕಳೆದಂತೆ ನಮ್ಮ-ನಮ್ಮ ವ್ಯಕ್ತಿತ್ವ, ಪ್ರಬುದ್ಧತೆ, ವಿಚಾರಗಳು ಬದಲಾಗಲಿ. ಆದರೆ, ಈ ಬದಲಾವಣೆಯ ದೆಸೆಯಿಂದ ನಮ್ಮನ್ನು ನಾವೇ ಕಳೆದುಕೊಳ್ಳಬೇಕಾದ ಸಂದರ್ಭ ಬಂದರೆ, ಅಥವಾ ಈ ಬದಲಾವಣೆಯ ಕೃಪೆಯಿಂದ ನಮ್ಮವರೊಡನೆ ನಾವೇ ಒಂದಾಗಲಾರದವರಾದರೆ, ಅದು ನಮ್ಮನ್ನು ಬೇರ್ಪಡಿಸಿ, ನಮ್ಮಲ್ಲಿ ಪ್ರತ್ಯೇಕತಾ ಭಾವನೆಯನ್ನು ಮೂಡಿಸೋದಿಲ್ಲವೇ? ಬಂಧುಗಳಿಗೆ, ಸ್ನೇಹಿತರಿಗೆ ಅವರವರ ಧರ್ಮವಿದೆ, ಅವರಿಗೆ ಒಂದು ಕಾರ್ಯಭಾರವಿದೆ, ಪಾತ್ರವಿದೆ... ಅವುಗಳನ್ನೆಲ್ಲ ತೊರೆದು ಅವರು ಅವರಾಗಿಲ್ಲದಿದ್ದಾಗ ನಾವು ನಾವಾಗದಿದ್ದರೆ ಯಾರನ್ನು ನೋಡಲು ಎಷ್ಟು ದೂರ ಹೋದರೆ ಏನು ಪ್ರಯೋಜನ?

ಅಮೇರಿಕದ ನೀರು ಕುಡಿದು ಅಮೇರಿಕನ್ ಇಂಗ್ಲೀಷ್ ಬಳಸಿ ನನ್ನೊಡನೆ ಬರೀ ಇಂಗ್ಲೀಷಿನಲ್ಲೇ ಸಂವಾದಿಸುವ ನನ್ನ ಖಾಸಾ ಪರಿಚಿತ (ಸ್ನೇಹಿತ) ಶೃಂಗೇರಿಯ ರಾಜೇಂದ್ರನಾಗಲೀ, ಅಥವಾ ತಮ್ಮತನವನ್ನು ಬಿಟ್ಟು ನಮ್ಮೊಡನೆ ಗ್ರಾಂಥಿಕ ಭಾಷೆಯನ್ನು ಬಳಸಿ ನಟಿಸುವ ನನ್ನ ಹಿರಿಯ ಸಂಬಂಧಿಕರಾಗಲೀ ನನಗೇಕೆ ಬೇಕು?

ಬದಲಾದವರು ಯಾರೋ ಅವರೇ ಉತ್ತರ ಕೊಡಬೇಕು!

Tuesday, April 14, 2020

ಸವಿ ನೆನಪುಗಳು ಬೇಕು ಸವಿಯಲೀ ಬದುಕು

ಸವಿ ನೆನಪುಗಳು ಬೇಕು
ಕವಿ: ಪಿ.ಆರ್. ರಾಮದಾಸ್ ನಾಯ್ಡು
ಸಂಗೀತ: ಎಲ್. ವೈದ್ಯನಾಥನ್
ಗಾಯಕಿ: ವಾಣಿ ಜಯರಾಂ
ಚಿತ್ರ: ಅಪರಿಚಿತ (1978)




"ಸವಿ ನೆನಪುಗಳು ಬೇಕು" ಈ ಹಾಡನ್ನು ನಾನು ಬಹಳ ವರ್ಷಗಳಿಂದ ಕೇಳುತ್ತಾ ಬಂದಿದ್ದರೂ ನನಗೆ ಈ ಸಿನಿಮಾ ನೋಡಿದ ನೆನಪಿಲ್ಲ.  ದೂರದ ದೇಶಕ್ಕೆ ಬಂದು, ಇಂಟರ್ನೆಟ್ಟಿನಲ್ಲಿ ಹಳೆಯದ್ದನ್ನೆಲ್ಲ ಸೋಸಿ ಜಾಲಾಡುತ್ತಿದ್ದಾಗ ಈ ಹಾಡು ಗಮನಕ್ಕೆ ಬಂತು.  ಈ ಹಾಡಿನಲ್ಲಿ ಬಳಸಿದ ರಾಗ ಯಾವಾಗದರೊಮ್ಮೆ ನನ್ನನ್ನು ಕಾಡುತ್ತಿದ್ದುದೂ ಹೌದು... ಪ್ರತಿ ಸಾರಿ ನಾನು ಈ ಹಾಡಿನ ಸಾಲುಗಳನ್ನು ಕೇಳಿದಾಗ, ಈ ಹೆಣ್ಣಿನ ಪ್ರೀತಿ ಎಷ್ಟೊಂದು ತನ್ಮತೆಯಲ್ಲಿ ಇದ್ದಿರಬಹುದು, ಅದು ದೂರವಾಗಲು ಏನು ಕಾರಣವಿದ್ದಿರಬಹುದು ಅಥವಾ ಈ ಸಿನಿಮಾದ ಕೊನೆಯಲ್ಲಿ ಈ ವಿರಹ ಸುಖಾಂತವನ್ನು ಕಾಣುತ್ತದೆಯೇನೋ ಎಂದೆಲ್ಲ ಪ್ರಶ್ನೆಗಳು ಏಳುತ್ತಿದ್ದವು.  ಇತ್ತೀಚಿನ ಕಾಲದಲ್ಲಿ ದೊರಕದ ಪ್ರೇಮ, ಅಥವಾ ಕೈಗೆಟುಕದ ಪ್ರೀತಿ ಒಂದು ಕಮಾಡಿಟಿ ಇದ್ದಿರಬಹುದೋ ಏನೋ, ಆದರೆ ಈ ಹಾಡಿನ ಗುಂಗನ್ನು ನೋಡಿದರೆ ತನ್ನನ್ನು ಸಂಪೂರ್ಣವಾಗಿ ತನ್ನ ಪ್ರೀತಿಗೆ ಸಮರ್ಪಿಸಿಕೊಂಡು, ಅದು ಕೈಗೆಟುಗದ ಸನ್ನಿವೇಶದಲ್ಲಿ ಆ ನೆನಪುಗಳಿಂದಲೇ ಜೀವನ ತಳ್ಳುವ ನಿರ್ಭರತೆಯನ್ನು ಎದುರಿಸುತ್ತಿರುವ ಒಂದು ಹೆಣ್ಣು ಧ್ವನಿ ವಿಶೇಷವಾಗಿ ಕೇಳಿಬರುತ್ತದೆ.

ಎದೆಯಾಳದ ಆಲಾಪನೆಯೊಂದಿಗೆ ಆರಂಭಗೊಳ್ಳುವ ಈ ಹಾಡಿನ ಗಾಢ ಭಾವನೆ, "ಕಾಡುತಿದೆ ಮನವ" ಎಂಬಲ್ಲಿ ಪರ್ಯಾವಸಾನವಾಗುತ್ತದೆ.  ಆಲಾಪನೆಯ ತದನಂತರ ಅತ್ಯಂತ ಸೂಕ್ಷ್ಮವಾಗಿ ಹಲವಾರು ವಯಲಿನ್‌ಗಳು ನುಡಿದು, ಏನೋ ಒಂದು ರಹಸ್ಯ ಬೇಧನೆಯ ಸಂಕೇತವನ್ನು ನೀಡುತ್ತವೆ.  ಕಥಾನಾಯಕಿಯ ಮನದಾಳದಿಂದ ಬಂದಂಥ ಹಾಡಾದ್ದರಿಂದ, ಚಿತ್ರದ ನಾಯಕಿ ಹಾಡಿನ ಸಾಲಿಗೆ ತಕ್ಕಂತೆ ಯಾವುದೇ ತುಟಿ ಚಲನೆಯನ್ನು ಬಳಸದೇ, ಹಾಡಿನುದ್ದಕ್ಕೂ ಹಿನ್ನೆಲೇ ಸಂಗೀತವೇ ಕಥೆಯನ್ನು ಸುರಳೀತವಾಗಿ ಮುಂದೆಕೊಂಡೊಯ್ಯುವಂತೆ ಚಿತ್ರಣಗಳನ್ನು ಹೆಣೆಯಲಾಗಿದೆ.

ಸವಿ ನೆನಪುಗಳು ಬೇಕು ಸವಿಯಲೀ ಬದುಕು
ಕಹಿ ನೆನಪು ಸಾಕೊಂದು ಮಾಸಲೀ ಬದುಕು


ನಿಜ, ಸವಿ ನೆನಪುಗಳು ಖಂಡಿತ ಬೇಕು...’ಸವಿನೆನಪು" ಎಂದು ಬರೆಯುವಲ್ಲೇ ಕವಿ ಇದು ಸವಿ ನೆನಪಲ್ಲದೇ ಮತ್ತೇನನ್ನೋ ಒಳಗೊಂಡಿದೆ ಎಂಬ ಸೂಕ್ಷ್ಮವನ್ನು ಹೊರಹಾಕುತ್ತಾರೆ.  "ಸವಿಯಲೀ ಬದುಕು" ಎಂಬುದನ್ನು ಈ ಬದುಕನ್ನು ಸವಿಯಲು ಹಾಗೂ ಈ ಬದುಕನ್ನು ಸವೆಯಲೂ ಎಂದು ಅರ್ಥ ಮಾಡಿಕೊಳ್ಳಬಹುದು.  ಅದೇ ರೀತಿ, ಹಾಲಿನ ಪಾತ್ರೆಗೆ ಒಂದು ಹನಿ ಹುಳಿ ಹಿಂಡಿದಂತೆ, ಅಂತಹ ಸವಿಯಾದ ಬದುಕು ಮಾಸಲು ಒಂದೇ ಒಂದು "ಕಹಿ ನೆನಪು" ಸಾಕು...ಈ ಎರಡು ಸಾಲಿನಲ್ಲೇ ಕವಿ ಪೂರ್ಣ ಪದ್ಯದ ಆಳ ಹಾಗೂ ಅಂತಃಸತ್ವವನ್ನು ಹಂಚಿಕೊಂಡಿದ್ದಾರೆ ಎನ್ನಬಹುದು.

ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲಾ....
ಕಾಡುತಿದೆ ಮನವ...|


ಒಮ್ಮೆ ಸವಿನೆನಪುಗಳು ಹುಟ್ಟಿದಾಗ ಅವು ಬೆಂಬತ್ತಿ ನಮ್ಮ ದಿನ ಹಾಗೂ ಜೀವಮಾನವನ್ನು ಕಾಡುತ್ತವೆಯೇನೋ ಗೊತ್ತಿಲ್ಲ, ಆದರೆ ಕಹಿ ನೆನಪಿನ ವಿಚಾರಕ್ಕೆ ಬಂದರೆ ಅದೇ ಅದೇ ಮರುಕಳಿಸಿ ಮನಸ್ಸನ್ನ ಕಾಡುವುದನ್ನ ಈ ಎರಡು ಸಾಲುಗಳಲ್ಲಿ ಮೂಡಿಸಲಾಗಿದೆ.  ಈ ಸಾಲಿನ ಕೊನೆಯಲ್ಲಿ ನೀರವ ರಾತ್ರಿಯ ನಿಶ್ಶಬ್ಧವನ್ನು ನೆನಪಿಸುವ ಎರಡು-ಮೂರು ಕ್ಷಣಗಳ ಮೌನ ಕೂಡ ಇದೆ.  ಜೊತೆಗೆ ಇದೇ ನೀರವತೆಯ ಶಬ್ದವನ್ನ ಇಡೀ ಹಾಡಿನ ಉದ್ದಕ್ಕೂ ಹಿನ್ನೆಲೆಯಲ್ಲಿ ಗಮನಿಸಬಹುದು.
ಸವಿ ನೆನಪುಗಳು ಬೇಕು ಸವಿಯಲೀ ಬದುಕು|

ಮತ್ತೊಮ್ಮೆ ಸವಿ ನೆನಪುಗಳ ಪ್ರಾಶಸ್ತ್ಯವನ್ನು ಪ್ರಸ್ಥಾಪಿಸುತ್ತ ಪಲ್ಲವಿ ಮುಗಿಯುತ್ತದೆ.

ಪ್ರಿಯತಮನ ಒಲವಿಂದ ಕನಸುಗಳು ಮೂಡಿ
ಇನಿಯನಾ ಎದೆಗೊರಗಿ ಆಸರೆಯ ಬೇಡಿ|
ಸರಸ ಸವಿಯ ಬಯಸಿದೆನು ನಾನು
ವಿರಹ ವಿಫಲ ಫಲಿಸಿದವು ನನಗೆ|


ಈ ಚರಣದ ಆರಂಭದಲ್ಲಿ ಪ್ಲೇಫುಲ್ ಹಿನ್ನೆಲೆ ಸಂಗೀತ ಮುಂಬರುವ ಹಳೆಯ ಚಿತ್ರಣಗಳಿಗೆ ನಾಂದಿ ಹಾಡುತ್ತದೆ...ಇದೇ ಸಂದರ್ಭದಲ್ಲಿ ’ಕುಕ್ಕುಕ್ಕುಕ್ಕು" ಎಂದು ಮತ್ತೆ ವಯಲಿನ್‌ಗಳು ಮೊರೆಯ ತೊಡಗಿ ಮತ್ತೇನು ಆತಂಕ ಕಾದಿದೆಯೋ ಎನ್ನುವ ಕಾತುರವನ್ನು ಕೇಳುಗರ ಮನಸ್ಸಿನಲ್ಲಿ ಮೂಡಿಸುತ್ತವೆ.  ಪ್ಲೇಬ್ಯಾಕ್ ಸನ್ನಿವೇಶಗಳಾದ್ದರಿಂದ ಅವೇ ವಯಲಿನ್ನ್‌ಗಳು ಮತ್ತೆ ಪ್ಲೇಫುಲ್ ಸಂಗೀತವನ್ನು ನುಡಿಸಿ, ಹಳೆಯ ಚಿತ್ರಗಳಿಗೆ ಪೂರಕವಾಗುತ್ತವೆ.

"ಪ್ರಿಯತಮನ ಒಲವಿಂದ ಕನಸುಗಳು ಮೂಡಿ" ಎಂದು ಕೇಳುವಾಗ ಓಹ್ ಇದೊಂದು ಸೋತ ಪ್ರೇಮದ ಕಥೆಯೇ ಸೈ ಎಂದು ಕೇಳುಗರು ಕನ್‌ಕ್ಲೂಷನ್‌ಗೆ ಬಂದು ಬಿಡಬಹುದಾದರೂ, ಮುಂದಿನ ಪ್ರಾಸದ ಸಾಲುಗಳು ಕೇಳುಗರ ಕಾತುರತೆಯನ್ನು ಇನ್ನೂ ಜಾಗೃತವಾಗೇ ಇರಿಸಿಕೊಳ್ಳುತ್ತವೆ.  ಆದರೆ, ’ಇನಿಯನಾ ಎದಗೊರಗಿ" ಎಂದು ಗಾಯಕಿ ಎಲ್ಲಿ ತಪ್ಪಾಗಿ ಹೇಳಿದರೇನೋ ಅನ್ನಿಸುವಷ್ಟರಲ್ಲಿ ಸರಸ-ಸವಿ, ವಿರಹ-ವಿಫಲದ ಸಾಲುಗಳು ಕೇಳುಗರನ್ನು ಮತ್ತೆ ಮೋಡಿಗೊಳಗಾಗಿಸಿಕೊಳ್ಳುತ್ತವೆ.  ಈ ಸಾಲುಗಳಲ್ಲಿ ಕವಿ, ಅಂತ್ಯ ಪ್ರಾಸಕ್ಕೆ ಬೆಲೆ ಕೊಡದೆ ಸರಸವನ್ನು ಬಯಸಿದ ಮನ, ವಿರಹಕ್ಕೆ ಕೊರಗುವುದನ್ನು ಎತ್ತಿ ತೋರಿಸಿದ್ದಾರೆ.  ಮತ್ತೆ ಈ ಎರಡು ಸಾಲುಗಳಲ್ಲಿ ಪೂರ್ಣ ಕಥೆಯನ್ನು ಹೆಣೆಯುವ ಚಾಕಚಕ್ಯತೆ!

ಇನಿಯನಾ ಎದೆ ಬಡಿತ ಗುಂಡಿನಾ ದನಿಗೆರೆದೂ
ಮಾಸುತಿದೆ ಕನಸು...|


ಇಲ್ಲಿಯವರೆಗೆ ಟಿಪಿಕಲ್ ಕನ್ನಡ ಪದ್ಯದಂತಿದ್ದದ್ದು, ಎದೆ ಬಡಿತವನ್ನು ಗುಂಡಿನ ದನಿಗೆ ಹೋಲಿಸಿ ಕ್ರಾಂತಿಕಾರಿ ದೇಶಗಳ ಸಾಹಿತ್ಯವನ್ನು ನೆನಪಿಗೆ ತಂದುಕೊಡುತ್ತದೆ.  ಈ ಪದ್ಯವನ್ನು ಅವರು ಈ ಸಿನಿಮಾಕ್ಕಾಗಿಯೇ ಬರೆದರೋ ಅಥವಾ ಭಾವಗೀತೆಯನ್ನು ಈ ಸಿನಿಮಾಕ್ಕೆ ಅಳವಡಿಸಿಕೊಳ್ಳಲಾಗಿದೆಯೋ ಗೊತ್ತಿಲ್ಲ, ಆದರೆ ೧೯೭೮ರ ಕಾಲಕ್ಕಾಗಲೇ ಸ್ವಾತಂತ್ರ್ಯ ಚಳುವಳಿಗಳು ಮುಗಿದು ಗುಂಡಿನ ದನಿ ಆಡಗಿ ದಶಕಗಳೇ ಕಳೆದುಹೋಗಿದ್ದ ಸಮಯ, ಕವಿಯ ಈ ವಿಶ್ಲೇಷಣೆಯನ್ನು ಫ್ರೆಂಚ್ ರೆವಲ್ಯೂಷನ್ ಬಂದ ಸಮಯದ ಸಾಹಿತ್ಯಕ್ಕೆ ಹೋಲಿಸಿದರೆ, ಅಥವಾ ವಿಶ್ವ ಯುದ್ಧಗಳಲ್ಲಿ ಭಾಗವಹಿಸಿದ ದೇಶಗಳಲ್ಲಿ ಗಣನೀಯವಾದ ಹೋಲಿಕೆಯಾದೀತೇ ವಿನಾ, ಆಗ ಕರ್ನಾಟಕಕ್ಕೆ ಇನ್ನೂ ಬಂದೂಕಿನ ಕಲ್ಚರ್ ಬಂದಿರಲಿಲ್ಲವಾದ್ದರಿಂದ, ಈ ಸಾಲುಗಳು ವಿಶೇಷವೆನಿಸುತ್ತವೆ...ಹಾಗೆ ಗುಂಡಿನಾ ದನಿಗೆರೆದಂತೆ ಧ್ವನಿಸುವ ಎದೆ ಬಡಿತ ಕನಸನ್ನು ಮಾಸುತ್ತದೆಯೇ ವಿನಾ ನೆನಪನ್ನಲ್ಲ.

ಸವಿ ನೆನಪುಗಳು ಬೇಕು ಸವಿಯಲೀ ಬದುಕು|

ಮತ್ತು ಆರಂಭವಾಗುವ ಪ್ಲೇಫುಲ್ ಸಂಗೀತ ಮಧುರವಾದ ಹಳೆಯ ನೆನಪುಗಳನ್ನು ಹೊತ್ತು ತರುವ ಬೆನ್ನಲ್ಲಿಯೇ ಭೋರ್ಗರೆಯುವ ವಯಲಿನ್‌ಗಳು ಕರಾಳ ಛಾಯೆಯನ್ನು ಹೊತ್ತು ತರುತ್ತವೆ.

ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನಾ ಭೀತಿಯಲಿ ನಾ ಬಂಧಿಯಾಗಿ
ಮನಸೂ ಹೃದಯಾ ನೊಂದು ನೋವಾಗಿದೆ
ಒಲವೂ ನಲಿವೂ ಮೂಡಿ ಮಸಕಾಗಿದೆ|


ಮೇಲಿನ ನಾಲ್ಕು ಸಾಲುಗಳು ಕಾಡುವ ನೋವಿನ ಆಳವನ್ನು ತೋರುತ್ತವೆ, ತಂಗಾಳಿಯೇ ಬೀಸುತ್ತಿದ್ದರೂ ಅದು ಬಿಸಿಯಾಗಿ ಕಾಡುವಂತೆ, ತಮ್ಮ ನೆನಪುಗಳು ತರುವ ಮೌನ, ಒಂಟಿತನ ಹಾಗೂ ಅದರ ಒಂದು ಚೌಕಟ್ಟು ಜೈಲಿನ ಪರ್ಯಾಯ ಭಾವನೆಯನ್ನು ಖಂಡಿತ ಮೂಡಿಸಬಲ್ಲವು.  ಜೊತೆಗೆ ಇದು ಮನಸ್ಸಿನ ವಿಚಾರವಷ್ಟೇ ಅಲ್ಲ, ಹೃದಯದ ವಿಚಾರವೂ ಹೌದು, ಅವುಗಳು ನೊಂದು ನೋವಾಗಿದೆ.  ಎಲ್ಲಕ್ಕಿಂತ ಮುಖ್ಯವಾಗಿ, ಕೊನೆಯ ಸಾಲು ಮತ್ತೆ ಒಲವು-ನಲಿವನ್ನು ನೆನಪಿಸುತ್ತ, ಅದೇ ಸಾಲಿನಲ್ಲೇ ಅಷ್ಟೇ ಬೇಗ ಅವು ಮಸಕಾಗುವಂತೆ ಮಾಡುವಲ್ಲಿ ಮತ್ತೆ ಹಿನ್ನೆಲೆ ಸಂಗೀತದ ವಯಲಿನ್‌ಗಳ ಪಾತ್ರ ಹಿರಿದು.

ಅರಳುವಾ ಹೂವೊಂದು ಕಮರುವಾ ಭಯದಲೀ...
ಸಾಗುತಿದೆ ಬದುಕು|


ಅರಳಿದ ಹೂವು ಕಮರಲೇ ಬೇಕು, ಆದರೆ ಇಲ್ಲಿ ವ್ಯಕ್ತಪಡಿಸಿದ ನೋವಿನ ಹಿನ್ನೆಲೆಯಲ್ಲಿ, ಅರಳಿದ ಹೂವು ತಾನು ಕಮರುವ   ಭಯದಲ್ಲಿ, ತನ್ನ ಅಂತ್ಯವನ್ನು ಕಾಣುವುದೇ ಒಂದು ಪ್ರಯಾಣವಾಗುವ ಬದುಕು ಸಾಗುತ್ತಿದೆ ಎಂದು ಕವಿ ವೇದ್ಯವಾಗಿ ಹೇಳಿದ್ದಾರೆ.  "ಕಮರುವಾ ಭಯದಲೀ..." ಎಂದು ಎಳೆದಿರುವುದು ಆ ಕಥಾ ನಾಯಕಿಯ ನೋವು ಅದೆಷ್ಟು ಗಾಢವಾದದ್ದು ಎಂದು ಎಂಥವರೂ ಚಿಂತಿಸುವಂತೆ ಮಾಡುತ್ತದೆ.

ಸವಿ ನೆನಪುಗಳು ಬೇಕು ಸವಿಯಲೀ ಬದುಕು
ಕಹಿ ನೆನಪು ಸಾಕೊಂದು ಮಾಸಲೀ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲಾ
ಕಾಡುತಿದೆ ಮನವ...|


ಸವಿ ನೆನಪುಗಳು ಬೇಕು... ಸವಿಯಲೀ ಬದುಕು...'

ಕೇವಲ ನಾಲ್ಕೂವರೆ ನಿಮಿಷಗಳಲ್ಲಿ ಈ ಹಾಡಿನಲ್ಲಿ ಬಳಸಲಾದ ರಾಗ ನಿಮ್ಮ ಮನವನ್ನು ಮಣ ಭಾರ ಮಾಡಬಲ್ಲುದು.  ಸಾಹಿತ್ಯ ಮತ್ತು ಸಂಗೀತದ ಮೇಳ ಬಹಳ ಚೆನ್ನಾಗಿದ್ದು, ಹಿನ್ನೆಲೆಯಲ್ಲಿ ಮೂಡುತ್ತಲೇ ತೆರೆಯ ಮೇಲೆ ಬರುವ ಡಿಸ್ಕ್ರೀಟ್ ಚಿತ್ರಗಳಿಗೆ ಪೂರಕವಾಗಿವೆ.  ಈ ಹಾಡನ್ನು ನೀವು ಚಿತ್ರಗಳ ಸಹಾಯವಿಲ್ಲದೆಯೇ ಕೇಳಬಹುದು, ಅಲ್ಲದೇ ಮಧ್ಯೆ ಮಧ್ಯೆ ಕೇಳುವ ಕರಾಳ ರಾತ್ರಿಯ ಶಬ್ದ, ಆಗಾಗ ಮೊರೆಯುವ ವಯಲಿನ್ನುಗಳ ಟೆಕ್ನಿಕ್ ನಿಮ್ಮನ್ನ ಮಂತ್ರ ಮುಗ್ಧರನ್ನಾಗಿಸುವರಲ್ಲಿ ಸಂಶಯವಿಲ್ಲ.

ಈ ಹಾಡನ್ನು ನೀವು ಇಲ್ಲಿ ನೋಡಬಹುದು/ಕೇಳಬಹುದು.

Monday, April 13, 2020

ನೋಡುವ ಕಣ್ಣಿರಲು...

ನಿನ್ನೆ ಶುಭ್ರವಾದ ಮುಂಜಾನೆ ಹೊರಗೆ ತಿರುಗಾಡಿಕೊಂಡು ಬರುವಾಗ ಇನ್ನೇನು ಅದಾಗ್ಗೆ ನಿದ್ದೆಯಿಂದ ಕಣ್ಣೊರೆಸಿಕೊಂಡು ಎದ್ದೇಳುತ್ತಿದ್ದ ಸೂರ್ಯ.  ಸೂರ್ಯನ ಸ್ನೇಹಿತರಾದ ಪಕ್ಷಿ ಸಂಕುಲದ ಸದಸ್ಯರುಗಳು ಬಹಳ ಗಡಿಬಿಡಿಯಲ್ಲಿ ತಮ್ಮ ದಿನಗಳನ್ನು ಆರಂಭಿಸುತ್ತಿದ್ದಂತೆ ಕಂಡುಬಂತು.  ಅವುಗಳ ಚಿಲಿಪಿಲಿ ಧ್ವನಿಯೊಂದಿಗೆ ಪೈಪೋಟಿ ನೀಡುತ್ತೇವೆ ಎಂದು ನಂಬಿಕೊಂಡು ಆಗೊಮ್ಮೆ ಈಗೊಮ್ಮೆ ಬೊಗಳುವ ನಾಯಿಗಳ ಸದ್ದು ದೂರದಲ್ಲಿ ಕೇಳುತ್ತಿತ್ತು.  ಹಿಂದಿನ ದಿನದ ವಿಪರೀತ ಗಾಳಿ, ಸ್ವಲ್ಪ ಮಳೆ/ಆಲಿಕಲ್ಲುಗಳ ಆಘಾತದಲ್ಲಿಸ್ವಲ್ಪ ನೊಂದಂತೆ ಕಂಡ ಗಿಡಮರಗಳೂ ಸಹ ಮುಂಬರುವ ಬಿಸಿಲನ್ನು ಆಹ್ಲಾದಿಸಲು ಸ್ವಲ್ಪವೂ ಅಲುಗಾಡದೇ ಕಾಯುತ್ತಿದ್ದವು.  ವಿಶ್ವದಾದ್ಯಂತ ಕೊರೋನಾ ವೈರಸ್ ಸುದ್ದಿಗೆ ಗ್ರಾಸವಾಗಿ ಹೆದರಿದ್ದ ಚಂದ್ರ ದೂರದಲ್ಲಿ ಅವತರಿಸಿದ್ದರೂ, ಇಂದು ಮತ್ತೇನು ಗ್ರಹಚಾರ ಕಾದಿದೆಯೋ, ತನಗೆಲ್ಲಿ ಸೋಂಕು ತಗುಲೀತು ಎನ್ನುವ ಹುನ್ನಾರದಿಂದ ಮೋಡಗಳ ನಡುವೆಯೇ ಮುಖವನ್ನು ಹುದುಗಿಸಿಕೊಂಡು ಆಗಾಗ್ಗೆ ಚಲಿಸುವ ಮೋಡಗಳ ಕೃಪೆಯಲ್ಲಿ ತೂಗುಯ್ಯಾಲೆಯಲ್ಲಿ ಆಟವಾಡುತ್ತಿದ್ದ.




ಸುತ್ತಲಿನಲ್ಲಿ ಹಸಿರು ತುಂಬಿಕೊಂಡಿದ್ದರೂ ನಾವು ನಡೆಯುವ ರಸ್ತೆಯಲ್ಲಿ ಮಾಗಿದ ಎಲೆಗಳು ಹಿಂದಿನ ದಿನದ ಗಾಳಿ-ಮಳೆಯ ರಭಸದ ಭರಾಟೆಯನ್ನು ನೆನಪಿಸುವಂತೆ ತಮ್ಮನ್ನು ತಾವು ರಸ್ತೆಯ ಮುಖದ ಮೇಲೆ ಚಾಚಿಕೊಂಡಿದ್ದವು.  ಅಲ್ಲಿಲ್ಲಿ ಮುರಿದು ಬಿದ್ದ ಒಣಗಿದ ಎಲೆರಹಿತ ಮರದ ಟೊಂಗೆಗಳು ಅದ್ಯಾವುದೋ ಗಣಿತದ ಸಮೀಕರಣವನ್ನು ಧ್ಯಾನಿಸಿಕೊಳ್ಳುವಂತೆ ತಮ್ಮನ್ನು ತಾವು ಚದುರಿಸಿಕೊಂಡಿದ್ದು, ಹಲವಾರು ಕೋನಗಳಿಂದ ಅನೇಕ ಬಹುಭುಜಾಕೃತಿಗಳ ಸಾಧ್ಯತೆಯನ್ನು ಎತ್ತಿ ತೋರಿಸುತ್ತಿದ್ದವು.  ಈಗಾಗಲೇ ಹಲವಾರು ಬಾರಿ ಮಳೆಯಲ್ಲಿ ಮಿಂದು ತೋಯ್ದು ಹೋದ ನೆಲ ಯಾವುದೇ ಕಂಪನ್ನು ಬೀರುತ್ತಿರಲಿಲ್ಲ, ಅದರ ಬದಲಿಗೆ ಹಿಂದಿನ ದಿನ ಕತ್ತರಿಸಿದ ಹುಲ್ಲಿನ ಗರಿಕೆಗಳು ಬೀಸುವ ಗಾಳಿಗೆ ತಮ್ಮ ಹಲುಬನ್ನು ನಿಲ್ಲಿಸಿ, ಒಂದು ರೀತಿಯ ಗಾಢವಾದ ಪರಿಮಳವನ್ನು ಎಲ್ಲಕಡೆಗೆ ಹರಡಿದ್ದವು.  ರಸ್ತೆಯ ಬದಿಯಲ್ಲಿ ಗುಂಪು ಕಟ್ಟಿಕೊಂಡು, ಪುಡಿಪುಡಿ ಮಣ್ಣಿನಲ್ಲಿ ಮನೆಕಟ್ಟುವ ಇರುವೆಗಳ ಚಡಪಟಿಕೆ ಜೋರಾಗಿ ನಡೆದಿತ್ತು.  ತಮ್ಮ ಭವಿಷ್ಯದ ಸೌಧದ ಮೇಲೆ ತಣ್ಣೀರೆರೆಚಿದ ಮಳೆರಾಯನಿಗೆ ಆಗಾಗ್ಗೆ ಎದ್ದು ಎರಡು ಕಾಲಿನಲ್ಲಿ ನಿಂತು ಶಾಪಹಾಕುತ್ತಿರುವವರಂತೆ ಕಂಡುಬಂದವು.  ಏನೇ ಆದರೂ ಛಲವನ್ನು ಬಿಡಬಾರದು ಎಂದು ತಮ್ಮ ಸೈನಿಕರುಗಳಿಗೆ ಮಳೆಯಿಲ್ಲದ ಶುಭ್ರ ಮುಗಿಲಿನಡಿಯಲ್ಲಿ ಕವಾಯತು ಮಾಡಿಸಲು ಹಿರಿಯ ಇರುವೆಗಳು ತಾಕೀತು ಮಾಡುತ್ತಿರುವಂತೆನಿಸಿತು.

"ನೋಡೋದಕ್ಕೆ ಎಷ್ಟೆಲ್ಲಾ ಇದೆ!" ಎಂಬ ಉದ್ಗಾರ ಹೊರಬರಲು ಯಾವ ಸದ್ದಿನ ಸಹಕಾರವೂ ಬೇಕಾಗಿರಲ್ಲ.  ಇದೇ ಸೃಷ್ಟಿಯಲ್ಲಿ ಎಲ್ಲವೂ ಇವೆ...ನೋಡುವ ಕಣ್ಣಿರಲು...ಬ್ರಹ್ಮಾಂಡವೇ ಒಂದು ಚಿತ್ರಪಟವಾಗುತ್ತದೆ.  ಆದರೆ ಚಿತ್ರಕಾರನೊಬ್ಬನನ್ನು ಬಿಟ್ಟು ಮತ್ತೆಲ್ಲವನ್ನೂ ಇಲ್ಲಿ ಕಾಣಲು ಸಾಧ್ಯ? ಅಥವಾ ಚಿತ್ರಕಾರನೇ ಚಿತ್ರದ ಒಂದು ಅಂಗವಾಗಿಬಿಡುತ್ತಾನೆಯೋ? ಇಲ್ಲಿನ ವಿಸ್ಮಯದ ಲೋಕ ಮೇಲ್ನೋಟಕ್ಕೆ ಸರಳ, ಗೊಂದಲ ರಹಿತವಾಗಿ ಕಂಡುಬಂದರೂ ಒಳಗೊಳಗೆ ಎಂತೆಂಥ ಸತ್ಯಗಳನ್ನು ಬಚ್ಚಿಟ್ಟುಕೊಂಡ ಪ್ರಸಂಗಗಳಿವೆ.  ಚಿಂತೆ-ಚಿಂತನೆಗಳಲ್ಲಿ ತೊಡಗಿಕೊಂಡ ಮನಗಳಿಗೆ ಮೇಲ್ನೋಟಕ್ಕೆ ಬಿಡುಬೀಸಾಗಿ ಎಲ್ಲವೂ ತೆರೆದುಕೊಂಡಂತೆ ಕಂಡರೂ, ಸುತ್ತಲಿನ ಜೀವ-ನಿರ್ಜೀವ ವಸ್ತುಗಳಲ್ಲಿ ವಿಷಯಗಳು ಅಡಗಿಕೊಂಡಿವೆ.  ಅದಕ್ಕಾಗಿಯೇ ಇಂಥವುಗಳನ್ನು "ವಸ್ತು-ವಿಷಯ" ಎನ್ನೋದಿರಬೇಕು!  ವಸ್ತುನಿಷ್ಠತೆ, ವಾಸ್ತವವನ್ನು ಆಧರಿಸಿರುವಂತೆ ಅದೇ ನಿಜ ಹಾಗೂ ಅದೇ ನಿಜವಾದ ನೆರೆಹೊರೆಯಾಗಬಲ್ಲದು.

ಈ ನೆರೆಹೊರೆಯ ಮೋಡಿಯಲ್ಲಿ ಮಿಂದ ಮನಸ್ಸು ಒಂದು ಕ್ಷಣ ಯಾವುದು ನಿಜ, ಯಾವುದು ಅದ್ಭುತ, ಯಾವುದು ಗೋಪ್ಯ, ಯಾವುದು ನಿಗೂಢವಾದದ್ದು ಎನ್ನುವುದನ್ನೆಲ್ಲ ಲೆಕ್ಕ ಹಾಕತೊಡಗಿತು.  ಇವೆಲ್ಲಕ್ಕಿಂತ ಮೇಲಾಗಿ ಇಂಥ ನಿಗೂಢತೆಯನ್ನು ತನ್ನ ಮಡಿಲಿನಲ್ಲಿ ಹುದುಗಿಕೊಂಡು ಅದ್ಯಾವ ಗಣಿತದ ಸಮೀಕರಣಗಳನ್ನು ಹೆಣೆದು ಈ ವ್ಯವಸ್ಥೆಯನ್ನು ಅದ್ಯಾರು ಹದ್ದುಬಸ್ತಿನಲ್ಲಿ ಇಟ್ಟುಕೊಂಡಿದ್ದಾರೋ ಎಂದು ಸೋಜಿಗವಾಯಿತು!

Sunday, April 12, 2020

ಕಾಡುವ ಹಾಡು: ಕೆಂಪಾದವೋ...

ಕೆಂಪಾದವೋ ಎಲ್ಲ ಕೆಂಪಾದವೋ...
ಕವಿ: ಪಿ. ಲಂಕೇಶ್
ಸಂಗೀತ: ವಿಜಯ ಭಾಸ್ಕರ್
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಮ್
ಚಿತ್ರ: ಎಲ್ಲಿಂದಲೋ ಬಂದವರು (೧೯೮೦)

ಅಕ್ಕ, ಅಬಚೂರಿನ ಪೋಸ್ಟ್ ಆಫೀಸು, ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ, ಟೀಕೆ-ಟಿಪ್ಪಣಿ, ನೀಲು...ಇತ್ಯಾದಿ ಬರಹಗಳಿಂದಾಗಿ ಕನ್ನಡಿಗರನ್ನು ಹಲವು ದಶಕಗಳ ಕಾಲ ಕಾಡಿದ ಹಾಗೂ ಇನ್ನೂ ಕಾಡುತ್ತಿರುವ ನಮ್ಮ ಮೇಷ್ಟ್ರು, ನಮ್ಮ ಮಲೆನಾಡಿನ ಮನೆಮಾತು, ಪಿ. ಲಂಕೇಶ್ ಅವರು ಬರೆದಿರುವ ಗೀತೆಗಳು ಬಹಳ ಕಡಿಮೆ.  ಅದರಲ್ಲೂ ಅವರದ್ದೇ ಆದ ಸಿನಿಮಾಗಳಿಗೆ ಅಳವಡಿಸಿದ ಎಲ್ಲ ಹಾಡುಗಳೂ ಕೂಡ ಕನ್ನಡಿಗರಿಗೆ ಎಂದೆಂದಿಗೂ ಚಿರಪರಿಚಿತವೆಂದೇ ಹೇಳಬೇಕು.  ’ಎಲ್ಲಿದ್ದೇ ಇಲ್ಲೀತನಕ, ಎಲ್ಲಿಂದ ಬಂದ್ಯವ್ವ..." ಮೊದಲಾದ ಹಾಡುಗಳು ನಮ್ಮನ್ನೆಲ್ಲ ಅವುಗಳ ಅಂತರಾಳದಲ್ಲಿ ಮುಳುಗಿಸಿಕೊಂಡು ಬಿಡುತ್ತವೆ.  ಈ ನಿಟ್ಟಿನಲ್ಲಿ ಒಂದು ಈ "ಕೆಂಪಾದವೋ..." ಹಾಡು ಕೂಡ ಒಂದು.

ಹಾಡಿನ ಚಿತ್ರಣ ಹಳ್ಳಿಯ ಚಿತ್ರಣ. ೮೦ರ ದಶದದಲ್ಲಿ ಹೊರಬಂದ ಈ ಚಿತ್ರ ಕಪ್ಪು-ಬೆಳಕಿನಲ್ಲಿ ಒಂದು ಪತ್ತೇದಾರಿಯ ಕಥೆಯನ್ನು ಹೊರಹಾಕಲು ಹವಣಿಸುತ್ತದೆ.  ಊರಿನಲ್ಲಿ  ಹತ್ತು  ಎಕರೆ ಜಮೀನಿನಲ್ಲಿ ಕಷ್ಟಗಳ ಕೋಟಲೆಗಳಲ್ಲಿ ಮುಳುಗಿಹೋಗಿರೋ ದಂಪತಿಗಳಿಗೆ ಆಕಸ್ಮಿಕವಾಗಿ ಕೆಲಸಗಾರನಾಗಿ ಸಿಕ್ಕ ಅತಿ ಕಡಿಮೆ ಮಾತಿನ ಬ್ಯಾಲನ ಹಿನ್ನೆಲೆಯನ್ನು ರಾತ್ರಿ ಚರ್ಚಿಸುತ್ತ ಇನ್ನೇನು ನಿದ್ದೆಗೆ ಹೋಗಬೇಕು ಎನ್ನುವ ಸಮಯದಲ್ಲಿ ಬ್ಯಾಲನ ಆಂತರಾಳದಿಂದ ಈ ಹಾಡು ಹುಟ್ಟುತ್ತದೆ.  ಜಗಲಿಯ ಕಂಬಕ್ಕೆ ಒರಗಿಕೊಂಡು ಅದೆತ್ತಲೋ ನಿರ್ವಿಣ್ಣನಾಗಿ ನೋಡುವ ಬ್ಯಾಲ "ಕೆಂಪಾದವೋ" ಎನ್ನುವುದನ್ನು ಆಗಷ್ಟೇ ಮುಗಿದ ಸೂರ್ಯಾಸ್ತವನ್ನು ಕುರಿತು ಹೇಳುತ್ತಾನೋ ಅಥವಾ ಮುಂಬರುವ ಸೂರ್ಯೋದಯವನ್ನು ಕುರಿತು ಹೇಳುತ್ತಾನೋ ಎಂಬ ಕುತೂಹಲ ನೋಡುಗರಲ್ಲಿ ಮೂಡುತ್ತದೆ. ಅಥವಾ ಬ್ಯಾಲನ ಮನದಲ್ಲಿ ದೊಡ್ಡದೊಂದು ಕ್ರಾಂತಿಯ ಸಂಘರ್ಷವೇ ನಡೆಯುತ್ತಿರಬಹುದು.

ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ
ನೆತ್ತರ ಕುಡಿಧ್ಹಾಂಗೆ ಕೆಂಪಾದವು.


ಈ ಎರಡು ಸಾಲುಗಳಲ್ಲಿ ಒಂದು ವಿಜೃಂಬಣೆಯ ಧೋರಣೆ ಇದೆ, ಸೂರ್ಯನಂತೆ ಅವನ ಕಾರ್ಯತಂತ್ರದಿಂದ ದಿನಕ್ಕೆರಡು ಬಾರಿ ಭೂಮಂಡಲವನ್ನೆಲ್ಲ ಕೆಂಪಿನಿಂದ ಆವರಿಸುವ ಶಕ್ತಿ ಇನ್ಯಾರಿಗಿದೆ?  ಆತನ ಈ ಶಕ್ತಿಯ ವಿಶೇಷತೆಯನ್ನು ಎಲ್ಲ ದೇಶಗಳಲ್ಲೂ ಕವಿಗಳು ಹಾಡಿ ಹೊಗಳಿದ್ದಾರೆ, ಹಾಗೂ ಇಲ್ಲೂ ಕೂಡ.  ಕೆಂಪು ಬಣ್ಣ ಯಾವುದರ ದ್ಯೋತಕ, ಇದು ಕ್ರಾಂತಿಕಾರಕವೋ ಅಲ್ಲವೋ ಎಂಬುದನ್ನು ಕೂಡ ಇಲ್ಲಿ ಚರ್ಚಿಸಬಹುದು.   ಹಾಗೇ ಕೇವಲ ಕೆಲವೇ ಕೆಲವು ವಸ್ತುಗಳನ್ನು ಹೆಸರಿಸಿ - ಹಸುರಾಗಿದ್ದ ಗಿಡಮರ, ಬೆಳ್ಳಗಿದ್ದ ಹೂವು - ಇವೆಲ್ಲವೂ ರಕ್ತವನ್ನು ಕುಡಿದ ಹಾಗೆ ಕೆಂಪಾದವು!  ನಾವು ನೆತ್ತರ ಎಂದು ಕನ್ನಡದಲ್ಲಿ ಬಳಸಿದಾಗ ಆ ಪದಕ್ಕೆ ಅಷ್ಟು ಕಟುವಾದ ಶಕ್ತಿ ಬರುವುದಿಲ್ಲ, ಅದು ಕ್ರಾಂತಿ ಎನ್ನಿಸುವುದಿಲ್ಲ, ಅದೇ ರಕ್ತ ಎಂದು ಬಳಸಿದಾಗ ಅದನ್ನು ಹಲವಾರು ಕ್ರಾಂತಿಕಾರಕ ವಿಚಾರಗಳಿಗೆ ಹೋಲಿಸಬಹುದು.  ಅದೇ ಇಲ್ಲಿ ಕವಿಯ ಹೆಗ್ಗಳಿಕೆ - ಹಗುರವಾದ ಪದಗಳನ್ನು ಬಳಸಿ ಸೂಕ್ತವಾದ ಅರ್ಥವನ್ನು ಕಟ್ಟುವುದು.

ಹುಲ್ಲೂ ಬಳ್ಳಿಗಳೆಲ್ಲ ಕೆಂಪಾದವೂ
ಊರು ಕಂದಮ್ಮಗಳು ಕೆಂಪಾದವೂ


ಹಸುರಿದ್ದ ಗಿಡಮರ ಬೆಳಗಿದ್ದ ಹೂವುಗಳು, ಅವುಗಳ ಜೊತೆಗೆ ಹುಲ್ಲೂಬಳ್ಳಿಗಳೆಲ್ಲ ಕೆಂಪಾಗೋದು ಸಹಜ.  ಅವುಗಳ ಜೊತೆಗೆ ಊರು ಕಂದಮ್ಮಗಳು ಕೆಂಪಾಗೋದು ಏಕೆ ಮತ್ತು ಹೇಗೆ ಅನ್ನಿಸೋಲ್ಲ?  ಇಲ್ಲಿ ಕವಿ ಊರಿನ ಜನಗಳಿಗೆಲ್ಲ ಒಟ್ಟಿನಲ್ಲಿ "ಕಂದಮ್ಮಗಳು" ಎಂದು ಸೂಚ್ಯವಾಗಿ ಹೇಳಿದ್ದಾರೆ.  ಊರಿನ ಕಂದಮ್ಮಗಳು ಎಂದರೆ ಬರೀ ಮನುಷ್ಯರಿಗೆ ಮೀಸಲಾಗಬೇಕು ಎಂದೇನು ಇಲ್ಲ, ಊರಿನಲ್ಲಿ ಉಸಿರಾಡುವ ಎಲ್ಲವೂ ಊರಿನ ಕಂದಮ್ಮಗಳೇ!

ಜೊತೆಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ
ನುಡಿ ನುಡಿದೂ ಹೋದಾಗ ಪಚ್ಯಾಯ ತೆನೆಯಂತ
ಭೂಮಿಯೂ ಎಲ್ಲಾನೂ ಕೆಂಪಾದವೋ


ಈ ಮೇಲಿನ ಸಾಲುಗಳಲ್ಲಿ ಸೂರ್ಯ-ಭೂಮಿಯ ಸಾಂಗತ್ಯವನ್ನು ಕವಿ ವರ್ಣಿಸುತ್ತಿದ್ದಾರೆಯೇ? ಅಪಾರವಾದ ಮುಗಿಲಿನ ನೀಲಿಯಲ್ಲಿ ನಲಿಯುವ, ಸಂಜೆಯಾದ ನಂತರ ರಾತ್ರಿಯಲ್ಲಿ ಕಪ್ಪಾಗುವ, ಸೂರ್ಯನ ಮಾಂತ್ರಿಕ ಶಕ್ತಿಯಿಂದ ಹಸಿರು ತೆನೆಯಂತೆ ಕಂಗೊಳಿಸುವ ಭೂಮಿಯೇ ಕೆಂಪಾದಂತೆ.  ಅಥವಾ...ಬ್ಯಾಲನ ಪಾತ್ರದ ಮನದಲ್ಲಿ ತನ್ನ ಪ್ರೇಯಸಿಯೊಡನೆ ಕಳೆದ ಒಡನಾಟದ ನೆನಪಿನ ಜೊತೆಜೊತೆಯ ನಡುಗೆಯೇ?  ಕಾಯುತ್ತ ಕುಳಿತಾಗ ಮೂಡುವ ಬೇಸರ ಅಥವಾ ವಿರಹವೇ ಅಥವಾ ಮತ್ತಿನ್ಯಾವ ಸೂಚ್ಯವಿರಬಹುದು?  ಈ  ಮೇಲಿನ ಸಾಲುಗಳನ್ನು ಹಲವಾರು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು, ಪಚ್ಚೆಯ ತೆನೆ ಎಂದರೆ ಹಸಿರು ತೆನೆ ಎಂದೋ ಅಥವಾ ಪಚ್ಯಾಯ ತೆನೆ ಎಂದರೆ ಏನಿರಬಹುದು ಎಂಬುದನ್ನು ಊಹಿಸಿಕೊಂಡಷ್ಟೂ ಗಹನವಾಗುತ್ತದೆ.

ನನಗಾಗ ಕೆಂಪಾದವೋ.
ಈ ಮೇಲಿನ ಉಪಮೆಗಳ ಪೂರಕಗಳ ಜೊತೆಗೆ ಕೊನೆಯ ಈ ಸಾಲು ಬಹಳ ಮುಖ್ಯವಾದುದು.  ದಿಢೀರನೆ ನೆನಪಿನಂಗಳದಿಂದ ಹೊರಬಂದ ಮನಸ್ಸು ’ನನಗಾಗ ಕೆಂಪಾದವೋ’ ಎಂದು, ನನಗೆ ಹಾಗನ್ನಿಸಿತು ಎಂದು ಹಂಚಿಕೊಂಡ ಹಾಗಿದೆ.  ಹೇಳುವುದನಲ್ಲೆವ ಹೇಳಿ ಅದು ನನ್ನ ಅಭಿಪ್ರಾಯ ಮಾತ್ರ ಎಂದೋ ಇಲ್ಲಾ ನನಗೆ ಆಗ ಕೆಂಪಾದವೋ ಎಂದು ಊಹಿಸಿಕೊಂಡಿರಲಿಕ್ಕೂ ಸಾಧ್ಯ.

ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ


ಈ ಹಾಡಿನ ಬಗ್ಗೆ ಯೋಚಿಸುತ್ತಿರುವಾಗ ಗೀತೆ ಎಲ್ಲೋ ಅಪೂರ್ಣವಾಯಿತೇನೋ ಎಂದು ಒಮ್ಮೆ ಅನ್ನಿಸಿತು.  ಈ ಪದ್ಯಕ್ಕೆ ಇನ್ನೊಂದು ಪ್ಯಾರಾವೂ ಇರಬಹುದು.  ಆದರೆ, ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಚಿತ್ರದಲ್ಲಿ ಮುಂಬರುವ ನಿಗೂಢ ಕಥೆಯ ಸುಳಿವನ್ನು ನೀಡುವಂತೆ ಅರ್ಧದಲ್ಲೇ ಈ ಹಾಡನ್ನು ಉದ್ದೇಶ ಪೂರಕವಾಗಿ ಮೊಟಕುಗೊಳಿಸಿದ್ದಾರೆ ಅನ್ನಿಸುತ್ತದೆ.  ಹಾಡಿನುದ್ದಕ್ಕೂ ಅಪರೂಪಕೊಮ್ಮೆ ಸಂಸ್ಕೃತ ಪದಗಳನ್ನು ಬಳಸಿರುವುದನ್ನು ಬಿಟ್ಟರೆ ಮತ್ತೆಲ್ಲ ಗ್ರಾಮೀಣ ಅಚ್ಚ ಕನ್ನಡದ ಭಾಷೆಯಲ್ಲಿ ಮೂಡಿಬರುತ್ತದೆ.  ಚಿಕ್ಕ ಹಾಗೂ ಚೊಕ್ಕವಾದ ಸಾಹಿತ್ಯ ಅನೇಕ ನೆನಪಿನ ತರಂಗಗಳನ್ನು ನಿಮ್ಮ ಮನದಲ್ಲಿ ಮೂಡಿಸಬಹುದು.  ಪಾತ್ರಧಾರಿ ಬ್ಯಾಲಾ ’ಹ್ಮೂ’ ಗುಟ್ಟುತ್ತಲೇ ಮಂಡಿಯನ್ನು ಮಡಿಚಿದ ಕಾಲಿನಲ್ಲಿ ಸಣ್ಣಗೆ ತಾಳ ಹಾಕುತ್ತಾ ಹಾಡನ್ನು ಮುಗಿಸಿ ನಿಸ್ತೇಜನಾಗಿ ಬಿಟ್ಟಕಣ್ಣು ಬಿಡುತ್ತಲೇ ಕುಳಿತಿರುವುದರ ಮೂಲಕ ಹಾಡನ್ನು ಕೊನೆಯಾಗಿಸಿ ಬಹಳ ವಿಶೇಷವಾಗಿ ಸೆರೆಹಿಡಿಯಲಾಗಿದೆ.  ಈ ಹಾಡಿನ ಗುಂಗಲ್ಲೇ ನೀವು ಮುಂದುವರೆದು ’ಎಲ್ಲಿದ್ದೇ ಇಲ್ಲೀ ತನಕ, ಎಲ್ಲಿಂದ ಬಂದ್ಯವ್ವಾ..." ಹಾಡನ್ನು ನೋಡಿ, ಪೂರ್ತಿ ಸಿನಿಮಾವನ್ನೂ ನೋಡಿದಿರೆಂದರೆ ಒಮ್ಮೆ ೮೦ರ ದಶಕದ ಕರ್ನಾಟಕಕ್ಕೆ ಹೋಗಿಬಂದಾಗುವುದಂತೂ ಖಂಡಿತ!


ಈ ಹಾಡನ್ನು ನೀವು ಇಲ್ಲಿ ಕೇಳಬಹುದು ಹಾಗೂ ನೋಡಬಹುದು.

Saturday, April 11, 2020

ಇತಿಹಾಸ-ಯುದ್ಧ-ಕಲಿಕೆ

ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ
ಮೃತ್ಯು ಕುಣಿಯುತಲಿಹನು ಕೇಕೆ ಹಾಕುತಲಿ
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ
ಎತ್ತಲಿದಕೆಲ್ಲ ಕಡೆ? ಮಂಕುತಿಮ್ಮ|| ೧೧

1943ರಲ್ಲಿ ಪ್ರಕಟಗೊಂಡ ಮಂಕುತಿಮ್ಮನ ಕಗ್ಗದ 'ಮಾನವರೋ ದಾನವರೋ?' ಅವತರಣಿಕೆಯಲ್ಲಿ ಬರುವ 11ನೇ ಪದ್ಯ ಇದು.  ಇಂದಿಗೆ 77 ವರ್ಷದ ಮೊದಲೇ ಈ ಪದ್ಯವನ್ನು ಬರೆದಾಗ ಆಗಿನ ಸ್ಥಿತಿಗತಿ ಹೇಗಿರಬಹುದು ಎಂದು ಯೋಚನೆ ಬಂತು.

ನಮಗೆ ಕಷ್ಟ ಬಂದಾಗ ನಮ್ಮ ಮೂಲ ಸಿದ್ಧಾಂತ-ಸಂಸ್ಕಾರಗಳೇ ನಮಗೆ ಆಶ್ರಯವಾಗುತ್ತವಂತೆ.  ಇಂದು ಇಡೀ ವಿಶ್ವವೇ ಸಂಕಷ್ಟದ ಸಮಯದಲ್ಲಿರುವಾಗ ಹಾಗೆಯೇ ಓದ ತೊಡಗಿದ್ದ, ಕನ್ನಡದ ಭಗವದ್ಗೀತೆ, ಕಗ್ಗದ ಪುಟಗಳು ನಿಲ್ಲಲಾರದೇ ಹಾಗೇ ಮುಂದುವರೆಯತೊಡಗಿದವು!

See the source image
(World in 1943 - AlternateHistory.com)

ಆಗೆಲ್ಲ ಎರಡನೇ ಮಹಾಯುದ್ಧ ಎಲ್ಲ ಕಡೆಗೆ ಹರಡಿಕೊಂಡಿತ್ತು.  ಅದೇ ಸಮಯದಲ್ಲಿ ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ಭಾರತದ ಉದ್ದಗಲಕ್ಕೂ ಕೂಡ ಸ್ವಾತ್ರಂತ್ಯದ ಕಿಡಿ ಹೊತ್ತಿ ಪ್ರಜ್ವಾಲಮಾನವಾಗಿ ಉರಿಯುತ್ತಿದ್ದ ಸಮಯ.  1943ರ ಡಿಸೆಂಬರ್ 30 ರಂದು ಸುಭಾಶ್‌ಚಂದ್ರ ಬೋಸ್ ಪೋರ್ಟ್ ಬ್ಲೇರ್‌ನಲ್ಲಿ ಭಾರತದ ಸ್ವಾತಂತ್ರ್ಯ ಪಟವನ್ನು ಹಾರಿಸಿದ್ದು ಬಹಳಷ್ಟು ಸುದ್ದಿ ಮಾಡಿತ್ತು.

ಆಗಿನ ಸಂದರ್ಭದಲ್ಲಿ ಗುಂಡಪ್ಪನವರು ಪ್ರಪಂಚವನ್ನು ಸುತ್ತುವರೆದಿದ್ದ "ದುರ್ದೈವ"ದ ಬಗ್ಗೆ ಬರೆದಿದ್ದು ಇಂದಿನ ಕಾಲಕ್ಕೆ ಹೇಗೆ ಅನ್ವಯವಾಗುತ್ತದೆ ಎಂಬುದನ್ನು ನಾವೆಲ್ಲ ಕಲ್ಪನೆ ಮಾಡಿಕೊಳ್ಳಬಹುದು.  ಇದೇ ಮಾತನ್ನು ನಾಲ್ಕು ತಿಂಗಳ ಹಿಂದೆ ಹೇಳಿದ್ದರೆ ಯಾರೂ ನಂಬುತ್ತಿರಲಿಲ್ಲ.  ಆದರೆ ಈ ಪದ್ಯ ಪ್ರಸಕ್ತ ಸನ್ನಿವೇಶಕ್ಕೆ ಹೇಳಿ ಬರೆಸಿದ ಹಾಗಿದೆ.

***

ಆಗೆಲ್ಲ ಯುದ್ಧಗಳು ಒಂದು ರೀತಿಯ ಲೆವೆಲರುಗಳಾಗಿದ್ದವು.  ಜನರ ದೇಶ-ಭಾಷೆ-ಗಡಿಗಳಿಗಿಂತಲೂ ಹೆಚ್ಚಾಗಿ ಆಗಿನ ಸೈನಿಕರೆಲ್ಲ ಯಾವ ಯಾವ ಬಣಗಳಿಗೆ ಸೇರಿದ್ದರೋ ಅಲ್ಲೆಲ್ಲಾ ಭೀಕರವಾದ ಸಾವು-ನೋವುಗಳಾಗಿವೆ.  ಮಾನವ ಸಂತತಿ ಕಂಡ ಅತ್ಯಂತ ಕೆಟ್ಟ ವರ್ಷಗಳು ಎಂದರೆ ಮೊದಲ ಮತ್ತು ಎರಡನೇ ಮಹಾಯುದ್ಧದ ಕಾಲ (World War I 1914-1918, World War II 1939-1945).  ಒಂದು ಅಂದಾಜಿನ ಪ್ರಕಾರ ಈ ಎರಡು ಯುದ್ಧಗಳಲ್ಲಿ ಸುಮಾರು ಒಂದು ನೂರು ಮಿಲಿಯನ್ ಜನರಿಗಿಂತಲೂ ಹೆಚ್ಚು ಜನರು ಕಾಲವಾದರು.  ಯುದ್ಧ ಮುಗಿದ ನಂತರವೂ ಸಾವು-ನೋವಿನ ಪ್ರಮಾಣ ಮುಂದುವರೆಯುತ್ತಲೇ ಇತ್ತು.


ಮಾನವ ಹುಟ್ಟಿದ-ಹೋರಾಡಿದ-ಸತ್ತ ಎಂದು ಸರಳವಾಗಿ ಹೇಳುವ ಹಾಗೆ, ನಮ್ಮ ಇತಿಹಾಸದ ಉದ್ದಾನುದ್ದಕ್ಕೂ ಹೋರಾಟ-ಹೊಡೆದಾಟವೇ ಎಲ್ಲ ಕಡೆಗೆ ಕಂಡುಬರುತ್ತದೆ.  ಪೈಮೇಟ್‌ಗಳಿಂದ (Primate) ಬಳುವಳಿಯಾಗಿ ಪಡೆದ ಗುಣವಾಗಿ ತಮ್ಮ ತಮ್ಮ ನೆರೆಹೊರೆಯನ್ನು ಕಾಪಾಡಿಕೊಳ್ಳುವುದು ಅದಕ್ಕೋಸ್ಕರ ಹೋರಾಡುವುದು ನಮ್ಮ ಇಂದು-ನಿನ್ನೆಯ ಗುಣವಲ್ಲ, ಮಿಲಿಯನ್‌ಗಟ್ಟಲೆ ವರ್ಷಗಳಿಂದ ನಮ್ಮ ವಂಶವಾಹಿಯಲ್ಲಿದೆ.  ಆದ್ದರಿಂದಲೇ ಅದು ನಮಗೆ ಸಹಜ ಕೂಡ.

***

ಯುದ್ಧದಿಂದೇನು ಕಲಿತಿದ್ದೇವೆ?  ಇತಿಹಾಸದಿಂದೇನು ಕಲಿತಿದ್ದೇವೆ? ನೂರು ವರ್ಷಗಳು ಕಳೆದ ನಂತರ  ಮತ್ತೆ ಎಲ್ಲವೂ ಮರುಕಳಿಸುವ ಹಾಗಿದೆ ಎನ್ನಿಸೋದಿಲ್ಲವೇ?  ಇದು ವಿಶ್ವದ ದೊಡ್ಡ ಶಕ್ತಿಗಳು ಕಟ್ಟಿರುವ ಆಂತರಿಕ ಯುದ್ಧವೋ? ಅಥವಾ ನಿಸರ್ಗ ನಮ್ಮ ಮೇಲೆ ಹೂಡಿರುವ ಯುದ್ಧವೋ? ಇವೆಲ್ಲವನ್ನು ಮತ್ತೆ ನಮ್ಮ ಮುಂದಿನ ಸಂತತಿ ಅವರ ಇತಿಹಾಸದಲ್ಲಿ ಕಂಡುಕೊಳ್ಳುತ್ತಾರೆ!  ಇಂದಿನದನ್ನು ನಾಳಿನವರು ಕಂಡುಕೊಂಡು ಅದರ ಬಗ್ಗೆ ಏನನ್ನೂ ಮಾಡದಿರುವುದೇ ಇತಿಹಾಸ ಎಂಬುದು ಈ ಹೊತ್ತಿನ ತತ್ವ!

Friday, April 10, 2020

ದಿನಗಳು ಬೇರೆ, ದಿನಚರಿ ಒಂದೇ...

ನಮಗೂ ನೈಬರ್ಸ್ ಇದ್ದಾರೆ ಅಂತ ಅನ್ನಿಸಿದ್ದು ಇವತ್ತು ಬೆಳಿಗ್ಗೆ ಎದ್ದ ನಂತರ ನರಿ ಮುಖ ನೋಡಿದ ಮೇಲೆ.  ಮನೆಯ ಬಾಗಿಲನ್ನು ತೆಗೆಯಲು ಹೊರಗೆ ಬಂದು ನೋಡಿದರೆ ನಮ್ಮ ಯಾರ್ಡ್‌ನಲ್ಲಿ ಒಂದು ನರಿ, ಸ್ವಲ್ಪ ದೂರದಲ್ಲಿ ಎರಡು ಕಾಡು ಟರ್ಕಿಗಳು ಹಾಗೂ ಕೆಲವು ಜಿಂಕೆಗಳು ಕಂಡು ಬಂದವು. ಇವೆಲ್ಲ ನಮ್ಮ ಮನೆಯ ಸುತ್ತ ಇರೋ ಅಂತ ಪ್ರಾಣಿಗಳೇ, ಆದರೆ ನಮ್ಮ ನಮ್ಮ ವ್ಯಸ್ತ ಬದುಕಿನಲ್ಲಿ ನಮಗೆ ಅವುಗಳನ್ನು ನೋಡಲಾಗೋದಿಲ್ಲ ಅಷ್ಟೇ. ’ಅಯ್ಯೋ, ನಮ್ಮ ಮನೆ ಹತ್ರ ಬಂದಿದ್ದಾವೆ!’ ಎಂದು ಆಶ್ಚರ್ಯ ಸೂಚಿಸಿದ ನನ್ನ ಮಗಳಿಗೆ ಹೇಳಿದೆ,’ ನಾವು ಅವುಗಳ ಮನೆಯ ಹತ್ತಿರ ಬಂದಿದ್ದೇವೆಯೇ ವಿನಾ ಅವುಗಳು ನಮ್ಮ ಮನೆ ಬಳಿ ಅಲ್ಲ’, ಎಂದು. ಅವಳು ಸ್ವಲ್ಪ ಕಕ್ಕಾಬಿಕ್ಕಿಯಾದಂತೆ ಕಂಡು ಬಂದಳು.

ಇತ್ತೀಚೆಗಂತೂ ನಮ್ಮ ನೆರೆಹೊರೆಯಲ್ಲಿ, ನಮ್ಮ ಸುತ್ತಮುತ್ತಲಿನ ಎಲ್ಲ ರಸ್ತೆಗಳು ಸ್ತಬ್ಧವಾಗಿವೆ.  ಯಾವುದೇ ಮೋಟಾರು ವಾಹನದ ಸದ್ದೂ ದಿನವಿಡೀ ಕೇಳೋದಿಲ್ಲ.  ಒಂದು ಹಂತದಲ್ಲಿ ಈ ಪ್ರಪಂಚದಲ್ಲಿ ನಾವಷ್ಟೇ ಇದ್ದೇವೇನೋ ಎಂದು ಅನುಮಾನ ಬರುವಷ್ಟು ಎಲ್ಲ ಕಡೆಗೆ ತಣ್ಣಗಾಗಿ ಬಿಟ್ಟಿದೆ.  ಇವತ್ತಿಗೆ ನಾಲ್ಕು ವಾರಗಳ ಕಾಲ ಮನೆಯಲ್ಲೇ ಕುಳಿತು ದಿನ ಮತ್ತು ರಾತ್ರಿಗಳನ್ನು ಕಳೆದ ನಮಗೆ ಅವುಗಳು ಬಹಳ ಧೀರ್ಘವಾದಂತೆ ಕಂಡುಬರುತ್ತವೆ.  ಮೊದಲಾಗಿದ್ದರೆ, ವಾರದ ದಿನಗಳು ಒಂದು ರೀತಿ ಓಡುತ್ತಿದ್ದವು.  ವಾರಾಂತ್ಯದ ದಿನಗಳು ಮತ್ತಿನ್ನೊಂದು ರೀತಿ.  ಆದರೆ ಈಗೆಲ್ಲ ಬದಲಾಗಿದೆ.

ವಾರದ ದಿನಗಳಲ್ಲಿ ನಾವೊಂದು ದಿನಚರಿಯನ್ನು ಅನುಸರಿಸಲೇ ಬೇಕು.  ಮನೆಯಲ್ಲೇ ಕುಳಿತಿದ್ದೇವೆಂದಾಕ್ಷಣ ದಿನದ ಇಪ್ಪತ್ತನಾಲ್ಕು ಘಂಟೆಗಳ ಕಾಲ ಯಾರಿಗೂ ಕೆಲಸ ಮಾಡಲಾಗದು. ಅಂತೆಯೇ ನಾವು ಎಷ್ಟು ಹೊತ್ತಿಗೆ ಕೆಲಸವನ್ನು ಆರಂಭಿಸುತ್ತೇವೆ, ಎಷ್ಟು ಹೊತ್ತಿಗೆ ಮುಗಿಸುತ್ತೇವೆ ಎಂಬುದೂ ಮುಖ್ಯ.  ನನ್ನೆಲ್ಲ ಫೋನ್‌ಕಾಲ್‌ಗಳನ್ನು ಹೆಚ್ಚಿನ ಮಟ್ಟಿಗೆ ನಾನು ಸ್ಪೀಕರ್‌ ಫೋನ್‌ನಲ್ಲಿಯೇ ಹಾಕಿರೋದರಿಂದ ದಿನದ ಉದ್ದಕ್ಕೂ ಮನೆಯಲ್ಲಿ ಒಂದು ರೀತಿಯ ’ಕಲರವ’ ಇರುತ್ತದೆ.  ಈ ದಿನ ಸಂಜೆ ಆರು ಘಂಟೆ ಆಗುವುದರೊಳಗೆ ಇಷ್ಟು ಕೆಲಸ ಮುಗಿಸುತ್ತೇನೆ ಎಂದು ಪ್ಲಾನ್‌ ಹಾಕಿಕೊಂಡು ಕೆಲಸ ಮಾಡಿದಾಗ ಎಲ್ಲ ಸುಲಭವಾಗುತ್ತದೆ.  ದಿನಕ್ಕೊಂದು ಬಾರಿ ಇಂಗ್ಲೀಷ್ ನ್ಯೂಸ್, ಮಧ್ಯೆ ಮಧ್ಯೆ ಅಲ್ಲಿಲ್ಲಿ ಒಂದಿಷ್ಟು ಪ್ರಜಾವಾಣಿ, ನ್ಯೂಯಾರ್ಕ್ ಟೈಮ್ಸ್, ವಾಟ್ಸಾಪ್ ಇವನ್ನೆಲ್ಲ ನೋಡಿಕೊಂಡು ಹೋಗುತ್ತಿರುವಾಗ ವಾರದ ದಿನಗಳು ವೇಗವಾಗೇ ಹೋಗುತ್ತಿವೆ ಎನ್ನಿಸುತ್ತದೆ.  ಇವುಗಳ ಜೊತೆಯಲ್ಲಿ ದಿನಕ್ಕೊಬ್ಬೊಬ್ಬರಿಗೆ ಫೋನ್ ಮಾಡಿ ಹಳೆಯ ಸ್ನೇಹಿತ, ಬಂಧು-ಬಳಗವರನ್ನು ಮಾತನಾಡಿಸಿಕೊಂಡು ಬರುವ ಪರಿಪಾಠ ಹುಟ್ಟಿದೆ.

ಎಲ್ಲಕ್ಕಿಂತ ಕಷ್ಟಕರವಾದುದು ಸೋಮವಾರ ಬೆಳಿಗ್ಗೆ - ಕೆಲಸ ಆರಂಭಿಸುವುದಕ್ಕೇ ಒಂದು ರೀತಿಯ ಕಷ್ಟವೆನಿಸುತ್ತದೆ.  ಅದೇ ರೀತಿ ಶುಕ್ರವಾರ ಬಂದರೆ ಮಧ್ಯಾಹ್ನವಾದಂತೆಲ್ಲ ಮೊದಲಿನ ಹುರುಪಿರೋದಿಲ್ಲ. ಯಾರಿಗಾದರೂ, Have a good weekend! ಎಂದು ಅಚಾನಕ್ಕಾಗಿ ಹೇಳಿದರೂ, Stay safe! ಎಂದು ಕೊನೆಯಲ್ಲಿ ಸೇರಿಸುವುದು ಸಹಜವಾಗಿ ಹೋಗಿದೆ.

ವೀಕೆಂಡ್ ದಿನಗಳದ್ದು ಮೊದಲಿನಂತೆ ಅಲ್ಲಿಲ್ಲಿ ಓಡಾಡುವ ವಿಶೇಷಗಳೇನೂ ಇಲ್ಲವಾದರೂ, ಈಗ ಹೊಸ ಹೊಸ ಕಾರ್ಯಕ್ರಮಗಳು ನಮ್ಮ ಕ್ಯಾಲೆಂಡರುಗಳನ್ನು ಆವರಿಸಿಕೊಳ್ಳುತ್ತಿವೆ.  ಶನಿವಾರ ಮುಂಜಾನೆ 9:30ಕ್ಕೆ ನಮ್ಮ ನೈಬರ್‌ಹುಡ್ ಜನರೆಲ್ಲರೂ ತಮ್ಮ ತಮ್ಮ ಮನೆಯಲ್ಲೇ ಕುಳಿತು ವರ್ಚುವಲ್ ಟೀ-ತಿಂಡಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.  ಕಳೆದ ವಾರ ಒಬ್ಬೊಬ್ಬರನ್ನೇ ಕರೆ ಕರೆದು ಅವರ ಕುಶಲೋಪರಿಯನ್ನು ವಿಚಾರಿಸಿದ ಮೇಲೆ, ಅವರೆಲ್ಲರೂ ಖುಶಿಯಿಂದಲೇ ಶನಿವಾರ "ತಿಂಡಿ"ಯ ಕಾರ್ಯಕ್ರಮಕ್ಕೆ ಒಪ್ಪಿಕೊಂಡರು.  ನಂತರ ಭಾನುವಾರ (ಬೃಂದಾವನ ಕನ್ನಡ ಸಂಘದ) ಕಮ್ಯೂನಿಟಿ ಕಾಲ್ ಮತ್ತು ಕನ್ನಡ ಕಲಿ ವರ್ಚುವಲ್ ತರಗತಿಯನ್ನು ಮುಗಿಸುವಷ್ಟರಲ್ಲಿ ದಿನ ಆರಾಮವಾಗಿ ಕಳೆದು ಹೋಗುತ್ತದೆ. ಈ ನಡುವೆ, ಅವರಿವರು ಶೇರ್ ಮಾಡಿರುವ ಹಳೆ-ಹೊಸ ಸಿನಿಮಾವನ್ನೋ ಅಥವಾ ಡಾಕ್ಯುಮೆಂಟರಿಯನ್ನೋ ನೋಡುವುದು ರೂಢಿಯಾಗಿ ಬಿಟ್ಟಿದೆ.
ನಾವೆಲ್ಲ ಮನೆ ಒಳಗೆ ಸೇರಿಕೊಂಡಿರುವುದರಿಂದ ನಮ್ಮ ಸುತ್ತಮುತ್ತಲಿನ ಪರಿಸರ ಒಂದಿಷ್ಟು ನಿರಾಂತಕವಾಗಿ ಉಸಿರಾಡುವ ಸ್ಥಿತಿಯನ್ನು ತಲುಪಿದೆ ಎಂದು ಹೇಳಬಹುದು.  ಈ ನಾಲ್ಕು ವಾರಗಳಲ್ಲಿ ವಾಯು-ಶಬ್ದ ಮಾಲಿನ್ಯ ಬಹಳಷ್ಟು ಕಡಿಮೆಯಾಗಿದ್ದು, ನಮ್ಮ ಸುತ್ತಮುತ್ತಲಿನ ಪರಿಸರವೂ ಹೊಸತಾಗಿ ಹೊಳೆಯುವಂತೆ ಕಾಣುತ್ತದೆ.  ಈ ಮೊದಲು ನಾವು ಅಷ್ಟೊಂದು ಗಮನವಿಟ್ಟು ನೋಡಲಾಗದ ನಿಸರ್ಗದ ಅದ್ಭುತಗಳನ್ನು ನೋಡುತ್ತಿದ್ದೇವೆ.  ಪಕ್ಷಿಗಳ ಚಿಲಿಪಿಲಿ ಧ್ವನಿ ಈಗಾಗಲೇ ಎಲ್ಲರ ಕಿವಿಗೂ ಬಿದ್ದಿರಬೇಕು!

ಯಾವುದು ಅತಿಯಾದರೂ ಅಷ್ಟೊಂದು ಒಳ್ಳೆಯದಲ್ಲ - ಅದೇ ರೀತಿ, ಈ ಏಕತಾನತೆಯೂ ಒಂದಿಷ್ಟು ಕಾಲದೊಳಗೆ ತನ್ನ ಮುದವನ್ನು ಕಳೆದುಕೊಂಡೀತು.  ವಿಶ್ವದಾದ್ಯಂತ ಎಷ್ಟೋ ವ್ಯವಹಾರಗಳು ನಿಂತು ಹೋಗಿವೆ, ಎಷ್ಟೋ ಜನರು ಕೆಲಸವಿಲ್ಲದೆ ಕೊರಗುತ್ತಿದ್ದಾರೆ, ಇಂತಹವರನ್ನೆಲ್ಲ ಮನೆಯಲ್ಲಿ ಕುಳಿತಿರಿ ಎಂದು ಯಾವ ಶಕ್ತಿಯೂ ಕಟ್ಟಿ ಹಾಕಲಾರದು.  ಕಣ್ಣಿಗೆ ಕಾಣುವ ಹಸಿದ ಹೊಟ್ಟೆಯ ಸಂಕಟ ಕಣ್ಣಿಗೆ ಕಾಣದ ಕ್ರಿಮಿಯ ಚಮತ್ಕಾರದ ಹೆದರಿಕೆಗಿಂತಲೂ ಬಹಳಷ್ಟು ದೊಡ್ಡದು.  ಹಸಿದ ಹೊಟ್ಟೆಗಳು ಕ್ರಾಂತಿ ಕೋಲಾಹಲವನ್ನೇ ಮಾಡಿದ ಅನೇಕ ನಿದರ್ಶನಗಳಿವೆ.  ಈ ನಮ್ಮೆಲ್ಲರ ಗೃಹ ಬಂಧನ ಆದಷ್ಟು ಬೇಗ ಮುಗಿದು, ನಾವೆಲ್ಲ ನಮ್ಮ ನಮ್ಮ ಹೊಸ ಕಲಿಕೆಯೊಂದಿಗೆ ಪ್ರಕೃತಿಯನ್ನು ಗೌರವಿಸುತ್ತಾ ಮತ್ತೆ ನಮ್ಮ ಎಂದಿನ ದಿನಚರಿಗೆ ಹಿಂತಿರುಗೋಣ!

Thursday, April 09, 2020

ಯಾಕಿಷ್ಟು ಬೇಸರ ಈ ನಿಸರ್ಗಕ್ಕೆ?!

ಛೇ! ಈ ಮಾನವ ಜಾತಿಯೇ ಹೀಗೆ.  ಎಂದೂ ಸಮಾಧಾನ ಚಿತ್ತದ ಪ್ರಾಣಿಯಂತೂ ಅಲ್ಲವೇ ಅಲ್ಲ.   ಬಿಸಿಲಿದ್ದರೆ ಬಿಸಿಲೆಂಬರು, ಛಳಿಯಾದರೆ ಛಳಿಯೆಂಬರು.  ಏನಿಲ್ಲದಿದ್ದರೂ ಶೀತ, ಉಷ್ಣ, ವಾತ, ಪಿತ್ತವೆಂದಾದರೂ ನರಳುತ್ತಲೇ ಇರುವವರು.  ಅತ್ಯಂತ ದುರ್ಬಲವಾಗಿ ಜನಿಸಿ ತನ್ನ ಕೈ-ಕಾಲು ಬಲಿಯುವವರೆಗೂ ಇನ್ನೊಬ್ಬರ ಆಶ್ರಯವಿಲ್ಲದಿದ್ದರೆ ಸತ್ತೇ ಹೋಗುವ ಪ್ರಾಣಿ, ಮುಂದೆ ಇಡೀ ಜಗತ್ತನ್ನೇ ಆಳುವ ದುಸ್ಸಾಹಸವನ್ನು ಮೆರೆದು, ಪ್ರಬಲವಾಗಿ ಹೋರಾಡಿ-ಹಾರಾಡಿ ಮತ್ತೆ ಮಣ್ಣು ಸೇರುವ ಜೀವಿ!  ಮತ್ಯಾವ ಜೀವಿಯೂ ತೋರದ ಕೃತ್ರಿಮತೆ, ಕೃತಕತೆ, ಕೌತುಕ, ಕೋಲಾಹಲ, ಕಪಟತನವನ್ನೆಲ್ಲ ಮೆರೆದು, ತನ್ನ ಇರುವಿಗೇ ಕಳಂಕ ಬರುವಂತೆ ತಾನು ತುಳಿವ ಮಣ್ಣನ್ನೇ ಗೌರವಿಸದ ಸ್ವಾರ್ಥಿ.

***
ನನ್ನ ಮೇಲ್ಮೈಯಲ್ಲಿರುವ ಸಮುದ್ರವನ್ನೆಲ್ಲ ಶೋಧಿಸಿ ತೆಗೆದರು.  ನನ್ನನ್ನು ಆಶ್ರಯಿಸಿದ ಜಲಚರಗಳಿಗೆ ಅನೇಕ ಸಂಕಷ್ಟಗಳನ್ನು ತಂದರು.  ಅನೇಕ ಗುಡ್ಡ-ಬೆಟ್ಟಗಳನ್ನು ಕಡಿದು ನೆಲಸಮ ಮಾಡಿದರು.  ನನ್ನ ಮೈ ಮೇಲೆ ಕಂಗೊಳಿಸುತ್ತಿದ್ದ ವನರಾಶಿಯನ್ನು ಅಳಿಸಿ ಹಾಕಿದರು.  ಅರಣ್ಯವನ್ನು ನಂಬಿಕೊಂಡಿದ್ದ ಜೀವಿಗಳನ್ನು ಸರ್ವನಾಶ ಮಾಡಿದರು.  ಭೂಮಿ, ಸಮುದ್ರ-ಸಾಗರಗಳಲ್ಲಿ ಮಾಡಿದ್ದು ಸಾಲದು ಎಂಬಂತೆ ನಭದಲ್ಲೂ ಅನೇಕ ರೀತಿಯ ಕಾರ್ಖಾನೆಗಳ ಹೊಗೆಯಿಂದ ಉಸಿರುಗಟ್ಟಿಸುವಂತೆ ಮಾಡಿದರು.  ನೆಲದಾಳದಲ್ಲೂ ಇವರ ಶೋಧ ನಿಲ್ಲದೇ, ಅಲ್ಲಿಂದಲೂ ಇಂಧನವನ್ನು ಬಗೆದು ತೆಗೆದರು. ಇವರುಗಳ ಹೊಟ್ಟೆ ತುಂಬುವುದಕ್ಕೆ ಅನೇಕ ಜೀವಿಗಳನ್ನು ತಿಂದು ತೇಗುವುದೂ ಅಲ್ಲದೇ ನಿರ್ನಾಮವನ್ನೂ ಮಾಡಿದರು.  ಕೆಲವು ಜೀವಿಗಳ ಅವಶೇಷವನ್ನು ಹೇಳಹೆಸರಿಲ್ಲದೆ ಹೊಸಕಿ ಹಾಕಿದರು.  ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಎಲ್ಲ ಕಡೆಯೂ ಇವರ ಸಂತತಿ ಬೆಳೆಯಿತು.  ಎಲ್ಲಿ ಇವರ ಸಂತತಿ ಬೆಳೆಯತೊಡಗಿತೋ, ಅಲ್ಲಿ ಮತ್ಯಾವ ಜೀವಿಗೂ ನೆಲೆಯಿಲ್ಲದಂತಾಯಿತು - ಇವರುಗಳು ಓಡಾಡುವ ದಾರಿಯಲ್ಲಿ ಗರಿಕೆ ಹುಲ್ಲೂ ಬೆಳೆಯದಂತಾಯಿತು!

***
ನನ್ನನ್ನು ನಾನು ಸರಿ ತೂಗಿಸಿಕೊಳ್ಳಬಲ್ಲೆ.  ಇವರ ಆಟ ಹೀಗೇ ಮುಂದುವರೆದರೆ, ಒಂದು ದಿನ ಇವರನ್ನೂ ಇಲ್ಲವಾಗಿಸುವ ಶಕ್ತಿ ನನಗಿದೆ.  ಸಹಬಾಳ್ವೆಯ ಮೂಲ ಮಂತ್ರವನ್ನು ಅರಿತು, ಈ ಹುಲು ಮಾನವರು ಇನ್ನಾದರೂ ಹೊಂದಿಕೊಂಡಾರು.  ಇಲ್ಲವೆಂದರೆ, ಇವರೇ ಮಾಡಿದ ಅಡುಗೆಯನ್ನು ಇವರೇ ಒಂದು ದಿನ ಉಣ್ಣುತ್ತಾರೆ, ಇವರ ಕರ್ಮಗಳಿಗೆ ಸರಿಯಾದ ಬೆಲೆಯನ್ನೇ ತೆತ್ತುತ್ತಾರೆ.

Source: https://www.theworldcounts.com/





Wednesday, April 08, 2020

ಮೀರದಿರಲಿ ಮಾನವನ ಆಸೆಗಳು...



ಕ್ಷುದ್ರ ಜೀವಿಯಿಂದ ಹೆದರಿ ಕುಳಿತ ಮಾನವ
ಹೆದರಿರುವ ಈ ಸ್ಥಿತಿಗೆ ತಾನು ತಾನೆ ದಾನವ

ಹುಟ್ಟಿನಿಂದ ಹಾರಾಡಿ ಹುಟ್ಟುತ್ತಲೇ ಹೋರಾಡಿ
ಜಗವ ಅಳಿಸಲು ದಿನಕೊಂದು ಕುಂಟು ನೆಪಮಾಡಿ

ತನ್ನ ಕಾಲ ಮೇಲೆ ತಾನು ನಿಂತೆನೆಂದು ಅಂದರೂ
ಇತರ ಹೊಟ್ಟೆ ಮೇಲೆ ತಾನು ಕಲ್ಲು ಹಾಕಿ ಕೊಂದರೂ

ಇನ್ನೂ ಬುದ್ಧಿ ಬಾರದು, ದಾಹ ಎಂದೂ ತೀರದು
ಎಷ್ಟೇ ಹೇಳಿ ಕೊಟ್ಟರೂ ಬುದ್ಧಿ ಮುಂದೆ ಓಡದು

ಇರುವುದೊಂದೇ ಭೂಮಿ, ಇರುವುದಷ್ಟೇ ವಸ್ತುಗಳು
ಸಕಲ ಜೀವ ರಾಶಿಗಳಲ್ಲಿ ಹಂಚಬೇಕು ನಾವುಗಳು

ನಾವು ನಾವೇ ಹೆಚ್ಚಾಗಿ ನಮ್ಮವರೇ ದ್ವಿಗುಣಗೊಂಡು
ಮತ್ತೆಲ್ಲೋ ತಳಮಳ ಇನ್ನು ಕೆಲವು ನಾಶ ಕಂಡು

ಕಳೆದಿದೆ ಭೂಮಿಯ ಸಮತೂಕ, ನಿರ್ವಾತದಲ್ಲೂ ನರಕ
ಎಲ್ಲರಲ್ಲಿ ಹಂಚಿಕೊಂಡು ಬಾಳದಿರೆ ಸಿಗದು ಸುಖ

ಕೋಟಿ ಕಾಲ ಬದುಕುವ ಸೂರ್ಯ ಚಂದ್ರರಿಗಿರದ ಹಮ್ಮು
ಭೂಮಿಯಲಿ ಕೆಲವೇ ದಿನ ಬದುಕುವ ನಮಗೇಕೆ ಅಹಮ್ಮು

ಶಾಖಾಹಾರ, ಮಿತಾಹಾರ ಆಗಲಿ ನಮ್ಮ ನಿಯಮ
ಭೂಮಂಡಲ ಎಲ್ಲರಿಗೂ ಸೇರಿದ್ದು ಎಂಬ ಸಂಯಮ

ಮಕ್ಕಳಿಂದ ಕಲಿಸಿ, ಮಕ್ಕಳಿಗೆ ತಿಳಿಸಿ, ಸಸ್ಯ ಶೋಧ ನಡೆಸಿ
ನಮ್ಮ ನಭೋಮಂಡಲಕೆ ಕಡಿಮೆ ಕಾರ್ಬನ್ ಉರಿಸಿ

ಈ ಅಪರಿಮಿತ ಸೃಷ್ಟಿಯ ಗೌರವಿಸಿ ನಾವೆಲ್ಲ ಕೈ ಜೋಡಿಸಿ
ಈ ಪರಿಮಿತ ಬದುಕಿನಲಿ ಕಷ್ಟ-ಸುಖವನು ಸರಿ ತೂಗಿಸಿ

ಜಗದ ನಿಯಮ ಪಾಲಿಸುತ ಮೀರದಿರಲಿ ಮಾನವನ ಆಸೆಗಳು
ತಿರುಗುತ್ತಲೇ ತಿಳಿ ಹೇಳುವ ಸೃಷ್ಟಿ ಸಿಟ್ಟಾದರೆ ಪಾಶಗಳು

ಈ ಜಗವನು ಹೇಗೆ ಬಂದೆವೋ ಹಾಗೆ ಬಿಟ್ಟು ಹೋಗೋಣ
ಈ ಜಗದಲಿ ಎಲ್ಲರಿಗೂ ಬದುಕಲು ಅವಕಾಶ ಕೊಡೋಣ|

Tuesday, April 07, 2020

ಕೊರೋನಾ ವೈರಸ್ - ಚೈನಾದ ಅತಂತ್ರವೋ, ಕುತಂತ್ರವೋ?

ಈ ವೈರಸ್ ಹಾವಳಿ ಜನವರಿಯಲ್ಲಿ ಎಲ್ಲ ಕಡೆಗೆ ಹಬ್ಬುತ್ತಿದ್ದಂತೆ ಅನೇಕ ಸಿದ್ಧಾಂತಗಳು (theories) ಹುಟ್ಟಿದವು, ಕೆಲವು ಮರು ಹುಟ್ಟು ಪಡೆದವು.  ವುಹಾನ್ ನಗರ (ಹುಬೈ ಪ್ರಾಂತ್ಯ) ಸಂಪೂರ್ಣವಾಗಿ ಮುಚ್ಚಿದ ನಂತರ, ಚೈನಾಕ್ಕೆ ಹೋಗುವ ಚೈನಾದಿಂದ ಬರುವ ಎಲ್ಲ ಪ್ರಯಾಣಿಕರು ಕಡಿಮೆಯಾದ ಮೇಲೆ, ಇಡೀ ವಿಶ್ವವೇ ಚೈನಾದ ಬೆಳವಣಿಗೆಗಳನ್ನು ಬಿಟ್ಟ ಕಣ್ಣು ಮಿಟುಕಿಸದೆ ನೋಡತೊಡಗಿತು.  ಒಂದಿಷ್ಟು ಜನ (ರಾಷ್ಟ್ರಗಳು) ತಮ್ಮ ದೇಶಕ್ಕೆ ಈ ವೈರಸ್ಸಿನಿಂದ ತೊಂದರೆಯಾದೀತೆಂದು ಮುಂಜಾಗರೂಕತೆ ಕ್ರಮವನ್ನು ಕೈಗೊಂಡರು.  ಮತ್ತಿನ್ನೊಂದಿಷ್ಟು ಜನ ಆ ನಿಟ್ಟಿನಲ್ಲಿ ತಮ್ಮ ನಿರ್ಧಾರಗಳನ್ನು ಪ್ರಕಟಿಸುವಾಗ ವಿಳಂಬದಿಂದಾಗಿ ಅದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗಿ ಬಂತು.  ಈಗ ಕಳೆದ ಆರೇಳು ವಾರಗಳಿಂದ (ಮಾರ್ಚ್ ೧ ರಿಂದ ಏಪ್ರಿಲ್ ೭ ರವರೆಗೆ) ಕರೋನಾ ವೈರಸ್ (covid-19) ನಮ್ಮ ಜನ ಜೀವನದಲ್ಲಿ ನೆಲೆ ನಿಂತಿದೆ.  ಇನ್ನೂ ಎರಡು ತಲೆ ಮಾರುಗಳಿಗಾಗುವಷ್ಟು ನಮಗೆಲ್ಲ ಪಾಠವನ್ನು ಕಲಿಸಿದೆ.

ಈ ಶತಮಾನದ ದೊಡ್ಡ ದುರಂತ, ಮಹಾವ್ಯಾಧಿ, ಸೋಂಕು, ಸಾಂಕ್ರಾಮಿಕ ರೋಗ, ಶಾಪ - ಇನ್ನೂ ಮೊದಲಾದ ಹೆಸರಿನಿಂದ ಕರೆಸಿಕೊಂಡು ತನ್ನ ಪರಿಣಾಮವನ್ನು ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದುಕೊಂಡು, ಇನ್ನು ಇನ್ನೂರೈವತ್ತು ವರ್ಷವಾದರೂ, 2020ರ ಈ ಅನುಭವವನ್ನು ಜನರು ತಮ್ಮ ಹಾಡು-ಹಸೆಗಳಲ್ಲಿ ಮೆಲುಕುಹಾಕುವಂತೆ ಮಾಡುವ, ಚೈನಾದಿಂದ ಆರಂಭಿಸಿದ ಈ ಪ್ರಭಾವಿ ವೈರಸ್ಸಿನ ಅಭಿಯಾನವನ್ನು ಮಾನವ ನಿರ್ಮಿತ (ಕುತಂತ್ರ) ಎನ್ನೋಣವೋ ಅಥವಾ ಮಾನವನಿಗೆ ಮೀರಿದ (ಅತಂತ್ರ)ವೆಂದು ಕರೆಯೋಣವೋ?  ಈಗ ನಮಗೆ ಲಭ್ಯವಿರುವ ವಿಚಾರಗಳ ವಿನಿಮಯವೇ ಈ ಬರಹ.  ಕುತಂತ್ರವೋ-ಅತಂತ್ರವೋ ಎನ್ನುವ ತೀರ್ಮಾನ ನಿಮ್ಮದು!

***
ಅತಂತ್ರ: ಚೈನಾದವರು ಬಹುಪ್ರಾಣಿ ಭಕ್ಷಕರು - ಒಂದು ರೀತಿಯಲ್ಲಿ ಮಾಂಸ ಪ್ರಿಯರು, ಅದರಲ್ಲೂ ಅನೇಕ ಕಾಡು ಪ್ರಾಣಿಗಳನ್ನು ಫಾರ್ಮ್‌ಗಳಲ್ಲಿ ವ್ಯವಸ್ಥಿತವಾಗಿ ಅವುಗಳನ್ನು ಬೆಳೆಸಿ ತಮ್ಮ exotic cuisine ನಲ್ಲಿ ಬಳಸುವವರು.  ಚಿಕ್ಕ ಇರುವೆಗಳಿಂದ ಹಿಡಿದು, ಹಾರುವ ಬಾವುಲಿಯವರೆಗೆ, ಮೀನುಗಳಿಂದ ಹಿಡಿದು ಸರೀಸೃಪಗಳವರೆಗೆ (ಇವರು ಮನುಷ್ಯರನ್ನು ಮಾತ್ರ ತಿಂದ ನಿದರ್ಶನಗಳು ಸಿಗವು), ಅಂದರೆ ಉಳಿದೆಲ್ಲ ಜೀವಿಗಳು ಮಿಲಿಯನ್ನುಗಟ್ಟಲೆ ಚೈನಾ ದೇಶದ ಜನರ ಉದರವನ್ನು ಪೋಷಿಸಿರುವುದಕ್ಕೆ ಬಹಳ ನಿದರ್ಶನಗಳು ಸಿಕ್ಕಾವು.

ನಾವು ಅಮೇರಿಕದಲ್ಲಿ ಇಂಡಿಯನ್ ಸ್ಟೋರು, ರೆಸ್ಟೋರಂಟುಗಳಿಗೆ ಹೋದಾಗ ಒಂದು ರೀತಿಯ (ಕಮಟು) ವಾಸನೆ ನಮಗೆ ಎದುರಾಗುತ್ತದೆ.  ನಾವು ಭಾರತೀಯರಿಗೆ ಅದು ನಮಗೆ ಗೊತ್ತಾಗದಷ್ಟು ಹೊಂದಾಣಿಕೆಯಾಗಿರುತ್ತದೆ. (ನಮ್ಮ ಪಕೋಡಾ ಅಥವಾ ದೋಸೆ ವಾಸನೆ ನಮಗೆ ಪ್ರಿಯವಾಗಿರಬಹುದು, ಆದರೆ, ಅದು ಎಲ್ಲರಿಗೂ ಇಷ್ಟವಾಗಬೇಕು ಎಂದೇನೂ ಇಲ್ಲ). ಅದೇ ರೀತಿ ನಾವು ಕೊರಿಯನ್, ವಿಯಟ್‍ನಾಮೀಸ್, ಚೈನೀಸ್ ಅಂಗಡಿಗಳಿಗೆ ಹೋದಾಗ, ಇನ್ನೊಮ್ಮೆ ಇಲ್ಲಿ ಬರಬಾರದು ಎನ್ನುವಷ್ಟರ ಮಟ್ಟಿಗೆ ಅಲ್ಲಿ ಗಬ್ಬುನಾತ ಹೊಡೆಯುತ್ತಿರುತ್ತದೆ.  ಇವರುಗಳು ಜೀವವೈವಿಧ್ಯವನ್ನು ನೋಡುವ ರೀತಿ ನಮಗಿಂತಲೂ ಭಿನ್ನ.  ಕೊಳೆಯಾದ ಗಾಜಿನ ಅಕ್ವೇರಿಯಂ‌ನಲ್ಲಿ ತುಂಬಿಕೊಂಡು ದಯನೀಯ ಸ್ಥಿತಿಯಲ್ಲಿರುವ ಮೀನುಗಳು, ಏಡಿಗಳು, ಮೊದಲಾದ ಪ್ರಾಣಿಗಳನ್ನು ಅಲ್ಲಿ ನೋಡಿ ಖೇದವೆನಿಸುತ್ತದೆ.  ಅದು ಅವರಿಗೆ ಸಹನೀಯವಾದದ್ದು, ಅವರ ಧರ್ಮದಲ್ಲಿ (ಜೀವನಕ್ರಮ) ಅದು ಯಾರಿಗೂ ದೊಡ್ಡದೆನಿಸುವುದಿಲ್ಲ. ಇಂತಹ ಸಂದರ್ಭದಲ್ಲಿ, ಚೈನಾದ ವುಹಾನ್‌ನ ಒಂದು ಮಾರುಕಟ್ಟೆಯಲ್ಲಿ ಒಂದರ ಮೇಲೂಂದು ಹೇರಿಸಿಟ್ಟ ಕೇಜುಗಳಲ್ಲಿ ಒಂದು ಪ್ರಾಣಿಯ ಎಂಜಲು-ಗಲೀಜು ಮತ್ತೊಂದು ಪ್ರಾಣಿಯ ಜೊತೆ ಸಂಘರ್ಷ ಉಂಟಾದಾಗ ಹುಟ್ಟಿದ್ದು ಈ ವಿಭಿನ್ನ ವೈರಸ್ ಎಂದು ಕೆಲವು ಕಡೆ ಹೇಳಲಾಗಿದೆ.  ಅದೇ ರೀತಿ ಬಾವುಲಿಗಳನ್ನು (bats) ಕತ್ತರಿಸುವಾಗ ಅದರ ರಕ್ತದಲ್ಲಿ ಇದ್ದ ವೈರಸ್ಸು ಒಬ್ಬರಿಂದ ಮತ್ತೊಬ್ಬರಿಗೆ ತಗುಲು ಬೆಳೆಯಿತು ಎಂದೂ ಹೇಳಲಾಗುತ್ತದೆ.

ಒಮ್ಮೆ ಹೀಗೆ ಜನರಿಂದ ಜನರಿಗೆ ಬೆಳೆದ ವೈರಸ್ಸು ಡಿಸೆಂಬರ್‌ನಲ್ಲಿ ಸುದ್ದಿ ಮಾಡಿದರೂ ಚೈನಾ ಅದನ್ನು ತಕ್ಷಣ ದೊಡ್ಡದು ಮಾಡಲಿಲ್ಲ, ಅದು ಬೆಳೆದು ಪ್ರಕೋಪಕ್ಕೆ ತಿರುಗಿದ ನಂತರ ಎಲ್ಲ ಕಡೆಗೆ ಸುದ್ದಿಯಾಯಿತು.  ವುಹಾನ್ ಅನ್ನು ಸಂಪೂರ್ಣವಾಗಿ ಬಂದ್ ಮಾಡಲಾಯಿತು.  ಜನರನ್ನು ಮನೆಗಳಲ್ಲಿ ಅಮಾನವೀಯ ರೀತಿಯಲ್ಲಿ ಕೂಡಿ ಹಾಕಲಾಯಿತು.  ಇದು ಅವರ ಅತಂತ್ರ ಸ್ಥಿತಿಗೆ ಹಿಡಿದ ಕನ್ನಡಿ.  ಕೊನೆಗೆ ಕಡಿಮೆ ಸಾವುಗಳನ್ನು ದಾಖಲಿಸಿ (ಸೋಂಕು ತಗುಲಿದವರ ಮತ್ತು ಸತ್ತವರ percentage ಪ್ರಕಾರ ನೋಡಿದರೆ), ಈಗ ಏನೂ ಆಗೇ ಇಲ್ಲವೆನ್ನುವಂತೆ ಮೊದಲೇ expression ಇರದ ಮುಖಗಳು ಈಗಂತೂ ಮುಖ ಗಂಟು ಹಾಕಿಕೊಂಡ ಹಾಗೆ ಎಲ್ಲ ಕಡೆ ಕಂಡು ಬರುತ್ತದೆ.

ಕಳೆದ ಹತ್ತು ವರ್ಷಗಳಲ್ಲಿ ಸಾರ್ಸ್, H1-N1, ಹಕ್ಕಿ ಜ್ವರ ಮೊದಲಾದವುಗಳಿಂದ ಪೂರ್ವೋತ್ತರ ದೇಶಗಳು ಬಳಲಿದ್ದವು, ಅದರಿಂದಾಗಿ ಈ ಕೋವಿಡ್-19 ಅನ್ನು ಎದುರಿಸಲು ಅವೆಲ್ಲ ದೇಶಗಳು ಪರೋಕ್ಷವಾಗಿ ತಯಾರಾಗಿದ್ದವು.  ಆದರೆ, ಕೆಲವು ಯೂರೋಪಿಯನ್ ದೇಶಗಳು ಮತ್ತು ಅಮೇರಿಕದಲ್ಲಿ ಈ ರೀತಿ ಹಿಂದೆಂದೂ ಆಗಿರದ ಕಾರಣದಿಂದ, ಮೊಟ್ಟ ಮೊದಲನೇ ಬಾರಿಗೆ ಇಲ್ಲಿಯ ಜನ (ಈ ಪ್ರಮಾಣದಲ್ಲಿ) ಸಂಕಷ್ಟವನ್ನು ಅನುಭವಿಸಬೇಕಾಗಿ ಬಂತು ಎನ್ನುವುದು ಅನೇಕರ ಅಂಬೋಣ.

***
ಕುತಂತ್ರ: ಚೈನಾದವರು ಮಹಾ ಬುದ್ದಿವಂತರು.  ವುಹಾನ್ ಹತ್ತಿರದ ತಮ್ಮ ಮಿಲಿಟರಿ ಲ್ಯಾಬೋರೇಟರಿ ಒಂದರಲ್ಲಿ ಈ ಹೊಸ ವೈರಸ್ಸನ್ನು ಸೃಷ್ಟಿಸಿ ಜಗತ್ತಿಗೇ ಬಿಡುಗಡೆ ಮಾಡಿ ಜಗತ್ತನ್ನು ಆಳುವ ಯೋಚನೆ ಹೊಂದಿದ್ದರು.  ಅಥವಾ ಲ್ಯಾಬ್‍ನಲ್ಲಿದ್ದ ವೈರಸ್ಸು ಯಾರದ್ದೋ ತಪ್ಪಿನಿಂದ ಹೊರಗೆ ಬಂದಿತೆಂದು ಅನೇಕ ಕಡೆ ಓದಲು ಸಿಗುತ್ತದೆ.  ಹಾಗಾಗಿ, ಹುಬೈ ಪ್ರಾಂತ್ಯದಲ್ಲಿ ಮೊದಲು ಇದರ ಪರಿಚಯವಾಯಿತು.  ಆದರೆ, ಇದರ ಪರಿಣಾಮ ಉಳಿದ ರಾಜ್ಯಗಳ ಮೇಲೆ ಅಷ್ಟೊಂದು ಆಗಲಿಲ್ಲ.

ನೀವೇ ಯೋಚಿಸಿ: ವುಹಾನ್ ನಿಂದ ಇಂಟರ್‌ನ್ಯಾಷನಲ್ ಪ್ರಯಾಣಿಕರ ಮುಖೇನ ಅನೇಕ ದೇಶಗಳಿಗೆ ಈ ಕೊರೋನಾ ವೈರಸ್ ಹರಡಿರುವಾಗ, ಆಂತರಿಕ ಚೈನಾದೊಳಗೇ ಇದು ಬೇರೆ ಕಡೆ ಏಕೆ ಹಬ್ಬಲಿಲ್ಲ?  ಚೈನಾದ ಅಂಕಿ-ಅಂಶಗಳನ್ನು ನಂಬಬೇಕೋ ಬಿಡಬೇಕೋ ಗೊತ್ತಿಲ್ಲ, ಆದರೂ ಅವರು ಹೇಳುವ ಹಾಗೆ ಬರೀ ಹುಬೈ ಪ್ರಾಂತ್ಯದಲ್ಲಿ ಮಾತ್ರ ಸಾವುಗಳಾಗಿವೆಯೇ? ಒಂದೂವರೆ ಬಿಲಿಯನ್‌ನಷ್ಟು ಜನರಿರುವ ಚೈನಾದಲ್ಲಿ (ಈ ಲೇಖನ ಬರೆಯುವ ಹೊತ್ತಿಗೆ) ಕೇವಲ 81,802 ಜನರಿಗೆ ಸೋಂಕು ತಗಲಿದ್ದು, ಅವರಲ್ಲಿ ಕೇವಲ 3,333 ಜನರು ಮಾತ್ರ ಸಾವಿಗೆ ಈಡಾಗಿದ್ದಾರೆ ಎಂದರೆ ಹೇಗೆ ನಂಬುವುದು.  ಸೋಂಕು ತಗುಲಿದವರ ಸಂಖ್ಯೆಯಲ್ಲಿ (330 ಮಿಲಿಯನ್ ಜನರಿರುವ) ಅಮೇರಿಕ 396,981 ಒಟ್ಟು ಕೇಸುಗಳನ್ನು ದಾಖಲಿಸಿ ಅವರಲ್ಲಿ 12,758 ಜನರು ಮರಣ ಹೊಂದಿರುವುದನ್ನು ಪ್ರಕಟಿಸಿರುವುದನ್ನು ನೀವೇ ನೋಡಬಹುದು.  ಅಲ್ಲದೇ ಒಂದೂವರೆ ಬಿಲಿಯನ್ ಜನರಿರುವ ಚೈನಾ ಇವತ್ತಿಗೆ ಒಟ್ಟು ಕೇಸುಗಳಲ್ಲಿ ಉಳಿದ ರಾಷ್ಟ್ರಗಳಿಗೆ ಹೋಲಿಸಿದಾಗ ಐದನೇ ಸ್ಥಾನಕ್ಕೆ ಇಳಿದಿರುವುದನ್ನೂ ನೋಡಬಹುದು.


Image 1: COVID-19 World view (April 07, 2020 at 9:23 PM ET)



Image 2: COVID-19 China view (April 07, 2020 at 9:23 PM ET)

ಇನ್ನು ಎರಡನೆಯ ಚಿತ್ರದಲ್ಲಿ, ಹುಬೈ ಪ್ರಾಂತ್ಯದ ಒಟ್ಟು ಕೇಸುಗಳು 67,803.  ಉಳಿದ 30 ರಾಜ್ಯಗಳಲ್ಲಿ ಉಳಿದ ಹದಿಮೂರು ಸಾವಿರ ಕೇಸುಗಳು ಚದುರಿರುವುದನ್ನು ಕೂಡ ಕಾಣಬಹುದು.
ಈ ಅಂಕಿ-ಅಂಶಗಳ ಪ್ರಕಾರ, ಚೈನಾದವರು ಬರೀ ಇಂಟರ್‌ನ್ಯಾಷನಲ್ ಪ್ರಯಾಣಿಕರೆಂದೋ ಅಥವಾ ಅವರ ಪ್ಯಾಕೇಜು/ಪಾರ್ಸೆಲ್ಲುಗಳ ಮೂಲಕ ಪ್ರಪಂಚದಾದ್ಯಂತ ಕೋವಿಡ್ ಹರಡಿತೆಂದು ಊಹಿಸಬಹುದು.  ಇಲ್ಲವೆಂದರೆ, ಅವರ ನಂಬರುಗಳು ಖಂಡಿತ ನಂಬಲರ್ಹವಲ್ಲದವು.  ಉದಾಹರಣೆಗೆ, ಹುಬೈ ಪ್ರಾಂತ್ಯದಿಂದ ಚೈನಾದ ಉಳಿದ ದೊಡ್ಡ ನಗರಗಳಿಗೆ ಜನರು ಹೋಗೇ ಇಲ್ಲವೇ? ನಮ್ಮ ನ್ಯೂ ಯಾರ್ಕ್‌ ನಗರದಲ್ಲಿ ಇಷ್ಟೊಂದು ಜನರು ಬಳಲುತ್ತಿರುವಾಗ ಚೈನಾದ ನಗರಗಳು ನಿರಾತಂಕವಾಗಿರಲು ಕಾರಣವೇನು?

***
ಇದು ಚೈನಾದವರ ಅತಂತ್ರವೋ, ಕುತಂತ್ರವೋ... ಅದನ್ನು ನಿಮ್ಮ ತೀರ್ಮಾನ, ಅಭಿಪ್ರಾಯಗಳಿಗೇ ಬಿಡೋಣ.  ಆದರೆ, ಇಷ್ಟಂತೂ ಖಂಡಿತ: ಇದರಿಂದಾಗಿ/ಇವರಿಂದಾಗಿ ವಿಶ್ವದಾದ್ಯಂತ ಅನೇಕ ವ್ಯಾಪಾರ ವಹಿವಾಟುಗಳು ನೆಲಕಚ್ಚಿದವು.  ಅನೇಕರ ರಿಟೈರ್‌ಮೆಂಟ್ ಹಣ ಕೆಲವೇ ವಾರಗಳಲ್ಲಿ ಮಾಯವಾಯಿತು.  ಎಷ್ಟೋ ಜನರು ಹಸಿವಿನಿಂದ ಬಳಲುವಂತಾಯ್ತು.  ನಾವು ಇನ್ನಾರು ವಾರಗಳಲ್ಲಿ ಹೊರಗೆ ಹೊರಟರೂ ನಮ್ಮ ಅರ್ಥ ವ್ಯವಸ್ಥೆ ಇದರಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ಕೆಲವೇ ವರ್ಷಗಳೇ ಬೇಕಾಗುತ್ತದೆ.

ಇದು ಮಾನವನ ದೌರ್ಜ್ಯನ್ಯಕ್ಕೆ ನಿಸರ್ಗ ಕೊಟ್ಟ ಪೆಟ್ಟು ಎಂದು ಒಂದಿಷ್ಟು ಜನ ನಂಬಿಕೊಂಡಿದ್ದಾರೆ, ಇನ್ನು ಕೆಲವರು ಇದು ಮಾನವ ನಿರ್ಮಿತ ಹೊಗೆ ಬರದ ನ್ಯೂಕ್ಲಿಯರ್ ಬಾಂಬು ಎಂದು ಚೈನಾದವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ!

Monday, April 06, 2020

ಮೋಡ ಕರಗುವ ಸಮಯ

ಸೋಶಿಯಲ್ ಅಥವಾ ಫಿಸಿಕಲ್ ಡಿಸ್ಟನ್ಸಿಂಗ್?

ಈ ಕರೋನಾ ವೈರಸ್ ಹಾವಳಿಯಿಂದಾಗಿ ಇತ್ತೀಚೆಗೆ ಇನ್ನೊಂದು phrase ನಮ್ಮನ್ನೆಲ್ಲ ಆಳುತ್ತಿದೆ: ಸೋಶಿಯಲ್ ಡಿಸ್ಟನ್ಸಿಂಗ್ (social distancing).  ನಾವೆಲ್ಲರೂ ಈ ಕೊರೋನಾ ವೈರಸ್ ಹರಡುವುದನ್ನು ತಡೆಯಲು ಒಬ್ಬರಿಂದ ಮತ್ತೊಬ್ಬರ ಕಾಂಟ್ಯಾಕ್ಟ್ ಅನ್ನು ಕಡಿಮೆ ಮಾಡುವುದು, ಗ್ರೂಪ್/ಗ್ಯಾದರಿಂಗ್‌ಗಳಿಂದ ಸಂಪೂರ್ಣವಾಗಿ ದೂರವಿರುವುದು ಎಂದರ್ಥ.
ಒಂದು ಕುಟುಂಬದ ಸದಸ್ಯರಲ್ಲಿ ಯಾರಿಗೂ ಖಾಯಿಲೆ ಅಥವಾ ರೋಗದ ಲಕ್ಷಣಗಳು ಇಲ್ಲದಿದ್ದರೆ, ಅವರೆಲ್ಲರೂ ಒಟ್ಟಿಗೆ ಇರಬಹುದು.  ಆದರೆ, ಅದೇ ಕುಟುಂಬದಲ್ಲಿ ಯಾರೊಬ್ಬರಿಗಾದರೂ ಸೋಂಕು ತಗಲಿದರೆ ಅವರನ್ನು ಕೂಡ ಪ್ರತ್ಯೇಕಿಸಿ ಇಡಬೇಕಾಗುತ್ತದೆ.

ಇದು ನಮ್ಮೆಲ್ಲರ ಸೋಶಿಯಲ್ ಡಿಸ್ಟನ್ಸಿಂಗ್ ಅಥವಾ ಇದು ಭೌತಿಕವಾದ ಡಿಸ್ಟನ್ಸಿಂಗ್? ಇದಕ್ಕೇಕೆ ಫಿಸಿಕಲ್ ಡಿಸ್ಟನ್ಸಿಂಗ್ ಅನ್ನೋದಿಲ್ಲ ಎಂದು ಕೆಲವರು ಯೋಚಿಸಬಹುದು.  Social distancing, ಎಂದು ಹೇಳುವಾಗ ಅಲ್ಲಿ ಜನರು ಒಬ್ಬರಿಂದ ಮತ್ತೊಬ್ಬರಿಗೆ ಇಂತಿಷ್ಟು ದೂರದಲ್ಲಿ ಇರಿ ಎಂದು ಹೇಳುತ್ತಿದ್ದಾರೆ, ಗುಂಪುಗಳಲ್ಲಿ ಸೇರಬೇಡಿ ಎಂದು ಹೇಳುತ್ತಿದ್ದಾರ‍ೆ - ಇಲ್ಲಿ ಅವರು Social ಎಂದು ಬಳಸುತ್ತಿರುವುದು ’ಸಾಮಾಜಿಕ’ ಎನ್ನುವ ಪದದ ಸಮನಾರ್ಥಕ.  ಆದರೆ, ಒಬ್ಬರಿಂದ ಮತ್ತೊಬ್ಬರು ದೂರವಿದ್ದ ಮೇಲೆ, ಅಲ್ಲಿ ಭೌತಿಕವಾಗಿ (physically) ಯಾವುದೇ ಕಾಂಟ್ಯಾಕ್ಟ್ ಬರುವುದೇ ಇಲ್ಲವಾದ್ದರಿಂದ, ಈ ಕೊರೋನಾ ವೈರಸ್ ಸಂಬಂಧವಾಗಿ ಎಲ್ಲರೂ Social Distancing ಎಂತಲೇ ಹೇಳುತ್ತಿರುವುದು.

ಜೊತೆಗೆ, ಇಲ್ಲಿ ಸೋಶಿಯಲ್ ಡಿಸ್ಟನ್ಸಿಂಗ್ ಅನ್ನು ಒಂದು ಸಮುದಾಯದ ಪರವಾಗಿ ಹೇಳುವಂತೆಯೂ ಪರಿಗಣಿಸಬಹುದು.  ಜನರು ಗುಂಪುಗಳಲ್ಲಿ ಭಾಗವಹಿಸುತ್ತಿರುವಾಗ ಒಬ್ಬರನ್ನು ಪರಸ್ಪರ ಮುಟ್ಟದೇ ಇದ್ದರೂ ಸಹ, ಅವರೆಲ್ಲರೂ ಒಂದು ಕೋಣೆಯಲ್ಲಿ ಸೇರಿಕೊಂಡರೆಂದರೆ, ಅಲ್ಲಿ ಕೋವಿಡ್‌ನಂತಹ ಸಾಂಕ್ರಾಮಿಕ ರೋಗಗಳು ಹರಡಲು ಸಾಧ್ಯವಿದೆ.  ಈ ಕಾರಣದಿಂದಲೇ, ಹತ್ತಕ್ಕಿಂತ ಹೆಚ್ಚು ಜನರು ಒಟ್ಟಿಗೆ ಸೇರಬಾರದು ಎಂದು ಹೇಳುತ್ತಿರುವುದು.

***
ರಾಜ್ಯಗಳ ಬಾರ್ಡರುಗಳು

ಉತ್ತರ ಅಮೇರಿಕದ ಹೆಗ್ಗಳಿಕೆಯಾಗಿ ನಾವೆಲ್ಲ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ "ಫ್ರೀ" ಆಗಿ ಓಡಾಡಿಕೊಂಡಿದ್ದೆವು.  ಈ ಕೋವಿಡ್ ದಯೆಯಿಂದ,  ಜನರ ಸ್ವಾತಂರ್ತ್ಯಕ್ಕೆ ಮೊಟ್ಟ ಮೊದಲ ಸಲ ಉತ್ತರ ಅಮೇರಿಕದಲ್ಲಿ ಸಂಕಷ್ಟ ಬಂದಿದೆ.  ಈಗ ಅಮೇರಿಕದ ಸಣ್ಣ ರಾಜ್ಯಗಳಲ್ಲೊಂದಾದ ರೋಡ್ ಐಲ್ಯಾಂಡ್, ತನ್ನ ರಾಜ್ಯಕ್ಕೆ ಬರುವ ಹೊರ ರಾಜ್ಯದ ಪ್ರಯಾಣಿಕರನ್ನು (ಅದರಲ್ಲೂ ನ್ಯೂ ಯಾರ್ಕ್‌ನವರನ್ನು) ೧೪ ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕೆಂದು ಸೂಚಿಸುತ್ತಿದೆ.  ಇದೇ ಮಾದರಿ ಉಳಿದ ರಾಜ್ಯಗಳಲ್ಲೂ ನಡೆಯುತ್ತಿದೆ, ಎಂದು ಕೇಳಿಬರುತ್ತಿದೆ.

ನಮ್ಮ ಕರ್ನಾಟಕದಿಂದ ತಮಿಳು ನಾಡು, ಕೇರಳ, ಮಹಾರಾಷ್ಟ್ರ‍, ಆಂಧ್ರಪದೇಶ ರಾಜ್ಯಗಳಿಗೆ ಹೋಗಿ ಬಂದವರಿಗೆ ಗೊತ್ತಾಗುತ್ತದೆ.  ಒಂದು ಗಡಿ ದಾಟಿ ಬಂದ ಮೇಲೆ ಅದೆಷ್ಟು ಬದಲಾವಣೆಗಳು ಕಾಣಸಿಗುತ್ತವೆ ಎಂದು.  ಆದರೆ, ಇಂದು ಮೊಟ್ಟ ಮೊದಲ ಬಾರಿ ಅಮೇರಿಕದಲ್ಲಿ ಗಡಿಯನ್ನು ಮುಚ್ಚುವುದರ ಮೂಲಕ ಅಲ್ಲದೇ ರಾಜ್ಯಗಳ ಗಡಿಗಳಲ್ಲಿ ಪೋಲೀಸರು ಕಾಯುತ್ತಿರುವುದರ ಮೂಲಕ free ಯಾಗಿದ್ದ ದೇಶ ಮೊಟ್ಟ ಮೊದಲ ಬಾರಿಗೆ ಕೋವಿಡ್ ವೈರಸ್ಸಿನ ಸಂಕೋಲೆಗಳಲ್ಲಿ ಸುತ್ತಿಕೊಂಡು ಬಳಲುತ್ತಿದೆ ಎನ್ನುವಂತಾಗಿದೆ.

***
ಮೋಡ ಕರಗುವ ಸಮಯ

ಇಂದು ಮಧ್ಯಾಹ್ನ ಒಳ್ಳೆಯ ಬಿಸಿಲಿನ ಸಮಯ ನಮ್ಮ ಮನೆಯ ಹೊರಗಡೆಯ ಥರ್ಮಾಮೀಟರಿನಲ್ಲಿ 66 ಡಿಗ್ರಿ (ಸುಮಾರು 17 ಡಿಗ್ರಿ ಸೆಲ್ಸಿಯಸ್) ತೋರಿಸುತ್ತಿತ್ತು.  ನಮ್ಮ ಮನೆಯ ಹಿಂದಿನ ಡೆಕ್‌ನಲ್ಲಿ ಒಳ್ಳೆಯ ಗಾಳಿ ಬೀಸುತ್ತಿತ್ತು.  ಮೇಲೆ ಶುಭ್ರವಾದ ಆಕಾಶ.  ಯಾರು ಹೊರಗೆ ಬರಲಿ ಬಿಡಲಿ, ಸೂರ್ಯದೇವ ತನ್ನ ದೈನಂದಿನ ಕಾರ‍್ಯಾಚರಣೆಯನ್ನು ಮುಂದುವರೆಸಿ ಮೇಲೇರಿ ಕೆಳಗಿಳಿಯುತ್ತಿದ್ದ.  ಪಶ್ಚಿಮದ ಕಡೆ ಒಂದಿಷ್ಟು ಬಿಳಿಯ ಮೋಡಗಳು ಹಿಂಡು ಹಿಂಡಾಗಿ ತುಂಬಿಕೊಂಡಿದ್ದವು ಎನ್ನುವುದನ್ನು ಬಿಟ್ಟರೆ, ಉಳಿದ ಕಡೆಯೆಲ್ಲ ಶುಭ್ರವಾದ ನೀಲಾಕಾಶವಿತ್ತು.
ಇಷ್ಟು ದಿನ ಹೊರಗೆ ಬರದೆ ಇದ್ದುದರಿಂದಲೋ ಏನೋ, ನನಗೆ ಈ ತಿಳಿ ಬಿಸಿಲು ಬಹಳ ಅಪ್ಯಾಯಮಾನವಾಗಿ ಗೋಚರಿಸಿತು.  ಜೊತೆಗೆ ಹದವಾಗಿ ಕಾದ ಡೆಕ್ಕಿನ ಮರದ ಹಲಗೆಗಳು ಬರಿಗಾಲಿಗೂ ಮುದವನ್ನು ನೀಡುತ್ತಿದ್ದವು.  ಆ ಸಮಯಕ್ಕೆ ಖಾಲಿ ಇದ್ದ ಡೆಕ್ ಮೇಲೆ ಮಲಗಿದರೆ ಹೇಗೆ ಎನ್ನಿಸಿದ್ದೇ ತಡ, ತಡ ಮಾಡದೆ ಅಲ್ಲೇ ಒಂದು ಕಡೆ ಮೇಲ್ಮುಖವಾಗಿ ಮಲಗಿಕೊಂಡು, ಸೂರ್ಯ ತಮ್ಮನ್ನೇನು ತಿಂದು ಬಿಡುತ್ತಾನೇನೋ ಎಂದು ಸ್ವಲ್ಪ ಹೆದರಿದಂತೆ ನಿಧಾನವಾಗಿ ಚದುರುತ್ತಿದ್ದ ಮೋಡಗಳ ಕಡೆಗೆ ಗಮನಕೊಟ್ಟೆ.

ಒಂದಿಷ್ಟು ಮೋಡಗಳು ಒಟ್ಟಿಗಿದ್ದವು, ಸ್ವಲ್ಪ ಹೊತ್ತು ಬಿಟ್ಟು ನೋಡುವುದರಲ್ಲಿ, ಅವುಗಳ ಯಾವುದೋ ಒಂದು ತುಣುಕು ಗುಂಪಿನಿಂದ ಮತ್ತೊಂದು ಕಡೆ ಚಲಿಸಿತು. ಸ್ವಲ್ಪ ಹೊತ್ತಿನಲ್ಲಿ ಅದು ಇದ್ದಲ್ಲಿಯೇ ಕರಗಿ ಮಾಯವಾಯಿತು!  ಇನ್ನು ಸ್ವಲ್ಪ ಹೊತ್ತಿನಲ್ಲಿ ಮತ್ತೆ ಹಾಗೆಯೇ, ಮೋಡದ ತುಣುಕೊಂದು ಗುಂಪಿನಿಂದ ಬೇರ್ಪಡುತ್ತದೆ, ಸ್ವಲ್ಪ ಹೊತ್ತಿನಲ್ಲಿ ಅದು ನಿಧಾನವಾಗಿ ಕರಗಿ ಗಾಳಿಯೊಳಗೆ ಲೀನವಾಗುತ್ತದೆ - ಒಂದು ರೀತಿಯಲ್ಲಿ ಕಾಟನ್‌ಕ್ಯಾಂಡಿ ತಿನ್ನುವ ಹುಡುಗನ ಮಿಠಾಯಿ ಕಡಿಮೆಯಾಗುವಂತೆ.  ಅವೆಲ್ಲ ಮೋಡವೇ ಸರಿ, ಆದರೆ ಆ ಮೋಡದ ತುಣುಕುಗಳು ನನ್ನ ಕಣ್ಣೆದುರೇ ಕರಗಿ ಗಾಳಿಯಲ್ಲಿ ಲೀನವಾಗುವ ಪರಿಯನ್ನು ಇಷ್ಟು ಕ್ಲಿಯರ್ ಆಗಿ ನಾನು ನೋಡಿದ್ದಿಲ್ಲ... ಐದು ನಿಮಿಷದೊಳಗೆ, ಬೀಸುವ ಗಾಳಿ ಜೋರಾಗ ತೊಡಗಿತೆಂದು ಮತ್ತೆ ಮನೆ ಒಳಗೆ ಬಂದೆ, ಆದರೆ ಮೋಡದ ಗುಂಪು ನಿಧಾನವಾಗಿ ಚದುರುತ್ತಲೇ ಇತ್ತು.  ಅದೇ ಸಮಯದಲ್ಲಿ, ಎಲ್ಲಿಯೋ ಹುಟ್ಟಿ ಎಲ್ಲೋ ಸೇರುವ, ಮೋಡಕ್ಕಾಗಲೀ, ಮುಗಿಲಿಗಾಗಲೀ ಯಾವ ಬಣ್ಣವೂ ಇಲ್ಲ, ಅವೆಲ್ಲವೂ ತನ್ನ ಸುತ್ತಲಿನ ಸೂರ್ಯನ ಕೃಪೆಯಿಂದ ಬಣ್ಣವನ್ನು ಪಡೆದವುಗಳು ಎಂಬ ಸೂಕ್ಷ್ಮ ಹೊಳೆದು, ಅದು ಈ ಹೊತ್ತಿನ ತತ್ವವಾಯಿತು!

Sunday, April 05, 2020

ಎಲ್ಲರಿಗೂ ಬದುಕುವ ಹಕ್ಕಿದೆ

ಪ್ರಪಂಚದ ಅರ್ಧ ಭಾಗದ ಜನ ಇನ್ನರ್ಧ ಭಾಗದ ನಾಶಕ್ಕೆ ಕಾರಣರಾಗಬಲ್ಲರು ಎಂದೆನಿಸಿದ್ದು, ಪ್ರತೀ ದೇಶದ ಜನಸಂಖ್ಯೆಯ ವಿಶ್ಲೇಷಣೆಗೆ ತೊಡಗಿದಾಗ.  ಯು.ಎಸ್.ಎ.ನಲ್ಲಿ ಈಗ ನ್ಯಾಷನಲ್ ಸೆನ್ಸಸ್ ಸಮಯ.  ಮನೆ-ಮನೆಗೆ ಪತ್ರವನ್ನು ಕಳುಹಿಸಿ, ನಮಗೆಲ್ಲ ಒಂದು ಸೆನ್ಸಸ್-ಐಡಿ ಒಂದನ್ನು ಕೊಟ್ಟು ಗವರ್‌ಮೆಂಟ್‌ನವರೇ ನಮ್ಮೆಲ್ಲ ಅಂಕಿ-ಅಂಶಗಳನ್ನು ಹತ್ತು ವರ್ಷಕ್ಕೊಮ್ಮೆ ಸಂಗ್ರಹಿಸುವುದು ಪದ್ಧತಿ.  ಈ ರೀತಿ ಮಾಡೋದರಿಂದ ಸ್ಥಳೀಯ ಮಟ್ಟದಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಬಹುದು, ಎಲ್ಲರಿಗೂ ಸಮತೋಲನವಾದ ಆಡಳಿತವನ್ನು ಕೊಡಬಹುದು ಎನ್ನುವುದು ಅದರ ಉದ್ದೇಶ.  ಇದರಿಂದ ರಾಷ್ಟ್ರ‍ೀಯ ಮಟ್ಟದಲ್ಲೂ ಅನೇಕ ಪ್ರಯೋಜನಗಳಿವೆ.  ಇಷ್ಟರವರೆಗೆ ಎಲ್ಲಾ ಮನೆಗಳಲ್ಲಿಯೂ ಇದನ್ನು ಸಂಪೂರ್ಣಗೊಳಿಸಿ ಎಂದು ಪತ್ರಗಳನ್ನು ಕಳಿಸಿದ್ದಾರ‍ೆ.  ಈ ರೀತಿಯ ಪದ್ಧತಿ ಅನೇಕ ದೇಶಗಳಲ್ಲೂ ಕೂಡ ಚಾಲ್ತಿಯಲ್ಲಿದೆ, ಅಂತೆಯೇ ಭಾರತದಲ್ಲಿಯೂ ಕೂಡಾ.

ನೀವು ನ್ಯಾಷನಲ್ ಪಾಪ್ಯುಲೇಶನ್ ಕ್ಲಾಕ್ ವೆಬ್‌ಸೈಟ್‌ಗೆ ಹೋಗಿ ನೋಡಿದರೆ, ಈ ಕೆಳಗಿನ ಚಿತ್ರ ಕಾಣುತ್ತದೆ.


ಎಲ್ಲ ದೇಶಗಳ ಜನಸಂಖ್ಯೆಯನ್ನು ನೋಡಿದಾಗ, ವಿಶೇಷವೆಂದರೆ ಪ್ರಪಂಚದ ಅರ್ಧಭಾಗಕ್ಕಿಂತಲೂ ಹೆಚ್ಚು ಜನಸಂಖ್ಯೆ ಐದಾರು ದೇಶಗಳಲ್ಲಿ ಇರುವುದು ಗಮನಕ್ಕೆ ಬರುತ್ತದೆ.  ಅದರಲ್ಲೂ ಚೀನಾ ಮತ್ತು ಭಾರತವೇ ಮೂರರ ಒಂದು ಭಾಗವನ್ನು ಆಕ್ರಮಿಸಿಕೊಳ್ಳುತ್ತವೆ.


"ವಸುಧೈವ ಕುಟುಂಬಕಮ್" ಎಂಬ ಮಹಾ ಉಪನಿಷತ್ತಿನ ಬಹುಮುಖ್ಯವಾದ ನೈತಿಕ ಮೌಲ್ಯದ ಹಿನ್ನೆಲೆಯಲ್ಲಿ ಬದುಕುವ 1.4 ಬಿಲಿಯನ್ ಭಾರತೀಯರೆಲ್ಲಿ? ಕಂಡದ್ದನ್ನೆಲ್ಲ ತಿಂದು ನೀರು ಕುಡಿಯುವ ಅಷ್ಟೇ ಪ್ರಮಾಣದ ಚೀನಾ ಪ್ರಜೆಗಳೆಲ್ಲಿ?  ಇಂಥವರಲ್ಲಿ ಮೌಲ್ಯವನ್ನು ಬಿತ್ತಲೆಂದೇ ಸಾವಿರಾರು ವರ್ಷಗಳ ಹಿಂದೆಯೇ ಬುದ್ಧ ಮಹಾತ್ಮನ ಅವತಾರವಾಗಿದ್ದರೂ ಕೂಡ, ಇವತ್ತಿಗೂ ಚೈನಾದಲ್ಲಿ ಯಾವುದೇ ಧರ್ಮವಿಲ್ಲದೇ ಬದುಕುವವರೂ ಬಹಳಷ್ಟು ಸಂಖ್ಯೆಯಲ್ಲಿದ್ದಾರೆ.  15% ಬುದ್ಧಿಸಮ್, ಇನ್ನೊಂದೈದು ಪರ್ಸೆಂಟ್ ಉಳಿದ ಧರ್ಮೀಯರನ್ನು ಬಿಟ್ಟರೆ, ಹೆಚ್ಚಿನವರು ಯಾವುದೇ ಧರ್ಮಕ್ಕೂ ಒಳಗಾಗದ ಧರ್ಮರಹಿತರು ಎಂದು ಕರೆಯಬೇಕಾದವರು ಕಂಡು ಬರುತ್ತಾರೆ.  ಯಾವುದೇ ಧರ್ಮದ ಚೌಕಟ್ಟಿಗೆ ಒಳಗಾಗದೇ ಇದ್ದವರು ಯಾವ ಭಾವನೆಗಳನ್ನು ಗೌರವಿಸಿಯಾರು? ಯಾರ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಂಡಾರು.  ಹೆಚ್ಚಿನವರು ಪ್ರಾಣಿಗಳ ಹಾಗೆ: ತಾವು ಬದುಕಬೇಕು, ಮತ್ತೆ ಅಭಿವೃದ್ಧಿ ಹೊಂದಬೇಕು... ಅದಕ್ಕಾಗಿ ಯಾವ ಬೆಲೆಯನ್ನು ಬೇಕಾದರೂ ತೆರಲು ಸಿದ್ಧ!

***
ಈ ವಿಶ್ವದ ಪ್ರತಿಯೊಂದು ಅಣು-ರೇಣು-ತೃಣ-ಕಾಷ್ಠಗಳಿಗೂ ಸಮನಾಗಿ ಬದುಕುವ ಹಕ್ಕಿದೆ.  ಅಂತೆಯೇ ಈ ವಿಶ್ವದ ಪರಿತಂತ್ರ (ecosystem) ಜೀವಂತವಿರಬೇಕಾದರೆ ಎಲ್ಲ ಜೀವಿ-ನಿರ್ಜೀವಿಗಳಿಗೂ ಅವುಗಳದ್ದೇ ಧರ್ಮ (way of life) ಒಂದಿದೆ, ಅದನ್ನು ಬದಲಾಯಿಸಲಾಗದು.

Law of conservation of energy (1st law of Thermodynamics), ಹೇಳುವ ಪ್ರಕಾರ, energy can neither be created nor destroyed.  ಅದರಂತೆ, ಈ ವಿಶ್ವದ ಒಂದು ಚೈತನ್ಯ ಸ್ಥಿಮಿತದಲ್ಲಿರಬೇಕು ಇಲ್ಲವಾದರೆ ನಿಸರ್ಗ ತನ್ನನ್ನು ತಾನು ಸ್ಥಿಮಿತಕ್ಕೆ ತಂದುಕೊಳ್ಳುತ್ತದೆ.  ಕಳೆದ ನೂರು ವರ್ಷಗಳಲ್ಲಿ ಎರಡು ಬಿಲಿಯನ್ ಇದ್ದ ನಾವುಗಳು ಎಂಟು ಬಿಲಿಯನ್ (ಅಂದರೆ ನಾಲ್ಕು ಪಟ್ಟು) ಬೆಳೆದಿರುವಾಗ, ಅದರ ಸಮನಾದ ಪ್ರಮಾಣವನ್ನು ಮತ್ತೆಲ್ಲೋ ಮಾರ್ಪಾಡು ಮಾಡಿದ್ದೇವೆ ಎನಿಸೋದಿಲ್ಲವೇ?  ಉದಾಹರಣೆಗೆ, ಕೋಳಿ, ಹಂದಿ ಅಥವಾ ಬೀಫ್ ಫಾರಮ್‌ನಲ್ಲಿ ಕೃತಕ ಪರಿಸರದಲ್ಲಿ ಬೆಳೆಯುವ ಪ್ರಾಣಿ ದಿಢೀರನೆ ಅದರ ತೂಕದಲ್ಲಿ ಹೆಚ್ಚನ್ನು ಕಾಣುವುದನ್ನು, ಅದು ಅಷ್ಟೇ ಪ್ರಮಾಣದ ಅಥವಾ ಅದಕ್ಕಿಂತಲೂ ಹೆಚ್ಚು ಬಳಸುವ ಆಹಾರ ಪ್ರಮಾಣದ ಮೂಲಕ ವಿವರಿಸಬಹುದು.

ಈ ಸಂದಿಗ್ದದ ಸಮಯದಲ್ಲಿ, ನಾವು ನಿಸರ್ಗದೊಂದಿಗೆ ಸಂಧಾನಕ್ಕೆ ಬರದೇ ಇದೇ ರೀತಿ ನಿಸರ್ಗವನ್ನು ಒತ್ತೆಯಾಳಾಗಿಟ್ಟುಕೊಂಡು ಸತಾಯಿಸುತ್ತಲೇ ಹೋದರೆ, ನಮ್ಮ ಅಗಾಧವಾಗಿ ಹೆಚ್ಚುತ್ತಿರುವ ಸಂತತಿ, ಒಂದು ಅಳಿವಿನ ಹಂತಕ್ಕೆ ಬಂದರೂ ಅಚ್ಚರಿಯೇನಿಲ್ಲ.

ಅದಕ್ಕೆಯೇ, ನಾವೆಲ್ಲರನ್ನೂ ಬದುಕಲು ಬಿಡಬೇಕು, ಪ್ರಪಂಚವನ್ನೇ ಒಂದು ಕುಟುಂಬವೆಂದುಕೊಂಡು ಸಹಬಾಳ್ವೆಯನ್ನು ಅನುಸರಿಸಬೇಕು ಎನ್ನುವ ಮಾತು, ಇಂದಿಗೆ ಹೆಚ್ಚು ಅನ್ವಯವಾಗುತ್ತದೆ.

Saturday, April 04, 2020

ಹವ್ಯಾಸ-ದೇವರು-ಸ್ವಾತಂತ್ರ್ಯ

ಯಾವುದೇ ಒಂದು ಹವ್ಯಾಸ ಬೆಳೆಯ ಬೇಕಾದರೂ ಕನಿಷ್ಠ ಮೂರು ವಾರಗಳ ಕಾಲ ಬೇಕಾಗುತ್ತದೆ ಎಂಬುದು ಹಲವರ ಅನುಭವ.  ಈ ಕಳೆದ ಮೂರು ವಾರಗಳಲ್ಲಿ (ಮನೆಯಲ್ಲಿಯೇ ಕುಳಿತು) ಮನೆಯಿಂದಲೇ ಕೆಲಸ ಮಾಡುವ ನನ್ನಂಥ ಎಷ್ಟೋ ಜನ ಟೆಕ್ನಾಲಜಿ ಮ್ಯಾನೇಜರುಗಳು ಈ ಹೊಸ ಪರಿಯ ಕೆಲಸಕ್ಕೆ ರೂಢಿಯಾಗಿಲ್ಲ?  ಆದರೆ, ಮನೆಯಲ್ಲಿಯೇ ಅಥವಾ ಮನೆಯಿಂದಲೇ ಕೆಲಸ ಮಾಡುವ ಜನರಿಗೆಲ್ಲ ’ಅಂತರಂಗ’ದ ಹೇಳಲೇ ಬೇಕಾದ ಕಿವಿ ಮಾತೊಂದಿದೆ: ಮನೆಯಿಂದಲೇ ಕುಳಿತು ಕೆಲಸ ಮಾಡುವುದೆಂದರೆ ಬೊಕ್ಕ ತಲೆಯ ವ್ಯಕ್ತಿ ಮುಖ ತೊಳೆದ ಹಾಗೆ!  ಎಲ್ಲಿ ಶುರು ಮಾಡಿ ಎಲ್ಲಿ ನಿಲ್ಲಿಸಬೇಕು ಎಂಬುದು ಅಷ್ಟು ಸುಲಭವಾಗಿ ತಿಳಿಯದು.  ಘಂಟೆಗೊಂದರಂತೆ ಟ್ಯಾಸ್ಕುಗಳು ನಮ್ಮ ತಲೆ ಏರಿ ಕುಳಿತಿರುವಾಗ, ಕೊನೆಯಿಲ್ಲದ ಹಾಗೆ ಇ-ಮೇಲ್‌ಗಳು ಇನ್‌ಬಾಕ್ಸ್‌ನಲ್ಲಿ ಬಂದು ಇಳಿಯುತ್ತಿರುವಾಗ, ಕಂಪನಿಯಲ್ಲಿದ್ದವರೆಲ್ಲ ನಾಳೆಯೇ ಪ್ರಪಂಚದ ಕೊನೆಯೆಂಬಂತೆ ಇನ್ಸ್ಟಂಟ್ ಮೆಸೇಜುಗಳಲ್ಲಿ ತಮ್ಮ ಕಥನಗಳನ್ನೇ ಹೆಣೆಯುತ್ತಿರುವಾಗ - ಎಲ್ಲಿಂದ ಆರಂಭಿಸುವುದು, ಎಲ್ಲಿ ನಿಲ್ಲಿಸುವುದು?  ಆಫೀಸಿನಲ್ಲಿದ್ದವರಾದರೆ ಮನೆಗೆ ಹೋಗುತ್ತೇವೆಂದಾದರೂ, ಕಾಫಿ-ಟೀ-ಲಂಚ್ ಬ್ರೇಕ್‌ಗಳನ್ನು ತೆಗೆದುಕೊಳ್ಳುತ್ತೇವೆಂದಾದರೂ ಅತ್ತಿಂದಿತ್ತ ಓಡಾಡುತ್ತಿದ್ದೆವು.  ಈಗ ಹಾಗಿಲ್ಲ.  ಡೆಸ್ಕ್ ಅನ್ನು ಬಿಟ್ಟು ಬದಿಗೆ ಬಂದರೆ, ಯಾರದ್ದಾದರೊಬ್ಬರದ್ದು ಕಾಟ ತಪ್ಪಿದ್ದಲ್ಲ.  ಮನೆಯೇ ಆಫೀಸು, ಆಫೀಸಿನ ಪಕ್ಕದಲ್ಲೇ ಅಡುಗೆ ಮನೆ, ಅದರ ಮಗ್ಗುಲಲ್ಲೇ ಬಾತ್‌ರೂಮು... ಹೀಗೆ ಗೂಟಕ್ಕೆ ಕಟ್ಟಿ ಹಾಕಿದ ಘೂಳಿಯಂತಾದ ಮನಸ್ಸು ಇದ್ದ ಸಣ್ಣ ಆವರಣದಲ್ಲೇ ಸದಾ ಗಿರಕಿ ಹೊಡೆಯುತ್ತಿರುತ್ತದೆ.  ಮೊನ್ನೆ ಯಾವುದೇ ಕಾರಣಕ್ಕೋ ಏನೋ ಚಪ್ಪಲಿ ಇಡುವ ಕ್ಲಾಸೆಟ್ಟಿನ ಬಾಗಿಲು ತೆಗೆದು ನೋಡಿದರೆ, ಅಲ್ಲಿ ನಾನು ಹಾಕುವ ಡ್ರೆಸ್ ಶೂ‌ಗಳು, ಹಳೆಯ ಕಸ್ಟಮರ್‌ ಅನ್ನು ನಕ್ಕು ಸ್ವಾಗತಿಸುವ ಗೂಡು ಅಂಗಡಿಯ ಮಾಲಿಕನಂತೆ ಕಂಡುಬಂದವು.  ನಾನು ಅವುಗಳನ್ನು ಮುಟ್ಟಿಯೂ ಸಹ ನೋಡಲಿಲ್ಲವಲ್ಲ ಎನ್ನುವ ಕಳಕಳಿಯಲ್ಲಿಯೇ ಕ್ಲಾಸೆಟ್ ಬಾಗಿಲು ಹಾಕುತ್ತಿದ್ದಂತೆ ಅನ್‌ಲೈನ್ ಅಡ್ವರ್‌ಟೈಸ್‌ಮೆಂಟ್‌‍ನಲ್ಲಿ ಬಂದು ಹೋಗುವ ಮುಖಗಳಾಗಿ ಮಾಯವಾದವು॒!  ಇನ್ನು ಬಾಗಿಲ ಬಳಿಯೇ ಬಿಡುವ ಶೂಗಳ ಕಥೆ ಇದಾದರೆ, ಮೇಲೆ ಕೊಂಡೊಯ್ದು (ಅಚ್ಚುಕಟ್ಟಾಗಿ) ಇಟ್ಟಿದ್ದ ಕೋಟು-ಸೂಟುಗಳು, ನಾನು ಇನ್ಯಾರದೋ ಮನೆಯನ್ನು ಹೊಕ್ಕೆನೇನೋ ಎಂಬ ಆಶ್ಚರ್ಯ ಸೂಚಕ ಭಾವನೆಯನ್ನು ನನ್ನ ಮುಖದ ಮೇಲೆ ಹೊರಡಿಸಿದವು.  ಕಳೆದ ಮೂರು ವಾರಗಳಲ್ಲಿ ನಾವು ಬಳಸಿದ ಸಂಪನ್ಮೂಲಗಳನ್ನು ನೆನೆದುಕೊಂಡರೆ "ಸಮರಸದ ಬಾಳುವೆಗೆ ಸರಳ ಜೀವನವೇ ಕಾರಣ॒!" ಎಂಬ ಪುಸ್ತಕವನ್ನು ಬರೆಯುವಷ್ಟು ಮಟೀರಿಯಲ್ ಸಿಗುವುದಂತೂ ಖಂಡಿತ!


***
ಈ ಕೋರೋನಾ ವೈರಸ್ಸಿನ ದೆಸೆಯಿಂದ ನಮ್ಮ ದೇವರುಗಳಿಗೆ ಒಂದು ಹೊಸದಾದ ಪ್ರೌಢಿಮೆ ಬಂದಿದೆ.  ಸಂಕಟಕಾಲದಲ್ಲಿ ವೆಂಕಟರಮಣ ಎನ್ನುವಂತೆ ಎಲ್ಲ ಮಾನವ ಆತ್ಮಗಳೂ ಸಹ ಅವುಗಳ ನೆಚ್ಚಿನ ದೇವರನ್ನು ನೆನೆಯುತ್ತಿರುವಾಗ, ನಮ್ಮೆಲ್ಲರ ಮೊರೆಯನ್ನು ಏಕ ಕಾಲದಲ್ಲಿ ದೇವರುಗಳನ್ನು ತಲುಪಿಸುತ್ತಿರುವ  ಕಮ್ಯುನಿಕೇಷನ್ ನೆಟ್‌ವರ್ಕ್‌ನಲ್ಲಿಯೂ ಸಹ ಕಂಜೆಷನ್ ಇರುವುದರಿಂದ, ಬ್ಯಾಂಡ್‌ವಿಡ್ತ್ ಸಮಸ್ಯೆಗಳು ಖಂಡಿತ ಇರಬಹುದು.  ಅಂತೆಯೇ ವಿಶ್ವದ ಏಳೂ ಮುಕ್ಕಾಲು ಬಿಲಿಯನ್ ಮಾನವ ರೂಪದಲ್ಲಿನ ಆತ್ಮಗಳು ಅರ್ಧ ಸತ್ತ (ಅಥವಾ ಅರ್ಧ ಬದುಕಿರಬಹುದಾದ) ಜೀವಿಯ ವಿರುದ್ಧ ರಕ್ಷಿಸು ಎಂದು ಮೊರೆ ಹೊತ್ತಿರುವಾಗ, ದಶಾವತಾರದ ನಂತರ ಮುಂದಿನ ಅವತಾರ ಏನಾಗಬಹುದು ಎಂದು ದೇವರೂ ಯೋಚಿಸಬೇಕಾಗುತ್ತದೆ.

೧. ಮೀನಾಗಿ ಬಂದವನು ಪ್ರಳಯದಿಂದ ರಕ್ಷಿಸಿದ
೨. ಆಮೆಯಾಗಿ ಬಂದವನು ಸಮುದ್ರ ಮಂಥನದ ಭಾರವನ್ನು ಹೊತ್ತ
೩. ಹಂದಿಯಾಗಿ ಬಂದವನು ಹಿರಣ್ಯಾಕ್ಷನಿಂದ ಭೂಮಿಯನ್ನು ರಕ್ಷಿಸಿದ
೪. ನರಸಿಂಹನಾಗಿ ಬಂದವನು ಸಾವೇ ಇಲ್ಲದ ಹಿರಣ್ಯಕಷ್ಯಪುವನ್ನು ಸಂಹರಿಸಿದ
೫. ಕುಳ್ಳನಾಗಿ ಬಂದವನು ಬಲಿಯನ್ನು ಪಾತಾಳಕ್ಕೆ ತಳ್ಳಿದ
೬. ಕೊಡಲಿ ರಾಮನಾಗಿ ಬಂದು ಕ್ಷತ್ರಿಯ ಸಂಹಾರಕ್ಕೆ ಇಳಿದು, ಮಹೇಂದ್ರಗಿರಿಯಲ್ಲಿ ಚಿರಂಜೀವಿಯಾಗಿ ನೆಲೆಸಿದ
೭. ರಾಮನಾಗಿ ರಾವಣ ಸಂಹಾರ ಮಾಡಿದ
೮. ಕೃಷ್ಣನಾಗಿ ಕೌರವ ಸಂಹಾರ ಮಾಡಿದ (ಬಲರಾಮನ ಶೇಷನ ಅವತಾರವೂ ಇದೇ ಅವಧಿಯಲ್ಲಿ ಸೇರುತ್ತದೆ)
೯.  ಬುದ್ಧನಾಗಿ ಎಲ್ಲರಿಗೂ ಬೋಧಿಸಿದ
೧೦. ಕಲ್ಕಿಯಾಗಿ ಬಿಳಿಯ ಕುದುರೆಯನ್ನೇರಿ ಕಲಿಯುಗದ ಉದ್ದಕ್ಕೂ ಉಲ್ಕಾಪಾತವಾಗಿ ತಿರುಗುತ್ತಿದ್ದಾನೆ... ಕಲಿಯುಗದಲ್ಲಿ ಅಧರ್ಮ ತಾಂಡವವಾಡಿದರೆ ಮತ್ತೆ ಬಂದೇ ಬಿಟ್ಟಾನು, ಉಲ್ಕೆಯಾಗಿ ಅಪ್ಪಳಿಸುವ ಮುಖೇನ ಪ್ರಜ್ವಲಿಸಿಬಿಟ್ಟಾನು!

ಪ್ರಭೂ! ಈ ಕಣ್ಣಿಗೆ ಕಾಣದ ಜೀವಿಯಿಂದ ನಮ್ಮೆಲ್ಲರ ರಕ್ಷಣೆ ಹೇಗೆ ಸಾಧ್ಯ? ನೀನೇನಾದರೂ ವಿಶೇಷ ವಿಕಿರಣಗಳನ್ನು ಹೊರಸೂಸಿ ಗಾಳಿಯಲ್ಲಿನ ಈ ಅಣುಜೀವಿಗಳನ್ನು ಮಾತ್ರ ನಾಶಪಡಿಸಿದರೆ ಆಗಬಹುದು! (ಮಾನವನಿಂದ ನಿರ್ನಾಮವಾಗುತ್ತಿರುವ ಜೀವಿಗಳ ಮೊರೆಯನ್ನೇಕೆ ನೀನು ಆಲಿಸುತ್ತಿಲ್ಲ? ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ, ಅದೇಕೆ? ಮಾನವರಲ್ಲದ ಜೀವಿಗಳು ನಿನ್ನ ಮಕ್ಕಳಲ್ಲವೇನು?)

***
ಒಂದು ವಸ್ತು ಇಲ್ಲದಾಗಲೇ ಅದರ ಬೆಲೆ ಗೊತ್ತಾಗುವುದಂತೆ.  ಈ "ವಸ್ತು"ಗಳ ಪಟ್ಟಿಯಲ್ಲಿ ನಮ್ಮ "ಸ್ವಾತಂತ್ರ್ಯ"ವೂ ಸೇರಿದೆ.  ನಾವೆಲ್ಲ ಸಂಘಜೀವಿಗಳು.  ನಮ್ಮ ನಮ್ಮ ಮನೆಗಳಲ್ಲಿ ನಮಗೆ ಬೇಕಾದ ಐಶಾರಾಮ, ಭೌತಿಕವಸ್ತುಗಳು, ನಮ್ಮವರು, ಮುಖ್ಯವಾಗಿ ಸಮಯ, ಇವೆಲ್ಲ ಇದ್ದಾಗಲೂ ಕೂಡ ನಮ್ಮಲ್ಲಿ ಏನೋ ಒಂದು ಅಪರಿಪೂರ್ಣ ಭಾವನೆ ತುಂಬಿಕೊಳ್ಳೋದಿಲ್ಲವೇ? ಹಾಗೆ. ಈ ಆಯ್ಕೆಯನ್ನು -  ಸ್ವಾತಂತ್ರ್ಯ, ಮುಕ್ತಿ, ತೆರವು, ಬಿಡುಗಡೆ, ಅನಿರ್ಬಂಧಿತ ಸ್ಥಿತಿ, ವಿಮೋಚನೆ, ಸ್ವಚ್ಛಂದತೆ, ಸ್ವತಂತ್ರತೆ - ಎನ್ನುವ ಅನೇಕ ಪದಗಳಲ್ಲಿ ನಾವು ಅಳೆದರೂ ಅದರ ಮಹತ್ವವನ್ನು ಅಷ್ಟು ಸುಲಭವಾಗಿ ಸಾರಲಾಗುವುದಿಲ್ಲ.  ಚಿಕ್ಕ-ದೊಡ್ಡ ಸ್ಕ್ರೀನುಗಳಲ್ಲಿರುವ ಯಾವುದೇ ಮಾಹಿತಿ-ಮನರಂಜನೆಯನ್ನು ನೋಡಿದರೂ ಮನ ತುಂಬದು.  ಅದೇ, ಅಪರೂಪಕ್ಕೊಮ್ಮೆ ಕರೆ ಮಾಡುವ ಹಳೆಯ ಸ್ನೇಹಿತರನ್ನು ಯಾವಾಗ ಬೇಕಾದರೂ ಆಗ ಕರೆ ಮಾಡಿ ಮಾತನಾಡಿ, ನಿಮಗೆ ಗೊತ್ತಿಲ್ಲದಂತೆ ಒಂದು ಘಂಟೆ ಆರಾಮವಾಗಿ ಕಳೆದುಹೋಗುತ್ತದೆ.  ನಮ್ಮ ನಮ್ಮ ಗೂಡುಗಳಲ್ಲಿ ನಮ್ಮನ್ನು ಕಟ್ಟಿ ಹಾಕಿದ್ದರೂ ಸಹ, ಈ ಕೋವಿಡ್ ದೆಸೆಯಿಂದ ನಾವೆಲ್ಲರೂ ದೂರವಿದ್ದೂ ಹತ್ತಿರವಾಗಿದ್ದೇವೆ ಎನ್ನಬಹುದು.  ಆಯ್ಕೆ, ಸ್ವಾತಂತ್ರ್ಯ, ಸಹಬಾಳ್ವೆಯ ಸಮತೋಲನದಲ್ಲಿ ನಮಗೆಲ್ಲ ಬದುಕಿನ ಗಂಭೀರ ಮುಖವನ್ನು ದರ್ಶನ ಮಾಡಿಸಿದ ಕೋವಿಡ್‌ಗೆ ಜೈ॒!

Friday, April 03, 2020

... ಸ್ಕ್ರೀನುಗಳೇ ಗೆದ್ದವು!

ಕೊರೋನಾ ವೈರಸ್ ದೆಸೆಯಿಂದ ಕೊನೆಗೆ ಗೆದ್ದವು - ಈ ಸ್ಕ್ರೀನುಗಳು!  ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಕಣ್ಣು ಮುಚ್ಚುವವರೆಗೆ ಈ ಸ್ಕ್ರೀನುಗಳದ್ದೇ ದರ್ಬಾರು, ಅವುಗಳ ಸುತ್ತಮುತ್ತಲೂ ನಮ್ಮದೆಲ್ಲ ಒಂದು ರೀತಿ ಡೊಂಬರಾಟ ಇದ್ದ ಹಾಗೆ!

ವಿಪರ್ಯಾಸವೆಂದರೆ, ನಾನು ಇತ್ತೀಚೆಗಷ್ಟೇ Tiffany Shlain ಬರೆದ 24/6 The Power of Unplugging One Day A Week ಪುಸ್ತಕ ಓದಿದ ನಂತರ ಹೀಗಾಗಿದ್ದು.  ಎಷ್ಟೆಲ್ಲ ತಂತ್ರಜ್ಞಾನ ಮುಂದುವರೆದಿದ್ದರೂ ಸಹ, ಅರ್ಥೋಡಾಕ್ಸ್ ಯಹೂದಿಗಳು ಇಂದಿಗೂ ಕೂಡ ಸೆಬಾತ್ (Shabbat) ಆಚರಿಸಿಕೊಂಡು ಬಂದಿದ್ದಾರ‍ೆ.  ಅವರುಗಳು ವೃತ್ತಿಯಿಂದ ವೈದ್ಯರಿರಲಿ, ಇಂಜಿನಿಯರುಗಳಿರಲಿ, ಅಥವಾ ಯಾರೇ ಇರಲಿ ವಾರಕ್ಕೊಂದು ದಿನ, ಯಂತ್ರಗಳ ಸಹವಾಸವಿಲ್ಲದೆ ಬದುಕುತ್ತಾರೆ.  ಈ ಪುಸ್ತಕದಲ್ಲಿ ಲೇಖಕಿ ತನ್ನ ಕುಟುಂಬ ಮೌಲ್ಯಗಳನ್ನು ಎತ್ತಿ ಹಿಡಿದು ಅವುಗಳನ್ನು ತಂತ್ರಜ್ಞಾನಕ್ಕೂ ವಿಸ್ತರಿಸಿ Techonology Shabbat ಅನ್ನು ಪರಿಚಯಿಸುತ್ತಾರೆ.  ನಾನು ಈ ಪುಸ್ತಕವನ್ನು ಓದಿ, ಕಷ್ಟಸಾಧ್ಯ ಎಂದು ಪಕ್ಕದಲ್ಲಿಟ್ಟೆ, ಆದರೂ ಸಹ ವಾರಕ್ಕೊಂದು ದಿನ ಟೆಕ್ನಾಲಜಿ ಅಥವಾ ಯಾವುದೇ ಸ್ಕ್ರೀನುಗಳ ಪರಾಧೀನತೆ ಇಲ್ಲದೇ ಬದುಕುವಂತಿದ್ದರೆ ಎಂದು ಅನ್ನಿಸದೇ ಇರಲಿಲ್ಲ.

***
ಎಲ್ಲ ಕಡೆ ಕೊರೋನಾ ವೈರಸ್ಸು ಹಾವಳಿಯಿಂದ ನಮ್ಮ ಆಫೀಸಿನ ಕೆಲಸವಷ್ಟೇ ಅಲ್ಲ, ದೈನಂದಿನ ಸಂಭಾಷಣೆ, ವಿಚಾರ-ವಿನಿಮಯ, ಮನರಂಜನೆ, ಮಾಹಿತಿ, ಸುದ್ದಿ-ಸಮಾಚಾರ ಮೊದಲಾದ ಎಲ್ಲವೂ ನಮಗೆ ಈ ಸ್ಕ್ರೀನುಗಳಿಂದಾನೇ ದೊರೆಯೋದು.  ನಾವು ಹೊಸದಾಗಿ iPhoneನಲ್ಲಿ ಬಂದಿರೋ Screen Time ಉಪಯೋಗಿಸಿ ದಿನದಲ್ಲಿ/ವಾರದಲ್ಲಿ ಬಳಸಿದ ಎಲ್ಲ ಅಪ್ಲಿಕೇಶನ್ನುಗಳನ್ನೂ ನೋಡುತ್ತಿದ್ದೆವು.  ಆದರೆ, ಈಗೆಲ್ಲ ನಮ್ಮ ಸ್ಕ್ರೀನುಗಳ ಉಪಯೋಗ ದಿನೇದಿನೇ ಹೆಚ್ಚಾಗುತ್ತಿದೆ.  ಅದರಲ್ಲೂ ಹೊರಗಡೆ ಹೋಗದೆ ಮನೆಯಲ್ಲಿ ಕುಳಿತಿರುವ ನಮಗೆಲ್ಲ ಈ ಚಿಕ್ಕ-ದೊಡ್ಡ ಸ್ಕ್ರೀನುಗಳೇ ದೊಡ್ಡ ಸವಲತ್ತುಗಳಾಗಿವೆ.  ಅಕಸ್ಮಾತ್ ನಮ್ಮಿಂದ ಊಟವನ್ನಾದರೂ ದೂರವಿಡಬಹುದು, ಆದರೆ ಸ್ಕ್ರೀನುಗಳನ್ನಲ್ಲ ಎಂದು ರಚ್ಚೆ ಹಿಡಿದು ಒದ್ದಾಡುವ ಮಗುವಿನಂತಾಗಿದೆ ಮನಸ್ಥಿತಿ.

ಇತ್ತೀಚೆಗೆ ಎಲ್ಲೋ ಓದಿದ ನೆನಪು, "ಹೊರಗೆಲ್ಲೂ ಸುತ್ತಾಡಲಾಗದಿದ್ದರೇನಂತೆ... ಮನದಾಳದ ಒಳಗೆ ಹೋಗಿ ನೋಡಿ!"  ಇದಂತೂ ಹೇಳಲು ಬಹಳ ಸುಲಭವಾದುದು.  ಆದರೆ ಮನದಾಳದೊಳಗಡೆ ಇಳಿಯಲು ತೊಡಗಿದರೆ, ನೂರೊಂದು ತೊಡಕುಗಳು.  ಜಗದೆಲ್ಲ ಸಮಸ್ಯೆಗಳು ಬಂದು ನಮ್ಮ ಕೊರಳನ್ನು ಸುತ್ತಿಕೊಳ್ಳುವ ಅನುಭವ.  ಇರದ ಜಂಜಡಗಳೆಲ್ಲ ಬಂದು ಒಮ್ಮೆಲೇ ರಭಸದಿಂದ ಅಪ್ಪಳಿಸುವ ಅಳೆಯಂತೆ ಒಂದರ ಹಿಂದೆ ಮತ್ತೊಂದು ಬಂದು ಮನದ ದಂಡೆಯನ್ನು ತಬ್ಬಿಕೊಳ್ಳುತ್ತಲೇ ಇರುತ್ತವೆ. ಸ್ವಚ್ಚಂದವಾಗಿ  ಹೊರಗಡೆ ಸುತ್ತಾಡುವ ಮನಸ್ಸಿಗೆ ಒಳಗಿನ ಪಯಣಕ್ಕೆ ಇಷ್ಟೊಂದು ಗಾಭರಿ ಏಕೋ?  ಮನಸ್ಸನ್ನು ತಡುವಿಕೊಂಡು ಒಂದೊಂದೇ ಮೆಟ್ಟಿಲನ್ನು ಇಳಿದು ನೆಲಮಾಳಿಗೆಯ ನೆಲವೇನೋ ತಡಕಾಡೀತೆಂದು ಕಾಲನ್ನು ಆಡಿಸಿ ನೋಡಿದರೆ ಆ ಕತ್ತಲೆಯ ಕೋಣೆಯಲ್ಲಿನ ತೆಳ್ಳಗಿನ ಹವೆ ತನ್ನೊಳಗಿನ ಆರ್ಧ್ರತೆಯೊಂದಿಗೆ ಒಂದು ಕುಮುಟು ವಾಸನೆಯನ್ನೂ ಅಲವತ್ತುಕೊಂಡಿರುವುದರಿಂದಲೋ ಏನೋ ಒಂದು ರೀತಿಯ ತಣ್ಣಗಿನ ಅನುಭವದ ಜೊತೆಗೆ ನಮ್ಮ ಹಳೆಯ ನೆನಪುಗಳ ಪದರಗಳನ್ನು ಪಕ್ಕಳ ಪಕ್ಕಳವಾಗಿ ಕಿತ್ತು ತರುವುದು.

***

ಸದಾ ಸುಖವನ್ನು ಬಯಸುವ ನಾವು, ಸಾವಿಗೆ ಹೆದರುವ ಸಂತತಿಯಾಗಿ ಇತಿಹಾಸದಲ್ಲಿ ದಾಖಲಾಗಲಿದ್ದೇವೆ.  ಕಣ್ಣಿಗೆ ಕಾಣದ, ಜೀವವಿದ್ದೂ ಇರದ, ಉಸಿರಿನ ಮೂಲಕ್ಕೇ ತಂತ್ರದಿಂದ ಲಗ್ಗೆ ಹಾಕುವ ಸೂಕ್ಷ್ಮ ಜೀವಿಗಳ ವಿರುದ್ಧ ಹೆಣೆಯುವ ಪಾಟೀ ಸವಾಲುಗಳು ನಮ್ಮಲ್ಲಿಲ್ಲ.  ನಾವು ಈ ಯುದ್ಧಕ್ಕೆ ಸನ್ನದ್ದರಾದವರಂತೂ ಅಲ್ಲವೇ ಅಲ್ಲ.  ಒಂದು ದೇಶದ ಮಿಲಿಟರಿ ಪಡೆಗೆ ಶತ್ರುಗಳ ವಿರುದ್ಧ ಸೆಣೆಸಾಡುವ ತರಬೇತಿಯನ್ನು ನೀಡಲಾಗಿರುತ್ತದೆ.  ನಿಜವಾದ ಯುದ್ಧವಿರಲಿ, ಇಲ್ಲದಿರಲಿ ಒಂದು ಸಿಮ್ಯುಲೇಟೆಡ್ ಎನೈರ್‌ಮೆಂಟಿನಲ್ಲಾದರೂ ಅವರಿಗೆ ಯುದ್ಧದ ಆಗು-ಹೋಗುಗಳನ್ನು ಅರಿವಿಗೆ ಮೂಡಿಸಿ ಅವರನ್ನು ತಕ್ಕ ಮಟ್ಟಿಗೆ ತಯಾರು ಮಾಡಿರಲಾಗುತ್ತದೆ.  ಅವರು ತಮ್ಮ ಮೈ-ಮನಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಆಗಾಗ್ಗೆ ಕವಾಯತ್ ಅನ್ನಾದರೂ ಮಾಡಿಕೊಂಡು ತಯಾರಿರುತ್ತಾರೆ.  ಆದರೆ, ವಿಶ್ವದಾದ್ಯಂತ ಅನೇಕ ಆಸ್ಪತ್ರೆಗಳಲ್ಲಿ, ನರ್ಸಿಂಗ್ ಹೋಂಗಳಲ್ಲಿ ಕೆಲಸ ಮಾಡುವ ವೈದ್ಯರು, ಶುಶ್ರೂಷಕರು, ನರ್ಸುಗಳು, ಮೊದಲಾದವರಿಗೆ ಈ ರೀತಿಯ ಯುದ್ಧಕಾಲದ ಯಾವುದೇ ತಯಾರಿಯೂ ಇರೋದಿಲ್ಲ.  ಮೆಡಿಕಲ್ ಸ್ಕೂಲ್‌ನಲ್ಲಿ ಓದು ಮುಗಿಸಿ ರೆಸಿಡೆನ್ಸಿ ಮಾಡಿದವರೆಲ್ಲರೂ ಈ ಕಣ್ಣಿಗೆ ಕಾಣದ ಶತ್ರುಗಳನ್ನು ಹೊಡೆದೋಡಿಸೋ ಯೋಧರಲ್ಲ.  ಪ್ರತಿ ದಿನವೂ ಎದ್ದು ಕೊರೋನಾ ವೈರಸ್ ಸೋಂಕಿದ ರಣರಂಗಕ್ಕೆ ಸೇವಾ ಮನೋಭಾವನೆಯಿಂದ ಹೋಗಿ, ಕೈಲಾದ ಸೇವೆಯನ್ನು ಮಾಡಿ, ಯಾವುದೇ ಸೋಂಕನ್ನು ತಮಗೆ ತಗುಲಿಸಿಕೊಳ್ಳದೇ, ಇನ್ನೊಬ್ಬರಿಗೆ ಹರಡದೇ, ಕೆಲಸ ಮುಗಿದ ಮೇಲೆ ಮತ್ತೆ ಮನೆಗೆ ಬಂದು ತಮ್ಮ ಕುಟುಂಬದವರನ್ನು ಸಂತೈಸುವ ಕೆಲಸ ಮಾಡುತ್ತಿರುವ ಈ ಎಲ್ಲ ಯೋಧರಿಗೂ ಈ ಯುದ್ಧದಲ್ಲಿ ಬದುಕುಳಿದ ನಾವೆಲ್ಲರೂ ಚಿರಋಣಿಗಳಾಗುತ್ತೇವೆ.  ಈ ಮೆಡಿಕಲ್ ಫೀಲ್ಡ್‌ನಲ್ಲಿ ಸೇವಾ ಮನೋಭಾವನೆಯಿಂದ ಕೆಲಸ ಮಾಡುವ ಇಂಥ ಯೋಧರದ್ದು ನಿಜವಾದ ಕೆಚ್ಚೆದೆ, ಇವರೇ ಇಂದಿನ ಹೀರೋಗಳು.  ನಮ್ಮ ಮಾನವ ಜನಾಂಗ ಮುಂದಿನ ಹೆಜ್ಜೆ ಇಡುವಲ್ಲಿ ತಮ್ಮನ್ನೇ ತಾವು ಸಮರ್ಪಿಸಿಕೊಳ್ಳುತ್ತಿರುವ ಯೋಧರು.

Thursday, April 02, 2020

ಕೊರೋನಾ ವೈರಸ್ ನಮ್ಮ ಶಕ್ತಿಯನ್ನು ಕ್ಷೀಣಿಸಿದೆಯೇ?

ನಾವು, ಜನಸಾಮಾನ್ಯರು ಅಥವಾ ನಮ್ಮ ಮಾನವ ಜನಾಂಗವನ್ನು ಒಟ್ಟಿಗೆ ಪ್ರತಿನಿಧಿಸುವ ನಾವೆಲ್ಲರೂ ಈ ಕಳೆದ ನೂರು ವರ್ಷಗಳಲ್ಲಿ ದುರ್ಬಲರಾಗಿದ್ದೇವೆಯೇ?

ಅಂಕಿ-ಅಂಶಗಳ ಪ್ರಕಾರ ನಾವೆಲ್ಲರು ಧೀರ್ಘಾಯುಗಳು, ನಮ್ಮ ಬದುಕಿನ ಗುಣಮಟ್ಟ ಹೆಚ್ಚಿದೆ, ನಮ್ಮ ಮೌಲ್ಯ (net worth) ವೃದ್ಧಿಯಾಗಿದೆ.  ನಮ್ಮ ಸಂಖ್ಯೆ ಹೆಚ್ಚಿದೆ - 1900 ರಲ್ಲಿ 1.6 ಬಿಲಿಯನ್ ಇದ್ದದ್ದು 2020ಕ್ಕೆ 7.8 ಬಿಲಿಯನ್ ಆಗಿದೆ.  ಅದರಂತೆ ನಮ್ಮ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ: ಹೃದಯ ಸಂಬಂಧಿ ಖಾಯಿಲೆಗಳು, ಕ್ಯಾನ್ಸರ್, ರಸ್ತೆ ಅಫಘಾತ, ಡಯಬೀಟಿಸ್ ಮೊದಲಾದಂತೆ ಮಿಲಿಯನ್ನುಗಟ್ಟಲೆ ಜನ ಸಾಯುತ್ತಲೇ ಇದ್ದಾರೆ.  ಫ್ಲೂ (ಇನ್‌ಫ್ಲೂಯೆಂಜ಼ಾ) ಒಂದರಿಂದಲೇ ವರ್ಷಕ್ಕೆ ಸಾವಿರಾರು ಜನ ಸಾಯುತ್ತಿದ್ದಾರ‍ೆ.  ನಿಮಗೆಲ್ಲ ನೆನಪಿರುವಂತೆ, 2004ರ ಡಿಸೆಂಬರ್ 26ರಂದು ಬಂದ ಸುನಾಮಿಯಿಂದ ಸುಮಾರು ಎರಡೂವರೆ ಲಕ್ಷ ಜನ ಸತ್ತು ಹೋಗಿದ್ದು, ಸಾವಿರಾರು ಜನ ತಮ್ಮ ಮನೆ-ಮಠವನ್ನು ಕಳೆದುಕೊಂಡು ನಿರ್ಗತಿಕರಾಗಿದ್ದು ಇನ್ನೂ ನಮ್ಮ ನೆನಪಿನಿಂದ ಮಾಸಿಲ್ಲ.


ಆದರೆ, ಈ ಕೋವಿಡ್-೧೯ ಎನ್ನುವ ಮಹಾಮಾರಿ ನಮ್ಮೆಲ್ಲರನ್ನು ಎಲ್ಲಿ ಆಪೋಷನ ತೆಗೆದುಕೊಳ್ಳುವುದೋ ಎನ್ನುವುದು ಎಲ್ಲರ ಭೀತಿ.  ಎಲ್ಲರನ್ನೂ ಒಮ್ಮೆಲೇ ಬಲಿ ತೆಗೆದುಕೊಂಡ ಸುನಾಮಿಯಂತಲ್ಲ ಇದರ ಕಥೆ, ಒಂದು ಸಾಮಾಜಿಕ ವ್ಯವಸ್ಥೆಯನ್ನೇ ಹಂತ-ಹಂತವಾಗಿ ಮಲಗಿಸಿ, ಯಾವ ಶಸ್ತ್ರಾಸ್ತವನ್ನೂ ಬಳಸದೇ ಎಲ್ಲರನ್ನೂ ಮುಗಿಸಿಬಿಡುವ ಶಕ್ತಿ ಈ ವೈರಸ್ಸಿಗಿದೆ.
ಆದರೆ, ಮತ್ತೆ ಅದೇ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ: ಈ ನೂರು ವರ್ಷಗಳಲ್ಲಿ ನಾವು ದುರ್ಬಲರಾಗಿದ್ದೇವೆಯೇ?

ನಮ್ಮ ಗ್ಲೋಬಲೈಜೇಷನ್ ಅನ್ನೋದೇ ನಮಗೆ ಶಾಪವಾಯಿತು.  ನೂರು ವರ್ಷಗಳ ಹಿಂದೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಇಷ್ಟೊಂದು ಕ್ಷಿಪ್ರವಾಗಿ ಹೋಗಿ-ಬರುವ ವ್ಯವಸ್ಥೆ ಇದ್ದಿರಲಿಲ್ಲ.  ಅಲ್ಲದೇ ನಮ್ಮೆಲ್ಲರ ಓಡಾಟಗಳು ಸ್ಥಳೀಯ ಜಿಲ್ಲೆ-ಪ್ರ್ಯಾಂತ್ಯಗಳಿಗೆ ಸೀಮಿತವಾಗಿರುತ್ತಿದ್ದುದು ವಿಶೇಷ.  ಒಂದು ದೇಶದಲ್ಲಿ ಹುಟ್ಟಿದ ಮಹಾಮಾರಿ ಮತ್ತೊಂದು ದೇಶವನ್ನು ಈಗ ಆಕ್ರಮಿಸುತ್ತಿರುವಂತೆ ಅತಿಯಾದ ವೇಗದಲ್ಲಂತೂ ಆಕ್ರಮಿಸುತ್ತಿರಲಿಲ್ಲ.  ಜೊತೆಗೆ, ಆಗಿನ ಕಾಲದಲ್ಲಿ ವಾಹನ ವ್ಯವಸ್ಥೆಗಳೇ ಇರಲಿಲ್ಲ - ಇದ್ದರೂ ಕೆಲವೇ ಜನರಿಗೆ ಸೀಮಿತವಾಗಿರುತ್ತಿತ್ತು.  ಆದರೆ, ಈಗ ಹಾಗಿಲ್ಲ.  ಪ್ರಪಂಚ ಒಂದು ಹಳ್ಳಿಯಾಗಿದೆ (global village), ಅದರಂತೆ ಒಂದು ಹಳ್ಳಿಯಲ್ಲಾಗುವ ಎಲ್ಲ ಘಟನೆಗಳಿಗೂ ಆ ಹಳ್ಳಿಯ ಎಲ್ಲರೂ ಸ್ಪಂದಿಸುತ್ತಾರೆ, ಅದನ್ನು ಪ್ರತಿಬಿಂಬಿಸುತ್ತಾರೆ.  ಈಗಿನ ಟ್ರೆಂಡುಗಳೂ ಕೂಡ ಹುಟ್ಟುವುದೂ-ಸಾಯುವುದೂ ಅಷ್ಟೇ ವೇಗವಾಗಿ.

ಆದರೆ, ನಮ್ಮ ಹೆಚ್ಚಿನ ವಿದ್ಯಾಭ್ಯಾಸ (or simply awareness), ನಮ್ಮಲ್ಲಿ ಹುಲುಸಾಗಿ ಬೆಳೆದು ಯಥೇಚ್ಛವಾಗಿ ಸಿಗುವ ತಂತ್ರಜ್ಞಾನ, ಇವು ನಮ್ಮಲ್ಲಿನ ಆರ್ಗನೈಜೇಷನ್ ಶಕ್ತಿಯನ್ನು ಕಡಿಮೆ ಮಾಡಿವೆಯೇ?

ಉದಾಹರಣೆಗೆ: ಭಾರತದ ಸ್ವಾತಂತ್ರ್ಯ ಸಂಗ್ರಾಮ (೧೮೫೭-೧೯೪೭) ವನ್ನು ವಿಶ್ಲೇಷಿಸಿದಾಗ, ಆಗಿನ ಕಾಲದಲ್ಲಿ ಅದು ಹೇಗೆ ಆರಂಭವಾಗಿ, ದೇಶದುದ್ದಕ್ಕೂ ಬೆಳೆಯಿತು? ಎಂದು ಸೋಜಿಗಗೊಳ್ಳಬೇಕಾಗುತ್ತದೆ.  ಈಗಿನ ಕಾಲದಲ್ಲಾದರೆ ಕ್ಷಣಾರ್ಧದಲ್ಲಿ ದೇಶವೇನು? ವಿಶ್ವದ ಯಾವ ಭಾಗವನ್ನು ಬೇಕಾದರೂ ನಮ್ಮ ಸುದ್ದಿಗಳಿಗಾಗಿ ತಡಕಾಡಬಹುದು.  ಆಗ ತಂತ್ರಜ್ಞಾನ ಈಗಿನಷ್ಟು ಮುಂದುವರೆದಿರಲಿಲ್ಲ, ಜನರು ಈಗಿನಂತೆ ಹೆಚ್ಚು-ಹೆಚ್ಚು ಪದವೀಧರರಾಗಿರಲಿಲ್ಲ, ಆದರೆ ಸಮರ್ಥ ನಾಯಕತ್ವವನ್ನು ನಂಬಿ ಅವರೆಲ್ಲರೂ ಮುಂದೆ ಬಂದಿದ್ದರು, ತಮ್ಮ ತಮ್ಮ ಮನೆ-ಮಠವನ್ನು ತೊರೆದು ರಾಷ್ಟ್ರದ ಬಲವಾಗಿ ನಿಂತಿದ್ದರು.  ಮಾಡು-ಇಲ್ಲವೇ-ಮಡಿ ಎನ್ನುವ ಚಳವಳಿಯಲ್ಲಿ ಆನೇಕರು ತಮ್ಮ ಕೊರಳನ್ನು ಸಮರ್ಪಿಸಿದ್ದರು.

ಅವರದ್ದೂ ಸಹ ಜೀವವಲ್ಲವೇ? ಅವರೆಲ್ಲರಿಗೂ ಜೀವವಿರಲಿಲ್ಲವೇ? ಅವರಿಗೂ ಕೂಡ ತಮ್ಮ-ತಮ್ಮ ಸಂಸಾರಗಳ ಹೊಣೆ ಇದ್ದಿರಲಿಲ್ಲವೇ? ಆದರೆ, ತಮ್ಮ ವೈಯಕ್ತಿಕ ಆಗುಹೋಗುಗಳ ಮುಂದೆ ರಾಷ್ಟ್ರ ದೊಡ್ಡದಾಗಿತ್ತು.  ಹೋರಾಟ ಉಸಿರಾಗಿತ್ತು.  ರಾಷ್ಟ್ರ ನಾಯಕರುಗಳಿಗೆ ಬೆಂಬಲ ಕೊಡಬೇಕಾಗಿತ್ತು.  ಹೀಗೆ, ಅವರುಗಳೆಲ್ಲ ದೊಡ್ಡದನ್ನು ಗುರಿಯಾಗಿಟ್ಟುಕೊಂಡು, ಉಳಿದೆಲ್ಲವನ್ನು ಗೌಣವಾಗಿ ಕಂಡಿದ್ದರು.

ಮುಂದೆ ಕಾಲ ಕ್ರಮೇಣ, ಕುಟುಂಬಗಳು ಅವಿಭಕ್ತ ಪರಿಧಿಯನ್ನು ದಾಟಿ, ನ್ಯೂಕ್ಲಿಯರ್ ಕುಟುಂಬಗಳಾದವು.  ಜನರ ವಲಸೆ ಸಹಜವಾಯಿತು.  ನಗರೀಕರಣ ಹೆಚ್ಚಿತು.  ವಿದ್ಯಾಭ್ಯಾಸದ ಮಟ್ಟ ಬೆಳೆಯಿತು.  ಆದರೆ - ರಾಷ್ಟ್ರ, ಸ್ವಾತಂತ್ರ್ಯ, ಬಿಡುಗಡೆ, ಸ್ವಇಚ್ಛೆ, ಪ್ರಜಾಪ್ರಭುತ್ವ ಇವುಗಳು ಜನರಿಗೆ ಆಯ್ಕೆಯ ಹಕ್ಕನ್ನು ನೀಡಿದವು.  ಜನರು ತಮಗೆ ಏನು ಬೇಕೋ ಅದನ್ನು ಆಯ್ದುಕೊಳ್ಳುವಂತಾದರು.
ಈ ಆಯ್ಕೆಯ ಪ್ರತಿಫಲವಾಗಿ ಕೆಲವೊಮ್ಮೆ ಅದರಲ್ಲಿ ನನಗೆ ಸ್ವಾರ್ಥ ಕಂಡುಬರುತ್ತದೆ.  ಒಂದುವೇಳೆ, ಈಗೇನಾದರೂ ಸ್ವತಂತ್ರ್ಯ ಭಾರತದ ಚಳುವಳಿಯಂಥವು ಆರಂಭವಾದರೆ, ಅದಕ್ಕೆ ಬೆಂಬಲ ಕೊಡುವವರಾರು? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.  ಈ ಬೆಂಬಲ ಎನ್ನುವುದು ತನು-ಮನ-ಧನದ ರೂಪದಲ್ಲಿರಬಹುದು, ಎಲೆಕ್ಟ್ರಾನಿಕ್ ಮಾಧ್ಯಮವನ್ನು ಅವಲಂಭಿಸಿರಬಹುದು (petition), ಅಥವಾ ಘೇರಾವ್/ಬಂದ್ (ಸತ್ಯಾಗ್ರಹ) ಮತ್ತಿತರ ಭೌತಿಕ ರೂಪದಲ್ಲಿರಬಹುದು.

ನಮ್ಮಲ್ಲಿ ಚಳವಳಿಗಳಾದಾಗ ವ್ಯವಸ್ಥೆಯ ವಿರುದ್ಧ ಜನ ತಮ್ಮ ’ಆತ್ಮಾರ್ಪಣೆ" ಮಾಡಿಕೊಳ್ಳುವುದನ್ನು ನೋಡಿದ್ದೇವೆ.  ಇದಕ್ಕೂ ಒಂದು ಹೆಜ್ಜೆ ಮುಂದುವರಿದು ಯೋಚಿಸಿದಾಗ ಒಂದು ವ್ಯವಸ್ಥೆಯ ವಿರುದ್ಧ ಅಥವಾ ಮತ್ತೊಂದು ವ್ಯವಸ್ಥೆಯ ಪರವಾಗಿ ಜನರು "ಆತ್ಮಾಹುತಿ"ಯನ್ನು ಮಾಡಿಕೂಳ್ಳುವುದನ್ನು ನೋಡಿದ್ದೇವೆ.  ಆದರೆ, ಒಂದು ಖಾಯಿಲೆಯನ್ನು ಹರಡುವ ವೈರಸ್ಸಿನ ವಿರುದ್ಧವಾಗಿ ಜನರನ್ನು ಮೂರು ವಾರಗಳ ಕಾಲ ಕೂಡಿ ಹಾಕಿರುವಂತೆ ಕೇಳಿಕೊಂಡಾಗ ಜನರಿಗೆ ಮನೆಯಲ್ಲಿರಲು ಕಷ್ಟವಾಗುತ್ತದೆ!  ಅದರಿಂದ, ಅವರ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆಯಲ್ಲ!

***
ಜನರು ಸುಖದ ಸುಪ್ಪತ್ತಿಗೆಯಲ್ಲಿ (comfort zone) ಕುಳಿತು ತೇಲಾಡುತ್ತಿರುವಾಗ ಯಾವುದೇ ಸಂಶೋಧನೆಗಳು ಹೊರಗೆ ಬಾರವು.  ಆಭರಣವಾಗುವ ಮೊದಲು ಚಿನ್ನಕ್ಕೆ ಮೂಸೆಯಲ್ಲಿ ಪುಟವಿಟ್ಟ ಹಾಗೆ, ಶಿಲ್ಪ ಕಲಾಕೃತಿ ಆಗುವ ಮೊದಲು ಕಠಿಣವಾದ ಶಿಲೆಯನ್ನು ಬಾಚಿ-ಚಾಣಗಳ ಮೂಲಕ ಕುಟ್ಟಿದ ಹಾಗೆ, ಕಬ್ಬನ್ನು ಹಿಂಡಿ ಸವಿಯಾದ ಬೆಲ್ಲವನ್ನು ತೆಗೆದ ಹಾಗೆ - ಒಂದು ಸಮಾಜವೂ ತನ್ನ ಕಷ್ಟಗಳ ಕುಲುಮೆಯಲ್ಲಿ ಬೇಯಬೇಕಾಗುತ್ತದೆ, ಹಾಗಾಗುವುದರಿಂದಲೇ ಮುಂದಿನ ತಲೆಮಾರಿಗೆ ನಾವು ಹೊಸದೇನನ್ನೋ ತೆಗೆದುಕೊಂಡು ಹೋಗಲು ಸಾಧ್ಯ.  ಇಲ್ಲಿ ಸಾಧನೆ ಮುಖ್ಯವಾಗುತ್ತದೆ, ಇಲ್ಲಿ ದಿಢೀರ್ ಜನಪ್ರಿಯತೆ ಸಿಗುವುದಿರಲಿ ವರ್ಷಗಟ್ಟಲೇ ಮಾಡಿದ ಶ್ರಮಕ್ಕೆ ಕಿರುಗಾಸು ಬೆಲೆಯೂ ಸಿಗದಂತಾಗಬಹುದು, ಆದರೆ ಈ ರೀತಿಯು ಅನೇಕ ಪ್ರಯತ್ನಗಳು ನಮ್ಮನ್ನು ಸಂಪೂರ್ಣರನ್ನಾಗಿ ಮಾಡುವುದರ ಜೊತೆಗೆ ಸಬಲರನ್ನಾಗಿಯೂ ಮಾಡಬಲ್ಲವು - ಎಂಬುದು ಈ ಹೊತ್ತಿನ ನನ್ನ ನಂಬಿಕೆ!

Wednesday, April 01, 2020

ನೀರವತೆಯ ಮರಣ ಮೃದಂಗ

ಎಲ್ಲೆಲ್ಲೂ ಶೂನ್ಯತೆ, ಎಲ್ಲ ಕಡೆ ನಿಶ್ಶಬ್ಧ, ಒಂದು ರೀತಿಯಲ್ಲಿ ಇಡೀ ಪ್ರಪಂಚದ ಚಲನವಲನವೇ ನಿಂತು ಹೋದ ಹಾಗೆ, ಒಂದು ರೀತಿಯಲ್ಲಿ ಜಗತ್ತಿನ ನರನಾಡಿಗಳೇ ಸ್ತಬ್ಧವಾದ ಹಾಗೆ.  ಬೀಸುತ್ತಿರುವ ಗಾಳಿಯಿಂದ ಹಿಡಿದು, ಹರಿಯುವ ನೀರಿನವರೆಗೆ, ಪಕ್ಷಿ-ಪ್ರಾಣಿ ಸಂಕುಲಗಳು ಬೆರಗಾಗಿ, ಗಿಡ-ಮರಗಳೂ ತಮ್ಮನ್ನು ತಾವು ಚಿವುಟಿ ನೋಡಿಕೊಳ್ಳುವ ಹಾಗೆ... ಮನುಕುಲ ಸಂಪೂರ್ಣ ತಟಸ್ಥಗೊಂಡಿದೆ.  ಜೊತೆಗೆ ತನ್ನ ಜೀವಕ್ಕೇ ಕುತ್ತಾಗಿ ಹೆದರಿಕೊಂಡು ತಾನು ಕಟ್ಟಿಕೊಂಡ ಗೂಡಿನಲ್ಲೇ ಅವಿತು ಕುಳಿತಿದೆ.

ಇವೆಲ್ಲವೂ ಆಗಿರುವುದು ಯಾವುದೋ ದೈತ್ಯ ಪರಂಪರೆಯ ಬೂಟಾಟಿಕೆಯ ಆಕ್ರಮಣದಿಂದಲ್ಲ, ಯಾವುದೋ ಭೀಕರ ಶಕ್ತಿಯ ಅವ್ಯಾಹತ ಹೊಡೆತದಿಂದಲ್ಲ.  ಇವೆಲ್ಲವೂ ಆಗಿರುವುದು ಯಾವುದೋ ನೆರಳಿಗಿಂತಲೂ ಮಿಗಿಲಾದ, ಮನಸ್ಸಿಗಿಂತಲೂ ವೇಗವಾದ, ಬೆಂಕಿಗಿಂತಲೂ ತೀಕ್ಷ್ಣವಾದ, ಪ್ರಕಾಶಮಾನವಾದ ಆಯುಧದಿಂದಲ್ಲ... ಎಲ್ಲಕ್ಕೂ ಮಿಗಿಲಾಗಿ ಕಣ್ಣಿಗೆ ಕಾಣದ, ಇತ್ತ ಕಡೆ ಪೂರ್ಣ ಪ್ರಮಾಣದಲ್ಲಿ ಜೀವವೂ ಇರದ, ಎಲ್ಲೋ ಹುಟ್ಟಿ ಎಲ್ಲೋ ಪಸರಿಸಿ, ಎಲ್ಲೋ ರೂಪ ಪರಿವರ್ತನೆಯನ್ನು ಪಡೆದು ಪ್ರಪಂಚದಾದ್ಯಂತ ಇರುವ ಟ್ರಿಲಿಯನ್ನುಗಟ್ಟಲೆ ಜೀವ ಪ್ರಮಾಣದಲ್ಲಿ ಕೇವಲ ಮಾನವನನ್ನು ಆಧರಿಸಿ ಕಾಡುತ್ತಿರುವುದು ಮೈಕ್ರೋಸ್ಕೋಪಿನಲ್ಲೂ ಕಷ್ಟಪಟ್ಟು ಹುಡುಕಿದರೆ ಕಾಣುವ ಒಂದು ವೈರಾಣು, ಅಷ್ಟೇ!

ಮನುಕುಲದ ಸರ್ವನಾಶಕ್ಕೆ ಸೆಡ್ಡು ಹೊಡೆದಿರುವವರು ಯಾರು? ಪ್ರಾಣಿಯೂ ಅಲ್ಲ, ಪಕ್ಷಿಯೂ ಅಲ್ಲ, ಕ್ಷುದ್ರ ಜೀವಿ.  ಮನೆಯ ಒಳಗೂ ಹೊರಗೂ ಗಾಳಿ ಇದ್ದಲ್ಲೆಲ್ಲ ಕಡೆ ಇದ್ದು, ಹಗಲೂ-ರಾತ್ರಿಯೂ ಬೇಧಭಾವ ತೋರದೇ, ಬಡವ-ಶ್ರೀಮಂತರೆಂದು ಮುಖ-ಮುಸುಡಿ ನೋಡದೇ, ಯಾವುದೇ ವೇಷ-ಭಾಷೆಗಳನ್ನೂ ಮೀರಿ, ಎಲ್ಲರ ಒಳಹೊಕ್ಕು ನಮ್ಮೆಲ್ಲರ ಸೊಕ್ಕನ್ನು ಮುರಿಯಲು ಸೆಡ್ಡು ಹೊಡೆದು ನಿಂತಿದೆ ಈ ಕೊರೋನಾ ವೈರಸ್ಸು!

***

ಏಳು ಬಿಲಿಯನ್‌ಗಿಂತಲೂ ಹೆಚ್ಚಿರುವ ನಾವೆಲ್ಲ ನಮ್ಮ ಪರಾಕ್ರಮದ ಉತ್ತುಂಗದಲ್ಲಿದ್ದೆವು.  ಪಕ್ಷಿಗಿಂತಲೂ ಮಿಗಿಲಾಗಿ ಹಾರಿದೆವು, ಮೀನಿಗಿಂತಲೂ ವೇಗವಾಗಿ ಈಜಿದೆವು.  ಇಡೀ ಭೂಮಂಡಲದ ಮೂಲೆ-ಮೂಲೆಗಳಲ್ಲಿ ನಮ್ಮ ಉಸಿರಿನ ಸೋಂಕನ್ನು ಪಸರಿಸಿದೆವು.  ನಾವು ಯಂತ್ರಗಳನ್ನು ಹುಟ್ಟುಹಾಕಿದೆವು, ತಂತ್ರಗಳನ್ನು ಹೆಣೆದೆವು.  ನಮ್ಮ ಇರುವಿಕೆಯನ್ನು ಪ್ರಶ್ನಿಸುವಷ್ಟರ ಮಟ್ಟಿಗೆ ಆಗಿಂದಾಗ್ಗೆ ಹೊಡೆತಗಳನ್ನೂ ತಿಂದೆವು.  ಸುಮಾರು ನೂರು ವರ್ಷಗಳ ಹಿಂದೆ ಜಗತ್ತಿನಾದ್ಯಂತ ಗಾಳಿಯಲ್ಲಿ ಹರಡಿದ ಫ್ಲೂ (ಸ್ಪಾನಿಷ್ ಫ್ಲೂ) ಐವತ್ತು ಮಿಲಿಯನ್ ಜನರನ್ನು ಬಲಿ ತೆಗೆದುಕೊಂಡ ದಾಖಲೆಗಳಿವೆ.  ತದನಂತರ ಐವತ್ತರ ದಶಕದಲ್ಲಿ ಹಾಂಗ್‌ಕಾಂಗ್‌ನಿಂದ ಶುರುವಾಗಿ ಎಲ್ಲಕಡೆಗೆ ಹರಡಿದ ಏಷಿಯನ್ ಫ್ಲೂ, ಒಂದು ಮಿಲಿಯನ್‌ಗೂ ಹೆಚ್ಚು ಜನರನ್ನು ಕೊಂದು ಹಾಕಿತು.  ತದನಂತರ SARS, H1N1, AIDS ಮೊದಲಾದ ಖಾಯಿಲೆಗಳಿಂದ ಮನುಕುಲ ಸತತವಾಗಿ ಸಂಕಷ್ಟಕ್ಕೆ ಒಳಗಾಗಿದ್ದರೂ, ಕಳೆದ ನೂರು ವರ್ಷಗಳಲ್ಲಿ ಇಡೀ ಪ್ರಪಂಚವನ್ನೇ ಬಂದ್ ಮಾಡಿದ ಕೀರ್ತಿ ೨೦೧೯-೨೦ರ ಕೋವಿಡ್ ಕೊರ‍ೋನಾ ವೈರಸ್‌ಗೆ ಸಲ್ಲುತ್ತದೆ. ನಮ್ಮ ಇತಿಹಾಸದಲ್ಲಿ  ಬರೀ ಫ್ಲೂ ಖಾಯಿಲೆ ಒಂದೇ ಅಲ್ಲದೇ ಪ್ಲೇಗ್, ಮೀಸಲ್ಸ್, ಸ್ಮಾಲ್‌ಪಾಕ್ಸ್, ಮೊದಲಾದವೂ ಕೂಡ ತಮ್ಮ ಶಕ್ತ್ಯಾನುಸಾರ ಮಾನವನನ್ನು ಕಟ್ಟಿಹಾಕಿವೆ.  ಇವೆಲ್ಲ ಸರ್ವವ್ಯಾಪಿಯಾಗಿ ಗಾಳಿಯಲ್ಲೇ ಹರಡುವಂಥ ಮಹಾಮಾರಿಗಳ ವಿಶೇಷವೆಂದರೆ, ಈ ಎಲ್ಲ ಖಾಯಿಲೆಗಳು ಮೂಲತಃ  ಕಣ್ಣಿಗೆ ಕಾಣದಷ್ಟು ಚಿಕ್ಕದಾದ ಜೀವ-ನಿರ್ಜೀವ ಹಂತದಲ್ಲಿರುವ ಕೀಟಾಣು-ಜೀವಾಣುಗಳಿಂದ ಶುರು ಆದಂತವುಗಳು.  ಹಾಗೆಯೇ, ಈ ಎಲ್ಲ ಖಾಯಿಲೆಗಳು ನಮಗೆ ಬಂದಿದ್ದರಿಂದಲೇ ನಮ್ಮ ವೈದ್ಯಕೀಯ ವಿಜ್ಞಾನ ಇಷ್ಟೊಂದು ಮುಂದುವರೆದಿರುವುದು ಎಂದರೂ ತಪ್ಪಾಗಲಾರದು.  ಒಂದು ರೀತಿಯಲ್ಲಿ ಕಣ್ಣಿಗೆ ಕಾಣದ ಈ ಸೂತ್ರಧಾರಿ ಜೀವ ವೈವಿಧ್ಯ ನಮ್ಮನ್ನು ಕಾಲಕ್ರಮೇಣ ಕುಣಿಸುತ್ತಿರುವುದು.

***

ಮನುಕುಲ ಇದನ್ನೂ ಗೆದ್ದು ನಿಲ್ಲುತ್ತದೆ.  ಆದರೆ, ಈ ಬಾರಿ ವಿಶೇಷವಾದ ಪಾಠವನ್ನು ಕಲಿಯುವುದರ ಮೂಲಕ ಇನ್ನು ಮುಂದಿನ ಐವತ್ತು-ಎಪ್ಪತ್ತೈದು ವರ್ಷಗಳಿಗಾಗುವಷ್ಟರ ಮಟ್ಟಿನ ಅನುಭವವನ್ನು ಪಡೆಯುತ್ತದೆ.  ಉತ್ತುಂಗಕ್ಕೆ ಏರುತ್ತಿರುವ ನಾವು ಎಷ್ಟು ಚಿಕ್ಕವರು ಎಂಬುದನ್ನು ನೆನಪಿಸುವುದಕ್ಕಾದರೂ ಇದು ಬೇಕಾಗುತ್ತದೆ.  ಹಿಂದಿನ ಮಹಾಮಾರಿ ರೋಗಗಳ ಮೂಲದಲ್ಲಿ ಬರೀ ನಿಸರ್ಗದ ಕೈ ಇತ್ತೋ, ಅಥವಾ ಜಾಗತಿಕ ಯುದ್ಧಗಳಲ್ಲಿ ತನ್ನನ್ನು ತಾನೇ ಹುಡುಕಿಕೊಳ್ಳುತ್ತಿರುವ ಮಾನವ ತನ್ನ ಸಂತತಿಯನ್ನೇ ಪರೀಕ್ಷೆಗೊಡ್ಡುವ ವಿಷಮ ಹಂತಕ್ಕೆ ಬಂದು ತಲುಪಿದ್ದನೋ ಯಾರು ಬಲ್ಲವರುಆದರೆ, ಇಂದಿನ ದಿನಗಳಲ್ಲಿ ಅಧಿಕವಾಗಿ ಹರಡುತ್ತಿರುವ ಕೋವಿಡ್ ಸಂತತಿಯ  ಹಿನ್ನೆಲೆಯಲ್ಲಿ ಮಾನವನ ಹುನ್ನಾರ ಖಂಡಿತ ಇದೆ - ಇದು, ಒಂದೇ ಮುಗ್ಧ ಜೀವಿಗಳ ಮಾರಣ ಹೋಮದ ಫಲ, ಅಥವಾ ಯಾವುದೋ ಒಂದು ದೇಶ, ಜಗತ್ತಿನಲ್ಲಿ ತಾನೇ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆದು ನಿಲ್ಲಬೇಕು ಎನ್ನುವುದರ ಹುನ್ನಾರ.  ಇಂದಿನ ವೈರಸ್ ವಿದ್ಯಮಾನಗಳನ್ನು ಮಾನವ ನಿರ್ಮಿತ ಎಂದುಕೊಂಡರೆ, ಕೆ.ಎಂ. ಗಣೇಶಯ್ಯನವರ ಶಿಲಾಕುಲ ವಲಸೆಯಲ್ಲಿ ಬರೆದ ಹಾಗೆ, ನಮ್ಮ ಇತಿಹಾಸವನ್ನು, "ಮಾನವ ಹುಟ್ಟಿದ, ಕಾದಾಡಿದ, ಮತ್ತೆ ಸತ್ತ" ಎಂದು ಸಂಕ್ಷಿಪ್ತವಾಗಿ ವರದಿ ಮಾಡಲೇನೂ ಅಡ್ಡಿಯಿಲ್ಲ. ಇನ್ನೂರು ವರ್ಷಗಳ ಹಿಂದೆ ಬ್ರಿಟೀಷ್ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ಎಲ್ಲ ಕಡೆ ಮೆರೆದಿತ್ತು - ಜನರ ಜಲ, ಕುಲ, ನೆಲೆ, ಭಾಷೆ, ಸಂಸ್ಕೃತಿ, ಧರ್ಮಗಳನ್ನು ಬದಿಗೊತ್ತಿ ತನ್ನ "ಧರ್ಮ"ವನ್ನು ಅದು ಹೇರಿತ್ತು.  ಆದರೆ, ಆಗ ಜಗತ್ತು ವಿಭಿನ್ನವಾಗಿತ್ತುವಿಶ್ವದೆಲ್ಲ ಕಡೆಯ ದೇಶ-ಜನರಲ್ಲಿ ಇಷ್ಟೊಂದು ಮಟ್ಟದ ಸಾಮರಸ್ಯ ಇರಲಿಲ್ಲ.  ಆದರೆ, ಇಂದು ಜಗತ್ತು ಒಂದು ಜಾಗತಿಕ ವಲಯವಾಗಿದೆ, ಪ್ರತಿಯೊಂದು ರೀತಿಯಲ್ಲಿಯೂ ನಾವು ಮತ್ತೊಬ್ಬರನ್ನುಅವಲಂಬಿಸಿದ್ದೇವೆ. ಈ ಸಂದರ್ಭದಲ್ಲಿ ಜಗತ್ತಿನ ಯಾವುದೋ ಒಂದು ಭಾಗ ತನ್ನ ಹೆಚ್ಚುಗಾರಿಕೆಯನ್ನು ಇತರರ ಸೋಲಿನಲ್ಲಿ ಪ್ರದರ್ಶಿಸುವುದು ಕಷ್ಟಸಾಧ್ಯ.

***

ಗಾಳಿ ಇರುವಲ್ಲಿ ಧೂಳು ಇರುವುದು ಸಹಜ.  ಆದರೆ, ಆ ಧೂಳೇ ನಮ್ಮನ್ನು ಸಂಕಷ್ಟಕ್ಕೆ ತಳ್ಳದಿರಲಿ.  ವಿಕಾರಿ ನಾಮ ಸಂವತ್ಸರದ ವಿಕಾರತೆ, ಅದರ ಕಾಲ ಅಂತ್ಯವಾದ ನಂತರ ಇನ್ನಾದರೂ ಕಡಿಮೆ ಆಗಲಿ.  ಕಳೆದೊಂದು ವರ್ಷದಿಂದ ಅತಿವೃಷ್ಟಿ, ಕಾಡಿನ ಬೆಂಕಿ, ಧರ್ಮ ಸಂಬಂಧಿ ಅತ್ಯಾಚಾರ-ಅನಾಚಾರಗಳಲ್ಲಿ ನೊಂದ ಎಲ್ಲರಿಗೂ ಸಾಂತ್ವನ ಸಿಗಲಿ.  ಈ ಕೊರೋನಾ ವೈರಸ್ಸು ನಮ್ಮ ನಿಜ ಸ್ಥಿತಿಯನ್ನು ಹೊರತರುತ್ತಿದೆ.  ಕುಲುಮೆಯಲ್ಲಿ ಕುದಿಸಿ ಪುಟಗಟ್ಟಿದ ಚಿನ್ನದಲ್ಲೇ ಒಂದು ಆಕರ್ಷಕ ಆಕಾರ ಮತ್ತು ಹೊಳಪು ಬರುವುದು, ಸುಪ್ಪತ್ತಿಗೆಯ ವಲಯ ಸೃಷ್ಟಿಸುವ ಆರಾಮಿನಲ್ಲಿ ಎಂದೂ ಸಂಶೋಧನೆಗಳಾಗಲೀ, ಆವಿಷ್ಕಾರಗಳಾಗಲೀ ನಡೆಯವು.  ಹಾಗೆಯೇ, ಈ ಪ್ರಸ್ತುತ (ದುಃ)ಸ್ಥಿತಿಯಲ್ಲಿ, ಮನುಕುಲ ಮತ್ತೆ ಸೆಡ್ಡು ಹೊಡೆದು ನಿಲ್ಲುವಂಥ ಸಂಶೋಧನೆಗಳು, ನವನಾವಿನ್ಯತೆಗಳು ಪ್ರಚುರಗೊಳ್ಳುತ್ತವೆ.  ಮನುಕುಲ ಹಿಂದಿಗಿಂತಲೂ ಮತ್ತಷ್ಟು ಬಲಶಾಲಿಯಾಗುತ್ತದೆ.  ಆದರೆ, ನಾವು ಬಲವಾದಷ್ಟೂ ನಿಸರ್ಗವನ್ನು ಗೌರವಿಸುವುದನ್ನು ಕಲಿಯಬೇಕು, ಇಲ್ಲವೆಂದಾದರೆ ಇದಕ್ಕಿಂತಲೂ ಹೆಚ್ಚು ಬೆಲೆ ಕೊಡಬೇಕಾದ ಕಾಲ ಬರುವುದು ದೂರವೇನಿಲ್ಲ.